ಕಡುಕು ಕಂಠಮಾಲೆ ಕೊಡುವೆ ಬೇಡಿದ ನಾಡ
ಕೊಡುವೆನು ನರಸಿಂಹನಾಣೆ
ಕೆಡಬೇಡ ಸಿರುಮನ ಬಿಟ್ಟು ಬನ್ನಿರೊ ಎಂದು
ನುಡಿದ ಈಶ್ವರಿನಾಯಕನು             ||೪೨||

ಆಸೆಯ ಮಾತನಾಡಲು ಕೇಳಿ ಸಿರುಮನ
ಲೇಸಿನ ಬಂಟ ಗುಜ್ಜಲೋಬ
ಮೋಸದಿ ನೂರಾಳು ಸಹಿತಲಳಿದು ಬಂದು
ಈಶ್ವರನಾಯ್ಕನ ಕಂಡ                 ||೪೩||

ತಡೆಯದೆ ನರಸಿಂಹನೆಡೆಗೈದಿ ಗುಜ್ಜಲೋಬ
ಒಡನಡ್ಡಬಿದ್ದು ಕೈಮುಗಿದ
ಕಡಗ ಕಂಠಮಾಲೆಯುಡುಗೊರೆ ವೀಳ್ಯವ
ತಡೆಯದಲಿತ್ತು ಮನ್ನಿಸಿದ               ||೪೪||

ಹೇಳೆಲೊ ಗುಜ್ಜಲೋಬ ಬೂದಿಹಾಳ ಸಿರುಮನ
ಆಳು ಕುದುರೆ ಬಲುಮೆಯನು
ಕೇಳು ದೇವರ ದೇವ ಎಕ್ಕಟಿಗನಾಯಕರೆಲ್ಲ
ನಾಳೆ ಡಿಳ್ಳಿಸಿ ಬಹರೆಂದ                 ||೪೫||

ಎಂದ ಮಾತಿಗೆ ನರಸಿಂಹರಾಯನ ಮನ
ದಂದ ಕಾರ್ಯವು ಪರಿದಂತೆ
ಬಂದು ಗುಜ್ಜಲೋಬ ಸಮರಸ ದೊರೆಗಳು
ಮುಂದೆ ನಿಲ್ಲಿಸಿ ಕೋಟೆಯೊಳಗೆ      ||೪೬||

ಕಂಗೆಟ್ಟು ಬೆಲಗೂರ ಭೈರವ ತಾನಿಳಿಯಬಿದ್ದ
ಸಂಗಡದಾಳು ಸಹಿತಲಿ
ಅಂಗ ಹೆಸರಿ ಆನೆಪನಾಯಕ ಬೂದಿಹಾಳ
ಭಂಗ ಬಡದೆ ಹೊರವಂಟ              ||೪೭||

ಆನೆಪ್ಪನಾಯಕ ಬೆಲಗೂರ ಭೈರನು
ಪ್ರಾಣಕೆ ಸಾರಿ ಸಿರುಮನ
ಏನೆಂದಣಿಸದೆ ರಾಯನ ಪಾದಕೆ
ಕಾಣಿಕೆಯಿಕ್ಕಿ ಕಂಡವರು                 ||೪೮||

ಹೆಚ್ಚಿದ ನರಸಿಂಗರಾಯನುಡುಗೊರೆಯನು
ಪಚ್ಚದ ಕಡಗ ಪದಕವನು
ನಿಶ್ಚೈಸಿ ಕೊಡಲಿತ್ತ ಸುದ್ದಿಯ ಕೇಳಿದ
ಆಶ್ಚರ್ಯದಿ ಸಿರುಮೇಂದ್ರ               ||೪೯||

ಹಿತವನು ಬೆಲಗೂರ ಭೈರ

[1][ಆನೆಪ][2]ನಾಯಕ
ಗತಿಗೆಟ್ಟು ಹೋದ ಸುದ್ದಿಯನು
ಸತಿಕುಲರನ್ನೆ ಚಿಕ್ಕರಸಿಗೆ ಹೇಳಿದ
ಶತಪತ್ರಸಖ ಸಿರುಮೇಂದ್ರ             ||೫೦||

