ಕ : ಜರತಾರಿ ಸೀರಿ ಉಟ್ಕೊಂಡು, ಜರತಾರಿ, ಕುಬ್ಸ ತೊಟ್ಕೊಂಡು, ಬೈತಲಿ ತಕ್ಕೊಂಡು, ಹುವ್ವ ಮುಡ್ಕೊಂಡು, ಕನ್ನಡಿ ನೋಡ್ಕೊಂಡು, ರಾಜನ ಕುದ್ರಿ ಭೈರಾಟ ಆಯಮ್ಮ ನೋಡುವಲ್ರೀ, (ರಾಗವಾಗಿ) ಊರ ಮ್ಯಾಗ ನೋಡಾಕ

ಹತ್ಯಾಳೈ….

ಹಿ : ಹೌದು!

ಕ : ಈ ಊರಾಗ, ಏಸುದಿವಸ ಈ ಮಂದಿ ಮಕ್ಕಳ್ನ ತಿಂದ್ರೂ ಸವಿಯೋದಿಲ್ಲ!- ಅಂತ್ಹೇಳಿ ಹಿರಿಹಿರಿ ಹಿಗ್ಗುತಾಳೆ.

ಹಿ : ಭಾರಿ ಸಂತೋಷದ ರಾಕ್ಷಸಿಗೆ!

ಕ : ಬಜಾರದ ಕೊನೆ ಲಾಲ್‍ಪ್ಯಾಟಿ ,ಶಹಬಾದ್ ಪ್ಯಾಟಿ, ಹೀಗೆ ಬಜಾರದಲ್ಲಿ ನೋಡ್ಕೊಂತಾ, ಏಳು ಅಂತಸ್ತಿ ಅರಮನಿ ಕಮಾನ್ ಕಿಟಿಗ್ಯಾಗ ಕುಂತಂಥ ಏಳು ಮಂದಿ ಸತಿಯರಿಗೆ ನೋಡಿಬಿಟ್ಲು – ವಿಘ್ನಾವತಿ!

ಹಿ : ಆಹಾ!

ಕ : ಕಮಾನ್ ಕಿಟಕಿಯೊಳಗೆ ರಾಜನ ಮಡದಿಯರು ಕೂಡಾ ಕುಂತು ಆ ಭೈರಾಟ ನೋಡ್ತಿದ್ದರು;

ಹಿ : ಆಹಾ!

ಕ : ಗೌಡೇರಾ….

ಹಿ : ಏನಮ್ಮಾ ತಾಯಿ?

ಕ : ಅದು ರಾಜಂದ್ರು ಕುದ್ರಿ ಭೈರವು ಇರ್ಲಿ ಬಿಡು; ಈ ಬಜಾರದಾಗ ಆ ಕಮಾನ್ ಕಿಟಿಗ್ಯಾಗ ಕುಂತಾರಲ್ಲ ಏಳು ಮಂದಿ ಹೆಣ್ಣು ಮಕ್ಕಳು – ಯಾರೇ ಗೌಡೇರ್ಯಾ ಅವ್ರು?- ಅಂತಾ ಕೇಳಿದಳು – ವಿಘ್ನಾವತಿ.

ಹಿ : ಮಹಾರಾಜನ ಮಡದಿಯರು ತಾಯೀ!- ಏಳು ಮಂದಿ; ಅವರು ನಿಮ್ಮ ಅಕ್ಕಂದಿರು

ಕ : ನಿಮಗೆ ಗೊತ್ತಿಲ್ಲೇನು?

ಹಿ : ಗೊತ್ತಿಲ್ಲಮ್ಮ ತಾಯೇರೇ!

ಕ : ಓಹೋ!

ಹಿ : ಅತನಾವತಿ, ಮುತನಾವತಿ, ರತನಾವತಿ, ಪೂಲಾವತಿ, ಸಯಾವತಿ, ಜಯಾವತಿ ಕಡಿಗೆ ಕುಂತಾಳಲ್ಲ ರೂಪದಲ್ಲಿ ಸೌಂದರ್ಯವತಿಯಾದ ಪದ್ಮಾವತಿ ; – ಈ ಏಳು ಮಂದಿ ಚಿತ್ರೋಸೇನ ಮಹಾರಾಜಗೆ ಲಗ್ನ ಆದಂಥ ಮಡದಿಯರು- ಅಂದ್ರು ಗೌಡೇರು.

ಕ : ಇಷ್ಟ ಮಾತು ಕೇಳ್ಬೇಕಾದ್ರೆ ಹೊಟ್ಯಾಗ ಉರಿ+ಬೆಂಕಿ ಬಿದ್ಹಂಗಾತು ವಿಘ್ನಾವತಿಗೆ!

ಹಿ : ಆಹಾ!

ಕ : ಮೋಸಗಾರ, ಮನಘಾತಕ, -ಚಿತ್ರೋಸೇನ! ನನಗೆ ಲಗ್ನ ಆಗಿಲ್ಲ, ನನಗೆ ಮಡದೇರು ಇಲ್ಲ ಅಂತ ಅಡಿವ್ಯಾಗ ಹೇಳಿ ಕರ್ಕೊಂಡು ಬಂದು, ನನಗೆ ಈ ಅರಮನಿಯಾಗ ಇಟ್ನಲ್ಲ! ಈಗೇನೋ ನನ್ನ ಮ್ಯಾಲೆ ಮನಸು ಐತಿ – ಪ್ರೇಮ ಮಾಡ್ತಾನೆ. (ರಾಗವಾಗಿ) ನನ್ನ ಮೇಲೆ ಪ್ರೇಮ ಮುರಿದ ಬಳಿಕ ಮಡದಿಯರ ಕಡಿಗೆ ಹೋಗ್ತಾನೆ ರಾಜಾ…

ಹಿ : ಆಹಾ….!

