೧. ಜನಾಂಗೀಯ ಹಿನ್ನೆಲೆ:

ಸಂಸ್ಕತಿ ಅಧ್ಯಯನವೆಂದರೆ ಮಾನವ ಜನಾಂಗದ ಅಧ್ಯಯನವೇ ಆಗಿದೆ. ಮನುಷ್ಯ ಆದಿಮಸ್ಥಿತಿಯಿಂದ ಹಿಡಿದು ಸಧ್ಯದ ನಾಗರಿಕ ಸ್ಥಿತಿಯವರೆಗೆ ಆತನ, ಆಕೆಯ ಹಾಡು-ಪಾಡು, ಜೀವನಗತಿ ಸ್ಥಿತಿಯ ಕತೆಯೇ ಸಂಸ್ಕೃತಿ ಆಗಿರುತ್ತದೆ. ಒಂದು ವಿಶಾಲವಾದ ಭೂಪ್ರದೇಶ ಹೊಂದಿರುವ ಭಾರತ ಅನೇಕ ಜನಾಂಗಗಳ, ಭಾಷೆ, ಮತ-ಧರ್ಮಗಳ ಹಲವು ಸಂಸ್ಕೃತಿಯ ನೆಲೆವೀಡು, ಹಾಗೆಯೇ ನೂರಾರು ಬುಡಕಟ್ಟು ಅಲೆಮಾರಿ ಬುಡಕಟ್ಟು (Nomiadic Tribes) ಗಳ ತನ್ನದೇ ಆದ ವಿಶಿಷ್ಟ ಜೀವನ ಶೈಲಿ ರೂಪಿಸಿಕೊಂಡು ವೈಶಿಷ್ಟ್ಯಪೂರ್ಣವಾದ ಸಂಸ್ಕೃತಿಯನ್ನು ಹೊಂದಿವೆ.

ಅಂಥ ಬುಡಕಟ್ಟುಗಳಲ್ಲಿ ಗೊಂದಲಿಗರು ಅಲೆಮಾರಿ, ಅರೆ ಅಲೆಮಾರಿಗಳಾಗಿ, ಅಲೆಮಾರಿ ಬುಡಕಟ್ಟುಗಳ (Nomiadic Tribes) ಲ್ಲಿಯೇ ವಿಶಿಷ್ಟರಾಗಿ ಕಂಡು ಬರುತ್ತಾರೆ. ಇವರ ಜೀವನ ಶೈಲಿ, ಉದ್ಯೋಗ, ಕಲೆ, ನಂಬಿಕೆ, ಸಾಹಿತ್ಯ ಇತ್ಯಾದಿ ವಿಶಿಷ್ಟವಾಗಿದ್ದು ಅದನ್ನು ಇಲ್ಲಿ ಅಭ್ಯಾಸ ಮಾಡಲಾಗಿದೆ.

ಕನ್ನಡದಲ್ಲಿ ಪ್ರಾಚೀನ ಕಾಲದಿಂದಲೂ ಗೊಂದಣ, ಗೊಂದಣಿ, ಗೊಂದಲ ಮತ್ತು ಗೊಂಧಳ ಎಂಬ ಶಬ್ದಗಳು ಬಳಕೆಯಲ್ಲಿವೆ. “ಗೊಂದಳ”ವೆಂದರೆ ಒಂದು ಬಗೆಯ ಧಾರ್ಮಿಕ ವಿಧಿ, ಗೊಂದಲಿಗರು ಹೇಳುವ ದೇವಿಯ ನಾಮ ಸಂಕೀರ್ತನ

[1] ಎಂಬ ಅರ್ಥಗಳಿವೆ. ಗೊಂದಲಿಗ ಎಂದರೆ ಗೊಂದಲ ಸಮಾರಂಭದಲ್ಲಿ ದೇವಿಯ ಸಂಕೀರ್ತನೆಯನ್ನು ಹೇಳುವವನು ಎಂಬ ಅರ್ಥವಿದೆ.[2] ಕಿಟಲ್‌ನಿಘಂಟಿನಲ್ಲಿ “ಗೊನ್ದಲಿಗ” ಎಂದರೆ “a man who makes music in honour of Parvati and sings her stores” ಎಂದು “ಗೋನ್ದಳ” ಎಂದರೆ “a tumultuous festivity in propitiation of Devi”[3] ಎಂಬರ್ಥವನ್ನು ಕೊಡಲಾಗಿದೆ. ಒಂದು ಧಾರ್ಮಿಕ ವಿಧಿಯಾದ ಈ “ಗೊಂದಲ” ಗೊಂದಲ ಸಂಸ್ಕೃತಿ ಭಾರತೀಯ ಬುಡಕಟ್ಟು ಸಂಸ್ಕೃತಿಗಳಲ್ಲಿಯೇ ವಿಶಿಷ್ಟವಾಗಿ ಕಂಡುಬರುವ ಒಂದು ಸಮುದಾಯವಾಗಿದೆ. ಈ ಸಮುದಾಯದ ಅವಿಭಾಜ್ಯ ಅಂಗವಾಗಿರುವ ಹೆಣ್ಣು ಮತ್ತು ಗಂಡು ಈ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಮುನ್ನಡೆಗೆ ತರುವಲ್ಲಿ ಮಹತ್ವದ ಪಾತ್ರವಹಿಸುತ್ತಾರೆ.

ಈ ಗೊಂದಲಿಗ ಸಮುದಾಯದ ಉಪನಾಮಗಳು ಅನೇಕ. ಗೊಂದಳಿ, ಗೊಂಧಳ, ಗೊಂದಲಿ, ಗೊಂದಲಿಗೇರ, ಬುಡಬುಡಕಿ, ಜೋಷಿ, ದೋಸಿಗೇರ, ವಾಸುದೇವ, ಭಾಟ, ಬಾಗಡಿ, ಠಾಕೂರ, ಮರಾಠ ಇತ್ಯಾದಿ ಹೆಸರುಗಳಿಂದ ಅಲೆಮಾರಿಗಳಾಗಿ ಅರೆ-ಅಲೆಮಾರಿಗಳಾಗಿ ದಕ್ಷಿಣ ಭಾರತದಾದ್ಯಂತ ಈ ಜನ ಸಮುದಾಯ ಹರಡಿಕೊಂಡಿದೆ. ಈ ಗೊಂದಲಿಗ ಸಮಾಜ ಸಂಸ್ಕೃತಿಯ ಕುರಿತಾಗಿ ಜ್ಯೋತಿ ಹೊಸೂರ, ನಿಂಗಣ್ಣ ಸಣ್ಣಕ್ಕಿ, ಕ್ಯಾತನಹಳ್ಳಿ ರಾಮಣ್ಣ, ಮುದೇನೂರು ಸಂಗಣ್ಣ, ಮಂಜುನಾಥ ಬೇವಿನಕಟ್ಟಿ ಮುಂತಾದವರು ಅಧ್ಯಯನ ಮಾಡಿ ಲೇಖನ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇಲ್ಲಿ ವಿಶೇಷವಾಗಿ ಗೊಂದಲಿಗ ಮಹಿಳೆಯ ಸಂಸ್ಕೃತಿ ಕುರಿತಾಗಿ ಕೆಲ ಮಾಹಿತಿ ಸಂಗ್ರಹಿಸಿ ವಿವೇಚಿಸಲಾಗಿದೆ.

ಈ ಹಿಂದೆ “ಯಾವ ಜಾತಿಯವರಾದರೂ ದೀಕ್ಷೆ ಪಡೆದು ಗೊಂದಲಿಗರಾಗುವ ಅವಕಾಶವಿತ್ತು. ಶೀಘ್ರಗತಿಯಲ್ಲಿ ಅಂಥವರ ಸಂಖ್ಯೆ ಬೆಳೆದು, ಗೊಂದಲ ನೃತ್ಯದ ಕಾರ್ಯಕ್ರಮಗಳು ಬಹುಬೇಗ ಜನಪ್ರಿಯವಾದವು. ಗೊಂದಲ ದೀಕ್ಷೆ ಪಡೆದ ಅಂಥವರನ್ನು ಮೂಲ ಜಾತಿ ಪರಿಗಣಿಸದೇ ಗೊಂದಲಿಗರೆಂದೇ ಗುರುತಿಸುತ್ತಾ ಬರಲಾಗಿದೆ. ಹೀಗಾಗಿ ದೀಕ್ಷೆ ಪಡೆದ ಬಹುಪಾಲು ಜನ ಗೊಂದಲವನ್ನೇ ತಮ್ಮ ನಿತ್ಯದ ವೃತ್ತಿಯನ್ನಾಗಿಸಿಕೊಂಡು ಒಂದು ಸಮುದಾಯವಾಗಿ ಪರಿಗಣಿಸಲ್ಪಟ್ಟಿದ್ದಾರೆ. ನಂತರ ಬೇರೆ ಬೇರೆ ಸಮುದಾಯದ ಜನ ಇದರ ಆಕರ್ಷಣೆಗೆ ಅಥವಾ ಪ್ರಭಾವಕ್ಕೆ ಒಳಗಾಗಿ ಬಂದು ಸೇರುವುದನ್ನು ನಿಯಂತ್ರಿಸಿದಂತೆ ತೋರುತ್ತದೆ. ನಿಶ್ಚಿತ ಸಮುದಾಯದ ಜನರು ಮಾತ್ರ ಗೊಂದಲ ಹಾಕುವಂತಾಗಿ ಅದುವೆ ಒಂದು ಜಾತಿಯಾಗಿ ಪರಿಗಣಿತವಾಗಿ ವಂಶಪಾರಂಪರ್ಯ ಕಲೆಯಾಗಿ ಮುಂದುವರೆದುಕೊಂಡು ಬಂದಿದೆ.[4] ಈ ಮಾತನ್ನು ಗೊಂದಲಿಗರ ಉಪ ಪಂಗಡಗಳು ಹಾಗೂ ಈ ಗೊಂದಲವನ್ನು ಆಚರಿಸುವ ವಿವಿಧ ಜನಾಂಗದ ಆಚರಣೆಗಳು ಸಮರ್ಥಿಸುತ್ತವೆ.

