|| ನಾಂದಿ ||

ಜಗನ್ಮಾಯೀ ಜಯತು ಜಗದಂಬಾ ಆಯಿಮಾ
ಅಜಹರಿ ಪ್ರೀತೆ ಸುಗುಣ ಪ್ರಖ್ಯಾತೇ
ನಿಗಮಾತೀತೆ ನೀರಜಾಕ್ಷಿ ನಿರಂಜನಾದೇವಿ
ಜಗನ್ಮಾಯೀ ಜಯತು ಜಗದಂಬಾ ಪಾಹಿಮಾಂ
ಬಲ್ಲಿದ ಯಾತ್ರೆ ಚಲ್ವ ಸುಗಾತ್ರೆ
ಅಲ್ಲಮಾಪುರಿ ಜೋಗುಳ ಅಂಬಾದೇವಿ
ಜಗನ್ಮಾಯಿ ಜಯತು ಜಗದಂಬಾ ಆಯಿಮಾ
ಶಿಶುನಾಳ ವಾಸ ದೋಷ ವಿನಾಶ
ಅಲ್ಮಾ ಶ್ರೀಗುರು ಗೋವಿಂದ ವಿಲಾಸೆ
ಜಗನ್ಮಾಯಿ ಜಯತು ಜಗದಂಬಾ ಪಾಹಿಮಾಂ.

ಕತೆಗಾರ : ಈಗ ಚಂದ್ರಾವತಿ ಪಟ್ಣದಲ್ಲಿ ಚಂದ್ರಶೇಕ ಮಹಾರಾಜನು;

ಹಿಮ್ಮೇಳಿಗ : ಹೌದೂ.

ಕ : ಮಹಾಪುಣ್ಯ ದಾನಧರ್ಮ, ಪರೋಪಕಾರ-

ಹಿ : ಮಾಡ್ತಾನರ್ರೀ.

ಕ : ರಾಜಗೆ ದಂಡಿಗೇನೂ ಕಮ್ಮಿ ಇಲ್ಲ, ಸೌಲತ್ತು ಕಮ್ಮಿ ಇಲ್ಲ, ಸೀಮ್ಗೇನೂ ಕಮ್ಮಿ ಇಲ್ಲ.

ಹಿ : ಹೌದೂ.

ಕ : (ರಾಗವಾಗಿ) ಹನ್ನೆರಡುಸಾವಿರ ದಂಡು, ಎಲ್ಲನೂರು, ಮಲ್ಲನೂರುಮ್ ಗಂಡ್ಸೂರು, ಸಂಪೂರು ಅರ್ಬಾರ್ ದಂಡು, ಸಿದ್ದೇರ ದಂಡು.

ಹಿ : (ರಾಗವಾಗಿ) ಹೌದೂ.

ಕ : ಈ ಪ್ರಕಾರವಾಗಿ ಪ್ರಜೆಗಳ್ನ ಆಳ್ತಾ ಇರೋ ಕಾಲಕ್ಕೆ – ಚಮ್ದ್ರಸೇನ ರಾಜಾಧಿರಾಜಗೆ ಭಗವಮ್ತ ಐಶ್ವರ್ಯ ಕೊಟ್ಟು ಮರತಾನೆ. ಆದ್ರೆ ಅಷ್ಟೆಲ್ಲಾ ಕೊಟ್ಟರೂ ಏನು ಮಾಡ್ಬೇಕು? ಆ ರಾಜಗೆ ಮಕ್ಕಳ ಸಂತಾನವೇ ಇರ್ಲಿಲ್ಲ!!

ಹಿ : ಆಹಾ, ರಾಜನ ಮಡದಿ ಚಂದ್ರಾವತಿ ಬಂಜಿ!

ಕ : ಪ್ರಜೆಗಳೆಲ್ಲಾ ಕುಂತ್ಕೊಂಡು ತಮ್ಮಮಹಾರಾಜಗೆ ಹೇಳ್ತಾ ಇದ್ದಾರೆ-

ಹಿ : ಹೌದೂ.

ಕ : ಮಹಾರಾಜಾ ನಿಮಗೆ ಮಕ್ಕಳಿಲ್ಲ!

ಹಿ : ಹೌದೂ!

ಕ : ಮಕ್ಕಳಿಲ್ಲದ ಮನೆ ಅಲ್ಲ, ಹೊಲ ಇಲ್ಲದ ಒಕ್ಕಲುತನ ಅಲ್ಲ – ಮಹಾರಾಜ್.

ಹಿ : ನೀವು ಮಕ್ಕಳ ಸಂತಾನ ಪಡೀಬೇಕು.

ಕ : ಈ ಮಾತು ಚಂದ್ರಸೇಕ ಮಹಾರಾಜ ಕೇಳಬೇಕಾದರೆ ಜಕ್ಕನs ಜರದುಬಿಟ್ಟ.

ಹಿ : ಹೌದೂ!

ಕ : ಏ ಮಂತ್ರೀ-

ಹಿ : ಏನ್ಮಾರಾಜ್?

ಕ : ಬೆಳಗಾಗಲಿಕ್ಕೆ ಬಂಜಿ ಮುಖಾ ನೋಡಬಾರ್ದು, ಬಂಜಿ ರಾಜಂದು ಚಾಕರಿ ಮಾಡ್ಬಾರ್ದು – ಅಂತ್ಹೇಳಿ ಪ್ರಜೆಗಳು ಬಂದು-

ಹಿ : ಹೇಳ್ತಾರೆ!

