[1]ಕನ್ನೆಗಾಳಗ[2]ಕಾ[3]ದಿ ವೀರ ಮಡಿದ ಸುದ್ದಿ
ಚೆನ್ನಾಗಿ ಹುಟ್ಟೆ ಪಾಳೆಯದಿ
ಮುನ್ನ ಕೇಳಿದ ಸಿರುಮಣ್ಣನ ಸ್ನೇಹಿತನೊಬ್ಬ
ಹೊನ್ನವಳ್ಳಿಯ ವೇದರಾಜ              ||೧|| (||೧೦-೭೦)

ಹರ ಹರ [4]ಎಂದು[5] ಮರುಗಿ ರುದ್ರರಾಜನ
ಕರಸಿ ಏಕಾಂತವನಾಡಿ
ಸಿರುಮಣ್ಣನಾಯ್ಯನ ಕಾಣಿಸಬೇ[6]ಕೆಂದು[7]
ನರಸಿಂಹನೆಡೆಗೆ ಬಂದವ[8]ರು[9]      ||೨||(||೧೦-೭೧)

ನಿನ್ನ ಪಾದವ ರಾಯ ಕಾಣದೆ ಸಿರುಮೇಂದ್ರ
ತನ್ನ ಮಗನ ಕೊಂದುಕೊಂಡ
[10]ಇನ್ನು[11] ನಂಬಿಗೆ ಬೇಕೆನುತ ಬಿನ್ನೈಸಿದ
ಹೊನ್ನವಳ್ಳಿಯ ವೇದರಾಜ              ||೩||(||೧೦-೭೨)

ಕಪ್ಪವ ಕೊಟ್ಟರೆ ಸಿರುಮನ ಪ್ರಾಣಕೆ
ತಪ್ಪೆನೆನುತ ನರಸಿಂಹ
ಒಪ್ಪುಗೊಳಿಸಿ ರುದ್ರರಾಜನ ಕಳುಹಿ ನ
ಮ್ಮಪ್ಪಾಜಿಯಾಣೆ ಕರಸೆಂದ            ||೪||(||೧೦-೭೩)

ದುಃಖದೆ ಜವಳಿಯ ಕಟ್ಟಿಸಿ ರುದ್ರರಾಜನ
ದೊಕ್ಕನೆ ರಾಯ ಕಳುಹಿದನು
ಮಕ್ಕಳ ಕೊಂದುಕೊಳ್ಳದೆ ಸಿರುಮನ ಬೇಗ
ಗಕ್ಕನೆ ಬರಹೇಳೆಂದ                     ||೫||

ಸೊಗಸುಮಾತಿಗೆ ರುದ್ರರಾಜ ಬೇಗದಿ ಬಂದು
ಅಗಳ ದಂಡೆಯಲಿ ನಿಂದವನು
ತಗುಳಿ ಕೋಟೆಯ ಮೇಲೆ ಎಸೆವ ಬಂಟರನೆಲ್ಲ
ನೆಗಹಿ ಸನ್ನೆಯಲಿ ನಿಲ್ಲಿಸಿದ             ||೬|| (||೧೦-೭೪)

ಕಾಳಗ ಬೇಡ ರುದ್ರರಾಜ ಬಂದಹನೆಂದು
ಹೇಳು ನಿಮ್ಮೊಡನೆಯಗೆಂದೆನಲು
ಅಳೋಚಿಸಿ ಕೇಳುತ ಮತ್ತೆ ಸಿರುಮೇಂದ್ರ
ಆಳುವೇರಿಯ ಮೆಟ್ಟಿ ನಿಂದ             ||೭||(||೧೦-೭೫)

ಭಾವ ರುದ್ರಯ್ಯ ನೀವು ಬಿಜಮಾಡಿದಿರಿಲ್ಲಿಗೆ ಇ
ನ್ನಾವ ಕಾರ್ಯವು ಹೇಳಯ್ಯ
ನೋವ ಕೇಳುತ ದುಃಖದೆ ಜವಳಿ ನರಸಿಂಹ
ಭೂವರ ಕಳುಹಿದನಿವ ಕೋ                        ||೮||(||೧೦-೭೬)

