ಘೋಳಿಟ್ಟು, ಪಾಳೆಯವೆಲ್ಲ ಘೀಳಿಟ್ಟು
ಬೇಳುವೆಗೊಂಡು ನರಸಿಂಹ
ಆಳೋಚನೆಗೊಂಡು ಮರುಗಿ ದುಃಖವ ತಾಳಿ
ಕಾಳಗಕವ ತಿರುಗಿದನು                 ||೧೯೮||

ಎಚ್ಚಾಡಿ ಮಡಿದ *

[1][ವಿಶ್ವ]*[2]ನ ರಾಣೇರ ಕೊಂದು
ಹೆಚ್ಚಿ ಕೋಪದಿ ಭುಗಿಲೆನುತ
ಬೆಚ್ಚಿ ತಲ್ಲಣಗೊಂಡು ಮಂದಿಯ ನೋಡಲು
ಮುಚ್ಚಿತಗುಳ ಹೊರವಳೆಯ           ||೧೯೯||

ಗೊಲ್ಲ ಸಿರುಮನ ಮಗ ವೀರಣ್ಣನೊಡನಿದ್ದ
ಬಿಲ್ಲು ಹರಿಗೆ ಪೆಟಲವರು
ನಿಲ್ಲದೆ ಚೀರುವ ತೆಲುಗರ ಗಾಯವ ಕಂಡು
ತಲ್ಲಣಿಸಿದ ನರಸಿಂಹ                    ||೨೦೦||

ಹೊಂದಲೀಸದೆ ಬೂದಿಹಾಳ ಕೋಟೆಯ ಸುತ್ತ
ನೊಂದ ಮಂದಿಯ ಕಾಣುತಲಿ
ಅಂದವಳಿದ ಕೋಪದಲಿ ನರಸಿಂಹರಾಯ
ನಿಂದು ಕರೆಸಿದ ಪೆಟಲಿನವರ          ||೨೦೧|| (||೧೦-೩೬)

ಬೆರಳ ತೋರಿದರಿಟ್ಟೇನೆಂಬ ಡೆಂಕಣಿ ತಿಪ್ಪ
ಬರಸು ಪಂಥವನೆಂದ ರಾಯ
ಬಿರುದಿನ ಉಡುಗೊರೆ ಕೊಟ್ಟು ಕೊಲ್ಲು ವೀರನ
ಉರಕಿಟ್ಟು ಧರೆಗೆ ಕೆಡಹೆಂದ            ||೨೦೨|| (||೧೦-೩೨)

ಸತ್ತಿಗೆಯನ ತಾಗಲಿಡಲೊ ಗೊಲ್ಲ ವೀರನ
ಸತ್ತಿಗೆ ಹಾರುವಂತಿಡಲೊ
ಒತ್ತಿನ ಚಾಮರದವನ ಇಡಲೊ ಎಂದು
ಮತ್ತೆ ಮೂದಲಿಸಿದ ತಿಪ್ಪ                ||೨೦೩|| (||೧೦-೩೮)

ಗಿಂಡಿಯವನ ತಾಗಲಿಡಲೊ ಗೊಲ್ಲ ವೀರನ
ಮಂಡೆಯ ಹಾರುವಂತಿಡಲೊ
ದಂಡೆಯೊಳೋಲೈಸಿ ಬರುವಂತ ಹಡಪದ
ಕೊಂಡಲ ತಿಮ್ಮನ ನಿಡಲೊ            ||೨೦೪|| (||೧೦-೩೯)

ಕುದುರೆಯವನ ಬೀಳಲಿಡಲೊ ವೀರನ
ಕುದುರೆಯ ಹಾರುವಂತಿಡಲೊ
ಚದುರತನದಿ ಅವನೊತ್ತಿಲಿ ನಿಂದಿಹ
ಕುದುರೆಯ ಭೀಮನನಿಡಲೊ           ||೨೦೫||

ಎಂದ ಮಾತನು ಕೇಳಿ ನರಸಿಂಹರಾಯನು
ನೊಂದು ಕೋಪದಲುರಿದೆದ್ದು
ಚಂದದಿ ಕಾದುವ ವೀರನ ಇಡು ಎಂದು
ನಿಂದು ವೀಳ್ಯವ ಕೊಡಿಸಿದನು         ||೨೦೬||

