ಹಿ : ಹೌದು

ಕ : ಕುರುನರು, ಕುಂಬಾರು, ಬ್ಯಾಡ್ರು, ವಕ್ಕಲಿಗರು, ಶೆಟ್ರು, ಶ್ರೀಮಂತರು, ಎಲ್ಲಾ ಪ್ರಜೆಗಳು ದುಃಖ ಮಾಡ್ಬೇಕಾದ್ರೆ ಪ್ರಧಾನಿ ಶಾಂತಿ ಮಾಡಿದಾ-ಮಹಾರಾಜ್!

ಹಿ : ಆ

ಕ : ಸತ್ತವರ ದೆಸೆಯಿಂದ ಅತ್ತರೆ ಏನು ಫಲ ಐತಿ?

ಹಿ : ಸಾಧ್ಯವಿಲ್ಲ!

ಕ : ಇದು ಶ್ರಮ!

ಹಿ : ಆ

ಕ : ಈ ತಾಯಿಗೆ ನಾವು ಮಣ್ಣು ಕೊಟ್ಟು ಬರಬೇಕು.
(ರಾಗವಾಗಿ) ಪ್ರಧಾನಾ ಈ ತಾಯಿಗೆ ನಾವು ಮಣ್ಣು ಎಲ್ಲಿ ಕೊಡಬೇಕು, ಓಹೋ ಸ್ಮಶಾನ ರುಧ್ರಭೂಮಿ….ಸಾಧ್ಯವಿಲ್ಲ ಇದು ಸ್ಮಶಾನದಾಗ ಮಣ್ಣು ಕೊಡ ಪಿಂಡ ಅಲ್ಲ

ಹಿ : ಹೌದು

ಕ : ನಮ್ಮ ಊರು ಮುಂದೆ ಧರ್ಮದ ವನಂತರ ಐತಲ್ಲ!

ಹಿ : ಹೌದು

ಕ : ಆ ಧರ್ಮದ ವನಂತರದಾಗ ಮಣ್ಣು ಕೊಟ್ಟು ಬರಾನು ಅಂತ್ಹೇಳಿ-

ಹಿ : ಹೌದು

ಕ : ತಾಯಿಗೆ ಚಟ್ಟ ಕಟ್ಟಿ

ಹಿ : ಓಹೋ

ಕ : ನಾಕ್ ಬಾಳಿ ಕಂಬ ತರಿಸಿ ನಾಕು ಮೂಲಿಗೂ ಕಟ್ಟಿ

ಹಿ : ಹೌದು

ಕ : ಬಂಗಾರದ ತಗಡ ಕಟ್ಟಿ ಕಮಾನ್ ಮಾಡಿ, ಆ ತಾಯಿಗೆ ಜರ್ತಾರದ ಸೀರಿ ಜರತಾರದ ಕುಬ್ಸ, ಬೇಕಾದ ವಸ್ತಾ ವಡವಿ ತಾಯಿ ಮುತ್ತೈದತನದ ಸಾಮಾನೆಲ್ಲಾ ಹಾಕಿದ್ರು

ಹಿ : ಹೌದು

ಕ : ಹಣಿಗೆ ಬಂಗಾರ ಸಾಮಾನು, ತಲಿಮ್ಯಾಲೆ ಮುತ್ತಿನದಂಡಿ, ವಸ್ತಾ ವಡವಿ ಎಲ್ಲಾ ಹಾಕಿ, ತಾಯಿ ಚಟ್ಟದಲ್ಲಿ ಕುಂದ್ರಿಸ್ಕೊಂಡು.

ಹಿ : ಹೌದು

ಕ : ಆ ತಾಯಿಗೆ ತೊಗೊಂಡು ತೇರು ಎಳದ್ಹಂಗ ಒಂದು ಜಾತ್ರಿ ನಡದ್ಹಂಗ ನಡದೈತಿ

|| ಪದ ||

ತೇರು ಸಾಗುತೈತಿ ತಂಗೀ ನೋಡಲಿಕ್ಕೆ ಹೋಗಾನು ಬಾ
ತೇರು ಸಾಗುತೈತಿ ತಂಗೀ ನೋಡಲಿಕ್ಕೆ ಹೋಗಾನು ಬಾ
ನಾಕೂಗಾಲಿ ಒಂದೇ ಜೋಡಿ ಎಂಟು ಕಾಲಿನ ಮಂಟಪ ಕಟ್ಟಿ
ನಾಕೂಗಾಲಿ ಒಂದೇ ಜೋಡಿ ಎಂಟು ಕಾಲಿನ ಮಂಟಪ ಕಟ್ಟಿ
ಹರನೆಂಬೋ ಕಂಬವ ಜಡಿದು ನರವೇಣಿ ಹಗ್ಗವ ಬಿಗುದು
ಬಂಟರೆಲ್ಲರೈವರು ಕೂಡಿ ನೋಡಲಿಕ್ಕೆ ಹೋಗಾನು ಬಾ
ಸುತ್ತಮುತ್ತ ಸೂಸ್ತ್ರದ ಗೊಂಬಿ ಮ್ಯಾಲೆ ನೋಡವ್ವ ಮುತ್ತಿನ ಕಳಸ
ಏನು ಚಂದ ಕಾಣುತಾವ ನೋಡಲಿಕ್ಕೆ ಹೋಗಾನು ಬಾರೆ
ಮರ್ತನೆಂಬುದು ಮಾಯಾದ ಪ್ಯಾಟಿ, ಗರ್ತೆರೆಲ್ಲ ಕೂಡಿಕೊಂಡು
ಅಕ್ಕರ್ತಿಯಿಂದ ನೋಡನು ನಡೀರೆ. ಅಕ್ಕರ್ತಿಯಿಂದ ನೋಡಾನು ನಡೀರೆ

ಕ : ಶಿವಲೋಚನಮ್ಮನ ಮಾವ ಉಡಿಯಾಗ ಮಂಡಕ್ಕಿ ಕಟ್ಕೊಂಡಾನ, ಮಂಡಕ್ಕಿ ಒಳಗ ಮುತ್ತು-ರತ್ನ ಬೆರಿಸ್ಯಾನ. ಸೊಸಿ ತಲಿಮಾಲೆ ತೂರ್ತಾನೆ-ಮುತ್ತು-ರತ್ನ!