ಕ : (ರಾಗವಾಗಿ) ಆಹಾ ರಾಜಾ ನಿನ್ನ ಏಳು ಮಂದಿ ಮಡದಿಯರು ಹ್ಯಾಂಗ ಅದಾರಲ್ಲ! ಇವರಿಗೆ ಮೋಸದಿಂದ ಕೊಲ್ಲಿಸಬೇಕೂ….

ಹಿ : (ರಾಗ) ಆಹಾ!

ಕ : ಇವರು ಸವತೇರು ಅದಾರ ಅಂದ ಬಳಿಕ; ಇವರಿಗೆ ಬಿಡಬಾರದು ಅಂದ್ಲು- ವಿಘ್ನಾವತಿ,

ಹಿ : ಇವರಿಗೆ ತಲೀ ಹೊಡ್ಸಬೇಕು.

ಕ : ಅಂದ್ರ ರಾಜ ನನ್ನ ಮ್ಯಾಲೆ ಪ್ರೀತಿ ಇರ್ತಾನೆ!

ಹಿ : ಹೌದು.

ಕ : ನೋಡ್ರಿ ಇಲ್ಲಿ, ವಿಘ್ನಾವತಿ ತಲಿಗೆ ಸೆರಗಾ ಕಟ್ಕೊಂಡು ಬಿಟ್ಟಾಳ; ಸುಣ್ಣದಬಟ್ಟು ಕಪಾಳಕ್ಕ ಹಚ್ಚಿಕೊಂಡು ಸೀರಿಕುಬ್ಸ ಹರಕೊಂಡು ಬಂದು ಮಂಚದ ಮ್ಯಾಲೆ ಮಲ್ಕೊಂಡು ಗಡಾಬಡಾ ಉಳ್ಯಾಡ್ತಾಳೆ!

ಹಿ : ಆಹಾ!

ಕ : ಗೌಡೇರಾ ಜಲ್ದೀ ಹೋಗಿ ಮಹಾರಾಜರಿಗೆ ಹೇಳ್ರಿ – ನನಗೆ ಹೊಟ್ಟಿಶೂಲಿ, ಎದ್ದೈತಿ, ಜಲ್ದಿ ಹೋಗಿ ಬರ್ರಿ.

ಹಿ : ಕರ್ಕೊಂಡು ಬರ್ರಿ ತಾಯೀ…..

ಕ : ಗೌಡೇರು ಬಂದ್ರು ಓಡೋಡಿ; ಮಹಾರಾಜ ಕುದ್ರಿ ಭೈರಾಟ ಮಾಡ್ತಿದ್ನಲ್ಲ, ಅಲ್ಲಿಗೆ ಬಂದು-

ಹಿ : ನಮಸ್ಕಾರ ದೊರೀ.

ಕ : ಏನ್ರಮ್ಮಾ?

ಹಿ : ಏನಂಬೋದೇನ್ರೀ! ನಿಮ್ಮ ಮಹಾರಾಣಿಗೆ ಹೊಟ್ಟಿಶೂಲಿ ಎದ್ದೈತಿ, ಸಾಯ್ತಾ ಇದ್ದಾಳೆ – ಅರಮನೆಯೊಳಗೆ.

ಕ : ಅಷ್ಟು ಮಾತು ಕೇಳಿದ ತಕ್ಷ್ಣಕ್ಕೆ ರಾಜ ಕುದ್ರಿಹಾರಿ.

|| ಪದ ||

ದಿಕ್ಕಿಲ್ದೆ ಓಡ್ತಾನೆ….ಹರಯನ್ನ ಮಾದೇವ
ರಾಜ ದಿಕ್ಕಿಲ್ದೆ ಓಡ್ತಾನೆ….. ನಮಃ ಶಿವಾಯ
ಏನೇ ಮಡದಿ ವಿಘ್ನಾವತೀ…..ಹರಯನ್ನ ಮಾದೇವ.

ಹಿ : (ರಾಗವಾಗಿ) ಆಹಾ!

ಕ : (ರಾಗವಾಗಿ) ಮಧುರವಾಣೀ! ನಿನ್ನ ತುಟಿಗೆ ಹಲ್ಲಿನ ಗಾಯಾ-ಮಡದಿ ವಿಘ್ನಾವತೀ….ಸಾಯಬೇಡ ಎದ್ದೇಳೂ….ಏನು ಬೇಕು? ಏನಾಯ್ತು ನಿನಗೆ ಹೇಳೂ….

ಹಿ : (ರಾಗವಾಗಿ) ಐಯ್ಯೋ ನನ್ನ ಹೊಟ್ಟೀ….ತಡಿಲಾರೆ….ಮಹಾರಾಜ ಹೊಟ್ಟಿಶೂಲಿ ತಡಿಲಾರೇ…..

ಕ : ಸಮಾಧಾನ ತಂದ್ಕೊ ಮಡದಿ, ಎದರಿಂದ ಬಂತು ಹೊಟ್ಟಿಶೂಲಿ?

ಹಿ : ಓಹೋ, ಏನಿಲ್ರೀ ರಾಜಾ….(ರಾಗವಾಗಿ) ನಿಮ್ಮ ಕುದುರಿ ಸವಾರಿ, ಭೈರಾಟ ನೋಡ್ಕೊಂತಾ ನಿಂತಿದ್ದೇ….

ಕ : (ರಾಗವಾಗಿ) ಏಳು ಅಂತಸ್ತಿನ ಮಾಳ್ಗಿ ಮ್ಯಾಲೆ!

ಹಿ : ಹೌದು.

ಕ : ಅತನಾವತಿಯಂತೆ ನಿಮ್ಮ ಮಡದಿ?

ಹಿ : ಹೌದು.

ಕ : ಮುತನಾವತಿ, ರತನಾವತಿ, ಪೂಲಾವತಿ, ಸಯಾವತಿ, ಜಯಾವತಿ ಚಿಕ್ಕಮಡದಿ ಪದ್ಮಾವತಿ-?

