ಎಂದ ಮಾತಿಗೆ ನರಸಿಂಹ ತನ್ನಯ ಮನ
ದಂದ ಕಾರ್ಯವು ಪರಿದಂತೆ
ತಂದು ಕಡುಕು ಕಂಠಮಾಲೆಯ ಕೊಡಿಸಿದ
ನಿಂದು ಸಂದೇಹವಿಲ್ಲದಿರಲು           ||೮೫||

ಇರಲಿತ್ತ ಬೂದಿಹಾಳ ಹೊರವಳಯದಿ
ನರಸಿಂಹನಿರ್ದ ಪರಿಗಳನು
ಸಿರುಮ ಪರೀಕ್ಷಿಸಿ ನೋಡಲುನ್ನತವಾಗಿ
ಧರಣಿ ಮಂಡಲವ ತುಡುಕುತ         ||೮೬||

ಉಪ್ಪರಿಗೆಯ ಹತ್ತೊ ತಮ್ಮ ಮಲ್ಲಣ್ಣ ನೀ
ಮುಪ್ಪುರದವರ ಪರಿಯಲ್ಲಿ
ಕಪ್ಪುಗೊರಳನ ಕೂಡೆ ಕಾದಿ ಮಡಿದರ
ಅಪ್ರತಿ ಮಾಡುವೆನೆಂದ                 ||೮೭||

ಪುರದೊಳು ಪ್ರಭು ಪಟ್ಟಣಶೆಟ್ಟಿ ಪ್ರಜೆಗಳ
ಸಿರುಮ ಕರೆಸಿ ಕೈಯ ಮುಗಿದ
ಗೆರೆಗೊರೆದೀ ಭೂಮಿ ಸಮವೆಂದು ತೋರಿದ
ಅರಮನೆಯೊಳು ನಿಶ್ಚೈಸಿ              ||೮೮||

ಸಾವುದು ಸತ್ಯವು ಕಾವಲಾಯಿತು ಸುತ್ತ
ನೀವಿಲ್ಲಿ ತೆಗಸಿ ಕೊಂಡವನು
ಆ ವೇಳೆಯದಿ ಪಟ್ಟಸಾಲೆಯ ಬಿಚ್ಚಿಸಿ
ಬಾವನ್ನಗೊರಡನೊಟ್ಟಿಸಿದ             ||೮೯||

ಇಂದ್ರಗೋಪವು ಸಕಲಾತಿ ಪಟ್ಟೆಯ ಝಲ್ಲಿ
ಚಂದ ಚಂದದ ನಸುನಾಣ್ಯ
ಕುಂದದೆ ಚೀನಿಚೀನಾಂಬರಗಳ ಬೇಗ
ತಂದು ತುಪ್ಪದಲದ್ದಿಸಿದ                 ||೯೦||

ಇಷ್ಟ

[ದ್ಯೆ]ವವು ಸೋಮೇಶನೆ ಜಯ ಎಂದು
ಮುಟ್ಟಿಸಿ ಜ್ಯೋತಿಯ ಬೆಳಗಿ
ಅಷ್ಟಮದದ ನರಸಿಂಹನ ಗಂಡನೆಂಬ
ದಿಟ್ಟ ಬಿರಿದ ಸಾರಿಸಿದ                   ||೯೧||

ಕೊಮಾರ ಮಲ್ಲಣ್ಣ ಬಂಟರ ಭಾವ ಸೋಮಯ್ಯ
ನಿಮುಷ ೧೦[1][ಕುಧರ]೧೦ ಇರಿಯೆಂದ
ಕ್ರಮ ಕ್ರಮದಕ್ಕಿ ಕಡಲೆ ನೆಲ್ಲಗಳನು
ಕಣಜವನೊಡೆದು ಸುಡಿಸಿದ            ||೯೨||

ಛಿಗಿಲು ಭುಗಿಲು ಛಿಟಲುಛಿಟಲೆಂದಾಗ
ಹೊಗೆಯೇರಿ ನೆಗೆಯಲಂಬರಕೆ
ಪಗಲೊಡೆಯನ ಕಿರಣವ ಕಿಡಿ ತಾಗಲು
ಅಗಣಿತ ಜಗ ಮುಸುಕಿದವು            ||೯೩||

