ಕಾಳಗದೊಳು ಕೋಳು ಹೋಗದು ಕೋಟೆಯು
ಸಾಳುವ ನರಸಿಂಹ ಕಂಡು
ಬಾಳ ಜಡಿದು ನಡೆದಲ್ಲಿ ಹೊರಕೇರಿಯ
ಧೂಳಿಕೋಟೆಯ ಮಾಡಿಕೊಂಡ       ||೧೯೩||

ಕೆಟ್ಟೆನೆನುತ ಬಾಯಬಿಟ್ಟು ಗೋವಿಂದನು
ಸೆಟ್ಟಿಗಳೆಲ್ಲರ ಕರೆಸಿ
ದಿಟ್ಟ ನರಸಿಂಹಗೆ ಕಾಣಿಕೆ ಕಪ್ಪವ
ಕೊಟ್ಟು ನಮ್ಮನು ಕಾಣಿಸೆಂದ          ||೧೯೪||

ಎಂದ ಮಾತನು ಕೇಳಿ ನೊಂದು ಬಾಗೂರ ಪ್ರಜೆ
ಒಂದಾಗಿ ಕೂಡಿ ಮಾತಾಡಿ
ಸಂದೇಹ ಬಿಟ್ಟಿತೆನುತ ಬುದ್ಧಿವಂತರು
ಬಂದು ಕೋಟೆಯ ಮೆಟ್ಟಿ ನಿಂದು      ||೧೯೫||

ಇಡಬೇಡ *

[1][ಅಂಬೆ]*[2]ಸೆಯಲಿಬೇಡ ನಿಮ್ಮಯ
ಒಡೆಯ ನರಸಿಂಹನಾಣೆನಲು
ಕೊಡುವೆವು ಬೇಡಿದ ಕಾಣಿಕೆ ಕಪ್ಪವ
ಕೆಡಿಸಬೇಡ[ವೊ] ಬಾಗೂರ            ||೧೯೬||

ಎಂದ ಮಾತನು ಕೇಳಿ ಈಶ್ವರಿನಾಯಕ
ನಿಂದನಗುಳ ದಂಡೆಯಲಿ
ಇಂದಿನ ಸ್ಥಿತಿಯ ಎಕ್ಕಟಿಗ ಗಂಗಯ್ಯ
ಮುಂದೆ ರಾಯನಿಗೆ ಬಿನ್ನೈಸು          ||೧೯೭||

ಹೀಗೆಂಬ ರಾಜಕಾರ್ಯಕೆ ಗಂಗಯ್ಯ ಹೋಗಿ
ಬೇಗ ನರಸಿಂಹನಡಿಗೆರಗಿ
ಬಾಗೂರ ಅರಮನೆಯನುಳುಹಬೇಕ್ಕೆ ಸ್ವಾಮಿ
ಈಗ ಮುತ್ತಿಗೆ ತೆಗೆಸೆಂದ                ||೧೯೮||

ಲೇಸಿನ ನುಡಿಯ ಕೇಳುತ ನರಸಿಂಹರಾಯ
ಈಶ್ವರಿನಾಯಕನ ಕರಸಿ
ಘಾಸಿ ಮಾಡದೆ ಮುತ್ತಿಗೆಯ ತೆಗೆಸೆನುತ ವಿ
ಲಾಸದೊಳಗವನುಸುರಿದನು          ||೧೯೯||

ಎಂದ ಮನ್ನಣೆಯ ಮಾತಿಗೀಶ್ವರಿನಾಯಕ
ಹಿಂದಕ್ಕೆ ಮುತ್ತಿಗೆದೆಗೆಸಿ
ಬಂದು ಗೋವಿಂದನಾಯಕನ ಮಂತ್ರಿಗಳೊಳು
ಸಂಧಾನದ ಮಾತನಾಡಿ                ||೨೦೦||

ಬರಿಯ ಮಾತಿಲಿ ಫಲವಿಲ್ಲ ನರಸಿಂಹಗೆ
ತೆರು ಮೂರು ಲಕ್ಷ ವರಹೊನ್ನ
ನೆರೆ ಸಾರಿದೆನು ಕೇಳು ಗೋವಿಂದನಾಯಕ
ಮರೆಯ ಮಾತಿನ್ನೇಕೆ ಕೇಳು           ||೨೦೧||

ನಿನ್ನ ತಮ್ಮನ ಶ್ರೀರಂಗರಾಜನ ತಂದು
ಭಿನ್ನವಿಲ್ಲದೆ ಕೈಸೆರೆಯ
ಇನ್ನು ಒಪ್ಪಿಸು ನರಸಿಂಹಗೆ ಗೋವಿಂದ
ಮನ್ನಣೆಯಲಿ ಸುಖವಿಹುದು            ||೨೦೨||

