ಗೊಂದಲಿಗ ಮಹಿಳೆಯರು ಸಾಂಸ್ಕೃತಿಕ ಅನನ್ಯತೆಯ ಚಹರೆಗಳು:

ಈ ಗೊಂದಲಿಗ ಸಂಸ್ಕೃತಿಯ ವಿಶಿಷ್ಟತೆ ಎಂದರೆ, ಮೂಲತಃ ಮಾತೃ ಸಂಸ್ಕೃತಿಯ ಕಲೆಯಾದ ಈ ಧಾರ್ಮಿಕ ವಿಧಿಯ ನೃತ್ಯ. ಪ್ರಾಚೀನ ಕಾಲದಿಂದಲೂ ಮಹಿಳೆಯರಿಂದಲೇ ಪ್ರದರ್ಶನಗೊಳ್ಳಲ್ಪಡುತ್ತಿದ್ದುದನ್ನು ಲಕ್ಷಿಸಬೇಕಾದ ಮಹತ್ವದ ಸಂಗತಿಯಾಗಿದೆ. ಇದು ಶಕ್ತಿ ದೇವತೆಯ ಮೂಲ ಆರಾಧನಾ ನೃತ್ಯ ಆಗಿರುವುದರಿಂದ ಈ ಗೊಂದಲಿಗರ ಕುಲದೈವ “ಮಾತೃರೂಪಿ” ಯಾಗಿರುವುದರಿಂದ ಆಕೆ ಪಾರ್ವತಿ, ಅಂಬಾಭವಾನಿ, ಜಗದಂಬೆ, ಮಹಾಲಕ್ಷ್ಮಿ, ಯಲ್ಲಮ್ಮ ಇತ್ಯಾದಿ ಆಗಿರುವುದರಿಂದ ಈ ಗೊಂದಲ ಹಾಕುವುದು ಮೂಲತಃ ಮಾತೃ ಪ್ರಧಾನ ನೆಲೆಯಿಂದಲೇ ಬಂದುದಾಗಿದ್ದು ಮಹಿಳೆಯರಿಂದಲೇ ಗೊಂದಲ ಹಾಕುತ್ತಿದ್ದರೆಂದು ಪ್ರಾಚೀನ ಕಾವ್ಯಗಳು ಪ್ರಸ್ತುತ ಪಡಿಸುತ್ತವೆ. ಇದಕ್ಕೆ ಆಧಾರವಾಗಿ ಪಂಪನ ಆದಿಪುರಾಣದಲ್ಲಿ ಈ ಕೆಳಗಿನ ಮಾತುಗಳು ಗಮನಾರ್ಹ.

“ಅಂತು ದೇವೇಂದ್ರಕರ ಸರೋಜಾ ಕರದೋಳ್ ಸಮುತ್ಫಲ್ಲಮುಖ ಪದ್ಮಂಗಳಿಂ ಪದ್ಮಿನಿಗಳೆನಿಸಿ ಸುರೇಂದ್ರ ತಾರಾಹಾರ ಮುಕ್ತಾಫಳ ಪ್ರತಿಬಿಂಬಿತ ತನು ಗುಳಿಂ ವಿದ್ಯಾದೇವತೆಗಳೆನಿಸಿ ದಿವಿಜಿ ಸೌಂದರಿಯರ್ ಗೊಂದಣ ಮಾಡುವಲ್ಲಿ ಕಡೆಗಣ್ಣೊಳ್‌ತುಳುಕಿಯಂ ಕದಪಿನೊಳ್‌ಪೊಂಪುಂವೋಹಿಯಂ ಭ್ರೂವಿಭ್ರಮದೊಳ್‌ಪೊನ್‌ಲ್ವರಿದುಂ ಅರುಣಾಧರದೊಳ್‌ಕೊಳಂಗೊಂಡುಂ ದರಹಸಿತದೊಳ್‌ಬೆಳ್ಳಂಗೆಡೆದುಂ ಅಂಗರಾದಗೊಳ್‌ರಂಗಂ ಬಡೆದು ಸಿರಿಸದಾಮ ಕೋಮಲೆಯರ ಭಜಲತೆಗಳೊಳ್‌ಪಸರಸಿಯಂ ಘನಸ್ತನಂಗಳೆಡಪಿಯಂ ಗಂಭೀರನಾಭಿಯೊಳ್‌ಸಂಗೊಂಡುಂ ನಿತಂಬದೊಳ್‌ತುಂಬಿಯಂ ಮೃದು ಪದದೊಳಂದಂಬಡೆದುಂ ಆಕೆಗಳಂಗೋಪಾಂಗದೊಳಿಂತು ನಾಟ್ಯರಸಮೆ ತೀವಿ ತುಳುಂಕುಗಟ್ಟಿ ವಿವಿಜ ಸಾಮಾನಿಕ ಜನಕ್ಕು ನಾಬಿರಾಜಾದಿ ಮನುಜ ಸಭೆಗಂ ಅತ್ಯಶ್ಚರ್ಯಮಂ ಮಾಡಿದಾಗಳ್‌”

[1] (ಆದಿಪುರಾಣ ೭-೧೨೬).

“ಅಳವಿಗೞದುತ್ಸವದೆ ಗೊಂದಣಂಗುಣೆವ ಗಣಿಕೆಯರ ಪದ ಪ್ರಚಾರಕ್ಕೆ ಬೆರ್ಚಿ” (ಚಂದ್ರ ಪುರಾಣ ೧೨-೩೫)[2]

“ಕವಿ ಗಮಕಿ ವಾದಿ ವಾಗ್ಮಿಕ ವಾಹಕ ಗಜಾರೋಹಕ ಸರಸ ಗಾಯಕ ಭಾವಚಿತ್ರಕ ಪುಣ್ಯಪಾಠಕ ನವ್ಯನರ್ತಕ ನರ್ತಕೀ ಪ್ರಯತಂ ಬಹಳ ಗೊಂದಣಾಸ್ಥಾನವಾಗಿ ಕೆಂಪಡರ್ದ ಕಂಗಳಿಂ ಕೆತ್ತುವ ಮೀಸೆಯಿಂ ಚಿತ್ತದ ಕ್ಷೋಭೆಯಿಂ ಮನದ ಕಡುಗೋಪದಿಂ ಚಾಳುಕ್ಯ ಚಕ್ರೇಶ್ವರ ಕಲಿಯುಗ ರಾವಣಂ ಪೆರ್ಮಾಡಿರಾಯರಂ”[3] (ತೆಲಗು ಜೊಮ್ಮಯ ರಗಳೆ).

“ಅರಮನೆಗೆ ಪೋಪ ನೃತರಂದಳದ ಗೊಂದಳದ ತರುಣಿಯರ ಮಣಿಭೂಷಣಾವಳಿಯ ಗಾವಳಿಯ ಪರಮ ಭೀಷಣ ಪಟುಭಟಾಳಿಗಳ ಕೇಳಿಗಳ ಪಾಳೆಯಂ ಕಣ್ಗೆಸೆದುದು”[4] (ಚೆನ್ನಬಸವ ಪುರಾಣ ೪೨-೧೫).

ಇಲ್ಲಿ “ವಿದ್ಯಾದೇವತೆಗಳೆನಿಸಿ ದಿವಿಜ ಸೌಂದರಿಯರ್ ಗೊಂದಣ ಮಾಡುವಲ್ಲಿ” ಗೊಂದಣಗುಣಿವ ಕಣಿಕೆಯರ” “ನವ್ಯ ನರ್ತಕ ನರ್ತಕೀ ಪ್ರಯುತಂ ಬಹಳ ಗೊಂದಣಾಸ್ಥಾನನಾಗಿ” “ಗೊಂದಳದ ತರುಣಿಯರ ಮಣಿಭೂಷಣಾವಳಿಯ” ಎನ್ನುವಲ್ಲಿ ಪ್ರಾಚೀನ ಕಾಲ ಮತ್ತು ಮಧ್ಯಯುಗದಲ್ಲಿ ಮಹಿಳೆಯರು ಈ ಗೊಂದಲ ನೃತ್ಯ ಹಾಕುತ್ತಿದ್ದು ಸ್ಪಷ್ಟವಾಗಿದೆ. ದ್ರಾವಿಡ ಮೂಲವಾದ ಮಾತೃ ಪ್ರಧಾನ ಸಂಸ್ಕೃತಿಯ ಈ ಆಚರಣೆಯ (ನೃತ್ಯ) ಆರ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ, ಅನ್ಯ ಅರಸರ ಆಕ್ರಮಣ ಕಾಲದಲ್ಲಿ ಮಹಿಳೆಯ ಮುಕ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದುದರ ಪರಿಣಾಮವಾಗಿಯೋ, ಮಹಿಳೆಯರ ಮೇಲೆ ಪುರುಷರ ನಿಯಂತ್ರಣ ಬಲಗೊಂಡು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ, ತನ್ನ ತೆಕ್ಕೆಗೆ ಈ ಆಚರಣೆಯನ್ನು ತೆಗೆದುಕೊಂಡಿದೆ. ಹೀಗಾಗಿ ಮಹಿಳೆಯರೇ ಗೊಂದಲ ಹಾಕುವ ಅಥವಾ ಗೊಂದಲಿಗರ ತಂಡದಲ್ಲಿ ಗೊಂದಲ ಹಾಕುವ ಮೇಳದಲ್ಲಿ ಪ್ರವೇಶ ಪಡೆದಿರುವ ಉದಾಹರಣೆ ಈ ಕಾಲದಲ್ಲಿ ಕಂಡು ಬರದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

