ಹಿ : (ರಾಗವಾಗಿ) ಆಹಾ!

ಕ : ರಾಕ್ಷಸಿ ಮಾತು ಕೇಳಿ ನಮ್ಮ ತಾಯಿನೋರಿಗೆ ತಲಿ ಹೊಡೀಲಿಕ್ಕೆ ನಮ್ಮ ತಂದಿ ಕಲಿಸಿದ್ನೆ!

ಹಿ : (ರಾಗವಾಗಿ) ಹೌದೂ!

ಕ : ಆದ್ರೆ ಮಂತ್ರಿ ತಲಿ ಹೊಡಿಲಾರದೆ ಬರೇ ಕಣ್ಣುಗಳ ತಕ್ಕೊಂಡು ಬಂದು ಪ್ರಾಣ ದಾನ ಮಾಡಿದ!

ಹಿ : ಆಹಾ…

ಕ : ಅವರ ಗರ್ಭದಲ್ಲಿ ನೀನು ಹುಟ್ಟಿ, ವನವಾಸ ಪಡದು ಶಿವಜಾತ-ಪಾರಿಜಾತ ಹೂವ ತೊಗೊಂಡು ಬಂದೀದ್ಯೆಲ್ಲ – ಏನು ಮಾಡಿದಿ ಅವುನ್ನ?

ಹಿ : ಜೇಬಿನ್ಯಾಗ ಇದಾವೆ ಮಾವನೋರೇ.

ಕ : ಅವನ್ನೂ ಅಕ್ಕಂಬೋ ರಾಕ್ಷಸಿ ಎದಿ ಮೇಲೆ ಬೆಳದಂಥಾ ಕಮಲದ ಹೂವನ್ನೂ ತೊಗೊಂಡು ನಿಮ್ಮ ತಾಯಿಗಳ ಹತ್ತಿರ ಹೋಗು, ಕಲ್ಲಿನ ಗವಿಯೊಳಗ ಇರಂಥ ಏಳು ಮಂದಿ ತಾಯಿನೋರಿಗೆ ಜಳಕ ಮಾಡಿಸು.

ಹಿ : ಒಳ್ಳೇದು.

ಕ : ಸೂರ್ಯಗ ಮುಖಮಾಡಿ; ದೇವತಾ ಧ್ಯಾನ ಮಾಡಿ, ಆ ಮೂರೂ ಹೂಗಳ್ನ ಆ ಏಳೂ ಮಂದಿ ತಾಯ್ನೋರ ಕಣ್ಣಿನ ಮೇಲೆ ತಿರುವಿಕೊಂಡು ತಲೆ ಮೇಲೆ ಕೈ ಎಳಕೊಂಡು ಬಿಟ್ರೆ ಅವರೆಲ್ಲರಿಗೂ ಕಣ್ಣು ಬರ್ತಾವೆ-ಚಂದ್ರೋಜಿಕುಮಾರಾ.

ಹಿ : ತೋರಂಗಿ ಬಾವಾ, ಮಾವಾ, ನಿಮ್ಮಿಂದ ತಂದಿ ಯಾರು ಅಂಬೋದು ಗುರ್ತಾತು; ನಿಮ್ಮಿಂದ ನನಿಗೆ ಎಲ್ಲಾ ತಿಳೀತು. ನಿಮ್ಮದು ಮಹಂತ ಉಪಕಾರಾತು; ಹೋಗಿ ಬರ್ತೀನಿ ತಂದೇ.

ಕ : ಕಾಳಾವತಿ ಮಗಳೇ ನಿನ್ನ ಪತಿ ಕಲ್ಲಿನ ಗವಿಗೆ ಹೋಗ್ತಾನಂತೆ; ಹೋಗಿ ಬರೋಮಟ ಇಲ್ಲೇ ಇರ್ತೀಯಾ ಅಥವಾ ನಿನ್ನ ಪತಿ ಜೊತಿಗೆ ಹೋಗ್ತೀಯಾ?

ಹಿ : ಅಪ್ಪಾ, ಪತಿ ಇದ್ದಲ್ಲಿ ಸತಿ ಇರುವುದು ಧರ್ಮ, ವನವಾಸ ತೀರಿಸಿಕೊಂಡು ಗೆದ್ದು ಬಂದಂಥಾ ನನ್ನ ಪತಿ ಸಂಗಾಟ ಹೋಗ್ತೀನಿ; ಈಗ ನಾವಿಬ್ರೂ-

ಕ : ಸತಿ ಪತಿಗಳಾಗಿ ಅತ್ತೆಗಳ ಹತ್ತಿರ ಹೋಗ್ತೀವಿ ಅಪ್ಪಣಿ ಕೊಡಬೇಕು-ಅಂದ್ಲು ಕಾಳಾವತಿ.

ಹಿ : ಹೌದು.

ಕ : ಹೋಗಿ ಬಾರೇ ಮಗಳೇ ಕಾಳಾವತೀ-ಅಂತ ಅಪ್ಪಣಿ ಆಶೀರ್ವಾದ ನೀಡಿದ. ಅಳಿಯಗೂ ಆಶೀರ್ವಾದ ಮಾಡಿ ಸತಿ- ಪತಿಗೆ ಕಳಿಸ್ಯಾನ-ತೋರಂಗಿ ಬಾವ.

ಹಿ : ಆಹಾ!