ನೀಡಿದ ಕೋಟೆಯೊಳೆಯಕುಡುಗೊರೆಗಳ
ರೂಢಿಗುನ್ನತ ಸಿರುಮಣ್ಣಗೆ
ಬೇಡಿಕೊಂಡನು ರುದ್ರರಾಜ ಬುದ್ಧಿಯ ಹೇಳಿ
ಆಡಿದ ಮೇಲೆಣಿಕೆಯನು                 ||೯|| (||೧೦-೭೭)

ಕ್ಷೋಣಿಯೊಳಗೆ ಮಕ್ಕಳ ಸಾವು ಕಣ್ಮುಂದೆ
ಕಾಣಬಹುದೆ ಸಿರುಮೇಂದ್ರ
ಊಣೆವಿಲ್ಲದೆ ನರಸಿಂಹನ ಕಂಡು
ನಿನ್ನ ಪ್ರಾಣವನುಳುಹಿಕೊಳ್ಳಯ್ಯ      ||೧೦|| (||೧೦-೭೮)

ಸರಸದಿ ಬೀಗತನದಲಾಡಿದ ಮಾತು
ನಿರುತವಲ್ಲವೊ ರುದ್ರರಾಜ
ಧರೆಯೊಳು ಪರಬಲಾಂತಕನೆಂಬ ಬಿರಿದನು
ಸಿರುಮನೆಂಬುದನು ಕೇಳ್ದರಿಯ       ||೧೧|| (||೧೦-೮೦)

ಅಳಿವುದು ಕಾಯವು ಉಳಿವುದು ಕೀರ್ತಿಯು
ಫಲ ಬೆಳೆವುದು ಧಾವ ರುದ್ರ
ಬಲುಹುಳ್ಳ ನರಸಿಂಹನೊಳು ಸೆಣಸುವೆ ನಾನು
ಇಳೆಯೊಳಾಶ್ಚರಿ ನೀವು ಹೋಗಿ      ||೧೨||

ಕಲ್ಲುಮನೆಯ ಕಟ್ಟಿ ಮೋರೆಯ ರಾಯರು
ಎಲ್ಲ ಕಾಲವು ಬಾಳಿದರೆ
ಬೆಳ್ಳಿಯ ಮನೆಮಾಡಿ ಪಾಂಡವರೈಶ್ವರ್ಯ
ಉಳ್ಳವರಿಗೆ ವನವಾಸ                   ||೧೩|| (||೧೦-೮೨)

ಹುಲ್ಲುಮನೆಯ ಕಟ್ಟಿ ಬಾಳ್ವ ಗೊಲ್ಲರು ನಾವು
ನಿಲ್ಲದೈಶ್ವರ್ಯ ಎಂಬುದನು
ಬಲ್ಲಿದ ನರಸಿಂಹಗೆ ಹೇಳೋ ಭಾವಯ್ಯ
ಸೊಲ್ಲೊಂದು ಕೇಳೆಂದ ಸಿರುಮ[12]   ||೧೪|| (||೧೦-೮೧)

ಕಳುಹಿದೆ ನಾ ಮುನ್ನ ಹೆಣ್ಣಡುಗೆಯನೆಲ್ಲ
ತಳುವದೆ ನರಸಿಂಹನೆಡಗೆ
ಕಳೆಗುಂದಿ ತಾ ಹೋಗಿ ಕಂಡರೆ ಭಾವಯ್ಯ
ಇಳೆಯೊಳಪಕೀರ್ತಿ ತಪ್ಪುವದೆ        ||೧೫||

ಎಣ್ಣರಿಸಿನ ಕಣ್ಣಕಪ್ಪು ಹೆಣ್ಣುಡುಗೆಯ
ಇನ್ನುಟ್ಟು ಬಾಳ್ವೆನೆ ನಾನು
ಬಣ್ಣಗೆಟ್ಟು ಕಾಬೆನೆ ನರಸಿಂಹನೊಳು
ಹಣ್ಣಿಯೆ ಕಾದುವೆನೆಂದ                  ||೧೬|| (||೧೦-೮೪)

