ಬತ್ತೀಸಾಯುಧ ಸಾದನೆಗಳ ಬಲ್ಲವ
ಹತ್ತೂರಿಗೊಬ್ಬ ತಳವಾರ
ಮತ್ತಿವಾಡದ ಗಿರಿಯಪ್ಪನ ಕರಸಿದ
ಚಿತ್ತವೊಲಿದು ಕಾಚಯ್ಯ                  ||೪೧||

ಕರಿ ಸಿಂಹ ಚೋಹದ ಹರಿಗೆಯ ಬಿರಿದಿನ
ಬರಹೇಳಿದನು ಸೇರುವೆಯ
ಪರಬಲಾಂತಕ ಕಾಚಯ್ಯನು ಕರಸಿದ
ಧುರಕೆ ಸಿಂಗಟಗೇರಿಯವರ            ||೪೨||

ತೊಡರ್ದರೆ ೩೬

[1][ಹುಡಿಗೆಯ್ವ]೩೬[2]ಮುಡಿಯ ಪೂಜಿಸಿಕೊಂಬ
ನಿಡಗಟ್ಟದವರ ಬೇಗದಲಿ
ಕಡಿಗೋಟೆಯ ಲಾವಣಿಗೆಯ ಡೊಣ್ಣೆ ಭೈರನ
ಒಡೆಯ ಕಾಚಯ್ಯ ಕರೆಸಿದನು         ||೪೩||

ಶೃಂಗಾರಬಿಲ್ಲಿಗೆ ಝಲ್ಲಿಯ ಕಟ್ಟಿದ
ಜಂಗುಳಿ ಸಮಯ ೩೭[3][ಪಿತಾಮಹ]೩೭[4]
ಜಂಗಮ ಕೆಂಡದ ಬಸವನ ಕರೆಸಿದ
ಸಂಗ್ರಾಮಕೆ ಕಾಚೇಂದ್ರ                 ||೪೪||

ಸಾಧಿಸಿ ಮಾದಿಗಹರಿಗೆಯನಾಳುವ
ಕೇದಿಗೆ೩೮[5]ಗೆರೆಯ ಸೆಟ್ಟಿಗನು೩೮[6]
ಆದಾದು ಕರಸಿದ ವೀರಾಧಿವೀರರ
ವಾದಿನಿರಿವ ಬಂಟರನು                 ||೪೫||

ಮಲತು ಕಾದುವ ಹೋತಿಹರಿಗೆಯನಾಳುವ
ಹುಲಿಯ ಜಂಗುಳಿ ನಾಗಿಗೊಂಡ
ತೊಲಗದೆ ಕಾದುವ ತೊಂಬಾರದವರನು
ಕಲಿ ಕಾಚಯ್ಯ ಕರೆಸಿದನು               ||೪೬||

ಕರೆಸಿದ ಘಂ[ಟೆ]ಯ ಸರಪಣಿ ಕಟ್ಟಿರ್ದ
ತೆರೆಯ ಹರಿಗೆ ವಿರುಪಯನ
ಮೊರೆದೆದ್ದು ಅವನ ಹೆಗಲೆಣೆಯಾಗಿ ಬಂದನು
ಭರದಿಂದ ಬೋಗಾರ ಮಲ್ಲ ||೪೭||

ಟೊಪ್ಪಿಗೆ ತಲೆಚಿಪ್ಪನೊಡೆಯಲು ಎಸೆವನು
೩೯[7]ತಪ್ಪದೆ ಬಿಬ್ಬಿ ಸುರಿತಾಳ೩೯[8]
ಚಿಪ್ಪಿಗ ಕಸವನೆಂಬವ ಕೈಯ್ಯ ಮುಗಿದನು
ಸರ್ಪ ರವಿಯ ನುಂಗುವಂತೆ*          ||೪೮||

ಕುಲದಲ್ಲಿ ಹಾರುವ ಲಿಂಗರಸಯ್ಯನು
ಛಲದಲ್ಲಿ ರಣಸೂರೆಗಾರ
ಗೆಲವಿಂದ ಕಾಚನು ಕರಸಿದ ಬೇಗದಿ
ಒಲಿದು ವೀಳ್ಯವ ಕೊಡಿಸಿದನು         ||೪೯||