ಕ : ಆ ವ್ಯಾಳ್ಯಾದಲ್ಲಿ ಆ ಸತಿ-ಪತಿ ಎಲ್ಲಿಗೆ ಬರ್ತಾರೆ-

|| ಪದ ||

ಕಲ್ಲಿನ ಗವಿಗೇ ಬರುತಾರೇ…..ಹರಯನ್ನ ಮಾದೇವಾ
ಗವಿಯೊಳಗ ಏಳು ಮಂದಿ ತಾಯೀ….ಹರಯನ್ನ ಮಾದೇವಾ
ಯವ್ವಾ ಕುಂತೀರಾ ಹಡದವ್ವಾ…..ಹರಯನ್ನ ಮಾದೇವಾ
ಯಪ್ಪಾ ಯಾರೋ ನೀವು ಬಂದವರೂಓಂ ನಮಾ ಶಿವಾಯ

ಕ : ಚಂದ್ರೋಜಿಕುಮಾರ ಮತ್ತು ಮಡದಿ ಕಾಳಾವತಿ ಆ ಕಲ್ಲಿನ ಗವಿಗೆ ಬರಬೇಕಾದ್ರೆ ಏಳು ಮಂದಿ ತಾಯ್ನೋರು ಸುತ್ತಮುತ್ತ ಕುಂತ್ಕೊಂಡು ಅಂಬಲಿಸ್ತಾ ಅದಾರೆ-

ಹಿ : ಕಣ್ಣಿಲ್ಲದ ಕವಾಜಿಗಳು!

ಕ : ಕುಂತೀರಾ ತಾಯೀ, ಕುಂತೀರಾ ತಾಯೀ ಅಂತ್ಹೇಳಿ ಮಗ ಕಣ್ಣೀರು ತಂದ್ಕೊಂಡ.

ಹಿ : ಯಾರಪ್ಪಾ ನೀನು?

ಕ : ಆಹಾ! ಯಾರು ಅಂತೀರಿ ತಾಯಿ? – ನಿಮ್ಮ ಮಗನಮ್ಮಾ ನಾನು.

ಹಿ : ನಮ್ಮ ಚಂದ್ರೋಜಿಕುಮಾರ ಹೋಗಿ ಬಹಳ ದಿವಸ ಆತು! ನೀನು ಯಾರಪ್ಪ?

ಕ : ಅತನಾವತಿ, ಮತನಾವತಿ, ರತನಾವತಿ, ಪೂಲಾವತಿ, ಸಯಾವತಿ, ಜಯಾವತಿ, ಚಿಕ್ಕಮಾತೆ ಪದ್ಮಾವತಿಯ ಗರ್ಭದಲ್ಲಿ ಉಧ್ಬವಿಸಿದ ಚಂದ್ರೋಜಿಕುಮಾರ ನಾನು.

ಹಿ : ಈಗ ಬಂದಿ ಇಷ್ಟು ದಿವಸ ಎಲ್ಲಿಗೆ ಹೋಗಿದ್ದೆ ಮಗನೆ?

ಕ : ವನವಾಸ ಹೋಗಿದ್ದೆ ತಾಯಿ, ನಿಮ್ಮ ಕಣ್ಣುಗಳು ಬರುವಂಥ ಸಾಮಾನು ತರಲಿಕ್ಕೆ ಹೋಗಿದ್ದೆ-ಮಾತೋಶ್ರೀ!

ಹಿ : ಹೌದು!

ಕ : ಅಯ್ಯೋ ಅಯ್ಯೋ ಮಗನೇ ನಮ್ಮ ಕಣ್ಣುಗಳು ಬರುವಂಥ ಸಾಮಾನುಗಳು ನೀನು ತಂದಿಯಪ್ಪಾ-

ಹಿ : ಆಹಾ!

ಕ : ಹೌದಮ್ಮಾ; ಸೂರ್ಯ ಉದಯ ಆಗಲಿಕ್ಕೆ ಮೊದಲು ಸ್ನಾನ ಮಾಡಿಕೊಳ್ರಿ-ಅಂತ ಹೇಳಿ, ತಾಯಿಗಳಿಗೆ ಸ್ನಾನ ಮಾಡಿಸಿ ಸೂರ್ಯನ ಪ್ರಕಾಶದ ವ್ಯಾಳ್ಯಾದಲ್ಲಿ ಬಂದು ಏಳು ಮಂದಿ ತಾಯಿನೋರಿಗೆ ಸೂರ್ಯನ ಕಡಿಗೆ ಮುಕ ಮಾಡಿ ನಿಲ್ಲಿಸಿ ಹೇಳ್ತಾನೆ-

ಹಿ : ಒಂದು ದೇವತಾ ಹಾಡು ಹೇಳಿ ಪ್ರಾರ್ಥನಾ ಮಾಡಿರಿ ತಾಯ್ಗೋಳಾ

ಕ : ಅಂದ ಮಗ ಚಂದ್ರೋಜಿಕುಮಾರ.

|| ಪದ ||

ಶಂಕರ ಗುರುದೇವ ಅಭವಾ……..ಹರಯನ್ನ ಮಾದೇವಾ
ಶಂಕರ ಗುರುದೇವ ಅಭವಾ……..ಹರಯನ್ನ ಮಾದೇವಾ
ಕಿಂಕರನೊಳು ಬಿಂಕವ ತೊರೆದು
ಕಿಂಕರನೊಳು ನೀ ಬಿಂಕವ ತೊರೆದು
ಶಂಕಿಸದಲೆ ನೀ ಪೊರೆಯೋ ಭವಹರ
ಅತಿಹಿತನೆನುತಲಿ ನುತಿಸುವೆನು ದೇವ
ಅತಿಹಿತನೆನುತಲಿ ನುತಿಸುವೆನು ದೇವ
ಮತಿಕೊಡೊ ಗಿರೀಶಾ ಮಲ್ಲೇಶಾ
ಮತಿಕೊಡೋ ಹಾಲೇಶಾ
ಕರಗಿದ ಮನದಿಂದ ಚರಣವ ನಂಬಿದೆ
ಕರುಣಿಸಿ ಕಾಪಾಡೋ ಕೊಟ್ರೇಶಾ
ಕರುಣಿಸಿ ಕಾಪಾಡೋ ಅಜ್ಜಯ್ಯಾ….

