ವಾಸನ ಉಡಿಕೆ ಹಂಗನ ಕಟ್ಟು ಗೌಳಿಯ
ಲೇಸಿಲ್ಲ ಶಕುನದ ಪರಿಯ
ಈಶ್ವರನೊಬ್ಬನೆ ಗತಿಯೆಂದು ನಡೆತಂದ
ಕೇಸರಿಗಣ್ಣ ವೀರಣ್ಣ                       ||೧೫೦||

ಮುಂಗಾರ ಮೇಘದ ಮರೆಯಲಡಗಿದ ಮಿಂಚು
ಜಂಗುಳಿಯಲಿ ಹೊರಟವನು
ಲಿಂಗನೋಲಗದಿಂದ ಕರೆಸಿದ ಬಂಟರ
ಸಂಗ್ರಾಮಕೆ ಕಲಿ ವೀರ                  ||೧೫೧||

ವೀರ ಜಡೆಯು ಗೀರುಗಂಧ ಕಸ್ತುರಿಬೊಟ್ಟು
ಧಾರವಂಕುಡಿ ಧಟ್ಟಿ ಝಲ್ಲಿ
ಸೇರಿದ ಮುಮ್ಮೊನೆಗಾಸೆ ಶೃಂಗರವಾಗಿ
ಧೀರರು ಸಹವಾಗಿ ನಡೆದ              ||೧೫೨||

ಮೃಡನುರಿಗಣ್ಣ ಕಿಡಿ ತ್ರಿಪುರಕೆ ನಡೆವಂತೆ
ಅಡರಿದನಾಳುವೇರಿಯನು
ಒಡನೆ ಕೊತ್ತಳದೊಳು ನಿಲಲು ಕೊಮಾರ ವೀರ
ಹಿಡಿದವು ಬಿರಿದಿನ ಕಹಳೆ                ||೧೫೩||

ಸತ್ತಿಗೆ ನೆಳಲೊಳು ಚಮರ ಢಾಳೈಸುತ
ಕಿತ್ತಲಗಿನ ರವಸದಲಿ
ಸತ್ವದ ಕುಮಾರ ವೀರನ ಭಟರು ಮಿಗೆ
ಒತ್ತಿ ಕಡಿದರು ಮೂದಲಿಸಿ               ||೧೫೪||

ಚಂಡಾಂಶುವಿನ ಶೌರ್ಯವು ಒಂದು ರೂಪಾಗಿ
ತಾಂಡವಾಡುವ ವೀರನಿರವ
ಕಂಡು ಬೂದಿಯಹಾಳ ಹೊರಗೆ ನರಸಿಂಹ
ತಂಡ ತಂಡದ ಪವುಜ ಮಾಡಿ         ||೧೫೫||

ಪೃಥ್ವಿ ಬೆಸಲಾದ ಪರಿಯಂತೆ ಬೂದಿಹಾಳ
ಸುತ್ತಲಿನ ನರಸಿಂಹನವರು
ಚಿತ್ತಜರೂಪಿನವನು ಕಾದುತಿರೆ ಕಂಡು
ಕೊತ್ತಳದೊಳಗೆ ವೀರಯ್ಯನ           ||೧೫೬||

ಜಗದೊಳಗಿನ ಕಾಲರುದ್ರನೊ ವೀರನೊ
ದಿಗುಬಲಿ ಕೊಡಿ ಎಂದ ರಾಯ
ಮಿಗಿಲನೆ ಮಾಡಿ ಅಡರಿ ಕೋಟೆಯ ಮೇಲೆ
ಟಗರು ತಾಕಿದ ಬಗೆ ಮಿಗಿಲು           ||೧೫೭||

ಮಲೆತು ತೊಲಗದೆ ಖೋಲೊಲೊ ಖೋಖೋಯೆಂದ
ತಲೆವರಿಗೆಯನಿಕ್ಕಿ ನೆಗೆದು
ಹಲವು ಬಗೆಯಲಿ ಹೊಂಚಿ ಹೊಯ್ದಾಡಿದರು ಗೊಲ್ಲ
ಕಲಿವೀರನ ಪರಿವಾರ೨೮

