ಹಿ : ಕಟ್ಟಿ-

ಕ : ಅಂಬಾರುಣ್ಣಿ ಕೋಣಿ ಒಳಗೆ ಮೂರು ತಾಸು ಹೊತ್ತು ಇವನಿಗೆ ಹಾಕಬೇಕು-

ಹಿ : ಆಹಾ!

ಕ : ಆ ಮೇಲೆ, ಬಾಜಾರದಾಗ ಬಂದು ಅರಮನಿ ಮುಂದೆ ಮೂರು ಒಲಿಗುಂಡು ಹೂಡಿ, ಕೊಪ್ಪರಿಕೆ ತುಂಬಾ ಒಳ್ಳೆಣ್ಣೆ ಸುರುವಿ, ಇಲಿಗೆ ಉರಿ ಹಚ್ಚಿರಿ. ಸಳಮಳ ಕುದಿಯಂಥಾ ಎಣ್ಣಿಯೊಳಗ ಇವನಿಗೆ ಜೀವರಿಸೀಲೆ ತಂದು ಬೇಯಿಸಿ, ಮೂವರೂ ಮೂರು ಹೋಳು ಮಾಡಿ ತಿಂದುಬಿಡ್ರೀ.

ಹಿ : ಅಂತ ಕಾಗದದಾಗ ಬರದ್ಲು ವಿಘ್ನಾವತಿ!

ಕ : ಆ ಕಾಗದಾ ಮಡಚಿ ಕೋಟಿಯೊಳಗೆ ಸೇರಿಸಿ ಮೇಲೆ ಸೀಲು ಮಾಡಿ ವಿಘ್ನಾವತೀ ಮಗಚಂದ್ರೋಜಿ ಕುಮಾರ ತರತಕ್ಕಂಥಾ ಪತ್ರ ಅಂತ ಕಾಣಿಸಿ (ರಾಗವಾಗಿ) ತಗೊಳ್ರೀ….ಮಾರಾಜಾ….ಊರಿಗೆ ಹೋಗಿ ಕೊಟ್ಟು ಬರ್ಲಿ ಈ ಪತ್ರ.

ಹಿ : (ರಾಗವಾಗಿ) ಹೌದೂ.

ಕ : ಚಂದ್ರೋಜಿ ಕುಮಾರ ಲಕೋಟಿ ಮ್ಯಾಗ ಕಾಣಿಸಿದ ಮಾತು ನೋಡ್ತಾನೆ…. ವಿಘ್ನಾವತಿ ಮಗ ಚಂದ್ರೋಜಿಕುಮಾರ!

ಹಿ : ಆಹಾ!

ಕ : ಒಳ್ಳೇದು ಆಯ್ತು; ಅಮ್ಮಾ ನಾನು ಹೋಗಿ ಬರ್ತೀನಿ-ಕಾಗದಾ ಜೇಬಿನಾಗ ಇಟಗೊಂಡ. ಮುತ್ತುಶೆಟ್ಟಿ ಮನಿಗೆ ಹೋದ್ರೆ ನನಗೆ ದಾರಿ ಕೊಡೋದಿಲ್ಲ- ಹೋಗಾಕ; ಇತ್ಲಾಗ ತಾಯ್ನೋರ ಹತ್ರ ಹೋದ್ರೆ ಅವರೂ ನನಗೆ ದಾರಿ ಬಿಡೋದಿಲ್ಲ.

ಹಿ : ಹೌದು!

ಕ :‘ ಅಮರಾವತಿ ಪಟ್ಣಕ್ಕ ಹೋಗಿ ಕಾಗದ ಕೊಟ್ಟು ಬಂದ ಬಳಿಕ ತಾಯಿನೋರ ಹತ್ರ ಹೋಗಬೇಕು ಅಂದ ಮಗ.

|| ಪದ ||

ವನವಾಸಾ ನಡುದಾನ ಬಾಳಾ….ಹರಹರ ಮಾದೇವಾ
ಅಮರಾವತಿ ಪಟ್ಣಕ್ಕ ನಡುದಾನ….ಶಿವಹರ ಮಾದೇವಾ
ಒಂದು ಗಾವುದ ಬರಬೇಕಾದ್ರ….ಓಂ ನಮಃ ಶೀವಾಯಾ
ಅಲ್ಲಿ ಬಂದು ವಸ್ತಿಯಾಗ್ಯಾನ ಆಗ….ಹರಯನ್ನ ಮಾದೇವಾ
ಮತ್ತ ಮುಂಜಾನೆ ಎದ್ದಾನ ಚಂದ್ರೋಜಿ….ಶಿವಯನ್ನ ಮಾದೇವಾ
ಅಲ್ಲಿ ಅಮರಾವತಿ ಪಟ್ಣಾ ಊರೇ….ಶಿವಹರ ಮಾದೇವಾ
ಅದೇ ಊರೇ ಕಾಣತೈತಯ್ಯಾ….ಶಿವಯನ್ನ ಮಾದೇವಾ

ಕ : ಮತ್ತೊಂದು ಗಾವುದ ಬಂದ; ಹೊತ್ತು ಮುಳುಗಿತು. ವಸ್ತಿಮಾಡಿ, ಹಣ್ಣೂ ಹಂಪಲು ಊಟಾ ಮಾಡಿ-

ಹಿ : ಮುಂಜಾಲೆ ಎದ್ದು ಮತ್ತೆ ನಡದ-ಮುಂದಕ್ಕ,

ಕ : ಎರಡು ಗಾವುದ ಬರಬೇಕಾದ್ರ ಅಮರಾವತಿ ಪಟ್ಣ ಹತ್ರ ಆತು.

ಹಿ : ಓಹೋ.

ಕ : ಇದೇ ಆಗೈತೆ-ಚಿತ್ರೋಸೇನನ ಬೀಗರೂರು.