ಹಿ : ಹೌದು

ಕ : ಮಡದೀ ಗಂಗಾಸಾಗ್ರ

ಹಿ : ಆಹಾ

ಕ : ಸೊಸಿ ಹಿಂದೆ ವೀಳ್ಯಾ ಚಲ್ಲತಾ ನಡೋ ಬಜಾರದಾಗ ಪಾತ್ರದಾಕಿ ರಂಭಾವತಿ ಮನಿ ಮುಂದೆ ನಿಂದ್ರಿಸಿದ್ರು- ಮೆರವಣಿಗೀನ

ಹಿ : ಆ

ಕ : ಮಜಲು ದನಿ ಕೇಳಿ ಇಲ್ಲಿ ಮಗಾ ನೋಡಾಕ ಬರ್ತಾನೆ ಕರ್ಕೊಂಡು ಹೋಗಿ ಹಿಡಿ ಮಣ್ಣು ಕೊಡ್ಸಿ ಬಿಡಾನು ಸತಿ-ಪತಿ, ರಿಣ ತೀರಲಿ-

ಹಿ : ತೀರಲಿ

ಕ : ಮಜಲು ಮಾಡ್ರೋ ತಮ್ಮಾ, ನೋಡಾಕ ಬರ್ಲಿ ಮಗಾ

ಹಿ : ಆಗಲಿ

ಕ : ಅಗಡ್‍ದೊಮ್, ಅಗಡ್‍ದೊಮ್, ಭಜನಿ, ಮಜಲು, ತಾಳಮೇಳ, ಭಜಂತ್ರಿ, ಹಲಗಿ, ಕಾಖಿತಾಳ-ಬಾರಿಸವೇಕಾದ್ರೆ ನೀಲಕುಮಾರಗ ಕೇಳಿಸಿ ಬಿಟ್ತು ಅಬಾಬಾಬಾ….ಏನು ಗದ್ಲ ಇವತ್ತು ಈ ಊರಾಗ!

|| ಪದ ||

……………………………………………….
……………………………………………….
……………………………………………….
(ಸೂಚನೆ: ಈ ಪದ ಸಂಪೂರ್ಣ ಅಸ್ಪಷ್ಟವಿರುವುದರಿಂದ ಲಿಪಿಗೊಳಿಸಲಾಗಿಲ್ಲ)

ಕ : ರಂಭಾವತೀ ಏನಿದು ಗಲಾಟೆ?

ಹಿ : ಓಹೋ ಗಲಾಟೆ!

ಕ : ಏನೈತ್ರಿ ನೋಡಾನು ನಡ್ರಿ ಅಂದ್ಲು

ಹಿ : ನಡಿ ರಂಭಾ!

ಕ : ಮ್ಯಾಲೆ ಕಮಾನ ಕಿಟಿಗ್ಯಾಗ ಹೋಗಿ ಇಬ್ರು ಕುಂತ್ಕೊಂಡು ನೋಡ್ತಾರೆ-ಜನ ಜಾತ್ರೆ! ಮರಮರಡಿ, ಮಾಳ್ಗಿ ಹಿಡ್ಸವಲ್ಲದು.

ಹಿ : ಆ

ಕ : ರಾಜ ನೀಲಕುಮಾರ ನೋಡಿದ-ರಂಭಾ ಏನು ಜನ ಇದು!

ಹಿ : ಎಷ್ಟು ಜನ!

ಕ : ಏನು ನಮ್ಮ ತಂದೆ ತೇರು ಎಳಸ್ತಾನೋ, ಏನು ಉಚ್ಯಯ ಎಳಸ್ತಾನೋ ಏನು ಊರು ದೇವತೀದು ಎಳಸ್ತಾನೋ!

ಹಿ : ಹೌದು

ಕ : ನಿನ್ನ ಮಡದಿ ಸತ್ತಾಳ ಮಣ್ಣು ಕೊಡಾಕ ಹೋಗ್ತಾರ ಅಂತ ಹೇಳಬಾರದು ಅಂದ್ಲು ಆಕಿ.

ಹಿ : ಏನು ಜವಾಬ್?

ಕ : ಏನು ತೋಡಿ ಹೇಳ್ತಾಳೆ ಆಕಿ? ರಂಭಾ ಪಾತ್ರದಾಕಿ ಮೊದಲೇ ಲೇಶಿ! ಧೊರೀ ಈ ಊರಿಗೆ ಹೊಸ ಗಾಳೆಮ್ಮ ಬಂದು ಹೊಕ್ಕಂಡಿದ್ಲು-

ಹಿ : ಗಾಳೆಮ್ಮ?

ಕ : ಊರೆಲ್ಲ ಹಾಳು ಮಾಡಾಕ ಬಂದಿತ್ತು ತಾಯಿ!

ಹಿ : ಆಹಾ!

