ಕ : ಹೊಟ್ಟೆ ಉಬ್ಬೇತಿ, ಇವತ್ತಾಗಲಿ, ನಾಳೆಯಾಗಲಿ ಹೊಟ್ಟೆ ಒಡಿತೈತಿ! ಹೊಟ್ಟೆ ಒಡದು ಗುಡಿಯಲ್ಲ ಇಚ್ಚಂಡ ಆಗತೈತಿ ಕೆಟ್ಟು ಹೋಗ್ತೈತಿ! ಅಂಬಾದೇವೀ ನಿನ್ನ ಕೃಪಾ ಇರಲಿ! (ರಾಗವಾಗಿ) ಹೋಗ್ತಾನೆ, ಮತ್ತೆ ಬರ್ತಾನೆ…..ಬರತ್ತಾನೆ

ಹಿ : ಎರಡು ದಿವಸಕ್ಕೂ ಒಮ್ಮೆ ಮೂರುದಿವಸಕ್ಕೊಮ್ಮೆ!

ಕ : ಒಂಬತ್ತು ತಿಂಗಳು ಒಂಬತ್ತು ದಿವಸ ನವಮಾಸ ತುಂಬ್ಯಾವೆ ಶಿವಲೋಚನಮ್ಮಗ! ಆವತ್ತು ಬಂದು ನೋಡ್ತಾನೆ, ಪರಿಪೂರ್ಣ ಹೊಟ್ಟೆ ಉಬೈತಲ್ಲೊ ಈಕಿದು!

ಹಿ : ಹೌದು ಹೌದು!

ಕ : ಈಗ ಒಡಿತೈತಿ, ಇನ್ನು ಸ್ವಲ್ಪ ಹೊತ್ತಿಗೆ ಒಡಿತೈತಿ ಅಂಬ್ಹಂಗ ಆಗೈತಿ!

ಹಿ : ಆಗೈತಿ,

ಕ : ಇನ್ನು ತಡ ಮಡ್ಬಾರದು! ನಿಂತ್ರೆ ಕಣ್ಣ ತುಂಬಾ ನೋಡ್ಬೇಕಾಗುತೈತಿ ಅಂದು ಅಂಬಾನ ಗುಡಿ ಕದಾ ಮುಚ್ಚಿದ್ದೆ ಕುದ್ರಿಮ್ಯಾಲೆ ಕುಂತ್ಕೊಂಡು ಆಕಡಿಕೆ ಹೊಗಾದಕೂ

ಹಿ : ಆಹಾ!

ಕ : ಆಕಿ ರಂಭಾವತಿ ಜಳಕ ಮಾಡಾಕ ಶಿವದಾರ ತಗದು ಬೆಳ್ಳಿ ಗೂಟಕ್ಕೆ ಸಿಗೆ ಹಾಕಿದ್ಲು! (ರಾಗವಾಗಿ) ಶಿವಶಿವ ಅಂತ ತಾಯಿ ಎದ್ದು ಕುಂತ್ಲೂ

|| ಪದ ||

ತಡಿಯಲಾರೆ ಬ್ಯಾನಿಗಳನೂ….
ನಡುವಿನ ಶೂಲಿಗಳೈ….ಹರಯನ್ನ ಮಾದೇವ
ಜಾವ ಜಾವದ ಬ್ಯಾನಿ ಭರ್ಚಿಲೆ ಇರುದ್ಹಂಗೈ….ಹರಯನ್ನ ಮಾದೇವ
ನಾನು ಯಾರಿಗೆ ಹೇಳಲವ್ವಾಬ್ಯಾನಿಗಳೈ
ತಾಸು ತಾಸೀನ ಬ್ಯಾನಿ ತಾಳಿಲೆ ಕಟುದ್ಹಂಗ
ನಾನು ಯಾರಿಗೆ ಹೇಳಲವ್ವಾ ಬ್ಯಾನಿಗಳೈ
ಕಣ್ಣ ತೆರೆಯೋ ನನ್ನ ಬಾಳಾ

ಒಂಬತ್ತು ತಿಂಗಳು ಒಂಬತ್ತು ದಿವಸ ತುಂಬಿದ್ವು ಅಂಬಾದೇವಿ! ಬಾಣಂತನ ಮಾಡೋರು ಯಾರು? ತಡಿಲಾರೆ ಬ್ಯಾನಿಗಳನು-ಅಂಬಾ ಅನಾಥಳು ದಿಕ್ಕಿಲ್ಲದವಳು.

|| ಪದ ||

ಅಂಬಾದೇವಿ………………
ತಾಸು ತಾಸಿನ ಬ್ಯಾನಿ ತಾಳಿಲೆ ಕಟುದ್ಹಂಗ
ನಾನು ಯಾರೀಗೆ ಹೇಳಲವ್ವಾ
ತಡಿಯಲಾರೈ ಬ್ಯಾನಿಗಳನೂ
ಜಾವ ಜಾವದ ಬ್ಯಾನಿ ಭರ್ಚಿಲೆ ಇರುದ್ಹಂಗೈ…..ಹರಯನ್ನ ಮಾದೇವ
ನಾನು ಯಾರಿಗೆ ಹೇಳಲವ್ವಾ ಬ್ಯಾನಿಗಳೈ
ಕಣ್ಣ ತೆರೆಯೋ ನನ್ನ ಬಾಳಾ!

ಕ : ಒಂಬತ್ತು ತಿಂಗಳು ಒಂಬತ್ತು ದಿವಸ ಆದಾಗ ಜನನ! ಅಂಡದೊಳಗಿಂದ ಪಿಂಡಾಂಡ ಅರ್ಧಕೂಸು ತಾಯಿ ಹೊಟ್ಟೇ ಬಿಟ್ಟು ಹೊರಗ ಬಂದೈತಿ, ಅರ್ಧ ಹೊಟ್ಯಾಗ ಐತಿ! ಅಂಥಾ ಟೈಮಿನಲ್ಲಿ-ಶಿವದಾರ ಕೊಳ್ಳಾಗ ಹಾಕ್ಕೊಂಡುಬಿಟ್ಲು -ಆ ಸೂಳಿ ರಂಭಾ!