ಆಗಳಾಲೋಚಿಸಿ ಆವಿಗೆ ಕಿಚ್ಚಿನಂತೆ
ಬೇಗೆವರಿದು ತನ್ನ ಮನದಿ
ಬಾಗೂರ ಪ್ರಜೆಗಳ ಭಂಗಬಡಿಸದೆ ನಾ
ಹೋಗುವೆನೆಂದ ಶ್ರೀರಂಗ              ||೨೦೩||

ಬಾಣ ತಾಕಿದ ಮೃಗದಂತೆ ಗೋವಿಂದನು ತನ್ನ
ರಾಣಿವಾಸವನೆಲ್ಲ ನೋಡಿ
ಖೇಣದೊಳಿರಿದು ಕೊಲ್ಲುವೆನೆಂದು ತನ್ನಯ
ಪ್ರಾಣಕೆ ಹರುವನೆಣಿಸಿದನು            ||೨೦೪||

ಮರಳುತನವು ಬೇಡ ಅಣ್ಣಾಜಿ ಗೋವಿಂದ
ಶರಿರಕೆ ನೀನಂಜಬೇಡ
ಹರಣಕೆ ಮರಣ ತಪ್ಪದು ಎಂದಿದ್ದರೆ
ಕರ ದುಃಖ ಬೇಡ ನಮ್ಮಣ್ಣ ||೨೦೫||

ಸಿಕ್ಕಿ ಕಂಗೆಟ್ಟು ಗೋವಿಂದನಾಯಕ ಮೂರು
ಲಕ್ಷ ವರ ಹೊನ್ನೊಡಂಬಟ್ಟು
ಧೊಕ್ಕನೆ ತನ್ನ ತಮ್ಮನ ಕೈಸೆರೆಗೊಟ್ಟು ಕ
ಬ್ಬಕ್ಕಿಯಂದದಿ ಬಾಯ ಬಿಟ್ಟ            ||೨೦೬||

ಬಾಗೂರ ಸೆಟ್ಟಿಸಮಯರು ಸಹಿತ ಬಂದು
ಬಾಗಿಲ ಬೀಗ ಮುದ್ರೆಯನು
ಬೇಗ ಈಶ್ವರಿನಾಯಕಗೊಪ್ಪಿಸಿ ತಲೆ
ವಾಗಿ ಕೈಮುಗಿದು ನಿಂದಿಹರು         ||೨೦೭||

ಆ ವೇಳೆಯಲಿ ಈಶ್ವರಿನಾಯಕ ತಾನು
ಭಾವಿಸಿ ಪುರ ಪರಿಜನರ
ಗೋವಿಂದನಾಯಕನ ಮನೆಗೆ ಕಾವಲನಿಕ್ಕಿ
ತಾವೀವ ಹೊನ್ನ ಬೇಡಿದನು            ||೨೦೮||

ಅಕ್ಕಟೆನುತ ಗೋವಿಂದನಾಯಕ ಹೆ
ಮ್ಮಕ್ಕಳ ತೊಡಿಗೆ ಎಲ್ಲವನು
ಲೆಕ್ಕವ ಮಾಡಿ ಹಣ ಹೊನ್ನು ಬಂಗಾರವ
ಲಕ್ಷ ವರ[ವ]ನೆಣಿಸಿದನು                ||೨೦೯||

ಮಿಕ್ಕ ಹೊನ್ನಿಗೆ ಹರಿತವ ಕಾಣದೆ ಮಿಗೆ
ಹೊಕ್ಕು ತೊಳಲಿ ಅರಮನೆಯ
ರೊಕ್ಕ ಬೆಳ್ಳಿಯ ಚಿನ್ನ ತಾಮ್ರ ಸ್ವರೂಪವ
ಧೊಕ್ಕನೊಪ್ಪಿಸಿ ಕಂಚು ಮುಟ್ಟ         ||೨೧೦||

ಪಟ್ಟೆಯ ಸಕಲಾತಿ ಝಲ್ಲಿಯ ಪೆಟ್ಟಿಗೆ
ಕಟ್ಟಾಣಿಲ್ಲದ ೮೨[3]ಜೀಬಿನಾಣ್ಯ೮೨[4]
ಒಟ್ಟಿಸಿ ಬಣ್ಣ ಪರಿಯ ದುಪ್ಪಟಿಯಿಂದ
ಕೊಟ್ಟು ಗೋವಿಂಧ ಬಾಯ್ಬಿಟ್ಟ         ||೨೧೧||

