‘ಮತ್ತೋಡು ಹಾಲಪ್ಪನಾಯಕನು ತನ್ನ ಸೈನ್ಯ ಸಮೇತ ಮುಸುವನಕಣಿವೆಯ ಘಾಟಿಗೆ ಬಂದು ಅಲ್ಲಿ ಚಿತ್ರದುರ್ಗದವರ ದನಗಳನ್ನು ಹಿಡಿಸುತ್ತಾನೆ. ಆಗ ಮದಕರಿ ನಾಯಕನಿಗೆ ಸುದ್ದಿ ಮುಟ್ಟಿಸಿದವನು ಒಬ್ಬ ಗೊಲ್ಲನಾಗಿದ್ದನೆಂದು ಆರ್. ಶೇಷಶಾಸ್ತ್ರಿಯವರು ಉಲ್ಲೇಖಿಸಿದ್ದಾರೆ.

ಹಾಗಲವಾಡಿ ಪಾಳೆಗಾರರು ಹೀರೆಲಿಂಗದೇವರ ಪೂಜಕರಾಗಿದ್ದರು. ಈ ಪಾಳೇಗಾರರ ಸಾಂಸ್ಕ್ರತಿಕ ಪ್ರಭಾವಗಳನ್ನು ಜನಪದ ಸಂಸ್ಕೃತಿ – ಮುಖ್ಯ ಸಂಸ್ಕೃತಿ ಎಂದು ಎರಡು ವಿಭಾಗ ಮಾಡಲಾಗಿದ್ದು, ಹಾಗಲವಾಡಿಯ ಕೆಂಪಮ್ಮ, ಕರಿಯಮ್ಮ, ಜುಂಜುಪ್ಪ – ಈ ದೇವಾಲಯಗಳು ಹಾಗಲವಾಡಿನಾಯಕರ ಕಾಲದ ಜನಪದ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಪ್ರೊ. ಕೆ.ಎಸ್. ಶಿವಣ್ಣನವರು ಅಭಿಪ್ರಾಯ ಪಡುತ್ತಾರೆ. (ಕರ್ನಾಟಕ ಚರಿತ್ರೆ, ಪು: ೬೯) ಜುಂಜಪ್ಪ ಕಾಡುಗೊಲ್ಲರ ಸಾಂಸ್ಕೃತಿಕ ವೀರನಾದರೆ ‘ಹೀರೆಲಿಂಗದೇವರು’ ನಂದಿಹಳ್ಳಿ ಗುಡಿಕಟ್ಟಿನ ಗೊಲ್ಲರ ಕುಲದೇವರು ಎಂಬಂಶವನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ.

ಕುಮ್ಮಟದುರ್ಗದ ರಾಜ ಕಂಪಿಲರಾಯನ ಸಾಕುಮಗ ಕಾಡುಗೊಲ್ಲರ ಜಾತಿಯವನಾಗಿದ್ದ. ಒಮ್ಮೆ ಕಂಪಿಲರಾಯ ತನ್ನ ರಾಣಿಯರೊಂದಿಗೆ ಅಡವಿಯಲ್ಲಿ ಸಂಚರಿಸುತ್ತಿರುವಾಗ ಗೊಲ್ಲರ ಮನೆದೈವವಾದ ಬಿಲ್ಲಕಾಟಮಲಿಂಗ ದೇವರಗುಡಿಯ ಬಳಿಯಲ್ಲಿ ಒಂದು ಹಸುಳೆಯು ದೊರೆಯಿತು. ವಿಚಾರಿಸಲಾಗಿ, ಗುಡಿಯ ಬಳಿಯಲ್ಲಿಯೇ ಇದ್ದ ಗೊಲ್ಲರಹಟ್ಟಿಯ ಯಜಮಾನನ ಶಿಶುವೆಂದೂ, ಆ ಮಗುವಿನ ಜನನದಿಂದ ತಂದೆ ತಾಯಿಗಳಿಗೆ ಮರಣವೆಂದು ತಿಳಿಯಲು ಅವರು ಶಿಶುವನ್ನು ಗುಡಿಯಲ್ಲಿ ಬಿಟ್ಟು ಬಂದರೆಂದು ತಿಳಿಯಿತು. ರಾಜನು ಎಷ್ಟು ವಿಧವಾಗಿ ಹೇಳಿದರೂ ತಾಯಿ ತಂದೆಗಳು ಅದನ್ನು ರಕ್ಷಿಸಲು ಒಪ್ಪಲಿಲ್ಲ. ಕಂಪಿಲರಾಯ ಒಲುಮೆಯಿಂದ ತಮ್ಮ ಅರಮನೆಗೆ ಕರೆತಂದು ಕಾಟ ಎಂದು ನಾಮಕರಣ ಮಾಡಿದನೆಂಬುದು ಹುಲ್ಲೂರು ಶ್ರೀನಿವಾಸ ಜೋಯಿಸರ ಅಭಿಮತವಾಗಿದೆ.[1]

ಶಾಸನ ಆಕರಗಳು

ಪ್ರಾಚೀನ ಕಾಲದಲ್ಲಿ ಗೊಲ್ಲರು ಕೇವಲ ಸೇವಕ ವರ್ಗದವರು ಅಥವಾ ಪಶು ಪಾಲಕರು ಆಗಿರದೆ ರಾಜ ಮನೆತನದವರೂ ಆಗಿದ್ದರೆಂದು ಡಾ. ಎಂ.ಬಿ.ನೇಗಿನಹಾಳ ಅಭಿಪ್ರಾಯಪಡುತ್ತಾರೆ.[2]

ತಮ್ಮ ನಿಲುವಿಗೆ ಶ್ರವಣಬೆಳಗೊಳದ ಶಾಸನಗಳನ್ನು ಉದಾಹರಿಸುತ್ತಾರೆ. ಶ್ರವಣ ಬೆಳಗೊಳದ ಶಾಸನ ಸಂಖ್ಯೆ ೧೫೬, ೧೭೩ ಮತ್ತು ೭೧ ಈ ಮೂರು ಶಾಸನಗಳಲ್ಲಿ ಉಲ್ಲೇಖಿತನಾಗಿರುವ ‘ಗೊಲ್ಲಾಚಾರ್ಯ’ ಎಂಬ ಜೈನ ಮುನಿ ಮೊದಲು ರಾಜನಾಗಿದ್ದು ತನ್ನ ಐಹಿಕ ಬಂಧನಗಳನ್ನು ತ್ಯಜಿಸಿ ಜೈನ ಮುನಿಯಾಗಿ ಬಹುಖ್ಯಾತಿವೆತ್ತಿದ್ದನೆಂಬುದು ಶ್ರೀಯುತರ ಅಭಿಪ್ರಾಯವಾಗಿದೆ.

ಕ್ರಿ.ಶ. ೯೧೫ ರದ್ದೆಂದು ಭಾವಿಸಲಾಗಿರುವ ನಂಜನಗೂಡಿನ ೧೩೯ನೇ ಶಾಸನದಲ್ಲಿ ಪೇರೊಳ್ಬೆ ಪದ ಪ್ರಯೋಗವಾಗಿದೆ. (ಇಸಿ – ೩) “ಊರಿನ ಗಡಿಯನ್ನು ದಾಟಿ ಹೊಲಗಳನ್ನು ಹಾದು ಬಂದರೆ ಊರಿನ ವಸತಿಯತ್ತ ದೊಡ್ಡ ಬೇಲಿಯನ್ನು ಕಾಣಬಹುದಾಗಿತ್ತು ಇದನ್ನೆ ‘ಪೇರೊಳ್ಬೆ’ ಎಂದು ಕರೆದಿರುವುದು. (ಒಳ್ಳೆ – ಒಬ್ಬೆ = ಬೇಲಿ) ಎಂಬುದಾಗಿ ಡಾ. ಎಂ.ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ.[3]

ಕಾಡುಗೊಲ್ಲರು ಊರಿನಿಂದ ದೂರ ಹೊಲಗಳ ಗಡಿಯಂಚಿನಲ್ಲಿ, ಅಡವಿಗಳಲ್ಲಿ ವಸತಿ ನಿರ್ಮಿಸಿಕೊಂಡು ತಮ್ಮ ವಸತಿ ಸಮುಚ್ಛಯದ ಸುತ್ತ ಕಳ್ಳೆಬೇಲಿಯನ್ನು ಹಾಕಿಕೊಂಡು ಬಂದಿರುವುದು ಈ ಸಮುದಾಯದ ಪರಂಪರೆ. ಈ ಬೇಲಿಯನ್ನು ‘ಪಾರಿಬೇಲಿ’ ಎಂದು ಕರೆಯಲಾಗುತ್ತದೆ. ಶಾಸನೋಕ್ತ ಪೇರೊಳ್ಬೆ ವಿಕಾಸವಾಗಿ ‘ಪಾರಿಬೇಲಿ’ಯಾಗಿರುವ ಸಾಧ್ಯತೆ ಇದೆ.

