ಕ : ಅಂಬಾದೇವಿ

ಹಿ : ಹೌದು

ಕ : ಎಲೋ ರಾಮಾ

ಹಿ : ಹಾ

ಕ : ಇಡೀ ಜಗತ್ತಿನ ಪರಸಿಯೆಲ್ಲಾ ಬಂತು ನನ್ನ ಗುಡಿಗೆ – ಉಧೋ ಉಧೋ ಅಂತ.

ಹಿ : ನಿಜ

ಕ : ಬಂಕಾಪುರದ ಪ್ಯಾಟಿಯಲ್ಲಿ ಒಬ್ಬ ಭಕ್ತ ಬಂದಿಲ್ಲ

ಹಿ : ಹೌದು

ಕ : ಅವನು ಇದ್ದಲ್ಲಿಗೆ ಹೋಗಿ ನಾನು ಭಿಕ್ಷಾ ಮಾಡಿಕೊಂಡು ಬರ್ತೀನಿ.

ಹಿ : ಆಹಾ ಯಪ್ಪಾ

ಕ : ಅವನಿಗೆ ತುಂಬಾ ಬಡತನ

ಹಿ : ಹೌದು

ಕ : ಅವನಿಗೆ ತುಂಬಾ ಮಕ್ಕಳು ಐದಾವು

ಹಿ : ಹೌದು

ಕ : ಏಳು ಮಂದಿ ಹೆಣ್ಣು ಮಕ್ಕಳು, ಒಂಬತ್ತು ಮಂದಿ ಗಂಡು ಮಕ್ಕಳು.

ಹಿ : ಆಹಾ

ಕ : ಹದಿನಾರು ಮಂದಿ ಮಕ್ಕಳ್ನ ಕರ್ಕೊಂಡು ಬಡತಾನ ಸೋಸ್ತಿ ಅದಾನೆ, ಅದಕ್ಕೆ ಅವನು ಗುಡಿಗೆ ಬಂದಿಲ್ಲಾ

ಹಿ : ಆಹಾ

ಕ : ಅಕಸ್ಮಾತ್ ನೀನು ಅವನ ಹತ್ರ ಹೋದ್ರೆ

ಹಿ : ಹೌದು

ಕ : ನಿನಗೇನು ಅವನು ಭಿಕ್ಷಕ್ಕೆ ಕೊಡೋದಿಲ್ಲ

ಹಿ : ಏನೂ ಮಾಡೋದಿಲ್ಲ

ಕ : ಯದಕ್ಕೆ ಹೋಗ್ತಿ ಸುಮ್ಮನೆ ಹೋಗಬ್ಯಾಡ.

ಹಿ : ಹೌದು

ಕ : ಭಿಕ್ಷಾ ತರಬೇಕು, ಅವಮ್ದು ಶ್ರೀಮಂತಿಕೆ ತರಬೇಕು ಅಂತ ಹೋಗೋದಿಲ್ಲ ಅವನ ಗುಣ ಪರೀಕ್ಷೆ ಮಾಡ್ತೀನಿ.

ಹಿ : ಹಾ

ಕ : ಅವನಲ್ಲಿ ಭಕ್ತಿ ಚಲೋ ಇತ್ತು ಅವನಿಗೆ ಐಶ್ವರ್ಯ ಕೊಟ್ಟು ಬರ್ತೀನಿ, ಅವನತಾಗೆ ಕೆಟ್ಟ ಬುದ್ಧಿ ಕೆಟ್ಟ ಗುಣ ಇದ್ದರೆ,

ಹಿ: ಹಾ

ಕ : ಅವನ ಹುಟ್ಟೋ ಕೂಲಿಯ ಮ್ಯಾಗ

ಅಂಬಾದೇವಿ ಕಲ್ಲುಹಾಕಿ ಬರತೀನಾ….ಶಿವ ಹರಯನ್ನ ಮಾದೇವ
ಗುರುವಿನ ಪಾದಾ….

ಹಿ : ಹೋಗಿ ಬಾರಮ್ಮಾ

ಕ ; ತಾಯಿ ಜರತಾರಿ ಸೀರಿ ಜರತಾರಿ ಕುಬ್ಸ, ಹಣಿತುಂಬಾ ಬಂಡಾರ

ಹಿ : ಹೌದು

ಕ : ಮುತ್ತಿನ ಕಿರೀಟ ತೆಲಿಗೆ

ಹಿ : ಹಾ

ಕ : ಎಡಗೈಲಿ ಹಡ್ಲಗಿ, ಬಲಿಗೈಲಿ ದೀವಾಟಿ ಕೋಲು

ಹಿ : ಹೌದು

ಕ : ಕೊರಳಲ್ಲಿ ಕವಡಿ ಸರ ಹಾಕ್ಕೊಂಡ್ಲು
ಉದಾ ಅನ್ನುತಾ ನಡುದಾಳೇ….ಹರಯನ್ನ ಮಾದೇವ
ಉದಾ ಅಂತಾ ನಡುದಾಳೇ….ಹರಯನ್ನ ಮಾದೇವ
ಆಹಾ ಉಧೋ ಉಧೋ ಅಂತ್ಹೇಳಿ ಹನ್ನೆರಡು ಗಾವುದ ನೆಲ ನೆಡಕೊಂತ ಬರಬೇಕಾದ್ರೆ-

ಹಿ : ಹೌದು

ಕ : ಆ ಬಡವ ಊರ ಮುಂದ್ಲ ಗುದುಸಲದಾಗ ಒಕ್ಕಂತೈತಿ ಹದಿನಾರು ಮಂದಿ ಮಕ್ಕಳು ಕೂಳಿಗಿ ಕೂಳು ನೀರಿಗೆ ನೀರಿ.

