ಭಾರತಾದ್ಯಂತ ನೆಲೆಗೊಂಡಿರುವ ಕೆಲವೇ ಕೆಲವು ಸಮುದಾಯಗಳಲ್ಲಿ ಗೊಲ್ಲ ಸಮುದಾಯವು ಒಂದಾಗಿದೆ. ಪಶು ಪಾಲನೆಯನ್ನೇ ಪ್ರಧಾನ ವೃತ್ತಿಯಾಗಿಸಿಕೊಂಡು ಕಾಡಡವಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ಈ ಬುಡಕಟ್ಟನ್ನು ಬೇರೆ ಬೇರೆ ರಾಜ್ಯಗಳಲ್ಲಿ ಗೌಳಿ, ಮಣಿಯಾಣಿ, ಗೋವಳ, ಗೋಪ, ತುರುಕಾರ್, ಅಹಿರ್, ಇಡೆಯಾನ್, ಕೋನಾರ್, ರೆಡ್ಡಿ ಮುಂತಾದ ಹೆಸರುಗಳಿಂದ ಕರೆಯುವ ವಾಡಿಕೆಯಿದೆ. ಭಾರತಾದ್ಯಂತ ಏಕಸೂತ್ರವಾಗಿ ‘ಯಾದವ’ ರೆಂದು ಈ ಬುಡಕಟ್ಟನ್ನು ಗುರುತಿಸಲಾಗುತ್ತದೆ.

ಗೊಲ್ಲ ಶಬ್ದ ನಿಷ್ಪತ್ತಿ

ಯಾವುದೇ ಒಂದು ಜನಾಂಗದ ಹೆಸರಿನ ಹಿನ್ನೆಲೆಯನ್ನು ಅರಿತು ಆ ಸಮುದಾಯದ ಸಾಮಾಜಿಕ ಸಾಂಸ್ಕ್ರತಿಕ ಆವರಣದೊಳಗೆ ಪ್ರವೇಶಿಸುವುದು ಹೆಚ್ಚು ಸೂಕ್ತ. ಪ್ರತಿಯೊಂದು ಜನಾಂಗದ, ಅದರಲ್ಲೂ ಬುಡಕಟ್ಟುಗಳ ಹೆಸರುಗಳಲ್ಲಿಯೇ ಆ ಸಮುದಾಯದ ಜೀವನ ಪರಿಕ್ರಮ ಹುದುಗಿರುತ್ತದೆ. ಭಾರತದ ಪ್ರತಿಯೊಂದು ಬುಡಕಟ್ಟು, ಆ ಬುಡಕಟ್ಟಿನ ಹೆಸರಿನೊಂದಿಗೆ ತನ್ನದೇ ಆದ ಅನನ್ಯತೆಯ ಸಂಬಂಧವಿರಿಸಿಕೊಂಡಿರುವುದನ್ನು ಗಮನಿಸಹಬಹುದಾಗಿದೆ. ಈ ಹಿನ್ನೆಲೆಯಲ್ಲಿ ‘ಗೊಲ್ಲ’ ಶಬ್ದ ನಿಷ್ಪತ್ತಿಯನ್ನು ಕಂಡುಕೊಳ್ಳಬೇಕಾಗಿದೆ.

ಗೊಲ್ಲರು ಮೂಲತಃ ಪಶುಪಾಲಕರಾಗಿದ್ದುದರಿಂದ ಅವರನ್ನು ಸಂಸ್ಕೃತದಲ್ಲಿ ‘ಗೋಪಾಲ’, ‘ಗೋಪಿ’ ಎಂದು ಕರೆಯಲಾಗುತ್ತಿತ್ತು.ತದನಂತರ ಸಂಸ್ಕೃತದ ‘ಗೋಪಾಲ’ ಪ್ರಾಕೃತದಲ್ಲಿ ‘ಗೋವಾಲಿ’ಯಾಗಿ ನಂತರದಲ್ಲಿ ಕನ್ನಡದಲ್ಲಿ ‘ಗೋವಳ’ ನೆಂದು ರೂಪಾಂತರ ಹೊಂದಿ ಇದೇ ಮುಂದೆ ‘ಗವಳಿ’ – ಗೌಳಿ – ‘ಗೊಲ್ಲ’ ಎಂದು ವಿಕಾಸ ಹೊಂದಿರುವುದಾಗಿ ನಿಘಂಟುಕಾರರ ಅಭಿಮತವಾಗಿದೆ.

ಅರ್ಥ ವಿವರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನಿಘಂಟು’ವಿನಲ್ಲಿ ‘ಗೊಲ’ ಎಂಬ ಶಬ್ದಕ್ಕೆ ಸರಾಫನ (ಖಜಾನೆಯ) ಹಣದ ಚೀಲ ಒಯ್ಯುವ ಸೇವಕ, ದನಕಾಯುವವ, ಒಂದು ದೇಶದ ಹೆಸರು – ಹೀಗೆ ಮೂರು ಭಿನ್ನ ಅರ್ಥಗಳನ್ನು ಹೇಳಲಾಗಿದೆ. ಪಂಡಿತ ಕವಲಿವರ ‘ಕಸ್ತೂರಿ ಕೋಶ’ದಲ್ಲಿ ಗೊಲ್ಲ, ಗೋವಳ, ಗೊಲ್ಲವಾಳಿಗ, ಗೊಲ್ಲಳ, ಗೊಲ್ಲತಿ – ಈ ಶಬ್ದಗಳಿಗೆ ಕ್ರಮವಾಗಿ ಗೋಪಾಲ, ಗೋವಳ, ದನಕಾಯುವವ, ಹಾಲು ಮೊಸರು ಮಾರುವವ, ಗೊಲ್ಲನ ಹೆಂಡತಿ ಎಂದು ಅರ್ಥೈಸಲಾಗಿದೆ. “A Practical Samskrita – Kannada Dictionery” ಕೃತಿಯಲ್ಲಿ ಸಂಸ್ಕೃತದ ಗೋಪ, ಗೋಪಿ, ಗೋಪಕನ್ಯಾ, ಗೋಪಾವಧೂಟಿ, ಗೋಪವನ, ಗೋಪಾಧ್ಯಕ್ಷ – ಈ ಶಬ್ದಗಳಿಗೆ ಕನ್ನಡದಲ್ಲಿ ಕ್ರಮವಾಗಿ ‘ಗೊಲ್ಲ’, ಗೊಲ್ಲನ ಹೆಂಡತಿ, ಗೊಲ್ಲರ ಜಾತಿಯ ಹುಡುಗಿ, ಗೊಲ್ಲರ ಪ್ರಾಯದ ಹೆಣ್ಣು, ಗೊಲ್ಲರಿಂದ ತುಂಬಿದ ವನ, ಗೊಲ್ಲರ ಯಜಮಾನ ಎಂಬ ಅರ್ಥ ವಿವರಣೆ ನೀಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ‘ಱ’ ೞ’ ನಿಘಂಟಿನಲ್ಲಿ ಪ್ರಾಚೀನಕಾಲದ ಗೊಲ್ಲರನ್ನು ತುರುಕಾರರೆಂದೂ, ಗೊಲ್ಲಹೆಂಗಸರನ್ನು ತುರುಕಾರ್ತಿ; ಗೊಲ್ಲರಹಳ್ಳಿಗಳನ್ನು ತುರುಗಾರ ಪಳ್ಳಿ, ಗೊಲ್ಲರಹಟ್ಟಿಗಳನ್ನು ತುರುಪಟ್ಟಿ ಎಂಬರ್ಥಗಳನ್ನು ನೀಡಲಾಗಿದೆ.

ಕಾಲಿಕಾ ಪ್ರಸಾದ್ ಸಂಪಾದನೆಯ ‘ಬೃಹತ್ ಹಿಂದಿಕೊಶ್’ನಲ್ಲಿ ಗೊಲ್ಲರನ್ನು ಹಿಂದಿ ಭಾಷೆಯಲ್ಲಿ ಗ್ವಾಲಾ, ಅಭೀರ್, ಅಹೀರ್ ಎಂದು ಅರ್ಥೈಸಲಾಗಿದೆ. ಗೊಲ್ಲರ ಹಳ್ಳಿಗಳನ್ನು ಅಭೀರ್‌ಪಲ್ಲೀ, ಅಭೀರ್‌ಪಲ್ಲಿಕಾ ಎಂದೂ, ಗೊಲ್ಲರ ಹಾಡುಗಳನ್ನು ‘ಗ್ವಾಲ್ ಗೀತ್’ ಎಂತಲೂ ಕರೆಯಲಾಗಿದೆ.

ಪ್ರಾಚೀನ ನಿಘಂಟುಗಳಲ್ಲಿಯೂ ಗೊಲ್ಲ ಶಬ್ದದ ಅರ್ಥ ವಿವರಣೆ ಲಭ್ಯವಾಗುತ್ತದೆ. ವಿರಕ್ತ ತೋಂಟದಾರ್ಯರ (ಕ್ರಿ. ಶ. ೧೫೬೦) ‘ಕರ್ನಾಟಕ ಶಬ್ದ ಮಂಜರಿ’ಯಲ್ಲಿ ಗೊಲ್ಲ ಶಬ್ದದ ಅರ್ಥವಿವರಣೆ ಹೀಗೆ ಬಂದಿದೆ:

ತುರುವಳ್ಳರ್ ಗೋವರ್ಕಳೆನೆ ಗೊಲ್ಲರಕ್ಕುಮಾ
ತುರುವಳ್ತಿಯರ್ ಗೊಲ್ಲತಿಯರೆನಲ್…… (೩೪ನೇ ಪದ್ಯ)
ಎಂದು ಅರ್ಥೈಸಲಾಗಿದೆ.

