ಕ : ಏಳು ಸಮುದ್ರದ ಆ ಕಡಿಗೆ! ಹನ್ನೆರಡುಸಾವಿರ ರಾಕ್ಷಸರ ಬೆಂಬಲ ಅವಕ್ಕೆ!

ಹಿ : ಹನ್ನೆರಡುಸಾವಿರ ರಾಕ್ಷಸರು ಪಾರಾ ಕುಂತಾರೆ!

ಕ : ಹಿತ್ತಾಳಿ ಕೋಟೆ, ಕಬ್ಬಿಣದ ಕೋಟೆ, ಕಲ್ಲಿನ ಕೋಟೆ, ತಾಮ್ರದ ಕೋಟೆ- ಇಂಥಾ ಏಳು ಕೋಟಿ ದಾಟಿ ಒಳಗೆ ಹೋದ್ರೆ ಏಳು ಅಂತಸ್ತಿನ ಮನಿ!

ಹಿ : ಅರಮನಿ!

ಕ : ಅರಮನಿಯೊಳಗ ಅಕ್ಕಂಬೋ ರಾಕ್ಷಸಿ ಆ ಹೂಗಳಿಗೆ ಕಾವಲು.

ಹಿ : ಓಹೋ!

ಕ : ಹನ್ನೆರಡುಸಾವಿರ ರಾಕ್ಷಸರೂ ಸಮುದ್ರದ ದಂಡಿಗೆ ಕುಂತಾವು ಉಕ್ಕಿನ ಕೋಟಿ ಮೇಲೆ!

ಹಿ : ಆಹಾ!

ಕ : ಆ ಅಕ್ಕಂಬೋ ರಾಕ್ಷಸಿ ಎದಿ ಮೇಲೆ ಬೀಳದೈತಿ ಕಮಲದ ಹೂವು! ಆರು ತಿಂಗಳು ನಿದ್ರಿ, ಆರು ತಿಂಗಳು ಎಚ್ಚರ ಆ ರಾಕ್ಷಸಿಗೆ! ಆ ಶಿವಜಾತ-ಪಾರಿಜಾತ ಹೂಗಳಿಗೆ ಕಾವಲ ಐತೆ – ಒಂದು ಇಕ್ಕಳಗದ್ದಿ ಅಡ್ಡಗಲದ ಬಾವಿ!

ಹಿ : ಆ ಮಹಂತ ಬಾವಿಗೆ ಪಾಟಣಿಗಿಗಳೇ ಇಲ್ಲ! ಒಳಗ ಇಳದೋರು ಮ್ಯಾಲೆಬರೋದು ಸಾಧ್ಯವಿಲ್ಲ.

ಕ : ಯಾರಿಂದಲೂ ಸಾಧ್ಯವಿಲ್ಲ – ಆ ಹೂವುಗಳನ್ನ ತರೋದು.

ಹಿ : ಹೌದು ದೇವರ ಕೈಲೂ ಸಾಧ್ಯವಿಲ್ಲ.

ಕ : ಆಹಾ ಮಾವಾ ನೀನು ಹೂವು ತರಾಕ ಹೋಗಬ್ಯಾಡ ಅಂದ್ರೆ ಗಡಗಡ ಹೀಗಿ ಸಮುದ್ರದಾಗ ಬಿದ್ದು ಗಟಾಗಟಾ ನೀರು ಕುಡುದು (ರಾಗವಾಗಿ) ಪ್ರಾಣಾಬಿಡ್ತೀನಿ…..ನಿನ ಮಗಳಿಗೆ ರಂಡೀ ಮಾಡಿ ಕುಂದ್ರುಸ್ತೀನಿ…

ಹಿ : (ರಾಗವಾಗಿ) ಹೌದೂ.

ಕ ; ಅಲೇಲೇ ಚಂದ್ರೋಜಿಕುಮಾರಾ ಸಮಾಧಾನ ಮಾಡು.

ಹಿ : ಹಾ ಮತ್ತೇನು ಸಮಾಧಾನ ಹೇಳ್ರಿ?

ಕ : ಎಂಥಾ ಶೂರಪ್ಪ ನೀನು!

ಹಿ : ಹೌದು!

ಕ : ಹೂವು ತ್ರರಾಕ ಹೋಗ ಬ್ಯಾಡಾಂದಾರ ಮಗಳಿಗೆ ರಂಡಿ ಮಾಡ್ತೀನಿ ಅಂತಿಯಲ್ಲೊ! ಹೋಗಿ ಬಾ ; ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ; ಅಂಬುಬಾಣ; ಆಕಾಶಬಾಣ; ಕಲ್ಲುಬಾಣ ಈ ಮೂರು ಬಾಣ ಬೆನ್ನಿಗೆ ಕಟ್ಟಿಗೋ

ಹಿ : ಆಗಲಿ ಬಾವಾಜೀ.

ಕ : ಧನಮಂತ್ರ, ನಿಜಮಂತ್ರ, ವೇದಮಂತ್ರ – ಮಂತ್ರಿಸಿ ಮೂರು ಹಳ್ಳು ಕೊಡ್ತೀನಿ ಮೂರ್ನೂ ಶಲ್ಯಾದಾಗ ಕಟ್ಟಿಗೊ. ನನ್ನ ಮಠದಾಗ ಕೀಲುಗುರ್ರಂ ಐತಿ.

ಹಿ : ಕುದ್ರಿ, ಕೀಲು ಕುದ್ರಿ!

ಕ : ಕುದುರಿ ಅಂದ್ರೆ ಬಲಗಡಿ ಕೀಲು ತಿರುವಿದರೆ ಮೇಲೆ ಹೋಗ್ತೈತಿ, ಎಡಗಡೆ ಕೀಲು ತಿರುವಿದರೆ ಕುದುರಿ ಕೆಳಗ ಇಳಿತೈತಿ.

ಹಿ : ಆಹಾ!

