ಕಿನ್ನರಿಗೊಂದಲ ಜೋಗಿಗಳು

ಕಿನ್ನರಿ ಜೋಗಿಗಳು ಮತ್ತು ಗೊಂದಲಿಗರ ಭಾಷಾ ಪ್ರಯೋಗದಲ್ಲಿ, ಕಥೆ ನಡೆಸುವ ವಿಧಾನದಲ್ಲಿ ವ್ಯತ್ಯಾಸವಿದೆ. ಉಭಯತರೂ ಬಳಸುವ ವಾದ್ಯಗಳು ಸಂಪೂರ್ಣ ಬೇರೆ. ಕಿನ್ನರಿ ಜೋಗಿಗಳ ವಾದ್ಯಗಳು ಏಕತಾರಿ, ದಿಮ್ಮಡಿ, ಹಿತ್ತಾಳೆಯ ಕೈತಾಳ, ಕಿನ್ನರಿಗಳಾದರೆ ಗೊಂದಲಿಗರವು ಶೃತಿ ಚೌಡಿಕೆ, ಸಮಾಳ ಮತ್ತು ಗೊಟ್ಟೆ ತಾಳಗಳಾಗಿವೆ. ಉಭಯತರು ಹಾಡುವ ಶೈಲಿ, ಸೊಲ್ಲುಗಳೂ ಬೇರೆ ಬೇರೆ. ಕಿನ್ನರಿ ಜೋಗಿಗಳ ವೇಷದಂತೆ ಗೊಂದಲಿಗರ ವೇಷ ಕಣ್ಸೆಳೆಯುವುದಿಲ್ಲ. “ಕಿನ್ನರಿ”ಯು ಮೆಟ್ಟಿಲುಗಳ ಅಳವಡಿಕೆಯಿಂದ ಇಡೀ ಹಾಡನ್ನೇ ಮಿಡಿದು ಕರ್ಣಾನಂದ ನೀಡುವ ತಂತೀ ವಾದ್ಯ. ಅಂತೆಯೇ ನಮ್ಮ ಜನಪದರು ಗೊಂದಲಿಗರಿಗಿಂತ “ಕಿನ್ನುಡಿ” ನುಡಿಸುವವನ ದನಿಯನ್ನೂ ಅವನ ವೇಷ ವೈಭವವನ್ನೂ ‘ಚಂದವೆಂದು’ ಹಾಡಿಕೊಂಡಿದ್ದಾರೆ.

ಭೈರವ ಜೋಗಿ, ಅರ್ಜುನ ಜೋಗಿಯೆಂದು ಕೂಡಾ ಕರೆಯಲ್ಪಡುತ್ತಿರುವ ಕಿನ್ನರಿ ಜೋಗಿಗಳು ನಾಥ ಸಂಪ್ರದಾಯಕ್ಕೆ ಸೇರಿದವರು. ಕಾಲ್ಪನಿಕ ಕಥೆಗಳಿಗಿಂತ ಮಹಾಭಾರತದ ಕಥಾ ವಸ್ತುಗಳಿಗೇ ಅವರ ಪ್ರಾಮುಖ್ಯತೆ ಹೆಚ್ಚು. ಮಿಕ್ಕಂತೆ ಇವರೂ ಕತೆ ಕಟ್ಟುವುದರಲ್ಲಿ, ಕಥಾನಾಯಕ ನಾಯಕಿಯರ ಧೀರೋದಾತ್ತತೆಯನ್ನು ವೈಭವೀಕರಿಸುವುದರಲ್ಲಿ, ಸನ್ನಿವೇಶಕ್ಕೆ ಮೆರುಗು ಕೊಡುವುದರಲ್ಲಿ, ಕಾವ್ಯ ಗುಣವಿಲ್ಲದ ಹಾಡುಗಾರಿಕೆಯಲ್ಲಿ, ಕತೆ ಯುದ್ಧಕ್ಕೂ ನಾದಮಯತೆಯನ್ನು ಕಾಪಾಡುವುದರಲ್ಲಿ, ಸಮೂಹ ಪ್ರಜ್ಞೆಯಲ್ಲಿ ಒಂದೇ ಆಗಿದ್ದಾರೆ.

ಗೊಂದಲಕರ್ನಾಟಕದಲ್ಲಿ

ಗೌಂಡಲೀ ಅಥವಾ ಗೊಂದಲೀ ನೃತ್ಯ ಕರ್ನಾಟಕದಲ್ಲಿ ಹುಟ್ಟಿತೆಂಬ ಯಾದವರ ಕಾಲದ ಶಾಂಙ್ಞದೇವನ ಅಭಿಮತ ಇಲ್ಲಿ ಉಲ್ಲೇಖನೀಯವಾಗಿದೆ. ಗೊಂದಲ ಶಬ್ದವನ್ನು ಕನ್ನಡದ ಆದಿಕವಿ ಪಂಪ, ರುದ್ರಭಟ್ಟ, ಅಭಿನವ ಪಂಪ, ಶರಣರು ಸಮೂಹಾರ್ಥದಲ್ಲಿ ಬಳಸಿದ್ದಾರೆ. ನಾಗಚಂದ್ರ ಕವಿ ತನ್ನ ಮಲ್ಲಿನಾಥ ಪುರಾಣದಲ್ಲಿ “ಕುಣಿವ ಗೊಂದಣ” ವೆಂಬ ಪದ ಉಪಯೋಗಿಸಿದ್ದಾನೆ.

“ನೃತ್ಯ ರತ್ನಾವಳಿ” ಒಂದು ಪ್ರಾಚಿನ ನೃತ್ಯಶಾಸ್ತ್ರ ಗ್ರಂಥ. ಅದನ್ನು ಕ್ರಿ.ಶ. ೧೨೪೦ರಲ್ಲಿ ಬರೆದಾತ ವಾರಂಗಲ್ ದ ಕಾಕತೀಯ ಗಣಪತಿ ರಾಜನ ಗಜದಳಾಫತಿಯಾದ ಚಾಯಣ; ಕಲ್ಯಾಣಿಯರಾಜ ಮುಮ್ಮಡಿ ಸೋಮೇಶ್ವರನು ತನ್ನ ರಾಜಧಾನಿಯಾದ ಕಲ್ಯಾಣದಲ್ಲಿ ಭೂತಮಾತೃ ಮಹೋತ್ಸವದ ನಿಮಿತ್ತವಾಗಿ “ಗೊಂಡಲೀ” ಎಂಬ ನೃತ್ಯವನ್ನು ಕೆಲವು ಸುಧಾರಣೆ ಮಾಡಿದನೆಂದೂ ಅದಕ್ಕೆ “ಚಿತ್ರಗೊಂಡಲಿ” ಎಂಬ ಹೆಸರು ಕೊಟ್ಟನೆಂದೂ ತನ್ನ ಆ ಗ್ರಂಥದಲ್ಲಿ ಆತ ಕಾಣಿಸಿದ್ದಾನೆ. ಈ ಗೊಂಡಲೀ ನೃತ್ಯವೆನ್ನುವುದು ಇಂದಿನ ಗೊಂದಲದ ಪ್ರಾಚೀನ ರೂಪವಿರಬೇಕೆಂಬ ವಿದ್ವಾಂಸರ ಅಭಿಪ್ರಾಯ ಸಮಂಜಸವಾಗಿದೆ. ಸ್ವಯಂ ಸೋಮೇಶ್ವರನೇ ರಚಿಸಿದ “ಮಾನಸೋಲ್ಲಾಸ” ಅರ್ಥಾತ್ “ಅಭಿಲಾಷಿತಾರ್ಥ ಚಿಂತಾಮಣಿ” ಗ್ರಂಥದಲ್ಲಿ ಭೂತಮಾತೃ ಮಹೋತ್ಸವದ ಉಲ್ಲೇಖವಿದೆ.

ಪಾಲ್ಕುರಿಕೆ ಸೋಮನಾಥ ಕ್ರಿ.ಶ. ೧೨-೧೩ ನೇ ಶತಮಾನದ ಸುಪ್ರಸಿದ್ಧ ತೆಲುಗು ವಿಷ್ಲವ ಕವಿ. ತೆಲುಗಿನಂತೆ ಕನ್ನಡ, ಮರಾಠಿ, ತಮಿಳು, ಭಾಷೆಗಳಲ್ಲೂ ಪಂಡಿತ. ಈತ ತನ್ನ “ಪಂಡಿತಾರಾಧ್ಯ ಚರಿತ್ರ” ಕಾವ್ಯದ ಪರ್ವತ ಪ್ರಕರಣದಲ್ಲಿ ಈ ನಾಲ್ಕು ಭಾಷೆಗಳನ್ನೂ ಬಳಸಿಕೊಂಡಿದ್ದಾನೆ. ಈ ಕವಿಯೇ ಬರೆದ ಇನ್ನೊಂದು ತೆಲುಗು ಕೃತಿ “ಬಸವ ಪುರಾಣ ಮು.” ಇದರಲ್ಲಿ ಬಸವಣ್ಣನ ಮದುವೆ ವೈಭವದ ಪ್ರಸಂಗದ ವರ್ಣನೆ ಇದೆ. ಈ ಮಂಗಳೋತ್ಸವದಲ್ಲಿ ಪೇರಣಿ, ಕೋಲಾಟ, ಕೇಳಿಕಾದಂಥ ಜಾನಪದ ಕಲಾ ಪ್ರಕಾರಗಳ ಕಲಾವಿದರೊಂದಿಗೆ ಗೊಂಡ್ಲಿ ಅರ್ಥಾತ್ ಗೊಂದಲಿಗರೂ ಪಾಲ್ಗೊಂಡಿದ್ದುದನ್ನು ಕವಿ ಕಥಿಸಿದ್ದಾನೆ.

