ಹುಟ್ಟು:

ಸಾಮಾನ್ಯವಾಗಿ ಎಲ್ಲ ಬುಡಕಟ್ಟುಗಳಲ್ಲಿ ಇರುವಂತೆ ಹುಟ್ಟಿನ ಸಂಸ್ಕಾರಗಳು ಇಲ್ಲೂ ಹೆಣ್ಣು ಮಗಳ ಗರ್ಭಾವಸ್ಥೆಯಿಂದಲೇ ಪ್ರಾರಂಭವಾಗುತ್ತವೆ. ಹೆಣ್ಣು ಋತುಮತಿಯಾಗುವುದನ್ನು, ಗರ್ಭಕಟ್ಟುವುದನ್ನು ಅತ್ಯಂತ ಸಂತೋಷದಿಂದಲೇ ನಿರೀಕ್ಷಿಸುತ್ತಾರೆ. ಗರ್ಭಿಣಿಗೆ ಒಂಬತ್ತು ತಿಂಗಳು ತುಂಬಿದಾಗ ಸೂಲಗಿತ್ತಿ ಬಂದು ಹೆರಿಗೆ ಮಾಡಿಸುತ್ತಾಳೆ. ಮಗುವಿನ ಜನನದ ಸಂದರ್ಭದಲ್ಲಿ ಹೂರಿಕೊಯ್ಯುವ (ಹೊಕ್ಕಳಬಳ್ಳಿ ಕೊಯ್ಯುವ) ಮೂಲಕ ತಾಯಿಯ ದೇಹದಿಂದ ಹೊರಬರುವ ಮಾಂಸವನ್ನು ಒಂದು ಗಡಿಗೆಯಲ್ಲಿ ಹಾಕಿ ಮನೆ ಮುಂದೆ ಭೂಮಿಯಲ್ಲಿ ಹುಗಿಯುತ್ತಾರೆ. ಮಗು ಹೆರುವ ಅಂಗದಿಂದ ಬರುವ ಮುಟ್ಟು ನೆಲಕ್ಕೆ ಬಿದ್ದರೆ ಫಲವಂತಿಕೆಯ ಸಂಕೇತವೆಂಬ ನಂಬಿಕೆ ಬಲವಾಗಿದೆ ಆದ್ದರಿಂದಲೇ ಇಂಥ ಸ್ಥಳದಲ್ಲಿ ಬಾಳೆ, ತೆಂಗಿನ ಗಿಡಗಳನ್ನು ನೆಡುವ ಪದ್ಧತಿ ಉಳಿದುಕೊಂಡು ಬಂದಿರುವುದನ್ನು ನೋಡಿದರೆ “ಮಾಂಸ” ಫಲವಂತಿಕೆಯ ಸಂಕೇತವಾಗಿರುವುದು ಸ್ಪಷ್ಟವಾಗುತ್ತದೆ. ಹೆಣ್ಣಿನಲ್ಲಿರುವ ಸೃಷ್ಟಿ ಶಕ್ತಿಯನ್ನು ಗುರುತಿಸಿದ ಹಿರಿಯರು ಹೆಣ್ಣು ಋತುಮತಿಯಾದಾಗ, ವಿವಾಹವಾಗುವಾಗ, ಗರ್ಭ ಧರಿಸಿದಾಗ, ಮಗುವಿಗೆ ಜನ್ಮ ನೀಡಿದಾಗ ಅನೇಕ ಆಚರಣೆ, ಸಂಪ್ರದಾಯಗಳನ್ನು ಒಂದು ನಿಯಮದಂತೆ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.

ಐದೇಶಿ-ಸೆಟವಿ

ಮಗು ಜನಿಸಿದ ನಂತರ “ಸೆಟವಿ” ಹಣೆಬರಹ (ದೈವ) ಬರೆಯುತ್ತಾಳೆ ಎಂಬ ನಂಬಿಕೆ ಬಲವಾಗಿದೆ. ಈ “ಸೆಟವಿ” ಬರಹವನ್ನು ಜನಪದ ಸಂಸ್ಕೃತಿಯಲ್ಲಿ “ವಿಧಿ” ಎಂದು ಇನ್ನು ಕೆಲವು ಜನಾಂಗಗಳಲ್ಲಿ ಬ್ರಹ್ಮ ಬರಹವನ್ನು “ವಿಧಿ” ಎಂದು ಕರೆಯುತ್ತಾರೆ. ದೇವಿ ಪೂಜಕರಾದ ಈ ಗೊಂದಲಿಗರು ಶಕ್ತಿದೇವತೆ “ಸೆಟವಿ” ಮಗುವಿನ ಹಣೆ ಬರಹವನ್ನು ಚೆನ್ನಾಗಿ ಬರೆಯಲಿ ಎಂದು ಆ ದೈವವನ್ನು ಪೂಜಿಸುತ್ತಾರೆ. ಇದನ್ನೇ “ಐದೇಶಿ” ಮಾಡುವುದು ಎನ್ನುತ್ತಾರೆ. ಮಗು ಹುಟ್ಟಿದ ಐದನೆಯ ದಿನಕ್ಕೆ ಒಂದು ಹೊಸ ಮೊರ ಮತ್ತು ಒಂದು ಹೊಸ “ಸೆಟವಿ” ದೇವಿ ಮೂರ್ತಿಯನ್ನು ಕೊಂಡು ತರುತ್ತಾರೆ. ದೇವರ ಜಗುಲಿಯಲ್ಲಿಟ್ಟು ಪೂಜಿಸುತ್ತಾರೆ. ಮನೆಯಲ್ಲಿ ಸಿಹಿ ಅಡುಗೆಯನ್ನು ಮಾಡುತ್ತಾರೆ. ನಾಲ್ಕೈದು ಮಂದಿ ಬಂಧು-ಬಳಗದವರನ್ನು ಕರೆದು ಊಟ ಬಡಿಸುತ್ತಾರೆ. ಓಣಿಯ ಮಂದಿಗೆಲ್ಲಾ ಬೆಲ್ಲ-ಕೊಬ್ಬರಿ ಹಂಚಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಅಲ್ಲಿಗೆ “ಸೆಟವಿ” ದೇವಿ ಸಂಪ್ರೀತಳಾದಳು, ತಮ್ಮ ಮಗುವಿನ ಹಣೆಯಲ್ಲಿ ಒಳ್ಳೆಯದನ್ನು ಬರೆದಳು ಎಂದು ಬಲವಾಗಿ ನಂಬುತ್ತಾರೆ.

ಇದೇ ಸಂದರ್ಭದಲ್ಲಿ ಆಗತಾನೇ ಹುಟ್ಟಿದ ಶಿಶುವಿಗೆ ಶೀತ ರೋಗ ಬಾಧೆ ತಗುಲದಂತೆ “ಈರಲ” ಎಂಬ ಆಚರಣೆ ಮಾಡುತ್ತಾರೆ. ಇದು ಉತ್ತರ ಕರ್ನಾಟಕದ ಗೊಂದಲಿಗರ ನಂಬಿಕೆಯಾದರೆ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಇತರ ಕಡೆಗಳಲ್ಲಿ ಅವರು ಪ್ರಾದೇಶಿಕ ಸಂಪ್ರದಾಯದಂತೆ ಹೊಸ ಜೀವ ಹುಟ್ಟಿದಾಗ ಏಳು ದಿವಸಕ್ಕೆ ಸೂತಕ ತೆಗೆದು ಹನ್ನೊಂದು ದಿವಸಕ್ಕೆ ಹೆಸರಿಟ್ಟು ತೊಟ್ಟಿಲೊಳಕ್ಕೆ ಹಾಕುತ್ತಾರೆ. ಅಲ್ಲಿಯವರೆಗೆ ಮಗುವನ್ನು ಹೊಸ ಮೊರದಲ್ಲೇ ಇಟ್ಟಿರುತ್ತಾರೆ. ಇವರಿಗೆ ಈ ಐದೇಶಿ ಕಲ್ಪನೆ ತಿಳಿಯದು. ಇವರ ಆಚರಣೆಗಳಲ್ಲಿ ಕೆಲವು ಪ್ರಾದೇಶಿಕ ಭಿನ್ನತೆ ಇರುವುದು ಕಂಡು ಬರುತ್ತದೆ.

ಕೂಸಿಗೆ ಹೆಸರಿಡುವುದು:

ಮಗು ಜನಿಸಿದ ಹನ್ನರಡನೆಯ ದಿವಸಕ್ಕೆ ಹೆಸರಿಡುವ ಕಾರ್ಯ ಮಾಡುತ್ತಾರೆ. ಮಗುವಿಗೆ ಹೆಸರಿಡುವುದಕ್ಕೆ ಸೋದರತ್ತೆಗೆ ಮೊದಲ ಪ್ರಾಧಾನ್ಯತೆ. ಇಲ್ಲವಾದರೆ ಸೂಲಗಿತ್ತಿಯರು ಈ ಕಾರ್ಯ ನೆರವೇರಿಸುವ ಪದ್ಧತಿ ಇದೆ. ಮಗುವಿಗೆ ಹೆಸರಿಡುವಾಗ ಹೊಸ ಅರಿವೆ ತೊಡಿಸಿ, ಎರಡೂ ಕೈಗಳಿಂದ ಎತ್ತಿಕೊಂಡು ಅಂಗಾತವಾಗಿ ಜೋಳಿಗೆಯಲ್ಲಿ ಮಲಗಿಸಿ ಮೊದಲು ದೇವರು, ದೈವ, ಕುಲದೇವರು ಮತ್ತು ಹಿರಿಯರು ಹೆಸರು ಹೇಳಿ “ಕುರ ಕುರ ಕುರ್ರ ಕುರ ಕುಕಡಿ ಕುರ್ರ” ಎಂದು ಮಗುವಿನ ಸೋದರತ್ತೆ ಅಥವಾ ಸೂಲಗಿತ್ತಿ ಕೂಗುತ್ತಾರೆ. ಹೆಸರಿಡಲು ಬಂದ ಬಂಧುಗಳಿಗೆ ಐದ ತರಹದ ಧಾನ್ಯಗಳ ಗುಗ್ಗರಿಯನ್ನು ತಿನ್ನಲು ಕೊಡುವ ಪದ್ಧತಿ ಇದೆ. ಮೇಲೆ ಬೆಲ್ಲ-ಕೊಬ್ಬರಿ ಕೊಡುವುದುಂಟು. ಬಳಿಕ ಎಲೆ, ಅಡಿಕೆ ಕೊಟ್ಟು ಬೀಳ್ಕೊಡುವ ಪದ್ಧತಿ ಆಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಗೊಂದಲಿಗರು ಮಕ್ಕಳಿಗೆ ಹೆಸರಿಡುವ ಪದ್ಧತಿಯ ವೈಶಿಷ್ಟವಾಗಿದೆ. ಈ ಸಂದರ್ಭದಲ್ಲಿ ಮಗುವಿಗೆ ಕಾಣಿಕೆ ಕೊಡುವಾಗ ತಾಯಿ ಮಗುವನ್ನು ಅಗಲಿಸಬಾರದೆಂಬ ನಂಬಿಕೆಯಿಂದ ತಾಯಿಗೂ ಕುಪ್ಪಸ, ಸೀರೆ, ಕುಪ್ಪಸ ಉಡಿ ಅಕ್ಕಿ ಹಾಕಿ ಗೌರವಿಸಲಾಗುತ್ತದೆ.