ಈ ಗೊಂದಲಿಗ, ಗೊಂದಲ ಆಚರಣೆಯ ಮುಖ್ಯ ಉದ್ಧೇಶ ಜನಪದರ ಜೀವನ ತಿದ್ದುವುದು, ಶಕ್ತಿ ದೇವತೆ, ಅಂಬಾಭವಾನಿ, ಜಗದಾಧಿಮಾತೆಯ ಭಕ್ತರನ್ನಾಗಿ ಬೆಳೆಸಿ, ಭಕ್ತರ ಮನ ಆ ಕಡೆ ಹರಿಯುವಂತೆ ಮಾಡುವುದು ಗೊಂದಲಿಗ ಸಂಸ್ಕೃತಿಯ ಮೂಲ ಉದ್ದೇಶ.

ಸಾಂಸ್ಕೃತಿಕ ಚಹರೆಗಳು ಹಬ್ಬಗಳು:

ಮೂಲತಃ ಶಕ್ತಿಯ ಆರಾಧಕರಾದ ಈ ಗೊಂದಲಿಗರು ದ್ರಾವಿಡ ಮೂಲದವರು. ಮಾತೃ ಪ್ರಧಾನ ಜೀವನ ಪದ್ಧತಿಯಿಂದ ಬಂದವರಾದ್ದರಿಂದ ಸಹಜವಾಗಿಯೇ ಶಕ್ತಿ ದೇವತೆಯ ಆರಾಧನೆ ಮಾಡುತ್ತಾರೆ. ಮಾತೆಯ ಬಗೆಗೆ ಅತ್ಯಂತ ಗೌರವ ಭಾವ ಉಳ್ಳವರಾಗಿದ್ದಾರೆ.

ಗೊಂದಲಿಗ ಮಹಿಳೆಯರು ಪ್ರತಿ ಮಂಗಳವಾರ ಮತ್ತು ಶುಕ್ರವಾರ, ಅಮವಾಸ್ಯೆ ಮತ್ತು ವ್ರತದ ದಿನಗಳಂದು ತಪ್ಪದೆ ದೇವಿಯ ಸೇವೆ ಸಲ್ಲಿಸುವರು. ಶ್ರಾವಣ ಮಾಸ, ಸಂಪತ್ತು ಶುಕ್ರವಾರ, ಮಂಗಳಗೌರಿ ಪೂಜೆಯ ದಿನಗಳಂದೇ ಅಂಬಾಭವಾನಿ ಭಕ್ತರ ಮನೆ ಮನೆಗೆ ಹೋಗಿ ದೇವಿಸ್ತುತಿಪರ ಹಾಡುಗಳನ್ನು ಈ ಮಹಿಳೆಯರು ಹಾಡುತ್ತಾರೆ. ಅಲ್ಲದೆ ನವರಾತ್ರಿಯ ದಿನಗಳೆಂದು ಅಂಬಾಭವಾನಿಯ ಸ್ತುತಿಗೈವರು. ಅದರಲ್ಲೂ ಅಂಬಾಭವಾನಿ ಮನೆ ದೇವರಾಗಿರುವ ಭಕ್ತರ ಮನೆಗಳಲ್ಲಿ ಇವರಿಗೆ ವಿಶೇಷ ಮರ್ಯಾದೆ. ದೇವಿಯೇ ಮನೆಗೆ ಬಂದಷ್ಟು ಭಕ್ತಿ-ಭಾವ ತೋರುತ್ತಾರೆ. ತುಳಜಾಪುರಕ್ಕೆ ಹೋಗಿ ಬಂದಷ್ಟೇ ಸಂತೋಷ ಪಡುತ್ತಾರೆ.

ಗೊಂದಲಿಗರು ದೇವರ ಅಸ್ತಿತ್ವಕ್ಕಿಂತ ದೇವತೆಯ ಅಸ್ತಿತ್ವ ಒಪ್ಪುತ್ತಾರೆ. ಪ್ರಕೃತಿ (ಸ್ತ್ರೀರೂಪ) ಮೊದಲು. ನಂತರ ಪುರುಷ ರೂಪ ಎಂಬ ನಂಬಿಕೆಗಳಿವೆ. ದೇವಿ ಶಕ್ತಿಗೆ ಮೊದಲ ಆರಾಧನೆ ಸಲ್ಲುತ್ತದೆ. ಕಾರಣ ಶಕ್ತಿ ಮೂಲವಾದ ಹಬ್ಬಗಳನ್ನು ಇವರು ಆಚರಿಸುತ್ತಾರೆ.

ಬೇವಿನ ಹಬ್ಬ:

ಭಾರತೀಯರಿಗೆ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿ ಚಂದ್ರಮಾನದಂದು. ಹಬ್ಬಗಳಲ್ಲಿಯೇ ಆದಿಯಾಗಿರುವ ಹಬ್ಬ ಬೇವಿನ ಹಬ್ಬ. (ಯುಗಾದಿ ಹಬ್ಬ). ಇದನ್ನು ಈ ಸಮುದಾಯದ ಮಹಿಳೆಯರು ತಮ್ಮ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಬೇವಿನ ಹಬ್ಬದಂದು ಮನೆಯನ್ನು ಸ್ವಚ್ಚಗೊಳಿಸಿ ಎಲ್ಲ ಹಾಸಿಗೆ ಹೊದಿಗೆ ಬಟ್ಟೆಗಳನ್ನು ಮಡಿ ಮಾಡಿ ಕುಟುಂಬದ ಸದಸ್ಯರೆಲ್ಲರೂ ಬೇವಿನ ತೊಪ್ಪಲ ಬೆರೆಸಿದ ನೀರಿನಿಂದ ಸ್ನಾನ ಮಾಡುತ್ತಾರೆ. ಅಂದು ಊಟದ ಮುನ್ನ ಬೇವಿನ ಮುಗುಳು. ಬೇವಿನ ಹೂವಿನೊಳಗೆ ಬೆಲ್ಲ ಸೇರಿಸಿ ಪ್ರತಿಯೊಬ್ಬರೂ ತಿನ್ನುತ್ತಾರೆ.

ಗುಡಿಪಾಡವಾ:

ಈ “ಬೇವಿನ ಹಬ್ಬ” ದಂದು “ಗುಡಿಪಾಡವಾ” ಆಚರಣೆ ಮಾಡುತ್ತಾರೆ. ಈ ಆಚರಣೆಯಲ್ಲಿ ಮೊದಲು ಒಂದು ಗೊಂಬೆಯನ್ನು ಮಾಡಿ ಪೂಜೆ ಸಲ್ಲಿಸುವ ಪದ್ಧತಿ ಇತ್ತು. ಈ ಗೊಂಬೆಯು ತಮ್ಮ ಪೂರ್ವಜರ ಸಂಕೇತವಾಗಿತ್ತು. ಕುಟುಂಬದ ಹಿರಿಯರ ಸಂಕೇತವಾದ ಈ ಗೊಂಬೆಗೆ ಪೂಜೆ ಸಲ್ಲುತ್ತದೆ. ಈ ಗೊಂಬೆಯನ್ನು ಗುಡಿಯಲ್ಲಿ ಒಯ್ದು ಪೂಜಿಸುವ ರೂಢಿ ಆಚರಣೆಗೆ ಬಂತು. ಗುಡಿಯಲ್ಲಿ ಪೂಜಿಸುವ ಪೂಜೆ, ಗುಡಿಪೂಜೆ “ಗುಡಿಪಾಡವಾ” ಎಂದು ಕರೆಯಲಾಗುತ್ತಿದೆ. ಇದನ್ನು ಮಹಿಳೆಯರೇ ಮಾಡುತ್ತಾರೆ. ಜನಾಂಗೀಯ ಸಾಂಸ್ಕೃತಿ ಆಚರಣೆಗಳ ವಾರಸುದಾರರಾಗಿ ಮಹಿಳೆ ಕಾಣಿಸಿಕೊಳ್ಳುವ ಜವಾಬ್ದಾರಿಯನ್ನು ಈ ಹಬ್ಬಗಳು (ವಿಶೇಷವಾಗಿ ಮಹಿಳೆಗೆ ಮೀಸಲಾಗುವುದರ ಮೂಲಕ) ಸೂಚಿಸುತ್ತವೆ. ಬಹುಶಃ ಧಾರ್ಮಿಕ ವಿಧಿವಿಧಾನಗಳ “ಜತನ” ಮಹಿಳೆಯಿಂದಲೇ ಸಾಧ್ಯವೆನ್ನುವುದಕ್ಕೆ ಗೊಂದಲಿಗರ ಮಹಿಳೆ ಸಾಕ್ಷಿಯಾಗಿದ್ದಾಳೆ.

