ಒಗಟುಗಳು ಒಡಪುಗಳು:
ಜನಸಮುದಾಯದ ಭಾವನೆ, ಆಲೋಚನೆ, ಚಿಂತನೆ, ಸಾಂಸ್ಕೃತಿಕ ಪ್ರತೀಕವಾಗಿ ಹಾಡು, ಒಡಪು-ಒಗಟುಗಳು ಗಾದೆ ಮಾತುಗಳ ಮೂಲ ಅಭಿವ್ಯಕ್ತಿ ಪಡೆದುಕೊಳ್ಳುತ್ತವೆ. ಗಾದೆ ಮಾತುಗಳು ದೈನಂದಿನ ಬದುಕಿಗೆ ಒಂದು ದಿಕ್ಷೂಚಿ ನೀಡಿದರೆ, ಒಗಟುಗಳು ದೈನಂದಿನ ಬದುಕಿನ ವಿಸಂಗತಿಗಳನ್ನು ರೂಪಕಾತ್ಮಕವಾಗಿ ಅಭಿವ್ಯಕ್ತಪಡಿಸುತ್ತವೆ. ಒಂದು ಸಮುದಾಯದ ಜೀವನ ಶೈಲಿಯನ್ನು ವೈರುಧ್ಯಗಳನ್ನು ಲಿಂಗವೇಕ್ಷೆಯನ್ನು ಎತ್ತಿ ತೋರಿಸುತ್ತದೆ.
ಒಗಟುಗಳು:
೧) ತಡ್ಡ ಇಲ್ಲದವರ ತರಲಿ ಹೊಡಿತಾರ – ಬೀಸುವ ಹೆಂಗಸು
೨) ಆಟ ಐತಿ, ಇಟ ಐತಿ ಮೊದಲು ಊಟ ಮಾಡತೈತಿ – ನೊಣ
೩) ಹಾದಿಯ ಪೋರ ಹಾಡುತ್ತ ಹೋಗುವನು ಯಾವನವ – ದನಗಳ ಕೊರಳೊಳಗಿನ ಗಂಟೆ
೪) ಹಾದಿಲೆ ಹೊರಟಾಗ ಜಾರಿ ಬೀಳುವವನಾರು – ದನಗಳ ಕೊರಳೊಳಗಿನ ಗಂಟೆ
೫) ನಡಾಸಣ್ಣ ನಾಗರಬಣ್ಣ ಹಿಡ್ಯಾಕ ಹೋದರ ಕಡ್ಯಾಕ ಬರತೈತಿ – ಕಣಜರಗಿ ಹುಳ
೬) ಕಡಿದರ ಕಚ್ಚ ಅಗುವುದಿಲ್ಲ ಹಿಡಿದರೆ ಮಕ್ಕಳಾಗುವುದಿಲ್ಲ – ನೀರು
೭) ಕಾಲಲ್ಲಿ ಕೊಂಬುಂಟು, ಬಾಲದ ಪಕ್ಷಿ ಹೌದು, ಮೇಲೆ ಹಾರುವ ಹದ್ದು ತಾನಲ್ಲ – ಗಾಳಿಪಟ
೮) ಅವ್ವನ ಸೀರೆ ಮಡಚಲಾಕ ಬರೊಲ್ಲ ಅಪ್ಪನ ರೊಕ್ಕ ಎಣಿಸಾಕಾಗೊಲ್ಲ – ಮುಗಿಲು ಮತ್ತು ಚುಕ್ಕಿ
ಹೆಣ್ಣು ಅರಿಯಲಾರದ ಒಗಟು, ಆಕೆಯ ಸ್ವಭಾವ, ನಿಗೂಢ, ಆಕೆ ಕನಿಷ್ಠ ಪುರುಷ ಶ್ರೇಷ್ಠವೆಂಬ ತಾರತಮ್ಯಭಾವ ಈ ಸಮುದಾಯದಲ್ಲೂ ಇರುವುದನ್ನು ಈ ಒಗಟುಗಳು ಸಾದರ ಪಡಿಸುತ್ತವೆ.
ಒಡಪುಗಳು:
ಗೊಂದಲಿಗ ಮಹಿಳೆಯರು ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಮೈನೆರೆತಾಗ, ಕುಬಸಾ ಮಾಡುವಾಗ ಆರತಿ ಬೆಳಗುವ ಸಂದರ್ಭದಲ್ಲಿ ಈ ಒಡಪುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇವು ಮಹಿಳೆಯರ ಒಡಪುಗಳಾದರೂ ಪುರುಷರಿಗೆ ಸಂಬಂಧಿಸಿದವುಗಳಾಗಿವೆ. ಈ ಒಡಪುಗಳಲ್ಲಿ ಪುರುಷರ ದರ್ಪ, ಅಧಿಕಾರ, ಹೆಣ್ಣಿನ ಗುಣ ಸ್ವಭಾವ ಎದ್ದು ಕಾಣುತ್ತದೆ.
೧. ಸೀತಾ ಅರಣ್ಯಕ ಹೋಗುವಾಗ ಮಂಡೋದರಿಗೆ ಬಿತ್ತು ಕನ್ಸ,
ಅವರು ಕಲ್ಲು ನಾಗಲಿಲ್ಲಿ ನನ್ನ ಮನಸ್ಸು ರೆಹಮಾನ್ಸಾಬ
೨. ನೀರಿಗೆ ಹರಿಯುವಾಸೆ, ಹೆಣ್ಣಿಗೆ ತವರಾಸೆ
ನನ್ನ ಗಂಡ………… ನನ್ನಾಸೆ.
೩. ಅರಿಶಿನ ಸಾಂಬಾರ ಪಾಟಲಿನ ನಂಬರ್
ವ್ಯಾಪಾರ ಮಾಡಾಕ ಒನ್ನೇನಂಬರ…………… ವಿಠ್ಠಲರಾಯರು.
೪. ಕಮಲದ ಹೂವಾದೆ, ಕಸ್ತೂರಿ ಮೊಗ್ಗಾದೆ,
ಸತ್ಯಪ್ಪನ ತಂಗಿಯಾದೆ, ಮೂಕಪ್ಪನ ಮಗಳಾದೆ, ವಿಠ್ಠಲರಾಯನ ಸತಿಯಾದೆ.
