ಅಭಿಮಾನಕೆ ಬದುಕುವ ಅರಸುಗಳೆಂದು
ವಿಪರೀತವಡೆಯಲು ಸಿರುಮ
ಉಪಮಿಸಲರಿಯದೆ ಕೊಲ್ಲೆಂದು ಬೇಡಿಕೊಂಡಳು
ನಿಪುಣ ಪ್ರಧಾನಿ ಕಲ್ಲರಸನ             ||೧೭೪||

[ತಡ]ಬೇಡ ಚಿಕ್ಕಮ್ಮ ನಿನ್ನ ಗಂಡನು ಕಾದಿ
ಮಡಿದರೆ ತಲೆಯನು ತಂದು
ಒಡಗೂಡಿಸುವೆನೆಂದು ಕುಮಾರ ಮಲ್ಲಣ್ಣ
ನುಡಿದು ನಂಬುಗೆಗೊಟ್ಟನಾಗ         ||೧೭೫||

ಚಿಕ್ಕಾಯಿ ನಿನ್ನ ಕೊಲ್ಲುವರೆ ಕೈ ಏಳವು
ಮಕ್ಕಳ ತಾಯಿ ನೀನೆಂದ
ಅಕ್ಕಟ ಸಿರುಮೇಂದ್ರ ಕಕ್ಕುಲತೆಯ
ಮಾಡಿ ಸಿಕ್ಕಿಸುವರೆ ನರಸಿಂಹಗೆ       ||೧೭೬||

ಮಲ್ಲಣ್ಣನಾಗಾಡಿದ ಮಾತಿಗೆ ಚಿಕ್ಕಮ್ಮ
ಗಲ್ಲವ ಪಿಡಿದಲುಗಾಡಿ
ಬಲ್ಲಿದ ಸಿಂಹದ ಮರಿಯೆ ನಿನಗಿದಿರಾಗಿ
ನಿಲ್ಲುವ ರಾಯರಿನ್ನುಂಟೆ                 ||೧೭೭||

ಕರ್ಣ ೨೪[1][ಶೂದ್ರಕ]೨೪[2] ವೀರ ಕಾರ್ತವೀರ್ಯಾರ್ಜುನ
ಹರನ ಕುಮಾರ ವೀರೇಶಾ
ವರ್ಣಿಸಲವರೊಳು ನೀನೊಬ್ಬನಲ್ಲದೆ
ಕರ್ನಾಟಕದಿ ನಿನಗೆಣೆಯೆ               ||೧೭೮||

ಕುಲದೀಪ ಮಲ್ಲಣ್ಣ ಸಿರುಮ ನರಸಿಂಹನ
ಬಲದೊಳು ಕಾದಿ ಮಡಿದರೆ
ತಲೆಯ ತಂದೊಡಗೂಡೆಂದು ಮಗನ
ನಲಿದು ಮುದ್ದಾಡುತಿರಲು              ||೧೭೯||

ಆಯವ ತಾಕಲಿರಿದು ಸಿರುಮಣ್ಣನು ಚಿ
ಕ್ಕಾಯ ನೂಕಿದ ಕೊಂಡದೊಳಗೆ
ಬೇಯುತಿರಲು ಖೋ ಎಂದು ಕೂಗುತಲಾಗ
ರಾಯ ದಂಡಿಗೆ ಇದಿರಾದ               ||೧೮೦||

ಅಂಬರದಲಿ ಶಿವನ ೨೫[3][ಮರರ್ಕಳು ಸಹ]೨೫[4]
ಕುಂಭಿನಿ ಎಲ್ಲ ನೋಡುತ
ನಂಬೆಣ್ಣನಾಯಕ ಹಿರಿಯ ಸೋಮಣ್ಣನು
ಮುಂಬರಿದರು ತೆಲುಗರನು            ||೧೮೧||

ಎಚ್ಚರೆ ಎದೆ ಬಿರಿಯಲು ಗೋಣೊರಗಿ ಬಾಯ
ಬಿಚ್ಚಿ ರಕ್ತವ ಕಾರುತಿರಲು
ಹು[ಚ್ಚೇಳು]ತೋಡಲು ಮಿಗೆ ಮೇಲಾಗಿ ಕಂಡನು
ಮುಚ್ಚಿ ಮುಸುಕುವ ತೆಲುಗರನು      ||೧೮೨||