[1]                ||೧೫೮||

ನಡೆದು ಬಂದನು ನರಸಿಂಹನ ಎಡೆಗಾಗಿ
ಓಡನೆ ಕಾಕಿಯ ವಿಶ್ವರಾಜ
ಕೊಡು ಸ್ವಾಮಿ ನನಗೆ ವೀಳ್ಯವನೀಗ ಗೊಲ್ಲನ
ಮಡಹುವೆ ಬಲುಗಾಳಗದಿ              ||೧೫೯||

ನುಡಿಗೇಳಿ ನರಸಿಂಹ ಉಡುಗೊರೆ ವೀಳ್ಯೆವ
ಕೊಡಲು ತಕ್ಕೊಂಡು ವಿಶ್ವರಾಜ
ನಡೆದು ಬಂದನು ಸಿರುಮನ ಮಗ ವೀರನ
ಹಿಡಿಯಾಳ ಹಿಡಿತಹೆನೆನುತ           ||೧೬೦||

ಇತ್ತ ಪವುಜ ಮಾಡಿ ದಳ ಮುಂದುವರಿದಾಗ
ಮುತ್ತಿತು ವೀರನಿದ್ದೆಡೆಯ
ಕೊತ್ತಳದೊಳು ಹೊಕ್ಕು ಕೊಲಲೊ ಖೋ ಎಂದು
ಕತ್ತಿ ಕೈದುವಿನೊಳಿರಿದರು              ||೧೬೧||

ಮುಂದಲೆ ಮುಂದಲೆಗಳ ಪಿಡಿದಿರಿದಾಡಿ
ಸಂಧಿ ಸಾಧಿಸಿ ತಿವಿದಾಡಿ
ಕೊಂದರು ವಿಶ್ವರಾಜನ ಪರಿವಾರವ
ಬಂಧಿಸಿ ವೀರನ ಭಟರು                 ||೧೬೨||

ಚಲ್ಲವರಿದು ಕೆಡಹಿತು ಬಲು ಭಟರನು
ಭಲ್ಲೆಯದಲ್ಲಿ ತಿವಿತಿವಿದು
ಹುಲ್ಲನುರುಹಿ ಸುಟ್ಟು ಸೊರಗಿಸಿದರು ವೀರ
ಬಲ್ಲಿದ ನೊಡು ನೋಡೆನುತ            ||೧೬೩||

ಈ ಪರಿಯಲಿ ದಳ ಮುರಿದೋಡುವದ ಕಂಡು
ಕೋಪದಿ ಕಿಡಿಯನುಗುಳುತ
ಚಾಪ ಕೊಂತವ ಪಿಡಿದಳಲಿ ವಿಶ್ವರಾಜನು
ಭೂಪನ ಬಿರಿದುಳ್ಳ ಭಟರು              ||೧೬೪||

ಹತ್ತಿತ್ತು ಕೋಟೆ ಕೊತ್ತಳಗಳ ಬೊಬ್ಬಿಟ್ಟು
ಮೃತ್ಯುಲೋಕವ ನುಂಗುವಂತೆ
ಮುತ್ತಿತು ವೀರ ಪಡೆಯು ಮುಸುಕಿ ಮಂಜು
ಪೃಥ್ವಿಗಳನು ತುಂಬುವಂತೆ             ||೧೬೫||

*[2]ಉರಿ[ವ]ರುಣನ*[3] ಪಿಡಿದುರುಗ ನುಂಗಿದವೊಲು
ತರಿದರು ಬಲು ಭಟರುಗಳ
ಮೊರೆದು ಮೋಹರಿಸಿತು ಕೋಟೆ ಕೊತ್ತಳಗಳ
ಉರವಣಿಯಲಿ ಮುಸುಕಿದರು          ||೧೬೬||

ಪೆಟಲ ರವಸದಲ್ಲಿ ಪುಟವೇರಿ ಪರಿವಾರ
ನಟನಟಿಸುತ ತಿವಿದಾಡಿ
ಸುಟಿಯಿಂದ ಬಿಲ್ಲುಗಾರರು ಬಾಣಗರೆಯಲು
ಪುಟವೇರಿ ವೀರಭಟರು                  ||೧೬೭||

