ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಮಹತ್ತರವಾದದ್ದು. ಸ್ವತಃ ಕಲಾವಿದರಾಗಿದ್ದ ಮೈಸೂರಿನ ಒಡೆಯರೆಲ್ಲರೂ ಕಲೆಗೆ ಪ್ರೋತ್ಸಾಹ ನೀಡಿದವರು. ಹೀಗಾಗಿ ನೂರಾರು ಪ್ರತಿಭಾನ್ವಿತ ಕಲಾವಿದರು ದೇಶದ ವಿವಿಧ ಭಾಗಗಳಿಂದ ಬಂದು ಇಲ್ಲೇ ನೆಲೆಸಿ ತಮ್ಮ ಪ್ರೌಢಿಮೆಯನ್ನು ಪ್ರಕಾಶಿಸಿ ಪ್ರಖ್ಯಾತಿ ಗಳಿಸಿದರು. ಅಂತಹವರಲ್ಲಿ ಹಲವರು ಇಂದು ಇಮ್ಮ ಜತೆ ಇಲ್ಲ. ಆದರೂ, ಅವರ ಸಾಧನೆ, ಸಿದ್ಧಿಗಳ ಕೀರ್ತಿ ಚಿರಂತನವಾಗಿದೆ. ಹಾಗೆ ಕಲಾಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿದಿರುವ ದೊಡ್ಡ ಹೆಸರುಗಳಲ್ಲೊಂದೆಂದರೆ, ಗೋಟು ವಾದ್ಯ ಪ್ರವೀಣ ವಿದ್ವಾನ್‌ ಕೆ.ಎಸ್‌. ನಾರಾಯಣ ಅಯ್ಯಂಗಾರ್ ಅವರದು.

ಕೆ.ಎಸ್‌. ನಾರಾಯಣ ಅಯ್ಯಂಗಾರ್ ಇವರು ಮೈಸೂರು ವಾಸುದೇವಾಚಾರ್ಯ, ಟಿ. ಚೌಡಯ್ಯ, ಬಿಡಾರಂ ಕೃಷ್ಣಪ್ಪ ಮುಂಥಾದ ಸಂಗೀತ ಕ್ಷೇತ್ರದ ದಿಗ್ಗಜಗಳ ಸಮಕಾಲೀನರು. ಇವರು ೧೯೨೮ರಲ್ಲಿ ಮೈಸೂರಿಗೆ ಬಂದು ನೆಲೆಸಿ ನಾಲ್ವಡಿ ಕೃಷ್ಣರಾಜ ಒಡೆಯರ ಮೆಚ್ಚುಗೆ ಗಳಿಸಿ ಆಸ್ಥಾನ ವಿದ್ವಾಂಸರಾದವರು. ಇವರು ೨೫.೧.೧೯೦೩ರಂದು ದಕ್ಷಿಣ ಭಾರತದ ಕನ್ಯಾಕುಮಾರಿ ಜಿಲ್ಲೆಯ ತಿರುನೆಲ್‌ವೇಲಿಯ ಬಳಿಯ ಭೂತ ಪಾಂಡಿ ಎಂಬಲ್ಲಿ ಜನಿಸಿದರಾದರು ತಮ್ಮ ಜೀವನದ ಪ್ರಮುಖ ಭಾಗವನ್ನು ಮೈಸೂರಿನಲ್ಲೇ ಕಳೆದವರು.

ಶ್ರೀನಿವಾಸ ಅಯ್ಯಂಗಾರ್ ಮತ್ತು ಶ್ರೀವರಮಂಗೈ ದಂಪತಿಗಳ ಸುಪುತ್ರರಾಗಿ ಜನಿಸಿದ ನಾರಾಯಣ ಅಯ್ಯಂಗಾರ್ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ಕೊಡಗನಲ್ಲೂರು ಸುಬ್ಬಯ್ಯ ಭಾಗವತರಿಂದ ಸಂಗೀತ ಶಿಕ್ಷಣ ಪಡೆಯಲಾರಂಭಿಸಿದರು. ಸುಬ್ಬಯ್ಯ ಭಾಗವತರು ಗೋಟುವಾದ್ಯವನ್ನು ನುಡಿಸುತ್ತಿದ್ದರು. ಹೀಗಾಗಿ ನಾರಾಯಣ ಅಯ್ಯಂಗಾರ್ ಅವರಿಗೂ ಆ ವಾದ್ಯದ ಬಗ್ಗೆ ಆಸಕ್ತಿ ಮೂಡಿತು. ಮುಂದೆ ಅಯ್ಯಂಗಾರರು ಗೋಟುವಾದ್ಯ ಪ್ರವೀಣರಾಗಿದ್ದ ಸಖ ರಾಮರಾವ್‌ ಅವರಿಂದ ಗೋಟು ವಾದ್ಯದಲ್ಲಿ ಉನ್ನತ ಶಿಕ್ಷಣ ಪಡೆದರು. ದಿನಕ್ಕೆ ಕನಿಷ್ಟ ೧೮ ರಿಂದ ೨೦ ಗಂಟೆಗಳ ಕಾಲವೂ ಗೋಟುವಾದ್ಯಾಭ್ಯಾಸದಲ್ಲಿ ನಿರತರಾಗಿರುತ್ತಿದ್ದುದರಿಂದ ಇವರು ಅತಿ ಕಡಿಮೆ ಅವಧಿಯಲ್ಲೆ ಈ ವಾದ್ಯದ ಮೇಲೆ ಹೆಚ್ಚು ಪ್ರಭುತ್ವ ಸಾಧಿಸಿದರು.