ಕ : ನಿಮ್ಮ ತಂದೆ-ತಾಯಿ, ಮಂತ್ರಿ ಮೂವರೂ ಕೂಡ್ಕೊಂಡು, ಹೂವಿನಲೇ ಕೈಕಟ್ಟಿಕೊಂಡು-ಅಮ್ಮ ಊರು ಹಾಳು ಮಾಡ್ಬೇಡ ಅಂತ ಬೇಡಿಕೊಂಡು ಹೊಸ ಗಾಳೆಮ್ಮನ್ನ ಮಾಡಿ ಗಾಳೆಮ್ಮಗೆ ಕಳಸಾಕ ಹೊಂಟಾರ್ರಿ.

ಹಿ : ಹೌದು ಗಾಳೆಮ್ಮ !

ಕ : (ರಾಗವಾಗಿ) ರಾಜ-ಮಗನೇ, ನೀಲಕುಮಾರ ಬಾರೋ ನಿನ್ನ ಮಡದಿಗೆ ನೋಡು..

ಹಿ : ಹೌದು

ಕ : (ರಾಗವಾಗಿ) ನಿನ್ನ ಮಡದಿ ತೀರ್ಕೊಂಡಾಳಪ್ಪ ನಿನ್ನ ಹೆಸರಿಲೆ ಮಾಂಗಲ್ಯ ಕಟ್ಕೊಂಡು ಬಂದಿದ್ವಿ….ನೀಲಕುಮಾರಾ ನಿನ್ನ ಮಡದಿಗೆ ಹಿಡಿ ಮಣ್ಣು ಕೊಡು ಬಾ ಸತಿ-ಪತಿ ರಿಣ ತೀರ್ಲೀ….ತಾಯಿ-ತಂದೆ ಕೈ ಮುಗಿದು ಕರಿತಾರೆ. ಅಪ್ಪಾ ಬಾರೋ ನಿನ್ನ ಮಡದೀ ಶ್ರಮಾ ಒಯ್ತಿವಿ.

ಹಿ : ಆಹಾ

ಕ : ತಾಯಿ-ತಂದೆ ಕೂಗಾದು ಕೇಳ್ತಾನೆ! ಹೋಗ್ಬೇಕು ಅಂಬೋದು ತಿಳಿವಲ್ಲದು! ರಂಭಾ-

ಹಿ : ಏನ್ರಿ ರಾಜಾ?

ಕ : ಎಂಥ ಬಣಗಾರ; ಜೀನಗಾರ. ಎಂಥ ಬುದ್ಧಿವಂತ ಐದಾನೆ ನೋಡು. ಏನು ಬಣ್ಣ ಕೊಟ್ಟಾನ!

ಹಿ : ಹೌದು ಬಾಳ ಬಣ್ಣ ಕೊಟ್ಟಾನ.

ಕ : ಆ ಗಾಳೆಮ್ಮ ಏನು?

ಹಿ : ಹೌದು ಗಾಳೆಮ್ಮ!

ಕ : ಎದ್ದು ಬರ್ತಾಳಮ್ಮ ಅಂದ್ಹಾಂಗ ಕಾಡ್ತಾಳ ನೋಡು! ಎಷ್ಟು ಚಂದಾನ ಚಲುವಿ! ಏನು ಬಣ್ಣ ಕೊಟ್ಟಾನ ಜೀನಗಾರ- ಆಹಾ!

ಹಿ : ಮಾರಾಜಾ ಬಾಳ್ಹೊತ್ತು ಗಾಳೆಮ್ಮ ನೋಡಬಾರ್ದು.

ಕ : ಓಣಿ ಸುತ್ತೆಲ್ಲಾ ಹೊಂಟಾಳ್ರಿ ಆಕಿ

ಹಿ : ಹೌದು ಹೌದು

ಕ : ಬಾಳ್ಹೊತ್ತು ನೋಡಬಾರ್ದು ಆಯಮ್ಮನ ಸೊಗಡು ನಮಗೆ ಬಡದ್ರೆ ಯರ್ಥಾ ಸತ್ತು ಹೋದೇವು. ಒಳಗ ಹೋಗಾನು ನಡ್ರಿ ಅಂದ್ಲು ಆಕಿ-

ಹಿ : ರಂಭಾವತಿ ಲೇಸಿ

ಕ : ಸಿಟ್ಟಿಲೆ ಹೊಂಟಾಳ; ದೃಷ್ಟಿ ಬಿದ್ದೀತು ಒಳಾಗ ಹೋಗಾನು ಅಂತ ಹೋಗಿಬಿಟ್ಲು

ಹಿ : ಹೋಗಿಬಿಟ್ರು.

ಕ : ಇವರು ಹಿಂಗs ನಿಂತು ಮಜಲ್ ಮಾಡಿ ಕೂಗಿ ಕೂಗಿ ಸಾಕಾಯ್ತು

ಹಿ : ಸಾಕಾಯ್ತು!

ಕ : ಬರಾದಿಲ್ಲ ಅವುನು.

