ಕ : ಆಹಾ ಪಕ್ಷಿಗಳು, ತೋತಾ, ಮೈನಾ, ಗೊರವಂಕ ಪಕ್ಷಿಗಳೆ?

ಹಿ : ಹೌದು ತಾಯೀ

ಕ : ನಮಗೆ ಕಣ್ಣು ಅದಾವೆ? ನೋಡಿ ಹೇಳಾನೆ? ನಾವು ಪರದೇಶಿಯಾಗಿ ಅಡಿವ್ಯಾಗ ಒಂದು ಬಿದ್ದೇಚಪ್ಪ; ನಮಗೆ ಸ್ವಲ್ಪ ನೀರಿದ್ರೆ ತೋರಿಸಿರಪ್ಪ, ನೀರು ಕುಡೀತೀವಿ.

ಹಿ : ಹೌದು!

ಕ : ಓಹೋ ತಾಯೀ, ನಿಮ್ಮ ಕಣ್ಣು ಕಳದಂಥಾ ಪಾಪಿಷ್ಠರು ಯಾರಿರಬಹುದಮ್ಮಾ?

ಹಿ : ಅಪ್ಪಾ ಯಾರೆಂಬುದೇನು ಪತಿ ಮಹಾರಾಜನs ನಮ್ಮ ಕಣ್ಣು ಕಳುದು ಕಳಿಸಿಬಿಟ್ಟ.

ಕ : ಆಗಲಿ ಬರ್ರೆಮ್ಮ, ನಸೀಬಾ ತಪ್ಸೋಕಾಗೋದಿಲ್ಲ. ನಮ್ಮ ರೆಕ್ಕೀ ನಿಮ್ಮ ಕೈಯಾಗ ಕೊಡ್ತೀವಿ – ಹಿಡಕೊಳ್ರಿ – ಅಂತ ಹೇಳಿ ಪಕ್ಷಿಗಳು ರೆಕ್ಕಿಕೊಟ್ಟು ಮೆಲ್ಲಕ ಕರಕೊಂಡು ಹೊಂಟುವು ಒಂದು ಅರ್ಧ ಮೈಲು ದೂರ ಅಡಿವ್ಯಾಗ ಕಪ್ಪತ್‍ಗುಡ್ಡದಾಗ ಏನೈತ್ರೀ?

ಹಿ : ಕರೇ ಕಲ್ಲಿನ ಗವಿ ಐತಿ ನೋಡ್ರಿ!

ಕ : ಗವಿ ಅಂದ್ರೇನು, ಒಂದು ಮನಿ ಇದ್ಹಾಂಗs ಐತ್ರಿ – ಅದು!

ಹಿ : ಹೌದು.

ಕ : ಆ ಗವಿಯಾಗ ಕರಕೊಂಡು ಬಂದವು ಪಕ್ಷಿಗಳು. ಯವ್ವಾ ಈ ಗವಿಯಾಗ ಕುಂದ್ರಾಕ, ನಿಂದ್ರಾಕ, ಮಲಗಾಕ ಆರಾಮ ಐತ್ರೀ.

ಹಿ : ಆಹಾ ಒಳಗ ಹೋದ್ರ ಹದಿನಾರು ಪಾವಟಗಿ ಬಾವಿ ಐತ್ರಿ.

ಕ : ಆ ಬಾವ್ಯಾಗ ನೀರು ಕುಡೀರಿ; ಹೊರಗಡಿಗೆ ಬಂದ್ರೆ ಹಣ್ಣು ಹಂಪಲು, ಕವಳಿಹಣ್ಣು, ಕಾರಿಹಣ್ಣು ಗಿಡಾ ಇದಾವು.

ಹಿ : ಹೌದೇ?

ಕ : ಇಲ್ಲೇ ಇರ್ರಿ – ಅಂತ ಹೇಳಿ ಬರ್ರ್ ಅಂತ ಹಾರಿ ಹೋದವು.

ಹಿ : ಓಹೋ!

ಕ : (ರಾಗವಾಗಿ) “ಯವ್ವಾ ಪಕ್ಷಿಗಳು ಬಂದು ಈ ಗುಡ್ದದಾಗ, ಕಲ್ಲಿನ ಗವಿಯಾಗ ನಮ್ಮನ್ನ ಬಿಟ್ಟು ಹೋಗ್ಯಾವ….ಬಾವಿ ಐತಂತೆ ನಡೀರಿ” – ಅಂತ್ಹೇಳಿ ಕೈ ಸವರಿ ಕೊಂತಾ ಹದಿನಾರು ಪಾವಟಿಗಿ ಇಳುದು ಬಂದು ಕಾಲಿನಿಂದ ನೋಡ್ತಾರೆ, ಕಡೇ ಪಾವಟಿಗ್ಯಾಗ ನೀರು ಸಿಕ್ಕವು!

ಹಿ : ಓಹೋ!

ಕ : ಮುಖಾ ತೊಳಕೊಂಡ್ರು; ಕೈಕಾಲು ತೊಳಕೊಂಡ್ರು, ಐದೈದು ಬಗಸಿ ನೀರು ಕುಡುದ್ರು!

ಹಿ : ಹೌದು.

ಕ : ತಂಗೇರಾ ನಡ್ರಿ ಹೋಗಾನು – ಅಂತ ಗವಿಯಾಗ ಬಂದು ಕುಳುತ್ರು.

ಹಿ : ಆಹಾ!