ಹಿ : ಹೌದು, ಅಮರಾವತಿ ಪಟ್ಟಣ ಅಂತ ಬೋರ್ಡು ಐತಿ!

ಕ : ಊರ ಮುಂದೇನೋ ಬೋರ್ಡು ಕಾಣತೈತಿ; ಆದರ ಊರಾಗ ಮಂದಿ, ಮಕ್ಕಳು ಸುಳುವಿಲ್ಲಲ್ಲ!

ಹಿ : ಯಾರೂ ಇದ್ಧಾಂಗ ಇಲ್ಲ ಊರಾಗ!

ಕ : ಬಾಚಾರದಾಗ ಏನಾರ ಇರಬಹುದು ಏನೋ! ಅಂತ್ಹೇಳಿ ಬಂದು ನೋಡ್ತಾನೆ! ಚಿನಿವಾಲರ ಅಂಗಡಿ, ಕಿರಾಣಿ ಅಂಗಡಿ, ಜವಳಿ ಅಂಗಡಿ, ಬ್ಯಾರೆ ಬ್ಯಾರೆ ವ್ಯಾಪಾರದ ಅಂಗಡಿ-ಎಲ್ಲಾ ಮುಚ್ಚಿದ ಅಂಗಡಿ ಮುಚ್ಚಿದ್ಹಾಂಗs ಅದಾವು!

ಹಿ : ಹೌದು!

ಕ : ಎಲ್ಲಾ ಮಂದಿಗೆಲ್ಲಾ ನುಂಗಿ ಹಾಳುಗೆಡಿವ್ಯಾವೆ-ವಿಘ್ನಾವತೀ ತಾಯಿತಂದೆ, ಅಘ್ನಾವತಿ ಅಕ್ಕ!

ಹಿ : ಬ್ರಹ್ಮ ರಾಕ್ಷಸಗಳು!

ಕ : ಮೂರೂ ಕುಂತಾವ-ಅರಮನಿ ಮುಂದೆ! ಒಂಬತ್ತು ಗಂಟೆ ಟೈಮು; ಮಗ ಬಂದು ಬಜಾರದಾಗ ನಿಂತಾಗ ನೋಡಿದ್ವು ಮೂರೂ ರಾಕ್ಷಸಗಳು!

ಹಿ : ಓಹೋ! ಎಲೋ

ಕ : ಯಾರೊ ನರಮಾನವ ಬಂದ ನಮ್ಮ ಊರ ಬಜಾರದಲ್ಲಿ? ಮಂದೀ ಮಕ್ಕಳ ಮಾಂಸ ಇಲ್ಲದೇ ಹನ್ನೆರಡು ವರ್ಷ ಆಯ್ತು!

ಹಿ : ಆಹಾ!

ಕ : ಹುಡುಗನೇ ಬಾ ಇಲ್ಲಿ, ನಮ್ಮ ಬಾಯೊಳಗ ಬೀಳು – ಅಂತ್ಹೇಳಿ ತಕ್ಕೊಂಡು ಬಂದ್ವು-

ಹಿ : ಮೂರೂ!

ಕ : ಇವು ಯಾವು ರಾಕ್ಷಸಗಳು? ನನ್ನ ತಿನ್ನಾಕ ಬರ್ತಾವೆ? ನಾನು ವಿಘ್ನಾವತಿ ಮಗ ಚಂದ್ರೋಜಿಕುಮಾರ ಅಂತ ಹೇಳಬೇಕು. ಇದಕ್ಕೇನಾರ ಸಮಾಧಾನ ಆದ್ವು ಅಂದ್ರ ಇವೇ ರಾಜನ ಬೀಗ್ರು! ಸಮಾಧಾನ ಆಗಲಿಲ್ಲ, ಸೇದಿ ಬಾಣ ಬಿಡಬೇಕು- ಅಂದ ಮಗ-

ಹಿ : ಚಂದ್ರೋಜಿ!

ಕ : ಹಾ ರಾಕ್ಷಸಿಗಳೇ ನನಗೆ ಯಾರಂತ ತಿಳಕೊಂಡೀರಿ?

ಹಿ : ಆ….

ಕ : ವಿಘ್ನಾವತಿ ಮಗ ಚಂದ್ರೋಜಿಕುಮಾರ ಬಂದೀನಿ -ಅಂತ ಕೂಗಿ ಹೇಳಿದಾಗ ಬ್ರಹ್ಮ ರಾಕ್ಷಸಗಳು ಗಪ್ಪನs ನಿಂತುಬಿಟ್ಟು!- ಯಾರಪ್ಪ ನೀನು?

ಹಿ : ವಿಘ್ನಾವತಿ ಮಗ ರಾಜಕುಮಾರ!

ಕ : ಆಹಾ! ನಮ್ಮ ಮಗಳು ವಿಘ್ನಾವತೀ ಮಗ! (ರಾಗವಾಗಿ) ಮೊಮ್ಮಗ ಬಂದಾನೈ….

|| ಪದ ||

ಭಲರೇ ಮೊಮ್ಮಗನೇ ಭಲೇರೆ ಮೊಮ್ಮಗನೇ
ಕುಣಕಂತ ಬರತಾವೆ ರಾಕ್ಷಸಿಗಳು….ಹರಯನ್ನ ಮಾದೇವಾ
ಹ್ಯಾಗದಿಯೋ ಮೊಮ್ಮಗನೇ….ಶಿವಯನ್ನ ಮಾದೇವಾ
ನಿನ್ನ ಮುಖ ನೋಡಿದ್ರೆ ನಮಗೆ….ಶಿವಹರ ಮಾದೇವಾ
ಭಾಳ ಆನಂದಾಯಿತಪ್ಪಾ….ಶಿವಯನ್ನ ಮಾದೇವಾ

ಕ : ಮೊಮ್ಮಗಾ ಮೊಮ್ಮಗಾ ಅಂತ ಕುಣಕೊಂತಾ ಕುಣಕೊಂತಾ ಆನಂದವಾಗಿ ಬಂದವು-ವಿಘ್ನಾವತಿ ತಾಯಿ ತಂದಿ!

