ಕಥೋದ್ದೇಶ

ಗೊಂದಲಿಗರ ಕಥಾವಸ್ತುವಿಗೆ ಉದ್ದೇಶವಿದೆ. ತನ್ನ ಪ್ರೇಕ್ಷಕರ ಅನುಭವವಾಗಿ ಅವರೊಂದಿಗೆ ಹೊಂದಿಕೊಂಡು ಸಾಗುವ ಗುಣವಿದೆ. ಅವರ ಆಟಗಳಲ್ಲಿ ಧಾರ್ಮಿಕ ದೃಷ್ಟಿಯಿಂದ ಲೌಕಿಕ ದೃಷ್ಟಿ ಢಾಳವಾಗಿರುವದೇ ಹೆಚ್ಚು.

ಮಾನವನ ಲೌಕಿಕ ಜೀವನದ ಅರ್ಥವಂತಿಕೆ ಹಾಗೂ ಸಾರ್ಥಕತೆಗಳು ಈ ಭೂಲೋಕದಲ್ಲೇ ಲಭ್ಯ. ನ್ಯಾಯ ನೀತಿ ವಿವೇಕ ಮುಂತಾದ ಇತ್ಯಾತ್ಮಕ ಜೀವನ ಮೌಲ್ಯಗಳನ್ನು ಇಲ್ಲಿ ಮಾತ್ರ ಕಂಡುಕೊಳ್ಳಲು ಸಾಧ್ಯವೆಂಬುದನ್ನು ಅವರ ಆಟಗಳು ಮನವರಿಕೆ ಮಾಡಿಕೊಡುತ್ತವೆ. ಪ್ರಾಮಾಣಿಕ ಜೀವನವನ್ನು ವೈಭವೀಕರಿಸುವುದರ ಹೊರತು ಅವು ಇನ್ನಾವುದರ ಸಾಧನಗಳಲ್ಲ. ಮಾನವತೆಯ ಘನತೆಯನ್ನು ಅವು ಎತ್ತಿ ಹಿಡಿಯುತ್ತವೆ. ಭೌತಿಕ ನೆಲೆಯ ಲೋಕವಿರೋಧಿಗಳಿಗೆ ಉಳಿಗಾಲವಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡುತ್ತವೆ. ಸಭ್ಯರನ್ನೂ, ಸಾಧ್ವಿ ಸ್ತ್ರೀಯರನ್ನೂ ಅರಮನೆಯ ರಾಕ್ಷಸೀ ಮಹತ್ವಾಕಾಂಕ್ಷೆ ಕಾಡುತ್ತದೆಂಬುದನ್ನೂ ತೋರಿಸುವ ಮೂಲಕ ವ್ಯಕ್ತಿ ಶೋಷಣೆ, ರಾಗದ್ವೇಷಣೆಗಳಿಗೆ ಕುಲ ವರ್ಗಗಳ ಭೇದವಿಲ್ಲವೆಂಬುದನ್ನು ಇಲ್ಲಿಯ ಕತೆಗಳು ಬಿಂಬಿಸುತ್ತವೆ.

ಕೌಟುಂಬಿಕ, ಸಾಮಾಜಿಕ ಜೀವನದ ಸಂದರ್ಭಗಳಲ್ಲಿ ಲೌಕಿಕರು ಅನುಭವಿಸುವ ಕಷ್ಟ-ನಿಷ್ಠುರಗಳು ಸಾವಿರ ರೀತಿಯವು. ಅವಲ್ಲೆವನ್ನೂ ಗೊಂದಲಿಗರ ಆಟಗಳ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದೇ ಮುಖ್ಯ. ಅದಕ್ಕಾಗಿಯೇ ಗೊಂದಲಿಗರ ಆಟಗಳು ಅವರಿವರೆನ್ನದೆ ಇಡೀ ಜನಸಮುದಾಯದ ಕಾಳಜಿ ತೋರುತ್ತಾ ಮಾನವೀಯ ಘನತೆಯನ್ನು ಎತ್ತಿ ಹಿಡಿಯುತ್ತಾ ಬಂದಿವೆ. ಗೊಂದಲಿಗರಂಥ ಅಲೆಮಾರೀ ಕಲಾವಿದರ ಆಟಗಳು ಜನಸಾಮಾನ್ಯರಲ್ಲಿ ಧೈರ್ಯ, ಸಾಹಸ, ಕರ್ತವ್ಯ ಪ್ರಜ್ಞೆ, ಉದಾತ್ತತೆ, ಪ್ರೀತಿ, ಆತ್ಮವಿಶ್ವಾಸ ದೈವಭಕ್ತಿಗಳನ್ನು ಪ್ರೇರಿಸಬಲ್ಲವು. ತಮ್ಮ ಪರಿಮಿತ ಪ್ರೇಕ್ಷಕರ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಾಡುವ ಸತ್ವವೂ ಅವಕ್ಕಿದೆ.

ಒಟ್ಟು ನಮ್ಮ ಕನ್ನಡನಾಡಿನಲ್ಲಿ ಗೊಂದಲಿಗರು ಆಡುವ ಕಥೆಗಳು ಅರವತ್ತರಿಂದ ಎಂಭತ್ತರವರೆಗೆಂದು ಕೆಲವರು ಅಂದಾಜು ಮಾಡಿದ್ದಾರೆ. ಡಾ. ನಿಂಗಣ್ಣ ಸಣ್ಣಕ್ಕಿ ಅವರು ತಮ್ಮ ಮಹಾಪ್ರಬಂಧ ಹಾಗೂ ಅನ್ಯ ಲೇಖನಗಳಲ್ಲಿ ಇವರ ಇಪ್ಪತ್ತೇಳು ಕಥೆಗಳನ್ನು ಹೆಸರಿಸಿದ್ದಾರೆ. ಇವುಗಳನ್ನು ಕಾಲ್ಪನಿಕ, ಪೌರಾಣಿಕ ಐತಿಹಾಸಿಕಗಳನ್ನಾಗಿ ವರ್ಗೀಕರಿಸಿದ್ದಾರೆ. ಅವರು ಉಲ್ಲೇಖಿಸಿರುವ ಬಸವೇಶ್ವರ-ಚನ್ನಬಸವೇಶ್ವರ ಕಥೆ, ಸತ್ಯಹರಿಶ್ಚಂದ್ರನ ಕಥೆ, ಭಕ್ತ ಸಿರಿಯಾಳನ ಕಥೆಯಂಥವು ಅವರ ಪ್ರದೇಶದಲ್ಲಿದ್ದರೂ ಕರ್ನಾಟಕದ ಅನ್ಯಭಾಗದಲ್ಲಿ ಪ್ರಚಲಿತವಿರುವುದು ನನಗೆ ಕಂಡಿಲ್ಲ. ಉತ್ತರ ಕರ್ನಾಟಕದ್ದೇ ವಿಶಿಷ್ಟ ಕೊಡುಗೆಯಾದ ಸಣ್ಣಾಟಗಳ ರೂಪದಲ್ಲಿ ಬಸವೇಶ್ವರ, ಬಸವಂತ-ಬಲವಂತ, ಸತ್ಯಹರಿಶ್ಚಂದ್ರಗಳೂ ಜನಪ್ರಿಯವಿರುವುದರಿಂದ ಆ ಭಾಗದಲ್ಲಿ ಅಲ್ಲಲ್ಲಿ ಹಲವು ಗೊಂದಲಿಗರು ಅವುಗಳನ್ನೂ ತಮ್ಮ ಆಟಗಳಿಗೆ ವಸ್ತುವಾಗಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ.

ಕಥಾ ಬಾಂಧವ್ಯಗಳು

ಮೌಖಿಕ ಪರಂಪರೆಯ ಕಥೆ, ಕಾವ್ಯ, ರಂಗಕಲೆಗಳ ವಸ್ತು ಮತ್ತು ಆಶಯಗಳಲ್ಲಿ ವ್ಯಾಪಕವಾಗಿ ಇಲ್ಲವೆ ಚದುರಿದಂತೆ ಸಾಮ್ಯತೆ ಬಂಧುತ್ವಗಳಿರುವುಇದು ಜಾನಪದದ ವಿಶ್ವ ಸ್ವಭಾವ. ಸಿಂಡ್ರೆಲಾ ಇದಕ್ಕೊಂದು ನಿದರ್ಶನ; ಈ ಕತೆಯನ್ನೇ ಹೋಲುವ ೧೪೦೦ರಷ್ಟು ಕತೆಗಳು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಂದ ಲಭ್ಯವಾಗಿವೆಯಂತೆ! ಇವುಗಳಲ್ಲಿ ಪಾಠಾಂತರಗಳೂ ಇರದಿರುವುದಿಲ್ಲ. ಆದರೆವ್ ಕವಿಕೃತಿಗಳನ್ನು ಪರಾಮರ್ಶಿಸಿ ಸಾಮಾನ್ಯ ಪಾಠವೊಂದನ್ನು ಗೊತ್ತುಮಾಡಿದಂತೆ ಇವುಗಳನ್ನು ಮಾಡುವುದು ಅಸಾಧ್ಯ.