ಕ : ರಾತ್ರಿ ಯಾವುದೋ ಹಗಲು ಯಾವುದೋ – ಕಣ್ಣುಗಳಿಲ್ಲ! ಹಸುವಾದಾಗ ಕೈ ಸವರಿಕೊಂತ ಕೈ ಸವರಿಕೊಂತ ಹೊರಗಡೆ ಬಂದು ಗಿಡಗಳಿಗೆ ಕೈಹಚ್ಚಿದಾಗ ತಮಗೆ ತಾವೇ ಕವಳಿಹಣ್ಣು ಸಿಗತಾವೆ-

ಹಿ : ತಾಯಿನೋರಿಗೆ!

ಕ : ಕಾರಿಹಣ್ಣು ಸಿಗ್ತಾವೆ-

ಹಿ : ತಾಯಿನೋರಿಗೆ!

ಕ : ಆ ಕವಳಿಹಣ್ಣು. ಕಾರಿಹಣ್ಣು ಹರಕೊಂಡು ಉಡಿಯಾಗ ಕಟ್ಟಿಕೊಂಡು ಬಂದು ಗವಿಯಾಗ ಕುಂತು ಏಳೂ ಮಂದಿ ಊಟಾ ಮಾಡಿ, ಬಾವ್ಯಾಗ ಹೋಗಿ ನೀರು ಕುಡುದು ಗವಿಯಾಗs ಹೋಗಿ ಇದ್ದಾರೆ.

ಹಿ : ಹೌದು.

ಕ : ಈ ರೀತಿಯಿಂದ ಕಾಲ ಕಳೀ ಬೇಕಾದರೆ- ಒಂಬತ್ತು ತಿಂಗಳು ಒಂಬತ್ತು ದಿವಸ ತುಂಬ್ಯಾವೆ, ಏಳು ಮಂದಿ ತಾಯ್ನೋರಿಗೆ!

ಹಿ : ಓಹೋ!

ಕ : ಎಲ್ಲರಿಗಿಂತ ಹಿರಿಯಾಕಿ ಅತನಾವತಿ; ಹನ್ನೊಂದು ಗಂಟೆ ಟೈಮಿನಾಗೆ ಆ ಯಮ್ಮಗ ಬ್ಯಾನಿ ತಗಲಿದವು (ರಾಗವಾಗಿ) ಅಮ್ಮಾ ನಾನು ಎಂದೂ ಹಡದಾಕೀ ಅಲ್ಲ!

ಹಿ : ಹೌದು ತಾಯೀ.

ಕ : (ರಾಗವಾಗಿ) ಬೇಕು ಕುಡಿದೋರಲ್ಲ ತಾಯೀ! ಇದೇ ಚೊಚ್ಚಲು ಗರ್ಭ; ನನಗೆ ಬ್ಯಾನಿ ತಗುಲ್ಯಾವೆ….ತಂಗೀ, ನನ್ನ ಬಾಣಂತನಾ ಮಾಡೋರು ಯಾರು…..!

ಹಿ : (ರಾಗವಾಗಿ) ಹೌದು!

ಕ : ಯಾರೆಂಬುದೇನಮ್ಮಾ! ಇಲ್ಲಿ ಊರೇ ಉದಮಾನೆ? ಸೂಲಗಿತ್ತೇರು ಬಂದಾರೆ! ನಾವೇ ಸೂಲಗಿತ್ತೇರು, ನಾವೇ ಬಾಣಂತೇರು! ನಾವೇ ಜನನಾ ಆಗಾನು ಅಕ್ಕಾ…. ಹೆದರಬೇಡ. ಭಯಸ್ತಳಾಗಬೇಡ. ಅಕ್ಕಾ ನಾವು ಆರು ಮಂದಿ ತಂಗ್ಯಾರು ಇದ್ದೂ ನಿನಗೇನು ಭಯ?

|| ಪದ ||

ತಡಿಯಲಾರೇ ಬ್ಯಾನಿಗಳನು……..ಶಿವಯನ್ನ ಮಾದೇವ
ನಡುವಿನ ಶೂಲಿಗಳೈ………ಶಿವಯನ್ನ ಮಾದೇವ
ತಡಿಯಲಾರೆ ನಡುವಿನ ಶೂಲಿಗಳನು……..ಶಿವಯನ್ನ ಮಾದೇವ
ಹೊತ್ತು ಹೊತ್ತಿನ ಬ್ಯಾನಿ ಕತ್ತೀಲೆ ಕಡಧಾಂಗೈ………ಶಿವಯನ್ನ ಮಾದೇವ

ಕ : ಅಕ್ಕನ ಜನನ ಮಾಡಬೇಕು ಆರು ಮಂದಿ ತಂಗೇರು-

ಹಿ : ಹೌದು ತಾಯೀ

|| ಪದ ||

ಹೊತ್ತು ಹೊತ್ತಿನ ಬ್ಯಾನಿ ಕತ್ತೀಲೆ ಕಡುಧಂಗೆ
ನಾನು ಯಾರಿಗೆ ಹೇಳಲೆವ್ವಾ
ನಡುವಿನ ಶೂಲಿಗಳೈ………

ಕ : ಅಂಗಾರ ಬಾಯಾಗ ಕೊಟ್ಟು, ಇಬ್ಬರು ತಂಗೇರು ರಟ್ಟಿ ಹಿಡದು ಸವಾಲು ಕೀಲು ಹೊಡೆದು, ಬೆನ್ನು ಮೇಲೆ ಚಪ್ಪರಿಸಿದ ತಕ್ಷಣ ಅತನಾವತಿ ಜನನಾ ಹಿರಿಯಾಕಿ ಅಕ್ಕನ ಹೊಟ್ಯಾಗ ಹೆಣ್ಣು ಕೂಸು ಹುಟ್ಟಿತು!