ಹಿ : ತಂಗೀ ಮಗಾ; ನನ ತಂಗೀ ಮಗಾಂತ ಕುಣಕೊಂತಾ ಕುಣಕೊಂತಾ ಬಂದ್ಲು ವಿಘ್ನಾವತಿ ಅಕ್ಕ.

ಕ : ಮೊಮ್ಮಗನೇ ಮೊಮ್ಮಗನೇ ಚಂದ್ರೋಜಿ ಬಾ ಅಂತ್ಹೇಳಿ ಅನಾಮತ ಎತ್ತಿಕೊಂಡು ಥೈ ಥೈ ಕುಣಿತಾವು-ಹೆಣಾ ತಿನ್ನೋ ರಾಕ್ಷಸಗಳು!

ಹಿ : ಮಗ ಮನಸಿನಾಗ ಏನಂದ್ಕೊಂತಾನಾ?

ಕ : ಅಬಾಬಾ! ಇವು ಇಷ್ಟು ಪ್ರೀತಿ ಮಾಡ್ತಾವಲ್ಲ-ಹೌದು ವಿಘ್ನಾವತಿ ಇವರ ಮಗಳು!

ಹಿ : ಓಹೋ ಒಳ್ಳೇದು.

ಕ : ಹ್ಯಾಗ ಅದಾಳಪ್ಪ ನಿಮ್ಮ ತಾಯಿ?

ಹಿ : ಆನಂದವಾಗಿ ಇದಾಳಪ್ಪ!

ಕ : ಕಮಲಾವತಿ ಕೇಳ್ತಾಳೆ-ಅಪ್ಪಾ, ನಿಮ್ಮ ತಾಯಿ ಬೇಸಿದಾಳೇನೋ?

ಹಿ : ಚನ್ನಾಗಿ ಅದಾಳೆ.

ಕ : ಅಘ್ನಾವತಿ ಅಂತಾಳೆ – ಮಗನೇ ನಮ್ಮ ತಂಗಿ ಆಕಿ; ನಾನು ನಿಮ್ಮ ದೊಡ್ಡಮ್ಮ

ಹಿ : ಓಹೋ ಚಲೋ ದೊಡ್ಡಮ್ಮ, ಹೈಕ್ಲಾಸ ದೊಡ್ಡಮ್ಮ!

ಕ : (ರಾಗವಾಗಿ) ಆss…ಮೊಮ್ಮಗನ್ನ ಮನಿ ಮುಂದೆ ಕುಂದ್ರಿಸ್ಯಾವೆ

ಹಿ : ಹೌದು.

ಕ : ಮಗಾ ಅಂದ್ಕೊಂತಾ ಅದಾನೆ-ಬಾಯಿ ಮಾತಿಲ್ಲೇ ನಾನು ಅಂದಿದ್ದಕ್ಕೆ ಎಷ್ಟು ಪ್ರೇಮ ಮಾಡ್ತಾವೆ! ಕಾಗದಾ ಕೊಟ್ರೆ ಎಷ್ಟು ಪ್ರೇಮ ಮಾಡ್ಯಾವು!

ಹಿ : ಹೌದು!

ಕ : ವಿಘ್ನಾವತಿಯ ಮೋಸದ ಕಾಗದ ಬ್ರಹ್ಮರಾಕ್ಷಸನ ಕಯ್ಯಾಗ ಕೊಟ್ಟ.

ಹಿ : ಆಹಾ!

ಕ : ರಾಕ್ಷಸ ಅದನ್ನ ಓದುತೈತಿ ನೋಡ್ರಿ – ಅಮರಾವತಿ ಪಟ್ಣದಲ್ಲಿ ಬ್ರಹ್ಮಸೇಕರ ತಂದಿ; ತಾಯಿ ಕಮಲಾವತಿ; ಅಕ್ಕ ಅಘ್ನಾವತಿ ನಿಮ್ಮ ಮಗಳಾದ ವಿಘ್ನಾವತಿ ನಾನು, ರಾತ್ರಿ ಬ್ಯಾಟಿ ಆಡೋಕ ಬಂದು ಚಿತ್ರೋಸೇನ ರಾಜಗ ನಾನು ಮಡದಿಯಾಗಿ ರಾಣಿ ಪಟ್ಟ ತೊಗೊಂಡೀನಿ – ಚಿತ್ರಾವತಿ ಪಟ್ಟಣದಾಗ!

ಹಿ : ಹೌದು!

ಕ : ನನಿಗೆ ಏಳು ಮಂದಿ ಸವತೇರು, ರಾಜ ಲಗ್ನಾದಂತೋರು. ಅವರಿಗೆ ಸಾಯಿಕೊಲ್ಲ ಬೇಕಂತ್ಹೇಳಿ ನಾನು ಪ್ರಯತ್ನಮಾಡಿ ಮಂತ್ರೀ ಕಯ್ಯಾಗ ಕೊಟ್ಟು ಕಳಿಸಿದಾಗ ಅವನು ತಲೀ ಒಡದು ಬರಲಿಲ್ಲ; ಬರೀ ಕಣ್ಣುಗಳ ತಂದು ಕೊಟ್ಟ-ಅವರಿಗೆ ಪ್ರಾಣ ದಾನ ಮಾಡಿ!

ಹಿ : ಹೌದು!