ಕ : ಇವತ್ತು ಎದುರಿಗೇ ಹೇಳಿದ್ರು-

ಹಿ : ಹೌದು ಹೇಳಿದ್ರು.

ಕ : ಚಂದ್ರಾವತಿ ಮಡದೀ-

ಹಿ : ಆಹಾ!

ಕ : ಈಗ ನಾವು ಮಕ್ಕಳಿಲ್ಲದ ಚಿಂತಿಯಲ್ಲಿ ಆಯುಷ್ಯ ಕಳಿತೀವಿ. ದೇವಸ್ಥಲಕ್ಕೆ ಹೋಗಿ ಮಕ್ಕಳ ಫಲ ಪಡ್ಕೊಂಡು ಬರಬೇಕು ಅಂಬೋದು ಅಪೇಕ್ಷಿ ಆಗಿದೆ,

ಹಿ : ಆಗಲಿ ಪತಿದೇವಾ ದೇವರಿಗೆ ಪ್ರತ್ಯಕ್ಷ ಮಾಡಿಕೊಂಡು ಬರ್ರಿ.

ಕ : ಮಕ್ಕಳ ಫಲದ ಸಲುವಾಗಿ ಜಳಕ ಮಾಡಿಕೊಂಡು ರಾಜ ರಥದಲ್ಲಿ ಕುಳಿತುಕೊಂಡ.

|| ಪದ ||

ರಾಜ ದೇವಸ್ಥಲಕ್ಕೆ ನಡುದಾನಾs….ಹರ ಮಹಾದೇವ
ಒಂದು ಗಾವುದಾ ನಡುದಾನs….ಹರ ಮಹಾದೇವ
ಎರಡೇ ಗಾವುದಾ ನಡುದಾನs….ಹರ ಮಹಾದೇವ
ರಾಜದೇವರಿಗೆ ಹೋಗಿ ಕುಂತಾನೇ….ಹರ ಮಹಾದೇವ.

ಕ : ಎರಡು ಗಾವುದ ಎಂಟು ಹರದಾರಿ ದೂರ ಊರು – ಉದ್ಮಾನ, ಪ್ಯಾಟಿ – ಪಟ್ಣ ಎಲ್ಲಾ ಬಿಟ್ಟು ಅಡಿವ್ಯಾಗ ಒಂದು ದೇವಸ್ಥಲಕ್ಕೆ ಬಂದು ನಿಂತ್ಕೊಂಡ.

ಹಿ : ರಾಜ!

ಕ : (ರಾಗವಾಗಿ) “ಪರಮಾತ್ಮಾ….ಎಲ್ಲಿ ಅದೀ….ಮಕ್ಕಳಿಲ್ಲದ ಸಲುವಾಗಿ ನಿನ್ನ ದರ್ಶನಕ್ಕೆ ಬಂದೀನಿ” ಅಂತ ಭಗವಂತನ್ನ ನೆನಸ್ಬೇಕಾರ ದೇವಲೋಕದಿಂದ-

ಹಿ : ಆ ಪರಮಾತ್ಮನು ಜಂಗಮ ರೂಪ ತಾಳಿ ಕೈಲಾಸ ಬಿಟ್ಟು ಮರ್ತ್ಯಕ್ಕೆ ಇಳದ.

ಕ : ಆಹಾ ಭಿಕ್ಷಾಂದೇಹಿ ಅಂತ್ಹೇಳಿ ಬಂದ ಪರಮಾತ್ಮನ್ನ ಚಂದ್ರಸೇಕ ರಾಜ ನೋಡಿದs

ಹಿ : ಜಂಗಮ ರೂಪದಲ್ಲಿ ಬಂದಂಥ ಪರಮಾತ್ಮಾ ನಿನ್ನ ಪಾದಕೆ ನಮಸ್ಕಾರ ಮಾಡಿದೆ.

ಕ : ಏನು ಬೇಕು ಮಗನೆ ನಿನಗೆ?

ಹಿ : ಮಕ್ಕಳ ಸಂತಾನ ಕೊಡಿರಿ ಪರಮಾತ್ಮ.

ಕ : ಆಹಾ ಮಕ್ಕಳಿಲ್ಲ ನಿಮಗೆ!

ಹಿ : ಹೌದೂ, ಮಕ್ಕಳಿಲ್ಲದ್ದಕ್ಕಾಗಿ ನಿನ್ನ ಪ್ರತ್ಯಕ್ಷ ಮಾಡಿಕೊಂಡೀನ್ರಿ-

ಕ : ಅದಕ್ಕಾಗಿ ನೀವು ಸತಿ – ಪತಿ ಕೊರಗತಾ ಅದೀರಿ?

ಹಿ : ಹೌದೂ!

ಕ : ನಿನಗೆ ಮಕ್ಕಳ ಫಲ ಕೊಡ್ತೀನಿ ಮಗನೇ; ನಾನು ಹೇಳಿದ ಮಾತು ಕೇಳ್ಬೇಕು ನೀನು.

ಹಿ : ಆಗಲಿ ಪರಮಾತ್ಮಾ.

ಕ : ನಾನು ಕೊಟ್ಟಂಥಾ ಮಕ್ಕಳ ಫಲ ತೆಗೆದ್ಕೊಂಡು ಊರಿಗೆ ಹೋಗಿ ನಿನ್ನ ಮಡದಿ ಚಂದ್ರಾವತಿಗೆ ಕೊಡ್ಬೇಕು.