ಹಿ : ಹೌದು

ಕ : ಊರಾಗಳ ಮಂದಿ ಗೌಡ್ರು, ಶಾನುಭೋರು, ಛೇರ್ಮನ್ನರು, ಹಣಕಾರು, ಬಣಕಾರು

ಹಿ : ಆಹಾ

ಕ : ಲೇ ತಮ್ಮಾ ನಮ್ಮೂರು ಬಡವನ ಬಡತನ ಬಹಳ ದಿವಸಾತು ನೋಡಾಕ

ಹಿ : ಹೌದು

ಕ : ಇದು ನೋಡ್ಬಾರದು ಅಂತ್ಹೇಳಿ ಎಲ್ಲಾರು ಕೂಡಿಕೊಂಡು ಹೊಲ ಕೊಟ್ಟು ಬಿಟ್ರು ಅವನಿಗೆ

ಹಿ : ಹಾ

ಕ : ಎಷ್ಟು-ಮೂರು ಕೂರ್ಗಿ

ಹಿ : ಹೌದು

ಕ : ಹನ್ನೆರಡು ಎಕ್ರಿ

ಹಿ : ಹಾ

ಕ : ಎಲ್ಡು ಎತ್ತು-ಬೀಜದೆತ್ತು ಕೊಟ್ಟು ಬಿಟ್ರು

ಹಿ : ಹೌದು

ಕ : ಆವತ್ತು ಮಂಗಳವಾರ ಬೀಜಾ ಬಿತ್ತಾಕ ಹೊಲದಾಗ ಬಂದ

ಹಿ : ಹೌದೇ

ಕ : ಪುಣ್ಯಾತ್ಮರು ಹೊಲ ಕೊಟ್ಟಾರೇ…..
ಬಿತ್ತಿ ಊಟ ಮಾಡ್ಬೇಕು
ಬೆಳಿ ತೆಗಿಬೇಕು ಅಂತ್ಹೇಳಿ
ಹೊಲದಾಗ ಬಂದು ಉಧೋ ಉಧೋ ಅಂತ ಬೀಜ ಹಾಕಿದ.

ಹಿ : ಹೌದು

ಕ : ಅವನ ಮನಿಯಾಗ ವಿಧಿ ಬಾಳ್ವಿ ಮಾಡಹತ್ತಿ ಹನ್ನೆರಡು ವರ್ಷಾಗೇತಿ ಹುಟ್ಟೋದು ಹುಟ್ಟಾಂಗಿಲ್ಲ, ನಂಬೋದು ನಂಬಂಗಿಲ್ಲ.

ಹಿ : ಹೌದು

ಕ : ಅವತ್ತು ಬಡವ ಬೀಜ ಬಿತ್ತಿಗೊಂಡು ಬರಾಕು

ಹಿ : ಹಾ

ಕ : ವಿಧಿಬಂದು ಹೊಲದಾಗ ಬೀಜ ಎಲ್ಲಾ ಅರಿಸಿ ಬಿಟ್ಟಾಳ

ಹಿ : ತಿಂದ್ಲು

ಕ : ಏನೇನು ಬೆಳೆದಿಲ್ಲ

ಹಿ : ಹೌದು

ಕ : ಬರೇ ಬೀಜಮ್ ಹ್ಯಾಂಗೆ-ಕರ್ಕಿ, ಬಾದಿ, ಗಿಡಗಂಟಿ ಬೆಳದೈತಿ

ಹಿ : ಹೌದು

ಕ : ಆ ವಿಧಿ ಕಣ್ಣು ತಪ್ಪಿ ಎಲ್ಲಿ ಬಿಟ್ಟಿದ್ಲು ಅಲ್ಲಲ್ಲಿ ಒಂದು ಬೀಜ ಬಿದ್ದದ್ದು

ಹಿ : ಹೌದು

ಕ : ಮಳಕ್ಕೆ ಎಳ್ಡು ಮಳಕ್ಕೆ ಒಂದು ದಂಟು ನಿಂತಾವ

ಹಿ : ಹೌದು

ಕ : ಬರೇ ಬಾದಿ, ಗಿಡಗಂಟಿ ಬೆಳದೈತೆ

ಹಿ : ಹೌದು

ಕ : ಬಡವ ಕಳೇವು ತಕ್ಕಂತಾ ಹೊಲದಾಗ ಕುಂದ್ರಬೇಕಾದ್ರೆ-
ಆದಿಶಕ್ತಿ ಬಂದಾಳ……..ಹರಯನ್ನ ಮಾದೇವಾ
ಅಂಬಾದೇವಿ ಬಂದಾಳ………ಹರಯನ್ನ ಮಾದೇವಾ
ಬಂದು ಹೊಲದಾಗ ನಿಂತಾಳ ಉಧೋ………ಶಿವ ಹರಯನ್ನ ಮಾದೇವ
ಉಧೋ ಶಬ್ದಾ ಇಟ್ಟಾಳೋ……..ಶಿವಯನ್ನ ಮಾದೇವ
ಉಧೋ ಶಬ್ದ ಬರಬೇಕಾದ್ರೆ………ಹರಯನ್ನ ಮಾದೇವ
ದೇವಿ ಪಾದಕ್ಕೆ ಬಿದ್ದಾನೆ…….ಶಿವಹರಯನ್ನ ಮಾದೇವ

ಕ : ಉಧೋ ಅಂತಾ ಬಂದು ನದೋ ಹೊಲದಾಗ ನಿಲ್ಲಬೇಕಾದ್ರೆ ದೇವಿ ಪಾದಕ್ಕೆ ಬಡವ ನಮಸ್ಕಾರ ಮಾಡಿದ.