ಇದಲ್ಲದೆ ಇನ್ನು ಕೆಲವು ಕಡೆ ಒಂದು ಕಟ್ಟಿಗೆ ಅಥವಾ ಗಳಕ್ಕೆ ಹೊಸ ಚರಿಗೆಯನ್ನು ಅಧೋಮುಖವಾಗಿ ಹೊಸ ಬಟ್ಟೆಯಲ್ಲಿ ಕಟ್ಟಿ (ಕುಪ್ಪಸ ಅಥವಾ ವಸ್ತ್ರ) ಮನೆಯ ಮೇಲೆ ಅಥವಾ ಕಿಡಕಿಯಲ್ಲಿ ಕಟ್ಟಿ ಧ್ವಜದ ರೀತಿ ನಿಲ್ಲಿಸಲಾಗುತ್ತದೆ. ಗುಡಿ (ಧ್ವಜ) ಪೂಜೆಯನ್ನು ಮಾಡುತ್ತಾರೆ. ಉತ್ತರ ಕರ್ನಾಟಕದ ಬೇರೆ ಬೇರೆ ಉಪಸಂಸ್ಕೃತಿಯಲ್ಲಿಯೂ ಇದೇ ತೆರನಾದ ಆಚರಣೆಗಳಿವೆ. “ಗುಡಿ” ಎಂಬ ಶಬ್ದ ಅಚ್ಚಗನ್ನಡದ ದೇಶಿ ಹಬ್ಬ. ಇದು ಇಂದಿಗೂ ಗೊಂದಲಿಗರ ಸಮುದಾಯದಲ್ಲಿ ಆಚರಣೆಯಲ್ಲಿದೆ.

ಈ ಬೇವಿನ ಹಬ್ಬ “ಗಡಿಪಾಡವಾ” ಆಚರಣೆಯಲ್ಲಿ ಮಹಿಳೆಯರದೇ ಸಿಂಹಪಾಲು. ಹಬ್ಬದಂದು ಮನೆಯ ಬಾಗಿಲುಗಳಿಗೆ ಮಾವಿನ ಎಲೆ ಅಥವಾ ಹೊಂಗಲ ತಳಿರು ಅಥವಾ ಅಶೋಕ ಗಿಡದ ಎಲೆಗಳನ್ನು ಕಟ್ಟಿ ಬಾಗಿಲು ಸಿಂಗರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕುವುದು. ಮನೆಯ ಮುಂದಿನ ಗೋಡೆಗೆ ಚುಕ್ಕಿ ಚಿತ್ರ ಬರೆಯುವುದು. ಹಬ್ಬದೂಟಕ್ಕಾಗಿ ಹೋಳಿಗೆ, ಗಳಿಕಡಬು, ಹುಗ್ಗಿ, ಶಾವಿಗೆ ಅಥವಾ ಗುಳಿಗೆ ಪಾಕ ಸಿದ್ಧಪಡಿಸುವುದು ಮಹಿಳೆಯರದ್ದಾಗಿದೆ.

“ಊರಾಗ ಯುಗಾದಿ ಉಂಡ್ಹೋಗ ಅಣ್ಣಯ್ಯ
ಶಾವೀಗೆ ಆಗಿ ಗುಳಿಗ್ಯಾಗಿ| ಮ್ಯಾಲಿನ
ಬಾನ ಬಸಿಯೋದಾ ತಡವಿಲ್ಲ”

ಎನ್ನುವಂತ ಈ ಮಹಿಳೆಯರ ಜನಪದ ಹಾಡುಗಳು ಈ ಹಬ್ಬದ ಮಹತ್ವವನ್ನು ಹಬ್ಬದೂಟವನ್ನು ಸಾದರಪಡಿಸುತ್ತವೆ.

ಈ ಬೇವಿನ ಹಬ್ಬದಂದು ಹೆಣ್ಣು ಗೊತ್ತು ಮಾಡುವುದು, ಮದುವೆ ಮಾಡುವುದು, ಬೆಳ್ಳಿ ಬಂಗಾರ, ಕಂಚು, ತಾಮ್ರ ಇತ್ಯಾದಿ ಕೊಳ್ಳುವುದು ಶುಭಕರವೆಂಬುದು ಈ ಮಹಿಳೆಯರ ಅಭಿಪ್ರಾಯವಾಗಿದೆ. ಅಲ್ಲದೆ ಈ ಹಬ್ಬದಂದು ತಮ್ಮ ಬಂಧುಗಳಲ್ಲಿ ತಮ್ಮ ತಮ್ಮಲ್ಲಿ ಸಿಹಿ ಉಪಹಾರ, ಬಟ್ಟೆ, ಕುಪ್ಪಸ ಕಾಣಿಕೆ ತೆಗೆದುಕೊಳ್ಳುವ ಪದ್ಧತಿ ಈ ಮಹಿಳೆಯರಲ್ಲಿದೆ.

ಬನ್ನಿಹಬ್ಬ

ಈ “ಬನ್ನಿ ಹಬ್ಬ”ವನ್ನು ಹಿಂದೂ ಸಮುದಾಯದವರು ದೇಶಾದಾದ್ಯಂತ ಮಹಾನವಮಿ, ನವರಾತ್ರಿ, ದಸರಾ ಹಬ್ಬ, ವಿಜಯ ದಶಮಿ, ಬನ್ನಿಹಬ್ಬ, ನಾಡಹಬ್ಬ ಇತ್ಯಾದಿ ಹೆಸರುಗಳಿಂದ ಆಚರಿಸುತ್ತಾರೆ. ಕನ್ನಡ ನಾಡಿನಲ್ಲಿ ಮಾತ್ರ “ಬನ್ನಿಹಬ್ಬ”ವೆಂದೇ ಪೂರ್ವಜರ ಕಾಲದಿಂದಲೂ ಕರೆಯುವ ರೂಢಿ ಇದೆ. ಅಲೆಮಾರಿಗಳಾದ ಗೊಂದಲಿಗರು ಈ ಹಬ್ಬದಂದು ತಮ್ಮ ಮೂಲ ನೆಲೆಗೆ ಬರುತ್ತಾರೆ. ಮೂಲ ನೆಲೆ ಇಲ್ಲದವರು ತಾವು ವಾಸವಾಗಿರುವ ಸ್ಥಳದಲ್ಲಿಯೇ ಅಂಬಾಭವಾನಿ, ದುರ್ಗಾ ದೇವತೆ ಅಥವಾ ಶಕ್ತಿ ದೇವತೆಯ ಗುಡಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಈ ಗೊಂದಲಿಗ ಮಹಿಳೆಯರು ಶಕ್ತಿ ದೇವತೆಗೆ ಬೇಡಿಕೊಂಡಿದ್ದರೆ ಸಾಮಾನ್ಯವಾಗಿ ಈಗ ತಾನೇ ಹೊಸ ದಾಂಪತ್ಯಕ್ಕೆ ಕಾಲಿರಿಸಿರುವವರು ಬದುಕು ದೇವಿಯ ಹಾರೈಕೆಯಿಂದ ಸುಖವಾಗಲಿ, ವಂಶಾಭಿವೃದ್ಧಿಗಾಗಿ ಒಳ್ಳೆ ಮಕ್ಕಳನ್ನು ದೇವಿ ಕೊಡಲಿ, ಮಕ್ಕಳು ದುಶ್ಚಟಕ್ಕೆ ಬಲಿಯಾಗದಿರಲಿ, ದೇವಿ ನಮ್ಮನ್ನು ಕಾಪಾಡಲಿ ಎಂದು ಹರಕೆಯ ಗೊಂದಲ ಹಾಕಿಸುತ್ತಾರೆ. ಹರಕೆ ಹೊತ್ತಾಗ ಹರಕೆ ತೀರಬೇಕು. ಹನ್ನೆರಡು ವರುಷದ ಹರಕೆ ಹಾಳಾಗಬಾರದು” ಎಂಬುದು ಈ ಸಮುದಾಯದ ಮಹಿಳೆಯರ ಭಾವನೆಯಾಗಿದೆ.