೫. ಶ್ರೀಕೃಷ್ಣನ ಕಿರೀಟಕ್ಕೆ ಹಚ್ಚುವುದು ನೀಲವರ್ಣದ ಮಸಿ
ಹೆಸರು ಹೇಳುವುದು ಮೂಕಪ್ಪನ ಸೊಸಿ, ನನ್ನಗಂಡನ ಹೆಸರು ವಾಸಿ
೬. ಹಕ್ಕ್ಯಾಗ ಅಡಿಗ್ಯಾರ, ಮುತಿನ್ಯಾಗ ಮಲಗ್ಯಾರ, ಚಿಕ್ಕತಂಗಿ ಕರಕೊಂಡ ಚಕ್ಕಂದ ಆಡ್ತಾರ – ವಿಠಲರಾಯರು.
೭. ಅರಸಿನ ಕೊಡ, ಸೆರಗಿನ ಸಿಂಬಿ ಶೀಲವಂತರ ಮಗಳು ಸೀತಾದೇವಿ
ಮಾರಿನೋಡಿ ದಾರಿಬಿಡ್ತಾರ ರಾಮರಾಯರು.
೮. ಗುಲಾಬಿ ಗುಂಪು, ಮಲ್ಲಿಗೆ ತಂಪು ನನಗಿಂತು
ನಮ್ಮ ಮಂಜುನಾಥರಾಯರು ಬಲು ಕೆಂಪು
೯. ಕಾಜಿನ ಕಂಬಕ್ಕ ಕಾಲು ಕೊಟ್ಟು, ಮುತ್ತಿನ ಚೀಲಕ್ಕೆ ಬೆನ್ನು ಕೊಟ್ಟು,
ತಮ್ಮ ಗೋಪಾಲನಿಗೆ ಹೆಣ್ಣುಕೊಟ್ಟಾರ ರಾಮಚಂದ್ರರಾಯರು.
೧೦. ತವರ ಪ್ರೀತಿ – ತಾಯಿ ಇರೋತನಕ,
ಅಣ್ಣನ ಪ್ರೀತಿ ಅತ್ತಿಗೆ ಬರೋತನಕ
ನಮ್ಮಿಬ್ಬರ ಪ್ರೀತಿ ಜೀವಿರೋತನಕ.
೧೧. ಹಂತೇಕಬಾ ಅಂದ್ರ ಮುತ್ತಕೊಟ್ಟ ಮುರಕಾ ಮಾಡತಾನ ರಾಮಚಂದ್ರರಾಯರು.
೧೨. ಆಕಾಶಕ್ಕೆ ಸೂರ್ಯ ಚಂದ,
ಭೂಮಿಗೆ ಬೆಳೆ ಚಂದ,
ನನಗೆ ನನ್ನ ಅರ್ಜುನರಾಯರು ಚಂದ.
ಹೀಗೆ ಈ ಗೊಂದಲಿಗರ ಮಹಿಳೆಯರ ಒಡಪುಗಳು ಹೆಣ್ಣಿನ ಲಿಂಗವಿವಕ್ಷೆ ಮತ್ತು ಗಂಡಿನ ಹಿಡಿತ, ಹೆಣ್ಣಿಗಿಂತ ಪುರುಷನೇ ಶ್ರೇಷ್ಠ, ಸುಂದ್ರ, ಇಂದ್ರ, ಚಂದ್ರ ಎಂದು ಹೊಗಳುವುದು ಮಹಿಳೆಯರನ್ನು ಈ ಸಮುದಾಯದ ಕಾಣುವ ದೃಷ್ಟಿ ಗೋಚರವಾಗುತ್ತದೆ. ಇವು ಈ ಜನಾಂಗದ ಸಾಂಸ್ಕೃತಿಕ ವಿವಿಧ ಮುಖಗಳನ್ನು ದಾಖಲಿಸಿವೆ.
ಸಮಕಾಲೀನ ದಾವಂತಗಳ ಮಧ್ಯೆ ಗೊಂದಲಿಗ ಮಹಿಳೆಯರು:
ಕೌಟುಂಬಿಕ ಸ್ಥಾನಮಾನ:
ಭಾರತೀಯ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಅಲೆಮಾರಿಗಳಾದ ಗೊಂದಲಿಗರಿಗೆ ಧಾರ್ಮಿಕವಾಗಿ ಉನ್ನತ ಸ್ಥಾನಮಾನವಿದ್ದರೂ ಸಾಮಾಜಿಕವಾಗಿ ಅಷ್ಟೇನೂ ಗೌರವ ಸ್ಥಾನವಿಲ್ಲ. ಇವರ ಸ್ಥಾನ ಅತೀ ಕೆಳಮಟ್ಟದಲ್ಲಿದೆ. ಗೊಂದಲಿಗರ ಉಪಪಂಗಡಗಳಾದ ಬುಡಬುಡಕಿಯರು ಹಾಗೂ ಜೋಷಿಗಳನ್ನು (ಶಾಸ್ತ್ರಿಗಳು) ಇನ್ನೂ ಅಸ್ಪೃಶ್ಯರೆಂದು ಕೆಳಸ್ಥರದಲ್ಲಿಯೇ ಕಾಣಲಾಗುತ್ತಿದೆ. ಇವರು ಅಲೆಮಾರಿಗಳಾಗಿರುವುದರಿಂದ ಸಮಾಜದ ಇತರ ಜನರೊಂದಿಗೆ ಕೂಡಿಬಾಳುವ ಅವಕಾಶಗಳೇ ಇಲ್ಲ. ಬಹುಮಟ್ಟಿನ ಜನರಿಗೆ ಸ್ಥಿರ ಆಸ್ಥಿಗಳಿಲ್ಲ. ಜೀವನಾಧಾರಕ್ಕೆ ಭೂಮಿ ಗದ್ದೆಗಳಿಲ್ಲ, ವಾಸಿಸಲು ಮನೆಗಳಿಲ್ಲ, ಊರಿಂದೂರಿಗೆ ಹಳ್ಳಿಗಳಿಂದ ಹಳ್ಳಿಗೆ ಅಲೆದಾಡಿ ಜೀವಿಸುವ ಧಾರುಣ ಸ್ಥಿತಿ ಇವರದಾಗಿದೆ. ಇಂಥ ಸಮುದಾಯದಲ್ಲಿ ಮಹಿಳೆಯರ ಸ್ಥಾನ ಇನ್ನೂ ದಾರುಣವಾಗಿದೆ.