ಮುನ್ನೂರು ಕೆಂಪಿನ ಹರಿಗೆಯ ಬಂಟರ
ಸನ್ನೆಗಾಳಗಕೆ ಬಿಟ್ಟವನು
ಕಣ್ಣೆವೆ ಹಳಚದೆ ನೋಡಿ ಕೊಮಾರ ವೀರ
ಹೊನ್ನು ಹಣವ ಚೆಲ್ಲಿದನು               ||೧೬೮||

ಕೊಡುವ ಕೈಗಳು ನಿನಗೆ ತಪ್ಪವು ವೀರಣ್ಣ
ಕಡಿವ ಕೈಗಳ ನೋಡೆನುತ
ಜಡಿದು ಕರವಾಳನು ಕೈಯ್ಯೆತ್ತಿ ಹೊಯ್ಯಲು
ಕೆಡಹಿ ಅಗಳ ತುಂಬಿದರು               ||೧೬೯||

ಒಬ್ಬನ ಹೊಯ್ದರೆ ಇಬ್ಬರು ಬೀಳ್ದರು
ಬೊಬ್ಬುಳಿಗೊಂಡ ತೆಲುಗರು
ಅಬ್ಬರಿಸುತ್ತ ಕುಮಾರ ವೀರನ ದಂಡಿಗೆ
ನಿಬ್ಬೆರಗಾದ ವಿಶ್ವರಾಜ                  ||೧೭೦||

ಪಡೆ ಮಡಿಯಲು ಕಂಡು ಕಡು ಹೋರಿ ವಿಶ್ವೇಂದ್ರ
ಕಿಡಿಗೆದರಿದನಕ್ಷಿಗಳಲಿ
ಒಡನೆ ವಜ್ರಾಂಗಿ ತಲೆ ಠವುಳಿಯನಿಕ್ಕಿ
ನಡೆದನಾಕ್ಷಣ ಕೋಟೆಗಡರಿ            ||೧೭೧||

ಲಾಘಿಸಿ ಪುಟನೆಗೆದಡರಿದ ಕೋಟೆಯ
ಕೂಗಿ ಬೊಬ್ಬರಿದಬ್ಬರಿಸುತ
ಹೋಗದಿರೆಲೊ ಗೊಲ್ಲ ಬಲುಹ ತೋರೆಲೊ ನಿನ್ನ
ತಾಗ ಹೊಯ್ದೆನು ಘನ ಶಿರವ          ||೧೭೨||

ಭಲ ಭಲರೆ ಛಲದಂಕ ಮನ್ನೆಯ ಬಾರೋ
ಸಲುವದು ನಿನಗೆ ಈ ಬಿರಿದು
ತೊಲಗು ತೊಲಗು ನನ್ನ ಬಲೆಯೊಳು ಬೀಳದಿರೆಂ
ದುಲಿದು ಕುಮಾರ ವೀರಣ್ಣ              ||೧೭೩||

ನುಡಿಯ ಕೇಳುತ ವಿಶ್ವರಾಜ ಕತ್ತಿಯನೆತ್ತಿ
ಹೊಡೆದನು ಬರಸಿಡಿಲಂತೆ
ಒಡನೆ ಘಾಯವ ನೋಡಿ ತುಡುಕಿ ತಿವಿದನಾಗ
ಕಡುಗಲಿ ಕೊಮಾರ ವೀರಣ್ಣ            ||೧೭೪||

ಮರಳಿ ಹೋದ ನರಸಿಂಹನ ತೆರನಲ್ಲ
ಸರಸವೆ ವಿಶ್ವೇಂದ್ರನೊಡನೆ
ಕರುಳು ಹಿರಿದು ವನಮಾಲೆ ಹಾಕುವೆನೆಂದು
ಹೊರಗೆ ನಿಂದನು ಕೋಟೆ ತೆನೆಯ   ||೧೭೫||