ಮತ್ತೊಂದು ಪ್ರಾಚೀನ ನಿಘಂಟುವಾದ ಅಮರಸಿಂಹನ ‘ಅಮರಕೋಶ’ದಲ್ಲಿ (ಕ್ರಿ. ಶ. ೪ನೇ ಶತಮಾನ) ಗೊಲ್ಲ ಶಬ್ದಕ್ಕೆ ಗೋಪ, ಅಭೀರ, ವಲ್ಲವ (ಶ್ಲೋಕ – ೯೪೩) ಎಂಬರ್ಥವು ಉಲ್ಲೇಖಗೊಂಡಿದೆ.

ಕರ್ನಾಟಕದ ಗೊಲ್ಲರನ್ನು ಅಡವಿಗೊಲ್ಲ, ಹಟ್ಟಿಗೊಲ್ಲ, ಕಾಡುಗೊಲ್ಲ, ಊರುಗೊಲ್ಲ ಹೀಗೆ ವಿದ್ವಾಂಸರು ವಿಂಗಡಿಸಿದ್ದಾರೆ. ಆದರೆ ಅಡವಿ – ಹಟ್ಟಿ – ಕಾಡು ಗೊಲ್ಲರು ವಿಭಿನ್ನ ಹೆಸರಿನ ಒಂದೇ ಮೂಲದವರು. ಈ ಬುಡಕಟ್ಟಿನ ಮೂಲ ಹೆಸರಿನ ಬಗ್ಗೆ ವಿವಿಧ ವಿದ್ವಾಂಸರು ವಿಭಿನ್ನ ಅಭಿಪ್ರಯಾಯಗಳನ್ನು ವ್ಯಕ್ತಪಡಿಸುತ್ತಾರೆ.

ಹೆಚ್. ವಿ. ನಂಜುಡಯ್ಯ ಮತ್ತು ಎಲ್. ಕೆ. ಅನಂತಕೃಷ್ಣ ಅಯ್ಯರ್

ಗೊಲ್ಲರು ತಮ್ಮ ಹಟ್ಟಿಗಳ ಸುತ್ತಲೂ ಕಳ್ಳಿಯ ಗಿಡಗಳನ್ನು ಬೆಳೆಸುವುದರಿಂದ ಅವರಿಗೆ ಕಳ್ಳಿಗೊಲ್ಲರೆಂದು ಕರೆಯಲಾಗಿದೆ”[1]

ಡಾ. ಜೀ. ಶಂ. ಪರಮಶಿವಯ್ಯ

“ಹೆಗಲಕಂಬಳಿ, ಕಲ್ಲಿ ಹಾಗೂ ಗೋವಳಿಗೋಲು ಅವರ ಮುಖ್ಯ ಸಾಧನಗಳು. ಅನೇಕ ದಿನಗಳ ಕಾಲ ದನದ ಹಿಂಡುಗಳೊಡನೆ ಕಾವಲುಗಳಿಗೆ ಅವರು ಹೋಗುತ್ತಿದ್ದುದರಿಂದ ಕಲ್ಲಿಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಹೋಗುತ್ತಿದ್ದುದು ಸಹಜ. ನಮ್ಮ ಕಾವ್ಯಗಳಲ್ಲಿಯೂ ಜನಪದ ಕಾವ್ಯಗಳಲ್ಲಿಯೂ ಗೊಲ್ಲರ ವರ್ಣನೆಯಲ್ಲಿ ಈ ಕಲ್ಲಿನ ಪ್ರಸ್ತಾಪ ಬಂದೇ ಬರುತ್ತದೆ. ಕುರಿ ದನಗಳ ಮಂದೆಯ ಬಳಿಯಲ್ಲಿಯೇ ಬಹುಪಾಲು ಜೀವನವನ್ನು ಕಳೆಯುವ ಎಲ್ಲಾ ಗೊಲ್ಲರೂ ಕಲ್ಲಿಗೆ ಹೊಂದಿಕೊಂಡವರು ಹಾಗಾಗಿ ಇವರನ್ನು ಕಲ್ಲಿ ಗೊಲ್ಲರೆಂದು ಕರೆಯಬಹುದಾಗಿದೆ”.[2]

ಡಾ. ತೀ.ನಂ. ಶಂಕರನಾರಾಯಣ

“ಕಾಡುಗೊಲ್ಲರು ತಮ್ಮ ಹಟ್ಟಿಯ ಸುತ್ತ ಹಾಕುವ ಬೇಲಿಗೆ ಕಳ್ಳೆಯನ್ನು ಉಪಯೋಗಿಸಿ ಉಳಿದೆಲ್ಲರಿಂದಲೂ ಪ್ರತ್ಯೇಕವಾಗಿರುವುದರಿಂದ ಕಳ್ಳೆ ಹಾಕುವುದು ಅವರ ಸಂಸ್ಕೃತಿಯ ಮುಖ್ಯವಾದ ಭಾಗ. ಹಾಗಾಗಿ ಅವರಿಗೆ ‘ಕಳ್ಳೆಗೊಲ್ಲರು’ ಎಂಬ ಹೆಸರು ಸರಿ ಹೊಂದುತ್ತದೆ. ಕಾಡುಗೊಲ್ಲರ ವೈಶಿಷ್ಟ್ಯವಿರುವುದು ಅವರು ಊರುಗಳಲ್ಲಿ ವಾಸ ಮಾಡದೆ ಕಾಡುಗಳಲ್ಲಿ ವಾಸ ಮಾಡುವುದರಲ್ಲಿ. ಅವರ ಸಂಸ್ಕೃತಿ ರೂಪಿತವಾಗಿರುವುದು ಕಾಡುಗಳಿಂದ. ಆದ್ದರಿಂದ ಇವರನ್ನು ಕಾಡುಗೊಲ್ಲರು ಎಂಬ ಹೆಸರಿನಿಂದಲೇ ಕರೆಯುವುದು ಹೆಚ್ಚು ಸೂಕ್ತ”[3]

ಡಾ. ಮೀರಾಸಾಬಿಹಳ್ಳಿ ಶಿವಣ್ಣ

“ಸಾಂಸ್ಕೃತಿಕ ಹಿನ್ನೆಲೆಯ ದೃಷ್ಟಿಯಿಂದ, ಮನಶಾಸ್ತ್ರದ ದೃಷ್ಟಿಯಿಂದ, ಅಧ್ಯಯನದ ದೃಷ್ಟಿಯಿಂದ ಇವರನ್ನು ಕಾಡುಗೊಲ್ಲರೆಂದೇ ಕರೆಯುವುದು ಸೂಕ್ತ ಎನಿಸುತ್ತದೆ”.[4]

ನಾಲ್ವರು ವಿದ್ವಾಂಸರ ಅಭಿಪ್ರಾಯಗಳ ವೈರುಧ್ಯಗಳು ಹೀಗಿವೆ

ಹೆಚ್.ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅನಂತಕೃಷ್ಣ ಅಯ್ಯರ್ ಅವರು ಹೇಳುವಂತೆ ಗೊಲ್ಲರು ಹಟ್ಟಿಯ ಸುತ್ತ ಕಳ್ಳಿಯನ್ನು ಹಾಕಿಕೊಳ್ಳುವುರಿಂದಲೇ ಅವರನ್ನು ಕಳ್ಳಿಗೊಲ್ಲರೆಂದು ಪರಿಭಾವಿಸುವುದು ಸೂಕ್ತವಾಗಲಾರದು. ಡಾ. ಜೀ.ಶಂ.ಪ.ರವರು ಇದನ್ನು ಪೂರ್ಣವಾಗಿ ಅಲ್ಲಗಳೆಯುತ್ತಾರೆ. ಈ ಸಂಬಂಧಿತ ಜೀ.ಶಂ.ಪ.ರವರ ವಾದವನ್ನು ಡಾ. ತೀ.ನಂ. ಶಂಕರನಾರಾಯಣ, ಡಾ. ಮೀರಾಸಾಬಿಹಳ್ಳಿ ಶಿವಣ್ಣನವರೂ ಸಮರ್ಥಿಸುತ್ತಾರೆ. ಮುಂದುವರಿದು ಡಾ. ಜೀ.ಶಂ.ಪ ರವರ ‘ಕಲ್ಲಿಗೊಲ್ಲರು’ ವ್ಯಾಖ್ಯಾನವನ್ನು ಡಾ. ತೀ.ನಂ.ಶ. ಒಪ್ಪಿದರೆ ಡಾ. ಮೀ.ಶಿ.ಯವರು ನಿಖರವಾಗಿ ಅಲ್ಲಗಳೆಯುತ್ತಾರೆ.