ಕ್ರಿ.. ೧೦೩೬ರ ಶಾಸನವೊಂದರಲ್ಲಿ ‘ಸಿರಿಯಣ್ಣ ಎಂಬಾತನು ಚೆಂಗಾಳ್ವರೊಡನೆ ಹೋರಾಡಿ ತುರುಗಳನ್ನು ಹಿಂದುರಿಗಿಸಿ, ಸ್ತ್ರೀಯರನ್ನು ಹಿಂದಿಕ್ಕಿ ಹೋರಾಡಿ ಸತ್ತ ವಿಷಯ ಬಂದಿದೆ. ‘ಸಿರಿಯಣ್ಣ’ ಎಂಬ ಹೆಸರು ಸಾಮಾನ್ಯವಾಗಿ ಕಾಡುಗೊಲ್ಲರಲ್ಲಿಯೇ ಹೆಚ್ಚು ಪ್ರಚಲಿತವಿರುವುದರಿಂದ ಈ ಶಾಸನದಲ್ಲಿ ಹೆಸರಿಸಿರುವ ಸಿರಿಯಣ್ಣ ಬಹುಶಃ ಗೊಲ್ಲರವನಾಗಿರಬಹುದು.

ಕ್ರಿ.. ೧೨೪೯ರಲ್ಲಿ ರಚನೆಗೊಂಡಿರುವ ಗುಂಡ್ಲುಪೇಟೆಯ ತಮಿಳು ಶಾಸನವೊಂದರಲ್ಲಿ (ಬಂಡೀಪುರ – ಸಂ: ೧೮೭) ಧಮ್ಮ ಚಿತ್ತನ್ ಕೊಲ್ಲಗಾಮುಂಡನ್ಎಂಬುವವನ ಉಲ್ಲೇಖವಿದೆ. ಪ್ರಸ್ತುತ ಶಾಸನಸದ ಕೊಲ್ಲಗಾಮುಂಡ ಎಂಬುದು ಕನ್ನಡದ ‘ಗೊಲ್ಲನಗೌಡ’ ಎಂಬುದರ ತಮಿಳುರೂಪವೆಂದು ಎಂ.ಬಿ. ನೇಗಿನಹಾಳರವರು ಅಭಿಪ್ರಾಯಪಡುತ್ತಾರೆ. ಶ್ರೀಯುತರು ಮುಂದುವರಿದು ಚಾಮರಾಜಪೇಟೆ ತಾಲ್ಲೂಕಿನ ಉಮ್ಮತ್ತೂರಿನ ಶಾಸನವೊಂದರಲ್ಲಿ (ಸಂ. ೧೦೨) ಕೊಲ್ಲ(ಗೊಲ್ಲ) ಗೌಂಡನಪುರ ಎಂಬ ಗ್ರಾಮದ ಹೆಸರಿದೆಯೆಂದು ತಿಳಿಸಿದ್ದಾರೆ.

ಕ್ರಿ.. ೧೩೩೦ರಲ್ಲಿ ರಚಿಸಲ್ಪಟ್ಟಿರುವ ಕೊಳ್ಳೆಗಾಲದ ಸಿಂಗನಲ್ಲೂರು ಗ್ರಾಮದ ಶಾಸನದಲ್ಲಿ (ಎ.ಕ.: ೪:೬೯) ಹಳ್ಳಿಹಿರಿಯೂರು ಗ್ರಾಮದ ಹದಿನೆಂಟು ವಕ್ಕಲುಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ ಗೊಲ್ಲಗೌಂಡನೂ ಒಬ್ಬನಾಗಿದ್ದನು. ಇದೇ ಶಾಸನದಲ್ಲಿ ಈ ಹದಿನೆಂಟು ವಕ್ಕಲುಗಳ ರೀತಿರಿವಾಜುಗಳ ಬಗ್ಗೆ, ನಿಯಮಗಳ ಬಗ್ಗೆಯೂ ವಿವರಣೆ ಇದೆ.

ಕ್ರಿ.. ೧೫೨೮ರ ಮೇಲುಕೋಟೆ ಶಾಸನ (ಇಸಿ – ೬ ಸಂ.೧೩೪) ದಲ್ಲಿ ವಿಜಯನಗರದ ಕೃಷ್ಣದೇವರಾಯನು ಮೇಲುಕೋಟೆಯಲ್ಲಿ ತಳವಾರ ಕೃಷ್ಣನಾಯಕನಿಗೆ ಅವನ ಸೇವಾ ಕಾರ್ಯಕ್ಕಾಗಿ ಸಿಂದಘಟ್ಟದ ಗೊಲ್ಲರ ಊರು ಚಟ್ಟನಹಳ್ಳಿಯನ್ನು ದಾನವಾಗಿ ಕೊಟ್ಟಿರುತ್ತಾನೆ. ಈ ಗ್ರಾಮದಿಂದ ಬರುವ ಬೇರೆ ಬೇರೆ ತೆರಿಗೆಗಳಿಂದ ಅವನು ಜೀವನ ನಡೆಸುವ ವಿವರಗಳು ತಿಳಿದುಬರುತ್ತವೆ.

ಚಿತ್ರದುರ್ಗ ಜಿಲ್ಲೆ ಹರತಿಕೋಟೆಯ ಚಿಕ್ಕರಂಗಪ್ಪನಾಯಕನು ಗೋಸಿ ಕೆರೆಯ ಕಾಳಾಮುಖಿ ಹೊಟ್ಟೆಯೀಶ್ವರಯ್ಯ ಎಂಬುವರ ಸಿಂಹಾಸನ ಮಠಕ್ಕೆ ‘ಹೇಮಂಡಿ ಹಾಳು’ (ಹೇಮದಳ) ಗ್ರಾಮವನ್ನು ಕ್ರಿ.. ೧೫೯೨ರಲ್ಲಿ ದಾನ ಮಾಡಿದ ಸಂಗತಿ ಹೇಮದಳ ಶಾಸನದಿಂದ ತಿಳಿದುಬರುತ್ತದೆ. (ಇಸಿ೧೧: ಹಿರಿಯೂರು – ೬). ಈ ಶಾಸನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಹೊಟ್ಟೆ ಈಶ್ವರಯ್ಯನವರು ಶೈವ ಸಂಪ್ರದಾಯ ಗುಡಿಕಟ್ಟುಗಳಿಗೆ ಸಂಬಂಧಿಸಿದ ಕಾಡು ಗೊಲ್ಲರಿಗೆ ಕುಲ ಗುರುವಾಗಿದ್ದವರು.