ಹಿ : ಓಹೋ ಆಗಲಿ ಸಂತೋಷವಾಗಿ.

ಕ : (ರಾಗವಾಗಿ) ದಾರಿಯಲ್ಲಿ ಎಲ್ಲೀ ಕುಂದ್ರುಬಾರದೋ ಮಗನೇ…

ಹಿ : (ರಾಗವಾಗಿ) ಆಗಲೀ….

ಕ : (ರಾಗವಾಗಿ) ಸ್ವಾಮಿ ದಾರಿಯಲ್ಲಿ ಏನು ಬಂದ್ರೂ ಕಣ್ಣೆತ್ತಿ ನೋಡೋದಿಲ್ಲಾ ನಾನೂ….ಕೊಟ್ಟಂಥ ಮಕ್ಕಳ ಫಲ ತೊಗೊಂಡ್ಹೋಗಿ ನನ್ನ ಮಡದಿ ಕೈಗೇ ಕೊಡ್ತೀನೀ.

ಹಿ : ಹೌದೂ.

ಕ : ಕೊಡ್ತೀಯಾ?

ಹಿ : ಓಹೋ ಅಗತ್ಯವಾಗಿ ಕೊಡ್ತೀನಿ.

ಕ : ಶಲ್ಯ ಒಡ್ದಪಾ ಅಂದ ಪರಮಾತ್ಮ.

ಹಿ : ಹೌದು.

ಕ : ಭಗವಂತನ ಎದುರಿಗೆ ನಿಂತ್ಕೊಂಡು ಚಂದ್ರಸೇಕರಾಜ ಉಡಿ ಒಡ್ಡಿ ನಿಲ್ಬೇಕಾದ್ರೆ ತನ್ನ್ನ ಜೋಳಿಗಿ ಒಳಗೆ ಕೈಹಾಕಿ ಭಗವಂತ ಮಕ್ಕಳ ಫಲದ ಉತ್ಪುತ್ತಿ ಹಣ್ಣು ತಗದು ಹೇಳ್ತಾನೆ – ಇದು ಉತ್ಪುತ್ತಿ ಹೆಣ್ಣು ನಿನ್ನ ಮಡದಿಗೆ ಕೊಡ್ಬೇಕು,

ಹಿ : ಚಂದ್ರಾವತಿ ಕೈಗೆ ಕೊಡಬೇಕು.

ಕ : ಭಗವಂತ ಕೊಟ್ಟ, ಭ್ರಮಣಾಂತ ಮಾಯವಾದ.
ಹಿ : ಹೌದೂ!

ಕ : ಮಕ್ಕಳ ಫಲ ತೊಗೊಂಡು ತನ್ನ ಮಡದಿಗೆ ಕೊಡ್ಬೇಕು ಅಂತ ರಥದಲ್ಲಿ ಕುತ್ಕೊಂಡು ರಾಜ ತಮ್ಮ ಊರಿಗೆ ಬರ್ತಾ ಅದಾನೆ,

ಹಿ : ಹೌದು.

ಕ : (ರಾಗವಾಗಿ) ದಾರೀ ಮಾರ್ಗದಲ್ಲೀ-

ಹಿ : ಆಹಾ!

ಕ : ಕೈಲಾಸ ಲೋಕದಲ್ಲಿ ಏಳು ಮಂದಿ ವಿಧಿಗಳ ಪೈಕಿ ಚಿಕ್ಕವಳಾದ ಸೂರ್ಯಕಾಂತಿಗೆ ಮಕ್ಕಳ ಫಲ ಇರ್ಲಿಲ್ಲ.

ಹಿ : ಆಹಾ!

ಕ : ಇದರ ಸಲುವಾಗಿ ಆರು ಮಂದಿ ಅಕ್ಕನೋರು ಹೇಳ್ತಾರೆ -(ರಾಗವಾಗಿ) ತಂಗೀ ಮಕ್ಕಳಾಗಲಿಲ್ಲಾ ದೇವಲೋಕದಾಗಾ….ಬಂಜಿ ನೀನು; ಮರ್ತ್ಯಕ್ಕ ನಡೀ….

ಹಿ : ಅಂದು ದೂಡಿದ್ರು ಸೂರ್ಯಕಾಂತಿಗೆ!

ಕ : ಕೈಲಾಸ ಲೋಕದಿಂದ ವಿಧಿ ಸೂರ್ಯಕಾಂತಿ ಮರ್ತ್ಯಕ್ಕೆ ಬರಬೇಕಾದ್ರೆ ಚಂದ್ರಸೇಕ ಮಹಾರಾಜ ಮಕ್ಕಳ ಫಲ ತೊಗೊಂಡು ಅಡಿವ್ಯಾಗ ಹೋಗುತ್ತಿದ್ದ!

|| ಪದ ||

ಆದ ರಾಜಗs ವಿಧಿ ನೋಡ್ಯಾಳಾ….ಶಿವಯನ್ನ ಮಾದೇವಾ.
ಬರೋ ದಾರ್ಯಾಗ ಇಳದಾಳೇ….ಓಂ ನಮ ಶಿವಾಯಾ.
ಬರೋ ದಾರಿಯೊಳಗ ವಿಧಿ ಮರದ ಕೆಳಗೆ ನಿಂತಾಳೈ….ಹರಯನ್ನ ಮಾದೇವಾ.