ಹಿ : ಅಂಬಾ ಅಂತ ಮಲ್ಕೊಂಡ್ಲಪಾ-ತಾಯಿ ಜಲ್ಮ ಹೊಗಾದಕ್ಕೂ ಕೂಸು ಧಿಕ್ಕರಿಸಿ ತೇಲಗಣ್ಣು, ಮೇಲಗಣ್ಣು ಮಾಡಿ ಪ್ರಾಣ ಬಿಡಾಕ ಹತ್ತೈತಿ!

ಕ : ಇತ್ತ ಕಡಿಗೆ ನೀಲಕುಮಾರ ರಂಭಾವತಿ ಮನಿಗೆ ಬಂದ. ಆಕಿ ಆರತಿ ಬೆಳಗಾಕ ಬಂದ್ರೆ-ತಗೀ ಏನು ಆರತಿ ಬೆಳಗತಿದಿ;

ಹಿ : ಯಾಕ್ರೀ?

ಕ : ಸ್ನಾನ ಮಾಡ್ಕೊಂಡು ಆರತಿ ಬೆಳಗ್ಬೇಕು ಆರತಿ ಅಂದಿದಿಲ್ಲ?

ಹಿ : ಹೌದು ಹೌದು!

ಕ : ಜಳಕ ಮಾಡ್ಕೊಂಡೇರಿ ನಾನು ಬರೋದು ಆರತಿ ಬೆಳಗಾಕ!

ಹಿ : ಹೌದ್ರಿ!

ಕ : ಅಲ್ಲಿ ಆರತಿ ಇಡು ಇನ್ನೊಮ್ಮೆ ಜಳಕಮಾಡು ನಾನು ನೋಡ್ತೀನಿ-ಅಂದ ರಾಜ.

ಹಿ : ಪರಮಾತ್ಮನ ಲೀಲೆ!

ಕ : ಆರತಿ ಇಟ್ಟು ಬೆಳ್ಳಿಗೂಟಕ್ಕೆ ಸಿಗ್ಯಾಕಿಬಿಟ್ಲು ಶಿವದಾರ

ಹಿ : ಆಕಿ ಜಳಕಕ್ಕ ಕುಂತ್ಲು.

ಕ : ಶಿವಶಿವಾ ಅಂತಾ ಗುಡಿಯಾಗ ಎದ್ದು ಕುಂತ್ಲು-ಶಿವಲೋಚನಾ.

|| ಪದ ||

ತಾಸು ತಾಸಿನ ಬ್ಯಾನಿ ತಾಳಿಲೆ ಕಟುದ್ಹಾಂಗ
ಕಣ್ಣಾ ತೆರಿಯೋ ನನ್ನ ಬಾಳಾ
ಕಣ್ಣಾ ತೆರಿಯೋ ನನ್ನ ಬಾಳಾ
ನಾ ಯಾರಿಗೆ ಹೇಳಲವ್ವಾ
ಜಾವ ಜಾವದ ಬ್ಯಾನಿ ಭರ್ಚಿಲೆ ಇರುದ್ಹಾಂಗ

ಕಣ್ಣಾ ತೆರಿಯೊ ನನ್ನ ಬಾಳಾ
ನಾನು ಯಾರಿಗೆ ಹೇಳಲವ್ವಾ

ಕ : ನವನರಗಳೂ ತಿರುಗಿ, ಅರವತ್ತಾರು ಕೀಲು ಪರಿಪೂರ್ಣವಾಗಿ ಸಡಲಿ, ಅಂಡಾಂಡದಿಂದ ಪಿಂಡಾಂಡ ಹೊರ ಬಂತು! -ಭೀಮನಂತ ಕುಲಪುತ್ರ! ಮುಂಗಾರು ಮುಗಿಲು ಮಿಂಚುಗ್ಯಾನ! ಹಗಲುಚುಕ್ಕಿ ಮಾಡಿದ್ಹಂಗ ಗಂಡು ಮಗ ಹುಟ್ಟಿದ- ತಾಯಿ ಹೊಟ್ಟ್ಯಾಗ!

ಹಿ : ರಾಜಪಂಡಿತ ಕ್ಷತ್ರಿ!

ಕ : ಚಿಟ್ಟನೆ ಚೀರಬೇಕಾದ್ರೆ ಅಂವ್ಬಾನ ಗುಡಿಹಾಳ ಜಂತ್ಯಾನ ಮಣ್ಣು ಉದರತೈತಿ.

ಹಿ : ಬಗನೆ ಮಗನ್ನ ನೋಡ್ತಾಳೆ-ತಾಯಿ!

ಕ : ಏನು ಪ್ರಕಾಶ! ರಾಜ ಕ್ಷತ್ರಿ! ಆಹಾ ಏನು ಮಗ ಇದು! ಅಂಬಾದೇವೀ ಕೈಯಾಗನ ಬಿಚ್ಚುಗತ್ತಿ ತೊಗೊಂಡು ಮಗನ ಹುರಿ ತಾನೇ ಕೊಯ್ದುಬಿಟ್ಲು.

ಹಿ : ಏನು ಮಗ!

ಕ : ದೇವತಾ, ದೇವೇಂದ್ರನ ರೂಪ ಇದು. (ರಾಗವಾಗಿ) ಯವ್ವಾ! ಮಗನೇ ಹಿಂಗದಾನೆ! ನನಗೆ ಮುಟ್ಟಿದಂಥ ಮಾರಾಯ ಹ್ಯಾಂಗ್ ಇದ್ದಾನು!

ಹಿ : (ರಾಗವಾಗಿ) ಆಹಾ….

ಕ : (ರಾಗವಾಗಿ) ಇಂಥಾ ವ್ಯಾಳ್ಯಾದಲ್ಲಿ ಆಮಾರಾಯ ಒಂದು ಮುಖ ತೋರ್ಸಬಾರದೆ! ಯಾರು ಇದ್ದಾರು-ಅಂತಾ…?

ಹಿ : ಹೌದೇ.

ಕ : ಮಗನೇ, ಮಗನೇ…..ಎಂತ್ಹೇಳಿ ತೊಡಿಮೇಲೆ ಹಾಕ್ಕೊಂಡು ತುಟಿ ಗಲ್ಲಾ ಹಿಡದು ಪ್ರೀತಿ ಮಡ್ಕೊಂತ ಕುಂತ್ಲು! ಜನನ ಆದ ಒಂದು ಕಾಲುಗಂಟ್ಯಾಗ ಆ ಶಿವದಾರ ಕೊಳ್ಳಾಗ ಹಾಕೊಂಡುಬಿಟ್ಲು ಅಲ್ಲಿ ಆಕಿ-

ಹಿ : ಸೂಳಿ ರಂಭಾವತೀ!