ಬಿಚ್ಚುಗತ್ತಿ ಭರಮಣ್ಣನಾಯಕನ ಆಡಳಿತಾವಧಿಯಲ್ಲಿ (೧೬೮೯ – ೧೭೨೧) ದಾವಣಗೆರೆಯ ಚಿತ್ರದುರ್ಗ ಸೀಮೆಗೆ ಬೇತೂರು ಹೋಬಳಿಯಲ್ಲಿ ಒಂದು ಗ್ರಾಮ. ಈ ಗ್ರಾಮದ ಗೌಡಿಕೆ ಸಂಬಂಧವಾಗಿ ಸಾದವಕ್ಕಲು ಕರುಣಗೌಡನ ಮಗ ಮುದಿಯಣ್ಣಗೌಡ ಮತ್ತು ಗೊಲ್ಲರಗಿಡ್ಡಯ್ಯನ ನಡುವೆ ವ್ಯಾಜ್ಯ ನಡೆದ ಸಂಗತಿ ತಾಮ್ರ ಶಾಸನವೊಂದರಿಂದ ತಿಳಿದುಬರುತ್ತದೆ.[4]

ಕ್ರಿ.. ೧೭೬೧ರಲ್ಲಿ ರಚನೆಗೊಂಡಿರುವ ನಂಜನಗೂಡು ತಾಲ್ಲೂಕಿನ ಗಟ್ಟಿಪಾಡಿ ತಾಮ್ರ ಶಾಸನದಲ್ಲಿ ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರು ವೆಂಕಟರಮಣಯ್ಯ ಎಂಬುವವನಿಗೆ ೧೪೪೬ ವರಾಹಗಳು ಮತ್ತು ಆರು ಹಣಕ್ಕೆ ಚಿಕ್ಕಡೊಂಕಿಹಳ್ಳಿ ಮತ್ತು ಈ ಹಳ್ಳಿಯ ಉಪಗ್ರಾಮಗಳನ್ನು ಕ್ರಿಯಾದಾನ ಮಾಡುತ್ತಾನೆ. ಈ ಉಪಗ್ರಾಮಗಳಲ್ಲಿ ‘ಗೊಲ್ಲರಹಟಿ ಯೂ ಒಂದಾಗಿರುತ್ತದೆ. (ಇಸಿ – ೩, ನಂ.ಗೂ – ೨೯೮)

೧೯ನೇ ಶತಮಾನದ ಹೊಳೆನರಸಿಪುರದ ಶಾಸನ ಒಂದರಲ್ಲಿ ಖಜಾನೆ ಭದ್ರತೆಗಾರ ಗೊಲ್ಲ ಜವರಾಯಗೌಡ ನೆಂಬುವವನು ನರಸಿಂಹದೇವರಿಗೆ ಬೆಳ್ಳಿಬಟ್ಟಲು ನೀಡಿದ ಸೇವೆಯನ್ನು ಪ್ರಸ್ತಾಪಿಸಲಾಗಿದೆ. (ಇಸಿ – ೮, ಹೊ.ನ. – ೨೪) ಹಿಂದೆ ಗೊಲ್ಲರು ಖಜಾನೆ ರಕ್ಷಕರಾಗಿದ್ದರು ಎಂಬಂಶಕ್ಕೆ ಈ ಶಾಸನ ಮತ್ತಷ್ಟು ಪುಷ್ಠಿ ನೀಡುತ್ತದೆ.

ಇದೇ ತಾಲ್ಲೂಕಿನ ಕೂಡಿಗೆ ಶಾಸನದಲ್ಲಿ (ಇಸಿ – ೮, ಹೊ.ನ. – ೪೬) ದುಗ್ಗಯ್ಯನೆಂಬ ಗೊಲ್ಲ ಸೇರ್ವೇಗಾರನಿಗೆ ಗದ್ದೆಯನ್ನು ರಾಜ ಕೊಡುಗೆಯಾಗಿ ನೀಡಿದ ಸಂಗತಿ ಇದೆ. ೧೯ನೇ ಶತಮಾನದಲ್ಲಿ ರಚನೆಗೊಂಡಿರುವ ಈ ಶಾಸನದಲ್ಲಿ ರಾಜನ ಹೆಸರು ಏನೆಂಬುದು ತಿಳಿದುಬರುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಮತ್ತೊಂದು ಶಾಸನದಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರು ಮೈಲಾರಯ್ಯ ಎಂಬ ಗೊಲ್ಲ ಸೇರ್ವೆಗಾರನಿಗೆ ಗದ್ದೆಯೊಂದನ್ನು ದಾನ ಮಾಡಿದ ಉಲ್ಲೇಖವಿದೆ. (ಇಸಿ – ೮. ಹೊ.ನ. ೩೭)

ಮೈಸೂರು ಅರಮನೆ ಆವರಣದ ವಿಘ್ನೇಶ್ವರ ಗುಡಿಯ ಮೇಲಿನ ಶಿಲಾ ಲೇಖದಲ್ಲಿ ಈ ದೇವಾಲಯದ ಪೂಜಾ ಉಸ್ತುವಾರಿಕೆಯನ್ನು ಗೊಲ್ಲರಪುಟ್ಟಣ್ಣ ಎಂಬುವವನಿಗೆ ವಹಿಸಿದ್ದುದರ ವಿಚಾರ ತಿಳಿದು ಬರುತ್ತದೆ. (ಇಸಿ: ೦೫, ಮೈ ೮೬).

ಮೇಲಿನ ಶಾಸನ ಆಕರಗಳನ್ನು ಗಮನಿಸಿದಾಗ ಒಂದು ಆಶ್ಚರ್ಯ ಸಂಗತಿ ಕಂಡುಬರುತ್ತದೆ. ಗೊಲ್ಲರು ಹೆಚ್ಚು ಸಾಂದ್ರತೆಯಲ್ಲಿರುವ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಶಾಸನಗಳಲ್ಲಿ ಗೊಲ್ಲರ ಬಗೆಗಿನ ಪ್ರಸ್ತಾವಗಳು ಅಷ್ಟಾಗಿ ಕಂಡುಬರದೆ ಜನಸಾಂದ್ರತೆ ತುಂಬಾ ವಿರಳವಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಸ್ತಾಪಗಳು ಕಂಡುಬಂದಿರುವುದು ಸೋಜಿಗದ ಸಂಗತಿಯಾಗಿದೆ.

ಪ್ರವಾಸಿಗರ ಉಲ್ಲೇಖಗಳು

ಮೆಗಸ್ತನೀಸ್ (ಕ್ರಿ.ಪೂ. ೩೦೨)

ಚಂದ್ರಗುಪ್ತಮೌರ್ಯನ ಕಾಲದಲ್ಲಿ ಪ್ರವಾಸ ಕೈಗೊಂಡಿದ್ದ ಮೆಗಸ್ತಿನೀಸ್ ಗೋವಳರನ್ನು ಕುರಿತಂತೆ ಹೀಗೆ ಹೇಳಿದ್ದಾನೆ “ಗೋವಳರು ಪಶುಪಾಲಕವರ್ಗಕ್ಕೆ ಸೇರಿದವರಾಗಿದ್ದು ಇವರು ಹಳ್ಳಿಗಳಲ್ಲಾಗಲಿ ಪಟ್ಟಣಗಳಲ್ಲಾಗಲಿ ನೆಲೆಸುವುದಿಲ್ಲ. ಗುಡಾರಗಳಲ್ಲಿ ವಾಸ ಮಾಡುತ್ತಾರೆ.[5]

ಈ ಮಾತು ಗೊಲ್ಲರು ಅಡವಿವಾಸಗಿಗಳಾಗಿದ್ದರು ಎಂಬುದಕ್ಕೆ ಚಾರಿತ್ರಿಕ ನಿದರ್ಶನ ಒದಗಿಸುತ್ತವೆ.