ಬೆಳಗಾವಿ ಭಾಗದಲ್ಲಿ

ಬೆಳಗಾವಿ ಭಾಗದ ಹರಿಜನರಲ್ಲಿ ಗೊಂದಲಿಗರೆಂಬ ಭಕ್ತರಿದ್ದಾರೆ. ಆದರೆ ಅವರು ಗೊಂದಲಕಾರ್ಯ ಮಾಡುವುದಿಲ್ಲ. ಅನುವಂಶಿಕ ಗೊಂದಲಿಗರಿಂದಲೇ ವಿಧ್ಯುಕ್ತವಾಗಿ ಗೊಂದಲ ಹಾಕಿಸುವ ಪದ್ಧತಿ ಅವರದು. ದೇವೀ ಭಕ್ತರಾದ ವಡ್ಡರು, ಬಡಿಗರು, ಕಂಬಾರರು, ಯಲಿಗಾರರು, ತೋಟಿಗರು, ಕ್ಷತ್ರಿಯರು, ಕುರುಬರು, ಲಿಂಗವಂತರು ಬ್ರಾಹ್ಮಣರೊಂದೇ ಅಲ್ಲ, ಜೈನರೂ ಗೊಂದಲಕಾರ್ಯ ಆಚರಿಸುತ್ತಾರಂತೆ! ಇನ್ನೊಂದು ವಿಶೇಷವೆಂದರೆ ಆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಸಲ್ಮಾನರಲ್ಲಿ ಹಲವರು ಕೂಡಾ ದೇವೀ ಹೆಸರಿನಲ್ಲಿ ಈ ಕಾರ್ಯ ಮಾಡಿಸುತ್ತಾರಂತೆ! ಬಹುತೇಕ ಆ ಭಾಗದ ಐಯಿಹಾಸಿಕ, ಪುರಾಣ ಪ್ರಸಿದ್ಧ ಸವದತ್ತಿ ಯಲ್ಲಮ್ಮನ ವ್ಯಾಪಕ ಪ್ರಭಾವ ಇದಕ್ಕೆ ಕಾರಣವಿದ್ದೀತು.

ಗೊಂದಲದಲ್ಲಿ ನೈತಿಕ ಬೋಧನೆಯ ಉಪಕತೆಗಳನ್ನೂ ಕಬೀರ, ಶಿಶುನಾಳ, ಗೋಪಾಳದುರದುಂಡಿ ಮುಂತಾದವರ ತತ್ವಪದಗಳೊಂದಿಗೆ ಕನಕದಾಸ ಮತ್ತು ಪುರಂದರದಾಸರ ಕೀರ್ತನೆಗಳನ್ನೂ ಬಳಸುವ ಪದ್ಧತಿ ಇದೆ.

ಕರಾವಳಿ ಭಾಗದಲ್ಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋಗಿಗಳಂತೆ ಗೊಂದಲಿಗರೂ ಇದ್ದಾರೆ. ಮರಾಠೀ ನಾಯಕರೆಂದು ಕರೆಯಲ್ಪಡುವ ಇವರ ಸಂಖ್ಯೆ ಉಡುಪಿ, ಸೂಳ್ಯ, ಬಂಟ್ವಾಳ ಭಾಗಗಳಲ್ಲಿ ಹೆಚ್ಚಿದಯೆನ್ನಲಾಗಿದೆ. ತಮ್ಮ ವಂಶಜರು ಘಟ್ಟದ ಕಡೆಯಿಂದ ಬಂದವರೆಂದು ಇವರ ಅಂಬೋಣ. ‘ಗೊಂದಲ’ ಆಚರಣಾ ಪರಂಪರೆ ಇವರಲ್ಲೂ ರೂಢಿ ಇದೆ. ತಮ್ಮ ಗೊಂದಲವನ್ನು ‘ಗೊಂದೋಳು’ “ಗೊಂದೋಳು ಪೂಜೆ” ಎಂದು ಕರೆಯುತ್ತಾರೆ. ಇವರ ಕುಲದೈವ ಕೂಡಾ “ಅಮ್ಮಾ ಅವ್ರು” – ಶಕ್ತಿ ದೇವತೆ.

ಈ ಕರಾವಳಿ ಕರ್ನಾಟಕದ ಗೊಂದಲಾಚರಣೆಯ ವಿಧಾನ ವಿಭಿನ್ನವೂ ವಿಶಿಷ್ಟವೂ ಆಗಿದೆ. ನಿಗದಿತ ದಿನದಂದು ರಾತ್ರಿವೇಳೆ ಮರಾಠೀ ನಾಯಕರು ಅರ್ಥಾತ್ ಗೊಂದಲಿಗರು ಒಂದೆಡೆ ಸೇರುತ್ತಾರೆ. ತಮ್ಮ ಮಹಾಮಾತೆಯನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸುತ್ತಾರೆ. ಆ ದೇವತೆಯ ಸಹಾಯಕನಾಗಿ ಭೈರವನನ್ನು ಸ್ತಾಪಿಸಿಕೊಳ್ಳುವುದೂ ಇದೆ. (ಆ ಭಾಗದ ಭೈರವ ಪಮ್ಥದ ಪ್ರಾಬಲ್ಯದ ಪ್ರಭಾವ ಇದಕ್ಕೆ ಕಾರಣವಿರಬೇಕು.) ಹದಿನೈದು ಇಪ್ಪತ್ತರಷ್ಟು ಜನಪುರುಷರು ದೊಂದಿಗಳನ್ನು ಹಿಡಿದು ಆವೇಶದಿಂದ ನರ್ತಿಸುತ್ತಾರೆ. ಅವರೊಂದಿಗೆ ಇನ್ನೂ ಹಲವರು ಕರಾವಳಿ ಪ್ರದೇಶದ ವಿಶಿಷ್ಟವಾದ ದುಡಿ ಬಾರಿಸುತ್ತಾ ಹೆಜ್ಜೆಗೂಡುತ್ತಾ ರಿಂಗಣಹಾಕುತ್ತಾರೆ. ಒಟ್ಟಾಗಿ ಎರಡು ಹಂದಿಗಳನ್ನೂ ಮನೆಗೊಂದರಂತೆ ಕೋಳಿಗಳನ್ನೂ ಭಕ್ತಿಯಿಂದ ಬಲಿಕೊಡುತ್ತಾರೆ: ಸ್ತ್ರೀ ವರ್ಗ ಒಂದು ಭಾಗದಲ್ಲಿ ಭಕ್ತಿ ಭಾವದಿಂದ ಗುಂಪಾಗಿ ತಮ್ಮ ಮಕ್ಕಳು ಮರಿಗಳೊಂದಿಗೆ ಕುಳಿತಿರುತ್ತಾರೆ.