ಹಿ : ಓಹೋ ಹೆಣ್ಣು ಕೂಸು!

ಕ : ಇದೇನು ಹಡದೆಕ್ಕಾ ಹೆಣ್ಣು ಕೂಸನ! ಛೀ….ಹೆಣ್ಣಿನ ಮಾರಿಗೆ ಬೆಂಕಿ ಹಚ್ಚಲಿ; ಗಂಡು ಮಗ ಹುಟ್ಟಿದ್ರೆ ನಮೀಗೆ ಜ್ವಾಪಾನ ಮಾಡತೆತ್ತು.

ಹಿ : ಹೌದು.

ಕ : ಹೆಣ್ಣು ಒಂದು ಹುಟ್ಟಿದ್ರೆ ನಮೀಗೆ ಜ್ವಾಪಾನ ಮಾಡಿತು!-

ಹಿ : ಕಣ್ಣಿಲ್ಲದ ಕುರುಡರು ನಾವು!

ಕ : ಈ ಕೂಸಿಗೆ ನಾವು ಜ್ವಾಪಾನ ಮಾಡ್ಲಾರಿವಿ ಅಂತ್ಹೇಳಿ ಏನ್ಮಾಡಿದ್ರು?

ಹಿ : ಆ ಕೂಸಿಗೆ ಹೊರಗಡಿಗೆ ಒಗದುಬಿಟ್ರು.

ಕ : ಕೂಸು ಟ್ಯಾಹ್….ಟ್ಯಾಹ್…..ಟ್ಯಾಹ್ ಅಂತ ಅಳತೈತಿ ಹೊರಗಡಿಗೆ.

ಹಿ : ಓಹೋ….

ಕ : ತಾಯಿಗುಳೇ ಧಿಕ್ಕಾರ ಮಾಡ್ಯಾರೆ-ಕೂಸ್ನ!

ಹಿ : ಹೌದು!

ಕ : ಎರಡನೇ ತಂಗಿ ಮುತನಾವತಿ ಜನನ ಆಗ್ಯಾಳ!

ಹಿ : ಆ ಯಮ್ಮನೂ ಹಡದಾಳ – ಹೆಣ್ಣು ಕೂಸು!

ಕ : ಇಬ್ಬರಿಗೂ ಹೆಣ್ಣು ಕೂಸು ಆದವು!

ಹಿ : ಹೌದು!

ಕ : ರತನಾವತಿ, ಪೂಲಾವತಿ ಕೂಡಾ ಹೆಣ್ಣು ಕೂಸು ಹಡದ್ರು!

ಹಿ : ಸಯಾವತಿ ಜಯಾವತಿಗೂ ಹೆಣ್ಣೇ ಹುಟ್ಟಿದುವು!

ಕ : ಹಿಂಗs ಆರು ಮಂದಿ ಹೊಟ್ಯಾಗೂ ಆರು ಹೆಣ್ಣು ಕೂಸು ಆದವು!

ಹಿ : ಅವುನ್ನೂ ಹೊರಗಡಿಗೆ ಒಗದ್ರು – ತಾಯಿಗಳೂ!

ಕ : ಈಗ ಎಲ್ಲರಿಗಿಂತ ಚಿಕ್ಕಾಕಿ ಅದಾಳಲ್ಲ- ಪದ್ಮಾವತಿ; ಆಕಿಗೂ ಬ್ಯಾನಿ ತಗಲಿದವು. ಆಗ ಪದ್ಮಾವತಿ ಅಂತಾಳೆ- ಅಕ್ಕ ನಾನು ನಿಮ್ಮ ತಂಗಿ; ನೀವು ಎಂಜಲು ಮಾಡಿದ ಮಲಿ ಹಾಲು ಕುಡುದಾಕಿ ನಾನು!

ಹಿ : ಆಹಾ!

ಕ : ನನ್ನ ಬಾಣಂತನ ಅಷ್ಟು ಮಾಡ್ರೆಮ್ಮಾ.

ಹಿ : ಅಂಜಬೇಡ ತಂಗೀ. ನಾವು ಆರು ಮಂದಿ ಅಕ್ಕನೋರು ಇದ್ದೂ ನಿನಿಗೇನು ಭಯ?

ಕ : ಭಯ ಮಾಡಿಕೋ ಬ್ಯಾಡ.

|| ಪದ ||

ತಾಸು ತಾಸಿನ ಬ್ಯಾನಿ ತಾಳಲಿ ಕಟಧಂಗ

ಕ : (ಮಾತು) ಅಕ್ಕಾ ಜನನ ಮಾಡಿಸ್ರೀ; ಎಂದೂ ಹಡದಾಕಿ ಅಲ್ಲ ನಾನು.

|| ಪದ ||

ನಡುವಿನ ಶೂಲಿಗಳೈ………..
ತಾಸು ತಾಸಿನ ಬ್ಯಾನಿ ತಾಳಲಿ ಕಟುಧಂಗೈ….
ನಾನು ಯಾರಿಗೆ ಹೇಳಲವ್ವಾ ಬ್ಯಾನಿಗಳನು
ನಡುವಿನ ಶೂಲಿಗಳೈ……….
ಕಣ್ಣ ತೆರಿಯೋ ನನ್ನ ಬಾಳಾ
ನಾನು ಹ್ಯಾಂಗ ಮಾಡಲೀ
ಅಕ್ಕ ತಾಳಲಾರೇ…………