ಚಿಕ್ಕಾಯಿ ನಿನ್ನ ತಮ್ಮ ಕಕ್ಕುಲತೆಯ ಮಾಡಿ
ಅಕ್ಕಟ ಪಾಪಿ ಕೆಡಿಸಿದನು
ಇಕ್ಕಿದ ಕಿಚ್ಚ ಇರುವೆಯ ಗೂಡಿಗೆ ಎಂದು
ವಿಕ್ರಮ ಸಿರುಮನಾಡಿದನು             ||೫೧||

ನನ್ನೊಡಹುಟ್ಟಿದ ಬೆಲಗೂರ ಭೈರನು
ತನ್ನ ಪ್ರಾಣಕೆ ಆಶೆಮಾಡಿ
ಮುನ್ನಲಿ ಕೊಲೆ ಹಗೆ ನರಸಿಂಹನ ಕಂಡ
ಇನ್ನು ನಿಶ್ಚೈಸೆಲೊ ಸಿರಮ              ||೫೨||

ಎಂದಿದ್ದರೆ ಸಾವು ತಪ್ಪದು ಸಿರುಮೇಂದ್ರ
ಇಂದಪಕೀರ್ತಿಯ ಮಾಡಿ
ಹಂದೆತನದಿ ಬೆಲಗೂರ ಭೈರಯ್ಯನು ನಮ್ಮ
ಕೊಂದು ಹೋದನು ಸ್ವಾಮಿದ್ರೋಹಿ  ||೫೩||

ಹೋದವರೆಲ್ಲ ಹೋಗಲಿ ಈ ಊರೊಳು
ಕಾದಿ ಸಾಯಲು ಬೇಕು ಸಿರುಮ
ಬೋಧಿಸಿದಳು ಗಂಡಗೆ ಚಿಕ್ಕರಸಿಯು
ಮೇದಿನಿಯೊಳು ಕೀರ್ತಿವನಿತೆ        ||೫೪||

ಹೆಂಡತಿಯ ಮಾತ ಕೇಳುತ ಸಿರುಮೇಂದ್ರ
ಮಂಡೆಯ ವೀರ ಜಡೆಹೆಣಿಸಿ
ಮಂಡಲದೊಳು ದಿವ್ಯಪರಿಮಳವನು ನೆರೆ
ಗಂಡು ಅಂಗಕೆ ಲೇಪಿಸಿದ               ||೫೫||

ಜಗ ಬಿರಿದಿನ ಜನರೊಳು ಶೃಂಗಾರಕೆ
ಮಿಗೆ ಬಿರಿದಾಂಕ ಬಿಂಕದಲಿ
ಪಗಲೊಡೆಯನ ಬಗೆಬಗೆಯಂದದೊಳಾಗ
ನಗೆಮುಖ ಸಿರುಮ ಶೌರ್ಯದಲಿ[3]   ||೫೬||

ಚಿನ್ನಗಾವಿಯನುಟ್ಟು ಹರುಷದಿ ಸಿರುಮೇಂದ್ರ
ರನ್ನ ಗೊಂಡೇವ ಇಳಿಬಿಟ್ಟ
ಚೆನ್ನಗೊಂಡೆಯ ದಾರ ಮುತ್ತಿನ ಸರಗಳ
ಚೆನ್ನಿಗ ಸಿರುಮ ಕಟ್ಟಿದನು               ||೫೭||

ಉತ್ತಮ ನಾಯಕ ಸಿರುಮನಾಯತವಾಗಿ
ಚಿತ್ತದೊಲ್ಲಭೆಯು ಚಿಕ್ಕಮ್ಮ
ಇತ್ತಂಡ ನಿಂದು ನಿಲುವುಗನ್ನಡಿಯನು
ಅರ್ತಿಯಿಂದಲಿ ನೋಡಿದರು           ||೫೮||

ರಮಣ ರಮಣರ ರೂಪು ದರ್ಪಣದೊಳಿದಿರಿಟ್ಟು
ಸಮಗಾಣಿಸಲು ಸಾಹ[ಸ]ದಿ
ದ್ಯುಮಣಿ ವಿಕ್ರಮ ಜಯ ಜಯ ಎಂದು ಸಿರುಮನು
ಕ್ರಮದಿ ಕೈದುವ ಝಳಪಿಸಿದ           ||೫೯||