ಕನ್ನಡ ಜಾನಪದ ಕಥೆ, ಕಥನಕಾವ್ಯ, ರಂಗಕಲೆಗಳಲ್ಲಿ ಕಣಬರುವ ಕಥಾ ಬಾಂಧವ್ಯಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಬಹುದು.

ಕಥಾ ವಸ್ತುಗಳ ಹೆಸರು

ಇವನ್ನು ಬಳಸಿಕೊಳ್ಳುವ ವಿವಿಧ ಕಲಾವಿದರು

೧. ಬಸವಕುಮಾರ – ಲೋಹಿತಕುಮಾರ ಕರಪಾಲದವರು, ದೊಂಬಿದಾಸರು ಕಿನ್ನರಿ ಜೋಗಿಗಳು, ಗೊಂದಲಿಗರು ಚೌಡಿಕೆಯವರು.
೨. ಅರಣ್ಯಕುಮಾರ ಕರಪಾಲದವರು, ಗೊಂದಲಿಗರು ಕಿನ್ನರಿ ಜೋಗಿಗಳು.
೩. ಶೀಲಾವತಿ ಕರಪಾಲದವರು, ಗೊಂದಲಿಗರು, ಚೌಡಿಕೆವರು, ಕಿನ್ನರಿ ಜೋಗಿಗಳು.
೪. ಕುಮಾರರಾಮ ನೀಲಗಾರರು, ಕಂಸಾಳೆ, ಗೊಂದಲಿಗರು.
೫. ವೀರಪರಾಕ್ರಮ ಗೊಂದಲಿಗರು, ಕಿನ್ನರಿ ಜೋಗಿಗಳು
೬. ವಿಘ್ನಾವತಿ ಗೊಂದಲಿಗರು, ಕಿನ್ನರಿ ಜೋಗಿಗಳು
೭. ಸತಿ ಶಿವಲೋಚನಾ ಗೊಂದಲಿಗರು, ಕಿನ್ನರಿ ಜೋಗಿಗಳು
೮. ಲಕ್ಷಾಪತಿರಾಜ ಗೊಂದಲಿಗರು, ಕಿನ್ನರಿ ಜೋಗಿಗಳು
೯. ಸೋಮಶೇಖರ-ಚಿತ್ರಶೇಖರ ಗೊಂದಲಿಗರು, ಕಿನ್ನರಿ ಜೋಗಿಗಳು
೧೦. ಯಲ್ಲಮ್ಮ ರೇಣುಕೆಯ ಕಥೆ ಚೌಡಿಕೆಯವರು, ಗೊಂದಲಿಗರು.
೧೧. ಬಾಳಭಿಕ್ಷುಕ ಕರಪಾಲದವರು, ಕಿನ್ನರಿ ಜೋಗಿಗಳು ಗೊಂದಲಿಗರು.

ಮೇಲ್ಕಾಣಿಸಿದ ವೃತ್ತಿ ಕಥನಕಾರರ ಹಲವು ಕಥಾವಸ್ತುಗಳು ಘಟನೆ, ನಿರೂಪಣೆಗಳಲ್ಲಿ ಅಲ್ಲಲ್ಲಿ ಅಷ್ಟಿಷ್ಟು ವ್ಯತ್ಯಯಗೊಂಡು ಅನ್ಯ ಹೆಸರುಗಳಿಂದ ಪ್ರಚಾರದಲ್ಲಿರುವುದನ್ನೂ ನಾವು ಕಾಣಬಹುದು.

ಉದಾಹರಣೆಗೆ-

ಬಾಳಭಿಕ್ಷುಕ-ಬಾಣಾವತಿ
ಜಯರಾಣಿ-ಬಾಲನಾಗಮ್ಮ
ಬಾಳಾವತಿ-ಚಂದ್ರಹಾಸ
ಶೀಲಾವತಿ-ದಾಳಿಂಬರಾಣಿ

ಎಂದೂ ಕರೆಯಲ್ಪಟ್ಟಿವೆ.

ಇಲ್ಲಿ ಇನ್ನೊಂದು ಅಂಶ ಉಲ್ಲೇಖನೀಯವಾಗಿದೆ. ನಮ್ಮ ನಾಡಿನ ಆದಿವಾಸಿಗಳ ಜನಾಂಗಕ್ಕೆ ಗೊಂಡರೂ ಸೇರುತ್ತಾರೆ. ಇವರು ಮಧ್ಯ ಭಾರತದ ಗೊಂಡರ ಮೂಲ ಜನಾಂಗದವರೆಂದು ಡಾ. ಜೀಶುಪ ಹೇಳಿದ್ದಾರೆ. ಅರಣ್ಯದಲ್ಲಿ ಗುಂಪುಗೂಡಿ ನೆಲೆ ನಿಂತಿರುವ ಈ ಜನಾಂಗಕ್ಕೆ ಸೇರಿದ ಸದ್ದನ ಮನೆ ಪರಮೇಶ್ವರಿ ಎಂಬ ಮಹಿಳೆ ಬಾಳಭಿಕ್ಷುಕ ರಾಜನ ಕತೆಯನ್ನು ಗದ್ಯ ಕತೆಯಾಗಿ ಹೇಳಿದರೆಂದು ನಮ್ಮ ಸುಪ್ರಸಿದ್ಧ ಜಾನಪದ ಸಾಹಿತ್ಯಜ್ಞರಲ್ಲೊಬ್ಬರಾದ ಶ್ರೀ ಎಲ್. ಆರ್. ಹೆಗಡೆ ದಾಖಲಿಸಿದ್ದಾರೆ.

ಜಾನಪದ ಕಥಾವಸ್ತುಗಳು ಎಲ್ಲೆಡೆ ಪ್ರಸರಣಗೊಂಡು ಪ್ರಾದೇಶಿಕ ಪರಿಸರ, ಸಾಮಾಜಿಕ, ಭೌಗೋಲಿಕ, ಸಾಂಸ್ಕೃತಿಕ ಸ್ತರಗಳ ವಿಭಿನ್ನತೆಗಳಿಗೆ ಹೊಂದಿಕೊಂಡು ಪ್ರಚಲಿತವಾಗಿರುವುದನ್ನು ನಾವು ಕಾಣಬಹುದು. ಆದರೆ ಆಶಯಗಳ ಬಾಬಿನಲ್ಲಿ ಮಾತ್ರ ಸಹ ಸ್ವಭಾವದವಾಗಿರುವುದೊಂದು ವಿಶೇಷ.

ಕಿನ್ನರ ಜೋಗಿಗಳು ಮತ್ತು ಗೊಂದಲಿಗರು

ಕಿನ್ನರ ಜೋಗಿಗಳು ಮತ್ತು ಗೊಂದಲಿಗರ ಭಾಷಾ ಪ್ರಯೋಗದಲ್ಲಿ ಕತೆ ನಡೆಸುವ ವಿಧಾನದಲ್ಲಿ ವ್ಯತ್ಯಾಸವಿದೆ. ಉಭಯತರೂ ಬಳಸುವ ವಾದ್ಯಗಳು ಸಂಪೂರ್ಣ ಬೇರೆ. ಕಿನ್ನರಿ ಜೋಗಿಗಳ ವಾದ್ಯಗಳು ಏಕತಾರಿ ದಿಮ್ಮಡಿ, ಕೈತಾಳ, ಕಿನ್ನರಿಗಳಾದರೆ, ಗೊಂದಲಿಗರವು ಶೃತಿ ಚೌಡಿಕೆ, ಸಮಾಳ, ಕೈತಾಳಗಳಾಗಿವೆ ಉಭಯತರು ಹಾಡುವ ಶೈಲಿ, ಸೊಲ್ಲುಗಳೂ ಬೇರೆ ಬೇರೆ. ಕಿನ್ನರಿ ಜೋಗಿಗಳ ವೇಷದಂತೆ ಗೊಂದಲಿಗರ ವೇಷ ಕಣ್ಸಳೆಯುವುದಿಲ್ಲ, ಕಿನ್ನರಿಯು ಮೆಟ್ಟಿಲುಗಳ ಅಳವಡಿಕೆಯಿಂದ ಇದಿ ಹಾಡನ್ನೇ ಮಿಡಿದು ಕರ್ಣಾನಂದ ನೀಡುವ ತಂತೀವಾದ್ಯ; ಅಂತೆಯೇ ನಮ್ಮ ಜನಪದರು ಗೊಂದಲಿಗರಿಗಿಂತ “ಕಿನ್ನುಡಿ” ನುಡಿಸುವವನ ದನಿಯನ್ನೂ ಅವನ ವೆಷ ವೈಭವವನ್ನೂ ಹಾಡಿಕೊಂಡಿದ್ದಾರೆ.