ಮಧ್ಯ ಕರ್ನಾಟಕದ ಗೊಲ್ಲರಿಗೆ ಕಳ್ಳಿ, ಕಳ್ಳೆ, ಕಲ್ಲಿ – ಈ ಮೂರು ಅಂಶಗಳು ಸಾಮಾನ್ಯವಾದವು. ಈ ಯಾವ ಹೆಸರುಗಳೂ ಜಾತಿ ಸೂಚಕವಾಗಿ ಗೊಲ್ಲರಲ್ಲಿ ಬಳಕೆಯಲ್ಲಿರುವುದಿಲ್ಲ. ಡಾ. ತೀ.ನಂ.ಶ. ಮತ್ತು ಡಾ. ಮೀ.ಶಿ.ಯವರು ಪ್ರಸ್ತಾಪಿಸಿರುವ ‘ಕಾಡುಗೊಲ್ಲರು’ ಎಂಬ ಶಬ್ದವನ್ನು ವಿಶಾಲಾರ್ಥದಲ್ಲಿ ಒಪ್ಪಬಹುದಾದರೂ ಅಡವಿ ಮತ್ತು ಕಾಡುಗಳಿಗೆ ಅರ್ಥ ವ್ಯತ್ಯಾಸವಿದೆ. ಗೊಲ್ಲರು ಅಡವಿಗಳಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ಬದುಕಿದವರು, ಬದುಕುತ್ತಿರುವವರು. ಅಲ್ಲಲ್ಲಿ ಕಾಡುಗಳಲ್ಲಿ ಅಲೆಮಾರಿಗಳಾಗಿ ಹಿಂದೆ ಸಂಚರಿಸಿದ್ದೂ ಇದೆ. ಮುಂದೊಂದು ದಿನಮಾನದಲ್ಲಿ ಅಡವಿ ಪ್ರದೇಶಗಳಲ್ಲೇ ನಿಶ್ಚಿತವಾಗಿ ಬೀಡುಬಿಟ್ಟವರು. ಹಾಗಾಗಿ ಇವರಿಗೆ ಅಡವಿಗೊಲ್ಲರೆಂಬುದೇ ಹೆಚ್ಚು ಸೂಕ್ತವಾದುದು. ದಕ್ಷಿಣ ಕರ್ನಾಟಕದ ಈ ಗೊಲ್ಲರೂ ಸಹ ತಮ್ಮನ್ನು ಅಡವಿಗೊಲ್ಲರೆಂದೇ ಗುರುತಿಸಿಕೊಂಡಿದ್ದಾರೆ, ಕರೆದುಕೊಂಡಿದ್ದಾರೆ.

ಅಡವೀಯ ಗೊಲ್ಲಾಗೆ ದುಡುವೂ ಇನ್ನೆಲ್ಲೀದೋ
ಎರಡಾನೆ ಪೆಟ್ಟೀಗೆ ಇಳಾವೋದ – ಬರುಮಪ್ಪ
ಮಡದೀಯ ಪ್ರಾಣ ಕಳಕಂಡ
ಹಟ್ಟೀಯ ಗೊಲ್ಲಾಗೆ ಸತ್ತೇವಿನ್ನೆಲ್ಲೀದೆ
ಹೊತ್ತಾನೆ ಪೆಟ್ಟಿಗೆ ಇಳವೋದ[5]

ಅಡವೀಯ ಗೊಲ್ಲಾಗೆ ಬೆಡಗಿನ ಸೂಳ್ಯಾಕೆ
ಅಡೆದಮ್ಮ ಕಂಡಾರೆ ಬಯ್ದಾಳು – ಗುಡ್ಡದ ಬೋರಿ
ನೀನೋಗೆ ನಿನ್ನರಮನೆಗೆ,[6]

‘ಕ್ಯಾತಪ್ಪ’, ‘ಎತ್ತಪ್ಪ’ ಕಾವ್ಯದೊಳಗೆ ಬರುವ ಗೊಲ್ಲರೇ ಅಭಿವ್ಯಕ್ತಗೊಳಿಸಿರುವ ಅಡವಿ ಗೊಲ್ಲ, ಹಟ್ಟಿಗೊಲ್ಲ ಎಂಬ ಪದ ಬಳಕೆ ಮೇಲಿನ ಅಭಿಪ್ರಾಯವನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಆದರೆ ಸರ್ಕಾರಿ ದಾಖಲಾತಿಗಳಲ್ಲಿ ‘ಗೋಲ’ ಎಂದು ಮಾತ್ರ ನಮೂದಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಿದ್ದೂ ವಿದ್ವಾಂಸರು, ಅಧ್ಯಯನಕಾರು ತಮ್ಮ ಅಧ್ಯಯನ ಸೌಲಭ್ಯಕ್ಕಾಗಿ, ಗೊಲ್ಲರ ಮತ್ತೊಂದು ಬಣವಾದ ಊರುಗೊಲ್ಲರಿಂದ ಇವರನ್ನು ಪ್ರತ್ಯೇಕಿಸುವ ದೃಷ್ಟಿಯಿಂದ ‘ಊರು’ಗೆ ವಿರುದ್ಧಾತ್ಮಕ ಹೆಸರು ‘ಕಾಡು’ ಪದವನ್ನು ಸಂಯೋಜಿಸಿ ಕಾಡುಗೊಲ್ಲರೆಂದು ಪದನಾಮೀಕರಿಸಿದ್ದಾರೆ. ಈ ಪದವೇ ಕಾಲಾನಂತರದಲ್ಲಿ ಪ್ರಚಲಿತವಾಗಿ ಮೂಲಪದ ‘ಅಡವಿಗೊಲ್ಲ’, ‘ಹಟ್ಟಿಗೊಲ್ಲ’ ಮರೆಯಾಗಿ ಪ್ರಸ್ತುತವಾಗಿ ‘ಕಾಡುಗೊಲ್ಲ’ ಶಬ್ದವೇ ಹೆಚ್ಚು ಬಳಕೆಯಾಗುತ್ತದೆ.

ಪ್ರಾಚೀನತೆ ಮತ್ತು ಆಕರಗಳು

ಒಂದು ಜನಾಂಗದ ಸಂಸ್ಕೃತಿಯ ಒಳ ಹೊರಗನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಜನಾಂಗದ ಪ್ರಾಚೀನ ಇತಿಹಾಸವನ್ನು ಅರಿಯ ಬೇಕಾಗುತ್ತದೆ. ಜನಾಂಗದ ಸಂಸ್ಕೃತಿಯ ಒಳ ಬೇರುಗಳು ಎಲ್ಲಿಂದ ಹೇಗೆ ಅಂಕುರಗೊಂಡು ಯಾವ ತೆರನಾಗಿ ವಿಸ್ತೃತಗೊಂಡು ಬಂದಿವೆ ಎಂಬಂಶವನ್ನು ಪ್ರಾಚೀನ ಸಂಗತಿಗಳು ತಿಳಿಯ ಹೇಳುತ್ತವೆ. ವರ್ತಮಾನದ ಬಿಂಬಕ್ಕೆ ಭೂತದ ಕನ್ನಡಿ ಹಿಡಿದಾಗ ಭವಿಷ್ಯತ್ತಿನ ಬದುಕು ದೃಗ್ಗೋಚರವಾಗುತ್ತದೆ. ಈ ಹಿನ್ನಲೆಯಲ್ಲಿ ಗೊಲ್ಲರ ಬಗೆಗಿನ ಪ್ರಾಚೀನ ಉಲ್ಲೇಖಗಳನ್ನು ಪರಿಭಾವಿಸಬೇಕಾಗಿದೆ. ಕಾಡುಗೊಲ್ಲರಾಗಲಿ, ಊರುಗೊಲ್ಲರಾಗಲಿ ಯಾವುದೇ ಬಗೆಯ ಗೊಲ್ಲರಾಗಲಿ ಅವರನ್ನು ಹಾಗೂ ಅವರ ನೆಲೆಗಳನ್ನು ಗೋವಳ, ಗೋಪ, ಎಡೆಯ, ತುರುಕಾರ, ಗೌಳಿಗ, ತುರುಪಟ್ಟಿ, ತುರುಪಳ್ಳಿ – ಈ ಪರಿಭಾಷೆಯಲ್ಲೇ ಪೌರಾಣಿಕ, ಚಾರಿತ್ರಿಕ ಸಂಗತಿಗಳನ್ನು ಅವಲೋಕಿಸಬೇಕಾಗುತ್ತದೆ.