ಕ : ಎಂಥ ರೂಪ ತಾಳ್ಯಾಳ ವಿಧಿ!

ಹಿ : ಓಹೋ!

ಕ : ಗಂಜಿ ಶೀರಿ ಉಟ್ಟು ಗಂಜೀ ಕುಪ್ಪಸ ತೊಟ್ಟು ಬೈತಲಿ ತಕ್ಕೊಂಡು, ಹೂವ ಮುದಕೊಂಡು ಕನ್ನಡಿ ನೋಡ್ಕೊಂಡು ದೇವಲೋಕದ ದೇವತಾ ರೂಪ ತಾಳಿ ರಾಜಗs ದಾರಿ ಕಾಯ್ಕೊಂಡು ಕುಳಿತಾಳೆ ವಿಧಿ.

ಹಿ : ಓಹೋ!

ಕ : ರಾಜ ಮಕ್ಕಳ ಫಲ ತೊಗೊಂಡು ರಥದಲ್ಲಿ ಕುಂತ್ಕೊಂಡು ಬರೋ ವ್ಯಾಳ್ಯಾದಲ್ಲಿ ಫಕ್ಕನೆ ವಿಧಿಗೆ ನೋಡಿಬಿಟ್ಟ, ಓಹೋ! ಸ್ತ್ರೀಯಳೇ, ಯಾರು ನೀನು? ಈ ಘೋರಾರಣ್ಯದಲ್ಲಿ ಯಾರೂ ಇಲ್ಲದ ಜಾಗದಲ್ಲಿ ಒಬ್ಬಾಕೇ ಕುಂತಿಯಲ್ಲ ನೀನು ಯಾರು?

ಹಿ : ವನವಾಸಿ ನಾನು ಮಹಾರಾಜರೇ!

ಕ : (ರಾಗವಾಗಿ) ಬರ್ರೀ ಮಹರಾಜರೈ…

ಹಿ : ಆಹಾ!

ಕ : (ರಾಗವಾಗಿ) ನಾನು ಅನಾಥಳು ಬಂದೀನೀ…ನನಗೆ ದಿಕ್ಕಿಲ್ಲಾ ದಾತಿಲ್ಲಾ…. ನಾನು ದೇಶಕೋಶ ತಿರುಗುತಾ ಒಂದೇ…ನನಗೆ ಲಗ್ನಿಲ್ಲಾ ಮೂರ್ತಿಲ್ಲಾ…ರಾಜಾ ನಾನು ಕಾಶೀಸೇನ ಮಹಾರಾಜನ ಮಗಳು…ನನ್ನ ಹೆಸರು ಸೂರ್ಯಕಾಂತಿ

ಹಿ : (ರಾಗವಾಗಿ) ಹೌದೂ.

ಕ : (ರಾಗವಾಗಿ) ನಿಮಗೆ ಲಗ್ನ ಆಗ್ಬೇಕೆಂಬ ಪ್ರೇಮ ಆಗೇತಿ ರಾಜಾ ಪ್ರೇಮಾ….

ಹಿ : ಓಹೋ ಲಗ್ನ!

ಕ : ಭಗವಂತ ಹೇಳಿದ ಮಾತು ರಾಜ ಮರೆತ – ಆ ಸ್ತ್ರೀಯಳಿಗೆ ನೋಡಿ! ರಥ ಇಳುದಾ!

ಹಿ : ಹೌದೂ!

ಕ : ಕುದ್ರಿ ಮೇಯಲಿಕ್ಕೆ ಬಿಟ್ಟು; ರಾಜಗ ಕರ್ಕೊಂಡು ಕುಂದ್ರಿಸಿ, ಆ ವಿಧಿ – “ಮಾಹಾರಾಜಾ”

ಹಿ : ನಿಮಗೆ ಲಗ್ನ ಮೂರ್ತ ಯಾವುದೈತಿ?

ಕ : ಯಾವುದೂ ಇಲ್ಲ. ಇನ್ನೂವರೆಗೂ ಲಗ್ನನೇ ಆಗಿಲ್ಲ ಸೂರ್ಯಕಾಂತೀ!

ಹಿ : ಹೌದೇ?

ಕ : ದೇವಸ್ಥಳಕ್ಕೆ ಹೋಗಿದ್ದೆ ಪರಮಾತ್ಮನ ದರ್ಶನಕ್ಕೆ.

ಹಿ : ಹೌದೂ.

ಹಿ : ಓಹೋ ಮಹಾರಾಜಾ ಹಂಗಾದ್ರ ನಿಮ್ಮ ಹತ್ರ ಒಂದು ಉತ್ಪತ್ತಿ ಹಣ್ಣು ಐತಲ್ಲಾ?

ಹಿ : ಹೌದೂ.

ಕ : (ರಾಗವಾಗಿ) ನನ್ನ ಉಡಿಯಲ್ಲಿ ಕೊದಬೇಕ್ರೀ.
ಸೂರ್ಯಕಾಂತಿಗೆ ನೀಡ್ಯಾನ…ಹರ ಹರಯನ್ನ ಮಾದೇವ.