೨೬[5]ಕೈದಿನಲಿರಿ೨೬[6] ದಾಡುತಿರಲು ರುಂಡ ಮುಂಡ ಕೈ
೨೭[7]ಕೊಯ್ದೀಡಾ[ಡಿ] ತಲೆಗಳನು೨೭[8]
ಹುಯ್ಯಲಿಡುತ ನಂಬೆಣ್ಣ ಸೋಮಣ್ಣನು
ಕೈಯೆತ್ತಿ ಹೊಯ್ದು ತೆಲುಗರ            ||೧೮೩||

ಮುತ್ತಿ ಕಡಿಯಲು ಇತ್ತಂಡದ ಜೀವ
ಚಿತ್ತೈಸಲು ಶಿವನೆಡೆಗೆ
ಮತ್ತಾ ಪ್ರಧಾನ ಕಲ್ಲರಸನು ಪರದಳ
ದೊತ್ತಿಲಿ ಲಿಂಗರಸಯ್ಯ                  ||೧೮೪||

ಕುಲಕೆ ಬ್ರಾಹ್ಮರು ನಾವು ಸಾಕಿದೆ ಸಿರುಮೇಂದ್ರ
ಕಲಹಕೆ ಬಿಟ್ಟು ನೋಡೆನಲು
ಬ[ಲು]ಹು ಮಾ[ಡ]ದಿರಿ ಕಲ್ಲರಸ ಲಿಂಗರಸ ನನ್ನ
ತಲೆಗೊಡೆಯರು ನೀವೆಂದ             ||೧೮೫||

ಪ್ರಾಣಕೆ ಪ್ರಧಾನ ಕಲ್ಲರಸ್ಯೆಯ್ಯನು ಕ-
ಟ್ಟಾಣಿಗೆ ಲಿಂಗರಸಯ್ಯ
ರಾಣ್ಯಕಧಿ[ಕ] ವಿಶ್ವಾಸಿಗಳಿಬ್ಬರು ಕಡೆ
ಗಾಣಿಸಿ ನಮ್ಮ ಕಾಳಗವ                ||೧೮೬||

ಬಿದ್ದರೆ ಕೊರಳ ಕೊಯ್ದು ಕೊಂಡದಿ ಹಾಕು
ಮುದ್ದು ಕುಮಾರ ಮಲ್ಲಣ್ಣ
ಬುದ್ಧಿವಂತರು ಕಲ್ಲರಸ ಲಿಂಗರಸ೨೮[9][ರಿಗೆ]೨೮[10]
ರೌದ್ರದಿ ಸಿರುಮ ಹೇಳಿದನು           ||೧೮೭||

ರೋಷದಿ ಮೀಸೆಯ ತಿರುಹುತ ಕಣ್ಮಿಂಚ
ಸೂಸುತ ಮುಂದಕೆ ನಡೆದ
ಬೀಸುತ ಖಂ[ಡೆಯವ ಹೊ]ರ ಚಾವಡಿಯ
ಸಾಸಿರ ಮುಖದಲಿ ಸಿರುಮ            ||೧೮೮||

ಹೊಂಚುತ ಹೊಯ್ದನು ಮುಂಚೆ ತಾ ತೆಲುಗರ
ಹಂಚಿದ ಹಲವು ಖಂಡಗಳ
ಗೊಂಚೆಯ ಭೂತ ಬೇತಾಳರುಣಲೆಂದು
ವಂಚನಿಲ್ಲದೆ ಸಿರುಮೇಂದ್ರ             ||೧೮೯||

ಅರಮನೆಯ ಮಗಿಲ ಬಾಗಿಲ ಸುತ್ತ ಮುತ್ತಿಹ
ನರಸಿಂಹನ ಪರಿವಾರ
ಕರಿ ತುರಗ ನೆರದಿರೆ ನೋಡಿ ಸಿರುಮೇಂದ್ರ
ಬಿರಿದಂಕ ಹೊಕ್ಕು ಮೂಲಿಸಿ ||೧೯೦||