ಕಂಡು ಬೆರಗಾಗಿ ನಾರದಮುನಿ ಸಿರುಮನ
ಮಂಡಲದೊಳು ಮಾಡುವರ್ಭುತವ
ಕೆಂಡಗಣ್ಣನಿಗರುಹುವೆನೀ ಸುದ್ದಿಯ
ಕೊಂಡಾಡಿ ಕೈಲಾಸದೊಳಗೆ           ||೯೪||

ಹೊಕ್ಕನು ಅಜಗಣ ಸುರಗಣ ಕೆ*[ಳ]*ದಿಯ
ರಿಕ್ಕೆಲದೊಡ್ಡೋಲಗದಿ
ಮುಕ್ಕಣ್ಣನಿರಲು ವಂದಿಸಿ ನಾರದಮುನಿ
ದೊಕ್ಕನೆ ಬಿನ್ನೈಸಿದನು                  ||೯೫||

ಮೂರುಜಗದೊಡೆಯನೆ ನೀನರಿಯದೊಂದು
ತೋರುವೆನಿಂದು ಚೋದ್ಯವನು
ಮೀರಿದ ಮುನ್ನಿನ ವೀರರ್ಗೆ ಅಗಣಿತ
ಧೀರನು ಬೂದಿಹಾಳ ಸಿರುಮ         ||೯೬||

ಮಾಡುವ ಮಾಟವ ನೋಡಬೇಕೆಂದು ಶಿವ
ಕೂಡೆ ನಂದೀಶನಡರಿದನು
ಮೂಡುವ ರವಿ ಶಶಿ ಗಂಗೆ ಸಹಿತವು
ಒಡ್ಡೈಸೆ ಹರಗಣ ಕುಲವು                ||೯೭||

ಬಂದರು ದೇವದೇವೇಂದ್ರರು ಸಹವಾಗಿ
ನಿಂದರು ಖೇಚರದಲ್ಲಿ
ಬಂದೀ ಭೂಲೋಕದಿ ನೋಡೆ ಬೂದಿಹಾಳು
ಒಂದಿಲ್ಲ ಸಿರುಮನುನ್ನತವು             ||೯೮||

ಕೆಂಡವಾಗುವ ಕಿಚ್ಚು ಕಂಡ೧೧[2]ವರಿಗೆ ಮೆಚ್ಚು೧೧[3]
೧೨[4]ಹಿಂಡುರೂಪು ಸಿರಿವನಗಿಚ್ಚು೧೨[5]
ಮಂಡಲದೊಳು ನರಸಿಂಹನೊಡನೆ ಕಾದಿ
ತಂದಿಟ್ಟ ಸಿರುಮ ಹೆಗ್ಗಿಚ್ಚ                ||೯೯||

ಕಡೆಯ ಬಾಗಿಲಲಿ ಸಿರುಮನ ಬಂಟರು ಬರ
ಸಿಡಿಲ ರವದಿ ತರುಬಿದರು
ಕಿಡಿ ಕಿಡಿ ಬೀಳಲಿರಿದು ಖಣಿಖಟಿಲೆನೆ
ಕಡಿದು ಬಾಗಿಲ ಹೊಗಗೊಡದೆ        ||೧೦೦||

ಹೊಗಲೀಸ ಅಳಿಯ ತಿಪ್ಪಯ್ಯ ಊರಬಾಗಿಲ
ನಗಣಿತ ನಿಂಬಣ್ಣನಾಯ್ಕ
ತಗರು ತಾಗಿ ಬಗೆ ಮಿಗೆ ತೆಲುಗರ ಕೂಡೆ
ಜಗಳವ ಕೊಡುತಿರಲಿತ್ತು                ||೧೦೧||

ಹಣ ಹೊನ್ನ ಚೆಲ್ಲಿಸಿ ಸಿರುಮನೃಪ ರಣದೊಳು
ಕುಣಿದು ವಸಂತವಾಡಿದನು
ತ್ರಿಣಿಯನ ಮರುಳು ತಂಡವು ಉಂಡು ದಣಿವಂತೆ
ಎಣಿಸಿದನೊಂದು ಬುದ್ಧಿಯನು         ||೧೦೨||