ಕ : ಆ ಕೀಲು ಕುದ್ರಿ ನಡುವಿಗೆ ಕಟ್ಟಿಕೋ ಈಜು ಕುಂಬಳಕಾಯಿ ಬೆನ್ನಿಗೆ ಕಟ್ಟಿಕೋ, ಎಲ್ಲಾ ತೊಗೊಂಡು ಸಮುದ್ರದಾಗ ಈಜುಬಿದ್ದು ಹೋಗಿ; ಸಮುದ್ರ ದಾಟು.

ಹಿ : ಆಗಲಿ.

ಕ : ರಾಕ್ಷಸಗಳು ತಿನ್ನಾಕ ಬರ್ತಾವು – ಒಂದು ಹಳ್ಳು ಒಗದು ಬಿಡು; ಎಲ್ಲವೂ ಮಲ್ಕೊಂಡು ಬಿಡ್ತಾವು, ಒಳಹೋಗು ಬೆಂಕಿಕೋಟಿ ಐತಲ್ಲ-ಅದಕ್ಕ ಒಂದು ಹಳ್ಳು ಒಗೀ ಅದು ತಣ್ಣಗ ಆಗತೈತಿ. ಒಳಗ ಹೋಗು ಇನ್ನೊಂದು ಹಳ್ಳು ಇರತೈತಲ್ಲ-

ಹಿ : ಹೌದು.

ಕ : ನಿನ್ನ ಹತ್ರ ಇರಲಿ ಅದು; ಹೋಗಿ ಇಕ್ಕಳಗದ್ದಿ ಅಡ್ಡಗಲದ ಬಾವ್ಯಾಗೆ ಈಜು ಬೀಳು.

ಹಿ : ಹೌದು.

ಕ : ಆ ಶಿವ-ಪಾರಿಜಾತ ತಗೊಂಡು ಬರಬೇಕಾದ್ರೆ, ನೀನು ಆ ಕೀಲು ಕುದ್ರಿ ಮ್ಯಾಲೆ ಕುಂತಗೊಂಡು, ಬಲಗಡೆ ಕೀಲ ಗರ್ ಗರ್ ತಿರುವಿ ಬಿಡು – ಅಂತರ ಮಾರ್ಗದಲ್ಲಿ ಸೀದಾ ವಾಪಾಸು ಬಂದು ಬಿಡ್ತೀ. (ರಾಗವಾಗಿ) ಒಳ್ಳೇದು ಗುರುವೈ……

ಹಿ : (ರಾಗವಾಗಿ) ಒಳ್ಳೇದು ಗುರುವೇ….

ಕ : ಇನ್ನೊಂದು ಪ್ರಶ್ನೆ ಮಗನೇ-ತೊಂದರೆ ಬಂದರೆ, ನಿನಿಗೆ ಏನಾರೆ ಕಷ್ಟ ಬಂದರೆ, ಮಾವಾ ತೋರಂಗೀ ಬಾವಾ, ಮಾವಾ ತೋರಂಗೀ ಬಾವಾ, ಮಾವಾ ತೋರಂಗೀ ಬಾವಾ ಅಂತ ಮೂರೇಟು ನನಗೆ ನೆನೆಸಿ ಬಿಡು.

ಹಿ : ಹೌದೇ?

ಕ : ಬಂದಂಥಾ ಕಂಟಕಗಳೆಲ್ಲ ದೂರಾಗತಾವು-ಅಂದ ತೋರಂಗೀ ಬಾವಾ.

(ರಾಗವಾಗಿ) ಓಹೋ ಓಳ್ಳೇ ಮಾವ ಸಿಕ್ಕನೊ ನನಗೈ….

ಹಿ : (ರಾಗವಾಗಿ) ಆಹಾ

ಕ : ಹೋಗಿ ಬರ್ತೀನ್ರಿ ಅಂದ.

ಹಿ : ಹೋಗಿ ಬಾರಪ್ಪಾ ಅಳಿಯ.

ಕ : ನಮಸ್ಕಾರ ಮಾಡಿ ಬೆನ್ನಿಗೆ ಈಜು ಗುಂಬಳಕಾಯಿ ಬುಳ್ಡಿ ಕಟ್ಟಿಕೊಂಡು-

|| ಪದ ||

ಸಮುದ್ರದಾಗ ಈಚ ಬಿದ್ದಾನಾ….ಹರಯನ್ನ ಮಾದೇವಾ
ಸಮುದ್ರದಾಗ ಈಚಾಡಿಧಂಗಾ….ಶಿವಯನ್ನ ಮಾದೇವಾ
ಹಾವೇ ಈಚಾಡಿಧಂಗಾ…….ಹರಯನ್ನ ಮಾದೇವಾ
ಒಂದೇ ಸಮುದ್ರ ದಾಟ್ಯಾನಾ…..ಶಿವಹರ ಮಾದೇವಾ
ಎರಡೇ ಸಮುದ್ರ ದಾಟ್ಯಾನಾ…..ಶಿವಹರ ಮಾದೇವಾ
ಮೂರೇ ಸಮುದ್ರ ದಾಟ್ಯಾನಾ…..ಶಿವಹರ ಮಾದೇವಾ
ಇದೇ ಪ್ರಕಾರವಾಗೀ…..ಹರಯನ್ನ ಮಾದೇವಾ
ಏಳು ಸಮುದ್ರ ದಾಟ್ಯಾನಾ….ಶಿವಹರ ಮಾದೇವಾ

ಕ : ಒಂದು ಸಮುದ್ರ, ಎರಡು ಸಮುದ್ರ, ಹಾಲು ಸಮುದ್ರ, ಕೀರ ಸಮುದ್ರ, ಧೂತ ಸಮುದ್ರ, ಕರ್ಜೂರ ಸಮುದ್ರ, ರಾಜಗಿರಿ ಸಮುದ್ರ, ಶಿವ ಸಮುದ್ರ – ಈ ಏಳೂ ಸಮುದ್ರ ದಾಟಿ-

ಹಿ : ಆಹಾ-

ಕ : ಸಮುದ್ರ ದಂಡಿಗೆ ಚಂದ್ರೋಜಿಕುಮಾರ ಬಂದು ನಿಂತಾಗ ಹನ್ನೆರಡು ಸಾವಿರ ರಾಕ್ಷಸರು ನೋಡಿದ್ರು! – ಎಲೋ

ಹಿ : ಓಹೋ!