ಹಿರಿಯರ ಕಾಲದ ಕೊಲೆ ಬೇಕಾದರೆ
ಬರಹೇಳೋ ನಿಮ್ಮ ನರ[ಸಿಂಹನ] ಕರುಳ ಹಿರಿಯ ಕೊರಳೊಳ್ಕಟ್ಟುವೆನೆಂದು
ಸಿರುಮ ಹೊಕ್ಕನು ಮೂದಲಿಸಿ         ||೧೯೧||

ಬೆಳ್ದಿಂಗಳು ಕತ್ತಲೆಯ ಮುಸುಕಿದೊಲು
ತೊಳೆಯ ಹುಳವು ಮುತ್ತಿದಂತೆ
ಸಾಳುವ ನರಸಿಂಹರಾಯನವರು ಬೂದಿ
ಹಾಳ ಸಿರುಮನ ಮುತ್ತಿದರು           ||೧೯೨||

ಮಗಲಿನಿಳಿವ ತೆಲುಗರ ಕಂಡು ಲಾಘಿಸಿ
ತೆಗೆದು ಲಾವುಗೆ ಭ . . . ನೋದಂತೆ
ಮಗ ಮಲ್ಲನಿರಿದು ಕೆಡಹುವ ಪಂಥಕೆ ಮೆಚ್ಚಿ
ಮುಗುಳು ನಗೆಯ ನಗುತಿರ್ದ         ||೧೯೩||

ನರಸಿಂಹರಾಯನ ಬಿರಿದಿನ ಬಂಟನು
ಹರಿಗೆಯ ಚೋರನೆಂಬವನು
ಸಿರುಮಣ್ಣನಾಯ್ಕನ ಹಿಡಿತಹೆನೆನುತಲಿ
ಗರಿಗರಿಲನೆ ಒತ್ತಿ ಬರಲು                ||೧೯೪||

ಎಂದ ಮಾತಿಗೆ ಸಿರುಮನ ಮ[ಗ ಮಲ್ಲ] ಮುಂದುವರಿದು ಕಾದು ಕೆಡಹಿ
ಸಂದ ಸಂದನೆ ಕಡಿದವನ ತಲೆಯ ತಂದು
ತಂದೆಗೆ ನಿವಾಳಿ ಹಾಕಿದನು            ||೧೯೫]

ಕುಲದೀಪ ನನ್ನ ಕುಮಾರ ಮ[ಲ್ಲಣ್ಣನ] ಅಲಗಿನಾಹುತಿಗೆ ಇಂಬಿಲ್ಲ
ಚೆಲುವ ಸಿಂಹದ ಮರಿ ಬಾರೆಂದು ಬೋಳೈಸಿ
ಕಲಿವೀರ ಸಿರುಮ ಇಂತೆಂದ           ||೧೯೬||

ಪಾಡು ಪಂಥವನಾಡುತರಲೊಬ್ಬ ಸಬಳಿಗ
ಗೋಡೆಯ ಮರೆಯಲಿ ಬಂದು
ನೋಡಿ ಸಿರುಮನಾಯವ ತಾಗಲಿರಿದಾಗ
ಓಡಿ ೨೯[11]ಓವ೨೯[12] ರಿಯ ಹೊಕ್ಕನವನು            ||೧೯೭||

ತಂದೆಯನಿರಿದು ಗೊಂದೆಯ ಹೊಕ್ಕ[ನ] ಹಿಡಿ
ತಂದು ಕಡಿದು ಕಾಲಡಿಯ
ಸಂದಿತೊ ಪಂಥ ಮಲ್ಲಣ್ಣ ಕಲ್ಲರಸ ಎಂದು
ಬಂದ ತಳವಾರ ಲಿಂಗರಸ             ||೧೯೮||

ಉರಿವ ಘಾಯದಿ ಬಿದ್ದ ಸಿ[ರುಮನೃ] ಪಾಲನ
ಒರಗಿಸಿದರು ಚಾವಡಿಗೆ
ಸಿರುಮ ಭೂಪಾಲ ನೀ ಸಾಕಿದ ಕೈಯನು
ಪರೀಕ್ಷಿಸಿ ನೋಡೆನುತ                   ||೧೯೯||