೪೦[9]ಬೆನ್ನಲ್ಲಿ ಕನ್ನಡಿ೪೦[10] ಕೈಯ್ಯಲ್ಲಿ ಜಾಗಟೆ
ಮನ್ನೆಯ ಹನುಮನ ಬಾಲ
ಇನ್ನು ಬರಹೇಳೋ ಬೇಡರ ಸಿದ್ಧನ
ಮನ್ನಣೆ ವೀಳ್ಯವ ಕೊಟ್ಟು                ||೫೦||

ದಿಕ್ಕುದಿಕ್ಕಿನೊಳು ಹೆಸರುಳ್ಳ ಬಂಟರು
ಮುಕ್ಕಣ್ಣ ಮುಂಗೈಯ್ಯ ಮೀಸೆ
ಇಕ್ಕಿದ ಹರಿಗೆಗೆ ತೊಲಗದ ಕಂಬವು
ಜಕ್ಕಲಧರ ಚಿಕ್ಕ ಕಾಮ                  ||೫೧||

ಒಬ್ಬರೊಬ್ಬರ ಕರೆಯೆಂದರೆ ಬೇಗದಿ
ಬೊಬ್ಬುಳಿ ಭಾವನ ಬಿರಿದು
ಹೆಬ್ಬುಲಿ ಗಾಣದ ಭೈರವನೆಂಬವ ಬಂದು
ಉಬ್ಬಿ ನೆಗೆದು ಕೈಯ್ಯ ಮುಗಿದ        ||೫೨||

ಉರಿಯಲಗಿನಂತೆ ಹಿರಿಯ ಆಸಂದಿಯ
ಕರಿಯ ಮಲ್ಲುಗ ಬಂದು ನಿಂದ
ತರಣಿ ತಲ್ಲಣಿಸಲು ಕರವಾಳ ಪಿಡಿದನು
ಬರಿದಲೆ ತಿಮ್ಮ ಬಂದು ನಿಂದ         ||೫೩||

ಒಳಿತವಂತರನಾಳ್ವ ಬಿಲ್ಲುಗಾರರ ಹೊನ್ನ
ಕಳಸ ತೊಳಚನೆಂಬವನು
ಅಳವುಳ್ಳ ಬಂಟರಭಾವನ ಪೈಕದ
ದಳ ಧೂಳಿಯನೆ ಮಾಡುವರು         ||೫೪||

ಇರಿತವೆಂದರೆ ಮುಂಚುವ ನೆರೆಗಲಿ ಬಂದ
ಗೂರಲವರ ಕಾಮಯ್ಯ
ತರುಬಿ ತರುಬಿ ಆಳನೆಸೆವ ಸಾದರ ಚಿಕ್ಕ
ಉರುಬಿ ಬಿಲ್ಲಾಳು ಬಂದು ನಿಂದ      ||೫೫||

ಕುಸುರಿದರಿದು ಬಿಸಿರಕ್ತವ ಕುಡಿವನು
ಅಸುವ ಹಿಂಡುವ ಮಾರ್ಬಲವ
ದೆಸೆಯುಳ್ಳ ಹಿಡಿಕೊಡತಿಗೆ ಮಂಡಲೇಶ್ವರ
ಅಸಗರ ದುಂಡಿಯ ತಿಮ್ಮ              ||೫೬||

ಆಯತವಾಗಿ ಮುಂದಲೆಗಳ ಪಿಡವನು
ಬಾಯೊಳಗಿರಿವ ಸಮರದಲಿ
ನಾಯಿಂದ ನಾಗೋಜ ದೇವುಗನೆಂಬವ
ಕೈಯ ಕನ್ನಡಿ ತೋರಿ ನಿಂದ           ||೫೭||

ಚಂದ್ರಗಿರಿಯ ದುರ್ಗದಿಂದ ಮುನಿದು ಬಂದ
ಇಂದ್ರನ ಭೋಗದಲಿಹನು
ಕುಂದದೆ ಹುಲು ಹುಯ್ಯಲಿಗೆ ತಲೆಯ ತಹ
ನಂದಿನಾಯಕ ಹೊರಹೊರಟ೪೧[11]    ||೫೮||

ಹೆಜ್ಜೆಯ ಹಿಂದಕೆ ಕೀಳದ ಬಂಟರು
ಗುಜ್ಜಲವರ ಪೈಕದವರು
ಸಜ್ಜರಿಸುತ ಬೀಳಹೊಯ್ದಾಳನೆಸೆವನು
ಗುಜ್ಜಲೋಬಯ್ಯ ಕೈಮುಗಿದ           ||೫೯||