ನುಡಿಗೇಳಿ ರಾಯನಾತನ ಕೂಡೆ ಕಾದುವೆ
ಕಡುಗಲಿ ಕುವರ ಮಲ್ಲಣ್ಣ
ಕಡೆಗೊತ್ತಳದಿಂದ ಬಂದಾಗ ತಂದೆಯ
ಗಡಣದಿ ಗರ್ಜಿಸಿ ನುಡಿದ                ||೧೭|| (||೧೦-೮೫)

ಸಂತದ ಮಾತೊ ಪಂಥದ ಮಾತೊ ಸಿರುಮೇಂದ್ರ
ಇಂತೆಂದೆ ಭಾವ ರುದ್ರಯ್ಯ
ಭ್ರಾಂತುಗೊಳ್ಳದೆ ಹೋಗೆಂದು ಕೋಟೆಯ ಮೆಟ್ಟಿ
ನಿಂತು ಸಾರಿದ ಮಲ್ಲಭೂಪ            ||೧೮|| (||೧೦-೮೬)

ಹೆಚ್ಚುಳ್ಳ ಬೂದಿಹಾಳ ಸಿರುಮನ ಪರಿವಾರ
ಎಚ್ಚು ಕೊಲ್ವರೊ ರುದ್ರ ಮಾವ
ಎಚ್ಚರಿಕೆಯ ಮೇಲೆ ಹೋಗಿ ರಾಯನ ಕೂಡ
ನಿಶ್ವಯಿಸಿ ಕಾದಹೇಳೆಂದ               ||೧೯|| (||೧೦-೮೭)

ಡಮ್ಮೆಂದು ಪೆಟಲ ನುಡಿಸೆ ರುದ್ರರಾಜನು
ಹಮ್ಮೈಸಿ ಹಿಂದಕೆ ತಿರುಗಿ
ಗಮ್ಮನೆ ಬಂದು ಹೇಳಿದ ನರಸಿಂಹಗೆ
ಸುಮ್ಮಾನವಳಿದ ಸುದ್ದಿಯನು          ||೨೦||

ಸಂಧಾನವಿಲ್ಲವೆನಲು ನರಸಿಂಹ ಕೋಪ
ಒಂದು ಹದಿನಾರು [13]ಮಡಿ ಒದಗಿ[14]
ಹೊಂದಿದೋಲಗದಿ ಈಶ್ವರನಾಯಕ ಕೇಳು
ಸಂದೇಹ ಬಿಟ್ಟಿತೆನ್ನ ಮನವಿ            ||೨೧||

ಹಗಲಿರುಳೆನ್ನದೆ ಕಾದುವ ಬೂದಿಹಾಳ
ಅಗಳ ಹೂಣಿಸಬೇಕೆನುತ
ಬಗೆ ಬಗೆ ಏಣಿಬದ್ಧರ ತಳಿ ಪಲಗೆಯ
ಮಿಗೆ ಜೋಡಿಸಿ ತರಿಸಿದನು            ||೨೨||

ಹೇಳಿದ [15]ಅರಸಾಳು[16] ಸೂಳೇರು ಸಹವಾಗಿ
ಏಳಿ ಸವುರಿಸಿಕೊಳ್ಳೆನುತ
ಕೇಳುತ ಮರಮುಟ್ಟು ಸದೆ ಸೊಪ್ಪೆ ಹೊರಗಟ್ಟಿ
ಮೇಲೆ ಹೊತ್ತೆಲ್ಲ ನಡೆದರು೧೦[17]         ||೨೩||

ಹನುಮಂತ ಕಪಿಕಟಕವು ಕೂಡಿ ತರುಗಿರಿ
ವನಗಳ ಕಿತ್ತೆತ್ತುವಂತೆ
ಸನುಮತದಿ ರಾಯನ ದಂಡು ಬೂದಿಹಾಳ
ಅನುವೇರಿದಗುಳ ಸೇರಿದರು           ||೨೪||