ಮುಟ್ಟದಿರೆಲೊ ಬಲು ಬಂಟ ವಿಶ್ವರಾಜನ
ಕಟ್ಟುಗ್ರತನದ ಪಂಥವನು
ಮೆಟ್ಟಿ ಮುರಿವೆನೆಂದುಲಿದು ಕತ್ತಿಯ ಪಿಡಿ
ದಟ್ಟೈಸಿ ಹೊಯ್ದ ಗೊಲ್ಲ ವೀರ          ||೧೭೬||

ಹುಸಿ ಹುಸಿ ಹೋಗದಿರೆಂದು ಪಚಾರಿಸಿ
ಬಿಸಿಗಣ್ಣನ ಪೆಸರವನ
ನೊಸಲ ಬರೆಹ ತೊಡೆವೆನೆಂದುಲಿದುಬ್ಬಿ
ಮಸೆದ ಸುರಗಿಯ ಕಿತ್ತಿರಿದ ||೧೭೭||

ಕಂಡೆನು ನಿನ್ನ ಸಾ[ಹಸ]ವನು ವಿಶ್ವೇಂದ್ರ
ಕೆಂಡವ ಮಂ[ಡೆ]ಗೆ ಮುಡಿಸಿ
ತುಂಡೇಳ ಕಡಿವೆನು ಕರುಳ ಕಿತ್ತಿಡುವೆನು
ಮಂಡೆಯ ಚಂಡನಾಡಿಸುವೆ           ||೧೭೮||

ಘುಡಿ ಘುಡಿಸುತ್ತ ನಡೆದೊಡನೆ ಹೆಮ್ಮಾರಿಗೆ
ಸಿಡಿಲೆರಗಿದ ಪರಿಯಂತೆ
ಕಡಿದನು ಕಿತ್ತ ಕತ್ತಿಯನೆತ್ತಿ ವಿಶ್ವೇಂದ್ರ
ಕಡುಗಲಿ ಕುಮಾರ ವೀರಯ್ಯನ        ||೧೭೯||

ತಡೆಯದೆ ಕಡಿದ ಘಾಯವ ನೋಡಿ ಬೇಗದಿ
ಕಡುಗಲಿ ಕೊಮಾರ ವೀರಣ್ಣ
ಕಡಿದಾಡಿದರು ಸೂತ್ರದ ಬೊಂಬೆಗಳಂತೆ
ಪಡೆ ಕಂಡು ನಿಬ್ಬೆರಗಾಗೆ                ||೧೮೦||

ಎರಗಿದರೊಬ್ಬರಿಗೊಗ್ಗೊಡೆಯದೆ
ಮುರಿದಲಗಿಲಿ ಮೂದಲಿಸಿ
ನೆರೆ ತಿವಿದನು ಜವದಾಡಿ ವರಜು ಮುಟ್ಟಿ
ಧುರಗಲಿ ಕೊಮಾರ ವೀರಣ್ಣ            ||೧೮೧||

ಇರಿದ ಘಾಯಕೆ ಕರುಳು ಪರಿದಿಶ್ವರಾಜೇಂದ್ರ
ಕೊರಗಿ ಬಿದ್ದನು ಅಗಳೊಳಗೆ
ಮೊರೆದು ನೆಲನ ಕಚ್ಚಿ ಮುರಿಯಿತು ಪರಿವಾರ
ಅರಸು ಮಡಿಯೆ ದೆಸೆ ದೆಸೆಗೆ          ||೧೮೨||

ಓಡಿ ಬಂದರು ನರಸಿಂಹನ ಅಡಿಗಾಗಿ
ಹೇಡಿಗೊಂಡವರು ಬಿನ್ನೈಸಿ
ಬೀಡಾರವಾಯ್ತು ವೈಕುಂಠಪುರದಲ್ಲಿ
ನೋಡಲೈದಿದ ವಿಶ್ವರಾಜ              ||೧೮೩||

