ರುದ್ರಭಟ್ಟನ (ಕ್ರಿ.ಶ. ೧೧೪೦) ‘ಜಗನ್ನಾಥವಿಜಯ’ ಕಾವ್ಯದಲ್ಲಿ ವ್ಯಕ್ತವಾಗಿರುವ ೧೮ ಆಶ್ವಾಸಗಳಲ್ಲಿ, ಶ್ರೀಕೃಷ್ಣನ ಜನನ ವಿಚಾರದಿಂದ ಆರಂಭವಾಗುವ ಕಥೆಯು ಸಾಲ್ವನೆಂಬ ರಾಕ್ಷಸನ ವಧೆಯವರೆಗೆ ಕೃಷ್ಣ ಕಥೆಯು ಸಾಂದ್ರಿತವಾಗಿದೆ. ಕಾವ್ಯದ ಮೂರನೇ ಆಶ್ವಾಸದಿಂದ ಐದನೇ ಆಶ್ವಾಸದವರೆಗಿನ ಒಟ್ಟು ೩೫೫ ಪದ್ಯಗಳಲ್ಲಿ ಶ್ರೀಕೃಷ್ಣನ ಜನನ, ವಸುದೇವ ನಂದಗೋಕುಲಕ್ಕೆ ಬಂದು ಬಾಲಕೃಷ್ಣನನ್ನು ಯಶೋಧೆಯ ಮಡಿಲಲ್ಲಿ ಬಿಟ್ಟು ಬರುವುದು, ಕೃಷ್ಣನ ಬಾಲಲೀಲೆಗಳು, ಗೋಪಾಲನೆ, ಗೊಲ್ಲತಿಯರ ರೂಪಲಾವಣ್ಯ ಇವರೊಂದಿಗೆ ಕೃಷ್ಣನ ರಾಸಲೀಲೆಗಳು ಹಾಗೂ ಕೃಷ್ಣನ ಗೋಕುಲ ನಿರ್ಗಮನ ಹೀಗೆ ವಿಸ್ತಾರವಾಗಿ ಹಬ್ಬಿಕೊಂಡಿರುವ ಕಥಾ ಹಂದರವನ್ನು ಕವಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ.[1]

ಬಂಧುವರ್ಮನ (ಕ್ರಿ.ಶ. ೧೨೦೦) ‘ಹರಿವಂಶಾಬ್ಯುದಯ’ದಲ್ಲಿ “ಕೃಷ್ಣ ಚರಿತ್ರೆಯನ್ನು ಹೇಳಲಾಗಿದ್ದು, ಒಂದು ಸಂದರ್ಭದಲ್ಲಿ “ಅಲ್ಲಿಗೆ ಸಮೀಪವಳೊಂದು ತುರುಪಟ್ಟಿಗೆಲ್ಲಂ ಪ್ರಧಾನ ನಂದ ಗೋವಳನೆಂಬಂ” (೬ – ೫) ಎಂಬ ಉಲ್ಲೇಖ ಬರುತ್ತದೆ.

ಹನ್ನೆರಡನೇ ಶತಮಾನದ ಹೊತ್ತಿಗೆ ಹಿಂದೂ ಸಮಾಜ ಹಲವು ಹತ್ತು ಜಾತಿಗಳಲ್ಲಿ ಹಂಚಿ ಹೋಗಿತ್ತು. ಆ ಹೊತ್ತಿನಲ್ಲಿ ೧೮ ಜಾತಿಗಳು ಪ್ರಮುಖವಾಗಿ ವಚನಕಾರರಿಂದ ಆಗಿಂದಾಗ್ಗೆ ಪ್ರಸ್ತಾಪಿಸಲ್ಪಟ್ಟಿವೆ. ಬಿಜ್ಜಳನ ಅರಮನೆಯಲ್ಲಿಯ ಕಣಜಗಳಿಂದ ಧಾನ್ಯ ಅಳೆದು ಕೊಡುವ, ಕೊಟ್ಟಿದ್ದುದರ ಲೆಕ್ಕ ಬರೆದಿಟ್ಟು ಕೊಳ್ಳುವ ಕಾರ್ಯನಿರ್ವಹಿಸುತ್ತಿದ್ದ ಸೊಡ್ಡಳಬಾಚರಸ ಎಂಬ ಶರಣ ಹದಿನೆಂಟು ಜಾತಿಗಳನ್ನು ಪ್ರಸ್ತಾಪಿಸುತ್ತಾ ಅವುಗಳ ಪಟ್ಟಿಯಲ್ಲಿ ‘ಗೊಲ್ಲ’ ಜಾತಿಯನ್ನು ಸೇರಿಸಿದ್ದಾನೆ. ದೇಹದ ವಿವಿಧ ಅಂಗಗಳಿಗೆ ಒಂದೊಂದು ಜಾತಿಯನ್ನು ಹೆಸರಿಸಿದ್ದಾನೆ. ಗೊಲ್ಲ ಜಾತಿಯನ್ನು ದೇಹದ ‘ಕಿವಿ’ಗೆ ಅನ್ವಯಿಸಿದ್ದಾನೆ.[2]

ವಚನಗಾರರಲ್ಲಿ ತುರುಗಾಹಿರಾಮಣ್ಣ ನೆಂಬುವನು ಗೊಲ್ಲ ಜಾತಿಯ ಶಿವಶರಣನೆಂದು ಗುರುತಿಸಲಾಗಿದೆ. ಗೋಪಿನಾಥೇಶ್ವರ ಲಿಂಗ ಎಂಬ ಅಂಕಿತದಲ್ಲಿ ಸುಮಾರು ಐವತ್ತು ವಚನಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ತುರುಗಾಹಿ ರಾಮಣ್ಣ ದನಗಳನ್ನು ಕಾಯುವುದಕ್ಕಾಗಿ ಅವುಗಳ ಒಡೆಯರಿಂದ ಪಡೆಯುತ್ತಿದ್ದ ಹಣದ ವಿವರಗಳನ್ನು ತನ್ನ ಒಂದು ವಚನದಲ್ಲಿ ಹೀಗೆ ಹೇಳುತ್ತಾನೆ –

ಹಸುವಿಂಗೆಹಾಗ ಎತ್ತಿಂಗೆ ಹಣವಡ್ಡ
ಕರುವಿಂಗೆ ಮೂಱು ಹಣ
ಎಮ್ಮೆ ಕೋಣ ಕುಲವ ನಾ ಕಾಯಲಿಲ್ಲ
ಅವು ಎನ್ನ ತುರುವಿಗೆ ಹೊರಗು[3]

ಧರ್ಮಸಿದ್ಧಾಂತದ ತಾತ್ವಿಕ ಅರ್ಥವೇನೇ ಇರಲಿ, ಕಾಡುಗೊಲ್ಲರ ಸಂಸ್ಕೃತಿಯ ಅರಹಿನೊಳಗೆ “ಎಮ್ಮೆ ಕೋಣನ ಕುಲವ ನಾ ಕಾಯಲಿಲ್ಲ ಅವು ಎನ್ನ ತುರುವಿಂಗೆ ಹೊರಗು’ ಎಂಬ ಶರಣ ರಾಮಣ್ಣ ವಚನ ವಾಕ್ಯವನ್ನು ಪರಿಶೀಲಿಸಬೇಕಾಗುತ್ತದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರ ಹಳ್ಳಿ ಬಾಲದೇವರ ಹಟ್ಟಿಯಲ್ಲಿ ಕಂಬೇರು, ಕಡ್ಲೇರು ಬೆಡಗಿನ ಗೊಲ್ಲರು ವಾಸವಾಗಿದ್ದು ಇವರಲ್ಲಿ ‘ಕಂಬೇರು ಗೊಲ್ಲರು’ ಎಂಬ ಬೆಡಗಿನ ಸಮೂಹದಲ್ಲಿ ಇಂದಿಗೂ ಎಮ್ಮೆ ಹಾಲು ಪಾನದ ನಿಷಿದ್ಧವಿದೆ. ಅಷ್ಟೇ ಏಕೆ ಎಮ್ಮೆಗಳನ್ನು ತಮ್ಮ ಹಟ್ಟಿಯಲ್ಲಿ ಸುಳಿದಾಡಲೂ ಬಿಡುವುದಿಲ್ಲ. ಈ ಆಚರಣೆಯ ಸೂಕ್ಷ್ಮ ಒಳನೋಟಗಳನ್ನು ತುರುಗಾಹಿ ರಾಮಣ್ಣನ ಮೇಲಿನ ಮಾತಿನಲ್ಲಿ ಪರಿಶೀಲಿಸಬೇಕಾಗುತ್ತದೆ.