ಕ : ಕೂಸು ಒಂದುಕಡಿ ಪುಟದಬಿತ್ತು ಅಂಗಾತ! ಈ ಬಾಣಂತಿ ವತ್ತಟ್ಟಿಗೆ ಬಿದ್ಲು! ಅಂಬಾನ ಗುಡಿಯಾಗ ಮೂಲ್ಯಾಗ ಕೂಸು ಟ್ಹಾ,ಟ್ಹಾ ಅಂತ ಅಳ್ತೈತಿ!

ಹಿ : ಒಂದೇಸವನೇ ಅಳತೈತೆ!

ಕ : ರಂಭಾವತಿ ಆರತಿ ಬೆಳಗಿದಳು. ರಾಜ ಒಳಗ್ಹೋಗಿ ಸ್ನಾನ ಮಾಡಿಕೊಂಡು ಪೂಜಾ ಮುಗಿಸ್ಕೊಂಡು ಬೇಗ್ಗೆ ಐದು ಗಂಟೆಗೆ-ಆ ಅಂಬಾನ ಗುಡಿಯಾಗ ಆಕೆ ಹೊಡಿಯಂಗ ಇತ್ತು ಹೊಡದೈತೋ ಏನ್ ಹ್ಯಾಂಗ್ ಐತೊ ನೋಡಿಬರಾನು ಅಂತ್ಹೇಳಿ ಕುದ್ರಿ ಹೊಡ್ಕೊಂಡು ಅಂಬಾನ ಗುಡಿ ಎದುರಿಗೆ ಬಂದ.

ಹಿ : ಆಹಾ!

ಕ : ಕುದ್ರಿ ಮೈಯಾಕ ಬಿಟ್ಟು, ಒಳಗ ಒಂದು ನೋಡ್ಬೇಕಂತ್ಹೇಳಿ ಅಂಬಾದೇವಿಗೆ ನಮಸ್ಕಾರ ಮಾಡಿ, ನೋಡ್ತಾ ಇದಾನೆ ಬಲಗಡಿಗೆ ರುದ್ರ ಅವತಾರ!

ಹಿ : ಮಹಾ ಪಂಡಿತಮಗ.

|| ಪದ ||

ಆಹಾ ಎಂಥಾ ಮಗನೇ…..ಹರಹರ ಮಹಾದೇವ
ಮಲಗ್ಯಾನೈ ಬಾಲಾ….ಹರಹರ ಮಹಾದೇವ
ಯಾ ತಾಯಿ ಹಡದಾಳೇ…..ಹರಹರ ಮಾದೇವ
ಏನು ಮಗನ ರೂಪವೇ ರೂಪವೇ….ಶಿವಹರ ಮಹಾದೇವ

ಕ : ಭಲೆಲೆ ಕುಮಾರ ಭಲೆಲೆ ಮಗನೇ! ಅಂಬಾನ ಗುಡಿಯೊಳಗೆ ಈಕಿ ಹೊಟ್ಟಿ ಹೊಡಿತೈತಿ ಅಂತ ಮಾಡಿದ್ದೆ; ಹೊಟ್ಟು ನೋಡಿದ್ರೆ ಈಗ ಬೆನ್ನಿಗೆ ತಗಲೇತಿ! ಮಗ ನೋಡಿದ್ರೆ ರುದ್ರಾವತಾರ!

ಹಿ : ಮಹಾ ಪಂಡಿತ ಮಗ! ಚಲೋ ಮಗ ಹುಟ್ಟ್ಯಾನ!

ಕ : ದೇವತಾಕುಮಾರ ಐತೋ ಈ ಹುಡುಗ! ಇಂಥಾ ಮಗಾ ಹ್ಯಾಂಗ್ ಹುಟ್ಟಿದ್ದೀತು! ಜಲ್ಮ ಸತ್ತು ಶ್ರಮವಾಗೇತಿ, ಒಂದುವ್ಯಾಳೆ ಜಲ್ಮ ತಿರುಗಿರಬೇಕು.

ಹಿ : ಹೌದು ಹೌದು ತಿರುಗತೈತಿ ಅಂತಾರೆ!

ಕ : ನನ್ನ ಉತ್ತರಕ್ಕೆ ಹುಟ್ಟಿದ ಪಂಡಿತ ಐದಾನೆ-ಅಂದು ಅಂಬಾನ ಗುಡಿ ಕದ ಮುಚ್ಚಿದ; ಕುದ್ರಿಮ್ಯಾಲೆ ಕುಂತ್ಕೊಂಡು ಸೀದ ಕುದ್ರಿ ಹೊಡ್ಕೊಂಡು ನಾಲ್ಕು ಗಂಟೆಗೆ ಮುತ್ಸೆಟ್ಟಿ ಮನಿಗೆ ಬಂದ.

ಹಿ : ಶೆಟ್ಟಿ ಜೀವದ ಗೆಳೆಯ.

ಕ : ಶೆಟ್ರೇ!

ಹಿ : ಏನು ಮಹಾರಾಜ್ರೆ ಬಹಳ ದಿವ್ಸಕ್ಕೆ ಬಂದ್ರಿ ಗೆಳೆಯಾ-ನೀಲಕುಮಾರ ಬರ್ರಿ.

ಕ : ಏನಿಲ್ಲ ಗೆಳೆಯಾ ಊರ ಮುಂದಿನ ವನಂತರದಾಗ ಮುದ್ಲಾಪುರದ ಬಂಗ್ಲ್ಯಾಗ ಯಾವುದಾರೋ ಏನೋ ಪರಸ್ಥಳದ ಮಂದಿ ಗುಳೆದಾರು ಬಂದು ಉಳುಕೊಂಡಾರೆ. ಅದರಾಗ ಏನೋ ಒಬ್ಬಾಕಿ ಜನನ ಆಗ್ಯಾಳಂತೆ; ನಾನು ಅಲ್ಲಿಂದ ಬರ್ತಿದ್ದೆ; ಬಂದು ನನಿಗೆ ನಮಸ್ಕಾರ ಮಾಡಿದ್ರು; ಏನ ಬೇಕಪ್ಪ ಬಡವರೇ ಅಂತ ಕೇಳಿದೆ.