ವೃತ್ತಿಯಿಂದ ಕಥೋಪಜೀವಿಗಳಾದ ಈ ಗೊಂದಲಿಗರು ಗೊಂದಲ ಹಾಕುವುದರಿಂದ ಬರುವ ಆದಾಯ ಅತ್ಯಲ್ಪ. ಆದ್ದರಿಂದ ಪುರುಷರಿಗಿಂತ ಮಹಿಳೆಯರ ಆದಾಯವೇ ಕುಟುಂಬ ನಿರ್ವಹಣೆಯಲ್ಲಿ ಹೆಚ್ಚಿನ ಪಾಲು. ಶ್ರಮಜೀವಿಗಳಾದ ಈ ಮಹಿಳೆಯರು ಕೌದಿ ಹೊಲಿಯುತ್ತಾರೆ. ಇನ್ನೂ ಕೆಲವರು ಬಾಂಡೆ, ಬಳೆ, ಚುರುಮುರಿ, ಪೇಡೆ ಇತ್ಯಾದಿ ಅಲಂಕಾರದ ಸಾಮಾನುಗಳನ್ನು ತಲೆಮೇಲೆ ಹೊತ್ತು ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಇನ್ನೂ ಕೆಲವರು ಭಿಕ್ಷೆ ಬೇಡುತ್ತಾರೆ. ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ಕಷ್ಟಪಟ್ಟು ದುಡಿಯುವ ಈ ಗೊಂದಲಿಗರ ಮಹಿಳೆಯರು ಕುಟುಂಬದ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣದಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದರೂ ಇವರ ಸ್ಥಾನ ಪುರುಷರಿಗಿಂತ ಕೆಳಸ್ಥರದ್ದಾಗಿದೆ. ಹೆಣ್ಣು ಎಷ್ಟೇ ಓದಿದರೂ ಹೆರವರ ಮನೆಪಾಲು ಅಥವಾ ಎಷ್ಟೇ ಓದಿದರೂ ಮನೆಗೆಲಸ ತಪ್ಪದು ಎನ್ನುವ ಪುರುಷನ ಸೀಮಿತ ದೃಷ್ಟಿ ಇನ್ನೂ ಇವರನ್ನು ಅವಿದ್ಯಾವಂತರನ್ನಾಗಿಸಿದೆ. ತಮ್ಮ ಅಡಿಯಾಳನ್ನಾಗಿ ರೂಪಿಸಿದೆ. ಹೆಣ್ಣನ್ನು ಈ ಸಮುದಾಯದಲ್ಲಿ ಅತ್ಯಂತ ಕೀಳಾಗಿ ಕಾಣುವುದಿಲ್ಲ. ಆದರೆ ಹಾಗೆಂದು ಅವರನ್ನು ಸರಿಸಮನಾಗಿ ಪರಿಗಣಿಸುವುದಿಲ್ಲ.
ಕುಟುಂಬದಲ್ಲಿ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವವರು ಪುರುಷರೇ. ಇಂಥ ನಿರ್ಧಾರಗಳಿಗೆ ಈ ವರ್ಗದ ಮಹಿಳೆಯರ ಸಮ್ಮತಿ ಇದ್ದೇ ಇರುತ್ತದೆ. ಒಟ್ಟಾರೆ ಶಿಕ್ಷಣವಂಚಿತ ಅನಕ್ಷರಸ್ಥರಾದ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಗಂಡಸರನ್ನು ಅನುಸರಿಸಿ ಬಾಳುತ್ತಾರೆ. ಈ ಗೊಂದಲಿಗರ ಸಮುದಾಯದ ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿರುವ ಬಾಂಡೆ, ಬಳೆ, ಚುರುಮುರಿ ಇತ್ಯಾದಿ ಮಾರಿಬಂದ ಅಲ್ಪ ಲಾಭದಲ್ಲಿ ದಿನದ ಊಟಕ್ಕೂ ಸಾಲದೆ, ತಮ್ಮ ಗಂಡಂದಿರ ದುಡಿಮೆಯ ಹಣವೂ ಧಕ್ಕದೇ ಅಥವಾ ಮನೆ ನಿರ್ವಹಿಸಲು ಬಳಕೆಯಾಗದೆ, ಹೆಣ್ಣು ಮಕ್ಕಳು ತೀರಾ ಶೋಚನೀಯ ಸ್ಥಿತಿಯಲ್ಲಿ ಬದುಕು ಮಾಡುತ್ತಿದ್ದಾರೆ. “ನಮ್ಮ ಗೊಂದಲಿಗರ ಹೆಣ್ಣು ಮಕ್ಕಳಿಗೆ ಯಾವುದೇ ದೇವರ ಶಾಪ ಐತಿ ನಮ್ಮ ಜೀವನ ನರಕದ, ಪಾಪದ ಜೀವನ” ಎಂಬುದು ಸಂಕೇಶ್ವರದ ಗೊಂದಲಿಗರ ಮಹಿಳೆ ಸಾವಿತ್ರಿ ಬೊಸ್ಲೆ ಹಾಗೂ ಸತ್ಯವ್ವ ಗೊಂದಳೆ ಅವರ ರೋದನವಾಗಿದೆ.