ಭೈರವ ಜೋಗಿ, ಅರ್ಜುನ ಜೋಗಿಯೆಂದು ಕೂಡಾ ಕರೆಯಲ್ಪಡುತ್ತಿರುವ ಕಿನ್ನರಿ ಜೋಗಿಗಳು ನಾಥ ಸಂಪ್ರದಾಯಕ್ಕೆ ಸೇರಿದವರು. ಕಾಲ್ಪನಿಕ ಕಥೆಗಳಿಗಿಂತ ಮಹಾಭಾರತದ ಕಥಾ ವಸ್ತುಗಳಿಗೇ ಅವರ ಪ್ರಾಮುಖ್ಯತೆ ಹೆಚ್ಚು. ಮಿಕ್ಕಂತೆ ಇವರೂ ಕತೆ ಕಟ್ಟುವುದರಲ್ಲಿ, ಕಥಾನಾಯಕ-ನಾಯಕಿಯರ ಧೀರೋದಾತ್ತತೆಯನ್ನು ವೈಭವೀಕರಿಸುವುದರಲ್ಲಿ ಸನ್ನಿವೇಶಕ್ಕೆ ಮೆರಗುಕೊಡುವುದರಲ್ಲಿ, ಕಾವ್ಯ ಗುಣವಿಲ್ಲದ ಹಾಡುಗಾರಿಕೆಯಲ್ಲಿ, ಕತೆ ಯುದ್ಧಕ್ಕೂ ನಾದಮಯತೆಯನ್ನೂ ಕಾಪಾಡುವುದರಲ್ಲಿ ಸಮೂಹ ಪ್ರಜ್ಞೆಯಲ್ಲಿ ಒಂದೇ ಆಗಿದ್ದಾರೆ.

ಆಟಗಳಲ್ಲಿ ಸಾಮ್ಯವೈರುಧ್ಯಗಳು

ನಿಜ, ನಮ್ಮ ನಾಡಿನ ವಿಭಿನ್ನ ಭಾಗಗಳ ಗೊಂದಲಿಗರು ತಮ್ಮ ಆಟದಲ್ಲಿ ಕತೆಯನ್ನು ಬೆಳೆಸುವ, ಮುಕ್ತಾಯ ಮಾಡುವ ರೀತಿ ಒಂದೇ ವಿಧದ್ದಾಗಿದೆ. ಆದರೆ ಕಥಾ ವಸ್ತುವಿನ ಬಿಡಿ ಘಟನೆಗಳಲ್ಲಿ ಹಾಗೂ ಪಾತ್ರಗಳ ಹೆಸರುಗಳಲ್ಲಿ ವ್ಯತ್ಯಯಗಳಿವೆ.

ಬಳ್ಳಾರಿ, ಶಿವಮೊಗ್ಗ, ಬಿಜಾಪುರಗಳ ಗೊಂದಲಿಗರ “ಶೀಲಾವತಿ” ಆಟದಲ್ಲಿ ೨೦ಕ್ಕೂ ಹೆಚ್ಚು ವ್ಯತ್ಯಾಸಗಳಿವೆ. ಆದರೆ ತೀರ್ಥಹಳ್ಳಿಯ ಸುತ್ತಲಿನ ಲಾವಣಿಗಳಲ್ಲೊಂದಾದ ಸತ್ಯ ಶೀಲಾವತಿಗೂ ಬಿಜಾಪುರದ ಗೊಂದಲಿಗರ ಶೀಲಾವತಿಗೂ ಹಲ ಕೆಲವು ಹೋಲಿಕೆಗಳಿವೆ. ಬಳ್ಳಾರಿ ಜಿಲ್ಲೆಯ ಇದೇ ಶೀಲಾವತಿಗೆ ಶಿವಮೊಗ್ಗ ಜಿಲ್ಲೆಯ ಕಿನ್ನರಿ ಜೋಗಿಗಳ ದೇವಸುಂದರಿ-ಮದನಮೋಹನ ಆಟಕ್ಕೂ ಹಲವಾರು ಹೋಲಿಕೆಗಳಿವೆ.

ಬಳ್ಳಾರಿ ಮತ್ತು ಬಿಜಾಪುರ ಭಾಗಗಳ “ಬಾಳಭಿಕ್ಷುಕ” ಆಟದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಭಿನ್ನತೆಗಳಿವೆ. ಇದರ ಮತ್ತು ಬಾಣಾವತಿ ಆಟದ ಆಶಯಗಳನ್ನು ಸಾಮತ್ಯೆ ಇದ್ದರೂ ಕಥಾನಾಯಕನೊಬ್ಬನ ಹೊರತಾಗಿ ಇನ್ನೆಲ್ಲಾ ಪಾತ್ರಗಳು ಮತ್ತು ಸ್ಥಳಗಳ ಹೆಸರುಗಳು ಬೇರೆ ಬೇರೆ ಇವೆ.

ಬಳ್ಳಾರಿ ಭಾಗದ ಗೊಂದಲಿಗರ “ಸತ್ಯ ಶಿವಲೋಚನ” ಕ್ಕೂ ಶಿವಮೊಗ್ಗ ಜಿಲ್ಲೆಯ ಸರಾವಣ-ಲಾಲಸೇನದ ಘಟನೆ ಹಾಗೂ ಆಶಯಗಳಿಗೂ ಹೋಲಿಕೆ ಇರುವುದೂ ಗಮನ ಯೋಗ್ಯ.

ಐತಿಹಾಸಿಕ ಪೌರಾಣಿಕ ಕಥಾ ಸಂಬಂಧಗಳು

ಗೊಂದಲಿಗರ ಆಟಗಳಲ್ಲಿ ಕುಮಾರರಾಮ ಹಾಗೂ ಸೋಮಶೇಖರ-ಚಿತ್ರಶೇಖರಗಳಂಥ ಐತಿಹಾಸಿಕ ವಸ್ತುಗಳೂ ಇವೆ. ಆದರೆ ಇವು ಇತಿಹಾಸಕ್ಕೆ ಹತ್ತಿರದ ಐತಿಹ್ಯದ ಸ್ವಭಾವ ಹೊಂದಿರುವುದರಿಂದ ಸಾಕ್ಷ್ಯ ಪ್ರಮಾಣಗಳು ಬೇಕಾಗುವುದಿಲ್ಲ. ಯಾಕೆಂದರೆ ಐತಿಹ್ಯಕ್ಕೆ ಭೌತಿಕ ಆಧಾರವೊಂದು ಇರುವುದಾದರೂ ಅದಕ್ಕೆ ಕಾಲ್ಪನಿಕತೆ, ಅತಿಮಾನವತೆ, ನಂಬುಗೆಗಳು ಸೇರಿಕೊಳ್ಳುತ್ತವೆ. ನಮ್ಮ ಜನಪದರ ದೃಷ್ಟಿಯಲ್ಲಿ ಐತಿಹ್ಯವೇ ಇತಿಹಾಸವನ್ನಿಸುತ್ತದೆ. ಇಷ್ಟೇ ಅಲ್ಲ ಗೊಂದಲಿಗರು ಐತಿಹ್ಯಗಳಿಗೆ ಪೌರಾಣಿಕ ಸ್ಪರ್ಶ ನೀಡುವುದರಲ್ಲಿಯೂ ಬಲ್ಲಿದರು. ಕುಮಾರರಾಮನ ಆಟದಲ್ಲಿ ರತ್ನಾಳಿಗೆ ದೇವಲೋಕದ ನಂಟನ್ನು ಅಂಟಿಸಿದ್ದಾರೆ. ಇದೇ ರೀತಿ ಕಾಲ್ಪನಿಕ ಕಥಾವಸ್ತುಗಳಿಗೂ ಪೌರಾಣಿಕ ಸಂಬಂಧ ಕಲ್ಪಿಸಿದ್ದಾರೆ.

  • ವೀರಪರಾಕ್ರಮ ಆಟದಲ್ಲಿ ದೇವಲೋಕದ ವಿಧಿಮಾಯೆ ತನ್ನ ಬಂಜೆತನ ನೀಗಿ ಕೊಳ್ಳಲಿಕ್ಕಾಗಿ ಈ ಭೂಲೋಕದ ರಾಜನ             ಕೈಹಿಡಿಯುತ್ತಾಳೆ.
  • ಸತಿ ಶಿವಲೋಚನ ಆಟದಲ್ಲಿ ನಾರವನ ಚಿತಾವಣಿಯಿಂದಾಗಿ ದೇವಲೋಕದ ಅಪ್ಸರೆಯಾದ ರಂಭೆ ಈ ಮರ್ತ್ಯ ಲೋಕದಲ್ಲಿ ಶಿವಲೋಚನೆಯಾಗಿ ಜನ್ಮ ತಾಳುತ್ತಾಳೆ.