ಗೂಡ್ಲ ಕೊಡುವ ಶಾಸ್ತ್ರ:

ಈ ಬುಡಕಟ್ಟು ಸಮುದಾಯದಲ್ಲಿ ಹುಡುಗಿ ಮೈನೆರೆದಾಗ ಮನೆಯಲ್ಲಿನ ಒಂದು ಮೂಲೆಯಲ್ಲಿ ಕೂಡಿಸುವ ಅಥವಾ ಒಂದೇ ಗುಡಿಸಲಲ್ಲಿ ಪ್ರತ್ಯೇಕವಾಗಿ ಕೂಡಿಸುವ ಪದ್ಧತಿ ಇದೆ. ಇದು ಉತ್ತರ ಕರ್ನಾಟಕದ ಬಹುತೇಕ ಗೊಂದಲಿಗರ ಸಮುದಾಯದಲ್ಲಿದೆ. ಅಲೆಮಾರಿಗಳಾದ ಈ ಗೊಂದಲಿಗರು ಹುಡುಗಿ ಮೈನೆರೆದರೆ ಆಕೆಗಾಗಿ ಒಂದು ಗುಡಿಸಲು (ಗುಡ್ಲ) ನಿರ್ಮಿಸುತ್ತಾರೆ. ತಾವು ಬಯಲಿನಲ್ಲಿ ಉಳಿದುಕೊಂಡಿದ್ದರೂ ಆ ಸ್ಥಳದಲ್ಲಿಯೇ ಒಂದು ಗುಡಿಸಲು ಕಟ್ಟಿ ಅದರೊಳಗೆ ಆಕೆಯನ್ನು ಸಂರಕ್ಷಿಸುತ್ತಾರೆ. ಇದಕ್ಕೆ ಗೂಡ್ಲ ಕೊಡುವ ಶಾಸ್ತ್ರ ಎನ್ನಲಾಗುತ್ತದೆ. ಆರ್ಥಿಕವಾಗಿ ಶಕ್ತರಿದ್ದವರು ಬೇರೊಂದು ಖಾಲಿ ಮನೆಯಲ್ಲಿ ಹಂದರ (ಮಕರ) ಹಾಕಿ ಮೇಲೋ, ಕಟ್ಟಿಗೆ ಕುರ್ಚಿಯ ಮೇಲೋ ಕೂಡಿಸುತ್ತಾರೆ. ಆಕೆಯನ್ನು ಕೂಡಿಸುವ ಸ್ಥಳದಲ್ಲಿ ಚೌಕಾಕಾರದಲ್ಲಿ ಸುತ್ತಲು ಮೂರು ಕಡೆ ಬಣ್ಣ ಬಣ್ಣದ ಸೀರೆಗಳನ್ನು ಇಳಿಬಿಟ್ಟು ಅದರ ಮೇಲೆ ದೇವ-ದೇವತೆಯರ ಭಾವಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ತೂಗು ಹಾಕುತ್ತಾರೆ. ಹೀಗೆ ಅಲಂಕರಿಸಿದ ಮಕರದಲ್ಲಿ ಪ್ರತಿದಿನ ಸಂಜೆ ಆ ಹುಡುಗಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಉಡಿಸಿ ಹಸಿರು ಬಳೆ ಇಡಿಸಿ ಸುಮಂಗಲೆಯರು, ಮಹಿಳೆಯರು ಅರಿಷಿಣ ಹಚ್ಚಿ, ಹೂ ಮುಡಿಸಿ ಆರತಿ ಮಾಡುತ್ತಾ ಸೋಬಾನ ಪದಗಳನ್ನು ಹಾಡಿ ಮೈನೆರೆದ ಹುಡುಗಿಯಲ್ಲಿ ದಾಂಪತ್ಯದ, ಸಂಸಾರದ ಅನುಭವದ ಮಾತುಗಳನ್ನು ಹೇಳುತ್ತಾ ಶುಭ ಹಾರೈಸುತ್ತಾರೆ. ತಮ್ಮ ತಮ್ಮ ಶಕ್ತಾನುಸಾರ ಕಾಣಿಕೆ, ಹಣ ಇಲ್ಲವೆ ಸೀರೆ ಕುಪ್ಪಸ ನೀಡುತ್ತಾರೆ. ಹೀಗೆ ಈ ಗೂಡ್ಲಕೂಡುವ ಶಾಸ್ತ್ರವನ್ನು ಐದು, ಏಳು-ಒಂಬತ್ತು ದಿನಗಳವರೆಗೆ ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಮಗಳು ಮೈನೆರೆದ ಸಂತೋಷಕ್ಕಾಗಿ ಬಡವರು ಚುರುಮರಿ ಹಂಚಿದರೆ, ಉಳ್ಳವರು ಊರಿನ ದೈವದವರಿಗೆ, ಬಂಧುಗಳಿಗೆ ಉಪಹಾರ ಅಥವಾ ಊಟ ಹಾಕುತ್ತಾರೆ.

ಈ ಗೂಡ್ಲಹಾಕವು ಶಾಸ್ತ್ರದಲ್ಲಿ ಮೈನೆರೆದ ಹುಡುಗಿಗೆ ಸಪ್ಪನ ಆಹಾರ, ಉಪ್ಪು ಕಾರವಿಲ್ಲದ ಊಟ ಕೊಡಲಾಗುತ್ತದೆ. ಉಳ್ಳೆಗಡ್ಡೆ, ಬೆಳ್ಳುಳ್ಳಿ ಕಾರವಂತೂ ನಿಷಿದ್ಧ. “ಕಪ್ಪು ಊಟ” ಅಂದರೆ ಮಾಂಸದ ಊಟವನ್ನಂತು ಕೊಡಲೇ ಬಾರದು ಎಂಬ ನಿಯಮ ಈ ಸಮುದಾಯದಲ್ಲಿದೆ.

ಹುಡುಗಿ ಮೈನೆರೆಯುವುದಕ್ಕಿಂತ ಮೊದಲೇ ಮದುವೆ ಆಗಿದ್ದರೆ, ಆ ಹುಡುಗಿಯ ಗಂಡನಿಗೆ ಕೆಂಪು ಬಣ್ಣವನ್ನು ಉಗ್ಗಿ “ರಂಗ್‌ಹಲ್ತಾತ್‌” ಮಾಡುತ್ತಾರೆ. ಹೀಗೆ ಹಚ್ಚಿದ ಬಣ್ಣ ಹುಡುಗಿ ಮಕರ ಬಿಟ್ಟು ಹೊರಕ್ಕೆ ಬರುವ ತನಕ ಇರಬೇಕು. ಬಟ್ಟೆ ಬದಲಾಯಿಸಿದರೆ ಮತ್ತೆ ಬಣ್ಣ ಹಾಕುತ್ತಾರೆ. ಗಂಡನಾದವನು ಮೊಟ್ಟಮೊದಲು ಬಣ್ಣ ಹಾಕಿದವನಿಗೆ ಆತಿಥ್ಯ ಮಾಡಬೇಕು ಎಂಬ ಪದ್ಧತಿ ರೂಢಿಯಲ್ಲಿದೆ.

ಮದುವೆ:

ಈ ಸಮುದಾಯದ ಕೌಟುಂಬಿಕ ಜೀವನ ಪದ್ಧತಿಯಲ್ಲಿಯೇ “ಮದುವೆ” ಕಡ್ಡಾಯವಾಗಿದೆ. ವಿವಾಹಯೇತರ ಹೆಣ್ಣು-ಗಂಡಿನ ಸಂಬಂಧ ನಿಷಿದ್ಧ. ವಿವಾಹವಾದ ಅನ್ಯ ಮಹಿಳೆ ಸಂಬಂಧವೂ ನಿಷಿದ್ಧ. ಅದು ಮಹಾಪಾಪವೆಂದು ಭಾವಿಸುತ್ತಾರೆ. ಪಾಪದ ಪ್ರಜ್ಞೆ ಈ ಸಮುದಾಯದಲ್ಲಿ ಗಾಢವಾಗಿದೆ. ಗೊಂದಲಿಗರಲ್ಲಿ ಸಗೋತ್ರ ವಿವಾಹ ನಿಷಿದ್ಧ. ಸಾಮಾನ್ಯವಾಗಿ ಬೀಗರ ಕಡೆಯಿಂದಲೇ ಗಂಡಿದ್ದರೆ ಅಥವಾ ಹೆಣ್ಣಿದ್ದರೆ ಮೊದಲ ಪ್ರಾಶಸ್ತ್ಯ. ಇಂಥ ಸಂಬಂಧವೇ ಯೋಗ್ಯವೆಂಬುದು ಇವರ ಬಲವಾದ ನಂಬುಗೆ.