ವೀಳ್ಯವ ತೆಕ್ಕೊಂಡು ಡೆಂಕಣಿಯ ತಿಪ್ಪ
ಭಾಳ ಜತನದಲ್ಲಿ ನೋಡಿ
ಕೋಳುಗೊಂಬೆನು ಸಿರುಮನ ಮಗ ವೀರನ
ಹೇಳಿದ ನರಸಿಂಹನೊಡನೆ೩೨[3]         ||೨೦೭||

ಆಡಿದ ಮಾತಿಗೆ ಎವೆ ಹಳಚದೆ ರಾಯನು
ನೋಡೆ ಹೂಡಿದ ಡೆಂಕಣಿಯ
ಜೋಡಿಸಿ ತಕ್ಕಡಿ ಗುಂಡಿನ ಸೂತ್ರಗ
ಳಾಡುವ ಪಾತ್ರದಂದದಲಿ              ||೨೦೮||

ಚಿತ್ತವಧಾನ ಪರಾಕು ಇಲ್ಲದೆ ರಾಯ
ಇತ್ತ ನೋಡೆನ್ನ ಕೈಪರಿಯ
ಒತ್ತಿ ಡೆಂಕಣಿಯ ಸಿಡಿಯ ಬಗ್ಗಿಸಿ ತಿಪ್ಪ
ಹತ್ತಿಸಿ ಇಡಲಾರ್ಭಟಿಸಿ                  ||೨೦೯|| (||೧೦-೪೨)

ಒದರುತ ಬರುವ ಗುಂಡನೆ ಕಂಡು ವೀರಯ್ಯ
ಹೆದರದೆ ನಿಂದು ನೋಡಿದನು
ಕದಲಿ ಹಿಂದಕೆ ಹೋದರೆ ದೇವೇಂದ್ರ
ಪದವಿಲ್ಲವೆಂದು ಮುಂದೆ ನಡೆದ       ||೨೧೦||

ಘಡು ಘಡು ಢಮ್ಮೆಂದು ನುಡಿವ ಡೆಂಕಣಿಗುಂಡು
ಕಡುಗಲಿ ಸಿರುಮನ ಮಗನ
ಕೆಡಹಿ ಎದೆಯ ತಾಕಿಬಿಡಲು ವೀರನು ಪ್ರಾನ
ಒಡನೆ ಇದ್ದವರು ಘೋಳಿಡಲು         ||೨೧೧|| (||೧೦-೪೩)

ಬೊಟ್ಟ ತೋರಿದರಿಡುವನು ಹುಸಿಯಲ್ಲವೊ
ದೃಷ್ಟವ ಕಂಡೆನೆಂದೆನುತ
ತೊಟ್ಟ ಮೈದೊಡಿಗೆಯ ನರಸಿಂಹ ತಿಪ್ಪಗೆ
ಕೊಟ್ಟನು ಬಿರದು ಬಾವಲಿಯ          ||೨೧೨|| (||೧೦-೪೪)

ಇತ್ತ ಕೊತ್ತಳದೊಳು ವೀರ ಬಿದ್ದುರುಳಲು
ಒತ್ತಿನೊಳಿರ್ದ ಪರಿವಾರ
ಎತ್ತಿ ತರ್ಕೈಸಿ ಅಂಗದ ಜೀವವ ನೋಡಿ
ಮತ್ತಿ ಕಾಣದೆ ಅಳುತಿರಲು              ||೨೧೩|| (||೧೦-೪೫)

ಧುರಗಲಿ ವೀರನ ಮರಣವ ಕಂಡೊಬ್ಬ
ಹರಿದು ಸಿರುಮನಡಿಗೆರಗಿ
ಕರವ ಮುಗಿದು ಬಿನೈಸಲು ಕಂಬನಿ
ಸುರಿದವು ನೆರೆದೋಲಗದಿ              ||೨೧೪|| (||೧೦-೪೬)

ಮಕ್ಕಳೊಳಗೆ ತನ್ನ ಮೋಹದ ಕಂದನ
ಚಿಕ್ಕವೀರನ ಸುದ್ದಿಗೇಳಿ
ಅಕ್ಕಟೆನುತ ಬಾಯ ವೀಳ್ಯವನುಗುಳುತ್ತ
ದುಃಖದಿ ಸಿರುಮ ಕೇಳಿದನು           ||೨೧೫|| (||೧೦-೪೭)

ಕಲ್ಲ ಘಾಯವೊ ಬಿಲ್ಲಂಬಿನ ಘಾಯವೊ
ಭಲ್ಲೇದ ಘಾಯವೂ ಮಗಗೆ
ಎಲ್ಲಿ ತಾಕಿತು ಕುಮಾರ ವೀರಣ್ಣಗೆಂದು
ಗೊಲ್ಲ ಸಿರುಮ ಕೇಳಿದನು               ||೨೧೬|| (||೧೦-೪೮)