ಪ್ರೈಆರ್ದೊಮಿಂಗೋನವರ್ರೆ (ಕ್ರಿ.. ೧೬೧೬)

ಮದ್ರಾಸ್‌ನಿಂದ ಗೋವಾಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ತನ್ನ ಪ್ರಯಾಣದ ದಿನಚರಿಯನ್ನು ಬರೆಯುತ್ತಾ ಗೋವಳರನ್ನು ಕುರಿತು ಹೀಗೆ ಹೇಳಿದ್ದಾನೆ “ಊಟ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಹಾಲು, ಹಾಲೊಡಕು ಮೊಸರು, ಈರುಳ್ಳಿಗಳಲ್ಲದೆ ಬೇರೆಯಾವುದೂ ಸಿಕ್ಕುತ್ತಿರಲಿಲ್ಲ. ಬೆಟ್ಟಗುಡ್ಡ ಪ್ರದೇಶಗಳಲ್ಲಿಯೂ ಇದಕ್ಕೆ ಕೊರತೆ ಇರಲಿಲ್ಲ. ಏಕೆಂದರೆ ದನಕರುಗಳು ಹೇರಳವಾಗಿದ್ದವು. ದಾರಿಯಲ್ಲಿ ಸಿಕ್ಕುವ ಒಂದು ಗುಡಿಸಿಲಿನ ಮುಂದೆ ನಿಂತು ಕೂಗಿದರೆ ಸಾಕು ಗೌಳಿಗರು ಹೊರಬಂದು ಮಜ್ಜಿಗೆಯನ್ನು ಒಂದು ಗಡಿಗೆ ತುಂಬಾ ತಂದು ಕೊಡುತ್ತಿದ್ದರು. ನಾವು ಹೊಟ್ಟೆ ತುಂಬಾ ಕುಡಿದು ಹೋಗುತ್ತಿದ್ದೆವು.”[6] ಎಂಬ ವಿಚಾರಗಳನ್ನು ತಿಳಿಸಿದ್ದಾನೆ. ಗೋವಳರ ಹೈನುಸಮೃದ್ಧಿ ಉತ್ಕೃಷ್ಟವಾಗಿತ್ತು ಎಂಬುದು ಇವನ ಮಾತುಗಳಿಂದ ತಿಳಿದುಬರುತ್ತದೆ.

ಥಾಮಸ್ ಬೊವ್ರೆ (ಕ್ರಿ.. ೧೬೬೯)

ಥಾಮಸ್ ಬೊವ್ರೆ ಒಮದು ಪಲ್ಲಕ್ಕಿ ಚಿತ್ರವನ್ನು ಬರೆದು ಅದನ್ನು ಹೋರುವವರು ಗೌಳಿಗರು ಎಂದು ತಿಳಿಸುತ್ತಾನೆ. ಕಲ್ಲು ಮಣ್ಣು ಪೂಜಿಸುವ ಇವರಿಗೂ ಇತರೆ ಜಾತಿಯವರಿಗೂ ತುಂಬಾ ವ್ಯತ್ಯಾಸವಿದೆಯೆಂದು ಹೇಳಿದ್ದಾನೆ.[7] ಈ ಸಂಗತಿ ಗೊಲ್ಲರ ಸಾಂಪ್ರದಾಯಿಕ ವೃತ್ತಿ ಸ್ಥಿತ್ಯಂತರಕ್ಕೆ ಉತ್ತಮ ನಿದರ್ಶನವಾಗಿದೆ.

ಕೈಫಿಯತ್ತುಗಳು

ಇತಿಹಾಸ ರಚನೆಯ ಸಂದರ್ಭದಲ್ಲಿ ಶಾಸನ, ಗ್ರಂಥಸ್ಥ ಆಕರಗಳೊಂದಿಗೆ ಕೈಫಿಯತ್ತುಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಕೈಫಿಯತ್ತುಗಳು ಮಧ್ಯಮ ಮತ್ತು ಸಾಮಾನ್ಯ ವರ್ಗದವರ ಚಟುವಟಿಕೆಗಳಿಗೆ ಪ್ರಧಾನ ಸ್ಥಾನ ನೀಡಿವೆ. ವಾಸ್ತವ ಜೀವನದ ವಿವರಗಳನ್ನು ಒದಗಿಸಿ ಬದುಕಿನಲ್ಲಿ ಮುಚ್ಚಿ ಹೋದ ಮುಖಗಳನ್ನು ಬಿಚ್ಚಿ ತೋರಿಸುತ್ತವೆ. ಜನರಿಂದ ಕೇಳಿ ಬರೆದುದೇ ಇಲ್ಲಿ ಅಧಿಕ ಪ್ರಮಾಣದಲ್ಲಿರುವುದರಿಂದ ಇವುಗಳು ಒಂದರ್ಥದಲ್ಲಿ ಮೌಖಿಕ ಇತಿಹಾಸವಾಗುತ್ತವೆ.

ಗೊಲ್ಲರ ಬಗೆಗಿನ ಅನೇಕ ಸಂಗತಿಗಳು ಕರ್ನಾಟಕದ ಕೈಫಿಯತ್ತುಗಳು.[8] ಸಂಪುಟದಲ್ಲಿ ಲಭ್ಯವಾಗುತ್ತದೆ. ದರೋಜಿ ಕೈಫಿಯತ್ತಿನಲ್ಲಿ – ಕಲ್ಯಾಣ ಪಟ್ಟಣದ ಸಿಂಧು ಬಲ್ಲಾಳರಾಯನ ಗೊಲ್ಲಕುಲಮಂದಿ ಕೂಡಿ ಗ್ರಾಮಾಂತರ ಮೇಲೆ ಕಂಪಲಿ ಬಳಿ ಸೋಮೇಶ್ವರನ ಗುಡಿಯನ್ನು ಕಟ್ಟಿಸುವ ವಿವಿರ ತಿಳಿದುಬರುತ್ತದೆ. (ಪು. ೪೫೨)

ಗೊಲ್ಲರಯಲ್ಲಪ್ಪ ನರಂಬುವವನು ಶಾಲಿವಾಹನ ಶಕ ೧೫೯೦ರಲ್ಲಿ ಹಳೇ ಕುರುಗೋಡಿನ (ಬಳ್ಳಾರಿ ಜಿಲ್ಲೆ) ಪೂರ್ವದಿಕ್ಕಿನಲ್ಲಿ ಹನುಮಂತ ದೇವರಗುಡಿ ಬಳಿ ನಾಲ್ಕು ಬುರುಜಿನ ಕಿಲ್ಲೆ ಕಟ್ಟಿಸಿ ಆಡಳಿತ ನಡೆಸುತ್ತಾ ‘ಮೊಗಲಾಯಿ’ ಅರಸರ ಅಧೀನದಲ್ಲಿದ್ದನೆಂದು ಕುರುಗೋಡು ಕೈಫಿಯತ್ತು ನಿರೂಪಿಸುತ್ತದೆ. (ಪು. ೪೫೨)

ಹಾರ್ನಹಳ್ಳಿ ಕೈಫಿಯತ್ ನಲ್ಲಿ ವಿಜಯನಗರದ ಹರಿಹರ ಸೋಮೇಶ್ವರ ರಾಯನು ದೇವರಾಯ ಪಟ್ಟಣದ ಸಮೀಪ ಬ್ರಹ್ಮ ಎಂಬ ಗ್ರಾಮವನ್ನು ಕಟ್ಟಿಸಿ ತ್ರಿಕೂಟಾಚಲ ದೇವರ ಪೂಜಾ ಕೈಂಕರ್ಯ ನಿರ್ವಹಿಸಲು ಚಲಿಕೆರೆಗೊಲ್ಲರಹಳ್ಳಿಯನ್ನು ಉಂಬಳಿಯಾಗಿ ಕೊಟ್ಟ ವಿವರ ಬರುತ್ತದೆ. (ಪು. ೧೮೭)