ಕ : ಸವತೇರ ಹೊಟ್ಯಾಗ ಹುಟ್ಟಿದ ಇವನು ವೈರಿ! ರಾಕ್ಷಸರಿಗೆಲ್ಲಾ ಗಂಡನಾಗಿ ಹುಟ್ಟಿದ್ದಕ್ಕೆ ಇವನಿಗೆ ಕೊಲ್ಲಬೇಕು ಅಂತ ನಾನು ಪ್ರಯತ್ನ ಮಾಡಿ ಶಿವಜಾತ ಪಾರಿಜಾತ ಹೂವಿಗೆ ಕಳಿಸಿದೆ; ತಂದೇ ಇವನು ಹೂವ ತಂದಾನೆ -ಗೆದ್ದು! ಈಗ ನಿಮ್ಮ ಹತ್ರ ಕೊಟ್ಟು ಕಳಿಸೀನಿ; ಒಂದು ಉಪಾಯದಿಂದ ಇವನಿಗೆ ಅಂಬಾರುಣ್ಣಿ ಕೋಣ್ಯಾಗ ಹಾಕಿ, ಎಣ್ಣಿ ಕೊಪ್ಪರಿಕೆ ತುಂಬಿ, ಒಲಿಮ್ಯಾಲಿಟ್ಟು ಒಲಿಗೆ ಉರಿ ಹಚ್ಚಿರಿ;

ಹಿ : ಹಚ್ಚಿರಿ.

ಕ : ತಳಮಳ ಕುದಿಯಂತಾ ಎಣ್ಣಿಗೆ ಇವನ್ನ ತಂದು ಹಾಕ್ರಿ.

ಹಿ : ಹಾಕ್ರಿ.

ಕ : ಬೇಯಿಸಿ ಮೂವರೂ ಮೂರು ಹೋಳು ಮಾಡಿ ತಿಂದು ಬಿಡ್ರಿ ; ನನ್ನ ಮೈಮ್ಯಾಲಿನ ಪೀಡಿ ಹೋಗತೈತಿ.

ಹಿ : ಅಂತಾ ಕಾಗದ ಓದಿಬಿಟ್ಟ ಬ್ರಹ್ಮರಾಕ್ಷಸ-

ಕ : ಆಹಾ! ಎಲೈ, ನನ್ನ ಮಗಳು ವಿಘ್ನಾವತೀ ವೈರೀ….

ಹಿ : ಓಹೋ

ಕ : ಚಂದ್ರೋಜಿ! ನಮ್ಮ ಮಮ್ಮಗನೇನೋ ನೀನು! ಛೀ….

ಹಿ : ವೈರಿ!

ಕ : ವೈರಿ ಬಂದಾನ ಮಡದೀ!

ಹಿ : ಹೌದು!

ಕ : ಇವನು ವೈರಿ, ಮಗಳೇ, ನಮ್ಮ ಮಗಳ ವೈರಿ ಇವನು!

|| ಪದ ||

ಎತ್ತಿ ಹಾಕಿ ಕೆಡಿವ್ಯಾರೈ………ಶಿವಹರ ಮಾದೇವಾ
ಅಂಗಾತ ಕೆಡಿವ್ಯಾನೋ……..ಹರಯನ್ನ ಮಾದೇವಾ
ಕೆಡವಿ ಹಾಕಿ ಬಡಿತಾವಾ……..ಹರಯನ್ನ ಮಾದೇವಾ
ಸಿಕ್ಕ ವೈರಿ ನಮ್ಮ ಕೈಗೆ…….ಹರಯನ್ನ ಮಾದೇವಾ

ಕ : ವೈರಿ ಇವನು ಅಂತ್ಹೇಳಿ ಅಂಗಾತ ಕೆಡವಿ ಮೂರು ಬಡ್ತಾ ಬಡೀತಾವs-

ಹಿ : ಪ್ರಾಣ ಬಿಡುವಲ್ಲ ಮಗ!

ಕ : ಮಗಳೇ ಪ್ರಾಣ ಹೋದ್ರೆ ಮುಡದಾರ ಆಕೈತಿ; ತಿನ್ನಾಕ ಬರೋದಿಲ್ಲ! ಕೋಣಿಗೆ ಹಾಕಿ ಬರೋನು ನಡೀ ಅಂದು ಉಕ್ಕಿನ ಕದಾ ತೆಗದು, ಒಳಗ ಒಯ್ದು ಅಂಗಾತ ಕೆಡವಿ ಹೆಡಮುರಿಗಿ ಕಟ್ಟಿದುವು.

ಹಿ : ಹೌದು!

ಕ : ಮೂರೂ ಉಕ್ಕಿನ ಕದ ಮುಚ್ಚಿ ಬೀಗಹಾಕಿ ತಮ್ಮ ಅರಮನಿ ಮುಂದೆ ಬಂದುವು.

ಹಿ : ಹೌದು!

ಕ : ಮೂರು ಒಲಿಗುಂಡು ಹೂಡಿ ಕೊಪ್ಪರಿಕೆ ಏರ್ಸಿ, ಒಳ್ಳೆಣ್ಣೆ ಹಾಕಿ, ಒಲಿಗೆ ಉರಿ ಹಚ್ಚಿಕೊಂಡು ಪದಾ-ಪದ್ಯ ಹಾಡಿಕೊಂತಾ ಕುಂತಾವು!

ಹಿ : ಮೂರೂ!

ಕ : (ರಾಗವಾಗಿ) ಮಗಾ….ಅಂಬಾರುಣ್ಣಿ ಕೋಣ್ಯಾಗ ಮಲ್ಕೊಂಡಾನೇ

ಹಿ : (ರಾಗವಾಗಿ) ಹೌದೇ….

ಕ : ತಾಯೀ, ತಾಯೀ, ಏಳು ಮಂದಿ ತಾಯಂದ್ರೆ- ಅಂತ ತಾಯ್ನೋರ್ನ ನೆನಸ್ತಾನ!-

ಹಿ : ಆಹಾ!

ಕ : ಮುತ್ತುಸೆಟ್ಟಿ ಸಾವ್ಕಾರಾ ಜಲ್ಮ ಹೋಗಂಥಾ ವ್ಯಾಳ್ಯಾದಲ್ಲಿ ಬಂದು ಜಾಮೀನಾಗಿ ಬಿಡಿಸಿದಿ – ಪುಣ್ಯಾತ್ಮ!