ಜನಸಂಖ್ಯೆ ಬಾಹುಳ್ಯ:

ಕಥೋಪಜೀವಿಗಳಾಗಿರುವ ಈ ಗೊಂದಲಿಗರು, ಅಲೆಮಾರಿಗಳಾಗಿ ತಮ್ಮ ವೃತ್ತಿಯನ್ನು ಒಂದು ಧಾರ್ಮಿಕ ಕಾರ್ಯವೆಂಬಂತೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಹೆಚ್ಚು ಜನಸಂಖ್ಯೆಯಲ್ಲಿದ್ದು, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿಯೂ ವಾಸವಾಗಿದ್ದಾರೆ. ಅಲ್ಲಲ್ಲಿ ಚದುರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲಿ ಇದ್ದಂತೆ ತಿಳಿದು ಬರುತ್ತದೆ.

ಈ ಗೊಂದಲಿಗರ ಮೂಲ ನೆಲೆ ಕರ್ನಾಟಕದ ಭೂಪ್ರದೇಶವೇ ಆಗಿದೆ. “ಕಾವೇರಿಯಿಂದ ಮಾಗೋದಾವರಿವರೆಗೆ” ಇವರ ವಾಸವಿದೆ. ಅದರಲ್ಲಿಯೂ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಇವರ ವಸತಿ ದಟ್ಟವಾಗಿರುವುದು ಕಂಡು ಬರುತ್ತದೆ. ಬಹುಮಟ್ಟಿಗೆ ಈ ಗೊಂದಲಿಗರು ವಂಶಪಾರಂಪರ್ಯ ವೃತ್ತಿಯ ಜೊತೆಗೆ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತ ಅಲೆಮಾರಿ, ಅರೆ ಅಲೆಮಾರಿಗಳಾಗಿದ್ದ ಇವರು ಈಗ ಒಂದೆಡೆ ವಾಸ ಮಾಡುತ್ತಿದ್ದಾರೆ. ಕೆಲವರು ಮಾತ್ರ ಈವರೆಗೂ ಅಲೆಮಾರಿಗಳಾಗಿ ಊರಿಂದ ಊರಿಗೆ ಅಲೆದು ತಮ್ಮ ಕಾಯಕ ಮಾಡಿ ಬದುಕುತ್ತಿದ್ದಾರೆ.

ಕರ್ನಾಟಕ ಗೋಂದಳಿ ಸಮಾಜ (ರಿ) ಹುಬ್ಬಳ್ಳಿ-ಧಾರವಾಡ ಜಿಲ್ಲೆ ಪ್ರತಿ ವರ್ಷ ತಮ್ಮ ಸಮಾಜ ಬಾಂಧವರ ಮಹಾ ಅಧಿವೇಶನವನ್ನು ಆಯೋಜಿಸಿಕೊಂಡು ಈ ಅಧಿವೇಶನದಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲೆಯಲ್ಲಿ ಸಂಘದ ಪ್ರತಿನಿಧಿಗಳನ್ನು ಮತ್ತು ಸದಸ್ಯರನ್ನು ನಿಯೋಜಿಸಿ ಪ್ರತಿ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಈ ಗೊಂದಲಿಗ ಜನಾಂಗದ ಜನಸಂಖ್ಯಾ ಕೋಷ್ಠಕ ಸಿದ್ಧಪಡಿಸುತ್ತಾರೆ. ೨೦೬ನೇ ಸಾಲಿನ ವರದಿ ಅನುಲಕ್ಷಿಸಿ ಹೇಳುವುದಾದರೆ, ಒಟ್ಟು ಗೊಂದಲಿಗರ ಜನಸಂಖ್ಯೆ ೫,೧೦,೧೨೮ ಇದ್ದು, ಇದರಲ್ಲಿ ಪುರುಷರ ಸಂಖ್ಯೆ ೨,೭೧,೫೮೩ ಉಳಿದಂತೆ ಮಹಿಳೆಯರ ಸಂಖ್ಯೆ ೨,೩೮,೫೪೫ ಇದೆ. ಒಟ್ಟು ಈ ಜನಸಂಖ್ಯೆಯಲ್ಲಿ ವಿಜಾಪುರ-ಬಾಗಲಕೋಟ ಜಿಲ್ಲೆಗಳಲ್ಲಿ ೪೪,೨೮೪, ಇವು ರಾಜ್ಯದಲ್ಲಿಯೇ ಅತಿ ಹೆಚ್ಚು ಗೊಂದಲಿಗ ಜನಾಂಗವಿರುವ ಜಿಲ್ಲೆಗಳಾದರೆ, ಧಾರವಾಡ ಜಿಲ್ಲೆಯಲ್ಲಿ ೪೦,೫೯೧, ಗುಲಬುರ್ಗಾ ಜಿಲ್ಲೆಯಲ್ಲಿ ೩೫,೫೫೦, ರಾಯಚೂರು ಜಿಲ್ಲೆಯಲ್ಲಿ ೩೦,೪೦೮, ಬಳ್ಳಾರಿ ಜಿಲ್ಲೆಯಲ್ಲಿ ೨೦,೫೬೮, ಬೆಳಗಾವಿ ಜಿಲ್ಲೆಯಲ್ಲಿ ೨೬,೩೪೬, ಕಾರವಾರ ಜಿಲ್ಲೆಯಲ್ಲಿ ೨೭,೭೨೦ ಜನ ವಾಸಿಸುತ್ತಿದ್ದಾರೆ. ಅಂದರೆ ಕರ್ನಾಟಕದಲ್ಲಿ ೨,೭೭,೪೨೩ ಜನ ವಾಸವಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ೨,೩೨,೭೦೫ ಜನ ವಾಸಿಸುತ್ತಿದ್ದಾರೆ. ಈ ಜನಸಂಖ್ಯೆ ಆಧಾರದಿಂದ ಹೇಳುವುದಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಗೊಂದಲಿಗರ ಸಮುದಾಯ ಹೆಚ್ಚು ವಾಸವಾಗಿರುವುದನ್ನು ಲಕ್ಷಿಸಿದರೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ವಾಸವಾಗಿರುವ ಗೊಂದಲಿಗರು ಬಹುಮಟ್ಟಿಗೆ ಉತ್ತರ ಕರ್ನಾಟಕದಿಂದ ವಲಸೆ ಹೋಗಿರುವವರಾಗಿರುವುದರಿಂದ ಈ ಗೊಂದಲಿಗರ ಮೂಲ ನೆಲೆ ಉತ್ತರ ಕರ್ನಾಟಕವೇ ಆಗಿದೆ.

ಒಟ್ಟು ಗೊಂದಲಿಗರ ೫,೧೦,೧೨೮ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ೨,೨೮,೫೪೫ ಇದೆ.ಇವರು ರಾಜ್ಯಾದ್ಯಂತ ಉಪವೃತ್ತಿ ಅಥವಾ ಜೀವನಾಧಾರ ವೃತ್ತಿಯಾದ ಕೌದಿ ಹೊಲಿಯುವುದು, ಬಾಂಡೆ, ಚುರುಮುರಿ, ಬಳೆ, ಸೂಜಿ-ಧಾರ, ಹೇರಪಿನ್‌ಇತ್ಯಾದಿ ಮಾರುತ್ತಾ ಅಲೆಮಾರಿಗಳಾಗಿ ಸಂಚರಿಸಿ ಜೀವಿಸುತ್ತಾರೆ. ಅಲ್ಲಲ್ಲಿ ಕೆಲವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಜೀವನಾಧಾರವಾಗಿ ಆಧುನಿಕ ಲಾಭದಾಯಕವಾದ ವ್ಯಾಪಾರ ಮಾಡುತ್ತಾ ತಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ.

ಭಾಷೆ:

ಮರಾಠ ರಾಜ್ಯ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚೆ ಅಖಂಡ ಕರ್ನಾಟಕದ ಭಾಗವಾಗಿದ್ದ, ಈಗಿನ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗವು ಈ ಗೊಂದಲಿಗರ ಮೂಲ ನೆಲೆಯಾಗಿದೆ. ಮಹಾರಾಷ್ಟ್ರ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಗೊಂದಲಿಗರ ಭಾಷೆ ಮರಾಠಿಯಾಗಿದೆ. ಅಲ್ಲದೆ ಉತ್ತರ ಕರ್ನಾಟಕದ ಗೊಂದಲಿಗರ ಅನೇಕ ಕುಟುಂಬಗಳ ಮಾತೃಭಾಷೆ ಕೂಡ ಕನ್ನಡವೇ ಆಗಿದ್ದು, ವ್ಯವಹಾರಕ್ಕಾಗಿ ಅವರು ಮರಾಠಿ ಬಳಸುತ್ತಾರೆ. ಆದರೆ ಗೊಂದಲಿಗರು ತಾವು ಮಹಾರಾಷ್ಟ್ರದಿಂದ ವಲಸೆ ಬಂದವರೆಂದು ತಮ್ಮ ಮಾತೃಭಾಷೆ ಮರಾಠಿ ಎಂದು ಹೇಳುತ್ತಾರೆ. ಗೊಂಧಳಿ ಜನಾಂಗ ಮನೆಯಲ್ಲಿ ಮರಾಠಿ ಭಾಷೆಯನ್ನಾಡಿದರೂ ಕರ್ನಾಟಕದಲ್ಲಿ ಕನ್ನಡವೇ ಇವರ ಪ್ರಮುಖ ಭಾಷೆಯಾಗಿದೆ. ಓದುವ ಬರೆಯುವ ಮತ್ತು ಹಾಡುವ, ಗೊಂದಲ ಕಥೆ ಹೇಳುವ ಭಾಷೆ ಕನ್ನಡವೇ ಆಗಿದೆ.