ಹಿ : ಹೌದು!

ಕ : ಈ ಏಳು ಮಂದಿ ಕುಂತ್ಕೊಂಡು ಕೆಟ್ಟ ಕಾಡ್ಗಣ್ಣಿನಿಂದ ನನ್ನ ಕಡಿಗೆ ನೋಡಿಬಿಟ್ರು- ಕಣ್ಣದೃಷ್ಟಿ ತಗಲಿದ್ದಕ್ಕೆ ಈ ಹೊಟ್ಟೆಶೂಲಿ ಎದ್ದೈತಿ-ಅಂದ್ಲು ವಿಘ್ನಾವತಿ!

ಹಿ : ರಾಣಿ ಏನ್ ಔಷಧ ಇದಕ್ಕೆ?

ಕ : ಅವರ ಕಣ್ಣು ದೃಷ್ಟಿ ತಗಲಿದ್ದಕ್ಕೆ ಈ ಹೊಟ್ಟಿಶೂಲಿ ಬಂದೈತ್ರಿ, ಇದಕ್ಕೆ ಏನು ಔಷಧ ಕೊಟ್ರೂ ಹೋಗಾದಿಲ್ರಿ!

ಹಿ : ಆಹಾ!

ಕ : ಇದು ಹೋಗ್ಲಿಕ್ಕೆ ನಾನು ಉಳಿಯೋದಕ್ಕೆ ಒಂದು ಮಾತು ಹೇಳ್ತೀನಿ ಕೇಳ್ತೀರಾ?

ಹಿ : ಹೇಳು ಅದು.

ಕ : ನನ್ನ ಮ್ಯಾಲೆ ಕಣ್ಣುದೃಷ್ಟಿ ಬಿಟ್ಟಂಥ ಆ ಏಳು ಮಂದಿ ರಂಡೇರಿಗೆ ಹೆಡಮುರಿಗಿ ಬಿಗಬೇಕ್ರಿ.

ಹಿ : ಹೌದು!

ಕ : ಅವರಿಗೆ ಬಜಾರದಾಗಿಂದ ಎಳ್ಕೊಂಡು ಸರೋವರದಲ್ಲಿ ಒಯ್ದು ಕಡಿಬೇಕ್ರಿ. ಕಡದು ಅವರ ಹದಿನಾಲ್ಕು ಕಣ್ಣು ತೊಗೊಂಡು ಬರ್ಬೇಕ್ರಿ.

ಹಿ : ಹೌದು.

ಕ : ಆ ಕಣ್ಣಿನ ಮ್ಯಾಲೆ ಕುಂತ್ಕೊಂಡು ನಾನು ಒಂದು ಹಂಡೆ ನೀರು ಎರ್ಕೊಂಡು ಬಿಟ್ರೆ ಈ ಹೊಟ್ಟಿಶೂಲಿ ಹೋಗ್ತೈತಿ- ಅಂದ್ಲು ವಿಘ್ನಾವತಿ!

ಹಿ : ಆಹಾ!

ಕ : ಆಗಲಿ ಬಿಡು ಮಡದಿ; ಅವರಿಗೆ ಕೊಲ್ಲಿಸಿ ಅವರ ಕಣ್ಣು ತರ್ಸಿ ನಿನಗೆ ಕೊಟ್ರಾತಿಲ್ಲು? ಅವರ ಕಣ್ಣಿನ ಮ್ಯಾಲೆ ಕುತ್ಕೊಂಡು ನೀರ ಎರ್ಕೊವಂತಿ ಮಡದೀ; ಒಂದೇ ಒಂದು ಎರಡು ಗಂಟ್ಯಾಗ ಈ ಕೆಲ್ಸ ಮಾಡ್ತೀನಿ -ಅಂದ ಚಿತ್ರೋಸೇನ.

ಹಿ : ಆಹಾ!

ಕ : ಹೇ ಮಂತ್ರೀ, ಲಗೂನ ಮಾಡಿ ಬಾ ಇಲ್ಲಿ.

ಹಿ : ಬಂದೆ ಮಹಾರಾಜಾ.

ಕ : ನೀನು ಈ ಕೂಡ್ಲೇ ನನ್ನ ಏಳೂ ಹೆಂಡ್ರನ್ನ ಹೆಡಮುರಿಗೆ ಕಟ್ಟಿ ಅಡವಿಗೆ ತಗೊಂಡ್ಹೋಗು; ಆ ರಂಡೇರ ಕೊಲ್ಲಿಸಿ ಅವರ ಹದಿನಾಲ್ಕು ಕಣ್ಣು ತಗೊಂಡು ಬಾ.

ಹಿ : ಇದು ಯಾಕೆ ಮಹಾರಾಜ್ರೇ?

ಕ : ಅವರ ಕಣ್ಣು ದೃಷ್ಟಿ ತಗಲಿದ್ದಕ್ಕೆ ನನ್ನ ಹೊಸ ಮಡದಿ ಸತ್ತು ಹೋಗ್ತಾಳೆ; ಹೂಂ ಜಲ್ದೀ-

ಹಿ : ಅಂಥಾ ಧರ್ಮದ ತಾಯಿ ಏಳು ಮಂದಿಗೂ ಕಡಿಸಬ್ಯಾಡ್ರಿ ಮಹಾರಾಜಾ…

ಕ : ಮಂತ್ರೀ ತಡಮಾಡಬ್ಯಾಡ.

