ತಮ್ಮ ಪ್ರಭಂಧ ಲೇಖನಗಳಿಂದಲೇ ಹೆಚ್ಚಿನ ಪ್ರಸಿದ್ದಿಯನ್ನು ಪಡೆದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರು. ಇವರು ೧೯೦೪ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. ಹಾಸನದ ಸರ್ಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗಾಂದೀಜಿಯವರ ಅಸಹಕಾರ ಚಳುವಳಿಯಿಂದ ಇವರು ಪ್ರಭಾವಿತರಾಗಿ ತಮ್ಮ ಓದಿಗೆ ವಿದಾಯ ಹೇಳಿ ಗಾಂದೀಜಿಯವರ ಆಶ್ರಮ ಸೇರಿದರು ‘ಆಂದ್ರ ಪತ್ರಿಕೆ, ಭಾರತಿ, ಪತ್ರಿಕೆಗಳ ಲೇಖಕ ರಾಗಿ ಲೋಕಮಿತ್ರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದರು.ಅನಂತರ ಕೆಂಗೇರಿಯ ಗುರುಕುಲಾಶ್ರಮದಲ್ಲಿ ದಲಿತೋದ್ದಾರ ಕಾರ್ಯದಲ್ಲಿ ತೊಡಗಿದರು. ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಸಂಚಾಲಕರೂ ಆದರು ೧೯೩೩ ರಲ್ಲಿ ತಮ್ಮ ಗ್ರಾಮದಲ್ಲಿ ಮೈಸೂರು ಗ್ರಾಮಸೇವಾಸಂಘವನ್ನು ಸ್ಥಾಪಿಸಿದರು. ೧೯೪೨ ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದರು. ಸೆರೆಮನೆ ವಾಸವನ್ನು ಅನುಭವಿಸಿದರು.

ಸ್ವಾತಂತ್ರ್ಯಾನಂತರ ಪ್ರಜಾಸರ್ಕಾರ ಸ್ಥಾಪನೆಗಾಗಿ ಮೈಸೂರಿನಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದರು. ರಾಜ್ಯ ವಿಧಾನ ಸಭಾ ಸದಸ್ಯರೂ ಆಗಿದ್ದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾದ ಪಾತ್ರ ವಹಿಸಿದ್ದರು.

೧೯೭೪ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಿ.ಲಿಟ್. ಪದವಿಯನ್ನು ನೀಡಿತು. ೧೯೮೦ ರಲ್ಲಿ ಅಮೆರಿಕಾದಲ್ಲಿ ಗೊರೂರು, ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಲಬಿಸಿತು. ೧೯೮೨ ರಲ್ಲಿ ಸಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಹಳ್ಳಿಯ ಚಿತ್ರಗಳು, ಗರುಡಗಂಬದ ದಾಸಯ್ಯ, ನಮ್ಮಊರಿನ ರಸಿಕರು, ಶಿವರಾತ್ರಿ, ಕಮ್ಮಾರ ವೀರಭದ್ರಾಚಾರಿ, ಬೆಸ್ತರ ಕರಿಯ, ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಭಂದಗಳು, ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಭಂದಗಳು, ಗೋಪುರದ ಬಾಗಿಲು, ಉಸುಬು, ವೈಯ್ಯಾರಿ, ಕನ್ಯಾಕುಮಾರಿ, ಮತ್ತು ಇತರ ಕಥೆಗಳು, ಮೊದಲಾದ ಪ್ರಭಂಧ, ಕಥೆಗಳಲ್ಲಿ ಇವರ ನವಿರಾದ ಹಾಸ್ಯವನ್ನು ಸಮಾಜ ವಿಡಂಬನೆಯನ್ನು ಕಾಣಬಹುದು.

ಗೊರೂರು ‘ಹೇಮಾವತಿ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ತನ್ನದೇನೂ ತಪ್ಪಿಲ್ಲದೆ ಜಾರಿದ ಹೆಣ್ಣೊಬ್ಬಳು ಆತ್ಮೋದ್ದಾರ ಮಾಡಿಕೊಂಡು ಸಮಾಜ ಸೇವೆ ಸಲ್ಲಿಸಿದ ಕಥೆ ಊರ್ವಶಿ ಕಾದಂಬರಿಯದು. ಮೆರವಣಿಗೆ ಕಾದಂಬರಿಯಲ್ಲಿ ಮಠಾದಿಪತಿಗಳ ವಿರುದ್ದ ಆಕ್ರಮಣವನ್ನೇ ಮಾಡಿದ್ದಾರೆ. ಪುನರ್ಜನ್ಮದಲ್ಲಿ ಸ್ವಾತಂತ್ರ್ಯಸಂಗ್ರಾಮ ಕಾಲದ ಒಂದು ಆದರ್ಶ ಕಥೆಯಿದೆ. ಗ್ರಾಮೀಣ ಸಮಾಜದಲ್ಲಾದ ಸುಧಾರಣೆಯನ್ನು ಹೇಮಾವತಿ ಕಾದಂಬರಿ ಚಿತ್ರಿಸುತ್ತದೆ.

ಅಮೆರಿಕಾದಲ್ಲಿ ಗೊರೂರು ಇವರ ಪ್ರವಾಸ ಕಥನ. ಇದಲ್ಲದೆ ಮಲೆನಾಡಿನವರು, ಭಕ್ತಿಯೋಗ, ಭಗವಾನ್ ಕೌಟಿಲ್ಯ, ಮೊದಲಾದ ಅನುವಾದಗಳನ್ನು ಮಾಡಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ೧೯೯೧ ರಲ್ಲಿ ನಿಧನರಾದರು. ಒಟ್ಟಿನಲ್ಲಿ ಗೊರೂರು ಬರವಣಿಗೆ ಅಪರೂಪವಾದದ್ದು.