೧೯

[1][ಕಯ್ಯಿಗನೂರಿನ]೧೯[2] ಕೆಂಚಣ್ಣನೇರುವ
ಗವಿಯಕರಡಿಯ ಬೀಳಲಿರಿದ
ಕೈತವಕದಿ ಹೊಕ್ಕು ಇರಿದು ಕೆಡಹಿದನು
ಮೈಯೊಳಗಿನ ಮನವುಬ್ಬಿ             ||೧೨೫||

ಭೇಟೆಯ ಮಗ ಸೋಮಿನಾಯಕನೇರುವ
ನಾಟಕಸಾಲೆಯನಿರಿದ
ಲೂಟಿಯಿಂದಲಿ ಹೊಕ್ಕು ತಿವಿದು ಕೆಡಹಿದನು ಸಾ
ಗಾಟದಿ ಕೆಂಚ ಬೊಲ್ಲನನು              ||೧೨೬||

ಉಡುವದರಸು ನಂಬಿನಾಯಕನೇರುವ
ಕಡುಗಲಿ ನೀಲನ ಇರಿದ
ನಡೆಗೋಟೆಯ ಜಂಬುನಾಗರಮರಿಯನು
ತವಕದಿಂದಲಿ ಹೊಕ್ಕು ತಿವಿದ          ||೧೨೭||

ಹೆಗ್ಗೆರೆ ಮಲ್ಲಣ್ಣನೇರುವದೊಂದೀಗ
ಹೆಬ್ಬುಲಿಯನು ಬೀಳಲಿರಿದ
ಉಗ್ರದಿ ರಣದೊಳು ಕಾದುವ ಕಾಚನ
ಅಗ್ಗಳೆ ಬೊಲ್ಲನನಿರಿದ                    ||೧೨೮||

ಸಂಗ್ರಾಮಧೀರ ಕುಮಾರ ಕಾಚನೇರುವ
ಮಂಗಳ ಬೊಲ್ಲನ ಇರಿದ
ಸಿಂಗಟಿಗೆರೆಯ ಆನೆಪ್ಪನಾಯ್ಕನೇರುವ
ಲಿಂಗಪಕ್ಷಿಯ ಬೀಳಲಿರಿದ               ||೧೨೯||

ಇತ್ತಟ್ಟಿನ ಮನ್ನೆರ ಹುಚ್ಚುಗೊಳಿಸುವ
ಚಿತ್ರಾಂಗಿಯ ಬೀಳಲಿರಿದ
ಉತ್ತಮ ಕೆನ್ನೀಲ ಮತ್ತವಾರುವ ಜಂಬ
ಅರ್ತಿಯಿಂದಲಿ ಬೀಳಲಿರಿದ            ||೧೩೦||

ಎಕ್ಕಟಿ ಗಂಗನ ಗಂಡನೆಂಬುವದೊಂದು
ರಕ್ಕಸಿ ಬೊಲ್ಲನನಿರಿದ
ತಕ್ಕಡಿ ಕುಣಿಕಾಲ ತೇಜಿಯನಿರಿದನು
ನೆಕ್ಕಟಗಾಲ ಜಂಬನಿರಿದ               ||೧೩೧||

ಹಿರಿಯೂರ ಕಸವನ ಗಂಡನೆಂಬುವದೊಂದು
ಉರಿಗೊಳ್ಳಿ ಕುಂಕುಮಚಾರ
ದೊರೆ ಏರುವ ತರವ೧೯[3]ಳಿ೧೯[4]ಗನ ಇರಿದನು
ಹರಿವಾಣದೊಳು ಕುಣಿವದನು         ||೧೩೨||

ಹೊನ್ನವಳ್ಳಿಯ ವೇದರಾಜನ ಗಂಡನೆಂಬ
ಕೆನ್ನೀಲನ ಬೀಳಲಿರಿದ
ಬನ್ನಿಯ ಮರನೇರಿ ಎಸವದನಿರಿದನು
ಚೆನ್ನಿಗ ಹೊನ್ನರಳಿಯನು                ||೧೩೩||