ಹಿ : ನಡ್ರಿ

ಕ : || ಪದ ||

ಹುಟ್ಟಿದ್ದು ಹೊಲಿ ಮನಿ
ಬಿಟ್ಟೊಂಟೆ ತಾಯಿ ಮನಿ
ಎಷ್ಟಿದ್ದರೇನು ಇದು ಖಾಲೀ ಮನಿ || ||
ವಸ್ತಿ ಮಾಡುವ ಮನಿ ಗಸ್ತಿ ತಿರುಗುವ ಮನಿ
ಸಿಸ್ತಿಲೆ ಕಾಣುವ ಶಿವನ ಮನಿ
ಸಿಸ್ತಿಲೆ ಕಾಣುವ ಶಿವನ ಮನಿ
ಚಿಂತಿ ಕಾಂತಿಯ ಮನಿ ಸತಿ ಸೇರುವ ಮನಿ
ಚಿಂತಿ ಕಾಂತಿಯ ಮನಿ ಸತಿ ಸೇರುವ ಮನಿ
ಅಂತು ಬಲ್ಲವರಿಗೆ ಆಡುವ ಮನಿ
ಹುಟ್ಟಿದ್ದು ಹೊಲಿ ಮನಿ………….
ಒಂಬತ್ತು ಬಾಗಿಲು ದಾಟಿ ಹೊರಟು ಹೋಗುವಾಗ
ಒಂಬತ್ತು ಬಾಗಿಲು ದಾಟಿ ಹೊರಟು ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಯ ಮನಿ
ಹುಟ್ಟಿದ್ದು ಹೊಲಿ ಮನಿ………..
ವಸಧಿಯೊಳಗೆ ನಮ್ಮ ಶಿಶುನಾಳಧೀಶನ
ವಸುಧಿಯೊಳಗೆ ನಮ್ಮ ಶಿಶುನಾಳಧೀಶನ
ಹಸುನಾದ ಪದಗಳ ಹಾದುವ ಮನಿ.
ಹುಟ್ಟಿದ್ದು ಹೊಲಿ ಮನಿ
ಬಿಟ್ಟೊಂಟೆ ತಾಯಿ ಮನಿ
ಎಷ್ಟಿದ್ದರೇನು
ಇದು ಖಾಲೀ ಮನಿ.

ಕ : ವನಂತರದ ನಡುವೆ ಸರದಾಗ ಮೂರು ಮಳ ಅಗಲ ಆರುಮಳ ಉದ್ದ ಕುಣಿ ತಗದ್ರು

ಹಿ : ಆಹಾ!

ಕ : ಅಪ್ಪಾ ಕುಣಿಯಾಗ ಮಗಳ ಶ್ರಮ ಹ್ಯಾಂಗ ಇಡ್ಬೇಕು! ಬ್ಯಾಡ ಶ್ರಮ ಕೆಟ್ಹೋಗ ತೈತಿ; ಮಳಿ ಬಂದ್ರೆ ಮಣ್ಣು ಪಾಲು.

ಹಿ : ಹೌದು.

ಕ : (ರಾಗವಾಗಿ) ಬೆಳ್ಳಿ ತಗಡು ತಂದು ಬೆಳ್ಳಿ ಪೆಟ್ಟಿಗಿ ಮಾಡಿ ಪೆಟಿಗ್ಯಾಗ ಇಟ್ಟು ಮಗಳಿಗೆ ಮಣ್ಣು ಕೊಡೋಣು ಮಂತ್ರೀ….

ಹಿ : ಹಾಗೇ ಆಗಲಿ ಮಹಾರಾಜ್! ಬೆಳ್ಳಿಪೆಟಗಿ!

ಕ : ಸೊರಗಿಲ್ಲ, ಕಂದಿಲ್ಲ, ಜರಇಲ್ಲ, ಚಳಿಯಿಲ್ಲ ಶಿವಲೋಚನಮ್ಮಗ!

ಹಿ : ಹೌದು.

ಕ : ಕುಣಿ ಅಗಲ ಕುಣಿ ಉದ್ದ ಬೆಳ್ಳಿ ಪೆಟ್ಟಿಗೆ-ತಾಯಿಗೆ ತೊಗೊಂಡು ಬಂದ್ರು; ತಲಿಮ್ಯಾಲೆ ಮುತ್ತಿನ ದಂಡೆ, ಹಣಿಗೆ ಕುಂಕುಮ, ಕೈಗೆ ಕಂಕಣ. ಕೊಳ್ಳಾಗ ವಸ್ತ, ಮುತ್ತಿನ ಉಡಿತುಂಬಿ, ಮದುವಿ ಪೀತಾಂಬರ, ಮದುವಿ ಕುಬ್ಸ ಎಲ್ಲಾ ಒಡವೆಗಳನ್ನು ತಾಯಿ ಹಿಂದೆಲೆ ಒಯ್ಲಿ.

ಹಿ : ಇವು ಯಾವ್ಯಾವುದೂ ಮನಿಗೆ ಒಯ್ಯಾದು ಬೇಡ.

ಕ : ಎಲ್ಲಾ ಸೊಸಿ ಹಿಂದೆ ಹೋಗ್ಲಿ. (ರಾಗವಾಗಿ) ಇವು ಒಂದೊಂದೇ ನೋಡಿ ಕಣ್ಣೀರು ಬರ್ತಾವೆ ಮಡದೀ-ಅಂದ ರಾಜ!

ಹಿ : ಹೌದು ಒಯ್ಯದು ಬ್ಯಾಡ ಮಗಳ ಹಿಂದೆ ಒಯ್ಲಿ ಎಲ್ಲಾ-ಅಂದ್ಲು ರಾಣಿ

ಕ : (ರಾಗವಾಗಿ) ಯಮ್ಮಾ. ಅಂಗಾತ ಮಲಿಗಿಸಿದ್ರು, ಎಲ್ಲಾರು ಮುಖಾ ನೋಡ್ರಿ ಶಿವಲೋಚನಮ್ಮ ಹೋಗ್ತಾಳೆ! ಈಗ ಕೊನೆ ಮುಖ ನೋಡ್ರಿ-ಎಲ್ಲಾರೂ ನೋಡಿ ದಬಾಸ ಮುಚ್ಚಿ ಪಾಟಿಕಲ್ಲು ಹೊಂದಿಸಿ ಮಣ್ಣು ಎಳದ್ರು.

