ಹಿ : ಓಹೋ!

ಕ : ನಾವು ಕುಲದಲ್ಲಿ ಬ್ರಾಹ್ಮಣರು- ಮಹಾರಾಜ್.

ಹಿ : ಹೌದೇ?

ಕ : ತೌರುಮನಿಯಲ್ಲಿ ಋತುಮತಿಯಾದೆ; ನಮ್ಮ ಕುಲಪದ್ಧತಿಯೊಳಗೆ ತೌರುಮನಿಯಲ್ಲಿ ಋತುಮತಿಯಾದ ಬಳಿಕ ಲಗ್ನ ಆಗಂಗಿಲ್ಲ.

ಹಿ : ಹೌದು!

ಕ : ಎರಡೂ ಕಣ್ಣು ಕಟ್ಟಿ ಆಡಿವ್ಯಾಗ ಬಿಟ್ಹೋಗ ಪದ್ಧತಿ ಐತಿ-ನಮ್ಮ ಧರ್ಮ! ನಮ್ಮ ತಾಯಿ-ತಂದಿ ನನಗೆ ಲಗ್ನ ಮಾಡಿ ಕೊಡ್ಲಿಲ್ಲ!

ಹಿ : ಹೌದೂ!

ಕ : ಅದಕ್ಕ ನನ್ನ ಎರಡೂ ನೇತ್ರಗಳನ್ನು ಕಟ್ಟಿ ಅಡಿವ್ಯಾಗ ಬಿಟ್ಟು ಹೋದ್ರು-

ಹಿ : ನನ್ನ ತಂದೆ ತಾಯಿ!

ಕ : ಇಲ್ಲಿಗೆ ಎಂಟು ದಿವಸ ಆಯಿತು ಮಹಾರಾಜ, ಇಲ್ಲಿ ಎಲ್ಲಾ ನೋಡ್ದೆ ನನ್ನ ಮನಸ್ಸು ಹಿಡಿಸ್ಲಿಲ್ಲ-

ಹಿ : ಹೌದು ಹಿಡ್ಸಲಿಲ್ಲ!

ಕ : ಇವತ್ತು ಬಂದು ನಿಮಗೆ ನೋಡ್ಲಿಕ್ಕಾಗಿ, ನಿಮಗೆ ಭೆಟ್ಟಿಯಾಗ್ಲಿಕ್ಕಾಗಿ, ನಿಮ್ಮ ಮ್ಯಾಲೆ ಪ್ರೀತಿ ಆಗೇತಿ, ನಾನು ನಿನ್ನ ಮದುವಿ ಆಗ್ಬೇಕು ಅಂತ ಬಂದೇನಿ – ಅಂದ್ಲು.

ಹಿ : ಆಹಾ!

ಕ : ಚಿತ್ರೋಸೇನ ರಾಜ ಹಿಗ್ಗಿಬಿಟ್ಟ, ಸ್ತ್ರೀಯಳೇ ವಿಘ್ನಾವತೀ….

ಹಿ : ಏನ್ರೀ ಮಹಾರಾಜ್ರೇ?

ಕ : ನಿನ್ನರೂಪ, ನಿನ್ನ ಲಾವಣ್ಯ, ನಿನ್ನ ಚೆಲುವಿಕೆ, ನಿನ್ನ ಸೌಂದರ್ಯ ನೋಡಿ ನನ್ನ ಮನಸ್ಸು ಆನಂದ ಆಯಿತು.

ಹಿ : ಹೌದು.

ಕ : ಆಗ್ಲಿ ನಾನು ನೀನು ಇಬ್ರೂ ಸತಿಪತಿಯಾಗಿರೋನು ನಡಿ-ಮುಂಜಾನೆ ಊರಿಗೆ ಹೋಗಾನು -ಅಂದ.

ಹಿ : ಆಹಾ ಒಳ್ಳೇದು ಮಹಾರಾಜ, ಆದ್ರೆ ಒಂದು ಮಾತು-

ಕ : ಏನು ಸ್ತ್ರೀಯಳೇ?

ಹಿ : ನಿಮಗೆ ಸಂಸಾರ ಲಂಬಾಟ ಐತೇನ್ರಿ?

ಕ : ಇನ್ನೂವರೆಗೂ ಲಗ್ನ ಆಗಿಲ್ಲ-ಅಂದ ಚಿತ್ರೋಸೇನ; ಲಗ್ನ ಆಗೀನಿ ಅಂದ್ರ ಆಕಿ ನನಗ ವಶ ಆಗ್ತಾಳೋ ಇಲ್ಲೋ!

ಹಿ : ಹೌದೂ.

ಕ : ಅದರ ಸಲುವಾಗಿ ನಾನು ನೀನು ಸತಿ-ಪತಿಯಾಗೋನು ಅಂತ ಕರ್ಕೊಂಡು ಸರವರದೊಳಗ ವಸ್ತಿಯಾದ!

ಹಿ : ಹೌದು.

ಕ : ಬೆಳಕು ಹರೀತು; ಮಂತ್ರಿ ಸಿಬ್ಬಂದಿ, ದಂಡು ಎಲ್ಲಾ ಎಚ್ಚರಾದ್ರು ನೋಡ್ರಿ;

ಹಿ : ಹೌದು.