ಬಂದು ಕುಲದೈವ ಸೌರಾಷ್ಟ್ರಸೋಮೇಶಂಗೆ
ವಂದಿಸಿ ಕಾಣಿಕೆಯಿಕ್ಕಿ
ತಂದೆ ತಾಯಾಗಿ ಮುನ್ನಲಿ ಸಲಹಿದೆ ಸ್ವಾಮಿ
ಇಂದು ಮುಕ್ತಿಯನ್ಯೆದಿಸೆಂದ           ||೬೦||

ಅಂಗನೆ ಸಹಿತ ಸಿರುಮ ಸೋಮೇಶಗೆ
ಹಿಂಗದೆರಗಿ ಬೇಡಿಕೊಂಡ
ಜಂಗುಳಿ ದೈವದ ಗಂಡ ವೀರೇಶ್ವರ
ಲಿಂಗನ ಆಲಯಕೆ ಬಂದ                ||೬೧||

ಹಿಡಿಹೊನ್ನ ಕಾಣಿಕೆಯಿಕ್ಕಿ ವೀರೇಶಗೆ
ಹಿಡಿವ ಕಠಾರಿಯೊಪ್ಪಿಸಿದ
ಉಡಿಸಿದ ನಡುವಿಗೆ ಪಟ್ಟೆಯ ಕಾಸೆಯ
ಮೃಡಸುತ ವೀರಭದ್ರನಿಗೆ               ||೬೨||

ಗಂಡ ಹಂಡಿರ ಮನ ಒಂದಾಗಿಯೆ ಬೇಡಿ
ಕೊಂಡರು ವೀರ [4]ಸ್ವರ್ಗವನು[5]
ಇಂಡೆ ಪ್ರಸಾದವ ಕೈಕೊಂಡು ಹೊರಟ ಪ್ರ
ಚಂಡ ಸಿರುಮ ಮನ್ನೆಯನು            ||೬೩||

ಆಶೆಯಿಲ್ಲದ ನಿರಾಶೆಮಠಕೆ ಬಂದ
ಭಾಸುರ ಕೋಟಿಪ್ರಕಾಶ
ಈಶನ ಲಾಂಛನ ಮಹಾಂತಿನಂಘ್ರಿಗೆ
ಆ ಸಮಯದಲೆರಗಿದನು                ||೬೪||

ಕಟ್ಟಾಣಿ ಮುತ್ತು ಮಾಣಿಕ ವಜ್ರ ನೀಲದ
ಕಟ್ಟಣಿಲ್ಲದೆ ಜಾಳಿಗೆಯ
ಪಟ್ಟೆಯ ಕಂಥೆ ಮಹಂತಿಗೆ ಶರಣೆಂದು
ಕೊಟ್ಟು ಕಾಣಿಗೆ ಸಿರುಮೇಂದ್ರ          ||೬೫||

ಪರಮಪಾವನ ಪುಣ್ಯಪುರುಷ ವಿಭೂತಿಯ
ಚರಲಿಂಗ ವರ ಕರುಣದಲಿ
ಸಿರುಮನ ದುರಿತ ದುರಕ್ಷರ ತೊಡೆವೊಲು
ಹರಸಿ ಭಸಿತವ ಧರಿಸಿದರು ||೬೬||

ಕಂಡೆವು ಸಿರುಮೇಂದ್ರ ನಿನ್ನ ಕೈಯಲಿ ಪೂಜೆ
ಗೊಂಡೆವು ಕೆಲ ಕಾಲದಲಿ
ಕೊಂಡೊಯ್ವೆವು ಜಂಗಮವೇಷದಿ ನಿನ್ನ
ಮಂಡಲದೊಳು ಪೊಸತೆನಿಸಿ          ||೬೭||

ಕೇಡುಬುದ್ಧಿಗಳನೆಣಸದಿರಿ ಹಾಸ್ಯವ
ಮಾಡುವರತಿ ಜಗದೊಳಗೆ
ಬೇಡ ನೀ ಕೇಳು ಜಂಗಮವೇಷದಿ ನಿನ್ನ
ಕೂಡಿಕೊಂಡೊಯ್ವೆವೇಳೆನಲು         ||೬೮||