ಹಿ : ಹೌದು.

ಕ : ಮಳಿಗಾಲ ಬಂತು ಅಂದ್ರ ಮಗಳ ಶ್ರಮ ಕೆಟು ಹೋದೀತು.

ಹಿ : ಹೌದು ಕೆಡತೈತಿ!

ಕ : ಅದಕಾಗಿ ಮೂರು ಮಳ ಅಗಲ ಮೂರು ಮಳ ಉದ್ದ ಕುಣಿಗೆ ಗಚ್ಚಿನ ಕಟ್ಟಿ ಕಟ್ಟಿಸಿದ್ರು

ಹಿ : ಸಮಾದಿ ಗಚ್ಚಿನ ಕಟ್ಟಿ ಮಾಡಿದ್ರು.

ಕ : ಪತಿವ್ರತಾ! ಪುಣ್ಯಾತ್ಮಳೇ ನೀನು ಈ ಪ್ರಪಂಚದಲ್ಲಿ ಈಜಾಡ್ಲಿಲ್ಲ! ಮಗನ ಮುಖ ನೀನು ನೋಡ್ಲಿಲ್ಲ. ನಿನ್ನ ಮಕ ನನ್ನ ಮಗ ನೋಡ್ಲಿಲ!

ಹಿ : ಸತಿ-ಪತಿ ಕಲೀಲಿಲ್ಲ!

ಕ : ಭೂಮಿ-ಕೈಲಾಸ ಜೋಡು, ಮರ-ಗಿಡ ಜೋಡು, ತಾಯಿ-ಮಗ ಜೋಡು, ಸತಿ-ಪತಿ ಜೋಡು, ನೀವು ಅಗಲಿ ಹೋದ್ರೆಮ್ಮಾ ನಮಿಗೇನಾರಾ ಅನುವು ಬರ್ಲಿ, ಜ್ವರ ಬರ್ಲಿ, ದನ ಕರಕ್ಕ ಏನಾರ ಆಗ್ಲಿ ನಿನ್ನ ಕಟ್ಟಿಗೆ ಬಂದು ಸಮಾಧಿ ಮೂರು ಸುತ್ತ ತಿರುಗಿ, ಎರಡು ಊದಿನಕಡ್ಡಿ ಹಚ್ಚಿದ್ರೆ ನಮಗೆ ಬಂದಂಥ ಜ್ವರ ಚಳಿ ಕಮ್ಮಿ ಮಾಡಮ್ಮಾ

ಹಿ : ಮಾಡವ್ವ-ಮಹಾತಾಯಿ!

ಕ : ತಾಯೀ ಹೋಗಿಬರ್ತೀವಿ ಅಂತ ಎಲ್ಲರೂ ಮಂಗಲ ಮಾಡಿ ಮನಿಗೆ ಹೋದ್ರು

ಹಿ : ಆಹಾ!

ಕ : ಶಿವಲೋಚನಮ್ಮ ತಾಯಿ ಸಮಾಧಿ ಆದ ಎರಡೇ ದಿವಸದಾಗ-

ಹಿ : ಹೌದು!

ಕ : ನೀಲಕುಮಾರ ಹೇಳ್ತಾನೆ-ಏನೇ ರಂಭಾ….

ಹಿ : ಏನು ಹೇಳು ನನ್ನ ದೋರಿ?

ಕ : ನಿನ್ನ ಹೊಟ್ಟಿ ಶೂಲಿ ಗುಣ ಆದ್ರ ಇವತ್ತಿನಿಂದ ಇಪ್ಪತ್ತೊಂದು ದಿನ ದೇವತಾ ಪೂಜಿ ಇಡತೀನಿ ಅಂತ ಪ್ರತಿಜ್ಞೆ ಮಾಡಿದ್ದೆ.

ಹಿ : ಹೌದೆ?

ಕ : ಧರ್ಮದ ವನಾಂತರಕ್ಕೆ ಹೋಗಿ ಪೂಜೆಗೆ ಪ್ರತಿ ಪುಷ್ಪಾ ತರಬೇಕು ಹೋಗ್ಲೇನೆ?

ಹಿ : ಅಗತ್ಯ ಹೋಗಿ ಬರ್ರೀ.

ಕ : ಹೇಗೋ ಆ ಶಿವಲೋಚನಿ ಮಣ್ಣು ಪಾಲಾಗ್ಯಳಲ್ಲ; ಈ ರಾಜ ರ್ಲ್ಲಿ ಹೋದ್ರೂ ಅಭ್ಯಂತರವಿಲ್ಲ-ಅಂತಾ ರಂಭಾವತಿ ಅಂದುಕೊಂಡ್ಲು

ಹಿ : ಹೌದು.

ಕ : ರಾಜಕುಮಾರ ಕುದ್ರಿಗೆ ತಡಿಬಿಗದ. ಬಾಯಿಗೆ ಲಗಾಮು ಅದರ ಮ್ಯಾಲೆ ಕುಂತ್ಕೊಂಡು ಒಂದು ಸೊನ್ನಿ ಕೊಡಬೇಕಾದ್ರೆ ಆ ಕುದುರಿ ಎಲ್ಲಿಗೆ ಬಂತು?