ಸಂಗ್ರಾಮದೊಳು ಖೋ ಎಂದುಬ್ಬಿ ಜೀವದ
ಹಂಗಿಲ್ಲದೆ ಕಾದುತಿರಲು
ಹಿಂಗದೆ ಸಿರುಮನ ಎಡಬಲದಲಿ ಸಹ
ಸಂಗಡ ಹದಿನಾಲ್ಕಾಳು                 ||೧೦೩||

ಕಟ್ಟಾಳುಗಳ ಮುಂದಿಟ್ಟನು ಜಗಳಕೆ
ಮುಟ್ಟಿ ಮೂದಲಿಪ ತೆಲುಗರ
ಕುಟ್ಟಿ ರಣವಟ್ಟೆಯೊಳು ತಲೆರಾಸಿಯ
ಒಟ್ಟೆಂದು ಸಿರುಮೇಂದ್ರ ಕಳುಹೆ       ||೧೦೪||

ಧುರಗಲಿ ಸಿರುಮ ತನ್ನರಮನೆಯನು ಹೊಕ್ಕು
ಕರೆದು ಕೊಮಾರ ಮಲ್ಲ ಕೇಳೊ
ಇರಿಸದೆ ಹೆಮ್ಮಕ್ಕಳೆಲ್ಲರ ಕೊಂದು ನೀ
ಉರಿಗಾಹುತಿಯ ಮಾಡೆಂದ           ||೧೦೫||

ಗಬ್ಬಿ ಕೊಮಾರ ಮಲ್ಲ ತಾಯಿಗಳಡಿಗೆ ತಾ
ನೊಬ್ಬನೆ ಕಣ್ಣೀರೊತ್ತಿ ಬರಲು
ಸಬ್ಬ ಸ್ತ್ರೀಯರು ಚಿಕ್ಕಮ್ಮನ ಸವತೇರು
ತಬ್ಬಿಕೊಂಡೆಲ್ಲ ಗೋಳಿಡುತ            ||೧೦೬||

ಮಡದೇರು ಮಕ್ಕಳು ಎತ್ತಿ ಮುದ್ದಾಡುತ
ಕಡೆಗಣ್ಣ ನೀರೊಸರುತ್ತ
ಬಿಡದೆ ಒಬ್ಬೊಬ್ಬರ ಮುಖನೋಡಿ ಮಾತಾಡಿ
ಕಡುಗುರಿಯಾದೆವೆಂದೆನುತ           ||೧೦೭||

ಪಟ್ಟದ ರಾಣಿ ಉಟ್ಟಳು ತೊಡೆ ಚಲ್ಲಣ
ಕಟ್ಟಾಣಿವೆಂಗಳು ಸಹಿತ
ಬಟ್ಟಮುತ್ತಿನ ಸರ ಕಟ್ಟಿ ರವುಕೆಯ ತೊಟ್ಟು
ಇಟ್ಟರು ಚಂದನ ತಿಲಕ                  ||೧೦೮||

ಪೊಳೆವ ಕುಂತಳ ವೀರಜಡೆಗಳ ೧೩[6]ಹೆಣೆಸಿಯೆ೧೩[7]
ಒಳಕಂಪ ಮೈಗೆ ಶಂಗರಿಸಿ
೧೪[8][ತೋಳ]೧೪[9] ಪುಗಂಗಳ ಮುಖ ೧೫[10][ಕನ್ನಡಿ]೧೫[11] ಕಠಾರ ೧೬[12][ವು]೧೬[13]
ಅಳವಟ್ಟವಾ ಸತಿಯರಿಗೆ                ||೧೦೯||

ಕರೆಸಿದ ತನ್ನರಮನೆಯ ರಮಣಿಯರ
ಮೆರಸಿದ ಸಿರುಮಭೂವರನು
ಹರುಷದಿಂದಲಿ ನಿಂದು ನೋಡುತಿರೆ ಮೇಘದಿ
ಪರಮೇಶ್ವರ ಬೆರಗಾದ                  ||೧೧೦||