ಮುಚ್ಚರಿಸುವ ರಣದೊಳು ಮಾರ್ಮಲೆವನು
ಮುಚ್ಚಲವರ ಬೀಯಗನು
ಹೆಚ್ಚಿನ ಮೀನಿಗ ಲಕ್ಕಯ್ಯ ಬಂದನು
ನಿಚ್ಚಟ ನಿಜಗಲಿ ಧೀರ                    ||೬೦||

ಶಂಕೆಯಿಲ್ಲದೆ ಸಾವಿರಂಬನು ಎಸೆವನು
ಸಿಂಕಲವರ ಪೈಕದವನು
ಲಂಕೆಗೆ ಹಾರುವ ಹನುಮನ ಸಮದಾಳು
ನುಂಕಿನಾಯಕ ಬಂದು ನಿಂದ         ||೬೧||

ಮುಷ್ಟೀಗ ತಿಮ್ಮನು ಮುದಿಗಂಡ ಓಬನು
ತಟ್ಟಿಲೋಬಯ್ಯ ಕೈಯ ಮುಗಿದ
ಕಟ್ಟಾಳು ಗುಜ್ಜಲ ಹನುಮನಾಯಕ ಸಹ
ದಿಟ್ಟ ಮುನ್ನುಲಿ ಮಲ್ಲ ಬಂದ            ||೬೨||

ದಸವಂದದಾಳೊಳು ಮಿಸುಕದಲಿರಿವನು
ಕುಸುರಿದರಿವನರಿಬಲವ
ಹೆಸರುಳ್ಳ ಕಾಮಿಗೆತ್ತಿಯ ನಾಗಿನಾಯಕ
ಮಸೆದಲಗೆತ್ತಿ ಕೈಮುಗಿದ೪೨[12]          ||೬೩||

ಮೂಡಣ ಕಬ್ಬಕ್ಕಿಯ ಹಿಂಡ ಕರೆವಂತೆ
ಬೇಡ ಪೈಯಿಕವೆಲ್ಲ ಕೂಡಿ
ಜೋಡಿಸಿ ಕರಗಳ ಮುಗಿದು ಕಾಚೇಂದ್ರಗೆ
ಆಡಿದರತಿ ಪೌರುಷವ                    ||೬೪||

ಶೃಂಗಾರ ಕಂಬಳಿ ಗವಸಣಿಗಿಕ್ಕಿದ
ಹೊಂಗಿಲ ಮರ ಬಿಲ್ಲ ಪಿಡಿದು
ಕೆಂಗೂರ ಭೈರನವರು ಬಂದು ನಿಂದರು
ಹಿಂಗದೆ ಕಾಚನಿದಿರಿನಲಿ                ||೬೫||

ಅಟ್ಯಾಡಿ ಸುಡುವನು ಪೆಟಲಿನಲ್ಲಾಳುವ
ಇಟ್ಟ ಗುಂಡಿಗೆ ತಪ್ಪಿಲ್ಲ
ಘಟ್ಟಿಗೋವಿಗೆ ಮದ್ದ ತುಂಬಿ ಜಡಿದು ಕೊಲ್ವ
ಜೊಟ್ಟಿಗ ತಿಪ್ಪಯ್ಯ ನಿಂದ               ||೬೬||

ಗುಂಪು ಗುಂಪಿನ ಆಳ ಝಂಪಿಸಲೆಸೆವನು
ಸಂಪಗೆ ಭಯಕಾರಿ ಬಂದ
ಪೊಂಪಿನಿಂಪಿನ ಪೆಟಲಿನ ಸಾಗಾಟದ
ಕೆಂಪು ಗಿರಿಯ ಕೈಯ್ಯ ಮುಗಿದ        ||೬೭||

ಘುಡುಘುಡಿಸಿಡುವ ಗುಂಡಿನ ಪೆಟಲವ ಬಂದ
ನಿಡುಗಟ್ಟದ ಸೂರೋಜ
ಸಿಡಿಲ ಸೆರೆಯ ಬಿಟ್ಟಂದದಿ ಬಂದರು
ಒಡೆಯ ಕಾಚನ ಎಡಬಲದಿ ||೬೮||

ಆ ವೇಳೆಯದಿ ಬಂದ ಡೆಂಕಣ ನಾಗೋಜ
ತಾವರೆ ಬಾಣ ತೆಲುಗರ
ದೇವನೂರ ಬಯಲುಂಬಳಿಗೊಂಬನು
ಕಾಹುರದಲಿ ಬಂದು ನಿಂದ             ||೬೯||