ಕ : ದೇವರ ಪ್ರಾರ್ಥನಾ ಮಾಡಿ ಆ ಶಿವಜಾತ ಪಾರಿಜಾತ ಕಮಲದ ಹೂವು- ಮೂರೂನೂ ಕಣ್ಣಿನ ಮ್ಯಾಲೆ ತಿರುವಿಕೊಂಡು ತಲಿಮ್ಯಾಲೆ ಕೈಯೊಳಕೊಂಡು ಬಿಟ್ರು- ಆ ಏಳೂ ಮಂದಿ ತಾಯಿಗಳು.

ಹಿ : ಓಹೋ!

ಕ : ಆ ತಾಯ್ನೋರು ಕಣ್ಣು ಹೋಗಿ ಹನ್ನೆರಡು ವರ್ಷ ಆಗಿದ್ವು! ಸೂರ್ಯನ ಪ್ರಕಾಶ ಚಂದ್ರಾಮನ ಬೆಲಕು ಒಮ್ಮೆಗೇ ಬಿದ್ಹಂಗ ಅವರ ಕಣ್ಣುಗಳಿಗೆ ಬೆಳಕು ಬಂದವು.

ಹಿ : ತಾಯ್ನೋರಿಗೆ ಕಣ್ಣುಕೊಟ್ಟ ಪರಮಾತ್ಮ!

ಕ : ಕಣ್ಣು ಬಂದ ತಕ್ಷ್ಣಕ್ಕೆ ಮಗನಿಗೂ ಸೊಸಿಗೂ ನೋಡಿ ಅಪ್ಪಾ ಮಗನೇ ಚಂದೋಜಿಕುಮಾರಾ ಹ್ಯಾಗಿದೀ ನೀನು!

ಹಿ : ಆಹಾ!

ಕ : ನಮ್ಮ ಏಳೂ ಮಂದಿ ಮೊಲಿ ಹಾಲು ಕುಡುದು, ನಿನ್ನನ್ನ ಜೋಪಾನ ಮಾಡಿದ್ದಕ್ಕ ನೀನು ನಮ್ಮ ಕಣ್ಣು ತಂದು ಕೊಟ್ಯಪ್ಪಾ ಮಗನೇ!

ಹಿ : ಹೌದು!

ಕ : ತಾಯೀ, ಏನೂ ಚಿಂತಿ ಮಾಡಬ್ಯಾಡ್ರಿ ತಾಯೀ, ನಿಮ್ಮ ಕಡಿಗೆ ಒಂದು ಮಾತು ಹೇಳಾದೈತಿ, ತಾಯೀ.

ಹಿ : ಹೌದು.

ಕ : ತಾಯೀ, ಏನೂ ಚಿಂತಿ ಮಾಡಬ್ಯಾಡ್ರಿ ತಾಯೀ, ನಿಮ್ಮ ಕಡಿಗೆ ಒಂದು ಮಾತು ಹೇಳಾದೈತಿ ತಾಯೀ.

ಹಿ : ಯಾವ ಮಾತಪ್ಪ ಅದು?

ಕ : ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ನಮ್ಮ ತಂದಿ ಹತ್ರ ಹೋಗಿ ಸ್ವಲ್ಪ ಮಾತಾಡಿಸಿ ಬರ್ತೀನಿ, ಅಪ್ಪಣಿ ಕೊಡ್ತೀರಾ ಅಮ್ಮಾ?

ಹಿ : ಹೋಗಬ್ಯಾಡಪ್ಪಾ ವಿಘ್ನಾವತಿ ನಿನಿಗೆ ಮೋಸ ಮಾಡಿ ಅನಾಹುತ ಮಾಡ್ಯಾಳು!

ಕ : ತಾಯೀ ಆ ವಿಘ್ನಾವತಿಗೆ ನೋಡಿ ಬರಬೇಕೆಂಬ ಅಪೇಕ್ಷೆ ನಂದು.

ಹಿ : ಒಳ್ಳೇದು. ಲಗೂನ ಬರಬೇಕು ನೋಡಪ್ಪ

ಕ : ತಡ ಮಾಡದೆ ಬರುತೇನಿ, ಒಂದು ಅರ್ಧಗಂಟಿ ವಳಗೇ ಬರ್ತೀನಿ. -ಅಂತ್ಹೇಳಿ ಮಗ ತಾಯ್ನೋರನ್ನೂ ಕಾಳಾವತಿ ಮಡದೀನೂ ಗವಿಯೊಳಗs ಬಿಟ್ಟು ಆ ವಿಘ್ನಾವತಿ ರಾಕ್ಷಸೀ ಮರಣದ ಗಿಳಿ ಇರುವಂಥಾ ಉಕ್ಕಿನ ಪಂಜರ ತೊಗೊಂಡು

|| ಪದ ||

ಊರಾಗ ನಡುದಾನ ಮಗ…….ಹರಹರಯನ್ನ ಮಾದೇವ
ಚಿತ್ರೋಸೇನ ಮಹಾರಾಜಾ……ಹರಹರ ಮಾದೇವ
ಕಛೇರಿಯೊಳಗ ಕುಂತಾನ್ರೀ……ಶಿವಹರ ಮಾದೇವ.

ಕ : ತಂದೆ ಕುಂತಾನ ಕಛೇರಿಯಲ್ಲಿ; ಅಲ್ಲಿಗೆ ಬಂದ ಮಗ.

ಹಿ : ನಮೋ ನಮೋ ನಮಸ್ಕಾರ ಮಹಾರಾಜಾ, ಚಿತ್ರೋಸೇನ ಮಹಾಧೊರೀ.

ಕ : ಆಹಾ! ಈಗ ಬಂದೇನಪ್ಪಾ ಚಂದ್ರೋಜಿ?

ಹಿ : ಇವತ್ತು ಬರೋಣವಾಯಿತು ಮಹಾರಾಜಾ.

ಕ : ನನ್ನ ಮಡದಿ ತೌರೂರು ಅಮರಾವತಿಗೆ ಹೋಗಿ ಇವತ್ತು ಬರೋಣಾಯ್ತೇ?