ಗ್ರಂಥಸ್ಥ ಆಕರಗಳು

ಪಶುಪಾಲಕ ಗೊಲ್ಲರ ಪ್ರಾಚೀನತೆ ವೇದಗಳ ಕಾಲದಿಂದಲೇ ಆರಂಭವಾಗುತ್ತದೆ. ವೇದಗಳಲ್ಲಿ ಪ್ರಥಮ ವೇದವಾಗಿರುವ ‘ಋಗ್ವೇದ’ದಲ್ಲಿ ಹೀಗೆ ಪ್ರಸ್ತಾಪಿಸಲ್ಪಟ್ಟಿದೆ – “ಪ್ರತೀ ಹಳ್ಳಿಗನು ತನ್ನ ಕೌಟುಂಬಿಕ ಅವಶ್ಯಕತೆಗಳ ಪೂರೈಕೆಗಾಗಿ ಕೆಲವು ಜಾನುವಾರುಗಳನ್ನು ಪಾಲಿಸುತ್ತಿದ್ದನು. ಹಳ್ಳಿಯವರೆಲ್ಲ ಸೇರಿ ಒಟ್ಟಿಗೆ ಸಂಬಳ ಇಲ್ಲವೇ ಉತ್ಪನ್ನದಲ್ಲಿಯ ಪಾಲುಗಾರಿಕೆಯ ಆಧಾರದ ಮೇಲೆ ‘ಗೋವಳ’ರನ್ನು ನೇಮಿಸುತ್ತಿದ್ದರು. ಇವರು ಮುಂಜಾನೆ ವೇಳೆ ಜಾನುವಾರಗಳನ್ನು ಹುಲ್ಲುಗಾವಲಿಗೆ ಹೊಡೆದುಕೊಂಡು ಹೋಗಿ ಸಂಜೆಗೆ ಮರಳಿ ತರುವ ಕಾರ್ಯ ನಿರ್ವಹಿಸುತ್ತಿದ್ದರು”. ಮುಂದುವರಿದು, “ಗೋವಳರು ಗೋವುಗಳನ್ನು ಶ್ರಮವಹಿಸಿ ಪಾಲಿಸಿದರೆ ಅವುಗಳ ಉತ್ಪನ್ನದ ಸವಿ ಪಡೆಯುವವರು ಇತರರು”.[7] ಎಂಬಂಶ ವ್ಯಕ್ತವಾಗುತ್ತದೆ.

ಸಂಸ್ಕೃತದ ‘ಭಾಗವತಪುರಾಣ’ಗಳಲ್ಲಿ ಶ್ರೀಕೃಷ್ಣನ ಹುಟ್ಟು, ಬಾಲ್ಯದ ಬೆಳವಣಿಗೆ ಹಾಗೂ ನಂದಗೋಕುಲದ ಪರಿಸರ ಕುರಿತ ಯಥೇಚ್ಛ ವಿವರಗಳು ಲಭ್ಯವಾಗುತ್ತದೆ.

ಸಂಸ್ಕೃತದ ‘ಮಹಾಪುರಾಣ’ದಲ್ಲಿ ಗೋವಿನ ಕಥೆಯಿದೆ. ಈ ಕಥೆಯಲ್ಲಿ ನಂದ ಎಂಬ ಹೆಸರಿನ ಗೊಲ್ಲನ ಪ್ರಸ್ತಾಪವಿದೆ. (ಸೃಷ್ಟಿಖಂಡ ಭಾಗ – ೨ – ೧೮:೨೫೧)

ವೇದವ್ಯಾಸಕೃತ ‘ಇತಿಹಾಸ ಸಮುಚ್ಛಯ’ದ ೩೦ನೇ ಅಧ್ಯಾಯದಲ್ಲಿ ಬಹುಲೋ ಪಾಖ್ಯಾನಾ ಬರುತ್ತದೆ. ಅಲ್ಲಿ ಭೀಷ್ಮನ ಬಳಿ ಯುಧಿಷ್ಠಿರ ಗೋವಿನ ಕಥೆಯನ್ನು ಪ್ರಸ್ತಾಪಿಸುತ್ತಾನೆ. ಅಲ್ಲಿ ಬರುವ ಗೋವಿನ ಹೆಸರು ‘ಬಹುಲಾ’, ಗೊಲ್ಲನ ಹೆಸರು ‘ಸೋಮಿಲಾ’ ಎಂದು ಕರೆಯಲ್ಪಟ್ಟಿದೆ.[8]

ಬೌದ್ಧ ಜಾತಕ ‘ಮಹಿಯುಗ್ಗ’ದಲ್ಲಿ ಗೋವಳರ ಹೋರಿಕಾದಾಟದ ಚಿತ್ರಣವಿದ್ದು ಇದೊಂದು ಕ್ರೂರ ಕೇಳಿ ಎಂದು ವರ್ಣಿಸಲಾಗಿದೆ. ಹಾಗಾಗಿ ಈ ಪಂದ್ಯಾಟವನ್ನು ನಿಷೇಧಿಸಲಾಗಿತ್ತು. ಗಣಪತಿಮೆಂಡಕನೆಂಬ ಅರಸನು ೧೨೫೦ ಗೋವಳರನ್ನು ಪಶು ಪಾಲನೆಗೆ ನೇಮಕ ಮಾಡಿಕೊಂಡಿದ್ದನು ಎಂಬಂಶ ತಿಳಿದು ಬರುತ್ತದೆ. (೩೪ – ೧೯).

ಕ್ರಿ.ಪೂ. ೩೦೦ರಲ್ಲಿ ಜೀವಿಸಿದ್ದ ‘ಮನು’ ತನ್ನ ‘ಧರ್ಮಸೂತ್ರ’ದಲ್ಲಿ “ವೃತ್ತಿ ಗೋವಳರು ಕತ್ತಲು ಹರಿದೊಡನೆ ಗೋವುಗಳನ್ನು ಮೇಯಿಸಲು ಕರೆದುಕೊಂಡು ಹೋಗಿ ಅವು ಹುಲ್ಲು ನೀರನ್ನು ಸೇವಿಸಿದ ನಂತರ ಸಂಜೆಯ ವೇಳೆಗೆ ಕರೆತರುತ್ತಿದ್ದರು” ಎಂದು ತಿಳಿಸಿದ್ದಾನೆ. ಮುಂದುವರಿದು ಹೀಗೆ ಹೇಳುತ್ತಾನೆ – “ಗೋವಳರು ಮಂದೆ ಕಾಯುವುದಕ್ಕೆ ಪ್ರತಿಯಾಗಿ ೧೦೦ ಗೋವುಗಳ ಪಾಲನೆಗೆ ಒಂದು ವರ್ಷಕ್ಕೆ ಒಂದು ‘ಕಡಸ’ನ್ನು ಕೊಡಬೇಕು. ೨೦೦ ಹಸುಗಳನ್ನು ಪಾಲಿಸಿದರೆ ಒಂದು ಕರೆಯುವ ಹಸು ಜೊತೆಗೆ ಆತ ಎಂಟು ದಿನಕ್ಕೊಮ್ಮೆ ಎಲ್ಲಾ ಹಸುಗಳಿಂದಲೂ ಹಾಲು ಕರೆದುಕೊಳ್ಳಲು ಅವಕಾಶವಿರಬೇಕು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.[9]

ಪ್ರಾಚೀನ ಭಾರತದ ಚಾಣಾಕ್ಷ ಮಂತ್ರಿಯೆಂದೇ ಖ್ಯಾತನಾದ ‘ಕೌಟಿಲ್ಯ’ ತನ್ನ ‘ಅರ್ಥಶಾಸ್ತ್ರ’ದಲ್ಲಿ ಹಸುಗಳನ್ನು ಕೂಲಿಗಾಗಿ ಮೇಯಿಸುವುದಕ್ಕೆ ‘ವೇತನೋಪಗ್ರಾಹಕ’ನೆಂದು ಕರೆದಿದ್ದಾನೆ. ವೇನತೋಪಗ್ರಾಹಿ ಗೋವುಗಳಿಗೆ ನೂರು ಗೋವುಗಳನ್ನು ಕೂಲಿ ರೂಪದಲ್ಲಿ ಕೊಡಬಹುದೆಂದು ಸೂಚಿಸುವುದರೊಂದಿಗೆ ಗೋವಳರು ಹಾಲು ಬೆಣ್ಣೆಗಳ ರೂಪದಲ್ಲಿ ಪ್ರತಿಫಲ ಪಡೆದುದಾರೆ ಕರುಗಳಿಗೆ ಹಾಲಿಲ್ಲದಂತೆ ಕರೆದುಕೊಂಡು ಅವುಗಳನ್ನು ಉಪವಾಸ ಕೆಡವಿದಾರು! ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾನೆ.[10] ಮುಂದುವರಿದು “ಕಾಡಿನಲ್ಲಿ ಬೇರೆ ಬೇರೆ ಕಾಲಗಳಿಗನುಗುಣವಾಗಿ ಮೇಯಿಸಲು ನಿಗದಿಯಾದ ಹುಲ್ಲುಗಾವಲುಗಳಲ್ಲಿ ಗೋವಳರು ದನಗಳನ್ನು ಮೇಯಿಸಬೇಕು. ಅಲ್ಲಿ ಕಳ್ಳರು, ಹುಲಿಗಳು ಮತ್ತು ಇತರ ದುಷ್ಟ ಮೃಗಗಳಿಂದುಂಟಾಗಬಹುದಾದ ಅಪಾಯವನ್ನು ಬೇಡರು ತಮ್ಮ ಬೇಟೆನಾಯಿಗಳೊಡನೆ ಬೇಟೆಯಾಡುತ್ತಾ ತಪ್ಪಿಸಬೇಕೆಂದು ಕೌಟಿಲ್ಯ ಸೂಚಿಸುತ್ತಾನೆ.[11]

ಜೈನ ಕವಿ ಗುಣಭದ್ರಾಚಾರ್ಯರ (ಕ್ರಿ.ಶ. ೭೮೩) ‘ಮಹಾಪುರಾಣ’ದಲ್ಲಿ ಭರತೇಶ ವಿಜಯ ಯಾತ್ರೆಯನ್ನು ಕೈಗೊಂಡು ಪೂರ್ವದಿಕ್ಕಿನಲ್ಲಿ ಸಂಚರಿಸುವಾಗ ಗೊಲ್ಲರಹಟ್ಟಿಯೊಂದನ್ನು ಗಮನಿಸುತ್ತಾನೆ. ಅಲ್ಲಿಯ ಗೊಲ್ಲರು ಮತ್ತು ಗೊಲ್ಲತಿಯರ ವರ್ಣನೆಯನ್ನು ಕವಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ.