ಆಳಾಳುಗಳ ಮೆಟ್ಟಿ ಹೊಯಿವನ ಬರಹೇಳೊ
ಕಾಳೆಯ ದೇವಗನೆಂಬವನ
ಕಾಳಗಕ್ಕೆ ಹೋಗುತ ಕರಸಿದ ಕಾಚಯ್ಯ
ವೀಳ್ಯವ ಕೊಟ್ಟನೆಲ್ಲರಿಗೆ                  ||೭೦||

ಪರಿವಾರ ಕೂಡಿ ಕೂಟಕೆ ಹೋಹ ಮಗನಿಗೆ
ತರಿಸಿದ ಸಿರುಮ ತೇಜಿಗಳ
ಹರಿಣ ವರ್ಣನು ಹಾರುವ ಹಂಸ ಜಂಚನು
ಕರಕಂಠ ಕರಿಕ ಮಾಣಿಕನು            ||೭೧||

ಕೆಂಚ ನೀಲನು ಹೊಸಮಿಂಚು ಕೇಸರಿವರ್ಣ
ಪಂಚಕಲ್ಯಾಣಿ ಪವಳನು
ಹೊಂಚುವ ಹುಲಿಬಣ್ಣ ಸಾರಂಗ ರಣದೊಳು
ಮುಂಚೆ ಕುಣಿವ ಕುದುರೆಗಳ           ||೭೨||

೪೩[13]ಆಯತದಿಂದಲಿ ಮಲ್ಲಣ್ಣನೇರುವ
ದೇವರಶ್ವವ ತರಿಸಿದನು
ಕೋಯೆಂದು ಕೊಟಸರದೊಳು ಪೊಕ್ಕು ತರಸಿದ
ರಾಯಮಲ್ಲನ ಬೊಲ್ಲವನು              ||೭೩||

ಕವಿಗೊಡವಿನ ಕೆಂಚಲೋ[ಬ]ನೇರುವ೪೩[14]
ಗವಿಯ ಕರಡಿಯ ತರಿಸಿದನು
ಕಯಿ ತವಕದಿ ಪೊಕ್ಕು ಕುಣಿವುತ ಬರುವಂಥ
ಮೈಯೆಳಗನ ತರಿಸಿದನು              ||೭೪||*

ಬೇಟೆಯ ಮಗ ಸೋಮಿನಾಯಕನೇರುವ
ನಾಟಕಸಾಲೆಯ ತರಿಸಿ
ಲೂಟಿಯಿಂದಲಿ ಹೋಗಿ ತಂದುಕೊಟ್ಟರು ಸ
ಘಾಟದಿ ಕೆಂಚ ಬೊಲ್ಲನನು              ||೭೫||

ಉಡುವೂರರಸು ನಂಬಿನಾಯಕನೇರುವ
ಕಡಗು ನೀಲಾತನ ತರಿಸಿ
ನಡಗೋಟೆಯ ಜಂಬುನಾಗಮರಿಯನು
ಕಡುತವಕದಿ ತರಿಸಿದನು                ||೭೬||

ಹೆಗ್ಗೇರಿ ಮಲ್ಲಣ್ಣನೇರುವದೊಂದೀಗ
ಹೆಬ್ಬುಲಿಯನು ತರಿಸಿದನು
ಉಗ್ರದಿ ರಣದೊಳು ಕಾದುವ ಕಾಚಗೆ
ಅಗ್ಗಳೆ ಕುದುರೆಯ ತರಿಸಿ               ||೭೭||

ಸಂಗ್ರಾಮಧೀರ ಕೊಮರ ಕಾಚನೇರುವ
ಮಂಗಳ ಬೊಲ್ಲನ ತರಿಸಿ
ಸಿಂಗಟಗೇರಿಯ ನಾಯಕನೇರುವ
ಲಿಂಗವಕ್ಷಿಯ ತರಿಸಿದನು೪೪[15]          ||೭೮||

ಇತ್ತಟ್ಟಿನ ಮಾನ್ಯರ ಹುಚ್ಚುಗೊಳಿಸುವ
ಚಿತ್ರಾಂಗಿಯ ತರಿಸಿದನು
ಉತ್ತಮ ಕೆನ್ನೀಲ ಮತ್ತ ವಾರುವ ಜಂಬ
ಅರ್ತಿಯಿಂದಲಿ ತರಿಸಿದನು೪೪[16]       ||೭೯||