ಯಾನ ಮಾಡಲು ನರಸಿಂಹನೋಡಿಸಿ ನಮ್ಮ
ಮಾನಭಂಗಿತರ ಮಾಡಿ ಹಿಡಿವ
ನಾನಾ ಬಂಧನಗಳಲಿ ಕಟ್ಟಿ ಬಾಧಿಸಿ ಮದ
ದಾನೆಗಳಲ್ಲಿ ಕೊಲಿಸುವನು             ||೬೯||

ಹೀಗೆಂದು ಹೇಳೆ ಹಾಗಹುದೆಂದು ಮಹಂತು
ಭೋಗಿತ ಫಲ ತಪ್ಪದೆನುತ
ಹೋಗೆಂದು ಕಳುಹಲು ಸಿರುಮನು ಸತಿಸಹ
ವಾಗಿ ಬಂದರು ಅರಮನೆಗೆ ||೭೦||

ಬಂದು ಬಣ್ಣದ ಚಾವಡಿಯೊಳು ಸಿರುಮೇಂದ್ರ
ನಿಂದು ಸಂದೇಹವಿಲ್ಲದಿರಲು
ಹಿಂದು ಮುಂದೆಡಬಲದೊಳಿ[ದ್ದ]ವರನು
ಬಂಧುಜನರ ಮುಖ ನೋಡಿ           ||೭೧||

ಅಣ್ಣನ ಮನದ ನಿಶ್ವಯವರಿತು ಮ
ಲ್ಲಣ್ಣ ಕರವ ಮುಗಿದೊಡನೆ
ಹೆಣ್ಣು ಗಂಡೊಂದು ಕೋಟೆಯ ಕೆಡಿಸದೆ ಸಿರು-
ಮಣ್ಣ ಕಾಬೆನೊ ನರಸಿಂಹನ           ||೭೨||

ನಮ್ಮ ಕೈಸೆರೆಯ ಕಪ್ಪವ ಕೊಟ್ಟು ಬದುಕಣ್ಣ
ಸುಮ್ಮನೆ ಸಾಯಲೇಕಣ್ಣ
ತಮ್ಮ ಮಲ್ಲಣ್ಣ ಹೀಗೆನಲು ಸಿರುಮ ಕೇಳಿ
ಕೆಮ್ಮೀಸೆ ಮುರಿದು ಕೋಪದಲಿ         ||೭೩||

ಕಂಗೆಟ್ಟು ಹೆಂಬೇಡಿ ಕಾಣಹೇಳಿದ ನರ-
ಸಿಂಗನ ನಮ್ಮ ಮಲ್ಲಣ್ಣ
ಹೆಂಗೂಸು ಮುಖ ನೋಡಿವನೆಂದು ಕೋಪದಿ
ಭಂಗಿಸಿದನು ಸಿರುಮೇಂದ್ರ             ||೭೪||

ಬದುಕಬಲ್ಲವರೆಲ್ಲ ಬಿಟ್ಟು ಹೋಗಿರೊ ನಮ್ಮ
ಮುದದಿಂದ ಪಣೆಯ ಅಕ್ಕರವ
ವಿಧಿ ಬರದನೊ ನರಸಿಂಹ ಬರದನೊಯೆಂದು
ಹೆದರಲೇಕೆಂದ ಸಿರುಮೇಂದ್ರ          ||೭೫||

ಹಡಪದ ಹಲಗನು ಒಡಗೂಡಿ ಊಳಿಗದ
ಕಡುಗಲಿ ಭಟರೊಂದಾಗಿ
ಒಡೆಯ ಸಿರುಮ ಕೇಳೋ ಕಡಲೊಳು ಕಲ್ಪಿತ
ಪೊಡವಿಯೊಳಗೆ ಬಿಡುವದೆ                        ||೭೬||

ಎಷ್ಟು ದಿನವು ಬಾಳೆ ಕಾಯವಳಿದು ಕೀರ್ತಿ
ಸೃಷ್ಟಿಯೊಳಿಹುದು ಕೇಳಯ್ಯ
ಪಟ್ಟದ ಕುಮಾರ ಕಾಚಯ್ಯ ಸೋಮಣ್ಣ
ದಿಟ್ಟನು ಮಗ ಮಲ್ಲ ನುಡಿದ            ||೭೭|

