ಕ : ಹಿಂಗ ಒಂದು ಗ್ರಾಮದಲ್ಲಿ
ಹಿ : ಹೌದು
ಕ : ಇಬ್ರು ದಂಪತಿ, ಮಹಾಭಕ್ತಿ ವಿಷಯ ಪರಮಾತ್ಮನ ನಾಮ ಉಚ್ಚಾರದಲ್ಲಿ ಅವರ ಹೆಸರು ಏಕನಾಥ ಮಹಾರಾಜರು, ಅವರ ಮಡದಿ ಮಹಾದೇವಿ ಪತಿವ್ರತಾ ಸ್ತ್ರೀಯಳು-
ಹಿ : ಹಾ.
ಕ : ಗಿರಿಜಾಬಾಯಿ.
ಹಿ : ಹಾ ಗಿರಿಜಾಬಾಯಿ.
ಕ : ಇವರು ಗೋದಾವರಿ ನದಿಯಲ್ಲಿ ಸ್ನಾನ ಮಾಡಿಕೊಂಡು ಮನಿಗೆ ಬರ್ತೀದ್ರು.
ಹಿ : ಹೌದು.
ಕ : ಪೂಜಾ ಪುನಸ್ಕಾರ, ಹೂಪತ್ರಿ ಎಲ್ಲಾ ತಯಾರ ಮಾಡಿ, ಸ್ನಾನ ಮಾಡಿ ಇಬ್ರೂ ಭಗವಂತನ ಪೂಜಾಕ್ಕ ಕುಂಬೋದ್ರು. ಈ ಪ್ರಕಾರವಾಗಿ ಭಕ್ತಿಯಿಂದ ಪರಮಾತ್ಮನ ಪೂಜಾ ಮಾಡ್ತಾ, ಕೀರ್ತನ, ಭಗವಂತನ ನಾಮ ಉಚ್ಚಾರ ಮಾಡ್ತಾ ಇದ್ದಾಗ.
ಹಿ : ಹೌದು
ಕ : ಆ ಊರಲ್ಲಿ ಬಾಜಾರದಲ್ಲಿ ನಾಲ್ಕು ಮಂದಿ ಶ್ರೀಮಂತರು, ಏಕನಾಥ ಮಹಾರಾಜನ ಭಕ್ತಿ ಕೆಡಸ್ಬೇಕು.
ಹಿ : ಓಹೋ ಕೆಡಸ್ಬೇಕು.
ಕ : ಇವನ ಪೂಜಾಕ್ಕs ಭಂಗ ಮಾಡ್ಬೇಕು.
ಹಿ : ಹಾ.
ಕ : ಇವರಿಗೆ ಸಿಟ್ಟು ಬರ್ಹಂಗ ಮಾಡ್ಬೇಕು-ಅಂತ ಒಬ್ಬ ಸಾಹೇಬನ್ನ ಕರೆ ಕಳಿಸಿದ್ರು.
ಹಿ : ಆಹಾ!
ಕ : ಏನಪಾ?
ಹಿ : ಏನ್ರಿ ಅದು?
ಕ : ನಿನಗೆ ನಾಲ್ಕುಸಾವಿರ ರೂಪಾಯಿ ಕೊಡ್ತೀವಿ.
ಹಿ : ಹೌದೇ?
ಕ : ಆ ಏಕನಾಥ ಮಹಾರಾಜನ ಭಕ್ತಿ ಕೆಡಸ್ಬೇಕು.
ಹಿ : ಆ.
ಕ : ಅವರಿಗೆ ಸಿಟ್ಟು ಬರಂಗೆ,
ಹಿ : ಹೌದು.
ಕ : ಅವರ ಪೂಜಕ್ಕ ತೊಂದರಿ ಕೊಟ್ಟು ಅವರಿಗೆ ಅಪಮಾನ ಮಾಡಿ ಬಿಡು ನಿನಿಗೆ ನಾಲ್ಕುಸಾವಿರ ರೂಪಾಯಿ ಕೊಡತೀವಿ ಅಂದ್ರು.