ಕ : ಇಲ್ಲಿ ದೇವತೆಗಳೂ ಬರ್ಲಿಕ್ಕೆ ಸಾಧ್ಯವಿಲ್ಲ; ನರಮಾನವ ಹುಡುಗ ಬಂದ!

ಹಿ : ಆಹಾ!

ಕ : ಬಾ ನಮ್ಮ ಬಾಯಾಗ ಬೀಳು ಅಂತ ರಾಕ್ಷಸ ಹಿಂಡು ನಿಂತಾಗ ಮಂತ್ರದ ಹಳ್ಳು ಒಗಿ ಅಂತಾ ಮಾವ ತೋರಂಗಿ ಬಾವ ಹೇಳಿದ್ನಲ್ಲ – ಮಗ ಹಳ್ಳು ಓಗೀಲಿಲ್ರೀ! ಯುದ್ಧ ಮಾಡಬೇಕು ಇವರ ಮ್ಯಾಲೆ ಅಂದ ಮಗ!

ಹಿ : ಆಹಾ!

ಕ : ಅಂಬು ಬಾಣ, ಆಕಾಶ ಬಾಣ, ತೊಗೊಂಡು ಯುದ್ಧ ಮಾಡಾಕ ನಿಂತುಕೊಂಡ- ಪರಾಕ್ರಮಿ ಚಂದ್ರೋಜಿ ಕುಮಾರ!

ಹಿ : ಓಹೋ!

ಕ : ಒಂದೇಟು ಬಾಣಾ ಬಿಟ್ರೆ ಅರ್ಧರ್ಧ ಲೋಪ್!

ಹಿ : ಹೌದು!

ಕ : ಈ ಪ್ರಕಾರವಾಗಿ ಮೂರು ಬಾಭದಿಂದ ಹನ್ನೆರಡು ಸಾವಿರ ರಾಕ್ಷಸರನೆಲ್ಲಾ ಸುಟ್ಟು ಬೂದಿ ಮಾಡಿದ ಮಗಾ!

ಹಿ : ಆ ಪರಾಕ್ರಮಿ!

ಕ : ಒಳಗೆ ಹಿತ್ತಾಳೆ ಕೋಟೆ, ಉಕ್ಕಿನ ಕೋಟೆ, ತಾಮ್ರದ ಕೋಟೆ, ಕಲ್ಲಿನ ಕೋಟೆಗಳು! ಬೆಂಕಿ ಕೋಟೆ ಅಂದ್ರೆ ಒಂದು ಅಗ್ನಿ ದೇವತೆ!

ಹಿ : ಆಹಾ!

ಕ : ಒಂದು ಹಳ್ಳು ಒಗದುಬಿಟ್ಟು – ಎಲ್ಲಾ ತಣ್ಣಗಾಗಿ ಹಾದಿ ಬಿಡ್ತು.

ಹಿ : ಹೌದು.

ಕ : ಒಳಗ ಬಂದು ನೋಡ್ತಾನೆ – ಅಕ್ಕಂಬೊ ರಾಕ್ಷಸಿ ಮಲಿಗ್ಯಾಳೆ!

ಹಿ : ಆಹಾ!

ಕ : ಆಕಿ ಮಲಗಿದ್ರ ನಿದ್ರಿ ಆರುತಿಂಗಳು, ಎಚ್ಚರಿದ್ರೆ ಆರುತಿಂಗಳು.

ಹಿ : ಹಾ!

ಕ : ಆಕೀ ಎರಡು ಕುಚದ ನಡುವೆ ಕಮಲದ ಹೂವು ಬೆಳದೈತಿ!

ಹಿ : ಅಕ್ಕಂಬೋ ರಾಕ್ಷಸಿ ಎದಿ ಮೇಲೆ!

ಕ : ನೋಡಿದ-ಹಿಡಂಬಿ ಮಲ್ಕೊಂಡಿತ್ತು! ಬಾವ್ಯಾಗ ಈಜುಬಿದ್ದು ಹೂವು ತರಬೇಕಂತ ರಾಜ ಪೋಷಾಕು ಬಿಟ್ಟು ಕೀಲುಕುದ್ರಿ ಬಾವಿ ದಂಡಿಗೆ ಇಟ್ಟ.

ಹಿ : ಹೌದು.

ಕ : ಬಾವ್ಯಾಗ ಜಿಗದು ಈಜುಬಿದ್ದ ಮಗ!

ಹಿ : ಆಹಾ!

ಕ : ಹೋಗಿ ಅಲ್ಲಿದ್ದಂಥಾ ಎರಡೂ ಹೂವಿಗೆ ಕೈ ಹಾಕಿದ; ಅವೆರಡೂ ಬಾವ್ಯಾಗ, ನೀರಾಗ ಮುಳುಗಿದುವು!

ಹಿ : ಆಹಾ!

ಕ : ನರಮಾನವರ ಕೈಗೆ ಸಿಗೋ ಹೂವಲ್ರೀ ಅವು! ಇವನು ಯಾವಾಗ ಈ ಮೂಲ್ಯಾಗ ಕೈಹಾಕಿದ ಆ ಮೂಲ್ಯಾಗ ಎದ್ವು ಹೂವು!

ಹಿ : ಆಹಾ!

ಕ : ಓಹೋ ಅಲ್ಲಿ ಹೋದುವು! -ಅಂತ್ಹೇಳಿ ಈಜಾಡಿಕೊಂತ ಈಜಾಡಿಕೊಂತಾ ಅಲ್ಲಿ ಹೋಗಿ ಹೂವಿಗೆ ಕೈ ಹಾಕಿದ, ಈ ಮೂಲ್ಯಾಗ ಎದ್ದು ಬಂದುವು!

ಹಿ : ಹೌದು!