ಹಿ : ಹೌದು ಧೊರೀ.

ಕ : ಅಲ್ಲಿಗೆ ಹೋಗಿ ಪತ್ರಕೊಟ್ಟು ಅಲ್ಲಿಂದೊಂದು ಕಾಗದ ತಂದೇನಪ್ಪಾ?

ಹಿ : ಆಹಾ!

ಕ : ತಂದೀನ್ರೀ ಮಹಾರಾಜಾ ತಂದೀನ್ರಿ ; ಅದನ್ನ ನಿಮ್ಮ ಮಡದಿ ಕೈಯಾಗ ಕೊಡಬೇಕಾಗಿದೆ.

ಹಿ : ಆಗಲಿ ಯಪ್ಪಾ ಅರಮನಿಗೆ ಹೋಗಾನು.

ಕ : ತಾಳಮೇಳ ಮಾಡಿಕೊಂತ ಬಾಜ ಬಜಂತ್ರಿಯೊಂದಿಗೆ ಮನಿಗೆ ಕರ್ಕೊಂಡು ಬರೋ ಕಾಲಕ್ಕೆ ವಿಘ್ನಾವತಿ ಅರಮನಿಯೊಳಗ ಮಲ್ಕೊಂಡಾಳ್ – ಮಂಚದ ಮ್ಯಾಲೆ.

ಹಿ : ಹೌದು.

ಕ : ನನ್ನ ವೈರಿ ಅಮರಾವತಿ ಪಟ್ಣಕ್ಕೆ ಹೋಗ್ಯಾನ. ತಂದಿ ಬ್ರಹ್ಮಸೇಕ, ತಾಯಿ ಕಮಲಾವತಿ, ಅಕ್ಕ ಅಘ್ನಾವತಿ ಮೂವರೂ ತಿಂದು ಬಿಟ್ಟಾರೆ ಅವನ್ನ.

ಹಿ : ಹೌದು.

ಕ : ಮೈಮ್ಯಾಲಿನ ಪೀಡಿ ಹೋಯ್ತು – ಅಂತ ಆನಂದವಾಗಿ ಅದಾಳ.

ಹಿ : ಹೌದು.

ಕ : ಬಜಂತ್ರಿ ಬರುವ ಶಬ್ದ ಕೇಳಿ ಏನು ಇದು ಗಲಾಟೆ ಆಗತೈತಿ! -ವಿಘ್ನಾವತಿ ಬಂದು ಕಮಾನು ಕಿಟಿನ್ಯಾಗ ನೋಡ್ತಾಳೇ…ಓಹೋ ಚಂದ್ರೋಜಿಕುಮಾರ ವೈರಿ….

ಹಿ : ನನ್ನ ವೈರೀ…

ಕ : ಅಯ್ಯೋ ನನ್ನ ವೈರಿ ಬಂದಾನಾ! ಏನು ಮಾಡಿ ಬಂದನೋ! ನಮ್ಮ ತಂದಿಗೆ ನಮ್ಮ ತಾಯಿಗೆ, ನಮ ಅಕ್ಕಗೆ ಏನು ಮಾಡಿ ಬಂದ್ನೋ ನೋಡಾನು- ಅಂತ್ಹೇಳಿ ನೀಲಾವತ್ತಿಗೆ ತಗದು ನೋಡ್ತಾಳೆ-

ಹಿ : ಆಹಾ!

ಕ : ಮೂವರಿಗೂ ಸಂಹಾರ ಮಾಡಿ ಬಂದಾನ ಅಯ್ಯೋ ಅಯ್ಯೋ (ರಾಗವಾಗಿ) ನನ್ನ ವೈರಿ ಗೆದ್ದು ಬಂದಾ….ಇವನಿಗೆ ಯಾವಾಗ ನಾನು ತುತ್ತು ಮಾಡಿ ನುಂಗಲೀ….

ಹಿ : (ರಾಗವಾಗಿ) ಹೌದೂ….

ಕ : ಅಂತ್ಹೇಳಿ ಕರಕರ ಹಲ್ಲು ಕಡೀತಾಳ-ವಿಘ್ನಾವತಿ!

ಹಿ : ಆಹಾ!

ಕ : ನೋಡೇ ಮಡದೀ ವಿಘ್ನಾ – ಹುಡುಗ ಚಂದ್ರೋಜಿಕುಮಾರ ನೀನು ಬರದುಕೊಟ್ಟ ಪತ್ರ ಹೋಗಿ ಕೊಟ್ಟು ನಿನ್ನ ತೌರುಮನಿಯಿಂದ ಒಂದು ಕ್ಷೇಮಲಾಭದ ಪತ್ರ ತಂದಾನಂತೆ! – ನೋಡು, ಓದುವಂತೆ ಚನ್ನಾಗಿ.

ಹಿ : ಆಹಾ!

ಕ : (ರಾಗವಾಗಿ) ಬರ್ರೀ ಒಳಗ-ಅಂತಾಹೇಳಿ….

ಹಿ : (ರಾಗವಾಗಿ) ಹಾ…

ಕ : (ರಾಗವಾಗಿ) ಕಾಗದಾ ಇಸಕೊಳ್ರೀ….ಏನು ಬರಹ ಬರದಾರೆ….ನೋಡೋನು….

ಹಿ : (ರಾಗವಾಗಿ) ಆಹಾ!

ಕ : (ರಾಗವಾಗಿ) ಒಳ್ಳೇದು ಮಡದೀ ಸಮಾಧಾನ….ಪರಾಕ್ರಮಿ ಮಗಾ,….ಕೊಡು ಆ ಕಾಗದಾ….

ಹಿ : (ರಾಗವಾಗಿ) ಹೌದೂ….