ಕ : ಚಿಕ್ಕಾಕಿ ತಂಗಿ ಜನನ ಆಗೋ ಟೈಮಿನಾಗ ಮಧ್ಯಾಹ್ನ ಒಂದು ತಂಟೆ ಟೈಮು. ಕುಲ ಭೀಮ, ಕುಲಪುತ್ರ ಕುಮಾರ ಮುಂಗಾರಿ ಮಿಂಚಿನ್ಹ್ಯಂಗ, ಮುಂಜಾನದಾಗ ಸೂರ್ಯ ಮೂಡಿಧಂಗ ಮೂಡಿದ ಗವಿಯಾಗ!-

ಹಿ : ಓಹೋ! ಗಂಡು ಮಗ ಜನನ ಆದ!

ಕ : ಮಹಾಪಂಡಿತ, ಶೂರ ಗಂಭೀರನಾಗುವಂಥ ಮಗ!

ಹಿ : ಆರೂ ಮಂದಿ ಕೇಳ್ತಾರೆ- ತಂಗೀ ಏನು ಜನನ ಆದೆಮ್ಮ ? ನಿನ್ನ ಹೊಟ್ಯಾಗ ಏನು ಹುಟ್ಟಿತು?

ಕ : ಗಂಡು ಮಗ! ಸಾಕು ಪರಮಾತ್ಮ! ಆರು ಮಂದಿ ಹೊಟ್ಯಾಗ ಆರು ಹೆಣ್ಣು ಕೊಟ್ಟಿ; ತಂಗಿ ಹೊಟ್ಯಾಗ ಗಂಡು ಮಗನ್ನ ಕೊಟ್ಟಿ – ಸಾಕು. ನಮ್ಮನ್ನ ಜ್ವಾಪಾನ ಮಾಡೂ ಅಂಥಾ ಒಬ್ಬ ಮಗ ಹುಟ್ಟಿದ – ಸಾಕು.

ಹಿ : ಹೌದು.

ಕ : ಈ ಆರೂ ಮಂದಿ ಹೆಣ್ಣು ಋತುಮತಿಯಾದ ಬಳಿಕ ಯಾರದೋ ಹಿಂದೆ ಹೋಗಿ ಲಗ್ನ ಆಗೋವು ಇವು!

ಹಿ : ಹೌದು.

ಕ : ಮಗನ ಹೊಕ್ಕಳ+ಹುರಿ ಕೊಯ್ದರು. ಮಗನಿಗೆ ಉಡಿಯಾಗ ಕಟ್ಟಿಕೊಂಡ್ಲು ಪದ್ಮಾವತಿ.

ಹಿ : ಆಹಾ!

ಕ : ಆ ಆರೂ ಕೂಸು ಬಿಸಲಾಗ ಒದರುತ್ತಿದ್ದವಲ್ಲ!-

ಹಿ : ಹೌದು!

ಕ : ತಂಗ್ಯಾರೇ ಹೆಂಗಮ್ಮ! ಈ ಕೂಸುಗಳ ಧ್ವನಿ ಕೇಳಲಾರಿವಿ; ಎತ್ತಿಕೊಂಡು ಬರೋನು ನಡೀರಿ.

ಹಿ : ಹೌದು.

ಕ : ಕೈ ಸವರಿಕೊಂತ ಕೈ ಸವರಿಕೊಂತ ಹೊರಗ ಹೋದ್ರು-

ಹಿ : ಆ ತಾಯಿಗಳು.

ಕ : ಕೂಸು ಸಿಕ್ಕವು; ಉಡಿಯಾಗ ಕಟ್ಟಿಕೊಂಡು ಬಾವಿಗೆ ಇಳುದ್ರು – ಜಳಕ ಮಾಡಾಕ.

ಹಿ : ಪಾವಟಿಗಿ ಮ್ಯಾಲೆ ಕುಂತಾರ ಸಾಲಿಗೆ!

ಕ : ಹಿರಿಯಾಕಿ, ಅಕ್ಕ, ಏನಂತಾಳ – ತಂಗೇರಾ….

ಹಿ : ಏನಮ್ಮಾ ತಾಯಿ?

ಕ : ಆರು ಮಂದಿ ನಾವು ಆರು ಹೆಣ್ಣು ಹಡೆದಿದೆಲ್ವ!

ಹಿ : ಹೌದು!

ಕ : ಈ ಹೆಣ್ಣು ಕೂಸುಗಳನ್ನು ಜೋಪಾನ ಮಾಡೋದಕ್ಕಿಂತ ಈ ಗಂಡು ಮಗ ಒಬ್ಬನಿಗೇ ಏಳು ಮಂದೀನೂ ಮೊಲಿ ಹಾಲು ಕುಡಿಸಿದ್ರ ಲಗೂ ಮಾಡಿ ಪ್ರಾಯಕ್ಕೆ ಬರ್ತಾನೆ,

ಹಿ : ವಯಸ್ಸಿಗೆ!