ಹೀಗೆ ದುಂಡಾಗಿ ನರ್ತಿಸುವವರ ಹಾಡುಗಳು ಮತ್ತು ನಿರೂಪಿಸುವ ಕಥಾನಕಗಳು ಮರಾಠಿಯಲ್ಲೇ ಇರುತ್ತವೆಯಾದರೂ ತಮ್ಮ ಪ್ರದೇಶದ ಕನ್ನಡ ಮತ್ತು ತುಳು ಸಂಸ್ಕೃತಿಗಳೊಂದಿಗೆ ಬೆರೆತಿರುವುದರಿಂದ ಅವರ ನೃತ್ಯ ಗೀತಗಳು ಕನ್ನಡ ಮತ್ತು ತುಳು ಭಾಷೆಗಳಲ್ಲೂ ಇರುವುದಿದೆ. ಇನ್ನೊಂದು ವಿಶೇಷವೆಂದರೆ ಆ ಭಾಗದ ಗೊಂದಲದಲ್ಲಿ ನಾಗಾರಾಧನೆಯಲ್ಲಿಯಂತೆ ಬರಿಮೈಯ ಒಬ್ಬ ಪಾತ್ರಿಯೂ ಇರುತ್ತಾನೆ. ಗೊಂದಲದ ಸಮಯದಲ್ಲಿ ಆತನಿಗೆ ಆವೇಶ ಬರುವುದೂ ಉಂಟು. ಆತನಿಂದಲೇ ಮರಾಠೀ-ಜನಾಂಗದವರು. ತಮ್ಮ ಕೋಳಿಗಳ ಕತ್ತನ್ನು ಕೊಯ್ಯುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣಿಗರು, ಶೆಟ್ಟರಲ್ಲಿಯ ಅಮ್ಮಾ, ಅವರ ಭಕ್ತರು ತಮ್ಮ ಭಾಗದ ಗೊಂದಲಿಗರನ್ನು ನವರಾತ್ರಿ, ಮದುವೆ, ಹರಕೆಗಳಂಥ ವಿಶೇಷ ಸಂದರ್ಭಗಳಲ್ಲಿ ಬರಮಾಡಿಕೊಂಡು ಗೊಂದಲ ಪೂಜೆ ಏರ್ಪಡಿಸುತ್ತಾರೆ. ಈ ಪೂಜೆ ನಡೆಯುವುದು ಭಕ್ತರ ಮನೆಯಂಗಳದಲ್ಲಿಯೇ ಹೊರತು ಇತರ ಕಡೆಗಳಲ್ಲಿಯಂತೆ ಮನೆಯ ಒಳಗಡೆಯಲ್ಲಿ ಅಲ್ಲ. ಗೊಂದಲದ ಸಂದರ್ಭದಲ್ಲಿ ಚೌಡಿಕೆಯನ್ನು ಬಳಸುತ್ತಾರಂತೆ. ಸುಮಾರು ೪೦-೫೦ ವರ್ಷಗಳ ಹಿಂದೆ “ಅಮ್ಮಾ” ಅವರ ಭಕ್ತರಾದ ಬ್ರಾಹ್ಮಣರೂ ಆ ಭಾಗದಲ್ಲಿ ಗೊಂದಲ ಪೂಜೆ ನೆರವೇರಿಸಿಕೊಳ್ಳುತ್ತಿದ್ದರೆಂದೂ ಈಗ ಕಡಿಮೆಯೆಂದೂ ವಿಚಾರಿಸಿದಾಗ ಗೊತ್ತಾಯಿತು.

ಕಾಸರಗೋಡು ಭಾಗದ ಎಡನೀರು, ಕೊರೆಕ್ಕೊಂಡು, ಮುಳಿಯಾರು, ಬೇಕಲ, ಆಡೂರು ಮುಂತಾದ ಕಡೆಗಳಲ್ಲಿ ಕೂಡಾ ದೇವೀ ಆರಾಧಕರಾದ ಮರಾಠಿಗರಿದ್ದು ಅವರು ಆಡುವ ವ್ಯವಹಾರಿಕ ಕನ್ನಡ ಭಾಷೆಯಲ್ಲಿ ಮರಾಠೀ ಶಬ್ದಗಳು ವಿಪುಲವಾಗಿವೆಯೆಂದು ತಿಳಿದು ಬಂದಿದೆ.

ಹೈದರಾಬಾದ್ ಕರ್ನಾಟಕದಲ್ಲಿ

ಹೈದರಾಬಾದ್ ಕರ್ನಾಟಕದ ನಾಲ್ಕೂ ಜಿಲ್ಲೆಗಳಲ್ಲಿ ಗೊಂದಲಿಗರಿದ್ದಾರೆ. ಇವರನ್ನು ಆ ಭಾಗದಲ್ಲಿ ಭೂತೇರನ್ನುವುದೂ ಉಂಟು. ತುಳಜಾಪುರದ ಭವಾನಿ, ಸವದತ್ತಿ ಯಲ್ಲಮ್ಮನ ಆರಾಧಕರಾದ ಕಬ್ಬಲಿಗ ಹರಿಜನ ಪಂಗಡಗಳಲ್ಲಿ ಕೂದಾ ಭೂತೇರೆನ್ನಿಸಿ ಕೊಂಡವರಿದ್ದಾರೆ. ತಮ್ಮ ಗೊಂದಲದಂಥ ಕಾರ್ಯಕ್ಕೆ ದೇವೀಭಕ್ತರು ಅನುವಂಶಿಕ ವೃತ್ತಿಯ ಗೊಂದಲಿಗರನ್ನೇ ಬಳಸಿಕೊಳ್ಳುತ್ತಾರೆಯೇ ಹೊರತು ಇವರನ್ನಲ್ಲ. ಗೊಂದಲಿಗರು ಉಪಯೋಗಿಸುವ ವಾದ್ಯಗಳು ಶೃತಿಚೌಡಿಕೆ ಹಾಗೂ ಸಂಬಾಳಗಳೇ. ನಿರೂಪಣೆ, ಹಾಡುಗಳು ಕಥಾವಸ್ತುಗಳು ಜಮದಗ್ನಿ ರೇಣುಕೆಯರನ್ನು ಕುರಿತವುಗಳೇ.

ಈಗ ಗೊಂದಲಿಗರು ಕರ್ನಾಟಕದ ಬೆಳಗಾವಿ, ಬಿಜಾಪುರ, ಧಾರವಾಡ, ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಮೈಸೂರು, ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತರ ಕಡೆಗಿಂತ ಹೆಚ್ಚು ಸಂಖ್ಯೆಯಲ್ಲಿ ವಾಸವಾಗಿದ್ದಾರೆ.

ಗೊಂದಲ ಆಂಧ್ರಪ್ರದೇಶದಲ್ಲಿ

ಆಂಧ್ರಪ್ರದೇಶದ ಅನಂತಪುರ, ಹೈದರಾಬಾದ್, ನಿಜಾಮಾಬಾದ್, ಅದಿಲಾಬಾದ್, ಮೆಹಬೂಬ್ ನಗರ ಮುಂತಾದ ಭಾಗಗಳಲ್ಲಿ ಗೊಂದಲಿಗರಿದ್ದಾರೆ. ಇವರನ್ನು “ಗೊಂದಲಿಗವಾಳ್ಳು” ಎಂದು ಕರೆಯುತ್ತಾರೆ. ವಾರಂಗಲ್ ಜಿಲ್ಲೆಯಲ್ಲಿಯೂಚದುರಿದಂತೆ ತೋರುವ ಇವರ ಹೆಸರು “ಗೊಂದಲವಾರು”. ಮಾತಾಡುವ ಭಾಷೆ, ಮರಾಠಿಯ ಪೂರ್ವಾವಸ್ಥೆಯ ಅಪಭ್ರಂಶ ಸ್ವಭಾವದ ಅರೆಭಾಷೆ. ತಮ್ಮ ಈ ತಾಯ್ನುಡಿಯಲ್ಲೂ, ತಮ್ಮ ಪರಿಸರದ ತೆಲುಗಿನಲ್ಲೂ ಅವರು ಕಥೆ ಹೇಳುತ್ತಾರೆ. ಅವರ ಕಥಾವಸ್ತುಗಳು-ಶಿವಾಜಿ, ಸೋಮಾಜಿ, ಮುಗ್ಗುರು ಮರಾಠಿಲ ಕಥಲು, ಎಲ್ಲಮ್ಮ ಕಥಲು ಮೊದಲಾದವು. ಇವರಲ್ಲೂ ಗೊಂದಲಾಚರಣೆ ಪ್ರಚಲಿತವಿದೆಯೆಂದು ಹೇಳಲಾಗುತ್ತಿದೆ.

ಕರ್ನಾಟಕ ಮಹಾರಾಷ್ಟ್ರ ಸಂಬಂಧ

ಡಾ. ಶಂ. ಬಾ. ಜೋಶಿ ಅವರು ಹೇಳಿರುವಂತೆ ಕರ್ನಾಟಕ-ಮಹಾರಾಷ್ಟ್ರಗಳ ಸಂಬಂಧ ಕ್ರಿಸ್ತ ಪೂರ್ವದ್ದು. ಅಷ್ಟೇ ಏಕೆ ಕ್ರಿ.ಶ. ಹದಿಮೂರನೆಯ ಶತಮಾನದವರೆಗೆ ಮಹಾರಾಷ್ಟ್ರವು ಕರ್ನಾಟಕದ ಲಾಲನೆಯಲ್ಲೇ ಬೆಳೆದಿದೆ. ಮಹಾರಾಷ್ಟ್ರದ ಮೇಲೆ ಕದಂಬರು, ಚಾಳುಕ್ಯರು, ರಾಷ್ಟ್ರಕೂಟರು ಶಿಲಾಹಾರರು ಮುಂತಾದ ಕರ್ನಾಟಕದ ದೊರೆಗಳು ಆಧಿಪತ್ಯಮಾಡಿದ್ದಾರೆ. ಈ ಉಭಯರಾಜ್ಯಗಳನ್ನು ನಂತರ ಆಳಿದವರು ದೇವಗಿರಿಯ ಯಾದವರು. “ತರಾತಂತ್ರ” ಗ್ರಂಥದಲ್ಲಿ ಮಹಾರಾಷ್ಟ್ರದ ಹೆಸರು ಕರ್ನಾಟಕವೆಂದೂ ಅವರೆಡೂ ಒಂದೇ ದೇಶವೆಂದೂ ಹೇಳಲಾಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿ ಈವರೆಗೆ ಕೇವಲ ಕನ್ನಡ ಶಿಲಾಶಾಸನಗಳು ದೊರೆತಿವೆಯೇ ಹೊರತು ಒಂದೂ ಮರಾಠೀ ಶಾಸನ ಲಭ್ಯವಿಲ್ಲದಿರುವುದು ಈ ಹೇಳಿಕೆಗೆ ಪುಷ್ಟಿಕೊಡುತ್ತದೆ.