ಕ : ಮುಂಜಾನೆ ಮಂತ್ರಿ ಎದ್ದುಬಂದು ನೋಡಿದಾ-ಮಾಹಾರಾಜ್ರು ಜೊತಿಗೆ ಒಬ್ಬ ಸ್ತ್ರೀಯಳು! ಇವರು ಯಾರು ಮಹಾರಾಜ್? ರಾತ್ರಿ ವ್ಯಾಳ್ಯಾದಲ್ಲಿ ಒಬ್ಬ ಸ್ತ್ರೀಯಳು ಬಮಂದು ವಾಸ ಮಾಡ್ಯಾಳಲ್ಲ?

ಹಿ : ಹೌದಲ್ಲ!

ಕ : ಆಹಾ ಮಂತ್ರೀ, ಈಕಿ ಗುರ್ತು ನೀನು ಕೇಳ್ತಾ ಇದ್ದೀ; ಯಾರು ಅಂದ್ರ, ಈಕಿ ಪರದೇಶಿ ಆಗ್ಯಾಳೆ; ಕುಲದಲ್ಲಿ ಬ್ರಾಹ್ಮಣಳಂತೆ!

ಹಿ : ಹೌದು!

ಕ : ಬ್ರಹ್ಮಸೇಕ ರಾಜನ ಮಗಳಂತೆ!

ಹಿ : ಹೌದೇ?

ಕ : ತೌರುಮನಿಯಾಗ ಋತುಮತಿಯಾಗಿದ್ದಕ್ಕೆ ಕಣ್ಣು ಕಟ್ಟಿ ಇವರ ತಾಯಿ-ತಂದಿ ಅಡಿವ್ಯಾಗೆ ತಂದು ಬಿಟ್ಟು ಹೋಗ್ಯಾರಂತೆ!

ಹಿ : ಹೌದು.

ಕ : ಈಕಿಗೆ ಮಡದಿ+ಮಾಡಿಕೊಂಡು ರಾಣಿ ಪಟ್ಟ ಕಟ್ಟಬೇಕು ಅಂತ ಕುಂತೀನಿ.

ಹಿ : ಅಲೇಲೇಲೇ ಇವನು ಮನಿ ಹಾಳಾಗ ಅಂದುಕೊಂಡು-ರಾಜಾಧಿರಾಜ ಚಿತ್ರೋಸೇನ್ ಮಹಾರಾಜ್! ಇದು ಧರ್ಮ ಅಲ್ಲ, ನಾನು ನಿಮ್ಮ ಮಂತ್ರಿ ನೀನು ತಾಯಿ ಹಾಲು ಕುಡದಿಲ್ಲ!- ಮಹಾರಾಜ್! ನೀವು ಗೌಡೇರ ಹಾಲಕುಡುದು ಜೋಪಾನಾದಂಥ ಚಿತ್ರೋಸೇನ! ನಾನು ನನ್ನ ತಾಯಿ ಹಾಲ ಕುಡುದು ಜೋಪಾನಾಗೀನಿ.

ಕ : || ಪದ ||

ಮಾಯೆ ಮೆಚ್ಚಲು ಬೇಡ ಮರುಳೇ….
ಉಪಾಯದಿಂದಲಿ ಕೊಲ್ಲಿಸಿತ್ತ ಬ್ರಹ್ಮನ ಕೊರಳೇ
ಹತ್ತು ತಲೆ ರಾವಣನ ಕುತ್ತಿಗೆ ಕೊರೆಸಿತ್ತು
ಹರಿ ಎಂಬ ವಿಷ್ಣುವಿನ ಬಂಧನ ಮಾಡಿಸಿತ್ತು.
ಪಾಲ್ಗುಣನ ಎರಡು ಹಸ್ತಗಳನೇ ಕೊರಿಸಿತ್ತು.
ಕರಿಬಂಟನ ಸಿರ ಹೊಡೆದು ಖಂಡ ಕಡಿದು ತೂಗಿಸಿತ್ತು
ಧರಣಿಯೊಳ್ ಕುಮಾರ ರಾಯನ ಕೆಡವಿ ಶಿರ ಹೊಡೆಸಿತ್ತು
ಪಂಚ ಪಾಂಡವರಿಗೆಲ್ಲ ಪಗಡಿಯಾಗಿ ಸೆಣಸಿತ್ತು
ಪರೀಕ್ಷಿತ ರಾಜಗೆ ಸರ್ಪಾಗಿ ಕಚ್ಚಿತ್ತು
ದುರ್ಯೋಧನನ ತೊಡೆಯ ಮುರಿಸಿತ್ತು

ಹಿ : ಆಹಾ!

ಕ : ಹರಿಗೆ-ಲಕ್ಷ್ಮೀ, ಬ್ರಹ್ಮಗೆ-ಸರಸ್ವತಿ, ಶಂಕರಗೆ-ಪಾರ್ವತಿ ಆಗಿ ಗಂಟುಬಿದ್ದ ಮಾಯದ ಹೆಣ್ಣಿದು. ಈ ಹೆಣ್ಣಿನ ಮಹಿಮಾ ತಿಳಿದಿಲ್ಲ ನಿಮಗೆ!

ಹಿ : ಹೌದು.

ಕ : ಈ ಯಮ್ಮಗೆ ನೀನು ಲಗ್ನ ಆಗಬ್ಯಾಡ್ರಿ ಅಂದ ಮಂತ್ರಿ.