ಕ : ನಮ್ಮನ್ನ ಜ್ವಾಪಾನ ಮಾಡ್ತಾನೆ. ಈ ಹೆಣ್ಣು ಕೂಸುಗಳನ್ನು ನಾವು ಜೋಪಾನ ಮಾಡೋದು ಆಗೋದಿಲ್ಲ; ಬಾವ್ಯಾಗ ಒಗದು ಬಿಡಾನು- ಅಂತ ಬಾವ್ಯಾಗ ಒಗದು ಬಿಟ್ರು!

ಹಿ : ಆಹಾ!

ಕ : ತಾವೂ ಜಳಕ ಮಾಡಿಕೊಂಡು, ಮಗನಿಗೆ ಜಳಕ ಮಾಡ್ಸಿಕೊಂಡು ಗವಿಯಾಗ ಹೋಗಿ ಕುಂತಾಗ-

ಹಿ : ಆಹಾ!

ಕ : ಕೂಸುಗಳು ಕುಂಬಳಕಾಯಿ ಬುಳ್ಡಿ ಹಂಗ ತೇಲತಾ ಮುಳುಗುತಾ ಪ್ರಾಣಾ ಬಿಡೋ ಸಂದರ್ಭದಲ್ಲಿ – ಆ ಬಾವಿಯೊಳಗ ದೇವಕನ್ನೇರು ಏಳು ಮಂದಿ ಅದಾರೆ; ಅವರು ಜಲಕ್ರೀಡಿ ಆಡಲು ಬಂದಾಗ ಆರೂ ಹೆಣ್ಣು ಕೂಸುಗಳು ಅವರ್ಗೆ ಸಿಕ್ಕವು!

ಹಿ : ಯಾರೋ ಹಡದು ಒಗದು ಹೋಗ್ಯಾರ ಇಲ್ಲಿ!

ಕ : ಜೋಪಾನ ಮಾಡೋನು ಅಂತ ಆ ದೇವಕನ್ನೇರು ಅವನ್ನ ಒಯ್ದು ಪಾತಳಲೋಕದಲ್ಲಿ ಜೋಪಾನ ಮಾಡಾಕ ನಿಂತರು.

ಹಿ : ಆಹಾ! ಅವು ಅವರ ಕೈಯಾಗ ಜೋಪಾನ ಆಗತಾವೆ-ಪಾತಾಳಲೋಕದಾಗೆ!

ಕ : ಈ ಮಗನಿಗೆ (ರಾಗವಾಗಿ) ಏಳೂ ಮಂದಿ ಸೇರಿ ಗವಿಯಾಗ ಸಾಕಿ ಸಲವಿ ಜೋಪಾನ ಮಾಡ್ಯಾರಾ…ಅವ್ವಾ ಪದ್ಮಾವತಿಗೆ ಹಸುವಾದ್ರ ಹೊರಗ ಹೋಗಿ ಕವಳಿಹಣ್ಣು, ಕಾರಿಹಣ್ಣು, ಬಿಕ್ಕಿಹಣ್ಣು, ಗಡ್ಡಿಗೆಣಸು, ಹಣ್ಣು-ಹಂಪಲು ತಂದು ಊಟಾ ಮಾಡಿಸ್ತಾರೆ-ಬಾಣಂತಿಗಳು ತಾವೂ ಊಟ ಮಾಡಿ ಮಗನಿಗೆ ಹಾಲು ಕುಡುಸ್ತಾರೆ.

ಹಿ : ಹೌದೂ!

ಕ : ಐದು ದಿವಸಾತು ಮಗ ಹುಟ್ಟಿದ್ದಕ್ಕ ಈರ್ಲಾ ಮಾಡ್ತಾರ.

ಹಿ : ಎಂಥಾ ಈರ್ಲ ಮಾಡ್ಯಾರ?

ಕ : ಹಣ್ಣು ಹಂಪಲದ ಈರ್ಲಾ. ಒಂಭತ್ತು ದಿವಸಕ್ಕೆ ಕೈ ಸವರಿಕೊಂತಾ ಕೈ ಸವರಿಕೊಂತಾ ಅದಿವ್ಯಾಗ ಹುಡಿಕ್ಯಾಡಿ ಕಾಡೆಮ್ಮಿ ಕಾಡುಕೋಣ ಹಾಕಿದಂಥ ಸಗಣೀ ತಂದು-

ಹಿ : ಹೌದು.

ಕ : ಗವಿ ಸಾರಿಸ್ಯಾರ!

ಹಿ : ಆಹಾ!

ಕ : ಹನ್ನೊಂದು ದಿವಸಕ್ಕ ತೊಟ್ಲ ಕಟ್ಟಬೇಕು (ರಾಗವಾಗಿ) ಅಮ್ಮ ಕಣ್ಣಿಲ್ಲ.

ಹಿ : (ರಾಗವಾಗಿ) ಮಗನ ಮಕ ನೋಡ್ಬೇಕಂದ್ರೆ ಸಾಧ್ವಿಲ್ಲ!

ಕ : ಊರಾಗ ನಾವಿದ್ದಿದ್ದರೆ ಜೋಯಿಸರು, ಶಾಸ್ತ್ರಿಗಳು ಬಂದು ಹೆಸರಿಡುತ್ತಿದ್ದರು!

ಹಿ : ಹೌದು ಹೌದು!

ಕ : ಇಲ್ಲಿ ನೋಡಿದ್ರ ತೊಟ್ಲ ಇಲ್ಲ; ಇದ್ರೂ ಕಟ್ಟಾಕ ತಕ್ಕ ಜಾಗಾ ಇಲ್ಲ!