ಕ : ಚಿತ್ರೋಸೇನ್ ಮಹಾರಾಜಾ, ಎಲ್ಲೀದು ಕಾಗದ? ಏನು ಕಾಗದ? ಇದೇ ನೋಡ್ರಿ ಕಾಗದಾ- ಅಂತ ಗಿಳಿಯಿರೋ ಉಕ್ಕಿನ ಪಂಜರ ತೋರಿಸಿಬಿಟ್ಟ!-

ಹಿ : ಆಹಾ, ವಿಘ್ನಾವತಿ ಮರಣದ್ದು!

ಕ : ಫಕ್ಕನೆ ವಿಘ್ನಾವತಿ ನೋಡಿಬಿಟ್ಲು ! (ರಾಗವಾಗಿ) ಅದನ್ನ ಮರಣದ ಗಿಳಿ….ಆ ….ನನ್ನ ಮರಣದ ಗಿಳೀ….ಆ…ಮರಣಾ ತಂದಾನಾ….

ಹಿ : ಆಹಾ….

ಕ : ರಾಜಾ ಹೊಟ್ಟಿಶೂಲಿ, ತಡೀಲಾರೆ, ಮೊದಲು ಇಸಕೊಳ್ರೀ ಗಿಳೀ.

ಹಿ : ಆಹಾ!

ಕ : ಕೊಡ್ತಾನೆ ಮಡದೀ; ಈ ಮಗ ನಮ್ಮ ಮಾತ ಎಂದು ಎಂದಿಗೂ ಮೀರಾನಲ್ಲ! ಕೊಡಪ್ಪ ಅದು ಗಿಳೀನ ಕೊಟ್ಟು ಬಿಡು ಮಡದಿಗೆ ಬೇಕಂತೆ!

ಹಿ : ಆಹಾ!

ಕ : ಕೊಡೋದಕ್ಕಾಗಿ ತಂದೀನಿ ಮಹಾರಾಜಾ. ಒಂದು ಮಾತು-ನಿಮ್ಮ ಮಡದಿ ಹತ್ತಿರ ಇನ್ನೊಂದು ರೂಪ ಐತೆ, ಆ ರೂಪ ಬಯಲಿಗೆ ತಗದ್ರ ನಾನು ಗಿಳಿ ಕೊಡ್ತೀನಿ,-

ಹಿ : ಕೊಟ್ಟು ಬಿಡ್ತೀನಿ.

ಕ : ಮಡದೀ!

ಹಿ : (ರಾಗವಾಗಿ) ಹಾ…

ಕ : ನಿನ್ನ ಹತ್ರ ಇನ್ನೊಂದು ರೂಪ ಐನಂತಲ್ಲ?

ಹಿ : ಇಲ್ಲ ಮಹಾರಾಜಾ! ಸ್ತ್ರೀ ಹತ್ರ ಎರಡು ರೂಪ ಇರ್ತಾವೇನು?-

ಕ : ಒಂದೇ ರೂಪ ಇರೋದು. ಇದೇ ಒಂದು ರೂಪ ನನ್ನ ಹತ್ರನೂ ಇರೋದು.

ಹಿ : ಆಹಾ! ಒಂದೇ ರೂಪ!

ಕ : ಚಂದ್ರೋಜಿಕುಮಾರಾ. ಇದೇ ಒಂದು ರೂಪ ಇರೋದು ತನ್ನ ಹತ್ರ ಅಂತಾಳೆ ಮಡದಿ; ಬೇರೆ ರೂಪ ಇಲ್ಲಂತೆ!

ಹಿ : ಇಲ್ಲ?

ಕ : ಇಲ್ಲಂದ ಬಳಿಕ ಗಿಳಿಗೋಣು ಮುರೀತೀನಿ – ಅಂದ ಮಗ ಚಂದ್ರೋಜಿಕುಮಾರ!

ಹಿ : ಆಹಾ!

ಕ : ನಿಂದ್ರು ತೋರಿಸ್ತೀನಿ ಅಂತ್ಹೇಳಿ – ಬಜಾರದಾಗ ಬೈಲಿಗೆ ಬಂದು ಭೂಮಿಗೆ ಮಂಡಿಗ್ಗಾಲು ಊರಿ, ಮೂರು ಬಗಸಿ ಮಣ್ಣು ತಲಿ ಮೇಲೆ ತೂರಿಕೊಂಡ್ಲು – ಮಡದಿ. ತಕ್ಷ್ಣಕ್ಕೆ ಕಣ್ಣು ಬಂಡೀಗಾಲಿ, ಮೂಗು ಗುಂಬಿಕೆರಸಿ, ಹಲ್ಲು ಕುಂಟಿ ಕೂರ್ಗಿ ದಿಂಡು ಅಗಸಿಯಂಥಾ ಬಾಯಿ!- ಅದ್ಭುತ ರಾಕ್ಷಸಿಯಾಗಿ ನಿಂತುಬಿಟ್ಲು ವಿಘ್ನಾವತಿ!

ಹಿ : ಆಹಾ!

ಕ : ಪಕ್ಕನs ನೋಡಿಬಿಟ್ಟ ಚಿತ್ರೋಸೇನ ರಾಜ! ಅಲೇಲೇ ಹಿಡಂಬಿ ಅಂತ್ಹೇಳಿ ರಾಜ ದಿಕ್ಕೆಟ್ಟು ಓಡ್ತಾನೆ; ದಂಡು ದಿಕ್ಕಾ ಪಾಲಾಯ್ತು; ರೈತರು, ಪ್ರಜರು ಓಡ್ತಾ ಇದ್ದಾರೆ!

ಹಿ : ಆಹಾ!

ಕ : ಚಂದ್ರೋಜಿಕುಮಾರ ಒಬ್ಬನೇ ನಿಂತಾನೆ-ಎದುರಿಗೆ!

ಹಿ : ಧೈರ್ಯಶಾಲಿ!