ಚೆನ್ನಬಸವಣ್ಣನವರ ವಚನವೊಂದರಲ್ಲಿ “ಬಾಗಿಲಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒಡೆತನವುಂಟೆ ಅಯ್ಯಾ….” ಎಂಬ ವಾಕ್ಯವೊಂದು ಬರುತ್ತದೆ. ಇದೇ ರೀತಿ ನಂಜುಂಡ ಕವಿಯ ‘ಕುಮಾರರಾಮ’ನ ಸಾಂಗತ್ಯದಲ್ಲಿ “ಬಾಗಿಲೊಳಹ ಗೊಲ್ಲರು ನಾ ಹೇಳಿದ ಹಾಗೆ ಬೀಗದ ಮುದ್ರೆಯವರು ಏಗಯ್ವದಮ್ಮ ಪೇಳೆನುತ ನನಗೆ ತಲೆವಾಗಿ ಕೈಮುಗಿದುಕೊಂಡಿಹರು” (೨೬:೧೪೨), ಎಂಬ ಮಾತೊಂದಿದೆ. ಮಹಾಂತ ದೇಶಿಕೇಂದ್ರರ ‘ಹರಿಶ್ಚಂದ್ರ ಮಹಾರಾಯನ ಚರಿತ್ರೆ’ಯಲ್ಲಿ “ದ್ವಾರಗೊಲ್ಲರೊಳಾಗ ಭೋರ ನಿರ್ವರು ಬಂದು….” (೨೩೨) ಎಂಬ ವಾಕ್ಯವನ್ನು ಗಮನಿಸುವುದರೊಂದಿಗೆ ಇತ್ತೀಚಿನ ಬಿ.ರಾಮಕೃಷ್ಣರಾವ್ ಅವರ ‘ಶ್ರೀಮನ್ಮಹಾರಾಜರ ವಂಶಾವಳಿ’ಯ ಎರಡನೇ ಸಂಪುಟದಲ್ಲಿ “ಪ್ರತೀ ತುಕುಡಿಯ ಖಜಾನೆಗೂ ಒಬ್ಬೊಬ್ಬ ಗೊಲ್ಲನಿದ್ದನು” (ಪು: ೩೨) ಎಂಬ ಅಭಿಪ್ರಾಯವನ್ನು ಕ್ರೋಡೀಕರಿಸಿ ನೋಡಿದಾಗ ಗೊಲ್ಲರು ಪಶುಪಾಲನೆಯಿಂದ ಬೇರೆ ಬೇರೆ ವೃತ್ತಿಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರ ವೃತ್ತಿ ಪರಿವರ್ತನೆಯ ಸುಳುಹು ಲಭ್ಯವಾಗುತ್ತದೆ. ಈ ಹಂತದಲ್ಲಿ ಗೊಲ್ಲರು ಖಜಾನೆಯ ಭಂಡಾರವನ್ನು ಕಾಯುತ್ತಿದ್ದರಿಂದ, ‘ಸರಾಫನ ಹಣದ ಚೀಲ ಒಯ್ಯುತ್ತಿದ್ದುದರಿಂದ’ ‘ಗೊಲ್ಲರ್’ ಎಂಬ ಅಧಿಕಾರ ಸ್ಥಾನವನ್ನೇ ಸೃಷ್ಟಿಸಿದ್ದುದನ್ನು ಖಜಾನೆ ಇತಿಹಾಸದಲ್ಲಿ ಕಾಣಬಹುದು.

ಶರಣ ಸಂಸ್ಕೃತಿಯ ಹರಿಕಾರ ಬಸವಣ್ಣನವರ ವಚನಗಳಲ್ಲಿ ‘ಗೊಲ್ಲ’ ಶಬ್ದ ಮೇಲಿಂದ ಮೇಲೆ ಬಳಕೆಯಾಗಿದೆ. ಒಂದು ದಿನ ಮಧ್ಯಾಹ್ನ ಬಸವಣ್ಣನವರ ಮನೆಯ ಗೊಲ್ಲನು ಕೊಟ್ಟಿಗೆಯಿಂದ ಓಡಿಬಂದು ಭಕ್ತರ ವೇಷದಲ್ಲಿ ಕಳ್ಳರು ಬಂದು ಹಸುಗಳನ್ನು ಕದ್ದೊಯ್ದರು ಎಂದು ಮೊರೆಯಿಟ್ಟಾಗ ಬಸವಣ್ಣ ಹೀಗೆ ಹೇಳುತ್ತಾನೆ – “ಬುದ್ಧಿಯಿಲ್ಲದ ಗೊಲ್ಲ, ಭಕ್ತರೇನು ಕಳ್ಳರೆ, ಸುಮ್ಮನಿರು ಬೊಬ್ಬಿಡಬೇಡ….”[4]

ಏಕೀಕೃತ ಮನಸ್ಸಿಲ್ಲದ, ಭಕ್ತಿಯಿಲ್ಲದ ಚಂಚಲ ಸ್ವಭಾವದ ಜನರ ಮನೋಸ್ಥಿತಿಯನ್ನು ಹೇಳುವಲ್ಲಿ ಅಲೌಕಿಕ ತಾತ್ವಿಕ ನೆಲೆಗಟ್ಟಿನಲ್ಲಿ ಎತ್ತುಗಳು ಹಾಗೂ ಗೊಲ್ಲರನ್ನು ಉಪಮೇಯವನ್ನಾಗಿಸಿಕೊಂಡು ಬಸವಣ್ಣನವರು ವಚನವೊಂದನ್ನು ಹೀಗೆ ರಚಿಸಿದ್ದಾರೆ –

ಒಂದೆತ್ತಿಗೈವರು ಗೊಲ್ಲರು
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯ
ತಮ್ಮತಮ್ಮಿಚ್ಛೆಗೆ ಹರಿಹರಿದಾಡಿ
ತಾವು ಕೆಟ್ಟು ಎತ್ತನು ಕೆಡಿಸಿದರಯ್ಯಾ[5]

ಮತ್ತೊಂದು ವಚನದಲ್ಲಿ ‘ನುಭಕ್ತನಲ್ಲಯ್ಯ ಆನುವೇಷಧಾರಿಯಯ್ಯಾ ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು” (೩೩೬) ಎಂಬಲ್ಲಿ ‘ಕಾಟುಗ’. ‘ಕೇತುಗ’ – ಹೆಸರುಗಳು ಬ್ರಹ್ಮ ಶಿವನ ಸಮಯಪರೀಕ್ಷೆಯಲ್ಲಿ ಉಲ್ಲೇಖಿತಗೊಂಡಿರುವ ಕಾಟಂ, ಕೇತಂ ಹೆಸರುಗಳಿಗೆ ಸಮಾನಾಂತರವಾಗಿವೆಯೆಂದು ಭಾವಿಸಬಹುದಾಗಿದೆ. ಮುಂದುವರಿದು ‘ಎನ್ನ ಚೌಗುಬೊಲ್ಲನ ಕಾವ ಗೋವನೆಂಬರು’ (ವ.೩೩೮) ಎಂಬ ವಚನದಲ್ಲಿ ಬರುವ ‘ಗೋವ’ ಶಬ್ದ ಗೊಲ್ಲನೆಂಬರ್ಥದಲ್ಲಿ ಬಳಕೆಯಾಗಿರುತ್ತದೆ.

ತೆಲುಗೇಶಮಸಣಯ್ಯ ಎಂಬ ಶರಣ ತನ್ನ ವಚನವೊಂದರಲ್ಲಿ ಗೋವಳನ ಆಕರ್ಷಕ ವೇಷಭೂಷಣದ ಚಿತ್ರಣವನ್ನು ಕೊಡುತ್ತಾನೆ.