ಹಿ : ಸೀದಾ ಆ ಧರ್ಮದ ನಡೋ ವನಂತರಕ್ಕೆ ಬಂತು!

ಕ : ಇಳದು ನೋಡ್ತಾನೆ-ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ಇರುವಂತಿಗೆ, ಶಾವಂತಿಗೆ, ಚಂಡುಮಲ್ಲಿಗೆ ದುಂಡುಮಲ್ಲಿಗೆ, ದಂಡಾಪ್ರತಿ, ದ್ರಾಕ್ಷಿ, ದಾಳಿಂಬ, ನೀರಲ, ಪನ್ನಿ ರಸಬಾಳಿ.

ಹಿ : ಆಹಾ!

ಕ : ರಾಮ್‍ಫಲ, ಜಾಂಬ್‍ಫಲ, ಹಲಸು………

ಹಿ : ಎಲ್ಲಾ ಹೂವು-ಹಣ್ಣು ಅದಾವು!

ಕ : ಈ ಹೂವು ಆ ಹೂವು ಅಂತ ತನ್ನ ಪೂಜಾ ಸಲುವಾಗಿ ಹರೀತಾ ವನಾಂತರ ತಿರುಗುತಾ ಐದಾನ!

ಹಿ : ಹೌದು.

ಕ : ಮಳಿ! ಉತ್ತರಿಮಳಿ! ಎಲ್ಲಿತ್ತೋ ಏನೋ!-

ಹಿ : ಎರಡು ಗಂಟಿ ಟೈಮು ಆಗ.

ಕ : || ಪದ ||

ಮಳಿ ಹಾಕ್ಕೊಂಡು ಸುರಿತೈತೇ…….ಹರಯನ್ನ ಮಾದೇವಾ
ರಾಜಾ ಮಳಿಗೆ ಸಿಕ್ಕಾಗೇ………ಹರಯನ್ನ ಮಾದೇವಾ
ಏನು ಮಳಿ ಸುರಿತೈತೋ ದೇವಾ…….ಹರಯನ್ನ ಮಾದೇವಾ
ತೊಯ್ದುಕೊಂಡಾನೇ ರಾಜಾ ರಾಜಾ…….ಹರಯನ್ನ ಮಾದೇವ

ಕ : ಅಬಾಬಾ ಏನು ಮಳಿಯಪಾ! ಗದಗದ ನಡುಗುತಾ ಅದಾನೆ ರಾಜ! ಮೈಯೆಲ್ಲಾ ತೋದು ತಪ್ಪಡಿ ಆಗೇತಿ!

ಹಿ : ಆಹಾ ರಾಜ ನಡುಗುತಾ ಅದಾನೆ!

ಕ : ಗಿಡ-ಹೂವಿನ ಗಿಡ, ತೆಂಗಿನಮರ ಬಾಳಿಗಿಡ ಚಾಟಿನ್ನೆಲ್ಲಿ!

ಹಿ : ಸ್ವಾಮೀ ಪರಮಾತ್ಮಾ ಅನ್ನು ವಲ್ಲ! ತಾಯಿ-ತಂದಿ ನೆನಸಬೇಕೆಂಬೋ ಬುದ್ಧಿಲ್ಲ.

ಹಿ : ಅವರ ಸುದ್ದಿಲ್ಲ!

ಕ : ಆದರೆ

|| ಪದ ||

ಸಾಯ್ತಿನೇ ರಂಭಾವತೀ………..ಹರಯನ್ನ ಮಾದೇವಾ
ರಂಭಾವತಿ ನೆನಸ್ತಾಳೆ………ಹರಯನ್ನ ಮಾದೇವಾ

ಕ : ರಂಭಾವತೀ ಸಾಯ್ತಿನೀ ಅಂತ ಕೂಗುತಾನೆ!

ಹಿ : ಆಹಾ……….

ಕ : (ರಾಗವಾಗಿ) ಎಷ್ಟೋ ಹೊತ್ತಿನ ಮ್ಯಾಗ ಮಳಿ ಕಡಿಮೆ ಆಗೇತಿ

ಹಿ : ಆಗೇತಿ!

ಕ : ಮೂರುಗಂಟೆ ಟೈಮು-

ಹಿ : ಆಗ!

ಕ : ಇನ್ನು ಮನಿಗೆ ಹೋಗ್ಬೇಕು ಮಳಿ ಕಡಿಮೆ ಆತು ಅಂತ ಕುದ್ರಿಮ್ಯಾಲೆ ಕುಂತ್ಕೊಂಡು ವನಾಂತ್ರದಾಗ ಕುದ್ರಿ ಬಿಟ್ಟನಪಾ! ರೆಪ್ಪಗುಟ್ಟಿಗೊಂತ ಕುದ್ರಿ ಎಲ್ಲಿಗೆ ಬಂತ್ರೀ?

ಹಿ : ಆ ಗಚ್ಚಿನ ಕಟ್ಟಿ ಹತ್ರ ಬಂದ ಕೂಡ್ಲೆ ಗಪ್ಪಂತ ನಿಂತುಬಿಡ್ತು ನೋಡ್ರಿ.

ಕ : ಮುಂದೆ ಹೆಜ್ಜೆ ಇಡವಲ್ಲದು-ಕುದ್ರಿ!

ಹಿ : ಆಹಾ!

ಕ : ಚಬಕಾ ತಗೊಂಡು ಸೆಳಿತಾನ-ಕುದ್ರಿ ಎಲ್ಲೆಲ್ಲೂ ಹೆಜ್ಜೆ ಎತ್ತಿ ಇಡವಲ್ಲದು.

ಹಿ : ಆಹಾ!