ಹಿ : ಆಗಲಿ
ಕ : ಆ ಸಾಹೇಬ ನೋಡಿದ – ನಾಲ್ಕುಸಾವಿರ ರೂಪಾಯಿ ಬರ್ತೈತಿ.
ಹಿ : ಹೌದು.
ಕ : ಅವರಿಗೆ ಒಂದು ಐದು ನಿಮಿಷದಾಗ ಸಿಟ್ಟು ಬರಂಗೆ ಮಾಡ್ತೀನಿ.
ಹಿ : ಮಾಡ್ತೀನಿ.
ಕ : ಅವರ ಪೂಜಾನು ಕೆಡಿಬಿಡ್ತೀನಿ, ಅಪಮಾನ ಮಾಡಿ ಬಿಡ್ತೀನಿ-ಅಂತ್ಹೇಳಿ ನಾಲ್ಕುಸಾವಿರ ರೂಪಾಯಕ ಆಸಿ ಬಿದ್ದು ಒಂದು ಚಟ್ಟಿ ಎಲಿ, ಒಂದು ಅಚ್ಚೇರು ಅಡಕಿ, ಸ್ವಲ್ಪ ತಂಬಾಕು, ಸುಣ್ಣ ತೊಗೊಂಡು ಅಗಸಿಗೆ ಬಂದು ಕುಂತ ಸಾಯಿಬ.
ಹಿ : ಓಹೋ!
ಕ : ಎಲಿ ಅಡಕಿ ತಂಬಾಕ ಹಾಕ್ಕೊಂಡು ಬಾಯಿ ತುಂಬಾ ತಾಂಬೂಲ ಮಾಡಿಕೊಂಡ.
ಹಿ : ಆಹಾ.
ಕ : ಏಕನಾಥ ಮಹಾರಾಜ್ರು ಶಿವಶರಣರು ಗೋದಾವರಿಯಲ್ಲಿ ಸ್ನಾನ-ಆವತ್ತು ಏಕಾದಶಿ ವ್ರತಾ.
ಹಿ : ಆ.
ಕ : ಏಕಾದಶಿ ಉಪವಾಸ, ಸ್ನಾನ ಮಾಡ್ಕೊಂಡು ಭಗವಂತನ ಪೂಜಾಕ್ಕೆ ಬರು ವ್ಯಾಳ್ಯಾದಲ್ಲಿ ಚರಿಗಿ ತುಂಬಾ ನೀರು ತುಂಬಿಕೊಂಡು;
ಹಿ : ಹೌದು.
ಕ : ಇವನು ನಾಲ್ಕುಸಾವಿರ ರೂಪಾಯಿಗೆ ಆಶಿಬಿದ್ದು ದುಷ್ಟರ ಸಂಗ ಸೇರಿ, ದುಷ್ಟರ ವಚನವನ್ನು ಕೇಳಿ,
ಹಿ : ಹಾ.
ಕ : ಬಂದು ಆ ಏಕನಾಥ ಮಹಾರಾಜ್ರು ಅಗಸಿಗೆ ಬಂದ ತಕ್ಷಣಕ್ಕೆ.
ಹಿ : ಹೌದು.
ಕ : ಅವರ ಮೇಲೆ ಉಗುಳಿದಾ-ಮೈಯೆಲ್ಲಾ ಕೆಂಪಾತು!
ಹಿ : ಆ.
ಕ : ಯಾಕ ಉಗುಳಿದೆಪ್ಪಾ ಅಂತ ಅವರು ಕೇಳಲಿಲ್ಲ.
ಹಿ : ಕೇಳಲಿಲ್ಲ!