ಹಿ : ಮಹಾರಾಜರೇ ಅವರು ಧರ್ಮದವರು; ಅವರು ಅಂದದ್ದೆಲ್ಲ; ಆಡಿದ್ದಲ್ಲ; ತಪ್ಪು ಇಲ್ಲ – ತಡಿಇಲ್ಲ; ಒಮ್ಮಿಂದೊಮ್ಮಿಗೇ ಕಡಿಯಾಕ ಹುಕುಂ ಕೊಟ್ಟೀರಲ್ಲ! ಮಹಾರಾಜಾ ಇದು ಧರ್ಮ ಅಲ್ಲ, ಕಡಿಸಬ್ಯಾಡ್ರಿ.

ಕ : ಮಂತ್ರಿ ದೈನಾಸ ಪಡ್ತಾನ-ರಾಜಾಧಿರಾಜಾ, ಅವರು ಬೇಕಾಗಿಲ್ಲಾ?- ಪ್ರಾಣದಾನ ಮಾಡಿಬಿಟ್ಟು ಬಿಡ್ರಿ- ಹೋಗಲಿ ಅಡವಿ ಪಾಲಾಗಿ.

ಹಿ : ಮಂತ್ರಿ ಬೇಡಿಕೊಂತಾನ – ಕೈ ಮುಗುದು.

ಕ : ಎಲೇ ಮಂತ್ರೀ, ನನ್ನ ಮಾತಿಗೆ ಪ್ರತ್ಯುತ್ತರ ಕೊಂಡಾಗಿಲ್ಲ. ಜಲ್ದೀ ಹೋಗಿ ಆ ಹಾಳಾದ ರಂಡರೇನ ಕರಕೊಂಡು ಹೋಗಬೇಕು ನೀನು.

ಹಿ : ಆಹಾ!

ಕ : ಈ ಕೂಡ್ಲೇ ಹದಿನಾಲ್ಕು ಕಣ್ಣು ತಂದು ಕೊಡಬೇಕು – ನೀನು.

ಹಿ : ಹುಅದು.

ಕ : ನೀನೇನಾದ್ರೂ ಹೋಗ್ದಾ ಇದ್ದರೆ ನಿನ್ನ ಕಡಿಸ್ತೀನಿ-ಅಂದ ರಾಜ!

ಹಿ : ಆಗಲ್ರೀ ಮಾರಾಜ್.

ಕ : ಆ ಕೂಡ್ಲೇ ಹನ್ನೆರಡುಮಾರು ಹಗ್ಗ ತೊಗೊಂಡಾ; ಬಿಚ್ಚುಗತ್ತಿ ತೊಗೊಂಡಾ- ಮಂತ್ರಿ.

ಹಿ : ಒಂದು ಬೆಳ್ಳಿ ಬಟ್ಲಾ ತೊಗಂಡು ಕಣ್ಣೀರು ತಕ್ಕೊಂತಾ ಏಳು ಮಂದಿ ತಾಯಿನೋರ ಮನಿಗೆ ಬಂದ!

ಕ : ಅದೀರೇನಮ್ಮಾ?

ಹಿ : ಅದೀವಿ ಬರ್ರೀ ಮಂತ್ರೀ.

ಕ : ಏಳು ಮಂದಿ ಅಕ್ಕ ತಂಗೇರಾ, ನಿಮಗೆ ಮರಣ ಬಂತಲ್ಲಮ್ಮಾ!

ಹಿ : ಯಾಕಪ್ಪಾ ಏನು ಕಾರಣ ಬಂತು ಮಂತ್ರೀ ನಮಗ ಮರಣ?

ಕ : ಏನಿಲ್ಲಮ್ಮಾ ನಿಮ್ಮ ರಾಜರು,-

ಹಿ : ಹೌದೂ-

ಕ : ನಿಮ್ಮ ಕಣ್ಣು ದೃಷ್ಟಿ ತಗಲಿದ್ದಕ್ಕ ನಿಮ್ಮ ತಂಗಿ ವಿಘ್ನಾವತಿಗೆ ಹೊಟ್ಟಿಶೂಲಿ ಎದ್ದೈತಂತೆ ಅದಕ್ಕೆ ನಿಮ್ಮನ್ನು ಕಡದು ಏಳೂ ಮಂದಿ ಕಣ್ಣು ತುಂಬಾ ಅಂತ ಹೇಳ್ಯಾರೆ – ರಾಜರು!

ಹಿ : ಆಹಾ!

ಕ : ತಾಯೇರಾ ನಿಮ್ಮನ್ನು ಕರ್ಕೊಂಡು ಹೋಗಿ ಕಡಿಯಾಕ ಬಂದೀನಿ ಅಂದ ಮಂತ್ರಿ!

ಹಿ : ಆಹಾ!

ಕ : ವಿಘ್ನಾವತಿ ಹೇಳಿದ ಮಾತು, ಚಿತ್ರೋಸೇನ ಮಹಾರಾಜ ಹೇಳಿ ಕಳಿಸಿದ ಮಾತು ಎಲ್ಲಾ ಕೇಳಿ, ಏಳೂ ಮಂದಿ ಅಕ್ಕತಂಗೇರು ಒಬ್ಬರಿಗೊಬ್ಬರು ಕೊಳ್ಳಬಿದ್ದು ದುಃಖ ಮಾಡ್ತಾರೆ!

ಹಿ : ಆಹಾ!

ಕ : ಮಂತ್ರಿ ನಮಗೆ ಕಡೀತೀಯಾ ಒಯ್ದು?

ಹಿ : ಹೌದು ತಾಯೇರಾ-ರಾಜಾಜ್ಞೆ ಅದು!

ಕ : (ರಾಗವಾಗಿ) ಇದು ಧರ್ಮಲ್ಲೋ ಮಂತ್ರೀ….

|| ಪದ ||

ತಂಗೀ ತಂಗೀ……ಹರಯನ್ನ ಮಾದೇವಾ
ನಮ್ಮನ್ನ ಪ್ರಾಣಾ ಕಳಿತಾರಾ…..ಹರಯನ್ನ ಮಾದೇವಾ
ಇದು ಏನು ಧರ್ಮ ಮಂತ್ರೀ…..ಹರಯನ್ನ ಮಾದೇವಾ
ಏಳು ಮಂದಿ ಅಕ್ಕ ತಂಗೇರಾ…..ಹರಯನ್ನ ಮಾದೇವಾ
ಹೇಡಮುರುಗಿ ಬಿಗುದಾನಾ…..ಹರಯನ್ನ ಮಾದೇವಾ.