ಕ : ಎರಡು ಗಂಟಿವರಿಗೂ ಈಜಾಡಿದ್ರೂ ಹೂವು ಸಿಗಲಿಲ್ಲ! (ರಾಗವಾಗಿ) ಮಾವಾ ತೋರಂಗೀ ಬಾವಾ, ಮಾವಾ ತೋರಂಗಿ ಬಾವಾ, ಮಾವಾ ತೋರಂಗಿ ಬಾವಾ- ಹೂವು ಸಿಗವಲ್ಲವು ಅಂತ್ಹೇಳಿ ಮಾವಗ ನೆನಸಿದಾಗ ಎರಡೂ ಹೂವು ಕೈಗೆ ಸಿಕ್ಕಾವೈ….

ಹಿ : (ರಾಗವಾಗಿ) ಹೌದೈ…

ಕ : ಧನ್ಯ ಧನ್ಯನಾದೆ-ಮಾವ ತೋರಂಗಿ ಬಾವನ ಅನುಗ್ರಹದಿಂದ! ಹೂವು ಕೈಗೆ ಸಿಕ್ಕವು ಅಂತ್ಹೇಳಿ ಬಾವಿದಂಡಿಗೆ ಬಂದು ರಾಜಡ್ರಸ್ ಹಾಕ್ಕೊಂಡು ಹೂವು ಬಲಗಡಿ ಜೇಬಿನ್ಯಾಗ ಇಟ್ಟುಕೊಂಡ,

ಹಿ : ಹೌದು.

ಕ : ಅಕ್ಕಂಬೋ ರಾಕ್ಷಸಿ ಎದಿ ಮೇಲೆ ಇರಂಥ ಕಮಲದ ಹೂವು ಹರಕೊಂಡ; ಅದನ್ನ ಎಡಗಡಿ ಜೇಬಿನಾಗ ಇಟಗೊಂಡು ಬಾವಿಯಿಂದ ಪುಟದು ಮ್ಯಾಲೆ ಬಂದ;

ಹಿ : ಆಹಾ!

ಕ : ಈಕಿ ಶಿವಜಾತ-ಪಾರಿಜಾತ ಹೂವಿಗೆ ಕಾವಲು ಅದಾಳೆ, ಈಕಿ ಎದಿ ಮ್ಯಾಲೆ ಬೆಳೆದ ಹೂವು ನಾನು ತೊಗೊಂಡೀನಿ; ಯಾರು ತೊಗೊಂಡಾರ ಅಂಬೋದು ಈಕಿಗೆ ಮಾಹಿತಿ ಆಗೋದಿಲ್ಲ; ಕನ್ನಡಿ ಹಳ್ಳಿನ ಗೋಡಿ ಮೇಲೆ ಬರಹ ಬರದ- ಮಗ, ಚಂದ್ರೋಜಿ, ಅಕ್ಕಂಬೋ ರಾಕ್ಷಸೀ, ಎಚ್ಚರವಾಗಿ ನೀನು ನೋಡಿದಾಗ ಈ ಗೋಡಿ ಮೇಲೆ ಬರದಂಥ ಬರಹ ಓದು; ತೋರಂಗಿ ಬಾವಾನ ಅಳಿಯನಾದ ಚಂದ್ರೋಜಿಕುಮಾರ ಶಿವಜಾತ ಪಾರಿಜಾತ ಹೂವು, ನಿನ್ನ ಎದಿ ಮ್ಯಾಲೆ ಬೆಳೆದಂಥಾ ಕಮಲದ ಹೂವು ನಾನು ಒಯ್ದಿರ್ತೀನಿ-ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ಮಹಾರಾಜನ ಮಡದಿ ವಿಘ್ನಾವತಿಗೆ ಹೊಟ್ಟಿಶೂಲಿಗೆ ಬೇಕಾಗ್ಯಾವೆ.

ಹಿ : ಆಹಾ!

ಕ : ಕೀಲು ಕುದುರೆ ಮ್ಯಾಲೆ ಕುಂತು ಮಗ ಬಲಗಡಿಗೆ ಕೀಲಿ ತಿರುವಿಬಿಟ್ಟ – ಗರಗರ ಅಂತ! ಅಂತರ ಮಾರ್ಗದಲ್ಲಿ ಬರ್ತಾಯಿದ್ದಾನೆ-

ಹಿ : ಹೌದು.

ಕ : ಎಂಟುದಿನ ಆಗೇತಿ ನೋಡ್ರಿ! ಸೋಮವಾರ ಮುಂಜಾನೆ ಚಿತ್ರೋಸೇನ, ದಂಡು. ಮಾರ್ಬಲ ರೈತರು ಎಲ್ಲಾರು ಸೇರ್ಯಾರೆ!

ಹಿ : ಇವತ್ತು ಶ್ರೀಮಂತ ಸಾವಕಾರಗ ಗಲ್ಲೈತಿ.

ಕ : ಕಳ್ಳ ಹುಡುಗ ಹೂವು ತರಾಕ ಹೋದಾನು ಬರ್ಲಿಲ್ಲ! ಹನ್ನೊಂದು ಗಂಟಿಯಾಯ್ತು ; ಹಿಡಕೊಂಡು ಬರ್ರೀ ಶೆಟ್ಟಿಗೆ ಹನ್ನೆರಡು ಗಂಟಿವರಿಗೆ ವಾಯ್ದೆ ಐತೆ, ಹೂವು ತರಲಿಲ್ಲದ್ರೆ ಇವನಿಗೆ ಮರಣ!

ಹಿ : ಗೆಲ್ಲು!

ಕ : ಶೆಟ್ರೇ ಸುಮ್ಮನೇ ಕಳ್ಳ ಹುಡುಗ್ಗ ಜಾಮೀನು ಆಗಿ ಪ್ರಾಣ ಕಳಕೊಂತೀರಿ!

ಹಿ : ಆಹಾ!

ಕ : (ರಾಗವಾಗಿ) ಎಲ್ಲರೂ ಬಂದು ಹೇಳ್ತಾರಾ….ಆಗಲೆಪ್ಪ ಹೋಗೋರು ಹೋಗ್ರೀ, ನನ್ನ ಪ್ರಾಣ ಹೋದ್ರೂ ಚಿಂತಿಯಿಲ್ಲಾ…

ಹಿ : (ರಾಗವಾಗಿ) ಹೌದೇ….