ಒಳಹೊರ ಲಾಯದ ಕುದುರೆ ಸಹಿತ ಮುಂದೆ
ಹೊಳಹಿ ಅನಂತ ವಸ್ತುಗಳ
ದಳಪತಿ ಈಶ್ವರಿನಾಯಕಗೊಪ್ಪಿಸಿ
ಕಳೆಯಗುಂದಿದನು ಗೋವಿಂದ        ||೨೧೨||

ಉಟ್ಟ ಸೀರೆವೆರಸಿ ಅರಮನೆಯಿಂದಲಿ
ನೆಟ್ಟನೆ ಬಿಟ್ಟು ಹೊರಡಿಸಿದ
ಕಟ್ಟಳೆ ಮಾಡಿ ಗೋವಿಂದನಾಯ್ಕನ ಮೇಲೆಂ
ದಟ್ಟಿದ [ತೆ]ರಕಾರರನು                 ||೨೧೩||

ಕಂಗೆಡುತಲಿ ಗೋವಿಂದನಾಯಕ ತಾನು
ಭಂಗಕೆ ಒಳಗಾದೆನೆನುತ
ಕಂಗಳಲುದಕವ ತುಂಬಿ ಅರಮನೆಯ
ಹೆಂಗಳುಸಹಿತ ಹೊರಹೊಂಟ         ||೨೧೪||

ಮೊರೆಯಿಟ್ಟು ಸತಿಯರು ಸುರಿವ ಕಂಬನಿಗಳ
ಸೆರಗಿಂದ ಒರಸಿಕೊಳುತಲಿ
ಉರ್ವಿಗುನ್ನತ ಬಾಗೂರ ಹೊರಟುಬಂದು
ಹೊರ ಪಾಳ್ಯದಿ ನಿಂದರೆಲ್ಲ              ||೨೧೫||

ಎಕ್ಕಟಿ ಗಂಗನ ವಶಕೆ ಗೋವಿಂದನ
ಇಕ್ಕಿ ಈಶ್ವರಿನಾಯಕನು
೮೩[5][ರೊಕ್ಕವ]೮೩[6] ಕೇಳಲು ಬಂದು ಹೇಳಿದ[ನು] ರಕ್ಕಸ ಸಮಗಾರ ಮಲ್ಲ                 ||೨೧೬||

ಹೊನ್ನುಳ್ಳವರ ಹೇಳ್ವೆನೀಶ್ವರನಾಯಕ
ಎನ್ನ ಬಿನ್ನಪವ ಕೇಳಯ್ಯ
ಸನ್ನೆಯ ಮಾಡಿ ಒತ್ತಲಿ ನಿಂತಿರ್ದನು
ಚೆನ್ನಿಗ ಸಮಗಾರ ಮಲ್ಲ                 ||೨೧೭||

ಈತನು ಅಧಿಕಾರಿ ಬೊಮ್ಮರಸಯ್ಯನು
ಈತ ದುರ್ಮಂತ್ರಿ ಲಿಂಗರಸ
ಈತನು ಹಣವುಳ್ಳ ಮಣಿ[ಹಾ]ರಿ ಓಬಯ್ಯ
ಈತ ಚಿನಿವರದ ಹಂಪರಸ             ||೨೧೮||

ಆಗ ಪ್ರಧಾನ ರಾಮರಸನ ತೋರಿದ
ಬೇಗ ಕರಣಿಕ ತಿಮ್ಮರಸ
ನಾಗರಸಗಳಣ್ಣ ಲಗುಮರಸನ ಕಟ್ಟಿ
ತೂಗಿ ಹಣನ ತರಿಸೆಂದ                 ||೨೧೯||

ಕಡುಕಿನ ಬ್ರಾಹ್ಮಣಗೆ ಮಡಿಲಲ್ಲಿ ಜಾಳಿಗೆ
ಒಡನಕ್ಕಸಾಲೇರ ಗಿರಿಯಗೆ
ಹಿಡಿತನ್ನಿ ಹಂಪರಸನ ತಿಮ್ಮರಸನ
ನಡುವಿಗೊನಕೆಯ ಹಾಕೆಂದ           ||೨೨೦||

ಹಿಡಿತನ್ನಿ ಗಾಣದ ತಿಪ್ಪಣ್ಣನ ಬೇಗ
ಹಿಡಿತನ್ನಿ ಚಿಂದಿ ಪುಟ್ಟಣ್ಣನ
ಹಿಡಿತನ್ನಿ ನೀರುಗುಂದದ ಗಿರಿಯಣ್ಣನ
ಹಿಡಿತನ್ನಿ ಜಾಡರ ಚಿಕ್ಕನ                ||೨೨೧||