ಬನ್ನಿ ಹಬ್ಬದಂದು ಬನ್ನಿ ವಿನಿಮಯ ಮಾಡಿಕೊಂಡು ಕುಟುಂಬ ಅಥವಾ ನೆಂಟರಲ್ಲಿ ಜಗಳಗಳಿದ್ದರೆ ಜಗಳವಾಗಿರುವ ಜನರನ್ನು ದೇವಿಯ ಸಮ್ಮುಖದಲ್ಲಿ ಕೂಡಿಸಿ ನ್ಯಾಯ ನಿರ್ಣಯಿಸಿ ಬನ್ನಿ ಕೊಟ್ಟು ಬಗೆಹರಿಸುವ ಪದ್ಧತಿಯು ಈ ಹಬ್ಬದ ವಿಶೇಷವಾಗಿದೆ. ಈ ಬನ್ನಿ ಹಬ್ಬ ವಿಷಮ ಜೀವನ, ಮೈಮನಸ್ಸು, ಭಿನ್ನಾಭಿಪ್ರಾಯ ದೂರಸರಿಸಿ ಹೊಸ ಬದುಕು ರೂಪಿಸುವಲ್ಲಿ ಸಹಕಾರಿಯಾಗಿದೆ.

ಘಟ್ಟ ಹಾಕುವುದು:

ಈ ಹಬ್ಬದಲ್ಲಿ ಗೊಂದಲಿಗೆ ಮಹಿಳೆಯರ ಇನ್ನೊಂದು ವಿಶೇಷತೆ ಎಂದರೆ “ಘಟಸ್ಥಾಪನೆ” ಮಾಡುವುದು. ಮೂಲತಃ ಮಾತೃ ಪ್ರಧಾನ ಕೃಷಿ ಕುಟುಂಬದ ಜನಾಂಗವಾಗಿರುವ ಈ ಗೊಂದಲಿಗ ಮಹಿಳೆಯರು ಕುಂಬಾರರ ಮನೆಗೆ ಹೋಗಿ ಎರಡು ಮಣ್ಣಿನ ಮಡಕೆ ತಂದು ಅವುಗಳಲ್ಲಿ ಮಣ್ಣು ಹಾಕಿ ಜೋಳ, ಗೋಧಿ ಇತ್ಯಾದಿ ಬೀಜ ಬಿತ್ತಿ ನೀರು ಹಾಕಿ ಬೆಳೆಸಿ ಹಬ್ಬದ ದಿನದಷ್ಟೊತ್ತಿಗೆ ಅವು ಸಸಿಗಳಾಗಿರುತ್ತವೆ. ಅದನ್ನು ದೇವರ ಮುಂದೆ ಇಟ್ಟು ಪೂಜಿಸುತ್ತಾರೆ. ಇದಕ್ಕೆ ಘಟ್ಟ ಹಾಕುವುದು ಎನ್ನಲಾಗುತ್ತದೆ. ಇದರಿಂದ ಈ ಗೊಂದಲಿಗರು ಮೂಲತಃ ಮಾತೃ ಪ್ರಧಾನ ಕುಟುಂಬದವರಾಗಿದ್ದು ಮಾತೃ ಶಕ್ತಿ ಆರಾಧಕರಾಗಿರುವುದು ಸ್ಪಷ್ಟವಾಗುತ್ತದೆ.

ಆಷಾಡ ಹಬ್ಬ: ದುರ್ಗವ್ವನ ಹಬ್ಬ

ಆಷಾಡ ಮಾಸವು ಕರ್ನಾಟಕದ ಜನರಿಗೆ ಅದರಲ್ಲೂ ಒಕ್ಕಲ ಮಕ್ಕಳಿಗೆ ಜೀವ ಚೈತನ್ಯ ತುಂಬಿ ದುಡಿಮೆಗೆ ಇಳಿಸುವ ಹಬ್ಬವೆನಿಸಿದೆ. ಗೊಂದಲಿಗರ ಸಮಾಜದಲ್ಲಿ ಆಷಾಡ ಮಾಸದ ದುರ್ಗಾಷ್ಟಮಿ ಅಥವಾ ದುರ್ಗವ್ವನ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ದುರ್ಗವ್ವ, ದುರ್ಗಾದೇವಿಯ ಹಬ್ಬ ಅಷ್ಟಮಿಯ ದಿನ ಬರುತ್ತದೆ. ವಿಶೇಷವಾಗಿ ಶುಕ್ರವಾರ ಇಲ್ಲವೆ ಮಂಗಳವಾರ ಈ ಹಬ್ಬದ ಆಚರಣೆ ನಡೆಯುತ್ತದೆ.

ಈ ಹಬ್ಬದಂದು ಸಂಚಾರದಲ್ಲಿರುವ ಈ ಸಮುದಾಯದವರು ತಮ್ಮ ಮೂಲ ನೆಲೆಗೆ ಆಗಮಿಸುತ್ತಾರೆ. ಊರ ನಡುವೆ ವರ್ಷಕ್ಕೊಮ್ಮೆ, ನಿರ್ಮಿಸುವ ತಾತ್ಕಾಲಿಕ ಗುಡಿಯಲ್ಲಿ ಈ ದೇವತೆಯನ್ನು ಪೂಜಿಸುತ್ತಾರೆ. ವರ್ಷಕ್ಕೊಂದು ಮೂರ್ತಿಯನ್ನು ಹೊಸದಾಗಿ ಮಾಡಿಸುತ್ತಾರೆ. ಮರದಲ್ಲಿ ಮಾಡಲಾಗುವ ಈ ಮೂರ್ತಿಯನ್ನು ಅದಕ್ಕಾಗಿಯೇ ತಯಾರಿಸಿದ ಪುಟ್ಟ ಗಾಡಿಯ ಮೇಲೆ ಕೂಡ್ರಿಸಿ ಪೂಜಿಸುತ್ತಾರೆ. ಈ ಹಬ್ಬವನ್ನು ಇವರು ಮೂರು ದಿವಸ ಆಚರಿಸುತ್ತಾರೆ. ದುರ್ಗಾಷ್ಟಮಿಯ ಹಿಂದಿನ ದಿವಸ ದೇವಿಗೆ ಸಿಹಿಯೂಟದ ನೈವೇದ್ಯ ನೀಡುತ್ತಾರೆ. ಹಬ್ಬದ ದಿವಸ ದೇವಿಯ ಗುಡಿಯ ಮುಂದೆ ಆಡು, ಕುರಿಗಳ ಬಲಿಯನ್ನು ಕೊಡುತ್ತಾರೆ. ಮಹಿಳೆಯರು ಮಾಂಸದಡಿಗೆ ಮಾಡಿ ದೇವಿಗೆ ನೈವೇದ್ಯ ಹಿಡಿಯುತ್ತಾರೆ. ದೇವಿಯ ಗುಡಿಯಲ್ಲಿ ಅರಿಷಿಣ, ಕುಂಕುಮದ ಧೂಳು ಹರಡಿಸುತ್ತಾರೆ. ತೆಂಗು, ಲಿಂಬಿಕಾಯಿಗಳಿಂದ ದೇವಿ ಉಡಿ ತುಂಬುತ್ತಾರೆ. ನಂತರ ದುರ್ಗವ್ವನ ಮೂರ್ತಿಯನ್ನು ಗಾಡಿಸಹಿತ ಹೊತ್ತು ಊರಿನ ದಕ್ಷಿಣ ದಿಕ್ಕಿನಲ್ಲಿ ಅಥವಾ ಆ ದಿಕ್ಕಿನಲ್ಲಿರುವ ದುರ್ಗವ್ವನದೇ ಸ್ಥಿರ ಗುಡಿಯ ಹತ್ತಿರ ಬಿಟ್ಟು ಅಲ್ಲಿಯೂ ಬಲಿಕೊಟ್ಟು ಬರುತ್ತಾರೆ. ಗೊಂದಲಿಗ ಸಮಾಜದಲ್ಲಿ ಮಹಿಳೆಯರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಆಷಾಡದ ಹಬ್ಬ, ದುರ್ಗವ್ವನ ಹಬ್ಬ ಎಂದರೆ ಗೊಂದಲಿಗ ಮಹಿಳೆಯರಿಗೆ ಅತೀ ಹಿಗ್ಗು. ಈ ಹಬ್ಬದಂದು ಬಡವರಿರಲಿ ಮಾಂಸದ ಅಡಿಗೆ ಆಗಲೇಬೇಕೆಂಬ ನಿಯಮವಿದೆ.