ಭರತರಾಜನು ಗೋವುಗಳ ಹಿಂಡುಗಳ ಸಮೀಪದಲ್ಲಿ ವನದ ಬಳ್ಳಿಗಳಿಂದ
ತಲೆಯ ಕೂದಲನ್ನು ಕಟ್ಟಿರುವವರೂ ಗೋವುಗಳನ್ನು ಕಾಯುವವರೂ
ಯುವಕರೂ ಆದ ಗೊಲ್ಲರನ್ನು ನೋಡಿದನು[12]

ಗೊಲ್ಲತಿಯರು ಮೊಸರು ಕಡೆಯುವ ದೃಶ್ಯ:

ಕಡಗೊಲನ್ನು ಎಳೆಯುವುದರ ಆಯಾಸದಿಂದುಂಟಾದ ಬೆವರಿನ ಬಿಂದುಗಳಿಂದ
ವ್ಯಾಪ್ತವಾದ ಮುಖವುಳ್ಳವರೂ…..ಮೊಸರು ಕಡೆಯುವ ಹಗ್ಗವನ್ನು
ಎಳೆಯುವುದರಿಂದ ಬಳಲಿದ ಭುಜಗಳುಳ್ಳವರೂ……. ಮಂಥನ ದಂಡ
ಹೊಡೆತದಿಂದ ಮೇಲಕ್ಕೆ ಸಿಡಿದ ದೊಡ್ಡದಾದ ಮಜ್ಜಿಗೆಯ ಬಿಂದುಗಳಿಂದ
ಅತಿಶಯವಾದ ಶೋಭೆಯನ್ನು ಹೊಂದಿರುವವರೂ, ಮೊಸರು ಕಡೆಯುವ
ಶಬ್ದಕ್ಕನುಸಾರವಾಗಿ ಸ್ವಲ್ಪ ರಾಗಾಲಾಪನೆ ಮಾಡುವವರೂ…. ಆದ ಗೋಪ
ಸ್ತ್ರೀಯರನ್ನು ನೋಡುತ್ತಿರುವ ಭರತರಾಜನು ಅತ್ಯಂತ ಕುತೂಹಲವುಳ್ಳವನಾನದು  [13]

ಕನ್ನಡ ಸಾಹಿತ್ಯ

ಗೊಲ್ಲರು ಮತ್ತು ಬೇಡರು ಮೂಲತಃ ಪಶುಪಾಲಕರು ಹಾಗೂ ಕಾಡಡವಿಯ ಅಲೆಮಾರಿಗಳಾಗಿರುವುದರಿಂದ ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಈ ಬುಡಕಟ್ಟುಗಳ ಪ್ರಸ್ತಾಪ ಸಹಜವಾಗಿ ಉಲ್ಲೇಖಗೊಂಡಿದೆ. ಗೊಲ್ಲರ ಬಗೆಗಿನ ವಿವರಗಳು ಮೊದಲು ಕಂಡು ಬರುವುದು ‘ಶಿವಕೋಟ್ಯಾಚಾರ‍್ಯ’ನ (ಕ್ರಿ.ಶ. ೯೨೦) ‘ವಡ್ಡಾರಾಧನೆ’ ಕೃತಿಯಲ್ಲಿ. ಧರ್ಮಘೋಷಭಟಾರರ ಕಥೆಯಲ್ಲಿ ಒಂದು ಚಿತ್ರಣ ಹೀಗೆ ನಿರೂಪಿತವಾಗಿದೆ –

ಉಪವಾಸ ವ್ರತಮಾಡಿ ಪಾರಣೆಗೆಂದು ಭಿಕ್ಷೆಗೆ ಧರ್ಮ ಘೋಷ
ಭಟಾರರು ಮತ್ತು ಧರ್ಮಕೀರ್ತಿ ಭಟಾರರು ಬೇರೆ ಬೇರೆ ಸಂದರ್ಭಗಳಲ್ಲಿ
ಗಂಗಾನದಿಯ ತಟದಲ್ಲಿದ್ದಗೊಲ್ಲಕೇರಿಗಳಿಗೆ ಹೋಗಲು ನಿರ್ಧರಿಸುತ್ತಾರೆ.
ಅವರು ಅಲ್ಲಿಗೆ ಬರುವ ಹೊತ್ತಿಗೆ ಅಲ್ಲಿದ್ದ ಗೊಲ್ಲರು ಇನ್ನೊಂದು ಕಡೆಗೆ
ಸ್ಥಳಾಂತರವಾಗಿರುತ್ತಾರೆ. ಸ್ಥಳಾಂತರಗೊಂಡ ಜಾಗಕ್ಕೂ ಹುಡುಕಿಕೊಂಡು
ಹೋದಾಗ ಜಾಗದಲ್ಲಿ ಇರದೆ ಮತ್ತೊಂದು ಕಡೆಗೆ ಹೊರಟು ಹೋಗಿರುತ್ತಾರೆ.
ಆಗ ಮುನಿಧ್ವಯರಿಗೆ ತುಂಬಾ ನಿರಾಶೆ ಉಂಟಾಗುತ್ತದೆ.[14]

ಈ ವಿವರಣೆ ಪಶುಪಾಲಕ ಗೊಲ್ಲರು ಅಲೆಮಾರಿಗಳಾಗಿದ್ದರೆಂಬ ಸಂಗತಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಆದಿ ಕವಿ ‘ಪಂಪ’ (ಕ್ರಿ.ಶ. ೯೨೦)ನ ‘ವಿಕ್ರಮಾರ್ಜುನವಿಜಯ’ದಲ್ಲಿ ರಾಜಸೂಯ ಯಾಗ ಮತ್ತು ಗೋಗ್ರಹಣ ಪ್ರಸಂಗದಲ್ಲಿ ಗೋವಳ ಶಬ್ದ ಪ್ರಯೋಗವಾಗಿದೆ. ರಾಜಸೂಯಯಾಗದಲ್ಲಿ ಭೀಷ್ಮನ ಸಲಹೆಯಂತೆ ಶ್ರೀಕೃಷ್ಣನಿಗೆ ಅಗ್ರ ಪೂಜೆ ನಡೆಸಲು ಧರ್ಮರಾಜ ನಿರ್ಧರಿಸುತ್ತಾನೆ. ಈ ನಿರ್ಧಾರವನ್ನು ವಿರೋಧಿಸಿದ ಶಿಶುಪಾಲ ಭೀಷ್ಮನ ತೀರ್ಮಾನವನ್ನು ಹೀಗೆಳೆಯುತ್ತ ಶ್ರೀಕೃಷ್ಣನನ್ನು ಒಬ್ಬ ಸಾಮಾನ್ಯ ಗೋವಳನೆಂದು ಮೂದಲಿಸುತ್ತಾನೆ.

“… ಶೌರ್ಯವಸ್ಥಂಭದೊಳಾನಿರೆ ಗೋವಳಗಗ್ರ ಪೂಜೆಯಂ ನೀ ಕುಡುವಾ”[15] ಮುಂದುವರಿದು ಶ್ರೀಕೃಷ್ಣನನ್ನು ನೇರವಾಗಿ ಹೀಗೆ ಮೂದಲಿಸುತ್ತಾನೆ.

ಮನೆ ನಿನಗೆ ನಂದಗೋಪಾ
ಲನ ಮನೆ ತುರುಗಾರ್ತಿ ನಿನಗೆ ಮನೆವೆಂಡತಿಪ
ಚನೆ ಪಸಿಯ ಗೋವನೈಕರ
ಮನೆಯದೆ ನಿನ್ನಳವಿಗಳ ವನ ವಿಯದೆ ನೆಗೆಳ್ದೆ [16]

ಗೋಗ್ರಹಣ ಪ್ರಸಂಗದಲ್ಲಿ ದುರ್ಯೋಧನನ ಬಲಾಢ್ಯ ಸೇನೆಯೊಂದಿಗೆ ಹೋರಾಟ ಮಾಡಿದ ಗೋವಳರ ಸಾಹಸ, ಶೌರ‍್ಯ, ಆತ್ಮಾಭಿಮಾನವನ್ನು ಪಂಪ ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾನೆ.[17]

ರಾಜಸೂಯ ಯಾಗಕ್ಕೆ ಬಂದಿದ್ದ ವಿವಿಧ ದೇಶಗಳ ರಾಜರುಗಳ ಪಟ್ಟಿಯನ್ನು ಕವಿ ನೀಡುತ್ತಾನೆ. ಈ ಪಟ್ಟಿಯಲ್ಲಿ ‘ಗೊಲ್ಲ’ ದೇಶವೂ ಒಂದಾಗಿರುತ್ತದೆ. “ಅಂಗ ವಂಗ ಕಳಿಂಗ ಕೊಂಕಣ ಗೊಲ್ಲ ಕಾಂಭೋಜ….. ನಾನಾ ದ್ವೀಪ ದೇಶಾಧಿಶ್ವರುರಂ….”[18] ಇಲ್ಲಿ ಉಲ್ಲೇಖಿತವಾಗಿರುವ ‘ಗೋಲ’ ದೇಶ ಯಾವುದು? ಅದರ ರಾಜ ಯಾರು? ಮುಂತಾದ ಪ್ರಶ್ನೆಗಳು ಏಳುತ್ತವೆ.

