ಪ್ರಾಚೀನ ಕೃತಿಗಳ ಸಂಪಾದನಕಾರ್ಯ ಮತ್ತು ರಮ್ಯಸಾಹಿತ್ಯದ ಸೃಷ್ಟಿಕಾರ್ಯಗಳು ನಮ್ಮ ನಾಡಿನಲ್ಲಿ ಏಕಕಾಲಕ್ಕೆ ಪ್ರಾರಂಭವಾದವು. ಈ ರಮ್ಯಧೋರಣೆಯಿಂದಾಗಿ ಪ್ರಾಚೀನ ರಸವತ್ತಾದ ಕೃತಿಗಳನ್ನು ಪ್ರಕಟಿಸುವ ಮತ್ತು ಅವುಗಳನ್ನು ರಸದೃಷ್ಟಿಯಿಂದ ಅಭ್ಯಸಿಸುವ ಒಲವು ನಮ್ಮಲ್ಲಿ ಬೆಳೆದು, ಚಾರಿತ್ರಿಕ ಕೃತಿಗಳನ್ನು ಪ್ರಕಟಿಸುವ ಮತ್ತು ಅವುಗಳನ್ನು ಚಾರಿತ್ರಿಕ ದೃಷ್ಟಿಯಿಂದ ಅಭ್ಯಸಿಸುವ ಒಲವುಗಳು ಕುಂಠಿತವಾದವು. ಪ್ರಕಟವಾದ ಒಂದೆರಡು ಚಾರಿತ್ರಿಕ ಕೃತಿಗಳನ್ನೂ ರಸದೃಷ್ಟಿಯಿಂದ ಅಭ್ಯಸಿಸುವಲ್ಲಿ ಚಾರಿತ್ರಿಕ ಅಧ್ಯಯನ ಇಲ್ಲಿ ಮತ್ತೂ ಅಲಕ್ಷಿತವಾಯಿತು. ಈ ಕೊರತೆಯನ್ನು ಇಂದು ನಾವು ತುಂಬಿಕೊಳ್ಳಬೇಕಾಗಿದೆ.

ಕೆಲವು ವರ್ಷಗಳ ಹಿಂದೆ ಕರ್ನಾಟಕ ಕವಿಚರಿತೆ ಮತ್ತು ಕನ್ನಡ ಹಸ್ತಪ್ರತಿಸೂಚಿಗಳನ್ನು ಓದುತ್ತಿರುವಾಗ ನಮ್ಮ ಕಾವ್ಯಗಳನ್ನು ಚಾರಿತ್ರಿಕ ದೃಷ್ಟಿಯಿಂದ ಅಭ್ಯಿಸಿಸುವುದು ಮತ್ತು ಚಾರಿತ್ರಿಕ ಕೃತಿಗಳನ್ನು ಪ್ರಕಟಿಸುವುದು ತೀರ ಅವಶ್ಯವೆನಿಸಿತು. ಈ ವಿಚಾರಗಳಿಂದ ಪ್ರೇರಿತವಾಗಿ “ಕರ್ನಾಟಕದ ಕೈಫಿಯತ್ತುಗಳ ಶೋಧ ಮತ್ತು ಪ್ರಕಟನ ಯೋಜನೆ”ಯನ್ನು ಕೈಗೆತ್ತಿಕೊಂಡು, ಕ್ರಮೇಣ “ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ” “ನಿಂಬ ಸಾಂತಚರಿತೆ”, “ಸಿರುಮಣನಾಯಕನ ಸಾಂಗತ್ಯ”. “ಸಿರುಮನ ಚರಿತೆ”ಗಳನ್ನು ಪ್ರಕಟಿಸಿದ ನಾನು, ಈಗ “ಗೊಲ್ಲ ಸಿರುಮನ ಚರಿತೆ”ಯನ್ನು ಸಂಪಾದಿಸಿ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟಿಸುತ್ತಿದ್ದೇನೆ.

ಸಿರುಮನನ್ನು ಕುರಿತ ಕೃತಿಗಳು

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕುಮಾರರಾಮನನ್ನು ಕುರಿತು ಅನೇಕ ಕಾವ್ಯಗಳು ಹುಟ್ಟಿಕೊಂಡಿವೆ. ಇಂತಹ ಇನ್ನೊಂದು ಅಪೂರ್ವ ಉದಾಹರಣೆ ಸಿರುಮನನ್ನು ಕುರಿತ ಕಾವ್ಯ ಸಮೂಹ. ನಮಗೆ ತಿಳಿದ ಮಟ್ಟಿಗೆ ಈವರೆಗೆ ಸಿರುಮನನ್ನು ಕುರಿತು-

೧. ಸಿರುಮಣನಾಯಕನ ಸಾಂಗತ್ಯ-ಸಿದ್ಧಕವಿ-ಸಂಧಿ ೫, ಪದ್ಯ ೬೨೬

೨. ಸಿರುಮನ ಚರಿತೆ-ಕೆಂಚಿಶೆಟ್ಟಿ ಸುತ ರಾಮ-ಸಂಧಿ ೧೩, ಪದ್ಯ ೧೦೬೫

೩. ಗೊಲ್ಲ ಸಿರುಮನ ಚರಿತೆ-ಮಲ್ಲಕವಿ-ಸಂಧಿ ೬, ಪದ್ಯ ೧೦೫೩.

ಹೀಗೆ ಮೂರು ಕೃತಿಗಳು ಸಿಗುತ್ತಿದ್ದು, ಅವುಗಳ ವಿವರ ಹೀಗಿದೆ:

ಮೊದಲನೆಯ ಕೃತಿಯ ತಾಳೆಗರಿ ಪ್ರತಿ ಮದ್ರಾಸ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿಯಲ್ಲಿದೆ. ೧೯೩೬ರಲ್ಲಿ ಸಿದ್ಧಪಡಿಸಿದ ಇದರ ನಕಲು ಕಾಗದಪ್ರತಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಭಾಂಡಾರದಲ್ಲಿದೆ. ಕವಿಚರಿತೆಕಾರರೂ ಈ ಕೃತಿಯನ್ನು ಉಲ್ಲೇಖಿಸಿದ್ದಾರೆ. ಇದನ್ನು ಪರಿಷ್ಕರಿಸಿ ಗದುಗಿನ ಶ್ರೀ ತೋಂಟದಾರ‍್ಯಮಠದ ವೀರಶೈವ ಅಧ್ಯಯನ ಸಂಸ್ಥೆಯ ಮೂಲಕ ನಾನು ಪ್ರಕಟಿಸಿದ್ದೇನೆ. (೧೯೮೩).

ಎರಡನೆಯ ಕೃತಿಯ ಕಾಗದಪ್ರತಿ (?) ಶೇಕದಾರ ಶ್ರೀ ಜಿ.ಎಂ.ಬಸವರಾಜಯ್ಯನವರ ಸಹಾಯದಿಂದ ಶ್ರೀ ಹುಲ್ಲೂರ ಶ್ರೀನಿವಾಸ ಜೋಯಿಸರಿಗೆ ಲಭಿಸಿದ್ದಿತು. ಇವರು ಸಾಹಿತ್ಯ ಪರಿಷತ್ತಿನ ಮೂಲಕ ಇದರ ಗದ್ಯಾನುವಾದವನ್ನು (೧೯೫೧) ಪ್ರಕಟಿಸಿದ ಬಳಿಕ, ಅದರ ಒಡೆಯರಿಗೆ ಹಿಂದಿರುಗಿಸಿದ ಮೂಲ ಹಸ್ತಪ್ರತಿ ಇಂದು ಲಭ್ಯವಿಲ್ಲ. ಆದರೆ ಮೈಸೂರಿನ ಜಿ. ವರದರಾಜರಾವ್ ಅವರ ಸಂಗ್ರಹದಲ್ಲಿದ್ದ ಇದರ ನಕಲು ಪ್ರತಿಯ ಆಧಾರದಿಂದ ಈ ಕಾವ್ಯವನ್ನು ನಾನು ಪರಿಷ್ಕರಿಸಿ, ಮೈಸೂರಿನ ಶ್ರೀ ಶಿವರಾತ್ರೀಶ್ವರಮಠದ ಮೂಲಕ ಪ್ರಕಟಿಸಿದ್ದೇನೆ (೧೯೯೧).

ಮೂರನೆಯ ಕೃತಿಯ ತಾಳೆಯಪ್ರತಿ ಬೆಂಗಳೂರಿನ ಶ್ರೀ ಎಸ್. ಶಿವಣ್ಣ ಅವರಿಗೆ ಸಂಬಂಧಿಸಿದುದು. ಇದರ ಇನ್ನೊಂದು ತಾಳೆಪ್ರತಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಹಸ್ತಪ್ರತಿ ಭಾಂಡಾರದಲ್ಲಿದೆ. ಇವೆರಡನ್ನೂ ಆಧರಿಸಿ, ಪ್ರಸ್ತುತ ಕೃತಿಯನ್ನು ಪರಿಷ್ಕರಿಸಿ, ಈಗ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟಿಸುತ್ತಿದ್ದೇನೆ. ಇದರಿಂದ ಸಿರುಮನನ್ನು ಕುರಿತ ಲಭ್ಯ ಮೂರೂ ಕೃತಿಗಳನ್ನು ಪ್ರಕಟಿಸಿದ ಸಂತೋಷ ನನ್ನದಾಗಿದೆ.

ಸಿರುಮನನ್ನು ಕುರಿತ ಕೃತಿನಾಮಗಳುಕವಿನಾಮಗಳು

ಸಿರುಮನನ್ನು ಕುರಿತ ಈ ಮೂರು ಕೃತಿಗಳಲ್ಲಿ ಎರಡಕ್ಕೆ ಆಯಾ ಕವಿಗಳು ಇಟ್ಟ ಹೆಸರುಗಳಾವವು? ಎಂಬುದು ಸಂದೇಹ. ಕೃತಿಗಳ ಒಡಲಲ್ಲಿ ಇದಕ್ಕೆ ಗಟ್ಟಿ ಆಧಾರಗಳಿಲ್ಲ. ಒಂದನೆಯ ಕೃತಿಯ ವಸ್ತು-ಪ್ರಕಾರಗಳನ್ನಾಧರಿಸಿ, ಕವಿಚರಿತೆಕಾರರು ಇದನ್ನು “ಸಿರಿಮನ ಸಾಂಗತ್ಯ” “ಸಿರುಮಣನಾಯಕನ ಸಾಂಗತ್ಯ” ಎಂದು ಕರೆದಿದ್ದಾರೆ.

[1] ಆದರೆ ಹಸ್ತಪತ್ರಿಯ ಪ್ರಾರಂಭದಲ್ಲಿ ಲಿಪಿಕಾರನು ಬರೆದ “ಸಿರುಮಣನಾಯಕನ ಸಾಂಗತ್ಯ” ಎಂಬುದನ್ನೇ ನಾವು ಸ್ವೀಕರಿಸಿದ್ದೇವೆ. ಎರಡನೆಯ ಕೃತಿಯ ನಿಜನಾಮ “ಸಿರುಮನ ಚರಿತೆ” ಎಂದು ತಿಳಿದುಬರುತ್ತದೆ. ಈಗ ಪ್ರಕಟವಾಗುತ್ತಲಿರುವ ಮೂರನೆಯ ಕೃತಿಗೂ ಕವಿ ನಿರ್ದಿಷ್ಟ ಹೆಸರು ಬಳಸಿಲ್ಲವಾದುದರಿಂದ ಲಿಪಿಕಾರ ಹಸ್ತಪ್ರತಿಯ ಆರಂಭದಲ್ಲಿ ಬಳಸಿದ “ಗೊಲ್ಲ ಸಿರುಮನ ಚರಿತೆ”[2] ಎಂಬುದನ್ನೇ ಗ್ರಹಿಸುವುದು ಅನಿವಾರ್ಯವಾಗಿದೆ.

ಸಿರುಮನನ್ನು ಕುರಿತು ಈವರೆಗೆ ಲಭಿಸಿದ ಮೂರು ಕೃತಿಗಳ ಕರ್ತೃವಿವೇಚನೆ ಇಲ್ಲಿ ಅವಶ್ಯವೆನಿಸಿದೆ. ಶ್ರೀ ಹುಲ್ಲೂರ ಅವರಿಗೆ ಲಭಿಸಿದೆ “ಸಿರಮನ ಚರಿತೆ”ಯ ಕರ್ತೃ “ಪಂಚಮಕುಲದ ಕೆಂಚಿಸೆಟ್ಟಿಯ ಸುತ ರಾಮ”ನೆಂದು ವ್ಯಕ್ತವಾಗಿಯೇ ಹೇಳಲಾಗಿದೆ. ಆದರೆ “ಸಿರುಮನನಾಯಕನ ಸಾಂಗತ್ಯ”ದ ಅಂತ್ಯದಲ್ಲಿ ಮತ್ತು “ಗೊಲ್ಲ ಸಿರುಮನ ಚರಿತೆಯ”ಯ ಆದಿಯಲ್ಲಿ ಅಲ್ಪಪಾಠ ವ್ಯತ್ಯಾಸದೊಂದಿಗೆ.

ಉಸಿರೊಗ್ಗಿನ ಶಿವಶರಣರೆಲ್ಲರ ಶಿಶು|
ಕುಶಲ
ಶಿವಲೀಲೆ ವೀರಯ್ಯನ|
ರಸಿಕನ
ಮಗ ಮಲ್ಲನಿಂತು ಪೇಳಿದನಿದ|
ಹೊಸತಾಗಿ
ಸಿರುಮನ ಕೃತಿಯ||

ಎಂಬ ಪದ್ಯ ಕಂಡುಬರುತ್ತದೆ. ಈ ಎರಡೂ ಗ್ರಂಥಗಳ ಕರ್ತೃಸಮಸ್ಯೆಯನ್ನು ಹುಟ್ಟಿಸುವ ಈ ಪದ್ಯವನ್ನು ಬಿಟ್ಟರೂ ಸಿರುಮಣನಾಯಕನ ಸಾಂಗತ್ಯದಲ್ಲಿ “ಭುವನವರಿಯೆ ಗೊಲ್ಲ ಸಿರುಮನ ಕೃತಿಯನು ಪವಣಿಸಿ ಸಿದ್ಧನೊರೆದನು” ಎಂಬ, “ಗೊಲ್ಲ ಸಿರುಮನ ಚರಿತೆ”ಯಲ್ಲಿ “ಶಿವಲೀಲೆ ವೀರನ ಮಗ ಮಲ್ಲೇಶ” ಎಂಬ ಉಲ್ಲೇಖಗಳು ಬಂದಿವೆ. ಹೀಗಾಗಿ “ಸಿರುಮಣನಾಯಕನ ಸಾಂಗತ್ಯ”ದ ಕರ್ತೃ “ಸಿದ್ಧಕವಿ”ಯೆಂದೂ, “ಗೊಲ್ಲ ಸಿರುಮನ ಚರಿತೆ”ಯ ಕರ್ತೃ “ಮಲ್ಲಕವಿ”ಯೆಂದೂ ಇಟ್ಟುಕೊಳ್ಳಬಹುದು.

ಮಲ್ಲಕವಿ

ಈ ಕವಿಯ ಹೆಸರನ್ನಾಗಲಿ, ಈ ಕೃತಿಯ ಹೆಸರನ್ನಾಗಲಿ ಕವಿಚರಿತೆಕಾರರು ಉಲ್ಲೇಖಿಸಿಲ್ಲ. ಕವಿಚರಿತೆಯ ಅನುಕ್ತಕೃತಿಸೂಚಿ”ಯಲ್ಲಿಯೂ ಈ ಬಗ್ಗೆ ಪ್ರಸ್ತಾಪವಿಲ್ಲ. ಅನ್ಯಕವಿಗಳೂ ಈ ವಿಷಯವಾಗಿ ಮೌನತಾಳಿದ್ದಾರೆ. ಹೀಗಾಗಿ ಕೃತಿಯನ್ನೇ ಆಧರಿಸಿ ಈ ಕವಿಯ ಬಗ್ಗೆ ಕೆಲವು ಮಾತುಗಳನ್ನು ಹೇಳುವುದು ಅನಿವಾರ್ಯವಾಗಿದೆ.