ಹಳದಿಯ ಸೀರೆಯನುಟ್ಟು
ಹಳದೋಲೆಯ ಕಿವಿಯಲಿಕ್ಕಿ
ಮೊಳಡಂಗೆಯ ಪಿಡಿದು ಗುಲಗಂಜಿದಂಡೆಯಕಟ್ಟಿ
ತುತ್ತುರುತುರು ಎಂಬ ಕೊಳಲಬಾರಿಸುತ
ಅಪಳಚಳನೆಂಬ ಉಳುವಿಯಗಂಟೆಕಟ್ಟಿ
ತುತ್ತುರು ಜಂಗಳಿ ದೈವಗಳೆಲ್ಲವ ಹಿಂಡುಮಾಡಿ
ಕಾವ ನಮ್ಮ ಶಂಭುತೆಲುಗೇಶ್ವರನ ಮನೆಯ ಗೋವಳನೀತ.[6]

ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿದ ಶರಣ ವೀರಗೊಲ್ಲಾಳ ಕುರಿಗಾಹಿಯಾಗಿದ್ದು ಈತ ಕುರುಬ ಜಾತಿಯವನೆಂಬುದು ಪ್ರಚಲಿತ ನಂಬುಗೆ. ಆದರೆ ಕಾಡುಗೊಲ್ಲರ ಐತಿಹ್ಯವೊಂದರಲ್ಲಿ ಇದೇ ರೀತಿಯ ಕುರಿ ಹಿಕ್ಕೆಯ ಲಿಂಗ ಪೂಜೆಯ ಶರಣನೊಬ್ಬನ ಪ್ರಸ್ತಾಪವೂ ಇದೆ. ಹಾಗಾಗಿ ವೀರಗೊಲ್ಲಾಳ ಕುರುಬನೇ, ಗೊಲ್ಲನೇ ಎಂಬುದಕ್ಕೆ ಮತ್ತಷ್ಟು ಅಧ್ಯಯನದ ಅವಶ್ಯಕತೆ ಕಂಡುಬರುತ್ತದೆ.

ವಚನಕಾರರ ನಂತರ ಬರುವ ವೀರಶೈವ ಕವಿಗಳಲ್ಲಿ ಪ್ರಮುಖವಾದ ಹರಿಹರನ (ಕ್ರಿ.ಶ. ೧೨೦೦) ‘ಬಸವರಾಜದೇವರರಗಳೆ’ಯಲ್ಲಿ ದನಗಾಹಿ ಗೊಲ್ಲನ ವೇಷಭೂಷಣಗಳನ್ನು ಅತ್ಯಂತ ವಾಸ್ತವಿಕವಾಗಿ ಚಿತ್ರಿಸಿದ್ದಾನೆ.

ಹೆಗಲ ಕಂಬಳಿ ಕೈಯ ಕಲ್ಲಿಯೋರದಿಂದೆ
ಪಿಡಿದ ಗೋವಳಿಗೋಲ ಮಾಲೆಗಳ ಹಾಹೆಯಿಂ
ತೊಡರ ಬಾವುಲಿಯೊಳಗೆ ಜವಿ ಹಲವು ದಂಡೆಯಿಂ
ಗುಲುಗುಂಜಿಯಿಂ ಸಮೆದ ದಂಡೆ ಮಂಡೆಯೊಳೊಪ್ಪೆ
ಕರಮಸೆವ ಚೆನ್ನಗುಳ್ಳೆಯ ಚೀರದಿಂದೊಪ್ಪೆ
ಕಿವಿಯಲಿಕ್ಕಿದ ಬಹಳದೋಲೆ ಹಳದಿಯ ಉಡುಗೆ
ಸವೆಯುದೊದುವ ಕೊಳಲು ಮೈಯ ತವರದ ತೊಡುಗೆ [7]

ಹರಿಹರನ ಕಾಲದ ಗೋವಳರ ಭೌತಿಕ ಚಿತ್ರಣ ಇದರಿಂದ ಸ್ವವೇದ್ಯವಾಗುತ್ತದೆ. ತಮಿಳುಗೊಲ್ಲ ಶರಣ ಅನಾಯನಾಯರನ ಬಗ್ಗೆಯೂ ಹರಿಹರ ಒಂದು ರಗಳೆಯನ್ನು ರಚಿಸಿದ್ದಾನೆ. ಗೋವುಗಳ ಕಾಯುವಿಕೆಯನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿಕೊಂಡು ಸಾಂಪ್ರದಾಯಿಕ ಕೊಳಲನ್ನು ಭಾಜಿಸುವುದರಲ್ಲೇ ಶಿವಸಾನಿಧ್ಯವನ್ನು ಪಡೆದ ಶರಣನ ಬಗ್ಗೆ ೧೭೪ ವಾಕ್ಯಗಳಲ್ಲಿ ವಿವರ ನೀಡಿದ್ದಾನೆ. (ಪು: ೬೧ – ೬೩).

ಮುಂದುವರಿದ ಬಸವ ಪವಾಡ ರಗಳೆಯಲ್ಲಿ ಗೊಲ್ಲತಿ ಮತ್ತು ಬಸವಣ್ಣನ ನಡುವಿನ ಮೊಸರು ಹರವಿ ಪವಾಡವನ್ನು ಪ್ರಸ್ತಾಪಿಸುತ್ತಾನೆ.

ಪುರದೊಳೆಡಗಿ ಬೀಳ್ವಾ ಗೊಲ್ಲಿಯೊಂದು ಬಸವಾ ಎನಲು ಕೊಡನ
ಧರಣಿಪತಿಯ ಹತ್ತಿರಿರ್ದು ಪಿಡಿದುನಿಲ್ಲಿಸಿ ಮೆರೆದ ಬಸವನ (ಪುಟ ೪೮೨೪೦)

ಸಾಮಾನ್ಯವಾಗಿ ಗೊಲ್ಲರ ಹೆಣ್ಣುಮಕ್ಕಳನ್ನು ಗೊಲ್ಲತಿ ಎಂಬ ಸ್ತ್ರೀಲಿಂಗವಾಚಕದಲ್ಲಿ ಕರೆಯುವುದು ಹೆಚ್ಚು ಬಳಕೆಯಲ್ಲಿರುವುದನ್ನು ಕಾಣಬಹುದು. ಆದರೆ ಹರಿಹರ ‘ಗೊಲ್ಲಿ’ ಎಂಬ ವಿಶೇಷ ಪದ ಪ್ರಯೋಗವನ್ನು ಬಳಸಿದ್ದಾನೆ.

ಅಮರಸಿಂಹನ ‘ಅಮರಕೋಶ’ಕ್ಕೆ ಕನ್ನಡದಲ್ಲಿ ವ್ಯಾಖ್ಯಾನ ಬರೆದಿರುವ ನಾಚಿರಾಜ (ಕ್ರಿ.ಶ. ೧೩೦೦) ತನ್ನ ‘ನಾಚಿರಾಜೀಯ’ ಕೃತಿಯಲ್ಲಿ ತುಱುಪಟ್ಟಿಯ ಪ್ರಸ್ತಾಪ ಮಾಡಿದ್ದಾನೆ (ಪು: ೧೦೩)

ಬಸವಣ್ಣ ಮತ್ತು ಗೊಲ್ಲತಿಯೊಬ್ಬಳ ನಡುವೆ ನಡೆದಿದೆ ಎನ್ನಲಾದ ಒಂದು ಪವಾಡವನ್ನು ಬಹಳಷ್ಟು ವೀರಶೈವ ಕವಿಗಳು ಪ್ರಸ್ತಾಪಿಸಿದ್ದಾರೆ. ಭೀಮಕವಿ (ಕ್ರಿ.ಶ. ೧೪೦೦) ತನ್ನ ಬಸವಪುರಾಣದಲ್ಲಿ ಗೊಲ್ಲತಿಯ ಪವಾಡಕ್ಕೆ ೫೭ ಪದ್ಯಗಳ ಒಂದು ಸಂಧಿಯನ್ನೇ ಮೀಸಲಿಟ್ಟಿದ್ದಾನೆ (ಸಂ.೯). ‘ಕಾಟಕ’ಳೆಂಬ ಗೊಲ್ಲತಿಯು ಮೊಸರುಹರವಿ ಹೊತ್ತು, ಕಲ್ಯಾಣದ ಕೆಸರು ದಾರಿಯಲ್ಲಿ ನಡೆದು ಹೋಗುವಾಗ ಕಾಲುಜಾರಿ ಬೀಳುವಾಗ ಬಸವಣ್ಣನನ್ನು ನೆನೆಯುತ್ತಾಳೆ.

