ಅದೆ ಬಂದ ಕುಮಾರ ಮಲ್ಲ ಎನುತ ದಂಡು
ಬೆದರಿ ತಮ್ಮೊಳು ಕಡಿದಾಡಿ
ಮದದಾನೆ ಕುದುರೆ ಕಾಲೊಳು ತುಳಿದು ಮಂದಿ
ಮಡದವು ತೊಂಭತ್ತು ಸಾಸಿರವು                 ||೪೫||

ಬೆರಗಾದನು ನರಸಿಂಹ ಸಾಹಸಕೆಲ್ಲ
ಗರುವ ಈ ಕುಮಾರ ಮಲ್ಲ
ಕುರುಹನು ನಾನರಿಯೆ ಅವನ ತೋರೆನುತಲಿ
ನರಸಿಂಹ ಬಂದು ನೋಡಿದರೆ                     ||೪೬||

[ದ]ಕ್ಕಿಸಿಕೊಂಡ ನನ್ನ ಗಂಡನೆಂಬುವದನು
ದಿಕ್ಕಿನೊಳಗೆ ಗೊಲ್ಲ ಸಿರುಮ
ಸಿಕ್ಕಿದುದಿನ್ನೆಳ್ಳನಿತಿಲ್ಲ ಬಿರಿದೆಂದು ರಾಯ
ಅಕ್ಕರಿಂದಲಿ [ನುಡಿದನು]                           ||೪೭||

ಆನೆ ಕುದುರೆ ಮಂದಿ ಆಶ್ಚರ್ಯವನೆ ಕಂಡು
ಏನು ಗಳಿಸಿ ಫಲವೇನು?
ಭಾನುಚಂದ್ರರುಳ್ಳನಕ ಕೀರ್ತಿಯ
ತಾನು ರಾಜ್ಯದಲ್ಲಿ ಪಡೆದ                           ||೪೮||

. . . . . . .ಮಲ್ಲಭೂಪ ಗಾಯ ಸೊಕ್ಕಿನಲ್ಲಿ
ಖೋ ಎಂದು ಕೂಗಿ ಬೊಬ್ಬಿರಿದು
ಆ ವೇಳ್ಯೆಯದಿ ಪ್ರಧಾನನು ಹಿಡಿ
ದಾಯುಧಗಳು ಬಿದ್ದಿರಲು                           ||೪೯||

ಕತ್ತಿ ಕ . . . . . . .ಕಿ ಜಮದಾಡೆಯು
ಅತ್ತಿತ್ತ ಬಂದು ಬಿದ್ದಿರಲು
ಮೊತ್ತದಿ ಬೇಗ ತೆಕ್ಕೊಂಡು ಮಲ್ಲಣ್ಣನು
ಮತ್ತೆ ಪ್ರಧಾನರೊಡಗೂಡಿ                          ||೫೦||

ಸಾವಿಗೆ ಸಂಗಡವಾದಿರಿ ನೀವಿಬ್ಬರು
ಅಹ ಕಲ್ಲರಸ ಲಿಂಗರಸ
ನಾವು ಹೋಗುವವೇಳಿ ಸಿರುಮ ದಾರಿಯ ನೋಳ್ವ
ಆವಾಗ ಬಹರೆಂದೆನುತ                             ||೫೧||

ಒತ್ತರದ ಗಾಯವ ಕಂಡು ಮಲ್ಲಣ್ಣ
ಎತ್ತಿಕೊಂಡನು ಮಂತ್ರಿಗಳ
ಮತ್ತೆ ಕೊಂಡಕೆ ಹೊಂದಿ ಖೋ ಎಂದು ಕೂಗುತ
ಮೃತ್ಯುಂಜಯ ಜಯ ಎನುತ                      ||೫೨||

ತಂದೆ ತಾಯಿ ಅಣ್ಣ ತಮ್ಮ ಬಂಧುಗಳಿರ
ಅಂದು ನಿಮಗೆ ಕೊಟ್ಟಪ್ಪಣೆಗೆ
ಇಂದು ಕಲ್ಲರಸ ಲಿಂಗರಸ ನಾನು ಸಹವಾಗಿ
ಬಂದೆವೆನುತ ಧುಮುಕಿದನು                       ||೫೩||

ಕೊಂಡಕೆ ಬೀಳುವ ಕೊಮಾರ ಮಲ್ಲಣ್ಣನ
ಕೆಂಡಗಣ್ಣನು ಪಿಡಿದೆತ್ತಿ
ಗಂಡುಗಳರಸನೆ ಬಾಳು ಬಾಳೆಂದು
ಮಂಡೆಯ ಪಿಡಿದಲುಗಿದನು                        ||೫೪||