ಇತ್ತಿತ್ತಲಾಗಿ ಗೊಂದಲಿರ ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಿದ್ದು, ತಮ್ಮ ಕುಟುಂಬದ ಜೀವನಮಟ್ಟ ಸುಧಾರಿಸಿಕೊಳ್ಳಬೇಕೆಂಬ ಪ್ರಜ್ಞೆ, ಈ ಸಮುದಾಯದ ಮಹಿಳೆಯರಲ್ಲಿ ಮೂಡುತ್ತಿದೆ. ಸಾಮಾಜಿಕವಾಗಿ ಈ ಗೊಂದಲಿಗ ಮಹಿಳೆಯರು ತಮ್ಮನ್ನು ಮರಾಠರೆಂದೆ ಗುರುತಿಸಿಕೊಳ್ಳುತ್ತಿದ್ದರು. ಆದರೆ ಮರಾಠಾ ಬಾಂಧವರು ಇವರನ್ನು ಕೆಳಸ್ಥರದವರೆಂದು ಪರಿಗಣಿಸುವುದರಿಂದ ಒಂದು ಮಿತವಾದ ವಲಯದಲ್ಲಿ ಈ ಮಹಿಳೆಯರು ಬದುಕು ಮಾಡಬೇಕಾಗಿದೆ. ಕೌಟುಂಬಿಕವಾಗಿ ತಕ್ಕಮಟ್ಟಿನ ಸ್ಥಾನಮಾನವಿದ್ದರೂ, ಸಮಾಜದಲ್ಲಿ ಗಂಡಸರಿಗೆ ಇರುವ ಪ್ರಾಮುಖ್ಯತೆ ಈ ಸಮುದಾಯದ ಹೆಣ್ಣುಮಕ್ಕಳಿಗೂ ಇರುವುದು ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಇವರಲ್ಲಿ ಅಶಿಕ್ಷಿತರ ಸಂಖ್ಯೆ ಹೆಚ್ಚಾಗಿರುವುದು ಒಂದಾದರೆ, ಅಲೆಮಾರಿಗಳಾಗಿ ಯಾವ ಸಮಾಜದ ವಿಶ್ವಾಸವು ಇಲ್ಲದಿರುವುದು ಮತ್ತೊಂದು ಕಾರಣವಾಗಿದೆ.
ಆರ್ಥಿಕ ಸಂಪನ್ಮೂಲ – ಮಹಿಳೆ:
ಈ ಸಮುದಾಯದಲ್ಲಿ ಕಡುಬಡವರೇ ಹೆಚ್ಚು. ಇವರ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟದ್ದಾಗಿದೆ. ಅಲೆಮಾರಿ ಜನಾಂಗವಾದ ಈ ಸಮುದಾಯಕ್ಕೆ ಒಂದು ನೆಲೆ ಇಲ್ಲದಿರುವುದರಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪುರುಷರು ಗೊಂದಲ ಹಾಕುವುದು, ಶಕುನ ಹೇಳುವುದು, ಜ್ಯೋತಿಷ್ಯ ಹೇಳಿ ಅಲ್ಪ ಆದಾಯ ಸಂಗ್ರಹಿಸಿದರೆ, ಒಪ್ಪತ್ತಿನ ಊಟಕ್ಕೂ ಸಾಲುವುದಿಲ್ಲ. ಆದರೆ ಮಹಿಳೆಯರು ಕೌದಿ ಹೊಲಿಗೆಯ ಮೂಲಕ ಪುರುಷರಿಗಿಂತ ಕುಟುಂಬದ ನಿರ್ವಹಣೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣದಲ್ಲಿ ಇವರ ಪಾಲು ಹೆಚ್ಚಿನದಾಗಿದೆ. ಎಷ್ಟೇ ಕಷ್ಟಪಟ್ಟರೂ ನಿರಾಧಾರ ಸ್ಥಿತಿ ಈ ಮಹಿಳೆಯರಲ್ಲಿದೆ. ಮಿಗಿಲಾಗಿ ಬಡತನ, ಅನಕ್ಷರತೆ, ದೈವಿನಂಬಿಗೆ, ಮೂಢನಂಬಿಕೆ ಇವರ ಆರ್ಥಿಕ ದುಸ್ಥಿತಿಗೆ ಕಾರಣವಾಗಿರುವ ಪ್ರಮುಖ ಅಂಶಗಳಾಗಿವೆ. ಆದರೂ ಈ ಸಮುದಾಯದಲ್ಲಿ ಕೆಲವೇ ಕೆಲವು ಮಹಿಳೆಯರು ಅಭಿವೃದ್ಧಿಗೋಸ್ಕರ ಅನೇಕ ಯೋಜನೆಗಳನ್ನು ರೂಪಿಸಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಈ ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ಹುಬ್ಬಳ್ಳಿ ಗುಪ್ತಚಾರ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಅಹಲ್ಯಾಬಾಯಿ ಸುಗತೆ ಗೊಂದಲಿ ಸಮಾಜದ ಮುಖಂಡರಾದ ಶ್ರೀ ಪಿ.ಡಿ. ಸುಗತೆಯವರು ಸರಕಾರದ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾವಂತ ಗೊಂದಲಿಗರ ಮಹಿಳೆಯರು ಪಡೆಯುವಂತೆ ಜಾಗೃತಿ ಮೂಡಿಸುತ್ತಾರೆ.
ಮಹಿಳಾ ಸಾಧಕರು:
ಈ ಸಮುದಾಯದ ಅನೇಕ ಮಹಿಳೆಯರು ಈಗ ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶ್ರೀಮತಿ ಮೀನಾಕ್ಷಿ ವಸಂತ ಕಾಳೆ, ಇವರು ಜಮಖಂಡಿ ಪುರಸಭೆಯ ಸದಸ್ಯರಾಗಿ, ಮಂಗಳಾ ಸುಗತೆ, ಕಡಕಲಾಟ ಗ್ರಾಮ ಪಂಚಾಯಿತಿ ಸದಸ್ಯರಾಗಿ, ದಮಯಂತಿ ಬಾಯಿ ಬೋಸಲೆ ಸೊಲ್ಲಾಪುರದಲ್ಲಿ, ಶ್ರೀಮತಿ ಲಕ್ಷ್ಮೀಬಾಯಿ ಗಣಪತಿರಾವ ಕಾಳೆ ಸಂಕೇಶ್ವರ ನಗರಸಭೆಯ ಸದಸ್ಯರಾಗಿ, ಶ್ರೀಮತಿ ವಾಸಂತಿ ವಸಂತರಾವ ಮಾಳವಧೆ ಖಾರೆಪಟ್ಟಣ ಸಿಂಧುದುರ್ಗ, ಶ್ರೀಮತಿ ಕಸ್ತೂರಿಬಾಯಿ, ಶಂಕರ ಗಣಾಚಾರಿ ಬಳ್ಳಾರಿ, ಅಕುತಾಯಿ ಭೋಸಲೆ (ಮಿರಜ), ಶ್ರೀಮತಿ ಸುಮಿತ್ರಾಬಾಯಿ ಚಿಂತಾಮಣಿರಾಬ ಬಂಗಾಳೆ (ಹೊಸಪೇಟೆ), ಶ್ರೀಮತಿ ಮನಿಶ ಶಿವಾಜಿರಾವ ಗುರುವ (ನಿಪ್ಪಾಣಿ) ಹೀಗೆ ಮಹಿಳೆಯರು ಸ್ಥಳೀಯ ಮಟ್ಟದಲ್ಲಿ ರಾಜಕೀಯ ಪ್ರವೇಶಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಆ ಮೂಲಕ ಗೊಂದಲಿಗ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡುತ್ತಿದ್ದಾರೆ.