ಮೆರೆದರು ಸಿರುಮೇಂದ್ರ ಏಳೇಳು ಜಲ್ಮದಿ
ಪುರುಷನಾಗೆಂದು ಮುಂಡಾಡಿ
ಕರೆದು ಒಬ್ಬೊಬ್ಬರ ಮುಖ ನೋಡಿ ಮಾತಾಡಿ
ಮರಳ ಗೌರಿಯನೊಲಿಸಿದರು         ||೧೧೧||

ಬಾಗಿನವಿತ್ತರು ಸಿರುಮ ನರಸಿಂಗನ
ಈಗಲೆ ಗೆಲಿದು ಪಂಥದಲಿ
ಬೇಗ ಬಂದೆಮ್ಮ ಕೂಡೆಂದು ನಗುತಲಿ
ಸಾಗಿ ಬಂದರು ಕೊಂಡದೆಡೆಗೆ         ||೧೧೨||

ಕಡಿಯೊ ನೀ ನರಸಿಂಗರಾಯನ ದಂಡನು
ಮುಡುಹಿ ನೀನವನ ಮಾರ್ಬಲವ
ಪಡೆಯೊ ನೀ ವೀರಸ್ವರ್ಗವನೆಂದು ಸಿರುಮನ
ಮಡದಿಯರಾಡಿ  ಪಾಡಿದರು           ||೧೧೩||

ನನಗಿಂದ ವೀರಾಧಿವೀರರು ನೀವೆಂದು
ಘನ ಸಂತೋಷದಿ ನಗುತ
ಸನುಮತವನು ಮಾಡಿ ಗುಟುಕು ತಾಂಬುಲವಿತ್ತು
ವನಿತೆಯೊಡನೆ ನುಡಿದನು                        ||೧೧೪||

ಒಂದೇ ಘಳಿಗೆ ಮುಂದೆ ನಡೆ ನಿಮ್ಮ ಸಂಗಡ
ಹಿಂದೆ ಬರುವೆನೀ ಕ್ಷಣದಿ
ಸಂದೇಹ ಬೇಡ ನಿಮ್ಮಾಣೆ ಎನುತಲಾಗ
ಕುಂದದೆ ಸಿರುಮೇಂದ್ರ ನುಡಿದ        ||೧೧೫||

ಎಲ್ಲರ ಮುಖ ನೋಡಿ ಮುಂಡಾಡಿ ಮುದ್ದಿಸೆ
ಗಲ್ಲವ ಪಿಡಿದಲುಗಾಡಿ
ನಿಲ್ಲೆ ನಾನೀಹೊತ್ತು ನೀವಿರುವ ಸುರಲೋಕ
ದಲ್ಲಿಗೆ ಬರುವೆನೀ ಕ್ಷಣದಿ                 ||೧೧೬||

ಇರಿಯೆಂದು ಕೊಂಡದೊತ್ತಿಲಿ ನಿಂದು ಸಿರುಮನ
ನೆರೆ ನೋಡಿ ಕನ್ನಡಿವಿಡಿದು
ಮೆರೆವುತಿರಲು ಕಂಡು ಸಿರುಮಭೂಪಾಲನು
ಇರಿದು ಕೊಂಡಕೆ ಹಾಕಿಸಿದ            ||೧೧೭||

ಕೊಂಡಗಳಿಗೆ ಆಹುತಿಯಾಗಬೇಕೆಂದು
ಗಂಡುಗಲಿಯು ಸಿರುಮೇಂದ್ರ
ತಂಡ ತಂಡದಲಿರಿದೆಲ್ಲರನು ನೂಕಿ
ಕೊಂಡದೊಳಗೆ ಹಾಕಿ ಸುಡಿಸಿ         ||೧೧೮||

ದುಃಖದ ಕಡಲು ಉತ್ತಳಿಕೆಯ ಮಾಡಿದ
ಮಕ್ಕಳು ಹೆಂಡರನೆಲ್ಲ
ಸಿಕ್ಕದೆ ಇರಿದು ಇಕ್ಕೆಲದ ಕೊಂಡಕೆ ಹಾಕಿ
ವಿಕ್ರಮ ಸಿರುಮ ನಿಂದಿರಲು            ||೧೧೯||