ಕ : ವಾಪಾಸು ಗೋದಾವರಿ ನದಿಗೆ ಸ್ನಾನಕ್ಕೆ ಹೋದ್ರು ಮತ್ತು ಸ್ನಾನ ಮಾಡ್ಕೊಂಡು ಅಲ್ಲಿಗೆ ಬರ್ಲಿಕ್ಕೆ ಮತ್ತೂ ಉಗುಳಿದ್ರು.
ಹಿ : ಉಗುಳಿದ್ರು.
ಕ : ಈ ಪ್ರಕಾರವಾಗಿ ಒಂದಲ್ಲ ಎರಡಲ್ಲ ನೂರಾ ಒಂದೇಟು ಉಗುಳಿದ್ರು.
ಹಿ : ಕ್ರೋಧ ಬರ್ಲಿಲ್ಲ.
ಕ : ಆ ಮಹಾತ್ಮರಿಗೆ ಸಿಟ್ಟು ಬರ್ಲೇ ಇಲ್ಲ.
ಹಿ : ಹೌದು.
ಕ : ಇವನು ನೂರಾ ಒಂದೇಟು ಎಲಿ ಅಡಿಕಿ ಸುಣ್ಣ ತಂಬಾಕು ತಿಂದು ಬಾಯೆಲ್ಲಾ ಇದು ಆಗಿ ಮಾತಾಡಾಕ ಬರ್ಲಿಲ್ಲ.
ಹಿ : ನಮೋ ನಮಸ್ಕಾರ ಸ್ವಾಮೀ.
ಕ : ಶರಣಾರ್ಥಿ ಬರ್ರೀ….
ಹಿ : ನನ್ನ ಅಪರಾಧ ಕ್ಷಮಿಸಬೇಕು.
ಕ : ಹಿಂಗ್ಯಾಕಪ ನಿಂದು ಅಪರಾಧಕ್ಕ ಏನು ಕಾರಣ?
ಹಿ : ಆ.
ಕ : ನೂರಾ ಒಂದೇಟು ಉಗುಳಿದೆ ನಂದು ಭಾಳಾ ಅಪರಾಧ ಆತು ಅಂತೀಯಾ,
ಹಿ : ಹೌದು.
ಕ : ಆಹಾ ನೂರಾ ಒಂದೇಟು ಉಗುಳಿದ್ದಕ್ಕೆ ಅಪರಾಧ ಆಯ್ತು ಅಂತೀಯಾ, ನಾನು ಒಂದು ದಿವಸಕ್ಕೆ ಒಂದೇಟು ಗೋದಾವರಿಯಲ್ಲಿ ಸ್ನಾನ ಮಾಡಿಕೊಂಡು ಭಗವಂತನ ಪೂಜೆ ಮಾಡೋದು ಕಷ್ಟ ಆಗುತ್ತಿತ್ತು.
ಹಿ : ಹೌದು.
ಕ : ಅಂತಾದ್ದು ನಿನ್ನ ಸಲುವಾಗಿ ಇವತ್ತು ನೂರಾ ಒಂದು ಸಲ ಸ್ನಾನ ಆಯ್ತು ನಂದು.
ಹಿ : ಆಹಾ.
ಕ : ನಾನು ಧನ್ಯವಂತ ಆದೆ-ಅಂತಾ ಅವನ ಪಾದಕ್ಕೆ ಇವರು ನಮಸ್ಕಾರ ಮಾಡಿದ್ರು.
ಹಿ : ಭಕ್ತಿ ವಿಷಯ!
ಕ : ಹೌದು.
ಕ : ನೂರಾ ಒಂದೇಟು ಸ್ನಾನ ಆಯ್ತು ಮಡದಿ ಗಿರಿಜಾಬಾಯಿ ಹೂವು ಪತ್ರಿ ಎಲ್ಲಾ ತಯಾರ ಮಾಡಿದ್ಲು. ಇಬ್ರು ಸತಿ-ಪತಿ ಪೂಜಾಕ್ಕ ಕುಂತ್ರು-ಈಶ್ವರನ ಪೂಜ.