ಎಕ್ಕಟಿಗಂಗನ ಗಂಡನೆಂಬುವದೊಂದು
ರಕ್ಕಸ ಬೊಲ್ಲನ ತರಿಸಿ
ತಕ್ಕಾಟಿ ಕುಣಿಕಾಲ ತೇಜಿಯ ತರಿಸಿದ
ತಕ್ಕ ರಾಹುತಗಳವಲ್ಲ                   ||೮೦||

ಹಿರಿಯೂರ ಕಸವನ ಗಂಡನೆಂಬುವದೊಂದು
ಉರಿಗೊಳ್ಳಿ ಕುಂಕುಮ ಚಾರ
ದೊರೆ ಏರುವ ತರವಡಿಗನ ತರಿಸಿದ
ಹರಿವಾಣದೊಳು ಕುಣಿವುದನು        ||೮೧||

ಹೊನ್ನವಳ್ಳಿಯ ವೇದರಾಜನ ಗಂಡನೆಂಬ
ಕೆನ್ನೀಲನ ತರಿಸಿದನು
ಬನ್ನಿಯ ಮರನೇರಿ ಎಸೆವದ ತರಿಸಿದ
ಚೆನ್ನಿಗ ಹೊನ್ನರಳೆಯನು                ||೮೨||

ಅಂತಕ ನರಸಿಂಹನ ಗಂಡನೆಂಬ
ಲೆಂಕವಿಭಾಂಡನ ತರಿಸಿ
ಶಂಖ ಪವಳ ಸಣ್ಣ ಗುಲಗಂಜಿ ನೀಲನಂ
ಬಿಂಕದ ಬೊಲ್ಲನ ತರಿಸಿ                 ||೮೩||

ಗುಂಜಮೈಯನು ಸಣ್ಣ ಗುಲಗಂಜಿ ನೀಲನು
ಕೆಂಗರಿಗಣ್ಣಿನದೊಂದು ಬೊಲ್ಲ
ಅಂಜದ ರಣದೊಳು ಕಾದುವ ತೇಜಿಯ
ಸಂಜೀವನ ತರಿಸಿದನು೪೫[17]                        ||೮೪||

ಬಂದೊಳಹೊರ ಲಾಯದ ತೇಜಿಗಳನು
ಒಂದುಳಿಯದೆ ತರಿಸಿದನು
ತಂದುಕೊಟ್ಟನು ಕಾಚಣ್ಣಗೆ ಸಿರುಮೇಂದ್ರ
ಚಂದ ಚಂದದ ಕುದುರೆಗಳ ||೮೫||

ಮುಟ್ಟ ಸಂಜೋಹವ ಮಾಡಿದರಾಕ್ಷಣದಲ್ಲಿ
ಕಟ್ಟಿಳಿಲ್ಲದ ಕುದುರೆಗಳು
ಪಟ್ಟದ ತೇಜಿ ಸಹಿತ ಕಾಚನ ಮುಂದೆ
ಇಟ್ಟು ತಕ್ಕೊಳ್ಳ ಹೇಳಿದನು             ||೮೬||

ಮನ್ನೆಯ ಸಿರುಮನ ಮುಸಾವಿರದೊಳು
ಮುನ್ನೂರಾಳನು ಆಯ್ದುಕೊಂಡ
ಉನ್ನತ ಮೂವತ್ತು ತೇಜಿಯೊಳಗೆ ಒಂದು
ಕೆನ್ನೀಲನ ತೆಕ್ಕೊಂಡ                     ||೮೭||

ಸಾಧನೆದೋರುತ ಕಾ[ಚೇಂದ್ರ] ತಂದೆಯ
ಪಾದಕ್ಕೆ ತಾ ಶರಣೆಂದ
ಹಾದು ತರ್ಕೈಸಿ ಹರಸಿ ಮಗನೆ ನೀನು
ಹೋದ ಕಾರ್ಯವು ಜಯವೆಂದ       ||೮೮||

ಸಿರುಮ ಬಾಗೂರಿಗೆ ಹೋಹ ಪರಿವಾರವ
ಕರೆಸಿ ಕೈಯೊಡೆ ಕೊಟ್ಟ ಮಗನ
ಪರೀಕ್ಷಿಸಿ ಕಾಚನ ಮುಖ ನೋಡಿ ರಸಕಳೆ
ತೊರೆದುಬ್ಬಿ ಪಿತಗೆ ಕೈಮುಗಿದ        ||೮೯||