ಕ : ಶೆಟ್ರನ್ನ ತಗಬಂದು ಗಲ್ಲಿಗೆ ನಿಲ್ಲಿಸಿಬಿಟ್ರು. ಬಂಗಾರ ಕುರ್ಚಿ ಬೆಳ್ಳಿ ಕುರ್ಚಿಗಳ ಮ್ಯಾಲೆ ರಾಜ, ಮಂತ್ರಿ ಕುಂತಾರ; ಊರಾಗಿನ ಜನಾ ಬಂದೈತಿ!

ಹಿ : ಜಮಾಸ್ಯಾರ!

ಕ : ಗಲ್ಲಿಗೆ ಹಾಕೋದು ನಾವು ನೋಡ್ಲಿಲ್ಲ! – ಅಂತ್ಹೇಳಿ ಜನ ಜಾತ್ರಿ ಕೂಡೈತಿ- ರತ್ನಾವತಿ ಕೆರೀ ಅಂಗಳದಾಗ.

ಹಿ : ಹನ್ನೊಂದುವರೆ ಗಂಟಿ ಟೈಮಾಗೇತಿ!

ಕ : ಇನ್ನೊಂದು ಅರ್ಧಗಂಟಿ ಉಳದೈತಿ – ಸಾಹುಕಾರನ ಜೀವ ತಗಿಯಾಕ. ಅದೇ ಟೈಮಿನಾಗs ಕುದುರಿ ಮ್ಯಾಲೆ ಚಂದ್ರೋಜಿಕುಮಾರ ಅಂತರ ಮಾರ್ಗದಲ್ಲಿ ಬಂದ,

ಹಿ : ಪರಾಕ್ರಮಿ ಮಗ!

ಕ : ನಮ್ಮ ತಂದೀ ಸಮಾನ ಮುತ್ತಶೆಟ್ಟೀ ಜಲ್ಮ ಕಳೀತೀರಾ? ಅಂತ್ಹೇಳಿ ಎಡಗಡೆ ಕೀಲು ತಿರುವಿಬಿಟ್ಟ. ಭರ್ ಅಂತ ಆರ್ಭಟ ಮಾಡ್ಕೊಂತ ಕುದುರಿ ಇಳಿಬೇಕಾರೆ ಜನ ನೋಡಾಕ ನಿಂತಾರೆ (ರಾಗವಾಗಿ) ಮ್ಯಾಲಿಂದ ಏನೋ ಬರತೈತಲ್ಲೈ….

|| ಪದ ||

ಜನ ಗಾಬರ್ಯಾಗಿ ಓಡ್ಯಾರಾ…….ಶಿವಯನ್ನ ಹರ ಮಾದೇವಾ
ಜನ ಗಾಬರ್ಯಾಗಿ ಓಡ್ಯಾರಾ……. ನಮ ಶಿವಾಯಾ.

ಕ : ಓಡಿದ್ರು ದಿಕ್ಕಾಪಾಲಾಗಿ ಜನ. ಚಿತ್ರೋಸೇನ ಮಹಾರಾಜ ಮಂತ್ರೀ ಕಡೆ ನೋಡಿದ -ಓ ಚಂದ್ರೋಜಿಕುಮಾರ!

ಹಿ : ಆಹಾ ಬಂದ; ಇಳದ!

ಕ : ನಮೋ ನಮೋ ನಮಸ್ಕಾರ ಮಂತ್ರಿಯವರೇ, ರಾಜರವರೇ! ಹೂವು ತರಾದಿಲ್ಲ ಕಳ್ಳ ಹುಡುಗ ಅಂತ್ಹೇಳಿ ಗಲ್ಲಿಗೆ ಹಾಕಬೇಕಾರ ಜಾಮೀನಾಗಿ ಬಿಡಿಸಿ ದಂಥಾ ತಂದೇ ಮುತ್ತಶೆಟ್ಟೀ ಬಾ.

ಹಿ : ಎಲ್ಲಿ ಹೋಗಿದ್ದೆಪ್ಪಾ?

ಕ : ಹೂ ತರಾಕ ಹೋಗಿದ್ದೆ – ತಂದೆ!

ಹಿ : ಹೌದೇ!

ಕ : (ರಾಗವಾಗಿ) ಮಗಾ ಚಂದ್ರೋಜಿಕುಮಾರ, ತಾಯಿನೋರ ವ್ಯವಸ್ಥಿ ಏನು ಮಾಡಿದೀ….

ಹಿ : (ರಾಗವಾಗಿ) ಆಹಾ….

ಕ : ಎಲ್ಲಿಯ ತಾಯ್ನೋರು ತಂದೇ! ನೀನಿದ್ರೆ ತಾಯನೋರು. ಇನ್ನು ನೀನು ಮನಿಗೆ ನಡೀ. ನಾನು ಈ ಹೂವು ಕೊಟ್ಟು ಬರ್ತೀನಿ – ಅಂದ ಮಗ.

ಹಿ : ಹಂಗಾದ್ರ ಹೂ ತಂದೀಯೇನಪ್ಪ? ರಾಜ ಕೇಳ್ತಾನೆ.

ಕ : ಓಹೋ ತಂದೀನಿ, ಅಗತ್ಯವಾಗಿ ತಂದೀನಿ ಸ್ವಾಮೀ. ನಿಮ್ಮ ಮನಿಗೆ ನಡ್ರಿ; ಹೂವು ಕೊಡ್ತೀನಿ ಅಲ್ಲಿ.