ಏಷ್ಯದ ಮಧ್ಯಭಾಗದಲ್ಲಿ ಬಿಳಿಯ ಹೂಣರ ವಂಶಕ್ಕೆ ಸಂಬಂಧಿಸಿದ ಒಬ್ಬ ರಾಜನ ಹೆಸರು ‘ಗೊಲ್ಲ’ ಎಂದಿದೆ. ಈ ಗೊಲ್ಲರಾಜ ಭಾರತದ ಅರಸನಾಗಿ ಪ್ರಜೆಗಳನ್ನು ಹಿಂಸಿಸಿ ಅವರಿಂದ ಬಲವಂತವಾಗಿ ಕಪ್ಪಕಾಣಿಕೆಗಳನ್ನು ಪಡೆಯುತ್ತಿದ್ದನೆಂದೂ ಯುದ್ಧಕ್ಕೆ ಹೊರಟಾಗ ೨೦೦೦ ಆನೆಗಳನ್ನು, ದೊಡ್ಡ ಅಶ್ವ ಪಡೆಯನ್ನು ಒಳಗೊಂಡ ಬೃಹತ್ ಸೈನ್ಯವನ್ನು ಒಯ್ಯುತ್ತಿದ್ದನೆಂದು ‘ಕಾಸ್ ಮಾಸ್ ಇಂಡಿಕೋಪ್ಲೊಸ್ಟಿಸ್’ ಎಂಬ ಧಾರ್ಮಿಕ ಗುರು ಹೇಳಿದ್ದಾನೆ. ಇಲ್ಲಿ ಉಕ್ತನಾಗಿರುವ ಗೊಲ್ಲನೇ ಆರನೇ ಶತಮಾನದ ಮಧ್ಯ ಭಾಗದಲ್ಲಿ ಭಾರತದ ಮೇಲೆ ದಾಳಿ ಮಾಡಿದ ತೋರಮಾನವ ಪುತ್ರ ಮಿಹಿರಗುಲನೆಂದು ಕೆಲವರು ಭಾವಿಸಿದ್ದಾರೆ. ಮಿಹಿರಗುಲನ ಹೆಸರಿನಲ್ಲಿರುವ ‘ಗುಲ’ ಎಂಬುದು ‘ಗೋಲ’ ಎಂಬ ರೂಪವನ್ನು ತಳೆಯಿತೆಂದು ಭಾವಿಸಲಾಗಿದೆ.[19] ಪಂಪನಲ್ಲಿ ಉಕ್ತವಾಗಿರುವ ‘ಗೊಲ್ಲ’ ದೇಶ ಹಾಗೂ ಚಾರಿತ್ರಿಕವಾಗಿ ಪ್ರಸ್ತಾಪಿಸಲ್ಪಟ್ಟಿರುವ ‘ಗೊಲ’ ರಾಜನ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯವಿದೆ.

ನೇಮಿಚಂದ್ರ (ಕ್ರಿ.ಶ. ೧೧೭೦)ನ ‘ಅರ್ಧನೇಮಿಪುರಾಣಂ’ ಎಂಬ ಜೈನ ಕಾವ್ಯದಲ್ಲಿ ಕೃಷ್ಣ ಕಥೆ ಸೇರ್ಪಡೆಗೊಂಡಿದೆ. ನವಜಾತ ಶಿಶು ಕೃಷ್ಣನನ್ನು ಕಂಸನ ಕಣ್ಣಿನಿಂದ ತಪ್ಪಿಸಲು ತಂದೆ ವಸುದೇವ ತನ್ನ ಶಿಶುವನ್ನು ಗೊಲ್ಲರಹಟ್ಟಿಗೆ ಸಾಗಿಸುವ ಸನ್ನಿವೇಶ ಕುತೂಹಲಕರವಾಗಿದೆ. ‘ತುರುಪಟ್ಟಿಯ’ಯ ಯಜಮಾನ ನಂದಗೋಪ ತನಗೆ ಹೆಣ್ಣು ಮಗುವಾದ ಹಿನ್ನೆಲೆಯಲ್ಲಿ ಆ ಊರಿನ ಹೊರವಲಯದಲ್ಲಿದ್ದ ದೇವತೆಗೆ ಬಯ್ಯುವ ರೀತಿಯನ್ನು ಕವಿ ಅತ್ಯಂತ ಸಹಜವಾಗಿ ಚಿತ್ರಿಸಿದ್ದಾನೆ.[20] ಸಾಮಾನ್ಯವಾಗಿ ಇವತ್ತಿಗೂ ಗೊಲ್ಲರು ತಮ್ಮ ದೇವರುಗಳನ್ನು ಎಷ್ಟೊಂದು ಭಕ್ತಿ ಗೌರವಗಳಿಂದ ಪೂಜಿಸುತ್ತಾರೋ ಅಷ್ಟೇ ರೀತಿಯಲ್ಲಿ ದೇವರನ್ನು ತಮ್ಮ ಆಪ್ತನನ್ನಾಗಿಸಿಕೊಂಡು ಅವನೊಡನೆ ಜಗಳರೂಪದ ಸಂವಾದಕ್ಕೂ ಇಳಿಯುವುದನ್ನು ಕಾಣಬಹುದು. ಬಹುಶಃ ಇಂಥದ್ದೊಂದು ಗೊಲ್ಲರ ನೈಜ ದೇವರ ಸನ್ನಿವೇಶವೊಂದನ್ನು ಕವಿ ನೇಮಿಚಂದ್ರ ಕಂಡಿದ್ದಿರಬಹುದೆನ್ನಿಸುತ್ತದೆ. ಕರ್ಣಪಾರ್ಯ (ಕ್ರಿ.ಶ. ೧೧೪೦)ನ ‘ನೇಮಿನಾಥಪುರಾಣ’ದಲ್ಲಿಯೂ ಇದೇ ಪ್ರಸಂಗ ಪ್ರಸ್ತಾಪಿಸಲ್ಪಟ್ಟಿದೆ.

ನೇಮಿಚಂದ್ರನ ಮತ್ತೊಂದು ಕೃತಿ ‘ಲೀಲಾವತಿಪ್ರಬಂಧಂ’ನಲ್ಲಿಯೂ ಗೋವಳರ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. ಕಂದರ್ಪರಾಜ ತನ್ನ ಕನಸಿನ ಸುಂದರಿ ಲೀಲಾವತಿಯನ್ನು ಹುಡುಕಿಕೊಂಡು ಕಾಡಡವಿಯಲ್ಲಿ ಅಲೆದಾಡುತ್ತ ಒಂದು ತುರುಪಟ್ಟಿಯ ಹತ್ತಿರ ಬರುತ್ತಾನೆ. ಆ ತುರುಪಟ್ಟಿಯಲ್ಲಿ ಕಂಡುಬರುವ ಗೋವಳರ ದೈನಂದಿನ ಕೆಲಸ ಕಾರ್ಯಗಳನ್ನು ವಿವರಿಸಿದ್ದಾನೆ. ಅಲ್ಲಿನ ಗೋಮಂದೆಗಳ ವೈಶಿಷ್ಟ್ಯ, ಗೊಲ್ಲತಿಯರ ರೂಪಲಾವಣ್ಯ ಹಾಗೂ ಹಾಲುಕರೆಯುವ, ಮೊಸರು ಕಡೆಯುವ ಚಿತ್ರಣವನ್ನು ಕವಿ ಮನೋಹರವಾಗಿ ಬಿಂಬಿಸಿದ್ದಾನೆ. ಇದರೊಂದಿಗೆ ಆ ಹಟ್ಟಿಯ ದೇವತೆಯ ಚಿತ್ರಣವೂ ಬರುತ್ತದೆ.

ನಿರ್ಮಿಸಿದ ಗೋಕುಲಕ್ಕೆ
ತುರ್ಮುಖ ನೀಕ್ಷಿಸಲೆಬಂದನೆಂಬೀ ಭ್ರಮೆಯಂ
ನೂರ್ಮಡಿಸಿದುದಾ ಘೋಷ
ಹಿರ್ಮಹಿಯೊಳಿನಟ್ಟ ಗೊಲ್ಲ ದೇವತೆ ಸತತಂ[21]

ಕಾವ್ಯದ ಐದನೇ ಆಶ್ವಾಸದ ೮೦ನೇ ಪದ್ಯದಿಂದ ೧೧೩ನೇ ಪದ್ಯದವರೆಗೆ ಆವರಿಸಿಕೊಂಡಿರುವ ಗೊಲ್ಲರ ಬದುಕಿನ ವಿವಿಧ ಮಗ್ಗಲುಗಳನ್ನು ವರ್ಣಿಸಲಾಗಿದ್ದು ‘ತುರುಗೊಳ್’ ಸನ್ನಿವೇಶ ವಿಶೇಷವಾಗಿ ಓದುಗರ ಮನಸೆಳೆಯುತ್ತದೆ.