ಕನ್ಯೆಯನ್ನು ಹುಡುಕಿಕೊಂಡು ವರನ ಕಡೆಯವರು ಹೋಗುತ್ತಾರೆ. ತಾವು ನೋಡಲು ಹೋಗುತ್ತಿರುವ ಕನ್ಯೆಯ ಜಾತಕ, ಬಲ, ನಾಡಿ ಇತ್ಯಾದಿಗಳನ್ನು ಜೋಯಿಸರಲ್ಲಿ ಕೇಳಿ, ಹೋಲಿಕೆ ಬಂದರೆ ಮಾತ್ರ ಕನ್ಯೆ ನೋಡಲು ಹೋಗುವ ಪದ್ಧತಿ ಇದೆ. ಕನ್ಯೆ ಮನಸ್ಸಿಗೆ ಬಂದರೆ ಎರಡೂ ಕುಟುಂಬಗಳ ಹಿರಿಯರು ಮತ್ತು ಆಯಾ ಕುಟುಂಬದ ದೈವದವರು ಸೇರಿ ಸಂಬಂಧ ನಿಶ್ಚಿತಗೊಳಿಸಿ ಬಳುವಳಿ, ವಸ್ತ್ರಾಭರಣ ಬಗ್ಗೆ ಮಾತಕತೆ ಮಾಡಿ, ತಮ್ಮ ತಮ್ಮ ಶಕ್ತ್ಯಾನುಸಾರ ಇಂತಿಂತಾ ವಸ್ತುಗಳನ್ನು ಕೊಡುವುದು ಎಂದು ನಿರ್ಧರಿಸಿ, ವರ-ಕನ್ಯಾ ಸಂಬಂಧ ಗಟ್ಟಿಗೊಳಿಸುತ್ತಾರೆ. ಕನ್ಯೆ ಮತ್ತು ವರನ ತಂದೆ ಕುಟುಂಬದ ಜೋಯಿಸರ ಸಮ್ಮುಖದಲ್ಲಿ, ದೈವದವರ ನೇತೃತ್ವದಲ್ಲಿ ವಿಳ್ಯೆ ಕೊಡುವ ದಿನ ಮತ್ತು ಮದುವೆಯ ದಿನದ ಮುಹೂರ್ತವನ್ನು ನಿರ್ಧರಿಸುತ್ತಾರೆ. ಗೊತ್ತಾದ ದಿನದಂದು “ಸಾಕ್ಷಿ ವಿಳ್ಯ” (ಕನ್ಯೆ ನಿಶ್ಚಯದ ವಿಳ್ಯೆ ದೈವದವರಿಗೆ, ಬೀಗರಿಗೆ ಕೊಡುವುದು) ಮಾಡುತ್ತಾರೆ. ಅನುಕೂಲಸ್ಥರಿದ್ದರೆ ಸಿಹಿ ಹಂಚುತ್ತಾರೆ.

ಮದುವೆಯನ್ನು ಕನ್ಯೆಯ ಮನೆಯಲ್ಲಿಯೇ ನಡೆಯಿಸಬೇಕೆಂಬುದೇ ಈ ಸಮುದಾಯದ ನಿಯಮ. ಗಂಡಿನವರು ಹೆಣ್ಣಿಗಾಗಿ ತೆರವು ಕೊಡುವ ಪದ್ಧತಿಯನ್ನು ಪರಂಪರಾಗತವಾಗಿ ಈಗಲೂ ಈ ಗೊಂದಲಿಗ ಸಮಾಜದವರು ಉಳಿಸಿಕೊಂಡು ಬಂದಿದ್ದಾರೆ. ಐದು ರೂಪಾಯಿಯಿಂದ ಐದುನೂರು ರೂಪಾಯಿಯವರೆಗೆ ತೆರವು ಕೊಡುವ ಪದ್ಧತಿ ಇದೆ. ಇತ್ತೀಚೆಗೆ ಕೆಲವು ಮಧ್ಯಮ ವರ್ಗದ ಹಾಗೂ ಶ್ರೀಮಂತ ವರ್ಗದ ಇಲ್ಲವೆ ನೌಕರಿ ಮಾಡುತ್ತಿರುವ ಕುಟುಂಬಗಳಲ್ಲಿ ವರದಕ್ಷಿಣೆ ಪದ್ಧತಿ ಜಾರಿಗೆ ಬಂದಿದ್ದು, ಗೊಂದಲಿಗರ ಸಮುದಾಯದ ಹಿರಿಯ ಮಹಿಳೆಯರಲ್ಲಿ ಈ ಬಗ್ಗೆ ಬೇಸರವಿದೆ.

ಮೊದಲು ಈ ಸಮುದಾಯದಲ್ಲಿ ಬಾಲ್ಯವಿವಾಹ, ತೊಟ್ಟಿಲು ವಿವಾಹ ಪದ್ಧತಿ ಇದ್ದ ಬಗ್ಗೆ ಈ ವರ್ಗದ ಹಿರಿಯ ಮಹಿಳೆಯರು ಹೇಳುತ್ತಾರೆ. ಗೊಂದಲಿಗರ ಗೊಂದಲದ ಕಥಾನಕಗಳು “ಬಾಣಾವತಿ”, “ಬಾಳ ಭಿಕ್ಷುಕರಾಜ” ಕಥೆಗಳಲ್ಲಿ ಬರುವ ಬಾಲ್ಯವಿವಾಹ ಇದಕ್ಕೆ ನಿದರ್ಶನವಾಗಿ ನಿಲ್ಲುತ್ತದೆ. ಕುಟುಂಬದ ಹಿರಿಯರಿಗೆ ವಯಸ್ಸಾಗಿದೆ ನಾವು ಇರುವಾಗಲೇ ಮೊಮ್ಮಕ್ಕಳ ಮದುವೆ ನೋಡುತ್ತೇವೆ ಎನ್ನುವ ಕಾರಣಕ್ಕಾಗಿಯೇ ಕನ್ಯೆಗಳ ಕೊರತೆ ಇಂದಲೋ ಬಾಲ್ಯ ವಿವಾಹ, ತೊಟ್ಟಿಲು ವಿವಾಹಗಳು ಆಚರಣೆಯಲ್ಲಿದ್ದಂತೆ ತೋರುತ್ತದೆ. ಕಳೆದ ಶತಮಾನದ ಕೊನೆಯ ಭಾಗದಲ್ಲಿ ಬಾಲ್ಯ ವಿವಾಹ, ತೊಟ್ಟಿಲ ವಿವಾಹ ಕಡಿಮೆಯಾಗಿ, ಹುಡುಗಿ ಮೈನೆರೆದ ಮೇಲೆ ಅಥವಾ ಆಕೆಗೆ ಏಳು-ಎಂಟು ವರ್ಷಗಳ ತರುವಾಯ ಮದುವೆ ಜರುಗುತ್ತಿದ್ದವು. ಈಗ ಕನ್ಯೆಗೆ ಹದಿನಾರು-ಹದಿನೇಳು ವರ್ಷ ಗಂಡಿಗೆ ಇಪ್ಪತ್ತು ವರ್ಷ ತುಂಬಿದ ನಂತರ ವಿವಾಹ ಮಾಡುವ ಪದ್ದತಿ ಜಾರಿಯಲ್ಲಿರುವುದು ಕಂಡು ಬರುತ್ತದೆ.

“ಮದುವೆ” ಮೊದಲು ಒಂದು ವಾರಗಳ ಕಾಲ ಜರುಗುತ್ತಿರುವುದಾಗಿ ಹಿರಿಯ ಮಹಿಳೆಯರು ಹೇಳುತ್ತಾರೆ. ನಂತರ ಅವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮೂರು-ಎರಡು ದಿನವಿರುತ್ತಿತ್ತು. ಇತ್ತಿತ್ತಲಾಗಿ ಒಂದು ದಿನದ ಒಂದು ಹೊತ್ತಿನ ಮದುವೆ ಜರುಗುತ್ತಿವೆ. ಇನ್ನೂ ಮುಂದೆ ಹೋಗಿ ಮರಾಠಿ ಗೊಂದಲಿಗ ಪ್ರಭಾವದಿಂದಾಗಿ “ಯಾದಿಮೇ ಶಾದಿ” ಕ್ರಮವನ್ನು ಕೆಲವು ಕಡೆ ಅನುಸರಿಸುತ್ತಿರುವುದು ಕಂಡು ಬರುತ್ತದೆ.

ರಕೋತ ಬುಟ್ಟಿ:

ಗೊಂದಲಿಗರ ಜನಾಂಗದಲ್ಲಿ ಮದುವೆ ಸಮಾರಂಭ ವಿಶಿಷ್ಟ ಆಚರಣೆಯಿಂದ ಕೂಡಿದೆ. ಮದುವೆಯ ದಿನದಂದು ಕುಟುಂಬದ ಜೋಯಿಸರು ಮದು ಮಕ್ಕಳನ್ನು “ಸಾಸ್ವಿ-ಕಟ್ಟಿ” (ಮದುವೆಯ ಮಂಟಪದಲ್ಲಿ ವಧುವರರನ್ನು ಕೂಡಿಸುವ ಎತ್ತರದ ಕಟ್ಟೆ) ಮೇಲೆ ಎರಡು ಬಿದರ ಬುಟ್ಟಿಯಲ್ಲಿ ನಿಲ್ಲಿಸುತ್ತಾರೆ. ಸ್ವಸ್ತಿಕ ಬರೆದು ತೆಳುವಾದ ಅರಿವೆಯನ್ನು ವಧು-ವರರ ಮಧ್ಯ ಹಿಡಿದು ಜೋಯಿಸರು ಮಂತ್ರ ಹೇಳುತ್ತಾರೆ. ನಂತರ ಬಟ್ಟೆ ಸರಿಸಿ ವಧು-ವರರು ಪರಸ್ಪರ ಹೂ ಮಾಲೆ ಹಾಕುತ್ತಾರೆ. ಅಕ್ಕಿ, ಜೋಳ, ಬೆರೆಸಿದ ಅಕ್ಷತೆಯನ್ನು ಸಮಾಜದವರು ಅವರ ತಲೆಯ ಮೇಲೆ ಹಾಕಿ ಶುಭ ಹಾರೈಸುತ್ತಾರೆ. ಅನಂತರ ಬುಟ್ಟಿಯಿಂದ ಈಚೆಗೆ ಬಂದು ಒಂದೇ ಬುಟ್ಟಿಯಲ್ಲಿ ನಿಲ್ಲಿಸುತ್ತಾರೆ. ಇದು ಜೀವನದುದ್ದಕ್ಕೂ ಜೊತೆಯಾಗಿ ಬಾಳುವ ಬಾಳಬುಟ್ಟಿಯ ಸಂಕೇತವಾಗಿದೆ. ಮದುವೆಯ ಕೊನೆಯ ವಿಧಿ ಕಣಕದ ದೀಪ ದರ್ಶನ. ಬಿದಿರಿನ ಬುಟ್ಟಿಯ ಅಂಚಿಗೆ ಐದು ಕಡ್ಡಿಗಳನ್ನು ಚುಚ್ಚುತ್ತಾರೆ. ಕಿರಿ ಬೆರಳು ಗಾತ್ರದ ಸುಮಾರು ಮೊಳ ಉದ್ದದ ಐದು ಕಡ್ಡಿ ಸಿಕ್ಕಿಸಿ ಮೇಲೆ ತುದಿಯಲ್ಲಿ ದಾರ ಹಾಕುತ್ತಾರೆ. ಬುಟ್ಟಿಯ ಒಳಗೆ ಕಣಕದ ಪಣತಿ ಇಟ್ಟು, ಅದರ ತುಪ್ಪದ ದೀಪ, ಆ ಬುಟ್ಟಿಯನ್ನು ವಧುವಿನ ಸೋದರ ಮಾವನ ಕೈಯಲ್ಲಿ ಕೊಡುತ್ತಾರೆ. ಆತನಿಗೂ-ಬುಟ್ಟಿಗೂ ದೊಡ್ಡ ಅರಿವೆಯನ್ನು ಮುಚ್ಚುತ್ತಾರೆ. ಸಹಾಯಕರ ಸಹಾಯದಿಂದ ಆತ ನಿಧಾನವಾಗಿ ವಧುವರರಿದ್ದಲ್ಲಿಗೆ ಬರುತ್ತಾನೆ. ಇಬ್ಬರು ಬುಟ್ಟಿಯೊಳಗೆ ಹೋಗುತ್ತಾರೆ. ಅಲ್ಲಿ ತುಪ್ಪದ ದೀಪ ದರ್ಶನ. ಅದರಾಚೆ ಸೋದರ ಮಾವ. ಇದು ವಧು-ವರರಿಗೆ ಸೋದರ ಮಾವನ ರಕ್ಷಣೆಯ ಪ್ರತೀಕ. ಇದಕ್ಕೆ “ರಕೋತ ಬುಟ್ಟಿ” ಆಚರಣೆ ಎನ್ನಲಾಗುತ್ತದೆ.