ಹಿ : ಮಗನಿಗೆ ಕರಕೊಂಡು ತಾಳ ಮೇಳ ಬಜಂತ್ರಿ ತಗೊಂಡು ಚಿತ್ರೋಸೇನ ರಾಜ ತನ್ನ ಮಡದಿ ವಿಘ್ನಾವತಿ ಮನಿಗೆ ಬರ್ತಾ ಇದಾನ-

ಕ : ವಿಘ್ನಾವತಿ ರಾಣಿ ಅರಮನೆಯಲ್ಲಿ ಕುಂತುಗೊಂಡು ಅಂದುಕೊಂತಾ ಅದಾಳ ನನ್ನ ವೈರಿಯಾದ ಚಂದ್ರೋಜಿ ಶಿವಜಾತ-ಪಾರಿಜಾತ ಹೂವು ತರ್ಲಿಕ್ಕೆ ಹೋಗ್ಯಾನ!

ಹಿ : ಹುಡುಗ!

ಕ : ಅವನು ಯಾವ ಕಾಲಕ್ಕ ಎದ್ದು ಬರಬೇಕು! ನನ್ನ ವಂಶದ ಹನ್ನೆರಡು ಸಾವಿರ ರಾಕ್ಷಸರ ಹಿಂಡಿಗೆ ತುತ್ತಾಗಬೇಕು ಒಂದು; ಹಿಂಗ ಸಾವಿಗೆ ತುತ್ತಾಗೋದು ಅವನ ಹಣೇಬರಹ!

ಹಿ : ಆಹಾ!

ಕ : ನನ್ನ ಮೈಮ್ಯಾಲಿನ ಪೀಡಿ ಹೋಯಿತು- ಅಂತ್ಹೇಳಿ ರಾಕ್ಷಸಿ ಪದ ಪದ್ಯ ಹೇಳಿಕೊಂತಾ ಮಂಚದ ಮ್ಯಾಲೆ ಮಲ್ಕೊಂಡಿದ್ಲು!

ಹಿ : ಬಜಂತ್ರಿ ಬರೋ ಶಬ್ದ ಕೇಳಿದ್ಲು ಆಕಿ!

ಕ : ಓಹೋ, ಇದೇನು ಗಲಾಟೆ- ಆ ಕಡೆ ಬಜಾರದಾಗ/ ಯಾರು ಬಂದಿರಬಹುದು?- ಕಮಾನ್ ಕಿಟಿಗ್ಯಾಗ ಹಣಿಕಿ ನೋಡ್ತಾಳೆ- ಚಂದ್ರೋಜಿಕುಮಾರ!

ಹಿ : ಆಹಾ!

ಕ : ಮೋಸವಾಯ್ತು! ಹೂ ತರಾಕ ಹೋದ ವೈರಿ ಗೆದ್ದು ಬಂದ! ಏನು ಮಾಡಿ ಬಂದಿರಬಹುದು ಅಲ್ಲಿ! ನನ್ನ ನೀಲಾ ಹೊತ್ತಿಗ್ಯಾಗ ನೋಡಬೇಕು ಅಂದ್ಲು- ವಿಘ್ನಾವತಿ.

ಹಿ : ಆಂ….

ಕ : ವತ್ತಿಗಿ ತಗದು ನೋಡ್ತಾಳೆ-ಏಳು ಸಮುದ್ರದಲ್ಲಿ ಈಜುಬಿದ್ದು, ಹನ್ನೆರಡು ಸಾವಿರ ರಾಕ್ಷಸರಿಗೆಲಾ ಸಂಹಾರ ಮಾಡಿ, ಬೆಂಕಿಕೋಟಿ ದಾಟಿ, ಬಾವಿಯಲ್ಲಿ ತೇಲು ಬಿದ್ದು ಶಿವಜಾತ ಪಾರಿಜಾತ ಹೂವು ತೊಗೊಂಡು, ಅಕ್ಕಂಬೋ ರಾಕ್ಷಸಿ ಎದಿಮ್ಯಾಲೆ ಬೆಳುದಂಥಾ ಕಮಲದ ಹೂವನೂ (ರಾಗವಾಗಿ) ತಂದಾನ ನನ್ನ ವೈರೀ….

ಹಿ : ಹೌದೂ….

ಕ : ಇಷ್ಟು ಮಂದಿ ರಾಕ್ಷಸರಿಗೆ ಸಂಹಾರ ಮಾಡಿದ ಹುಡುಗಾ (ರಾಗವಾಗಿ) ನನಗೆ ಬಿಟ್ಟಾನೇನೆ ತಾಯೀ….

ಹಿ : (ರಾಗವಾಗಿ) ಆಂ….

ಕ : (ರಾಗವಾಗಿ) ಇವನ ಕೈಯಲ್ಲಿ ನಾನು ಪಾರಾಗೋದು ಹ್ಯಾಗೇ ಯವ್ವಾ….

ಹಿ : (ರಾಗವಾಗಿ) ಹೌದೇ….

ಕ : (ರಾಗವಾಗಿ) ಏನು ಮಾಡಿದ್ರೆ ಮರಣ ಬಂದಿತೂ….

ಹಿ : (ರಾಗವಾಗಿ) ಹೌದೂ….

ಕ : ಆಲೋಚನೆ ಮಾಡ್ತಾ ಇದ್ದಾಳೆ ವಿಘ್ನಾವತಿ.

ಹಿ : ಅದೇ ಟೈಮಿಗೆ ಮಹಾರಾಜ, ಎಲ್ಲಾರ್ನೂ ಕರಕೊಂಡು ಬಂದು ಅಂತಾನೆ-

ಕ : ಮಡದೀ ಬಂದೆ.

ಹಿ : ಆಹಾ!

ಕ : ಸಮಾಧಾನ ಮಾಡು ಮಡದೀ; ಹೊಟ್ಟಿಶೂಲಿ ಹ್ಯಾಗೆ ಐತಿ?

ಹಿ : ಆಹಾ!

ಕ : ಸಾಧ್ಯವಿಲ್ಲರೀ ಹೊಟ್ಟಿಶೂಲಿ ಜಾಸ್ತಿ ಐತ್ರಿ.

ಹಿ : ಹೌದು.