ಬಿಂಕದಿ ಪಂಥದಿ ಅಂಕಕೆ ನಡೆದನು
ಶಂಕೆ ಇಲ್ಲದೆ ಆಳ ತರಿದ
ಭೋಂಕದಿ ಸಿಡಿಲ ರವದಿ ವೀರನೆದೆಯನು
ಡೆಂಕಣಿ ಗುಂಡು ತಾಕಿದುದು           ||೨೧೭|| (||೧೦-೪೯)

ಬಂದು ಹೇಳಿದರು ಚಿಕ್ಕರಸಿ ನಿನ್ನ ಕಿರಿಯ
ಕಂದ ವೀರಣ್ಣ ಕಾದಿ ಮಡಿದ
ಸಂದನೆ ಶಿವನ ಪಾದಕೆ ಎಂದು ಶೋಕದಿ
ಮಂದಿರದ ಸತಿಯರಳಲಿದರು        ||೨೧೮|| (||೧೦-೫೦)

ಒಡಹುಟ್ಟಿದನ ಸುದ್ದಿಗೇಳಿ ಅಣ್ಣದಿರು
ಹುಡಿ*[4][ಯಲ್ಲಿ]*[5] ಹೊರಳಿ ಬಿದ್ದಳುತ
ನಡೆದು ಹರಿಗೆಯೊಳು ಹಾಕಿ ವೀರನ ಹೊತ್ತು
ಕಡೆಯ ಚಾವಡಿಗೆ ತಂದಿಳುಹಿ         ||೨೧೯|| ||೧೦-೫೧)

ಕಟ್ಟಿ ಕುಳ್ಳರಿಸಿ ಚಿಮ್ಮುರಿ ಸುತ್ತಿ ವೀರಗೆ
ಇಟ್ಟರು ಗಂಧ ಕಸ್ತುರಿಯ
ಕಟ್ಟಳಿಲ್ಲದೆ ಬಂಗಾರ ಶೃಂಗಾರ ಮಾಡಿ
ಪಟ್ಟಾವಳಿಯ ಹೊದಿಸಿದರು            ||೨೨೦|| (||೧೦-೫೧)

ಹೆತ್ತ ತಂದೆ ತಾಯಿ ಸಿರುಮ ಹೆಣ ಕಂಡು
ಚಿತ್ರದ ಚಾವಡಿಯೊಳಗೆ
ಮೊತ್ತದ ಸತಿಯರೆಲ್ಲರು ಕೂಡಿ ವೀರಗೆ
ಒತ್ತಿ ಒದರಿ ಚಿಕ್ಕಮ್ಮ                     ||೨೨೧||

ಎದೆ ಬಸಿರನು ಹೊಯಿಕೊಳುತ ವಿಧಿಯೆ ಎಂದು
ಮದನ ಕಂಭವ ಹಾಯ್ದಳುತ
ಹದನರಿಯದೆ ಹಾರೈಸಿ ವೀರನ ಮೇಲೆ
ಬಿದುಮುಖಿಯರು ಬಿದ್ದು ಹೊರಳೆ     ||೨೨೨|| (||೧೦-೫೩)

ಕೆಟ್ಟೆನೆನುತ ಸಿರುಮೇಂದ್ರನ ಮೋಹದ
ಪಟ್ಟದ ರಾಣಿ ಚಿಕ್ಕಮ್ಮ
ಮುಟ್ಟಿ ಮುದ್ದಿಸಿ ವೀರಗೆ ಹೆತ್ತೊಡಲನು ನೀನು
ಸುಟ್ಟುಹೋಗುವರೆ ಕಂದಯ್ಯ          ||೨೨೩||

ಬಸವಳಿವುತ ಒಳಯಕೆ ಬಂದು ಚಿಕ್ಕಮ್ಮ
ಸೊಸೆಯರ ಶೃಂಗರಿಸಿದಳು
ಶಶಿಮುಖಿಯರು ಸಹ ಬೆರಸಿ ಊಟವ ಮಾಡಿ
ಒಸರಿ ಕಣ್ಜಲ ಕುಚಕಿಳಿಯೆ               ||೨೨೪|| (||೧೦-೫೪)