ಕ : ಊರ ಬಜಾರದಾಗ ಹೆದಮುರಗಿ ಕಟ್ಟಿಕೊಂಡು ಹೋಗಬೇಕಾರ, ರೈತರು, ಶ್ರೀಮಂತರು, ಸಾಹುಕಾರ್ರು. ಬಡವರು (ರಾಗವಾಗಿ) ಅಮ್ಮಾ ನಿಮಗೆ ಸಾವು ಬಂತೇ ತಾಯಿಗಳೇ….

ಹಿ : ಹೌದು ಮಕ್ಕಳ್ರ್ಯಾ!

ಕ : ತಾಯಿಗಳಾ ನಿಮಗೆಂಥಾ ದುಃಖದ ಮರಣ ಬಂತು! ಎಲ್ಲಾ ಪ್ರಜೆಗಳಿಗೂ ಅನ್ನಾ ಕೊಡ್ತಿದ್ದಿರಿ! -ಅಂತ ಹಲುಬುತಾರೆ.

ಹಿ : ಮಂತ್ರೀ, ತಲೀ ಹೊಡದು ಬರ್ತೀಯಾ ತಾಯ್ನೋರಿಗೇ!

ಕ : ಪತಿಯಿಂದಲೇ ಅವರಿಗೆ ಮರಣ ಬಂತು!

ಹಿ : ಆಗ ಆ ಏಳೂ ಸತಿಯರು ಆರಾರು ತಿಂಗಳು ಗರ್ಭಿಣಿಯರಿದ್ದಾರೆ.

ಕ : ಹೌದು. ಮೂರು ಹರ್ದಾರಿ ಕರ್ಕೊಂಡು ಬಂದ ಮಂತ್ರಿ – ಕೊಲ್ಲಾಕ ತಾಯ್ನೋರಿಗೆ!

ಹಿ : ಆಹಾ!

ಕ : ಅಮ್ಮಾ

ಹಿ : ಏನಪ್ಪಾ ಮಂತ್ರೀ?

ಕ : ಎಲ್ಲೀವರೆಗೆ ಹೋದ್ರೂ ನಿಮಗೆ ಮರಣ ಬಿಡುಗಡೆಯಾಗೋದಿಲ್ಲ; ಇಲ್ಲೇ ಸಿರ ಬಾಗಿರಮ್ಮಾ ; ನಿಮ್ಮನ್ನು ಕಡದು-

ಹಿ : ಆಹಾ!

ಕ : ನಿಮ್ಮ ಕಣ್ಣು ಕಿತ್ಕೊಂಡು ನಾನು ಊರಿಗೆ ಹೋಗ್ತೀನಿ – ಅಂದ ಮಂತ್ರಿ.

ಹಿ : ಆಹಾ! ಯಪ್ಪಾ,

ಕ : (ರಾಗವಾಗಿ) ಕಡೀ-ಅಂತ್ಹೇಳಿ ಆ ಏಳೂ ಮಂದಿನು ಸಾಲಾಗಿ ಸಿರ ಬಾಗಿಸ್ಯಾರೇ….

ಹಿ : ಹೌದು.

ಕ : ಬಿಚ್ಚುಗತ್ತಿ ತಗೊಂಡು ಮಂತ್ರಿ ಆ ಏಳು ಮಂದೀನೂ ಕಡೀಬೇಕು ಅಂತ್ಹೇಳಿ ಎತ್ತಿದ ತಕ್ಷಣ-

ಹಿ : ಆಹಾ!

ಕ : ಪರಮಾತ್ಮ, ಭಗವಂತ ನೋಡಿದ- ಆ ಸ್ತ್ರೀಯರಿಗೆ ಕೊಲೆ ಮಾಡೋದ!

ಹಿ : ಹೌದು!

ಕ : ಆಹಾ! ಮಂತ್ರೀ ಕೊಲೆ ಮಾಡಬಾರ್ದು-ಗರ್ಭಿಣೀ ಸ್ತ್ರೀಯರು ಇವರಿಗೆ ಪ್ರಾಣ ದಾನ ಮಾಡಿ ಹೋಗು. ನಿನಗೆ ಮಹಾಪುಣ್ಯ ಬರತೈತಿ-ಅಂದ ಪರಮಾತ್ಮ,

ಹಿ : ಆ ಪರಮಾತ್ಮ!

ಕ : ಅಮ್ಮಾ, ಇದು, ಘೋರ ಅರಣ್ಯದಲ್ಲಿ ಒಂದು ಶಬ್ದ ಬಂತು-

ಹಿ : ಆಕಾಶವಾಣಿ!

ಕ : ಈಗ ನಿಮಗೆ ಕೊಲಿ ಮಾಡಾದಿಲ್ಲಮ್ಮ ; ನಿಮಿಗೆ ಒಂದು ಮಾತ ಹೇಳ್ತೀನಿ ಕೇಳ್ತೀರೇನಮ್ಮಾ ತಾಯಿಗಳಾ?

ಹಿ : ಯಾವ ಮಾತು ಹೇಳಪ್ಪಾ ಅದು ಮಂತ್ರಿ?

ಕ : ಎಂದೆಂದಿಗೂ ಊರಿಗೆ ಬರಬ್ಯಾಡ್ರಿ ನಿಮಗೆ ಪ್ರಾಣದಾನ ಮಾಡಿ ಹೋಗ್ತೀನಿ;

ಹಿ : ನಿಮಗೆ ಕೊಲೆ ಮಾಡೋದಿಲ್ಲ.