*[7]ದೊಡ್ಡ ದೊಡ್ಡವರನು ಹಿಡಿದಾಗ ಸುತ್ತರೆ
ಗಡ್ಡವ ಪಂಜಿಲಿ ಸುಡಿಸಿ
ಮಡ್ಡನೆತ್ತಿಸಿ ಮಾಜದೆ ಹಣಗೊಡಿಯೆಂದ
ಗೊಡ್ಡೇರ ಕೊಲೆಗಳ ಕೊಂದು          ||೨೨೨||

ಪ್ರಭು ಪ್ರಜೆಯೆನ್ನದೆ ಸಭೆಗಳ ಕೂಡಿಸಿ
ಗಂಭೀರ ಸಮಗಾರ ಮಲ್ಲ
ಅಭಿನ್ನವ ಮುಟ್ಟಿ ಈಶ್ವರಿ[ನಾ]ಯಕಗಾಗ
ಕುಭಿತ ಕುಚಿತವ ಸೂಚಿಸಿದನು        ||೨೨೩||

ಸೆಟ್ಟಿಗಳೆಲ್ಲಾಗ ಈಶ್ವರಿನಾಯಕ
ಮೇಟಿ ನೆರವಿ ಎಂದೆನುತ
ಕಟ್ಟ ಕರಿಕೆಯಗಳ [ನಡು]ವಿಗೊನಕೆಗಳ
ಕೊಟ್ಟರೆ ಬಿಡಿ ಹಣಗಳನು               ||೨೨೪||

ಸೊಪ್ಪಿನ ಕೇರಿಯೆಪ್ಪತ್ತು ಸಾವಿರ ಹೊನ್ನ
ತಪ್ಪದೆ ಈ ಕ್ಷಣ ತರಿಸು
ತುಪ್ಪವ ಮಾರುವವರ ಕೈಯ್ಯಲಿ ಮಿಗೆ
ಒಪ್ಪಾಕೆ ಮುನ್ನೂರ ತರಿಸು*[8]          ||೨೨೫||

ಬಿಡದೆ ರಾಟಾಳವ ತಿರುಹುವರ ಕೈಯ್ಯ
ಒಡವೆ ಬಾಳವ ತರಿಸೆಂದ
ಮಡಕೆಯ ಮಾರುವ ಕುಂಬಾರನ ಕೈಯ್ಯ
ಕುಡಿಕಿ ತುಂಬಲಿ ತರಿಸೆಂದ ||೨೨೬||

ಊರೊಳಗಣ ಕೇರಿ ಕಟ್ಟಿನ ಸೂಳೇರ
ಸೇರಿದ ಹಣವ ಹೇಳಿದನು
ಮೀರಿ ಹುಲುಸು ಹಾಗ ಹಣವ ತೆಕ್ಕೊಂಬಳು
ವಾರಿಜಮುಖಿಯು ಮಲ್ಲರಸಿ           ||೨೨೭||

ಸೂಳೆ ಬೆಲಕಿಯೆಂಬವಳ ಕೈಯಲಿ ಮಿಗೆ
ಏಳುನೂರನು ತರಿಸೆಂದ
ಹೇಳಿದ ಪೇಟೆಯ ವಿರುಪಯ ಕೈಯ್ಯಲಿ
ಅಳೆದು ಗಿದ್ದನ ಹೊನ್ನ ತರಿಸೊ        ||೨೨೮||

ಸೂಜಿಯನುಗುರೊಳಗೇರಿಸಿ ಹಣಗಳ
ಮಾಜದೆ ಕೊಡಿ ಎಂದೆನುತ
ಗಾಜಿನ ಕರಿಮಣಿ ಸಹಿತಾಗಲೊಪ್ಪಿಸಿ
ತ್ಯಜಿಸಿಲ್ಲಿಗೆ ಬೇಡವೆಂದ                 ||೨೨೯||

ಅಲಗಿನ ಮೊನೆಗಳ ಮೇಲಡ್ಡ ಮಲಗಿಸಿ
ಮೊಲೆಗೆ ಗಿರಿಕೆಗಳನು ಕಟ್ಟಿ
ಹಲವು ಬಗೆಯ ಗಳಿಕೆಯ ಹಣಗಳ ಬೇಡಿ
ತೊಲಗಲೀಸದೆ ಬಾಧಿಸಿದರು          ||೨೩೦||