ಕ : ಎಲೋ ಚಂದ್ರೋಜೀ, ನನ್ನ ರೂಪ ಬೈಲಿಗೆ ಕೆಡವಿದ್ಯಾ! ಒಳ್ಳೇದು,

ಹಿ : ನಿನಿಗೆ ಏನು ಮಾಡಿದ್ರೆ ಬಿಟ್ಟೇನು!

ಕ : ಅಂತ್ಹೇಳಿ ನುಂಗಲಿಕ್ಕೆ ಬರ್ತಾ ಐತಿ ಹಿಡಂಬಿ-

ಹಿ : ವಿಘ್ನಾವತಿ!

|| ಹಾಡು ||

ಗಿಳಿ ಗೋಣಾ ಮುರದಾನೈ……..
ರಾಕ್ಷಸಿ ಪ್ರಾಣಾ ಬಿಟ್ಟೈತಯ್ಯಾ…….ಹರಹರ ಮಾದೇವಾ
ರಾಕ್ಷಸಿ ಪ್ರಾಣಾ ಬಿಟ್ಟೈತೈ………ಗುರುವಿನ ಪಾದಾವಾ
: ಪ್ರಾಣ ಬಿಡ್ತು ಹಿಡಂಬ ವಿಘ್ವಾವತಿ! ಚಿತ್ರೋಸೇನ ಮಹಾರಾಜ ನೋಡಿದಾ

ಹಿ : ಆಹಾ!

ಕ : ಮಹಾರಾಯ ನಿನಗ ಯಾ ತಾಯಿ ಹಡದಿದ್ದಾಳು!- ಕುಮಾರಾ ಇಂಥಾ ಹಿಡಿಂಬ ಬಂದು ಈ ಮನಿಯಲ್ಲಿ ಸೇರಿಕೊಂಡಿತ್ತಲ್ಲ! ಇಂಥಾದನ್ನ ನಾನು ಮಡದಿ ಮಾಡಿಕೊಂಡು ಕಾಲ ಕಳೆದನಲ್ಲ!!

ಹಿ : ಹೌದು!

ಕ : ನೀನು ಬಂದು ಈ ರಾಕ್ಷಸಿನ ಬೈಲಿಗೆ ಕೆಡವಿದೆ; ಇಲ್ಲಂದ್ರೆ ನಮ್ಮ ಊರು ಎಲ್ಲಾ ಹಾಳಾಗಿ ಹೋಗುತ್ತಿತ್ತು! ಅಪ್ಪಾ ಯಾರು ನೀನು?

ಹಿ : ಯಾರು ನೀನು?

ಕ : ಯಾರಂಬೋದೇನು-ತಂದೇ! ನಾ ನಿಮ್ಮ ಮಗ, ಪದ್ಮಾವತಿ ಗರ್ಭದಲ್ಲಿ ಉದ್ಭವಿಸಿದ ಚಂದ್ರೋಜಿಕುಮಾರ, – ನಿನ್ನ ಮಗಾ

ಹಿ : ಹೌದು!

ಕ : ಈ ರಾಕ್ಷಸಿ ರೂಪಕ್ಕೆ ನೀನು ಮರುಳಾಗಿ ಏಳುಮಂದಿ ತಾಯ್ನೋರ್ನ ತಲಿ ಹೊಡಿಯಾಕ ಕೊಟ್ಟು ಕಳಿಸಿದ್ಯಾ?

ಹಿ : ಹೌದು ನಿಜಾ!

ಕ : ಗವಿಯೊಳಗೆ ತಾಯ್ನೋರು ಐದಾರೆ ಲಗೂ ಮಾಡಿ ನೀನೇನು ಬರ್ತೀಯೋ, ಈ ರಾಕ್ಷಸಿಗೆ ಮಾಡಿಧಂಗೆ ನಿನಗೊಂದು ಕೈ ತೋರಿಸ್ಲೋ- ಅಂದ ಮಗ!

ಹಿ : ಪರಾಕ್ರಮಿ ಮಗ!

ಕ : ಅಯ್ಯೋ ಅಯ್ಯೋ ಚಂದ್ರೋಜಿಕಾಮಾರ – ನನ್ನ ಮಗ! ಮಂತ್ರೀ ಮಂತ್ರೀ, ತಲಿ ಹೊಡದು ತರಲಾರದೆ ಪ್ರಾಣದಾನ ಮಾಡಿ ಬರೀ ಕಣ್ಣುಗಳನ್ನು ತಗೊಂಡು ಬಂದಿದ್ಯಾ?

ಹಿ : ಹೌದು ಮಹಾರಾಜ್ರೇ!

ಕ : ಒಳ್ಳೇದು ಮಾಡಿದಿ ನೀನು ಮಂತ್ರಿ! – ಅಂತ್ಹೇಳಿ ಜೀವದ ಮೇಲೆ ಖಬರು ಇಲ್ಲಧಂಗ ರಾಜ ಆ ಕಲ್ಲು ಗವಿಗೆ ಹೋಗ್ತಾನ!

ಹಿ : ಅಡವಿಗೆ!

ಕ : ಏಳು ಮಂದಿ ತಾಯ್ನೋರು-

ಹಿ : ಕಣ್ಣು ಬಂದಂಥಾ ಆ ಏಳು ಮಂದಿ ತಾಯ್ನೋರು-

ಕ : ತಮ್ಮ ಪತಿ ಕಲ್ಲಿನ ಗವಿಗೆ ಬಂದ ತಕ್ಷಣಕ್ಕೆ ಮಹಾರಾಜರ ಪಾದಕ್ಕೆ ಬಿದ್ದು ದುಃಖ ಮಾಡ್ತಾರೆ.

ಹಿ : ಆಹಾ!