ಹಿ : ಆಹಾ ಮಂತ್ರೀ, ಇಂಥ ಚಲೋ ಹೆಣ್ಣಿಗೆ ನೀನು ಮಾಯದ ಹೆಣ್ಣು ಅಂತೀಯಲ್ಲ ಹ್ಯಂಗ!

ಕ : ಈಗ ಹೇಳಿದ ಮಾತು ಇನ್ನೊಂದು ಸಲ ಹೇಳೀ ಮಂತ್ರೀ; ಈಕಿ ನನಗೆ ಒಪ್ಪಂಥ ಮಡದಿ ಅದಾಳೆ!

ಹಿ : ಆಹಾ!

ಕ : ನಾನು ಲಗ್ನ ಆಗ್ತೀನಿ.

ಹಿ : ಒಳ್ಳೇದು ಮಹಾರಾಜ್ ಆಗ್ರೀ,

ಕ : ನೀವು ಹೇಳ್ಬೇಕು ನಾವು ಕೇಳ್ಬೇಕು. ನೀವು ಒಡೆಯ ನಾನು ಮಂತ್ರಿ.

ಹಿ : ಅಗತ್ಯ ಆಗಲಿ ನಡ್ರಿ; ಕರ್ಕೊಂಡು ಹೋಗೋನು; ಲಗ್ನ ಆಗ್ವಂತ್ರಿ.

ಕ : ಆ ವಿಘ್ನಾವತಿಗೆ ಕರ್ಕೊಂಡು ಮುಂಜಾನೆ ಎಂಟು ಗಂಟೆಗೆ ಚಿತ್ರಾವತಿ ಪಟ್ಣಕ್ಕೆ ಬರ್ತಾರೆ.

ಹಿ : ದಂಡು ದರ್ಬಾರು ರೈತರು, ಶ್ರೀಮಂತರು, ಸಾಹುಕಾರು, ಶೆಟ್ರು. ಬೋಗಾರ್ರು, ಆ ವಿಘ್ನಾವತಿಗೆ ಕರ್ಕೊಂಡು ಬಂದದ್ದು ನೋಡಿ-‘ಏನು ಒಬ್ಳು ಸ್ತ್ರೀಯಳನ್ನು ತಂದ್ರು ನಮ್ಮ ಮಹಾರಾಜ್ರು’ ಅಂತ ಆಶ್ಚರ್ಯಪಟ್ರು.

ಕ : ಬಾಜಾರದಲ್ಲಿ ಏಳು ಅಂತಸ್ತಿನ ಅರಮನಿಯಾಗ ಚಿಕ್ಕಮಡದಿ ವಿಘ್ನಾವತಿ ಎಂಬೋ ಹಿಡಂಬಿಗೆ ಇಟ್ಟ-

ಹಿ : ಆಹಾ!

ಕ : ಏಳು ಮಂದಿ ಮಡದಿಯರ ಮನಿಗೆ ಬಂದಾಗ ಮಹಾರಾಜ ಬ್ಯಾಟಿ ಆಡಿ ಬಂದ ಅಂತ್ಹೇಳಿ ಪ್ರೀತಿಯಿಂದ ಆರತಿ ಬೆಳಗಿದ್ರು;

ಹಿ : ಆದ್ರೆ-

ಕ : ಆ ಏಳೂ ಮಂದಿ ಮಡದಿಯರ ಮ್ಯಾಲೆ ರಾಜಗ ಪ್ರೇಮ ಇಲ್ಲ! ಚಿಕ್ಕ ಮಡದಿ ವಿಘ್ನಾವತಿಗೆ ನೆನದು ಆಕಿ ಮನಿಗೆ ಬಂದ.

ಹಿ : ಓಹೋ!

ಕ : ಏನೇ ವಿಘ್ನಾವತೀ ಈ ತಗಡೂರು ಸಾಲಿನಲ್ಲಿ ಏಳು ಅಂತಸ್ತಿನ ಅರಮನಿ ನಿಂದು- ಅಂದ.

ಹಿ : ಆಗಲಿ ಮಹಾರಾಜ್ರೇ.

ಕ : ರಾಜಗ ಜಳಕ ಮಾಡ್ಸ್ಯಾಳೆ-ವಿಘ್ನಾವತಿ, ತಾನೂ ಜಳಕ ಮಾಡ್ಕೊಂಡಾಳೆ; ಆ ಅರಮನಿಯಾಗ ಸತಿ-ಪತಿಯಾಗಿ ಅವರಿಬ್ರೂ ಮಲ್ಕೊಂಡಾಗ, (ರಾಗವಾಗಿ) ಆಹಾ ರಾಕ್ಷಸಿಗೆ…..

ಹಿ : ಆ ಹಿಡಂಬ ವಿಘ್ನಾವತಿಗೆ

ಕ : ಒಳ್ಳೇ ಸವರಾತ್ರಿಗೆ ಹಸಿವಾಗೇತಿ ನೋಡ್ರಿ! ರಾಕ್ಷಸಿಗೆ ಹೋಳಿಗಿ, ಹುಗ್ಗಿ ಊಟ ಮಾಡಿದ್ರೆ ಒಂದು ದವಡಿಗೆ ಹತ್ತಿಲ್ಲ; ಒಂದು ಕಸಕಸಿಯಷ್ಟು ಆಗ್ಲಿಲ್ಲ-ಅದು! ಅಮೃತದ ಅಡಿಗಿ ಸವಿ ಕಾಣ್ಲಿಲ್ಲ! ರಾಜ ಭಾರೀ ನಿದ್ರಿ ಮಾಡೋ ಸಮಯದಲ್ಲಿ ವಿಘ್ನಾವತಿ ಎದ್ದು….

