ಈ ಗ್ರಂಥದಲ್ಲಿ ಒಬ್ಬೆನೇ ಗೊಂದಲಿಗ ಕಲಾವಿದನ ಐದು ಆಟಗಳಿವೆ. ಇವನ್ನು ನಾನು ದಿವಂಗತ ಗೊಂದಲಿಗರ ದೇವೇಂದ್ರಪ್ಪನರಿಂದ ಸಂಗ್ರಹಿಸಿದ್ದೇನೆ. ಅವರು ಜೀವಂತವಿರುವಾಗಲೇ ಇವನ್ನು ಸಂಕಲಿಸಿ ಪ್ರಕಟಿಸುವ ಆಸೆ ನನ್ನದಾಗಿತ್ತು. ಆದರೆ ಈಗ ಅದು ಸಾಧ್ಯವಾಗುತ್ತಿದೆ. ಈ ಮುನ್ನ ಗೊಂದಲಿಗರು ಮತ್ತು ಅವರ ಆಚರಣೆಗಳನ್ನು ಕುರಿತು ಶ್ರೀ ಕ್ಯಾತನಹಳ್ಳಿ ರಾಮಣ್ಣನವರು ಎರಡು ಗ್ರಂಥಗಳನ್ನು ಬರೆದಿದ್ದಾರೆ; “ಗೊಂದಲಿಗರ ಕಥೆಗಳು” ಎಂಬ ಕೃತಿಯ ಮೂಲಕ ಹಲವನ್ನು ಸಂಕ್ಷಿಪ್ತವಾಗಿ ಕಥಾ ರೂಪದಲ್ಲಿ ಕೂಡಾ ಅವರು ಪರಿಚಯಿಸಿದ್ದಾರೆ. ಡಾ. ನಿಂಗಣ್ಣ ಸಣ್ಣಕ್ಕಿ ಗೊಂದಲಿಗರನ್ನೇ ಕುರಿತು ಮಹಾಪ್ರಬಂಧ ಬರೆದು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಮೊದಲಿಗರಾಗಿದ್ದಾರೆ. ಇವರ ಬಿಡಿ ಲೇಖನಗಳು ಹಾಗೂ ಪ್ರಾ. ಜ್ಯೋತಿ ಹೊಸೂರರ ಹಲವು ಲೇಖನಗಳು ಗೊಂದಲಿಗರ ಮೂಲವನ್ನೂ ಅವರ ವೈಶಿಷ್ಟ್ಯವನ್ನೂ ಎತ್ತಿ ತೋರಿವೆ. ಆದರೆ ಕಿನ್ನಾರಿ ಜೋಗಿಗಳ ಆಟಗಳಂತೆ ಗೊಂದಲಿಗರ ಆಟಗಳು ಪ್ರತ್ಯೇಕವಾಗಿ ಈವರೆಗೆ ಗ್ರಂಥರೂಪದಲ್ಲಿ ಪ್ರಕಟವಾಗಿರಲಿಲ್ಲ. ಈಗ ಈ ಕೊರತೆ ನೀಗುತ್ತಿದೆ.

ವಿಜಯನಗರದ ಅರಸರ ಕಾಲದಲ್ಲಿ ಕಲಾ ಪ್ರಜಾಪ್ರಭುತ್ವವಿತ್ತು; ವಿಬುಧ ಮಾನ್ಯ ಕಲೆಗಳಂತೆ ಜನಸಾಮಾನ್ಯ ಮಾನ್ಯ ಕಲೆಗಳಿಗೂ ಸಮಾನ ಪೋಷಣೆ ಪ್ರೋತ್ಸಾಹಗಳಿದ್ದವು. ವಿವಿಧ ಕಲಾಮಂಡಿತರು ಮತ್ತು ಕುರಿತೋದದ ಪ್ರಯೋಗ ಮತಿಗಳಲ್ಲಿ ಯಾವ ತಾರತಮ್ಯವೂ ಇಲ್ಲದ ಏಕಪ್ರಕಾರದ ಗೌರವವಿತ್ತು. ಹೊಸತಾಗಿ ಸ್ಥಾಪಿತಗೊಂಡಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯವೂ ಅದೇ ಪರಂಪರೆಯ ವಾರಸುದಾರನಾಗಿ ಕಾರ್ಯಶೀಲವಾಗಿದೆ. ಅದರ ಮೊದಲ ಉತ್ಸಾಹೀ ಕುಲಪತಿಗಳಾದ ಮಾನ್ಯ ಡಾ. ಚಂದ್ರಶೇಖರ ಕಂಬಾರರು ನಮ್ಮ ನಾಡಿನ ಬಹುಮುಖ ಪ್ರತಿಭೆಯ ಸಾಹಿತಿಯಾಗಿರುವಂತೆ ಜನ್ಮದಾತ ಜಾನಪದ ಸಾಹಿತ್ಯ ಕಲಾಸಕ್ತರೂ ಹೌದು. ವಿಜಯನಗರ ನಾಡಿನ ನಮ್ಮದಿ. ಗೊಂದಲಿಗರ ದೇವೇಂದ್ರಪ್ಪನವರ ಈ ಆಟಗಳನ್ನು ಪ್ರಕಟಿಸಲು ಶ್ರೀಯುತರು ಉತ್ಸಾಹ ತೋರಿದ್ದು ಅವರ ಗುಣಗ್ರಾಹಿತ್ವಕ್ಕೆ ನಿದರ್ಶನ.