ನಿರೂಪಣಾನಿಧಾನ

ಗೊಂದಲಿಗರ ಆಟದ ನಿರೂಪಣೆಯಲ್ಲಿ ಭಾಷಣದ ಗತ್ತಿಲ್ಲ. ಲಿಖಿತ ನಾಟಕಗಳಲ್ಲಾದರೆ ಪಾತ್ರಗಳಿಗೆ ಅಭಿನಯಕ್ಕೆ ರಂಗ+ಸೂಚನೆಗಳಿರುತ್ತವೆ. ಅದರೆ ಇವರ ಆಟಗಳಲ್ಲಿ ಪಾತ್ರಗಳ ಕ್ರಿಯೆ-ಪ್ರತಿಕ್ರಿಯೆಗಳ ನಿರೂಪಣೆಯೇ ವಿಧಾಯಕವಾಗಿ ಆ ಕೆಲಸ ಮಾಡುತ್ತದೆ.

ಆಟದ ನಿರೂಪಣಾ ಭಾಗ ಕೂಡಾ ಪ್ರೇಕ್ಷಕರ ದೃಷ್ಟಿಯಲ್ಲಿ ಒಂದು ನಾಟಕಭಿನಾಯವಾಗಿಯೇ ತೋರುವ ಗುಣದ್ದು. ಕಥೆಗಾರ ತನ್ನ ಕಥೆಯನ್ನು ನಿರೂಪಿಸುತ್ತಲೇ ತನ್ನ ನೋಡುಗರನ್ನು ಘಟನಾ ಸ್ಥಳಗಲಿಗೆ ಕರೆದೊಯ್ದು ಕಣ್ಗಾಣಿಸುವುದು. ಬೆರಗುಗೊಳಿಸುವ ರೀತಿಯದು. ಅವನು ತನ್ನ ಹಿಮ್ಮೇಳಿಗನೊಂದಿಗೆ ಒಕ್ಕೂಟ ಸಾಧಿಸಿಕೊಂಡು ನಿರೂಪಣಾ ವಿಧಾನದೊಟ್ಟಿಗೇ ನಾಟಕೀಯತೆ ಮೈತೆರೆದುಕೊಳ್ಳುವಂತೆ ಮಾಡಿ ಅವಿನಾಭಾವ ಸ್ಥಾಪಿಸುತ್ತಾನೆ. ತನ್ನ ಕತೆಯಲ್ಲಿ ನಡೆದದ್ದನ್ನೋ ನಡೆಯುತ್ತಿರುವುದನ್ನೋ ನಡೆಯಲಿರುವದನ್ನೋ ಹೇಳುತ್ತಲೇ ಸ್ಥಾಪಿತ ಸಮಾಜದ ಎಲ್ಲ ಪಾತ್ರಗಳ ಗುಣಸ್ವಭಾವಗಳ ವೈಶಿಷ್ಟ್ಯವನ್ನು ಸುಲಿದಿಟ್ಟು ನೋಡುಗರಿಗೆ ಪರಿಚಯಿಸಿಕೊಡುತ್ತಾನೆ.

ಕತೆಯನ್ನು ಹಿಡಿತದಲ್ಲಿರಿಸಿಕೊಳ್ಳಲು ನಿರೂಪಣೆ ಅದ್ವೀತಿಯ ಸಹಕಾರಿ. ಗೊಂದಲಿಗರ ವೃತ್ತಿಪರತೆ ತಕ್ಕ ಶಬ್ದಗಳಿಗೆ ಹಚ್ಚುವುದಿಲ್ಲ. ಪ್ರಸಂಗ ವರ್ಣನೆಯಲ್ಲಂತೂ ಅದರ ಭಾಷಾಶೈಲಿ ವರ್ಣರಂಜಿತಗೊಂಡು ಬಾವುಕತೆಯನ್ನು ಉಕ್ಕಿಸುತ್ತದೆ.

ಕಥೆಗಾರ ಹಿಮ್ಮೇಳಿಗ

ಗೊಂದಲಿಗರ ಆಟದಲ್ಲಿ ಕಥೆಗಾರ ಮತ್ತು ಹಿಮ್ಮೇಳಿಗದ ಜೋಡು ಅರ್ಥಪೂರ್ಣವಾದದ್ದು. ಇಬ್ಬರೂ ಸೇರಿಯೇ ತಮ್ಮ ಕಥಾವಸ್ತುವನ್ನು ಬಿಚ್ಚಿಡುವ ರೀತಿಯಲ್ಲಿ ಅವರ ಅದ್ವೀತಿಯ ಸಂಬಂಧ ಕಾಣುತ್ತದೆ. ಇಬ್ಬರೇ ಎಲ್ಲಾ ಪಾತ್ರಗಳ ಗುಣಸ್ವಭಾವಗಳ ಪ್ರತಿ ನಿಧಿಗಳಾಗಿರುವಂತೆ ತಮ್ಮನ್ನು ತಾವು ಉಳಿಸಿಕೊಂಡು ತಮ್ಮ ಆಟವನ್ನೂ ನೆರೆದವರಿಗೆ ತಲ್ಪಿಸುತ್ತಾರೆ. ಅವರು ತಮ್ಮ ಪ್ರಸ್ತುತಿಗೆ ನಾಟಕದ ವಾತಾವರಣ ಕಲ್ಪಿಸಿಕೊಡುವುದು ಇಬ್ಬರೂ ಜಂಟಿಗೊಂಡು ಪಾತ್ರವಾಡುವಿಕೆಯ ಮೂಲಕವೇ.

ಅವರು ತಮ್ಮ ಆಟದಲ್ಲಿ ಹೊತ್ತಿಗೆ ತಕ್ಕಂತೆ ಒಮ್ಮನದ ನಿರೂಪಕರಾಗುತ್ತಾರೆ; ಇಬ್ಬರೂ ಸೇರಿ ಒಂದೇ ಪಾತ್ರವಾಡುತ್ತಾರೆ. ಪ್ರಸಂಗಗಳು ಅಪೇಕ್ಷಿಸಿದೊಡನೇ ತಮ್ಮನ್ನು ತಾವು ವಿಭಿನ್ನ ಮನೋಧರ್ಮದ ಅನ್ಯಪಾತ್ರಗಳಾಗಿ ಭಾವನಾತ್ಮಕವಾಗಿ ರೂಪಾಂತರಗೊಳಿಸಿಕೊಳ್ಳುತ್ತಾರೆ. ಧೀರೋದಾತ್ತ ಹಾಗೂ ಖಳನಾಯಕ ನಾಯಕಿಯರಾಗುತ್ತಾರೆ. ಮಂತ್ರಿಯಾಗುವಂತೆಯೇ ರಾಕ್ಷಸ, ದೇವರು, ಪಶುಪಕ್ಷಿ ಪ್ರಾಣಿಗಳೂ ಆಗುತ್ತಾರೆ. ಇತರ ಪೋಷಕ ಪಾತ್ರಗಳಿಗೆ ಕೂಡಾ ಅವರೇ ಗತಿ. ಈ ಎಲ್ಲಾ ಕಥಾ ಪಾತ್ರಗಳು ತಮ್ಮಂತೆ ಅವರನ್ನೂ ರೂಪಿಸಿಕೊಳ್ಳುತ್ತಾ ತನ್ನತನವನ್ನು ಅವರಲ್ಲಿ ತುಂಬುತ್ತಾ ಆಡಿಸಿಕೊಳ್ಳುತ್ತವೆ. ಈ ಕ್ರಿಯೆಗೆ ಸಂಪೂರ್ಣವಾಗಿ ಕಲಾವಿದರಿಬ್ಬರೂ ತಮ್ಮನ್ನು ತಾವು ಒಪ್ಪಿಸಿಕೊಳ್ಳುವ ರೀತಿ ಅದ್ಭುತ.

ಕತೆಗಾರ-ಹಿಮ್ಮೇಳಿಗರು ತಮ್ಮ ಕಥಾ ಪ್ರಸಂಗವನ್ನು ಒಬ್ಬರಿಗೊಬ್ಬರು ಎತ್ತಿಕೊಡುವ ವಿಧಾನವಂತೂ ತುಂಬಾ ಚೂಟಿಯದು. ಅವರಿಬ್ಬರೂ ಯಾವುದೇ ಪ್ರಸಂಗದಲ್ಲಿ ಒಬ್ಬರನ್ನೊಬ್ಬರು ಸ್ಪರ್ಶಿಸುವುದಿಲ್ಲ. ತಮ್ಮದೇ ಆದ ಅವರ ವಿಶಿಷ್ಟ ಉಡುಗೆ ತೊಡಿಗೆ ಯಾವ ಒಂದು ಪಾತ್ರವನ್ನೂ ಬಿಂಬಿಸುವುದಿಲ್ಲವೆಂಬುದು ಗಮನಾರ್ಹ.