ಹಿ : ನಮಗೇನು ಹೆಚ್ಚೆಂದು ಏನ ಬೇಕ್ರಿ!

ಕ : ನಮಗೆ ಎರಡು ಹಂಡೇವು ನೀರು ಬೇಕ್ರಿ, ನೀರು ಕಾಸಾಕ ಎರಡು ಹಂಡೇವು ಕೊಡ್ರಿ ಅಂದ್ರು, ತಂದು ಕೊಡ್ತೀನಿ ಅಂತ ಹೇಳೀನಿ. ಎರಡು ಹಂಡೇವು, ಎರಡು ತಪಾಲಿ, ಎರಡು ಕೊಳಗದ ತಾಲಿ, ಕೊಡ್ರಿ ಅವರಿಗೆ ಒಯ್ದು ಕೊಡ್ತೀನಿ. ಎಂಟು ಹತ್ತು ದಿವಸಕ್ಕೆ ತಂದು ಕೊಡ್ತೀನಿ ನಾನು.

ಹಿ : ಒಳ್ಳೇದು ತೊಗೊಂಡು ಹೋಗ್ರಿ ಗೆಳೆಯಾ,ನೀವಾದ್ರು ಸಹಾಯ ಮಾಡ್ಬೇಕು-ಪರಸ್ಥಳದವರಿಗೆ!

ಕ : ಎರಡು ಹಂಡೇವು, ತಪಾಲಿ, ಕೊಳಗ, ತಾಲಿ, ಚರಿಗಿ, ಕೊಡಪಾನ, ಗಂಧದ ಎಣ್ಣೆ ಗುಲಾಬಿ ಎಣ್ಣಿ, ಸಂಪಿಗಿ ಎಣ್ಣಿ.

ಹಿ : ಚುಮಿನಿ ಎಣ್ಣಿ.

ಕ : ಹೇ, ಹೇ! … ಇವೆಲ್ಲಾ ಕುದ್ರಿಮ್ಯಾಲೆ ಸಾಗಿಸಿದ-ಅಂಬಾನ ಗುಡಿಗೆ.

ಹಿ : ಹೌದು!

ಕ : ಎರಡು ಒಲಿ ಗುಡಿಮಗ್ಗಲಿಗೆ ಹೂಡಿದ; ಹಂಡೇವು ಒಲಿಮ್ಯಾಲೆ ಏರಿಸಿ ಕೊಡಪಾನದಿಂದ ನೀರು ತಂದು ತಂದು ತುಂಬಿಸಿದ. ಒಲಿಗೆ ಉರಿ ಹಚ್ಚಿ ನೀರು ಕಾಸಿ ಬೇವಿನ ತಪ್ಲ ಚಂದಾಗಿ ತಿರುವಿ ಮೈಗೆ ಹಚ್ಚಿ. ತೈಲ ಎಲ್ಲಾ ತಂದು ಬಟ್ಲಕ್ಕಹಾಕಿ ಕೂಸಿಗೆ ಮದ್ಲು ನೀರ ಎರಿಬೇಕಂತ್ಹೇಳಿ ಗಂಧದ ಎಣ್ಣಿ, ಗುಲಾಬದ ಎಣ್ಣಿ ಹಚ್ಚಿ ಮಗನಿಗೆ ತಂದು ನೀರೆರದ! ಒಂದು ಶಲ್ಯ ಹಾಸಿ,

ಹಿ : ಒಂದು ಶಲ್ಯ ಮ್ಯಾಲೆ ಹೊಚ್ಚಿದ!

ಕ : (ರಾಗವಾಗಿ) ಬಾರೇ ಮಡದಿ ನೀರ ಎರ್ಕೋ ನೀನು, ಕೈ ಬಿಟ್ರೆಬಿದ್ಹೋಗ್ತೀ……ಶ್ರಮ ಹಿಡಿದಾನ ಒಂದು ಕೈಲೇ…..ನೀರು ಎರಿತಾನಾ……ಶ್ರಮಕ್ಕೆ ಅಂಬಾನ ಗುಡಿಯಾಗ ಆದ ಮಡದಿ ತಂದು ಅರ್ಧ ಪಿತಾಂಬ್ರಹಾಸಿ ಅರ್ಧಪಿತಾಂಬ್ರ ಮ್ಯಾಲೆ ಹೊಚ್ಚಿದ ಮಗನಿಗೆ ತಂದು ಆಕಿ ಮಗ್ಗಲಿಗೆ ಹಾಕಿ, ಹಂಡೇವು ಕೊಡಪಾನ, ತಪಾಲಿ ಕೊಳಗ ತಾಲಿ ಎಲ್ಲಾ ಒಂದು ಮೂಲ್ಯಾಗ ಒಟ್ಟಿ-

ಹಿ : ಒಟ್ಟೀ-

ಕ : ಅಂಬಾದೇವಿ ಹೋಗ್ತೀನಂತ್ಹೇಳಿ, ಕದ ಮುಚ್ಚಿ ರಂಭಾವತಿ ಮನಿಗೆ ಹೋಗ್ಬೇಕಾದ್ರೆ ಆಕಿಜಳಕ ಮಾಡಾಕ ಶಿವದಾರ ತಗದು ಗೂಟಕ್ಕ ಹಾಕಿದ್ಲು! ಇಲ್ಲಿ ಅಂಬಾದೇವಿ ಗುಡಿಯಲ್ಲಿ-

ಎದ್ದು ತಾಯಿ ನೋಡ್ತಾಳೆ, ಗಮಗಮ ಗಮಾಡಸ್ತೈತಿ!

ಹಿ : ಗುಡಿಯೊಳಗ!

ಕ : ಯವ್ವಾ, ಪಾತ್ರಿ ಒಟ್ಯಾರ ಮೂಲ್ಯಾಗ ಯಾರು ಬಂದಿದ್ದಾರು! ನೀರು ಎರದಾರ ಮಗನಿಗೆ ನನಗೂ ನೀರು ಎರದಾರೆ! ಜರತಾರ ಪಿತಾಂಬ್ರ ಉಡಿಸ್ಯಾರೆ! ಗಂಧದ ಎಣ್ಣಿ ಗಮಾಡಸ್ತೈತಿ!