ಖಿವಾರಿ” ಭಾಷೆ

ಗೊಂದಲಿಗರ ಮನೆಯಲ್ಲಿ ಒಂದು ವಿಶಿಷ್ಟವಾದ ಭಾಷೆ ಬಳಸಲಾಗುತ್ತದೆ. ಈ ಭಾಷೆ ಗೊಂದಲಿಗರಿಗೆ ಮಾತ್ರ ತಿಳಿಯುವಂಥದ್ದು. ವೈಯಕ್ತಿಕವಾಗಿ ತಮ್ಮ ತಮ್ಮಲ್ಲಿ ಮಾತನಾಡುವಾಗ ಅಥವಾ ಇತರ ಅನ್ಯರು ಎದುರಿಗಿದ್ದಾಗ ಗುಪ್ತವಾಗಿ ವಿಷಯ ತಿಳಿಸುವಾಗ ಈ ಭಾಷೆಯನ್ನು ಬಳಸುತ್ತಾರೆ. ಇವರಲ್ಲಿ ವಿಶಿಷ್ಟವಾದ ಈ ಬಾಷೆ ಇರುವುದರಿಂದ ಮತ್ತು ಅಲೆಮಾರಿಗಳಾದ ಇವರು ತಮ್ಮ ಸುತ್ತಮುತ್ತಲಿರುವ ಅನ್ಯಭಾಷೆಗಳನ್ನು ಬಲ್ಲವರಾಗಿರುವುದರಿಂದ ಮರಾಠಾ ಅರಸರ ಕಾಲದಲ್ಲಿ ಈ ಸಮುದಾಯದವರು ರಾಜರ ಗುಪ್ತಚಾರರಾಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಗುಪ್ತವಾದ ವಿಷಯ ಚರ್ಚಿಸುವಾಗ ಈಗಲೂ ಈ ಗುಪ್ತವಾದ ಭಾಷೆಯನ್ನು ಉಪಯೋಗಿಸುತ್ತಾರೆ. ಈ ಭಾಷೆ ಅವರಿಗೆ ಮಾತ್ರ ತಿಳಿಯುವ ಕೋಡವರ್ಡ್ಸ್‌‌ಗಳಿಂದ ಕೂಡಿದ ಭಾಷೆಯಾಗಿದೆ. ಇಂಥ ಭಾಷೆಯನ್ನು ನಾನು ಧಾರವಾಡ ಜಿಲ್ಲೆಯ ನವಲಗುಂದದ ಗೊಂದಳಿ ಸಮಾಜದ ಪ್ರಮುಖರಾದ ಶಿವಾನಂದ ಪಾಚಂಗಿ ಅವರ ಮನೆಗೆ ಹೋದಾಗ, ಅವರ ಮಗ ಒಂದು ವಿಶಿಷ್ಟ ಭಾಷೆಯಲ್ಲಿ ಅವರನ್ನು ಕರೆದಾಗ ಕಂಡುಕೊಂಡೆ. ಆಗ ಯಾವ ಭಾಷೆ ಇದು ಎಂದು ಅವರನ್ನು ಕೇಳಿದಾಗ “ಗೊಂದಲಿಗರಾದ ನಮಗೆ ನಮ್ಮದೆ ಆದ ಒಂದು ಭಾಷೆ ಇದೆ. ಅದಕ್ಕೆ “ಖಿವಾರಿ” ಭಾಷೆ ಎನ್ನುತ್ತೇವೆ” ಎಂದರು. ಈ ಭಾಷೆಯನ್ನು ಗೊಂದಲಿಗರ ಸಮುದಾಯದಲ್ಲಿ ಕೌಟುಂಬಿಕ ಭಾಷೆಯಾಗಿ ಇವತ್ತಿಗೂ ಬಳಕೆಯಲ್ಲಿದೆ. ಹೆಚ್ಚಾಗಿ ಮನೆಯಲ್ಲಿ ಮಹಿಳೆಯರು ತಮ್ಮ ಗಂಡಂದಿರೊಂದಿಗೆ, ಬಂಧುಬಳಗದೊಂದಿಗೆ, ವ್ಯಾಪಾರ ಮಾಡುವಾಗ ಗುಪ್ತವಾಗಿ ತಮ್ಮ ತಮ್ಮಲ್ಲಿ ಈ ಭಾಷೆಯಲ್ಲಿ ಮಾತನಾಡುತ್ತಿರುವುದು ಕಂಡು ಬರುತ್ತದೆ.

ಉದಾ:

೧)       ಖಿವಾರಿ-ಗಾವಂಡಿ ಗ್ಯಾಚಿ ಮಾನವಿಗಾಸಗಿಲಿ
ಕನ್ನಡ-ಪರಜಾತಿ ಹೆಣ್ಣು ಮಗಳು ಬರುತ್ತಾಳೆ.

೨)       ಖಿವಾರಿ-ಭೈರ ಬಾಸ್ವಾಡ್‌
ಕನ್ನಡ-ಹೊರಗೆ ಹಾಕು

೩)       ಖಿವಾರಿ-ಮಾನವಗಾಸಗಲಾ
ಕನ್ನಡ-ಪೊಲೀಸ್ ಬಂದಾ

೪)       ಖಿವಾರಿ-ಪನಿಕಲಾ ಚೋಲಿ
ಕನ್ನಡ-ಹೆಣ್ಣು ಮಗಳು ಕೇಳು

೫)       ಖಿವಾರಿ-ಸಂಖ್ಯಾಲುಗು
ಕನ್ನಡ-ಕಣ್ಣಸನ್ನೇ ಮಾಡು

೬)       ಖಿವಾರಿ-ಕಿಬಸ
ಕನ್ನಡ-ಸುಮ್ಮನಿರು

೭)       ಖಿವಾರಿ-ಟೇಪ್ಯಾಚೋಲ
ಕನ್ನಡ-ರೊಟ್ಟಿ ಕೊಡುವಂತೆ ಹೇಳು

೮)       ಖಿವಾರಿ-ತೆಚಾ ನರಗಿ, ತೇಚಿ ಬಾಯಿಕೊ
ಕನ್ನಡ-ಅವನ ಹೆಂಡತಿ

೯)       ಖಿವಾರಿ-ಮಾನ್ವಿ ಖಿಪಡಿ ಸರಕ ದಿಸ್ತಿ
ಕನ್ನಡ-ಬಲಿಗೆ ಬಿದ್ದಂಗೆ ಕಾಣ್ತಾಳ

೧೦)     ಖಿವಾರಿ-ಲೈಫಾಡತಿ ಮಾನ್ವಿ
ಕನ್ನಡ-ಬಹಳ ಕೆಟ್ಟ ಹೆಣ್ಣು ಮಗಳು

೧೧)     ಖಿವಾರಿ-ನರಗ್ಯಾಲಾ ಮಾನ್ವಿ ಲುಗುತಿ
ಕನ್ನಡ-ಗಂಡನಿಗೆ ಹೆಂಡತಿ ಹೊಡೆಯುತ್ತಾಳೆ.

೧೨)     ಖಿವಾರಿ-ಉಂಬರ ಬಾಟ್‌
ಕನ್ನಡ-ಗಂಡನ ಮನೆಯಿಂದ ಓಡಿ ಹೋದವಳು.

೧೩)     ಖಿವಾರಿ-ಘರಸೂಳಿ ಬಾಟ್‌
ಕನ್ನಡ-ತವರು ಮನೆಯಿಂದ ಓಡಿ ಹೋದವಳು.

ಹೀಗೆ ಈ ಗೊಂದಲಿಗ ಮನೆಯ ಭಾಷೆ-ಕೌಟುಂಬಿಕ ಭಾಷೆಯೊಂದಿದ್ದು, ಪ್ರಾಯಶಃ ಇದೇ ಇವರ ಮಾತೃಭಾಷೆ ಆಗಿರುವ ಸಾಧ್ಯತೆ ಇದೆ. ಅಲೆಮಾರಿಗಳಾದ ಇವರು ಅನೇಕ ರಾಜ್ಯ, ವಿವಿಧ ಭಾಷೆ, ಧರ್ಮ, ವಿವಿಧ ಸಂಸ್ಕೃತಿಯ ಜನಸಮುದಾಯದೊಡನೆ ಹೆಚ್ಚು ಸಂಪರ್ಕದಲ್ಲಿರುವುದರಿಂದ ಈ ಎಲ್ಲವನ್ನು ಒಳಗೊಂಡಂತೆ ತಮಗೆ ಮಾತ್ರ ಅರ್ಥವಾಗುವ ಭಾಷೆಯನ್ನು ಅವರು ರೂಪಿಸಿಕೊಂಡಂತೆ ತೋರುತ್ತದೆ.

ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಚದುರಿ ಹೋಗಿರುವ ಈ ಗೊಂದಲಿಗರು ನಿಶ್ಚಿತವಾದ ಹಬ್ಬ, ಜಾತ್ರೆಯಂದು ತಮ್ಮ ಮೂಲ ನೆಲೆಗೆ ಬಂದು ಸೇರುತ್ತಾರೆ. ಸಡಗರ ಸಂಭ್ರಮದಿಂದ ಜಾತ್ರೆ-ಹಬ್ಬ ಆಚರಿಸುತ್ತಾರೆ. ಆದರೆ ಯಾವುದೇ ಪ್ರದೇಶಕ್ಕೆ ಹೋದರೂ ಆ ಪ್ರದೇಶದ ಸ್ಥಳೀಯ ಭಾಷೆಯನ್ನು ಮಾತನಾಡಬಲ್ಲವರಾಗಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ಕನ್ನಡ ಭಾಷೆಯೊಂದಿಗೆ ಮರಾಠಿ ಭಾಷೆ ಮಾತನಾಡುವಂತೆ, ಬೀದರ್, ರಾಯಚೂರು, ಬಳ್ಳಾರಿ ಭಾಗದಲ್ಲಿ ಸ್ಥಳೀಯ ಕನ್ನಡವನ್ನು ಮಾತನಾಡುವುದರೊಂದಿಗೆ ತೆಲುಗು ಭಾಷೆಯನ್ನೂ ಮಾತನಾಡುತ್ತಾರೆ. ಇಲ್ಲಿ ಇವರಿಗೆ ಸಂಪರ್ಕ ಭಾಷೆ ಮರಾಠಿ ಆಗಿರದೆ ತೆಲುಗು ಭಾಷೆ ಆಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಗೊಂದಲಿಗರು ಅಲ್ಪಪ್ರಮಾಣದಲ್ಲಿ ಮರಾಠಿ, ಹೆಚ್ಚಾಗಿ ತುಳು ಮತ್ತು ಕನ್ನಡ ಮಾತನಾಡುತ್ತಾರೆ. ಹೀಗಾಗಿ ಇವರು ವಾಸಿಸುವ ಪ್ರದೇಶದ ಭಾಷೆ ಇವರ ಮೇಲೆ ಗರಿಷ್ಠ ಪ್ರಭಾವ ಬೀರಿದ್ದು, ವೃತ್ತಿಗಾಯನ, ಜೀವನ ನಿರ್ವಹಣೆಗಾಗಿ ಹಾಡುವುದು, ಕೌದಿ ಹೊಲಿದು ಕೊಡುವುದು ಇತ್ಯಾದಿ ಇವರ ದಿನ ನಿತ್ಯದ ಕಾಯಕವಾಗಿರುವುದರಿಂದ ಪ್ರಾದೇಶಿಕ ಭಾಷೆ ಅನುಸರಿಸುವುದು ಇವರಿಗೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಇವರ ಭಾಷೆ “ಖಿವಾರಿ” ಭಾಷೆಯನ್ನು ಹೆಚ್ಚಿನ ಅಭ್ಯಾಸಕ್ಕೆ ಅಳವಡಿಸುವ ಅಗತ್ಯವಿದೆ.

ಪ್ರಾಯಶಃ ಅವರ ಮಾತೃಭಾಷೆ “ಖಿವಾರಿ” ಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವ್ಯವಹಾರಿಕವಾಗಿ ಮರಾಠಿ ಭಾಷೆಯನ್ನು ಬಳಸುತ್ತಿದ್ದರು. ಅವರು ದೈನಂದಿನ ಜೀವನದಲ್ಲಿ ಕನ್ನಡವೇ ಹೆಚ್ಚು ಬಳಸುತ್ತಾರೆ. ಆದರೆ ಸಾಹಿತ್ತಿಕ ಬಾಷೆ ಕನ್ನಡವೇ ಆಗಿದೆ. ಗೊಂದಲಿಗರು ಕಥೆ ಹೇಳುವಾಗ, ಗೊಂದಲ ಹಾಕುವಾಗ ಪ್ರಾರ್ಥನೆ ಪದ್ಯ, ಅಥವಾ ದೇವತೆ ಸ್ತುತಿಸುವ ಪದ್ಯ ಮಾತ್ರ ಮರಾಠಿಯಲ್ಲಿದ್ದು, ಉಳಿದಂತೆ ಹಾಡು ಮತ್ತು ಕಥೆಗಳು ಕನ್ನಡದಲ್ಲಿಯೇ ಹೇಳುವುದು ವೈಶಿಷ್ಟ್ಯವಾಗಿದೆ. ಇವರ ಸಾಹಿತ್ಯವು ಲಭ್ಯವಿರುವುದು ಕನ್ನಡದಲ್ಲಿಯೇ. ಉಳಿದ ಯಾವ ಭಾಷೆಯಲ್ಲೂ ಈ ಗೊಂದಲಿಗರ ಸಾಹಿತ್ಯ ದಾಖಲುಗೊಂಡು ಪ್ರಕಟಗೊಂಡಂತಿಲ್ಲ.

ಜೀವನ ಪದ್ಧತಿ

ಗೊಂದಲಿಗರು ಮೂಲತಃ ಅಲೆಮಾರಿಗಳಾಗಿದ್ದು, ಇತ್ತೀಚೆಗೆ ಕೆಲವರು ಒಂದೆಡೆ ವಾಸವಾಗಿದ್ದಾರೆ. ಅಲೆಮಾರಿಗಳಾಗಿದ್ದವರು ನಿಶ್ಚಿತವಾದ ಜಾತ್ರೆ, ಹಬ್ಬಗಳಂದು ಮೂಲ ವಾಸಸ್ಥಳಕ್ಕೆ ಬಂದು ತಮ್ಮ ಕುಟುಂಬ ಮತ್ತು ಸಮುದಾಯದ ಜನರೊಂದಿಗೆ ಸಂಭ್ರಮದಿಂದ ಹಬ್ಬ, ಜಾತ್ರೆ ಇತ್ಯಾದಿ ಆಚರಿಸುತ್ತಾರೆ. ಇವರ ಕುಟುಂಬ ವ್ಯವಸ್ಥೆ, ಗಂಡ-ಹೆಂಡತಿ, ಮಕ್ಕಳು, ಅತ್ತೆ-ಸೊಸೆ, ನಾದಿನಿ, ಸೋದರತ್ತೆ, ಸೋದರ ಮಾವ ಇತ್ಯಾದಿ ರಕ್ತ ಸಂಬಂಧ ಹಾಗೂ ವಿವಾಹ ಸಂಬಂಧ ಹೊಂದಿ ರೂಪುಗೊಂಡ ಒಂದು ಅವಿಭಕ್ತ ಕುಟುಂಬವಾಗಿದೆ. ಮೂಲತಃ ಮಾತೃ ಪ್ರಧಾನವಾದ ಕೌಟುಂಬಿಕ ವ್ಯವಸ್ಥೆ ಹೊಂದಿದ್ದರು. ಈಗ ಬಹುಮಟ್ಟಿಗೆ ಪಿತೃಪ್ರಧಾನ ಕೌಟುಂಬಿಕ ವ್ಯವಸ್ಥೆ ಹೆಚ್ಚಾಗಿರುವುದು ಕಂಡು ಬರುತ್ತದೆ. ಪ್ರಾಯಶಃ ಸದಾ ಸಂಚಾರದಲ್ಲಿರುವ ಇವರು ತಮ್ಮ ಹಿರಿಯರನ್ನು ತಂದೆ-ತಾಯಿ, ಅತ್ತೆ-ಮಾವ ಅಥವಾ ವಯಸ್ಸಾದ ಹಿರಿಯರನ್ನು ಒಂದು ನಿಶ್ಚಿತವಾದ ಸ್ಥಳದಲ್ಲಿ ವಾಸಕ್ಕೆ ಬಿಟ್ಟು ಗಂಡ-ಹೆಂಡತಿ ಮಕ್ಕಳು ಮಾತ್ರ ಸಂಚಾರ ಮಾಡಿ ವೃತ್ತಿಯಲ್ಲಿ ನಿರತರಾಗಿರುತ್ತಾರೆ. ಕುಟುಂಬದ ಹೊಣೆಗಾರಿಕೆ ಪ್ರಧಾನವಾಗಿ ಪುರುಷ (ಗಂಡ)ನದಾಗಿದ್ದು, ಹೆಂಡತಿ ಅಥವಾ ಮಹಿಳೆಯರು ಅವನನ್ನು ಅನುಸರಿಸಿ ನಡೆಯುತ್ತಾರೆ. ಮಹಿಳೆಯರು ಮನೆ ನಿಭಾಯಿಸುವ ಹೊಣೆಗಾರಿಕೆಯೊಂದಿಗೆ ಕೌದಿ ಹೊಲಿಯುವುದು, ಬಾಂಡೆ, ಬಳೆ, ಚುರುಮುರಿ, ಆಧುನಿಕ ಸೌಂದರ್ಯ ಸಾಧನ ವಸ್ತುಗಳನ್ನು ಮಾರಾಟ ಮಾಡಿ ಸಂಸಾರ ನಿರ್ವಹಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.