ಹಿ : ಹೌದು,

ಕ : ಸಾಯ್ತೀನಿ ಅಂತ್ಹೇಳಿ ಶೆಟ್ಟಿನ ನೆನಸಿದ.ಎಲ್ಲರನೂ ನೆನಸ್ತಾನೆ; ಆದರೆ ತೋರಂಗಿ ಬಾವಾ ಮಾವಗs ನೆನಸುವಲ್ಲ!

ಹಿ : ಓಹೋ!

ಕ : ತೋರಂಗಿ ಬಾವಾ ಮಲ್ಕೊಂಡ ವ್ಯಾಳ್ಯಾದಲ್ಲಿ ಮಗನ ಪ್ರಾಣ ಹೋಗೋದು ಇನ್ನೊಂದು ಅರ್ಧಗಂಟಿ ಐತಿ!

ಹಿ : ಹೌದು!

ಕ : ತೋರಂಗಿ ಬಾವಾನ ಮಠದಲ್ಲಿರುವಂಥ ನೀಲಾಹೊತ್ತಿಗೆ ನೋಡ್ತಾ ಐತಿ- ಚಂದ್ರೋಜಿಕುಮಾರ ಯರ್ಥಾ ಸಾಯ್ತಾನ! ಈ ಬಾವಾಗ ಎಚ್ಚರ ಆಗವಲ್ಲದು! -ಅಂತ ಬಂದು ಆ ವತ್ತಿಗಿ ಬಾವಾಗೆ ಬಡದು ಬಡದು ಎಬ್ಬಿಸಿತು!

ಹಿ : ತೋರಂಗಿ ಬಾವಾಗ ಎಬ್ಬಿಸಿತು!

ಕ : ಬಾವಾ ಎದ್ದು ಘಾಬರಿಯಾಗಿ ನೋಡಿದ -ಏನು ಶಾರದಾ ನನಗೆ ನೀನು ಇಷ್ಟು ಎಚ್ಚರ ಮಾಡ್ಲಿಕ್ಕೆ ಕಾರಣ ಏನು?

ಹಿ : ಆಹಾ!

ಕ : ಜಲ್ದಿ ವತ್ತಿಗ್ಯಾಗ ನೋಡ್ತಾ ಐದಾನೆ- ಚಂದ್ರೋಜಿಕುಮಾರ, ಕಾಳಾವತಿ ಗಂಡ, ಅಳಿಯ, ಅಮರಾವತಿ ಪಟ್ಣದಲ್ಲಿ ಬ್ರಹ್ಮ ರಾಕ್ಷಸ ಕಮಲಾವತಿ ಹಾಕಿದ ಅಂಬಾರುಣ್ಣಿ ಕ್ವಾಣ್ಯಾಗ ಬಿದ್ದಾನಲ್ಲಾ! ಆ ಶಿವಜಾತ-ಪಾರಿಜಾತ ಹೂವ ತೊಗೊಂಡ್ಹೋಗಿ ಕೊಟ್ಟು ಆ ರಾಕ್ಷಸರ ಬಾಯಿಗೆ ತುತ್ತಾಗತಾನಲ್ಲ! ಮಗಳೇ ಕಾಳಾವತೀ ನಿನ್ನ ಗಂಡ ವ್ಯರ್ಥ ಸಾಯ್ತಾನ.

ಹಿ : ತಂದೇ ಪಾರುಮಾಡು ನನ್ನ ಮುತ್ತೈದಿತನಾನ.

ಕ : ಹೌದಮ್ಮ! ಆದರೆ ನನಗೆ ನೆನಸವಲ್ಲ ಅವನು!

ಹಿ : ಓಹೋ!

ಕ : ಕಾಗದಾ ಬರದ ತೋರಂಗಿಬಾವಾ!

ಹಿ : ಏನಂತ?

ಕ : ಅಂಬಾರುಣ್ಣಿ ಕೋಣ್ಯಾಗಿರುವಂಥ ಚಂದ್ರೋಜಿಕುಮಾರಾ, ನಿಮ್ಮ ಮಾವ ಬರದಂಥ ಪತ್ರ-

ಹಿ : ಪತ್ರ.

ಕ : ಈ ಪತ್ರ ನೋಡಿದ ತಕ್ಷಣವೇ ನನಗೆ ಮೂರೇಟು ಧ್ಯಾನಾ ಮಾಡಿದರೆ ನಿನ್ನ ಹಗ್ಗ ಹೆಡಮುರುಗಿ ಕಟ್ಟಿದ್ದು, ಚೂರು ಚೂರು ಆಗಿಬಿಡ್ತೈತಿ- ಮಂತ್ರ ಶಕ್ತಿಯಿಂದ.

ಹಿ : ಹೌದು.

ಕ : ಮುಚ್ಚಿದಂಥ ಅಂಬಾರುಣ್ಣಿ ಕೋಣೀ ಕದಗಳು, ಬೀಗಗಳು ತನ್ನ ತಾನೇ ಉಚ್ಚಿ ಸಿಡಿತಾವೆ; ಅದೇ ಕೋಣಿ ಬಿಟ್ಟು ಹೊರಗ ಬರಬೇಕಾದ್ರೆ ನೀನು ಬರೀಕೈಲೆ ಬರಬೇಡ. ಅಲ್ಲಿ ಮೂಲ್ಯಾಗೆ ನಾಲ್ಕು ರಾಕ್ಷಸಗಳ ಮರಣದ ವಸ್ತುಗಳಾದಾವೆ.

ಹಿ : ಓಹೋ!

ಕ : ಆ ರಾಕ್ಷಸರ ಮರಣದ ವಸ್ತುಗಳೆಂದರೆ – ಮರಸೋಟ

ಹಿ : ಮರಸೋಟ!