ಹಿ : ಓಹೋ.
ಕ : ಇವನು ಸಾಹೇಬ ಬಂದ, ಬಾಜಾರದಾಗ ನಾಲ್ಕುಸಾವಿರ ರೂಪಾಯ ಕೇಳಾಕ.
ಹಿ : ಏನ್ರೀ ಸಾಹುಕಾರ್ರೇ ನಾಲ್ಕುಸಾವಿರ?
ಕ : ಅವರಿಗೆ ಸಿಟ್ಟು ಬರ್ಲಿಲ್ಲ, ಅವರ ಪೂಜೆ ಕೆಡಸಲಿಲ್ಲ ನಿನಗೆ ರೊಕ್ಕ ಕೊಡೋದಿಲ್ಲ.
ಹಿ : ಕೊಡೋದಿಲ್ಲ.
ಕ : ಅವರಿಗೆ ಸಿಟ್ಟು ಬರಂಗ ಮಾಡಿ ಬಿಡು ನಾಲ್ಕುಸಾವಿರ ರೂಪಾಯಿ ಕೊಡ್ತೀವಿ
ಹಿ : ಹೌದು.
ಕ : ಸಿಟ್ಟು ಬರಂಗ ಮಾಡ್ಬೇಕು ಅಂತಾರಲ್ಲ; ಇವನು ಕೈಯಾಗ ಛಡಿ ತೊಗೊಂಡ.
ಹಿ : ಹಾ.
ಕ : ಕಾಲಾಗ ಬೂಟು ಹಾಕ್ಕೊಂಡು ಏಕ್ದಮ್ ಬರ್ತಾನೆ-ಏಕನಾಥ ಮಹಾರಾಜರ ದೇವರ ಕ್ವಾಣ್ಯಾಗ.
ಕ : ಏಕನಾಥ ಮಹಾರಾಜ್ರು ನೋಡಿದ್ರು.
ಹಿ : ಆ.
ಕ : ಓಹೋ ಗಿರಿಜಾ!
ಹಿ : ಅದೇನ್ರಿ?
ಕ : ಬಿಡು ಪರಮಾತ್ಮನ ಪೂಜಾ ಕಮ್ಮಿ ಮಾಡು.
ಹಿ : ಆ.
ಕ : ನಮ್ಮ ಸ್ನೇಹಿತರು ಬರ್ತಾ ಇದ್ದಾರೆ, ಅವರ ಪಾದಕ್ಕೆ ವಿಭೂತಿ ಹಚ್ಚಿ ಊದಿನ ಕಡ್ಡಿ ಬೆಳಗಿ ನಮಸ್ಕಾರ ಮಾಡೋನು.
ಹಿ : ಮನಿದೇವರು!
ಕ : ಭಕ್ತಿಯಿಂದ ಬಂಗಾರದ ಚರಿಗಿ ತುಂಬ ನೀರು ತೊಗೊಂಡು ಸತಿ-ಪತಿ ಏಕನಾಥ ಮಹಾರಾಜ್ರು-ಗಿರಿಜಾ ಬಾಯಿ.
ಹಿ : ಹಾ.
ಕ : ಬೂಟುಗಾಲಿಲೆ ಬಂದಂಥವನಿಗೆ ಪಾದತೊಳೆದು ವಿಭೂತಿ ಹಚ್ಚಿ ಊದಿನ ಕಡ್ಡಿ ಬೆಳಗಿ ನಮಸ್ಕಾರ ಮಾಡಿದ್ರು.
ಹಿ : ಆಹಾ.
ಕ : ಅವನು ನಾಕುಸಾವಿರ ಆಸಿಬಿದ್ದಾ, ಇವರಿಗೆ ಸಿಟ್ಟು ಬರ್ಲಿಲ್ಲ. ದೇವರ ಕ್ವಾಣ್ಯಾಗ ಬೂಟುಗಾಲಿಲೆ ಬಂದ ಇವರಿಗೆ ಸಿಟ್ಟು ಬರ್ಲಿಲ್ಲ.