ಈ ಸಮುದಾಯದಲ್ಲಿ ಮನೆ ನಿಭಾಯಿಸುವ ಮುಖ್ಯ ಜವಾಬ್ದಾರಿ ಮನೆಯ ಹಿರಿಯ ಮಹಿಳೆ (ಅತ್ತೆ ಅಥವಾ ತಾಯಿ) ಯದ್ದಾಗಿರುತ್ತದೆ. ಆಕೆ ಮನೆಯ ಎಲ್ಲ ಮಹಿಳೆಯರಿಗೆ, ಪುರುಷರಿಗೆ, ಮಾಗರ್ದಶನ ಮಾಡುತ್ತ ಕುಟುಂಬವನ್ನು ನಿಯಂತ್ರಿಸುತ್ತಾಳೆ. ಇಲ್ಲಿಯ ಆಸ್ತಿಯ ಹಕ್ಕು ಪುರುಷರಿಗೆ ಮಾತ್ರ ಇದೆ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೋಡಿಹಾಳ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪು ಗ್ರಾಮದಲ್ಲಿ ಕುಲವೃತ್ತಿ ಗೊಂದಲ ಹಾಕುವುದರ ಜೊತೆಗೆ ಜ್ಯೋತಿಷ್ಯ, ಶಕುನ ಹೇಳುವುದರ ಜೊತೆಗೆ ಜೀವನಾಧಾರವಾಗಿ ಕೃಷಿಯನ್ನು ಅವಲಂಭಿಸಿರುವುದು ಕಂಡುಬರುತ್ತದೆ. ಕೃಷಿಯ ಜೊತೆಗೆ ಕೌದಿ ಹೊಲಿಯುವ ನೂರಾರು ಕುಟುಂಬಗಳು ಈ ಗ್ರಾಮದಲ್ಲಿ ಕಂಡು ಬರುತ್ತವೆ. ಹಾಗೆಯೇ ಬಾಗಲಕೋಟ, ಕೆರೂರು, ಬಿಜಾಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬೆಳಗಾವಿ, ಸಂಕೇಶ್ವರ, ಗೋಕಾಕ, ಚಿಕ್ಕೋಡಿ, ಹುಬ್ಬಳ್ಳಿ, ಧಾರವಾಡ, ಗದಗ, ನರಗುಂದ, ನವಲಗುಂದ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿಯನ್ನು ಅವಲಂಬಿಸಿರುವ ಕೆಲವು ಕುಟುಂಬಗಳಿವೆ.

ಲಿಂಗಾಯತ ಗೊಂದಲಿಗರು:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಲಿಂಗಾಯತ ಗೊಂದಲಿಗರಿರುವುದು ವಿಶೇಷವಾಗಿದೆ. ಈ ಗ್ರಾಮದ ಅಂಭಾಭವಾನಿ ದೇವಸ್ಥಾನದ ಪೂಜಾರಿ ಇವರಾಗಿದ್ದು, ಇವರ ಮಾತೃಭಾಷೆ ಕನ್ನಡವಾಗಿದೆ. ಇವರಲ್ಲಿ ಮಾಂಸಹಾರಿಗಳು ಯಾರೊಬ್ಬರೂ ಇಲ್ಲದಿರುವುದು ಇನ್ನು ಹೆಚ್ಚಿನ ವಿಶೇಷವಾಗಿದೆ. ಇವರ ಆಚರಣೆಗಳು, ಪದ್ಧತಿಗಳು ನೋಡಿದರೆ ಕರ್ನಾಟಕದ ವೀರಶೈವ ಸಮಾಜದ ಆಚರಣೆಗಳನ್ನೇ ಅನುಸರಿಸುತ್ತಾರೆ. ಈ ಸಮುದಾಯದ ಮಹಿಳೆಯರು ಕೃಷಿಯನ್ನು ಅವಲಂಭಿಸುತ್ತಿದ್ದು, ಅನೇಕರು ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ತಮ್ಮ ಕುಟುಂಬದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಇವರ ಮದುವೆ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಜಂಗಮರೆ (ಮಠಪತಿ) ನಿರ್ವಹಿಸುತ್ತಾರೆ. ಇದರಿಂದ ಇವರು ಮೂಲತಃ ವೀರಶೈವ ಮತದವರಾಗಿದ್ದು, ಯಾವುದೋ ಕಾಲ ಘಟ್ಟದಲ್ಲಿ ಗೊಂದಲಿಗ ಆಚರಣೆ ಅನುಸರಿಸಿ ಗೊಂದಲಿಗರಾದಂತೆ ಕಂಡು ಬರುತ್ತದೆ.

ಗೊಂದಲಿಗರ ಸಮುದಾಯದಲ್ಲಿ ವಿಷಮ ದಾಂಪತ್ಯ ಕಡಿಮೆ. ವಿಚ್ಚೇದನವೂ ಕಡಿಮೆ. ಇದಕ್ಕೆ ಕಾರಣ ಆ ಗೊಂದಲಿಗರ ಸಮುದಾಯ ಕೌಟುಂಬಿಕ ಸಂರಚನೆ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯ ಪದ್ಧತಿ ಅತ್ಯಂತ ಮಧುರವಾಗಿರುವುದು ಗಂಡ-ಹೆಂಡಿರ ಜಗಳ ಸಮಾಜದ ಮುಂದೆ ಬರುವುದು ಅಪರೂಪವಾಗಿದೆ. ಪ್ರಾಯಶಃ ಇದಕ್ಕೆ ಇನ್ನೊಂದು ಕಾರಣ ಗೊಂದಲಿಗರ ಮಹಿಳೆಯರು ಸಂಚಾರಿ ಜೀವನದಲ್ಲಿ ಶ್ರಮ ಸಾಧ್ಯವಾದ ಬದುಕು ಇವರ ಪಾಲಿನದ್ದಾಗಿರುವುದರಿಂದ ಸಹಜವಾಗಿ “ಸಂಪರ್ಕ” ಸಾಧ್ಯತೆ ಕಡಿಮೆಯಾಗಿದೆ. ಕಾರಣವಾಗಿ ವಿಷಮ ದಾಂಪತ್ಯ ಕ್ವಚಿತ್ತಾಗಿ ಕಂಡು ಬರುತ್ತದೆ. ಇದಕ್ಕೆ ಇನ್ನು ಒಂದು ಮುಖ್ಯ ಕಾರಣವೆಂದರೆ ಈ ಗೊಂದಲಿಗ ಮಹಿಳೆಯರು ಮತ್ತು ಪುರುಷರಿಗೆ ಅವರ ಸಮಾಜದ ಕಟ್ಟಳೆಗಳು, ನಿಯಂತ್ರಗಳು ಗಟ್ಟಿಮುಟ್ಟಾಗಿರುವುದು. ಎಷ್ಟೇ ಚಂಚಲ ಮನಸ್ಸಿನ ಗಂಡ ಅಥವಾ ಹೆಂಡತಿ ಇದ್ದರೂ ಅವರು ಸಂಸಾರದಲ್ಲಿ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಬದುಕು ಮಾಡುವ ಗುಣದವರಾಗಿರುತ್ತಾರೆ. ಶ್ರಮ ಜೀವಿಗಳೂ, ಸಂಭಾವಿತರೂ, ದೈವೀ ಉಪಾಸಕರಾಗಿಯೂ ಜೀವನ ನಿರ್ವಹಿಸುತ್ತಾರೆ. ಹೀಗಾಗಿ ಗೊಂದಲಿಗರಲ್ಲಿ ಜಗಳಗಳಾಗಿ ಊನಾಗುತ್ತವೆ ಹೊರತು ಖೂನ ಆಗುವುದಿಲ್ಲ ಎಂಬ ಮಾತು ಈ ಸಮುದಾಯದಲ್ಲಿ ಜನಜನಿತವಾಗಿದೆ.

ಗೊಂದಲಿಗರು: ವಾರಕರಿ

ಮಧ್ಯ ಕರ್ನಾಟಕದ ಮತ್ತು ಉತ್ತರ ಕರ್ನಾಟಕದ ಗೊಂದಲಿ ಸಮಾಜದ ಗಂಡಸರು ಅಥವಾ ಹೆಂಗಸರು ತಮ್ಮಲ್ಲಿರುವ ಚಟಗಳಿಂದ ಮುಕ್ತರಾಗಲು “ವಾರಕರಿ” (ಮೂಲತಃ ನಾಮದೇವನಿಂದ ಪ್ರಾರಂಭವಾದ ಪಂಡರಪುರ ವಿಠ್ಠಲನ ಭಕ್ತ ಮಂಡಳಿ “ವಾರಕರಿ” ಪಂಥದವರಾಗಿದ್ದಾರೆ. ಪಂಡರಪುರಕ್ಕೆ ಹೋಗಿ ಒಂದು ನಿರ್ದಿಷ್ಟ ವ್ರತಹಿಡಿದು ವಿಠಲನ ಮಂದಿರದಲ್ಲಿ ತುಳಸಿ ಮಾಲೆ ಧರಿಸಿ, ಮಧ್ಯ, ಮಾಂಸಗಳನ್ನು ಸೇವಿಸುವುದಿಲ್ಲ, ಸುಳ್ಳು, ಮೋಸ, ಕಳವು ಮಾಡುವುದಿಲ್ಲ ಎಂದು ಸದಾ ಹರಿ ನಾಮಸ್ಮರಣೆ ಮಾಡುತ್ತಾ ಪ್ರತಿನಿತ್ಯ ಸ್ನಾನ-ಪೂಜೆ ಮಾಡುತ್ತೇನೆಂದು ಸಂಕಲ್ಪ ಮಾಡಿ ತುಳಸಿ ಮಾಲೆ ಧರಿಸುವುದು, ಸಂಕಲ್ಪದಂತೆ ನಡೆಯುವುದಕ್ಕೆ “ವಾರಕರಿ” “ವಾಕರಿ”, “ವಾರಿ” ಹಾಕುವುದು, “ವಾರಿ” ದೀಕ್ಷೆ ಹೊಂದುವುದು ಎನ್ನಲಾಗುತ್ತದೆ. “ಇದು ಒಂದು ವರ್ಷ ಅಥವಾ ಅನೇಕ ವರ್ಷ ಈ ವ್ರತಹಿಡಿದು ಪಂಡರಪುರ ವಿಠೋಭಾನ ದರ್ಶನಕ್ಕೆ ತಾವಿರುವ ಸ್ಥಳದಿಂದ ಮೇಳದಲ್ಲಿ ವಿಠಲ ಭಜನೆ ಮಾಡುತ್ತ ಹೋಗಿ, ಹಣೆಗೆ, ನಾಮ ಗಂಧಗಳನ್ನು ಧರಿಸಿ ವಿಠಲನ ದರುಶನ ಪಡೆದು ಬಂದ ಮೇಲೆ ಸ್ವಗ್ರಾಮದಲ್ಲಿ ಜನರನ್ನು ಆಮಂತ್ರಿಸಿ ನಿರಂಬಲಿ, ಸಿಹಿ, ಪಳಾರ, ಇತ್ಯಾದಿ ಪ್ರಸಾದವಾಗಿ ಹಂಚುವುದು ಸದಾ ಹರಿನಾಮ ಸ್ಮರಣೆ ಮಾಡುವುದು). ಪಂಥ ಸ್ವೀಕರಿಸಿ “ವಾರಕರಿ” “ವಾರಿ” ಹಾಕುವುದರ ಮೂಲಕ ದೀಕ್ಷೆ ಪಡೆಯುತ್ತಾರೆ. ಇದರಿಂದ ಈ ಗೊಂದಲಿಗರ ಸಮುದಾಯದ ಬದುಕು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗಿದೆ. ಪುರುಷರ ಹಾಗೆ ಅನೇಕ ಮಹಿಳೆಯರೂ “ವಾರಕರಿ” ಆಚರಿಸುವುದು ಈ ಸಮುದಾಯದಲ್ಲಿದೆ. ಇದರಿಂದ ಗೊಂದಲಿಗರ ಕುಟುಂಬಗಳು ತಕ್ಕಮಟ್ಟಿಗೆ ಸರಿದಾರಿಯಲ್ಲಿದ್ದು ಮಹಿಳೆಯರು ಶೋಷಣೆ, ಹಿಂಸೆ, ಬಡತನ, ಅನುಭವಿಸುವುದು ಸ್ವಲ್ಪ ಕಡಿಮೆಯಾಗಿದೆ ಎಂಬುದು ಈ ಸಮುದಾಯದ ಹಿರಿಯರ ಅಭಿಪ್ರಾಯವಾಗಿದೆ.