ಅಂಕಕಾರನು ನರಸಿಂಹನ ಗಂಡನೆಂಬ
ಲೆಂಕೆವಿಭಾಡನನಿರಿದ
ಶಂಕಪಾಳನು ಸಣ್ಣಗುಲಗಂಜಿ ನೀಲನ
ಬಿಂಕದ ಬೊಲ್ಲನನಿರಿದ                  ||೧೩೪||

ಕೆಂಚನೀಲನು ಹೊಸ ಮಿಂಚುವ ಕೇಸರಿ
ಪಂಚಕಲ್ಯಾಣಿ ೨೦[5]ಪವಳವನು೨೦[6]
ಹೊಂಚುವ ಹುಲಿಬಣ್ಣ ಸಾರಂಗ ರಣದೊಳು
ಮುಂಚೆ ಕುಣಿವ ಕುದುರೆಗಳ           ||೧೩೫||

ಕೊಲೆಗೇಡಿ ಬೆಲಗರ ಭೈರನೇರುವದೊಂದು
ಕಲಿಸಿಂಹನೆಂಬುದನಿರಿದ
ಕಲಹಲಂಪಟ ಗುಜ್ಜಲೋಬನು ಏರುವ
ಹುಲಿ ಸಾರಂಗನನಿರಿದ                  ||೧೩೬||

ಬಂದೊಳಹೊರ ಲಾಯದ ಕುದುರೆಗಳನು
ಒಂದಿಲ್ಲದೆ ಬೀಳಲಿರಿದ
ಕುಂದದೆ ಕೂದಲ ಬಾಲಂಗಳನೆ ಕೊಯ್ದು
ಕೊಂಡದೊಳಗೆ ಹಾಕಿ ಸುಡಿಸಿ         ||೧೩೭||

ಒಡಕುಟ್ಟಿ ಡೋಳ [ತಮ್ಮ]ಟಿ ಗಿಡಿಬಿಡಿಯನು
ಹಿಡಿವ ಠೆಕ್ಕವ ಸುಡಿಸಿದನು
ಪಡುಗವನೊಡೆಕುಟ್ಟಿ ಕೊಂಡದೊಳಗೆ ಹಾಯ್ಕಿ
ಹುಡಿ ಹುಡಿಮುತ್ತು ಮಾಣಿಕವ          ||೧೩೮||

ಹಿಟ್ಟುಮಾಡಿಸಿ ಕಡುಕು ಕಂಠಮಾಲೆಯ
ಕಟ್ಟಾಣಿಲ್ಲದ ಜಾಳಿಗೆಯ
ಪೆಟ್ಟಿಗೆ ಪರಿಮಳ ಬಣ್ಣ ಬಂಗಾರವ
ಸುಟ್ಟು ಬೂದಿಯ ತೂರಿಸಿದ            ||೧೩೯||

[ಭಿತ್ತಿ]ಲಿ ಬರೆದ ಬಣ್ಣದ ಚಿತ್ರವ
ಕೆತ್ತಿ ಕೆಡಹಿ ಸವರಿಸಿದ
ಸುತ್ತ *[ಭಗ]*ವಂತಿಯ ಮನೆ ಮಣಿಮಂಚವ
ಮೊತ್ತದಲವ ಸುಡಿಸಿದನು             ||೧೪೦||

ನರಸಿಂಹ ಕಣ್ಮನ ಬಯಸಿ ಕೈದುಡುಕಲು
ಸರಕೇನು ಇನಿತಿಲ್ಲದಂತೆ
ಸಿರುಮ ತನ್ನರಸಿ ತಾನಲ್ಲದೆ ಎಲ್ಲರ
ಉರಿಗಾಹುತಿಯ ಮಾಡಿದನು         ||೧೪೧||

ಮೇಲುಪ್ಪರಿಗೆಯೊಳು ತಮ್ಮ ಮಲ್ಲಣ್ಣನು
ಆಲಿ ಬಿಲ್ವಿಡಿದು ಬೊಬ್ಬಿರಿದು
ಕೋಲು ಕೋಟಿಗೆ ತಪ್ಪದೆಚ್ಚು ಮಹೇಂದ್ರದ
ಜಾಲವ ಬೀಸಿದಂದದಲಿ                 ||೧೪೨||