ಬಾಗೂರ ಒಳಯಕೆ ಹೊಕ್ಕು ಜನರ ಬಾಧಿಸುತಿರೆ
ಆಗ ತಮ್ಮಯ ಮೈದೊಡಿಗೆಗಳ
ತೂಗಿ ತಂದೊಪ್ಪಿಸಿ ಈಶ್ವರಿನಾಯಕ
ಮೂಗಿಗೆ ಬೆರಳಿಟ್ಟು ನೋಡಿ*[9]           ||೨೩೧||

ಛಂದ ಛಂದದ ಹಣ ಹೊನ್ನು ಬಂಗಾರವ
೮೪[10]ತಂದು ನರಸಿಂಹರಾಯನಿಗೆ೮೪[11]
ಮುಂದೆ ರಾಸಿಯ ಮಾಡಿ ಈಶ್ವರಿನಾಯಕ
ನಿಂದಡ್ಡಬಿದ್ದು ಕೈಮುಗಿದ                ||೨೩೨||

ಕೂಡಿದ ಹಣ ಬಾಳವನು ಕಂಡು ನರಸಿಂಹ
ರೂಢಿಗುನ್ನತ ಈಶ್ವರಗೆ
ಈಡಿಲ್ಲದುಡುಗೊರೆ ಕರ್ಪುರ ವೀಳ್ಯವ
ಜೋಡಿಸಿ ಕೊಟ್ಟು ಮುನ್ನಿಸಿದ          ||೨೩೩||

ನರಸಿಂಹ ಬಾಗೂರ ಕೊಂಡನೆಂಬುದ ಕೇಳಿ
ಸಿರುಮಭೂವರನಾ ದಿನದಿ
ಬರಸಿದೋಲೆಯ ಬರಲೆಂದು ಭಟ್ಟರ ಕೈಯ
ಕರೆಯ ಕಳುಹಲೆರಡು ಸಂಧಿ೮೫[12]     ||೨೩೪||[1] *_*  ಇಂದೆ (ಶಿ, ).

[2] *_*  ಇಂದೆ (ಶಿ, ).

[3] ೮೨೮೨ ನಸ್ಸು().

[4] ೮೨೮೨ ನಸ್ಸು().

[5] ೮೩೮೩ ಉಳ್ಳವರ(ಶಿ).

[6] ೮೩೮೩ ಉಳ್ಳವರ(ಶಿ).

[7] *ಇಲ್ಲಿಂದಪ್ರತಿಯಲ್ಲಿ ಒಂದು ಗರಿ ಕಳೆದಿದೆ. ಹೀಗಾಗಿದೊಡ್ಡದೊಡ್ಡವರು . . . ” “ಸೊಪ್ಪಿನ ಕೇರಿಯ . . . . ” ಎರಡನ್ನೂ ಒಳಗೊಂಡ ಪದ್ಯಗಳು ಇಲ್ಲಿ ಸಿಗುವುದಿಲ್ಲ (ಸಂ).

[8] *ಇಲ್ಲಿಂದಪ್ರತಿಯಲ್ಲಿ ಒಂದು ಗರಿ ಕಳೆದಿದೆ. ಹೀಗಾಗಿದೊಡ್ಡದೊಡ್ಡವರು . . . ” “ಸೊಪ್ಪಿನ ಕೇರಿಯ . . . . ” ಎರಡನ್ನೂ ಒಳಗೊಂಡ ಪದ್ಯಗಳು ಇಲ್ಲಿ ಸಿಗುವುದಿಲ್ಲ (ಸಂ).

[9] * ಪದ್ಯಪ್ರತಿಯಲ್ಲಿಕೂಡಿದ ಹಣ . . . .” ಪದ್ಯದ ಬಳಿಕ ಬಂದಿದೆ (ಸಂ).

[10] ೮೪೮೪ ಮುಂದಿರಿಸಿದ ನರಸಿಂಹನ(ಶಿ),

[11] ೮೪೮೪ ಮುಂದಿರಿಸಿದ ನರಸಿಂಹನ(ಶಿ),

[12] ೮೫ ಅಂತು ಸಂಧಿ ೨ಕ್ಕಂ ಪದನು ೩೭೨ಕ್ಕಂ ಮಂಗಳ ಮಹಾ ಶ್ರೀ
(ಶಿ), ಅಂತು ಸಂಧಿ ೨ಕ್ಕಂ ಪದನು ೨೩೯ಕ್ಕಂ ಮಂಗಳ ಮಹಾಶ್ರೀ ಶ್ರೀ ().