ಈ ಸಮುದಾಯದ ಮಹಿಳಾ ಪ್ರಥಮ ವೈದ್ಯಾಧಿಕಾರಿ ಶ್ರೀಮತಿ ಡಾ. ಮನೋರಮಾ ದಶರತರಾವ ಠಾಕೂರ ೧೯೬೦ಕ್ಕಿಂತ ಮುಂಚೆ ಎಂ.ಬಿ.ಬಿ.ಎಸ್. ಪದವಿ ಪಡೆದು ಹುಬ್ಬಳ್ಳಿಯ ಕೆಎಂಸಿಯಲ್ಲಿ ಪ್ರಾಧ್ಯಾಪಕರಾಗಿ, ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದಂತಹ ಅಪರೂಪದ ಮಹಿಳಾ ಸಾಧಕಿಯರು ಇದ್ದಾರೆ. ಇತ್ತಿತ್ತಲಾಗಿ ಅನೇಕ ಮಹಿಳೆಯರು ಎಸ್.ಎಸ್.ಎಲ್.ಸಿ ಮತ್ತು ಟಿ.ಸಿ.ಎಚ್., ಬಿ.ಎ., ಬಿ.ಕಾಮ್, ಬಿ.ಎಸ್.ಸಿ., ಬಿ.ಇ. ಪದವಿ ಅಭ್ಯಾಸ ಮಾಡುತ್ತಿರುವುದು ಗಮನಾರ್ಹವಾಗಿದೆ.
ಪೂಜ್ಯ ಶ್ರೀ ಕಲಾವತಿದೇವಿ:
ಈ ಗೊಂದಲಿಗ ಸಮುದಾಯದ ಮಹಿಳೆಯ ಸಂಘಟನೆ ಅವರ ಅಭಿವೃದ್ಧಿ, ಅವರು ಸುಶಿಕ್ಷಿತರಾಗುವುದರ ಅನಿವಾರ್ಯತೆ ಕಂಡುಕೊಂಡಿದ್ದಾರೆ. ಅವರ ಉದ್ಯೋಗ ಇತ್ಯಾದಿ ಜಾಗೃತಿ ಮೂಡಿಸಿದ ಪ್ರಥಮ ಮಹಿಳೆ, ಗೊಂದಲಿಗರ ಸಮಾಜ ಅಭಿವೃದ್ಧಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ಪ್ರೇರೇಪಿಸಿ ಮಾರ್ಗದರ್ಶನ ಮಾಡಿದ ಮಹಿಳೆ, ಗಡಿಭಾಗದ ಮರಾಠ ಗೊಂದಲಿಗರ ಆರಾಧ್ಯ ಮಹಿಳೆ. ಪರಮಪೂಜ್ಯ ಕಲಾವತಿದೇವಿ (ಬೆಳಗಾವಿ) ಇವರ ಪ್ರಯತ್ನ, ಸಾಧನೆ ಗಮನಾರ್ಹವಾಗಿದೆ.
ಧಾರ್ಮಿಕ ಕಾರಣದ ನೆಪದಿಂದ ಅಶಿಕ್ಷಿತ ಗೊಂದಲಿಗ ಮಹಿಳೆಯರು ಪ್ರತಿವಾರ ಅಂಬಾಭವಾನಿ ದೇವಸ್ಥಾನದಲ್ಲಿ ಭಜನೆ ಮಾಡುವುದು, ದೇವಿಯ ಆರಾಧನೆ ಮಾಡುವ ಮೂಲಕ ಗೊಂದಲಿಗ ಮಹಿಳೆಯರಲ್ಲಿ ಬದಲಾವಣೆ ತಂದು ಮುಖ್ಯವಾಹಿನಿಯಲ್ಲಿ ಬದುಕುವಂತೆ ಮಾಡಿದ ಹೆಗ್ಗಳಿಕೆ ಇವರದಾಗಿದೆ. ಇದಲ್ಲದೆ ಗೊಂದಲಿಗ ಸಮಾಜದ ಹಿರಿಯರು ರಾಜ್ಯಮಟ್ಟದಲ್ಲಿ “ಕರ್ನಾಟಕ ಗೊಂಧಳಿ ಸಮಾಜ ಸಂಘ (ರಿ) ಸ್ಥಾಪಿಸಿ ಶ್ರೀ ಪಿ.ಡಿ.ಸುಗತೆ, ನವಲಗುಂದದ ಶ್ರೀ ಶಿವಾನಂದ ಪಾಚಂಗಿಯವರ ತಾಲೂಕು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಗೊಂದಲಿಗರನ್ನು ಸಂಘಟಿಸಿ ಜಾಗೃತಿ ಮೂಡಿಸುತ್ತಿರುವ ಕಾರಣವಾಗಿ ಈ ಸಮುದಾಯದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಭದ್ರತೆ ಪಡೆಯುವುದರಲ್ಲಿ ಪ್ರಯತ್ನಿಸುತ್ತಿದ್ದಾರೆ.