ಗಮ್ಮನೆ ಮಗ ಮಲ್ಲ ತಮ್ಮಮ್ಮಗೆ ದುಃಖ
ಉಮ್ಮಳಿಸುತ ಶರಣೆಂದ
೧೭[14]ಅಮ್ಮಮ್ಮ೧೭[15] ನೋಡೆನುತ ಮಿಕ್ಕ ತೊತ್ತಿರನೆಲ್ಲ
ದುಮ್ಮೇಳಲಿರಿದು ಹಾಕುವೆನು          ||೧೨೦||

ಹುಡುಕಿ ಅರಸಿ ನೋಡಿ ಅಡಗಿರ್ದ ಮಕ್ಕಳ
ಉಡಿಕೈಯ್ಯ ಹಿಡಿದೆಳೆತಂದು
ಬಿಡದೆ ಕೊಲ್ಲಿಸಿ ಎಣ್ಣೆ ತುಪ್ಪದ ಹಡಗವ
ಒಡೆಯ ಹೊಯ್ಸಿ ಸುಡಿಸಿದನು         ||೧೨೧||

ಚಪ್ಪರ ಲಾಯವ ಹೋಗುವಾಗಲಂದಿಗೆ
ಇಪ್ಪತ್ತೇಳು ಕುದುರೆಯನು
ತಪ್ಪದೆ ಕೊಮಾರ ಮಲ್ಲಣ್ಣ ಹೊಕ್ಕಿರಿವಾಗ
ಗತ್ತದಲಗೆ ಗಣಿಲೆನಲು                   ||೧೨೨||

ಬೆಕ್ಕು ಗಿಳಿಯು ಪಾರಿವಾಳವು ೧೮[16][ದೀಹದ]೧೮[17]
ಹಕ್ಕಿಯ ಕೊರಳನೆ ಕೊಯ್ಸಿ
ಲೆಕ್ಕದ ಕಡಿತವ ಬಣ್ಣ ಭಂಗಾರವ
ಹಕ್ಕರಿಕೆಯ ಸುಡಿಸಿದನು                ||೧೨೩||

ಆಯತದಿಂದ ಮಲ್ಲಣ್ಣನೇರುವ
ಜೀವರತ್ನದ ಬೀಳಲಿರಿದ
ಖೋ ಎಂದು ಕೂಗುತ ಒಳಹೊಕ್ಕು ತಿವಿದನು
ರಾಯ ಬೊಲ್ಲನನಾಕ್ಷಣದಿ               ||೧೨೪||[1] ೧೦-೧೦ ಕುದುರೆ (ಶಿ, ಹ).

[2] ೧೧ ವರಿವಕಿಚ್ಚು (ಹ)

[3] ೧೧ ವರಿವಕಿಚ್ಚು (ಹ)

[4] ೧೨-೧೨ ಗಂಡುರಿವೆಂಗಳ ಹೆಗ್ಗಿಚ್ಚು (ಹ).

[5] ೧೨-೧೨ ಗಂಡುರಿವೆಂಗಳ ಹೆಗ್ಗಿಚ್ಚು (ಹ).

[6] ೧೩-೧೩ ಸಂಧಿಸಿ (ಶಿ)

[7] ೧೩-೧೩ ಸಂಧಿಸಿ (ಶಿ)

[8] ೧೪-೧೪ ತಳು (ಶಿ)

[9] ೧೪-೧೪ ತಳು (ಶಿ)

[10] ೧೫-೧೫ ಕೆನ್ನೆ (ಶಿ, ಹ)

[11] ೧೫-೧೫ ಕೆನ್ನೆ (ಶಿ, ಹ)

[12] ೧೬-೧೬ ದಿ (ಶಿ), ವ (ಹ)

[13] ೧೬-೧೬ ದಿ (ಶಿ), ವ (ಹ)

[14] ೧೭-೧೭ ಅಮ್ಮನೆ (ಶಿ).

[15] ೧೭-೧೭ ಅಮ್ಮನೆ (ಶಿ).

[16] ೧೮-೧೮ ದಾಯದ (ಶಿ), ದೆಯದ (ಹ)

[17] ೧೮-೧೮ ದಾಯದ (ಶಿ), ದೆಯದ (ಹ)