ಹಿ : ಓಹೋ!

ಕ : ತಾವಿರೋ ಗವಿಯಾಗ ಇಳೇ ಬಿದ್ದಿದ್ದ ಆಲದ ಮರದ ಬೇರುಗಳನ್ನೆ ಹೆಣದು ತೊಟ್ಲಾ ಮಾಡಿದರು!

ಹಿ : ಆ ತೊಟ್ಲದಾಗ ಮಗನಿಗೆ ಹಾಕಿ ಹೆಸರಿಡ್ತಾರೆ-

|| ಪದ ||

ಜೋ ಜೋ ಜೋಯನ್ನ ಬಾಲ
ಸುಮ್ಮನೆ ಮಲಗೋ ದೇವಕೀ ಬಾಲ
ಜೋ ಜೋ ಜೋಯನ್ನ ಬಾಲ
ಸುಮ್ಮನೆ ಮಲಗೋ ದೇವಕೀ ಬಾಲ
ಗಿಂಡಿಲೇ ನೊರೆಹಾಲ ಹಿಂಡಿ ತಂದೇವೋ ಬಾಲ
ತಂಗೀಯ ಉಡಿಯಲ್ಲಿ ಚಂದದಿ ಆಡುವ
ನಮ್ದ ಗೋವಿಂದ ಮಲಗೋ ಬಾಳಾ ಜೋಜೋ
ಯಶೋಧೆಯವರಿಗೆ ಬಂಧನ ಬಿಡಿಸಿ
ಯಶೋಧೆಯ ಮೊಲೆಹಾಲ ಕೂಸಾಗಿ ಕುಡಿದೆ ಜೋಜೋ

ಕ : ಏನು ಹೆಸರಿಡಬೇಕು ತಂಗೀ?

ಹಿ : ಏನಿಡ್ತೀಯೋ ಇಡಮ್ಮ ಅಕ್ಕಾ, ಹಿರಿಯಕ್ಕ.

ಕ : ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ಮಹಾರಾಜರ ಉತ್ತರಕ್ಕೆ ಹುಟ್ಟಿದ ಚಿಕ್ಕ ತಂಗಿಯ ಗರ್ಭದಲ್ಲಿ ಉದ್ಭವಿಸಿದ ಮಗನಿಗೆ ಹೆಸರು ಚಂದ್ರೋಜಿಕುಮಾರ ಮಹಾರಾಜಾ!

ಹಿ : ಓಹೋ ಚಂದ್ರೋಜಿಕುಮಾರ ಅಂತ ಹೆಸರಿಟ್ತರು!

ಕ : ಮಗ ಮುಂದಕ್ಕೆ ಬೆಳೀತೈತೆ!

ಹಿ : ಆಹಾ!

ಕ : ಮೂರು ತಿಂಗಳಾಗ ಹೋಳು ಮಗ್ಗಲೇಳತೈತಿ, ವರ್ಷಕ್ಕ ನಡದಾಡತೈತೆ-

ಹಿ : ಹೌದು.

ಕ : ಓದು ಬರಹ, ಶಾಸ್ತ್ರ ಪುರಾಣ, ಸಂಗೀತ ಶ್ಲೋಕಗಳನೆಲ್ಲಾ ಭೂಮಿ ಮೇಲೆ ಬೆರಳೀಲೆ ಬರದು ವಿದ್ಯಾಭ್ಯಾಸ ಮಾಡಿಸ್ತಾ ಅದಾರೆ ಆ ಕಣ್ಣಿಲ್ಲದ ಕುರುಡು ತಾಯಿಗಳು?

ಹಿ : ಹೌದು!

ಕ : ಒಂದು ಅಕ್ಷರ ತಾಯಿಗಳು ಬರದು ಕೊಟ್ರ, ಮಗ ಎರಡನೇ ಅಕ್ಷರ ಬರದು ಓದುತ್ತಾ ಇದ್ದಾನೆ – ಮಹಾ ಪಂಡಿತ ಮಗ!

ಹಿ : ಮಹಾಜ್ಞಾನಿ!

ಕ : ಅವ್ವಾ ನನಗೀ ವಿದ್ಯಾಬೇಕಿಲ್ಲಮ್ಮಾ ; ಇಷ್ಟು ಸಾಕು. ಸಾಧಕಾ ಮಾಡತೀನಿ ಅಂದ ಹುಡುಗಾ!

ಹಿ : ಗರಡೀ ಸಾಧಕ!

ಕ : ಅದಕ್ಕಾ ತಾಯಿಗಳು ಅಂತಾರೆ – ಅಪ್ಪಾ ಗರಡೀಮನಿ ಎಲ್ಲಿ ಐತಿ? ಇಲ್ಲೇ ಗವಿಯಾಗ ಸಾಧಕ ಮಾಡು.

ಹಿ : ಹೌದು.

ಕ : ಅಮ್ತ್ರಲಾಗ, ಜಂತ್ರಲಾಗ, ಹಿಂಗಾಣಿ, ಮುಂಗಾಣಿ, ಸಾಮ್‍ಸಗತಿ ವಿದ್ಯಾಕಲೀತಾ ಇದ್ದಾನೆ ಮಗ. ವಡೇಕೈ, ಬಡಿಸೋ ಕೈ, ಉಡಿಸೋ ಕೈ, ತಪ್ಪಿಸೋ ಕೈ, ಕತ್ತಿಕಠಾರಿ ಕೈ, ಬಿಲ್ಲು ಬಾಣದ ಕೈ, ಕುಸ್ತಿ ತಾಲೀಮ್, ಲೇಜಿಮ್, ಪಾಠಣ ದಾಂಡ್ ಕಟ್ಟಿಗಿ, ಗರಡಿ ಸಾಮ್ ಮಾಡ್ತಾನೆ!