ಕ : ಆ ಮರಸೋಟದಾಗೆ ಬ್ರಹ್ಮರಾಕ್ಷಸನ ಪ್ರಾಣ ಐತಿ; ಕಿನ್ನುರಿ ಬರುಡಿವೊಳಗೆ ಕಮಲಾವತಿ ರಾಕ್ಷಸಿ ಪ್ರಾಣ ಐತಿ;

ಹಿ : ಮರಣೈತಿ!

ಕ : ಅಘ್ನಾವತಿ ರಾಕ್ಷಸಿ ಪ್ರಾಣ ಮಣ್ಣಿನ ಗುಂಡಲದಾಗ ಐತಿ.

ಹಿ : ಮರಣೈತಿ!

ಕ : ಅದೇ ಕೋಣಿಯೊಲಗ ಒಂದು ಉಕ್ಕಿನ ಪಂಜರ ಐತಿ; ಅದರೊಳಗೆ ಒಂದು ಗಿಳಿ ಐತಿ.

ಹಿ : ಹೌದು!

ಕ : ಆ ನಾಲ್ಕೂ ತೊಗೊಂಡು ನೀನು ನನ್ನ ಮಠಕ್ಕ ಬಂದೈ- ಮಗನೇ ನೀನು ಗೆದ್ದೆ; ಇಲ್ಲಾ ಅಂದ್ರೆ ರಾಕ್ಷಸದ ಬಾಯಿಗೆ ತುತ್ತಾಗುತೀದಿ.

ಹಿ : ಹಿಂಗ ಆ ಕಾಗದ ಬರದು-

ಕ : ಆ ಕಾಗದಕ್ಕೆ ಮಂತ್ರ ಹಾಕಿ ತೋರಂಗಿ ಬಾವಾರು ತಮ್ಮ ಮಂತ್ರ ಶಕ್ತಿಯಿಂದ ಮ್ಯಾಲೆ ಅಂತ್ರಕ್ಕೆ ತೂರಿದಾಗ,

ಹಿ : ಹಾ….

ಕ : ಆ ಕಾಗದ ಜೋಳದ ರವದಿ ಬಂದ್ಹಾಂಗ ಬರ್ತೈತಿ ಅಂತರ ಮಾರ್ಗದಲ್ಲಿ – ಅಮರಾವತಿ ಪಟ್ಣಕ್ಕ. ಅಂಬಾರುಣ್ಣಿ ಕೋಣ್ಯಾಗ ಮಲಗಿದಂಥಾ ಚಂದ್ರೋಜಿಕುಮಾರನ ಎದುರಿನ ಮೇಲ್ಭಾಗದಲ್ಲಿರುವಂಥಾ ಕಮಾನ್ ಕಿಟಕಿಯೊಳಗಿಂದ ಬಂದು ಮೇಲೆ ಬಿತ್ತು. ಹೆಡಮುರುಗಿಯೊಳಗಿದ್ದಂಥಾ ಮಗ ಬಲಗಡಿಗೆ ತಿರುಗಿ ಕಾಗದ ಬರಹ ನೋಡಿದ!

ಹಿ : ಓಹೋ!

ಕ : ತೋರಂಗಿ ಬಾವಾಗಳು ಬರದಂಥಾ ಕಾಗದ ಬಂದು ಬಿತ್ತಲ್ಲ – ಇಲ್ಲಿ! ಮಾವಾ ತೋರಂಗಿ ಬಾವಾ, ಮಾವಾ ತೋರಂಗಿ ಬಾವಾ, ಮಾವಾ ತೋರಂಗಿ ಬಾವಾ- ಅಂತ ಮೂರೇಟು ಧ್ಯಾಸ ಮಾಡಿದಾಗ, ನೆನಸಿದಾಗ ಕಟ್ಟಿದಂಥಾ ಹೆಡಮುರುಗಿ ಹಗ್ಗ ಚೂರು ಚೂರು ಆಗಿ ಬಿಡ್ತು!

ಹಿ : ಹೌದು!

ಕ : ಆ ಕೋಣಿಗೆ ಹಾಕಿದಂಥಾ ಬೀಗ ತಂತಾನೇ ಸಿಡಿದು ಕಬ್ಬಿಣದ ಕದ ಉಚ್ಚಿಬಿದ್ದುವು.

ಹಿ : ಆಹಾ!

ಕ : ಕಾಗದಾ ನೋಡ್ತಾ ಇದಾನೆ ಮಗಾ!

ಹಿ : ಕಾಗದಾ ಓದಿದ ಮಗಾ!

ಕ : ಆ ಕೋಣಿಯೊಳಗೆ ಮರಸೋಟ, ಕಿನ್ನರಿ ಬುರುಡಿ, ಮಣ್ಣಿನ ಗುಂಡಾಲು, ಉಕ್ಕಿನ ಪಂಜರ ಅದಾವೆ. ಆ ಪಂಜರದೊಳಗಿರೋ ಗಿಳಿ ಕಿಲಿಬಿಲಿ ಒದ್ದಾಡತೈತಿ!

ಹಿ : ಆಹಾ!

ಕ : ಓಹೋ! ನಮ್ಮ ಮಾವನೋರು ಬರೆದ ಪತ್ರದ ಪ್ರಕಾರವಾಗಿ ರಾಕ್ಷಸಿಗಳ ಮರಣದ ವಸ್ತುಗಳು ಇಲ್ಲೇ ಐದಾವು- ಅಂತ್ಹೇಳಿ ಅವು ನಾಲ್ಕನ್ನೂ ತಗೊಂಡು ಹೊರಗಡಿಗೆ ಬಂದ- ಚಂದ್ರೋಜಿಕುಮಾರ.

ಹಿ : ಆಹಾ!

