ಮರದೊಂದು ಗೊಂಬೆಯನು
ಪುಟ್ಟತೊಟ್ಟಿಲೊಳಿಟ್ಟು
ಪುಟ್ಟಹಸ್ತಗಳಿಂದ ತೊಟ್ಟಿಲನು ತೂಗಿ
ಜೋ ಜೋ ಜೋ ಎಂದು
ಜೋಗುಳವ ಹಾಡುವಳು
ಮೂರುವರ್ಷದ ತಂಗಿ ಮನೆಯ ಬೆಳಕು.

ತಾನು ತಿನ್ನುವ ಮುನ್ನ
ತನ್ನ ಗೊಂಬೆಗೆ ತಿನಿಸಿ
ಹೊಸ ತುಂಡುಬಟ್ಟೆಗಳ ಉಡುಪು ಮಾಡಿ ;
ಹೆಣ್ಣು ಗೊಂಬೆಗೆ ಒಂದು
ಗಂಡು ಗೊಂಬೆಯ ತಂದು
ಹಸೆಯಿಟ್ಟು ಹಾಡುವಳು ಮದುವೆ ಮಾಡಿ !

ನಮ್ಮ ದೃಷ್ಟಿಗೆ ಗೊಂಬೆ
ಬರಡು ಕೊರಡಿನ ತುಂಡು
ಅದರ ಕಣ್ಣಿಗೆ ಆಗ ಜೀವವ್ಯಕ್ತಿ
ಜಡತೆಯಲಿ ಚೇತನವ
ಎಲ್ಲೆಲ್ಲಿಯೂ ಸೊಬಗ
ಕಾಣಬಲ್ಲುದು ಹಸುಳೆಕಣ್ಣ ಶಕ್ತಿ.

ಮುಗ್ಧ ಶಿಶುನಯನದಲಿ
ದೈವಿಕತೆ ತುಂಬಿಹುದು ;
ಸಾಮಾನ್ಯತಾ ರೀತಿ ಅದರ ಪ್ರೀತಿ.
ಜೀವ ನಿರ್ಜೀವಗಳು
ಮೇಲು ಕೀಳುಗಳೆಂಬ
ಭೇದವಿಲ್ಲದ ಹಿರಿಯ ತತ್ವ ನೀತಿ.
ಆ ಮರದ ಗೊಂಬೆಯನು
ಎತ್ತಿ ಸಂತೈಸುವುದು,
ಮತ್ತೆ ನೀರೆರೆಯುವುದು ತಾಯಿಯಂತೆ.
ಸತ್ತ ತಿಥಿ ಮಾಡುವುದು
ಅಳುವನಭಿನಯಿಸುವುದು
ಜೀವನವ ಟೀಕಿಸುವ ವ್ಯಕ್ತಿಯಂತೆ.

ಜೀವನದ ಉದಯದಲಿ
ಸುಖದರುಣ ಕಾಂತಿಯಲಿ
ತೇಲುತಿಹ ಶಿಶುವಿಂಗೆ ಬಿಸಿಲ ಬಿಸಿಯು
ಎಂತು ಅರಿವಾಗುವುದು ?
ನೋಡಿ ನಲಿ ಆಟವನು
ಮುಂದೆ ತಾನರಿಯುವುದು ಸಣ್ಣ ಸಸಿಯು.

ಏನುಬಲ್ಲುದು ಹಸುಳೆ
ಮುಂಬರುವ ಬವಣೆಗಳ
ಸಂಸಾರ ರಾಜ್ಯಗಳ ತೊಡಕುಬಲೆಯ.
ಆದರದು ತಿಳಿಸುವುದು
ತಿಳಿಯಬಲ್ಲವ ತಿಳಿವ ;
ಗುರುವೆಂದು ಪರಿಗಣಿಸು ಹಸುಳೆತನವ.

ಗೊಂಬೆಯಾಟದೊಳೆಂತು
ಶಿಶು ತನ್ನ ಮರೆಯುವುದು
ಸುಖದುಃಖಗಳ ಪರಿವೆಯಿಲ್ಲದಂತೆ,
ಅಂತೆ ನೀ ಬಾಳಿನಲಿ
ಗೊಂಬೆಯಾಟವನಾಡು
ಹಸುಳೆಯಾಟವು ಬಾಳ ಟೀಕೆಯಂತೆ !