ಹಿ : ಹೌದು.
ಕ : ಪೂಜಾ ಮಾಡಿಬಿಟ್ರು, ಎಂಥಾ ಭಕ್ತಿ ಐತಿ ಇವರ ಹತ್ರ!
ಹಿ : ಹಾ.
ಕ : ನಿಂದ್ರಲಿಕ್ಕೆ ಆ ಏಕನಾಥ ಮಹಾರಾಜ್ರು-ಮಡದೀ.
ಹಿ : ಏನ್ರೀ
ಕ : ನಮ್ಮ ಗೆಳೆಯ ಬಂದಾನೆ ಪಂಚಾಮೃತ ಅಡಿಗಿ ಮಾಡಿ ಊಟಕ್ಕೆ ನೀಡು, ಊಟ ಮಾಡ್ಸಿ ಕಳಿಸೋನು.
ಹಿ : ಹೌದು!
ಕ : ಗಿರಿಜಾಬಾಯಿ ಅತಿ ಕ್ಷೀರ, ತುಪ್ಪದ ಅಡಿಗಿ, ಬೇಕು ಬೇಕಾದ ಪಂಚಾಮೃತ ಅಡಿಗಿ ಮಾಡಿದ್ಲು.
ಹಿ : ಹೌದು
ಕ : ಏಕನಾಥ ಮಹಾರಾಜ್ರಿಗೂ
ಹಿ : ಹಾ
ಕ : ಬಂದಂಥ ಆ ಸಾಹೇಬಗೂ ಇಬ್ರಿಗೂ ಊಟಕ್ಕ ನೀಡಾಕ ಹತ್ತಿದ್ಲು.
ಹಿ : ಹೆಣ್ಣು ಮಕ್ಕಳ ಪದ್ಧತಿ-
ಕ : ಕುಂತು ನೀಡಂಗಿಲ್ಲ ಬಗ್ಗಿ ನೀಡಾದು!
ಹಿ : ಹೌದು.
ಕ : ಹೆಣ್ಣು ಮಗಳು ಗಿರಿಜಾಬಾಯಿ ಪತಿವ್ರತಾ ಬಗ್ಗಿ ನೀಡೋ ಕಾಲಕ್ಕೆ-
ಹಿ : ಹೌದು
ಕ : ಇವನು ಆಲೋಚಿನಿ ಮಾಡಿದ ಸಾಹೇಬ.
ಹಿ : ಸಾಹೇಬು!
ಕ : ನೂರಾ ಒಂದೇಟು ಉಗುಳಿದೆ ಸಿಟ್ಟು ಬರ್ಲಿಲ್ಲ, ನಾಲ್ಕು ಸಾವಿರ ಸಿಗಲಿಲ್ಲ;
ಹಿ : ಸಿಗಲಿಲ್ಲ!
ಕ : ದೇವರ ಕ್ವಾಣ್ಯಾಗೆ ಬೂಟುಗಾಲಿಲೆ ಬಂದೆ ಇವರಿಗೆ ಸಿಟ್ಟು ಬರ್ಲಿಲ್ಲ; ರೊಕ್ಕ ಸಿಗಲಿಲ್ಲ.
ಹಿ : ನಿಜಾ
ಕ : ಈಗ ಹ್ಯಾಂಗ ಮಾಡಿದ್ರೆ ಇವರಿಗೆ ಸಿಟ್ಟು ಬಂದೀತು ಈ ಏಕನಾಥ ಮಹಾರಾಜನ ಹೆಂಡ್ತಿ ನೀಡ್ತಾ ಅದಾಳೆ-ಗಿರಿಜಾ.