ಹಿ : ಆಗಾ ಎದ್ದು-

ಕ : ರಾಜ+ಮಂಚ ಬಿಟ್ಟು ಹೊರಾಗ ಬಂದು ಬಾಜಾರಾದಾಗ ನಿತ್ಕೊಂಡು ವಿಘ್ನಾವತಿ ನೋಡ್ತಾಳೆ-ಲಂಕಾವತಿ ಪಟ್ಣ ಕಂಡ್ಹಾಂಗೆ ಆಗತೈತ್ರಿ ಚಿತ್ರಾವತಿ ಪಟ್ಣ!

ಹಿ : ಆಹಾ ಹೌದೂ!

ಕ : ಓಹೋ, ಯಂಥಾ ಊರಿಗೆ ಬಂದೆ – ಮಹಾರಾಣಿಯಾಗಿ ನಾನು!

ಹಿ : ಹೌದು!

ಕ : ಈಗ ನನಗೆ ಹಸಿವಾಗೇತಿ-ಅಂತ್ಹೇಳಿ ವಿಘ್ನಾವತಿ ತಲಿಮ್ಯಾಲೆ ಮೂರು ಬಗಸಿ ಮಣ್ಣು ತೂರ್ಕೊಂಡು ಬಿಡ್ತು.

ಹಿ : ಆಹಾ!

ಕ : ಆವಾಗ ಮಾಯಾ ಸ್ತ್ರೀ ರೂಪ ಹೋಗಿ-

ಹಿ : ಹೌದು.

ಕ : || ಪದ ||

ಕಣ್ಣು ಬಂಡಿಗಾಲಿ ಅಗಲಾ….ಹರಯನ್ನ ಮಾದೇವ
ಮೂಗು ಗುಂಬಿಗೆರಿಸೀ….ಹರಯನ್ನ ಮಾದೇವ
ಅಗಸಿಯಂತ ಬಾಯಿಯೈ….ಹರಯನ್ನ ಮಾದೇವ

ಕ : ಕಣ್ಣು ಬಂಡಾಗಲಿ, ಮೂಗು ಗುಂಬಿಗೆರಸಿ, ಹಲ್ಲು ಕುಂಟಿಕೂರ್ಗಿ ದಿಂಡು, ಅಗಸಿಯಂತ ಬಾಯಿ, ರೂಪತಾಳಿ ಮಧ್ಯರಾತ್ರಿಯೊಳಗ ಊರಾಗ ಹೊಂಟಿತು, ಆಹಾರ ಮೇಯಾಕ!

ಹಿ : ರಾಕ್ಷಸಿ!

ಕ : ಎತ್ತು ಕಟ್ಟದಲ್ಲಿ ಎತ್ತು ತಿಂತೈತಿ!

ಹಿ : ಎಮ್ಮಿ ನುಂಗತೈತಿ!

ಕ : ಕತ್ತಿ ಕುದ್ರಿ ನುಂಗತೈತಿ! ಅಂಗಳದಾಗ ಮಲಗಿದ ಮಂದಿಗೂ ಹಿಡಂಬಿ ನುಂಗಿತು!

ಹಿ : ಹಿಂಗ ಊಟ ಮಾಡಿ ಒಂದು ಗಂಟಿಗೆ ಮನೀಗೆ ಬಂತು;

ಕ : ಹಿಂಗ ತಾಸಿನಾಗs ಮನಿಗೆ ಬಂದು ಮೂರು ಬಗಸಿ ಮಣ್ಣು ತಲಿಮ್ಯಾಲೆ ತೂರಿಕೊಂಡು ಮಾಯದ ಮೋಹನಾಂಗಿ ರೂಪ ತಾಳಿಬಿಡ್ತು.

ಹಿ : ಆಹಾ!

ಕ : ಸ್ತ್ರೀಯಾಗಿ ಹೋಗಿ ರಾಜನ ಮಂಚದ ಮೇಲೆ ಕುಂತುಗೊಂಡು ಬಿಡ್ತು-

ಹಿ : ಆ ಹಿಡಿಂಬ!

ಕ : (ರಾಗವಾಗಿ) ಮುಂಜಾನೆ ಬೆಳಗಾದ ತಕ್ಷಣ ರೈತರು ಎಲ್ಲರೂ ನೋಡ್ತಾರೇ…. ಊರಲ್ಲಿ

ಹಿ : (ರಾಗವಾಗಿ) ಆಹಾ-

ಕ : ಮನಿ ಮುಂದ ಕಟ್ಟಿದ ಎತ್ತು ಎಮ್ಮಿ ದನಕರುಗಳಿಲ್ಲ!

ಹಿ : ಆಹಾ!

ಕ : “ಹೇ, ತಮ್ಮಾ ನಮ್ಮವು ಎತ್ತು ಇಲ್ಲಲ್ಲ!” ಯಾರೊಯ್ದರು ಹಿಡಕೊಂಡು? “ಎಮ್ಮಿ ಹೊಡಕೊಂಡು ಹೋಗ್ಯಾರ ಯಾರೋ”!