ಸಾಂಸ್ಕೃತಿಕ ದೃಷ್ಟಿಯಿಂದ ಒಂದೇ ಪ್ರದೇಶವಾಗಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಎರಡು ಪ್ರತ್ಯೇಕ ರಾಜ್ಯಗಳಾಗಿ ವಿಂಗಡಣೆಗೊಂಡದ್ದು ಮರಾಠೀ ಭಾಷೆ ತನ್ನ ಪ್ರತ್ಯೇಕ ಅಸ್ತಿತ್ವ ಕಂಡು ಕೊಂಡನಂತರವೇ. ದಾಕ್ಷಿಣ್ಯಾತ್ಯದಲ್ಲಿ ಕರ್ನಾಟಕವು ಅನ್ಯ ದ್ರಾವಿಡ ಭಾಷಾಪ್ರದೇಶಗಳಿಗಿಂತ ಮಹಾರಾಷ್ಟ್ರದೊಂದಿಗೆ ಹೊಂದಿರುವ ಸಂಬಂಧ ವಿಶಿಷ್ಟವೂ ಘನಿಷ್ಠವೂ ಆಗಿದೆ.-ಎನ್ನಬೇಕು. ಇವುಗಳ ಮಧ್ಯೆಯ ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳು ಕೊಡುಕೊಳ್ಳುವಿಕೆಯ ವಿನಿಮಯಗಳು ಇಂದಿಗೂ ಅನೂಚಾನವಾಗಿ ನಡೆದಿವೆ. ಇವರೆಡೂ ನೆರೆಯ ಪ್ರಾಂತಗಳಾದ್ದರಿಂದ ಒಡನಾಟದಲ್ಲಿ ಚಿಂತನಕ್ರಮದಲ್ಲಿ ಸಹತ್ವಕಾಣುತ್ತವೆ. ದೇವರು-ದಿಂಡರು ಧರ್ಮಪಂಥಗಳು, ಆಚರಣೆಗಳು ಮುಂತಾದ ಸಂಬಂಧಗಳಿಂದ ಕನ್ನಡ ಮನೆತನಗಳು ಮೊದಲು ಪ್ರಾಕೃತ ಅನಂತರ ಮರಾಠಿಯಾಗಿರುವುದು ಐತಿಹಾಸಿಕ ಸತ್ಯ.

ಭಾಷಾ ಬಾಂಧವ್ಯ

ಪ್ರಾಕೃತ ಮೂಲವಾದ ಮರಾಠೀ ಭಾಷೆ ಸುಮಾರು ಕ್ರಿ.ಶ. ಮೂರನೇ ಶತಮಾನದಿಂದ ರೂಪಗೊಂಡು ಬೆಳೆಯತೊಡಗಿತೆಂದೂ ಅದು ಸಾಹಿತ್ಯಕ ರೂಪ ಪಡೆದದ್ದು ಹನ್ನೊಂದನೆಯ ಶತಮಾನದ ಆದಿಯಿಂದ ಎಂದೂ ಸಂಶೋಧಕರ ಅಂಬೋಣ. ಮರಾಠೀ ಭಾಷಾ ಸಾಹಿತ್ಯವು ವ್ಯಾಪಕತೆ ಪಡೆದು ಭದ್ರಗೊಂಡದ್ದು ನಾಥ ಮಹಾನುಭಾವ ವಾರಕರೀ ಪಂಥಗಳ ಧಾರ್ಮಿಕ ಜಾಗ್ರತಿಯ ಕಾಲದಿಂದ ಎಂಬ ಮಾತು ಐತಿಹಾಸಿಕ ಸತ್ಯ. ಈ ಕಾಲದಿಂದಲೇ ಮರಾಠೀ-ಕನ್ನಡ ಸಾಹಿತ್ಯ ಬಾಂಧವ್ಯ ಶ್ರೀಕಾರಗೊಂಡಿದೆಯೆನ್ನಬೇಕು.

ಕನ್ನಡ ಮತ್ತು ಮರಾಠಿಗಳೆರಡೂ ಬೇರೆ ಬೇರೆ ಕುಟುಂಬಗಳಿಗೆ ಸೇರಿದ ಭಾಷೆಗಳು. ಕನ್ನಡ ದ್ರಾವಿಡ ವರ್ಗದ್ದಾದರೆ ಮರಾಠೀ ಆರ್ಯಭಾಷಾ ವರ್ಗದ್ದು. ಡಾ. ಶಂ. ಬಾ. ಜೋಶಿ ಅವರು ಮರಾಠಿ ಬೆಳೆದದ್ದು ಕನ್ನಡ ತಾಯಿ ಮೊಲೆಹಾಲು ಕುಡಿದು ಎಂದಿದ್ದಾರೆ. ಕ್ರಿ.ಶ. ಒಂಬತ್ತನೆಯ ಶತಮಾನದವರೆಗೆ ಮಹಾರಾಷ್ಟ್ರದ ಬಹುತೇಕ ಭಾಗದಲ್ಲಿ ಕನ್ನಡವೇ ಪ್ರಚಾರದಲ್ಲಿತ್ತೆಂಬುದನ್ನು ಮರೆಯುವಂತಿಲ್ಲ.

ಮರಾಠಿಯ ಮೇಲೆ ಮೊದಲಿಂದಲೂ ಕನ್ನಡದ ಪ್ರಭಾವವಾಗಿದೆ. ಜ್ಞಾನಸಿಂಧು ಪ್ರಭುಲಿಂಗಲೀಲೆ, ಕುಮಾರವ್ಯಾಸ ಭಾರತದಂಥ ಕಾವ್ಯಗಳು ಕನ್ನಡದಿಂದ ಮರಾಠಿಗೆ ಬಹುಹಿಂದೆಯೇ ಅನುವಾದಗೊಂಡಿವೆ. ಕರ್ನಾಟಕದ ದಾಸರನ್ನೂ ಮಹಾರಾಷ್ಟ್ರದ ಸಂತರನ್ನೂ ಸಂಧಿಸುವಂತೆ ಮಾಡಿದ ದೇವರೆಂದರೆ ಪಂಢರಪುರದ ವಿಠ್ಠಲ. ಈ ಎರಡೂ ಪಂಥಗಳ ಧಾರ್ಮಿಕ ಚಿಂತನೆಯಲ್ಲಿ ಅಂತರಿಕ ಸಂಬಂಧವಿದೆ. “ಕಾನಡಾಹೋ (ವಿಠ್ಠಲೂ ಕರ್ನಾಟಕು” ಎಂದು ಸಂತಜ್ಞಾನೇಶ್ವರ ಉದ್ಗರಿಸಿರುವದನ್ನೂ “ನಮೋ ಕಾನಡೀ ಭಾಷಾ” ಎಂದು ಪುರಂದರದಾಸರ ಸಮಕಾಲೀನರಾದ ಸಂತ ಏಕನಾಥರು ನಮಿಸಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಮರಾಠೀ ಸಂತ ಸಾಹಿತ್ಯದ ಮೇಲೆ ಕನ್ನಡ ಅನುಭಾವ ಸಾಹಿತ್ಯ ಪ್ರಭಾವ ಬೀರಿರುವುದನ್ನೂ ನಾವು ಗುರುತಿಸಬಹುದು. ವೀರಶೈವ ಶರಣ-ಸಂತರು ಎರಡೂ ಕಡೆಗಿದ್ದು ಉಭಯ ಭಾಷೆಗಳಲ್ಲೂ ಸಾಹಿತ್ಯ ರಚನೆ ಮಾಡಿರುವುದನ್ನೂ ಕಾಣಬಹುದು. ಹೀಗೆ, ವಿಠಲನೊಂದೇ ಅಲ್ಲ, ಮೈಲಾರಲಿಂಗ ಮತ್ತು ಸವದತ್ತಿಯಲ್ಲವ್ವ ಮುಂತಾದ ದೇವತೆಗಳೂ ಈ ಉಭಯರಾಜ್ಯಗಳ ಜನರಿಗೆ ಕುಲದೈವತೆಗಳ ಸ್ಥಾವರದಲ್ಲಿದ್ದು ಆರಾಧ್ಯರಾಗಿ ಉಳಿದು ಬಂದಿದ್ದಾರೆಂಬುದು ಸರ್ವವಿದಿತ.

ಗೊಂದಲಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಈಗಲೂ ಗೊಂದಲವು ಜಾನಪದ ಆಚರಣೆಗಳಲ್ಲೇ ಶ್ರೇಷ್ಠವನ್ನುವಷ್ಟು ಪ್ರಧಾನ. ಗೊಂದಲದ ವಿಧಿವಿಧಾನಗಳಲ್ಲಿ ಮುಖವರ್ಣಿಕೆ, ನೃತ್ಯ, ಹಾಡು, ಸಂಭಾಷಣೆ, ಅಭಿನಯ, ವಿನೋದಗಳು ಸಂಯೋಜಿತಗೊಂಡು ಬೋಧಪ್ರದವಾಗಿರುವಂತೆ ರಸಾತ್ಮಕವಾಗಿಯೂ ಇರುತ್ತದೆ. ಗೊಂದಲಿಗರ ದೇವೀಸ್ತವನ, ವರ್ಣನ, ಆಕೆಯನ್ನೇ ಕುರಿತ ಕಥಾನಕಗಳು ಹಾಗೂ ಅನ್ಯ ಭಕ್ತಿಯುತ ಕಥಾನಕಗಳು ಮರಾಠೀ ಜನಪ್ದ ಸಾಹಿತ್ಯದ ಒಂದು ಪ್ರಮುಖ ಭಾಗವೇ ಎನ್ನಿಸಿವೆ.

ಸುಪ್ರಸಿದ್ಧ ಮರಾಠೀ ಜಾನಪದ ಇತಿಹಾಸಜ್ಞ ಡಾ. ರಾಮಚಮ್ದ್ರ ದೇಖಣಿ ಹೇಳಿರುವಂತೆ ಗೊಂದಲ ಮಹಾರಾಷ್ಟ್ರದ ಧರ್ಮವಾಗಿದೆ. ಗೊಂದಲಿಗರು ಈ ಧರ್ಮದ ಪುರೋಹಿತರೆಂದು ಪರಿಗಣಿಸಲ್ಪಡುತ್ತಾರೆ. ಅಂಬಾಭವಾನಿಯು ಸ್ಫೂರ್ತಿ ದೇವತೆಯೆಂದೂ, ಕುಲಸ್ವಾಮಿನಿಯೆಂದೂ ಅವರ ನಂಬುಗೆ. ಆಕೆಯ ಉಪಾಸಕರಾದ ಗೊಂದಲಿಗರು ಮರಾಠೀ ಸಂಸ್ಕೃತಿಯ ಮಹಾನ್ ವಾರಸುದಾರರೆಂದು ಗೌರವಿಸಲ್ಪಡುತ್ತಾರೆ.

ಮಹಾರಾಷ್ಟ್ರದ ವಾಘ್ಯಾ ಮುರುಳಿಗಳ ‘ಜಾಗರಣ’ದಂತೆ ಗೊಂದಲವೂ ಪುರಾತನ ಕಾಲದ್ದು. ಕ್ರಿ.ಶ. ಆರು-ಏಳನೇ ಶತಮಾನದ ಕದಂಬರ ಕಾಲದಲ್ಲೇ ಈ ಆಚರಣೆ ಇದ್ದಿತ್ತು. ಆ ವಂಶದ ಅರಸರು ತುಳಜಾಪುರ ಭವಾನಿಯ ಭಕ್ತರಾಗಿದ್ದರು. ಆಕೆಯ ಉತ್ಸವದಲ್ಲಿ ಗೊಂದಲ ಹಾಕಿಸುತ್ತಿದ್ದರು. ಅವರ ಕಾಲದ ರಾಜ್ಯವೀಗ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಹಂಚಿಹೋಗಿದೆ.

ಯಾದವ ಕಾಲದ ವಾಙ್ಮಯದಲ್ಲಿ ಗೊಂದಲದ ಉಲ್ಲೇಖವಿದ್ದು ಅದು ಭೂತಮಾತೆಯ ಹೆಸರಿನಲ್ಲಿ ನಡೆಯುತ್ತಿತ್ತು. ಈ ದೇವತೆಯೇ ತುಳಜಾಭವಾನಿ ಹಾಗೂ ರೇಣುಕೆಯರಲ್ಲಿ ಸಮಾವಿಷ್ಠಳಾಗಿದ್ದಾಳೆಂನ ನಂಬುಗೆ ಇಂದಿಗೂ ಇದೆ.

ಜ್ಞಾನೇಶ್ವರ, ನಾಮದೇವ, ದತ್ತೋಪಂತ ಮುಂತಾದ ಸಂತರು ರಚಿಸಿದ ಪದ್ಯಗಳಲ್ಲಿ, ಅಭಂಗಗಳಲ್ಲಿ ಹಲವಾರು ಗೊಂದಲದ ಆ ಆಚರಣೆಗೆ ಸಂಬಂಧಿಸಿದವೂ ಇವೆ.

  • ಸಂತ ಏಕನಾಥರು ನಮ್ಮ ‘ಭಾರೂಡ’ ಆಚರಣೆಯಲ್ಲಿ ಗೊಂದಲಕ್ಕೆ ಸ್ಥಾನ ನೀಡಿ ಆಧ್ಯಾತ್ಮಿಕ ಪಟ್ಟಕ್ಕೇರಿಸಿದ್ದಾರೆ.
  • ನಾಥ ಮಹಾರಾಜರು ವಿಠಾಯಿ ರೂಪದಲ್ಲಿ ಜಗದಂಬೆಯ ಗೊಂದಲ ಹಾಕಿಸುತ್ತಿದ್ದರು.
  • ಸಮರ್ಥ ರಾಮದಾಸರು, ಸಂತ ತುಕರಾಮರು ಗೊಂದಲವನ್ನು ಗೌರವಿಸಿದ್ದಾರೆ.
  • ತುಳಜಾಭವಾನಿಯ ಪರಮ ಆರಾಧಕನಾದ ಛತ್ರಪತಿ ಶಿವಾಜಿ ಮಹಾರಾಜನ ರಾಜ್ಯ ಸ್ಥಾಪನಾ ಕಾರ್ಯದಲ್ಲಿ ಗೊಂದಲಿಗರು ತುಂಬಾ ನೆರವಾದರು. ಎನ್ನಲಾಗಿದೆ. ಅವರಿಂದ ಗೊಂದಲ ಹಾಕಿಸಿಯೇ ತಾನಾಜಿ ಸಿಂಹಗಡವನ್ನು    ಪಡೆಯ ಹೋದನೆಂದು ಪ್ರತೀತಿ ಇದೆ.
  • ಮರಾಠಾ ಅರಸರಲ್ಲಿ ಪೇಶ್ವೆಗಳು ಗೊಂದಲಿಗರಿಗೆ ಆಶ್ರಯ ನೀಡಿದ್ದರಿಂದ ಅವರ ಜನಪ್ರಿಯತೆ ಮುಗಿಲು ಮುಟ್ಟಿತು. ಆ ನಂತರವೂ ‘ಪೊವಾಡೆ’ ಎಂಬ ಲಾವಣಿ ತರಹದ ವೀರಗಾಥೆಗಳನ್ನು ಹಾಡಿ ಅವರು ರಾಷ್ಟ್ರಾಭಿಮಾನವನ್ನು            ಜಾಗ್ರತಗೊಳಿಸುವುದರಲ್ಲಿ ಸಿದ್ಧಹಸ್ತರೆನ್ನಿಸಿದ್ದೂ ಇದೆ.

ಹೀಗೆ ಗೊಂದಲಿಗರು ಮತ್ತು ಅವರ ಗೊಂದಲಕ್ಕೆ ಕೇವಲ ಐತಿಹಾಸಿಕ ಆಧಾರಗಳು ಮಾತ್ರವಲ್ಲ ಪೌರಾಣಿಕ ಆಧಾರಗಳೂ ಇರುವುದೊಂದು ವಿಶೇಷ.