ಹಿ : ಓಹೋ

ಕ : ಬಾ ತಾಯಿ ನನ್ನ ಮನಿದೇವರು, ಆದಿಶಕ್ತಿ ಯಲ್ಲಮ್ಮ ಎಲ್ಲಾರ ಹೊಲಗಳು ಬೆಳದು ಬಿಟ್ಟಾವ, ಕಾಳು ಆಗ್ಯಾವೆ, ಬೆಳಸಿ ಆಗ್ಯಾವೆ

ಹಿ : ಹೌದು

ಕ : ಅವ್ರು ಎಲ್ಲಾ ಹೊಲ ಬಿಟ್ಟು ನನ್ನ ಹೊಲದಾಗ ಬಂದೀ-ಬರೇ ಕರ್ಕಿ ಐತೆಲ್ಲಾ

ಹಿ : ಹಾ ಏನು ಕೊಡ್ಲಿ ದೇವಿ…..

ಕ : ಆಹಾ ಮಗನೇ ಎಲ್ಲಾರ ಹೊಲಕ್ಕೆ ಹೋಗಾಕ ಬಂದಿಲ್ಲ ನಿನ್ನ ಹೊಲಕ್ಕ ಬರಬೇಕು ಅಂತಾ ಬಂದೀನಿ ನಿನ್ನ ಹೊಲದಾಗ ಬಂದೀನಿ ನನಿಗೇನು ಬೇಕಾಗಿಲ್ಲ.

ಹಿ : ಹೌದು

ಕ : ಐದು ತೆನಿ ಕೊಟ್ಟುಬಿಟ್ರೆ ಊಟಾ ಮಾಡ್ತೀನಿ.

ಹಿ : ಓಹೋ

ಕ : ಅಂಬಾ ಐದು ತೆನಿ ಕೇಳ್ತೀದಿ

ಹಿ : ಹೌದು

ಕ : ಮೂರು ಕೂರ್ಗಿ ಹನ್ನೆರಡೆಕ್ರಿ ಹೊಲ ಇರದಾಗ ಒಂದು ತೆನಿ ಎಲ್ಯಾನ ಐತೆಂಗ ನೋಡಮ್ಮ

ಹಿ : ಓ

ಕ : ಒಂದು ತೆನಿ ಇದ್ದರೆ ನೀನು ಮಾಡಿದ್ದ ಮಾಫಿ

ಹಿ : ಹಾ

ಕ : ತೆನಿ ಕಾಣ್ವಲ್ಲವು

ಹಿ : ಹೌದು

ಕ : ಈಗೇನೋ ಬಂದೀನಿ ಹಂಗs ಹೋಗಲಾರೆ ಹೊಲದಾಗ

ಹಿ : ಹಾ

ಕ : ಸ್ವಲ್ಪ ನೀರನ್ನ ಕುಡುಸು ನೀರು ಕುಡುದು ಹೋಗ್ತೀನಿ

ಹಿ : ಆಹಾ

ಕ : ಅನ್ನಕ ದರಿದ್ರ ಐತಮ್ಮ

ಹಿ : ಹೌದು

ಕ : ನೀರಿಗೇನು ತಾಪತ್ರ

ಹಿ : ಹಾ

ಕ : ಎಲ್ಲಾದ್ರು ನೀರು ತಂದು ಕುಡಸ್ತೀನಿ ಅಂತ್ಹೇಳಿ ಒಂದು ಬನ್ನಿ ಮರ ಇತ್ತು, ಆ ಬನ್ನಿ ಮರಕ್ಕೆ ಕಂಬ್ಬಿ ಗದ್ಗಿ ಮಾಡಿದs

ಹಿ : ಹೌದು

ಕ : ಆ ದೇವಿಗೆ ಕುಂದ್ರಿಸಿ ಪಾದಕ್ಕೆ ಬಿದ್ದ

ಹಿ : ಹಾ

ಕ : ಕೊದ ತೊಗೊಂಡು ಹೊಳಿಗೆ

ಹಿ : ಹಾ

ಕ : ನೀರು ತರಾಕ ನಡುದಾನಾ…….ಹರಯನ್ನ ಮಾದೇವ
ನೀರು ತರಾಕ ನಡುದಾನಾ…….ಹರಯನ್ನ ಮಾದೇವ
ಒಂದು ಮೈಲು ಬರುತಾನ……..ಹರಯನ್ನ ಮಾದೇವ
ಒಂದು ಮೈಲು ಬಂದಾನ……….ಹರಯನ್ನ ಮಾದೇವ
ಬಡವಾ ಹೊಳಿಯಾಗ ಇಳುದಾನ…….ಹರಯನ್ನ ಮಾದೇವ
ಕೊಡ ತುಂಬಾ ನೀರು ತಂದಾನ…….ಹರಯನ್ನ ಮಾದೇವ
ಆಹಾ ಮೀಸಲು ನೀರು ಹಿಡುದಾ…….ಹರಯನ್ನ ಮಾದೇವ
ಆಹಾ ಮೀಸಲು ನೀರು ಇಟ್ಟಾನ…….ಹರಯನ್ನ ಮಾದೇವ

ಕ : ಆಹಾ ಹೊಳಿಯಾಗ ಬಂದು ಕೈಕಾಲು ಮುಖ ತೊಳ್ಕೊಂಡು ಕೊಡ ತುಂಬಾ ಮೀಸಲು ನೀರು ತೊಗೊಂಡು

ಹಿ : ಹೌದು

ಕ : ಅಂಬಾದೇವಿ ಬಂದಾಳ ನೀರು ಕುಡುಸ್ಬೇಕು ಅಂತ್ಹೇಳಿ, ಕೊಡ ಹೊತ್ಗೊಂಡು ಓಡೋಡಿ ಬರ್ತಾನೆ.