ಕ : ಇವನಮ್ಮನ, ಈ ಗಚ್ಚಿನ ಕಟ್ಟಿ ಹತ್ರ ಬರ್ಲಿಕ್ಕೆ ಕುದ್ರಿ ಸುಮ್ಮನೆ ನಿಂತುಬಿಡ್ತಲ್ಲ!

ಹಿ : ಆಹಾ!

ಕ : ಏನಾಯ್ತು ಈ ಕುದ್ರೀಗೆ ಹೋಗ್ವಲ್ಲದಲ್ಲ!

ಹಿ : ಕುದ್ರಿಕಾಲಾಗ ಪೇಚಾಡ್ತಾನೆ-ರಾಜಕುಮಾರ

ಕ : ಇನ್ನೊಂದು ಸರುವು ಬಂತಪ್ಪ ಬೋರ್ ಅಂತಮಳಿ! ಕತ್ತಲ ಗವದ ಬಿಟ್ಟೈತಿ, ಮಾಡ ಮುಚ್ಚೈತಿ!

ಹಿ : ಸುರೀತೈತಿ ಮಳಿ!

ಕ : ಅಲೇಲೆಲೆ, ಈ ಮಲಿಗೆ ಸಿಕ್ಕರೆ ವ್ಯರ್ತ ಸಾಯ್ತಿನಿ ಹೋಗಿದ್ದರ ಊರಾಗ ಹೋಗಿಬಿಡ್ತಿದ್ದೆ. ಕುದ್ರಿ ಹೋಗಲಿಲ್ಲ!

ಹಿ : ಹೌದು!

ಕ : ತೆಂಗಿನ ಮರಕ್ಕೆ ಕುದ್ರಿ ಕಟ್ಟೆಬಿಟ್ಟ. ಗಚ್ಚಿನಕಟ್ಟಿ ಎದುರಿಗೆ ಬಂದುನೋಡ್ತಾನೆ. ಒಂದು ಮಾಡು ಇತ್ತು. ಒಬ್ಬ ಮನುಷ್ಯ ಕುಂದ್ರುವಷ್ಟು!

ಹಿ : ಶಿವಲೋಚನಮ್ಮನ ಸಮಾಧಿ ಮ್ಯಾಲೆ ಕಟ್ಟಿದ ಕಮಾನು!

ಕ : ಆ ಗಚ್ಚಿನ ಕಟ್ಟಿಹತ್ತಿ ಅದರಾಗ ಹೊಕ್ಕಂಡ.

ಹಿ : ಆಹಾ!

ಕ : ಕೈಕಾಲು ಮುದಿರಿಕೊಂಡು ಒಂದು ಗುಬ್ಬಿಮರಿ ಕುಂತ್ಹಾಂಗ ಆಗೇತಿ!

ಹಿ : ಆಹಾ!

ಕ : (ರಾಗವಾಗಿ) ಬೋರ್ ಅಂತ ಸುರಿತೈತೆಪಾ ಮಳೀ….

ಹಿ : ಈ ರಾಜನ ಕತಿ ಇದು-ಇಲ್ಲಿ!

ಕ : ರಂಭಾವತಿ ತೂಗುಮಂಚದ ಮೇಲೆ ಕುಂತ್ಕೊಂಡು ಟೈಮು ನೋಡ್ಕೊಂಡ್ಲು-ರಾಜ ಬರೋ ಹೊತ್ತಾಯ್ತು!

ಹಿ : ಆ.

ಕ : ಕೊಳ್ಳಾಗಿದ್ದ ಶಿವದಾರ ಬೆಳ್ಳಿಗೂಟಕ ಸಿಗ್ಹಾಕಿಬಿಟ್ಳು-ಜಳಕಕ್ಕೆ ಹೋಗಬೇಕಂತ!

ಹಿ : ಶಿವದಾರ!

ಕ : ರಾಜ ಬಂದ ತಕ್ಷಣಕ್ಕೆ ಜಳಕ ಮಾಡಿಕೊಂಡು ಆರತಿ ಬೆಳಗೋಂಬೊ ಬುದ್ಧಿ.

ಹಿ : ಹೌದು.

ಕ : ಆ ಸೂಳಿ ಶಿವದಾರ ಯಾವಾಗ ತಗದ್ಲು-ಶಿವಲೋಚನಮ್ಮ ಸಮಾಧ್ಯಾಗ ಎದ್ದು ಕುಂತುಬಿಟ್ಲು!

ಹಿ : ಓ ಜಲ್ಮ ತಿರುಗಿತು, ಪರಮಾತ್ಮನ ಶಾಪ!

ಕ : ನೋಡ್ತಾಳೆ ಸಮಾಧಿ ಬೆಳ್ಳಿಪೆಟಗಿ!

ಹಿ ಅರಮನಿ.

ಕ : ತಾಯೀ (ರಾಗ) ಅರಮನಿಯೊಳಗ ತೂಗಾ ಮಂಚದ ಮ್ಯಾಲೆ ನಮ್ಮ ಮಾವ-ನಮ್ಮ ಅತ್ತಿ, ನಮ್ಮ ಮಂತ್ರಿ ದಂಡು, ಗೌಡೇರು, ಬಾಣಗಿತ್ತೇರು ಇದ್ರಲ್ಲೇ….ಎಲ್ಲಾರೂ ಮಾಯಾಗಿ ನನಗೆ ಒಬ್ಬಕಿಗೇ ತಂದು ಇಲ್ಲಿ ಸಮಾಧಿಯೊಳಗೆ ಇಟ್ಟೋ ಗ್ಯಾರೆಲ್ಲೇ….ಮಾವ ಧರ್ಮಸೇಕಾ….ಅತ್ತಿ ಗಂಗಾಸಾಗ್ರ….ಮಂತ್ರೀ ನಾನೇನ; ಮಾಡಿದ್ದೆ? ನನ್ನ ಅಪರಾಧ ನೋಡಿ ಸಮಾಧ್ಯಾಗ ಇಟ್ಟು ಹೋಗೀರಾ…

ಹಿ : ಆಹಾ!