ಹಿ : ಹಾ
ಕ : ಈ ಯಮ್ಮನ ಕೈ ಹಿಡದ್ರೆ ಸಿಟ್ಟು ಬರ್ತೈತಿ ಇವರಿಗೆ ನನಿಗೆ ರೊಕ್ಕ ಸಿಗತಾವು ಅಂಬೋ ಉದ್ದೇಶಕ್ಕೆ-
ಹಿ : ಹೌದು-
ಕ : ಕೆಟ್ಟ ದುರಾಲೋಚನೆಯಿಂದ-
ಹಿ : ಹಾ-
ಕ : ಸಾಹೇಬ್ರು ಎದ್ದು ಕುಪ್ಪಳಿಸಿ ಹಾರಿ ಆ ಯಮ್ಮ ಗಿರಿಜಾದೇವಿ ಪತಿವ್ರತಾ ತಾಯೀ, ಡುಬ್ಬದ ಮೇಲೆ ಕುಂತು ಎರಡೂ ಕೈಲೆ ಎರಡೂ ಕುಚಗಳ ಹಿಡುದಾ ಇವನು.
ಹಿ : ಓಹೋ!
ಕ : ಏಕನಾಥ ಮಹಾರಾಜ್ರು ನೋಡಿದ್ರು-
ಹಿ : ಹಾ
ಕ : ಮಡದೀ ಗಿರಿಜಾ
ಹಿ : ಏನ್ರೀ
ಕ : ಮಗಾ ಬೆನ್ನ ಮೇಲೆ ಕುಂತಾನೆ
ಹಿ : ಉಷಾರಿ
ಕ : ಕೆಡವಿ ಪೆಟ್ತಾದೀತು ಉಷ್ಯಾರಿ ಅಂದ.
ಹಿ : ಭಕ್ತಿ ! ಭಕ್ತಿ ವಿಷಯ!
ಕ : ಆಹಾ, ಆ ಯಮ್ಮ ಅಂತಾಳೆ ಅಲ್ರೀ ಮಹಾರಾಜ್ರೇ
ಹಿ : ಆಹಾ
ಕ : ನಿಮಗೆ ಮಗ
ಹಿ : ಹಾ
ಕ : ಕೆಡವಿ ಪೆಟ್ಟಾದೀತು ಉಷಾರಿ ಅಂತೀರಿ
ಹಿ : ನಿಜಾ
ಕ : ನಾನು ಒಂಬತ್ತು ತಿಂಗಳು ಒಂಬತ್ತು ದಿವಸ ಹೊಟ್ಯಾಗ ಇಟ್ಕೊಂಡು ಪರಿಪರಿಯಿಂದ ಬ್ಯಾನಿ ತಿಂದು ಜನನ ಆಗಿ ಜೋಪಾನ ಮಾಡಿದಂಥ ಮಗನಿಗೆ ಕೆಡವಿ ಪೆಟ್ಟು ಮಾಡೇನೇನು-ಅಂದ್ಲು ಆಯಮ್ಮ.
ಹಿ : ಓಹೋ
ಕ : ಅಷ್ಟು ಮಾತು ಆಯಮ್ಮ ಅನ್ನಲಿಕ್ಕೆ ಇವನು ಸಾಹೇಬ ಕುಚ ಹಿಡದಿದ್ನಲ್ಲ
ಹಿ : ಆಹಾ
ಕ : ಆ ತಾಯಿ ಮಲಿಯಾಗಿಂದ ಹಾಲು ಅವನ ಬಾಯಾಗ ಬಿದ್ದವು.
ಹಿ : ಓಹೋ
ಕ : ಮೂರ್ಛೆಗವುದು ಕೆಳಗೆ ಬಿದ್ದ.