ಸುಳಿಯಲೀಸದೆ ಮಾಸಾಳನು ಎಚ್ಚೆಚ್ಚು
ಬಳಲಿ ಕೈ ಕೆಚ್ಚಾಗಲೊಡನೆ
ಇಳಿದುಪ್ಪರಿಗೆಯಿಂದ ತಮ್ಮ ಮಲ್ಲಣ್ಣನು
ಹೊಳೆವ ಖಂಡೆಯವ ೨೧[7]ತಕ್ಕೊಂಡ೨೧[8]                                  ||೧೪೩||

ಸಾಧನೆದೋರುತ ಹೊರಚಾವಡಿ ಮುಂದೆ
ಮೂದಲಿಸಿದ ಮಲ್ಲಭೂಪ
ಬೀದಿ ಬೀದಿಗಳಲ್ಲಿ ಇರಿದು ಕೆಡಹಿದನು
ಭೂದೇವತೆಗೊರಗಿ[ಸಿ]ದ               ||೧೪೪||

ಮದಸೊಕ್ಕಿದಾನೆ ಕದಳಿ ವನವ ಹೊಕ್ಕು
ಮೆದೆಗೆಡಹಿದಂದದಲಿ
ಕದಲದೆ ತೆಲುಗರ ಕಡಿಯಲು ಮಲ್ಲಭೂಪ
ಎದೆಯಲ್ಲಿ ಗಾ[ಯವಡೆ]ದನು          ||೧೪೫||

ಅಂಬು ನೆಟ್ಟಿತು ಕಾಣೊ ನಂಬೆಣ್ಣನಾಯಕ
ಇಂಬುಗೊಡದಿರೊ ತೆಲುಗರನು
ತಂಬಿಸಿ ಕಾದೆಂದು ತಿರುಗಿದ ಚಾವಡಿ
ಕಂಭಕೊರಗಿದ ಮಲ್ಲೇಂದ್ರ             ||೧೪೬||

ಆಯುತವಾಗಿ ಆ ಕ್ಷಣದಿ ಸಿರುಮೇಂದ್ರ
ನಾಯಕ ೨೨[9]ಹೊರಟುಬಂದವನು೨೨[10]
ಆಯಮಾನದಿ ತಮ್ಮನೆದೆಯ ಘಾಯವ ಕಂಡು
ಖೋಯೆಂದು ಚಾಲಿವರಿದನು          ||೧೪೭||

ಮುಂಡಾಡಿ ಮುಖನೋಡಿ ತಮ್ಮನ ತಲೆಯನು
ಕೊಂಡದೊಳಗೆ ಹಾಕಿ ಸುಡಿಸಿ
ತಾಂಡವಾಡುವ ವೀರನಂತೆ ಸಿರುಮ ತನ್ನ
ಹೆಂಡತಿ ಸಹವಾಗಿ ಬರಲು             ||೧೪೮||

ದೆಸೆಯುಳ್ಳ ಕಂದ ಕಾಚಯ ಕಾದಿ ಉರದಲ್ಲಿ
ಹೊಸ ಘಾಯ ಬಿಸಿ ರಕ್ತದಲಿ
ಉಸಿರಾಡುತಿರಲು ಕಡಿದು ಕೊಂಡಕೆ ಹಾಕಿ
ವಸುಧೆಗಧಿಕ ಸಿರುಮೇಂದ್ರ            ||೧೪೯||

ಮಡದಿ ಸಹಿತಲುಪ್ಪರಿಗೆಯನಡರಿದ
ಕಡುಗಲಿ ಕದನ ಪ್ರಚಂಡ
ಒಡನೆ ಮೈದೋರಿ ಮೆರವುತ ಸಿರುಮೇಂದ್ರ
ತೊಡಿಸಿದ ಕೂರಂಬುಗಳನು           ||೧೫೦||