ಎನ[ಲು] ತಲ್ಲಣಗೊಂಡು ಕನಲಿ ದುಃಖವ ತಾಳಿ
ಮನಗುಂದಿ ಮದಕರಿಯಂತೆ
ಘನಹಿತ ಭಟ್ಟರ ಮಲ್ಲನ ಕರೆಸಿದ
ವಿನಯದೊಳಗುಸುರಿದನು             ||೧೮೪||

ಎಂದನು ತಲೆ ತಾರೊ ವಿಶ್ವರಾಜೇಂದ್ರನ
ಇಂದು ರಾಣೆರ ಕೊಲ್ವತನಕ
ಬಂದನಾ ಮಾತ ಕೇಳಿ ಭಟ್ಟರ ಮಲ್ಲ
ನಿಂದು ವೀರನ ಕೊಂಡಾಡಿದನು      ||೧೮೫||

ಛಲದಂಕ ಮಲೆವ ಮನ್ನೆರ ಗಂಡ ಗಜಸಿಂಹ
ಮಲೆತರ ಮನದಂಕುಶವೆ
ತಲೆಯ ಪಾಲಿಸು ಎನೆ ನಲಿದುಡುಗೊರೆಯಿತ್ತು
ಕಳುಹಿದ ತಲೆ ಸಹಿತವನ               ||೧೮೬||

ತಂದ ತಲೆಯ ಉಡುಗೊರೆ ಸಹವಾಗಿಯು
ಮುಂದಿರಿಸಿದ ನರಸಿಂಹನ
ಕಂದರ್ಪರೂಪ ಭಟ್ಟರ ಮ*[4][ಲ್ಲ]*[5]ಗೆ ಕೊಟ್ಟ
ಚಂದ ಚಂದದ ಉಡುಗೊರೆಯ        ||೧೮೭||

ಸಲೆ ಕೊಟ್ಟು ಭಟ್ಟರ ಮಲ್ಲನ ಕಳುಹಿದ
ಛಲದಂಕ ನರಸಿಂಹರಾಯ
ಮೊಲೆಕಟ್ಟು ಕಾಲಕುಪ್ಪಸಗಳ ಹೊಲಿಸಿದ
ಬಲು ಬಿಂಕದ ಮಾಸ್ತಿಯರಿಗೆ           ||೧೮೮||

ಕಳುಹಿದ ಕಾಲಕುಪ್ಪಸಗಳ ತೊಟ್ಟರು
ಮೊಲೆಕಟ್ಟು ಕಟ್ಟಿ ಶೃಂಗರಿಸಿ
ಬೆಳಗಿದ ಕನ್ನಡಿವಿಡಿದು ಬಂದರು ಕೂಡೆ
ಘಳಿಲನೆ ರಾಯನೋಲಗಕೆ                        ||೧೮೯||

ಒಂದೊಂದು ಪರಿಯ ಶೃಂಗರಿಸಿ ಮಾಸ್ತಿಯರೆಲ್ಲ
ಇಂದು ಷೋಡಶಕಳೆವೆರಸಿ
ಬಂದರು ರಾಣಿವಾಸಿಯರೆಲ್ಲ ರಾಯರಿಗೆ
ನಿಂದು ಬಿನ್ನಹವ ಮಾಡಿದರು          ||೧೯೦||

ಪುರುಷನ ಕೊಂದವನ ತಲೆಯ ತಂದಲ್ಲದೆ
ಬೆರಸೆವು ಒಡೆಗಿಚ್ಚ ನಾವು
ಅರಸಿಯರಾಚೆ ಚಿಂತಿಸಿ ಕರ ಕರ ಗುಂದಿ
ವೆರಸಿ ನಂಬುಗೆಗೊಟ್ಟ ರಾಯ         ||೧೯೧||

ಕಡಿವೆನು ಛಿನ್ನಛಿದ್ರವಮಾಡಿ ವಿಶ್ವನ
ಮಡುಹಿದ ಕೊಮಾರ ವೀರಗನ
ತಡಬೇಡ ನಿಮ್ಮ ಗಂಡನ ಕೂಡಿಕೊಳ್ಳೆಂದು
ಕಡು ನಂಬುಗೆಯನಿತ್ತ ರಾಯ          ||೧೯೨||