ಹಿ : ನಮ್ಮ ಆಕಳ ಬಿಚ್ಚಿಕೊಂಡು ಹೋಗ್ಯಾರ.

ಕ : ಏನಿದು ಯೂರಾಗ? ಎಂದೆಂದೂ ಕಳವಾಗಿದ್ದಿಲ್ಲ. ದನಕರ ಯಾರು ಒಯ್ದಿರಬಹುದು?

ಹಿ : ಮಹಾರಾಜಗ ಹೇಳಾನು ನಡ್ರಿ!

ಕ : ಚಿತ್ರೋಸೇನ ಮಹಾರಾಜಗ ಹೇಳಾನು ನಡ್ರಿ!

ಹಿ : ಹೌದು.

ಕ : ಒಂಬತ್ತು ಗಂಟಿಗೆ ಅರಮನಿಗೆ ಬಂದ್ರು-ರೈತರು, ಶ್ರೀಮಂತರು, ಬಡವರು ಎಲ್ಲ್ರೂ.

ಹಿ : ನಮೋ ನಮಸ್ಕಾರ ಮಹಾರಾಜ್.

ಕ : ಬರ್ರೀ ಬರ್ರೀ ಏನು ಕಾರಣ?

ಹಿ : ವಿಘ್ನಾವತಿ ಮಲಿಗ್ಯಾಳೆ, ಎತ್ತು ಎಮ್ಮಿ ತಿಂದು ಮದಾ ಏರೈತಿ!

ಕ : ನಮ್ಮ ಮನಿಯಾಗ ಕಳುವಾಗೇತ್ರಿ!

ಹಿ : ಎತ್ತು ಹೋಗ್ಯಾವೆ!

ಕ : ದನಕರು ಹೋಗ್ಯಾವೆ!

ಹಿ : ಎಮ್ಮಿ ಹೋಗ್ಯಾವೆ!

ಕ : ಅಂಗಳದಾಗ ಮಲ್ಕೊಂಡ ಮಂದೀನು ಹೋಗ್ಯಾರ!

ಹಿ : ಹೌದು!

ಕ : ಅಲೇ….ಏನೋ ಮಂತ್ರಿ….?

ಹಿ : ಹೌದು ಮಹಾರಾಜ್!

ಕ : ಎಂದೆಂದೂ ಕಳುವಾಗಿದ್ದಿಲ್ಲ. ಇವತ್ಯಾಕೋ ನಮ್ಮ ಎತ್ತು, ಎಮ್ಮಿ, ದನಕರ ಹೋಗ್ಯಾವೆ ಅಂತ ರೈತರು ಬಂದು ಫಿರ್ಯಾದಿ ಹೇಳ್ತಾರಲ್ಲ!

ಹಿ : ಅಮ್ಮನ ಕಾಲ್ಗುಣ!

ಕ : ಆಹಾ!

ಹಿ : ಈ ವಿಘ್ನಾವತಿಗೆ ನಾನು ಬ್ಯಾಡ ಅಂದ್ರೆ ನನ್ನ ಮಾತ್ಕೇಳ್ಲಿಲ್ಲ ನೀನು; ಕರ್ಕೊಂಡು ಬಂದು ಮನಿಯಾಗ ರಾಣಿ ಮಾಡಿ ಇಟ್ಕೊಂಡು ಬಿಟ್ರಿ! ಇದೆಲ್ಲಾ ವಿಘ್ನಾವತಿದೇ ಕತಿ!

ಕ : ಹೌದೇ?

ಹಿ : ಹೌದು.

ಕ : ಏ ಮಂತ್ರೀ ದನಕಳ್ಳರು ಒಯ್ದಿದ್ದಾರು.

ಹಿ : ಹೌದು.

ಕ : ಎತ್ತು ಎಮ್ಮಿ ಕಳ್ಲರು ಬಿಚ್ಕೊಂಡು ಹೋಗಿದ್ದಾರು; ಏನಾರ ಒಂದು ಕಳುವು ಆಗೇತಿ ಅಂದ್ರ-ನನ್ನ ಮಡದಿ ಮ್ಯಾಲೇ ನಿನ್ನ ಕಣ್ಣಲ್ಲ ಮಂತ್ರೀ!

ಹಿ : ಆಹಾ!

ಕ : ಆ ಮಾತು ಎಂದೂ ಹೇಳ್ಬಾರದು ನೀನು.

ಹಿ : ಹೌದೂ.

ಕ : ಲೋ ರೈತರೆ ಎತ್ತು ಹೋದ್ರೆ ಎತ್ತು ಕೊಡಿಸ್ತೀನಿ, ಎಮ್ಮಿ ಹೋದ್ರೆ ಎಮ್ಮಿ ಕೊಡಿಸ್ತೀನಿ, ದನಕರ ಬೇಕಾದ್ದು ಕೊಡಿಸ್ತೀನಿ, ಗಲಾಟೆ ಮಾಡ್ಬೇಡ್ರಿ-ಇಇಲಿ ಮಲಿಗ್ಯಾಳ ಮಹಾರಾಣಿ! ನಡ್ರಿ ಹೊರಗs-ಅಂದ.

ಹಿ : ಅಂದ!