ನೆರದು [1][ಬಾನೊಳು] ನಾರದ ಬ್ರಹ್ಮರುಷಿಗಳು
ಗರುಡ ತುಂಬುರ ಗಣಕುಲವು
ಸಿರುಮನ ಮಗ ಮಲ್ಲನ ಸಾಹಸಕೆ ಮೆಚ್ಚಿ
ಸುರಿದರು ಹೂವಿನ ಮಳೆಯ                       ||೫೫||

ಆ ವೇಳೆಯದಿ ಈಶ್ವರ ಪಾರ್ವತಿಯ ಕರಸಿ
ಯೋಚಿಸಿದನು ಪ್ರಮಥಗಣರೊಡನೆ
ದೇಶಕಗ್ಗಳೆಯಾಗಬೇಕಂದು ಗೊಲ್ಲಗೆ
ಸೂಸಿ ಹೂವಿನ ಮಳೆಗರೆಸಿ             ||೫೬||

ನಿಮ್ಮ ವೀರಶೈವಕೆ ನಾ ಮೆಚ್ಚಿದೆ
ಗಮ್ಮನೆ ವರವ ಬೇಡೆನಲು
ತಮ್ಮ ತಾಯಿ ಸತಿ ಸುತರುಗಳನು
ನಿಮ್ಮ ಪಾದಕೆ ಕೊಂಡೊಯ್ಯೋದೆ                ||೫೭||

ಹಿರಿಯ ಸೋಮಣ್ಣನು ಹಾರುವ ಕಲ್ಲರಸ
ಕಿರಿಯ ವೀರಣ್ಣ ಲಿಂಗರಸ
ಧುರಧೀರ ಕಾಚನು ಹೆಮ್ಮಕ್ಕಳು ಸಹ
ಹರಗಿರಿಗೊಯ್ಯಬೇಕೆಂದ                            ||೫೮||

[ವಂ]ದಿಸಿ ಬಿನ್ನಹ ಮಾಡೆ ಮಲ್ಲೇಂದ್ರನು
ಕೆಂಡಗಣ್ಣನ ಪಾದಕೆರಗಿ
ಪುಂಡರೀಕಾಕ್ಷನಮಿತ ಜಯ ಜಯ ಎಂದು
ದಿಂಡುಗೆಡದು ಹೊರಳಿದರು                        ||೫೯||

ಮಂಡೆಯ ಪಿಡಿದೆತ್ತಿ ಮಲ್ಲಭೂಪನು ತನ್ನ
ಮಂಡೆಯೊಳಿಹ ಗಂಗೆಯನು
ಕೊಂಡದೊಳಗೆ ತಳಿಯದ ಮುನ್ನ ಸಿರುಮಣ್ಣ
ದಿಂಡುಗೆಡದು ಹೊರಳಿದನು                       ||೬೦||

ಅಂದು ರಕ್ಕಸಿ ಸೌಂದರ್ಯನ ಮಾರ್ಬಲವ
ತಿಂದವರುಳಿದು ಬಂದಂತೆ
ಇಂದು ಕೊಂಡಕೆ ಬಿದ್ದವರೊಬ್ಬ[ರು]ಳಿಯದೆ
ಬಂದು ಪಾದಕೆರಗಿದರು                             ||೬೧||

ಸಿರುಮಣ್ಣ ನಾಯ್ಕನವರ ಸತಿಸುತರೆಲ್ಲರ
ಪುರಕೊಯ್ವೆನೆಂದ ಈಶ್ವರನು
ಭರದಿಂದ ಪುಷ್ಪಕ ತರಿಸಿ ಸಿರುಮ ನಿನ್ನ
ವರ ಕುವರರು ಸಹಿತ ತೆರಳೆಂದ                  ||೬೨||

ಎಂದ ಮಾತನು ಕೇಳುವ ಸಿರುಮ ತನ್ನ
ಬಂಧು ಬಳಗ ಸಹವಾಗಿ
ಕಂದ ಮಲ್ಲ ಕಾಚ ಸೋಮಣ್ಣ ವೀರಣ್ಣ ಸಹ
ಬಂದು ಪುಷ್ಪಕವನೇರಿದರು                         ||೬೩||

ಉಘೆ ಉಘೆ ಎನುತ ಪುಷ್ಪ[ಕ] ಆಕಾಶಕೆ
ನೆಗೆದು ಧೂಪದ ಹೊಗೆಯಿಂದ
ಗಗನಕೆ ಜಿಗಿದು ಕೈಲಾಸವ ಹೊಕ್ಕರು
ಅಘಹರನ ಮನೆಗಾಗಿ                                ||೬೪||