ಹೆಣಕೆ ರಣಕೆ . . . . . . . .ಬ ಸಿರುಮ ನಮ್ಮ
ಗುಣನಿಧಿ ನೋಡು ನೋಡೆನುತ
ಅಣಿಯಾಗಿ ನಿಂದು ಬಂಧಿಸಿ ತೆಲುಗರ
ಕಣುಗೆಡಿಸಿ ಕ[ಡಿ]ದಾಡುತಿರಲು       ||೨೦೦||

ಸರ್ವ[ಪ್ರ]ಧಾನ ಕಲ್ಲರಸ ಲಿಂಗರಸನು
ಧುರಧೀರ ಕುಮಾರ ಮಲ್ಲ
ತರಿತರಿದೊಟ್ಟುವದನು ನೋಡಿ ಸಿರುಮೇಂದ್ರ
ಉರಿವ ಘಾಯದಿ ಬೊಬ್ಬಿರಿದಿ          ||೨೦೧||

ಕಂಡೆ . . . . . .ಕಲ್ಲರಸ ಲಿಂಗರಸರೆ
ಗಂಡು ಸಿಂಹದ ಮರಿ ಮಲ್ಲ
ಮಂಡಲದೊಳು ನಿನಗೆಣೆಯುಂಟೆ ಶರಭ ಭೇ-
ರುಂಡ ಶಾರ್ದೂಲ ಬಾರೆನುತ         ||೨೦೨||

ಕರೆಯಲು ಬಂದು ಮುಖವನು ನೋಡಿ
ಒರಲಿ ದುಃಖದಲಿ ಖೊ ಎನಲು
ಮರುಗಿ ಮಲ್ಲಣ್ಣನ ಮುಖ ನೋಡಿ ಮುಂಡಾಡಿ
ಸಿರುಮಭೂಪಾಲನಿಂತೆಂದ            ||೨೦೩||

[ನ]ನ್ನನಿರಿದ ಹರಿಗೆಯವನ ಹಿಡಿದು ಬೇಗ
ಚೆನ್ನಾಗಿ ಕಡಿದೆ ಮಲ್ಲಣ್ಣ
ಇನ್ನು ಕೈ ಮರೆಯದೆ ಕೊರಳ ಕೊಯ್ದು ತಲೆಯ
ನಿನ್ನ ತಾಯೊಡಗೂಡಿಸೆಂದ           ||೨೦೪||

ಕೇಳಿ ಕುಮಾರ ಮಲ್ಲ ಕೊರಳ ಕೊಯ್ವರೆ ಕೈ
ಏಳವೊ ಸಿರುಮ ಎಂದೆನಲು
ಸಾಳುವ ನರಸಿಂಹಗೆ ಸೆರೆ ಮಾಡದೆ
ಕೋಳು ಹೋಗದೆ ಕೊಯ್ಯೋ ಕೊರಳ                                  ||೨೦೫||

[ಏ]ನೆಂದು ಕೊರಳ ಕೊಯ್ಯಲೊ ಎನ್ನ ತಂದೆ
ಮಾನವಸಿಂಹದ ಮರಿಯೆ
ನಾನು ದೆಸೆಗೇಡಿಯಾಗಿ ಪರದೇಶಿಯಾದೆನೊ
ನನಗೇನು ಗತಿಯೊ ಎನ್ನ ತಂದೆ     ||೨೦೬||

ಧರೆಯೊಳು ನರಸಿಂಹರಾಯನ ಗಂಡನೆಂಬ
ಬಿರಿದ ನುಂಗಿದ ಪಂಥಗಾರ
ಪರದೇಶಿಯಾದೆ[ನೊ] ಸಿರುಮೇಂದ್ರ ನನಗೊಂದು
ತೆರನ ಹೇಳೊ ನನ್ನ ತಂದೆ ||೨೦೭||

ಹೇಡ್ಕಾಗಬೇಡ ನರಸಿಂಹನ ದಂಡನು
ಈಡಾಡಿ ಕಡಿದು ಸಂಹರಿಸಿ
ನಾಡೊಳು ಕೀರ್ತಿಯ ಮಾಡಿ ಬಂದೆಮ್ಮನು
ಕೂಡೆಂದು ಸಿರುಮೇಂದ್ರ ನುಡಿದ     ||೨೦೮||