ಕ : ಸೂರ್ಯಕಾಂತಿಯ ಉಡಿಯಲ್ಲಿ ಮಕ್ಕಳ ಫಲ ಇಟ್ಟ, ವಸ್ತಿಮಾಡಿ ಮರುದಿವ್ಸ ಮುಂಜಾನೆ ಆಕಿ ಕರ್ಕೊಂಡುತನ್ನ ಊರಿಗೆ ನಡೆದs

ಹಿ : ಓಹೋ.

ಕ : (ರಾಗವಾಗಿ) ಚಂದ್ರಾವತಿ, ರಾಜನ್ನ ಲಗ್ನಾದಂಥ ಮಡದಿ ರಾಜಂದು ದಾರಿ ನೋಡ್ತಾಳೆ….

ಹಿ : (ರಾಗವಾಗಿ) ಹೌದೂ!

ಕ : ಮಕ್ಕಳ ಫಲ ಪಡೀಲಿಕ್ಕೆ ಹೋದಂಥ ಪತಿರಾಜ ಬಂದಾ-

ಹಿ : ಹೌದು ಬಂದ!

ಕ : ಆರತಿ ಬೆಳಗೋನು ಅಂತ್ಹೇಳಿ ಗೌಡೇರು ಬಾಣಗಿತ್ತೇರು, ಎಲ್ಲರೂ ಕರ್ಕೊಂಡು ಹೊಂಟಾಳೆ ರಾಣಿ; ಅವರ ಜೊತಿಗೆ ಆಕಿ ತಮ್ಮ ಬುದ್ಧಿವಂತ ಮಂತ್ರಿ ಕೂಡಾ ಅದಾನೆ.

ಹಿ : ಹೌದು.

ಕ : ಮಹಾರಾಜ್ರು ದೇವಸ್ಥಾನಕ್ಕೆ ಹೋಗಿ ಮಕ್ಕಳ ಫಲ ತಂದ್ಹಾಂಗೆ ಕಾಣತೈತಿ! ಹಸುವಾಗಿ ಬಂದಾರೆ; ನಾವು ಎದುರಿಗೆ ಹೋಗಿ ರಾಜಗ ಆರುತಿ ಬೆಳಗ್ಬೇಕು.

ಹಿ : ಹೌದು.

ಕ : ಓಹೋ ಆಗಲಿ ನಡೀರಮ್ಮಾ ಅಂತ್ಹೇಳಿ ಮ್ಯಾಳ ಬಜಂತ್ರಿಯಿಂದ ಮಂತ್ರಿ ತನ್ನ ಅಕ್ಕ ಚಂದ್ರಾವತಿ ಕರ್ಕೊಂಡು, ಸಿಬ್ಬಂದಿ ಕರ್ಕೊಂಡು ಬರ್ತಾ ಇದ್ದಾನೆ….

ಹಿ : ಹೌದು!

ಕ : ಮಂತ್ರಿ ದೌಡು ಹೆಜ್ಜೆ ಹಾಕಿ ರಾಜನ ಹತ್ರ ಬಂದಾ.

ಹಿ : ನಮೋ ನಮಃ ರಾಜಾಧಿರಾಜಾ ಚಂದ್ರಸೇಕ ದೊರೆಗಳೇ

ಕ : ಶರಣಾರ್ಥಿ ಬಾ ಮಂತ್ರೀ ಹಿಂದೆ ಬರುವುದೇನು?

ಹಿ : ಬಜಂತ್ರಿ ಮಹಾರಾಜ್, ಅಕ್ಕ ಚಂದ್ರಾವತಿ ತಾಯಿ ನಿಮಗೆ ಆರತಿ ಬೆಳಗಾಕ ಬರ್ತಾಳ್ರಿ…..

ಕ : ರಾಜಾಧಿರಾಜ ಆಲೋಚಿನಿ ಮಾಡಿದ- ಅಃಆ ನಾನು ಈಕಿ ಈ ಸೂರ್ಯಕಾಂತಿಗೆ ನನ್ನ ಲಗ್ನ ಆಗಿಲ್ಲ ಅಂತ್ಹೇಳಿ ಕರ್ಕೊಂಡು ಬಂದೀನಿ- ಲಗ್ನ ಮಾಡಿಕೊಳ್ಳಾಕ!

ಹಿ : ಹೌದೂ!

ಕ : ಈಗ ಆಕಿ ಬಂದು ನೋಡಿ ಆರತಿ ಬೆಳಗಿ ಕದನ ಮಾಡಿ ನಮ್ಮಿಬ್ರಿಗೂ ಬಿಡುಗಡಿ ಮಾಡ್ತಾಳೆ!

ಹಿ : ಹೌದು;

ಕ : ಆಹಾ ಮಂತ್ರೀ-

ಹಿ : ಏನ್ ಮಾಹಾರಾಜ್ರೇ?

ಕ : ಈಗ ನಿನ್ಗೊಂದು ಮಾತು ಹೇಳಾದೈತಿ.

ಹಿ : ಯಾವುದು ಹೇಳ್ರೀ ಮಾರಾಜ್ರೇ….

