ತಲೆಗಳ ಕೆದರಿ ಓಡಿತು ದಿಕ್ಕು ದಿಕ್ಕಿಗೆ
ನೆಲ ಬಾಯಿದೆರೆಯೆಂದೆನುತ
ಉಲಿವ ಬೊಬ್ಬೆಯ ರಭಸವ ಕೇಳಿ ನರಸಿಂಗ
ಛಲದಂಕ ಹೊರಟು ಬಂದವನು       ||೧೦೧||

ಗೊಲ್ಲನ ಹುಯ್ಯಲೆಂಬುದ ಕೇಳಿ ನರಸಿಂಗ
ತಲ್ಲಣಿಸಿದ ಮನದೊಳಗೆ
ಬಲ್ಲಿದ ಎಕ್ಕಟಿಗರ ಕರೆಸಿದನಾಗ
ನಿಲ್ಲದೆ ಡೇರೇದ ಬಳಿಗೆ                  ||೧೦೨||

ಹಳೆಯ ಪೈಕ ಕರಿ ತುರಗ ಕಾಲಾಳೆಲ್ಲ
ತಳಿಯ ಬರಿಸಿ ನರಸಿಂಹನ
ಹೊಳಕೆಯ ಭಟರು ಹೊಕ್ಕಿರಿದರೊಡನೆ ಮುಂದೆ
ಅಳುಕದೆ ನೆರೆ ಬೊಬ್ಬಿಡುತ             ||೧೦೩||

ಹಿಡಿದು ಮುಂದಲೆಗಳ ಝಡಿದು ಕೆಡಹಿ ಮೆಟ್ಟಿ
ಉಡಿಯ ಸುರಗಿಯನೆ ಹುದುಗಿ
ಮಡಿಗೊರಳಿಕ್ಕಿ ಮಂಡಿಸಿ ತಲೆಗಳನೆತ್ತಿ
ಹೊಡೆದರಂಬರ ಸಿಡಿಲಂತೆ            ||೧೦೪||

ಗುಂಡಿಗೆಗಳ ನೆಗ್ಗಲೊತ್ತಿ ಬದಿಯಲಿಹ
ದೊಂಡೆಗರುಳ ತೆಗೆತೆಗೆದು
ಕಂಡ ಕಡೆಗೆ ಚೆಲ್ಲವರಿದು ಪಾಳೆಯದೊಳು
ಚೆಂಡಾಡಿ ಕಡಿದಾಡುತಿರಲು           ||೧೦೫||

ಮೇಲರಿಯದೆ ಮಲಗಿದರೆದ್ದು ಕುದುರೆಯ
ಬಾಲಕೆ ಕಡಿವಾಣವಿಕ್ಕಿ
ಮೇಲು ಕೆಳಗು ಮಾಡಿ ಹಲ್ಲಣಗಳ ಹಾಕಿ
ಕೋಲ ಹಿಡಿದು ನೇಜೆಯೆನುತ         ||೧೦೬||

ಹಿಂದುಮುಂ

[ದಾಗಿ] ಏರಿದರು ಕುದುರೆಗಳ
೧೬[1]ತಂಡವೆನುತ೧೬[2] ಬಾಲ ಪಿಡಿದು
ಮುಂದಕೆ ಹೊಡೆಯಲು ಹಿಂದಕೆ ನಡೆಯಲು
ಅಂದಗೆಟ್ಟರು ರಾಹುತರು               ||೧೦೭||

ಬತ್ತಲೆ ಓಡಾಡಿದರು ಪಾಳೆಯದೊಳು
ನೆತ್ತರು ಜಾರಿ ಬಿದ್ದವರು
ಒತ್ತಿ ಒದರಿ ಒಲ್ಲೆ ಒಲ್ಲೆವೆನುತ ಮಂದಿ
ಮತ್ತೆ ಬಿಟ್ಟರು ಪ್ರಾಣಗಳ                ||೧೦೮||

ಪಾಳೆಯದೊಳು ದುಮಾನಗಳನೆ ಸುಟ್ಟು
ಗೋಳುಗುಟ್ಟಿತು ಕಡಿದಾಡಿ
ಆಳು ತಿರುಗಿ ಬೂದಿಹಾಳ ಹೊಗಲು ಮುಂದೆ
ಕಾಳೆಗಳೆತ್ತಿ ಸಾರಿದವು                  ||೧೦೯||

ಇರಿದು ತರಿದು ಕಿವಿ ಮೂಗು ಕೈಕಾ[ಲ್ಗ]ಳ
ಕೊರದು ಕೊರಳ ಅರೆಗಡಿದು
ಉರುಳಿಸಿ ಕರಿ ತುರುಗವ ಸಿರುಮೇಂದ್ರನ
ಧುರಗಲಿ ಭಟರಿತ್ತ ಮಗುಳೆ             ||೧೧೦||