ಅರಮನೆ ಹೋಯಿತು ಪರಿವಾರ ನನಗಿಲ್ಲ
ತರಿಯೊ ಬೇಗದಿ ನನ್ನ ಶಿರವ
ಬೆರಿಯೊ ನಿಮ್ಮಮ್ಮನ ಕೂಡಿಸೋ ಏ ನನ್ನ
ಮರಿಯೊ ಎಂದನು ಸಿರುಮೇಂದ್ರ   ||೨೦೯||

ತಂದೆ ನಾ ನಿನ್ನ ಕೊರಳನೆಂತು ಕೊರೆಯಲೊ
ಬಂದೆನೊ ನಾ ನಿನ್ನ ಬಸುರ
ಮುಂದೆ ನೀನಿದ್ದಂತೆ ನಾ ಕಾದಿ ರಣದೊಳು
ಸಂದಾಲಿ ದುಃಖವ ಕಾಣೆ                ||೨೧೦||

ಇನ್ನು ದುಃಖವ ಮಾಡಿ ಚಿಂತಿಸಲೇತಕೆ
ಚೆನ್ನಿಗ ಸಿಂಹನ ಮರಿಯೆ
ನನ್ನ ನೀ ನರಸಿಂಹನವರಿಗೊಪ್ಪಿಸುವೇನೊ
ಮುನ್ನ ಕುಮಾರ ಮಲ್ಲಣ್ಣ                ||೨೧೧||

ತರಿಕೆಂಡವ ಮುಟ್ಟಿದವರುಂಟೆ ಧರೆಯೊಳು
ಅ[ರಿ] ಮನ್ನೇರ ಸೀಳ್ದ ಸಿಂಹ
ತರಿವರೆ ಎನಗೆ ಕೈ ಏಳವೊ ಅಪ್ಪಾಜಿ
ಸಿರುಮ ಎನುತ ಪಾದಕೆರಗೆ           ||೨೧೨||

ಮುತ್ತಿತ್ತು ನರಸಿಂಗರಾಯನ ದಂಡೆಲ್ಲ
ಸುತ್ತಿ ಬಳಸಿ ಹಿಡಿಯ[ಲು] ಮೊತ್ತವನರಿದು ಕಡಿದು ಹಿಂದಕಟ್ಟಿಸಿ
ಅತ್ತನು ತಂದೆಯ ನೋಡಿ              ||೨೧೩||

ಇಳೆಯೊಳು ಕಾದಿದ ದೊರೆಗಳೊಳು ಕೀರ್ತಿಯ
ಗಳಿಸಿದ ವೀರಾಧೀವೀರ
ಅಳುವುದುಚಿತವೆ ಸಿಂಹ ಮರಿ ಮಲ್ಲಣ್ಣ
ತಳುವದೆ ಕೇಳೆನ್ನ ಮಾತ               ||೨೧೪||

ಮಲ್ಲಣ್ಣ ನರಸಿಂಗರಾಯ ತನ್ನ ಪಂಥವು
ಗೆಲ್ಲಬೇಕೆಂದುಪಾಯದಲಿ
ಎಲ್ಲ ಪ್ರಧಾನಿಯ ಕಳುಹಿ ಮಾತಾಡಿಸಿ
ಬಲ್ಲಿದ ಒಳಗಾದಿ ಕಂಡ್ಯ                 ||೨೧೫||

ಸಿರುಮೇಂದ್ರ . . . . ನಾಗದಿದ್ದರೆ
ನರಸಿಂಹರಾಯನ ಕಂಡು
ಪೊರವೆನೆ ನನ್ನ ಜಲ್ಮವನೆಂದು ಬಿರಿದ
ಪರವೈರಿ ಗಜಸಿಂಹ ನುಡಿದ           ||೨೧೬||

ಅಚ್ಚ ಬಿ[ರಿದಾಂಕ]ನಹುದೊ ನನ್ನ ಚಿಂತೆ
ಬಿಟ್ಟಿತು ತನ್ನಯ ಕೊರಳ
ಸಂತೋಷದಲಿ ಕೊಯ್ದು ಕೊಂಡದೊಳಗೆ ಹಾಕೊ
ಪಂಥ ಪರಾಕ್ರಮಭೀಮ                 ||೨೧೭||