ಅಗ್ಗಳೆ ಅಳಿಯ ತಿಪ್ಪಣ ನಂಬಿನಾಯಕ
ಹೆಗ್ಗೆರೆ ನಾಗೊಂಡ ಸಹಿತ
ಉಗ್ರದ ಸಿರುಮ ನಿನ್ನೊಡನೆಲ್ಲರು ವೀರ
ಸ್ವರ್ಗ[6] ವೈವೆವೆಂದಾರಾಗ[7]                      ||೭೮||

ಮೆಚ್ಚಿದ ಮಾತಿಗೆ ನಿಶ್ಚಯ ಮನದಲ್ಲಿ
ಉತ್ಸಾಹದಿ ಸಿರುಮೇಂದ್ರ
ಪಚ್ಚೆ ಕಡಗ ಪದಕಗಳ ಕೊಡಿಸಿದ
ಹೆಚ್ಚಿನ ವೀರಭಟರಿಗೆ                     ||೭೯||

ಹೆಬ್ಬುಲಿ ಕರಿಸಿಂಹದ ಗಂಡವಭೇರುಂಡ
ಅಬ್ಬರದಲಿ ಸಿರುಮೇಂದ್ರ
ಹಬ್ಬದ ಕುರಿ ನರಸಿಂಗನ ದಂಡನು
ಹೆಬ್ಬಾಗಿಲೊಳು ತರಿ ಎಂದ ||೮೦||

ಬರಸಿಡಿಲು ತರಿವಾಯುಧ ಹರಿಗೆಯ
ಮರೆಗೊಂಡು ನಡೆದು ಬಂದವರು
ಉರ್ವಿಗುನ್ನತ ಬೂದಿಹಾಳ ಬಾಗಿಲುಗಳ
ತೆರಸಿ ನಿಂದೆಲ್ಲ ಕಾದಿದರು              ||೮೧||

ಇತ್ತಲಿ ಬೇಗ ಈಶ್ವರಿನಾಯಕನ ಕೂಡೆ
ಮಾತಾಡಿ ಬೆಲಗೂರ ಭೈರ
ಭೀತಿಲಿ ಸಾಷ್ಟಾಂಗವೆರಗಿದ ರಾಯಗೆ
ಅತ್ತ ಕೈಮುಗಿದು ಬಾಯೊಡನೆ        ||೮೨||

ಎನ್ನ ಭಾವನ ಗೊಲ್ಲ ಸಿರುಮನ ಬಿಟ್ಟೀಗ
ನಿನ್ನ ಪಾದವೆ ಗತಿಯೆನುತ
ಭಿನ್ನವಿಲ್ಲದೆ ಕಂಡೆ ರಾಯ ನಿನಗೆ ನಾನು
ಕನ್ನಡಿಸುವೆ ಕಂಡ ಸ್ಥಿತಿಯ              ||೮೩||

ಕೇಳಯ್ಯ ನರಸಿಂಹ ಬೂದಿಹಾಳ ಸಿರುಮನ
ಆಳು ಜಾಳಿಸಿಹೋಯಿತೆಲ್ಲ
ಕೋಳುಗೊಂಬುದಕಿದು ವ್ಯಾಳೆವೆನುತಲಿ
ಹೇಳಿದ ಬೆಲಗೂರ ಭೈರ                ||೮೪||[1] ಅಶ್ವಿ (ಶಿ,).

[2] ಅಶ್ವಿ (ಶಿ,).

[3] ೭ “ಹ” ಪ್ರತಿಯಲ್ಲಿ ೫೬, ೫೭ನೆಯ ಪದ್ಯಗಳು ಹಿಂದುಮುಂದಾಗಿವೆ (ಸಂ.)

[4] ೮-೮ ಶೈವವನು (ಹ).

[5] ೮-೮ ಶೈವವನು (ಹ).

[6] ೯-೯ ವೆ ದೇವೇಂದ್ರ ರಮರು (ಶಿ, ಹ).

[7] ೯-೯ ವೆ ದೇವೇಂದ್ರ ರಮರು (ಶಿ, ಹ).