ಅನ್ಯ ಪ್ರಭಾವ:
ಜಾಗತೀಕರಣ, ಉದಾರೀಕರಣ ಮತ್ತು ಔದ್ಯೋಗಿಕರಣದ ಪ್ರಭಾವಕ್ಕೆ ಒಳಗಾಗಿರುವ ಈ ಸಮುದಾಯದ ಮಹಿಳೆಯರಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ದೂರದರ್ಶನ, ಚಲನಚಿತ್ರ ಹಾಗೂ ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ಈ ಮಹಿಳೆಯರು ಜಾಗೃತರಾಗುತ್ತಿದ್ದಾರೆ. ತಾವು ವಿದ್ಯಾವಂತರಾಗಬೇಕು. ಜೀವನಮಟ್ಟ ಸುಧಾರಿಸಿಕೊಂಡು ದೇಶದ ಮುಖ್ಯ ವಾಹಿನಿಯಲ್ಲಿ ಸೇರಬೇಕು ಎಂಬ ಹಂಬಲ ಹೆಚ್ಚಾಗುತ್ತಿರುವ ಕಾರಣವಾಗಿ ಈ ಸಮುದಾಯದ ಮಹಿಳೆಯರು ಶಾಲೆ, ಕಾಲೇಜು ಪ್ರವೇಶ ಪಡೆಯುತ್ತಿದ್ದಾರೆ. ಈಗಾಗಲೇ ಅನೇಕರು ಶಾಲಾ ಶಿಕ್ಷಕರಾಗಿ, ಕಾಲೇಜು ಉಪಾಧ್ಯಾಯರಾಗಿ ಸರಕಾರಿ ನೌಕರರಾಗಿ ಬೆರಳೆಣಿಕೆಯಷ್ಟು ಜನ ಸಾಫ್ಟ್ವೇರ್ ಇಂಜಿನೀಯರಾಗಿ, ಕೆಲಸ ಮಾಡುತ್ತಿರುವುದು ಈ ಸಮುದಾಯದಲ್ಲಿ ಹೊಸ ಸಂಚಲನವನ್ನು ತಂದಿದೆ. ಕುಲಕಸುಬಾದ ಗೊಂದಲ ಹಾಕುವುದರಿಂದ ಜೀವನ ನಿರ್ವಹಿಸಲು ಸಾಧ್ಯವಾಗದಾಗಿ ಅನಿವಾರ್ಯ ಕಾರಣಗಳಿಂದಾಗಿ ಈ ಸಮುದಾಯದ ಮಹಿಳೆಯರು ತಮ್ಮ ಜೀವನ ಶೈಲಿ ಊಟ-ಉಡುಗೆ ತೊಡುಗೆ ಉದ್ಯೋಗಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಸಂಸ್ಕೃತಿಯ ಮೂಲ ಗುಣವೇ ಬದಲಾವಣೆ, ಇಂತಹ ಬದಲಾವಣೆಗೆ ಈ ಗೊಂದಲಿಗರ ಮಹಿಳೆಯರು ಒಳಗಾಗುತ್ತಿದ್ದಾರೆ. ಬದಲಾಗುತ್ತಿದ್ದಾರೆ.
ಅನುಬಂಧ-೧
೨೦೦೬ರಲ್ಲಿ ಕರ್ನಾಟದ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವ ಗೊಂದಲಿಗ ಜನಾಂಗದ ಜನಸಂಖ್ಯೆ ಪಟ್ಟಿ*
ಜಿಲ್ಲೆ | ಮಹಿಳೆಯರು | ಪುರುಷರು | ಒಟ್ಟು | |
೧. | ಬಿಜಾಪುರ, ಬಾಗಲಕೋಟ | 20,549 | 23735 | 44,284 |
೨. | ಬೀದರ | 16,575 | 15,985 | 32,560 |
೩ | ಗುಲ್ಬರ್ಗಾ | 15,000 | 19550 | 38550 |
೪ | ರಾಯಚೂರ | 12324 | 18480 | 30804 |
೫. | ಬಳ್ಳಾರಿ | 9898 | 10670 | 20568 |
೬. | ಬೆಳಗಾವಿ | 16978 | 19368 | 36346 |
೭. | ಧಾರವಾಡ | 20541 | 20050 | 40591 |
೮. | ಕಾರವಾರ | 13715 | 14005 | 27720 |
೯. | ಶಿವಮೊಗ್ಗ | 14011 | 17801 | 31812 |
೧೦. | ಚಿತ್ರದುರ್ಗ | 13926 | 16210 | 30136 |
೧೧. | ತುಮಕೂರು | 9879 | 10575 | 20454 |
೧೨. | ಮಂಗಳೂರು | 5781 | 8214 | 13995 |
೧೩. | ಚಿಕ್ಕಮಗಳೂರು | 8658 | 9987 | 18645 |
೧೪. | ಹಾಸನ | 10000 | 11000 | 11000 |
೧೫. | ಮಂಡ್ಯ | 5714 | 9678 | 15392 |
೧೬. | ಬೆಂಗಳೂರು | 19619 | 20295 | 39914 |
೧೭. | ಕೋಲಾರ | 11523 | 13000 | 24523 |
೧೮. | ಮಡಿಕೇರಿ | 2114 | 2390 | 4508 |
೧೯. | ಮೈಸೂರು | 12326 | 14000 | 26326 |
೨೦. | ಒಟ್ಟು ೨೦ ಜಿಲ್ಲೆಗಳಲ್ಲಿ | 229145 | 271583 | 510128 |
* ಅಧ್ಯಕ್ಷರು, ಕರ್ನಾಟಕ ಗೊಂಧಳಿ ಸಮಾಜ ಸಂಘ (ರಿ), ದಾಜಿಬಾನಪೇಟ ಹುಬ್ಬಳ್ಳಿ ಇವರ ವರದಿ ಆಧರಿಸಿದೆ.