ಹಿ : ಹಾ

ಕ : ಹೊಲದಾಗ ಅಂಬಾದೇವಿ ನೋಡ್ತಾಳೆ, ಅಡಿವಿದ್ಹಾಂಗ ಐತಿ ಹೊಲ

ಹಿ : ಹೌದು

ಕ : ಸುತ್ಲೂ ಹೊಲ, ಇವನ ಭಕ್ತಿ ನೋಡಾಕ ಬಂದೀನಿ ಇವನಲ್ಲಿ ಭಕ್ತಿ ಹ್ಯಾಂಗೈತಿ ನೋಡ್ಬೇಕು, ಬಂಡಾರ ಉಗ್ಗಿ ವರವ ಕೊಟ್ಟು ನೋಡ್ಬೇಕು ಇವನ ಗುಣ

ಹಿ : ಹಾ

ಕ : ಉಭೋ ಅಂತ ಬಂಡಾರ ಉಗ್ಗಿ ಬಿಟ್ಲು.

ಹಿ : ಹೌದು

ಕ : ಹೊಲದಾಗ ಬಂಡಾರ ಉಗ್ಗಿದ ತಕ್ಷಣಕ್ಕೆ ಶಿವನ ಮಗಳು ರೇಣುಕಾ ಮಾಯಾಕಾರ್ತಿ,

ಹಿ : ಹಾ

ಕ : “ಎಂಥಾ ಹೊಲ ಬೆಳಿಸ್ಯಾಳ…..ಹರಯನ್ನ ಮಾದೇವ
ಹೊಲದ ತುಂಬಾ ತೆನಿಗಳೇ…….ಶಿವಹರ ಮಾದೇವ
ಸೇರು, ಒಂದೊಂದು ತೆನಿ-ಸೇರು, ಅಚ್ಚೇರು, ಮೂರು ಪಾವು”

ಹಿ : ಓಹೋ

ಕ : ಒಂದೊಂದು ತೆನಿಯಾಗ ಕಾಳು ಉದುರಿದ್ರೆ ಸೇರು, ಅಚ್ಚೇರು, ಮೂರು ಪಾವು.

ಹಿ : ಹಾ

ಕ : ಬೆಳದಿಂಗಳು ಬಿದ್ಹಾಂಗಾತೇಗಿ ಹೊಲ ತೊಟ್ಲ ತೂಗತೈತಿ

ಹಿ : ಹಾ

ಕ : ಹೊಲದ ಬೆಳಿಸಿ ಬಡವ ಬಂದು ನೋಡ್ತಾನೆ ಹೊಲದ ಗುರ್ತೇ ಸಿಗವಲ್ಲದು.

ಹಿ : ಓಹೋ

ಕ : ಅಬಾಬಾ ಇದು ಯಾರ ಹೊಲ ಇದ್ದೀತಪಾ, ಏನು ಹೊಲ ಬೆಳದೈತಿ.

ಹಿ : ಹಾ

ಕ : ಏನು ಗೌಡ್ರುದೋ, ಶಾನುಭೋಗರದೋ, ಹಣಕಾರದೋ, ಛೇರ್ಮನ್ನರದೋ

ಹಿ : ಹೌದು

ಕ : ಎಲ್ಲಿ ನಿಂತಲ್ಲೇ ತೆನಿ ಮುರಿಯಾಕ ಬಂದೀ ಅಂತ್ಹೇಳಿ ಹೊಡದು ಗಿಡದಾರು.

ಹಿ : ಹಾ

ಕ : ನನ್ನ ಹೊಲ ಬರೇ ಅಡಿವಿ ಇದ್ಹಾಂಗ ಕರ್ಕಿ ಬೆಳದಿತ್ತು ಹೋಗ್ತೀನಿ.

ಹಿ : ಹೌದು

ಕ : ಮುಂದಿದ್ದೀತು ಅಂತ್ಹೇಳಿ ಹೋಗ್ತಾನ

ಹಿ : ಹಾ

ಕ : ಅಂಬಾದೇವಿ ನೋಡಿದ್ಲು ಯಾಕೋ ಬಡವಾ

ಹಿ : ಏನಮ್ಮಾ

ಕ : ನಿನ್ನ ಹೊಲ ಬಿಟ್ಟು ಎಲ್ಲಿ ಹೋಗ್ತಿ ಬಾ ಮಗನೇ

ಹಿ : ನನ್ನ ಹೊಲ ಇಂಥಾದ್ದೆ

ಕ : ಓಹೋ ದೇವಿಗೆ ನೋಡಿದಾ-ನಡೋ ಹೊಲದಾಗ ನಿಂತಾಳ ಅಮ್ಮ

ಹಿ : ಹೌದು

ಕ : ಇಂಥಾ ಹೊಲ ನನಿಗಿದ್ರೆ ಬಡವ ಅಂತಾ ಯಾರಂತಾರ ದೇವಿ ಹೊಲ ನಂದಲ್ಲೇ ಯವ್ವಾ ಹೊಲಬಿಟ್ಟು ಕಡೀಗೆ ಬಾ ಆ ಹೊಲದಾರು ಬಂದು ನಿನಿಗೆ ಸಿಟ್ಟು ಮಾಡ್ಯಾರು ನನಿಗೆ ಹೊಡದಾರು…..

ಹಿ : ಹೌದು

ಕ : ಇಲ್ಲಪ್ಪಾ ಮಗನೆ ನಿನ್ನ ಭಕ್ತಿಗೆ ನಾನು ಬಂಡಾರ ಉಗ್ಗೇನಿ, ಬಾ ನಿನ್ನ ಹೊಲದ ಗುರ್ತಾ ತೋರ್ಸತೀನಿ.