ಈ ಕೃತಿಯಲ್ಲಿ “ಅಸಗೋಡ ಶಂಭುಸಿದ್ಧೇಶ” (೧-೧) “ಅಸಗೊಂಡ ಶಂಭು”” (೧-೨, ೩-೧), “ಅಸಗೋಡು ಶಂಭು ಮಲ್ಲೇಶ” (೬-೮೩) ಎಂಬ ಸ್ತುತಿ ಇರುವುದರಿಂದ ಇದರ ಕರ್ತೃ ಬಹುಶಃ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡಿನವನೋ, ಅಸಗೋಡು ಗ್ರಾಮದ ಸಿದ್ದೇಶ ದೇವತೆಯ ಭಕ್ತನಾಗಿದ್ದು, ಬೇರೆ ಊರಿನವನೋ ಇರಬೇಕು.[3]

“ಶಿವಲೀಲೆ ವೀರಯನ ರಸಿಕನು ಮಗ ಮಲ್ಲ” (೧-೭) “ಶಿವಲೀಲೆ ವೀರನ ಮಗ ಮಲ್ಲೇಶ ವೀರನ ಮಗ ಮಲ್ಲೇಶ” (೬-೮೩) ಎಂದು ಉಲ್ಲೇಖಿಸಿರುವುದರಿಂದ ಕವಿಯ ಹೆಸರು ಮಲ್ಲೇಶ, ಇವನ ತಂದೆಯ ಹೆಸರು ವೀರಯ್ಯನೆಂದು ಸ್ಪಷ್ಟವಾಗುತ್ತದೆ. “ಶಿವಶರಣರೆಲ್ಲರ ಶಿಶು” ಎಂದು ತನ್ನ ತಂದೆಯನ್ನು ಕರೆದಿರುವುದರಿಂದಲೂ ಕೃತಿಯ ಉದ್ದಕ್ಕೂ ಶಿವಪರ ವಾತಾವರಣ ತುಂಬಿರುವುದರಿಂದಲೂ ಈತನು ವೀರಶೈವಕವಿಯೆಂದು ವ್ಯಕ್ತವಾಗುತ್ತದೆ. ತಂದೆ ವೀರಯ್ಯನು ಶಿವಲೀಲೆಯ ಕಲಾವಿದನಾಗಿದ್ದನೆಂದು ಎರಡು ಸಲ ಬರುತ್ತದೆ (೧-೭, ೬-೮೩). ಬಹುಶಃ ಮಗನಾದ ಈ ಕವಿಯೂ “ಶಿವಲೀಲೆ”ಯನ್ನೇ ವೃತ್ತಿ ಮಾಡಿಕೊಂಡಿರಬಹುದು. ೬ನೆಯ ಸಂಧಿಯ ಆರಂಭದ ಮಾರ್ಜಿನ್ನಿನಲ್ಲಿ ಶಿವಲೀಲೆ ಎಂಬ ಉಲ್ಲೇಖವಿದ್ದು, ಸಾಂಗತ್ಯ ಛಂದದಿಂದ ಭಿನ್ನವಾಗಿರುವ ಇಲ್ಲಿಯ ಪದ್ಯಗಳು ಶಿವಲೀಲೆ ಇಲ್ಲವೆ ಶಿವ ಎಂದೇ ಮುಗಿಯುತ್ತವೆ. ಬಹುಶಃ ಇಲ್ಲಿ ಶಿವ ಎಂಬುದು ಶಿವಲೀಲೆಯೆಂಬುದರ ಸಂಕ್ಷೀಪ್ತ ರೂಪವಾಗಿರಬಹುದು. ಆದುದರಿಂದ ಹಾಡುವಾಗ ಈ ಶಿವ ಎಂಬುದನ್ನು ಶಿವಲೀಲೆ ಎಂದು ವಿಸ್ತರಿಸಿಕೊಳ್ಳಬೇಕೆಂದು ತೋರುತ್ತದೆ.

ಶಿವಲೀಲೆ ಎಂಬ ವ್ಯಕ್ತಿ ಬಹುಶಃ ಮಂಟೇಸ್ವಾಮಿ ಪರಂಪರೆಯ ನೀಲಗಾರ (ಲೀಲೆಗಾರ)ರೆಂಬ ಗೀತೋಪಜೀವಿಗಳಿಗೆ ಸಂಬಂಧಿಸಿರಬಹುದು. ಇದು ನಿಜವಿದ್ದರೆ ಶಿವಲೀಲೆಯ ವೀರಯ್ಯನ ಮಗನಾದ ಈ ಕವಿಯನ್ನು ದಕ್ಷಿಣ ಕರ್ನಾಟಕದ “ನೀಲಗಾರ” ಹೆಸರಿನ ವೃತ್ತಿಗಾಯಕರ ವರ್ಗಕ್ಕೆ ಸೇರಿಸಬೇಕಾಗುತ್ತದೆ. ಮತ್ತು ಈ “ಗೊಲ್ಲ ಸಿರುಮನ ಚರಿತೆ”ಯನ್ನು ಅಲ್ಲಲ್ಲಿ ಗೋಷ್ಠಿ ಮೂಲಕ ಈ ಕವಿ ಮತ್ತು ಈ ಸಂಪ್ರದಾಯದವರು ಹಾಡುತ್ತಿರಬಹುದೇ? ಎಂಬ ಸಂದೇಹ ಹುಟ್ಟತ್ತದೆ. ಹೈದರಾಬಾದಿನ ಹಸ್ತಪ್ರತಿಗೆ ಹೊದಿಸಿರುವ ಕಟ್ಟಿಗೆಯ ಫಲಕದ ಮೇಲೆ “ಲಿಂಗಾಲೀಲಾ ವಿಲಾಸ” ಎಂಬ ಶೀರ್ಷಿಕೆಯನ್ನು ಕಾಗದದ ಮೇಲೆ ಬರೆದು ಅಂಡಿಸಿರುವುದು ಈ ಸಂದರ್ಭದಲ್ಲಿ ನಮ್ಮ ಗಮನ ದೀರ್ಘೀಕರಣಗಳೂ ಇದು ವಾಚಕ ಸಂಪ್ರದಾಯದಲ್ಲಿಯೂ ಪ್ರಚುರಗೊಂಡುದನ್ನು ಸೂಚಿಸುತ್ತವೆ. “ಕೆಂಚಿಶೆಟ್ಟಿಯಸುತ ರಾಮ”ನ ಸಿರುಮನ ಚರಿತೆಯಲ್ಲಿ ಸಿರುಮನ ಕುಟುಂಬವರ್ಗ ಮಡಿಯುತ್ತಲೇ ಲೀಲೆಗಾರರು ಬಂದು, ಅವನ ಶೌರ‍್ಯ-ಸಾಹಸವನ್ನು ಹಾಡಿದ ಉಲ್ಲೇಖ (೧೩-೩೧, ೩೩) ಬರುವುದನ್ನು ಇಲ್ಲಿ ನೆನೆಸಬಹುದು.

ಈ ಕೃತಿಯಲ್ಲಿ ಸಿರುಮನ ರಾಜಧಾನಿಯಾದ ಬೂದಿಹಾಳ ಗ್ರಾಮದ ರಾಮನಾಥನ ಕೊತ್ತಳ (೧-೫೫), ಏಕನಾಥಿ(೧-೫೬), ಕಪ್ಪುರಿ ವೀರಣ್ಣ (೧-೫&), ನಿರಾಸೆಯಮಠ (೧-೫೮) ಇತ್ಯಾದಿಗಳ ವರ್ಣನೆ ಮತ್ತು ಸೈನ್ಯದ ಚಲನವಲನೆಯ ಪ್ರಾದೇಶಿಕ ಸ್ಥಳಗಳು ತುಂಬ ನಿರ್ದಿಷ್ಟವಾಗಿ ಬರುವುದರಿಂದ ಕವಿ ಮಲ್ಲನಿಗೆ ಈ ಪ್ರದೇಶದ ದಟ್ಟ ಪರಿಚಯವೂ ಇರಬಹುದೆನಿಸುತ್ತದೆ.

ಗೊಲ್ಲ ಸಿರುಮನ ಚರಿತೆ

“ಗೊಲ್ಲ ಸಿರುಮನ ಚರಿತೆ” ಹೆಸರೇ ಸೂಚಿಸುವಂತೆ ಸಿರುಮ ಹೆಸರಿನ ಪಾಳೆಯಗಾರನ ಯುದ್ಧಘಟನೆಯನ್ನೊಳಗೊಂಡಿದೆ. ಮಿಡಿಗೇಸಿಯ ಎಕ್ಕಟಿ ಗಂಗಯ್ಯ ಮತ್ತು ಹಿರಿಯೂರ ಕಸವಯ್ಯರ ಪಕ್ಷವಹಿಸಿ, ಚಂದ್ರಗಿರಿಯಲ್ಲಿ ಅಳುತ್ತಲಿದ್ದ ಸಾಳುವ ನರಸಿಂಹರು ಸಿರುಮನ ಮೇಲೆ ಏರಿಬಂದು, ವಿಜಯ ಸಾಧಿಸಿದ ಘಟನೆ ಈ ಕೃತಿಯ ವಸ್ತು. ಆರು ಸಂಧಿಗಳನ್ನು ವ್ಯಾಪಿಸಿರುವ ಈ ಕೃತಿಯ ಕಥಾಸಾರ ಹೀಗಿದೆ.

ಸಂಧಿ : ಒಂದು

ಆಸಗೋಡು ಶಂಭುಸಿದ್ಧೇಶ, ಗಣಪತಿ, ನಂದಿ, ಭೃಂಗೀಶ, ವೀರಭದ್ರ ಸರಸ್ವತಿಯರನ್ನು ಸ್ತುತಿಸುತ್ತೇನೆ (೧-೪). ಸಿರುಮಭೂವರನ ಕಾಳಗವನ್ನು ಹೇಳುತ್ತೇನೆ (೫). ಶಿವಶರಣರ ಶಿಶುವಾದ ಶಿವಲೀಲೆ ವೀರಯ್ಯನ ಮಗನಾದ ಮಲ್ಲನು ಈ ಕೃತಿಯನ್ನು ಹೇಳಿದನು (೬). ಬೂದಿಹಾಳಿನ ವೀರಭದ್ರನಿಗೆ ನಮಸ್ಕಾರ ಹೇಳುತ್ತೇನೆ (೭). ಅರ್ಜುನ, ಅಭಿಮನ್ಯು, ರಾವಣರಂತೆ ಕಾದಿ ಬೂದಿಹಾಳಿನ ಗೊಲ್ಲ ಸಿರುಮ ಕೀರ್ತಿಪಡೆದ (೯). ಕುಮಾರರಾಮನ ಅಂಗ ನೇಮಿಕೆ ಸಿಕ್ಕಿತು. ಆದರೆ ಅಂಗ ಸಿಗದಂತೆ ನರಸಿಂಹನೊಡಗೆ ಸಿರು ಕಾದಿದ (೧೦). ಇದು ಶಿವಕಥೆಯಲ್ಲ, ಪುಣ್ಯಚರಿತೆಯಲ್ಲ ಎನ್ನಬೇಡಿರಿ, ಇದನ್ನು ಕೇಳಿದರೆ ಮುಕ್ತಿಯುಂಟು (೧೧). ಪೆನುಗೊಂಡೆಯಲ್ಲಿ ಪ್ರೌಢರಾಯನ ಉಳಿಗದವರಾಗಿ ಗುಂಡರಾಜ ಮತ್ತು (ಗೊಲ್ಲ) ಕಾಚನಾಯಕರಿದ್ದರು (೧೨). ಗುಂಡರಾಜನು ಲಕ್ಷಸೀಮೆಗೆ ವಜೀರನಾಗಿದ್ದನು (೧೩). ಕಾಚನಾಯಕನು ರಾಜ ದ್ವಾರಪಾಲನಾಗಿದ್ದನು. ಒಮ್ಮೆ ಪ್ರೌಢರಾಯನ ಭೆಟ್ಟಿಗೆ ಬಂದ ಗುಂಡರಾಜನನ್ನು ಕಾದನಾಯಕ ಕೈಯೊಳಗಿನ ಬೆತ್ತವನ್ನು ಅಡ್ಡವಿಟ್ಟು, ಒಳಗೆ ಬಿಡಲಿಲ್ಲ (೧೬). ಅವಮಾನಿತನಾದ ಗುಂಡರಾಜ “ಬೆತ್ತವನ್ನು ಅಡ್ಡವಿಟ್ಟ, ನಿನ್ನ ಕೈ ಕತ್ತರಿಸುವೆ” ಎಂದು ಗುಡುಗಿದ (೧೭). “ಹೀಗೆ ನುಡಿದ ನಿನ್ನ ಹಲ್ಲನುದುರಿಸುವೆ” ಎಂದು ಕಾಚ ಉತ್ತರಿಸಿದ. ಇಬ್ಬರಿಗೂ ಜಗಳ ಏರ್ಪಟ್ಟಿತು. ಪ್ರೌಢರಾಯ ಎಚ್ಚತ್ತು ವಿಷಯ ತಿಳಿದುಕೊಂಡ. “ಗುಂಡನೊಂದಿಗೆ ಕಾದಿ ಅವನ ಹಲ್ಲ ಉದುರಿಸುವೆ”ನೆಂದು ಕಾಚ ನುಡಿದ (೨೩). “ಕಾಚನ ಕೈ ಕತ್ತರಿಸಿ ನಿನಗೆ ಕಾಣಿಕೆಯಾಗಿ ಒಪ್ಪಿಸುವೆ”ನೆಂದು ಗುಂಡರಾಜ ಮಾರ್ನುಡಿದ (೨೪) “ಆಯುಧ ಬೇಡ, ಚೂರಿ ಸಾಕು, ಹಗೆಯಲ್ಲಿ ಇಳಿಸು, ಅಲ್ಲಿಯೇ ಕೈಚಳಕ ತೋರಿಸುವೆ”ನೆಂದು ಕಾಚ ಅರಸನಲ್ಲಿ ಬಿನ್ನವಿಸಿದ (೨೬). ಇಬ್ಬರೂ ಹಗೆಯೊಳಗೆ ಇಳಿದು ಹೋರಾಡಿದರು. ಕಾಚ ಗುಂಡನಹಲ್ಲು ಉದುರಿಸಿದ (೩೩). ಪ್ರೌಢರಾಯ ಮೆಚ್ಚಿ “ಬಹುಮಾನ ಕೇಳು?” ಎನ್ನಲು, ಕಾಚ “ಕಿತ್ತಿದ ಹಲ್ಲು ಕೊಡು” ಎಂದು ಬಿನ್ನವಿಸಿದ (೩೪). ಈ ಬಿನ್ನಹಕ್ಕೆ ಮೆಚ್ಚಿ ಪ್ರೌಢರಾಯ, ಬಲ್ಲೆಹ, ಪದಕ, ಚೌಕಳಿ, ಬೊಲ್ಲ – ಈ ಉಡುಗೊರೆಗಳನ್ನಲದೆ, “ಸೂಜಿಗಲ್ಲು” ಹೆಸರಿನ ದುರ್ಗನ್ನು ಕೊಟ್ಟನು (೩೫). ಈ ದುರ್ಗವನ್ನಾಳುವ ಕಾಚನಾಯಕ ಗುಂಡರಾಜನ ಹಲ್ಲನ್ನೊಳಗೊಂಡ ಚಮ್ಮಾವುಗೆ ಮೆಟ್ಟುತ್ತಲಿದ್ದನು (೩೮), ಗಂಡುಸಂತಾನವಿಲ್ಲದ ಪ್ರೌಢರಾಯನು ಗುಂಡನ ಮಗ ನರಸಿಂಹನನ್ನು ಸಲುಹಿ, ತನ್ನ ಪಟ್ಟಕ್ಕೆ ಉತ್ತರಾಧಿಕಾರಿಯನ್ನಾಗಿಸಿದರು (೩೯). ಕಾಚನ ಮಗ ಸಿರುಮನು ೩೦೦೦ ಸೈನ್ಯ, ೩೦೦ ಕುದುರೆಗಳ ಅಧಿಪತಿಯಾಗಿದ್ದನು (೪೧). ತಂದೆಯ ಚಮ್ಮಾವುಗೆ ತಾನು ಮೆಟ್ಟಬಾರದೆಂದು ಸಿರುಮ, ಅದರಲ್ಲಿಯ ಹಲ್ಲನ್ನು ಹೊರತೆಗೆದು ಉಗುಳುವ ಪಗುಡದಲ್ಲಿಟ್ಟಿದ್ದನು (೪೪). ಪ್ರೌಢರಾಯ ಸ್ವರ್ಗಸ್ಥನಾಗಲು ನರಸಿಂಹನು ಪೆನುಗೊಂಡೆಯಲ್ಲಿ ಆಳುತ್ತಿದ್ದನು (೪೬). ಬೇಟೆಗೆ ಹೋದ ಸಿರುಮನ ನಾಯಿಯನ್ನು ಮೊಲ್ ಬೆನ್ನಟ್ಟಿದ ದೃಶ್ಯ ಕಂಡು, ಅಲ್ಲಿ ಬೂದಿಹಾಳು ರಾಜಧಾನಿ ಕಟ್ಟಿಸಿ ಆಳತೊಡಗಿದ (೪೮). ಹೊಯ್ಸಳದೇಶದಲ್ಲಿ ಬೂದಿಹಾಳು ಸುಪ್ರಸಿದ್ಧವಾದುದು (೪೯). ಕೋಟೆ – ಕೊತ್ತಲ – ಏಕನಾಥೆಯ ಗುಡಿ-ಕಪ್ಪರಿ ವೀರಣ್ಣನ ಗುಡಿ-ನಿರಾಸೆಯ ಮಠಗಳಿಂದ ಬೂದಿಹಾಳು ಒಪ್ಪುತ್ತಿದೆ (೫೦-೬೦). ತನಗೆ ಉಡುಗೊರೆ ಒಪ್ಪಿಸಲು ಮಿಡಿಗೇಸಿಯ ಎಕ್ಕಟಿ ಗಂಗಯ್ಯನಲ್ಲಿಗೆ ಉಳಿಗಿದ ಮಲ್ಲನನ್ನು ಕಳಿಸಿದನು (೬೨-೬೩). ಕರಣಿಕ ಚಿಕ್ಕರಸ ಗಂಗಯ್ಯನಿಗೆ ಓಲೆ ಓದಿ ಹೇಳಿದ (೬೪). ಸಿಟ್ಟಿಗೆದ್ದ ಗಂಗಯ್ಯ ಉಡುಗೊರೆ ಕೊಡಲು ನಿರಾಕರಿಸಿ ಹಿರಿಯೂರ ಕಸವಯ್ಯನಿಗೆ ಈ ವಿಷಯ ತಿಳಿಸಿದ (೬೬-೬೮). ಕಸವಯ್ಯ ಮಿಡಿಗೇಸಿಗೆ ಬಂದ. ಇಬ್ಬರೂ ಸೇರಿ ನರಸಿಂಹನಾಯಕನಿಗೆ ಸಿರುಮ ಮತ್ತು ಬಾಗೂರು ಗೋವಿಂದರ ಬಗ್ಗೆ ದೂರು ಹೇಳಲು ನಿರ್ಧರಿಸಿದರು (೭೦, ೭೧), ಮತ್ತು ಪೆನುಗೊಂಡೆಗೆ ಹೋಗಿ ನರಸಿಂಹನಿಗೆ ದೂರು ಹೇಳಿದರು. (೬೭-೮೦). ಸಿಟ್ಟಿಗೆದ್ದ ನರಸಿಂಹ ಪ್ರಧಾನಿ ಈಶ್ವರನಾಯಕನನ್ನು ಕರೆಯಿಸಿದ (೮೩), ರೊದ್ದ, ಹರವಿಕೆರೆ, ಮಿಡಿಗೇಸಿ ಮಾರ್ಗವಾಗಿ ದಂಡು ನಡೆಯಲು ಈಶ್ವರನಾಯಕ ಸೂಚಿಸಿದ (೮೪). ಸೈನ್ಯ ಮಿಡಿಗೇಸಿಯ ಗಡಿದಾಟಿ ಸಿರುಮನ ಸೀಮೆಯ ವರೆಗೆ ಬಂದಿತು (೯೦, ೯೧). ನಂದ್ಯಾಲದ ತಿಮ್ಮರಾಜ ಮೊದಲಾದ ನಾಯಕರು (ಅನೇಕ ಹೆಸರುಗಳಿವೆ) ಒಂದುಗೂಡಿದರು (೯೨-೯೮). ಮೂರುಸಾವಿರ ಏಳುನೂರು ಆನೆ, ಒಂದು ಲಕ್ಷ ತುರಗದಳ, ಹದಿನಾರು ಲಕ್ಷ ಕಾಲ್ದಳ ಒಟ್ಟು ಗೂಡಿತು (೯೯). ದುಮ್ಮೆ ಮಾರ್ಗವಾಗಿ ಸೈನ್ಯ ಸಾಗಿತು (೧೦೧). ಬಿಜ್ಜಾವರದಲ್ಲಿ ಸೈನ್ಯ ನೆಲೆಯೂರಿದ ಸುದ್ದಿಯನ್ನು ಬೇಹುಗಾರರು ಸಿರುಮನಿಗೆ ತಿಳಿಸಿದರು (೧೦೪), ಸಿರುಮ ಮಕ್ಕಳಾದ ಕಾಚ, ಮಲ್ಲರನ್ನು ಕರೆಸಿದ (೧೦೫). ಹೆಂಡತಿ ಚಿಕ್ಕಾಯಿಗೂ ತಿಳಿಸಿದ (೧೦೯). ಬಿಜ್ಜಾವರದಿಂದ ಬರುತ್ತಲಿರುವ ದಂಡನ್ನು ಮಧ್ಯದಲ್ಲಿಯೇ ತಡೆಯಲು ಬಾಗೂರ ಗೋವಿಂದನಿಗೆ ತಿಳಿಸಿದ (೧೧೩). ಗೋವಿಂದನ ಸೈನ್ಯದ ಶ್ರೀರಂಗ ಮೊದಲಾದವರು (ಅನೇಕರ ಹೆಸರುಗಳಿವೆ), ಕಣಿವೆಯಕಟ್ಟೆ, ಹತ್ತಿರ ಸೈನ್ಯವನ್ನು ಎದುರಿಸಿದರು (೧೧೪-೧೨೦). ನರಸಿಂಹನ ೩೦೦ ಕುದುರೆ, ೧೨ ಆನೆಗಳನ್ನು ಸೆರೆಹಿಡಿದರು (೧೨೧). ಮರುದಿನ ನರಸಿಂಹನ ಸೈನ್ಯ ಬಾಗೂರನ್ನು ಮುತ್ತಿತ್ತು (೧೩೪). ತನ್ನ ಸಹಾಯಕ್ಕೆ ಬರಲು ಗೋವಿಂದನು ಸಿರುಮನಿಗೆ ಪತ್ರ ಕಳಿಸಿದನು (೧೩೫-೧೩೯).