ಕ : ಓಹೋ, ಮಂತ್ರಿಯವರೇ, ರಾಜ ದಾದ್ ಮಾಡ್ಲಿಲ್ಲ, ಸೋಸಿ ನೋಡ್ಲಿಲ್ಲ!

ಹಿ : ಆಗಲಿ ಬಿಡ್ರಿ,

ಕ : ನಡೀರಿ-ಅಂತ್ಹೇಳಿ ಹೊರಟು ಹೋಗಿಬಿಟ್ರು ರೈತರು!-

ಹಿ : ಪ್ರಜರು!

ಕ : (ರಾಗವಾಗಿ) ಹನ್ನೊಂದು ಗಂಟಿಗೆ ಎಚ್ಚರಾಗಿ ಎದ್ದಾಳೆ ವಿಘ್ನಾವತೀ……ಜಳಕ ಮಾಡ್ಕೊಂಡಾಳೇ…..

ಹಿ : (ರಾಗ) ಹೌದೂ….

ಕ : (ರಾಗವಾಗಿ) ಜರತಾರಿ ಸೀರಿ ಉಟ್ಕೊಂಡಾಳೆ; ಜರತಾರಿ ಕುಬ್ಸ ತೊಟ್ಟು ಅರಮನಿಯಾಗ ನಿಂತ್ಕೊಂಡಾಳೆ!

ಹಿ : ಮಹಾರಾಜ ಕಛೇರಿಗೆ ಹೋಗ್ಯಾನೆ.

ಕ : ವಿಘ್ನಾವತಿ ಏನಂತಾಳೆ-ಎಂಥಾ ಊರಿಗೆ ಬಂದು ನಾನು ಸೇರ್ಕೊಂಡೆ!-ಆಹಾ ಎಷ್ಟು ದಿವಸ ನಾನು ಊಟ ಮಾಡಿದ್ರೂ ಸವಿದಂತೆ ಐತಿ!-

ಹಿ : ಅಂತ ಹೇಳಿ ಹಿರಿ ಹಿರಿ ಹಿಗ್ಗಿದ್ಲು!

ಕ : ದಿನಕ್ಕೆ ದಿನ, ದಿವಸಕ್ಕೆ ದಿವಸ ಎಂಟು ದಿನ ಆದ ಬಳಿಕ ಚಿತ್ರೋಸೇನ ಮಹಾರಾಜ ಒಂದು ದಿನ-ಏನೇ ಮಡದಿ ವಿಘ್ನಾವತಿ….

ಹಿ : ಆಹಾ ಏನ್ ಮಹಾರಾಜ್ರೇ?

ಕ : ನನ್ನ ಕುದ್ರಿ ಪೇರಾಟ ನೋಡಿಲ್ಲೇನು ನೀನು?

ಹಿ : ನಾನು ನೋಡಿಲ್ಲ ಮಹಾರಾಜ್. ನಿನ್ನ ಕುದ್ರಿ ಸವಾರಿ.

ಕ : ನೋಡುವಂತೆ, ನೋಡುವಂತೆ ನಾಳೆ ಸೋಮವಾರ ಈ ಕುದ್ರಿ ಸವಾರನ್ನ ನೀನೇ ನೋಡುವಂತೆ ಮಡದಿ,

ಹಿ : ಆಗಲಿ ಮಹಾರಾಜ್.

ಕ : ಊರ ಅಗಸಿಯೊಳಗೆ ರಣ ಭೈರವನಂತೆ ನಾನು ಕುದ್ರಿ ಭೈರಾಟ ಮಾಡ್ತೀನಿ. ನೀನು ಅರಮನಿ ಮೇಲ್ ಮಾಳ್ಗಿ ಮ್ಯಾಲೆ ನಿಂತ್ಕೊಂಡು ನನ್ನ ಕುದ್ರಿ ಜಿಗಿದಾಟ ನೋಡು- ಅಂದ ಚಿತ್ರೋಸೇನ ಮಹಾರಾಜ.

ಹಿ : ಆಗಲಿ ಮಹಾರಾಜಾ.

ಕ : ಆ ಕೂಡ್ಲೇ ಮಂತ್ರಿ ಕರಿಸಿದ- ಮಂತ್ರೀ, ನಾಳೆ ಮುಂಜಾನೆ ನಾನು ಕುದ್ರಿ ಪೇರಿ ಮಾಡ್ಬೇಕು.

ಹಿ : ಹೌದು.

ಕ : ವಿಘ್ನಾವತಿ ಅರಮನಿ ಮುಂದೆ ಬಲಗಡಿಗೆ ಪಟ್ಟದ ಕುದ್ರಿ ತಂದು ಕಟ್ಟು, ಎಡಗಡೆ ಗಜಭೂಪ ಐರಾವತಿ ಆನಿ ತಂದು ಕಟ್ಟಿಸು.

ಹಿ : ಆಹಾ!

ಕ : ನನ್ನ ಮಡದಿ ಮನಿ ಶೃಂಗಾರ ಆಗಲಿ.

ಹಿ : ಆಗಲಿ ಮಹಾರಾಜ್.

ಕ : ರಾಜ ಹೇಳಿದ್ಹಂಗ ಮಂತ್ರಿ ಕೇಳ್ಬೇಕು!-

ಹಿ : ಕೇಳ್ಬೇಕು!