ಕ : ಆ ಪ್ರಸಂಗದಲ್ಲಿ ಚಂದ್ರೋಜಿಕುಮಾರ ತನ್ನ ಮಾವ ತೋರಂಗಿ ಬಾವಾಗೆ ನೆನಸಿ, ಆ ಬಾವಾ ಕೊಟ್ಟಿದ್ದಂಥಾ ಮಂತ್ರದ ಹಳ್ಳ ಬಾವ್ಯಾಗ ಒಗದ.

ಹಿ : ಆಹಾ!

ಕ : ಒಗದ ತಕ್ಷಣಕ್ಕೆ ಅದನ್ನ ದೇವಕನ್ಯೇರು ನೋಡಿದ್ರು.

ಹಿ : ಹೌದು!

ಕ : ಆವಾಗ, ಹೆರಿಗೆ ಆದಾಗ ಕಣ್ಣು ಇಲ್ಲದ ಕವಾಜಿಗಳು ಹಡದ ಆ ಕೂಸುಗಳ ಒಗದಿದ್ರಲ್ಲ – ಅವು ಈಗ ದೊಡ್ಡವಾಗ್ಯಾವೆ. ಅವನ್ನ ಕರಕೊಂಡು ಬಂದು-

ಹಿ : ಏನಂತಾರೆ?

ಕ : ಅಮ್ಮಾ ಅತನಾವತಿ, ಮತನಾವತಿ, ರತನಾವತಿ, ಪೂಲಾವತಿ, ಸಯಾವತಿ, ಜಯಾವತಿ ತಾಯೇರಾ,

ಹಿ : ಏನ್ರಮ್ಮಾ?

ಕ : ನಿಮ್ಮ ಮಕ್ಕಳಿಗೆ ಕರಕೊಳ್ರಿ ; ಹೆಣ್ಣು ಮಕ್ಕಳನ್ನ ಹಡದು ಬಾವ್ಯಾಗೆ ಒಗದಿದ್ರಿ!

ಹಿ : ನಿಜಾ!

ಕ : ನಿಮ್ಮ ಮಕ್ಳನ್ನ ಜೋಪಾನ ಮಾಡಿ ತಂದೀವಿ – ಅಂತ್ಹೇಳಿ ಒಪ್ಪಿಸಿದ್ರು.

ಹಿ : ಆಹಾ!

ಕ : ಆ ದೇವಕನ್ನೇರಿಗೆ ಚಂದ್ರೋಜಿಕುಮಾರ ಉಡುಗೊರೆ ತೊಡುಗರೆ ಕೊಟ್ಟು-ತಾಯೀ ದೇವಕನ್ನೇರಾ, ನಮ್ಮ ಅಕ್ಕನೋರು ಕುಡಿಯುವಂಥ ಮೊಲೆಹಾಲಾ ನಾನು ಕುಡುದು ಬೆಳೆದು ಈ ಪ್ರಾಯಕ್ಕೆ ಬಂದು ವನವಾಸ ತೀರ್ಸಿ ಬಂದೀನಿ ನೋಡ್ರಿ; ನಮ್ಮ ಅಕ್ಕನೋರ್ನ ಜೋಪಾನ ಮಾಡಿ ತಂದು ನಮಿಗೆ ಒಪ್ಪಿಸಿದ್ದಕ್ಕೆ ನಿಮಗೆ ಸನ್ಮಾನ ಮಾಡಿ ನಮಸ್ಕಾರ ಮಾಡಿ ಕಳಿಸಿಕೊಡ್ತೀನಿ ಅಂತ್ಹೇಳಿ ಪಾತಾಳಕ್ಕೆ ಕಳಿಸಿದ.

ಹಿ : ಹೌದು.

ಕ : ಆ ಗವೀತಾಗ ಒಂದು ಪ್ರಸ್ತ ಮಾಡ್ಸಿ, ತಾಯಿನೋರಿಗೂ ತಂದಿಗೂ ಕರಕೊಂಡು ಚಿತ್ರಾವತಿ ಪಟ್ಣಕ್ಕ ಬಂದ-ಮಗ;

ಹಿ : ಶೂರಧೀರ!

ಕ : ತಗಡೂರು ಸಾಲ ಬಜಾರದಾಗಿರೋ ಬಣ್ಣದ ಛಾವಡಿಯಲ್ಲಿ ಪಟ್ಟಾಭಿಷೇಕ ಆಗೋ ವ್ಯಾಳ್ಯಾಕ್ಕೆ ಸರಿಯಾಗಿ ಅಕ್ಕಂಬೋ ರಾಕ್ಷಸಿ-ಕಮಲದ ಹೂವು ಎದಿಮ್ಯಾಲೆ ಬೆಳೆಸಿಕೊಂಡಿದಂಥಾಕಿ, ಶಿವಜಾತ ಪಾರಿಜಾತ ಹೂವು ಕಾಯುತಿದ್ದ ಹಿಡಂಬಿ ಏನು ಇತ್ತಲ್ಲ ಅದರ ಆರುತಿಂಗಳು ನಿದ್ದಿ ಮುಗುದು ಎಚ್ಚರಾತು. ಕನ್ನಡಿ ಹಳ್ಳಿನ ಗೋಡಿ ಮೇಲೆ ಬರದಂತಹ ಬರಹ ನೋಡಿ-

ಹಿ : ಏನಂತು?

ಕ : ಓಹೋ ತೋರಂಗಿ ಬಾವಾನ ಅಳಿಯನಾದಂಥ ಚಂದ್ರೋಜಿಕುಮಾರ ನನ್ನ ಎದಿ ಮೇಲೆ ಬೆಳೆದ ಹೂವ ಒಯ್ದಾನೆ! ಅವನ ಪರಾಕ್ರಮ ನೋಡಿ ಬರೋನಂತ್ಹೇಳಿ, ಅಂತರ ಮಾರ್ಗದಲ್ಲಿ ಬರುತೈತೆ-ಅದು, ರಾಕ್ಷಸಿ, ಹಾದಿವಳಗ ಬಾವಾನ ಮಠಕ್ಕ ಬಂದು-ತೋರಂಗಿ ಬಾವಾಜಿಗಳೇ ನಮಸ್ತೇ.