ಸಂಧಿ : ಎರಡು

ಸಿರುಮಭೂಪಾಲನು ಮಗನಾದ ಕಾಚನನ್ನು ಬಾಗೂರ ಗೋವಿಂದನ ಸಹಾಯಕ್ಕೆ ಹೋಗಲು ಹೇಳಿದ (೧-೮). ಈ ಸುದ್ದಿ ಕೇಳಿ ಸಿರುಮನ ಹೆಂಡತಿ ಚಿಕ್ಕಾಯಿ ಮಮ್ಮಲ ಮರಗಿದಳು (೯-೧೬). ಕಾಚ ತನ್ನ ಸೈನಿಕರಿಗೆ ಉಡುಗೊರೆ ನೀಡಿದ. ತಾನೂ ಸಿಂಗರಿಸಿಕೊಂಡ (೧೭-೨೧). ತಾಯಿಗೆ ನಮಸ್ಕರಿಸಿದ, ಕಾಚನಿಗೆ ಪ್ರೀತಿಯಿಂದ ಊಟ ಮಾಡಿಸಿದರು (೨೨-೨೭). ತಾಯಿ ಮತ್ತು ಹೆಂಡಿರಿಂದ ಬೀಳ್ಕೊಂಡು ಕಾಚೇಂದ್ರ ಬಾಗೂರಿಗೆ ನಡೆದ (೨೮-೩೫). ನಿರಾಸೆಯ ಮಠ, ವೀರಭದ್ರದೇವಾಲಯಗಳಿಗೆ ಒಂದು ಮಹಂತರ ಮತ್ತು ದೇವರ ದರ್ಶನ ಪಡೆದ (೩೬-೩೯), ಸಿರುಮನ ಚಾವಡಿಗೆ ಬಂದು ಎಪ್ಪತ್ತೇಳು ಬಂಟರನ್ನು ಆಯ್ದುಕೊಂಡ (ಅನೇಕರ ಹೆಸುರಗಳಿವೆ) (೪೦-೭೦). ಉತ್ತಮೋತ್ತಮ ಕುದುರೆಗಳನ್ನು (ಹೆಸರುಗಳಿವೆ) ಆಯ್ದುಕೊಂಡ (೭೧-೮೬). ಮುನ್ನೂರು ಕಾಲ್ದಳ, ಮೂವತ್ತು ಕುದುರೆಗಳನ್ನು ಸಂಗ್ರಹಿಸಿದ (೮೭). ಕಾಚೇಂದ್ರ ಬಾಗೂರಿಗೆ ನಡೆದ (೯೨). ಅರೆಯಕಟ್ಟೆಯ ತೆವರಿಗೆ ಬಂದು, ಅಡಗಿ ಹೋಗದೆ ಕಹಳೆಯ ಸದ್ದಿನೊಂದಿಗೇ ಬಾಗೂರು ಸಮೀಪಿಸಿದ (೯೫-೯೮). ನರಸಿಂಹನ ದಂಡನ್ನು ನಾಶಮಾಡುತ್ತ, ಬಾಗೂರ ಕೋಟೆ ಸಮೀಪ ಬಂದು, ಬಾಣದ ಮೂಲಕ ಒಳಗೆ ಪತ್ರ ಎಸೆದ (೧೧೦). ಪತ್ರ ಓದಿ ಗೋವಿಂದ ಕಾಚನನ್ನು ಬರಮಾಡಿಕೊಂಡ (೧೧೧). ಕಾಚ ಬಾಗೂರ ಸೇರಿದ ಸುದ್ದಿ ಕೇಳಿ ನರಸಿಂಹ ಕ್ರುದ್ಧನಾದ, ಈಶ್ವರನಾಯಕ ಬಾಗೂರನ್ನು ಮುತ್ತಿದ (೧೧೬-೧೧೬). ಯುದ್ಧ ನಡೆದು ನರಸಿಂಹನ ಸೈನ್ಯ ಹಿಮ್ಮೆಟ್ಟಿತು (೧೩೨). ಈ ಯುದ್ಧದಲ್ಲಿ ಕಾಚನ ಬಂಟ ವಿರುಪ ಮಡಿದ (೧೪೦). ಬಾಗೂರಿನ ಪ್ರಜೆಗಳು ಕಂಗೆಟ್ಟರು. ಗೋವಿಂದ ಮಂತ್ರಿ ಕಲ್ಲರಸನನ್ನು ಸಂದಾನಕ್ಕಾಗಿ ನರಸಿಂಹನಲ್ಲಿಗೆ ಕಳುಹಿದ (೧೪೬-೧೪೭). ಕಾಚನನ್ನು ಸೆರೆಕೊಟ್ಟರೆ ಒಪ್ಪಂದ ಮಾಡಿಕೊಳ್ಳುವುದಾಗಿ ನರಸಿಂಹ ಕರಾರು ಹಾಕಿದ (೧೪೯). ಹತ್ತು ಸಾವಿರ ಹೊನ್ನು ಕೊಡುವೆನೆಂದರೂ ಒಪ್ಪಲಿಲ್ಲ (೧೫೦). ಈ ಕರಾರಿಗೆ ಗೋವಿಂದ ಒಪ್ಪದೆ ಬೂದಿಹಾಳಿಗೆ ಹಿಂದಿರುಗಿ ಹೋಗಲು ಕಾಚನಿಗೆ ಒತ್ತಾಯಿಸಿದ (೧೫೩, ೧೫೪). ಇದಕ್ಕೆ ಕಾಚ ಒಪ್ಪಲಿಲ್ಲ. ತಾನು ಬಂದುದು ಹಿಂದಿರುಗಿ ಹೋಗಲು ಅಲ್ಲ. ಯುದ್ಧ ಮಾಡಲು – ಎಂದು ಉತ್ತರಿಸಿದ (೧೫೫). ನೀನು ಯುದ್ಧಕ್ಕೆ ಬಂದವನ್ನಲ, ಸೂಳೆ ಬೆನಕಿಗಾಗಿ ಬಂದವನು – ಎಂದು ಗೋವಿಂದ ನುಡಿದ (೧೫೬). “ನಿನ್ನ ಪಟ್ಟಣದ ಹೆಣ್ಣುಗಳು ನನ್ನ ತಾಯಿಗೆ ಸಮಾನ. ನಾನು ಯುದ್ಧ ಮಾಡುತ್ತ ಬೂದಿಹಾಳಿಗೆ ಹೋಗುವೆ”ನೆಂದು ಕಾಚ ತಿಳಿಸಿದ (೧೫೯). ಗೋವಿಂದ ದುಃಖಿಸುತ್ತ ಬೀಳ್ಕೊಟ್ಟ (೧೬೦). ಕಾಚನ ಜೊತೆ ಅವನ ೩೦೦ ಜನ ಸಿದ್ಧರಾದರು. ಉಡುದಾರವ ಕಿತ್ತಿ ಮುಂಗೈಗೆ ಕಟ್ಟಿಕೊಂಡು ಬಾಗೂರ ಬಿಟ್ಟರು (೧೬೧, ೧೬೨). ಚಂದ್ರಪುರ, ಆನೆವಾಳ ಮಾರ್ಗವಾಗಿ ಮುನ್ನಡೆದರು (೧೭೫). ದಾರಿ ತಪ್ಪಿಸಿ ನೀರಗುಂದ, ನೇರಿಲಗೇರಿ ಮೂಲಕ ಬೂದಿಹಾಳಿನ ಉಪ್ಪಿನಮಾಳೆಗೆ ಬಂದು ಕಾಚ ಕಹಳೆ ಹಿಡಿಸಿದನು (೧೭೪-೧೭೬). “ಗೋವಿಂದನಿಗೆ ಹೇಳದೆ ಈ ಕಾಚ ಬಂದ, ನನ್ನನ್ನು ಕಳುಹಿಸು” ಎಂದು ಮಲ್ಲ ಅಬ್ಬರಿಸಿದ (೧೮೯). ಕಾಚ ನಡೆದ ಘಟನೆಯನ್ನು ಹೇಳಿ, ತನ್ನ ಮರುಳುವಿಕೆಯ ಅನಿವಾರ್ಯತೆಯನ್ನು ಸಮರ್ಥಿಸಿಕೊಂಡ (೧೮೪). ನರಸಿಂಹನ ಸೈನ್ಯ ಬಾಗೂರನ್ನು ಮುತ್ತಿತ್ತು (೧೯೦), ಗೋವಿಂದ ಕಾಣಿಕೆ ನೀಡುವುದಾಗಿ ಸಾರಿದ (೧೯೩-೧೯೪). ಮೂರು ಲಕ್ಷ ಹೊನ್ನು ಮತ್ತು ತಮ್ಮನಾದ ಶ್ರೀರಂಗರಾಜನನ್ನು ಒಪ್ಪಿಸಲು ಈಶ್ವರನಾಯಕ ಒತ್ತಾಯಿಸಿದ (೧೯೯-೨೦೦). ಅಸಹಾಯಕ ಸ್ಥಿತಿಯಲ್ಲಿ ನಿಂತ ಗೋವಿಂದ ಆ ರೀತಿ ನಡೆದುಕೊಂಡ ಮತ್ತು ಅರಮನೆಯನ್ನು ಈಶ್ವರನಾಯಕನಿಗೆ ಒಪ್ಪಿಸಿ ಹೊರಬಂದ (೨೦೪-೨೧೩). ಗೋವಿಂದನನ್ನು ಎಕ್ಕಟಿ ಗಂಗಯ್ಯನಿಗೆ ಒಪ್ಪಿಸಿ, ಬಾಗೂರಿನಲ್ಲಿಯ ಶ್ರೀಮಂತರನ್ನು ಸುಲಿದರು (ಅನೇಕ ಹೆಸರುಗಳಿವೆ) (೨೧೪-೨೩೧). ನರಸಿಂಹನು ಬಾಗೂರ ಸುಲಿದ ಸುದ್ದಿ ಸಿರುಮನ ಕಿವಿಗೆ ಮುಟ್ಟಿತು (೨೩೨).