ಹಿ : ಹೌದು!

ಕ : ಯವ್ವಾ.

ಹಿ : ಏನು ಮಗನೇ?

ಕ : ನಾನು ಸ್ವಲ್ಪ ಬ್ಯಾಟಿ ಆಡಿ ಬರ್ತೀನಿ ಅಪ್ಪಣಿ ಕೊಡ್ತೀರಾ?

ಹಿ : ಆಹಾ!

ಕ : (ರಾಗವಾಗಿ) ಅಪ್ಪಾಕುಮಾರ ಹೋಗಬ್ಯಾಡ ಮಗನೇ ಇಲ್ಲೆ ಇರು.

ಹಿ : ಇಲ್ಲೇ ಸಮೀಪದಲ್ಲಿ ಬ್ಯಾಟಿ ಆಡ್ತೀನಮ್ಮಾ ದೂರ ಹೋಗೋದಿಲ್ಲ.

ಕ : ಎಲ್ಲಾರಿಗಿಂತ ಹಿರಿಯಾಕಿ ಅಮನಾವತೆಮ್ಮ ಒಂದು ಸೀರಿ ಹರಿದು ಮಗನ ಮುಕಳಾಗ ಒಂದು ಲಂಗೋಟಿ ಹಾಕಿದಳು; ಇನ್ನೊಂದು ಮಳಹರಿದು ತಲಿ ಮ್ಯಾಲೆ ಹಾಕಿದ್ಲು.

ಹಿ : ಏಳು ಮಂದಿ ತಾಯಿಗಳಿಗೂ ನಮಸ್ಕಾರ ಮಾಡಿ ಮಗ ಬ್ಯಾಟಿ ಆಡಾಕ ನಡದ.

ಕ : ಹುಲಿ, ಹೊನ್ನಿಗ, ಕಡತಿ, ಕಾಡೆಮ್ಮಿಗಳಂಥ ಮೃಗಜಾತಿನ ಬ್ಯಾಟಿ ಆಡಿದ ಮಗ;

ಹಿ : ಶೂರ ಮಗ!

ಕ : ವಾಪಾಸು ಗವಿಗೆ ಬರುವಾಗ ತಲಿ ಮ್ಯಾಲೆ ಇದ್ದಂಥ ಸೀರೀ ತುಂಡು ತಗದು, ಹಣ್ಣು-ಹಂಪಲು, ಗಡ್ಡಿ-ಗೆಣಸು ಎಲ್ಲಾ ದೊಡ್ಡ ಗಂಟು ಕಟ್ಟಿಕೊಂಡು ತಲೆ ಮೇಲೆ ಹೊತ್ಗೊಂಡು ಬರಬೇಕಾದ್ರ-

ಹಿ : ಅಡವಿಯಿಂದ ಬರಬೇಕಾದ್ರ-

ಕ : ಇಲ್ಲಿ ಗವಿಯಲ್ಲಿ ಇದ್ದಂಥ ತಾಯಿಗ್ಳು ಮಾತಾಡಿಕೊಂತಾ ಅದಾರ ನೋಡ್ರಿ-

ಹಿ : ಏನಂತಾ?

ಕ : ಬ್ಯಾಟಿ ಆಡ್ಕೊಂತಾ ಬ್ಯಾಟಿ ಆಡ್ಕೊಂತಾ ನಮ್ಮ ಊರು ಚಿತ್ರಾವತಿ ಪಟ್ಣದ ಕಡಿಗೆ ಮಗ ಹೋದುಗೀದಾನು! ನಮ್ಮ ಸವತಿ ವಿಘ್ನಾವತಿ ಐದಾಳೇ ಮಗನಿಗೆ ನೋಡಿ ಏನಾರ ಮೋಸ ಮಾಡ್ಯಾಳು! ಆ ಊರ ಕಡಿಗೆ ಹೋಗಧಂಗ ಅವನಿಗೆ ಒಂದು ಭಯ ತೋರಿಸ್ಬೇಕು;

ಹಿ : ಆಹಾ-ಹೌದು! ಹೆದರಿಕಿ ಹಾಕಬೇಕಮ್ಮಾ.

ಕ : ಅಮ್ಮಗಳೀರಾ! ನಿಮ್ಮ ಮಗ ಬಂದೆ.

ಹಿ : ಬಾಪ್ಪಾ ಏನು ತಂದೆ?

ಕ : ಹಣ್ಣು-ಹಂಪಲು ತಂದೆ ಊಟ ಮಾಡ್ರಿ-ಅಂತೇಳಿ ಐದೈದು ಬಗಸಿ ಹಣ್ಣು ಉಡಿಯಾಗ ಹಾಕಿದ; ಅವರು ಹಣ್ಣು ಊಟಾ ಮಾಡಿದ್ರು. ಬಗಸೀಲೆ ನೀರು ತಂದು ತಂದು (ರಾಗವಾಗಿ) ಕುಡಿಸಿದ ಮಗಾ!

ಹಿ : ಹೌದು-ತಾಯಿನೋರಿಗೆ!