ಹಿ : ಆಹಾ

ಕ : (ರಾಗವಾಗಿ) ನನಗೆ ಮುಟ್ಟಿದಂತ ಮಾರಾಯ ಬಂದು ನನಗೆ ಓಪುಣ್ಯ ಮಾಡಿ ಹೋಗ್ಯಾರ ತಾಯೀ……

ತೊಡಿಮ್ಯಾಲೆ ಮಗನಿಗೆ ಹಾಕ್ಕೊಂಡು ಮಲಿ ಕುಡುಸಾಕ ಆಕಿ ಕುಂದ್ರಾಕು, ಅದೇ ವ್ಯಾಳ್ಯಕ್ಕೆ ರಂಭಾವತಿ ಶಿವದಾರ ಹಾಕ್ಕೊಳ್ಕೊದ್ಕು-

ಹಿ : ನ್ಯಾರಾತು.

ಕ : ತಾಯಿ ಮಗ ದಿಕ್ಕಾಪಾಲು ಆದ್ರು! ಐದು ದಿವಸಕ್ಕೆ ಬಂದು ಈರ್ಲ ಮಾಡಿ

ಹಿ : ಆಹಾ!

ಕ : ರಾಜಕುಮಾರ ರಂಭಾನ ಮನಿಗೆ ಬಂದು ಕರೀತಾನ-ರಂಭಾ ಬಾ ಇಲ್ಲಿ

ಹಿ : ಏನು ಮಹಾರಾಜ್ರೇ?

ಕ : ಈ ಹೆಣ್ಣು ಮಕ್ಕಳು ಜನನ ಅಕ್ಕಾರಲ್ಲ ಆಗ ಬಾಣಂತಿಕಾರ ಏನೇನು ಕೊಡ್ತಾರೆ?

ಹಿ : ಬಾಣತಿಕಾರ ಹೇಳ್ತೀನಿ ಕೇಳ್ರಿ;

ಕ : ಆದ್ರ ಮದ್ಲು ಇದನ್ನ ಹೇಳ್ರಿ, ಯಾಕ್ರೀ ಎಂದೆಂದೂ ಬಾಣಂತಿಕಾರ ಕೇಳಿದ್ದಿಲ್ಲ (ರಾಗವಾಗಿ) ಯಾರಿಗಾರ ನೋಡಿ ಬಂದೀರೇನ್ರೀ….. ಹೋಗಿ

ಕ : ಎಲೇ ರಂಭಾ ನೀನಿದ್ದು ಮತ್ಯಾರೆಗೆ ನೋಡ್ಲಿ ಸೊಕ್ಕು ನಿನಿಗೆ!

ಹಿ : ಅದಕ್ಕಲ್ರೀ ಆ ಯಾರಗೆರೀ ಅದು ಬಾಣಂತಿಕಾರ ಅಂತ ಅಷ್ಟೇ.

ಕ : ಎಷ್ಟೊಂದು ನೀನು ಗಾಬರಿಯಾಗ್ತಿಯಲ್ಲ ರಂಭೀ! ಮದ್ಲಾಪುರದ ಬಂಗ್ಲಿ ಹತ್ರ ಯಾವುರೋರೋ ಹಳ್ಳೇರು ಬಡಸ್ತನ ಬದುಕು ಮಾಡಾಕ ಬಂದು ವಸ್ತಿಯಾಗ್ಯಾರ; ಅದರಾಗ ಒಬ್ಬ ಹೆಣ್ಣು ಮಗಳು ಜನನ ಆಗ್ಯಾಳಂತೆ.

ಹಿ : ಆಹಾ!

ಕ : ಅಲ್ಲಿಂದ ಬರಬೇಕಾದ್ರೆ-ಮಹಾರಾಜಾ ಈ ಬಡವೀ ಕೈಯಾಗ ದುಡ್ಡಿಲ್ಲ ಸ್ವಲ್ಪ ವೆಚ್ಚಕ್ಕಕೊಡ್ರಿ ಅಂದರು.

ಹಿ : ಹೌದು.

ಕ : ಅಪ್ಪಾ ನೀವೇನು ಭಯಾ ಪಡ ಬ್ಯಾಡ್ರಿ ಬಾಣಂತಿ ಅದಾಳ ಅಂದದ್ದಕ್ಕೆ ನಾನು ತಂದು ಕೊಡ್ತೀನಿ ಅಂತ ಹೇಳಿ ಬಂದದಕ್ಕೆ, ನೀನೇ ಹೇಳು-ಕಾಗದ ಬರ್ಕೊಂಡು ನನ್ನ ಗೆಳೆಯನ ಅಂಗಡಿಗೆ ಕೊದಸ್ತೀನಿ-ಅಂದ ರಾಜಕುಮಾರ.

ಹಿ : ಆಹಾ ಎಲ್ಲಿ ಅದಾರ ಅವ್ರು?

ಕ : (ರಾಗವಾಗಿ) ರಂಗಶಾಲೆಯಲ್ಲಿ ಅದಾರೆ,

ಹಿ : (ರಾಗವಾಗಿ) ನಾನು ಬಂದು ನೋಡಿ ಕೊಡಿಸ್ತೀನಿ ನಡ್ರೀ ದೊರೀ………

ಕ : ಎಲೇ ರಂಭಾ!

ಹಿ : ಆಹಾ………

ಕ: ನೀನು ಬರ್ತಿ ಏನೆ ಹೊರಗೆ? ನಾನು ಊರಾಗ ಇದ್ದರೆ ನೀನು ಊರಾಗ; ನಾನು ಮನಿಯಾಗ ಇದ್ದರೆ ನೀನು ಮನಿಯಾಗ; ನಾನು ಎತ್ಲಾಗರ ಮನಿ ಬಿಟ್ಟು ಹೋದರೆ ಒಂದು ತುಡುಗ ನಾಯಿ ತಿರುಗಿದ್ಹಂಗ ಓಣಿ ಓಣಿ ತಿರುಗುತಿಯೇನೇ ರಂಡೇ!

ಹಿ : ಆಹಾ…….