ಹೆಚ್ಚಿನ ನಂಬುಗೆಗೊಡಲು ೨೯[6]ರಾಣಿಯರೆಲ್ಲ೨೯[7]
ಕಿಚ್ಚ ಹಾಯಲು ತಿರುಗಿದರು
ಅಚ್ಚ ನಿಂಬೆಯ ಹಣ್ಣು ಕನ್ನಡಿವಿಡಿದಾಗ
ಹೆಚ್ಚಿನ ವೀರ ಮಾಸ್ತಿಯರು             ||೧೯೩||

ತುರಗವನೇರಿ ಮನದಲ್ಲುಬ್ಬಿ ಹರುಷದಿ
ಕಿರುನಗೆಯಿಂದಲಿ ನಗುತ
ಮೆರೆದರು ವೀರ ಮಾಸ್ತಿಯರೆಲ್ಲ ನಲವಿಂದ
ಗರುವ ವಿಶ್ವನ ಪಾಡಿದರು              ||೧೯೪||

ಮಂಡಲಪತಿ ಪ್ರಧಾನ ಈಶ್ವರಿನಾಯಕ
ಕೊಂಡಗಳನು ಮಾಡಿಸಿದನು
೩೦[8]ಬಂಡಿಬಂಡಿಯಲಿ ಸದೆಯನೊಟ್ಟಿ ಸುಡಿಸುತ೩೦[9]
೩೧[10]. . . . . . . .೩೧[11]ಡಿಸಿದರು                        ||೧೯೫|

ಇತ್ತ ಮಾಸ್ತಿಯರು ಪಾಡುತ ಬಂದು ಗೌರಿಯ
ಅರ್ತಿಯಿಂದಲಿ ನೋಂಪಿ ನೋಂತು
ಮತ್ತೋಡಿ ಬಂದು ಕೊಂಡವ ಸುತ್ತಿ ನಿಂದಾಗ
ಬುತ್ತಿ ಸಂಚಿಗಳ ಹಾಕಿದರು             ||೧೯೬||

ಅರಸುಮಕ್ಕಳು ರಾಣೆಯ ರಾಹುತರಿಗೆಲ್ಲ
ಹರಸಿ ಕೈಮುಗಿದು ಎಣ್ಣೆಯೊಳು
ಇರದೆ ನೆಳಲ ನೋಡಿ ಮಸ್ತಕದೊಳಗಾಗ
ಎರಗಿ ಬಿದ್ದರು ಕೊಂಡದೊಳಗೆ         ||೧೯೭||[1] ೨೮ ಪದ್ಯಶಿಪ್ರತಿಯಲ್ಲಿ ಇಲ್ಲ (ಸಂ.)

[2] * – * ಉರಿ ನೀರುಣ (ಶಿ), ಉರುಡಿಸಿ ವೀರಣ್ಣನ ().

[3] * – * ಉರಿ ನೀರುಣ (ಶಿ), ಉರುಡಿಸಿ ವೀರಣ್ಣನ ().

[4] * – * ನೆ (ಶಿ, )

[5] * – * ನೆ (ಶಿ, )

[6] ೨೯-೨೯ ಎಂದು ವಿಶ್ವರಾಜೇಂದ್ರನ ರಾಣೇರು (ಶಿ)

[7] ೨೯-೨೯ ಎಂದು ವಿಶ್ವರಾಜೇಂದ್ರನ ರಾಣೇರು (ಶಿ)

[8] ೩೦-೩೦ x(ಶಿ)

[9] ೩೦-೩೦ x(ಶಿ)

[10] ೩೧-೩೧ ಇಷ್ಟು ಭಾಗ ಎರಡೂ ಪ್ರತಿಗಳಲ್ಲಿ ಮುರಿದು ಹೋಗಿದೆ (ಸಂ.)

[11] ೩೧-೩೧ ಇಷ್ಟು ಭಾಗ ಎರಡೂ ಪ್ರತಿಗಳಲ್ಲಿ ಮುರಿದು ಹೋಗಿದೆ (ಸಂ.)