ಹಿ : ಓಹೋ

ಕ : ಹಾಸಿದ ಕಂಬಳಿ ಕೋರಿ ನೋಡಾ…….ಹರಯನ್ನ ಮಾದೇವ
ಆಹಾ ಬನ್ನಿಮರ ನೋಡಾ…….ಹರಯನ್ನ ಮಾದೇವ
ಏನೋ ಹೋಗಿ ನೋಡೋ ಮರ………ಹರಯನ್ನ ಮಾದೇವ

ಕ : ಆಹಾ ಗುರ್ತು ನೋಡಿದ ತಕ್ಷಣ ದೇವಿ ಪಾದಕ ಬಿದ್ದ – ಬಡತನ ಬೈಲು ಮಾಡಿದಿ

ಹಿ : ನಿಜಾ

ಕ : ಸಾಯೋವರಿಗು ಕುಂತು ಉಂಡ್ರೂ ಸವಿಯೋದಿಲ್ಲ

ಹಿ : ಹಾ

ಕ : ಈಗೇನು ಕೊಡ್ಲಿ ಅವ್ವಾ

ಹಿ : ಹಾ

ಕ : ಏನೂ ಬ್ಯಾಡ, ನಾನು ಕೊಟ್ಟದ್ದು ನಾನು ತೊಗೊಂಡು ಏನು ಮಾಡ್ಲಿ, ಐದು ತೆನಿ ಮರ್ಕೊಂಡು ಬಾ ಊಟ ಮಾಡ್ತೀನಿ, ನೀರು ಕುಡೀತೀನಿ. ಇನ್ನು ಹೋಗ ಕಾಲಕ್ಕೆ ಸ್ವಲ್ಪ ಬಂಡಾರ ಉಗ್ಗಿ ನಿನಿಗೆ ಐಶ್ಚರ್ಯ ಕೊಡ್ತೀನಿ.

ಹಿ : ಓಹೋ

ಕ : ಆಗಲಿ ವರಕೊಟ್ಟ ದೇವರಿಗೆ ಶಿರ ಕೊಡಬೇಕು, ನಿನಿಗೆ ಕೊಟ್ರೆ ನಮ್ಮಂದೇನು ಗಂಟು ಹೋಗಾದಿಲ್ಲ

ಹಿ : ಆಹಾ

ಕ : ಮುರ್ಕೊಂಡು ಬರ್ತೀನಿ ಚಲೋವ ಅಂತ ಹೋಗ್ತಾನೆ

ಹಿ : ಒಹೋ

ಕ : ಅಬಾಬಾ ಏನು ಹೊಲ ಬೆಳದೈತಿ, ಒಂದೊಂದು ತೆನಿ ಹಿಡದು ನೋಡ್ತಾನೆ- ಸೇರು, ಅಚ್ಚೇರು, ಮೂರು ಪಾವು.

ಹಿ : ಓಹೋ

ಕ : ಆ ನಾಕೂ ತಿರುಗಿ ನೋಡ್ತಾನೆ

ಹಿ : ಹೌದು

ಕ : ಎಲ್ಲೆಲ್ಲಿ ಒಂದು ಸಣ್ಣದು ಅನ್ನ ತಕ್ಕಂತಾದೆ ಇಲ್ಲ.

ಹಿ : ತೆನಿ ಇಲ್ಲ

ಕ : ಅಲ್ಲಾ

ಹಿ : ಹೌದು

ಕ : ಒಂದೇ ರೀತಿ ಸೇರು, ಅಚ್ಚೇರು, ಮೂರು ಪಾವು ಕಾಳು ಉದರತಾವು ತೆನಿಯಾಗ, ಹೊಲ ಎಲ್ಲಾ ತಿರುಗಿ ನೋಡಿದ್ರು ಒಂದು ಸಣ್ಣದು ಇಲ್ಲ.

ಇಂಥಾ ತೆನಿ ಹ್ಯಾಂಗ ಮುರಿಲೀ ನಾನೂ…….ಶಿವಯನ್ನ ಮಾದೇವಾ
ಇಂಥಾ ಬೆಳೆಸಿ ಹ್ಯಾಂಗ ಮುರೀಲೇ……..ಹರಯನ್ನ ದೇವಾ
ಇಂಥಾ ತೆನಿ ಮುರಿದಾರ ನಾನೂ……..ಶಿವ ಹರಯನ್ನ ದೇವಾ
ಒಂದು ಸೇರು ಕಾಳು ಹೋಗ್ತಾವಾ…….ಹರಯನ್ನ ಮಾದೇವ

ಕ : ಆಹಾ ಇಂಥಾ ಬೆಳಸಿ ಹ್ಯಾಂಗ ಮುರಿಲೀ….

ಹಿ : ಓಹೋ

ಕ : ಒಂದು ತೆನಿ ಮುರಿಲೀ ಒಂದು ಸೇರು ಕಾಳು ಹೊಕ್ಕಾವು, ಇಂಥಾ ಐದು ಮುರುದು ಯಲ್ಲಮ್ಮಗೆ ಕೊಟ್ರೆ ಐದು ಸೇರು ಕಾಳು ಹೊಕ್ಕಾವು. ನನ್ನ ಗತಿ ಹ್ಯಾಂಗ ಇವಳಮ್ಮನ ಉಚ್ಚಂಗಿ ಯಲ್ಲಮ್ಮನಾಡ.

ಹಿ : ಹೌದು

ಕ : ಈ ಯಮ್ಮಗ ಕೊಡಂಥ ಐದು ತೆನಿ ಮನಿಗೆ ಒಯ್ದುಬಿಟ್ರೆ ಹದಿನಾರು ಮಂದಿ ಮಕ್ಕಳಿಗೆಲ್ಲಾ ಊಟ ಆಕೈತಿ

ಹಿ : ಆಗತೈತಿ, ಒಪ್ಪೊತ್ತಿಂದು

ಕ : ಇದರಾಗ ಮುಕ್ಕಾ ಮಾಡ್ಲೇಬಾರ್ದು.