ಬಸವಾಪಟ್ಟಣದ ರಾಮರಾಯ ಪೌಜು ತೆಗೆದುಕೊಂಡು ದಾಳಿ ನಡೆಸಿ ಹೊನ್ನಾಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಮುನ್ನ ಒಂದು ರಾತ್ರಿ ಸಮೀಪದ ‘ಗೊಲ್ಲರಹಳಿಯಲ್ಲಿ ಬೀಡುಬಿಟ್ಟಿದ್ದನೆಂದು ‘ಹೈದರ್ ಕೈಫಿಯತ್ತು ನಿರೂಪಿಸುತ್ತದೆ.(ಪು. ೨೦೬)

ಕುರುಗೋಡಿನ ಉತ್ತರಕ್ಕೆ ಜಿಂಕಲಹರವಿನಗುಡ್ಡ ಎಂಬ ಪ್ರದೇಶದ ಉಲ್ಲೇಖವಿದ್ದು ‘ಗೊಲ್ಲರ ಒಳಗೆ ಜಿಂಕಲವರು ಎಂಬ ಬೆಡಗಿನ ಪಾಳೇಯಗಾರರು ಉಕ್ಕಡದಲ್ಲಿ ಇದ್ದರು. ಆದ್ದರಿಂದ ಆ ಪ್ರದೇಶಕ್ಕೆ ಜಿಂಕಲಹರವಿನಗುಡ್ಡ ಎಂದು ಹೆಸರಾಯಿತು’ ಎಂಬ ಮಾಹಿತಿ ಕುರುಗೋಡು ಕೈಫಿಯತ್ತಿನಲ್ಲಿ ಲಭ್ಯವಾಗುತ್ತದೆ. (ಪು. ೪೪೧)

ಹತ್ತಿಬೆಳಗಲ್ಲು ಕೈಫಿಯತ್ತು ಗೊಲ್ಲಪಾಳೇಗಾರನೊಬ್ಬನ ಬಗ್ಗೆ ಮಹತ್ವದ ಸಂಗತಿಯೊಂದರ ಬಗ್ಗೆ ಮಹತ್ವದ ಸಂಗತಿ ಬಗ್ಗೆ ಬೆಳಕು ಚೆಲ್ಲುತ್ತದೆ. ಪಾವಡ ಮೂಲದ ಸೋಮಣ್ಣ ನೆಂಬ ಗೊಲ್ಲನು ತನಗೆ ಹತ್ತಿದ್ದ ತೊನ್ನು ರೋಗ ನಿವಾರಣೆಗಾಗಿ ಸೋಮೇಶ್ವರ ದೇವರ ಕೃಪೆಯಿಂದ ಮನಸಾನಹಳ್ಳಿ, ಹತ್ತಿಬೆಳಗಲ್ಲಿ, ಆದವಾನಿ ಮುಂತಾದ ಕಡೆ ಸೋಮೇಶ್ವರನ ಗುಡಿಯನ್ನು ಕಟ್ಟಿಸಿದ್ದಲ್ಲದೆ ಚೋಳರಾಜನ (?) ಅಪ್ಪಣೆ ಮೇರೆಗೆ ೪೦೦ ಗ್ರಾಮಗಳನ್ನು ಕಟ್ಟಿಸಿದ ವಿವರ ತಿಳಿದು ಬರುತ್ತದೆ. ಈತನು ರಾಜಾಧಿಪತ್ಯ ಮಾಡದೆ ಗೋವುಗಳ ಸಂರಕ್ಷಣೆ ಹಾಗೂ ಅವುಗಳ ಅಭಿವೃದ್ಧಿಯತ್ತಲೇ ಹೆಚ್ಚಿನ ಆಸಕ್ತಿ ವಹಿಸಿದ ಸಂಗತಿ ವಿಶೇಷವಾಗಿ ಗಮನ ಸೆಳೆಯುತ್ತದೆ. (ಪು. ೫೫೩)

ಹಿರಿಯೂರು ತಾಲ್ಲೂಕು ಹೂವಿನಹೊಳೆಯಲ್ಲಿ ಪಾತೇದೇವರ ಪ್ರತಿಷ್ಠಾಪನೆ ಹಾಗೂ ಹೂತೋಟದ ಗಾಣಿಗರ ಲಿಂಗಪ್ಪ ಪಾತೇದೇವರ ಮಹಿಮೆಯಿಂದ ಗೊಲ್ಲನಾಗಿ ಮತಾಂತರ ಹೊಂದಿದ ಸ್ವಾರಸ್ಯಕರ ಸಂಗತಿಗಳು ನಂದಿಹಳ್ಳಿ ಕೈಫಿಯತ್ತಿನಲ್ಲಿ ವಿವರಿಸಲ್ಪಟ್ಟಿದೆ. ಇದೇ ಗ್ರಾಮದ ಮತ್ತೊಂದು ಕೈಫಿಯತ್ತಿನಲ್ಲಿ ಕಾಡುಗೊಲ್ಲ ಕುಲಮೂಲ ಪುರುಷರಾದ ಚೆಂದಮತ್ತಿ ಚಿತ್ತಮತ್ತಿಯವರ ಜೀವನ ವೃತ್ತಾಂತವನ್ನು ವಿವರಿಸಲಾಗಿದೆ. (ಅಪ್ರಕಟಿತ – ಸ್ವಸಂಗ್ರಹ)

ಈವರೆಗೆ ನಿರೂಪಿಸಲಾದ ಗ್ರಂಥಸ್ಥ, ಶಾಸನೋಕ್ತ ಹಾಗೂ ಕೈಫಿಯತ್ತುಗಳಲ್ಲಿ ಲಭ್ಯವಿರುವ ಆಕರಗಳ ಆಧಾರದ ಹಿನ್ನೆಲೆಯಲ್ಲಿ ಭಾರತದಲ್ಲಿ ಗೊಲ್ಲರು ವೇದಪೂರ್ವ ಕಾಲದಿಂದಲೇ ಪಶುಪಾಲಕರಾಗಿ ವೃತ್ತಿ ಜೀವನ ಆರಂಭಿಸಿ ತದನಂತರದಲ್ಲಿ ಇತರೆ ವೃತ್ತಿಗಳನ್ನು ಅನುಸರಿಸಿ ಅಲ್ಲಲ್ಲಿ ಸಣ್ಣಸಣ್ಣ ಪಾಳೆಗಾರರಾಗಿಯೂ ಬದುಕಿದ್ದರೆಂದು ಭಾವಿಸಬಹುದಾಗಿದೆ.

ಕರ್ನಾಟಕ ಕಾಡುಗೊಲ್ಲರ ಮೂಲನೆಲೆ

ಕರ್ನಾಟಕದ ಕಾಡಗೊಲ್ಲರು ದೆಹಲಿಯಿಂದ ವಲಸೆ ಬಂದವರೆಂಬುದು ಸಮುದಾಯದೊಳಗಿನ ಪ್ರಬಲವಾದ ಐತಿಹ್ಯವಾಗಿದೆ. ದೆಹಲಿಯ ಮುಸಲ್ಮಾನ ದೊರೆಗಳಿಂದ ಕಿರುಕುಳಕ್ಕೆ ಒಳಗಾದ ಗೊಲ್ಲರು ತಮ್ಮ ಬಳಗದೊಂದಿಗೆ ದಕ್ಷಿಣಕ್ಕೆ ವಲಸೆ ಬಂದು ಕರ್ನಾಟಕದಾದ್ಯಂತ ಅಲ್ಲಲ್ಲಿ ನೆಲೆ ನಿಂತವರೆಂಬುದು ಐತಿಹ್ಯದೊಳಗಿನ ತಿರುಳು. ಸಮುದಾಯವು ಈ ಐತಿಹ್ಯವನ್ನು ದೃಢವಾಗಿ ನಂಬುತ್ತದೆ. ಈ ಸಂಬಂಧವಾಗಿ ಚಾರಿತ್ರಿಕ ಸಂಗತಿಗಳತ್ತ ಕಣ್ಣು ಹಾಯಿಸಿದಾಗ ಅನೇಕ ಹೊಸ ಸುಳುಹುಗಳು, ಸತ್ಯ ಸಂಗತಿಗಳು ಕಂಡುಬರುತ್ತವೆ.