ಹೋಯಿತು ಬೂದಿಹಾಳಾಯಿತು ನಮಗೆಂದು
ಖೋಯೆಂದು ನರಸಿಂಗನವರು
ಅಯಮಾನದಿ ತಳಿ ಬಂದರೆ ಮರೆಯಲಿ
ವೈಯ್ಯಾಗೆ ಅಗುಳ ಸೇರಿದರು         ||೨೫||

ಸುತ್ತಲು ಕಂಡು ಬೂದಿಹಾಳ ಸಿರುಮನ
ಮೊತ್ತದಿ ವೀರ ಪರಿವಾರ
ಮುತ್ತಮ ಕೊಮಾರ ನಾಯ್ಕರು ಬಾಗಿಲ ಬೇಗ
ಮತ್ತೆ ತೆರಸಿ ಹೊರಟರು                ||೨೬||

ಕಡಿ ಕಡಿ ಹಿಡಿ ಹಿಡಿ ಬಿಡಬೇಡ ಎನುತಲಿ
ತೊಡರಿ ತೊಡರಿ ಬೇಗದಲಿ
ತುಡುಕಿ ತುರಗವನೇರಿ ಕಡಿ *[18][ಯೆ ಕುಮಾರರೆಲ್ಲ]*[19]
ಮಡಿಹುಡಿಮಾಡಿ ತೆಲುಗರ             ||೨೭||

ಮಿಂಚು ಮೇಘದಿ ಹೊಳೆದಡಗಿ ಸಿಡಿಲ ಕೂಡೆ
ಹೊಂಚೆದ್ದಡಗಿ ಹೊಯ್ವಂತೆ
ಮುಂಚೆ ರಾಯನ ದಂಡ ಕಡಿದಡಿ ಕಡಿದರು
ಪಂಚಗುಂಡಿಗೆ ಸಿರುಮನವರು        ||೨೮||

ಅಟ್ಟಿ ಇರಿದು ಕುಟ್ಟಿ ಕೆಡಹಿ ತೆಲುಗರನು
ಮೆಟ್ಟಿ ತಲೆಯ ಹೊಯ್ದಿಡುತ
ಹೊಟ್ಟೆಯ ಸೀಳಿ ಕರುಳ ಹಿರಿದು ರಣ
ವಟ್ಟೆಯೊಳಗೆ ಹಾಕಿದರು               ||೨೯||

ತಗರು ತಗರು ಕಾ[ದಿ]ದಂದದಿ ಉಭಯ ಬಲ
ಕುಭೆ ಕುಭೆನುತ ಬೊಬ್ಬಿರಿದು
ಜಬರಜಂಗು ಮುಂಡುಗೋವಿಯಲಿ [ಮು]ಸುಕೆ
ನಭವದೂರಲು ಕಾದಿದರು೧೧[20]        ||೩೦||

ಕರಿ ಕರಿ ತಗರು ತಗ[ರು] ತಾಕಿ ಭರದಿಂದ
ಅರೆ ನೆರೆ ಹಳಚಿದಂದಲಿ
ಸಿರುಮನ ಪರಿವಾರ ನರಸಿಂಹನವರ ಪಡೆ
ಸರಿಮಿಗಿಲೆನಿಸಿ ತಾಕಿದರು೧೨[21]        ||೩೧||

ಹದಿನೈದು ತುರಗ ತನ್ನೊಡನೆ ಕುಮಾರ ಮಲ್ಲ
ಇದಿರುಗಾಣುತಲೇರಿದನು
ಕದಲಿಸಿ ಕದಳಿಯ ವನವ ತರಿದವೊಲು
ಎದೆಗೆಡಿಸಿದ ತೆಲುಗರನು               ||೩೨||

ಠಣಕುಟ್ಟಿ ನೆಗದು ಬಿಲ್ಲಾಳೆಚ್ಚ ಘಾಯಕೆ
ಹೆಣಗಳನೆಳೆದೊಯ್ಯುತಲಿ
ಕೆಣಕಿ ಕೆಟ್ಟೆವು ಸಿರುಮಣ್ಣನಾಯಕನೆಂದು
ರಣದೊಳು ತೆಲುಗ ಮನ್ನೆಯರು      ||೩೩||