ಹಿ : ಶರಣಾರ್ಥಿ ಬಾರಮ್ಮಾ ತಾಯೀ.

ಕ : ಬಾವಾಜಿಗಳೇ ನಿಮ್ಮ ಅಳಿಯ ಯಾರು?

ಹಿ : ಎಲ್ಲಿ ಐದಾನೆ?

ಕ : ಆತ ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ಮಹಾರಾಜನ ಉತ್ತರಕ್ಕೆ ಹುಟ್ಟಿದ ಚಂದ್ರೋಜಿಕುಮಾರ; ಮಹಾ ಪರಾಕ್ರಮಿ!

ಹಿ : ಹೌದೆ?

ಕ : ಅಮ್ಮಾ ನೀನವನಿಗೆ ಜೋರು ಕುಲಮಿ ಮಾಡಿದ್ರೆ ನಿನ್ನ ಪ್ರಾಣ ಉಳಿಯೋದಿಲ್ಲ.

ಹಿ : ಹೌದು.

ಕ : ಇವತ್ತು ಅವನಿಗೆ ಪಟ್ತಾಭಿಷೇಕ ಐತಿ; ಆ ಊರಿಗೆ ಹೋಗು ನೀನು….ಅವನು ಹೇಳಿದ ಪ್ರಕಾರವಾಗಿ ಆ ಊರಿಗೆ ಕಾವಲಾಗಿರು; ನಿನಗೆ ಒಳ್ಳೇದಾಗತದೆ-ಅಂದ, ತೋರಂಗಿ ಬಾವಾ.

ಹಿ : ಹೌದು.

ಕ : ಅಕ್ಕಂಬೋ ರಾಕ್ಷಸಿ ಸೀದಾ ಚಿತ್ರಾವತಿ ಪಟ್ಣಕ್ಕೆ ಬಂತು; ಅದು ಅಂತರ ಮಾರ್ಗವಾಗಿ ಬರೋದ್ನ ಚಂದ್ರೋಜಿಕುಮಾರ ನೋಡಿದ.

ಹಿ : ಆಹಾ! ಬಾ ತಾಯಿ ಅಕ್ಕಂಬೋ ರಾಕ್ಷಸಿ!

ಕ : ಮಗನೇ!

ಹಿ : ಏನಮ್ಮಾ?

ಕ : ನೀನು ವೀರಾಧಿವೀರ, ಪಂಡಿತ, ಶೂರ, ಗಂಭೀರ! ನಿಮ್ಮ ಏಳು ಮಂದಿ ತಾಯ್ನೋರ ಕಣ್ಣಿನ ಸಲುವಾಗಿ ನನ್ನ ಎದಿ ಮೇಲೆ ಬೆಳೆದ ಹೂವ ತಂದು ಅವರಿಗೆ ಕಣ್ಣು ಪಡದಿ, ಅಂದ ಬಳಿಕ ನನಗೆ ಆನಂದ ಆಯ್ತು, ಒಳ್ಳೇದು.

ಹಿ : ಚಂದ್ರೋಜಿಕುಮಾರ ಆ ರಾಕ್ಷಸಿಗೆ ನಮಸ್ಕಾರ ಮಾಡಿದ.

ಕ : ಮಹಾರಾಜಾ ಇನ್ನು ಮುಂದೆ ನಿನ್ನ ಊರು ಕಾವಲು ಕಾಯ್ತೀನಿ-ಅಂತ್ಹೇಳಿ ಊರ ಮುಂದೆ ಹೋಗಿ ನಿತ್ಕೊಂಡು ಬಿಡ್ತು.

ಹಿ : ಆಹಾ!

ಕ : ತಾಯಿಗಳು ತಂದೆ ನಿಂತ್ಕೊಂಡು ಮಗನಿಗೆ ರಾಜ ಪಟ್ಟಾಭಿಷೇಕ ಮಾಡಿದ್ರು; ಕಾಳಾವತಿಗೆ ರಾಣಿಪಟ್ಟಾ ನೀಡಿದ್ರು.

ಹಿ : ಹೌದು!

ಕ : ಇಡೀ ದೇಶದ ರಾಜರೆಲ್ಲಾ ಚಂದ್ರೋಜಿಕುಮಾರ ರಾಜಗ ಕಪ್ಪಕಾಣಿಕೆ ತಂದು ಕೊಡ್ತಾ ಅದಾರೆ; ಎಲ್ಲಾರೂ ಸುಖಶಾಂತಿ ಸಂತೋಷವಾಗಿ ಅದಾರೆ, ವಿಘ್ನಾವತಿ ಕತಿ ಇಲ್ಲಿಗೆ ಮುಕ್ತಾಯ ಆಯ್ತು.

|| ಮಂಗಳ ||

ಶಂಕರಾ ಪಾರ್ವತಿ ಜಯಮಂಗಲ
ಶಂಕರಾ ಪಾರ್ವತಿ ಜಯಮಂಗಲ || ||

ಕಾಲಭಯದ ಮುನಿಬಾಲನ ಮುದದಿ
ಪಾಲಿಸು ದೇವಗಿರಿವಾಸ ಪಾಲಿಸು ಶಂಕರಾ
ಬಾಲಲೋಲಗೆ ಜಯಮಂಗಲಂ
ನಿಮ್ಮನ್ನು ಸ್ತುತಿಪೆನು ಪಾದಕೆ ನಮಿಪೆನು
ಶಂಕರ ಪಾರ್ವತಿ ಶಿವಭಗವಂತಗೆ ನಮಿಪೆನು
ಶಂಕರಾ ಪಾರ್ವತಿ ಜಯಮಂಗಳಂ.
ಜಯಾ ಜಯ ನಮಃ ಪಾರ್ವತೀ ಪತಿ ಹರಹರ ಮಹಾದೇವ