ಕ : ಅಗಸಿ ಹತ್ರ ಹೋಗಿ ವೃಕ್ಷಾಳಿ ಮರದ ಕೆಳಗೆ ಕುಂತಾಗ, ಮೂರೂ ರಾಕ್ಷಸಗಳು ಎಣ್ಣಿ ಕಾಯಿಸತಾ ಅದಾವ.

ಹಿ : ಹೌದು!

ಕ : ಆ ವೈರಿಯಾದ ಚಂದ್ರೋಜಿನ ತಂದು ಈ ಎಣ್ಣೀ ಒಳಗ ಬೇಯಿಸಿ ಮೂವರೂ ಮೂರು ಹೋಳು ಮಾಡಿ ತಿಂದುಬಿಡಾನು ಅಂತ್ಹೇಳಿ ಕ್ಯಾಕಿ ಹಾಕ್ತಾವು!

ಹಿ : ಕೋಣೀ ಒಳಗ ಇರೋಂಥ ವೈರಿನ ತರಾನು ನಡ್ರಿ ಅಂತ್ಹೇಳಿ ಬರ್ತಾವು.

ಕ : ಇದೇನಿದು! ಕೋಣಿ ಬೀಗ ತಗದು, ಕದ ಉಚ್ಚ್ಯಾವೆ! ಓಹೋ ಕಮಲಾವತೀ ವೈರಿ ಹೋಗ್ಯಾನ!

ಹಿ : ಆಹಾ!

ಕ : ಸೆರಮನಿ ನೋಡ್ರಿ, ಇಲ್ಲಿ ನೋಡ್ರಿ, ಅಲ್ಲಿ ಕೋಟಿವಳಗೆ ನೋಡ್ರಿ.

ಹಿ : ಎಲ್ಲಾ ಕಡಿಗೂ ನೋಡ್ತಾರೆ – ಮಗ ಇಲ್ಲ!

ಕ : ಅಗಸಿ ಹತ್ರ ಬಂದು ನೋಡ್ತಾರೆ – ವೃಕ್ಷಾಳಿ ಮರದ ಕೆಳಗೆ ಕುಂತಾನೆ – ಚಂದ್ರೋಜಿಕುಮಾರ!

ಹಿ : ಆಹಾ!

ಕ : ಸೆರಮನಿ ನೋಡ್ರಿ, ಇಲ್ಲಿ ನೋಡ್ರಿ, ಅಲ್ಲಿ ಕೋಟಿವಳಗೆ ನೋಡ್ರಿ.

ಹಿ : ಎಲ್ಲಾ ಕಡಿಗೂ ನೋಡ್ತಾರೆ -ಮಗ ಇಲ್ಲ!

ಕ : ಅಗಸಿ ಹತ್ರ ಬಂದು ನೋಡ್ತಾರೆ-ವೃಕ್ಷಾಳಿ ಮರದ ಕೆಳಗೆ ಕುಂತಾನೆ – ಚಂದ್ರೋಜಿಕುಮಾರ!

ಹಿ : ಆಹಾ!

ಕ : ಎಲೋ ನಮ್ಮ ಮಗಳು ವಿಘ್ನಾವತಿಯ ವೈರಿ ನೀನು? ಪಾರಾಗಿ ಹೊರಗ ಬಂದ್ಯಾ?

ಹಿ : ಬಂದು ಇಲ್ಲಿ ಕುಂತ್ಯಾ!

ಕ : ಬಾ ನನ್ನ ಬಾಯಲ್ಲಿ ಬೀಳು – ಅಂತಾ ಬಾಯಿ ತೆರಕೊಂಡು ಬರ್ತಾ ಐತಿ ಬ್ರಹ್ಮ ರಾಕ್ಷಸ!

ಹಿ : ಆಹಾ!

ಕ : ಈ ಕೂಡ್ಲೇ ಮರಸೋಟ, ತಗೊಂಡು ಮಗ ಎದುರಿಗೆ ನಿಂತ ಝಾಡಿಸಿ ಭೂಮಿಗೆ ಅಪ್ಪಳಿಸಿದ.

ಹಿ : ಆಹಾ!

ಕ : ಮರಸೋಟ ಚೂರು ಚೂರು ಆಗಿ ಹೋಗುತ್ಲೇ ಆ ಬ್ರಹ್ಮರಾಕ್ಷಸ ಅಂಗಾತ ಬಿದ್ದು ಪ್ರಾಣ ಬಿಡ್ತು!

ಹಿ : ನೆಗದು ಬಿತ್ತು!

ಕ : ಕಮಲಾವತಿ ರಾಕ್ಷಸಿ ಇದನ್ನ ಕಂಡು – ಎಲೋ ಚಂದ್ರೋಜಿ ನನ್ನ ಗಂಡನ್ನ ಕೊಲ್ಲಿದ್ಯಾ! ನೀನು ಎಲ್ಲಿ ಹೋದ್ರೆ ಬಿಟ್ಟೇನು – ಅಂತಾ ಓಡೋಡಿ ಬರ್ತೈತಿ ಕಮಲಾವತಿ ರಾಕ್ಷಸಿ!

ಹಿ : ಆಹಾ!

ಕ : ಕಿನ್ನರಿ ಬುಳ್ಡಿ ತೊಗೊಂಡು ಝಾಡಿಸಿ ಕ್ವಾಟಿಗ್ವಾಡಿಗೆ ಒಗೀಬೇಕಾದ್ರೆ ಅದೂ ಪ್ರಾಣ ಬಿಡ್ತೂ!

ಹಿ : ನೆಗದು ಬಿತ್ತು!