ಕ : ಅಪ್ಪಾ ಇನ್ಯಾಕ ಬರೋನೋ ಊರಿಗೆ! ನಾವು ಎಲ್ಲ್ಯಾನ ಇರ್ತೀವಿ. ಅಡಿವ್ಯಾಗ.

ಹಿ : ಹೌದೇನಮ್ಮಾ ; ಹಾಗಾದ್ರ ನಿಮಗೆ ಪ್ರಾಣದಾನ ಮಾಡ್ತೀನಿ, ಆದರೆ ನಿಮ್ಮವು ಎರಡೆರಡು ಕಣ್ಣುಗಳನ್ನು ಕೊಡಬೇಕ ತಾಯಿಗಳೇ- ಅಂದ ಮಂತ್ರಿ!

ಕ : (ರಾಗವಾಗಿ) ಅಪ್ಪಾ ನಮ್ಮ ಕಣ್ಣೂ ತೆಗದ ಬಳಿಕ ಜಲ್ಮ ಹ್ಯಾಗೆ ಇರ್ಬೇಕು? ನಮ್ಮದು ದಾರಿ ಏನು? ಊಟ ಏನು? ಉಪಚಾರ ಏನು? ಕಣ್ಣು ತೆಗೀಬ್ಯಾಡ ಮಂತ್ರೀ….

ಹಿ : ಆಹಾ….

ಕ : ನಿಮ್ಮ ಕಣ್ಣು ಬಿಟ್ಟೋದ್ರ ನನ್ನ ಪ್ರಾಣ ಉಳಿಯೋದಿಲ್ಲಮ್ಮಾ, ಕಣ್ಣು ಕೊಟ್ಟೇತೀರ್ಬೇಕು ನೀವು.

ಹಿ : ಹೌದು!

ಕ : ಹೆಂಗನ್ನ ಮಾಡಪ್ಪ ನಿನ್ನ ಕೈಯಾಗ ಸಿಕ್ಕೀವಿ ಅಂತ್ಹೇಳಿ ಸಾಲಿಗೆ ಮಲ್ಕೊಂಡು ಬಿಟ್ರು.

ಹಿ : ಆಹಾ!

ಕ : ಅತನಾವತೀ ತಲೆಗಿಂಬಿಗೆ ಮಂತ್ರಿ ಬಂದು ಕಂಜೂರದ ಬಾಕ ತೊಗೊಂಡು ಎರಡು ಕಣ್ಣೂ ಕಿತ್ತುಬಿಟ್ಟ ಅತನಾವತಿ ಗೋಳಾಡ್ತಾ ಐದಾಳೆ-ತಗೇರಾ….ತಗೇರಾ ಎಂಥಾ ಸಂಕಟ ಇದು! (ರಾಗವಾಗಿ) ತಡೀಲಾರೆ-ಕಣ್ಣಿನ ಬಾಧೀ……ಕಣ್ಣು ಕಿತ್ತದ್ದಕ್ಕ ರಾಮಾರೈತಾ-ಮೈ ಎಲ್ಲಾ ರಕ್ತ ಸುರೀತೈತಿ!

ಹಿ : ಅಕ್ಕಾ ಪರಮಾತ್ಮನ ಧ್ಯಾನ ಮಾಡು.

ಕ : ಇದೇ ಪ್ರಕಾರವಾಗಿ, ಮುತುನಾವತಿ ಕಣ್ಣು, ರತನಾವತಿ ಕಣ್ಣು, ಪೂಲಾವತಿ ಕಣ್ಣುಮ್ ಜಯಾವತಿ ಕಣ್ಣು ಆರು ಮಂದೀ ಕಣ್ಣು ಕಿತ್ಕೊಂಡ ಬೆಳ್ಳೀ ಬಟ್ಲದಾಗ ತುಂಬಿದ ಮಂತ್ರಿ.

ಹಿ : ಪದ್ಮಾವತಿಯೊಬ್ಬಾಕಿ ಉಳಿದಿದ್ದಾಳಲ್ಲ!

ಕ : ಹೌದು-ಪದ್ಮಾವತಿ ಅಂಬಲಿಸ್ತಾಳೆ – ಅಪ್ಪಾ ಮಂತ್ರೀ ನನ್ನ ಒಬ್ಬಾಕಿ ಕಣ್ಣು ಬಿಟ್ಟು ಹೋಗಪ್ಪಾ ; ಇವರಿಗೆ ಜೋಪಾನ ಮಾಡ್ತೀನಿ. ಈ ಆರು ಮಂದಿ ಕಣ್ಣಿಲ್ಲದ ಕವಾಜಿ ಅಕ್ಕನೋರನ್ನ ಜೋಪಾನ ಮಾಡ್ತೀನಿ ತಿರಿಗಾಡಿ ತಂದು ನೀರು ಕೊಡ್ತೀನಿ. ಹೆಣ್ಣು ಹಂಪಲಾ ಹುಡುಕಿ ತಂದು ಕೊಡ್ತೀನಿ.

ಹಿ : ಓಹೋ!

ಕ : ಆಗಾದಿಲ್ಲ ತಾಯೀ, ಒಂದು ಕಣ್ಣು ಕಮ್ಮಿಯಾದರೆ ನನ್ನ ಕಣ್ಣೂ ಕೀಳ್ತಾನ ರಾಜ; ನಿನ್ನವೂ ಕೂಡಲೇ ಬೇಕಮ್ಮಾ ಅಂದ ಮಂತ್ರಿ.

ಹಿ : ಹೆಂಗನ್ನ ಮಾಡಪ್ಪಾ ಅಂತ ಪದ್ಮಾವತಿ ಮಲಕ್ಕೊಂಡ್ಲು.