ಸಂಧಿ : ಮೂರು

ಬಾಗೂರಿನಲ್ಲಿ ಬೀಡುಬಿಟ್ಟಿದ್ದ ನರಸಿಂಹನಿಗೆ ಯುದ್ಧದ ಆಹ್ವಾನ ನೀಡಿ, ಸಿರುಮನು ಭಟ್ಟರ ತಿಪ್ಪನ ಮೂಲಕ ಪತ್ರ ಕಳುಹಿಸಿದ. ಜೊತೆಗೆ ಅರಿಷಿಣ, ಬಳೆ, ಕಪ್ಪು, ಕೆರಸಿ, ಮೊರ, ಸಿಂಬೆ, ಕರಿಮಣಿ, ಕಡಗಗಳನ್ನೂ ಕಳಿಸಿದ (೨-೯). ಈಶ್ವರನಾಯಕನಿಂದ ಪತ್ರ ಓದಿಸಿ ನರಸಿಂಹ ಕೆರಳಿ ಕೆಂಡವಾದ (೧೦). ನರಸಿಂಹನ ಸೈನ್ಯ ಬೂದಿಹಾಳಿಗೆ ನಡೆಯಿತು (೧೭), ಹರದಾಗಿ ನಡೆದು ಬಂದು ಬಲ್ಲಾಳಪುರದಲ್ಲಿ ಬೀಡುಬಿಟ್ಟಿತು. ಇಲ್ಲಿಂದ ಸಿರುಮನ ಸೀಮೆ ಪ್ರಾರಂಭ (೨೧). ಮರುದಿನ ಮುಂಜಾನೆ ಸೈನ್ಯ ಬಲ್ಲಾಳಪುರದಿಂದ ಮುನ್ನಡೆದು ಕೈಗನೂರಿನಲ್ಲಿ ನೆಲೆನಿಂತಿತು (೨೯). ಈ ಸುದ್ದಿ ತಿಳಿದ ಸಿರುಮ ಯುದ್ಧಕ್ಕೆ ಸಿದ್ಧನಾದ (೩೪-೩೭), ಮಕ್ಕಳಾದ ಮಲ್ಲಣ್ಣ, ಕಾಚಣ್ಣ, ಬಂದು ಸೇರಿದರು (೩೮). ಪಂತಿ ಊಟದ ವೀರರು (=ವೇಳೆವಾಳಿಗಳು) ಜೊತೆ ನಡೆದರು (೪೪). ಘೋರಯುದ್ಧದಲ್ಲಿ ಸಿರುಮನ ಕೈ ಮೇಲಾಯಿತು. ಕುದುರೆ ಮೊದಲಾದುವನ್ನು ಸೆರೆಹಿಡಿದು ಬೂದಿಹಾಳಿಗೆ ಮರಳಿದನು (೬೪). ನರಸಿಂಹ ನೇರವಾಗಿ ಬೂದಿಹಾಳು ಕೋಟೆಯನ್ನೇ ಮುತ್ತಿದನು (೬೬-೬೭). ಸಿರುಮನ ರಾಣಿ ಚಿಕ್ಕಮ್ಮ, ನರಸಿಂಹನ ದಂಡು ನೋಡಿ ಹರ್ಷಿತಳಾದಳು (೭೨). ವಿಷದ ಅಡಿಗೆಮಾಡಿ, ಹರೆಯದ ಹುಡುಗರಿಗೆ ಸೀರೆ ಉಡಿಸಿ, ಊರ ಹೊರಗೆ ದೇವಿಕೆರೆಯ ಕೋಡಿಯ ಹತ್ತಿರ ಬಂದಳು. ಕಣಗಿಲ ತೋಪಿನ ಹತ್ತಿರ ಅಡಿಗೆ ಇಳಿಸಿದಳು (೭೮). ರಂಗವಾಳೆ ಹೋಯಿದು, ದೇವರ ಪೂಜೆ ಮಾಡುವುದನ್ನು ನೋಡಿ ನರಸಿಂಹನ ದಂಡು ಏರಿ ಬಂದಿತು. ಎಲ್ಲರೂ ಅಡಿಗೆ ಬಿಟ್ಟು ಓಡಿದರು (೮೩). ವಿಷದ ಅಡಿಗೆ ಉಂಡು ನರಸಿಂಹನ ದಂಡು ತಮ್ಮ ತಮ್ಮಲ್ಲಿ ಹೊಡೆದಾಗಿ ಮೂರ್ಛೆ ಹೋದರು (೮೫). ಗಂಗಯ್ಯನ ಸೂಚನೆಯಂತೆ ಹೊನ್ನವಳ್ಳಿಯ ವೇದರಾಜ ಬಂದು ಮಂತ್ರಜಲ ಸಿಂಪಡಿಸಲು ಮೂರು ಸಾವಿರ ಸೈನ್ಯ ಮೂರ್ಛೆಯಿಂದ ಎಚ್ಚರವಾಗತೊಡಗಿತು (೯೦). ಒಂದು ರಾತ್ರಿ ಕಳೆಯಿತು. ಮುಂಜಾನೆ ಯುದ್ಧ ಪ್ರಾರಂಭವಾಯಿತು (೧೧೦). ಹೀಗಿರುತ್ತಿರಲು ಕಾಕಿಯ ವಿಶ್ವರಾಜನಿಗೆ ಈ ಸುದ್ಧಿ ತಿಳಿಯಿತು. ತನ್ನ ಭಾವ ನರಸಿಂಹನ ನೆರವಿಗಾಗಿ ಪ್ರಳಯಕಾಡು ಪಟ್ಟಣದಿಂದ ೭ ದಿನ ಪ್ರಯಾಣಿಸಿ, ೬೦ ಸಾವಿರ ಸೈನ್ಯದೊಂದಿಗೆ ಬಂದ (೧೧೯). ಈ ಸುದ್ದಿಯನ್ನು ಗಿಂಡಿಯ ತಿಮ್ಮನ ಮೂಲಕ ಕೇಳಿದ ಸಿರುಮ ತನ್ನ ಪರಿವಾರವನ್ನು ಕರೆಯಿಸಿದನು (೧೩೨-೩೩). ಮಗ ವೀರಣ್ಣ, ಮಲ್ಲಣ್ಣ, ಹಿರಿಯಮಗ (ಕಾಚಣ್ಣ), ಅಳಿಯ ತಿಪ್ಪ, ಬೆಲಗೂರ ಭೈರ ಬಂದರು (೧೪೦). ರಣವೀಳ್ಯೆಯನ್ನು ವೀರಣ್ಣ ಎತ್ತಿಕೊಂಡು, ತಾಯಿಯ ಹತ್ತಿರ ಬಂದು ಆರ್ಶೀವಾದ ಪಡೆದನು (೧೪೬). ಸಂಗಡಿಗರೊಡನೆ ಕೊತ್ತಳವೇರಿ ನಿಂತು ವೈರಿಗಳನ್ನು ತುಂಡರಿಸಿತೊಡಗಿದನು (೧೫೬). ನರಸಿಂಹನಿಂದ ವಿಶ್ವರಾಜ ವೀಳ್ಯೆ ಸ್ವೀಕರಿಸಿ ವೀರಣ್ಣನಿಗೆ ಎದುರಾದನು (೧೫೭). ವೀರಣ್ಣ ೩೦೦ ಜನ ಭಟರನ್ನು ಸೂರೆಮಾಡಿದನು (೧೬೫). ವಿಶ್ವರಾಜ ಕೋಟೆ ಏರಿದ (೧೬೯). ವೀರಣ್ಣ  ಮತ್ತು ವಿಶ್ವರಾಜನ ಕಾಳಗ ನಿಕರವಾಗಿ, ವಿಶ್ವರಾಜ ಸತ್ತನು (೧೭೯). ಇದನ್ನು ಕೇಳಿ ಮರುಗಿದ ನರಸಿಂಹ, ವಿಶ್ವರಾಜನ ತಲೆಯನ್ನು ತರಲು ಭಟ್ಟರ ಮಲ್ಲನನ್ನು ಕಳಿಸಿದನು (೧೮೨). ಮಲ್ಲ ವಿಶ್ವರಾಜನ ತಲೆಯನ್ನು ಯಾಚಿಸಿ ತಂದನು (೧೮೫-೧೯೪). ವಿಶ್ವರಾಜನ ಹೆಂಡಿರು ಮಾಸ್ತಿಯಾದರು (ಆಚರಣೆಯ ವಿವರಗಳಿವೆ) (೧೮೬-೧೯೪). ವೀರಣ್ಣನಿಗೆ ಗುರಿಯಿಡಲು ನರಸಿಂಹ ಡೆಂಕಣಿ ತಿಪ್ಪನಿಗೆ ಸೂಚಿಸಿದ (೧೯೯). ಗುಂಡು ತಾಗಿ ವೀರಣ್ಣ ಮಡಿದ (೨೦೭). ವೀರಣ್ಣನ ಮರಣ ಸುದ್ದಿಯನ್ನು ಸಿರುಮನಿಗೆ ತಿಳಿಸಲಾಯಿತು (೨೧೦). ಮರಣ ಸುದ್ಧಿ ಕೇಳಿ ಪರಿವಾರ ಗೋಳಿಟ್ಟಿತು (೨೧೫). ವೀರಣ್ಣನ ಹೆಂಡಿರು ಸಮಾಧಿ ಪ್ರವೇಶಕ್ಕೆ ಸಿದ್ಧರಾದರು. ಗಂಡನ ಜತೆ ಹೆಂಡಿರನ್ನು ಸಮಾಧಿ ಮಾಡಿದರು (೨೨೦-೨೪೪).

ಸಂಧಿ : ನಾಲ್ಕು

ವೀರಣ್ಣನ ವೀರಮರಣದ ಸುದ್ಧಿಯನ್ನು ಸಿರುಮನ ಸ್ನೇಹಿತನಾದ ಹೊನ್ನವಳ್ಳಿಯ ವೇದರಾಜ ತಿಳಿದು ಮಮ್ಮಲ ಮರುಗಿದನು. ರುದ್ರರಾಜನ ಜೊತೆಗೂಡಿ ನರಸಿಂಹನನ್ನು ಕಂಡನು (೧-೩). ಕಪ್ಪುಕಾಣಿಕೆ ಕೊಟ್ಟರೆ ಒಪ್ಪಂದ ಮಾಡಿಕೊಳ್ಳುವುದಾಗಿ ನರಸಿಂಹ ತಿಳಿಸಿ ರುದ್ರರಾಜನನ್ನು ಸಿರುಮನಲ್ಲಿಗೆ ಕಳಿಸಿದನು (೪-೫). ರುದ್ರರಾಜ ಕೋಟೆಯ ಹತ್ತಿರ ಬಂದು ತನ್ನ ಇಂಗಿತವನ್ನು ಕೂಗಿಹೇಳಿದ ಸಿರುಮಯ್ಯ ಆಳುವೇರಿಯ ಮೇಲೆ ನಿಂತು ಅಭಿಪ್ರಾಯ ತಿಳಿದುಕೊಂಡ (೬-೧೦). ಬೀಗನಾಗಿ ಆಡಿದ ಮಾತುಗಳಿಗೆ ಮೆಚ್ಚಿಕೊಂಡನಾದರೂ “ಅಳಿವುದು ಕಾಯ, ಉಳಿವುದು ಕೀರ್ತಿ”; ಆದುದರಿಂದ ನಾನು ಹೋರಾಟವನ್ನು ಮುಂದುವರಿಸುವುದಾಗಿ ಭಾವನಾದ ರುದ್ರರಾಜನಿಗೆ ಸಿರುಮಯ್ಯ ಹೇಳಿ ಮರಳಿಸಿದ ( ೧೧-೧೬). ಇದನ್ನು ಅನಮೋದಿಸುವ ರೀತಿಯಲ್ಲಿ ಮಗ ಮಲ್ಲಣ್ಣನೂ ನುಡಿದ (೧೭-೧೯). ಈ ಸುದ್ದಿಯನ್ನು ರುದ್ರರಾಜನ ಮೂಲಕ ಕೇಳಿ ಕೆಂಡವಾದ ನರಸಿಂಹ ಬೂದಿಹಾಳು ಕೋಟೆಗೆ ಮುತ್ತಿಗೆ ಹಾಕಲು ತನ್ನ ಮಂತ್ರಿ ಈಶ್ವರನಾಯಕನಿಗೆ ಆದೇಶ ನೀಡಿದನು. ಬೂದಿಹಾಳು ಬಹು ದೊಡ್ಡ ಮುತ್ತಿಗೆಗೆ ಒಳಪಟ್ಟಿತು (೨೦-೨೫). ಕುಮಾರಬಲ್ಲ ಸೈನ್ಯವನ್ನು ಎದುರಿಸಿದರು(೨೬-೩೫). ಸಿರುಮನ ಮಕ್ಕಳಾದ ಸೋಮಣ್ಣ, ಕಾಚಣ್ಣ ಹೋರಾಡಿದರು (೩೬). ಸಿರುಮಣ್ಣ ಮಗನನ್ನು ಸತ್ಕರಿಸಿದ. ಬಿರುದನ್ನು ಪಗುಡಕ್ಕೆ ಹಾಕಿಸಿದ (೫೦-೫೧). ಬಿರುದನ್ನು ಹಿಂದಿರುಗಿಸಲು ಸಿರುಮ ನಿರಾಕರಿಸಲಾಗಿ ನರಸಿಂಹ ಉಗ್ರವಾಗಿ ದಾಳಿಮಾಡಿದ (೫೬-೬೩). ನರಸಿಂಹನ ಏಳು ಸಾವಿರ ಸೈನ್ಯ ಸತ್ತಿತ್ತು. ಕತ್ತಲೆ ಮುಸುಕಿತು (೬೫-೬೬). ಸಿರುಮಣ್ಣ ತನ್ನ ಭಟರನ್ನು ಕರೆಯಿಸಿದ (೭೩-೯೦). ಸಿರುಮನ ಭಟರು ಕತ್ತಲೆಯೊಳಗೆ ಮುನ್ನಡೆದರು (೯೧-೯೪). ಸಿರುಮನ ಭಟರು ಸೆಳೆದುತಂದ ಸಂಪತ್ತನ್ನು ಒಡೆಯ ಸಿರುಮನಿಗೆ ಒಪ್ಪಿಸಿದರು (೧೧೦-೧೧೩). ಸೂ‌ರ್ಯೋದಯವಾಯಿತು (೧೧೮).