ಕರಿಲಕ್ಷ್ಮಿ – ಕೆಂಪು ಲಕ್ಷ್ಮಿ

ಈ ಮದುವೆಯ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮನೆಯ “ಕರಿ ಲಕ್ಷ್ಮೀಗೆ” ಪೂಜೆ ಮಾಡುತ್ತಾರೆ. ಒಂದು ಜಗುಲಿಯ ಮೇಲೆ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ವಧು-ವರರ ಬಾಳು ಸುಖಕರವಾಗಲಿ ಎಂದು ದೇವಿಗೆ ಪೂಜೆ ಮಾಡಿ ಹರಕೆಯ ಗಬ್ಬದ ಕುರಿ ಬಲಿ ನೀಡಿ ಮಾಂಸದ ಊಟ ಏರ್ಪಡಿಸುತ್ತಾರೆ. ಇದಕ್ಕೆ ಕರಿ ಲಕ್ಷ್ಮೀಗೆ ಮಾಡುವುದು ಎನ್ನುತ್ತಾರೆ.

ಇನ್ನು ಕೆಲವರ ಮನೆಯಲ್ಲಿ ಕೆಂಪು ಲಕ್ಷ್ಮೀಗೆ ಮಾಡುತ್ತಾರೆ. ಇದರಲ್ಲಿ ದೇವತಾರಾಧನೆ ಒಂದೆಯಾಗಿದ್ದು, ಯಾವುದೇ ಪ್ರಾಣಿ ಬಲಿ ನಿಷಿದ್ದ. ಹೊಳಿಗೆ ಅಥವಾ ಸಿಹಿ ಅಡಿಗೆ ಮಾಡಿ ದೈವಕ್ಕೆ ಎಡೆ ಹಿಡಿದು ದೈವದವರಿಗೆ, ಬಂಧುಗಳಿಗೆ ಹಬ್ಬದೂಟ ಮಾಡಿಸುತ್ತಾರೆ. ಕರಿ ಲಕ್ಷ್ಮೀ-ಮಾಂಸಾಹಾರ ಸಂಕೇತ. ಕೆಂಪು ಲಕ್ಷೀ ಸಸ್ಯಹಾರದ ಸಂಕೇತವಾಗಿರುವುದು ಈ ಬಗ್ಗೆ ಹೆಚ್ಚಿನ ಅಭ್ಯಾಸದ ಅಗತ್ಯವಿದೆ.

ಗೊಂದಲಿಗರ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ವಿಧವಾ ವಿವಾಹಕ್ಕೆ ಅವಕಾಶವಿದೆ. ಮತ್ತು ನಡೆದಿದೆ. ಆದರೆ ಬಹುಪತಿತ್ವಕ್ಕೆ ಅವಕಾಶವಿಲ್ಲ. ವಿವಾಹ ವಿಚ್ಚೇದನಕ್ಕೆ ಅವಕಾಶವಿದೆ. ಆದರೆ ವಿಚ್ಚೇದಿತಳಾದ ಹೆಂಗಸು ತನ್ನ ಗಂಡನಾಗಿದ್ದವನು ಬದುಕಿರುವ ತನಕ ಮತ್ತೆ ಮರು ಮದುವೆಯಾಗುವಂತಿಲ್ಲ ಎಂಬ ಏಕಪಕ್ಷೀಯ ಶಾಸನ ಜಾರಿಯಲ್ಲಿದೆ. ಈ ನಿಯಮವನ್ನು ಅನುಸರಿಸುವುದು ಹೆಣ್ಣಿನ ಧರ್ಮ ಎನ್ನುವಷ್ಟರ ಮಟ್ಟಿನ ನಂಬಿಗೆ ಈ ಸಮುದಾಯದ ಪುರುಷ ಮತ್ತು ಮಹಿಳೆಯರಲ್ಲಿದೆ.

ಬಹುಮಟ್ಟಿಗೆ ಪುರುಷರಿಂದಲೇ ನಿಯಂತ್ರಣಗೊಳ್ಳುತ್ತಲಿರುವ ಈ ಗೊಂದಲಿಗರ ಜೀವನ ನಿರ್ಬಂಧಗಳು ಪುರುಷರ ಪರವಾಗಿದ್ದು ಹೀಗಾಗಿ ಈ ಬುಡಕಟ್ಟು ಸಮುದಾಯದ ಕೆಳಸ್ಥರದಲ್ಲಿ ಬದುಕುತ್ತಿರುವ ಗೊಂದಲಿಗ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಈಗ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಯಾವುದೇ ಪಾಲು ಅಥವಾ ಹಕ್ಕು ಇದ್ದಂತಿಲ್ಲ. ಪುರುಷರನ್ನು ಆಶ್ರಯಿಸಿ ಅನುಸರಿಸಿ ಬದುಕಬೇಕಾದ ಸ್ಥಿತಿ ಇಲ್ಲಿನ ಮಹಿಳೆಯರದ್ದಾಗಿದೆ.

ನ್ಯಾಯ ಪದ್ಧತಿ:

ಗೊಂದಲಿಗರ ಸಮಾಜದಲ್ಲಿ ನ್ಯಾಯ ನಿರ್ಣಯ ಪದ್ಧತಿ ವೈಶಿಷ್ಟ್ಯ ಪೂರ್ಣವಾಗಿದೆ. ಇತರೇ ಮುಂದುವರೆದ ಸಮಾಜಕ್ಕೂ ಮಾದರಿ ಎನ್ನುವಂತಿದೆ. ಜಗತ್ತಿನ ಯಾವುದೇ ದೇಶದ ಸಾಮಾಜಿಕ ಜೀವನ ವಿಧಾನ ಲಕ್ಷಿಸಿದರೆ ನ್ಯಾಯ-ಅನ್ಯಾಯಗಳು, ಕುಟುಂಬ ಅಥವಾ ಸಮಾಜದ ಬೇಧಭಾವಗಳು, ವೈಷಮ್ಯಗಳು ಇದ್ದೇ ಇರುತ್ತವೆ. ಇವುಗಳನ್ನು ಬಗೆಹರಿಸಿಕೊಳ್ಳುವ ವಿಧಾನಗಳು ಜನಾಂಗದಿಂದ ಜನಾಂಗಕ್ಕೆ ಸಮುದಾಯದಿಂದ ಸಮುದಾಯಕ್ಕೆ ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿರುತ್ತವೆ. ಹಾಗೇ ಈ ಗೊಂದಲಿಗರ ಸಮುದಾಯದ ನ್ಯಾಯ ಪದ್ದತಿ ವಿಶಿಷ್ಟವು ಗಮನಾರ್ಹವೂ ಆದುದಾಗಿದೆ.

ಈ ಅಲೆಮಾರಿ ಸಮುದಾಯದ ಯಾವುದೇ ಕುಟುಂಬದ ಜಗಳಗಳಿರಲಿ, ಸಮಾಜದ ಜಗಳಗಳಿರಲಿ ಅದನ್ನು ಈ ಸಮಾಜದ ದೈವದವರು (ಪಂಚರು) ಗೌಡ, ಓಲೇಕಾರ, ಚೇರ್ಮನ್‌ಎಂದು ಪ್ರತಿಷ್ಠಿತ ವ್ಯಕ್ತಿಗಳ ಸಮ್ಮುಖದಲ್ಲಿ ನ್ಯಾಯ ನಿರ್ಣಯ ಮಾಡುತ್ತಾರೆ. ಈ ನ್ಯಾಯ ನಿರ್ಣಯ ಆ ಗ್ರಾಮದ ದೇವಿಯ ಗುಡಿಯಲ್ಲಿ ನಡೆಸಲಾಗುತ್ತದೆ. ಈ ದೈವದವರು ದೇವಿಯ ಹೆಸರಿನಲ್ಲಿ ಪ್ರಮಾಣ ಮಾಡಿ ನ್ಯಾಯ ನಿರ್ಣಯದಲ್ಲಿ ತೊಡಗುತ್ತಾರೆ. ಆಗಿರುವ ಅನ್ಯಾಯ-ನ್ಯಾಯವನ್ನು ಕೂಲಂಕುಷವಾಗಿ ಗುರುತಿಸಿ ಅನ್ಯಾಯ ಗೈದವರಿಗೆ ಸಮಾಜದ ದೈವದವರು ಹಣದ ರೂಪದಲ್ಲಿ ದಂಡ ವಿಧಿಸುತ್ತಾರೆ. ಕೆಲವು ಸಾರಿ ದೈವದವರಿಗೆ, ಇನ್ನು ಕೆಲವು ಸಾರಿ ಸಮುದಾಯ ಸಮಾಜಕ್ಕೆ ಊಟ ಹಾಕಿಸುವ ದಂಡ ವಿಧಿಸುತ್ತಾರೆ. ಇದನ್ನು ಒಪ್ಪಲೇ ಬೇಕು. ಇಲ್ಲವಾದರೆ ಮುಂದಿನ ಮನೆ ನ್ಯಾಯಕ್ಕೆ ಆಹ್ವಾನಿಸುತ್ತಾರೆ. “ಮುಂದಿನ ಮನೆ” ನ್ಯಾಯ ವ್ಯವಸ್ಥೆಯಲ್ಲಿ ತಮ್ಮ ಸಮುದಾಯದ ದೊಡ್ಡ ಸಮಾಜವಿರುವ ಹತ್ತಿರದ ಗ್ರಾಮದಿಂದ ಸಮುದಾಯದ ಹಿರಿಯರನ್ನು ಆ ಗ್ರಾಮದ ಚೇರ್ಮನ್‌, ಓಲೇಕಾರ, ಗೌಡ ಕೆಲವು ಸಂದರ್ಭದಲ್ಲಿ ಸಮುದಾಯದ ಗಣ್ಯ ವ್ಯಕ್ತಿ ಆಹ್ವಾನಿಸಿ, ಅವರ ಸಮ್ಮುಖದಲ್ಲಿ ನ್ಯಾಯ ನಿರ್ಣಯಿಸಲಾಗುತ್ತದೆ. ಇಲ್ಲಿಯೂ ಈ ದೈವದವರ ನಿರ್ಣಯವೇ ಅಂತಿಮ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಏನೆಂದರೆ, ಬೇರೆ ಗ್ರಾಮದಿಂದ ಬರುವ ನ್ಯಾಯ ನಿರ್ಣಯಕರ ಸಾರಿಗೆ ವೆಚ್ಚ, ಊಟ-ಉಪಹಾರದ ವೆಚ್ಚವನ್ನು, ನ್ಯಾಯ ನಿರ್ಣಯದಲ್ಲಿ ತೀರ್ಮಾನವಾಗುವ ತಪ್ಪಿತಸ್ಥರೇ ಭರಿಸಬೇಕಾಗುತ್ತದೆ. ಇಲ್ಲವೆಂದರೆ ಸಮಾಜದಿಂದ ಹೊರಗಿಡುವ ಪದ್ಧತಿ ಇದೆ. ಈ ಮುಂದಿನ ಮನೆ ನ್ಯಾಯ ಪದ್ದತಿ ಕೊಂಚ ವೆಚ್ಚದಾಯಕವಾಗಿರುವುದರಿಂದ ಇದನ್ನು ಭರಿಸುವ ಶಕ್ತಿ ಈ ಸಮುದಾಯದ ಬಹುಸಂಖ್ಯಾತರಲ್ಲಿ ಇಲ್ಲದೆ ಇರುವುದರಿಂದ ಸ್ಥಳೀಯ ಮಟ್ಟದಲ್ಲಿಯೇ ಈ ನಿರ್ಣಯಗಳಾಗುತ್ತವೆ.