  • ಜಮದಗ್ನಿ ಮತ್ತು ರೇಣುಕಾರಿಂದ ತಮ್ಮ ಉತ್ಪತ್ತಿಯಾಯಿತೆಂದೂ ಈಗ ಮಹಾರಾಷ್ಟ್ರದಲ್ಲಿರುವ ಮಾಹೂರ ತಮ್ಮ             ಮೂಲಸ್ಥಾನವೆಂದೂ ಗೊಂದಲಿಗರು ಹೇಳಿಕೊಳ್ಳುತ್ತಾರೆ.
  • ಪರಶುರಾಮನು ಬೇರಾಸುರನೆಂಬ ದೈತ್ಯನ ಶಿರ ತರಿದು ಅವನ ದೇಹದಿಂದ ಚೌಡಿಕೆ ನಿರ್ಮಿಸಿಕೊಂಡು ನುಡಿಸುತ್ತಾ ರೇಣುಕೆಯಲ್ಲಿಗೆ ಬಂದು ಮಾತೃವಂದನೆ ಮಾಡಿದ; ಅಂದಿನಿಂದಲೇ ಈ ಗೊಂದಲದ ಆಚರಣೆ ಮೊದಲಾಯಿತೆನ್ನುತ್ತಾರೆ.
  • ‘ಅಮಲಿಕಾ ಗ್ರಾಮ ಮಹಾತ್ಮ್ಯ’ ದ ಪ್ರಕಾರ ಈಗಣ “ಮಾಹೂರ” ರೇಣುಕಾ ದೇವಿಯ ಮುಖ್ಯ ನಿವಾಸಗಳಲ್ಲೊಂದು.        ಆ ಕಾರಣದಿಂದಲೇ ಈ ಪವಿತ್ರ ಕ್ಷೇತ್ರದ ಮಹಿಮೆಯನ್ನು ಹಾಡುವ ಹಲವು ಕಥಾನಕಗಳಿವೆ. ಮೇಲ್ಕಾಣಿಸಿದ ಗ್ರಂಥದ          ಮೂರು             ಅಧ್ಯಾಯಗಳಲ್ಲಿ “ಗೊಂದಲೀ ನೃತ್ಯದ” ವರ್ಣನೆಯೇ ಇದೆಯಂತೆ. ಇದರಲ್ಲಿ ಉದ್ಧೃತವಾಗಿರುವ ಕೆಲವು         ಶ್ಲೋಕಗಳು ಶಾಙ್ಞದೇವನ ಸಂಗೀತ ರತ್ನಾಕರದ “ಗೌಂಡಲೀ ವಿಧಿ”ಯ ವರ್ಣನೆಯಲ್ಲೂ ಇವೆ ಎಂದು ತಿಳಿದಿದೆ.
  • ಸ್ಕಂದ ಪುರಾಣದ ಪ್ರಭಾಸ ಖಂಡದಲ್ಲಿ ಗೊಂದಲವನ್ನು ಉಲ್ಲೇಖಿಸಿರುವುದುಂಟು. ಮಾಹಾರಾಷ್ಟ್ರದ ಗೊಂದಲದ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆ ಇದ್ದರೂ ಉದ್ದೇಶ ಆಶಯಗಳಲ್ಲಿ ವ್ಯತ್ಯಯವಿಲ್ಲ. ಅಲ್ಲಿಯ ಗೊಂದಲದಲ್ಲಿ ‘ಆಖ್ಯಾನಾಚ ಗೊಂಧಳ್’ ಮತ್ತು ‘ಪೋತಾಚಾ ಗೊಂಧಳ್’ ಎಂದು ಎರಡು ವಿಧ. ಅದರ್ ಅಂಗಭೋಗ ರಮ್ಗ ಭೋಗಗಳಿಗಾಗಿ ಗೊಂದಲಕ್ಕೆ ಖಂಡೋಬಾ ಭಕ್ತರಾದ ವಾಘ್ಯಾ ಮುರುಳಿಗಳನ್ನು (ಗೊರವರಾದ ಒಗ್ಗಯ್ಯ-ಒಗ್ಗಯಿತಿ)     ಕರೆಸುತ್ತಾರೆ. ಆದರೆ ಹೀಗೆ ಕರೆಸುವ ಪದ್ಧತಿ ಕರ್ನಾಟಕದಲ್ಲಿಲ್ಲ. ಭಕ್ತಿಗೀತೆಗಳನ್ನು ಹಾಡುವ ಭವಾನಿ ಭಕ್ತರನ್ನು ಮಹಾರಾಷ್ಟ್ರದಲ್ಲಿ ಭೂತ್ಯಾ ಎಂದು ಕರೆಯುವರು. ಕಥೆ ನಡೆಸುವವನಿಗೆ “ನಾಯಕ್” ಎಂಬ ಹೆಸರಿದೆ.
  • ಅಂಬಾಭವಾನಿಯಂತೆ ಭರವನಾಥ್ ಮತ್ತು ಖಂಡೋಬಾರ ಹೆಸರಿನಲ್ಲಿ ಕೂಡಾ ಆ ಪ್ರದೇಶದಲ್ಲಿ ಗೊಂದಲವೇರ್ಪಡಿಸುತ್ತಾರೆ. ಭೈರವನಾಥರು ಇದನ್ನು ‘ಭರಾಡ’ ಎಂದರೆ ಖಂಡೋಬಾ ಸಂಪ್ರದಾಯದವರು ‘ಜಾಗರಣ್’ ಎನ್ನುತ್ತಾರೆ. ಗೊಂದಲದಂತೆ ಇವೂ ಕೂಡಾ ಇಡೀ ತ್ರಾತ್ರೆ ನಡೆಯುತ್ತವೆ.

ಹೀಗೆ ಕನ್ನಡದ ನೆಲದಿಂದ ಭೂತಮಾತೆ ಮತ್ತು ಆಕೆಗೆ ಸಂಬಂಧಿಸಿದ ಗೊಂದಲಾಚರಣೆ ಪ್ರಾಕ್ತನ ಕಾಲದಿಂದಲೇ ಪ್ರಸರಿಸಿ ಮಧ್ಯಪ್ರದೇಶದವರೆಗೂ ವಿಸ್ತರಿಸಿರುವುದನ್ನು ಕಾಣಬಹುದು. ಆದ್ದರಿಂದ ಗೊಂದಲಿಗರು ಶಿವಾಜಿ ಕಾಲದಲ್ಲಿ ಗೂಢಾಚಾರರಾಗಿ ಕರ್ನಾಟಕಕ್ಕೆ ಪ್ರವೇಶಿಸಿದರೆಂಬುದು ಸರಿಯಲ್ಲ. ರಾಜ್ಯಗಳ ಭೌಗೋಳಿಕ ಎಲ್ಲೆಗಳು ಬದಲಾದ ಪರಿಸ್ಥಿತಿಯಲ್ಲಿ ಹಿಂದೊಂದು ಕಾಲದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ, ಮಾಹೂರದ ರೇಣುಕಾ, ತುಳಜಾಪುರದ ಅಂಬಾಭವಾನಿಗಳಂಥಾ ದೇವೇಕ್ಷೇತ್ರಗಳು ಮಹಾರಾಷ್ಟ್ರದಲ್ಲಿ ಸೇರಿವೆ. ಸವದತ್ತಿ ಯಲ್ಲಮ್ಮದೇವಿಯ ಕ್ಷೇತ್ರ ಕರ್ನಾಟಕದಲ್ಲಿ ಉಳಿದಿದೆ. ಆದರೆ ಈ ಎಲ್ಲ ದೇವತೆಗಳ ಭಕ್ತಕೋಟಿ ಈ ಮುನ್ನ ಹೇಳಿರುವಂತೆ ಎರಡೂ ಕಡೆ ಇದೆ. ಎಲ್ಲೆಲ್ಲಿ ದೇವೀ ಭಕ್ತರಿದ್ದಾರೋ ಅಲ್ಲೆಲ್ಲಾ ಗೊಂದಲಿಗರೂ ನೆಲೆಸಿದ್ದಾರೆ, ತಮ್ಮ ಅಂಬಾಭವಾನಿಯ ಭಕ್ತರಾಗೇ ಉಳಿದಿದ್ದಾರೆ. ಅವರು ತಮ್ಮ ತಾಯ್ನಡಿಯಾದ ಮರಾಠಿಯನ್ನು ತಮ್ಮ ಅಸ್ತಿತ್ವದ ಸಂಕೇತವೆಂದೂ ಅದು ಅಂಬಾಭವಾನಿಯ ಭಜನಾ ಭಾಷೆಯೆಂದೂ ಭಾವಿಸಿದ್ದಾರೆ. ಈಗಲೂ ತಾವು ನೆಲೆಸಿರುವ ಪ್ರದೇಶಗಳ ದೈನಂದಿನ ವ್ಯವಹಾರಿಕ ಭಾಷೆಗಳೊಂದಿಗೆ ಮರಾಠಿಯಲ್ಲೂ ದೇವೀಸ್ತೋತ್ರ ಮಾಡುತ್ತಾರೆ.

ಗೊಂದಲ ಹಾಕಿಸುವ ಭಕ್ತರಲ್ಲಿಯ ಮಾಂಸಾಹಾರಿಗಳು ಕುರಿ, ಕೋಳಿ ಹಂದಿಗಳನ್ನು ದೇವಿಗೆ ಬಲಿಕೊಡುತ್ತಾರೆ, ಶಾಖಾಹಾರಿಗಳಾದರೆ ಕೇವಲ ಆರಾಧನೆ, ಆಖ್ಯಾನಗಳ ಗೊಂದಲ ಕಾರ್ಯ ನೆರವೇರಿಸಿಕೊಳ್ಳುತ್ತಾರೆ. ಈ ರೀತಿ ಉಭಯವರ್ಗಕ್ಕೂ ಅಂಬಾಮಾತೆ ಮತ್ತು ಗೊಂದಲಿಗರು ಭರಿತರಾಗಿದ್ದಾರೆ. ಈ ದೃಷ್ಟಿಯಿಂದ ಅವರು ಸವ್ಯಸಾಚಿಗಳೇ ಸರಿ.