ಹಿ : ಹೌದು

ಕ : ಮಗ್ಗಲಿಗೆ ಒಂದು ಹೊಲ ಇತ್ತು

ಹಿ : ಹಾ

ಕ : ಅದರಾಗ ಹೊಕ್ಕೊಂಡು ಐದು ತೆನಿ ಕಳವು ಮಾಡ್ಕೊಂಡು ಬಂದಾನಾ ದೇವಿ ಪಡ್ಲಿಗ್ಯಾಗ ಐದು ತೆನಿ ನೀಡಿದs

ಹಿ : ಹೌದು

ಕ : ಅಂಬಾದೇವಿ ನೋಡ್ತಾಳೆ ಒಲಿದರೆ ಮಾಯಿ, ಒಲಿದಿದ್ರೆ ವಿಧಿ ಮಾಯಿ

ಹಿ : ಹಾ

ಕ : ಒಲಿದರೆ ತುಕ್ಕಮ್ಮ ಒಲಿದಿದ್ದರೆ ತೆಲಿ ಹಿಡದು ತಿಕ್ಕಮ್ಮಾ

ಹಿ : ನಿಜ

ಕ : ನಾನು ಬಂಡಾರ ಉಗ್ಗಿ ಬೆಳಿಸಿದ ಬಿಳೇ ಜ್ವಾಳದ ಬೆಳಿಸಿ

ಹಿ : ಆ

ಕ : ನೀನು ಹೈಬ್ರಿಡ್ ಬೆಳಿ ಸಣ್ವ ತಂದಿ ಎಲ್ಲಿ ತಂದ್ಯೋ

ಹಿ : ತರಲಿಲ್ಲಮ್ಮಾ

ಕ : ಅವನ ಎದಿಗೆ ಗುಂಡು ಬಡದಂಗ ಆತು

ಹಿ : ಆಹಾ

ಕ : ಈ ಮಾತು ಖರೇವು ಅಮ್ಮಾ

ಹಿ : ನಿಜ

ಕ : ಮೂರು ಮೂಲಿ ಎರಿ ಭೂಮಿ ಐತೆ, ಒಂದು ಮೂಲಿ ಮಸಾರಿ ಐತೆ.

ಹಿ : ಹಾ

ಕ : ಮಸಾರಿಗೆ ಗೊಬ್ಬರ ಹಾಕಿಲ್ಲ ಮುಂಗಾರಿ ಬಿತ್ತೀನಿ.

ಹಿ : ಹೌದು

ಕ : ಕರೀ ಭೂಮಿಗೆ ಗೊಬ್ರ ಹಾಕಿ ಬಿಳಿಜೋಳ ಬಿತ್ತೀನಿ ದೊಡ್ದ ಬೆಳೆಸಿ ಆಗ್ಯಾವು

ಹಿ : ಹಾ

ಕ : ತಾಯಿ ಉಣ್ಣೋದಿಲ್ಲ ಅಲಾಕ ಮಾಡ್ತಾಳಂತ್ಹೇಳಿ ನನ್ನ ಹೊಲದಾಗ ತಂದೀನಿ ಉಣ್ಣು

ಹಿ : ತೊಗೋ

ಕ : ಯಪ್ಪಾ ನೀನು ಕಳ್ಳಂತ್ಹೇಳಿ ನನ್ನ ಕಳ್ಳಿ ಮಾಡ್ಬ್ಯಾಡ ನಿನ್ನ ಹೊಲದಾಗಿನ ಬೆಳಿಸಿ ಅಲ್ಲೋ ಮಗನೇ ಕಳುವು ಮಾಡಿದ ಬೆಳಿಸಿ ನಾನು ಉಣ್ಣೋದಿಲ್ಲ

ಹಿ : ಆಹಾ

ಕ : ಈ ಯಮ್ಮ ಎಷ್ಟು ಹೇಳಿದ್ರು ತಿಳಿವಲ್ಲದಲ್ಲ.

ಹಿ : ನಿಜ

ಕ : ಅಮ್ಮಾ ಕಳುವು ಮಾಡೀನ್ಯಾ

ಹಿ : ಹೌದು ಕಳುವು.

ಕ : ನಿನ್ನ ಪಾದ ಸಾಕ್ಷಿ ಯಲ್ಲಮ್ಮಾ………ಹರಯನ್ನ ಮಾದೇವ
ನಿನ್ನ ಪರಶುರಾಮನ ತಾಯೀ ತಾಯೇ……ಹರಯನ್ನ ಮಾದೇವ
ಆ ಪರಶುರಾಮನ ಸಾಕ್ಷಿ, ದೀವಟಿಗೆ ಕೋಲು ಸಾಕ್ಷಿ, ಹಡ್ಲಿಗಿ ಸಾಕ್ಷಿ

ಹಿ : ಓ ಐದು

ಕ : ಐದು ಬೆಳಿಸಿ ಕೊಡಾಕ ಆಣಿ ಪ್ರಮಾಣ

ಹಿ : ಭಾಷಿ ಮಾಡಿದ ಅವನು

ಕ : ಬೇಕಾದ್ದು ಭಾಷಿ ಮಾಡು ನನ್ನ ಮನಸ್ಸು ಒಪ್ಪಾದಿಲ್ಲ, ನಿನ್ನ ಹೊಲದಾನ ಬೆಳಸಿ ಅಲ್ಲ.