ಗೊಂದಲಿಗರನ್ ಆಟದಲ್ಲಿ ಕಥೆಗಾರನದೇ ಪ್ರಮುಖ ಪಾತ್ರ. ಆತ ಅರ್ಧನಟ, ಇನ್ನರ್ಧ ನಿರೂಪಕ, ಭಾಗವತ, ವಾದಕ, ನರ್ತಕ, ಸ್ವಯಂನಿರ್ದೇಶಕ ಸೂತ್ರಧಾರ. ಪಠ್ಯಾವಲಂಬಿಯಲ್ಲವಾಗಿ ಆತನಿಗೆ ವೈಯಕ್ತಿಕವಾಗಿ ಅದರ ಪ್ರಜ್ಞೆಯ ಜರೂರಿಲ್ಲ.

ಆಟದಲ್ಲಿ ಹಿಮ್ಮೇಳಿಗನದ್ದೇನೂ ಸಣ್ಣ ಪಾತ್ರವಲ್ಲ. ಅದರ ಕಥಾ ನಿರೂಪಣೆ ನಾಟಕೀಕರಣಗಳು ಆತನಿಲ್ಲದೆ ನಡೆಯದು. ಕತೆಗಾರನ ಎಡಭಾಗದಲ್ಲಿ ಚೌಡಿಕೆ ಹಿಡಿದು ಅವನು ಕೊನೆಯವರೆಗೂ ನಿಂತೇ ಇದ್ದು ಆಸರೆಯಾಗುತ್ತಾನೆ. ದೊಡ್ಡಾಟದ ಸಾರಥಿ, ಸಣ್ಣಾಟದ ದೂತೆ ಇದ್ದಂತೆ. ತನ್ನ ಕತೆಗಾರನ ಬರೀ ಹಾಡಿಗೆ ಮಾತ್ರ ಆತ ಹಿಮ್ಮೇಳವಲ್ಲ; ಆತನ ನಿರೂಪಣೆಯನ್ನೂ “ಆಹಾ” “ಹೌದು” “ಹಾಂ” ಮುಂತಾದ ಉದ್ಗಾರಗಳಿಂದ ಪ್ರೇಕ್ಷಕರ ಪರವಾಗಿ ಆಟದ ಪ್ರಕ್ರಿಯೆಗೆ ಗತಿ ನೀಡುತ್ತಾನೆ. ಈ ಕಿರು ಶಬ್ದಗಳ ಸಾಂದರ್ಭಿಕಾರ್ಥ ಹಾಗೂ ವೈವಿದ್ಯಗಳು ಮಾತಿನ ಪ್ರಯೋಗದಲ್ಲಿ ಮಾತ್ರ ಸಿಗುವಂಥವು. ಲಿಪಿಗೆ ಅವು ದಕ್ಕಲಾರವು; ಆಟದಲ್ಲಿ ಆ ಉದ್ಗಾರಗಳು ಅನುಕಂಪ, ದುಃಖ ಹರ್ಷ, ಅವೇಶ, ರೋಷ, ಸಮ್ಮತಿ, ಅನುಮತಿ, ಅಚ್ಚರಿ ಮುಂತಾದವನ್ನೆಲ್ಲಾ ನೋಡುಗರ ಅನುಭವಕ್ಕೆ ತರುತ್ತವೆ.

ಹಿಮ್ಮೇಳಿಗನ ದನಿಯಲ್ಲಿ ಭಾವಾನುಸಾರವಾಗಿ ಹೊಂದಿಕೊಳ್ಳುವ ಅನುವರ್ತನಶೀಲ ಧ್ವನ್ಯಾಭಿನಯದ ಛಾಪನ್ನೂ ನಾವು ಕಾಣಬಹುದು. ಅವನು ಕತೆಗಾರನ ಬಾಯಿಯಿಂದ ಮಾತಿನ ಒಂದು ಭಾಗವನ್ನೋ ವಾಕ್ಯದ ಅಂತಿಮ ಶಬ್ದವನ್ನೋ ಕಸಿದುಕೊಂಡು ಸಂಪೂರ್ಣಗೊಳಿಸುತ್ತಾನೆ. ಸಂದರ್ಭಕ್ಕೆ ತಕ್ಕ ಎದುರಾಳೀ ಪಾತ್ರವಾಗಿ ಸಂಭಾಷಿಸುತ್ತಾನೆ. ತನ್ನ ಕತೆಗಾರ ಅಂದ ಮಾತನ್ನೇ ತಾನೂ ಆಡುವಾಗ ಅದಕ್ಕೆ ತನ್ನ ಧ್ವನಿ ವ್ಯತ್ಯಾಸದಿಂದ ಒತ್ತುಕೊಡುತ್ತಾನೆ. ಹಿಮ್ಮೇಳಿಗನ ಪೋಷಕ ವಾಕ್ಯಗಳಿಂದ, ಹಾಡಿಗೆ ನೀಡುವ ತಾರಕಸ್ವರದಿಂದ ಸೊಲ್ಲು ಮತ್ತು ಚೌಡಿಕೆಗಳ ನಾದತರಂಗಿತತೆಯಿಂದ ಗೊಂದಲಿಗರ ಆಟದ ಸೊಗಸಿಗೆ ಕಾರಣವಾಗುತ್ತಾನೆ.

ಭಾಷಾ ಶೈಲಿ

ಗೊಂದಲಿಗರ ಆಟ ಮುಖ್ಯವಾಗಿ ಭಾಷೆಯ ಬೆನ್ನೇರಿ ನಡೆವ ಕ್ರಿಯೆ. ಅದು ಮೂರ್ತಗೊಳ್ಳುವುದೇ ಭಾಷೆಯ ಮೂಲಕ. ತನ್ನ ನಿರ್ವಹಣೆಗೆ ದೈನಂದಿನ ವ್ಯವಹಾರಿಕ ಶಬ್ದಗಳನ್ನೇ ಅದು ಬಳಸಿಕೊಳ್ಳುತ್ತದೆ. ಇಲ್ಲಿ ಭಾಷಾ ಸಾಮಾಗ್ರಿ ತನ್ನ ಈ ವ್ಯವಹಾರಿಕ ನೆಲೆಯನ್ನು ಕಳಚಿಕೊಂಡು ಅಸಾಮಾನ್ಯ ರೀತಿಯಲ್ಲಿ ಸಂವಹನೆಗೊಂಡು ಆಟದ ಆಕಾರಕ್ಕೆ ದುಡಿಯುತ್ತದೆ; ಭಾಷಾ ಅಶುದ್ಧತೆ ಹಾಗೂ ವ್ಯಾಕರಣ ದೋಷಗಳನ್ನು ಅವರ ಆಟದ ಗತಿ ಸ್ವರೂಪ ಗೌಣಗೊಳಿಸುತ್ತದೆ.

ಗೊಂದಲಿಗರ ಪ್ರೌಢವಲ್ಲದ ಮೌಖಿಕ ನಿವೇದನೆಯಲ್ಲಿ ಸುಲಭ ಗ್ರಾಹ್ಯಾನುಕೂಲವಾದ ಸಂಕ್ಷಿಪ್ತತೆ ಇರುತ್ತದೆ. ನೆನಪಿನಲ್ಲಿ ಉಳಿವಂತೆ ಮಾಡುವಷ್ಟು ಪದಪುಂಜಗಳ ಸಂಘಟನೆಗಳು ಚಿತ್ರಮಯವಾಗಿರುತ್ತವೆ. ಮೆಚ್ಚುಗೆ ಗಳಿಸಲು ನೆರವಾಗಬಲ್ಲ ಸ್ಪಷ್ಟತೆ ಇರುತ್ತದೆ. ಗೊಂದಲಿಗರು ತಮ್ಮ ಪ್ರದೇಶದ ಭಾಷಾ ಪರಂಪರೆಯ ವಿಶಿಷ್ಟ ವಿನ್ಯಾಸದ ಜಾಯಮಾನವನ್ನು ತಮ್ಮ ವೈಯಕ್ತಿಕ ಶೈಲಿಗೆ ಅಳವಡಿಸಿಕೊಳ್ಳುತ್ತಾರೆ. ತಮ್ಮ ಕಥನ ಶೈಲಿಯಿಂದ ಆಟಕ್ಕೆ ಇಂದ್ರಿಯ ಗೋಚರಾನುಭವ ನೀಡುವಂಥ ಮೂರ್ತರೂಪ ಕೊಡುತ್ತಾರೆ. ಅವರ ಪದ ವಾಕ್ಯಗಳ ಪುನರಾವರ್ತನೆಗಳು ಆಟದ ಕ್ರಿಯಾ ತೀವ್ರತೆಯನ್ನು ಟಿ. ವಿ. ಜಾಹೀರಾತಿನ ಧ್ವನಿಯ ರೀತಿಯ ಒತ್ತಿನಿಂದ ತಮ್ಮ ಸಾಂದರ್ಭಿಕ ಅರ್ಥ ವ್ಯತ್ಯಾಸವನ್ನು ಹೊಳೆಯಿಸುತ್ತದೆ. ಪುನರುಚ್ಚಾರ ಲೋಕಾರೂಢಿಯ ಭಾಷೆಯ ವಿಶೇಷ ಲಕ್ಷಣ ವಾತ್ಸ್ಯಾಯವನ ಪ್ರಕಾರ ಚಾತುರ್ಯ ಮತ್ತು ಚಮತ್ಕಾರದ ಮಾತುಗಾರಿಕೆ ಅರುವತ್ತು ನಾಲ್ಕು ವಿದ್ಯೆಗಳಲ್ಲಿ ಒಂದು ಎಂಬ ಮಾತು ನಿಜ.