ಇಲ್ಲಿ ಇನ್ನೊಂದು ಮಾತು ಹೇಳಬೇಕು. ಗೊಂದಲದ ಕಾಲದಲ್ಲಿ ಇಷ್ಟೆಲ್ಲ ಗೌರವದಿಂದ ಕಾಣುವ ಮೇಲ್ವರ್ಗದ ಭವಾನಿ ಭಕ್ತರು ಗೊಂದಲಿಗರ ಸಾರ್ವಜನಿಕ ಆಟಗಳನ್ನು ನೋಡಲು ಹಿಂಜರಿವ ಮಡಿಭಾವನೆ ತೋರುತ್ತಾರೆ. ಇದೊಂದು ವಿಪರ್ಯಾಸವೇ ಸರಿ.

ಕಥೆ ಅಲ್ಲ ಆಟ

ಜಾನಪದ ರಂಗಕಲೆಗಳಲ್ಲಿ ಹಲವಕ್ಕೆ ಇಂದಿನ ಅರ್ಥದ ರಂಗಕಲೆ ಎಂಬ ಮಾತನ್ನು ಅನ್ವಯಿಸಲು ಹಿಂದೆಗೆಯುವುದೂ ಇದೆ. ನಿಜ, ಅವು ಆ ಉದ್ದೇಶದಿಂದ ಮೈದಳೆದುವಲ್ಲ; ಸಾಂಪ್ರದಾಯಿಕ ಆರಾಧನಾ ಭಕ್ತಿಯ ಅಭಿವ್ಯಕ್ತಿಯಾಗಿ ರೂಪಗೊಂಡು ಅವು ಬಾಳಿ ಬಂದಿವೆ. ಗೊಂದಲಿಗರ ಗೊಂದಲ ಮತ್ತು ಆಟ ಇಂಥವುಗಳಲ್ಲೊಂದು.

ಹಲವರು ಭಾವಿಸಿರುವಂತೆ ಗೊಂದಲಿಗರು ಕೇವಲ ಕಥೆ ಹೇಳುವುದಿಲ್ಲ. ಅವರ ಕಲಾ ಪ್ರಕಾರದಲ್ಲಿ ಬರೀ ನಿರೂಪಣೆಯಿಲ್ಲ; ಮನೆಗತೆಗಳಲ್ಲಿಯಂತೆ ಯಾರೋ ಒಬ್ಬ “ಹೂಂ”ಗುಟ್ಟುವುದಿಲ್ಲ. “ಆಹಾ” “ಹೌದು” ಎನ್ನುತ್ತಾ ನಿರ್ದಿಷ್ಟ ಕರ್ತವ್ಯದ ಹಿಮ್ಮೇಳಿಗ ದನಿದೋರುವುದೊಂದೇ ಅಲ್ಲದೆ, ಕಥನ ಕ್ರಿಯೆಯಲ್ಲಿ ಪಾಲ್ಗೊಳ್ಳುವುದೂ ಇದೆ. ಹಾಡಿಗೆ ಆತ ಸೊಲ್ಲು ನೀಡುತ್ತಾನೆ. ಈ ಕಲಾಪ್ರಕಾರದಲ್ಲಿ ರಂಗ ಪರಿಕರಗಳಿಲ್ಲ. ವೇಷ ಭೂಷಣ ತೊಟ್ಟ ನಿಗದಿತ ಪಾತ್ರ ವರ್ಗವಿಲ್ಲ. ಪ್ರತ್ಯೇಕ ವಾದ್ಯಕಾರರಿಲ್ಲ. ಭಾಗವತರಿಲ್ಲ. ಆದರೆ ನಾಟಕದ ಪ್ರಮುಖ ಲಕ್ಷಣಗಳಾದ ತಾನಲ್ಲದ ಇನ್ನೊಂದು ವ್ಯಕ್ತಿಯಾಗಿ ವರ್ತಿಸುವ ಅನುಕರಣೆಯ ನಟನಾಕ್ರಿಯೆ, ಚಲನೆ, ಅರ್ಥಪೂರ್ಣ ಸಂಭಾಷಣಾ ಸಾಹಿತ್ಯಗಳಿವೆ. ಅವುಗಳೊಡನೆ ವಾಸ್ತವಿಕತೆ ಮತ್ತು ಕಲ್ಪನೆಯ ಭಾವುಕತೆಗಳೂ ಅಂಗವಿಸಿರುತ್ತವೆ. ನೃತ್ಯ ಹಾಡುಗಳಂತೂ ಅವರ ಸಜೀವ ಸಂಬಂಧಿಗಳು.

ಇತರ ರಂಗಕಲೆಗಳಂತೆ ಗೊಂದಲಿಗರ ಆಟವೂ ನಾಂದಿಯಿಂದ ಅವ್ಯಾಹತವಾಗಿ ಭರತವಾಕ್ಯದಿಂದ ವಿಸರ್ಜನೆಗೊಳ್ಳುತ್ತದೆ. ಇವರೆಡರ ಮಧ್ಯೆಯ ಕ್ರಿಯಾ ಪರಂಪರೆಯೇ ಅವರ ಆಟ. ನಮ್ಮ ಜಾನಪದ ನಾಟಕ ಪರಂಪರೆಯ ಪೂರ್ವರಂಗ ಉತ್ತರರಂಗಗಳು ಗೊಂದಲಿಗರ ಕಲಾಪ್ರಯೋಗದಲ್ಲೂ ಇವೆ. ಈ ಎಲ್ಲ ಕಾರಣಗಳಿಂದ ಗೊಂದಲಿಗರು ಆಡಿ ತೋರಿಸುವ ಆಟವನ್ನು ಸಮಾನ ಸ್ವಭಾವದ ಕಿನ್ನರಿ ಜೋಗಿಗಳ ಆಟದೊಂದಿಗೆ ಜಾನಪದ ರಂಗಕಲೆಗಳ ಪಟ್ಟಿಗೆ ಸೇರಿಸುವುದು ಹೆಚ್ಚು ಸಮಂಜಸ; ಅಂತೆಯೇ ನಮ್ಮ ಜನಪದರು ಅವರ ಈ ಕಲಾಪ್ರಕಾರಕ್ಕೆ “ಗೊಂದ್ಲೇರ ಆಟ ಆಡಿಸುವುದು” ಎನ್ನುತ್ತಾರೆ. ತಮ್ಮ ಹಲವು ಜಾನಪದ ಪ್ರದರ್ಶನಾತ್ಮಕ ಕಲೆಗಳನ್ನು ಆಟವೆಂದೇ ಅವರು ಕರೆಚ ರೂಢಿ. ಉದಾಹರಣೆಗೆ ದಾಸರಾಟ, ಕಿಳ್ಳಿಕ್ಯಾತರಾಟ, ಜೋಗೇರಾಟ, ಮೋಡಿಕಾರರ ಆಟ ಮುಂತಾದವು. ಈ ಆಟ ಆಡಿಸುವುದನ್ನು “ಗೊಂದ್ಲೇರ ಕತೆ ಇಡಿಸುವುದು” ಎನ್ನುವುದೂ ಇಲ್ಲದಿಲ್ಲ. ಬಯಲಾಟಗಳನ್ನು ಕಲಿಯುವಾಗ ನಮ್ಮವರು “…ಕತಿ ಕಲಿಯುವುದು” “….ಕತಿ ಕಟ್ಟುವುದು” ಎಂದೂ ಹೇಳುವುದರಿಂದ ನಮ್ಮ ಅನ್ಯ ಬಯಲಾಟಗಳಂತೆ ಗೊಂದಲಿಗರ ಕಲಾಪ್ರಕಾರವೂ ಒಂದು ಆಟವೇ.

ನಾಟಕಕ್ಕೆ ಕಥಾಬೀಜ ಬೇಕಲ್ಲವೆ? “ನಾಟಕದ ಉದ್ದೇಶ ಕತೆ ಹೇಳುವುದು, ಅದನ್ನು ಅಭಿನಯಿಸುವುದು” ಎಂಬ ನಮ್ಮ ಸುಪ್ರಸಿದ್ಧ ರಂಗತಜ್ಞ ಡಾ. ಬಿ. ವಿ. ಕಾರಂತರ ಅಭಿಪ್ರಾಯ ಈ ಕಾರಣಕ್ಕಾಗಿ ಸಮರ್ಥನೀಯ.

ಕಿನ್ನರಿ ಜೋಗಿಗಳಂತೆ ಗೊಂದಲಿಗರು ರಾತ್ರೆ ಆಟವಾಡುವುದು ಮೂಲ ಪರಂಪರಾಗುತ ವೃತ್ತಿ. ಹಗಲು ಹೊತ್ತಿನಲ್ಲಿ ತತ್ವಪದ, ಲಾವಣಿಗಳಂಥ ಪದಗಳನ್ನು ಹೇಳಿ ಭಿಕ್ಷೆ ಬೇಡುವುದು ಉಪವೃತ್ತಿ. ಈ ಉಪವೃತ್ತಿಯನ್ನೇ ಪ್ರಮುಖವೆಂದು ಪರಿಗಣಿಸಿ ಇವರನ್ನು ವೃತ್ತಿಗಾಯಕ ವರ್ಗಕ್ಕೆ ಸೇರಿಸುವುದು ಸಮಂಜಸವಲ್ಲವೆಂದೇ ಹೇಳಬೇಕು. ಇವರ ಆಟಗಳು ಕೇವಲ ಗೀತಪ್ರಧಾನ ಕಥನ ಕಾವ್ಯಗಳೆನ್ನಲೆಡೆ ಇಲ್ಲ.