ಹೊತ್ತು ಅಳೆಯಂ ಬೀದಿಯಲಿ ಮಾ
ಱುತ್ತ ಕಾಟಲನೆಂಬುವವಳು ನಡೆ
ವುತ್ತ ಕೊಗ್ಗೆಸರಲ್ಲಿ ಕಾಲ್ಗಳುಜಾರಿ ನಡುನಡುಗಿ
ಇತ್ತಲೀಕ್ಷಿಸಿ ಕೆಡೆವ ಮಡಕೆಯ
ನೆತ್ತು ಬಸವಾ ಎನಲು ಹರವಿಯ
ನತ್ತ ಕೈಯಂ ನೀಡಿ….”  [8]

ಆ ಸಂದರ್ಭದಲ್ಲಿ ಬಸವಣ್ಣ ಮಾಯದಲ್ಲಿ ಅವಳ ಹರವಿಯನ್ನು ಹಿಡಿದೆತ್ತುತ್ತಾನೆ.

ಅಂಗಡಿಯೊಳಳೆವೊತ್ತು ಬರುತಿರೆ
ಮುಂಗಡೆಯೊಳಡಿ ಜಾರಿ ಕೆಡೆಯದ
ಹಾಂಗೆ ಹಿಡಿದನು ಬಸವನಾ ಗೊಲ್ಲತಿಯ ಹರವಿಯನು. (ಸೂಚನಾ ಪದ್ಯ)

ಈ ಪವಾಡ ಸಾದೃಶ್ಯವನ್ನು ಬಿಜ್ಜಳ ತನ್ನ ಆಸ್ಥಾನದಲ್ಲಿದ್ದ ಬಸವಣ್ಣನಿಂದ ತಿಳಿದು ಪರೀಕ್ಷಿಸಿ ಕೊನೆಗೆ ನಿಜಸ್ಥಿತಿಯನ್ನು ಅರಿತು ಗೊಲ್ಲತಿಗೆ ಮೆಚ್ಚು ನೀಡುತ್ತಾನೆ – “ಬಿಜ್ಜಳನು ಮುದವೊಪ್ಪಿ ಗೊಲ್ಲತಿಗೆ ಅಭಿನವಾಂಬರ ಭೂಷಣಮನಿತ್ತು ಇಪ್ಪ….” (ಕಾಂಡ – ೨, ಸಂ.೯:೫೨) ಮುಂದೆ ಗೊಲ್ಲತಿಗೆ ಶಿವಸಾನಿಧ್ಯ ಲಭ್ಯವಾಗುತ್ತದೆ.

ಇಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಗೊಲ್ಲತಿಯ ಹೆಸರು ಕಾಟಕ ಎಂಬುದು ಈ ಬುಡಕಟ್ಟಿನ ಸಂಪ್ರದಾಯಿಕ ಹೆಸರಾದ ಕಾಟಕ್ಕ, ಕಾಟಮ್ಮ, ಕಾಟವ್ವ ಆಗಿರುವುದಾಗಿದೆ. ಕಾಟಣ್ಣ (ಕಾಟಮಲಿಂಗ) ಚಿತ್ತಯ್ಯನ (ಚಿತ್ರಲಿಂಗ) ಅಣ್ಣ, ಯೋಗಿಪುರುಷ. ಕಾಡುಗೊಲ್ಲರ ಚಂದಮುತ್ತಿಕುಲದ ಸನ್ನೋರ ಬೆಡಗಿನ ಮನೆದೇವರು ಎಂಬಂಶವನ್ನು ಗಮನಿಸಬೇಕಾಗಿದೆ.

ಬಸವಣ್ಣನಿಗೆ ಸಂಬಂಧಿಸಿದಂತೆ ‘ಗೊಲ್ಲತಿ ಪವಾಡ’ ಭೀಮ ಕವಿಯ ಬಸವ ಪುರಾಣವಲ್ಲದೆ ಇನ್ನೂ ಅನೇಕ ವೀರಶೈವ ಕವಿಗಳ ಬಸವ ಪುರಾಣಗಳಲ್ಲಿ ಅಭಿವ್ಯಕ್ತಗೊಂಡಿದೆ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣ (ಆ.೨:೧೦೨೧ – ೧೦೫೫ ಸಾಲು), ಲಕ್ಕಣ ದಂಡೇಶನ ಶಿವತತ್ವಚಿಂತಾಮಣ (೩೨:೧೬ – ೧೭), ಸಿಂಗರಾಜನ ‘ಬಸವರಾಜ ಚಾರಿತ್ರ’ (೧೫:೭ – ೧೨) ಮಲ್ಲಣಾರ್ಯನ ‘ವೀರಶೈವಾಮೃತಪುರಾಣ’ (೮:೪೯ – ೫೦) ‘ಸಪ್ಪೆಯಾರ್ಯನ ‘ಬಸವಪವಾಡರಗಳೆ’ (೩೯ನೇ ಸಾಲು) ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ (೫೭ – ೭೮) ಷಡಕ್ಷರಿಯ ‘ಬಸವರಾಜವಿಜಯ’ (೭:೪ – ೧೦) ಗುರು ಚೆನ್ನಬಸವನ ಬಸವಪವಾಡ (೨:೯೮ – ೧೨೪) ಚೆನ್ನಪ್ಪ ಕವಿಯ ಶರಣ ಲೀಲಾಮೃತ (೧೧:೨೩೧ – ೨೩೧) ಈ ಕಾವ್ಯಗಳಲ್ಲಿ ಬಸವಣ್ಣ – ಗೊಲ್ಲತಿಯ ಪವಾಡ ಉಲ್ಲೇಖಿತಗೊಂಡಿರುವುದನ್ನು ಗಮನಿಸಿದಾಗ* ಈ ಪ್ರಕರಣ ಎಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿತ್ತು ಎಂಬುದು ಅಚ್ಚರಿ ಮೂಡಿಸುತ್ತದೆ. ಜನಪದ ಗೀತೆಗಳೂ ಸಹ ಈ ಹಿನ್ನೆಲೆಯಲ್ಲಿ ರಚನೆಗೊಂಡಿರುವುದು ಗಮನಾರ್ಹ ಅಂಶವಾಗಿದೆ.

ಮಜ್ಜಿಗೆ ಸ್ವಾರೆ ಹೊತ್ತು ಬಿದ್ದಾಳೆ ಗೊಲ್ಲತಿ
ವಜ್ರದ ಅಲುಗದ ಬಸುವಾನ ನೆನೆದಾರೆ
ಎದ್ದಾವೆ ಕೊಡುಗನ ದಗುನಾಕೆ
ಕಲ್ಯಾಣ ಪಟ್ಟಣವೆಲ್ಲಿ ಗೊಲ್ಲಾತಿ ಗುಡುಲೆಲ್ಲಿ
ನೀವೆಲ್ಲಿ ನಿಮ್ಮ ಮಟವೆಲ್ಲಿಬಿಜ್ಜಳನ
ವೋದಸ್ತಿವೆಲ್ಲೊ ಪಡಿದೀರಿ
ಕಲ್ಯಾಣಪಟ್ಟಣದಾಗ ಮಲ್ಲಮ್ಮ ಗೊಲ್ಲತಿ
ಜಲ್ಲಾನ ಜಾರಿ ಬಸವಾನನೆನೆದಾರೆ
ಎಲ್ಲೆ ಕೊಡನಲ್ಲೆ ನಿಲ್ಲೋವು [9]