ಇನ್ನೊಂದು ವಿಷಯ ಗ್ರಾಂಥಿಕ ಭಾಷೆಗಿಂತ ಆಡು ಮಾತುಗಳಲ್ಲಿ ಅನ್ಯ ಭಾಷಾ ಸಂಸರ್ಗದಿಂದ ಎಷ್ಟೆಲ್ಲ ಶಬ್ದಗಳು ಸೇರಿಕೊಂಡಿರುವುದು ಕಣ್ಗಾಣುವ ಸಂಗತಿ. ಗೊಂದಲಿಗ ರಾಟವೂ ಇದಕ್ಕೆ ಹೊರತಾಗಿಲ್ಲ. ಬೋರ್ಡು, ಟೈಮು, ಪ್ಲ್ಯಾನು, ಮೇಷ್ಟ್ರು, ಟಾಂಟಾಂ, ಪೋಟೋ, ಹೈಕ್ಲಾಸ್, ಪಿಯಾನೋದಂಥ ಇಂಗ್ಲೀಷ ಒಂದು ಉದಾಹರಣೆ. ಶೀಲಾವತಿ ಆಟದಲ್ಲಿ ಉರ್ದು ಮಾತುಗಳ ಬಳಕೆಯೂ ಇದೆ.

ವರ್ಣನಾ ವಾಕ್ಯಗಳನ್ನು ಧ್ವನಿಪೂರ್ಣವಾಗಿ ದ್ರುತಗತಿಯಲ್ಲಿ ಕತೆಗಾರ ಹೇಳಿದಾಗ ಅವು ಕೊಡುವ ಅರ್ಥಗೌರವ ಅದ್ಭುತ ಪರಿಣಾಮ ಮಾಡುವಂಥದು. ಗೊಂದಲಿಗರ ಅವರವೇ ಆದ ಶಬ್ದ ರೂಪಗಳ ಬಳಕೆ ಕಥನ ನಿರೂಪಣಾ ವೈಶಿಷ್ಟ್ಯಕ್ಕೆ ಕಾರಣವಾಗುತ್ತದೆಂಬುದಕ್ಕೆ ದಿ. ದೇವೇಂದ್ರಪ್ಪನವರ ಆಟಗಳಿಂದ ಆಯ್ದು ಈ ಕೆಲವು ಉದಾಹರಣೆಗಳನ್ನು ನೋಡನಹುದು-

  • ರಾಜಕುಮಾರ ಮತ್ತು ರಾಜಕುಮಾರಿಯರ ಧೀಮಂತಿಕೆಯನ್ನು ಪರಿಚಯಿಸುವಾಗ ಹೇಳುವ ಮಾತಿದು- “ಓದು, ಬರಹ, ಶಾಸ್ತ್ರ, ಪುರಾಣ, ಸಂಗೀತ, ಶ್ಲೋಕ ನಾನಾ ತರದ ವಿದ್ಯಾ ನಿಪುಣರು….”
  • ಹೊಡಿಯೋ ಕೈ ಬಡಿಯೋ ಕೈ, ಉಣ್ಣೋ ಕೈ, ತಪ್ಪೋ ಕೈ, ಕತ್ತಿ- ಕಠಾರಿ ಕೈ, ಬಿಲ್ಲು-ಬಾಣದ ಕೈ, ಕುಸ್ತಿ, ತಾಲೀಮ್, ಲೇಜಿಮ್, ಪೈಲ್ವಾನ್ ಸಾಧಕ ವಿದ್ಯಾ ಮಾಡ್ಬೇಕಾದ್ರೆ….” ಇದು ವೀರರನ್ನು ವರ್ಣಿಸುವ ರೀತಿ.
  • ಸ್ತ್ರೀ ಸೌಂದರ್ಯವನ್ನು ಕಣ್ತುಂಬುವ ಮಾತುಗಳಿವು- “ದೇವಲೋಕದ ಕನ್ಯೆಯೋ, ತಿಲೋತ್ತಮೆಯೋ, ಊರ್ವಶಿಯೋ, ಮೇನಕೆಯೋ, ರಂಭೆಯೋ, ರತಿಯೋ, ಸರಸ್ವತಿಯೋ….”

“ಪಾದದಲ್ಲಿ ಪದ್ಮರೇಖೆ, ಕೈಯಲ್ಲಿ ಧನರೇಖೆ, ಚಕ್ರ, ಪುಸ್ತಕದಲ್ಲಿ ಮಾಣಿಕ್ಯ ರೇಖೆ…”

“ಮುಖಾ ನೋಡಿದ್ರೆ ಮೂರ್ಛೆ ಗವೀಬೇಕು.”

“ಏನು ರೂಪಾ, ಏನು ಲಾವಣ್ಯ, ಏನ್ ಚೆಲುವಿಕೆ….”

“ಪೋಟೋ ನೋಡಿ ಕಣ್ಣಿಗೆ ಕಿವಿ ಬಡದ್ಹಗಾತು”

“ಮುಖ ನೋಡಿದ್ರೆ ನೀರಡಿಕೆ ಹೋತು; ಸೂರ್ಯ ಚಂದ್ರಮಾನ ಪ್ರಕಾಶ್”

“ಕಣ್ಣು ಕವಳೀ ಹಣ್ಣು, ಮೂಗು ಸಂಪೀಗಿ ತನಿ, ಹಲ್ಲು ದಾಳಿಂಬ್ರ ಹಣ್ಣು, ಹುಬ್ಬು ಕಾಮನ ಬಿಲ್ಲು…”ಇತ್ಯಾದಿ.

  • ರಾಕ್ಷಸ ಹಾಗೂ ಕುರೂಪಿಗಳ ವರ್ಣನೆಗೆ- “ಕಣ್ಣು ಬಂಡಿಗಾಲಿ ಮೂಗು ಗುಂಬೀ ಗೆರಸಿ, ಹಲ್ಲು ಕುಂಟಿ ಕೂರ್ಗಿ ದಿಂಡು,        ಅಗಸಿಯಂಥ ಬಾಯಿ….”
  • ಸತಿ ಪತಿಗಳ ಸಮಾಗಮವನ್ನು ಕಥಿಸುವಾಗ- “ಹಕ್ಕಿ-ಪಕ್ಷಿ ಜೋಡು, ಭೂಮಿ-ಕೈಲಾಸ ಜೋಡು, ಮರ-ಗಿಡ ಜೋಡು, ತಾಯಿ-       ಮಗ ಜೋಡು, ಸತಿ-ಪತಿ ಜೋಡು….”

ಗೊಂದಲಿಗರು ತಮ್ಮ ಆಟಗಳಲ್ಲಿ ಸಮುಚಿತವಾಗಿ ಬಳಸುವ ಗಾದೆಗಳಲ್ಲಿ ಇವೂ ಹಲವು-

“ಕುದ್ರಿ ನೋಡಿ ಬೆಲಿ ಮಾಡು, ಆಳು ನೋಡಿ ಅನ್ನ ನೀಡು, ವರ ನೋಡಿ ಕನ್ಯಾ ಕೊಡು.”

“ಮಾತು ಕೊಟ್ರ ಹೋತು; ಮುತ್ತು ಒಡೆದ್ರ ಹೋತು.”

“ಸೂಳಿದ್ರೂ ಸೂಳಿ ತಾಯಿ ಇರವಾರ್ದು.”

ಒಂದು ನಿಶ್ಚಿತ ಚೌಕಟ್ಟಿನಲ್ಲೇ ವರ್ತಿಸುವ ನಿಶ್ಚಿತ ಪಾತ್ರಗಳ ಇಂಥ ಹೃದ್ಗತ ವ್ಯಕ್ತಿ ಚಿತಣಗಳು ಎಲ್ಲ ಆಟಗಳಲ್ಲೂ ಮಿಂಚುತ್ತವೆ.

ಗೊಂದಲಿಗರ ಪದ್ಯಗಳಿಗಿಂತ ಗದ್ಯವೇ ಹೆಚ್ಚು ಸತ್ವಭರಿತ.