ಅನುಬಂಧ-೨
ವ್ಯಕ್ತಿಗಳ ಪಟ್ಟಿ
ಹೆಸರು | ಊರು | ವಯಸ್ಸು |
ಶ್ರೀಮತಿ ಅಕ್ಕುಬಾಯಿ ಲಕ್ಷ್ಮಣರಾವ ಕಾಳೆ | ಸಂಕೇಶ್ವರ | ೭೦ |
ಶ್ರೀಮತಿ ಮುಕ್ತಾಬಾಯಿ ರಾಮಚಂದ್ರ | ಹತ್ತಳಗಿ-ಸಂಕೇಶ್ವರ ವ | ೮೦ |
ಶ್ರೀಮತಿ ಕಮಲಾಬಾಯಿ ಮಹಾದೇವ ಗೋಂದಳಿ | ಸಂಕೇಶ್ವರ | ೬೮ |
ಶ್ರೀ ಮಹಾದೇವ ಗೋಂದಳಿ | ಸಂಕೇಶ್ವರ ವ | ೭೨ |
ಶ್ರೀಮತಿ ಸತ್ಯವ್ವಾ ನಾಮದೇವ ಗೋಂದಳೆ | ಸಂಕೇಶ್ವರ | ೬೯ |
ಶ್ರೀಮತಿ ಸರಿತಾ ಚಂದ್ರಕಾಂತ ಭೋಸ್ಲೆ | ಸಂಕೇಶ್ವರ | ೨೫ |
ಕುಮಾರ ದತ್ತಾ ಮಹಾದೇವ ಗೋಂದಳೆ | ಸಂಕೇಶ್ವರ | ೨೦ |
ಶ್ರೀಮತಿ ಹನುಮವ್ವ ಹನುಮಂತಪ್ಪ ಬೋರಾತ್ | ಗುತ್ತಲ್, ಹಾವೇರಿ ಜಿಲ್ಲೆ | ೫೯ |
ಶ್ರೀಮತಿ ರುಕ್ಮವ್ವ ಬೋರಾತ್(ಜೋಗೇರ) | ಗುತ್ತಲ್, ಹಾವೇರಿ ಜಿಲ್ಲೆ | ೩೧ |
ಶ್ರೀಮತಿ ಕಸ್ತೂರಿ ಬೋರಾತ್(ಜೋಗಲ್) | ಗುತ್ತಲ್, ಹಾವೇರಿ ಜಿಲ್ಲೆ | ೩೧ |
ಶ್ರೀಮತಿ ಕರಿಯಮ್ಮ ಕೃಷ್ಣಪ್ಪ ಮುಕೆ | ಮುಂಡರಗಿ, ಜಿಲ್ಲೆ ಗದಗ | ೬೫ |
ಶ್ರೀಮತಿ ಎಲ್ಲವ್ವ ಎಲ್ಲಪ್ಪ ಗೊಂದಳಿ | ಧಾರವಾಡ | ೬೪ |
ಶ್ರೀಮತಿ ಫಕೀರವ್ವ ಪ. ಪಾಚಂಗೆ | ಧಾರವಾಡ | ೬೦ |
ಶ್ರೀ ಗಂಗಾರಾಮ ವಾಖೋಡೆ | ಬಾಗಲಕೋಟ | ೮೨ |
ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ | ಬಾಗಲಕೋಟ | ೬೨ |
ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಗೋಂದಲಿಗ ಕಲಾವಿದ. | ||
ಪಿ.ಡಿ.ಸುಗತೆ | ||
ಅಧ್ಯಕ್ಷರು, ಕರ್ನಾಟಕ ಗೋಂಧಳಿ ಸಮಾಜ ಸಂಘ (ರಿ) ದಾಜಿಬಾನಪೇಟ, ಹುಬ್ಬಳ್ಳಿ | ||
ಶ್ರೀಮತಿ ಇಂದ್ರಾಬಾಯಿ ಚಿತ್ರಗಾರ (ಶಿಂಧೆ) | ಮುದ್ದೇಬಿಹಾಳ | ೫೮ |
ವಿಜಕ್ಕಾ ನಾಗಪ್ಪಾ ಗೋಂಧಳಿ | ಅನಂತಪುರ, ತಾ: ಅಥಣಿ | ೩೬ |
ಪಾರ್ವತಿ ದೇವಪ್ಪಾ ಗೋಂಧಳಿ | ಅನಂತಪುರ, ತಾ: ಅಥಣಿ | ೬೩ |
ಕಾಂಚನಾ, ಬಾಬು ಗೋಂಧಳಿ | ಅನಂತಪುರ, ತಾ: ಅಥಣಿ | ೪೬ |
ಭಿಮಕ್ಕಾ ರಾಮು ಗೋಂಧಳಿ | ಅನಂತಪುರ, ತಾ: ಅಥಣಿ | ೫೯ |
ಗುರುಪಾದ ರಾಮು ಗೋಂಧಳಿ | ಅನಂತಪುರ, ತಾ: ಅಥಣಿ | ೪೫ |
ದ್ಯಾಮವ್ವ ಸಾಕಪ್ಪ ಸಿಂಧೆ | ಕೋಡಿಹಾಳ ತಾ: ಹುನಗುಂದ | ೮೫ |
ದ್ಯಾವಮ್ಮ ಹ. ವಾಸ್ಟರ್ | ಕೋಡಿಹಾಳ ತಾ: ಹುನಗುಂದ | ೭೮ |
ಹುಲಿಗೆಮ್ಮ ಮರಿಯಪ್ಪ ಗೋಂಧಳಿ | ಕೋಡಿಹಾಳ ತಾ: ಹುನಗುಂದ | ೬೦ |
ಕುಪ್ಪಮ್ಮ ಸುಗತೆ ಗೋಂಧಳಿ | ಕೋಡಿಹಾಳ ತಾ: ಹುನಗುಂದ | ೭೦ |
ದ್ಯಾಮಣ್ಣ ಸಾಕಪ್ಪ ಸಿಂಧೆ | ಕೋಡಿಹಾಳ ತಾ: ಹುನಗುಂದ | ೮೫ |
ದುರುಗಮ್ಮ ಪಾಯಿಕ ಗೊಂಡೆಕರ | ಕೋಡಿಹಾಳ ತಾ: ಹುನಗುಂದ | |
ಸಾವಂತ್ರಮ್ಮ ಯಲ್ಲಪ್ಪ ಗುರು | ನವಲಗುಂದ, ಜಿ: ಧಾರವಾಡ | ೮೫ |
ಯಲ್ಲವ್ವ ಮು. ಗೋಂಧಳಿ | ನವಲಗುಂದ, ಜಿ: ಧಾರವಾಡ | ೫೦ |
ಮೀನಾಕ್ಷಿ ಬಾಯಿ ಪಕೀರಪ್ಪ ವನಲೆ | ನವಲಗುಂದ, ಜಿ: ಧಾರವಾಡ | ೬೫ |
ರುಕ್ಮಬಾಯಿ ವಿಠಲ ಬೋರಾತ | ನವಲಗುಂದ, ಜಿ: ಧಾರವಾಡ | ೩೫ |
ಶಿವಾನಂದ ಪಾಚಂಗಿ | ನವಲಗುಂದ, ಜಿ: ಧಾರವಾಡ | ೮೫ |
ಅಧ್ಯಕ್ಷರು ಗೋಂಧಳಿ ಸಮಾಜ ಸಂಘ, | ನವಲಗುಂದ |
ಅನುಬಂಧ-೩
ಗ್ರಂಥ ಋಣ
ಲೇಖಕರು/ಸಂಪಾದಕರು ಗ್ರಂಥದ ಹೆಸರು ಪ್ರಕಾಶನ
೧. ಡಾ. ನಿಂಗಣ್ಣ ಸಣ್ಣಕ್ಕಿ, “ಗೊಂದಲಿಗರ ಸಂಸ್ಕೃತಿ”, ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು-೧೯೯೩.