ಶರಣರಂತೆ ದಾಸರೂ ಕೂಡ ಗೊಲ್ಲರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಲ್ಲೆಲ್ಲ ಶ್ರೀಕೃಷ್ಣನ ಬಾಲಲೀಲೆಗಳನ್ನು ಕೊಂಡಾಡುವುದೇ ಕೇಂದ್ರ ಬಿಂದುವಾಗಿದ್ದರೂ ಪರೋಕ್ಷವಾಗಿ ಆ ಕಾಲದ ಗೊಲ್ಲರ ಬದುಕಿನ ಚಿತ್ರಣಗಳು ಈ ದಾಸರ ಮೇಲೆ ಪ್ರಭಾವ ಬೀರಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಶ್ರೀಪಾದರಾಜರು (ಕ್ರಿ.ಶ. ೧೪೦೬) ಗೊಲ್ಲರ ಹುಡುಗರ ವೇಷಭೂಷಣವನ್ನು ಚಿತ್ರಿಸುವ ಬಗೆ ಹೀಗೆ –

ಕೋಲುಕೈಯಲಿ ಜೋಲುಗಂಬಳಿ
ಹೆಗಲಮೇಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲ ಕಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮೊಳದೊಳಗಿದ್ದೆನ್ನ
ಕಲ್ಲುಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚೆಲ್ಲಾಟವಾಡುತಲಿ [10]

“ಗೊಲ್ಲರಾ ಮನೆಯಲಿ ಕಳ್ಳತನದಿ ಬಂದು ಗುಲ್ಲು ಮಾಡುತಲಿ… ” (೩ – ೧೪೪) ಎಂದು ಪುರಂದರ ದಾಸರು ಹಾಡಿದರೆ, ‘ಗೊಲ್ಲರ ಮನೆಹೊಕ್ಕು ಗುಲ್ಲು ಮಾಡುವುದೇನಲ ಬಲುಲಲ್ಲೆ ಮಾಡುವುದೇನಲಾ’ (೨೧೮) ಎಂದು ಶ್ರೀ ಕೃಷ್ಣನನ್ನು ಪ್ರೀತಿಯಿಂದ ಛೇಡಿಸುವ ಕನಕದಾಸರು, “ಗೋಕುಲದೊಳುಪುಟ್ಟಿ ಗೊಲ್ಲರೆಲ್ಲರ ಕೈಲಿ ಸಾಕಿಕೊಂಡ ಕಳ್ಳ ಕೂಕೂಕೋ ಎನ್ನಿರೋ” (೨೨೪ – ೪) ಎಂದು ಕೃಷ್ಣನನ್ನು ಆತ್ಮೀಯತೆಯಿಂದ ಗೇಲಿ ಮಾಡುತ್ತಾರೆ.[11]

ಗೋವಳ, ಗೋಪಾಲ, ತುಱುಕಾರ – ಈ ಪ್ರಾಚೀನ ಪದಗಳು ದಾಸರ ಕಾಲಕ್ಕೆ ಮರೆಯಾಗಿ ‘ಗೊಲ್ಲ’ ಶಬ್ದ ಬಳಕೆಗೆ ಬಂದಂತೆ ಕಂಡುಬರುತ್ತದೆ

ಕುಮಾರವ್ಯಾಸನ (ಕ್ರಿ.ಶ. ೧೪೫೦) ‘ಕರ್ನಾಟಕ ಭಾರತ ಕಥಾಮಂಜರಿ’ಯಲ್ಲಿ ಗೋವಳ, ತುರುಪಳ್ಳಿ, ತುರುಪಟ್ಟಿ ಗೊಲ್ಲ ಈ ಶಬ್ದಗಳು ಪ್ರಯೋಗವಾಗಿರುವುದನ್ನು ಗಮನಿಸಬಹುದು. ರಾಜಸೂಯ ಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಲು ಧರ್ಮರಾಯ ನಿರ್ಧರಿಸಿದಾಗ ಅಲ್ಲಿದ್ದ ಶಿಶುಪಾಲ ಉಗ್ರವಾಗಿ ಪ್ರತಿಭಟಿಸುತ್ತಾನೆ.

ಧರಣಿಪಾಲರ ಮಧ್ಯದಲ್ಲಿ ಭಾ
ಸ್ಕರನು ಗಡ ತುರುಪಳ್ಳಿಕಾರರ
ಪುರದ ಭಾಸ್ಕರನೀತಲ್ಲಾ…… “  [12]

ಮೂಮದುವರಿದು ಇದೇ ಸಂದರ್ಭದಲ್ಲಿ ಭೀಷ್ಮ ಕೃಷ್ಣನ ಮಹಿಮೆ ಮತ್ತು ಸಾಮರ್ಥ್ಯವನ್ನು ಶ್ಲಾಘಿಸಿದ್ದಕ್ಕಾಗಿ ವ್ಯಘ್ರನಾದ ಶಿಶುಪಾಲ ಭಿಷ್ಮನನ್ನು ಕುರಿತು,

ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮನಿನಗೆ || [13]

ಎಂದು ಮೂದಲಿಸುತ್ತಾನೆ.

ವಿರಾಟಪರ್ವದಲ್ಲಿ ‘ತುರುಗೊಳ್’ ಸಂದರ್ಭದಲ್ಲಿ ಗೋವಳರು ಕೌರವ ಪಡೆಯೊಂದಿಗೆ ವೀರಾವೇಶದಿಂದ ಹೋರಾಡಿದ ಸನ್ನಿವೇಶ ನಾಲ್ಕು ಪದ್ಯಗಳಲ್ಲಿ ಚಿತ್ರಿತವಾಗಿದೆ. (ಸಂಧಿ. ೫ – ೧, ೨, ೩, ೪)

ಕೌರವನ ಒಡ್ಡೋಲಗಕ್ಕೆ ರಾಯಭಾರಿಯಾಗಿ ಕೃಷ್ಣ ಬಂದಾಗ ತನ್ನೆಣಿಕೆಯಂತೆ ಕೃಷ್ಣ ತನ್ನಲ್ಲಿಗೆ ಬಾರದೇ ಹೋದದ್ದಕ್ಕೆ ದುರ್ಯೋಧನ ಮುನಿದು “ಗೋವಳಿಗತನ ನಿಮ್ಮ ಮೈಸಿರತಪ್ಪಾದಾಯ್ತೆ” (ಉ.ಪ. ೮:೬೪) ಎಂದು ಕಟಕಿಯಾಡುತ್ತಾನೆ. ಕುಮಾರವ್ಯಾಸನ ಕಾಲಮಾನದಲ್ಲಿ ಗೊಲ್ಲರು ಸಾಮಾಜಿಕ ಅವಜ್ಞೆಗೆ ಒಳಗಾಗಿದ್ದನ್ನು ಶಿಶುಪಾಲನ ವ್ಯಂಗ್ಯ ಛೇಡಿಕೆ ಮಾತುಗಳ ಮೂಲಕ ಹಾಗೂ ದುರ್ಯೋಧನನ ಅಪಹಾಸ್ಯದ ನುಡಿಗಳಿಂದ ಕಂಡುಕೊಳ್ಳಬಹುದು.