ಪ್ರಸ್ತುತ ಸಂಗ್ರಹದಲ್ಲಿಯ ಆಟಗಳನ್ನು ಧ್ವನಿಮುದ್ರಿಸುವಾಗಲೆಲ್ಲಾ ದಿ. ವಾಮದೇವ, ಅಶೋಕ, ಉಳ್ಳಿ ಮಲ್ಲಪ್ಪ ಸಹಕರಿಸಿದ್ದುಂಟು.

ಹಲವು ವರ್ಷಗಳಿಂದ ಧ್ವನಿಯ ಟೀಪು ಮತ್ತು ಸುರುಳಿಗಳಲ್ಲಿ ಕೊಳೆಯುತ್ತಿದ್ದ ಇವುಗಳನ್ನು ಲಿಪಿಗೊಳಿಸಿ ಪ್ರತಿ ತಯಾರಿಸಲು ಸರ್ವಶ್ರೀ ಎಚ್. ಮಲ್ಲಿಕಾರ್ಜುನ, ಬಿ.ಇ. ಮತ್ತು ಉಳ್ಳಿ ಮಲ್ಲಪ್ಪ ಏಕೈಕ ನಿಷ್ಠೆಯಿಂದ ನೆರವಾಗಿದ್ದಾರೆ; ಹಸ್ತಪ್ರತಿಯನ್ನು ಪರಿಶೀಲಿಸುವಾಗ ಉ. ಚಂದ್ರಶೇಖರನ ಸಹಾಯ ದೊರೆತಿದೆ.

ಗೊಂದಲಿಗರಿಗೆ ಸಂಬಂಧಿಸಿದಂತೆ ತಮ್ಮಲ್ಲಿದ್ದ ಹಲವು ಉಪಯುಕ್ತ ಗ್ರಂಥಗಳನ್ನು ಎರವಲು ನೀಡಿದವರು-ಆತ್ಮೀಯರಾದ ಡಾ.ಯಂ.ಜಿ. ಈಶ್ವರಪ್ಪ, ಡಾ ಬಸವರಾಜ ಮಲಶೆಟ್ಟಿ, ಪಾ. ಎಸ್. ಎಸ್. ಹಿರೇಮಠ, ಶ್ರೀ ಗುರುಮೂರ್ತಿ ಪೆಂಡಕೂರ, ಹಗರಿಬೊಮ್ಮನಹಳ್ಳಿಯ ಡಾ. ಕುಲಕರ್ಣಿ ಅವರು ವಿನಂತಿತ ವಿವರಗಳನ್ನು ಕಳಿಸಿದ್ದಾರೆ.

ತಮ್ಮ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ್ದ ಹಲವು ಮಾಹಿತಿಗಳನ್ನು ಡಾ. ಸುಶೀಲ ಉಪಾಧ್ಯಾಯ, ಡಾ. ನಿಂಗಣ್ಣ ಸಣ್ಣಕ್ಕಿ, ಡಾ. ವೀರಣ್ಣದಂಡೆ. ಡಾ. ಬಸವರಾಜ ಜಗಜಂಪಿ, ಸಂಶೋಧಕರಾದ ಶ್ರೀ ಎಸ್.ಎ. ಕೃಷ್ಣಯ್ಯ ಇವರೆಲ್ಲರೂ ಅತ್ಯಭಿಮಾನದಿಂದ ನೀಡಿದ್ದಾರೆ.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರೂ ಜಾನಪದ ತಜ್ಞ. ದಾಸೋಹಿಗಳೂ ಆದ ಪ್ರಾ. ಕು. ಶಿ. ಹರಿದಾಸಭಟ್ಟರು ತಮ್ಮ ಕೇಂದ್ರದಿಂದ ಉಪಯುಕ್ತ ದಾಖಲೆಗಳನ್ನು ಪಡೆಯಲು, “ಗೋಂದೋಳ್ ಪೂಜೆ”ಯ ವಿಡಿಯೋ ಟೇಪ್ ವೀಕ್ಷಿಸಲು ಸಕಲ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ ಶ್ರೀ. ಕು.ಶಿ. ಹರ್ಷವರ್ಧನ ಭಟ್ಟರೂ ಈ ಕುರಿತಂತೆ ಹೆಚ್ಚಿನ ಸಹಕಾರ ನೀಡಿದ್ದಾರೆ.

ಅನಂತಪುರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಡಾ. ಆರ್. ಶೇಷಶಾಸ್ತ್ರಿಗಳು ನನ್ನ ವಿನಂತಿಯಂತೆ ಹಲವು ವಿವರಗಳನ್ನು ನೆರಳಚ್ಚು ಮಾಡಿ ಕಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ತೆಲುಗು ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎಸ್. ಮೋಹನ್ ಅವರು ಆಂಧ್ರಪ್ರದೇಶದ ಗೊಂದಲಿಗರ ವಿವರಗಳನ್ನು ಸಂಗ್ರಹಿಸಿ ಕಳಿಸುವ ಶ್ರಮ ತೆಗೆದುಕೊಂಡಿದ್ದಾರೆ.

ನನ್ನ ಅಭಿಮಾನಧನರೂ ಪುಣೆಯ ಸಾಹಿತಿ ದಂಪತಿಗಳೂ ಆದ ಶ್ರೀಮತಿ ಉಮಾ ಕುಲಕರ್ಣಿ ಮತ್ತು ವಿರೂಪಾಕ್ಷ ಕುಲಕರ್ಣಿ ಮಹಾರಾಷ್ಟ್ರದ ಗೊಂದಲಿಗರನ್ನು ಕುರಿತು ಮಾಹಿತಿಗಳನ್ನು ಪೂರೈಸಿದ್ದಾರೆ.

ನನ್ನ ನಿಡುಗಾಲದ ಆತ್ಮೀಯರಾದ ಡಾ. ಬಸವರಾಜ ಮಲಶೆಟ್ಟರು ಆಸಕ್ತಿ ತೋರದಿದ್ದರೆ ಈ ಸಂಗ್ರಹ ಇಷ್ಟು ಬೇಗ ಬೆಳಕು ಕಾಣುತ್ತಿರಲಿಲ್ಲ.

ಅಭಿಜಾತ ಚಲಚ್ಚಿತ್ರ ಹಾಗೂ ರಂಗನಟ ದಿ. ಶ್ರೀ ಶಂಕರನಾಗ್ ರು ನನ್ನಲ್ಲಿಗೆ ಆಗಮಿಸಿದ್ದಾಗ ದಿ. ದೇವೇಂದ್ರಪ್ಪನವರ ಆಟದ ಚಿತ್ರಗಳನ್ನು ತೆಗೆದುಕೊಟ್ಟಿದ್ದರು. ಅವುಗಳಲ್ಲಿ ಹಲವನ್ನು ಈ ಕೃತಿಯಲ್ಲಿ ಬಲಸಿಕೊಳ್ಳಲು ಅವರ ಪತ್ನಿ ಚಲನಚಿತ್ರ ತಾರೆ ರಂಗ ಕಲಾವಿದೆ ಶ್ರೀಮತಿ ಅರುಂಧತಿನಾಗ್ ಸಮ್ಮತಿಸುವ ಔದಾರ್ಯ ತೋರಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ || ಚಿ. ಶ್ರೀನಿವಾಸರಾಜು ಅವರ ತಾಳ್ಮೆ ದೊಡ್ದದು. ನನ್ನ ಅಸ್ವಸ್ಥತೆ ಹಾಗೂ ಕಾರ್ಯಬಾಹುಳ್ಯಗಳಲ್ಲಿ ಪೀಠಿಕೆ ಬರೆದು ಕಳಿಸಲು ವಿಳಂಬವಾಗಿರುವುದನ್ನು ಉದಾರವಾಗಿ ಕಂಡು ಈ ಕೃತಿಯನ್ನು ಸರ್ವಾಂಗ ಸುಂದರವಾಗಿ ಹೊರತರಲು ಅವರು ತೆಗೆದುಕೊಂಡಿರುವ ಆಸಕ್ತಿ, ಶ್ರಮ ಅಷ್ಟಿಷ್ಟಲ್ಲ.

ಈ ಎಲ್ಲ ಮಾನ್ಯರ ಸದಭಿಮಾನ, ಸಹಕಾರ, ಸಹಾಯಗಳ ಸೌಜನ್ಯವನ್ನು ಸ್ಮರಿಸುತ್ತೇನೆ.

ಮುದೇನೂರು ಸಂಗಣ್ಣ
ಚಿಗಟೇರಿ
೩೧-೩-೧೯೯೩