ಕ : ಘೋರಾರಣ್ಯದಲ್ಲಿ ಹೋದಾಗ ದೇವಸ್ಥಲದಲ್ಲಿ, ಪರಮಾತ್ಮನ್ನ ಒಲಿಸ್ಕೊ ವ್ಯಾಳ್ಯಾದಲ್ಲಿ, ಒಂದು ಅವಲಕ್ಷಣ ಆಗೇತಿ; ಹನ್ನೊಂದು ದಿವಸದವರೆಗೂ ಮಡದಿ ಚಂದ್ರಾವತಿ ಮುಖ (ರಾಗವಾಗಿ) ನೋಡಂಗಿಲ್ಲೋ ನಾನೂ….

|| ಪದ ||

ಹಿಂದಕ್ಕೆ ತಿರುಗಿ ಹೋಗಂತಾ ಹೇಳಾ….ಹರಯನ್ನ ಮಾದೇವ.
ಮಡದಿ ಚಂದ್ರಾವತಿಗೆ ನೀನು ಹೇಳೋ….ಹರಯನ್ನ ಮಾದೇವ.

ಕ : ಚಂದ್ರಾವತಿ ಬರುತ್ತಿರಲು ಮಂತ್ರಿ ಬಂದು – ಅಕ್ಕಾ ನಿಂದ್ರಮ್ಮ ಬರಬೇಡ ಮುಂದೆ.

ಹಿ : ಓಹೋ! ಯಾಕ?

ಕ : ಮಹಾರಾಜ್ರು ಹೇಳ್ಯಾರೆ- ಘೋರಾರಣ್ಯದಲ್ಲಿ ಮಕ್ಕಳ ಫಲ ಪಡೆಯುವುದಕ್ಕೆ ಹೋಗಿದ್ರಲ್ಲ – ಏನೋ ಒಂದು ನೋಡಿ ಬಂದಾರಂತೆ; ಅವಲಕ್ಷಣ ಆಗೇತಂತೆ ನೀನು ಅರಮನೆಗೆ ವಾಪಾಸು ಹೋಗ್ಬೇಕಂತೆ, ನಿನ್ನ ಮುಖ ತೋರಿಸ್ಬಾರದಂತೆ!

ಹಿ : ಆಹಾ ನೋಡಿದಿರಾ ತಾಯೀ, ಅಮ್ಮಾ, ಗೌಡೇರಾ! (ರಾಗವಾಗಿ) ನಡೀರಿ ಹೋಗಾನು ಪತೀ ಮಾತು ಮೀರಬಾರದು.

ಕ : ವಾಪಾಸ್ ತಾಯಿ ಹೋಗಿಬಿಟ್ಲು.

ಹಿ : ಆಹಾ!

ಕ : ಮಂತ್ರಿ ದಂಡು ಸಿಬ್ಬಂದಿ ಅಗಸಿಯೊಳಗೆ ಬಂದು ನೋಡ್ತಾರೆ – ನಿಗಿ ನಿಗೆ ಹೊಳಿತಾ ಇದ್ದಾಳೆ ಸೂರ್ಯಕಾಂತಿ!

ಹಿ : ಮಂತ್ರಿ ಕೇಳಿದ-

ಕ : ಮಹಾರಾಜಾ ನೀವು ದೇವಸ್ಥಲಕ್ಕೆ ಹೋಗಿದ್ದೀರಿ; ಈ ಯಮ್ಮ ಯಾರು? ರಥದಾಗ ಕರ್ಕೊಂಡು ಬಂದೀರಿ!

ಹಿ : ಮಂತ್ರೀ ಅನಾಥನು ಈಕಿ, ಕಾಶೀಸೇನ ಮಹಾರಾಜನ ಮಗಳು ಸೂರ್ಯಕಾಂತಿ.

ಕ : ರಾಜ ಹೇಳ್ತಾನೆ- ಅಡಿವ್ಯಾಗ ಇದ್ಲು ಈಕಿ; ನಾನು ಲಗ್ನ ಮಾಡಿಕೊಳ್ಲಿಕ್ಕೆ ಕರ್ಕೊಂಡು ಬಂದೀನಿ (ರಾಗವಾಗಿ) ಆಹಾ ಮಹಾರಾಜಾ….

|| ಪದ ||

ಇದು ಮಾಯಾದ ಹೆಣ್ಣೂ………ಹರಯನ್ನ ಮಾದೇವ.
ಮೈ ಮಾದ ಹೆಣ್ಣಪ್ಪ ರಾಜಾ…….ಹರಯನ್ನ ಮಾದೇವ.
ಇದ ಹೆಣ್ಣೀಗೆ ನಂಬ ಬ್ಯಾಡ್ರಿ………ಹರಯನ್ನ ಮಾದೇವ.
ಮಂತ್ರಿ ಹೇಳುತಾನೇ……..ಶಿವ ಹರಯನ್ನ ಮಾದೇವಾ

ಕ : ಮಹಾರಾಜಾ ಇದು ಮಾಯದ ಹೆಣ್ಣು, ಮಹಿಮದ ಹೆಣ್ಣು! ಹೆಣ್ಣಿನ ಮಹಿಮಾ ನಿಮ್ಗೆ ಗೊತ್ತಾಗ್ವಲ್ದು ಈ ಯಮ್ಮಗ ಲಗ್ನ ಆಗ್ಬ್ಯಾಡ-

ಹಿ : ನಂಬಬ್ಯಾಡ ಈ ತಾಯಿಗೆ – ಅಂತ ಮಂತ್ರಿ

ಕ : ಯಾಕೋ ಮಂತ್ರಿ?

ಹಿ : ರಾಜಾಧಿರಾಜಾ, ರೂಪದಾಗ ಚಂದಾಗಿ ಕಾಣ್ತೈತಿ; ಆದರೆ ನಿಮಗೆ ಮಹಂತ ತೊಂದ್ರಿ ಬರ್ತೈತಿ ಮುಂದೆ!