ಒಂಭತ್ತನೇ ಶತಮಾನದ ಆದಿಭಾಗದಲ್ಲಿ ಸಂಸ್ಕೃತಕವಿ ಹಲಾಯುಧಭಟ್ಟನ ಅಭಿದಾನರತ್ನ ಮಾಲೆ’ಗೆ ಟೀಕು ಬರೆದ ಕನ್ನಡದ ಎರಡನೇ ನಾಗವರ್ಮನ (ಕ್ರಿ.ಶ. ೧೦೪೨) ‘ಅಭಿದಾನ ರತ್ನಮಾಲಾ ಕರ್ನಾಟಕ ಟೀಕೆ’ ಕೃತಿಯಲ್ಲಿ ತುರುಕಾರ ಪಟ್ಟಿಯ ಅರ್ಥವಿವರಣೆ ನೀಡಲಾಗಿದೆ.

ಘೋಷ, ಅಭೀರಪಲ್ಲೀ ಎರಡು ತುರುಕಾರರ ಪಟ್ಟಿ[22]

ಇದರೊಂದಿಗೆ ‘ಗೋಮಾನ್’, ಗೋಮಿ, ಗೋಸ್ವಾಮಿ, ಗೋವಿಂದ ಎಂಬ ನಾಲ್ವರು ಗೋವಳರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. (೪೪:೧೦೭)

ನಯಸೇನನನ (ಕ್ರಿ.ಶ: ೧೦೫೩) ‘ಧರ್ಮಾಮೃತಂ’ ಕಾವ್ಯದಲ್ಲಿ ಬೇರೆ ಬೇರೆ ಕಥಾನಕಗಳಲ್ಲಿ ಗೋವಳರ ಪ್ರಸ್ತಾಪ ಬರುತ್ತದೆ. ಸೋಮದತ್ತ ಎಂಬುವನು ತನ್ನ ಗರ್ಭಿಣಿ ಪತ್ನಿಯ ಬಯಕೆಯನ್ನು ತೀರಿಸಲು ವಿಶಿಷ್ಟ ಮಾವಿನಹಣ್ಣುಗಳನ್ನು ತರಲು ಕಾಡಿನಲ್ಲಿ ಅಲೆದಾಡಿ ಹಣ್ಣು ಸಿಕ್ಕದೆ ನಿರಾಶನಾಗಿ ಅಲೆದಾಡುತ್ತಿರುವಾಗ ದನಕಾಯುವ ಗೊಲ್ಲರು ಕಣ್ಣಿಗೆ ಬೀಳುತ್ತಾರೆ. ಅವರಿಂದ ಮಾವಿನಹಣ್ಣಿನ ಬಗ್ಗೆ ಮಾಹಿತಿಯನ್ನು ಪಡೆಯುತ್ತಾನೆ –

ತುರುಗಾವಗೋವರಂ
ತ್ತರಿಕೆಯ ಕಬ್ಬಿಲರನೆಯ್ದು ಬೆಸಗೊಳುತುಂ…” [23]

ಇನ್ನೊಂದು ಕಥಾನಕದಲ್ಲಿ, ಗುಣಪಾಲನ ನವಜಾತ ಶಿಶುವನ್ನು ಕೊಲ್ಲಲು ಸಂಚು ನಡೆಸಿದ ಶ್ರೀದತ್ತಶೆಟ್ಟಿ ಓರ್ವ ಮಾದಿಗನ ಕೈಲಿ ಶಿಶುವನ್ನು ಕೊಡುತ್ತಾನೆ. ಆ ಶಿಶುವನ್ನು ಕೊಲ್ಲಲು ಮನಸ್ಸೊಪ್ಪದ ಮಾದಿಗ ಶಿಶುವನ್ನು ಒಂದು ತೊರೆಯ ದಂಡೆಯಲ್ಲಿ ಮಲಗಿಸಿ ಹಿಂತಿರುಗುತ್ತಾನೆ. ಆ ಸಂದರ್ಭದಲ್ಲಿ ದನಗಳಿಗೆ ನೀರು ಕುಡಿಸಲು ಅಲ್ಲಿಗೆ ಬಂದ ಗೊಲ್ಲ ಹುಡುಗರು ಮಗುವನ್ನು ಕಂಡು ಚಕಿತರಾಗುತ್ತಾರೆ(೧೦:೧೦೪). ತದನಂತರ ಆ ಮಗುವನ್ನು ತಮ್ಮ ಹಟ್ಟಿಯ ಒಡೆಯನಿಗೆ ಒಪ್ಪಿಸುತ್ತಾರೆ. ಆ ಸನ್ನಿವೇಶವನ್ನು ಕವಿ ಹೀಗೆ ನಿರೂಪಿಸುತ್ತಾನೆ.

ನಮ್ಮಾಳ್ದಂಗೆ ಕುಡುವೆನೆಂದು ಗೋಪಾಲರಾಶಿಶುವನೆತ್ತಿಕೊಂಡು ಬಂದು
ಗೋವಿಂದನೆಂಬ ತುರುಗಾರಂಗೆ ಕುಡುವುದಮಾತಂ ಕರಮೊಸೆದು
ಗೋಪಾಲಗಳ ಮೆಚ್ಚುಕೊಟ್ಟು ತನ್ನ ಪೆಂಡತಿಯಪ್ಪನಂದೆಯೆಂಬ ತುರುಗಾರ್ತಿಯಂ
ಕರೆದು ಪುತ್ರಲಾಭಮಾದುದೆಂದು ಮಗನಂ ಕೊಟ್ಟು ತುರುಪಟ್ಟಿಯೊಳಸಗೆಯಂ
ಮಾಡಿ ಕೂಸಿಂಗೆ ಧನ ಕೀರ್ತಿಯೆಂಬ ಪೆಸರನಿಟ್ಟುಕೊಂಡಾಡಿ ನಡಪುತ್ತು
ಮಿರ್ಪುದಂ[24]

ಇದೇ ಕಥಾನಕದ ಮುಂದುವರೆದ ಕಥೆಯಲ್ಲಿ, ಶ್ರೀದತ್ತ ಶೆಟ್ಟಿ ತನ್ನ ಮಗಳ ವಿವಾಹಕ್ಕಾಗಿ ತುಪ್ಪ ಖರೀದಿಸಲಿಕ್ಕೆ ಬರುವ ವಿವರ ಮತ್ತು ಶ್ರೀದತ್ತಶೆಟ್ಟಿ ಧನಕೀರ್ತಿಯನ್ನು ಕೊಲ್ಲಲು ನಡೆಸುವ ಒಳಸಂಚುಗಳೂ ಹಾಗೂ ಈ ಸಂದರ್ಭದಲ್ಲಿ ಮುಗ್ಧ ಗೊಲ್ಲಗೋವಿಂದನ ಅಸಹಾಯಕ ಪರಿಸ್ಥಿತಿಗಳನ್ನು ಕವಿ ಅರ್ಥಪೂರ್ಣವಾಗಿ ವಿವರಿಸಿದ್ದಾನೆ (೧೦:೧೦೬ – ೧೧೨). ಇದೇ ಕಾವ್ಯದ ೯ನೇ ಆಶ್ವಾಸದ ೧೬೦ನೇ ಪದ್ಯ ಹಾಗೂ ೧೧ನೇ ಆಶ್ವಾಸದ ೪೮ನೇ ಪದ್ಯದಲ್ಲಿ ‘ಗೊಲ್ಲ’ ದೇಶದ ಪ್ರಸ್ತಾಪ ಬರುತ್ತದೆ.

ಶಾಂತಿನಾಥನ (ಕ್ರಿ.ಶ.೧೦೬೮) ‘ಸುಕುಮಾರಚರಿತಂ’ ಕಾವ್ಯದಲ್ಲಿ ಚಂದ್ರವಾಹನ ಎಂಬ ಅರಸನ ಕಿಲಾರಿ ವೀರಪೂರ್ಣನೆಂಬುವನು ಗೊಲ್ಲರ ಹಳ್ಳಿಯೊಂದಕ್ಕೆ ನುಗ್ಗಿ ಗೊಲ್ಲರನ್ನು ಬೆದರಿಸಿ ಅವರ ಗೋವುಗಳನ್ನು ಮತ್ತು ಎಮ್ಮೆಗಳನ್ನು ಹೊಡಕೊಂಡು ಬಂದು ರಾಜನಲ್ಲಿ ತನ್ನ ಹುಸಿ ಪೌರುಷವನ್ನು ಹೇಳಿಕೊಂಡು ರಾಜನಿಂದ ಮೆಚ್ಚನ್ನು ಪಡೆಯುವ ಪ್ರಸಂಗವೊಂದು ಪ್ರಸ್ತಾಪಿಸಲ್ಪಟ್ಟಿದೆ.