೨. ಕ್ಯಾತನಹಳ್ಳಿ ರಾಮಣ್ಣ, “ಗೊಂದಲಿಗರ: ಒಂದು ಅಧ್ಯಯನ”, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು, ೧೯೮೨.
೩. ಕ್ಯಾತನಹಳ್ಳಿ ರಾಮಣ್ಣ, “ಗೊಂದಲಿಗರ ಕಥೆಗಳು”, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು, ೧೯೭೨.
೪. ಕ್ಯಾತನಹಳ್ಳಿ ರಾಮಣ್ಣ, “ಶಿವಮೊಗ್ಗ ಜಿಲ್ಲೆಯ ಗೊಂದಲಿಗರ ಕಥೆಗಳು”, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು, ೧೯೭೫.
೫. ಜಾನಪದ ಕನ್ನಡ ವಿಷಯ, “ವಿಶ್ವಕೋಸ”, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು, ೨೦೦೬.
೬. ಮುದೇನೂರು ಸಂಗಣ್ಣ, “ಗೊಂದಲಿಗರ ದೇವೇಂದ್ರನವರ ಆಟಗಳು” ಪ್ರಸಾರಾಂಗ ಕನ್ನಡ, ವಿಶ್ವವಿದ್ಯಾಲಯ ಹಂಪಿ, ೧೯೯೩.
೭. ಡಾ. ನಿಂಗಣ್ಣ ಸಣ್ಣಕ್ಕಿ. “ಬುಡಬುಡಕಿಯರು”, ಐ.ಬಿ.ಎಚ್. ಪ್ರಕಾಶನ, ಗಾಂಧಿನಗರ, ಬೆಂಗಳೂರು, ೧೯೮೦
೮. ಡಾ. ಗಾಯತ್ರಿ ನಾವಡ, “ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು”, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ಸಿರಿ ಪ್ರಕಾಶನ, ಹೊಸಪೇಟೆ, ೧೯೯೯.
೯. ಎಸ್.ಜಿ.ನರಸಿಂಹಾಚಾರ್ (ಸಂ), “ಆದಿಪುರಾಣ”, ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ನೃಪತುಂಗ ರಸ್ತೆ, ಬೆಂಗಳೂರು-೧೯೯೫.
೧೦. ಮ.ಆ. ರಾಮಾನುಜಯ್ಯಾಂಗಾರ್ (ಸಂ), “ಅಣಜಿ ಪುರಾಣ”. ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು.
೧೧. ಎಸ್.ಜಿ.ನರಸಿಂಹಾಚಾರ್ (ಸಂ), “ಚಂದ್ರಪ್ರಭ ಪುರಾಣ”, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು.
೧೨. ಪ್ರೊ. ಎಚ್.ಜೆ. ಲಕ್ಕಪ್ಪಗೌಡ (ಸಂ), “ಕರ್ನಾಟಕ ಬುಡಕಟ್ಟುಗಳು”, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಬೆಂಗಳೂರು-೨೦೦೦.
೧೩. ಡಾ. ನಿಂಗಣ್ಣ ಸಣ್ಣಕ್ಕಿ, “ಕರ್ನಾಟಕ ಗೊಂದಲಿಗರು ಹಾಗೂ ಅವರ ಸಾಹಿತ್ಯ”, ಪಿ.ಎಚ್.ಡಿ. ಮಹಾಪ್ರಬಂಧ (ಅಪ್ರಕಟಿತ), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
೧೪. ಪಿ.ಡಿ. ಸುಗತೆ (ಸಂ), “ಪ್ರಥಮ ಮಹಾದಿವೇಶನ ಸ್ಮರಣ ಸಂಚಿಕೆ” ಕರ್ನಾಟಕ ಗೊಂಧಳಿ ಸಮಾಜ ಸಂಘ, ಹುಬ್ಬಳ್ಳಿ, ೧೯೭೯.
೧೫. ರೆ.ಎಫ್. ಕಿಟಲ್, ಕನ್ನಡ-ಇಂಗ್ಲೀಷ್ನಿಘಂಟು, ಮಂಗಳೂರು, ಬಾಸೆಲ್ಮಿಶನ್ಬುಕ್ಮತ್ತು ಬ್ಯಾಕ್ಟ ಡಿಪಾಜಿಟರ್
೧೬. ಎಂ.ಎಂ. ಕಲಬುರ್ಗಿ, “ಹರಿಹರನ ರಗಳೆಗಳು”, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
೧೭. ಎಂ.ಬಸಪ್ಪ, ಚನ್ನಬಸವ ಪುರಾಣ.
Leave A Comment