ಭಾರತಕ್ಕೆ ಮುಸಲ್ಮಾನರ ಪ್ರವೇಶವಾದದ್ದು ಆಫ್‌ಘಾನಿಸ್ಥಾನದ ಘೋರಿ ಮಹಮದ್‌ನಿಂದ. ಈತ ಕ್ರಿ.ಶ. ೧೦೦೦ ದಿಂದ ೧೦೭೨ರ ತನಕ ಹದಿನೇಳು ಬಾರಿ ಭಾರತದ ಮೇಲೆ ದಾಳಿ ನಡೆಸುತ್ತಾನೆ. ಇವರ ದಾಳಿ ಸಿಂಧ್‌ ಬಯಲಿನಲ್ಲಿ ಕೇಂದ್ರೀಕೃತವಾಗಿರುತ್ತದೆ. ಮುಂದಿನ ಹಂತದಲ್ಲಿ ದೆಹಲಿಯನ್ನು ವಶಪಡಿಸಿಕೊಂಡು ತನ್ನ ಗುಲಾಮನಾದ ಕುತ್ಬುದ್ಧೀನ್ ಐಬಕ್‌ನನ್ನು ಕ್ರಿ.ಶ. ೧೨೦೬ರಲ್ಲಿ ಸುಲ್ತಾನನ್ನಾಗಿ ನೇಮಿಸುತ್ತಾನೆ. ದೆಹಲಿಯಲ್ಲಿ ಮುಸ್ಲಿಂ ಆಡಳಿತ ಚಾರಿತ್ರಿಕವಾಗಿ ಆರಂಭವಾಗುವುದೇ ೧೨೦೬ರ ನಂತರ ಎಂಬುದು ನಿರ್ವಿವಾದ ಸಂಗತಿ. ಈ ಕಾಲಾವಧಿಯಲ್ಲಿ ಅಲ್ಲಿನ ಗೊಲ್ಲರು ಮುಸಲ್ಮಾನ ದೊರೆಗಳ ಕಿರುಕುಳಕ್ಕೆ ಒಳಗಾಗಿ ದಕ್ಷಿಣದ ಕಡೆಗೆ ವಲಸೆ ಬಂದರೆಂಬುದು ಐತಿಹ್ಯದ ಪ್ರಕಾರ ಭಾವಿಸಬಹುದು. ಆದರೆ, ಆ ಕಾಲಕ್ಕಾಗಲೇ ಕರ್ನಾಟಕದಲ್ಲಿ ಗೊಲ್ಲರು ಇದ್ದರೆಂಬುದಕ್ಕೆ ಹತ್ತಾರು ನಿದರ್ಶನಗಳು ದೊರೆಯುತ್ತವೆ. ಅಂಥವುಗಳ ಬಗ್ಗೆ ಒಂದು ಕ್ಷಕಿರಣವನನ್ನು ಇಲ್ಲಿ ಬೀರಲಾಗಿದೆ.

ಶಾಸನೋಕ್ತ ಸಂಗತಿಗಳು

 • ಕ್ರಿ.. ೯೧೫ರ ನಂಜನಗೂಡಿನ ೧೩೯ನೇ ಶಾಸನದಲ್ಲಿ ಪೇರೊಳ್ಬೆ ಪದ ಪ್ರಯೋಗವಾಗಿದೆ. ಪೇರೊಳ್ಬೆಯೆಂದರೆ ಪಹರ ಬೇಲಿ ಎಂದರ್ಥ. ಈ ಪಹರೆ ಬೇಲಿ ಕಾಡುಗೊಲ್ಲರ ‘ಪಾರಿಬೇಲಿ’ಯ ಮೂಲ ರೂಪವಾಗಿದೆ.
 • ೯ನೇ ಶತಮಾನದ ಶಾಸನವೊಂದರಲ್ಲಿ ಗೊಟ್ಟೆರೆಯ ಎಂಬ ಶಬ್ದವಿದೆ. ಗೊಟ್ಟೆರೆಯ ಎಂದರೆ ಗೊಲ್ಲರ ಹಟ್ಟಿಯ ಯಜಮಾನನೆಂದಾಗುತ್ತದೆ. (ಮೈಅರಿ – ೧೯೨೬ – ೧೦೦ – ೮).
 • ೧೦ನೇ ಶತಮಾನದ ಶಾಸನವೊಂದರಲ್ಲಿ ತುರುಗಾಳದ ವಿವರ ಬರುತ್ತದೆ. ಅಲ್ಲಿ ಕಲ್ಲೋಜ ಹೆಗಡೆ ಮತ್ತು ಗೊಲ್ಲರ ಕೇತಯ್ಯರ ನಡುವೆ ಕಾದಾಟವಾಗುತ್ತದೆ. ಗೊಲ್ಲರ ಕೇತಯ್ಯ ಸತ್ತು ಸ್ವರ್ಗ ಸೇರುತ್ತಾನೆಂಬ ಸಂಗತಿ ತಿಳಿದು ಬರುತ್ತದೆ. (ಕ.ಇ. – ೪ – ೩೫ – ೬)
 • ಕ್ರಿ.. ೧೦೩೬ರ ಶಾಸನವೊಂದರಲ್ಲಿ ಸಿರಿಯಣ್ಣ ಎಂಬಾತನು ಚೆಂಗಾಳ್ವರೊಡನೆ ಹೋರಾಟ ಮಾಡುವಾಗ ತುರುಗಳನ್ನು, ಸ್ತ್ರೀಯರನ್ನು ರಕ್ಷಿಸಿ ತಾನು ಹೋರಾಟದಲ್ಲಿ ಮಡಿದು ಹೋಗುತ್ತಾನೆ. ಮಡಿದು ಹೋದ ಸಿರಿಯಣ್ಣ ಗೊಲ್ಲರವನಾಗಿದ್ದ.
 • ಕ್ರಿ.. ೧೨೪೯ರಲ್ಲಿ ರಚನೆಗೊಮಡಿರುವ ಬಂಡೀಪುರದ ತಮಿಳು ಶಾಸನವೊಂದರಲ್ಲಿ (ಸಂ: ೧೮೭) ದಮ್ಮಚಿತ್ತನ್ ಕೊಲ್ಲಗಾಮುಂಡನ್ ಎಂಬುವವನ ಉಲ್ಲೇಖವಿದೆ. ಪ್ರಸ್ತುತ ಶಾಸನದ ಗೊಲ್ಲಗಾ ಮುಂಡ ಎಂಬುದು ಕನ್ನಡದ ಗೊಲ್ಲಗೌಡ ಎಂಬ ತಮಿಳು ರೂಪವಾಗಿದೆ ಎಂದು ಎಂ.ಬಿ. ನೇಗಿನಹಾಳರವರು ಅಭಿಪ್ರಾಯಪಡುತ್ತಾರೆ. ಶ್ರೀಯುತರು ಮುಂದುವರಿದು ಚಾಮರಾಜಪೇಟೆ ತಾಲ್ಲೂಕಿನ ಉಮ್ಮತ್ತೂರಿನ ಶಾಸನ ಸಂಖ್ಯೆ ೧೦೨ರಲ್ಲಿ ಕೊಲ್ಲ(ಗೊಲ್ಲ) ಗೌಂಡನಪುರ ಎಂಬ ಗ್ರಾಮದ ಹೆಸರಿದೆಯೆಂದು ತಿಳಿಸಿದ್ದಾರೆ.