ಕೊಲ್ಲುವ[ರೆನ್ನ] ಕೈ ಏಳವೋ ಅಪ್ಪಾಜಿ
ಬಲ್ಲಿದ ಸಿರುಮ ಎಂದೆನುತ
ಕಲ್ಲರಸಯ್ಯ ನೀ ನನ್ನ ಕೊರಳ ಕೊಯ್ದು ತನ್ನ
ವಲ್ಲಭೇರ ಕೂಡಿಸೆಂದ                   ||೨೧೮||

[ಮ]ಲ್ಲಣ್ಣ ನಿನ್ನ ಕೈಮುಟ್ಟಿ ಮನವನು
ಕಲ್ಲೆದೆಯನು ಮಾಡಿಕೊಂಡು
ನಿಲ್ಲದೆ ಕೊರಳ ಕೊಯ್ದು ಕೊಂಡದೊಳು ಹಾಕೋ ರಣ
ಮಲ್ಲ ಎಂದನು [ಸಿರು]ಮೇಂದ್ರ        ||೨೧೯||

ನೋಡೊಂದು ಘಳಿಗೆ ನನ್ನನು ನಾನು ನೀನು
ಕೂಡೆ ಹೋಗುವ ಎನ್ನ ತಂದೆ
ಈಡಾಡಿ ನರಸಿಂಹನ ದಂಡು ಕಡಿವೀ
ರೂಢಿಗಪ್ರತಿ[ಮ ಸಿರು]ಮೇಂದ್ರ       ||೨೨೦||

ನಿನ್ನ ನೋಡಲಿಬೇಕು ಹರಿಹರಬ್ರಹ್ಮರು
ಎನ್ನಳವೆ ಎನ್ನ ಕಂದ
ಇನ್ನು ಸೈರಿಸಲಾರೆನು ಘಾಯ ಸೊಕ್ಕಿತು
ಮಾನ್ಯರ ಕುಲಕೆ ಭೇರುಂಡ            ||೨೨೧||

ಕಂದರ್ಪ ಸಿರುಮ ನೀನೇಳೇಳು ಜಲ್ಮಕೆ
ತಂದೆಯಾಗೆಂದು ಮುಂಡಾಡಿ
ಇಂದು ಕಂಡೆನೊ ನಾನೆಂದಿಗೆ ಕಾಬೆನೊ
ಇಂದು ಕೈಯ್ಯೇಳವೆಂದೆನುತ          ||೨೨೨||

ಒಂದೆ ಗಳಿಗೆ ಸಿರುಮೇಂದ್ರನ ಸಂಗಡ
ಹಿಂದೆ ಹೋಗುವನಂತೆ ನಾವು
ಸಂದೇಹವೇಕೆ ಕಡಿದು ಕೊಂಡಕೆ ಹಾಕೆಂದ
ಪ್ರಧಾನ ಕಲ್ಲ[ರಸನಾಗ]                ||೨೨೩||

. . . . . .ಭಾಗ್ಯ ಕುದುರೆ ಹೆಣ್ಣು
ಮಕ್ಕಳು ಹೆತ್ತ ತಾಯಿಗಳ
ಇಕ್ಕಿದೆ ಕಿಚ್ಚನು ಇನ್ನೇತಕನುಮಾನ
ದಿಕ್ಕಿನ ಪ್ರತಿ ರಣಧೀರ                   ||೨೨೪||

ನು[ಡಿದ ಪ್ರ]ಧಾನರ ಮಾತಿಗೆ ಮಲ್ಲಣ್ಣ
ಪಿಡಿದು ಸಿರುಮನ ಮುಂಡಾಡಿ
ಕಡಿವುತೇನೆ ನನ್ನ ತಂದೆ ಪರಾಕೆಂದು
ನುಡಿದು ದುಃಖದಿ ಮಾತಾಡಿದನು    ||೨೨೫||

[ನು]ಡಿಯಲೇನೊ ನನ್ನ ತಂದೆ ಸಿರುಮ ಎಂದು
ನುಡಿದು ಬಾಯೊಳು ಬಾಯನಿಡಲು
ತಡ ಮಾಡಬೇಡ ಎನುತ ಮಗನ ಮುಂಡಾಡಿ
ಕಡಿ ಎಂದು ಸಿರುಮೇಂದ್ರ [ನುಡಿದ]  ||೨೨೬||