ಕ : ಬಂದ ನೋಡು! ಹುಡುಗ್ಗ ಕಳ್ಳ ಅಂದ್ವಿ ನಾವು! ಇಂಥಾ ಶೂರ ಹುಡುಗ ಶಿವಜಾತ ಪಾರಿಜಾತ ತಂದಾನ! ಮಡದೀ ನಿನ್ನ ಹೊಟ್ಟಿಶೂಲಿಗೆ ತಗೋ ಇವನ್ನ; ಹ್ಯಾಗ ಅದಾನ ಈ ಕುಮಾರ! ಅದಕ್ಕ ಮಡದಿ ಅಂತಾಳ-

ಹಿ : ಹುಡುಗಾ ಕೊಡಪ್ಪಾ ನನ್ನ ಹೊಟ್ಟಿಶೂಲಿ ಹೋಗ್ಲಿ.

ಕ : ತೊಗೊಳ್ರೀ ಹೂವ ಅಂತ ಮಗ ಜೇಬಿಗೆ ಕೈಹಾಕಿ, ತಗದು ಕೊಟ್ಟಾಗ ಅರಮನಿಯಾಗೆಲ್ಲ ಬೆಳಕು ಬಿತ್ತು!

ಹಿ : ಓಹೋ!

ಕ : ವಿಘ್ನಾವತಿ ಕೈಯಾಗ ಹೋದ ತಕ್ಷ್ಣಕ್ಕs ಹೂವು ಕರ್ರಗಾದುವು! ಆಕಿ ಹಿಡಂಬಿ ಮುಟ್ಟಿಬಿಟ್ಲಲ್ಲ – ಬತ್ತಿಹೋದವು!

ಹಿ : ಚಿತ್ರೋಸೇನ ರಾಜ ನೋಡಿದ!

ಕ : ಮಡದೀ, ಏನು ಬೆಳಕುಯಿದ್ದುವು ಹೂವು! ಅಂಥಾ ಹೂವು ನಿನ್ನ ಕೈಯಲ್ಲಿ ಬಂದಾಗ ಕರ್ರಗ ಆಗಬೇಕಾರ ಕಾರಣೇನು? ನಿನ್ನ ಹೊಟ್ಯಾಗಳ ಬ್ಯಾನೆಲ್ಲ ಈ ಹೂವಿಗೆ ತಟ್ಟಿದ್ದಕ್ಕ ಇವು ಕರ್ರಗಾದವು! ಈ ಬ್ಯಾನಿ ಹೊಟ್ಯಾಗ ಉಳಕೊಂಡಿದ್ರೆ ವ್ಯರ್ಥ ಪ್ರಾಣ ಬಿಡ್ತಿದ್ದೆಲ್ಲ! ಕೊಟ್ಟುಬಿಡು ಹುಡುಗ್ಗ ಹೂವು ಕೊಟ್ಟುಬಿಡು.

ಹಿ : ಆಹಾ ಇದೇನಿದು! ಶಿವಜಾತ ಪಾರಿಜಾತ ಮತ್ತೆ ವಾಪಾಸು ಆಕಿ ಕೊಟ್ಟಾಗ ಅವುಗಳ ಇದ್ದ ಬೆಳಕು ಇದ್ದಂಗs ಆತಲ್ಲ!

ಕ : ವಿಘ್ನಾವತಿ ಅಂದ್ಲು – ಮಹಾರಾಜಾ ಈ ಮನಿಯಲ್ಲಿ ನಿನಗೆ ಮಡದಿಯಾಗಿ ನಾನು ಬಂದು ಹನ್ನೆರಡು ವರ್ಷ ಆತು!

ಹಿ : ಹೌದು ಆಗಿ ಹೋತು!

ಕ : ನನ್ನ ತವರೂರಲ್ಲಿ ತಾಯಿ ತಂದಿ ಹ್ಯಾಗೆ ಅದಾರೆ ಏನೋ! ನಾನು ಒಂದು ಪತ್ರ ಬರೆದು ಈ ಹುಡುಗನ ಕೈಯಾಗ ಕೊಡ್ತೀನಿ ; ಕೊಟ್ಟು ಬರ್ತಾನೇನೂ ಕೇಳ್ರಿ; ಕೊಟ್ಟು ಬಂದ ಬಳಿಕ ನಾನು ನೀವು ಸಂತೋಷದಿಂದ ಈ ಹುಡುಗ್ಗ ಪಟ್ಟಾಭಿಷೇಕ ಮಾಡೋನು. ಈ ಪರಾಕ್ರಮಿ ಹುಡುಗನ್ನ ನನ್ನ ತಂದಿ ತಾಯಿ ನೋಡಿ ಆನಂದ ಪಡ್ತಾರೆ. ಬರೀ ನಾನು ನೀವು ಆನಂದಾದ್ರ ಏನಬಂತು- ಅಂದ್ಲು ವಿಘ್ನಾವತಿ!

ಹಿ : ಹೌಹೌದು!

ಕ : ಹಂಗಾದ್ರ ಇವುನ್ನ ನಿನ್ನ ತೌರೂರಿಗೆ ಕಳಿಸೋನೇನೆ?

ಹಿ : ಕಳಿಸಾಕs ಬೇಕು.

ಕ : ಏನಪ್ಪಾ ಚಂದ್ರೋಜಿಕುಮಾರಾ-

ಹಿ : ಏನ್ರೀ ಮಹಾರಾಜಾ?

ಕ : ಹೂವು ತಂದ ಬಳಿಕ ನಿನಗೆ ಪಟ್ಟಾಭಿಷೇಕ ಮಾಡ್ತಿನಿ ಅಂತ ನಾನು ವಚನ ಕೊಟ್ಟೀನಿ.

ಹಿ : ಹೌದು.

ಕ : ಈಗ ನನ್ನ ಮಡದಿ ಒಂದು ಪತ್ರ ಬರದು ಕೊಡ್ತಾಳಂತೆ; ಈಕಿ ತೌರೂರು ಅಮರಾವತಿ ಪಟ್ಣಕ್ಕೆ ಹೋಗಿ ಕಾಗದ ಕೊಟ್ಟು ಅಲ್ಲೀದು ಒಂದು ಕಾಗದ ಕ್ಷೇಮ ಲಾಭಕ್ಕೆ ತೊಗೊಂಬಾ. ಆಮೇಲೆ ನಿನ್ನ ಪಟ್ಟಾಭಿಷೇಕ ಮಾಡ್ತೀನಿ.