ಸಂಧಿ : ಐದು

ಸಿರುಮ ಡೆಂಕಣಿಯನ್ನು ಹೂಡಿ ಯುದ್ಧಕ್ಕೆ ಸನ್ನಧವಾದ (೧-೪). ಹಾವುಗಾರರ ಸೋಗುಹಾಕಿ ಬೆಲಗೂರ ಭೈರ, ಅಳಿಯ ತಿಪ್ಪ, ತಮ್ಮ ಸೋಮಣ್ಣ, ಕುಮಾರಮಲ್ಲ ಮೊದಲಾದವರು ಸಿರುಮನಲ್ಲಿಗೆ ಬಂದರು (೫-೧೪). ತಂದೆಯಿಂದ ಬೀಳ್ಕೊಂಡು ನರಸಿಂಹನ ಓಲಗಕ್ಕೆ ಹೋದರು (೧೫-೨೦). ನರಸಿಂಹನ ಮುಂದೆ ತಮ್ಮ ವಿದ್ಯೆ ತೋರಿಸಿ ಸಂತೋಷ ಪಡಿಸಿದರು (೨೧-೨೭). ಬಳಿಕ ರಾಜನ ಕುದುರೆಯನ್ನು ಇರಿದರು, ತಾವು ಒಯ್ದಿದ್ದ ಹಾವುಗಳನ್ನು ಬಿಟ್ಟು ಸೈನ್ಯವನ್ನು ನಾಶಮಾಡಿದರು (೨೮-೩೨). ಇದರಿಂದ ಸಿಟ್ಟಿಗೆದ್ದ ನರಸಿಂಹ ಕೋಟೆಯ ಬಳಿಗೆ ಹೋಗಲು ನೆಲಗನ್ನ ತೋಡಿಸುವ ವ್ಯವಸ್ಥೆ ಮಾಡಿದ (೩೩-೩೪). ಇದನ್ನು ಕೇಳಿ ಸಿರುಮ ಈ ನೆಲಗನ್ನದಲ್ಲಿಯೇ ನರಸಿಂಹನ ೩೦೦ ಜನರನ್ನು ಕೊಂದನು (೩೫-೩೭). ಸಿರುಮನ ಸೈನ್ಯದ ಗುಜ್ಜಲೋಬ ನೂರಾಳು ಸಹಿತ ನರಸಿಂಹನಲ್ಲಿಗೆ ಬಂದ (೪೪-೪೬). ಬೆಲಗೂರು ಭೈರ, ಆನೆಪ್ಪನಾಯಕ ಸಿರುಮನನ್ನು ಬಿಟ್ಟು ಬಂದರು (೪೭-೪೯) ಈ ಸುದ್ದಿಯನ್ನು ಕೇಳಿ ಚಿಕ್ಕಾಯಿ ತಮ್ಮನಾದ ಬೆಲಗೂರು ಭೈರನನ್ನು ಶಪಿಸಿದಳು (೫೨-೫೫). ಸಿರುಮ ಯುದ್ಧಕ್ಕೆ ಸಿದ್ದನಾದ (೫೬-೬೦). ಸಿರುಮ ಹೆಂಡತಿಯೊಂದಿಗೆ ಸೋಮೇಶ್ವರ ವೀರಭದ್ರ ದೇಗುಲಕ್ಕೆ ಬಂದು ವಂದಿಸಿದ (೬೧-೬೪). ನಿರಾಸೆಯ ಮಠಕ್ಕೆ ಬಂದು ಮಹಂತಿಗೆ ನಮಸ್ಕರಿಸಿದ (೬೭). ಮಹಂತು ಆಶೀರ್ವದಿಸಿ ಸಿರುಮನ ಸ್ಥಿತಿಗಾಗಿ ಮರುಗಿ, ವೇಷ ಮರೆಯಿಸಿಕೊಂಡು ಹೋಗುವಂತೆ ಅವನಿಗೆ ಸೂಚಿಸಿದನು. ಇದಕ್ಕೆ ಸಿರುಮ ಒಪ್ಪಲಿಲ್ಲ. ರಣಾಂಗಣಕ್ಕೆ ನಡೆದ (೬೯-೭೧). ಕಪ್ಪುಕಾಣಿಕೆ ನೀಡಿ ಬದುಕಲು ತಮ್ಮನಾದ ಮಲ್ಲಣ್ಣ ಸೂಚಿಸಿದ (೬೩-೭೪). ಸಿರುಮ ಇದಕ್ಕೆ ಒಪ್ಪಲಿಲ್ಲ. ಅವನ ಪರಿವಾರ ಯುದ್ಧವನ್ನೇ ಬೆಂಬಲಿಸಿತು (೭೫-೭೯). ಈ ಕಡೆ ಈಶ್ವರಿನಾಯಕನೊಂದಿಗೆ ಬೆಲಗೂರು ಭೈರ ನರಸಿಂಹನನ್ನು ಕಂಡು ಬೂದಿಹಾಳಿನ ಸ್ಥಿತಿಗತಿಗಳನ್ನು ವಿವರಿಸಿದ (೮೫). ಸಿರುಮ ತನ್ನ ರಾಜಧಾನಿಯಲ್ಲಿ ದೊಡ್ಡ ಕೊಂಡ ತೋಡಿಸಿದ (೯೦). ಅದರಲ್ಲಿ ರೇಶಿಮೆ ಬಟ್ಟೆ, ಸಮಸ್ತ ವಸ್ತುಸಾಮಗ್ರಿ ಹಾಕಿ ಸುಡಿಸಿದ (೯೧-೯೪). ಅರಮನೆಯ ಹೆಣ್ಣುಮಕ್ಕಳನ್ನು ಕೊಂದು ಉರಿಗೆ ಆಹುತಿ ನೀಡಬೇಕೆಂದು ಸಿರುಮ ಮಲ್ಲಣ್ಣನಿಗೆ ಆದೇಶ ನೀಡಿದ (೧೦೬). ಮಹಿಳೆಯರೆಲ್ಲ ಸಿಂಗರಿಸಿಕೊಂಡು ಗೌರಿಯನ್ನು ಪೂಜಿಸಿ ಕೊಂಡಕ್ಕೆ ಬಂದರು (೧೧೩). ಸಿರುಮ ಹೆಂಡಿರು, ಮಕ್ಕಳನ್ನೆಲ್ಲ ಇರಿದು ಕೊಂಡಕ್ಕೆ ನೂಕಿಸಿದ (೧೨೦). ಮಲ್ಲಣ್ಣ ಎಲ್ಲ ದಾಸಿಯರನ್ನು, ಮಕ್ಕಳನ್ನು ಎಳೆದು ತಂದು ಬೆಂಕಿಗೆ ಹಾಕಿದ (೧೨೨). ಬೆಕ್ಕು, ಗಿಳಿ, ಪಾರಿವಾಳಗಳನ್ನೂ, ಏರುವ ಕುದುರೆಗಳನ್ನೂ ಕೊಂದು ಕಿಚ್ಚಿಗೆ ನೂಕಿದ (೧೩೮). ವಾದ್ಯ, ಆಭರಣ, ಹಾಸಿಗೆ ಹೊದಿಕೆಗಳನ್ನು ಸುಟ್ಟ (೧೪೦). ಸಿರುಮನ ತಮ್ಮ ಮಲ್ಲಣ್ಣನು ವೈರಿಗಳನ್ನು ಧ್ವಂಸ ಮಾಡುತ್ತಿದ್ದಂತೆಯೇ ಅವರ ಬಾಣಕ್ಕೆ ಹತನಾದ (೧೪೮). ಇವನನ್ನಲದೆ ಕಾದಿ ಬಳಲಿದ ಮಗ ಕಾಚನನ್ನೂ ಕೊಂದು ಸಿರುಮ ಬೆಂಕಿಗೆ ನೂಕಿದ (೧೫೦). ಸಿರುಮಣ್ಣ ಸತಿಯೊಡನೆ ಉಪ್ಪರಿಗೆ ಏರಿ ವೈರಿಗಳನ್ನು ಗಾಸಿಗೊಳಿಸಿದ (೧೫೪). ಅಳಿಯ ತಿಪ್ಪಯ್ಯ ಹಡಪದ ಹಲಗ ಹೋರಾಡುತ್ತ ಮಡಿದರು (೧೫೮, ೧೫೯). ಹೆಗ್ಗೆರೆ ನಾಗಣ್ಣ ಮಡಿದನು (೧೬೪). ಹಿರಿಯ ಸೋಮಣ್ಣ, ತಳವಾರ ಲಿಂಗರಸಯ್ಯ, ನಂಬೆಣ್ಣನಾಯಕ, ಪ್ರಧಾನಿ ಕಲ್ಲರಸಯ್ಯ ಅರಮನೆ ಮುಂದೆ ನಿಂತು ಹೋರಾಡಿದರು (೧೬೫). ಹೆಂಡತಿ ಚಿಕ್ಕಾಯಿಯನ್ನು ಸಿರುಮೆ ಕೊಂದು ಕೊಂಡಕ್ಕೆ ನೂಕಿದ (೧೮೧). ನರಸಿಂಹನ ಪರಿವಾರ ಅರಮನೆಯನ್ನು ಮುತ್ತಿತ್ತು (೧೯೧). ಅಷ್ಟರಲ್ಲಿ ಸಿರುಮ ಗಾಯಗೊಂಡನು (೧೯೮). ತನ್ನ ಕೊರಳ ಕತ್ತರಿಸಿ ಬೆಂಕಿಗೆ ಹಾಕಲು ಮಗ ಮಲ್ಲಣ್ಣನಿಗೆ ಸಿರುಮ ಒತ್ತಾಯಿಸಿದ (೨೨೨). ಅನಿವಾರ್ಯವಾಗಿ ಮಲ್ಲಣ್ಣ ತಂದೆಯ ತಲೆಯನ್ನು ಕಡಿದು, ಸುಡುತ್ತಿದ್ದ ತಾಯಿಯ ಕೊಂಡಕ್ಕೆ ಹಾಕಿದ (೨೨೮). ನರಸಿಂಹನ ದಂಡನ್ನು ಸಂಹರಿಸಲು ಮಲ್ಲಣ್ಣ ಸಿದ್ಧನಾದ (೨೩೨).

ಸಂಧಿ : ಆರು

ಮಲ್ಲಣ್ಣ, ಲಿಂಗರಸ, ಕಲ್ಲರಸರು ವೈರಿ ಸೈನ್ಯದೊಂದಿಗೆ ಹೋರಾಟ ಮುಂದುವರಿಸಿದರು. (೯). ಕುಮಾರಮಲ್ಲನನ್ನು ವೈರಿಗಳು ಇರಿದರು (೧೯).ಮಲ್ಲಣ್ಣ ತನ್ನೆದುರು ಬಿದ್ದಿದ್ದ ಲಿಂಗರಸ, ಕಲ್ಲರಸರನ್ನು ಎತ್ತಿಕೊಂಡು ನಡೆದನು (೨೦). ಈಶ್ವರನಾಯಕ ಮಲ್ಲಣ್ಣನನ್ನು ತಿವಿದನು (೩೩). ಮಲ್ಲಣ್ಣನು ಲಿಂಗರಸ, ಕಲ್ಲರಸರೊಂದಿಗೆ ಕೊಂಡದಲ್ಲಿ ಧುಮುಕಿದನು (೫೨). ದೇವತೆಗಳು ಹೊಗಳಿದರು. ಹೂಮಳೆಗರೆದರು (೫೪). ಶಿವ ಮಲ್ಲಣ್ಣನಿಗೆ ಪ್ರತ್ಯಕ್ಷನಾದ (೫೫). ತನ್ನ ತಂದೆ, ತಾಯಿ, ಪರಿವಾರವನ್ನು ಕೈಲಾಸಕ್ಕೆ ಒಯ್ಯಲು ಮಲ್ಲಣ್ಣ ಬೇಡಿಕೊಂಡ (೫೬-೫೭). ಬೂದಿಹಾಳಿನ ಸಿರುಮೆ ಬರುವುದನ್ನು ತಿಳಿದು, ಕೈಲಾಸದಲ್ಲಿದ್ದ ಚೋಳ, ಚೇರ, ಗುಂಡಬ್ರಹ್ಮ, ಚಿಕ್ಕಯ್ಯ, ರಾಮಯ್ಯ ಮೊದಲಾದವರೆಲ್ಲ ಇರಿದುಗೊಂಡರು. ವೀರಶೈವ ರಾಜರೆಲ್ಲ ಅಪ್ಪಿಕೊಂಡರು, ಬರಮಾಡಿಕೊಂಡರು (೬೪-೬೫). ಶಿವ ಎಲ್ಲರಿಗೂ ಸಾಯುಜ್ಯಪದವಿ ನೀಡಿದ (೬೯).

ಈ ಕಡೆ ನರಸಿಂಹ ಮತ್ತು ಈಶ್ವರನಾಯಕ ಸಿರುಮನ ಅರಮನೆಗೆ ಬಂದರು. ಸುಟ್ಟು, ಕರಕಾದ ವಸ್ತು-ವಾಹನ, ಹೊತ್ತಿಹೊಗೆಯೆದ್ದ ಮುತ್ತು-ಮಾಣಿಕ, ಬೆಳ್ಳಿ-ಬಂಗಾರವನ್ನೆಲ್ಲ ನೋಡಿ ಬೆರಗಾದರು (೬೯-೭೧). ಶಿವಭಕ್ತನೂ, ಮಹಾಶೂರನೂ ಆದ ಸಿರುಮನನ್ನು ನಾಶಮಾಡಿದ ಪಾಪವನ್ನು ಕಾಶಿ-ಕೇದಾರಗಳಲ್ಲಿ ನೀಗುವೆನೆಂದು ನರಸಿಂಹ ನುಡಿದ (೭೫). ನರಸಿಂಹ ಕೊಂಡದ ಮೇಲೆ ಗುಡಿಗೋಪುರ ಕಟ್ಟಿಸಿ ಆದಿಲಿಂಗ ನಿರ್ಮಿಸಿದ (೭೭-೭೮). ಬೂದಿಹಾಳಿನ ಆಡಳಿತಕ್ಕೆ ರುದ್ರರಾಜನನ್ನು ನೇಮಿಸಿ ನರಸಿಂಹ ವಿಜಯನಗರಕ್ಕೆ ಹೋದ (೬೯). ಪಂಪಾವಿರೂಪಾಕ್ಷನಿಗೆ ವಂದಿಸಿ ಸುಖದಲ್ಲಿದ್ದನು (೮೧). ಸಿರುಮನ ಕಾವ್ಯವನ್ನು ಕೇಳಿದವರಿಗೆ ಪುಣ್ಯಪ್ರಾಪ್ತಿಯಾಗುತ್ತದೆ (೮೨). ಆಸೆಗೋಡ ಶಂಭುಮಲ್ಲೇಶ ಸಲಹುತ್ತಾನೆ (೮೩).

ಇತಿಹಾಸ

ದೇಶವೆಂಬುದು ಅನೇಕ ಆಶಯಗಳ ವಿಶಿಷ್ಟಕೋಶ. ಈ ಎಲ್ಲ ಆಶಯಗಳಿಗೆ ಸ್ಪಂದಿಸುತ್ತ ಬಂದ ಜನವರ್ಗ ಮಾತ್ರ ಪರಿಪೂರ್ಣಸಮಾಜವೆನಿಸಿಕೊಳ್ಳುತ್ತದೆ. ಕರ್ನಾಟಕದ ಮಟ್ಟಿಗೆ ವೀರಶೈವವೂ ಅಂಥ ಒಂದು ಪರಿಪೂರ್ಣ ಜನವರ್ಗವೆನಿಸಿದೆ. ಲೌಕಿಕದಿಂದ ಪಾರಮಾರ್ಥಿಕ ವರೆಗಿನ ಜೀವನದ ಎಲ್ಲ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ತಾನು ಬೆಳೆಯುವುದರೊಂದಿಗೆ ದೇಶವನ್ನೂ ಬೆಳೆಸಿದ ಜನಾಂಗವಿದು. ಹೀಗಾಗಿ ಧರ್ಮತತ್ವ, ಮತಾಚರಣೆ, ಸಾಹಿತ್ಯಸೃಷ್ಟಿ ಮೊದಲಾದ ಕ್ಷೇತ್ರಗಳಲ್ಲಿಯಂತೆ ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೂ ಸ್ಪಂದಿಸುತ್ತ ಬಂದ ಹಿರಿಮೆ ಈ ಸಮಾಜದ್ದಾಗಿದೆ. ಆದರೆ ಈವರೆಗೆ ವೀರಶೈವದ ಧಾರ್ಮಿಕ, ಸಾಹಿತ್ಯಕ ಕೊಡುಗೆಗಳ ಅಧ್ಯಯನಕ್ಕೆ ಮಾತ್ರ ಗಮನ ಹರಿಸಿದ ವಿದ್ವಾಂಸರು, ಅವರ ರಾಜಕೀಯ ಕಾಣಿಕೆಯನ್ನೂ ಬೆಳಕಿಗೆ ತರಬೇಕಾಗಿದೆ.

ವೀರಶೈವ ಸ್ಪಷ್ಟ ಆಕಾರ ಪಡೆದುದು ೧೨ನೆಯ ಶತಮಾನದಲ್ಲಿ, ಹೀಗಾಗಿ ಇದರ ರಾಜಕೀಯ ಚಟುವಟಿಕೆ ಇಲ್ಲಿಂದ ಪ್ರಾರಂಭವಾಗುತ್ತಿದ್ದರೂ ಇದಕ್ಕೂ ಸ್ವಲ್ಪ ಹಿಂದೆ ಇದರ ಬೇರುಗಳು ಗೋಚರಿಸುತ್ತವೆ.

ಕಲ್ಯಾಣ ಚಾಲುಕ್ಯ ಮನೆತನವನ್ನು ಸ್ಥಾಪಿಸಿದ ಅಹವಮಲ್ಲ ತೈಲಪ, ಜಯಸಿಂಹನ ರಾಣಿ ಸುಗ್ಗಲೆ, ವಿಕ್ರಮಾದಿತ್ಯನ ರಾಣಿ ಲಕ್ಷ್ಮೀದೇವಿ, ಮಂತ್ರಿ ಕೊಂಡಗುಳಿ ಕೇಶಿರಾಜ, ಸಾಮಂತ ತೆಲುಗು ಜೊಮ್ಮಯ್ಯಗಳು ವೀರಶೈವ ಸಾಹಿತ್ಯದಲ್ಲಿ ಎಡೆಪಡೆದಿದ್ದಾರೆ. ಶರಣ ಚಾಳುಕ್ಯ ಭೀಮ, ಬಿಜ್ಜಳನ ಆಸ್ಥಾನದ ಸಚಿವರಾದ ಬಸವಣ್ಣ, ಚೆನ್ನಬಸವಣ್ಣ, ಗಣಕಾಧಿಕಾರಿ ಸೊಡ್ಡಳ ಬಾಚರಸ, ಸೈನ್ಯವ್ಯವಸ್ಥೆಯ ಜಗದೇವ, ಮಲ್ಲಿಬೊಮ್ಮಣ್ಣ ಇವರೆಲ್ಲ ರಾಜಕೀಯ ಕ್ಷೇತ್ರದ ವ್ಯಕ್ತಿಗಳೆಂಬುದನ್ನು ಗಮನಿಸಬೇಕು. ಹೊಯ್ಸಳರ ಆಸ್ಥಾನದಲ್ಲಿ ಕೆರೆಯ ಪದ್ಮರಸರ, ಈತನ ಮಾವ ಗೌರಪದಣಾಯಕರು ಅಧಿಕಾರಿಯಾಗಿದ್ದರು. ದೇವಗಿರಿಯಾದವರೂ ಅವರ ಮಂತ್ರಿಗಳೂ ಸಿದ್ಧರಾಮ ಕಟ್ಟಿಸಿದ ಕಪಿಲಸಿದ್ದ ಮಲ್ಲಿಕಾರ್ಜುನದೇವಾಲಯಕ್ಕೆ ದಾನ ನೀಡುವ ಮೂಲಕ ಭಕ್ತಿಯಿಂದ ನಡೆದುಕೊಂಡಿದ್ದಾರೆ. ವೀರಶೈವಕಾವ್ಯ “ಭಿಲ್ಲರಾಯನ ಚರಿತೆ”ಯ ಕಥಾನಾಯಕ ಈ ಮನೆತನದ ಭಿಲ್ಲಮರಾಯನಾಗಿರಬೇಕೆಂದು ವಿದ್ವಾಂಸರು ಊಹಿಸುತ್ತಾರೆ. ಇನ್ನೊಬ್ಬ ಅರಸು ರಮರಾಯನನ್ನು ಶಿವತತ್ತ್ವಚಿಂತಾಮಣಿಯು “ಜಂಗಮಪ್ರೇಮಿ” ಎಂದು ವರ್ಣಿಸಿದೆ. ಗೋವೆಯ ಕದಂಬ ವಂಶದ ವಜ್ರರಾಯನು ಶರಣರೊಂದಿಗೆ ಶಿವನ ಒಡ್ಡೋಲಗದಲ್ಲಿ ಇದ್ದನೆಂದು ತಿಳಿಸುತ್ತ ಸಾನಂದಚರಿತೆ ಇವನು ವೀರಶೈವನೆಂಬುದನ್ನು ದೃಢಪಡಿಸುತ್ತದೆ.