ಚಂದ್ರವಾಹನನ ಕಿಲಾರಿಗಂ ವೀರಪೂರ್ಣನೆಂಬನೊಂದು ದಿವಸಮಲ್ಲಿಯ
ತುಱುಪಳ್ಳಿಯ ಗೋವುಳಿಗರೊಕಳ್ತೋಟಿಗೆಯ್ದುಱುದಾಡುವ
ಬೀಡಿ ನೆರ್ಮ್ಮಗಳಂ ಪಿಡಿದಂತರಸರ್ಗೊಪ್ಪಿಸುವುದಂ……” [25]

ನಾಗಚಂದ್ರನ (ಕ್ರಿ.ಶ. ೧೧೦೦) ‘ಪಂಪರಾಮಾಯಣ’ ಕಾವ್ಯದಲ್ಲಿ ಗೊಲ್ಲರ ಬಗೆಗಿನ ಉಲ್ಲೇಖ ಹೀಗೆ ಬರುತ್ತದೆ – “ತನ್ನ ಹೆಂಡತಿಯಲ್ಲಿ ಪಡೆಯುವ ಸಂತೋಷ ತನ್ನ ವಂಶದ ಬೆಳವಣಿಗೆಗೆ ಕಾರಣವಾಗುವುದು. ಅನ್ಯ ಸ್ತ್ರೀಯಲ್ಲಿ ಪಡೆಯುವ ಸಂತೋಷ ವಂಶಕ್ಕೆ, ವಿನಾಶಕ್ಕೆ ಕಾರಣವಾಗುವುದು ಎನ್ನುವುದು ಒಕ್ಕಲಿಗರಿಗೆ, ಗೊಲ್ಲರಿಗೆ ತಿಳಿದಿರುವ ವಿಚಾರ…..”[26] ಈ ದೃಷ್ಟಾಂತ ಆ ಕಾಲದ ಗೊಲ್ಲರ ‘ಶೀಲ – ಶೌಚ’ದ ಪರಿಶುದ್ಧತೆಯನ್ನು ಎತ್ತಿತೋರಿಸುತ್ತದೆ.

ಬ್ರಹ್ಮಶಿವನ (ಕ್ರಿ.ಶ. ೧೧೫೦) ‘ಸಮಯ ಪರೀಕ್ಷೆ’ಯಲ್ಲಿ ಗ್ರಾಮ ದೇವರುಗಳನ್ನು ಕ್ಷುದ್ರದೇವರುಗಳೆಂದು ಟೀಕಿಸುತ್ತಾನೆ – “ಮೈಲಾರಂ ಕೇತಂ ಕಾಟಂ, ಮಾರಿಗೆ, ಮಸಣಗೆಯನಿಪ್ಪ ಕೋಱೆ ದೈವಂಗಳ್….”[27] ಇಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಕಾಡ, ಕೇತ ಈ ದೇವರುಗಳು ಕಾಡುಗೊಲ್ಲರು ಆರಾಧಿಸುತ್ತಿರುವ ಕ್ಯಾತರಲಿಂಗ (ಕ್ಯಾತಪ್ಪ) ಕಾಟಮಲಿಂಗ (ಕಾಟಯ್ಯ) ದೈವಗಳಾಗಿರುವ ಸಾಧ್ಯತೆ ಇದೆ. ಈ ದೇವರುಗಳ ಬಗ್ಗೆ ಕಾಡುಗೊಲ್ಲರಲ್ಲಿ ಸುದೀರ್ಘ ಕಾವ್ಯಗಳೇ ರೂಪುಗೊಂಡಿವೆ.

[1] ಹೆಚ್.ವಿ. ನಂಜುಂಡಯ್ಯ ಮತ್ತು ಅನಂತ ಕೃಷ್ಣ ಅಯ್ಯರ್ – The Mysore Tribe and castes – (Vol – III, P – 212)

[2] ಡಾ ಜೀ.ಶಂ.ಪ – ದಕ್ಷಿಣ ಕರ್ನಾಟಕದ ಜಾನಪದ ಕಾವ್ಯ ಪ್ರಕಾರಗಳು. (ಪು – ೨೧೦)

[3] ಡಾ. ತೀ. ನಂ. ಶಂಕರನಾರಾಯಣ – ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು (ಪು – ೨೧)

[4] ಡಾ. ಮೀರಾಸಾಬಿಹಳ್ಳಿ ಶಿವಣ್ಣ – ಕಾಡುಗೊಲ್ಲರ ಬುಡಕಟ್ಟುವೀರರು, (ಪು – ೪೬)

[5] ಡಾ. ಅಂಬಳಿಕೆ ಹಿರಿಯಣ್ಣ (ಸಂ) – ಕಾಡುಗೊಲ್ಲರ ಜನಪದಗೀತೆಗಳು, (ಪು – ೭೧)

[6] ಡಾ. ಮೀರಾಸಾಬಿಹಳ್ಳಿ ಶಿವಣ್ಣ – ಕಾಡುಗೊಲ್ಲರ ಬುಡಕಟ್ಟುವೀರರು, (ಪು – ೨೪೯)

[7] ಸಿ.ಕೆ. ಕುಮುದಿನಿ (ಉದೃತ) – ಪ್ರಾಚೀನ ಭಾರತದಲ್ಲಿ ಬೇಸಾಯ (ಪು – ೨೦೦)

[8] ಟಿ. ಕೇಶವ ಭಟ್ಟ – ಗೋವಿನ ಕಥಾ ಸಾಹಿತ್ಯ

[9] ಮನುಧರ್ಮಸಾರಸಾರ (ಪು – VIII – 230) –

[10] ಕೃಷ್ಣಭಟ್. ಕೆ. (ಅನು) – ಕೌಟಿಲ್ಯನ ಅರ್ಥಶಾಸ್ತ್ರ (ಅಧ್ಯಾಯ – ೪೬, ಶ್ಲೋಕ)

[11] ಅದೇ – ಅಧ್ಯಾಯ ೫೦, ಶ್ಲೋಕ – ೪೬

[12] ವರ್ತೂರು ಶಾಂತಿರಾಜ ಶಾಸ್ತ್ರಿ (ಅನು) – ಗುಣಭದ್ರಾಚಾರ‍್ಯ ಮಹಾಪುರಾಣ, (ಸಂಪುಟ – ೧, ಶ್ಲೋಕ – ೩೧)

[13] ಅದೇ – (ಸಂ – ೧, ಶ್ಲೋ – ೩೨ – ೩೬ ಪುಟ – ೨೮)

[14] ಪ್ರೊ. ಅನಂತರಾಮಯ್ಯ – ವಡ್ಡಾರಾಧನೆಯ ಕಥಾಲೋಕ, (ಪು – ೯೦ – ೯೧)

[15] ಕೆ.ವಿ. ಪುಟ್ಟಪ್ಪ (ಸಂ) – ಪಂಪ ಭಾರತ, (ಅಧ್ಯಾಯ ೬, ಪು ೪೭)

[16] ಅದೇ – (ಅಧ್ಯಾಯ – ೬, ಪು – ೫೨)

[17] ಅದೇ – (ಅಧ್ಯಾಯ – ೯, ಪು – ೯೫)

[18] ಅದೇ – (ಅಧ್ಯಾಯ – ೯, ಪು – ೯೫)

[19] ಚಂದ್ರಶೇಖರ ಕಂಬಾರ – ಕನ್ನಡ ವಿಶ್ವಕೋಶ (ಸಂ – ೬, ಪು – ೫೨೮)

[20] ಬಿ.ಎಸ್.ಕುಲಕರ್ಣಿ – ನೇಮಿನಾಥಪುರಾಣ. ೭:೫೦

[21] ಕೆ.ವೆಂಕಟರಾಮಪ್ಪ – ಲೀಲಾವತಿ ಪ್ರಬಂಧಂ, (ಆಶ್ವಾಸ – ೫, ಪದ್ಯ – ೯೮)

[22] ಎ.ವೆಂಕಟರಾವ್ – ಅಭಿದಾನ ರತ್ನಮಾಲಾ ಕರ್ನಾಟಕ ಟೀಕೆ (೪೩:೧೦೬)

[23] ಬಿ.ಟಿ. ಮಹಿಷವಾಡಿ (ಸಂ) – ನಯಸೇನನ ದರ್ಮಾಮೃತಂ (೮:೧೫)

[24] ಅದೇ – (೧೦:೧೦೫)

[25] ಡಿ.ಎಲ್. ನರಸಿಂಹಾಚಾರ್ (ಸಂ) – ಶಾಂತಿನಾಥನ ಸುಕುಮಾರ ಚರಿತಾ, (೭:೩೫)

[26] ಶ್ರೀನಿವಾಸರಾಘವಾಚಾರ್ (ಸಂ) – ನಾಗಚಂದ್ರನ ಪಂಪರಾಮಾಯಣ. (೧೨:೫೮)

[27] ಕೆ.ಅನಂತರಾಮು (ಸಂ) – ಬ್ರಹ್ಮಶಿವನ ಸಮಯ ಪರೀಕ್ಷೆ. (೯:೧೨೮)