ಕಾಲ ಕುಪ್ಪಸಗಳ ತೊಡಿಸಿ ರವುಕಿಗಳ
ಮೇಲೆ ಚಿತ್ರಾಂಬರ ಉಡಿಸಿ
ಬಾಲೆಯರು ಮೊದಲಿಟ್ಟ ಬಂಗಾರ ತೆಗೆಯದೆ
ಸಾಲಂಚೆಗಮನೇರು ಮೆರೆಯೆ         ||೨೨೫|| (||೧೦-೫೫)

ಕನ್ನಡಿ ಕಠಾರವ ಪಿಡಿದೊಲವಿಂದ
ಹೊನ್ನ ಪುತ್ಥಳಿಗಳಂದದಲಿ
ಚೆನ್ನಾಗಿ ಮಣಿದು ಕುಣಿದು ಅತ್ತೆ ಮಾವಗೆ
ಬಿನ್ನೈಸಿ ಕರಗಳ ಮುಗಿದು              ||೨೨೬||

ನೆರೆ ನೋಂಪಿಯ ನೋಂತುದಿಲ್ಲವೆನುತಲಿ
ಅರೆ ನೋಂಪಿಯ ನೋಂತೆವೆನುತ
ಹರಸುತ ತಮ್ಮ ಗಂಡನ ನೆರೆ ರೂಪನು
ಪರಿಪರಿಯಲಿ ಕೊಂಡಾಡಿದರು        ||೨೨೭|| (||೧೦-೫೬)

ನಳಿತೋಳು ಕದಪಿಗೆ ತನು ಒಪ್ಪುತಿದೆ ವೀರ
ಕಳಸ ಕುಚದ ಚೆಲುವಿಕೆಗೆ
ಅಳವಡಿಸಿವೆ ಕಸ್ತೂರಿ ಗಂಧಕೆ ಹೊಂದಿ
ಎಳೆಯ ಪ್ರಾಯದಿ ಹಿಂಗುವರೆ         ||೨೨೮|| (||೧೦-೫೭)

ನೋಡುವ ಕಣ್ಣು ಕೇಳುವ ಕಿವಿ ಸವಿಮಾತ
ನಾಡುವ ಜಿಹ್ವೆ ನಾಸಿಕವು
ಜೋಡಗಲಿದೆಯೊ ಪಂಚೇಂದ್ರಿ ಪೃಥ್ವಿದೊರೆ
ರೂಢಿಸಿ ಕಾದಿದೊ ವೀರ                 ||೨೨೯|| (||೧೦-೫೮)

ಚಿಕ್ಕ ಹರೆಯದಲಿ ಮುತ್ತೈದೆತನಗಳ
ಮುಕ್ಕು ಮಾಡಿದೆಯೊ ಕಲಿ ವೀರ
ಸಕ್ಕರೆ ಸವಿಬಾಯೊಳು ಬಾಯಿಕ್ಕದೆ
ಅಕ್ಕಟ ನೀ ಕಾದಿ ಮಡಿದೆ                ||೨೩೦||

ಮುಂದೆ ಪರಿದು ನರ[ಸಿಂಹನ] ದಂಡ
ಕೊಂದೆಯೊ ಪಾಡು ಪಂಥದಲಿ
ಹಿಂದು ಮುಂದೆಣಿಸದೆ ಎದೆಯ ಡೆಂಕಣಿಗುಂಡು
ಸಂಧಿಸಿ ಪ್ರಾಣ ಬಿಡುವಾಗ              ||೨೩೧|| (||೧೦-೫೯)

ನೆನೆದೆಯ ನಿನ್ನರಮನೆಯ ರಮಣಿಯರ
ತನುಮನ ಮಚ್ಚುಗಿಚ್ಚೆಯಲಿ
ಜನನಿಯರಿಕ್ಕಿದ ದುಃಖವ ವೀರ
ಇನ ಶಶಿಕಳೆ ಪ್ರಭರಮಣ೩೩[6]           ||೨೩೨|| (||೧೦-೬೦)

ಚಿಕ್ಕತ್ತೆ ಮಾವ ಸಿರುಮೇಂದ್ರಗೆ ಶರಣೆಂದು
ಉಕ್ಕುವಳಲನು ಸಂತೈಸಿ
ವಿಕ್ರಮ ವೀರನ ಸತಿಯರು ಮೆರದರು
ಲೆಕ್ಕವಿಲ್ಲದ ವಾದ್ಯಗತಿಗೆ                ||೨೩೩|| (||೧೦-೬೧)