ಹಿಂದು ಧರ್ಮದ ಮಹತ್ವದ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಇವರು ಆಚರಿಸುತ್ತಾರೆ. ಹಟ್ಟಿ ಹಬ್ಬ, ನೀರು ತುಂಬುವ ಹಬ್ಬ, ಲಕ್ಷ್ಮಿ ಹಬ್ಬವೆಂತಲೂ ಕರೆಯುತ್ತಾರೆ. ಗೊಂದಲಿಗರು ಶಕ್ತಿ ಆರಾಧಕರಾಗಿರುವುದರಿಂದ ಶಕ್ತಿಯ ಅವತಾರಗಳಲ್ಲಿ ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲುತ್ತದೆ. ಅಮವಾಸ್ಯೆಯ ದಿವಸ, ಪಾಡ್ಯದ ದಿವಸ ಈ ಸಮುದಾಯದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುತ್ತಾರೆ. ದೀಪಾವಳಿಗೆ ಗೊಂದಲಿಗರ ಹೆಣ್ಣು ಮಕ್ಕಳು ತವರು ಮನೆಗೆ ಬರುತ್ತಾರೆ.

ಉತ್ತರ ಕರ್ನಾಟಕದ ಕೆಲ ಗೊಂದಲಿಗರು ಪಂಚಮಿಯ ಅಮವಾಸ್ಯೆಯ ದಿನ ತಮ್ಮ ದುರ್ಗಾದೇವಿಗೆ ಬಲಿ ಕೊಡುವ ಪದ್ದತಿ ಇದೆ. ದುರ್ಗವ್ವ, ದುರ್ಗಾದೇವಿ, ಶಾಂತಿ ದುರ್ಗಾ ಎಂಬ ಹೆಸರಿನಿಂದ ಪೂಜೆಗೊಳ್ಳುವ ದೇವತೆಗಳು, ಈಗ ಗೊಂದಲಿಗರಲ್ಲಿ ಅಂಬಾಭವಾನಿಯಾಗಿ, ಭವಾನಿಯಾಗಿ, ಆಕೆಯೇ ಲಕ್ಷ್ಮೀ, ಮಹಾಲಕ್ಷ್ಮೀಯಾಗಿ ಪೂಜೆಗೊಳ್ಳುತ್ತಾಳೆ.

ಈ ಹಬ್ಬದ ಇನ್ನೊಂದು ವಿಶೇಷವೆಂದರೆ ದೀಪಾವಳಿಯ ಪಾಡ್ಯದ ದಿವಸ ಕೆಲವು ಗೊಂದಲಿಗರು “ಗೋಪೂಜೆ” ಮಾಡುತ್ತಾರೆ. ಉಪಾಸನೆಯ ವ್ರತಗಳನ್ನು ಕೆಲವರು (ಅಂದು) ಕೈಗೊಳ್ಳುತ್ತಾರೆ. ಬಾಲ ಕಲಾವಿದರು ಗೊಂದಲಿಗರ ಕಲೆಯನ್ನು ಕಲಿಯಬೇಕೆಂದರೆ ಅಂದು ಗೋಪೂಜೆಯನ್ನಾಗಲಿ, ಲಕ್ಷ್ಮೀ ಪೂಜೆಯನ್ನಾಗಲಿ ಮಾಡಿ ಹಿರಿಯ ಗೊಂದಲಿಗನ ಕಲಾಕಾರನ ಕಾಲಿಗೆ ನಮಸ್ಕರಿಸಿ ದಕ್ಷಿಣೆ, ಪಂಚಪಳಾರ ನೀಡುತ್ತಾರೆ. ದೀಪಾವಳಿಯಲ್ಲಿ ಕೆಲವು ಗೊಂದಲಿಗ ಹೆಂಗಸರು ಪಾಡ್ಯದ ರಾತ್ರಿ ಹಾಡುಗಳನ್ನು ಹಾಡಿ ಮನೋರಂಜನೆ ನೀಡುತ್ತಾರೆ. ಇವುಗಳಲ್ಲದೆ ಕಾಮನ ಹಬ್ಬ, ಮೊಹರಂ ಹಬ್ಬವನ್ನು ಆಚರಿಸುತ್ತಾರೆ.

ದೇವರ ಪೂಜೆ

ಗೊಂದಲಿಗ ಸಮುದಾಯದವರು ದ್ರಾವಿಡ ಮೂಲದ ಜನಾಂಗವಾಗಿರುವುದರಿಂದ ಮಾತೃ ಸಂಸ್ಕೃತಿಯ ದೇವತೆಗಳನ್ನು ಪೂಜಿಸುತ್ತಾರೆ. ಶಕ್ತಿ ದೇವಿಯ ಆರಾಧಕರಾದ ಇವರು ಕುಲದೇವತೆ ಅಂಬಾಭವಾನಿ, ಸೌದತ್ತಿ ಎಲ್ಲಮ್ಮ, ಕುಲದೇವತೆಯನ್ನು ಮನೆಗಳಲ್ಲಿ ಪೂಜಿಸುತ್ತಾರೆ. ಗೊಂದಲ ಹಾಕುವ ಸಂದರ್ಭದಲ್ಲಿ ವಿಶೇಷ ಪೂಜೆ, ಹಬ್ಬ ಹರಿದಿನಗಳಲ್ಲಿ ಅಂಬಾಭವಾನಿ ಪೂಜೆಯನ್ನು ಕಡ್ಡಾಯವಾಗಿ ಮಾಡುತ್ತಾರೆ.

“ದೇವಿ ಅಂಬಾ ಬಾರಮ್ಮ
ಬಾರಮ್ಮ ದೇವಿ ಬಾರಮ್ಮ
ಅಂಬಾ ಅಂಬಾ ಬಾರಮ್ಮ
ಭಕ್ತರನು ಕಾಯಮ್ಮ”
“ಮೀಸಲು ಮೀಸಲು ಎಲ್ಲಮ್ಮ,
ನಿನಗೆ ಮೀಸಲು ಯಾವುದು ಹೇಳಮ್ಮ”

ಎಂದು ಹಾಡುತ್ತಾ ಪೂಜೆ ಸಲ್ಲಿಸುತ್ತಾರೆ. ಮೂಲತಃ ಅಲೆಮಾರಿಗಳಾದ ಇವರು ಪ್ರಾದೇಶಿಕ ಶಕ್ತಿ ದೇವತೆಗಳನ್ನು ಆರಾಧಿಸುತ್ತಾರೆ. ಬಾದಾಮಿ ಬನಶಂಕರಿ, ಕೋಲಾಪೂರದ ಮಹಾಲಕ್ಷ್ಮೀ, ಮೈಸೂರಿನ ಚಾಮುಂಡಿ, ಕೊಳ್ಳೆಗಾಲದ ಚೌಡೇಶ್ವರಿಯನ್ನು ಇತ್ಯಾದಿ ದೇವತೆಗಳನ್ನು ಪೂಜಿಸುತ್ತಾರೆ. ಅಲ್ಲದೆ ಗ್ರಾಮ ದೇವತೆಗಳಾದ ದುರ್ಗಾ, ಶಾಂತಿದುರ್ಗಾ, ಲಕ್ಕವ್ವ, ದುರಗಮ್ಮಾ, ಮಾರಮ್ಮ ಮಹಾಕಾಳೀ, ಚಿಂಚಲಿ ಮಾಯಮ್ಮ, ಬನದಮ್ಮ, ಶಂಕರಮ್ಮ, ಕಾಳಮ್ಮ ಮುಂತಾದ ಶಕ್ತಿಯ ರೂಪಸ್ವರೂಪದ ಸ್ಥಳೀಯ ಅಥವಾ ಪ್ರಾದೇಶಿಕ ದೇವತೆಗಳನ್ನು ಪೂಜಿಸುತ್ತಾರೆ. ತಾವು ಅಲೆಮಾರಿಗಳಾಗಿದ್ದಾಗ, ಈ ಶಕ್ತಿ ದೇವತೆಗಳ ಗುಡಿಗಳಲ್ಲಿ, ಗುಡಿಗಳ ಸಮೀಪದಲ್ಲಿಯ ಬೀಡಾರ ಹೂಡುತ್ತಾರೆ. ಈ ದೇತೆಗಳು ತಮ್ಮನ್ನು ರಕ್ಷಿಸುತ್ತವೆ ಎಂಬ ಬಲವಾದ ನಂಬಿಕೆ. ಈ ಗೊಂದಲಿಗರ ಮಹಿಳೆಯರಲ್ಲಿದೆ.