ಕ : ಅರಮನಿ ಬಾಗಲದಾಗ ಆ ಕೂಡ್ಲೆ ಪಟ್ಣದ ಕುದ್ರಿ ತಂದು ಕಟ್ಟಿಸಿಬಿಟ್ಟ.

ಹಿ : ಬಿಳಿ ಸಾರಂಗದ ಕುದ್ರಿ ಅದು!

ಕ : ಎಡಗಡಿಗೆ ಪಟ್ಣದ ಆನಿ ತಂದು ಕಟ್ಟಿಸ್ಬಿಟ್ಟಾ ಮಂತ್ರಿ!

ಹಿ : ಹೌದು!

ಕ : ಒಂಬತ್ತು ಗಂಟಿಯೊಳಗs ರಾತ್ರಿ ರಾಜ ಮಲ್ಕೊಂಡಾನೆ, ಹನ್ನೊಂದು ಗಂಟಿ ರಾತ್ರಿಗೆ (ರಾಗವಾಗಿ) ವಿಘ್ನಾವತಿ ಎದ್ದು ಹೊರಗ ಬಂದಾಳಾ….

ಹಿ : (ರಾಗವಾಗಿ) ಆಹಾ….

ಕ : (ರಾಗವಾಗಿ) ಆನಿ ಕುದ್ರಿ ನೋಡ್ತಾಳೆ- ಯವ್ವಾ ಇವತ್ತು ಊರಾಗ ನಾ ಹೋಗ್ಬಾರ್ದೆ…ನನಗೆ ತಕ್ಕ ಆಹಾರ ಇಲ್ಲೇ, ಮನಿ ಬಾಗಲದಾಗ ಐತೇ….

ಹಿ : ಆಹಾ ಹೌದು.

ಕ : ಮೂರು ಬಗಸಿ ಮಣ್ಣು ತಲಿ ಮ್ಯಾಲೆ ತೂರ್ಕೊಂಡಾಳ-ವಿಘ್ನಾವತಿ! ರಾಕ್ಷಸಿ ಆಗಿ ಆಕಿ ನಿಂತ್ಕೊಂಡ್ಲು ;- ಆ ಆನಿ ಕುದ್ರಿ ಹರಕೊಂಡು ಓಡಿದ್ವು!

ಹಿ : ಹೌದು!

ಕ : ಆದ್ರೆ ಏಕದಮ್ ಆ ಆನಿ ಹಿಡುದು ಗರ್ ಗರ್ ತಿರುವಿ ಭೂಮಿಗೆ ಅಪ್ಪಳಿಸಿ ಗಳಂ ಅಂತ ಬಾಯಾಗ ಹಾಕೊಂಡು ಬಿಡ್ತು;

ಹಿ : ಕುದ್ರಿಗೂ ನುಂಗಿತು-ಆ ರಾಕ್ಷಸಿ!

ಕ : ಮತ್ತೆ ಮಹಾ ಮೋಹನಾಂಗಿ ರೂಪತಾಳಿ ಒಳಹೋಗಿ ಮಂಚದ ಮೇಲೆ ಮಲ್ಕೊಂಡುಬಿಡ್ತು.

ಹಿ : ಓಹೋ!

ಕ : ಬೆಳಕ್ಹರದು ಮುಂಜಾನೆ ಆಯ್ತು; ಕುದ್ರಿ ಶೃಂಗಾರ ಮಾಡ್ಬೇಕು ಅಂತ ರಾಜ ಅಪ್ಪಣಿ ಆಗೇತಿ-ಅಂತ್ಹೇಳಿ ಮಂತ್ರಿ ಬಂದು ನೋಡ್ತಾನೆ, ನಾಗಲ್ದಾಗ ಕುದ್ರಿನೂ ಇಲ್ಲ ಆನಿನೂ ಇಲ್ಲ!

ಹಿ : ಎರಡೂ ಇಲ್ಲ!

ಕ : ನಮೋ ನಮೋ ನಮಸ್ಕಾರ ಚಿತ್ರೋಸೇನ್ ಮಹಾರಾಜ್.

ಹಿ : ನಮಸ್ಕಾರ ಬಾ ಮಂತ್ರೀಶ.

ಕ : ಏನು ಕುದ್ರಿ ರಡಿ ಮಾಡ್ದೇನು?

ಹಿ : ಕುದ್ರೀನೂ ಇಲ್ಲ ಆನೀನು ಇಲ್ಲ ಮಹಾರಾಜ್

ಕ : ಹೌದೇ?

ಹಿ : ಆಹಾ, ಕುದ್ರಿ ಶ್ರಿಂಗಾರ ಮಾಡ್ಬೇಕು ಅಂತ್ಹೇಳಿ ನಿನ್ನೆs ತಂದು ಕಟ್ಟಿದ್ದೆ! ಇಲ್ಲೀವರೆಗೆ ರೈತರು ಎಷ್ಟೋ ಮಂದಿ ಬಂದು ಎತ್ತು ಹೋಗ್ಯಾವ, ಎಮ್ಮಿ ಹೋಗ್ಯಾವ ಅಂತ ನಮಗೆ ತಾಕೀತ್ ಕೊಟ್ಟರೂ ನಾವು ದಾದ್ ಮಾಡ್ಲಿಲ್ಲ; ಈಗ ಮನಿಯಾಗs ಕಳುವಾಗೇತಲ್ಲ-ಇದಕ್ಕೇನು ಕಾರಣ?