ನಿರಿಯ ತಿದ್ದುತ ಮುಂಗುರುಳ  ನೇವರಿಸುತ
ಸೆರಗ ಕಿಬ್ಬದಿಗೆ ಸಿಕ್ಕಿಸುತ
ಮೆರೆವುತ ಕಿರುನಗೆ ನಗುತ ವೀರನ ಮೇಲೆ
ಹೊರಳಿ ಗೋಳಿಟ್ಟೊರಲಿದರು         ||೨೩೪|| (||೧೦-೬೨)

ಸೋಗೆನವಿಲ ಸೊಂಪಿಲಿ ನಲಿದಾಡುತ
ಸಾಗಿಬಂದರು ಅರಮನೆಗೆ
ಅಗಲತ್ತೆ ಮಾವ ಭಾವಗಳಿಗೆ ತಲೆ
ವಾಗಿ ಕೈಮುಗಿದು ವೀರನಿಗೆ           ||೨೩೫||

ಹೊಳೆವ ಕನ್ನಡಿ ಮುಖ ಕಳಸ ಕುಚಗಳೆವೆ
ಹಳಚದೆ ಕಣ್ಣಾರತಿಯ
ಬೆಳಗುತ ಜಯ ಜಯ ಎನುತ ವೀರನ ಮೇಲೆ
ತಳಿದರು ಮುತ್ತಿನ ಸೇಸೆಯನು       ||೨೩೬||

ನಗೆವೆಣ್ಣುಗಳು ತಾವು ತರ್ಕೈಸಿ ಮುಂಡಾಡಿ
ಬಗಸೆಗಂಗಳ ಬಾಲೆಯರು
ಮೊಗ ನೋಡಿ ಮಾತಾಡಿ ಅಕ್ಕಗಳಿರ ನಾವು
ಅಗಲಿ ಹೋಗುತಲಿವೆ ಎನುತ         ||೨೩೭|| (||೧೦-೬೩)

ಸೊಸೆಯ ಮಗನ ಸಿರುಮ ಚಿಕ್ಕರಸಿ ಕಂಡು
ಬಸಿವ ಕಂಬನಿ ಕಾಹುರದಿ
ಬಿಸಿಯೇರಿದುಸುರೊಡಲೊಳು ದೂಟಾಡುತ್ತ
ಮಸದಲಗೆದೆಯ ಕೊಂಡಂತೆ          ||೨೩೮||

ಶೋಕವಿಡುತ ಬೂದಿಯಹಾಳ ಪ್ರಜೆಗಳೆಲ್ಲ
ಏಕೆ ಈ ಸಂಸಾರವೆನುತ
ಈ ಕಳೆ ಈ ರೂಪು ಸಿರುಮನ ಮಗ ಜಗ
ದೇಕವಿಕ್ರಮ ವೀರ ಮಡಿದ              ||೨೩೯||

ನಂಬುಗೆಯನು ಕೊಟ್ಟು ವೀರನ ತರ್ಕೈಸಿ
ಚುಂಬಿಸಿ ಹಣೆಗೊತ್ತಿಕೊಳುತ
ಇಂಬುಗೊಂಡಿಹ ಕೈಲಾಸದೊಳಗೆ ನಿನ್ನ
ಬೆಂಬಳಿ ತಪ್ಪದೆ ಬಹೆವು                 ||೨೪೦||

ಮುಂಚೆ ನೀ ಪೋಗಿ ಶಿವನ ಪಾದಕೆ ಬಿದ್ದು
ವಂಚನಿಲ್ಲದೆ ಬೇಡಿಕೊಳ್ಳು
ಪಂಚಾಕ್ಷರಿಯ ಬಾಗಿಲ ಕಾವಲ ಬೇಡೊ
ಹಿಂಚದೆ ಬಹೆನೆಂದ ಸಿರುಮ           ||೨೪೧|| (||೧೦-೬೫)

ಹಿಂದಣ ಭವಪಾಶ ಹರಿದು ವೀರಣ್ಣ ನೀನು
ಮುಂದೆ ಸ್ವರ್ಗವ ಸೂರೆಗೊಳ್ಳೊ
ಬಂದ ಜನರಿಗೆ ಬಿಡಾರವ ಮಾಡಿಸೊ
ಎಂದು ಹೇಳಿದ ಸಿರುಮೇಂದ್ರ          ||೨೪೨||