ಊಣೆಯ ಬಂದರೆ ಬರಲೆಂದು ಪಾಳೆಯ
ವಾಟದಲೆದ್ದೋಡಿದರು
ಕಾಣುತ ಕುಮಾರಮಲ್ಲ ಹೋಗದಿರೆಂದು
ಹೂಣಲಿರಿದ ಸಮರದಲಿ                ||೩೪||

ಕತ್ತಿಯ ಕಿತ್ತು ತುರಗದ ರಾಹುತರನು
ಇತ್ತಂಡ ಬೀಳಹೊಯ್ದನು
ಸುತ್ತುವರಿದು ಬೂದಿಹಾಳ ಕುಮಾರಮಲ್ಲ
ಮುತ್ತಿಗೆ ಹಿಂದಕೆ ತೆಗೆಸಿ                 ||೩೫||

ತರುಬಿ ತರುಬಿ ನಟ್ಟ ಬಾಣಗಳ ಕೀಳಿಸಿ
ತೆರಹಿಲ್ಲದೇಣಿ ಬದ್ಧರವ
ಹೊರಿಸಿ ಹೊರಿಸಿ ಊರೊಳಯಕೆ ಕಳುಹಿದ
ನೆರೆಗಲಿ ಕೊಮಾರಮಲ್ಲ                ||೩೬||

ಮತ್ತೆ ಹಿರಿಯ ಸೋಮಣ್ಣ ಕಾಚಣ್ಣನು
ಸತ್ಯದೆಕ್ಕಟಿಗ ನಾಯಕರು
ಕಿತ್ತು ಕಠಾರದಿ ಹೊಕ್ಕು ರಾಯನ ದಂಡ
ಅತ್ತಿತ್ತ ಮಾಡಿ ಒಕ್ಕಿದರು                 ||೩೭||

ಒಡಬರಸಿತು ಸರ್ವದಳ ನರಸಿಂಹನ
ಒಡನಿರ್ದ ಮೈಗಾವಲವರು
ಗುಡುಗುಡಿಸುತ ಹತ್ತು ಸಾವಿರ ಸಬಳವು
ಬಿಡಿಸಿಕೊಂಡಧಿಕ ರಾಹುತರು         ||೩೮||

ಹೊಕ್ಕರು ನರಸಿಂಹರಾಯನ ಬಿರುದಿನ
ಎಕ್ಕಟಿಗರು ಬೊಬ್ಬಿರಿದು
ಲೆಕ್ಕವಿಲ್ಲದ ವಾದ್ಯ ರಭಸದಿ ಸಿರುಮನ
ಮಕ್ಕಳ ಹಿಡಿ ಹಿಡಿ ಎನುತ               ||೩೯||

ಹೊಯ್ದಿರಿದೆಸೆಯೆ ಹೊಳೆದು ತಪ್ಪಿ ಸಿರುಮನ
ಮೈಗಾವಲ ವೀರಭಟರು
ಹುಯ್ಯಲಿಕ್ಕದೆ ಹಿಮ್ಮೆಟ್ಟದೆ ಮುದದಿಂದ
ಕೈಮಾಡೆ ಕಾಹುರದವರು               ||೪೦||

ಹಿಂಗಾಲ ಮುಂಗಾಲ ಹೊಯ್ದರು ಕುದುರೆಯ
ಸಂಗ್ರಾಮದಿ ಕೆಡಹಿದರು
ಭಂಗಬಡಿಸಿದರು ಸಿರುಮನ ಮನ್ಯೇರು
ನರಸಿಂಗರಾಯ ರಾಹುತರ            ||೪೧||

ಕಡಿಯಲು ತಲೆಯ ಮೇಲಕೆ ಸಿಡಿಯಲು ಮುಂಡ
ನಡೆದು ಕೆಡೆದು ಬಿದ್ದುರುಳೆ
ಧಡ ಧಡಿಸಿತು ಭೂಮಿ ಹೆಣ ರಣ ರಕ್ತದ
ಕಡಲುಬ್ಬಿ ಕಡಲೊಳು ಹರಿಯೆ         ||೪೨||