ಹಿ : ಓಹೋ

ಕ : ಇವಳಮ್ಮನ ಎಷ್ಟು ಪ್ರಮಾಣ ಭಾಷಿ ಹೇಳಿದ್ರು ಒಪ್ಪುವಲ್ಲು ಉಣ್ಣುವಲ್ಲು.

ಹಿ : ನಿಜ

ಕ : ಸ್ವಲ್ಪ ಸಿಟ್ಟಿಲ್ಲೆ ಹೇಳಿದರೆ ಎದ್ದು ಗುಡಿಗೆ ಹೋಗ್ತಾಳೆ

ಹಿ : ಹೌದು

ಕ : ಮೆಲ್ಲಕ ಹೇಳಿದ್ರೆ ಹೊಲ್ದಾಗ ಹೊಕ್ಕೊಂಡು ತೆನಿ ಮುರ್ಕೊಂಡು ಹೊಕ್ಕಾಳ.

ಹಿ : ಹಾ

ಕ : ಈಕಿ ಕೈಲೆ ಏನೂ ಆಗಾದಿಲ್ಲ

ಹಿ : ಹೌದು

ಕ : ಸಿಟ್ಟಿಲೇ ಹೇಳಿಕಳಿಸ್ಬೇಕು ಅಂದ

ಹಿ : ಹಾ

ಕ : ಅಮ್ಮಾ

ಹಿ : ಹಾ

ಕ : ಮರ್ಯಾದಿಲೇ ಹೊಲದ ತೆನಿ ತಿಂದು ಹೊಲ ಬಿಟ್ಟ್ಯೋ ನಿನ್ನ ಮರ್ಯಾದಿ ಚಲೋ ಆಯ್ತು

ಹಿ : ಹೌದು.

ಕ : ಇಲ್ಲ ಅಂದ್ರೆ ಹಸೆದಂಟು ಕೀಳಲೇನಾ…..ಹರಯನ್ನ ಮಾದೇವ

ಹಸೆದಂಟು ಕಿತ್ತು ನಿನ್ನ ಮೈಯೆಲ್ಲಾ ಉಳ್ಳ್ಯಾಡಿ ಬಡದು ಕಂಬ್ಳಿ ಕೋರಿಯಾಗ ಕಟ್ಟಿ ಹೊಳಿಯಾಗ ಒಸ್ತು ಬಿಟ್ಟೇನು ಜೋಗಿ

ಹಿ : ಓ ಜೋಗಮ್ಮ

ಕ : ಉಧೋ ಅಂದ್ರೆ ಹದಿನಾರು ಹಲ್ಲು ಉಚ್ಚ್ಯಾವು

ಹಿ : ಹೌದು

ಕ : ಹೊಲ ಬಿಡು ಜೋಗಿ ರಂಡೆ

ಹಿ : ಹಾ

ಕ : ಅಲ್ಲೋ ಮಗನ ಮದಲು ಭಕ್ತಿ ಇತ್ತು ಅಮ್ಮಾ ಕುಂದ್ರು ಅಂತ ಕಂಬ್ಳಿ ಹಾಸಿದಿ

ಹಿ : ಹೌದು

ಕ : ವರ ಕೊಟ್ಟ ತಕ್ಷಣಕ್ಕೆ ಗರುವು ಬಂತಲ್ಲೊ ಕರೇ ತಲಿ ಮಾನವ ಬಿಳೀ ಹಲ್ಲಿನ ಮನಿಷಾ ನಿನ್ನ ಭಕ್ತಿ ನೋಡ್ಲಿಕ್ಕೆ ಹನ್ನೆರಡು ಗಾವುದ ಬಂದಿದ್ದೆ

ಹಿ : ಆಹಾ

ಕ : ನಿನಿಗೆ ಐಶ್ವರ್ಯ ಕೊಡ್ಬೇಕು ಅಂತ ಬಂದಿದ್ದೆ.

ಹಿ : ಹೌದು

ಕ : ನಿನ್ನಲ್ಲಿ ಕೆಟ್ಟ ಗುಣ ಕೆಟ್ಟ ಬುದ್ಧಿ ಐತಿ,

ಹಿ : ಹಾ

ಕ : ಹೊಡಿಬ್ಯಾಡ ಸ್ವಲ್ಪ ತಿರುಗಿ ನಿಂದ್ರು ಅಂತಾ ಬಂಡಾರ ಉಧೋ ಅಂತ ಉಗ್ಗಿದ್ಲು

ಹಿ : ಓಹೋ

ಕ : ಗಿಡ, ಗಂಟಿ, ಗವಾರ ಅಡಿವಿ ಮಾಡಿ ಮಣ್ಣು ತಿನ್ನೊ ಸೊಕ್ಕಿನ ಕೋಣ ಅಂತ ಮುಂದಕ ಹೊಂಟ್ಲು.

ಹಿ : ಓಹೋ

ಕ : ನೋಡ್ತಾನ ಹೊಲದಾಗ ಏನಿಲ್ಲ ಬರೇ ಅಡಿವಿ.