ಈ ಸಮಾಜದವರ ನ್ಯಾಯ ನಿರ್ಣಯಗಳನ್ನು “ಕಡ್ಡಿ ನ್ಯಾಯ (ಬೇವಿನ ಕಡ್ಡಿ), ಕವಡಿ ನ್ಯಾಯ, ಅಡಕೆ ನ್ಯಾಯ ಎಂದು ಮೂರು ವಿಧ ನ್ಯಾಯ ಪದ್ಧತಿ ಇವೆ. ಕೆಲವು ಭಾಗಗಳಲ್ಲಿ “ಮೀಸಿಯ” ನ್ಯಾಯವೂ ಇದೆ. ಒಟ್ಟಿನಲ್ಲಿ ಗೊಂದಲಿಗರ ಸಮುದಾಯದಲ್ಲಿ ಬಡಿದಾಟ, ಹೊಡೆದಾಟ, ಜಗಳಾಟಗಳಾದರೂ “ವ್ಯಕ್ತಿಯು ಊನಾಗುತ್ತದೆ ಹೊರತು ಖೂನ ಆಗುವುದಿಲ್ಲ” ಎಂಬುದು ಈ ಸಮುದಾಯದ ನ್ಯಾಯ ಪದ್ದತಿ ವೈಶಿಷ್ಟ್ಯವನ್ನು ಎತ್ತಿ ತೋರುತ್ತದೆ. ಅಲೆಮಾರಿ ಸಮುದಾಯದ ಅತ್ಯಂತ ಹಿಂದುಳಿದ ಸಮಾಜವೊಂದು ಇಲ್ಲಿಯವರೆಗೆ ಪೋಲಿಸ್‌ಠಾಣೆ, ಕೋರ್ಟ್‌ಕಚೇರಿ ಮೆಟ್ಟಿಲು ಹತ್ತದೆ ತನ್ನ ತಂಟೆ ತಕರಾರುಗಳನ್ನು ತಾನೇ ಬಗೆಹರಿಸಿಕೊಳ್ಳುವ ಮೂಲಕ ಇತರ ಸಮಾಜದವರಿಗೆ ಮಾದರಿಯಾಗಿದೆ. “ನಮ್ಮವ್ವ ಅಂಬಾಭವಾನಿ”, “ದುರ್ಗಮ್ಮನ ಎದುರೆ ಎಲ್ಲಾ ನ್ಯಾಯ-ಅನ್ಯಾಯ ನಿರ್ಣಯ ಆಗಬೇಕು. ಸುಳ್ಳು, ಮೋಸ, ಕಳ್ಳತನ ವೈಭಿಚಾರದಿಂದ ಹಿಡಿದು ಯಾವುದೇ ಜಗಳ ತಂಟೆ ತಕರಾರುಗಳಿದ್ದರೂ ದೇವಿಯ ಮುಂದೆ ಬಗೆ ಹರಿಯಬೇಕು. ಇದಕ್ಕೆ ವಿರುದ್ದವಾಗಿ ಯಾರಾದ್ರೂ ಕೋರ್ಟ್‌ಕಚೇರಿ ಅಂತ ಹೋದರೆ ಸಮಾಜದಿಂದ ಅಥವಾ ಕುಲದಿಂದ ಹೊರಗಿಡುತ್ತಾರೆ, ದಂಡ ಹಾಕುತ್ತಾರೆ. ಇದು ನಮ್ಮ ಪೂರ್ವಜ ಕಾಲದಿಂದ ನಡೆದುಕೊಂಡು ಬಂದ ಪದ್ದತಿ ಎಂಬುದು ಈ ಸಮುದಾಯದ ಹಿರಿಯರ ಅಭಿಪ್ರಾಯ.

ಈ ನ್ಯಾಯ ನಿರ್ಣಯಗಳು ದೇವತೆಯ ಸಮ್ಮುಖದಲ್ಲಿ ಜರುಗಿದರೂ ನ್ಯಾಯ ನಿರ್ಣಯ ತಂಡದಲ್ಲಿ ಒಬ್ಬರೂ ಮಹಿಳೆಯೂ ಇಲ್ಲದಿರುವುದು ಪುರುಷ ಪ್ರಧಾನ ವ್ಯವಸ್ಥೆಯ ನಿಯಂತ್ರಣ. ಈ ಸಮುದಾಯದ ಮಹಿಳೆಯರ ಮೇಲೆ ಯಾವ ಮಟ್ಟಿಗೆ ಇದೆ ಎಂಬುದು ಊಹಿಸಬಹುದಾಗಿದೆ. ಈ ನ್ಯಾಯ ನಿರ್ಣಯದಲ್ಲಿ ಮಹಿಳೆಯರು ಸಾಕ್ಷಿ ಹೇಳಬಹುದೇ ಹೊರತು ಅಪರಾಧಿ ಅಥವಾ ನಿರಪರಾಧಿ ಪರವಾಗಿ ವಾದ ಮಾಡುವಂತಿಲ್ಲ ಎಂಬ ಕಟ್ಟಪ್ಪಣೆ ಇದೆ. ಇದರಿಂದ ಅಸಹಾಯಕ ಬದುಕು, ಸ್ವಾತಂತ್ರ ನಿರ್ಬಂಧಿತ ಜೀವನ ಶೈಲಿ, ಪುರುಷ ಕೇಂದ್ರಿತ ನಿಬಂಧನೆಗಳು ಈ ಸಮುದಾಯದ ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿವೆ.

ಆಹಾರ ಪದ್ಧತಿ:

ಗೊಂದಲಿಗರು ಮಾಂಸಹಾರ ಮತ್ತು ಸಸ್ಯಹಾರ ಎರಡು ಪದ್ಧತಿ ಆಹಾರ ಕ್ರಮ ಹೊಂದಿದವರಾಗಿದ್ದಾರೆ. ಈಗ ಬಹುಮಟ್ಟಿಗೆ ಈ ಸಮುದಾಯದ ಎಲ್ಲ ಕುಟುಂಬಗಳು ಸಸ್ಯಾಹಾರವನ್ನು ಅವಲಂಭಿಸಿವೆ. ಹಬ್ಬ, ಜಾತ್ರೆ, ಬೀಗರು ಬಂದಾಗ ಮತ್ತು ಅತಿಥಿಗಳನ್ನು ಮನೆಗೆ ಆಹ್ವಾನಿಸಿದಾಗ ಮಾಂಸಾಹಾರ ಸೇವಿಸುತ್ತಾರೆ. ಆದುದರಿಂದ ಗೊಂದಲಿಗರ ಮಹಿಳೆಯರು ಈ ಎರಡು ತೆರನಾದ ಆಹಾರ ಸಿದ್ಧಪಡಿಸುವಲ್ಲಿ ಸಿದ್ಧಹಸ್ತರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಲಿಂಗಾಯತ ಗೊಂದಲಿಗ ಜನಾಂಗವಿದ್ದು, ಇವರ ಆಹಾರ ಪದ್ಧತಿ ಸಂಪೂರ್ಣ ಸಸ್ಯಾಹಾರವಾಗಿದ್ದು, ಇವರಲ್ಲಿ ಮಾಂಸಹಾರ ನಿಷಿದ್ಧವಾಗಿದೆ.

ಸಸ್ಯಹಾರ ಆಹಾರ:

ಉತ್ತರ ಕರ್ನಾಟಕದ ಗೊಂದಲಿಗ ಮಹಿಳೆಯರು ಸಾಮಾನ್ಯಾವಾಗಿ ರೊಟ್ಟಿ, ಪಲ್ಲೆ, ಒನಗಿಗಳು (ಭಾಜಿಗಳು), ಚಟ್ಟಗಳು (ಚಟ್ನಿಗಳು) ಕಿಚಡಿ, ಅನ್ನ, ಸಾರು (ಸಾಂಬಾರು), ವಿಶೇಷ ಸಂದರ್ಭಗಳಲ್ಲಿ ಹೊಳಿಗೆ, ಕಡಬು, ಹುಗ್ಗಿ ಇತ್ಯಾದಿ ಶಾಖಾಹಾರ ಸಿದ್ಧಪಡಿಸವಲ್ಲಿ ಸಿದ್ಧ ಹಸ್ತರು ಹೈನದ ಪ್ರಮಾಣ ಕಡಿಮೆ. ಗೋದಿಯ ಚಪಾತಿಯನ್ನು ವಿಶೇಷ ಸಂದರ್ಭದಲ್ಲಿ ಬಳಸುತ್ತಾರೆ. ಜೋಳದ ರೊಟ್ಟಿ, ರಾಗಿಯ ರೊಟ್ಟಿ, ಅಕ್ಕಿಯ ರೊಟ್ಟಿ, ಗೋವಿನ ಜೋಳದ ರೊಟ್ಟಿ, ಗೋಧಿಯ ರೊಟ್ಟಿ (ಚಪಾತಿ) ಮಾಡುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮಣ್ಣಿನ ಗಡಿಗೆಯಲ್ಲಿಯೇ ಒನಗಿಗಳನ್ನು (ಬಾಜಿಗಳನ್ನು) ತಯಾರಿಸುವುದು ಆರೋಗ್ಯಕರ ಎಂಬುದು ಈ ಮಹಿಳೆಯರ ಭಾವನೆ. ಅಲ್ಯುಮಿನಿಯಂ ಬಾಂಡೆಗಳಲ್ಲಿ ಅಡುಗೆ ರುಚಿಯಾಗುವುದಿಲ್ಲವೆನ್ನುತ್ತಾರೆ. ದಕ್ಷಿಣ ಕರ್ನಾಟಕದ ಗೊಂದಲಿಗರ ಮಹಿಳೆಯರು ರಾಗಿ ಮುದ್ದೆ, ಅನ್ನ, ಬಾಡದೂಟ (ಮಾಂಸ) ತಯಾರಿಸುತ್ತಾರೆ. ಬಾಡದೂಟವೆಂದರೆ ಇವರಿಗೆ ಒಂದು ಹಬ್ಬದ ಸಂಭ್ರಮ. ಉಳಿದಂತೆ ಅನ್ನ ಸಾರು ಹೆಚ್ಚು ಬಳಸುತ್ತಾರೆ.