ಬೂದಿಹಾಳ ಸಿರುಮಣ್ಣ ಬರುತಹನೆಂದು
ಇದಿರ ಬಂದರು ರಾಯರುಗಳು
ಮೇದಿನಿಪತಿ ಚೋಳ [ಚೇ]ರುಮ ಗುಂಡಬ್ರಹ್ಮ
ಕ್ರೋಧಿ ಚಿಕ್ಕಯ್ಯ ರಾಮಯ್ಯ                       ||೬೫||

ವೀರಶೈವದಿ ಮಡಿದ ರಾಯರುಗಳು
ಭೋರನೆ ಬಂದು ಸಿರುಮನ
ಹಾಯ್ದು ತರ್ಕ್ಕೈಸಿ ಕೈಲಾಗುಗಳಿಗೆಗೊಟ್ಟು
ಮಾದೇವನೆಡೆಗೈದಿದರು                            ||೬೬||

ಬಂದ ಸಿರುಮನಿಗೆ ಗಂಧವೀಳ್ಯವನಿತ್ತು
ಇಂದು ನಿನ್ನಯ ಭಕ್ತಿದೃಢಕೆ
ಒಂದಾರು ಭುಜವಾಗಿ ಮೆಚ್ಚಿದೆನೆಂದು ಶಿವ
ನಂದು ಶರಣರಿಗೆ ತೋರಿದರು                    ||೬೭||

ನೋಡಯ್ಯ ವೀರೇಶ ನೋಡಯ್ಯ ಭೃಂಗೀಶ
ನೋಡು ಷಣ್ಮುಖ ಗಜಮುಖನೆ
ನೋಡಯ್ಯ ನಂದೀಶ ನೋಡಯ್ಯ ಗುಹಗಣ
ನೋಡಿ ಸಿರುಮನ ಸಾಹಸವ                      ||೬೮||

ಎಂದು ಕೊಂಡಾಡಿ ಸಿರುಮನ ಸುತರು ಸಹ
ಚೆಂದದಿ ನಮ್ಮ ಬಾಗಿಲಲಿ
ಕುಂದದೆ ಸಾಯುಜ್ಯ ಪದವಿಯಾಗಿರಲೆಂದು
ನಿಂದಭಯವನಿತ್ತನಾಗ                              ||೬೯||

ಇತ್ತ ನರಸಿಂಹರಾಯ ಈಶ್ವರಿನಾಯಕ
ಹತ್ತಿ ನೋಡಲು ಅರಮನೆಯ
ಚಿತ್ರದ ಗೋಡೆಲ್ಲ ಕೆತ್ತಿ ಸುಟ್ಟಿರಲಾಗಿ
ಪೃಥ್ವಿಪತಿಯು ಬೆರಗಾದ                             ||೭೦||

ಮುತ್ತು ಮಾಣಿಕ ವಜ್ರ ವೈಢೂರ್ಯವ
ಅರ್ತಿಯ ಲಾಯದ ಕುದುರೆ
ಮೊತ್ತದ ಭಂಡಾರ ಬೊಕ್ಕಸಗಳನೆಲ್ಲ
ಹೊತ್ತಿ ಹೋದುದ ಕಂಡನಾಗ                      ||೭೧||

ಬೇಗದಿ ನರಸಿಂಹರಾಯ ಸಿರುಮೇಂದ್ರನ
ಅರಮನೆಯನು ಹೊಕ್ಕು ನೋಡಿ
ಇರುವೆ ಕಾಲಷ್ಟು ವಚ್ಛೆವಿಲ್ಲವು ಎಂದು
ಬೆರಗಾಗಿ ನರಸಿಂಹ ನುಡಿದ                       ||೭೨||

ಇವನೀಗ ವಿಕ್ರಮನೃಪ ಸಿರುಮೇಂದ್ರನು
ಇವನಿಗೆ ಸಲುವದು ಬಿರಿದು
ಇವನು ಹೆಣಗಿ ಕಪ್ಪವ ಕೊಡದಿಹುದೆಂದು
ವಿವರಿಸಿದನು ದೊರೆಗಳಿಗೆ                          ||೭೩||

ಇವನು ಪೂರ್ವದಲಿ ಈಶ್ವರ ನಿಜಭಕ್ತನು
ಇವಗೆ ಸಲುವುದು ಸಾಯುಜ್ಯ[ಭು]ವನವರಿಯೆ ಕೈವಲ್ಯವಾಯ್ತೆಂದು
ಅವನೀಶ ನಮೋ ನಮೋ ಎಂದ                  ||೭೪||

ಎಂದಿಗೆ ಮುಂದರಿಯದೆ ಈಶಭಕ್ತನ ನೋಯಿಸಿದೆ
ಎಂದಿಗೆ ಕಳೆವೆನೀ ಭವವ [ಎ]ಂದು
ಈಶ್ವರಿನಾಯ್ಕಗೆ ನರಸಿಂಹನು
ನೊಂದು ಮನದಿ ಮರುಗಿದನು                    ||೭೫||