ಕ : ಆ ಹೇಳು ಅದು ಏನೇನು ಸಾಮಾನು?

ಹಿ : ಶ್ಯಾವಿಗೆ, ಬಳ್ಳುಳ್ಳಿ, ಕೊಬ್ರಿ, ಅಜವಾನ, ಉತ್ತತ್ತಿ

ಹಿ : ಉಪ್ಪಿಟ್ಟು ಚಾ.

ಕ : ಅದೆಲ್ಲಾ ಒಂದು ಕಾಗದಾಗ ಬರಕೊಂಡು, ಜೇಬಿನಾಗ ಇಟಕೊಂಡ ಇದ್ದಿರೇನ್ರಿ ಶೆಟ್ರಾ………..

|| ಪದ ||

ಇದ್ದಿರೇನ್ರಿ ಶೆಟ್ರಾ…………ರಾಮ ಹರೇ ರಾಮಾ
ಬಾರೋ ನೀಲಕುಮಾರ ನನ್ನ ಗೆಳೆಯಾ……..ರಾಮ ಹರೇ ರಾಮಾ
ಕಾಗದಾನ ಕೊಟ್ಟ ಗೆಳೆಯನ ಕೈಲೀ……..ಹರೆ ರಾಮಾ ಹರೆ ರಾಮಾ
ಕಾಗದಾ ತಗದು ನೋಡಿ ನನ್ನ ಮಡದಿ ಹಡದಾಳ….ಹರೆ ರಾಮಾ
ಶೆಟ್ರು ಮಡದಿ ಕರದಾರಾ….ಶೆಟ್ರು ಮಡದಿ ನೋಡ್ಯಾಳಾ…… ಹರೆ ರಾಮಾ
ಅಣ್ಣ ನೀಲಕುಮಾರಾ……..ಹರೇ ರಾಮ ಹರೇ

ಕ : ನೀಲಕುಮಾರ. ತನ್ನ ಗಂಡನ ಗೆಳೆಯ ಅಂತ್ಹೇಳಿ ಶೆಟ್ರ ಹೆಣತಿ, ಕಾರುಕುಟ್ಟಿ, ಹದ ಮಾಡಿ, ಶ್ಯಾವಗಿ ಸಕ್ಕರಿ ಎಲಿ ಬೇಕಾದಂಥ ವಸ್ತು ಬಿದರ ಬುಟ್ಯಾಗ ತುಂಬಿ ತೊಗೊಂಡು ಹೋಗು ಅಣ್ಣ ಅಂತ ಎಲ್ಲಾನೂ ಕೊಟ್ಲು.

ಹಿ : ಹೌದು

ಕ : ತೊಗೊಂಡು ಹೋಗಿ ನೀಲಕುಮಾರ ಅಂಬಾನ ಗುಡಿಮೂಲ್ಯಾಗ ಇಟ್ಟು-

ಹಿ : ಆಹಾ

ಕ : ಮಡದಿಗೆ ನೀರೆರದು-

ಹಿ : ಎರದು,

ಕ : ಮಗನಿಗೆ ನೀರೆರದು, ಮಡದಿಗೆ ಮೈತೊಳೆದು ರಾಜಕುಮಾರ ರಂಭಾವತಿ ಮನಿಗೆ ಹೋಗ್ಬೇಕಾದ್ರೆ-ಶಿವದಾರ ತಗದು ಬೆಳ್ಳಿ ಗೂಟಕ್ಕೆ ಸಿಗೆ ಹಾಕಿದ್ಲು ಆಕಿ!

ತಾಯಿ, ಎದ್ಲು ಕುಂತ್ಲು ಶಿವಲೋಚನಮ್ಮ ತಾಯಿ-ಗುಡಿಯಾಗ ಗಮಾಡಸ್ತಾ ಐತಿ, ಬಾಣಂತಿಕಾರ! ಮಹರಾಯರು ನನಗೆ ಸಹಾಯಮಾಡಿ ಬಾಣಂತಿ ಊಟ ಇಟ್ಟು ಹೋಗ್ಯಾರೆ! ತಾಯಿ ಕೂಸನ್ನ ಎತ್ತಿಕೊಂಡು ಮಲಿ ಕುಡುಸ್ತಾ………..

|| ಪದ ||

ಜೋ ಜೋ ಜೋಯನ್ನ ಬಾಲಾ
ಸುಮ್ಮನ ಮಲಗೈ ದೇವಕೀ ಬಾಲಾ
ಜೋ ಜೋ ಜೋಯನ್ನ ಬಾಲಾ
ಗಿಂಡೀಲೆ ನೊರೆ ಹಾಲ ಹಿಂಡಿ ತಂದೇವೋ ಬಾಲಾ
ಸುಮ್ಮನೆ ಕುಡುದು ಮಲಗೋ ಬಾಲಾ ಜೋ ಜೋ || ||

ಯನ್ನ ಬಾಲಾ ಸುಮ್ಮನೆ ಮಲಗೈ ದೇವಕೀ ಬಾಲಾ
ನನ್ನಯ ಉಡಿಯಲ್ಲಿ ಚಂದಾಗಿ ಆಡುವ
ನನ್ನ ಗೋವಿಂದ ಮಲಗಯ್ಯ ಬಾಲಾ
ಜೋ ಜೋ ಜೋಯನ್ನ ಬಾಲಾ

ಕ : ಹಾಡು ಹೇಳ್ಕೊಂತ ಬಾಣಂತಿ ಊಟ ಮಾಡೋದ್ಕೂ ಆಕಿ ರಂಭಾವತಿ ಶಿವದಾರ ಕೊಳ್ಳಾಗ ಹಾಕೊಳ್ಳದಕ್ಕೂ ಸರಿಹೋತು.

ಹಿ : ಕೂಸು ಒಂದು ಕಡಿಗೆ ಆಕಿ ಒಂದ್ಕಡಿಗೆ ಬಿದ್ರು!

ಕ : ಮುಂಜಾನೆ ನೀಲಕುಮಾರ ಬಂದು ನೋಡ್ತಾನೆ-ಮಗ ಮಲ್ಕೊಂಡು ಐತಿ! ಐದು ದಿವಸದ ಈರ್ಲ, ಒಂಬತ್ತು ದಿವಸದ ಉಡಿ ಸಾಗಿಸಿ, ಹನ್ನೊಂದು ದಿನಕ್ಕೆ ತೊಟ್ಲಕಟ್ಟಿ ತೊಟ್ಲಕ್ಕ ಹಾಕಬೇಕು ಅಂದು ತೊಟ್ಲ ತಂದು ಕಟ್ಯಾನ- ನೀಲಕುಮಾರ.