ಮಾಂಸದ ಆಹಾರ:

ಮಾಂಸದ ಅಡುಗೆ ಸಿದ್ಧಪಡಿಸುವುದು ಅತೀ ಸುಲಭದ ವಿಧಾನವೆಂದು ಈ ಸಮುದಾಯದ ಮಹಿಳೆಯರು ತಿಳಿಯುತ್ತಾರೆ. ಸಾಮಾನ್ಯವಾಗಿ ಆಡು, ಕುರಿ, ಹೋತ, ಟಗರುಗಳ ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ದನದ ಮಾಂಸ ನಿಷಿದ್ಧವಾಗಿದೆ. ಉಳಿದಂತೆ ಕೋಳಿ, ಹುಂಜದ ಊಟವು ಇವರಿಗೆ ಪ್ರಿಯವಾದುದಾಗಿದೆ. ಆಷಾಡ ಮಾಸದಲ್ಲಿ ಹೆಚ್ಚಿಗೆ ಮಾಂಸಹಾರಿಗಳಾಗುವರು. ಸಿಹಿಗಿಂತ ಖಾರದ ಊಟ ಸಿದ್ಧಪಡಿಸುವಲ್ಲಿ ಈ ಮಹಿಳೆಯರ ಕೌಶಲ್ಯ ವಿಶೇಷವಾಗಿದೆ.

ಮಹಿಳೆಯರ ವೃತ್ತಿಗಳು:

ಗೊಂದಲಿಗರ ಸಮುದಾಯದಲ್ಲಿ ಅವರು ಗೊಂದಲ ಹಾಕುವವರಿರಲಿ, ಬುಡಬುಡಕಿ, ಸಿಂಗದರು, ಭಾಟರು, ವಾಸುದೇವರು, ಚಿತ್ರಪಟದವರು, ಗಿಳಿಶಾಸ್ತ್ರದವರು,  ಎಣ್ಣೆ ಜೋಗಿ, ಜೋತಿಷಿಗಳು, ಕಥೋಪಜೀವಿಗಳು, ಯಾರೇ ಇರಲಿ ಇವರ ತಮ್ಮ ಕುಲ ಕಸುಬುಗಳಿಂದ ಜೀವನ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಒಂದು ಕಡೆ ಅನಕ್ಷರಸ್ಥರು, ಸ್ಥಿರ ಆಸ್ತಿ ಹೊಂದದವರು, ಬದುಕಿನ ಯಾವುದೇ ಭದ್ರತೆ ಇಲ್ಲ. ಈ ಜನಾಂಗ ನಿರಂತರ ಅಲೆಮಾರಿ ಜನಾಂಗವಾಗಿರುವುದರಿಂದ ತಮ್ಮ ಕುಲದ ವೃತ್ತಿಯಿಂದ ಬಂದ ಆದಾಯದಿಂದ ಜೀವನ ನಿರ್ವಹಣೆ ಸಾಧ್ಯವಿಲ್ಲದ್ದನ್ನು ಅರಿತು ಅನೇಕ ಉಪವೃತ್ತಿಗಳನ್ನು ಅವಲಂಬಿಸಿದ್ದಾರೆ. ಗೊಂದಲಿಗರ ಕಲೆ, ಸಂಪ್ರದಾಯ, ಪರಂಪರೆ ಉಳಿಸುವ, ಅದನ್ನು ಸಮಾಜಮುಖಿಗೊಳಿಸುವ ಕಾರ್ಯದಲ್ಲಿ ಪುರುಷರಷ್ಟೇ ಮಹಿಳೆಯರು ಭಾಗಿಗಳಾಗಿದ್ದಾರೆ. ತಮ್ಮ ಉಪ ಜೀವನದ ಉಪವೃತ್ತಿಯನ್ನು ಅವಲಂಭಿಸಿ ಈ ಗೊಂದಲಿಗರ ಮಹಿಳೆಯರು ಸಂಸಾರ ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎನ್ನು ತೆರದಿ ವೃತ್ತಿ ಮತ್ತು ಉಪವೃತ್ತಿ ಸಮಸಮವಾಗಿ ಈ ಗೊಂದಲಿಗರ ದಂಪತಿಗಳು ನಿರ್ವಹಿಸಿಕೊಂಡು ಬಂದರೆಂದೆ ಇಂದಿಗೂ ಕಥೋಪಜೀವಿಗಳಾದ ಅಪೂರ್ವ ಜಾನಪದ ಕಲೆಯ ವಾರಸುದಾರರಾದ ಇವರನ್ನು ಮೂಲಸ್ಥಿತಿಯಲ್ಲಿ ಕಾಣಲು ಸಾಧ್ಯವಾಗಿದೆ. ಈ ಕಲೆಯನ್ನು ಮತ್ತು ಕಲಾಕೌಶಲ್ಯದಿಂದ ಕೂಡಿದ ಉಪವೃತ್ತಿಗಳನ್ನು ಇಂದಿಗೂ ಉಳಿಸಿಕೊಂಡು ಬೆಳೆಸಿಕೊಂಡು ಬರುವಲ್ಲಿ ಈ ಮಹಿಳೆಯರ ಪಾಲು ಗಣನೀಯವಾಗಿದೆ.

ಆರ್ಥಿಕ ಕ್ರೂಢೀಕರಣ-ಮಹಿಳೆ:

ಈ ಸಮುದಾಯದಲ್ಲಿ ಪುರುಷರು ಕುಲಕಸುಬನ್ನು ನಿರ್ವಹಿಸಲು ಗ್ರಾಮಗಳ ಮನೆ ಮನೆಗೆ ತೆರಳಿದರೆ ಮನೆಯಲ್ಲಿ ಮಹಿಳೆ, ಅಡುಗೆ ಮಾಡುವುದು, ಮಕ್ಕಳು ಮತ್ತು ಸಾಕು ಪ್ರಾಣಿಗಳ ರಕ್ಷಣೆ, ಬಿಡುವಿನ ವೇಳೆಯನ್ನು ತಮ್ಮ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣಕ್ಕಾಗಿ ದುಡಿಯುತ್ತಾರೆ. ಕೌದಿ ಹೊಲಿಯುವುದು ಇವರ ಪ್ರಮುಖ ಉಪವೃತ್ತಿಯಾಗಿದೆ. ಇದು ಈ ಸಮುದಾಯ ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದೆ. ಇತರ ಜೀವನಾವಲಂಬಿ ಉಪವೃತ್ತಿಗಳಿಗಿಂತ ಈ ಕೌದಿ ಹೊಲಿಯುವುದನ್ನು ಅತ್ಯಂತ ಅಭಿಮಾನ ಹಾಗೂ ಗೌರವದ ಕೆಲಸವೆಂದು ಭಾವಿಸಿಕೊಂಡಿದ್ದಾರೆ. ಗೊಂಧಳಿ ಸಮುದಾಯದ ಮಟ್ಟಿಗೆ ಬಣ್ಣ ಬಣ್ಣ ಚಿತ್ತಾರದ ಕೌದಿ ಈ ಜನರ ಬೆಚ್ಚನೆಯ ಬದುಕಿಗೆ ಕಾರಣವಾಗಿದೆ.

ಕೌದಿ:

ಈ ಗೊಂದಲಿಗರ ಮಹಿಳೆಯರ ಪ್ರಧಾನ ವೃತ್ತಿ ಮತ್ತು ಕುಲಕಸುಬು “ಕೌದಿ” ಹೊಲಿಯುವುದಾಗಿದೆ. ಈ ವೃತ್ತಿ ಹೆಚ್ಚು ಶ್ರಮದಾಯಕವೂ, ಬಹಳಷ್ಟು ಸಮಯ ಹಿಡಿಯುವ, ಅಷ್ಟೇನು ಲಾಭದಾಯಕವಲ್ಲದ ಈ ಸಮುದಾಯದ ಕುಲ ಕಸುಬಾಗಿದೆ. ಮಹಿಳೆಯರು ತಮ್ಮ ಮನೆಯಲ್ಲಿಯೇ ಅಥವಾ ತಮ್ಮ ಗುಡಿಸಲಿನಲ್ಲಿಯೇ ಅಥವಾ ತಮ್ಮ ಬಿಡಾರದ ಸ್ಥಳದಲ್ಲಿಯೇ ಕುಳಿತು ಹೊಲಿಯುವ ಮೂಲಕ ಅಲ್ಪ ಆದಾಯವನ್ನು ಈ ಮಹಿಳೆಯರು ಪಡೆಯುತ್ತಾರೆ. ತಾವು ವಾಸಿಸುವ ಅಥವಾ ಬಿಡಾರ ಹೂಡಿರುವ ಗ್ರಾಮ ಅಥವಾ ಸುತ್ತಮುತ್ತಲಿನ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಮನೆ ಮನೆಗಳಿಗೆ ಅಲೆದು ಹಳೆ ಸೀರೆ, ಪಂಚೆ, ಉಟ್ಟು ಬಿಟ್ಟ ಅರಿವೆಗಳನ್ನು ಸಂಗ್ರಹಿಸಿ ಕೌದಿ ಹೊಲಿಯುತ್ತಾರೆ.