ನಮ್ಮ ಭಾರತೀಯ ಜಾನಪದ ಕಲಾ ಪರಂಪರೆಯಲ್ಲಿ ‘ಕೀರ್ತನೀಯ ನಾಟಕ’ ಎಂಬ ಕಲಾಪ್ರಕಾರ ಈಗಲೂ ಉತ್ತರ ಭಾರತದಲ್ಲಿ ಪ್ರಚಲಿತವಿದೆಯಂತೆ. ಕ್ರಿ.ಶ. ೧೨ ರಿಂದ ೧೪ನೇ ಶತಮಾನದವರೆಗೆ ಕರ್ನಾಟಕದ ಅರಸು ಮನೆತನದವರು ಮಿಥಿಲೆಯನ್ನಾಳಿದರೆಂದು ಇತಿಹಾಸ ಹೇಳುತ್ತದೆ. ಕ್ರಿ.ಶ. ೧೩೨೪ರಲ್ಲಿ ಹರಿವಂಶದೇವನೆಂಬಬ ರಾಜ ಆ ಪ್ರದೇಶದ ಕಲೆಗಳ ಪೋಷಕನಾಗಿದ್ದನೆಂದು ತಿಳಿಯುತ್ತದೆ. ಹೆಸರೇ ಹೇಳುವಂತೆ ಈ ಕೀರ್ತನೀಯ ನಾಟಕವೆಂಬ ಒಂದು ರಂಗಪ್ರಕಾರವನ್ನು ಆತ ಪ್ರಚುರಪಡಿಸಿದ; ಮಿಥಿಲೆಯವರು ಶಕ್ತಿಯ ಆರಾಧಕರು. ಈಗಲೂ ಆ ಭಾಗದ ಬಹುಪಾಲು ಜನರಿಗೆ ಭಗವತಿ ಗೌರಿಯೇ ಕುಲದೇವತೆ ಎನ್ನುತ್ತಾರೆ. ಗದ್ಯಪದ್ಯ ಮಿಶ್ರಿತವಾದ ಈ ನಾಟಕ ನಮ್ಮ ಗೊಂದಲಿಗರ ಆಟದ ರೀತಿಯಲ್ಲಿದ್ದಿರಬೇಕು. ಹರಿವಂಶದೇವ ಎಂಬ ಊಹೆಎ ಅವಕಾಶವಿಲ್ಲದಿಲ್ಲ.

ರಂಗಸ್ಥಳ

ನಾವು ಯಾವುದನ್ನು ನಾಟಕವೆಂದು ಕರೆಯುತ್ತೇವೋ ಆ ಕಲಾಪ್ರಕಾರಕ್ಕೆ ನಿರ್ದಿಷ್ಟ ಅಳತೆಯ ಪ್ರತ್ಯೇಕ ರಂಗಸ್ಥಳವಿರುತ್ತದೆ. ದೃಶ್ಯಗಳಿಗೆ ತಕ್ಕ ಅದರವೇ ಆದ ಪರಿಕರಗಳಿರುತ್ತವೆ. ಇಕ್ಕೆಲಗಳಲ್ಲಿ ಪಾರ್ಶ್ವಭಾಗ, ನೇಪತ್ಯ ರಂಗದ್ವಾರಗಳಿರುತ್ತವೆ. ಪ್ರಯೋಗಕ್ಕೆ ಸೂಕ್ಷತೆ ಕೊಡುವ ತಾಂತ್ರಿಕ ಬೆಳಕಿನ ವಿನ್ಯಾಸವಿರುತ್ತದೆ. ಪಾತ್ರವರ್ಗದಲ್ಲಿ ನಟ-ನಟಿಯರಿರುತ್ತಾರೆ. ಅವರಿಗೆ ಕಣ್ಸೆಳೆವ ಯಥೋಚಿತ ವರ್ಣಮಯ ವೇಷ-ಭೂಷಣಗಳಿರುತ್ತವೆ. ಯಕ್ಷಗಾನ, ದೊಡ್ಡಾಟ, ಸಣ್ಣಾಟಗಳಂಥವುಗಳಾದರೆ ಎತ್ತರದ ಹೊರ-ಒಳ ಅಟ್ಟಗಳಿರುತ್ತವೆ. ಬಣ್ಣದ ಚೌಕಿಗಳಿರುತ್ತವೆ. ಪ್ರತ್ಯೇಕವಾಗಿ ಭಾಗವತ, ಹಿಮ್ಮೇಳಿಗರು, ವಾದ್ಯವೃಂದ, ಹನುಮನಾಯಕ, ಸಾರಥಿಗಳಿರುತ್ತಾರೆ.

ಆದರೆ ಇಂಥವಾವಕ್ಕೂ ಅವಕಾಶವೇ ಇರದ ರಂಗಭೂಮಿ ಗೊಂದಲಿಗರದ್ದು. ಅವರಿಗೆ ಪ್ರತ್ಯೇಕ ನಿರ್ಮಿತ ವಿಶಾಲ ರಂಗಸ್ಥಳವೇ ಇಲ್ಲ. ೫-೬ ಅಡಿಗಳ ಅಳತೆಯದಾದರೂ ಆದೀತು. ಅವರು ಆಟಕ್ಕಾದರೆ ಮನೆಯ ಮುಂದಿನ ಜಗಲಿ, ಇಲ್ಲವೇ ಚಪ್ಪರ, ಮಾರಮ್ಮ. ಊರಮ್ಮ, ದುರುಗಮ್ಮಗಳಂಥ ಓಣಿಯ ದೇವತೆಯ ಗುಡಿಗಳ ಮುಂಭಾಗಗಳಾದರೂ ಸರಿ. ಗೊಂದಲಕಾರ್ಯವಾದರೆ ಭಕ್ತರ ಮನೆಯ ಒಳಜಗುಲಿಯೇ ಪಡಸಾಲೆಯೇ ತಕ್ಕ ತಾವು. ಬೆನ್ನ ಹಿಂದೆ ಒಂದು ಸಾದಾಪುಟ್ಟಿ ತೆರೆಯೂ ಇರದ ಸರಳತೆ ಗೊಂದಲಿಗರ ಆಟದ್ದು. ಕಣ್ಣಿಗೆ ಕಾಣುವ ಹಿನ್ನೆಲೆ ಮುನ್ನೆಲೆಗಳೆರಡನ್ನೂ ನೋಡುಗರಾದ ನಾವೇ ಸಂದರ್ಭಕ್ಕೆ ತಕ್ಕಂತೆ ವಿಭಾವವಾಗಿ ಕಲ್ಪಿತಗೊಳಿಸಿಕೊಳ್ಳಬೇಕಾಗುತ್ತದೆ. ಏಳಂತಸ್ತಿನ ಅರಮನೆ, ಬಣ್ಣದ ರಾಜಕಛೇರಿ ಚಾವಡಿ ಪಗಡೋಸಾಲಬಜಾರ ಚಂದ್ರಬೀದಿ, ಅಗಸಿಬಾಗಲು, ವನಾಂತರ, ಘೋರಾರಣ್ಯ, ಝೋಪಡಿ, ಗವಿ, ಗುಡ್ಡ, ಸರೋವರ, ಬಾವಿ, ಕೆರೆ ಇತ್ಯಾದಿಗಳೆಲ್ಲವನ್ನೂ ಅವರು ತಮ್ಮ ಆಟದ ನಿರೂಪಣೆ, ಸಂಭಾಷಣಾ ಕೌಶಲಾದಿಗಳಿಂದಲೇ ಕಾಲ್ಪನಿಕ ವಿಭಾವದ ಮೂಲಕ ನಮ್ಮ ಕಣ್ಗಾಣಿಸುತ್ತಾರೆ.

ಈ ಪರಿಯ ಅವರ ಅಕೃತಿಮ, ಅನುದಿನದ, ಸುಪರಿಚಿತ ಬಹುತೇಕ, ಒಡನಾಟದ ಸ್ಥಳವಾದ್ದರಿಂದ ಆಡುವವರ ನೋಡುವವರ ಮಧ್ಯೆ ಅಂತರ ಕಲ್ಪಿಸಲೆಡೆಯೇ ಇಲ್ಲದ ಅಂಖಂಡವಲಯ ಅಂತೆಯೇ ಪ್ರೇಕ್ಷಕರು ಆಟದ ನಾಂದಿಯೊಂದಿಗೇ ನಿರಾಳವಾಗಿ, ಅಪ್ರಜ್ಞಾಪೂರ್ವಕವಾಗಿ ಆಟದ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ; ಆದರೆ ಆ ಉಭಯತರ ಮಧ್ಯೆ ಮಾನಸಿಕ ಅಂತರವಿಲ್ಲದೇ ಇರುವುದಿಲ್ಲ.