ಹಿ : ಆಗಲಿ ಮಹಾರಾಜ್; ಹೋಗಿ ಕೊಟ್ಟು ಬರ್ತೀನಿ ಕೊಡ್ರಿ; ಅಲ್ಲೀದು ಒಂದು ಕಾಗದ ತಂದು ನಿಮಗೆ ಮುಟ್ಟಿಸ್ತೀನಿ.

ಕ : ನೋಡು ಮಡದೀ ಈ ಹುಡುಗ ಮಾತು ಮೀರೋನಲ್ಲ! ನಾವು ಹೇಳಿದ ಪ್ರಕಾರವಾಗಿ ಕೇಳ್ತಾ ಇದಾನೆ. ಚಂದ್ರೋಜಿಕುಮಾರನ್ನ ಯಾ ತಾಯಿ ಹಡಬಾಳೋ ಏನೋ! ಬರದು ಕೊಡೇ ಮಡದೀ- ಕ್ಷೇಮ ಲಾಭದ ಪತ್ರ.

ಹಿ : ಕ್ಷೇಮ ಲಾಭದ ಪತ್ರ!

ಕ : ಒಳ್ಳೇ ಏಟಿಗೆ ಸಿಕ್ಕ ವೈರಿ ಅಂದುಕೊಂಡ್ಲು, ಅರಮನಿಯಾಗ ಒಂದು ವಳಕೊಠಡಿಯೊಳಗ ಕುಂತು ಬರೀತಾಳ ಪತ್ರಾನ.

ಹಿ : ಏನ್ ಬರೀತಾಳ್ರೀ?

ಕ : ಅಮರಾವತಿ ಪಟ್ಣದಲ್ಲಿ ಬ್ರಹ್ಮಸೇಕ ರಾಜ, ತಾಯಿ ಕಮಲಾವತಿ ನಿನ್ನ ಮಗಳಾದಂಥಾ ವಿಘ್ನಾವತಿ, ಇಲ್ಲಿಗೆ ಹನ್ನೆರಡು ವರ್ಷದ ಹಿಂದೆ, ನಾನು ನೀನು ಬೇಟಿಗೆ ಹೋದ ದಿವಸ. ಅಡವಿಯಲ್ಲಿ ಬಂದು ಮಲ್ಕೊಂಡಂಥಾ ಚಿತ್ರೋಸೇನ ಮಹಾರಾಜಗೆ ನಾನು ಮಡದಿಯಾಗೀನಿ ಅಕ್ಕಾ. ಚಿತ್ರಾವತಿ ಪಟ್ಣದಲ್ಲಿ ರಾಣಿ ಪಟ್ಟಗೊಂಡು ವೈಭವದಿಂದ ಅದೀನಿ.

ಹಿ : ಹೌದು.

ಕ : ಅಕ್ಕಾ, ತಂದೆ ಬ್ರಹ್ಮಸೇಕಾ, ತಾಯಿ ಕಮಲಾವತೀ,

ಹಿ : ಆಹಾ!

ಕ : ರಾಜಾಧಿರಾಜಗೆ ಲಗ್ನಾದಂಥಾ ಮಡದೇರು ಏಳು ಮಂದಿ ಇದ್ದರು. ಅವರು ಆರಾರು ತಿಂಗಳು ದಿಮ್ಮನಿಸ್ಯಾರಿದ್ದರು, ಈ ಸವತೇರಿಗೆ ನಾನು ಉಪಾಯದಿಂದ ತಲಿ ಹೊಡಿಯಾಕ ಕಳಿಸಿದ್ದೆ, ತಂದೇ! ಅವನು, ಮಂತ್ರಿ ಹೋಗಿ ತಲೀ ಹೊಡಿಲಿಲ್ಲ, ಪ್ರಾಣದಾನ ಮಾಡಿ ಕಣ್ಣುಗಳ ತಗೊಂಡು ಬಂದು ಕೊಟ್ಟ!

ಹಿ : ಕೊಟ್ಟ!

ಕ : ಆ ಸವತೀರ ಹೊಟ್ಟೀ ಮಗ ಇವನು!- ಈ ಚಂದ್ರೋಜಿಕುಮಾರ ಮಹಾಶೂರ! ಈಗ ಬಂದು ಮನಿಯಾಗ ಸಿಕ್ಕಾನ. ಕೊಲೆ ಮಾಡಿಸಬೇಕಂತ ನಾನು ಎಷ್ಟೋ ಪ್ರಯತ್ನ ಮಾಡಿದೆ-ತಾಯಿ! ಶಿವಜಾತ-ಪಾರಿಜಾತ ಹೂ ತರ್ಲಿಕ್ಕೆ ಕಳಿಸಿದ್ದೆ! ಇವನು ಹೋಗಿ ಗೆದ್ದು ತಂದು ಕೊಟ್ಟಾನೆ; ಇವನಿಗೆ ಸಾವು ಬಂದಿಲ್ಲ!

ಹಿ : ಬರಲಿಲ್ಲ!

ಕ : ಈಗ ನಿಮಗೆ ಉಪಾಯದಿಂದ ಈ ಕಾಗದಾ ಬರದು; ತಿಳಿಸೋದೇನಂದರೆ,- ಈ ಹುಡುಗ್ಗ ನಿಮ್ಮಲ್ಲಿ ಕೊಟ್ಟು ಕಳಿಸೀನಿ; ಇವನಿಗೆ ಪ್ರೀತಿ ಜೋರು ಜುಲ್ಮಿ ತೋರಿಸ್ಬೇಡಿರಿ. ಉಪಾಯದಿಂದ ಹಿಡುದು, ಎತ್ತಿ ಅಂಗಾತ ಕೆಡವಿ, ಎದಿಮ್ಯಾಲೆ ಕುಂತ್ಕೊಂಡು ಮಹಂತ ಬಡತಾ ಬಡದು ಹೆಡಮುರಿಗಿ ಕಟ್ಟಿ.