ಮೋಪುರಿನ ಅರಸು ಸಂಗಮರಾಜನ ಮಗ ಭೈರವನು ಭೈರವೇಶ್ವರ ಕಾವ್ಯದ ಕಥಾನಾಯಕನಾಗಿದ್ದಾನೆ. ಕುರುಗೋಡಿನ ಸಿಂಧವಂಶದ ರಾಚಮಲ್ಲ, ಇಮ್ಮಡಿ ರಾಚಮಲ್ಲರು ವೀರಶೈವರೆಂದು ಕಾವ್ಯಗಳು ತಿಳಿಸುತ್ತವೆ. ಓರಂಗಲ್ಲಿನ ಕಾಕತೀಯ ಗಣಪತಿರಾಯನ ಶಿವಭಕ್ತಿಯನ್ನು ಗುಂಡಬೊಮ್ಮಯ್ಯನ ಪ್ರಸಂಗ ಸ್ಪಷ್ಟಪಡಿಸುತ್ತದೆ. ಈತನ ಅರಮನೆಯ ಗೋಡೆಯ ಮೇಲೆ ಶರಣರ ಚಿತ್ರ ಬಿಡಿಸಲಾಗಿದ್ದ ವಿಷಯ ಗುಂಡಬ್ರಹ್ಮಯ್ಯನ ಚರಿತೆಯಲ್ಲಿದೆ. ಹಗರಟಿಗೆಯ ಭೈಸರಸರು ವೀರಮಾಹೇಶ್ವರ ನಿಷ್ಠೆಯ ವೀರಶೈವರೆಂದು ತಾಳಿಕೋಟೆ ಶಾಸನ ತಿಳಿಸುತ್ತದೆ. ಯಾದವರ ಕೈಕೆಳಗೆ ಮುಳಗುಂದ ನಾಡನ್ನಾಳುತ್ತಲಿದ್ದ ಹೊನ್ನಬೊಮ್ಮಶೆಟ್ಟಿಯ ಜಂಗಮಭಕ್ತಿಯನ್ನು ರಟ್ಟಿಹಳ್ಳಿಶಾಸನ ಸಾರುತ್ತದೆ. ತೊರಗಲೆಂದು ಕಲ್ಲರಸನ ರಾಣಿ ವೀರಕನ್ನಾದೇವಿಯ ವಿಷಯ ಚೌಡದಾನಪುರ ಶಾಸನದಲ್ಲಿದೆ. ಉದ್ಘಟಕಾವ್ಯದ ಕರ್ತೃ ಸೋಮರಾಜ, ಸಿಂಗಿರಾಜ ಪುರಾಣದ ಕರ್ತೃ ಸಿಂಗಿರಾಜ ಮತ್ತು ನಿಜಗುಣಶಿವಯೋಗಿಗಳು ರಾಜರಾಗಿದ್ದರೆಂದು ತಿಳಿದುಬರುತ್ತದೆ.

ಈ ತರುವಾಯ, ಅಸ್ತಿತ್ವಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಭೂತ ವ್ಯಕ್ತಿ ವೀರಶೈವಗುರು ಕ್ರಿಯಾಶಕ್ತಿಯತಿರಾಯ. ಗಂಗಾದೇವಿಯ ಮಧುರಾ ವಿಜಯಂ, ಲಕ್ಕಣದಂಡೇಶನ ಶಿವತತ್ವ ಚಿಂತಾಮಣಿಗಳಲ್ಲಿ ಇವನ ಪ್ರಸ್ತಾಪವಿದೆ. ಈ ಮನೆತನದ ಪ್ರೌಢದೇವರಾಯ ವೀರಶೈವನಾಗಿದ್ದು, ಇವನ ಆಸ್ಥಾನದಲ್ಲಿ ಕರಸ್ಥಲದ ವೀರಣ್ಣ, ಜಕ್ಕಣಾರ‍್ಯ, ಲಕ್ಕಣದಂಡೇಶ, ಗುರುರಾಯರು ಅಧಿಕಾರಿಗಳಾಗಿದ್ದರು. ಚಾಮರಸನು ಈ ಪ್ರೌಢದೇವರಾಯನಲ್ಲಿ ಮಂತ್ರಿಯಾಗಿದ್ದನೆಂದು ಕೆಲವು ಕೃತಿಗಳು ತಿಳಿಸುತ್ತವೆ.

ವಿಜಯನಗರ ಮನೆತನದ ಸಂದರ್ಭದಲ್ಲಿ ಅನೇಕ ವೀರಶೈವ ಪಾಳೆಯಗಾರರು ತಲೆಯೆತ್ತಿದರು. ಅವರಲ್ಲಿ ಬೂದಿಹಾಳ ಸಿರುಮನ ಮನೆತನವೂ ಒಂದು. ಈ ಮನೆತನದ ಹೋರಾಟಕ್ಕೆ  ಸಂಬಂಧಪಟ್ಟ ಒಂದು ಘಟನೆ ಸಿರುಮನ ಚರಿತೆಯ ವಸ್ತು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಇಂದಿನ ಶ್ರೀರಾಮಪುರ (ಬೂದಿಹಾಳು)ದಲ್ಲಿ ಆಳುತ್ತಲಿದ್ದ ಪಾಳೆಯಗಾರ ಸಿರುಮನು, ಸಾಳುವ ನರಸಿಂಹನೊಡನೆ ನಡೆಸಿದ ಯುದ್ಧ ಘಟನೆಯಿದು. ಸಾಳುವ ನರಸಿಂಹ ೧೪೫೬-೬೬ ರವರೆಗೆ ಪೆನುಗೊಂಡೆ – ಚಂದ್ರಗಿರಿಗಳಲ್ಲಿ ರಾಜ್ಯಪಾಲನಾಗಿ, ೧೪೬೬-೯೧ ರವರೆಗೆ ವಿಜಯನಗರದಲ್ಲಿ ಸಾಮ್ರಾಟನಾಗಿ ರಾಜ್ಯಭಾರ ನಡೆಸಿದ್ದು, ಸಿರುಮನೊಂದಿಗಿನ ಯುದ್ಧ ರಾಜ್ಯ ಪಾಲನಾಗಿರುವ ಸಂದರ್ಭದಲ್ಲಿ ಜರುಗಿರಬೇಕು. ಈ ಯುದ್ಧಕಾರ್ಯದಲ್ಲಿ ತೊಡಗಿದ್ದ ಗ್ರಾಮಗಳು, ವ್ಯಕ್ತಿಗಳು, ಯುದ್ಧದ ಪ್ರತಿಯೊಂದು ಚಟುವಟಿಕೆಗಳು – ಇತ್ಯಾದಿಗಳಿಂದಾಗಿ ಇದೊಂದು ಅಪೂರ್ವ ಐತಿಹಾಸಿಕ ಕೃತಿಯಾಗಿದೆ. ಇದು ರಾಜಕೀಯ ಘಟನೆಯಾಗಿದ್ದರೂ ಅಲ್ಲಲ್ಲಿ ಹೆಣೆದುಕೊಂಡ ಸಾಮಾಜಿಕ ಜೀವನವ್ಯಾಪಾರ, ಸಾಂಸ್ಕೃತಿಕ ಮೌಲ್ಯಗಳು ಅಭ್ಯಾಸಯೋಗ್ಯವೆನಿಸಿದೆ. ಇವುಗಳ ವಿವರವಾದ, ಖಚಿತವಾದ ಅಭ್ಯಾಸ ಮುಂದುವರಿಯುವುದು ಅತ್ಯವಶ್ಯ.

ಈ ಯುದ್ಧದ ವಿಷಯವು ಸಿರುಮನನ್ನು ಕುರಿತ ಮೂರು ಕೃತಿಗಳಲ್ಲಿ ಒಂದೇ ರೀತಿ ಬರುತ್ತಿದ್ದರೂ ಅಲ್ಲಲ್ಲಿ ವ್ಯತ್ಯಾಸವೂ ಇದೆ. ಇದರಲ್ಲಿ ಯಾವುದು ನಿಜ? ಎಷ್ಟು ನಿಜ? ಎಂಬುದನ್ನು ನಿಶ್ಚಯಿಸಬೇಕಾಗಿದೆ. ಈ ಕೃತಿಗಳಲ್ಲದೆ ಬೆಟ್ಟವರ್ಧನಚರಿತ್ರೆ (ಚಂದ್ರಸಾಗರವರ್ಣಿ)ಯಲ್ಲಿ ಈ ಯುದ್ಧದ ಕೆಲವು ವಿಷಯಗಳು ಬರುತ್ತಿದ್ದು ನರಸಿಂಹನು ಸಿರುಮನನ್ನು ಕೊಂದು “ಹೆಗ್ಗೆರೆ ಬಸದಿಲೆ ಇಡಿಸಿ ಶಾಸನವನೈದಿದನು”[4] ಎಂದೂ ಅಲ್ಲಿ ಹೇಳಲಾಗಿದೆ. ತೆಲುಗು ವರಾಹಪುರಾಣ, ಬಾಲಭಾಗವತಮು ಗ್ರಂಥಗಳಲ್ಲಿಯೂ ಈ ಯುದ್ಧಕ್ಕೆ ಸಂಬಂಧಿಸಿದ ವಿವರಗಳು ಸಿಗುತ್ತವೆ. ಈ ಕೃತಿಗಳ, ಬೇರೆ ಶಾಸನಗಳ ಮತ್ತು ಈ ಪ್ರದೇಶದ ಗ್ರಾಮಗಳ ಅಭ್ಯಾಸದಿಂದ ಸಿರುಮನ ಇತಿಹಾಸವನ್ನು ಪುನರಚಿಸುವ ಕೆಲಸ ನಡೆಯಬೇಕಾಗಿದೆ.

ಸ್ಥಳ ಪರಿಶೀಲನೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಶ್ರೀರಾಮಪುರ ಒಂದು ದೊಡ್ಡ ಹಳ್ಳಿ. ಇದರ ಪ್ರಾಚೀನ ಹೆಸರು ಬೂದಿಹಾಳು. ಇಲ್ಲಿ ಅಳಿದ ಸಿರುಮನಾಯಕನಿಂದಾಗಿ ಸಿರುಮಪುರ, ಶ್ರೀರಾಮಪುರ ಆಗಿದೆಯೋ, ರಾಮಾಯಣದ ಶ್ರೀರಾಮನ ಹೆಸರು ಬೂದಿಹಾಳು ಹೆಸರಿನ ಮೇಲೆ ದಾಳಿ ಮಾಡಿದೆಯೋ ಸ್ಪಷ್ಟವಾಗುವುದಿಲ್ಲ. ಇಲ್ಲಿ ಗೋಪಾಲಸ್ವಾಮಿ, ಆಂಜನೇಯ, ಬನಶಂಕರಿ, ಕುಮಾರಮಲ್ಲಯ್ಯ, ವೀರೇಶ್ವರ, ರೇವಣಸಿದ್ಧ, ಕೊಲ್ಲಾಪುರದಮ್ಮ, ವೀರಭದ್ರ, ಸೋಮೇಶ್ವರ ದೇವಾಲಯಗಳೂ, ಕೋಟೆ ಕೊತ್ತಲ ಇತ್ಯಾದಿ ಅವಶೇಷಗಳೂ ಇವೆ.

ಸಿರುಮನ ಮಕ್ಕಳಲ್ಲಿ ಒಬ್ಬನಾದ ವೀರಭದ್ರನನ್ನು ವೀರಭದ್ರ ದೇವಾಲಯದ ಆವರಣದಲ್ಲಿ ಸಮಾಧಿ ಮಾಡಿದುದಾಗಿ ಸಿದ್ಧಕವಿಯ ಕಾವ್ಯ ತಿಳಿಸುತ್ತದೆ. ಬಹುಶಃ ಇಂದಿನ ವೀರಭದ್ರ ದೇವಾಲಯದ ಎಡಕ್ಕೆ, ಸೋಮೇಶ್ವರ ದೇವಾಲಯದ ಬಲಕ್ಕೆ ಇರುವ ಕರಿಯ ಕಲ್ಲಿನ ಸಣ್ಣ ಗುಡಿಯೇ ಮಗ ವೀರಭದ್ರನ ಸಮಾಧಿಯಾಗಿರಬಹುದು. ಇನ್ನೊಬ್ಬ ಮಗ ಮಲ್ಲಯ್ಯನ ಸಮಾಧಿಯ ಮೇಲೆ “ಕುಮಾರಮಲ್ಲಯ್ಯನ ಗುಡಿ” ಎಂದು ಕರೆಯುತ್ತಿರುವ ಕಟ್ಟಡವೊಂದು ಈಗಲೂ ತಲೆಯೆತ್ತಿ ನಿಂತಿದೆ. ಇದು ಕಲ್ಲು-ಮಣ್ಣಿನಿಂದ ಕಟ್ಟಿದ ಒಂದು ಕೋಣೆ ಮತ್ತು ಅದರ ಮುಂದೆ ಐದು ಅಂಕಣದ ಪಡಸಾಲೆಯನ್ನೊಳಗೊಂಡಿದೆ. ಕೋಣೆಯಲ್ಲಿ ಕೇವಲ ೩ ವೀರಗಲ್ಲುಗಳಿದ್ದು, ಇವುಗಳಲ್ಲಿ ಎರಡನ್ನು ನೆಡಲಾಗಿದ್ದು ಒಂದನ್ನು ನೆಲದ ಮೇಲೆ ಇಡಲಾಗಿದೆ. ಇವುಗಳಲ್ಲಿ ಮಲ್ಲಯ್ಯನ ವೀರಗಲ್ಲು ಯಾವುದು? ಸ್ಪಷ್ಟವಾಗುವುದಿಲ್ಲ. ಮಿಕ್ಕೆರಡು ವೀರಗಲ್ಲುಗಳು ಬಹುಶಃ ತಂದೆ ಸಿರುಮ, ಸೋದರ ಕಾಚಣ್ಣ ಇವರಿಗೆ ಸಂಬಂಧಿಸಿರಬಹುದೇ? ಎಂಬ ಅನುಮಾನ ಹುಟ್ಟುತ್ತದೆ.

ನೆಲದಲ್ಲಿ ನೆಟ್ಟ ಎರಡು ವೀರಗಲ್ಲುಗಳ ಎತ್ತರ ಮೂರು ಅಡಿ. ನೆಲದ ಮೇಲಿಟ್ಟ ವೀರಗಲ್ಲಿನ ಎತ್ತರ ಎರಡು ಅಡಿ. ಗಂಗಾಮತದವರು ಇದರ ಅರ್ಚಕರು. ವೇಷಭೂಷಣಗಳೇನೂ ಇಲ್ಲದ ಈ ವೀರಗಲ್ಲಗಳನ್ನು ವಿಭೂತಿ ಕುಂಕುಮ ಕಾಡುಹೂ ಪತ್ರೆಗಳಿಂದ ಪೂಜಿಸುತ್ತಾರೆ. ಪೂಜಾ ವೈಭವವಿಲ್ಲದಿರಬಹುದು, ಆದರೆ ತಮ್ಮ ಗ್ರಾಮದ ವೀರನನ್ನು ನೆನಪಿಟ್ಟು ಪೂಜಿಸುತ್ತಿರುವುದು ಮುಖ್ಯ.