ಘೋಷಯಾತ್ರೆ ಹೊರಟ ಕೌರವನ ಪಡೆ ಅರಣ್ಯದಲ್ಲಿ ಸಂಚರಿಸುವಾಗ ಗೊಲ್ಲರ ಹಟ್ಟಿಯೊಂದು ಕಣ್ಣಿಗೆ ಬೀಳುತ್ತದೆ. ಆ ಹಟ್ಟಿಯ ಗೋವುಗಳ, ಕರುಗಳ ಸಂಭ್ರಮ ಹಾಗೂ ಗೋವುಗಳ ಮೈಬಣ್ಣ ಮತ್ತು ವೈವಿಧ್ಯತೆಯನ್ನು ಕವಿ ಮನೋಜ್ಞವಾಗಿ ಬಣ್ಣಿಸಿದ್ದಾನೆ. (ಅರಣ್ಯ ಪರ್ವ – ಸಂಧಿ – ೧೭:೩೬, ೩೭)

ನರಹರಿಯ (ಕ್ರಿ.. ೧೫೦೦) ತೊರವೆ ರಾಮಾಯಣದಲ್ಲಿ ವೀರ ಹನುಮಂತ ಮೊದಲಾದ ವಾನರ ಭಟರು ಸೀತೆಯನ್ನು ಹುಡುಕುತ್ತಾ ಕಾಡು ಕಣಿವೆಗಳಲ್ಲಿ ಅಲೆಯುತ್ತಾ ಸ್ವಯಂಪ್ರಭೆ ನಗರ ಸಮೀಪದಲ್ಲಿ ಒಂದು ಗೊಲ್ಲರಹಳ್ಳಿಗೆ ಬಂದು ಆ ಹಳ್ಳಿಯಲ್ಲಿ ಸೀತೆಯನ್ನು ಹುಡುಕುವ ಸನ್ನಿವೇಶವೊಂದು ಚಿತ್ರಿತವಾಗಿದೆ. [14]

ಲಕ್ಷ್ಮೀಶನ (ಕ್ರಿ.ಶ. ೧೫೩೦) ‘ಜೈಮಿನಿಭಾರತದ ಏಳನೇ ಅಧ್ಯಾಯದ ೩೦ನೇ ಪದ್ಯದಲ್ಲಿ ಹಾಗೂ ಸಾಳ್ವನ (ಕ್ರಿ.ಶ. ೧೫೫೦) ಸಾಳ್ವಭಾರತದ ೨೫ನೇ ಅಧ್ಯಾಯದ ೨೭ನೇ ಪದ್ಯದಲ್ಲಿ ‘ಗೋವಳ’, ‘ಗೊಲ್ಲತಿ’, ಶಬ್ದ ಪ್ರಯೋಗವಾಗಿರುವುದನ್ನು ಕಾಣಬಹುದು. ಅಂತೆಯೇ ಮಲ್ಲರಸ ಕವಿಯ (ಕ್ರಿ.ಶ. ೧೬೫೦) ‘ದಶಾವತಾರ ಚರಿತೆ’ಯ ೯ನೇ ಆಶ್ವಾಸದಲ್ಲಿ ಕೃಷ್ಣಾವತಾರಕ್ಕೆ ಸಂಬಂಧಿಸಿದ ೨೦೫ ಪದ್ಯಗಳಲ್ಲಿ ಗೋಕುಲ ವಿವರಗಳು ಲಭ್ಯವಾಗುತ್ತವೆ. ಈ ವಿವರಗಳು ವರ್ತಮಾನದ ಗೊಲ್ಲರ ಹಟ್ಟಿಗಳ ಸಾಮಿಪ್ಯವನ್ನು ಕಲ್ಪಿಸುತ್ತವೆ.

‘ಆಡುಮುಟ್ಟದ ಸೊಪ್ಪಿಲ್ಲ’ವೆಂಬಂತೆ ಸರ್ವಜ್ಞ ಮುಟ್ಟದ ವಿಷಯವಿಲ್ಲವೆಂಬುದು ಪ್ರಚಲಿತವಾಗಿರುವ ಮಾತು. ಅದರಂತೆ ಸರ್ವಜ್ಞ (ಕ್ರಿ.ಶ. ೧೭೦೦) ವಿವಿಧ ಜಾತಿಗಳನ್ನು ಕುರಿತು ಸಾಮಾಜಿಕ ನೆಲೆಯಲ್ಲಿ ತನ್ನ ಅಭಿಪ್ರಾಯವನ್ನು ಹೇಳಿರುವಂತೆ ಗೊಲ್ಲರ ಬಗ್ಗೆಯೂ ಮಾತನಾಡದೇ ಬಿಟ್ಟಿಲ್ಲ. ಕಾಲಜ್ಞಾನ ಪದ್ಧತಿಯನ್ನು ಹೇಳುತ್ತಾ –

ಕಲ್ಲು ಕೋಟೆಯಲೊಬ್ಬ ಬಲ್ಲಿದ ಕೆರೆಕಟ್ಟಿ
ಗೊಲ್ಲ ಗೊಲ್ಲರಿಗೆ ಜಗಳೆದ್ದು ಜಗದಲಿ
ತಲ್ಲಣವೆಂದ ಸರ್ವಜ್ಞ (೭೫೯)

ಲೇಸು ಪದ್ಧತಿಯನ್ನು ಕುರಿತು ಹೇಳುತ್ತಾ

ಅಳೆಲೇಸು ಗೊಲ್ಲಂಗೆ ಮಳೆಲೆಸು ಕಳ್ಳಂಗೆ
ಬಲೆ ಲೆಸು ಮೀನು ಹಿಡಿಯುವವಂಗೆ ಕುರುಡಂಗೆ
ಸುಳುದಾಟವೇ ಲೇಸು ಸರ್ವಜ್ಞ|| [15]

‘ಗೊಲ್ಲರೆಂದೂ ಕೂಡಿಬಾಳುವುದಿಲ್ಲ’ ಎಂಬ ಜನಜನಿತ ಮಾತಿಗೆ ಸರ್ವಜ್ಞನ ಮೊದಲ ಮಾತು ಮತ್ತಷ್ಟು ಇಂಬು ಕೊಡುತ್ತದೆ.

೧೭ನೇ ಶತಮಾನದಲ್ಲಿ ರಚಿತವಾಗಿವೆಯೆಂದು ಹೇಳಲಾಗುವ ಮಲ್ಲಕವಿಗೊಲ್ಲಸಿರುಮನ ಚರಿತೆ, ಸಿದ್ಧ ಕವಿಯ ಸಿರುಮಣನಾಯಕ ಚರಿತೆ, ರಾಮಕವಿಯ ಸಿರುಮನಚರಿತಈ ಮೂರು ಚಾರಿತ್ರಿಕ ಕಾವ್ಯಗಳಲ್ಲಿ ಬೂದಿಹಾಲೂ ಪಾಳೆಯಗಾರ ಗೊಲ್ಲ ಜಾತಿಗೆ ಸೇರಿದ ಸಿರಾಮ ಹಾಗೂ ಅವನ ಮಗ ಮಲ್ಲಣ್ಣ ವಿಜಯನಗರದ ಸಾಳುವ ನರಸಿಂಹನೊಂದಿಗೆ ಹೋರಾಟ ನಡೆಸಿದ ಸಾಹಸಗಾಥೆಯ ಚಿತ್ರಣವನ್ನು ಕಾಣಬಹುದು. [16]

ಚಂದ್ರಸಾಗರ ವರ್ಣಿಯ (ಕ್ರಿ.ಶ. ೧೮೦೦) ‘ಬೆಟ್ಟವರ್ಧನರಾಯಚರಿತೆಯಲ್ಲಿ ಬರುವ ಶ್ರೀರಂಗರಾಯನೆಂಬ ಅರಸನಿಗೆ ಗೊಲ್ಲನೊಬ್ಬನು ಕಾಂಚಿಯ ಕಾನನದ ಮಧ್ಯದ ಚೈತ್ಯಾಲಯದ ಬಗ್ಗೆ ಮಾಹಿತಿ ನೀಡುವ ವಿಷಯ ಪ್ರಸ್ತಾಪಿಸಲ್ಪಟ್ಟಿದೆ.[17]

ಗೋವಿನ ಕಥೆ

ಗೋವಿನ ಹಾಡು ಕನ್ನಡ ಜಾನಪದ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಸುಮಾರು ಹನ್ನೊಂದು ಪಾಠಾಂತರಗಳನ್ನು ಹೊಂದಿರುವ ಗೋವಿನ ಜೊತೆಯಲ್ಲೇ ಅದರ ಒಡೆಯ ಗೊಲ್ಲನ ಪ್ರಸ್ತಾಪವೂ ಅವಿನಾಭಾವವಾಗಿ ಬೆಸೆದುಕೊಂಡೆ ಬಂದಿದೆ. ಜನಪ್ರಿಯ ಕನ್ನಡ ಗೋವಿನ ಹಾಡಿನಲ್ಲಿ ಗೊಲ್ಲ ಕಾಳಿಂಗನ ನಿತ್ಯಕರ್ಮಗಳು ಹಾಗೂ ಅವನ ಉಡುಗೆ ತೊಡುಗೆಗಳ ವಿವರಗಳ ನಿರೂಪಣೆ ಹೀಗೆ ಬರುತ್ತದೆ.