ಕ : ನನ್ನ ಗುಣಗಳು ಕೆಟ್ಟ ಗುಣಗಳಾದ್ವೇ ನಿಮ್ಮ ಕಣ್ಣಿಗೆ? ಹ್ಯಾಂಗ್ ಕಾಣಿಸ್ತು? ನನಿಗೆ ತಂದು ಇಟ್ಟು ಹೋಗೀರಾ? ಅರಮನಿ ದೂರಾಯ್ತು ತಾಯೀ! ತೌರುಮನಿ ದೂರಾಯ್ತು! ತಾಯಿ-ತಂದೆ ನನಿಗೆ ಎರವಾದ್ರು! ಮುವ್ವತ್ತು ಗೌಡೇರು ಹೋದ್ರು ತೂಗೋ ಮಂಚ ದೂರಾಯ್ತು!

ಹಿ : ಆಹಾ.

ಕ : ಅನಾಥಳು ಪರದೇಶಿ ಆಗಿ-ಆ ಸಮಾಧಿ+ಗಚ್ಚಿನ ಕಟ್ಟ್ಯಾನಿಂದಾ-

ಹಿ : ಆಹಾ.

ಕ : ಎಲ್ಲರಿಗೂ ನೆನಸಿ ಅಳ್ತಾಳೆ-ಒಬ್ಬಾಕೆ!

ಹಿ : ಆಹಾ!

ಕ : ಹೊರಾಕ ಒಂದು ಸೋಗಿನಂತ ಶಬ್ದ ಬರ್ತೈತಿ-ಗಚ್ಚಿನ ಕಟ್ಟಿಯಿಂದ.

ಹಿ : ಆಮ್ಯಾಲೆ ಏನಂತಾಳೆ-

ಕ : ಕೊನಿಗೆ ಆಗಲಿ ಹೋದ್ಯಾ ನನ್ನ ಮದುವಿ ರಾಜಾ! ನೀಲಕುಮಾರಾ ನಿನ್ನ ಹೆಸರ್ಲೆ ನನಗೆ ಲಗ್ನ ಮಾಡ್ಕೊಂಡು ಮಾಂಗಲ್ಯ ಮಾಡಿ ಕರ್ಕೊಂಡು ಬಂದ್ರು ಊರಿಗೆ-

ಹಿ : ಆಹಾ!

ಕ : (ರಾಗ) ಅರಮನಿಯಾಗ ಇದ್ದಾಗ ನನ್ನ ಮಂಚಕ ನೀನು ಬಂದು ಮುಖ ತೋರಿಸ್ಲಿಲ್ಲಾ ಪತೀ….ನಿನ್ನ ದಾರಿ ನಿನಗಾಯ್ತು ನನ್ನ ದಾರಿ ನನಗಾಯ್ತು….ನನ್ನ ಹತ್ರ ವೀಳ್ಯಾ ತೊಗೊಳ್ಲಿಲ್ಲಾ! ಬಾಸಿಂಗ ಜೋಡು ಆಗಲಿ ಹೋದ್ಯಾ! ನೀಲಕುಮಾರ+ಪತೀ! ನಿನ್ನ ಮಡದಿ ಬಂದು ಸಮಾಧಿ ಕಟ್ಟೀಲಿ ಕುಂತೀನೀ….

ಹಿ : ಆಹಾ….

ಕ : (ರಾಗ) ಎಂದಿಗೆ ನಿನ್ನ ಮುಖಾ ನೋಡ್ಲೀ….

ಹಿ : ಆ!

ಕ : ಸೋಗಿನಂಥ ಧ್ವನಿ ತಗದು ಅಳೋದು ಪಿಟೀಲಿನಂತ ಸ್ವರ ಆಗೇತೀ! ಇದು ರಾಜನ ಕಿವಿಗೆ ಬಿತ್ತು! ದಿಗ್ಗನೆ ರಾಜ ಎದ್ದು ನೋಡ್ತಾನೆ-

ಹಿ : ಮಳಿ ಕಡಿಮೆ ಆಗೇತಿ.

ಕ : ರಾಜಕುಮಾರ ಅಂದ್ಕೊಂತಾನೆ-ಏನಿದು ಈ ವನಂತ್ರ! ಒಬ್ಬ ಸ್ತ್ರೀಯಳು ರೋಧನ ಮಾಡಿದ್ಹಂಗ ಆಗ್ತೈತಲ್ಲ!

ಹಿ : ಹೆಣ್ಮಕ್ಕಳು ಅತ್ತಂಗ ಆಗತೈತಲ್ಲ.

ಕ : ಯಾರು ಅಳುತ್ತಿದ್ದಾರು? ಎಲ್ಲಿ ಆಳುತ್ತಿದ್ದಾರು?

ಹಿ : ಆಹಾ!

ಕ : ಈ ಗಚ್ಚಿನ ಕಟ್ಟಿ ಒಳಗೆ ಅತ್ತಂಗ ಆಕತಲ್ಲೋ!

ಹಿ : ಹೌದು ಹೌದು.