ಹಿ : ಹಾ

ಕ : ಓಡಿ ಬಂದು ದೇವಿ ಪಾದಕೆ-

ದೇವಿಸ್ತುತಿ

ಬೊಂಗಳಾಂಬಿಕೆ ನಿನ್ನ ಪೊಗಳುವೆ ಹೊಗಳುವೆ
ಮಹಾಂಕಾಳಿ ಮೊದಲೆನಗೆ ಒಲಿಯಮ್ಮಾ
ಸರ್ವ ಕಾಲದೊಳು ಸ್ಮರಣೆಯ ಮಾಡುವೆ
ಭಾಗ್ಯದ ನಿಧಿ ತಾಯಿ ಬೊಂಗಳಾಂಬೀ
ಆದಿ ಅನಾದಿ ಸಾಧಿಸಿ ನೀ ಬಂದು
ಮಹಾದೇವನ ಕಾಡಿಸಿದೆ
ಏನು ಹೇಳಲಿ ದೇವಿ ನಿನ್ನ ಶೂರತನ
ಮೂಳ ಮಾತಿಗೆ ನೀ ಮುಂದೆ ಇರುವಾಕಿ
ಹೊಟ್ಟೆ ಮಗನ ಮೆಟ್ಟಿ ಹುಗಿಯುವ ಕಾಲಕ್ಕೆ
ಆಣೆ ರೊಕ್ಕಾಕೆ ಹೆಣ ತರುಬಿಸಿದೆ
ಧರ್ಮರಾಜನ ಐಶ್ವರ್ಯ ಕಳಚಿಕ್ಕಿ
ಗಳಿಗ್ಯಾಗ ಅಳಿಗಾಲ ತರಿಸೀದೆ
ಹರಿಶ್ಚಂದ್ರ ರಾಜನಂಥ ಸತ್ಯವಂತ ಯಾರಿಲ್ಲ
ವೀರ ಬಾಹುಕನ ಮನೆ ಸೇರಿಸಿದೆ
ವಿಶ್ವಾಮಿತ್ರ ಗುರು ಆಗಿ ಕಾಡಿಸಿದಿ
ವಿಕ್ರಮ ರಾಜನ ದಿಕ್ಕಾಪಾಲು ಮಾಡಿಸಿ
ಅನ್ನಕೊಬ್ಬರ ಮನೆ ಸೇರಿಸಿದೆ
ಊಟಕ್ಕೆ ಹಾಕಿದ ಹಾರ ನುಂಗಿತು ಹಂಸವು
ಹಟಕಂತಲಿ ಕೈ ಕಾಲ ಕಡಿಸೀದೆ
ಧರೆಯೋಳ್ ಮೇಲ್ಗಿರಿ ಗದುಗಿನ ಗಿರಿ ಮಳಿಸ್ವಾಮಿ
ಆತನ ಹಿರೇ ಮಗಳು ನೀನಾದೆ

ಕ : ನನ್ನ ಬಿಟ್ಟು ಹೋಗಬ್ಯಾಡಮ್ಮ ಪಾದ ಹಿಡದು ಬೇಡಿದಾ

ಹಿ : ಅಷ್ಟಕೆ

ಕ : ನನ್ನ ಹೊಲ ಬೆಳಸು

ಹಿ : ಹೌದು

ಕ : ನೀನು ಬಾ ಅಂದ್ರೆ ಬರಾದಿಲ್ಲ, ಹೋಗು ಅಂದ್ರೆ ಹೋಗಾದಿಲ್ಲ.

ಹಿ : ಹೌದು

ಕ : ನಿನ್ನ ಪಾಲಿಗೆ ನಾನು ಹುಡುಗಾಟ ಆಡದಿಲ್ಲ, ನಿನ್ನ ಮಾತು ಕೇಳ್ಲಿಕ್ಕೆ

ಹಿ : ಹಾ

ಕ : ಈಗ ಕಳುವು ಮಾಡಿ ನನಿಗೆ ಐದು ಬೆಳಿಸಿ ಒಪ್ಪಿಸಿಯಲ್ಲಾ

ಹಿ : ಹೌದು

ಕ : ಇದೇ ನಿನಿಗೆ ಕಳುವು ಇರಲಿ, ಯಾವಾಗ್ಲೂ ನಿನ್ನ ವಂಶಾವಳಿಗೆ.

ಹಿ : ಹಾ

ಕ : ನಿನ್ನ ಕುಲ ಉದ್ಧಾರಾಗಲ್ಲ

ಹಿ : ಹಾ

ಕ : ಆ ಶಾಪಣಿ ಕೊಟ್ಟು ಮುಂದಕ್ಕೆ ಒಂದು ಹೆಜ್ಜೆ ಬರ್ಲಿಕ್ಕೆ ಎರೇ ಹೊಲದಾಗ ರಡ್ಡಿ ನಿಂತಿದ್ದ

ಹಿ : ಹಾ

ಕ : ಉಧೋ ಅಂದ ತಕ್ಷಣಕ್ಕೆ ಐದು ಮುಳುಗಾಯಿ, ಐದು ಮೆಳಸಿನಕಾಯಿ, ಕೊತ್ತಂಬ್ರಿ ಐದು, ಮೂಲಂಗಿ ಐದು, ಬೆಳಸಿ ಐದು, ಐದು ಸೌತಿಕಾಯಿ ತಂದು ಪಡ್ಲಿಗ್ಗೆ ಹಾಕಿದ ರಡ್ಡಿ.

ಹಿ : ಓಹೋ

ಕ : ಅವನಿಗೆ ಒಂದು ವಚನ ಕೊಟ್ಲು ನೀನು ರಡ್ಡಿಯಲ್ಲ

ಹಿ : ಹಾ

ಕ : ಬಂಗಾರದ ಕಡ್ಡಿ

ಹಿ : ಓಹೋ

ಕ : ನಿನ್ನ ವಂಶಾವಳಿಗೆ ಎಂದೆಂದೂ ಬಡತನ ಬರಬಾರದು

ಹಿ : ಆಹಾ

ಕ : ಕುಲ ಉದ್ಧಾರ ಆಗಲಿ ಅಂತ್ಹೇಳಿ ದೇವಿ ಆಶೀರ್ವಾದ ಕೊಟ್ಟು ತನ್ನ ಗುಡಿಗೆ ಬಂದ್ಲು.

ಹಿ : ಓಹೋ

ಕ : ಅಂಬಾದೇವಿ ಚರಣಕ್ಕೆ….ದೇವಿಗೆ ಬೆಳಗೀರಾರತಿಯಾ.