ವೇಷ-ಭೂಷಣಗಳು:

ದ್ರಾವಿಡ ಸಂಸ್ಕೃತಿಯ ಜನಾಂಗಗಳ ವೇಷ-ಭೂಷಣದಂತೆ ಗೊಂದಲಿಗ ಮಹಿಳೆಯರ ವೇಷ-ಭೂಷಣಗಳಿವೆ. ಸಾಮಾನ್ಯವಾಗಿ ಬಾಲಕಿಯರು ಬ್ಲೌಜ್‌, ಪರಕಾರ, ಲಂಗಾ ಧರಿಸುತ್ತಾರೆ. ಮೈನೆರೆದ ನಂತರ ಹುಡುಗಿಯ ದೈಹಿಕ ಚರ್ಯಗಳು ಯೌವನಕ್ಕೆ ಸಹಜವಾದ ತೀವ್ರವಾದ ಬದಲಾವಣೆ ಹೊಂದುವುದರಿಂದ ಮತ್ತು ಸತಿತ್ವ ಪ್ರಾಪ್ತವಾಗಿ ತಾಯಿಯಾಗುವ ಹಂತದಲ್ಲಿ ದೇಹ ಪೋಷಣೆಗಾಗಿ ಪರಕಾರ, ಸೀರೆ, ಕುಪ್ಪಸ, ರವಿಕೆ, ಜಂಪರ ತೊಡಬೇಕೆಂಬುದು ಸಮಾಜದ ಹಿರಿಯ ಮಹಿಳೆಯರ ಉಪದೇಶ ಮತ್ತು ಅನಿಸಿಕೆಯಾಗಿದೆ. ಮನೆಯ ಒಡೆಯರ, ಪುರುಷರ ಕಟ್ಟಪ್ಪಣೆಯೂ ಇದೆ ಆಗಿರುತ್ತದೆ. ಇತ್ತೀಚೆಗೆ ಆಧುನಿಕ ಸಮಾಜದ ಎಲ್ಲ ಬದಲಾವಣೆಗೆ ತಮ್ಮನ್ನು ಒಗ್ಗಿಸಿಕೊಂಡಿರುವುದರಿಂದ ಶಾಲೆ-ಕಾಲೇಜು ವಿಧ್ಯಾಭ್ಯಾಸಕ್ಕೆ ಹೋಗುವಂಥ ಹೆಣ್ಣು ಮಕ್ಕಳು, ನೌಕರಿ ಮಾಡಲು ಹೋಗುವಂಥ ಮಹಿಳೆಯರು ತಮಗೆ ಇಷ್ಟವಾದ ಬಟ್ಟೆ ತೊಡಲು ಸ್ವತಂತ್ರರು. ಆದರೆ ಈ ರಿಯಾಯಿತಿ ಅಥವಾ ಸ್ವಾತಂತ್ರ್ಯ ಅನಕ್ಷರಸ್ಥರು, ದುಡಿಯುವ ವರ್ಗದ ಗೊಂದಲಿಗ ಮಹಿಳೆಯರಿಗೆ ಇಲ್ಲ. ಇವರು ಸಮಾಜ ನಿರ್ಬಂಧಿಸಿದ ಸೀರೆ, ರವಿಕೆ, ಬ್ಲೌಜ ಧರಿಸುವ ಪರಿಪಾಠವಿದೆ.

ಇವರಲ್ಲಿ ಶ್ರೀಮಂತ ವರ್ಗದ ಕೆಲವು ಮಹಿಳೆಯರು ಮಾತ್ರ ರೇಶ್ಮೆ ಸೀರೆ, ರೇಶ್ಮೆ ಕುಪ್ಪಸ ಧರಿಸುತ್ತಾರೆ. ಮಧ್ಯಮ ವರ್ಗದ ಮಹಿಳೆಯರು ಸಾಧಾರಣ ಸೀರೆ, ಜಂಪರ ತೊಡುತ್ತಾರೆ. ಇವರಲ್ಲಿ ಕನಿಷ್ಠ ಮೂರು ನಾಲ್ಕು ಸೀರೆ ಜಂಪರ ಇರುತ್ತವೆ. ಆದರೆ ಇದೇ ಸಮುದಾಯದ ಹಳ್ಳಿ ಹಳ್ಳಿಗೆ ಹೋಗಿ ಬಾಂಡೆ, ಬಳೆ, ಚುರುಮುರಿ, ಹೇರಪಿನ್‌, ಸೂಜಿದಾರ ಇತ್ಯಾದಿ ಮಾರಾಟ ಮಾಡಿ ಜೀವನ ಸಾಗಿಸುವ ಮಹಿಳೆಯರ ವೇಷ-ಭೂಷಣದ ಸ್ಥಿತಿ ತೀರಾ ಶೋಚನೀಯವಾಗಿದೆ. ಇವರ ಆದಾಯ ಅತ್ಯಂತ ಕನಿಷ್ಠವಾಗಿದ್ದು, ದಿನ ನಿತ್ಯದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದೆ. ಹರಿದ ಸೀರೆ, ಕುಪ್ಪಸ ಇವರು ನಿತ್ಯ ಧರಿಸುವ ಬಟ್ಟೆಗಳು. ಧಾರುಣ ಸ್ಥಿತಿಯಲ್ಲಿದ್ದು ಕೆಲವು ಕುಟುಂಬಗಳಲ್ಲಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಮತ್ತೊಂದು ಸೀರೆ ಇರದಂತಹ ಸ್ಥಿತಿಯೂ ಇದೆ. ವಯಸ್ಸಾದ ಮಹಿಳೆಯರು, ಮುದುಕಿಯರು ಹಳೆಯ ಹರಿದ ಸೀರೆಯಲ್ಲಿಯೇ ಶೇಷ ಜೀವನ ಕಳೆಯುತ್ತಾರೆ.

ಮಹಾರಾಷ್ಟ್ರ ಪ್ರದೇಶದ ಮಹಿಳೆಯರು ಮತ್ತು ಉತ್ತರ ಕರ್ನಾಟಕ ಗಡಿಭಾಗದ ಮಹಿಳೆಯರು ಕಚ್ಚಿಸೀರೆ ಉಡುತ್ತಾರೆ. ಹಣೆಗೆ ದಪ್ಪ ಕುಂಕುಮ, ಅರಿಸಿಣ ಹಚ್ಚುತ್ತಾರೆ. ಕೈಯಲ್ಲಿ ಗಾಜಿನ ಬಳೆ ಧರಿಸುತ್ತಾರೆ. ವಿಧವೆಯರು ಗುಳದಾಳಿಯೊಂದನ್ನು ಬಿಟ್ಟು ಬೇರೆ ಆಭರಣ ಧರಿಸಬಹುದು. ಬಟ್ಟೆ ಧರಿಸುವಲ್ಲಿ ಇಂಥದ್ದೇ ಧರಿಸಬೇಕೆಂಬ ನಿಯಮವಿಲ್ಲ.