ನಂಬಿಕೆಗಳು:

ದ್ರಾವಿಡ ಮೂಲಕ ಈ ಸಮುದಾಯದ ಮಹಿಳೆಯರು ಸದಾ ಅಲೆಮಾರಿಗಳು, ಇವರು ಪ್ರಕೃತಿ ಮಧ್ಯದಲ್ಲಿ ಬದುಕುವಂಥವರು. ಭೂಮಿ, ನೀರು, ಗಾಳಿ, ಬೆಂಕಿ ಇವರ ಬದುಕನ್ನು ಆವರಿಸಿಕೊಂಡಿರುವ ಮೂಲ ವಸ್ತುಗಳು. ಇವುಗಳ ಪರಭ್ರಮಣ ಇವರಿಗೆ ಅರ್ಥವಾಗದು. ಭೂಮಿ, ಪ್ರಾಣಿ, ಮನುಷ್ಯ, ಹುಟ್ಟು ಸಾವು-ಕಷ್ಟ-ಸುಖ, ರೋಗ ಇತ್ಯಾದಿಗಳ ಬಗ್ಗೆ ನಿಗೂಢರು. ಹೀಗಾಗಿ ಬದುಕಿನಲ್ಲಿ ಅನೇಕ ನಂಬಿಕೆಗಳನ್ನು ಆದರಿಸಿದ್ದಾರೆ. ಈ ನಂಬಿಕೆಗಳೇ ಇವರ ಬದುಕನ್ನು, ಸಮಾಜವನ್ನು ನಿಯಂತ್ರಿಸುತ್ತಿರುವುದನ್ನು ಕಾಣುತ್ತೇವೆ. ಕಥೋಪಜಿವಿಗಳಾದ ಈ ಗೊಂದಲಿಗರು, ಅಲೆಮಾರಿಗಳಾಗಿ ವಿಭಿನ್ನ ಸಂದರ್ಭ, ಸನ್ನಿವೇಶ, ವಿವಿಧ ವರ್ಗದ ಜನರ ಸಂಪರ್ಕದಲ್ಲಿ ಬದುಕು ಮಾಡುವ ಜನಾಂಗವಾಗಿರುವುದರಿಂದ ನಂಬಿಕೆಗಳು ಹಲವಾರು. ಇವರ ನಂಬಿಕೆಗಳು ಈ ರೀತಿಯಲ್ಲಿ ಇರುವುದನ್ನು ಗುರುತಿಸಬಹುದಾಗಿದೆ. ಅಭ್ಯಾಸದ ಅನುಕೂಲತೆಗಾಗಿ ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ನಂಬಿಕೆಗಳು, ಮೂಢನಂಬಿಕೆಗಳೆಂದು ವಿಂಗಡಿಸಬಹುದಾಗಿದೆ.

ಧಾಮಿರ್ಕ ನಂಬಿಕೆಗಳು:

ವಿಶ್ವದಾದ್ಯಂತ ಶಕ್ತಿಯ ಆರಾಧನೆಯಿದ್ದು, ವಿಶ್ವಶಕ್ತಿ, ವಿಶ್ವಮಾತಾ, ಆದಿಮಾತಾ, ಜಗದಂಬಾ, ಆದಿಶಕ್ತಿ ಮುಂತಾದ ಶಬ್ದಗಳು ಶಕ್ತಿಯ ಸಾವಯವ ವ್ಯಾಪ್ತಿಯಲ್ಲಿ ಕಂಡು ಬರುತ್ತಿವೆ. ‘ಅದಿತಿ’ ಆದಿಮಾತಾ. ಎಲ್ಲರ ಅಮ್ಮ (ಎಲ್ಲಮ್ಮ) ಅಧಿತಿಗೆ ಸರಿಸಮನಳಾಗಿದ್ದಾಳೆ. ಎಲ್ಲಮ್ಮನೇ ಜಗದಂಬ (ಜಗತ್ತಿನ ಅಂಬೆ) ಆಗಿರುವಳು.[5] ಇಂಥ ಜಗದಂಬೆಯನ್ನು ಶಕ್ತಿಯ ರೂಪಕ್ಕೇರಿಸಿ ಆದಿಶಕ್ತಿ-ವಿಶ್ವಶಕ್ತಿಯನ್ನು ಆರಾಧಿಸುವ ಸಂಪ್ರದಾಯ ಗೊಂದಲಿಗೆ ಮಹಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಆದಿಮಾತೆ ಆದಿಶಕ್ತಿಗೆ ಸಹಸ್ರನಾಮಗಳನ್ನು ಹೊಗಳು ಸಂಪ್ರದಾಯ, ನಂಬಿಕೆ ಬೆಳೆದು ಬಂದಿದೆ. ಈ ಆದಿಮಾತೆ ಸ್ತ್ರೋತ್ರ ಪಠಣ ಮಾಡಿದರೆ ಅನೇಕ ಸಿದಿಗಳು ಲಭಿಸುವವು ಎಂದು ನಂಬಿದ್ದಾರೆ. ಶಕ್ತಿದೇವಿಯನ್ನು ಪೂಜಿಸಬೇಕು. ದೇವಿಯ ನಂತರ ದೈವವನ್ನು ನಂಬುತ್ತಾರೆ. ದೇವಿಯ ಸಂಪ್ರೀತಿಗೆ ಪ್ರಾಣಿ ಬಲಿ ಕೊಡಬೇಕು. ಆಷಾಢ ಮಾಸದ ದುರ್ಗವ್ವನ ಹಬ್ಬಕ್ಕೆ ಮೂಲ ನೆಲೆಗೆ ಮರಳಬೇಕು. ಆಷಾಡದಲ್ಲಿ ಗೊಂಡಲ ಹಾಗಬೇಕು ಅದು ಶುಭಕರವೆಂದು ನಂಬುತ್ತಾರೆ.

 • ಏಳುವಾಗ ದೇವರ ನೆನೆಯಬೇಕು.
 • ದೇವಿ ಪೂಜೆಗೆ ಬರಿಗಾಲಿನಿಂದ ಹೊಗಬೇಕು.
 • ಮದುವೆಗೆ ಮುನ್ನ ದೇವರಿಗೆ ಮಾಡಬೇಕು.
 • ಗಣಪತಿ ಎಡಿ ಹೆಣ್ಣು ಮಕ್ಕಳು ತಿನಬೇಕು.
 • ಜೋಕುಮಾರನಿಗೆ ಹೆಂಗಸರು ಬೆಣ್ಣೆ ಹಚ್ಚಬೇಕು.
 • ದೇವರ ಮುಂದಿನ ದೀಪಾ ಊದಬಾರದು; ಕೈಯಿಂದ ಗಾಳಿ ಹಾಕಿ ದೊಡ್ಡದು ಮಾಡಬೇಕು. (ಆರಿಸಬೇಕು).
 • ಮೀಸಲು ತುಪ್ಪ ಮೊದಲು ದೇವರಿಗೆ.
 • ತುಳಸಿ ಲಗ್ನ ಮಾಡಬೇಕು.
 • ಬನ್ನಿಗಿಡ-ದೇವರ ಗಿಡ.
 • ಶಕ್ತಿಗೆ ಬಲಿ ನೀಡುವುದರಿಂದ ಶಕ್ತಿಯ ಮತ್ತು ದೇವತೆಗಳು ಸಂಪಿತರಾಗಿ ತಮ್ಮ ಇಚ್ಛೆಗಳನ್ನು ಪೂರ್ತಿ ಮಾಡುತ್ತವೆ.
 • ಕುಲದೇವತೆ ಮಂಚದ ಮೇಲೆ ನಿದ್ರಿಸುವುದರಿಂಧ ಅವರು ತಮ್ಮ ಬಾಣಂತಿ ಹೆಣ್ಣು ಮಕ್ಕಳು ಮಂಚದ ಮೇಲೆ ಮಲಗಲು ಬಿಡದೆ ನೆಲದ ಮೇಲೆ ಮಲಗುವಂತೆ ನೋಡಿಕೊಳ್ಳಬೇಕು.
 • ಗೊಂದಲಕ್ಕೆ ಮನೆ ಹೆಣ್ಣು ಮಕ್ಕಳು ಇರಬೇಕು.
 • ಮಂಗಳವಾರ ಮನೆಯಿಂದ ಮಗಳನ್ನು ಕಳಿಸಕೂಡದು.
 • ಗೆಜ್ಜೆ ಕಾಲ್ಕಡಗ, ಕೈ, ಚಿನ್ನ, ಕವಡೆ, ಸರ ಹಾಕದೇ ದೇವಿ ಮುಂದೆ ಕುಣಿಯಬಾರದು.