ಅಭಿನಯ

ವಕ್ತವ್ಯದ ಅರ್ಥವನ್ನು ಬಿಂಬಿಸುವುದು ಅಭಿನಯದ ಉದ್ದೇಶ. ಅಭಿನಯದ ಸಹಜ ಕ್ರಿಯೆಯೇ ಮಾತುಗಾರಿಕೆಯನ್ನೂ ಸಶಕ್ತಗೊಳಿಸುತ್ತದೆ. ಒಂದು ಭಾಷೆಯ ಶೇಕಡಾ ಹತ್ತರಷ್ಟು ಶಬ್ದಗಳು ಮಾತ್ರ ನಮ್ಮ ದೈನಂದಿನ ವ್ಯವಹಾರಿಕ ಆಡು ಮಾತುಗಳಿಗೆ ಬಳಕೆಗೊಳ್ಳುತ್ತವೆಂದು ಭಾಷಾ ಶಾಸ್ತ್ರಿಗಳು ಅಂದಾಜು ಮಾಡಿದ್ದಾರೆ. ಈ ಆಡು ಮಾತುಗಳಲ್ಲಿ ೩೦% ಶಬ್ದಗಳಿದ್ದರೆ ೭೦% ಅಭಿನಯವೇ ಇರುತ್ತದೆಯೆಂದು ಅವರು ಕಂದು+ಹಿಡಿದಿದ್ದಾರೆ.

ಗೊಂದಲಿಗರ ಕಥೆಗಾರನ ಪಾತ್ರಾಭಿನಯದಲ್ಲಿ (Role playing) ಸಮರ್ಪಣ ಮನೋಭಾವದ ತಲೀನತೆ ಇರುತ್ತದೆ. ಕತೆಗಾರ ಆಡುವ ಮಾತಿನ ತೀವ್ರ ಭಾವವನ್ನು ಅರ್ಥವಿಸುವ ರೀತಿಯಲ್ಲಿ ಮುಖಭಾವ, ಕೈಭಾವ, ದೇಹದ ಓಲಾಟ, ಪದಗತಿ, ನಸುನೆಗೆತಗಳು, ವರ್ತಿಸುತ್ತವೆ! ಇವುಗಳಿಗೆ ಕುಮ್ಮಕ್ಕು ಕೊಡುವ ಸಮಾಳದ ಮೇಲಿನ ಕೈಛಾಪಿನ ಹಠಾತ್ ಉದ್ಗಾರವಂತೂ ಸನ್ನಿವೇಶಗಳ ಸ್ಫುಟತೆಗೆ ರಂಗರೂಪಕೊಡುತ್ತದೆ.

ಅಂಗಿಕಾಭಿನಯಕ್ಕೆ ಅವಕಾಶವಿಲ್ಲವಾಗಿ ಹಿಮ್ಮೇಳಿಗ ಮಂತ್ರಿಯ ಪಾತ್ರದ ಮಾತಾಡುವಾಗ ತಲೆಬಾಗಿ ನಮಿಸುವ ಮುಖಭಾವ ತೋರುತ್ತಾನೆ; ನಿಂತ ಸ್ಥಳವನ್ನು ಅದಲು ಬದಲುಗೊಳಿಸಿಕೊಳ್ಳುತ್ತಾನೆ. ತನ್ನ ಕಥೆಗಾರನ ಸಾಂಕೇತಿಕ ಚಲನೆಯನ್ನನುಸರಿಸುವ ಮಟ್ಟಿನ ನಟನೆ ಆತನದು. ಆದರೆ ಮಾತುಗಾರಿಕೆಯಲ್ಲಿ ಮುಖವೆತ್ತಿ ಹಾಡಿ ಸೊಲ್ಲಿನ ಕೋಚು ಕೊಡುವಲ್ಲಿ ಅತನದೇ ಆದ ಹೆಚ್ಚುಗಾರಿಕೆ ಇದೆ.

ಕುಣಿತ

ಕತೆಗಾರ ತನ್ನ ವಾದ್ಯಗಳೆರಡನ್ನೂ ನುಡಿಸುತ್ತಾ ಹಾಡುತ್ತಲೇ ಲಘುಲಾಸ್ಯವಾಡುತ್ತಾನೆ. ಕಾಲ್ಗೆಜ್ಜೆಯನಾದ ತಾಳಾನುಸಾರಿಯಾಗಿ ಹಾಡಿಗೆ ಮೆರಗುಕೊಡುತ್ತದೆ. ಆತ ತನ್ನ ನಡುವಿಗೆ ಬಿಗಿದುಕೊಂಡಿರುವ ಸಮಾಳ ಹಾಗೂ ಕೈತಾಳಗಳನ್ನು ನುಡಿಸಬೇಕಿರುವುದರಿಂದ ಹೆಚ್ಚಿನ ಹಾವಭಾವತೋರುತ್ತಾ ದೊಡ್ಡ ಹೆಜ್ಜೆ ಹಾಕಲು ಅವಕಾಶವಿಲ್ಲ. ಅದೇರೀತಿ ತನ್ನ ಬಗಲಲ್ಲಿ ಚೌಡಿಕೆ ಇರಿಸಿಕೊಂಡು ಅಟದುದ್ದಕ್ಕೂ ನಾದಕೊಡಬೇಕಾಗುವುದರಿಂದ ಹಿಮ್ಮೇಳಿಗ ಕುಣಿತದ ಗೋಜಿಗೇ ಹೋಗುವುದಿಲ್ಲ.

ಇನ್ನೊಂದು ವಿಷಯ. ಆಟದಲ್ಲಿ ಹೀಗೆ ಕುಣಿತಾಭಿನಯಕ್ಕಿರುವ ಮಿತಿ, ಗೊಂದಲ ಹಾಕುವಾಗ ಮಾತ್ರ ಕತೆಗಾರನಿಗಿರುವುದಿಲ್ಲ. ಉರಿವ ಕಕ್ಕಡ ರೂಪದ ಬಟ್ಟೆಯ (ಪತ್ತ) ಪೋತ ಹಿಡಿದು ಹೆಚ್ಚು ವಿಶಿಷ್ಟವಾಗಿ ಭಾವಾವೇಶದಿಂದ ನರ್ತಿಸುತ್ತಾನೆ. ಆಗ ಆತನ ನಡುವಿನ ಸಮಾಳ ಹಿಮ್ಮೇಳಿಗರಲ್ಲೊಬ್ಬನಿಗೆ ವರ್ಗಗೊಂಡಿರುತ್ತದೆ.

ಹಾಡುಗಾರಿಕೆ

ನಮ್ಮ ಸಂಸ್ಕೃತಿಯ ವಿಕಾಸದ ಎಲ್ಲ ಹಂತಗಳಲ್ಲೂ ಹಾಡು ಪಾಲ್ಗೊಳ್ಳುತ್ತಾ ಬಂದಿದೆ.

ಮಾತು ಮತ್ತು ಪದಗಳು ಪ್ರತ್ಯೇಕ ಧ್ವನಿಗಳಾದರೂ ರಂಗಕಲೆಗಳಲ್ಲಿ ಅವರೆಡರ ಮಧ್ಯೆಯ ಸಾಹಚರ್ಯದಲ್ಲಿ ಬಿರುಕು ಕಾಣದು. ಅವುಗಳ ಸಂಬಂಧ ಅವಿನಾಭಾವದ್ದು; ಸಾವಯವ ಸ್ವರೂಪದ್ದು. ಭಾವಾವೇಮಾಶತಿಗೆ ನಿಲುಕದಾಗ ಗೊಂದಲಿಗರ ಆಟದ ಕಥೆಗಾರ ತನ್ನ ಆಟದಲ್ಲಿ ಹಾಡನ್ನು ಕಥಾಹೂರಣದ ಒಂದು ಘಟನೆಯಾಗಿಸಿಕೊಳ್ಳುತ್ತಾನೆ. ಅವನ ಸರಳ ನಿರೂಪಣೆ, ಸಂಭಾಷಣಾ ವಿಧಾನಗಳಿಗೆ ಹಾಡುಗಾರಿಕೆ ಪೂರಕವಾಗುವುದರೊಂದಿಗೆ ಸ್ಪಷ್ಟವಾಗಿಯೂ ನಿರ್ದಿಷ್ಟವಾಗಿಯೂ ವರ್ತಿಸುತ್ತದೆ.