ಹಿ : ಕ್ಷಮಾ ಮಾಡ್ರಿ
ಕ : ಪತಿವ್ರತಾ ತಾಯಿ ನೀನು, ಶರಣಾರ್ಥಿ
ಹಿ : ಆಹಾ
ಕ : ಏಕನಾಥ ಮಹಾರಾಜ್ರೇ ಶಿವಶರಣ್ರೇ
ಹಿ : ಹಾ
ಕ : ನಿಮಗೆ ಮಹಾ ತೊಂದರೆ ಕೊಟ್ಟೆ ರೊಕ್ಕದ ಸಲುವಾಗಿ
ಹಿ : ಹೌದು
ಕ : ನಾನು ಸುಮ್ಮನೇ ಕುಂತಾನಿಗೆ ಬಾಜಾರದಲ್ಲಿ ಶೆಟ್ರು ಅವರು ನನಗೆ ಬೋಧನಾ ಮಾಡಿ ನಿಮಗೆ ತೊಂದ್ರಿ ಕೊಟ್ರು, ನನ್ನ ಅಪರಾಧ ಕ್ಷಮಾ ಮಾಡ್ರಿ.
ಹಿ : ಕ್ಷಮಾ ಮಾಡ್ಬೇಕು.
ಕ : ಆಹಾ ಹಿಂಗ್ಯಾಕ ಮಾಡಿದೆಪಾ?
ಹಿ : ಹಾ
ಕ : ಅವರು ಹೇಳಿದ್ದಕ್ಕ ಮಾಡಿದ್ಯಾ?
ಹಿ : ಹೌದು
ಕ : ರೊಕ್ಕಕ ಆಸಿ ಬಿದ್ಯಾ?
ಹಿ : ಹಾ
ಕ : ಬ್ಯಾಡಾ ನಾಳೆ ಚಿಗಟೇರಿ ಗ್ರಾಮದಲ್ಲಿ ನಮ್ಮ ಅಪ್ಪಾ ಅವರು ಕೀರ್ತನೆ ಮಾಡಸ್ತಾ, ಇದಾರೆ,
ಹಿ : ಹಾ
ಕ : ಅಲ್ಲಿ ಬಾ ನೀನು.
ಹಿ : ಹೌದು
ಕ : ಅಲ್ಲಿ ಕೀರ್ತನ ಆಗೋ ವ್ಯಾಳ್ಯಾದಲ್ಲಿ ನಾಲ್ಕು ಮಂದಿ ಕುಂತು ಏನು ರೊಕ್ಕಾ ಕೊಡ್ತಾರೊ -ಅಲ್ಲಿ ನೀನು ಕೇಳಿದಷ್ಟು ರೊಕ್ಕ ಸಿಗತೈತಿ.
ಹಿ : ಹಾ
ಕ : ತೊಗೊಂಡು ಹೋಗುವಂತಿ
ಹಿ : ನಿಜ
ಕ : ಅವರು ಹೇಳಿದ ಪ್ರಕಾರವಾಗಿ ಭಗವಂತನ ನಾಮ ಉಚ್ಚಾರ ಮಾಡಿದ್ರು
ಹಿ : ಹಾ
ಕ : ನಾಲ್ಕು ಸಾವಿರ ರೂಪಾಯಿ ಅಲ್ಲಿ ಬಿದ್ದುವು ಮಹಾರಾಜರಿಗೆ,
ಹಿ : ಓಹೋ
ಕ : ಆ ನಾಲ್ಕು ಸಾವಿರ ರೂಪಾಯಿ ತೊಗೊಂಡು ಅವರು ಲಗ್ನ ಮೂರ್ತ ಮಾಡಿಕೊಂಡು ಕಲಸ್ತಾಪ ಮಾಡಿಕೊಂಡಿದ್ರು-
ಹಿ : ಆಹಾ ಸಾಹೇಬ್ರು
ಕ : ಆಹಾ ಸಾಹೇಬ್ರು
ಹಿ : ಭಕ್ತಿ ವಿಷಯ
ಶಿವಹರಯನ್ನ ಮಾದೇವಾ
ಗುರುವಿನ ಪಾದಾವಾ….
Leave A Comment