ಪೂಣಿಸಿ ಪೊಸ ಕಣೆಗಳ ತೆಲುಗರ ಮೆಲೆ
ಬಾಣದ ಮಳೆಗರದಂತೆ
ಕೇಣವಿಲ್ಲದೆ ಎದೆ ಬದಿಗಳ ಕೀಲಿಸಿ
ಗೋಣ ಕೊರೆಯಲೆಚ್ಚ ಸಿರುಮ        ||೧೫೧||

ಘಲ್ಲು ಘಲ್ಲೆಗೆ ಬಿಲ್ಲು ಬಿಲ್ಲ ಝೇವಡೆಯಲು
ತಲ್ಲಣಗೊಂಡು ತೆಲುಗರು
ಝಲ್ಲನೆ ತೆಗೆದೋಡುತಿರಲಾಗ ಕಂಡರು
ಗೊಲ್ಲ ಸಿರುಮನೆಕ್ಕಟಿಗರು              ||೧೫೨||

ಮೊಗನೋಡಿ ಮನ್ನೆಯ ಸಿರುಮ ಚಿತ್ತೈಸೆಂದು
ನೆಗದು ತೆಲುಗರ ಮುಂದಲೆಯ
ಜಗಿದು ಕೆಡಹಿ ಮೆಟ್ಟಿ ಕೊರ ಕೊಯ್ದು ತಲೆಗಳ
ನೆಗಹಿ ನಿವಾಳಿ ಹಾಕಿದರು              ||೧೫೩||

ಮುನ್ನ ಸಾಕಿದ ಕೈ ೨೩[11]ಜೀತ೨೩[12] ವೊ ಸಿರುಮೇಂದ್ರ
ಚೆನ್ನಾಗಿ ನೋಡು ನೋಡೆನುತ
ತನ್ನ ಕಠಾರವ ಕಿತ್ತಳಿಯ ತಿಪ್ಪಯ್ಯ
ಬೆನ್ನಟ್ಟಿ ಇರಿದು ತೆಲುಗರ               ||೧೫೪||

ಕರುಳ ಕೊರಳು ಕೈಬೆರಳು ಕತ್ತರಿಸಲು
ಭರದಿ ಹೊಯ್ದು ರಣದೊಳಗೆ
ಮರಳಿಸಿದನು ಕರಿ ತುರಗ ಕಾಲಾಳನು
ಧುರಗಲಿ ಅಳಿಯ ತಿಪ್ಪಯ್ಯ             ||೧೫೫||

ಕೆಕ್ಕರಿಸುತ ನೋಡಿ ಸೊಕ್ಕಿದ ತೆಲುಗರ ಮೆಟ್ಟಿ
ಸಿಕ್ಕನೆ ಸೀಳಿ ಬಿಸುಡಲು
ಚಿಕ್ಕಾಯಿ ಸಿರುಮೇಂದ್ರ ಕಂಡುಪ್ಪರಿಗೆಯೊಳು
ಹೆಕ್ಕಳದಿಂದ ನಗುತಿರಲು               ||೧೫೬||

ನರಸಿಂಹನವರೆಲ್ಲ ಮೊರೆದು ತಿಪ್ಪಯ್ಯನ
ಉರದ ಮೇಲಿರಿಯೆ ಏರ್ವಡೆದು
ಶರೀರ ಕತ್ತರಿಸುತ ರಣರಂಗದೊಳಗೆಲ್ಲ
ಮರಣವಾದನು ಬೇಗದಲಿ              ||೧೫೭||

ಎವೆ ಹಳಚದ ಮುನ್ನ ಸಿರುಮ ಎನುತಲಾಗ
ಕವಿದನು ಹಡಪದ ಹಲಗ
ಸವರಿದ ಸಾಳುವ ನರಸಿಂಹನವರನು
ತಿವಿ ತಿವಿದವ ಹವಣಿಸಿದ                ||೧೫೮||

