ಇರುಳ ಮೌನದ ಕೊರಡ ಕೊರೆಯುವ
ಇವರ ಗೊರಕೆಯ ಗರಗಸ
ತಾರಮಂದರದಲ್ಲಿ ಏರಿಳಿ-
ದೆಂತುಗೈದಿದೆ ಪರವಶ!

ಇರುಳ ನಿದ್ದೆಯ ಮರಳುಗಾಡೊಳು
ನಡೆವ ಕನಸಿನ ಕಾರವಾನ್,
ಇವರ ಗೊರಕೆಯ ಬೀಸಿನುರುಳಿಗೆ
ಸಿಲುಕಿ ನಿಂತಿತೊ ಕಾಣೆ ನಾನ್ !

ಏನು ಲಯ, ಓ ಏನು ತಾಳ,
ಇದೇನು ರಾಗಾಲಾಪನೆ!
ಘೂಕ-ಗಾರ್ದಭ ಚಕಿತವಾಗಿವೆ,
ಅಹ! ಎಂಥ ಕಸಿವಿಸಿ ಯಾತನೆ!

ಗಾನದೇವಿಯ ಶಿಲುಬೆಗೇರಿಸ-
ಲವಳು ನರಳುವ ದನಿಗಳೋ,
ಜಗದಪಸ್ವರಗಳನು ಭಟ್ಟಿಯ-
ನಿಳಿಪ ಗಾಣದ ಮೊರೆತವೋ,
ನಿದ್ದೆಬೀದಿ ರಿಪೇರಿ ರೋಡೆಂ-
ಜಿನ್ನು ಉರುಳುವ ರಭಸವೋ,
ಏನು ಬಣ್ಣಿಸಲಯ್ಯ ಉಪಮಾ-
ತೀತವಾದೀ ಗಾನವ,
ಇಂಥ ಗೊರಕೆಯ ನಕ್ರಪೀಡನೆ-
ಯಿಂದ ಬಿಡಿಸೋ ಕೇಶವ.