ಎತ್ತಿಕೊಂಡೊಯ್ದು ಕುಮಾರ ವೀರಣ್ಣನ
ಮತ್ತೆ ಸಮಾಧಿಯೊಳಿರಿಸಿ
ಒತ್ತಿಲಿ ಅವನ ಸತಿಯರ ಕುಳ್ಳಿರಿಸಿದ
ಹೆತ್ತ ತಂದೆಯು ಸಿರುಮೇಂದ್ರ         ||೨೪೩|| (||೧೦-೬೬||

ಮಗನ ಸೊಸೆಯರ ಮೊಗ ನೋಡಿ ಮಾತಾಡಿ
ಬಗೆಗುಂದಿ ಬಾಯಲಕ್ಕಿಯನು
ಮಿಗೆ ಇಕ್ಕಿ ಸಿರುಮನ ರಾಣಿ ಚಿಕ್ಕಮ್ಮ
ಅಗಲಿ ಹೋಹರೆ ಎನ್ನ ಕಂದ            ||೨೪೪|| (||೧೦-೬೭)

ನಾಳೆ ನಿನ್ನೊಡನೆ ಬರುತ್ತಲೀವೆ ನೀ ಹೋಗಿ
ಹೇಳಯ್ಯ ಪರಮೇಶ್ವರಗೆ
ಕೇಲಿ ಬಿನ್ನೈಸೊ ಬಾಗಿಲ ಕಾದೆವೆನುತಲಿ
ಭಾಳಾಕ್ಷನ ಬೇಡಿಕೊಳ್ಳೊ               ||೨೪೫||

ಕಂದ ನಿನ್ನೊಡನೆ ನಿನ್ನಂತೆ ಬರುವ ಹಾಗೆ
ತಂದಹನೆ ಶಿವ ನಮಗೆ
ಸಂದೇಹವೆಳ್ಳಿನಿತಿಲ್ಲ ಬರುವೆವೆಂದು
ಮುಂದಲೆವಿಡಿದು ಮುದ್ದಾಡಿ            ||೨೪೬||

ಪುತ್ರಶೋಕವನು ನನಗೆ ಮುಂದು ತೋರಿದೆ
ಹೆತ್ತವರನು ಕಡೆಮಾಡಿ
ಸತ್ತುದಿಲ್ಲವೊ ಸಿಂಹದ ಮರಿ ನೀನೆಂದು
ಅತ್ತು ಮಗನ ಮುಖ ನೋಡಿ           ||೨೪೭||

ಮುಂದೆ ಕೈಲಾಸಕ್ಕೆ ನಡೆದೆ ವೀರಣ್ಣ ನಿನ್ನ
ವೊಂದಿ ಎಲ್ಲರು ಬಂದೆವೆನುತ
ಬಂದ ಜನರುಗಳು ನಂಬುಗೆಯನು ಕೊಟ್ಟು
ನೊಂದೆಲ್ಲ ಮಣ್ಣ ಮುಚ್ಚಿದರು           ||೨೪೮||

ಉಘೆ ಉಘೆ ಎನುತ ಸಮಾಧಿಯನಿಕ್ಕಿ ಬಂದು
ದುಗುಡದೆಲ್ಲರು ಮಂದಿರಕೆ
ಜಗದೊಳು ಪೊಸತೆನಿಸುವ ಸಿರುಮೇಂದ್ರಗೆ
ಮಿಗಿಲಾದುದು ಮೂರು ಸಂಧಿ೩೪[7]      ||೨೪೯|| (||೧೦-೬೯)[1] *-* ಈಶ್ವರ (ಶಿ, ಹ).

[2] *-* ಈಶ್ವರ (ಶಿ, ಹ).

[3] ೩೨ ಈ ಪ ದ್ಯ “ಶಿ” ಪ್ರತಿಯಲ್ಲಿ ಇಲ್ಲ (ಸಂ.)

[4] *-* ಯಿಟ್ಟು (ಶಿ, ಹ).

[5] *-* ಯಿಟ್ಟು (ಶಿ, ಹ).

[6] ೩೩ ಪದ್ಯಶಿಪ್ರತಿಯಲ್ಲಿ ಇಲ್ಲ (ಸಂ.)

[7] ೩೪+ ಅಂತು ಸಂಧಿ ೩ಕ್ಕೆ ಪದನು ೬೧೮ಕ್ಕೆ ಮಂಗಳ ಮಹಾ ಶ್ರೀ ಶ್ರೀ ಶ್ರೀ (ಶಿ), ಅಂತು ಸಂಧಿ ಕಂ ಪದನು ೪೬೭ ಶ್ರೀ ಶ್ರೀ ಮಂಗಳ ಮಹಾಶ್ರೀ ().