ತೂಕ ತೂಕದ ಬಂಟರುಗಳು ಕೋಳಿಂದ
ನೂಕು ತಾಕಿಲಿ ಸಿರುಮಣಗೆ
ಬೇಕಾದ ಝಲ್ಲಿ ಪಟ್ಟೆಯ ಸುನಾಣ್ಯವ
ಏಕಾಂಗಿ ವೀರರೊಪ್ಪಿಸಲು              ||೧೧೧||

ಕಗ್ಗೊಲೆಯಲಿ ತಂದ ತುರಗ ಬಂಗಾರವ
ಉಗ್ಗದ ಸುಭಟರೊಪ್ಪಿಸಲು
ಅಗ್ಗಳೆಯವರ ಮನ್ನಿಸಿ ಉಡುಗೊರೆಯಿತ್ತು
ಹಿಗ್ಗಿದ ಸಿರುಮಭೂವರನು              ||೧೧೨||

ಗಂಧ ಕಸ್ತೂರಿ ಕದಂಬ ಕುಂಕುಮವ
ತಂದು ಕೊಡಿಸಿದ [ಕ]ಲಿಗಳಿಗೆ
ಚಂದದಿ ಸಿರುಮ ತನ್ನರಮನೆಯನು ಹೊಗೆ
ಹಿಂದೆ ಹೊರಗೆ ಪಾಳೆಯದಿ ||೧೧೩||

ಕಲಕಿತು ನರಸಿಂಹನಾಳು ತಮ್ಮೊಳು ಮುಂ
ದಲೆಗಳ ಹಿಡಿದಿರಿದಾಡಿ
ಅಲಗಾಯುಧವ ಹುಡುಕಿ ನೋಡಿ ಕಾಣದೆ
ಹಲವು ಕಡೆಗೆ ಅಡ್ಡವಾಯ್ದು             ||೧೧೪||

ಗೋಳು ಉಬ್ಬಸವಾಗಿ ಹೆದರಿ ಓಡಿದರೆ
ಹೇಳಿ ಸಿರುಮಣ್ಣನ ಹೆಸರ
ಆಳು ತಿರುಗಿ ಬೂದಿಹಾಳ ಹೋಗಲು ಮುಂದೆ
ಪಾಳೆಯದೊಳು ನರಸಿಂಹ            ||೧೧೫||

ಸಿರುಮಣ್ಣನಿಹ ಬೂದಿಹಾಳ[ಕೋ]ಟೆಯ ಮೇಲೆ
ಹರಿವ ಪಂಜುಗಳು ತೆನೆತೆನೆಗೆ
ಇರುಳು ಹಗಲಾದ ಪರಿಯ ಸಮರಣೆಯನು
ನರಸಿಂಹ ನೋಡಿ ಬೆರಗಾದ           ||೧೧೬||

೧೭[3]ಚಂಚಲಿಸಲು೧೭[4] ನರ ಸಿಂಹ ಕತ್ತಲೆಗೆ ವಿ
ರಂಚಿಯ ತಂದೆಯಾಜ್ಞೆಯಲಿ
ಮುಂಚೆ ಹುಯ್ಯಲು ಮಾಡಿ ತಾಮ್ರಚೂಡನು ಕೂಗೆ
ಇಂಚರಧ್ವನಿ ಕಳವಳದಿ                  ||೧೧೭||

೧೮[5]ಮೂಡಲಾದ್ರಿಯ೧೮ [6]ರವಿ ಏರಲು ತಮ ಹರಿ
ದೋಡೆ ಭೇರಿಗಳು ಸೂಳೈಸೆ
ರೂಢಿಗೆ ಬೆಳಗಾಗೆ ಸಿರುಮ ನರಸಿಂಹನ
ಕೂಡೆ ಕಾದಲು ನಾಲ್ಕು ಸಂಧಿ೧೯[7]     ||೧೧೮||[1] ೧೬-೧೬ ಕಂದವೆಂದು (ಹ.)

[2] ೧೬-೧೬ ಕಂದವೆಂದು (ಹ.)

[3] ೧೭೧೭ (ಶಿ)

[4] ೧೭೧೭ (ಶಿ)

[5] ೧೮೧೮ (ಶಿ)

[6] ೧೮೧೮ (ಶಿ)

[7] ೧೯+ಅಂತು ಸಂಧಿ ೪ಕ್ಕೆ ಪದನು ೨೩೮ಕ್ಕೆಂ ಮಂಗಳ ಮಹಾಶ್ರೀ (ಶಿ), +ಅಂತು ಸಂಧಿ ೪ಕಂ ಪದನು ೫೬೯ಕಂ ಮಂಗಳ ಮಹಾಶ್ರೀ ().