ಕ : ಆನಂದ ಆಯ್ತು ಮಗನೇ. ನಾವು ಏಳು ಮಂದೀ ಮೊಲಿ ಹಾಲು ಕುಡಿಸಿದ್ದಕ್ಕೂ ಸಾರ್ಥಕಾತು; ನಮೀಗೆ ಜೋಪಾನ ಮಾಡ್ತಾ ಅದೀ-ನೀನು!

ಹಿ : ಆಹಾ!

ಕ : ಅಪ್ಪಾ ನಿನಗೊಂದು ಸುದ್ದಿ ಹೇಳ್ತೀವಿ.

ಹಿ : ಏನು ಸುದ್ದಿ ಹೇಳ್ರಮ್ಮಾ ಅದು?

ಕ : ಪೂರ್ವಾ, ಪಶ್ಚಿಮಾ, ಉತ್ತರಾ, ದಕ್ಷಿಣಾ-ಈ ನಾಲ್ಕು ದಿಕ್ಕಿನೊಳಗ ಉತ್ತರ ದಿಕ್ಕಿಗೆ ಮಾತ್ರಾ ನೀನು ಬ್ಯಾಟಿಗೆ ಹೋಗಬ್ಯಾಡ-ಮಗನೇ,

ಹಿ : ಯಾಕಮ್ಮಾ?

ಕ : ಆ ದಿಕ್ಕಿನಾಗ ದೊಡ್ಡ ಭೂತೈತಿ. ಆ ಕಡಿಗಿ ಹೋದ್ರ ಯಾರನೂ ಬಿಡೋದಿಲ್ಲ; ಗೋಣು ಮುರುದು ಬಿಡತೈತಿ! ಆ ಕಡಿಗೆ ಮಾತ್ರ ಹೋಗಬ್ಯಾಡ ಮಗನೇ – ಅಂದು ತಾಯಿನೋರು.

ಹಿ : ಆಹಾ! ಉತ್ತರ ದಿಕ್ಕಿನಾಗ ದೊಡ್ಡಭೂತ ಐತೇನಮ್ಮಾ? ಹೋಗಾದಿಲ್ಲ ಬಿಡ್ರಮ್ಮ ಅಂದ.

ಕ : ದೆವ್ವ ಐತಿ ಅಂತ ತಾಯಿಗಳು ಹೇಳಿದ್ರಲ್ಲ; ಮಗ ಮನಸ್ಸಿನಾಗs ಏನಂತಾನ?

ಹಿ : ಏನಂತಾನ?

ಕ : (ರಾಗವಾಗಿ) ಯಾವಾಗ ದೆವ್ವಗ ನೋಡ್ಲೈ ನಾನೈ….ಹ್ಯಂಗ ಇರಬಹುದೋ ದೆವ್ವಾ……

ಹಿ : (ರಾಗವಾಗಿ) ಆ….

ಕ : (ರಾಗವಾಗಿ) ದೆವ್ವನ ಕೂಟಾಗ ಯಾವಾಗ ಕುಸ್ತಿ ಆಡ್ಲೀ….ಆದ್ರೆ ಬೈರೂಪಕ ಅಂತಾನೆ-

ಹಿ : ಹೋಗೋದಿಲ್ಲಮ್ಮಾ ಆ ಕಡಿಗೆ, ಹೋಗೋದಿಲ್ಲಮ್ಮ ಉತ್ತರದ ಕಡಿಗೆ.

ಕ : ಹೆದರಿಕೆ ಆತು ಬಿಡು ತಾಯಿ, ಕನಸಿನಾಗೂ ಆ ಕಡಿಗೆ ಹೆಜ್ಜಿ ಹಾಕೋದಿಲ್ಲ.

ಹಿ : ಮಗನೇ ನಿನ್ನ ಮಾತು ಕೇಳಿ ನಮಿಗೆ ಏಳು ಮಂದಿ ತಾಯಂದ್ರಿಗೂ ಸಮಾಧಾನಾ ತಪ್ಪಾ.

ಕ : ಆದರೆ, ಹಾಂಗ ಹೋಗೋದಿಲ್ಲ ಅಂತ ಹೇಳಿದ ಮಗ ಅದೇ ದಿಕ್ಕಿನಾಗೇ ನಡದ!

ಹಿ : ಅದೇ ದಿಕ್ಕಿನಾಗೇ ಐತಿ ಚಿತ್ರಾವತಿ ಪಟ್ಣ!

ಕ : ಒಂದು ಮೈಲು; ಎರಡು ಮೈಲು, ಒಂದು ಹರ್ದಾರಿ, ಎರಡು ಹರ್ದಾರಿ ಬ್ಯಾಟಿ ಆಡ್ಕೊಂತಾ, ಬ್ಯಾಟಿ ಆಡ್ಕೊಂತ ಬರ್ತಾನೆ – ಮಗ.

ಹಿ : ಆಹಾ!

ಕ : ಯಾವಲ್ಲಿ ಇರಬಹುದು ದೆವ್ವ? ಅದು ಕಾಣವಲ್ದು! ಕೆಮ್ಮಣ್ಣು ಮಟ್ಟಿ ನೋಡಿದಾ ಅಲ್ಲೀ ಇಲ್ಲ; ಕಪ್ಪತ್ತು ಗುಡ್ದದಾಗ ನೋಡಿದಾ ಅಲ್ಲೂ ಇಲ್ಲ!

ಹಿ : ಆ…..