ತಕ್ಕೈಸಿ ಮುಂಡಾಡಿ ತಂದೆಯ ತಲೆಯನು
ಛಕ್ಕನೆ ಕಡಿದೆತ್ತಿ ತಂದು
ಚಿಕ್ಕಾಯ ಕೊಂಡದೊಳುರಿಯೆ ಸಿರುಮನ ಹಾಯ್ಕಿ
ಮಕ್ಕಳ ಮಾಣಿಕ್ಯ [ಮ]ಲ್ಲಣ್ಣ            ||೨೨೭||

ಹೆತ್ತ ತಾಯೆ ನಿಮ್ಮ ಪುರುಷ ಕೊಂಡಕೆ ಬಿದ್ದ ನಾ
ನಿತ್ತ ಭಾಷೆಗೆ ತಪ್ಪಿಲ್ಲ
ಸುತ್ತುವರಿದು ಕೂಗಿ ಹೇಳಿ ಕುಮಾರ ಮಲ್ಲ
ಮ[ತ್ತಳಲಿ]ದ ದುಃಖದಲಿ                ||೨೨೮||

ಚಿಕ್ಕಮ್ಮ ಸಿರುಮೇಂದ್ರ ನನ್ನೊಡಹುಟ್ಟಿದವರೆಲ್ಲ
ದಿಕ್ಕುಗೇಡಿಯ ಮಾಡಿ ನನ್ನ
ಒಕ್ಕಲ ಹೋಗಿ ಎನುತ ದುಃಖ
. . . . .ನುಡಿದನು                          ||೨೨೯||

ಉರಿಯನು ಕವಿವ ತಂದೆಯ ತಲೆಯನು ನೋಡಿ
ನರಸಿಂಹರಾಯನ ದಂಡು ಕಡಿ-
ವರೆ ಎನಗೆ ಅಪ್ಪಣೆ ಸಿರುಮಾ ಎಂದು[ತಿ]ರುಗಿದ ಕದನಕೆ ಮಲ್ಲ               ||೨೩೦||

ತಂದೆ ತಾಯಳಿದರು ಬಂಧು ಜನರು ಸಹ
ಒಂದಾಗಿ ಅಳಿದೆರೆಂದೆನುತ
ಸಂದೇಹ ಬಿಟ್ಟಿತೆನುತ ಕೊಮಾರ
ನೆಂದಲ್ಲಿಗೆ ಸಂಧಿ ಸಂಪೂರ್ಣ೩೦[13]     ||೨೩೧||[1] ೨೪-೨೪ ಸೂತ್ರಿಕ (ಶಿ, ಹ)

[2] ೨೪-೨೪ ಸೂತ್ರಿಕ (ಶಿ, ಹ)

[3] ೨೫-೨೫ ನಂಬರದಣಿಯಲಿ (ಶಿ), ಭುಜಮರ್ಕಳು ಸಹ (ಹ)

[4] ೨೫-೨೫ ನಂಬರದಣಿಯಲಿ (ಶಿ), ಭುಜಮರ್ಕಳು ಸಹ (ಹ)

[5] ೨೬-೨೬ ಭರದಿರಿ(ಶಿ)

[6] ೨೬-೨೬ ಭರದಿರಿ(ಶಿ)

[7] ೨೭-೨೭ ಕೈಕೊಯ್ದೀಡಾಡುತಿರ x x (ಹ)

[8] ೨೭-೨೭ ಕೈಕೊಯ್ದೀಡಾಡುತಿರ x x (ಹ)

[9] ೨೮-೨೮ ರೆ(ಶಿ,ಹ)

[10] ೨೮-೨೮ ರೆ(ಶಿ,ಹ)

[11] ೨೯-೨೯ ಹ(ಶಿ, ವ).

[12] ೨೯-೨೯ ಹ(ಶಿ, ವ).

[13] ೩೦ + ಅಂತು ಸಂಧಿ ೫ಕ್ಕೆ ಪದನು ೧೦೨೫ಕ್ಕಂ ಮಂಗಳಮಹಾಶ್ರೀ (ಶಿ), + ಅಂತು ಸಂಧಿ ೫ಕಂ ಪದನು ೭೩೯ಕಂ ಮಂಗಳಮಹಾಶ್ರೀ (ಹ).