ಕನ್ನಡ ಗ್ರಂಥಸ್ಥ ಆಕರಗಳು

 • ಶಿವಕೋಟ್ಯಾಚಾರ್ಯನ (ಕ್ರಿ.. ೯೨೦) ವಡ್ಡಾರಾಧನೆ ಕೃತಿಯಲ್ಲಿ ಗೊಲ್ಲಗೇರಿ ವರ್ಣನೆ ಬರುತ್ತದೆ.
 • ಆದಿಕವಿ ಪಂಪ(ಕ್ರಿ.. ೯೨೦) ವಿಕ್ರಮಾರ್ಜುನ ವಿಜಯದಲ್ಲಿ ಗೋವಳ ಪದ ಪ್ರಯೋಗವಿರುವುದು ಕಂಡುಬರುತ್ತದೆ. (೬ – ೪೭).
 • ಪೊನ್ನ (ಕ್ರಿ.. ೯೨೦) ಶಾಂತಿಪುರಾಣದಲ್ಲಿ ಗೊಲ್ಲಣಿಗ ಎಂಬ ಶಬ್ದ ಬಳಕೆಯಾಗಿದೆ. ವಿಶೇಷವಾಗಿ ಹೆಣೆದ ಬೆರಗುಗಳನ್ನು ಗೊಲ್ಲಣಿಗೆ ಎಂದು ಗೊಲ್ಲರಲ್ಲಿ ಕರೆಲಾಗುತ್ತದೆ.
 • ನಯಸೇನ(ಕ್ರಿ.. ೧೦೫೩) ಧರ್ಮಾಮೃತಂ ಕಾವ್ಯದಲ್ಲಿ ಗೋವಳರ ಪ್ರಸ್ತಾಪ ಬರುತ್ತದೆ. ಕಾಡಲ್ಲಿ ದನಕಾಯುವ ಗೊಲ್ಲರಿಂದ ಕಾವ್ಯನಾಯಕ ಸೋಮದತ್ತ ಎಂಬುವವನು ಮಾವಿನಹಣ್ಣಿನ ಬಗ್ಗೆ ಮಾಹಿತಿ ಪಡೆದುಕೊಳ್ಳುವ ವಿವರಗಳು ಬರುತ್ತದೆ. ಇದಲ್ಲದೆ ಗೋವಿಂದ ಎಂಬ ಗೊಲ್ಲ ಕುಟುಂಬ ಹಾಗೂ ಗೊಲ್ಲರ ಹಟ್ಟಿಯ ಜನಜೀವನ ಕುರಿತಂತೆ ವಿವರಗಳು ಲಭ್ಯವಾಗುತ್ತವೆ.
 • ಶಾಂತಿನಾಥ (ಕ್ರಿ.. ೧೦೬೩) ಸುಕುಮಾರಚರಿತಂ ಕಾವ್ಯದಲ್ಲಿ ಚಂದ್ರವಾಹನ ಎಂಬ ಅರಸನ ಕಿಲಾರಿಯೊಬ್ಬ ಗೊಲ್ಲರಹಟ್ಟಿಯೊಂದಕ್ಕೆ ನುಗ್ಗಿ ಗೊಲ್ಲರನ್ನು ಬೆದರಿಸಿ ಅವರ ಗೋವುಗಳನ್ನು ಮತ್ತು ಎಮ್ಮೆಗಳನ್ನು ಹೊಡಕೊಂಡು ಬಂದು ರಾಜನಲ್ಲಿ ತನ್ನ ಹುಸಿ ಪೌರುಷವನ್ನು ಹೇಳಿಕೊಂಡು ರಾಜನಿಂದ ಮೆಚ್ಚುಗೆಯನ್ನು ಪಡೆಯುವ ಪ್ರಸಂಗವೊಂದು ಪ್ರಸ್ತಾಪಿಸಲ್ಪಟ್ಟಿದೆ. (೭ – ೩೫ – ಎ)
 • ರುದ್ರಭಟ್ಟ(ಕ್ರಿ.. ೧೧೪೦) ಜಗನಾಥವಿಜಯ ಕಾವ್ಯದಲ್ಲಿ ೫ನೇ ಆಶ್ವಾಸದಲ್ಲಿ ಗೊಲ್ಲರ ಗೋಪಾಲನೆ, ಗೊಲ್ಲತಿಯರ ರೂಪಲಾವಣ್ಯವನ್ನು ಕವಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ.
 • ಬ್ರಹ್ಮಶಿವ (ಕ್ರಿ.. ೧೧೫೦) ಸಮಯಪರೀಕ್ಷೆಯಲ್ಲಿ ಗ್ರಾಮದೇವರುಗಳನ್ನು ಕ್ಷುದ್ರದೇವತೆಗಳೆಂದು ಹೆಸರಿಸುತ್ತಾನೆ. ಅವನು ಹೆಸರಿಸುವ ಕ್ಷುದ್ರದೇವರುಗಳ ಪಟ್ಟಿಯಲ್ಲಿ ಕೇತಂ, ಕೌಟಿಲ ಎಂಬ ಎರಡು ದೇವತೆಗಳಿದ್ದಾರೆ. ಇವರು ಕಾಡುಗೊಲ್ಲರ ಕ್ಯಾತಪ್ಪ (ಕೇತಲಿಂಗ), ಕಾಟಪ್ಪ (ಕಾಟಮಲಿಂಗ) ದೇವರುಗಳಾಗಿರುತ್ತವೆ.
 • ನೇಮೀಚಂದ್ರ(ಕ್ರಿ.. ೧೧೭೦) ನೇಮಿನಾಥಪುರಾಣಂನಲ್ಲಿ ತುರುಪಟ್ಟಿಯ ವಿವರಗಳು ಬರುತ್ತವೆ. (೭ – ೫೦). ಇದೇ ಕವಿಯು ಲೀಲಾವತಿ ಪ್ರಬಂಧಂ ಕಾವ್ಯದಲ್ಲಿ ೫ನೇ ಆಶ್ವಾಸದ ೮೦ನೇ ಪದ್ಯದಿಂದ ೧೧೩ನೇ ಪದ್ಯದವರೆಗೆ ಅಂದಿನ ಗೊಲ್ಲರ ಬದುಕಿನ ಬಗ್ಗೆ ಯಥೇಚ್ಛ ವಿವರಗಳು ಲಭ್ಯವಾಗುತ್ತವೆ.
 • ೧೨ನೇ ಶತಮಾನದ ಶಿವಶರಣರ ವಚನಗಳಲ್ಲಿ ಗೊಲ್ಲ ಪದ ಬಳಕೆ ಹೇರಳವಾಗಿ ಲಭ್ಯವಾಗುತ್ತದೆ. ಸೊಡ್ಡಳ ಬಾಚರಸ ಎಂಬ ಶರಣ ಹದಿನೆಂಟು ಜಾತಿಗಳನ್ನು ಪ್ರಸ್ತಾಪಿಸುತ್ತಾ ಅವುಗಳ ಪಟ್ಟಿಯಲ್ಲಿ ಗೊಲ್ಲ ಜಾತಿಯನ್ನು ಸೇರಿಸಿದ್ದಾನೆ. ದೇಹದ ವಿವಿಧ ಅಂಗಗಳಿಗೆ ಒಂದೊಂದು ಜಾತಿಯನ್ನು ಹೆಸರಿಸಿದ್ದಾನೆ. ಗೊಲ್ಲ ಜಾತಿಯನ್ನು ದೇಹದ ಕಿವಿಗೆ ಅನ್ವಯಿಸಿದ್ದಾನೆ.
 • ತುರುಗಾಹಿ ರಾಮಣ್ಣ ಗೊಲ್ಲ ಜಾತಿಯ ಶರಣನೆಂದು ಗುರುತಿಸಲ್ಪಟ್ಟಿದ್ದಾನೆ.
 • ಬಸವಣ್ಣನವರ (ಕ್ರಿ.. ೧೧೩೨೧೧೬೮) ಅನೇಕ ವಚನಗಳಲ್ಲಿ ಗೊಲ್ಲ ಶಬ್ದ ಹೆಚ್ಚಿನದಾಗಿ ಕಂಡುಬರುತ್ತದೆ.