ಕ : ಏನು ಕಳುವು? ಕುದ್ರಿ ಆನಿ ಒಯ್ದಾರೇ ಕಳ್ಳರು?

ಹಿ : ಒಯ್ದಾರೆ ಮರಾಜ್ರೇ.

ಕ : ಹಾ! ಇಲ್ಲೇ ನಮ್ಮ ರಾಜಸಂಸ್ಥಾನ ಮುಂದೇ, ಕಟ್ಟಿದ ಆನಿ ಕುದ್ರಿ ಒಯ್ಯಬೇಕಾದ್ರೆ- ಎಂಥ ಕಳ್ಳ ಒಯ್ದಿದ್ದಾನು!

ಹಿ : ಅದೇ ನೋಡ್ರಿ ಆಲೋಚಿನಿ ಮಾರಾಜ್! (ರಾಗವಾಗಿ) ನಿಮ್ಮ ಮನಿಯಾಗs ಅದ್ರಾನಿ ಪಕ್ಕಾಕಳ್ಳಾ…..

ಕ : (ರಾಗವಾಗಿ) ಆಹಾ….ಎಲೋ ಮಂತ್ರೀ, ನನ್ನ ಮಡದಿ ಮ್ಯಾಲೇ ನಿನ್ನ ಕಣ್ಣು!

ಹಿ : ಹೌದೂ.

ಕ : ಛೇ ಅಂಥಾ ಎಪ್ಪತ್ತಾರು ಆನಿ ತಂದೇನು, ಸಾವಿರ ಕುದ್ರಿ ತಂದೇನು, ಇಂಥಾ ಮಡದಿ ನನಗೆಲ್ಲಿ ಸಿಗಬೇಕು! -ಅಂದ ರಾಜ ಚಿತ್ರೋಸೇನ.

ಹಿ : ಹೌದೂ

ಕ : ಮಂತ್ರೀ

ಹಿ : ಏನ್ರೀ ಧೊರೀ?

ಕ : ಹನ್ನೆರಡು ಸಾವಿರ ಕುದ್ರಿ ಸಾಲಿನಾಗ ಒಂದು ಕರೆ ಕುದ್ರಿ ಐತಲ್ಲ – ಚಿಂತಾಮಣಿ ಕುದ್ರಿ,

ಹಿ : ಹೌದೂ.

ಕ : ಆ ಕುದ್ರಿ ಕಡಿಗೆ ತಗಿ, -ನನ್ನ ಮಡದಿ ನನ್ನ ಕುದ್ರಿ ಭೈರಾಟ ನೋಡ್ಲಿ.

ಹಿ : ಓಹೋ!

ಕ : ಕುದ್ರಿ ತಂದು ರಾಜನ ಅರಮನಿ ಮುಂದೆ ನಿಂದ್ರಿಸಿದ ಮಂತ್ರಿ.

ಹಿ : ಹೌದು.

ಕ : ತಡಿಬಿಗದು ಕುದ್ರಿ ತಯಾರಾತು – “ಮಡದೀ”

ಹಿ : ಏನ್ ಮಹಾರಾಜ್?

ಕ : ಅರಮನಿ ಮೇಲೆ ತುದಿಗೆ ನಿಂತ್ಕೊಂಡು ಕುದ್ರಿ ಭೈರಾಟ ನೋಡು; ಊರ ಮುಂದಕ್ಕ ಈ ಕುದ್ರಿ ತಿರುವುತೇನಿ – ಅಂದ.

ಹಿ : ಕುದ್ರಿ ಮೇಲೆ ಕುತ್ಕೊಂಡು ಒಂದೇಟು ಸೊನ್ನಿ ಕೊಟ್ಟಾನೆ!-

ಕ : ಅಗಸ್ಯಾಗ ಹೋಗಿ ಕುದ್ರಿ ನಿಂದ್ರಿಸಿ ಕುದ್ರಿ ಭೈರಾಟ ಮಾಡ್ಬೇಕಾರೆ, ರೈತರು; ಶ್ರೀಮಂತರು, ಸಾಹುಕಾರ್ರು, ಕುರುಬರು, ಬ್ಯಾಡರು, ವಕ್ಕಲಿಗರು, ಶೆಟ್ರು, ಭೋಗಾರು ಜನ ಎಲ್ಲಾ ನೋಡಾಕ ಹೊಕ್ಕೈತಿ!

ಹಿ : ಹೌದೂ!

ಕ : ಕಣ್ಣಾಕಟ್ಟಿದ್ಹಂಗ ಜನ ನಿಂತು ನೋಡ್ತೈತಿ! ಜೀವದ ಮ್ಯಾಲೆ ಖಬರ ಇಲ್ಲದ್ಹಂಗ ನನ್ನ ಮಡದಿ ನೋಡ್ಲೀ ಅಂತ ಹೇಳಿ ಕುದ್ರಿ ಭೈರಾಟ ಮಾಡ್ತಾನೆ! ಗರಗರ ಚಕ್ರ ತಿರುಗಿದ್ಹಂಗ್ ತಿರುಗುತೈತಿ ಕುದ್ರಿ.

ಹಿ : ವಿಘ್ನಾವತಿ ರಾಣಿ ಅರಮನಿ ಮ್ಯಾಲೆ ನಿಂತು ನೋಡ್ತಾಳೆ,