ಎನ್ನ ಬಸಿರು ಬಂದ ಕಾಚ ಹುಯ್ಯಲು ಬೇಂಟೆ
ಮುನ್ನಲರಿಯ ಮುಂದನರಿದು
ಇನ್ನು ಹೋಹದು ಬಲು ಜೋಕೆಂದು ಬಂಟರ
ಮನ್ನಿಸಿ ಕಳುಹಲಾಕ್ಷಣದಿ                ||೯೦||

ಹೊಕ್ಕಳ ಘಂಟೆ ಹುಲಿಯ ಬಾಲ ಬಿರಿದಿನ
ಹಕ್ಕರಿಕೆಯು ಮುಖರಂಬ
ತೆತ್ತಸಿ ರತ್ನ ಮೆರೆವ ಹೊನ್ನ ಹಲ್ಲಣ
ವಿಕ್ರಮ ಕಾಚನೇರಿದನು                 ||೯೧||

ಹೋಗೆಂದು ಕಳುಹಬಂದವರನು ಕಳುಹುತ
ಲಾಗಿಸಿ ತೇಜಿಯನೇರಿ
ಬಾಗೂರ ದಾರಿ ಹಿಡಿದು ಕಾಚಭೂವರ
ಸಾಗಿಬರುವ ಸಂಭ್ರಮವು               ||೯೨||

ಮೇದಿನಿಯದುರುವಂದದಿ ವಾದ್ಯರಭಸವು
ಬೂದಿಹಾಳ ಬಾಗಿಲೆಡೆಯ
ಕಾದುವ ಕ್ರಮವ ನೋಡುವೆನೆಂದು ಹೊರಟನು
ಕಡು ವೇಗದಲಿ ಕಲಿಕಾಚ                ||೯೩||[1] ೩೬-೩೬ ಹುಡೆಗೈಯ್ಯ (ಶಿ), ಉಡಿಗೆಯ (ಹ)

[2] ೩೬-೩೬ ಹುಡೆಗೈಯ್ಯ (ಶಿ), ಉಡಿಗೆಯ (ಹ)

[3] ೩೭-೩೭ ಪಿತಮಹ (ಶಿ), ಪೆತ್ತವರು (ಹ)

[4] ೩೭-೩೭ ಪಿತಮಹ (ಶಿ), ಪೆತ್ತವರು (ಹ)

[5] ೩೮-೩೮ ಗರಿ ಸೋಮನವರ (ಶಿ)

[6] ೩೮-೩೮ ಗರಿ ಸೋಮನವರ (ಶಿ)

[7] ೩೯-೩೯ ತಪ್ಪದೇರ ಸುರಿತ (ಶಿ), * ಇಲ್ಲಿಂದ ಮುಂದಿನ ನಾಲ್ಕು ಪದ್ಯಗಳು “ಹ” ಪ್ರತಿಯಲ್ಲಿ ಇಲ್ಲ (ಸಂ)

[8] ೩೯-೩೯ ತಪ್ಪದೇರ ಸುರಿತ (ಶಿ), * ಇಲ್ಲಿಂದ ಮುಂದಿನ ನಾಲ್ಕು ಪದ್ಯಗಳು “ಹ” ಪ್ರತಿಯಲ್ಲಿ ಇಲ್ಲ (ಸಂ)

[9] ೪೦-೪೦ ಕೈಯಲ್ಲಿ ಜಾಗಟೆ ಬೆನ್ನಲ್ಲಿ ಕನ್ನಡಿ (ಶಿ).

[10] ೪೦-೪೦ ಕೈಯಲ್ಲಿ ಜಾಗಟೆ ಬೆನ್ನಲ್ಲಿ ಕನ್ನಡಿ (ಶಿ).

[11] ೪೧ ಈ ಪದ್ಯ “ಶಿ” ಪ್ರತಿಯಲ್ಲಿ ಇಲ್ಲ (ಸಂ).

[12] ೪೨ ಈ ಪದ್ಯ “ಶಿ” ಪ್ರತಿಯಲ್ಲಿ ಇಲ್ಲ (ಸಂ).

[13] ೪೩-೪೩ ಇಷ್ಟು ಭಾಗ “ಶಿ” ಪ್ರತಿಯಲ್ಲಿ ಇಲ್ಲ (ಸಂ)

[14] ೪೩-೪೩ ಇಷ್ಟು ಭಾಗ “ಶಿ” ಪ್ರತಿಯಲ್ಲಿ ಇಲ್ಲ (ಸಂ)

[15] ೪೪ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ).

[16] ೪೪ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ).

[17] ೪೫ “ಹ” ಪ್ರತಿಯಲ್ಲಿ ಈ ಪದ್ಯವಿಲ್ಲ (ಸಂ).