ಈಶಭಕ್ತನ ವೀರಶ್‌ಐವದಿ ಮಡುಹಿದೆ
ಇನ್ನೇನು ಸುಖದ ಪಾತಕನೊ
ಕಾಶಿಕೇತಾರ ಕು[ರು]ಕ್ಷೇತ್ರದಲಿ ನಮ್ಮ
ದೋಷವ ಪರಿಹರಿಸುವೆನು                         ||೭೬||

ಇವನೀಗ ಈಶ್ವರನ ಪೂಜೆ ಮಾಡಿದ ಭಕ್ತ
ಇವನೀಗ  ವೀರಶೈವದವನು
ಇವನಿಗೆ ಸಲುವುದು ಕೈವಲ್ಯಪದವಿಯು
ಭುವ[ನೇ]ಶ ತಾ ಮರುಗಿದನು                    ||೭೭||

ಮೇದಿನಿಪತಿಗಾಗ ಈಶ್ವರನಾಯಕನೆಂದ
ಆದಿಲಿಂಗವ ನಿರ್ಮಿಸಿಯೆ
ಗೋದಾನ ಕನ್ಯಾದಾನ ಭೂದಾನಗಳಿಂದಲಿ
ಸಾಧಿಸಿಕೊಂಬ ಮುಕ್ತಿಯನು                       ||೭೮||

ಹರುಷದಲಾ ಮಾತ ಕೇಳುತ ನರಸಿಂಹ
ಕರಸಿದ ಕಾಮಾಟದವರ
ಭರದಿಂದ ಕೊಂಡವ ಹೂಣಿಸದರ ಮೇಲೆ
ಗಿರಿ ಗೋಪುರ ಕಟ್ಟಿಸಿದನು                          ||೭೯||

ಆ ಗೋಪುರದೊಳು ಆದಿಲಿಂಗವನಿಟ್ಟು
ನಾಗಭೂಷಣ ಜಯ ಎನುತ
ಬೇಗ ಠಾಣ್ಯಕೆ ರುದ್ರರಾಜನೆಂಬನಿಟ್ಟು
ಸಾಗಿದ ವಿಜಯನಗರಕೆ                             ||೮೦||

ಕಾಳೆ ಹೆಗ್ಯಾಳೆ ಡೊಳ್ಳು ಮೃತಾಪವು
ಸೂಳೈಸಲು ಭೇರಿಗಳು
ಪಾಳೆಯವನು ಬಿಟ್ಟಲ್ಲಿ ಬಿಡದೆ ಬಂದ
ಸಾಳುವ ನರಸಿಂಗರಾಯ                          ||೮೧||

ಬಂದು ಪಂಪಾಲಿಂಗಗೊಂದನೆಯನು ಮಾಡಿ
ಚಂದ್ರಶೇಖರ ಗತಿ ಎನುತ
ಕುಂದದೆ ನರಸಿಂಹ ವಿಜಯನಗರದೊಳು
ನಿಂದಲ್ಲಿ ಸಂಧಿ ಪೂರಾಯ                          ||೮೨||

ಈ ಸಿರುಮನ ಸಾಂಗತ್ಯವ ಕೇಳು ವಿಧಿ
ನಾಶವಹುದು ಭವ ಹಿಂಗುವದು
ಬೇಸರದೆ ಓದಿ ಪಠಿಸಿದರೆ ಪಾಪ
ನಾಶವಹುದು ನಿಮುಷದಲಿ                         ||೮೩||

ವೃತ್ತ|| ಕ್ಷಿತಿಯೊಳು ಕೇಳುವ ಶರಣಜನರ ಸಂತೋಷ
ಕೃತಿಯಿದು ಬೂದಿಹಾಳ ಸಿರುಮ ಕಾದಿದ ದಿವ್ಯಪ್ರಕಾಶ
ಸ್ತುತಿಸಿದ ಶಿವಲೀಲೆ ವೀರನ ಮಗ ಮಲ್ಲೇಶ ಅತಿ
ಹಿತದಿ ಜಗಜೀವಿತರ ಸಲಹುವ ಅಸಗೋಡ ಶಂಭುಮಲ್ಲೇಶ[2]                 ||೮೪||

ಶ್ರೀ ಶ್ರೀ ಶ್ರೀ[1] ೫-೫ ಬಾರಜ (ಶಿ)

[2] . ಅಂತು ಸಂದಿ ೬ಕ್ಕೆ ಪದನು ೧೦೫೩ಕ್ಕಂ ಮಂಗಳಮಹಾ ಶ್ರೀ ಶ್ರೀ ಶ್ರೀ ಗೊಲ್ಲ ಸಿರುಮನ ಸಾಂಗತ್ಯ ಸಮಾಪ್ತ.