• ಕೂದಲು ಇದ್ದಷ್ಟು ತುರುಬು ಆಗತೈತಿ.
 • ಹುಲಿಯ ಬೆನ್ನು ಬಿದ್ದು ಕುರಿ ಸಾಯತೈತಿ.
 • ಬೆಕ್ಕಿನ ಬೆನ್ನು ಬಿದ್ದು ಇಲಿ ಸಾಯತೈತಿ.
 • ಅಮ್ಮನವರು ಪಟ್ಟಕ್ಕೆ ಬರುವ ಹೊತ್ತಿಗೆ, ಅಯ್ಯನವರ ಚಟ್ಟಕ್ಕೆ ಹತ್ತುತ್ತಾರೆ.
 • ಅಡಿಗೆ ಮಾಡಿ ಕಲಿ, ಉಡಿಗೆಯನ್ನು ನೋಡಿ ಕಲಿ
 • ಅತ್ತೆ ಇಲ್ಲದಾಗ ಆಚಾರವಂತೆ.
 • ಸೊಸೆಯಿಲ್ಲದಾಕೆ ಶ್ಯಾಮಲಗಿತ್ತೆ.
 • ಕಟ್ಟಿದ ಬುತ್ತಿ ಕಲಿಸಿದ ಮಾತು ಎಷ್ಟು ದಿವಸದವು?
 • ಕಾಡುವ ದೇವಿಗೆ ಬೇಡಿದ ಹರಕೆ.
 • ಕುಣಿಯುವವರ ಕಾಲಿಗೆ ಗೆಜ್ಜೆ ಚಂದ.
 • ಗಡ್ಡೆ ಹೊಲ ಹೀನ ಗೊಡ್ಡು ಹೆಂಡತಿಗೆ ಹೀನ.
 • ಗಳಿಸಿದವನ ಹೆಂಡತಿ ಬಳಸಿದವರ ಪಾಲು.
 • ಗಂಡ ಗಾಳಿ ಪಾಲು, ಹೆಂಡತಿ ಪರರ ಪಾಲು.
 • ಗಂಡಗ ಹೊರಸು ಆಗದು, ಹೆಂಡತಿಗೆ ನೆಲ ಆಗದು.
 • ಗಂಡನಿಲ್ಲದ ಬಾಳು, ದೇವರಿಲ್ಲದ ಗುಡಿ.
 • ದಕ್ಕಿದ್ದೇ ದಕ್ಷಿಣೆ, ಸಿಕ್ಕದ್ದೇ ಸಿರಿ?
 • ಮೆಚ್ಚಿ ಬಂದವಳಿಗೆ ಜಾತಿ ಸಾಕು.
 • ಯಾರೂ ಇಲ್ಲದ ಊರಿಗೆ ಈರಕ್ಕನೇ ಹಿರಿಯಳು.
 • ದೊಷಗ್ಯಾನ ಹೆಂಡತಿ ಹೊಸಗ್ಯಾಗ.
 • ನಡುಕೊಂಡಷ್ಟು ಭಕ್ತಿ ಪಡಕೊಂಡಷ್ಟು ಮಾರ್ಗ.

ಈ ಮೇಲಿನ ಗೊಂದಲಿಗರ ಮಹಿಳೆಯರ ಗಾದೆಗಳು ಪಿತೃಪ್ರಧಾನ ಸಾಂಸ್ಕೃತಿಕ ಸಂದರ್ಭದಲ್ಲಿ ಮಹಿಳೆಯರು ಸುತ್ತ ಇರುವ ಸಂದರ್ಭ-ಸನ್ನಿವೇಶ ಅತ್ಯಂತ ಸಂಕೀರ್ಣ ಸ್ವರೂಪದ್ದಾಗಿರುತ್ತದೆ. ಪುರುಷ ಧ್ವನಿಗಳು ಹೆಣ್ಣಿನ ಮೂಕತೆಯನ್ನ, ಆಕೆಯ ನೀತಿ, ಆದರ್ಶ ನಿಷೇಧದ ನೆಲೆಯಲ್ಲಿ ವ್ಯವಸ್ಥಿತವಾಗಿ ಸೃಷ್ಟಿಸಲಾಗಿದೆ. ಗಂಡು ಭೋಗಿಯಾಗಿ ಹೆಣ್ಣು ಅನುಭೋಗಿಯಾಗಿರುವುದು ವ್ಯವಸ್ಥೆಯಲ್ಲಿ ಆಕೆ ಭೋಗ ವಸ್ತುವಾಗಿದ್ದು, ಹೆಣ್ಣು ಸಂಸ್ಕೃತಿಯ ಅಪಕರ್ಷದ ಸಂಕೇತ ಕಾರಣವಾಗಿ ಪುರುಷ ತನ್ನ ಅಂಕೆಗೆ ತಕ್ಕಂತೆ ಹೆಣ್ಣನ್ನು ಗ್ರಹಿಸಿ ಮಾನವೀಯ ನೆಲೆಯ ಸಜೀವ ಹೆಣ್ಣಿನ ಮುಖವನ್ನು ಮರೆಯಾಗಿಸಿರುವುದು ಈ ಗಾದೆಗಳು ಸ್ಪಷ್ಟವಾಗಿ ಸಾರುತ್ತವೆ.