“ಕೌದಿ” ಬಗೆಗೆ ಆಸಕ್ತಿ ಇರುವ ಅನೇಕ ಕುಟುಂಬಗಳು ತಮ್ಮ ಮನೆಯಲ್ಲಿ ಇರುವ ಹಳೆ ಅರಿವೆ ಕೊಟ್ಟು ಕೌದಿಯನ್ನು ಈ ಸಮುದಾಯದ ಮಹಿಳೆಯರಿಂದ ಹೊಲಿಸಿಕೊಳ್ಳುತ್ತಾರೆ. ಹೀಗೆ ಹೊಲಿದ ಕೌದಿಗೆ ಮೊಳ ಒಂದಕ್ಕೆ ೧೫ರಿಂದ ೨೦ ರೂ. ಕೂಲಿ ಪಡೆಯುತ್ತಾರೆ. ದೊಡ್ಡವರಿಗಾಗಿ ನಾಲ್ಕೂವರೆ ಮೊಳ, ಆರು ಮೊಳ, ಮಕ್ಕಳಿಗಾಗಿ ಕೂಸಿನ ಕೌದಿ ಹೊಲಿದು ಜೀವನ ಸಾಗಿಸುವಂಥ ಅನೇಕ ಮಹಿಳೆಯರು ಕರ್ನಾಟಕದಾದ್ಯಂತ ಕಾಣಬರುತ್ತಾರೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ಹುನುಗಂದ ತಾಲೂಕಿನ ಕೋಡಿಹಾಳ ಗ್ರಾಮದಲ್ಲಿ ಎರಡನೂರಕ್ಕಿಂತ ಹೆಚ್ಚು ಕುಟುಂಬಗಳು ಕೌದಿ ಹೊಲಿಯುವ ಕೆಲಸವನ್ನೇ ಅವಲಂಭಿಸಿದ್ದಾರೆ. “ಅಜ್ಜಾ ಅರತಲಿ ಮುತ್ತ್ಯಾ ಮೂರತಲಿ” ಇಂದಲೂ ಈ ಉಪವೃತ್ತಿಯನ್ನು ಅವಲಂಬಿಸಿ ಬದುಕು ಮಾಡುತ್ತಿರುವುದಾಗಿ ಕೋಡಿಹಾಳದ ಅಂಬವ್ವತಾಯಿ ಕೊಂಡೆಕರ, ನರಸಮ್ಮ ವಾಸರ್, ಎಲ್ಲಮ್ಮ ಸಿಂದೆ ಮತ್ತಿತರರು ಹೇಳುತ್ತಾರೆ. ಈ ಗ್ರಾಮದ ಗೊಂದಲಿಗರ ಮಹಿಳೆಯರು ತಮ್ಮ ಹಿರಿಯರ ಕಾಲದಿಂದಲೂ ತಮ್ಮ ಸುತ್ತಮುತ್ತಲಿನ ಹಳ್ಳಿಗಳನ್ನು ಹಂಚಿಕೊಂಡು ಆಯಾ ಹಳ್ಳಿಗಳ ಜನರ ಬೇಡಿಕೆಗೆ ಅನುಗುಣವಾಗಿ ಕೌದಿ ಹೊಲಿದು ಕೊಡುತ್ತಾರೆ. ಹೀಗೆ ೧೫ ದಿವಸಕ್ಕೆ ಒಂದು ಕೌದಿ ಹೊಲಿದು ಕೊಟ್ಟು ಅವರಿಂದ ೬೦ರಿಂದ ೮೦ ರೂ. ಕೂಲಿ ಪಡೆದು ಕುಟುಂಬದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣದಲ್ಲಿ ಭಾಗಿಗಳಾಗಿದ್ದಾರೆ. ಇವರಲ್ಲಿ ಈ ಕೌದಿ ವೃತ್ತಿ ಬಿಟ್ಟು ಬಾಂಡೆ ವ್ಯಾಪಾರ ಇತ್ಯಾದಿ ವೃತ್ತಿ ಅವಲಂಭಿಸುವ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ. ತಮ್ಮ ಸಮುದಾಯದ ಕುಲಕಸುಬು ಕೌದಿ ಹೊಲಿಯುವುದೇ ಆಗಿದೆ ಎಂದು ಇವರ ನಂಬುಗೆ. ಈ ಕೌದಿ ವಿವಿಧ ಬಣ್ಣದ, ತಮ್ಮ ಕುಟುಂಬದ ಸದಸ್ಯರು ಧರಿಸುತ್ತಿದ್ದ ಬಟ್ಟೆಗಳ ತುಂಡುಗಳಿಂದ ಕಲಾತ್ಮಕವಾಗಿ ಹೆಣಿಗೆ ಮಾಡಲಾಗಿದ್ದು ಜನರಿಗೆ ಚಿತ್ತಾಕರ್ಷಕವಾದ ಕೌದಿ ಜಾಗತೀಕರಣ, ಉದಾರೀಕರಣದ ಈ ಸಂದರ್ಭದಲ್ಲಿಯೂ ಉಳಿದುಕೊಂಡು ಬಂದಿರುವುದು ಗೊಂದಲಿಗ ಮಹಿಳೆಯರಿಂದಲೇ ಇತ್ತೀಚೆಗೆ ಇದೊಂದು ಉದ್ಯಮವಾಗುವ ಎಲ್ಲ ಲಕ್ಷಣಗಳು ಕಾಣಬರುತ್ತಿವೆ.

ಬಾಂಡೆ ವ್ಯಾಪಾರ

ಈ ಸಮುದಾಯದ ಇನ್ನೊಂದು ಉಪವೃತ್ತಿ ಬಾಂಡೆ ಮಾರುವುದಾಗಿದೆ. ಪ್ರಾಯಶಃ ಇದು ಇವರ ಕುಲಕಸುಬು ಆಗಿರದೆ ಜೀವನ ನಿರ್ವಹಣೆ ಅವಲಂಭಿಸಿರುವ ಉಪವೃತ್ತಿಯಾಗಿದೆ. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈ ಸಮುದಾಯ ದೈನಂದಿನ ಜೀವನ ನಿರ್ವಹಣೆಯು ಕಷ್ಟದಾಯಕವಾಗಿದ್ದ ಕಾಲದಲ್ಲಿ ಬಾಂಡೆ ವ್ಯಾಪಾರದಿಂದ ಬಂದ ಆದಾಯದ ಜೀವನ ಸಾಗಿಸುತ್ತಾ ಬಂದಂತೆ ತೋರುತ್ತದೆ. ಸಗಟು ವ್ಯಾಪಾರಿಗಳಿಂದ ಬಾಂಡೆ ಉದ್ರಿ ಪಡೆದು ಹಳ್ಳಿ ಹಳ್ಳಿಗೆ ಹೋಗಿ, ಮನೆ ಮನೆಗಳ ಬಾಗಿಲಿಗೆ ಬಂದು “ಸಿಲ್ವರ್” ಅಥವಾ “ಸಿಲಾವಾರ” ಬಾಂಡೆ ವ್ಯಾಪಾರ ಮಾಡುವ ಸಂಚಾರಿ ಜೀವನ ಈ ಸಮುದಾಯದ ಇನ್ನು ಕೆಲ ಮಹಿಳೆಯರದ್ದಾಗಿದೆ. ವಾಹನ ಸೌಕರ್ಯ ಅಷ್ಟಾಗಿ ಇರದ ಹಳ್ಳಿಗಳಿಗೆ ಹೋಗಿ ಸಾಮಾನ್ಯವಾಗಿ ಹಳ್ಳಿಯ ಕೂಲಿಕಾರರಿಗೆ, ಮಧ್ಯಮ ವರ್ಗದವರಿಗೆ ದಿನನಿತ್ಯ ಉಪಯೋಗಿಸುವ ಬಾಂಡೆ ಹೊತ್ತು ತಂದು ಮಾರುತ್ತಾರೆ. ಕೆಲವು ಸಂದರ್ಭದಲ್ಲಿ ಉದ್ರಿ ಕೊಡುತ್ತಾರೆ. ಮುಂದಿನ ಸರಿ ವ್ಯಾಪಾರಕ್ಕೆ ಬಂದಾಗ ಈ ಹಣ ಸಂಗ್ರಹಿಸಿಕೊಳ್ಳುತ್ತಾರೆ. ಈ ಬಾಂಡೆ ವ್ಯಾಪಾರವೇ ಈ ಮಹಿಳೆಯರಿಗೆ ಒಂದು ವರವಾಗಿ ಪರಿಣಮಿಸಿದೆ. ತಕ್ಕಮಟ್ಟಿನ ಲಾಭವನ್ನು ತಂದುಕೊಟ್ಟಿದೆ. ಮಹಿಳೆಯರು ತಮ್ಮ ಕುಟುಂಬದ ಪುರುಷರೊಡನೆ ಅಂದರೆ, ಗಂಡ, ಮೈದುನ, ಮಾವ, ಅಣ್ಣ ಅಥವಾ ತಮ್ಮಂದಿರೊಡನೆಯೂ ಈ ವ್ಯಾಪಾರದಲ್ಲಿ ಪಾಲ್ಗೊಳ್ಳುತ್ತಾರೆ. ಈ ವೃತ್ತಿಯನ್ನು ಬಹುಶಃ ಸ್ವಾತಂತ್ರ್ಯ ನಂತರ ಭಾರತದ ಜೀವನ ಶೈಲಿ ಬದಲಾಗ ಹಾಗೆ, ಅದಕ್ಕೆ ಅನುಸರಿಸಿ ಈ ಸಮುದಾಯದ ಮಹಿಳೆಯರು-ಪುರುಷರು ಬಾಂಡೆ ವ್ಯಾಪಾರದಂಥ ಲಾಭದಾಯಕ ವೃತ್ತಿ ಅವಲಂಭಿಸಿರುವುದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಕಂಡು ಬರುತ್ತದೆ. ಪಟ್ಟಣ-ನಗರ ಪ್ರದೇಶಗಳಲ್ಲಿ ಈ ಸಮುದಾಯದ ಬೆರಳೆಣಿಕೆಯಷ್ಟು ಜನರು ಈ ಬಾಂಡೆ ವ್ಯಾಪಾರವನ್ನೆ ಅವಲಂಭಿಸಿ ಲಕ್ಷಾಂತರ ರೂಪಾಯಿಗಳ ವಹಿವಾಟು ಮಾಡುತ್ತಿದ್ದಾರೆ. ಬಹುಮಟ್ಟಿನ ಈ ಗೊಂದಲಿಗ ಮಹಿಳೆಯರು ಪಟ್ಟಣದ ಕೊಳಚೆ ಪ್ರದೇಶಗಳಲ್ಲಿಯೋ, ಹಳ್ಳಿಗಳ ಗುಡಿ ಗುಂಡಾರಗಳಲ್ಲೋ ವಾಸವಾಗಿ ಬಾಂಡೆ ವ್ಯಾಪಾರವನ್ನು ಮಾಡುತ್ತಿದ್ದಾರೆ. ಆದರೆ ಈ ವ್ಯಾಪಾರದಿಂದ ದಿನನಿತ್ಯದ ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಈ ವ್ಯಾಪಾರದಿಂದ ಕೆಲವು ಸಾರಿ ಒಂದು ದಿನದ ಹಸಿವನ್ನು ಹಿಂಗಿಸುವುದು ಸಾಧ್ಯವಾಗುವುದಿಲ್ಲ. ಹಬ್ಬ, ಜಾತ್ರೆ, ಉತ್ಸವಗಳನ್ನು ಸಂತೋಷದಿಂದ ಆಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಈ ಮಹಿಳೆಯರದ್ದಾಗಿದೆ. “ಸಾಲ ಸೂಲ ಮಾಡಿ ದಿನ ನಿತ್ಯ ವ್ಯಾಪಾರ ಮಾಡಿ ಬಂದರೂ ಹೊಟ್ಟೆ ತುಂಬೋದಿಲ್ಲ. ನಮ್ಮ ಗೊಂದಳಿ, ಗೊಂದಲಿಗರ ಹೆಣ್ಣುಮಕ್ಕಳ ಜೀವನ ಶಾಪದ ಜೀವನ. ನಮಗೆ ಯಾವುದೋ ಶಾಪ ಇದ್ದಂಗೈತಿ” ಎಂಬುದು ತಮ್ಮ ದಯನೀಯ ಮತ್ತು ಶೋಚನೀಯ ಸ್ಥಿತಿಯನ್ನು ಕರ್ನಾಟಕದ ಗಡಿ ಭಾಗವಾಗಿರುವ ಸಂಕೇಶ್ವರದ ಸಾವಿತ್ರಿ ಬೋಸ್ಲೆ ಹಾಗೂ ಸತ್ಯವ್ವ ಗೆಂದಲೇ ಅವರ ಒಡಲಾಳದ ನೋವಾಗಿದೆ.