ಕ : ಆ ತಾಯಿ ಎರಡೂ ಕಣ್ಣುಗಳನ್ನೂ ಬಾಕು ಹಾಕಿ ಕಿತ್ತ; ಆ ಏಳು ಮಂದೀವು ಹದಿನಾಕು ಕಣ್ಣು ಆದವು.

ಹಿ : ನಾನು ಹೋಗಿ ಬರ್ಲೇನ್ರಮ್ಮಾ?

ಕ : (ರಾಗವಾಗಿ) ಹೋಗಿ ಬಾರಪ್ಪಾ ; ಹೋಗಿಬಾ ಪ್ರಧಾನಾ….

ಹಿ : ಆಹಾ….

ಕ : (ರಾಗವಾಗಿ) ಕಣ್ಣಿಲ್ಲದ ಕುರುಡರನ್ನ ಮಾಡಿ ಅಡಿವ್ಯಾಗ ಬಿಟ್ಟು ಹೋಗ್ತೀರಾ ಮಂತ್ರೀ! ಸೀಮಿ ಹೋಯ್ತು, ಭೂಮಿ ಹೋಯ್ತು, ದೇಶ ಹೋಯ್ತು, ಕೋಶ ಹೋಯ್ತು, ಪತಿರಾಜ ಯರವಾದ, ದಂಡು ಮಾರ್ಬಲ ದೂರಾಯಿತ್ರೀ ; ಅವ್ವಾ ಪರದೇಶಿಗಳಾಗಿ ಕಣ್ಣಿಲ್ಲದ ಕುರುಡರಾಗಿ ಹೋದಿವಲ್ಲ!

ಹಿ : ಹೋಗ್ತೀರಾ ಮಂತ್ರೀ?

ಕ : ಹೋಗ್ತೀನ್ರಮ್ಮಾ, ಹೋಗಿ ಬರ್ತೀನಿ- ಅಂತ್ಹೇಳಿ ಊರಿಗೆ ಹೊರಟ ಮಂತ್ರಿ.

ಹಿ : ಲಗೂ ಮಾಡಿ ಬಂದ ಮಂತ್ರಿ;

ಕ : ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ಮಾರಾಜ ಅರಮನಿಯಾಗ ಕುಂತಿದ್ದ ವಿಘ್ನಾವತೆಮ್ಮ ಮಂಚದ ಮ್ಯಾಲ ಮಲಗ್ಯಾಳ.

ಹಿ : ಶರಣಾರ್ಥಿ ಮಹಾರಾಜಾ ತಗೊಳ್ರಿ ಏಳು ಮಂದಿ ನಿಮ್ಮ ಮಡದೇರಿಗೆ ಕೊಲ್ಲಿ ಹದಿನಾಕು ಕಣ್ಣೂ ತಗೊಂಡು ಬಂದೀನಿ ನೋಡ್ರಿ, ತೊಗೊಳ್ರಿ.

ಕ : ತೊಗೊಳ್ಳೆ ಮಡದೀ – ವಿಘ್ನಾವತೀ, ಏಳು ಮಂದಿ ರಂಡೇರಿಗೆ ಕೊಲೆ ಮಾಡಿಸಿ ಬಿಟ್ಟೆ! ಹೋಗಲಿ ಅವು; ಮೈಮೇಲಿನ ಪೀಡೆ ಹೋಯ್ತು ; ನೀನೊಬ್ಬಾಕಿ ಚಂದಾಗಿದ್ರೆ ಸಾಕು ಹೋಗು, ಸ್ನಾನ ಮಾಡು.

ಹಿ : ಮೊದ್ಲು ಸ್ನಾನಾ ಮಾಡು- ನಿನ್ನ ಹೊಟ್ಟಿಶೂಲಿ ಮೊದ್ಲು ಹೋಗ್ಲಿ.

ಕ : ಆಕಿ, ವಿಘ್ನಾವತಿ ನೋಡ್ರಿ, ಕಣ್ಣಮೇಲೆ ಕುತ್ಕೊಂಡು ನೀರ ಎರಕೊಂಬೋ ಪ್ರಾಣಿ ಏನ್ರಿ ಅದು?

ಹಿ : ಹೌದೇ?

ಕ : ಬಚ್ಚಲ್ದಾಗ ಕುಂತುಗೊಂಡು ಬಾಯಾಗ ಹಾಕ್ಕೊಂಡು ಗುಳುಂ ಅಂತ ನುಂಗಿಬಿಟ್ಲು ತಾಯ್ನೋರ ಕಣ್ಣನ್ನೆಲ್ಲಾ! ಅದು ಮೊದಲೇ ಹೆಣ ತಿಂಬೋದು!

ಹಿ : ರಾಕ್ಷಸ ಜಾತಿ!

ಕ : ಜಳಕಾ ಮಾಡಿಕೊಂಡು ಜರತಾರಿ ಸೀರಿ ಉಟ್ಟು ಜರತಾರಿ ಕುಬ್ಸ ತೊಟ್ಕೊಂಡು ಬಂದು – ರಾಜಾ ಈಗ ನನ್ನ ಹೊಟ್ಟಿಶೂಲಿ ಹೋಯ್ತು-

ಹಿ : ಆರಾಮು ಆಯ್ತು!

ಕ : ನಿನ್ನ ಮಡದಿ, ನಾನೀಗ ಆರಾಮ ಆಗೀನಿ ರಾಜಾ.

ಹಿ : ಆಹಾ!

ಕ : ಸಾಕು ಮಡದಿ ನೀನೊಬ್ಬಾಕಿ ಸುಖವಾಗಿದ್ರೆ ಆನಂದಾ!

ಹಿ : ಓಹೋ

ಕ : ಇವರ ಕತಿ ಇಲ್ಲಿ ಊರಾಗ ಹಿಂಗs ನಡದೈತಿ ನೋಡ್ರಿ!