ಮಹಿಳೆಯರು ತಮ್ಮ ಕೂದಲುಗಳಿಂದ ತುರುಬ (ಮುಡಿ) ಕಟ್ಟಿಕೊಳ್ಳುತ್ತಾರೆ. ಮುಡಿಯನ್ನು ತಲೆಯ ಹಿಂಭಾಗದಲ್ಲಿಯೇ ಕಟ್ಟುವುದು ರೂಢಿಯಲ್ಲಿದೆ. ಕೆಲವು ಮಹಿಳೆಯರ ಕೂದಲುಗಳು ಉದ್ದಾಗಿದ್ದು ಅವರ ಮುಡಿಕಟ್ಟುವಿಕೆಯೂ ದೊಡ್ಡದಾಗಿರುತ್ತದೆ. ಅಲೆಮಾರಿಗಳು, ಶ್ರಮಿಕರು, ದುಡಿಮೆಗಾರರು ಆಗಿರುವ ಗೊಂದಲಿಗ ಮಹಿಳೆಯರು ದಿನನಿತ್ಯ ಜಳಕ ಮಾಡುವುದಿಲ್ಲ. ಆದರೆ ದೇವತೆಯ ವಾರ, ಅಮವಾಸೆ, ಹುಣ್ಣಿಮೆ, ನವರಾತ್ರಿಯಂಥ ಹಬ್ಬದ ದಿನಗಳಲ್ಲಿ ಮಹಿಳೆಯರು ಜಳಕ ಮಾಡುವುದು ಒಂದು ನಿಯಮದಂತೆ. ಒಂದು ಪದ್ಧತಿಯಂತೆ ಇಂದಿಗೂ ಇದೆ. ಹಬ್ಬದ ದಿನಗಳಲ್ಲಿ ಅಂಬಾಭವಾನಿಗೆ ಪೂಜೆ ಮಾಡಲೇಬೇಕೆಂಬ ನಿಯಮ ಮಹಿಳೆಯರಲ್ಲಿ ಇರುವುದರಿಂದ, ಅಂದು ಜಳಕ ಮಾಡಿ ಶುಭ್ರ ಬಟ್ಟೆ ಧರಿಸುತ್ತಾರೆ. ಪೂಜೆಯ ನಂತರ ತಮ್ಮ ತುರುಬಿಗೆ ಹೂವು ಮುಡಿಯುತ್ತಾರೆ. ನವರಾತ್ರಿ, ಯುಗಾದಿ ಮತ್ತು ಸ್ಥಳೀಯ ದೇವತೆಯ ಜಾತ್ರೆಯಂದು ಗೊಂದಲಿಗ ಮಹಿಳೆಯರು ಹೊಸ ಬಟ್ಟೆ ಧರಿಸುತ್ತಾರೆ. ಬಾಲಕಿಯರು ತಮ್ಮ ತಲೆಕೂದಲಿಗೆ ಜಡೆ ಹಣೆದುಕೊಳ್ಳುತ್ತಾರೆ. ಕೆಲವು ಭಾಗದಲ್ಲಿ ಹೆಳಲು (ಜಡೆ) ಕಟ್ಟು ರೂಢಿ ಇದೆ. ಬಾಲಕಿಯರು ಇಚ್ಚಿಸಿದಾಗ ಹೂ ಮುಡಿಯುವ ಸ್ವಾತಂತ್ರ್ಯವಿದೆ.

ಆಭರಣಗಳು:

ಸಾಮಾನ್ಯವಾಗಿ ಗೊಂದಲಿಗ ಮಹಿಳೆಯರು ತಮ್ಮ ಆರ್ಥಿಕ ಅನುಕೂಲಕ್ಕೆ ಅನುಗುಣವಾಗಿ ಆಭರಣಗಳನ್ನು ಧರಿಸುತ್ತಾರೆ. ಕೈಯಲ್ಲಿ ಬಳೆ, ಮೂಗಿನಲ್ಲಿ ನತ್ತು, ಕಿವಿಯಲ್ಲಿ ಬುಗಡಿ, ಹೂವ (ಓಲೆ) ಮಹಿಳೆಯರು ಧರಿಸಲೇಬೇಕೆಂಬ ನಿಯಮವಿದೆ. ಮದುವೆಯಾದವರ ಕೊರಳಲ್ಲಿ ತಾಳಿಸಾಮಾನು, ಕೋಯಿ (ಕರಿಮಣಿಯಿಂದ ಪೋಣಿಸಿದ ಒಂಟೆ ಎಳೆಯ ತಾಳಿಸರ) ಇರಲೇಬೇಕು. ಉಳಿದಂತೆ ತಲೆಯ ಗಂಟಿನ ಜಾಗದಲ್ಲಿ ಹಾಕುವ ಒಡವೆಗಳು ಗಜರ, ಮೂಗಿನ ತುದಿಗೆ ನತ್ತು, ಕೊರಳಿಗೆ ಬೋರ್ ಮಳ, ಗುಂಡಿನಸರ, ಚಪಲಹಾರ, ತಾಂದಳೀಪುತ್‌, ಪುತ್ಥಳೀಸರ (ಕಾಸಿನಸರ), ವಜ್ರ ಟಕ್ಕಿ, ಗೆಜ್ಜೆಟಕ್ಕಿನ ತೋಳಿನ ತೋಳ್ಬಂದಿ, ಮಣಿಕಟ್ಟಿಗೆ ಪಾಟ್ಲಿಬಿಲ್ವರ್, ಬಳೆ, ಬೆರಳಿಗೆ ಉಂಗುರ,ಸೊಂಟಕ್ಕೆ ಡಾಬು, ಕಾಲಿಗೆ ತೋಡೆ, ಕಾಲಿಗೇ ಇರುವ ಮತ್ತೊಂದು ವಿಶಿಷ್ಟ ಆಭರಣ, ಫೈಜಮ್‌, ಕಾಲುಂಗರ ಕಾಲುಮಚ್ಚಿ ಗೆಂದು (ಬೆಳ್ಳುಳ್ಳಿಯಾಕಾರದ ಒಂದು ಉಂಡೆ, ಕಾಲಿನ ನಾಲ್ಕನೆಯ ಬೆರಳಿಗೆ) ಇವು ಗೊಂದಲಿಗ ಮಹಿಳೆಯರು ಧರಿಸುವ ಆಭರಣಗಳು. ಈ ಆಭರಣಗಳನ್ನು ಅಂಬಾಭವಾನಿ ಪೂಜೆಗೂ ಅತ್ಯಂತ ಗೌರವದಿಂದ ಬಳಸುತ್ತಾರೆ.

ಗೊಂದಲಿಗರ ಸಾಂಸ್ಕೃತಿಕ ಅಸ್ತಿತ್ವ ಮತ್ತು ಮಹಿಳೆಯ ಹುಡುಕಾಟ

ಕನ್ನಡ ನಾಡು ವಿವಿಧ ಬಗೆಯ ವೃತ್ತಿ ಗಾಯಕರ ಕಥೋಪ ಜೀವಿಗಳ ಜೀವದಾಹಿ ನಾಡು. ಜಾನಪದ ಸಾಹಿತ್ಯದ, ಜಾನಪದ ಸಂಸ್ಕೃತಿಯ ಅಪೂರ್ವ ಗಣಿ. ಈ ವೃತ್ತಿಗಾಯಕರು ದಕ್ಷಿಣ ಭಾರತದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವೃತ್ತಿ ಕಲೋಪಜೀವಿಗಳಲ್ಲಿ ತಮ್ಮ ಮೂಲ ವೈಶಿಷ್ಟ್ಯ ಉಳಿಸಿಕೊಂಡು ಬಂದವರಲ್ಲಿ, ಈ ಗೊಂದಲಿಗ ಜನಾಂಗವೂ ಒಂದು. ಅರೆ ಅಲೆಮಾರಿಯಾದ ಈ ಜನಾಂಗವು ಭಾರತದಂತಹ ಬಹು ಜನಾಂಗೀಯ, ಬಹು ಮತ-ಧರ್ಮದ, ಬಹು ಭಾಷೆಯ, ವಿಭಿನ್ನ ಸಂಸ್ಕೃತಿಯ, ಬಹು ವಿಸ್ತಾರದ ಭೂಪ್ರದೇಶದಲ್ಲಿ ಅಲೆಮಾರಿಯಾಗಿ ಜೀವನ ನಿರ್ವಹಿಸುತ್ತಲೇ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ವಿಶಿಷ್ಟ ಸಂಸ್ಕೃತಿಯ ಹರಿಕಾರರಾಗಿ ಬದುಕಿ ಬಾಳಿದರು ಎಂಬುದು ಲಕ್ಷಿಸಬೇಕಾದುದಾಗಿದೆ.

ಗೊಂದಲ, ಗೊಂದಣ, ಗೊಂದಳ, ಗೋಂಧಳ, ಘೊಂಡಲಿ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಜನಾಂಗ ಗೊಂದಲ ಹಾಕುವುದನ್ನೇ ವೃತ್ತಿಯಾಗಿ, ಆಚರಣೆಯಾಗಿಸಿಕೊಂಡಿರುವುದರಿಂದಲೇ ಇವರಿಗೆ ಗೊಂದಲಿಗರೆನ್ನುತ್ತಾರೆ. ಮೂಲತಃ ಇವರು ದೇವಿಯ ಆರಾಧಕರು. ಈ ದೇವಿಯ ಪೂಜಾ ಕ್ರಮವನ್ನು ವಿಶಿಷ್ಟ ರೂಪದಲ್ಲಿ ವಾದ್ಯದ ಮುಖೇನ ನಡೆಸುವುದರಿಂದ ಅನ್ಯ ಸಮುದಾಯಗಳೂ ಈ ಕಲೆಯನ್ನು ಗೌರವಿಸಿವೆ. “ಗೊಂಧಲ”, “ಗೋಂಧಳ” ಇದು ಒಂದು ಗಾಯನ ವೃತ್ತಿಯನ್ನು ಸೂಚಿಸುವ ಪದವಾಗಿವೆ. ಇದು ದೇವಿ ಆರಾಧನೆಯ ಒಂದು ವಿಧಿ ವಿಧಾನ. ಈ ವಿಧಿ-ವಿಧಾನಗಳನ್ನು ಕ್ರಮ ಬದ್ಧವಾಗಿ ಹಾಕುವವರು, ನಡೆಸುವವರು ಗೊಂದಲಿಗರೆನಿಸಿದ್ದಾರೆ. ಹೀಗೆ ಗೊಂದಲ ಹಾಕುವವರ ಜನಸಮೂಹಕ್ಕೆ ಗೊಂದಲಿಗರು ಎಂದು ಕರೆಯಲಾಗುತ್ತದೆ. ಗೊಂದಲ ಇದು ಒಂದು ಜಾನಪದ ಕಲೆ. ಈ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬಂದ ಇವರು “ಗೊಂದಲಿಗರು” ಎಂದು ಸಾಮಾಜಿಕ ಮನ್ನಣೆಗೆ ಪಾತ್ರರಾಗಿದ್ದಾರೆ. ಮೂಲತಃ ದೇವರ ಆರಾಧನೆಯ ಒಂದು ವಿಧಿ, ಜಾನಪದ ನೃತ್ಯವಾದ ಈ ಕಲೆ ಇಂದು ಒಂದು ನಿಶ್ಚಿತ ಸಮುದಾಯವು ಮಾತ್ರ ಆಚರಿಸುವಂತಹ ಕಲೆ, ಧಾರ್ಮಿಕ ವಿಧಿಯಾಗಿ, ಆ ಜನಾಂಗದ ಪ್ರತೀಕವಾಗಿ ಅಸ್ತಿತ್ವದಲ್ಲಿದೆ.