ಕ : ಆಹಾ ಮಂತ್ರೀ,

ಹಿ : ಹೇಳ್ರೀ ಮಹಾರಾಜ್

ಕ : ಅಲ್ಲೋ ಮಂತ್ರೀ, ಇಂಥ ಸೌಂದರ್ಯವಾದ ದೇವಲೋಕದ ಈಕಿ ದೇವಕನ್ಯೆಯೋ, ತಿಲೋತ್ತಮೆಯೋ, ಊರ್ವಶಿಯೋ, ರಂಭೆಯೋ, ರತಿಯೋ ಸರಸ್ವತಿಯೋ ಇಂಥಾ ಹೆಣ್ಣಿಗೆ ಲಗ್ನ ಆಗಬ್ಯಾಡ ಅಂತೀ ಮಂತ್ರೀ?

ಹಿ : ಆಗ್ಬ್ಯಾಡ ರಾಜಾ.

ಕ : ಎಲೈ ಮಂತ್ರೀ, ಈಗ ಹೇಳಿದ ಮಾತ ಇನ್ನೊಂದು ಸಲ ಹೇಳೀ!

ಹಿ : ಹೌದು.

ಕ : “ಈ ಲಗ್ನ ಆಗಲೇಬೇಕು” – ಅಂದ ರಾಜ.

ಹಿ : ಆಹಾ!

ಕ : “ಮಾಹಾರಾಜ್ರೇ, ಆಗಲಿ ನಿಂತು ಲಗ್ನ ಮಾಡ್ತೀನ್ರೀ” -ಅಂದ ಮಂತ್ರಿ.

ಹಿ : ಹೌದು.

ಕ : ಪ್ರಜೆಗಳೇ, ರೈತರೇ, ದಂಡೇ, ಮಕ್ಕಳೇ ನೀವು ಯಾರು ಹೋಗಿ ಹಿರೇರಾಣಿಗೆ ಹೇಳ್ಬಾರದು; ಈಕಿಗೆ ಲಗ್ನವಾಗೋದೈತಿ ನಾನು ಹೇಳಿದ್ರೆ ಹುಷಾರ್-

ಹಿ : ನಿಮ್ಗೆ ಕೇಡು ತಪ್ಪಿದ್ದಲ್ಲ!

ಕ : ತೆಂಗಿನ ವನಂತರ, ತೇಗದ ವನಂತರ, ಮಾವಿನ ವನಂತರ, ಉದೇದ ಮರತೋಪು ಕಡಿಸಿ, ಹಾದಿಗೆ ಹಂದ್ರ ಹಾಕಿ, ಬೀದಿಗೆ ಚಳಿ ಕೊಡ್ಸಿ, ತಳಿರು ತೋರಣ ಕಟ್ಸಿದ್ರು.

ಹಿ : ಹೌದು ಸಾಸ್ಟಿಕಟ್ಟಿನೂ ಕಟ್ಟಿದ್ರು.

ಕ : (ರಾಗವಾಗಿ) ರಾಜಾಧಿರಾಜ ಮದುಮಗ ಆಗ್ಯಾನೇ….

ಹಿ : (ರಾಗವಾಗಿ) ಆಹಾss….

ಕ : ಸೂರ್ಯಕಾಂತಿ ವಿಧಿಮಾಯಿ ಮದುಮಗಳಾದ್ಲು!

|| ಪದ ||

ಹಣಿಗೆ ಬಂಗಾರದ ಬಾಸಿಂಗ ಬೇಕು……..ಹರಯನ್ನ ಮಾದೇವಾ
ಹಣಿಗೆ ಬಂಗಾರದ ಬಾಸಿಂಗ…….. ನಮಃ ಶಿವಾಯ
ಕೈಗೆ ಮುತ್ತಿನ ಕಂಕಣ………. ನಮಃ ಶಿವಾಯ
ಮುತ್ತಿನ ಹಾರಾ ಹಾಕ್ಯಾರಯ್ಯಾ……… ನಮಃ ಮಾದೇವ
ಗುರುಲಗ್ನ ನಡಿಸ್ಯಾರಾ……….. ನಮಃ ಮಾದೇವ
ಒಂದೇ ದಿವಸ, ಎರಡೇ ದಿವಸ…….. ನಮಃ ಶಿವಾಯ

ಕ : ಹಣಿಗೆ ಬಂಗಾರದ ಬಾಸಿಂಗ, ಕೈಯಿಗೆ ಮುತ್ತಿನ ಕಂಕಣ, ಮುತ್ತಿನ ಹಾರ ಹಾಕಿ ಒಂದು ದಿವ್ಸ. ಎರಡು ದಿವ್ಸ, ಮೂರು ದಿವ್ಸ, ನಾಲ್ಕನೇ ದಿವಸ ಧಾರೀ ಎರದು ತಾಳೀ ಕಟ್ಟಿದ ದಿವಸದಾಗ ಮಾರಾಜ ನೋಡಿದ- ಮಂತ್ರೀ….

ಹಿ : ಏನ್ರೀ ಮಾಹಾರಾಜ್?

ಕ : ಊರ್ಗೆಲ್ಲಾ ಟಾಂ ಟಾಂ ಹೊಡುಸು. ಎರಡನೇ ಕುಟುಂಬ ಮಹಾರಾಜ್ಗೆ ಲಗ್ನ ಆಯಿತು, ಊಟಕ್ಕೆ ಜನ ಬರ್ಲೀ ಅಂತ.