ಈ ಮುನ್ನ ಹೇಳಿರುವಂತೆ ಗೊಂದಲಿಗರ ಆಟಗಳಲ್ಲಿ ಒಮ್ಮೊಮ್ಮೆ ನಿರೂಪಣೆ, ಸಂಭಾಷಣೆಗಳ ಅರ್ಧಭಾಗ ಗದ್ಯದಲ್ಲಿದ್ದರೆ ಇನ್ನರ್ಧ ರಾಗರೂಪದಲ್ಲಿರುವುದೂ ಉಂಟು. ಇವರ ಆಟದ ಹಾಡುಗಳು ಕಾವ್ಯಾತ್ಮಕವೇನಲ್ಲ. ಛಂದೋಗತಿಯ ಗಂಧಗಾಳಿ ಸುತಾರಾಂ ಇಲ್ಲದ ಸ್ವಚ್ಛಂದ ಸರಳ ದುರ್ಬಲ ರಚನೆಗಳು. ಅವುಗಳಿಗೆ ವಿಶಿಷ್ಟ ಶಾಸ್ತ್ರೀಯ ರಾಗಗಳಿಲ್ಲ. ಆದರೆ ಅವುಗಳ ಸ್ವರವಿಲಾಸ, ಏರು-ಇವುಗಳ ಪುನಾರಾವೃತ್ತಿಗಳಲ್ಲಿ ಕಿವಿಗೆ ಸೊಗಸು ನೀಡುವ ಕೋವಿದತ್ವವಿದೆ. ಕತೆಗಾರ ಮತ್ತು ಹಿಮ್ಮೇಳಿಗರು ತಮ್ಮ ಹಾಡಿನ ಪದಾ ಘಾತಮಾಡಿ, ಗುರುಲಘುಗಳನ್ನು ಏರುಪೇರುಗೊಳಿಸಿ ಅದರ ಹೊರವಲಯವನ್ನು ಉಳಿಸಿಕೊಂಡು ಅಲಂಕರಿಸುವುದಿದೆ. ಈ ರೀತಿಯ ಅಲಂಕರಣ ಹಾಡಿನ ಅಂತರಿಕ ತಿರುಳನ್ನು ಆಕರ್ಷಕ ಶಕ್ತಿಯಾಗಿಸುತ್ತದೆ. ನವರಸಗಳಲ್ಲಿ ಮುಖ್ಯವಾಗಿ ವೀರ, ರೌದ್ರ, ಕರುಣರಸಗಳನ್ನೂ ದೇಸೀ ಬನಿ ಹಾಗೂ ಸಂದರ್ಭಾನುಸಾರದ ಭಾವಾವೇಷಗಳನ್ನೂ ತಮ್ಮ ಧ್ವನಿ ಶಕ್ತಿಗೆ ತುಂಬಿಸಿಕೊಳ್ಳುತ್ತಾರೆ. ಹಾಡಿನ ಗದ್ಯ ಗುಣದ ಚೌಳುತನವನ್ನು ರಾಗಲಯಗಳ ಬಂಧದಿಂದ ಇಲ್ಲವಾಗಿಸಿ ಶಿವಸೊಲ್ಲಿನ ಹಿಂಬಲದೊಂದಿಗೆ ಮೋಡಿಯ ಬೆಡಗನ್ನು ಹೆಚ್ಚಿಸಿಕೊಳ್ಳುತ್ತಾರೆ.

ಗೊಂದಲಿಗರ ಆಟದ ಪದಗಳ ಧಾಟಿಗಳು ಏಳೆಂಟಿವೆಯಷ್ಟೇ. ಇವುಗಳಲ್ಲಿ ಮೂರು-ನಾಲ್ಕರ ಬಳಕೆ ಹೆಚ್ಚು. ಅವೇ ಎಲ್ಲ ಪ್ರಸಂಗಗಳಲ್ಲಿ ಪುನರಪಿಗೊಳ್ಳುತ್ತವೆ. ಆದರೂ ಅವುಗಳ ಲಯಗತಿ, ತಾಳ, ರಾಗಾಲಾಪಗಳ ನೇರತೆಗೆ ಕತೆಗಾರ ತನ್ನದೇ ಆದ ಪ್ರತಿಭೆ, ಸಾಧನೆಗಳ ಶಕ್ತಿಯನ್ನು ತುಂಬಿ ಹೇಗೆ ಭಾವಮಗ್ನ ಗೊಳಿಸುತ್ತಾನೆಂಬುದನ್ನು ರಾಣಿಯ ಹೆರಿಗೆಯ ವರ್ಣನೆಯ “ತಾಸು ತಾಸಿನ ಬ್ಯಾನಿ ತಾಳುಲೆ ಕಟುಧಂಗ” ಹಾಡು ಕೇಳಿಯೇ ತಿಳಿಯಬೇಕು.

ಗೊಂದಲಿಗರ ಆಟದವೇ ಆದ ಸಿದ್ಧಧಾಟಿಗಳಿರುವುದರಿಂದ ಪ್ರಸಂಗಾವಧಾನದಿಂದ ಹಾಡುಹಾಡುತ್ತಲೇ ಪದದ ಸಾಲುಗಳನ್ನು ಸೃಷ್ಟಿಸಿಕೊಳ್ಳುವುದು ಆಟದ ಇನ್ನೊಂದು ವಿಶೇಷ; ಇಷ್ಟೇ ಅಲ್ಲ, ಹಾಡುಗಳು ಥಟ್ಟನೇ ಕಥೆಗೆ ತಿರುವುಕೊಡಲು, ಅದರ ಭಾಗವನ್ನು ತೇಲಿಸಿ ಅಳತೆಗಳವಡಿಸಲು, ಅನುಕೂಲಾಸ್ತ್ರಗಳಾಗಿ ವರ್ತಿಸುತ್ತವೆ. ಹಾಡಿನ ಸ್ವರಭಾರದ ಉದ್ಗಾರವಂತೂ ಭಾವತನ್ಮಯತೆಯನ್ನು ಆಟದುದ್ದಕ್ಕೂ ಕಾಪಾಡುತ್ತದೆ.

ಪಲ್ಲವಿಸೊಲ್ಲು

ಹಿಮ್ಮೇಳಿಗನ ಪಲ್ಲವಿ ಹಾಡಿನ ಜೀವಾಳ. ಅದರ ಸ್ಫೂರ್ತಿಯನ್ನು ಕಾಯ್ದುಕೊಂಡು ವಸ್ತುವಿಷಯವನ್ನು ಮುನ್ನಡೆಸುವ ಸಹಚರಿ.

ಗೊಂದಲಿಗರ ಆಟದಲ್ಲಿ ಅವಿಭಾಜ್ಯ ಅಂಗವಾದ ಹಾಡುಗಳ ಭಾವ ಪೋಷಣೆಗೆ ಹಿಮ್ಮೇಳಿಗನ ಸೊಲ್ಲು ಪಲವಿಗಳೇ ಆಸರೆಯಾಗುತ್ತವೆ. ಅವು ಹಾಡಿನ ಮಟ್ಟಗಳಿಗೆ ಹೊಂದಿಕೊಳ್ಳುವುದಷ್ಟೇ ಅಲ್ಲ ಕತೆಗಾರನು ತನ್ನ ಪದದ ಮುಂದಿನ ಸಾಲನ್ನು ನೆನಪಿಸಿಕೊಳ್ಳಲು ಅಥವಾ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ ಹಾಗೂ ಇಡೀ ಪದದ ಲಯಧಾಟಿಗಳನ್ನು ಕಾಯ್ದುಕೊಳ್ಳುವ ನಾದ ಘಟಕವಾಗಿ ವರ್ತಿಸುತ್ತವೆ. ಪ್ರತಿ ಚರಣಕ್ಕೂ ಅಂಟಿಕೊಳ್ಳುವ ಅವುಗಳ ಸ್ವರಗತಿಯ ಪುನರಾವರ್ತನೆ ಬಯಲಾಟದ ಕೋಚಿನಂತೆ ಹಾಡ್ಗೆ ಸಮಗ್ರತೆಯನ್ನು ನೀಡುತ್ತದೆ. ಹಿಮ್ಮೇಳಿಗನ ಎತ್ತರದ ಧ್ವನಿಶಕ್ತಿ ಭಾವವನ್ನು ಪ್ರಚೋದಿಸುತ್ತದೆ.

ಗೊಂದಲಿಗರು ಶಕ್ತಿಯ ಉಪಾಸಕರಾದರೂ ಅವರ ಪದಗಳ ಪಲ್ಲವೀರೂಪದ ಸೊಲ್ಲುಗಳು ಮಾತ್ರ ಶಿವವನ್ನೇ ಕುರಿತಿರುವುದೊಂದು ವಿಚಿತ್ರ. “ಹರಿರಾಮ-ಹರಿ” ಸೊಲ್ಲು ಆಟದ ಒಂದೆರಡುಕಡೆ ಬಂದರೂ ಅವು ಇತ್ತೀಚೆಗೆ ಸೇರಿದ ಸೊಲ್ಲೆಂದು ಹೇಳಲಾಗಿದೆ.

ದಕ್ಷಿಣ ಕರ್ನಾಟಕ ಭಾಗದ ನೀಲಗಾರರು ಹಾಗೂ ಕಂಸಾಳೆಯವರಂತ ಬಳ್ಳಾರಿ ಭಾಗದ ಗೊಂದಲಿಗರು ತಮ್ಮ ಆಟದ ಹಾಡುಗಾರಿಕೆಯ ಅಚ್ಚದೇಸೀತನವನ್ನು ಈವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಉತ್ತರ ಕರ್ನಾಟಕದ ಹಾಡುಗಳ ಮೇಲೆ ಅಲ್ಲಿಯ ಪ್ರಚಲಿತ ಸಣ್ಣಾಟ, ಲಾವಣಿ, ಗೀಗೀ ಧಾಟಿಗಳ ಪ್ರಭಾವ ಹೆಚ್ಚು ಕಾಣುತ್ತಿದೆ.