ಇತ್ಯಾದಿ ಧಾರ್ಮಿಕ ನಂಬಿಕೆಗಳು ಗೊಂದಲಿಗರ ಹೆಣ್ಣು ಮಕ್ಕಳಲ್ಲಿ ಇವೆ. ಈ ನಂಬಿಕೆಗಳ ಕಾರಣವಾಗಿ ಈ ಸಮುದಾಯದ ಜೀವನವನ್ನು ದೇವತೆ ನಿಯಂತ್ರಿಸುತ್ತಾಳೆ. ಪಾಪ-ಪುಣ್ಯ ಕಲ್ಪನೆ ಹೆಚ್ಚಾಗಿದ್ದು ಎಂಥ ಸಂದರ್ಭದಲ್ಲಿಯೂ ತಮ್ಮ ಬದುಕನ್ನು ಶುದ್ಧವಾಗಿ ಸಚ್ಛಾರಿತ್ರದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.

ಸಾಮಾಜಿಕ ನಂಬಿಕೆಗಳು:

 • ಋತುಮತಿಯಾದಾಗ ಆರು ತಿಂಗಳ ಪುರುಷರ ನೆಳ್ಳು ಬೀಳಬಾರದು.
 • ಶುಕ್ರವಾರ ಸೊಸೆ ಬರಬೇಕು-ಹೋಗಬಾರದು.
 • ಹೆಂಗಸರು ಸೆರಗತಗದ ತಿರಗಬಾರದು.
 • ಬಸರಿದ್ವವರು ಗ್ರಹಣ ನೋಡಬಾರದು.
 • ಮೂಗಿನ ಮ್ಯಾಲ ಕಚ್ಚಾಗಬಾರದು.
 • ಇದಲ್ಲದೆ ಕೆಲವು ಗಾವಟಿ ವೈದ್ಯರಿದ್ದು ಅವರಲ್ಲಿ ತಾವು ಕೊಡುವ ಔಷಧಿ ಅದರ ಹೇಳಿದರೆ ಅದರ ಶಕ್ತಿ ಕಡಿಮೆ ಆಗುತ್ತದೆ. ಎಂಬ ನಂಬಿಕೆ ಇದೆ.

 

ಸಾಂಸ್ಕೃತಿಕ ನಂಬಿಕೆಗಳು:

ಜಾನಪದ ಕಲಾವಿದರಾದ ಈ ಗೊಂದಲಿಗ ಸಮುದಾಯದ ವಿಶಿಷ್ಟ ನಂಬಿಕೆಗಳು ಪ್ರತಿಯೊಬ್ಬ ಮನುಷ್ಯನಲ್ಲಿ “ಕಲೆ” ಅಗತ್ಯತೆಯನ್ನು ಸಾರಿ ಹೇಳುತ್ತವೆ. “ದೇಹಕ್ಕೆ ತಲೆ, ಮನೆಗೆ ಒಲೆ, ಜೀವನಕ್ಕೆ ತಲೆ” ಇರಬೇಕು ಎಂದು ನಂಬಿದವರಾಗಿದ್ದಾರೆ.

 • ಮರಗಳ ಕೆಳಗೆ ಸತ್ಯ ನುಡಿಯಬೇಕು.
 • ಊಟದ ತಾಟ ದಾಟಬಾರದು
 • ಒಲಿ ಊದಿದರ ಅತಿಥಿ ಬರತಾರ
 • ಕೈ ಬಳಿ ಒಡೆದರ ರೊಡ್ಡ ಇರಬಾರದು
 • ಶುಕ್ರವಾರ ಸೊಸೆ ಹೊರಕಳಿಸಬಾರದು
 • ಮುತ್ತೈದೆ ಬಳೆ ತೊಡುವಾಗ ಮತ್ತು ಮುತ್ತೈದೆ ಬಂದರ ಒಂದಾರ ಬಳಿ ತೊಡಿಸಬೇಕು.
 • ಮದುವೆಯಾದವಳಿಗೆ ಮೂಗಬಟ್ಟಬೇಕು
 • ತುಳಸಿ ಪೂಜೆ ಮಾಡಿದರ ಒಳ್ಳೆ ಗಂಡ ಸಿಗತಾನ
 • ಮೂರು ಹೆಣ್ಣು ಮಕ್ಕಳ ಮ್ಯಾಲೆ ಗಂಡಾದರ ಮುತ್ತಪ್ಪ, ಮುತ್ತಣ್ಣ, ಮುತ್ತೆಣ, ಮುತ್ತಜ್ಜ ಎಂದು ಹೆಸರಿಡಬೇಕು?
 • ಒಬ್ಬರ ಮುಡಿದ ಹೂವ ಮತ್ತೊಬ್ಬರ ಇಟಕೋ ಬಾರದು
 • ಒಡೆದ ಬಳೆ, ಒಡೆದ ಕಾಜು ಮನ್ಯಾಗ ಇರಬಾರದು

ಮೂಢನಂಬಿಕೆಗಳು:

ಸದಾ ಅಲೆಮಾರಿಗಳಾದ ಈ ಗೊಂದಲಿಗರು ಜೀವನಕ್ಕೆ ಒಂದು ನೆಲೆ ಕಾಣುವಲ್ಲಿ ಸದಾ ಹೋರಾಟ ಮಾಡುತ್ತಿರುತ್ತಾರೆ. ಈ ಅಭದ್ರ ಬದುಕು, ಸದಾ ಸಂಚಾರ, ಪ್ರಕೃತಿಯ ನಿಗೂಡತೆ, ಅನಕ್ಷರತೆ, ಅಶಿಕ್ಷಿತ ಹೆಚ್ಚಾಗಿರುವ ಈ ಗೊಂದಲಿಗರ ಸಮುದಾಯದ ಮಹಿಳೆಯರು ಸದಾ ಅತಂತ್ರ ಸ್ಥಿತಿಯಲ್ಲಿ ಅಭದ್ರ ಸ್ಥಿತಿಯಲ್ಲಿ ಬದುಕು ಮಾಡಬೇಕಾಗುತ್ತದೆ. ಹೀಗಾಗಿ ಸದಾ ಬದುಕಿನ ಗೊಂದಲದಲ್ಲಿ ಇರುವ ಇವರು ತಮ್ಮ ಸಮಾಧಾನಕ್ಕಾಗಿ, ಸಾಂದರ್ಭಿಕ ಘಟನೆಗಳಿಗೆ ಅನುಸಾರವಾಗಿ ಅನೇಕ ಮೂಢನಂಬಿಕೆಗಳನ್ನು ತಮಗೆ ಅರಿವಿಲ್ಲದಂತೆ ಸೃಷ್ಟಿಸಿಕೊಂಡಿದ್ದು ಕಂಡು ಬರುತ್ತದೆ.

 • ಊರಿಗೆ ಹೋಗಾದ ಬೋರೇರ ಎದ್ರ ಬರಬಾರದು.
 • ಊರಿಗೆ ಹೋದ ಒಂಬತ್ತ ದಿನಕ್ಕೆ ಮನಿಗಿ ಬರಬಾರದು.
 • ನುಡಿಯುವಾಗ ನಗಬಾರದು.
 • ಕನಸಿನ್ಯಾಗ ಊಟ ಮಾಡಬಾರದು
 • ಬ್ರಾಹ್ಮಣರ ಹೆಂಗಸರ ಹೆಣದ ಸಂಗಡ ಹೋಗಬಾರದು
 • ಹೆಂಗಸನ್ನ ಬೈದ್ರ ಹೆಣ್ಣ ಆಗ್ತಾರ.
 • ಶುಭ ಕಾರ್ಯಕ್ಕೆ ಹೊರಟಾಗ ಬೆಕ್ಕು, ಕಾಗೆ, ಬರಿಗೊಡ, ಬುರಿಬುಟ್ಟಿ, ಕುಳ್ಳು, ಕಟ್ಟಿಗೆ ಎದುರಿಗೆ ಬಂದರೆ ಅಶುಭ.
 • ತುಂಬಿದ ಕೊಡ, ಮುತ್ತೈದೆ, ಆಕಳು, ಎದುರಿಗೆ ಬಂದರೆ ಶುಭ.
 • ಹನ್ನೆರಡು ದಿನದ ಕೂಸಿಗೆ, ಹನ್ನೆರಡು ವರ್ಷದ ಹೆಣ್ಣು ತಂದು ಮದುವೆ ಮಾಡಿದರೆ ಮಗು ಉಳಿಯುತ್ತದೆ.