ಚೆಲುವ ಕಡಿದ ಹೆಣನಾ ಹೊಟ್ಟೆಯಲಿ
ಜೋಲುವ ಕರುಳು ಕಾಳಿಜವು
ಕಾಲು ತೊಡರಿ ಬಿದ್ದ ತಲೆ ಕಣ್ಣೆವೆಗಳ
ಲೋಲರ ತೆರದಂದೆಸೆದರು            ||೪೩||

ಮುಂಡ ಜೀಕುಳಿ ರುಂಡ ಒಡೆಯಲರದರ ಪಾತ್ರೆ
ಹಿಂಡು ಭೂತವು ಹಿಡಿಹಿಡಿದು
ಕೊಂಡಾಡಿ ಸಿರುಮನ ಹರಸುತೋಕುಳಿಯನು
ಕಂಡು ಕಂಡೆಡೆಗೆ ಚೆಲ್ಲಿದವು ||೪೪||

ಮುರಿದು ನುಂಗಿದವು ಶಾಕಿನಿ ಡಾಕಿನಿಯರು
ಹೆಣಗಳ ಹೊತ್ತು ನಲಿದಾಡಿ
ಸೆಣಸುವ ಮಲೆವ ಮಾನ್ಯರ ಗಂಡನೆಂದು
ರಣದೊಳು ಭೂತ ಹೊಗಳಿದವು      ||೪೫||[1] +ಶ್ರೀ ಗುರುಭ್ಯೋನಮಃ| ಪದನು (ಶ್ರೀ), + ಹರುಪನಹಳ್ಳಿಯ ವಿನಾಯಕದೇವರ ಪಾದವೆಗತಿಮತಿ| ರಾಗ ತೆಲುಗು ಕಾಂಬೋದಿ |ಪದ| ()

[2] x(ಶಿ)

[3] x(ಶಿ)

[4] ಏನುತಲಿ (ಶಅ)

[5] ಏನುತಲಿ (ಶಅ)

[6] ನುತಲಿ (ಸಿ)

[7] ನುತಲಿ (ಸಿ)

[8] ನು (ಶಿ)

[9] ನು (ಶಿ)

[10] ಎನ್ನ (ಶಿ)

[11] ಎನ್ನ (ಶಿ)

[12] ೭ ಇಲ್ಲಿ ಮುಂದೆ ದ “ಹ” ಪ್ರತಿಯಲ್ಲಿ ಒಂದು ಗರಿ ಕಳೆದಿರುವ ಕಾರಣ “ನುಡಿ” ಗೇಳರಾಯನ . . . . .” ಒಳಗೊಂಡ ಪದ್ಯಗಳು ಸಿಗುವುದಿಲ್ಲ (ಸಂ.)

[13] ೮-೮ ಮಾಡೊದಗೆ (ಶಿ)

[14] ೮-೮ ಮಾಡೊದಗೆ (ಶಿ)

[15] ೯-೯ ಆಳು (ಶಿ)

[16] ೯-೯ ಆಳು (ಶಿ)

[17] ೧೦ “ಹ” ಪ್ರತಿಯಲ್ಲಿ ಒಂದು ಗರಿ ಕಳೆದ ಕಾರಣ “ಹೇಳಿದ ಅರಸಾಳು . . . . . .” ಇದರ ತರುವಾಯದಿಂದ “ಮಿಂಚು ಮೇಘದಿ . .. . .” ಒಳಗೊಂಡ ಪದ್ಯಗಳು ಇಲ್ಲಿ ಸಿಗುತ್ತಿಲ್ಲ (ಸಂ.)

[18] ** ದೆ ಕಮ್ಮಾರವೆಲ್ಲ (ಶಿ)

[19] ** ದೆ ಕಮ್ಮಾರವೆಲ್ಲ (ಶಿ)

[20] ೧೧ ಪದ್ಯಶಿಪ್ರತಿಯಲ್ಲಿ ಇಲ್ಲ (ಸಂ).)

[21] ೧೨ ಪದ್ಯಪ್ರತಿಯಲ್ಲಿ ಇಲ್ಲ (ಸಂ.).