ಹಿ : ಹೌದೂ.

ಕ : “ರೈತರೂ. ಶ್ರೀಮಂತರೂ, ಸಾಹುಕಾರ್ರು, ಊಚರು, ನೀಚರು ಯಾರಿದ್ರೂ ಬರಬಹುದು ಮಾಹಾರಾಜ್ರು ಲಗ್ನದ ಊಟಕ್ಕೆ” ಅಂತ್ಹೇಳಿ ಟಾಂ ಟಾಂ ಹಾಕಿಸ್ಕೊಂತ ಮಂತ್ರಿ ಬಜಾರದಾಗ ಬರೋ ಕಾಲಕ್ಕೆ-

ಹಿ : ಆಹಾ!

ಕ : ಮಂತ್ರಿಯ ಒಡಹುಟ್ಟಿದ ಅಕ್ಕ ಚಂದ್ರಾವತಿ ಮಹಾರಾಣಿ ಅರಮನಿಯಾಗ ಕುಂತಿದ್ಲು, ಆಕೀ ಕಿವಿಗೆ ಬಿತ್ತು.

ಹಿ : ತಮ್ಮಾ, ಬಾರಪ್ಪಾ ಇಲ್ಲಿ.

ಕ : ಏನಮ್ಮಾ?

ಹಿ : ಏನೋ ಊರಾಗ ಟಾಂ ಟಾಂ ಹಾಕಿಸ್ತೀಯಲ್ಲಾ – ಏನದು?

ಕ : ನಿಮ್ಮ ಪತಿಯಾದ ಚಂದ್ರಸೇಕ ರಾಜ ದೇವಸ್ಥಲಕ್ಕೆ ಹೋಗಿದ್ದನಲ್ಲಮ್ಮಾ – ಮಕ್ಕಳ ಫಲದ ಸಲುವಾಗಿ; ಅದನ್ನ ಪಡದು ಬರೋ ವ್ಯಾಳ್ಯಾದಲ್ಲಿ ಸುಂದರವಾದ ಹೆಣ್ಣು ತಂದಾನಮ್ಮ.

ಹಿ : ಆಹಾ!

ಕ : “ಇವತ್ತು ಮಾಂಗಲ್ಯ ಆಯ್ತು. ಲಗ್ನ ಆಯ್ತು. ಊರಾಗಿನ ಮಂದಿಗೆಲ್ಲಾ ಊಟಕ್ಕೆ ಹೇಳಾಕ ಬಂದೀನಮ್ಮ” ಅಂದ ಮಂತ್ರಿ.

ಹಿ : ಹೇಳಿದ್ಕೇಳಿ ದಿಕ್ರು ತಪ್ಪಿ ಬಿಟ್ಟೀತು-ಚಂದ್ರಾವತಿಗೆ!

ಕ : (ರಾಗವಾಗಿ) ಗೌಡೇರಾ….ಮೋಸಾಯ್ತೇ ಗೌಡೇರಾ….ಮಹಾರಾಜರ ಲಗ್ನದ ಸುದ್ದಿ ನನ್ನ ಕಿವಿಯಾಗ ಬಿದ್ದಿದ್ದಿಲ್ಲಾ….ಮಕ್ಕಳ ಫಲ ತರ್ತೀನಂತ ಹೋಗಿ ಒಂದು ಹೆಣ್ಣು ತಂದು ಲಗ್ನಾದ್ರಂತೇ….

ಹಿ : ಹೌದೇ…

ಕ : (ರಾಗವಾಗಿ) ಅಪ್ಪಾ ನನಗೆ ಇನ್ನು ದೂರ ಮಾಡ್ತಾರೇ….ನನಗೆ ಮೋಸಯ್ತು…. ತಾಯೀ

ಹಿ : ದುಃಖ ಮಾಡ್ತಾಳೆ!

ಕ : ತಾಯೀ – ಅಂದ್ರು ಗೌಡೇರು.

ಹಿ : ಆಹಾ ಯಾಕಮ್ಮಾ?

ಕ : ದುಃಖ ಮಾಡಿದ್ರೆ ಬರೋದಿಲ್ಲ ತಾಯಿ, ಮಹಾರಾಜ್ರು ನಿಮಗೆ ಮಕ್ಕಳಿಲ್ಲದ ಸಲುವಾಗಿ ಇನ್ನೊಂದು ಹೆಣ್ಣನ್ನು ಲಗ್ನವಾಗಿರಬಹುದು!

ಹಿ : ಅದಕ್ಕೇನು ಚಿಂತಿ ಮಾಡಬ್ಯಾಡ ತಾಯೀ,

ಕ : ಆಗ್ಲೆಮ್ಮಾ, ಹೋಗಿ ಮಹಾರಾಜರಿಗೆ ನೋಡಿ ನಮ್ಮ ತಂಗೀಗೆ ಐದು ಅಕ್ಕಿಕಾಳು ಹಾಕಿ ಬರೋನs ನಡ್ರಿ ಗೌಡೇರಾ….

ಹಿ : ಹೌದು ಮಹಾತಾಯಿ, ಆನಂದವಾಗಿ ಮಡಿ ಉಡಿಯಿಂದ ಹೋಗಿ ಬರೋಣ.