ಅನಕ್ಷರಸ್ಥರು, ಅಶಿಕ್ಷಿತರು, ಸದಾ ಸಂಚಾರಿಗಳು ಸದಾ ಪ್ರಕೃತಿಯ ಮಡಿಲಲ್ಲಿ ಜೀವನ ಸಾಗಿಸುವ ಇವರು ದೇವರು, ಪೂರ್ವ ಜನ್ಮದ ಪಾಪ, ದೇವತೆಯ ಶಾಪ, ಕರ್ಮದ ಕಲ್ಪನೆ, ಪಾಪ-ಪುಣ್ಯಗಳ ವಿಚಿತ್ರ ವಿಕೃತ ಕಲ್ಪನೆ ಕಾರಣವಾಗಿ ಅನೇಕ ಮೂಢನಂಬಿಕೆಗಳಿ ಇವರಲ್ಲಿ ಮನೆ ಮಾಡಿಕೊಂಡಿವೆ.

ಸತ್ತವರಿಗೆ ಪುನರ್ ಜನ್ಮ ದೊರೆಯುವುದೆಂಬ ನಂಬಿಕೆ ಇವರದಾಗಿದ್ದು, ಕೆಲವರು ಪ್ರೇತಗಳಾಗುತ್ತಾರೆಂಬ ನಂಬಿಕೆ ಇದೆ. ಅವಕ್ಕೆ ಮಂತ್ರ, ಮಾಟ, ಬಲಿಗಳನ್ನು ನೀಡಿದರೆ ತಮ್ಮಿಂದ ದೂರವಾಗುತ್ತವೆ ಎಂಬ ಮೂಢನಂಬಿಕೆಗಳಿವೆ. ಕರಾವಳಿ, ಕರ್ನಾಟಕದ ಗೊಂದಲಿಗರ “ಪಂಜುರ್ಲಿ” ಎಂಬ ಭೂತದ ಕಟ್ಟೆಗೆ ವರ್ಷದಲ್ಲೊಂದು ದಿನ ಬಯಲು ಗೊಂದಲ ಹಾಕುತ್ತಾರೆ. ಇದರಿಂದ ಇವರನ್ನು ಭೂತ ಕಾಡುವುದಿಲ್ಲವೆಂಬ ಮೂಢನಂಬಿಕೆ ಇದೆ.

ಗೊಂದಲಿಗರ ಮಹಿಳೆಯರ ಸಹಬಾಗಿತ್ವ ಮತ್ತು ಸಮುದಾಯದ ಆಚರಣೆಗಳು:

ಯಾವುದೇ ಒಂದು ಬುಡಕಟ್ಟು ಜನಸಮುದಾಯದ ಜೀವನ ವಿಧಾನದಲ್ಲಿ, ಅದರ ಸಂರಚನೆಯಲ್ಲಿ ಆ ಸಂಸ್ಕೃತಿಯ ಮುಂದುವರಿಕೆಯಲ್ಲಿ ಹೆಣ್ಣು ಮತ್ತು ಗಂಡಿನ ಸಹಭಾಗಿತ್ವ ಅತ್ಯಂತ ಮಹತ್ವದಾಗಿರುತ್ತದೆ. ಪಿತೃಪ್ರಧಾನ ಸಂಸ್ಕೃತಿಯಲ್ಲಿ ಪುರುಷನ ಶಕ್ತಿ ಸಾಮರ್ಥ್ಯಕ್ಕೆ ಸಹಜ ಮನ್ನಣೆ ಮುನ್ನಲೆಯಲ್ಲಿರುವಂತೆ, ಮಾತೃ ಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ಲಭ್ಯವಾಗಿರುತ್ತದೆ. ಇವೆರಡು ಕಸಿಗೊಂಡು ಮತ್ತೊಂದು ವಿಶಿಷ್ಟ ಸಂಸ್ಕೃತಿಯೊಂದ ಈ ಬುಡಕಟ್ಟುಗಳಲ್ಲಿ ಇರುವುದು ಕಂಡು ಬರುತ್ತದೆ. ಅವುಗಳಲ್ಲಿ ಈ ಗೊಂದಲಿಗರ ಸಂಸ್ಕೃತಿಯು ಮುಖ್ಯವಾಗಿ ಗೋಚರಿಸುತ್ತದೆ. ಭಾರತೀಯ ಸಂದರ್ಭದಲ್ಲಿ ಹೆಣ್ಣು ಮತ್ತು ಗಂಡಿಗೆ ತನ್ನದೇ ಆದ ಸ್ವಂತಿಕೆಯ ಅಸ್ತಿತ್ವದ ಬೇರುಗಳಿವೆ. ಅವು ಸಂಸ್ಕೃತಿಯ ಆಳಕ್ಕಿಳಿದು ಕಸಿಗೊಂಡು ಮೊಳೆತು ಹೆಮ್ಮರವಾಗಬಲ್ಲ ಧೀಶಕ್ತಿಯನ್ನು ಪಡೆದುಕೊಂಡಿರುವುದು ಈ ಗೊಂದಲಿಗರ ಮಹಿಳಾ ಸಂಸ್ಕೃತಿಯಲ್ಲಿ ಕಂಡು ಬರುವ ಪ್ರಧಾನ ಅಂಶವಾಗಿದೆ.

ಭಾರತದಲ್ಲಿನ ಅನೇಕ ಸಮುದಾಯಗಳು ತಮ್ಮೊಳಗೆ ಕೀಳರಿಮೆ, ಮೆಲರಿಮೆಗಳನ್ನು ಈ ವಿಷಮ-ಅಸಮ ಸಂಸ್ಕೃತಿ, ಮತ ಧರ್ಮಗಳ ಈ ಎಲ್ಲ ದೌರ್ಬಲ್ಯಗಳನ್ನು ಇಟ್ಟುಕೊಂಡೆ ಬೆಳೆದು ಬಂದಿವೆ. ಇಲ್ಲಿ ಎಲ್ಲ ಧರ್ಮಗಳು, ಸಂಸ್ಕೃತಿಗಳು, ಬುಡಕಟ್ಟುಗಳು ಇದಕ್ಕೆ ಹೊರತಾಗಿಲ್ಲ. ಇಂಥ ಬುಡಕಟ್ಟಿನ ಒಂದು ಸಂಸ್ಕೃತಿಯ ಜನಸಮುದಾಯದ ಗೊಂದಲಿಗರು ವಿಶಿಷ್ಟವಾಗಿ ಕಂಡು ಬರುತ್ತಾರೆ. ಈ ಸಂಸ್ಕೃತಿಯ ಉಳಿವಿಗೆ ಮತ್ತು ಅದರ ವಾಹಕಕ್ಕೆ ಗೊಂದಲಿಗರ ಮಹಿಳೆಯರ ಕೊಡುಗೆ, ಈ ಸಮುದಾಯದ ಪುರುಷರಿಗಿಂತಲೂ ಮಿಗಿಲಾದುದಾಗಿದೆ. ಸದಾ ಅಲೆಮಾರಿಗಳು, ಅರೆ ಅಲೆಮಾರಿಗಳಾಗಿರುವ ಇವರ ತಮ್ಮ ಧರ್ಮದ ಮತ್ತು ಸಂಸ್ಕೃತಿಯ ಘೋಷಣೆಯಲ್ಲಿ, ಅದರ ಬೆಳವಣಿಗೆಯಲ್ಲಿ ಅದರ ಮುನ್ನಡೆಯಲ್ಲಿ ಮಾತೃರೂಪ ಸಹಭಾಗಿತ್ವ ಇರುವುದು ಈ ಗೊಂದಲಿಗ ಮಹಿಳೆಯರ ಅನನ್ಯತೆಯಾಗಿದೆ.[1]      ಎಸ್‌.ಜಿ.ನರಸಿಂಹಾಚಾರ್ (ಸಂ) ಆದಿಪುರಾಣ, ಸಪ್ತಾಶಾಶಸಂ. ೧೨೬.

[2]        ಎಸ್‌.ಜಿ.ನರಸಿಂಹಾಚಾರ್ (ಸಂ) ಚಂದ್ರಪುರಾಣ, ೧೨,೩೫.

[3]      ಎಂ.ಎಂ.ಕಲಬುರ್ಗಿ (ಸಂ) ಹರಿಹರನ ರಗಳೆಗಳು, ಪುಟ-೨೪೬-೨೦

[4]      ಎಂ.ಬಸಪ್ಪ (ಸಂ) ಚನ್ನಬಸವ ಪುರಾಣ-೪೨-೧೫.

[5]      ಡಾ.ನಿಂಗಣ್ಣ ಸಣ್ಣಕ್ರೀತ್ರಿ ಗೊಂದಲಿಗರ ಸಂಸ್ಕೃತಿ, ಪುಟ-೮೯.