ಕುಮಾರಮಲ್ಲಯ್ಯನ ವಿಗ್ರಹ ಹೆಸರಿನ ಕಟ್ಟಿಗೆಯ ರುಂಡಭಾಗವೊಂದು ಈ ಗ್ರಾಮದ ಕೊಲ್ಲಾಪೂರದಮ್ಮನ ಗುಡಿಯಲ್ಲಿದೆ. ಉತ್ಸವವಿಗ್ರಹವಾಗಿರುವ ಕಾರಣ ಇದಕ್ಕೆ ನಿತ್ಯ ಪೂಜೆಯಿಲ್ಲ. ವಿಶೇಷದಿನಗಳಲ್ಲಿ ಬೆಳ್ಳಿಯ ಮುಖವಾಡ, ಬೆಳ್ಳಿಯ ಆಭರಣ, ರೇಶಿಮೆಯ ವೇಷಭೂಷಣ, ಖಡ್ಗ-ಬಿಲ್ಲು ಬಾಣಗಳಿಂದ ಶೃಂಗರಿಸಿ ಕಟ್ಟಿಗೆಯ ಕುದುರೆಯ ಮೇಲೆ ಸ್ಥಾಪಿಸುತ್ತಾರೆ. ಮಹಾನವಮಿ ಸಂದರ್ಭದಲ್ಲಿ ಶೃಂಗಾರ ಮಾಡಿದ ಈ ವಿಗ್ರಹದ ಪೂಜೆ ೯ ದಿನಗಳ ವರೆಗೆ ನಡೆಯುತ್ತದೆ. ೯ನೆಯ ದಿನ ಮುಂಜಾನೆ ಈ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ವಾದ್ಯ ವೈಭವಗಳೊಂದಿಗೆ ಊರಿಂದ ೨ ಮೈಲು ಅಂತರದಲ್ಲಿರುವ ಬನ್ನಿಯ ಮರದ ಹತ್ತಿರ ಹೋಗುತ್ತಾರೆ. ಅಲ್ಲಿ ಸುತ್ತಲಿನ ಊರುಗಳ ಗ್ರಾಮದೇವತೆಗಳೂ ಬರುತ್ತವೆ. ಬನ್ನಿಯ ಮರದ ಎದುರು ನಿರ್ಮಿಸಿದ ಸಾಲುಮಂಟಪಗಳಲ್ಲಿ ಈ ಒಂದೊಂದು ದೇವರನ್ನು, ಮಧ್ಯದ ಮಂಟಪದಲ್ಲಿ ಕುಮಾರಮಲ್ಲಯ್ಯನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಇದು ಮಲ್ಲಯ್ಯನ ಒಡ್ಡೋಲಗದ ಸೂಚನೆಯಾಗಿರಬೇಕು. ಎದುರಿನ ಬನ್ನಿಯಮರಕ್ಕೆ ಕಟ್ಟಿದ ಬಾಳೆಯ ಕಂಬಕ್ಕೆ ಊರಗೌಡ ಬಾಣ ಎಸೆದು, ಆಮೇಲೆ ಅದನ್ನು ಖಡ್ಗದಿಂದ ತುಂಡರಿಸುತ್ತಾನೆ. ಇದು ಮಲ್ಲಯ್ಯನು ವೈರಿಗಳನ್ನು ತುಂಡರಿಸಿದ ಸಂಕೇತವಾಗಿರಬೇಕು. ತರುವಾಯ ಮಲ್ಲಯ್ಯನ ಪಲ್ಲಕ್ಕಿಯನ್ನು ಹೊತ್ತುಕೊಂಡು ಓಡುತ್ತ ಊರಿಗೆ ಬರುತ್ತಾರೆ. ಇದು ಮಲ್ಲಯ್ಯನ ಸೈನಿಕರು ರುಂಡವನ್ನು ಮೆರೆಸುತ್ತ ಬೂದಿಹಾಳಕ್ಕೆ ಓಡಿಬಂದುದರ ದ್ಯೋತಕವಾಗಿರಬಹುದು. ಈ ಮೆರವಣಿಗೆಯ ಗ್ರಾಮವನ್ನು ಪ್ರವೇಶಿಸುವಲ್ಲಿ ಒಂದು ಕುರಿ ಕಡಿದು ಅದರ ಮಾಂಸದಿಂದ ಅಡಿಗೆ ಮಾಡುತ್ತಿದ್ದು, ಇದಕ್ಕೆ “ರಾಸಿಗೊಳ್” ಎನ್ನುತ್ತಾರೆ. ಬಹುಶಃ ಇದು ವೀರಗಲ್ಲನ್ನು ಸ್ಥಾಪಿಸುವಾಗ ಏರ್ಪಡಿಸುತ್ತಿದ್ದ “ಬೀರಗೊಳ್”ದ ಸಂಕೇತವಾಗಿರಬಹುದು.

ಕೊಮಾರ ರಾಮಕೊಮಾರ ಮಲ್ಲ

ಕರ್ನಾಟಕದ ಇತಿಹಾಸದಲ್ಲಿ ಜನಮವನ್ನು ಆಳವಾಗಿ ಕಲಕಿದುದು ಕಂಪಿಲರಾಯನ ಯುದ್ಧಘಟನೆ. ಹೀಗಾಗಿ ಇದನ್ನು ಕುರಿತು ನಂಜುಂಡ, ಪಾಂಚಾಳಗಂಗ, ಹಂಪೆಯ ಚರಪತಿ ಮಹಾಲಿಂಗಸ್ವಾಮಿ ಕೃತಿ ರಚಿಸಿದ್ದಾರೆ. ಜನಪದದಲ್ಲಿಯೂ ಈ ಬಗ್ಗೆ ಅನೇಕ ಹಾಡುಗಳು ಸಿಗುತ್ತವೆ. ಇಷ್ಟೇ ಆಳವಾಗಿ ಜನಮವನ್ನು ಕಲಕಿದುದು ಬೂದಿಹಾಳ ಸಿರುಮನ ಯುದ್ಧಘಟನೆ. ಈ ಘಟನೆಯನ್ನು ಕುರಿತು ಸಿದ್ಧಕವಿ, ಕೆಂಚಿಶೆಟ್ಟಿಯ ಸುತ ರಾಮ ಮತ್ತು ಮಲ್ಲಕವಿ ಕೃತಿ ರಚಿಸಿದ್ದಾರೆ. ಅಲ್ಲಿ ಕುಮಾರರಾಮನ ಹೋರಾಟ-ವೀರಮರಣ ಮುಖ್ಯವಾದರೆ, ಇಲ್ಲಿ ಕುಮಾರಮಲ್ಲಯ್ಯನ ಹೋರಾಟ-ವೀರಮರಣ ಪ್ರಧಾನವಾಗಿದೆ. ಕೆಂಚಿಶೆಟ್ಟಿಯ ಸುತ ರಾಮನು ಬೂದಿಹಾಳನ್ನು “ಇದು ರಾಮನಿಹ ಕುಮ್ಮಟವೋ” ಎನ್ನುತ್ತ ಕುಮಾರರಾಮನ ರಾಜಧಾನಿಯನ್ನು ಸ್ಮರಿಸಿದ್ದಾನೆ. ಪಾಂಚಾಳ ಗಂಗನಲ್ಲಿ “ಇನ್ನು ಪೇಳುವೆ ಚೆನ್ನರಾಮನ ಕಥೆಯನು” ಎಂದು ಆರಂಭವಾಗುವ ಪದ್ಯವಿದ್ದರೆ, ಕೆಂಚಿಶೆಟ್ಟಿಯ ಸುತ ರಾಮನಲ್ಲಿ “ಇನ್ನು ಪೇಳುವೆ ಚೆನ್ನಮಲ್ಲನ ಕೃತಿಯನು” ಎಂದು ಪ್ರಾರಂಭವಾಗುವ ಅನುಕರಣ ಪದ್ಯವಿದೆ.

ಅಂಗ ಸಿಕ್ಕಿತು ರಾಮನ ತಲೆ ನೇಮಿಗೆ
ಅಂಗ
ಸಿಕ್ಕದು ನರಸಿಂಹಗೆ
ಅಂಗವ
ಕೊಡದೆ ಕಾದಿದನೊಬ್ಬ ರಣಗಲಿ
ತುಂಗವಿಕ್ರಮ
ಗೊಲ್ಲ ಸಿರುಮ

ಎನ್ನುತ ಮಲ್ಲಕವಿ ಕಂಪಿಲಯುದ್ಧಕ್ಕಿಂತ ಈ ಬೂದಿಹಾಳಯುದ್ಧ ಘಟನೆ ಮಿಗಿಲಾದುದೆಂದು ಸಾರುತ್ತಾನೆ.

ಹೀಗೆ ಈ ಎರಡೂ ಘಟನೆಗಳು ಜನಮವನ್ನು ಭೇದಿಸಿದ ಕಾರಣ ಜನಪದದಲ್ಲಿ ಕುಮಾರರಾಮನನ್ನು ಕುರಿತಂತೆ ಕುಮಾರಮಲ್ಲಯ್ಯನನ್ನೂ ಕುರಿತು ಹಾಡುಗಳು ಹುಟ್ಟಿಕೊಂಡಿವೆ. ಡಾ. ಜೀ. ಶಂ.ಪ ಅವರ “ದಕ್ಷಿಣ ಕರ್ನಾಟಕ ಜನಪದ ಕಾವ್ಯಪ್ರಕಾರಗಳು” ಎಂಬ ಪಿ.ಎಚ್.ಡಿ. ಪ್ರಬಂಧದಲ್ಲಿ ಈ ಬಗ್ಗೆ ಕೆಲವು ಪದ್ಯಗಳು ಸಿಗುತ್ತವೆ. (೩೦೯, ೩೧೪). ಈ ದಿಸೆಯಲ್ಲಿ ಕ್ಷೇತ್ರಕಾರ್ಯ ನಡೆದರೆ ಹೆಚ್ಚಿನ ಸಾಹಿತ್ಯ ಸಿಗುವ ಸಾಧ್ಯತೆಯಿದೆ.

ಗುಣಮೌಲ್ಯ

ಶಬ್ದಮಾಧ್ಯಮದ ಕಲಾಕೃತಿಗಳಲ್ಲಿ ಗದ್ಯ, ಪದ್ಯ, ದೃಶ್ಯಗಳೆಂಬ ಮೂರು ಪ್ರಕಾರಗಳಿದ್ದು, ಇವುಗಳನ್ನು ವಿಮರ್ಶಿಸುವ ಮಾನದಂಡಗಳಲ್ಲಿಯೂ ಮೂರು ಪ್ರಭೇದಗಳು ಅವಶ್ಯವೆಂದು ತೋರುತ್ತದೆ. ಆದರೆ ಇಂದು. ಗದ್ಯಕೃತಿ ವಿಮರ್ಶಾಮಾನದಂಡದಿಂದಲೇ ಈ ಎಲ್ಲ ಪ್ರಕಾರಗಳ ಮೌಲ್ಯನಿರ್ಣಯ ಮಾಡುವುದು ರೂಢಿಯಾಗಿಬಿಟ್ಟಿದೆ. ಇದರಿಂದಾಗಿ, ಕೆಲವೊಮ್ಮೆ ಪದ್ಯಪ್ರಕಾರ, ದೃಶ್ಯಪ್ರಕಾರಗಳಿಗೆ ಅನ್ಯಾಯವಾಗುತ್ತದೆ. ಛಂದೋನಿಷ್ಠವಾಗಿರುವ ಪ್ರಾಚೀನ ಕನ್ನಡ ಸಾಹಿತ್ಯದ ವಿಷಯದಲ್ಲಿಯಂತೂ ಇದು ಬಹಳಷ್ಟು ಸಲ ನಿಜವೆನಿಸುತ್ತದೆ.

ಕನ್ನಡದಲ್ಲಿ ಸಾಹಿತ್ಯದಲ್ಲಿ ಸೃಷ್ಟಿ ಮತ್ತು ಪರಂಪರೆಗಳು ವಿಶಿಷ್ಟಸಂದರ್ಭಗಳಲ್ಲಿ ಸಾಗಿಬಂದಿವೆ. ಮೂಲತಃ ಧ್ವನಿಪಾತಳಿಯಲ್ಲಿ ಸಾಗಿಬರುತ್ತಲಿದ್ದ ಕನ್ನಡ ಸಾಹಿತ್ಯವು, ಲಿಪಿಸೌಕರ್ಯ ಕಾರಣವಾಗಿ ಅಕ್ಷರಪಾತಳಿಗಿಳಿಯಿತು. ಹೀಗೆ ಅಕ್ಷರಕ್ಕಿಳಿದ ದೇಶೀನಿಷ್ಠ ಸಾಹಿತ್ಯ ದೇಶಿಯೆನಿಸಿದರೆ, ಸಂಸ್ಕೃತನಿಷ್ಠ ಸಾಹಿತ್ಯ ಮಾರ್ಗವೆನಿಸಿತು. ಇವುಗಳಲ್ಲಿ ಒಂದು ನಿರಕ್ಷರಿಗಳನ್ನು ಗಮನದಲ್ಲಿಟ್ಟು, ಶ್ರವಣಪಾತಳಿಯ ಸಾಹಿತ್ಯವಾಗಿ “ಹಾಡುಗಬ್ಬ” ರೂಪದಲ್ಲಿ ಬೆಳೆಯಿತು. ಇನ್ನೊಂದು ಸಾಕ್ಷರಿಗಳನ್ನು ಗಮನದಲ್ಲಿಟ್ಟುಕೊಂಡು ವಾಚನಪಾತಳಿಯ ಸಾಹಿತ್ಯವಾಗಿ “ಓದುಗಬ್ಬ” ರೂಪದಲ್ಲಿ ಬೆಳೆಯಿತು. ಇವುಗಳನ್ನು ೧೯ನೆಯ ಶತಮಾನದವರೆಗೆ ಶ್ರವಣ ಮತ್ತು ವಾಚನಗಳೆಂಬ ಎರಡು ಪ್ರತ್ಯೇಕ ರೀತಿಗಳಲ್ಲಿಯೇ ಆಸ್ವಾದಿಸುವ ವಿಧಾನ ಸಾಮಾನ್ಯವಾಗಿ ಅಸ್ತಿತ್ವದಲ್ಲಿದ್ದಿತು. ಇಂಗ್ಲಿಷ್ ಶಿಕ್ಷಣ, ಸಾಹಿತ್ಯಗಳ ಪ್ರಭಾವದಿಂದಾಗಿ ಶ್ರವಣಮಾಧ್ಯಮದ ಸಾಹಿತ್ಯವನ್ನೂ ವಾಚನಮಾಧ್ಯಮದಲ್ಲಿಟ್ಟು ಆಸ್ವಾದಿಸುವುದು ಪ್ರಾರಂಭವಾಯಿತು. ಈ ಬಗೆಯ ವಿಧಾನ ಬದಲಾವಣೆಯಿಂದಾಗಿ ಪರಿಣಾಮದಲ್ಲಿಯೂ ವ್ಯತ್ಯಾಸ ಸಂಭವಿಸಿ, ವಿಮರ್ಶಾ ಮೌಲ್ಯಮಾಪನದಲ್ಲಿ ಹಾಡುಗಬ್ಬಕ್ಕೆ ಅನ್ಯಾಯವಾಗಹತ್ತಿತ್ತು. ಅಂದರೆ ಹಾಡುಗಬ್ಬವನ್ನು ಶ್ರವಣಮಾಧ್ಯಮದಲ್ಲಿ ಕೇಳಿದಾಗ ಸಿಗುವ ಸುಖ ಓದಿದಾಗ ಸಿಗದಿರುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ “ಹಾಡುಗಬ್ಬ ಪ್ರಕಾರ”ದ ಹೊಸ ವಿಮರ್ಶಾ ಮಾನದಂಡಗಳು ಕನ್ನಡದಲ್ಲಿ ಇಂದು ಹುಟ್ಟಿಬರಬೇಕಾಗಿವೆ. ಅಲ್ಲಿಯವರೆಗೆ ಹಾಡುಗಬ್ಬ ಪ್ರಕಾರವಾದ ಸಿರುಮನ ಚರಿತೆಯಂಥ ಕೃತಿಗಳನ್ನು ಓದುಗಬ್ಬ ಪ್ರಕಾರದ ವಿಮರ್ಶಾ ಮಾನದಂಡದಿಂದ ಅಳೆದಲ್ಲಿ ಅವುಗಳಿಗೆ ಅನ್ಯಾಯವಾಗುವುದೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಕವಿ ಇದನ್ನು ಓದುವುದಕ್ಕಾಗಿ ಬರೆದುದಲ್ಲ, ಹಾಡುವುದಕ್ಕಾಗಿ ಬರೆದಿದ್ದು, ಹಾಡುವ ಸಾಹಿತ್ಯಿಕ ಮೌಲ್ಯ ಇದಕ್ಕೆ ಇದ್ದೇ ಇದೆಯೆಂದು ಹೇಳಬಹುದು. ಎರಡನೆಯದಾಗಿ ಒಂದು ಕೃತಿಗೆ ಸಾಹಿತ್ಯಿಕ ಗುಣಮೌಲ್ಯದಂತೆ ಇತರ ಗುಣಮೌಲ್ಯಗಳೂ ಇರುತ್ತವೆ. ಈ ದೃಷ್ಟಿಯಿಂದ ನೋಡಿದರೆ ಗೊಲ್ಲ ಸಿರುಮನ ಚರಿತೆಗೆ ಖಂಡಿತವಾಗಿಯೂ “ಇತಿಹಾಸಮಹತ್ವ”ದ ಬಲೆ ಇದ್ದೇ ಇದೆ.