ಒಬ್ಬನ ಹಿಡಿದು ತಿರ್ರನೆ ತಿರುಹುತ ಮ-
ತ್ತೊಬ್ಬನ ಹೊಡೆದಪ್ಪಳಿಸಿ
ಆರ್ಭಟಿಸಲು ಆಕಾಶದಿ [ಶಿ]ವಗಣ
ನಿಬ್ಬೆರಗಾಗಿ ನೋಡಿದರು               ||೧೫೯||

ಮಡದಿ ಸಹಿತ ಸಿರುಮಣ್ಣ ತಲೆಯ ತೂಗೆ
ಗಡೆಯ ತೆಲುಗರೆತ್ತಿ ಬರಲು
ತುಡುಕಿ ಹಡಪದ ಹಲಗನ ಇರಿಯಲಾಗಿ
ಮಡಿದನು ರಣರಂಗದೊಳಗೆ          ||೧೬೦||

ಚಿತ್ತವಧಾನ ಪರಾಕು ಸಿರುಮ ನಿನ್ನ
ಅರ್ಥಿಯ ಸಲಿಸುವೆನೆನುತ
ಕತ್ತಿಯ ಝಳಪಿಸಿ ಹೆಗ್ಗೆರೆ ನಾಗಣ್ಣ
ಮತ್ತಗಜದಂತೆ ಮಾರ್ಮಲೆದ         ||೧೬೧||

ಒಳಹೊಕ್ಕು ತೆಲುಗರ ಮುಂದಲೆಗಳ
ತಲೆವರಿಗೆಯನಿಕ್ಕಿ ನಿಂದ
ಬಲಭುಜ ಹರಿದು ನಿಟ್ಟೆಲು ಕತ್ತರಿಸಲು
ನೆಲದಲ್ಲಿ ಬೀಳಹೊಯ್ದವನು            ||೧೬೨||

ಕಟ್ಟಾಳುಗಳ ಕಾಲ್ವಿಡಿದಪ್ಪಳಿಸುತ
ಜಟ್ಟಿಗಳಂತೆ ಹೆಣಗುತಲಿ
ಈಟಿಯಿಂದಿರಿಯಲು ಹೆಗ್ಗೆರೆ ನಾಗಣ್ಣ
ದಾಟಿ ಮುಂದಕೆ ಉರುಳಿದನು         ||೧೬೩||

ಹಿರಿಯ ಸೋಮಣ್ಣ ತಳವಾರ ಲಿಂಗರಸಯ್ಯ
ಕರವೇಗ ನಂಬೆಣ್ಣನಾಯ್ಕ
ಸಿರುಮನ ಪ್ರಧಾನ ಕಲ್ಲರಸಯ್ಯನು
ಅರಮನೆ ಮುಂದೆ ನಿಂದಿರಲು         ||೧೬೪||

ಸಂಗ್ರಾಮವೆಂಬ ಸಮು[ದ್ರ]ಕೆ ಸೊಕ್ಕಿಕ್ಕಿ
ಮೀನ್ಗಳನೆಸೆವಂದದಲಿ
ಜಂಗುಳಿ ತೆಲುಗರ ಎದೆ ಬದಿ ಕಿವಿ ಮೂ[ಗು] ಕಂಗಳುದುರಲೆಚ್ಚ ಸಿರುಮ             ||೧೬೫||

ಕೆಡೆ ಕೆಡೆ ಎಂದೆಚ್ಚು ಕೈಯೆತ್ತಿ ಕಡಿಯಲು
ಗಡೆಯ ತರಗನೆಂಬುವನು
ಪೊಡವಿಗುನ್ನತವಾದ ಸಿರುಮನಿಟ್ಟಿಹ ಪಚ್ಚೆ
ಕಡಗವ ನನಗೆ ಹಾಕೆಂದ                ||೧೬೬||

ತವಕದಿ ಸಿರುಮ ಹಾಕಿದ ಪಚ್ಚೆಕಡಗಕೆ
ಕವಿವ ತೆಲುಗರ ಕಾಲಾಳ
ಸವರಿ ಸಾಲ್ದಲೆಯ ಬಣಬೆಯನೊಟ್ಟಿಸಿದ
ಸಿರುಮನ ಪ್ರಧಾನ ಕಲ್ಲರಸ            ||೧೬೭||