ಹಿ : ಆಹಾ.

ಕ : ಆತ ಬಂದು ನೋಡಿ ಅಂತಾನ-ತೊಟ್ಲದಲ್ಲಿ ಮಗನಿಗೆ ಹಾಕಿ ಮಲಿಗ್ಯಾಳ ಇಕಿ; ಯಾರದಳೋ ಏನೋ! ನನ್ನ ಉತ್ತರಕ್ಕಂತೂ ಹುಟ್ಟಿದ ಮಗ ಇದು!

|| ಪದ ||

ಜೋ ಜೋ ಜೋಯನ್ನ ಬಾಳಾ
ಸುಮ್ಮನ ಮಲಗೈ ದೇವಕಿ ಬಾಳಾ
ಜೋ ಜೋ ಜೋ ಜೋ ಜೋಯನ್ನ ಬಾಳಾ
ನನ್ನಯ ಉಡಿಯಲ್ಲಿ ಚಂದಾಗಿ ಆಡೋ
ಕಂದ ಗೋವಿಂದ ಮಲಗೋ ಜೋ ಜೋ
ಯಶೋಧೆಯವರಿಗೆ ಬಂಧನ ಬಿಡಿಸಿದೆ
ಚಂದ ಗೋವಿಂದ ಆಡು ಬಾ ಜೋ ಜೋ ಜೋ ಜೋ
ಕಂದ ಗೋವಿಂದ ಮಲಗೋ ಜೋ ಜೋ
ಗಿಂಡೀಲೆ ನೊರೆಹಾಲ ಹಿಂಡಿ ತಂದೇವೊ
ಸುಮ್ಮನೆ ಕುಡಿದು ಮಲಗೋ ದೇವಕೀ ಬಾಳಾ
ಜೋ ಜೋ ಜೋಯನ್ನ ಬಾಳಾ

ಕ : ರಾಜಕುಮಾರ ಅಂತಾನೆ-ನಾನು ನೀಲಕುಮಾರ

ಹಿ : ಆ……….

ಕ : ನನ್ನ ಉತ್ತರಕ್ಕೆ ಹುಟ್ಟಿದ ಮಗ-ಕುಶಲಕುಮಾರ-ಅಂತ ಹೆಸರಿಟ್ಟ. ತೊಟ್ಲ ತೂಗಿ ಹೊರಗ ಹೋಗಾದಕೂ, ರಂಭಾವತಿ ಜಳಕಮಾಡಾಕ ಶಿವದಾರ

ಹಿ : ತಗದ್ಲು !

ಕ : ರಾಜದೂರ ಹೋಗಿದ್ದ ; ತಾಯಿ ಎದ್ಲು !
ಯವ್ವಾ ತೊಟ್ಲ ತೂಗತಾರ! ಯಾರು ಹೆಸರಿಟ್ಟಿದ್ದಾರು!

ಹಿ : ಆಹಾ!

ಕ : ಯಾರು ಬಂದಿದ್ದಾರು? ನನಗೆ ಮುಟ್ಟಿದಂಥ ಮಾರಾಯನೇ ಬಂದು ಹೆಸರಿಟ್ಟು ಹೋಗ್ಯಾನೆ!

ಹಿ : ಆಹಾ!

ಕ : ಏನು ಹೆಸರಿಟ್ರೋ ಏನು!ನಾನು ತೊಟ್ಲಾ ತೂಗಿ ಬಾಣತಿ ಹೆಸರ ಇಡ್ಬೇಕು.

|| ಪದ ||

ತೂಗಿರಿ ರಂಗಾನ ತೂಗಿರಿ ಕೃಷ್ಣಾನ ತೂಗಿರಿ ಅತುಲ ರಂಗಾನ
ತೂಗಿರಿ ರಂಗಾನ ತೂಗೀರಿ ಕೃಷ್ಣಾನ ತೂಗಿರಿ ಅತುಲ ರಂಗಾನ
ತೂಗಿರಿ ವರಗಿರಿ ವೆಂಕಟ ತಿಮ್ಮಪ್ಪಾನ ತೂಗೀರಿ ಕಾವೇರಿ ರಂಗಾನ
ತೂಗಿರಿ ರಂಗಾನ ತೂಗೀರಿ ಕೃಷ್ಣಾನ ತೂಗಿರಿ ಅತುಲ ರಂಗಾನ
ಆಲದ ಎಲಿಮ್ಯಾಲೆ ಮಲಗೀದ ಮಗನಾ ಬಂಧು ಬಳಗ ತೂಗೀರಿ
ತೂಗೀರಿ ರಂಗಾನ ತೂಗೀರಿ ಕೃಷ್ಣಾನ ತೂಗೀರಿ ರಂಗಾನ
ಇಂದ್ರಗನ್ನಿಕೆಯರು ಮಂದಹಾಸದೆ ದೇವೇಂದ್ರನ ತೊಟ್ಲ ತೂಗೀರೆ
ತೂಗೀರಿ ರಂಗಾನ ತೂಗೀರಿ ಕೃಷ್ಣಾನ ತೂಗೀರಿ ಅತುಲ ರಂಗಾನ
ಪುರಂದರ ವಿಠಲ ಬಾಲ ಮಲಿಗ್ಯಾನೆ ವೈಕುಂಠ ವಾಸಾನ ತೂಗೀರೆ,

ಕ : ಆಯಮ್ಮನ ಬಾಯಿಗೆ ಅಂಬಾದೇವಿ ಏನು ವಚನ ಕೊಟ್ಲು? ಕುಶಲಕುಮಾರ ಅಂತ ಹೆಸರಿಟ್ಲು !

ಹಿ : ಹೌದಾ?

ಕ : ಅದೇ ಹೆಸರು, ರಾಜ ಏನು ಹೆಸರ ಇಟ್ಟಿದ್ದೇನೋ-

ಹಿ : ಅದೇ ನಾಮ! ಇಬ್ರ ನಾಮಕರಣ ಒಂದೇ ಆತೂ.