ಪರಿಷ್ಕರಣ

೧೯೮೩ರಲ್ಲಿ “ಸಿರುಮಣನಾಯಕನ ಸಾಂಗತ್ಯ”ವನ್ನು ಪರಿಷ್ಕರಿಸಿ ಪ್ರಕಟಿಸಲು ತೊಡಗಿದ ಸಂದರ್ಭದಲ್ಲಿ ಮಿತ್ರರಾದ ಶ್ರೀ ಎಸ್. ಶಿವಣ್ಣ ಅವರು ತಮ್ಮ ಹತ್ತಿರ ಇರುವ ಎಲ್ಲ ಕವಿ ಬರೆದ “ಗೊಲ್ಲ ಸಿರುಮನ ಚರಿತೆ” ಕೃತಿಯ ತಾಳೆಪ್ರತಿಯನ್ನು ಕಳಿಸಿ, ಇದರ ಇನ್ನೊಂದು ಪ್ರತಿ ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿರುವುದಾಗಿ ತಿಳಿಸಿದರು. ಪ್ರಸ್ತುತ ಪರಿಷ್ಕರಣಕ್ಕೆ ಈ ಎರಡೂ ಕೃತಿಗಳನ್ನು (ಶಿವಣ್ಣನವ ಪ್ರತಿ=ಶಿ, ಹೈದ್ರಾಬಾದ ಪ್ರತಿ=ಹ) ಬಳಸಿಕೊಳ್ಳಲಾಗಿದ್ದು, ಇವುಗಳ ವಿವರ ಹೀಗಿದೆ.

“ಶಿ ಪ್ರತಿ : 12″ x 1”, ತಾಳೆ ಪ್ರತಿ ೧೦೭ ಗರಿಗಳು. ಒಂದು ಮಗ್ಗುಲಿನ ಅಂಚುಗಳು ಮುರಿದಿವೆ. ನಡುನಡುವೆ ಗರಿಗಳೂ ತುಂಡಾಗಿ ಕಳೆದುಹೋಗಿವೆ. ಅಕ್ಷರಗಳು ಸ್ಪಷ್ಟವಾಗಿದ್ದು, ತಕ್ಕಮಟ್ಟಿಗೆ ಸುಂದರವಾಗಿವೆ.

“ಹ ಪ್ರತಿ : 10.1″/2×1 1/4”. ತಾಳೆ ಪ್ರತಿ. ೧೩೩ ಗರಿಗಳು: ಅಪೂರ್ಣ. ಅಕ್ಷರ ಸರಿಯಾಗಿಲ್ಲ. ಆರನೆಯ ಸಂಧಿಯ ೨೨ನೆಯ ಪದ್ಯದ ಮುಂದಿನ ಗರಿಗಳಿಲ್ಲ. “A Descriptive Catalogue of the Kannada Manuscripts in the Osmania University Library” ಹೆಸರಿನ ಸೂಚಿಯ ಪುಟ ೧೨೨, ನಂ ೧೦೧ರಲ್ಲಿ ಇದನ್ನು “ಲಿಂಗಲೀಲಾವಿಲಾಸ (ಸಿರುಮನ ಸಾಂಗತ್ಯ)” ಎಂದು ಕರೆಯಲಾಗಿದೆ. ಇದರ ಮೈಕ್ರೋಫಿಲ್ಮ ಪ್ರತಿ ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿದೆ.

ಆಡುವ ಭಾಷೆ, ಹಾಡುವ ಭಾಷೆಗಳೆರಡರ ದಾಳಿಯಿಂದಾಗಿ ಈ ಹಸ್ತಪ್ರತಿಗಳು ತುಂಬ ಅಶುದ್ಧವಾಗಿವೆ. ಸಾಧಾರಣ ಗುಣಮಟ್ಟದ ಲಿಪಿಕಾರರ ಭಾಷಾಜ್ಞಾನವೂ ಸೇರಿ ಈ ಹಸ್ತಪ್ರತಿಗಳು ಇನ್ನೂ ಅಶುದ್ಧ ಸ್ಥಿತಿಗೆ ಇಳಿದಿವೆ. ಅಲ್ಲಲ್ಲಿ ಪಾಠ ತ್ರುಟಿತವಾಗಿ ಹೋಗಿದ್ದರೂ ಪುಣ್ಯವಶಾತ್ ಉಳಿದುಕೊಂಡಿರುವ ಎರಡೇ ಎರಡು ಹಸ್ತಪ್ರತಿಗಳೂ ಕಳೆದುಹೋದರೆ ಒಂದು ಐತಿಹಾಸಿಕ ಕಾವ್ಯವೇ ಕಣ್ಮರೆಯಾಗುವುದೆಂಬ ಭೀತಿ ಕಾರಣವಾಗಿ, ದುಸ್ಥಿತಿಯಲ್ಲಿರುವ ಈ ಹಸ್ತಪ್ರತಿಗಳನ್ನೇ ಬಳಸಿಕೊಂಡು ಪ್ರಸ್ತುತ ಕೃತಿಯನ್ನು ಸಂಪಾದಿಸಲಾಗಿದೆ. ಹೀಗಾಗಿ ದೋಷಗಳು ಉಳಿದುಕೊಂಡಿರುವುದು ಸಹಜವಾಗಿದೆ.

ಎರಡನೆಯದಾಗಿ, ಇದು ಇತಿಹಾಸಕಾವ್ಯವಾಗಿರುವುದರಿಂದ ಇಲ್ಲಿ ಮುಡುಗಟ್ಟಿರುವ ಇತಿಹಾಸ ಪರಿಚಯ ಸಂಪಾದಕರಿಗೆ ಅಗತ್ಯ. ಆ ಕಾಲದ ವ್ಯಕ್ತಿನಾಮ, ಸ್ಥಳನಾಮ, ಬಳಕೆಯ ಪದಗಳ ಪರಿಚಯವೂ ಸಂಪಾದಕರಿಗೆ ಅವಶ್ಯ. ಒಟ್ಟಿನಲ್ಲಿ ಒಬ್ಬ ಇತಿಹಾಸಕಾರ, ಒಬ್ಬ ಪ್ರಾದೇಶಿಕ ವಿದ್ವಾಂಸ, ಹೆಚ್ಚಿನದಾಗಿ ಒಬ್ಬ ಸಾಹಿತ್ಯ ಸಂಪಾದಕ ಈ ಮೂರು ಅಂಶಗಳ ಸಂಯುಕ್ತ ಪ್ರಜ್ಞೆಯ ವ್ಯಕ್ತಿಯಿಂದ ಇಂಥ ಕೃತಿಗಳ ಸಂಪಾದನೆ ಪರಿಪೂರ್ಣಗೊಳ್ಳುತ್ತದೆ. ಈ ಎಲ್ಲ ತಿಳುವಳಿಕೆಗಳ ತಕ್ಕಮಟ್ಟಿನ ಹಿನ್ನಲೆಯಲ್ಲಿ ಈ ಕೃತಿಯನ್ನು ಪರಿಷ್ಕರಿಸಲಾಗಿದೆ. ಅಶುದ್ಧ ಹಸ್ತಪ್ರತಿಗಳು ಕಾರಣವಾಗಿ ಅಲ್ಲಲ್ಲಿ ಊಹೆ ಅನಿವಾರ್ಯವಾಗಿದೆ. ಅಂಥ ಪ್ರಸಂಗಗಳಲ್ಲಿ ಎರಡೂ ಪ್ರತಿಗಳ ಮೂಲಪಾಠವನ್ನು ಅಡಿಯಲ್ಲಿ ತಪ್ಪದೆ ದಾಖಲಿಸಲಾಗಿದೆ. ವಿದ್ವಾಂಸರು ಈ ಕೃತಿಯ ಬೇರೆ ಹಸ್ತಪ್ರತಿಗಳನ್ನು ಶೋಧಿಸಿ, ಇದನ್ನು ಇನ್ನು ಸರಿಯಾಗಿ ಪರಿಷ್ಕರಿಸುವರೆಂದು ಆಶಿಸುತ್ತೇನೆ.

ಈವರೆಗೆ ಸಿರುಮನನ್ನು ಕುರಿತು ಮೂರು ಕೃತಿಗಳು ಸಿಕ್ಕಿವೆ. ಈ ಮೂರರಲ್ಲಿ ೧ನೆಯ ಕೃತಿಯ, ಇದಕ್ಕಿಂತ ಹೆಚ್ಚು ೨ನೆಯ ಕೃತಿಯ ಪದ್ಯಗಳು ಈ ೩ನೆಯ ಕೃತಿಯಲ್ಲಿ ಕಾಣಿಸಿಕೊಂಡಿವೆ. ಅಂಥ ಸಂದರ್ಭಗಳಲ್ಲಿ ಆಯಾ ಪದ್ಯಗಳ ಮುಂದೆ ೧ ಮತ್ತು ೨ನೆಯ ಕೃತಿಗಳ ಪದ್ಯಸಂಖ್ಯೆಯನ್ನು ಚೌಕ ಕಂಸಿನಲ್ಲಿ ಸೂಚಿಸಲಾಗಿದೆ. ಈ ಕಂಸಿನಲ್ಲಿಯ I, II ಎಂಬವುದು ಕ್ರಮವಾಗಿ ಸಿರುಮಣನಾಯಕನ ಸಾಂಗತ್ಯ, ಸಿರುಮನ ಚರಿತೆ ಕೃತಿಗಳನ್ನು ಸೂಚಿಸುತ್ತವೆ.

ಕೃತಜ್ಞತೆ

ಕರ್ನಾಟಕ ವಿಶ್ವವಿದ್ಯಾಲಯ ಬೋಧನೆ, ಸಂಶೋಧನೆ ಮತ್ತು ಪ್ರಕಟನೆಯ ವಿಷಯವಾಗಿ ಮೊದಲಿನಿಂದಲೂ ಗಾಢವಾದ ಆಸಕ್ತಿವಹಿಸುತ್ತ ಬಂದಿದೆ. ಈ ಕಾರಣದಿಂದಾಗಿ ಇದರ ಅಂಗಸಂಸ್ಥೆಯಾದ ಪ್ರಸಾರಾಂಗ ಬೇರೆ ಬೇರೆ ಕ್ಷೇತ್ರಗಳ, ಅದರಂತೆಯೇ ಇತಿಹಾಸಕ್ಷೇತ್ರದ ಹಲವು ಕೃತಿಗಳನ್ನು ಪ್ರಕಟಿಸಿದೆ. ಈ ಮಾಲಿಕೆಯಲ್ಲಿ “ಗೊಲ್ಲ ಸಿರುಮನ ಚರಿತೆ” ಪ್ರಕಟವಾಗುತ್ತಿರುವುದು ಇತಿಹಾಸಕಾವ್ಯದ ಪ್ರಕಟನೆಯ ದೃಷ್ಟಿಯಿಂದ ಗಮನಾರ್ಹವಾದುದೆಂದೇ ಹೇಳಬೇಕು.

ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಮಾನ್ಯ ಡಾ. ಎಸ್. ರಾಮೇಗೌಡ ಅವರಿಗೆ ಸಾಹಿತ್ಯ ಮತ್ತು ಚರಿತ್ರೆಗಳ ಬಗ್ಗೆ ಅಪಾರ ಪ್ರೀತಿ, ಅನನ್ಯ ಗೌರವ. ಈ ಕಾರಣದಿಂದಾಗಿ ಪ್ರಸ್ತುತ ಕೃತಿ ಪ್ರಕಟನೆಗೆ ವಿಶೇಷ ಒಲವು, ಒತ್ತಾಯ ತೋರಿದ ಅವರಿಗೆ ನನ್ನ ವಂದನೆಗಳು ಸಲ್ಲುತ್ತವೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಎಚ್.ವಿ. ನಾಗೇಶ್ ಅವರು ಮನಸ್ಸು ಮಾಡಿರದಿದ್ದರೆ ಈ ಕೃತಿ ಪ್ರಕಟವಾಗುತ್ತಿರಲೇ ಇಲ್ಲ. ಸಮಾಜ-ಸಾಹಿತ್ಯಗಳ ಅಭ್ಯಾಸಿಯಾದ, ಅಭಿಮಾನಿಗಳಾದ ಅವರಿಗೆ ಕೃತಜ್ಞನಾಗಿದ್ದೇನೆ. ಹಸ್ತಪ್ರತಿಯನ್ನು ತಮ್ಮ ಸ್ಫುಟವಾದ ಬರವಣಿಗೆಯಿಂದದ ನಕಲುಗೊಳಿಸಿದ ಲಿಂಗೈಕ್ಯ ಶ್ರೀ ಕೆ.ಎಸ್.ಪಾಟೀಲ ಮಾಸ್ತರ ಅವರಿಗೂ, ಹಸ್ತಪ್ರತಿ ನೀಡಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ನಿರ್ಧೇಶಕರಾದ ಶ್ರೀ ಎಸ್. ಶಿವಣ್ಣ ಅವರಿಗೂ, ಹೈದ್ರಾಬಾದ ಹಸ್ತಪ್ರತಿಯನ್ನು ಓದಲು ಅವಕಾಶ ಮಾಡಿಕೊಟ್ಟ, ಉಸ್ಮಾನಿಯಾ ವಿಶ್ವವಿದ್ಯಾಲಯದ ಗ್ರಂಥಪಾಲರಿಗೂ, ಬೆರಳಚ್ಚು ಕಾರ್ಯವನ್ನು ಪೂರೈಸಿದ ಶ್ರೀ ಗಿರೀಶ ಕುಲಕರ್ಣಿ ಅವರಿಗೂ, ಮುದ್ರಣ ಸಂದರ್ಭದಲ್ಲಿ ಡಿ.ಟಿ.ಪಿ. ಕೆಲಸವನ್ನು ಶ್ರದ್ಧೆಯಿಂದ ಪೂರೈಸಿದ ಧಾರವಾಡದ ಅಖಿಲ ಗ್ರಾಫಿಕ್ಸ್ ಒಡೆಯರಾದ ಶ್ರೀ ವಿನಯ ವಾಲಿ ಮತ್ತು ಅವರ ಸಹೋದರಿ ಕುಮಾರಿ ಜಯಶ್ರೀ ವಾಲಿ ಅವರಿಗೂ, ಮುದ್ರಣಕಾರ್ಯವನ್ನು ಅತ್ಯಲ್ಪಕಾಲದಲ್ಲಿ ಪೂರೈಸಿದ ಕರ್ನಾಟಕ ವಿಶ್ವವಿದ್ಯಾಲಯದ ಮುದ್ರಣಾಲಯದ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಜೆ.ಎ.ಪೆರೇರಾ ಅವರಿಗೂ, ಮುದ್ರಣಾಲಯದ ಸಿಬ್ಬಂದಿವರ್ಗಕ್ಕೂ ಕೃತಜ್ಞನಾಗಿದ್ದೇನೆ.

ಎಂ. ಎಂ. ಕಲಬುರ್ಗಿ
ಕನ್ನಡ ಅಧ್ಯಯನ ಪೀಠ
ಕರ್ನಾಟಕದ ವಿಶ್ವವಿದ್ಯಾಲಯ, ಧಾರವಾಡ
೨೦.೬.೧೯೯೪[1]     ಮದ್ರಾಸ ಪ್ರಾಚ್ಯವಿದ್ಯಾಸಂಸ್ಥೆಯ ಹಸ್ತಪ್ರತಿಸೂಚಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಸೂಚಿಗಳಲ್ಲಿಯೂ “ಸಿರುಮನ ಸಾಂಗತ್ಯ” ಎಂದೇ ಕರೆಯಲಾಗಿದೆ.

[2]   ಶಿವಣ್ಣನವರ ವಶದಲ್ಲಿಯ ಹಸ್ತಪ್ರತಿಯ ಅಂತ್ಯದಲ್ಲಿ ಲಿಪಿಕಾರ “ಗೊಲ್ಲ ಸಿರುಮನ ಸಾಂಗತ್ಯ” ಎಂದು ಕರೆದಿದ್ದಾನೆ. “ಹ” ಪ್ರತಿಯ ಆದಿಯಲ್ಲಿ “ಬೂದಿಹಾಳ ಸಿರುಮಣನಾಯಕನ ಸಾಂಗತ್ಯ” ಎಂದು ಕರೆಯಲಾಗಿದೆ.

[3]     ಆದಿಯಲ್ಲಿ ಅಸಗೋಡ ಸಿದ್ದೇಶ ಎಂದೂ, ಅಂತ್ಯದಲ್ಲಿ ಅಸಗೋಡ ಮಲ್ಲೇಶ ಎಂದೂ ಇದೆ. ನಿಜನಾಮ ಶೋಧಿಸಬೇಕಾಗಿದೆ.

[4]     ಚಂದ್ರಸಾಗರವರ್ಣಯ ಕೃತಿಗಳು (ಸಂ:ಹಂ.ಪ.ನಾಗರಾಜಯ್ಯ, ಎಸ್. ಶಿವಣ್ಣ) ಪು. ೧೪೧-೪೨