ಹಿ : ಅಲ್ಲಿ?

ಕ : ಸರೋವರದಲ್ಲಿ ಏಳು ಮಂದಿ ತಾಯ್ನೋರ ಕಷ್ಟ ವನವಾಸ ಪಡಿಪಾಟ್ಲು ಇನ್ನು ಮುಂದೆ ಚಾಲೂ ಆಯ್ತು!

ಹಿ : ಆರಾರು ತಿಂಗಳು ದಿಮ್ಮನಿಸ್ಯಾರಿದ್ದಾರಲ್ಲ, ಆ ತಾಯ್ನೋರು ಕಣ್ಣಿನ ಬಾಧೆ ತಡೀಲಾರದೆ ಕುಂತು ಹಲುಬುತಾರೆ-

ಕ : ಅಮ್ಮ ನಮ್ಮನ್ನ ಕಣ್ಣಿಲ್ಲದ ಕವಾಜಿ ಮಾಡಿ ಬಿಟ್ಟು ಹೋದ ಮಂತ್ರೀ!

ಹಿ : ಹೌದು!

ಕ : ನಮಗೆ ಯಾರು ಬಂದು ಮಾತಾಡಿಸ್ಬೇಕು ಇಲ್ಲಿ! ದಿಕ್ಕಿಲ್ಲದವರಾದಿವಲ್ಲ! ಈಗ ಯಾವ ಕಡೀಗೆ ಹೋಗ್ಬೇಕು. ತಂಗೇರಾ ಎಲ್ಲಿಗೆ ಹೋಗಬೇಕಮ್ಮಾ ನಾವಿನ್ನು!

ಹಿ : ಅಮ್ಮಾ ಪರಮಾತ್ಮ ಯಾವ ದಾರಿ ಕೊಡ್ತಾನ ಅದೇ ದಾರಿ ಹಿಡಿಯೂನು.

ಕ : ಅಗಲಿ ಹೋಗಾನು ತಾಯೇರಾ.

ಹಿ : ಆಹಾ!

ಕ : ಒಬ್ಬರ ಕೈ ಒಬ್ಬರು, ಒಬ್ಬರ ಸೆರಗು ಒಬ್ಬರು ಹಿಡಕೊಂಡು ಆ ತಾಯ್ನೋರು (ರಾಗವಾಗಿ) ಮುಂದೆ ಹೋಗ್ತಾ ಇದ್ದಾರೆ ಸರೋವರದಲ್ಲಿ…

ಹಿ : ಹೌದೇ!

ಕ : ಕಣ್ಣಿಲ್ಲಾ….ಗಿಡ ಅದಾವು ಬಲಗಡಿಗೆ, ಇತ್ತಕಡಿಗೆ ಬರ್ರೇ ತಂಗೀ….

ಹಿ : ಎಲ್ಲರಿಗಿಂತಾ ಹಿರಿಯಾಕಿ ಮುಂದೆ ಮುಂದೆ-

ಕ : ತಂಗೇರು ಹಿಂದೇ ಹಿಂದೇ ಹೋಗ್ತಾರೇ!

ಹಿ : ಒಂದು ಮೈಲು ದೂರ ತಾಯ್ನೋರು ಅಡಿವ್ಯಾಗ ಕೈಸವರಿಕೊಂತಾ ಗಿಡಕ್ಕ, ಕಲ್ಲಿಗೆ, ತಾಗಿಕೊಂತಾ ಬಂದ್ರು ; ಅಲ್ಲಿ

ಏನದಾವರೀ?

ಹಿ : ಏನಾದವು?

ಕ : ನೂರಾರು ಪಕ್ಷಿಗಳು ಒಂದು ಹುಂಚಿ ಮರದ ಮೇಲೆ ಕುಂತಾವೆ

ಹಿ : ಓಹೋ!

ಕ : ಪಾರಿವಾಳ, ಗೊರವಂಕ, ಮೈನಾ, ಕೋಗಿಲಾ ಇಂಥಾ ನೂರಾರು ಪಕ್ಷಿಗಳು ನೋಡಿದ್ವು; ತಾಯಿಗಳು ಬರೋದ ನೋಡಿ-ಲೋ ತಮ್ಮಗಳಾ

ಹಿ : ಏನಪ್ಪಾ?

ಕ : ಆ ತಾಯ್ನೋರನ ನೋಡು. ಕಣ್ಣಿಲ್ಲದ ಕವಾಜಿಗಳು ರಕ್ತ ಹರಿತೈತಿ. ಯಾವ ಕಡೀಗೆ ಹೋಗ್ತಾರೆ ಕೇಳೋಣು?

ಹಿ : ಕೇಳ್ರಿ

ಕ : ನಡೀರಿ-ಅಂತ್ಹೇಳಿ ಭುರ್ರನೆ ಆ ಪಕ್ಷಿಗಳು ಹಿಂಡಿಗಿಂಡೇ ಹಾರಿ ಬಂದು ತಾಯಿಗಳ ಎದುರಿಗೆ ಸಾಲಾಗಿ ಕುಂತುವು.

ಹಿ : ಯಾರ್ರಮ್ಮಾ ನೀವು? ಎಲ್ಲಿಗೆ ಹೋಗ್ತೀರಿ?

ಕ : ಅಪ್ಪಾ ನೀವು ಯಾರ್ರೀ ಮರಾಯರೇ? ಪರಪುರುಷರ ನೆಳ್ಳು ನಮ್ಮ ಮ್ಯಾಲೆ ಬೀಳ್ಹಂಗಿಲ್ಲ; ದೂರ ಸರಿದು ಮಾತಾಡ್ರಿ.

ಹಿ : ಓಹೋ, ಮನುಷ್ಯರಲ್ಲ, ನಾವು ಪಕ್ಷಿಗಳು ಬಂದೀವಿ-ತಾಯೀ!