ಕಡಿದನು ಮುತ್ತಿರ್ದ ತೆಲುಗರ ಪಚ್ಚೆದ
ಕಡಗವ ತಂದು ಕಲ್ಲರಸ
ತಡಯದೆ ಸಿರುಮ ಕೋ ಎನುತ ಕಲ್ಲರಸ
ಒಡಯಗೆ ತಂದೊಪ್ಪಿಸಿದನು           ||೧೬೮||

ಆಶ್ಚರಿವಟ್ಟು ಕಲ್ಲರಸನ ಮುಖ ನೋಡಿ
ಮೆಚ್ಚಿ ಹಸಾದವೆಂದೆನುತ
ಪಚ್ಚೆಯವನು ಹೊಗಲೀಸದೆ ನೀ ಎನ್ನ
ಪಚ್ಚೇದ ಕಡಗವ ತಂದೆ                 ||೧೬೯||

ಧನ್ಯ ಸಿರುಮ ಕೇಳು ಎನ್ನ ಬಿನ್ನಪವನು
ಇನ್ನುಪ್ಪರಿಗೆ ಇಳಿಯೆಂದ
ತನ್ನ ಸತಿಯು ಸಹ ಬಂದು ಮಾತಾಡಿದ
ಮನ್ನಿಸಿ ಪ್ರಧಾನನೊಡನೆ               ||೧೭೦||

ಮಿಕ್ಕಾಳು ಮುಂದೆ ಕಾದಿರಲಲ್ಲಿ ಕಲ್ಲರಸ
ಧೊಕ್ಕನೆ ಬಂದು ಬಿನ್ನೈಸೆ
ಚಿಕ್ಕಾಯಿ ಸಿರುಮೇಂದ್ರ ನರಸಿಂಗರಾಯಗೆ
ಸಿಕ್ಕದುಪಾಯವ ನೆನೆದ                ||೧೭೧||

ಮುಂಚಲಿ ಸಿರುಮೇಂದ್ರ [ಮು]ತ್ತೈದೆತನ ನಿನ್ನ
ಹಿಂಚಲಿ ರಂಡೆತನಗಳ
ಸಂಚಲಿಸದೆ ಕೊಲ್ಲೆಂದು ಬೇಡಿಕೊಂಡಳು
ಅಂಚೆಗಮನೆ ಚಿಕ್ಕಮ್ಮ                  ||೧೭೨||

ಮುಗುಳುನಗೆಗಳಿಂದ ಮುದ್ದಿಸಿ ಗಂಡನ
ಕಂಗಳು ದಣಿಯೆ ನೋಡಿದಳು
ಸಂಗ್ರಾಮದಿ ಕಾದಿ ಸಿರುಮ ನೀ ಬಾರೆಂದು
ಹೆಂಗಳ ರನ್ನೆ ನುಡಿದಳು                ||೧೭೩||[1] ೧೯-೧೯ ಕೈಗ ನಡುವಿನ (ಶಿ), ಕೈಗಿನೊಡವನಿ (ಹ)

[2] ೧೯-೧೯ ಕೈಗ ನಡುವಿನ (ಶಿ), ಕೈಗಿನೊಡವನಿ (ಹ)

[3] ೧೯-೧೯ ಡಿ(ಹ)

[4] ೧೯-೧೯ ಡಿ(ಹ)

[5] ೨೦-೨೦ ವಾಳವನು (ಶಿ)

[6] ೨೦-೨೦ ವಾಳವನು (ಶಿ)

[7] ೨೧-೨೧ ನೊಪ್ಪಿ (ಶಿ)

[8] ೨೧-೨೧ ನೊಪ್ಪಿ (ಶಿ)

[9] ೨೨-೨೨ ನಾಗ ಬಂದನವ (ಶಿ)

[10] ೨೨-೨೨ ನಾಗ ಬಂದನವ (ಶಿ)

[11] ೨೩-೨೩ ಪಂಥ (ಶಿ)

[12] ೨೩-೨೩ ಪಂಥ (ಶಿ)