ಇತರ ವೃತ್ತಿಗಳು:

ಈ ಗೊಂದಲಿಗರ ಸಮುದಾಯದ ಉಪ ಪಂಗಡದವರಾದ ಬುಡಬುಡಕಿ, ಜೋಷಿ, ದೋಸಿಗೇರ ಮುಂತಾದ ಪಂಗಡದ ಜನ ತಮ್ಮ ಕುಲಕಸುಬಿನಿಂದಲೇ ಜೀವನ ನಿರ್ವಹಿಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಅನೇಕ ಆಧುನಿಕ ವ್ಯಾಪಾರವನ್ನು ಅವಲಂಭಿಸುತ್ತಾರೆ. ಇದರಲ್ಲಿ ಈ ಸಮುದಾಯದ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಆಧುನಿಕ ಅಲಂಕರಣ ಸಾಮಾನುಗಳಾದ ಹೇರಪಿನ್‌, ಸೂಜಿ, ದಾರ, ಸ್ನೋ ಪೌಡರ್, ರಿಬ್ಬನ್‌, ಹಣಿಗೆ, ಕನ್ನಡಿ, ಕುಂಕುಮ, ಕರಡಿಗೆ ಬಟ್ಟಲು ಇತ್ಯಾದಿ ವ್ಯಾಪಾರ ಮಾಡಿ, ಅಲ್ಪ ಆದಾಯ ಪಡೆಯುತ್ತಾರೆ. ಇನ್ನು ಕೆಲವರು ಬಾಂಡೆ ಕಲಾಯಿ ಮಾಡುವುದು, ಚುರಮುರಿ, ಪೇಡಾ, ಶರಬತ್‌, ಭರಣಿ, ಕಾಟನ್‌ವೇಸ್ಟ್ ಕಾಜಿನ ಕಪ್ಪು, ಸಾಸರ, ಬಳೆ ವ್ಯಾಪಾರ ಮಾಡಿ ಜೀವನ ಸಾಗಿಸಿ ಎರಡು ಹೊತ್ತಿನ ಊಟ ಸಂಪಾದಿಸುತ್ತಾರೆ. ಮತ್ತು ಕೆಲವರು ಕೈಯಲ್ಲಿ ಒಂದು ಕೊಳವೆ ಹಿಡಿದು ಕಣ್ಣ ಸ್ವಚ್ಚ ಮಾಡುವ, ಕಣ್ಣಿನಲ್ಲಿ ಬಿದ್ದಿರುವ ಹರಳನ್ನು ತೆಗೆಯುವ ಕೆಲಸದಿಂದಲೂ ಅಲ್ಪ ಆದಾಯ ಸಂಪಾದಿಸುತ್ತಾರೆ. ಇನ್ನು ಇತ್ತೀಚೆಗೆ ಕೆಲವರು ಕೃಷಿ ಕಾರ್ಮಿಕರಾಗಿ ಕೂಲಿ ಕೆಲಸ ಮಾಡಿ ಮನೆ ಕಟ್ಟಡದ ಕೂಲಿ ಕೆಲಸಗಾರರಾಗಿಯೂ ಆರ್ಥಿಕ ಸಂಪನ್ಮೂಲ ಸಂಗ್ರಹಿಸುತ್ತಾರೆ.

ಗೊಂದಲ ಹಾಕಿದಾಗ, ಶಕುನ ಹೇಳಿದಾಗ ಸಿಗುವ ಗೌರವ ಸಂಭಾವನೆ, ದಕ್ಷಿಣೆ, ಅಲ್ಪ. ಕೆಲವು ಸಂದರ್ಭಗಳಲ್ಲಿ ಕಾಳು-ಕಡಿ ಕೊಡಲಾಗುತ್ತದೆ. ಇವು ಸಾಂದರ್ಭಿಕ ಧಾರ್ಮಿಕ ಕಾರ್ಯಗಳಾಗಿರುವುದರಿಂದ ದಿನಂಪ್ರತಿ ಗೊಂದಲ ಹಾಕಿಸುವವರು ಸಿಗುವುದು ಸಾಧ್ಯವಿಲ್ಲ. ಆದ್ದರಿಂದ ಉಳಿದ ದಿನಗಳಲ್ಲಿ ಗೊಂದಲಿಗರ ಮಹಿಳೆಯರು-ಪುರುಷರು ಕೈಯಲ್ಲಿ ಚೌಡಕಿ ಹಿಡಿದು ದೇವಿ ಮಹಾತ್ಮೆಯ ಹಾಡು-ಕತೆಗಳನ್ನು ಹೇಳಿ, ಮನೆ ಮನೆ ಓಣಿ ಓಣಿ ಸುತ್ತಿ ಭಿಕ್ಷೆ ಪಡೆಯುತ್ತಾರೆ. ಭಿಕ್ಷೆ ಬೇಡುವುದು ಕುಲ ಕಸುಬು ಎಂದೇ ಮಹಿಳೆಯರು ಭಾವಿಸಿದ್ದಾರೆ. ಹಾಗೆಯೇ ಭಿಕ್ಷೆ ನೀಡುವವರು ಅಂಬಾಭವಾನಿಯ ಪ್ರತಿ ಸ್ವರೂಪವೇ ಈ ಗೊಂದಲಿಗರ ಎಂಬ ಭಾವದಿಂದ ಭಿಕ್ಷೆ ನೀಡುತ್ತಾರೆ.

ಅಲೆಮಾರಿಗಳಾದ ಈ ಜನಾಂಗದ ಮಹಿಳೆಯರು ಬಸುರಿಯಾದಾಗ ಪೂರ್ವಭಾವಿ ವಿಶ್ರಾಂತಿ ದಿನಗಳೇನು ಇರುವುದಿಲ್ಲ. ಶ್ರಮಜೀವಿಗಳಾದ ಈ ಮಹಿಳೆಯರು ಸಹಜವಾಗಿ ಗಟ್ಟಿಮುಟ್ಟಾಗಿರುತ್ತಾರೆ. ಅವಿಭಕ್ತ ಮತ್ತು ಸಂಚಾರದಲ್ಲಿದ್ದಾಗ ವಿಭಕ್ತ ಕುಟುಂಬದ ಮನೆಯ ಹೊಣೆಗಾರಿಕೆ ಇವರದ್ದಾಗಿದೆ. ಆಹಾರ ಸಿದ್ಧಪಡಿಸುವುದು ಬಿಡಾರ ಅಥವಾ ಗುಡಿಸಲು ಸಂರಕ್ಷಿಸುವುದು, ಕೌದಿ ಹೊಲಿಯುವುದು, ಬಾಂಡೆ ಇತ್ಯಾದಿ ಮಾರಾಟ ಮಾಡಿ ಉಪವೃತ್ತಿಯಿಂದ ಹಣ ಸಂಪಾದಿಸುವುದು ಕೆಲವು ಸಂದರ್ಭಗಳಲ್ಲಿ ಭಿಕ್ಷೆ  ಬೇಡುವುದು ದಿನನಿತ್ಯದ ಕಾಯಕವಾಗಿರುವುದರಿಂದ ಈ ಸಮುದಾಯದ ಮಹಿಳೆಯರು ವಿಶ್ರಾಂತಿ ತೆಗೆದುಕೊಂಡರೆ ಜೀವನ ನಿರ್ವಹಣೆ ಕಷ್ಟ. ಕಾರಣ ಹೆರಿಗೆಯ ಸಮಯದಲ್ಲಿ ಅಗತ್ಯವಾಗಿರುವ ವಿಶ್ರಾಂತಿ, ಹೆರಿಗೆ ನಂತರದ ವಿಶ್ರಾಂತಿ ಬದಿಗಿರಿಸಿ ಕುಟುಂಬದ ಆರ್ಥಿಕ ಕ್ರೂಢೀಕರಣದಲ್ಲಿ ಅಥವಾ ಸಂಸಾರ ನಿಭಾಯಿಸುವಲ್ಲಿ ತ್ಯಾಗಮೂರ್ತಿಯಾಗಿ, ಗಟ್ಟಿಗಿತ್ತಿಯಾಗಿ, ಪುರುಷನಿಗಿಂತ ಮಿಗಿಲಾಗಿ ಸಹಕಾರಿಯಾಗಿದ್ದಾಳೆ. ಈ ಸಮುದಾಯ ಮಹಿಳೆಯರ ದುಡಿಮೆ, ಶ್ರಮ, ತ್ಯಾಗ, ಕುಟುಂಬ ನಿಷ್ಠೆ, ದೈವಿ ಶ್ರದ್ಧೆ ಇತರ ಜನಾಂಗದ ಮಹಿಳೆಯರಿಗೆ ಮಾದರಿಯಾಗುವಂತಿದೆ.