ಕ : ಅಘ್ನಾವತಿ ಮಗಳು ಇದನ್ನ ನೋಡ್ತು – ನಮ್ಮ ತಂದಿಗೆ ಕೊಲ್ಲಿ, ತಾಯಿಗೆ ಕೊಲ್ಲಿ ಹಿಗ್ಗಿದ್ಯಾ, ನಿನಗೆ ಬಿಟ್ಟೇನೇನು – ಅಂತ್ಹೇಳಿ ಸಮೀಪಕ್ಕೆ ಬರಬೇಕಾದರೆ ಚಂದ್ರೋಜಿಕುಮಾರ ನೋಡಿದ- ಓಹೋ ಅಘ್ನಾವತೀ, ಹೆಣಾ ತಿನ್ನೋ ಹಿಡಂಬೀ! ಇದೋ ತಗೋ-

ಹಿ : ಅಂತ್ಹೇಳಿ ಮಣ್ಣಿನ ಗುಂಡಾಲು ತೊಗೊಂಡು ಕೋಟಿ ಗ್ವಾಡಿಗೆ –

ಕ : ಒಗದ ತಕ್ಷ್ಣಕ್ಕ ಆಹಾ “ಆಹಾ” ಅಂತ ಆ ರಾಕ್ಷಸಿ ಪ್ರಾಣ ಬಿಡ್ತು!

ಹಿ : ನೆಗದ ಬಿತ್ತು!

ಕ : ಈ ಮೂರು ರಾಕ್ಷಸಗಳಿಗೆ ಸಂಹಾರ ಮಾಡಿದೆ; ಈ ಉಕ್ಕಿನ ಪಂಜರದಲ್ಲಿ ಇರುವಂಥಾ ಗಿಳೀಹೊಟ್ಯಾಗ ವಿಘ್ನಾವತಿ ಪ್ರಾಣ ಐತೆ-ಅಂತ್ಹೇಳಿ ನಮ್ಮ ಮಾವನೋರು ಬರದು ಕಳಿಸ್ಯಾರೆ!

ಹಿ : ಆಹಾ….

ಕ : ಉಕ್ಕಿನ ಪಂಜರ ಒಂದು ಬಗಲಾಗ ಹಾಕ್ಕೊಂಡು ತೋರಂಗಿ ಬಾವಾನ ಮಠಕ್ಕ ಮಗ ಚಂದ್ರೋಜಿಕುಮಾರ ನಡದ.

ಹಿ : (ರಾಗವಾಗಿ) ಹೌದೇ.

ಕ : (ರಾಗವಾಗಿ) ಸಮುದ್ರದ ದಂಡಿ ಮ್ಯಾಲೆ ಇರೋ ಮಠದಲ್ಲಿ ತೋರಂಗಿ ಬಾವಾ ಮತ್ತು ಮಗಳು ಕಾಳಾವತಿ ಚಂದ್ರೋಜಿಕುಮಾರನ ದಾರೀನೇ ಕಾಯ್ತಾ ಅದಾರ!

ಹಿ : ಒಳ್ಳೇದು,

ಕ : ನಮೋ ನಮೋ ನಮಸ್ಕಾರ ತೋರಂಗಿ ಬಾವಾ.

ಹಿ : ಶರಣಾರ್ಥಿ; ಐಶ್ಚರ್ಯವಾಗಿ ಬಾಳು.

ಕ : ಆಹಾ ಮಗನೇ, ಎಂಥ ಜಾಗದಲ್ಲಿ ಹೋದೆ, ಎಂಥಾ ರಾಕ್ಷಸರ ಕೈಯಲ್ಲಿ ಸಿಕ್ಕಿದ್ದಿ ನೀನು!

ಹಿ : ಏನು ಮಾಡ್ಲಿ ಮಾವಾ ಮೋಸವಾಯ್ತು, ಹೋಗಿ ಸಿಕ್ಕೊಂಡೆ, ಅಲ್ಲಿಂದ ಪಾರಾಗಿ ಬಂದ ನಿನ್ನ ಮಗ ನಾನು – ಅಂತಾ ನಮಸ್ಕಾರ ಮಾಡಿದ.

ಕ : (ರಾಗವಾಗಿ) ಈಗ ನನ್ನ ಮಠದಲ್ಲಿ ನೀವು ಸತಿ – ಪತಿ ಚಂದಾಗಿ ಇರಬೇಕು ನೋಡ್ರಿ.

ಹಿ : ಮಾವಾ ಅದು ವತ್ತಟ್ಟಿಗಿರ್ಲಿ, ಚಿತ್ರಾವತಿ ಪಟ್ಣದ ಚಿತ್ರೋಸೇನ ಮಹಾರಾಜಗೂ ಅಮರಾವತಿ ಪಟ್ಣದಲ್ಲಿರುವಂಥ ರಾಕ್ಷಸರಿಗೂ ಬೀಗಸ್ತನ ಹ್ಯಂಗಾತು!

ಕ : ಇದರ ಮಾಹಿತಿ ನಿನಗಿಲ್ಲೇನು ಮಗನೇ?

ಹಿ : ಇಲ್ಲ ಮಾವಾ!

ಕ : ಆ ಚಿತ್ರೋಸೇನ ಮಹಾರಾಜಗೂ ನಿನಗೂ ಏನಾಗಬೇಕು ಅಂಬೋದು ಮಾಹಿತಿ ಇಲ್ಲಾ?

ಹಿ : ನನಗ ಇದುವರಿಗೂ ಮಾಹಿತಿ ಇಲ್ಲ-ಗುರುವೇ!

ಕ : ಆತ ನಿನಗೆ ಜನಿಸಿದ ತಂದೆಯಾಗಬೇಕು.

ಹಿ : ಹಾ! ಚಿತ್ರೋಸೇನ ನನಗೆ ಜನಿಸಿದ ತಂದೆ?

ಕ ; ಘೋರಾರಣ್ಯದಲ್ಲಿ ಬೇಟೆಗೆ ಬಂದು ಹಿಡಂಬಿಗೆ ಒಲುಮೆಯಾಗಿ ನಿಮ್ಮ ತಂದೆ, ನಿಮ್ಮ ತಾಯಿನೋರಿಗೆ ಕೊಲೆ ಮಾಡ್ಸೋ ಏರ್ಪಾಟಿಪ್ಪ!