ಕ : ಹಿಂಗೇ ದಿನ ಸಾಗಿದ್ವು! ಯಾವಾಗ ಹೊತ್ಗೊಂಡು ಬಿದ್ಲು, ಮಗ ಸುಮ್ಮನೆ ಮಲಗತಿತ್ತು; ಅದ್ದು ಕುಂತಾಗ ಮಗನಿಗೆ ಮಲಿ ಕೊಡಾದು; ಯಾವಾಗ ಹೊತ್ತುಕೊಂಬಿದ್ಲು, ಸುಮ್ಮನೆ ಮಲಗಿ ಬಿಡಾದು.

ಹಿ : ಆಹಾ.

ಕ : ಎದ್ದು ಕುಂತಾಗ ಮಲಿ ಕೊಡಾದು, ಬಿದ್ದಾಗ ಮಲಗೋದು, ಆರು ತಿಂಗಳು ಒಂದು ವರ್ಷ ಅಂಬಾನ ಗುಡಿಯಾಗ ಕೂಸು ಬೆಳೀತೈತಿ; ತಾಯಿಗೆ ಗುಡಿವಾಸ!

ಹಿ : ಹೌದು!

ಕ : ನೀಲಕುಮಾರ ಬರ್ತಾನ ಹೋಗ್ತಾನ, ನೋಡ್ತಾನೆ ಹೋಗ್ತಾನೆ! ಎರಡು ವರ್ಷದ ಮಗ ಓಡಾಡ್ತೈತಿ, ಗುಡಿಯಾಗ- ಅಂಬಾನ ಗುಡಿಯಾಗ!

ಹಿ : ಆ….
ಕ : ಮೂರು ವರ್ಷಕ್ಕೆ ತಾಯಿ ಎದ್ದು ಕುಂತಾಗ ಯವ್ವಾ ಯವ್ವಾ ಅಂತ ನಿಂತು ಅರಸತೈತಿ!

ಹಿ : ನಾಲ್ಕು ವರ್ಷಕ್ಕೆ ಗುಡಿಹೊರಗ ಬಂದು, ಅಂಗಳದಾಗ ಆಡಿ, ತಾಯಿ ಹತ್ರ ಹೋಗಿ ಮಲ್ಕೊಂತೈತಿ;

ಕ : ಐದು ವರ್ಷಕ್ಕೆ ಬುದ್ಧಿ ಜ್ಞಾನ ತಿಳಿತಾ, ತಿಳಿತಾ ಪ್ರಾಯಕ್ಕೆ ಬರತೈತೀ, ಪ್ರಯಕ್ಕೆ ತಕ್ಕ ಬುದ್ಧಿ ಜ್ಞಾನ!

ಹಿ : ಎಲ್ಲಾ ಜ್ಞಾನ ತಿಳಿತೈತಿ!

ಕ : ಹೊರಗ ಬಂದು ಕಲ್ಲಿನ ಆಟ ಆಡತೈತಿ!

ಹಿ : ರಾಜಕ್ಷತ್ರಿ!

ಕ : ದಾಂಡಿಗ ಇದ್ದಂಗ ಐತಿ ಹುಡುಗ, ಕ್ಷತ್ರಿಕುಮಾರ! ಒಂದಿನ ನೀಲಕುಮಾರ ರಾಜಡ್ರಸ್ ಹಾಕೊಂಡು ಒಂದು ಗುಡಿ ಹೊರಗೆ ಕುದ್ರಿ ನಿಂದ್ರಿಸಿ ನೋಡ್ತಾನೆ-

ಹಿ : ಹುಡುಗ!

ಕ : ಅಲೇಲೆಲೆ ಹುಡುಗ ಹೊರಗ ಬಂದೈತಲ್ಲೊ ಆಡಾಕ!

ಹಿ : ಓಹೋ ಕಲ್ಲಿನ ಆಟ:

ಕ : ಮಗನೇ ಅಂತ ಹೇಳಿ ಕುದ್ರಿಮ್ಯಾಲೆ ಕುಂತುಕೊಂಡು ಸಮೀಪಕ್ಕೆ ಬರಬೇಕಾದ್ರೆ ಹುಡುಗ ಗರಕ್ಕನೆ ತಿರುಗಿ ನೋಡಿ ಬಿಟ್ಟ!

ಹಿ : ಆಹಾ!

ಕ : ಯಾರು ಇವರು? ನನಗೆ ಮಗ ಅನ್ನೋರು ಯಾರಿದ್ದಿಲ್ಲ! ಇವತ್ತು ಈತ ರಾಜಡ್ರಸ್ ಹಾಕ್ಕೊಂಡು ಬಂದು ಮಗ ಅಂತಾನೇ!

ಹಿ : ಆಹಾ!

ಕ : ಲೇ ನನಗೆ ಮಗ ಅಂತ ಅನ್ನಿ ಲಿಕ್ಕೆ.

|| ಪದ ||

ನೀನ್ಯಾರೋ ಲೌಡಿ ಮಗನೇ…….ಹರಹರ ಮಹಾದೇವ
ಮಗಾಂತೀಯೇನೋ…………ಹರಹರಯನ್ನ ಮಹಾದೇವ
ಬೇಕೇನೋ ಕಲ್ಲಿನೇಟು……….ಹರಹರ ಮಾಹಾದೇವ
ಕೈಯಾಗ ಕಲ್ಲ ಹಿಡುದಾನ……….ಹರಯನ್ನ ಮಹಾದೇವ.

ಯಾರು ಅದೀ ನೀನು-ಮಗನೇ ಅಂತ ಅನ್ನಲ್ಲಿಕ್ಕೆ? ನನ್ನ ತಾಯಿ ಗಂಡನೇ? ತಾಯಿ ಮಿಂಡನೇ ನೀನು? ಮಗನೆ ಅಂತಯಾರಿಗೆ ಅಂದ್ಯೋ? ಕಲ್ಲಿಲೆ ಒಡದ್ರೆ ನಿನ್ನ ಕುದ್ರಿ ಒಂದು ಕಡಿಗೆ ಆದೀತು, ನೀನು ಒಂದು ಕಡಿಗೆ ಆದೀ ಲೌಡೀ ಮಗನೇ!