ಈ ಗೊಂದಲ ಹಾಕುವ ಆಚರಣಾ ವಿಧಾನ ಅತ್ಯಂತ ಪ್ರಾಚೀನವಾದುದಾಗಿದ್ದು, ದೇವಿ ಆರಾಧನೆಯ ಈ ನೃತ್ಯ ಒಂದು ಸಾಮೂಹಿಕ (ದೇವಿ ಆರಾಧನೆಯ) ನೃತ್ಯವಾಗಿರುವುದನ್ನು ಕನ್ನಡದ ಪ್ರಾಚೀನ ಕಾವ್ಯಗಳು ದಾಖಲಿಸಿವೆ. ಒಂಬತ್ತು ಮತ್ತು ಹತ್ತನೆಯ ಶತಮಾನದ ಕನ್ನಡ ಕಾವ್ಯಗಳಾದ ಆದಿಪುರಾಣ, ಧರ್ಮಾಮೃತ, ಅಜಿತ ಪುರಾಣ, ವರ್ಧಮಾನ ಪುರಾಣಗಳಲ್ಲಿ ಗೊಂದಣ, ಗೊಂದಣಿ, ಗೊಂದಲ, ಗೊಂಧಳ ಎಂಬ ಪದಗಳ ಈ ಹಿನ್ನೆಲೆಯಲ್ಲಿಯೇ ಬಳಕೆಗೊಂಡಿರುವುದು ಈ ಮಾತಿಗೆ ಸಾಕ್ಷಿ ಎನಿಸುತ್ತದೆ. ಈ ಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಬಹು ಮುಖ್ಯ ಅಂಶವೆಂದರೆ ಗೊಂದಲ ಹಾಕುವವರು ಮಹಿಳೆಯರು ಎಂಬುದು. ಪ್ರಾಚೀನ ಕಾವ್ಯಗಳಲ್ಲಿ ಕಂಡು ಬರುವ ಈ ಸ್ವರೂಪ ಸಮಕಾಲೀನ ಗೊಂದಲಿಗರ ಸಮಾಜದಲ್ಲಿ ಇಲ್ಲದಿರುವುದು ಕುತೂಹಲಕರ ಸಂಗತಿಯಾಗಿದೆ.

“ವಿದ್ಯಾ ದೇವತೆಗಳೆನಿಸಿ ದಿವಿಜಿ ಸೌಂದರಿಯರ್ ಗೊಂದಣ ಮಾಡುವಲ್ಲಿ ಕಡೆಗಣ್ಣೊಳ್‌ತುಳುಕಯಂ ಕದಪಿನೊಳ್‌”[5] (ಆದಿಪುರಾಣ ೭-೧೨೬).

“ಇಂದ್ರ ಸ್ತ್ರೀಯರಾನಂದದಿಂ ಗೊಂದಳದೆ ಕುಣಿದು ಲೀಲಾನೃತ್ಯದಿಂ”[6] (ಅಜಿತ ಪುರಾಣ ೫-೪೩).

“ಅಳವಿಗದುತ್ಸವದೆ ಗೊಂದಣಂಗುಣಿವ ಗಣಿಕೆಯರ ಪದ ಪ್ರಚಾರಕ್ಕೆ ಬೆರ್ಚಿ”[7] (ಚಂದ್ರ ಪುರಾಣ ೧೫-೩೫ವ)

“ನವ್ಯ ನರ್ತಕ ನರ್ತಕೀ ಪ್ರಯತಂ ಬಹಳ ಗೊಂದಣಾಸ್ಥಾನ ತೆಲಗುವಾಗಿ” (ಜೊಮಯ್ಯ ರಗಳೆನಾಗಿ)[8]

ಹೀಗೆ ಅನೇಕ ಪ್ರಾಚೀನ ಕಾವ್ಯಗಳು ಈ ಗೊಂದಲ ನೃತ್ಯದ ಬಗೆಗೆ ಸಾದರಪಡಿಸಿರುವುದು ಕಂಡು ಬರುತ್ತದೆ. ಈ ನೃತ್ಯ ಅಥವಾ ಧಾರ್ಮಿಕ ವಿಧಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದುದು ಸ್ಪಷ್ಟವಾಗುತ್ತದೆ. ಈ ಗೊಂದಲವು ದೇವಸ್ಥಾನಗಳಲ್ಲಿ ರಾಜನ ಮುಂದೆ ಅತ್ಯಂತ ಭಕ್ತಿಭಾವದಿಂದ ನೃತ್ಯಗಾರ್ತಿಯರು, ನೃತ್ಯಗಾರರು ಆನಂದದಿಂದ ಅತ್ಯಂತ ವಿಶಿಷ್ಟವಾಗಿ ಈ ಗೊಂದಲ ನೃತ್ಯ ಪ್ರದರ್ಶಿಸುತ್ತಿದ್ದರೆಂಬುದನ್ನು ಕನ್ನಡ ಕಾವ್ಯಗಳು ದಾಖಲಿಸಿವೆ. “ಕರ್ನಾಟಕದಲ್ಲಿ ಹಾಡುಗಬ್ಬವನ್ನು ಹಾಡಿ ಜನರನ್ನು ತಣಿಸುವ ಅನೇಕ ಜನಾಂಗಗಳಿವೆ. ಅವರ ಉದ್ಯೋಗ ಹಾಡುವುದು. ಕಥೆ ಹೇಳುವುದಾಗಿದೆ. ಕೆಲವರಂತೂ ಕರ್ನಾಟಕದ ತುಂಬಾ ಅಲೆದಾಡುತ್ತಾರೆ. ಅಲ್ಲದೆ ನೆರೆಯ ರಾಜ್ಯಗಳಲ್ಲಿದ್ದಾರೆ. ಸುಮಾರು ಏಳು ಅಥವಾ ಎಂಟು ಶತಮಾನಗಳಿಂದ ಕಥೆ ಹೇಳಿ ಮನವನ್ನು ತಣಿಸಿದ ದೊಡ್ಡ ಪಂಗಡವು ಈಗಲೂ ಕರ್ನಾಟಕದಲ್ಲಿದೆ. ಈ ಪಂಗಡದ ಜನರೇ ಈಗಿನ ಗೊಂದಲಿಗರು”[9] ಎಂಬ ಅಭಿಪ್ರಾಯಕ್ಕೆ ಜಾನಪದ ವಿದ್ವಾಂಸರು ಬಂದಿದ್ದಾರೆ.[1]      ಕನ್ನಡ ಸಂಕ್ಷಿಪ್ತ ನಿಘಂಟು, ಕ.ಸಾ.ಪ-ಪುಟ ೩೯೬.

[2]      ಕನ್ನಡ ಸಂಕ್ಷಿಪ್ತ ನಿಘಂಟು, ಕ.ಸಾ.ಪ-ಪುಟ ೩೯೬

[3]        ಕೆ.ಎಫ್‌.ಕಿಟೆಲ್‌: ಕನ್ನಡ ಇಂಗ್ಲಿಷ್‌ಡಿಕ್ಷನರಿ, ಪುಟ- ೫೬೭ (೧೮೯೪)

[4]      ಕ್ಯಾತನಹಳ್ಳಿ ರಾಮಣ್ಣ: ಗೊಂದಲಿಗರು-ಒಂದು ಅಧ್ಯಯನ, ಪುಟ-೧೧

[5]      ಎಸ್.ಜಿ.ನರಸಿಂಹಾಚಾರ್ (ಸಂ), ಆದಿಪುರಾಣ ದ್ವಾದಶಾಶ್ವ ಪುಟ-೧೭-೧೨೬ ಸಂ-೩.

[6]      ಮಂ.ಆ.ರಾಮಾನುಜಯ್ಯಂಗಾರ (ಸಂ), ಅಜಿತ ಪುರಾಣ, ೫-೪೩

[7]        ಎಸ್.ಜಿ.ನರಸಿಂಹಾಚಾರ್ (ಸಂ) ಚಂದ್ರಪುರಾಣ, ೧೨-೩೫ ವ

[8]        ಎಂ.ಎಂ.ಕಲಬುರ್ಗಿ (ಸಂ) ಹರಿಹರನ ರಗಳೆಗಳು, ಪುಟ ೨೪೯

[9]        ಡಾ.ನಿಂಗಣ್ಣ ಸಣ್ಣಕ್ಕಿ, ಗೊಂದಲಿಗರ ಸಂಸ್ಕೃತಿ, ಪುಟ-೬೪