ಬೆಟ್ಟದಟ್ಟಿಯ ಪಟ್ಟಿ ಚಲ್ಲಣ
ತೊಟ್ಟ ಪದಕವು ಬಿಲ್ಲೆ ಸರಗಳು
ಕಟ್ಟಿಬಾಪುರೆ ಭುಜದ ಕೀರ್ತಿಯ
ಇಟ್ಟ ಮುದ್ರಿಕೆಯಂಗರ
ಪಚ್ಛೆ ಗಡಗವ ಪವಳಸರವನು
ಹಚ್ಚಿನಾ ಕಾಲ್ಕಡಗ ಗೆಜ್ಜೆಯ
ಪೆಚ್ಚುತನದಲ್ಲಿ ಧರಿಸಿ ಮೆರೆದನು [18]

ಹೀಗೆಯೇ ವಿವರಗಳು ಮುಂದುವರೆಯುತ್ತವೆ. ಅಲ್ಲದೆ ಕಥೆ ಗೊಲ್ಲರ ಜೀವನ ಮೌಲ್ಯದ ಪರಿಕಲ್ಪನೆಗೆ ಹಿಡಿದಿಟ್ಟ ಕೈಗನ್ನಡಿ ಎಂದೂ ಭಾವಿಸಲಾಗಿದೆ.

ಚಾರಿತ್ರಿಕ ಆಕರಗಳು

ಕ್ರಿ.ಪೂ. ೩೦೦ರಲ್ಲಿ ಆಳ್ವಿಕೆ ನಡೆಸುತ್ತಿದ್ದ ಮೌರ್ಯರ ಕಾಲಾವಧಿಯಲ್ಲಿ ಗೋವಳರ ವೃತ್ತಿ ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ (ಕೌಟಿಲ್ಯ). ಕ್ರಿ.ಪೂ. ಒಂದನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಶಾತವಾಹನರ ಕಾಲದ ಸಮಾಜದಲ್ಲಿ ಅವರವರ ವೃತ್ತಿಗನುಗುಣವಾಗಿ ಹಲವು ಪಂಗಡಗಳಿದ್ದವು. ಬಡಗಿ, ಕಮ್ಮಾರ, ಕುಂಬಾರ, ನೇಕಾರ, ಬಣಕಾರ ಅಗಸ ಮೊದಲಾದವರಲ್ಲಿ ಗೊಲ್ಲರೂ ಸಹ ಇದ್ದರು. [19]

ಕ್ರಿ.. ೪ನೇ ಶತಮಾನದಲ್ಲಿ ಕದಂಬರ ಕಾಲದ ಶಾಸನಗಳಲ್ಲಿ ಉಲ್ಲೇಖಿತ ಗ್ರಾಮಗಳನ್ನು ಗಮನಿಸಿದಾಗ ಪಲ್ಲಿ, ಪಟ್ಟಿ, ಖೇಟ ಎಂದು ಅಂತ್ಯವಾಗುವ ಗ್ರಾಮನಾಮಗಳು ಸಾಕಷ್ಟು ಇವೆ. ಪಟ್ಟಿ, ಖೇಡಗಳು ಅರಣ್ಯವಾಸಿ ಜನರ ವಸತಿಗಳೆಂದೂ ಅರ್ಥೈಸಲಾಗಿದೆ.[20] ಹಟ್ಟಿ ಸಾಮಾನ್ಯವಾಗಿ ದನಗಾಹಿಗಳ ವಸತಿ ಎಂಬ ಡಾ. ಎಸ್.ವಿ.ಪಡಿಗಾರರ ಅಭಿಪ್ರಾಯವನ್ನು ಒಪ್ಪುತ್ತಾ ಈ ಹಟ್ಟಿಗಳು ಗೋವಳರ ವಾಸಸ್ಥಾನವಾಗಿದ್ದಿರಬಹುದೆಂದೇ ಊಹಿಸಬಹುದಾಗಿದೆ.

ಕ್ರಿ.. ಮತ್ತು ೧೨ನೇ ಶತಮಾನಗಳ ನಡುವಣ ಅವಧಿಯ ಕರ್ನಾಟಕದ ಸಮಾಜವನ್ನು ಕುರಿತು ಹೇಳುವಾಗ ತುರುಯುದ್ಧದಲ್ಲಿ ಪ್ರಾಣವನ್ನು ಬಲಿಗೊಟ್ಟ ‘ಗೊಲ್ಲವೀರರ ಕುಟುಂಬಗಳಿಗೆ ಭೂಮಿಯನ್ನು ದಾನವಾಗಿ ಕೊಡಲಾಗುತ್ತಿತ್ತು ಎಂದು ಪ್ರೊ. ಬಿ. ಸುರೇಂದ್ರರಾವ್ ಅಭಿಪ್ರಾಯ ಪಡುತ್ತಾರೆ.[21]

ಹೊಯ್ಸಳರ ಆಳ್ವಿಕೆಯಲ್ಲಿ ವಿವಿಧ ಜಾತಿಗಳಿಗೆ ವೃತ್ತಿ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಅವರಲ್ಲಿ ಪಶುಪಾಲನೆಯ ಗೊಲ್ಲರೂ ಸೇರ್ಪಡೆಯಾಗಿದ್ದರು.

೧೨ನೇ ಶತಮಾನದಲ್ಲಿ ಜೀವಿಸಿದ್ದ ಗೊಲ್ಲಶರಣ ಗುಂಡಬ್ರಹ್ಮಯ್ಯನ ಮಹಿಮೆಯಿಂದ ಓರಗಲ್ಲು ಕೋಟೆಯು ಕಟ್ಟಲ್ಪಟ್ಟಿತು. ಹಾಗೆಯೇ ಗೋಲ್ಕಂಡ ಕೋಟೆಯೂ ನಿರ್ಮಿತವಾಯಿತು. ಈ ಕೋಟೆಗೆ ಬಾದಶಹನು ಗುಂಡಬ್ರಹ್ಮಯ್ಯನ ಮಠದ ಹೆಸರಿನಲ್ಲಿಯೇ ಗೋಲಕೊಂಡ ಅಂದರೆ ಗೊಲ್ಲನಕೋಟೆ ಎಂದು ಹೆಸರಿಟ್ಟು ಮಠಾಧಿಪತಿಗೆ ಗ್ರಾಮಗಳನ್ನು ಜಹಗೀರಾಗಿ ಕೊಟ್ಟನು. ಉಜ್ಜಯಿನಿ ಸದ್ಧರ್ಮ ಸಿಂಹಾಸನ ತರಳಬಾಳು ಗುರುಪೀಠದ ಸ್ಥಾಪಕರಾದ ಮುರುಳಸಿದ್ಧರು ನೇಮವ್ರತಾಶೀಲ ಗುಂಡಯ್ಯಬ್ರಹ್ಮಯ್ಯನನ್ನು ಅರಸಿಕೊಂಡು ಹೊರಟು ಓರಗಲ್ಲಿನಲ್ಲಿ ಸಂದರ್ಶಿಸಿದರು. ಓರಗಲ್ಲಿನ ಆಗಿನ ರಾಜ ಗಣಪತಿ. ಈತನ ಕಾಲ ಕ್ರಿ.ಶ. ೧೧೯೯ ಎಂಬುದಾಗಿ ಹುಲ್ಲೂರು ಶ್ರೀನಿವಾಸ ಜೋಯಿಸರವರು ಅಭಿಪ್ರಾಯ ಪಡುತ್ತಾರೆ.[22]