ಭಾಷಿಕ ಅಂಶಗಳು

 • ಕಾಡುಗೊಲ್ಲರ ಮನೆಮಾತು ಅಚ್ಚಗನ್ನಡ. ನೆರೆರಾಜ್ಯ ಆಂಧ್ರ ಪ್ರದೇಶದ ಅನಂತಪುರ, ಹಿಂದೂಪುರ ಜಿಲ್ಲೆಗಳಲ್ಲಿ ಕಾಡುಗೊಲ್ಲರ ಮನೆಮಾತೂ ಕೂಡ ಕನ್ನಡವೇ ಆಗಿರುತ್ತದೆ. ಅವರ ಸಾಂಪ್ರದಾಯಿಕ ಆಚರಣಾತ್ಮಕ ಬೇರುಗಳು ಕರ್ನಾಟಕದ ಕಾಡುಗೊಲ್ಲರ ಗುಡಿಕಟ್ಟು ಕಟ್ಟೆಮನೆಗಳಲ್ಲಿ ಹಬ್ಬಿಕೊಂಡಿವೆ.
 • ಕಾಡುಗೊಲ್ಲರ ಬೆಡಗುಗಳ ಹೆಸರುಗಳಾದ ಕಲ್ಡೇರ, ಸನ್ನೋರು, ಅಜ್ಜೇರು, ಕಂಬೇರು, ಕ್ವಾಣ್ಣೋರು, ಬಾಲ್ನೋರು ಹಾಗೂ ವ್ಯಕ್ತಿ ಹೆಸರುಗಳಾದ ಸಿರಿಯಣ್ಣ, ಕರಿಯಣ್ಣ, ಮಲೆಗೊಂಡ, ಚಿಕ್ಕಣ್ಣ, ಕಾಟಪ್ಪ, ಸಿತ್ತಪ್ಪ ಮೊದಲಾದವುಗಳು ಕನ್ನಡ ಮೂಲದ್ದಾಗಿರುತ್ತವೆ.
 • ಕನ್ನಡ ಅಂಕಿತ ನಾಮಗಳಲ್ಲಿ ಪುಲ್ಲಿಂಗ ಸ್ತ್ರೀಲಿಂಗವಾಗಿ, ಸ್ತ್ರೀಲಿಂಗ ಪುಲ್ಲಿಂಗವಾಗಿ ಪರಿವರ್ತನೆಯಾಗುವುದಿದೆ. ಈ ಸೂತ್ರ ಗೊಲ್ಲರ ಅಂಕಿತನಾಮಗಳಿಗೆ ಯಥಾ ರೀತಿಯಲ್ಲಿ ಅನ್ವಯವಾಗುತ್ತದೆ.
 • ಅಪ್ಪ, ಅಮ್ಮ, ಅಣ್ಣ, ಅಕ್ಕ, ಅತ್ತೆ, ಮಾಮ ಈ ಮೊದಲಾದ ಕುಟುಂಬವಾಚಿ ರಕ್ತ ಸಂಬಂಧ ಪದಗಳು ದ್ರಾವಿಡ ಸಂಸ್ಕ್ರತಿಯ ಬಹುಮುಖ್ಯವಾದ ಅಂಶಗಳಲ್ಲಿ ಒಂದು. ಇದನ್ನು ಕಾಡುಗೊಲ್ಲರಲ್ಲಿಯೂ ಕಾಣಬಹುದು.
 • ಕಾಡುಗೊಲ್ಲರ ಕಾವ್ಯಗಳಲ್ಲಿ ಕನ್ನಡದೇಸಿ ಪದಗಳು ವಿಜೃಂಬಿಸಿವೆ.

ಈ ಎಲ್ಲಾ ಆಕರಗಳನ್ನು, ನಿದರ್ಶನಗಳನ್ನು ಸಮೀಕರಿಸಿ ನೋಡಿದಾಗ ತಿಳಿದುಬರುವ ಸಂಗತಿ ಎಂದರೆ, ಮುಸಲ್ಮಾನ ದೊರೆಗಳು ದೆಹಲಿಗೆ ಬರುವ ಮುನ್ನವೇ ಕರ್ನಾಟಕದಲ್ಲಿ ಗೊಲ್ಲರು ನೆಲೆಯಾಗಿ ಇದ್ದರು. ಹಾಗಾಗಿ ಕರ್ನಾಟಕದ ಕಾಡುಗೊಲ್ಲರು ದೆಹಲಿಯಿಂದ ವಲಸೆ ಬಂದವರಾಗಿರದೆ ಕನ್ನಡ ನೆಲಜನ್ಯಸ್ತಬುಡಕಟ್ಟು ಎಂಬ ಖಚಿತ ನಿಲುವಿಗೆ ಬರಬಹುದಾಗಿದೆ.

ಗೊಲ್ಲ ಸಮುದಾಯ ವೇದಕಾಲದಿಂದ ಅಸ್ತಿತ್ವದಲ್ಲಿದ್ದುದು ಲಿಖಿತ ಆಕರಗಳಿಂದ ತಿಳಿದುಬರುತ್ತವೆ. ಭಾರತದ ಲಿಖಿತ ಆಕರಗಳಿಗೆ ವೇದಗಳೇ ಆದಿಯಾದರೂ, ಮೌಖಿಕ ಪರಂಪರೆಯನ್ನು ವೇದಪೂರ್ವ ಕಾಲಕ್ಕೆ ಕೊಂಡೊಯ್ಯಬಹುದು. ಭಾರತದ ನಿಜ ಪರಂಪರೆಯಿರುವುದು ನೆಲಮೂಲಿಗರ ಮೌಖಿಕ ಸಂಕಥನಗಳಲ್ಲಿ. ಈ ಹಿನ್ನೆಲೆಯಲ್ಲಿ ಮೌಖಿಕ ಪರಂಪರೆಯನ್ನೇ ಜೀವಳವಾಗಿಸಿಕೊಂಡಿರುವ ಗೊಲ್ಲರ ಇತಿಹಾಸಕ್ಕೆ ಈ ಪರಂಪರೆಯ ದಾಖಲೆಗಳು ಲಭ್ಯವಾದಲ್ಲಿ ಇವರ ಚರಿತ್ರೆ ಮತ್ತಷ್ಟು ಗಟ್ಟಿಗೊಳ್ಳುವುದು.

[1] ಪ್ರೊ ಬಿ. ಲಕ್ಷಣ್‌ತಲಗಾವಿ – ಹುಲ್ಲೂರು ಶ್ರೀನಿವಾಸ ಜೋಯಿಸರು ಸಂಶೋಧನಾ ಲೇಖನಗಳು

[2] ಎಂ. ಬಿ. ನೇಗಿನಹಾಳ ಪ್ರಭಂದಗಳು – ಪ್ರಸಾರಾಂಗ ಹಂಪಿ ವಿ.ವಿ.

[3] ಡಾ ಎಂ.ಚಿದಾನಂದ ಮೂರ್ತಿ – ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. (ಪು – ೩೫೫)

[4] ಲಕ್ಷ್ಮಣ್ ತೆಲಗಾವಿ – ಜೀವಧಾರೆ – ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಪು – ೨೯

[5] ಹೆಚ್. ಎಲ್. ನಾಗೇಗೌಡ – ಪ್ರವಾಸಿ ಕಂಡ ಇಂಡಿಯಾ, (ಸಂಪುಟ – ೧, ಪು – ೩೬)

[6] ಅದೇ – (ಪು – ೪೪೧)

[7] ಅದೇ – (ಸಂಪುಟ – ೭. ಪು – ೨೮೯)

[8] ಡಾ. ಎಂ.ಎಂ. ಕಲಬುರ್ಗಿ – ಕರ್ನಾಟಕ ಕೈಫಿಯತ್ತುಗಳು.