೧೫೬೪ರಲ್ಲಿ ಬಿಜಾಪುರ, ಅಹಮದ್ ನಗರ, ಬೀದರ್, ಗೋಲ್ಕೊಂಡಗಳ ಸುಲ್ತಾನರ ಒಕ್ಕೂಟ ವಿಜಯನಗರದ ಅಳಿಯ ರಾಮರಾಯರ ಮೇಲೆ ದಾಳಿ ಮಾಡಿ ರಾಜಧಾನಿಯನ್ನು ಲೂಟಿಮಾಡಿ ಕೊಳ್ಳೆ ಹೊಡೆದರು. ಇದರೊಂದಿಗೆ ಬೇಡರು, ಬಂಜಾರರು, ಲಂಬಾಣಿಗರು ಸಂಪತ್ತನ್ನು ಕೊಳ್ಳೆ ಹೊಡೆದರು ಇವರೊಂದಿಗೆ ಕಾಡುಗೊಲ್ಲರೂ ಸೇರಿದ್ದರೆಂದು ಇತಿಹಾಸಕಾರ ಫಾಲಾಕ್ಷರವರು ತಿಳಿಸುತ್ತಾರೆ.[23]

ತುಳುನಾಡಿನ ಕೋಟಿಚೆನ್ನಯ್ಯ ಎಂಬ ಚಾರಿತ್ರಿಕ ಮಹಿಮಾ ಪುರುಷರು ಪಡುಮಲೆ ಕಾಡಿನಲ್ಲಿ (ಸುಳ್ಯಪಂಜ) ಸಂಚರಿಸುವಾಗ ಗೋವಳ ಮಕ್ಕಳನ್ನು ಭೇಟಿಮಾಡಿ ಮುಂದಿನ ಮಾರ್ಗವನ್ನು ಕೇಳಿಕೊಳ್ಳುತ್ತಾರೆ. ಒಂದೆರಡು ಒಗಟಿನ ರೂಪದ ಪ್ರಶ್ನೆಗಳನ್ನೂ ಹಾಕಿ ಗೋವಳ ಮಕ್ಕಳಿಂದ ಉತ್ತರವನ್ನು ಪಡೆಯುತ್ತಾರೆ.[24] ಚಿತ್ರದುರ್ಗದ ಪಾಳೆಯಗಾರರ ಮೂಲಪುರುಷ ತಿಮ್ಮಣ್ಣನಾಯಕನು (ಕ್ರಿ.. ೧೫೬೭) ಜೋಯಿಸ ಪರಶುರಾಮಪ್ಪನನ್ನು ಲಿಂಗದಳ್ಳಿ ಪಟ್ಟಡಿ ಒಂದಕ್ಕೆ ಹದಿನಾರು ಗ್ರಾಮದ ಸೇನಭೋಗತನಕ್ಕೆ ನೇಮಿಸಿ ವರುಷ ಒಂದಕ್ಕೆ ನಿಗದಿ ಪಡಿಸಿದ ಗ್ರಾಮಾದಾಯದಲ್ಲಿ – ಗೊಲ್ಲರಹಟ್ಟಿ ಒಂದಕ್ಕೆ ವರ್ಷಕ್ಕೆ ಒಂದು ಕುರಿಯೂ ಸೇರಿದ್ದಿತ್ತು ಎಂಬುದಾಗಿ ಎಂ.ಎಸ್. ಪುಟ್ಟಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ.[25]

[1] ಎಂ.ಆರ್. ವರದಾಚಾರ‍್ಯ – ರುದ್ರಭಟ್ಟನ ಜಗನಾಥ ವಿಜಯ.

[2] ಬಿ.ಆರ್. ಹಿರೇಮಠ್ – ಸಂಕೀರ್ಣ ವಚನಗಳು. (ಸಂ – ೪, ವಚನ – ೮೧೪)

[3] ಅದೇ – (ವ – ೧೦೫೦)

[4] ಎಲ್. ಬಸವರಾಜು – ಬಸವಣ್ಣನವರ ವಚನಗಳು (ಪು – ೧೭)

[5] ಡಾ. ಎಂ.ಎಂ. ಕಲಬುರ್ಗಿ – ಬಸವಣ್ಣನವರ ವಚನ ಸಂಪುಟ – ೦೧, (ವ – ೧೧೧೩)

[6] ಬಿ.ಆರ್. ಹಿರೇಮಠ್ – ಸಂಕೀರ್ಣ ವಚನಗಳು. (ಸಂ – ೪) (ವ – ೧೦೫೭)

[7] ಡಾ. ಎಂ.ಎಂ. ಕಲಬುರ್ಗಿ – ಹರಿಹರನ ಬಸವರಾಜದೇವರ ರಗಳೆ. (ಪು – ೩೨೫)

[8] ಆರ್.ಸಿ. ಹಿರೇಮಠ್ – ಭೀಮಕವಿಯ ಬಸವಪುರಾಣ (೯:೬)

* ಡಿ. ಶ್ರೀನಿವಾಸ – ಬಸವಣ್ಣನವರ ಪವಾಡಗಳು.

[9] ಡಾ. ಕೃಷ್ಣಮೂರ್ತಿಹನೂರು – ಸಾವಿರದ ಸಿರಿ ಬೆಳಗು. (ಪು – ೪೦೬)

[10] ಜಿ. ವರದರಾಜರಾವ್ (ಸಂ) – ಶ್ರೀಪಾದರಾಜರ ಕೀರ್ತನೆಗಳು. (ಪು – ೧೧೨)

[11] ಸುಧಾಕರ (ಸಂ) – ಕನಕದಾಸರ ಕೀರ್ತನೆಗಳು (ಸಂಪುಟ – ೪, ಕೀ – ೨೨೧)

[12] ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮತ್ತು ಕೆ.ವಿ.ಪುಟ್ಟಪ್ಪ – ಕರ್ನಾಟಕ ಭಾರತ ಕಥಾಮಂಜರಿ ಸಭಾಪರ್ವ – ಸಂಧಿ – ೮: ಪ – ೧೭

[13] ಅದೇ – (೮:೪೪)

[14] ಎನ್. ಬಸವಾರಾಧ್ಯ – ತೊರವೆರಾಮಾಯಣ, ಕಿಷ್ಕಿಂದಾ (ಸಂ – ೧೦, ಪದ್ಯ ೧೫)

[15] ಡಾ ಎಂ ಎಂ ಕಲಬುರ್ಗಿ – ಗೊಲ್ಲಸಿರುಮನ ಚರಿತೆ

[16]

[17] ಹಂ.ಪ. ನಾಗರಾಜಯ್ಯ – ಚಂದ್ರಸಾಗರವರ್ಣಿ ಬೆಟ್ಟವರ್ಧನ ರಾಯಚರಿತೆ. (ಪು – ೧೧೩ – ೧೧೪)

[18] ಟಿ. ಕೇಶವ ಭಟ್ಟ – ಗೋವಿನ ಕಥಾ ಸಾಹಿತ್ಯ

[19] ಪ್ರೊ. ಎಂ. ಷೇಕ್ ಆಲಿ – ಕರ್ನಾಟಕ ಚರಿತ್ರೆ, (ಸಂ – ೧)

[20] ಅದೇ

[21] ಪ್ರೊ. ಬಿ. ಸರೇಂದ್ರರಾವ್ – ಕರ್ನಾಟಕ ಚರಿತ್ರೆ, (ಸಂ – ೨, ಪು – ೨೧೫)

[22] ಪ್ರೊ. ಲಕ್ಷ್ಮಣ್ ತೆಲಗಾವಿ, ಡಾ ಎಂ. ವಿ. ಶ್ರೀನಿವಾಸ – ಹುಲ್ಲೂರು ಶ್ರೀನಿವಾಸ್ ಜೋಯಿರ ಸಂಶೋಧನಾ ಲೇಖನಗಳು

[23] ಫಾಲಾಕ್ಷ – ಮಧ್ಯಯುಗಿನ ಭಾರತದ ಇತಿಹಾಸ. (ಪು – ೨೭೩)

[24] ದಾಮೋದರಕಲ್ಮಾಡಿ – ಕೋಟಿಚನ್ನಯ್ಯ ಪಾರ್ದನ ಸಂಪುಟ

[25] ಎಂ.ಎಸ್. ಪುಟ್ಟಣ್ಣ – ಚಿತ್ರದುರ್ಗದ ಪಾಳೆಗಾರರು. (ಪು – ೧೯)