ಇವರು ತಮ್ಮ ೨೦ನೆಯ ವಯಸ್ಸಿನಲ್ಲೆ ಪ್ರಥಮ ಕಚೇರಿಯನ್ನು ನೀಡಿದರು. ಮೊದಲು ತಿರುವಾಂಕೂರಿನ ಆಸ್ಥಾನಕ್ಕೂ ನಂತರ ಮೈಸೂರಿನ ಆಸ್ಥಾನಕ್ಕೂ ಇವರಿಗೆ ಆಹ್ವಾನ ದೊರೆಯಿತು. ಜೊತೆಗೆ ಇವರು ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿಗಳನ್ನು ನೀಡಿ ಜನಮನ್ನಣೆ ಗಳಿಸಿದರು. ೧೯೨೭ರಲ್ಲಿ ಮದರಾಸಿನಲ್ಲಿ ನಡೆದ ೪೨ನೆಯ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದಲ್ಲಿ, ೧೯೩೮ರಲ್ಲಿ ಕಲ್ಕತ್ತಾದಲ್ಲಿ ನಡೆದ ಶಾಸ್ತ್ರೀಯ ಕಾಂಗ್ರೆಸ್‌ ಅಧಿವೇಶನದಲ್ಲಿ, ೧೯೩೮ರಲ್ಲಿ ಕಲ್ಕತ್ತಾದಲ್ಲಿ ನಡೆದ ಶಾಸ್ತ್ರೀಯ ಸಂಗೀತ ಸಮ್ಮೇಳನದಲ್ಲಿ, ತಿರುವಾಂಕೂರು ಮತ್ತು ಮೈಸೂರಿನ ನವರಾತ್ರಿ ಉತ್ಸವಗಳಲ್ಲಿ ಹೀಗೆ ಎಲ್ಲೆಡೆ ಇವರು ನುಡಿಸಿ ಖ್ಯಾತಿ ಗಳಿಸಿದ ಕಲಾವಿದರೆನಿಸಿದರು.

ಆಕಾಶವಾಣಿಯ ಆರಂಭದಿಂದಲೇ ಅಯ್ಯಂಗಾರ್ಯರು ಆಕಾಶವಾಣಿಯ ಉನ್ನತ ದರ್ಜೆ ಕಲಾವಿದರಾಗಿದ್ದರು. ಆಕಾಶವಾಣಿಯ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೈದರಾಬಾದಿನ ನಿಜಾಮ, ಜೈಪುರದ ಮಹಾರಾಜ, ಕೊಚ್ಚಿ, ಬಿಹಾರ್ ಮತ್ತು ಗ್ವಾಲಿಯಾರ್ ನ ರಾಜರುಗಳು ಇವರ ಅಭಿಮಾನಿಗಳಾಗಿದ್ದರು. ಅದೇ ರೀತಿ ಮಹಾತ್ಮಗಾಂಧಿ, ಜವಾಹರಲಾಲ್‌ ನೆಹರೂ, ಸರೋಜಿನಿ ನಾಯ್ಡು, ರವೀಂದ್ರನಾಥ್ ಠಾಗೂರ್ ಮುಂತಾದವರು ಕೂಡಾ ಇವರ ಕಚೇರಿಯನ್ನು ಸವಿದು ಪ್ರಶಂಸಿಸಿದ್ದಾರೆ. ಇವರ ಸಮಕಾಲೀನರಾದ ಹರಿಕೇಶನಲ್ಲೂರ ಮುತ್ತಯ್ಯ ಭಾಗವತರು, ಮೈಸೂರು ವಾಸುದೇವಾಚಾರ್, ವೀಣಾ ಧನಮ್ಮಾಳ್‌, ಅರೈಕುಡಿ ರಾಮಾನುಜ ಅಯ್ಯಂಗಾರ್ ಮುಂತಾದವರು ಇವರ ಬಗ್ಗೆ ಅಪಾರ ಗೌರವ ಹೊಂದಿದ್ದರು.

ಗೋಟುವಾದ್ಯಕ್ಕೆ ಉತ್ತರ ಭಾರತದ ಕಡೆ ವಿಚಿತ್ರ ವೀಣಾ ಎಂದು ಕರೆಯುತ್ತಾರೆ. ಹದಿನೇಳನೆಯ ಶತಮಾನದ ರಘುನಾಥ ನಾಯಕನ ಕಾಲದಲ್ಲಿ ರೂಪುಗೊಂಡ ವಾದ್ಯ ಈ ಗೋಟುವಾದ್ಯ. ರಘುನಾಥ ನಾಯಕ ವಿರಚಿತ ಶೃಂಗಾರ ಸಾವಿತ್ರಿ ತೆಲುಗು ಕಾವ್ಯದಲ್ಲೂ ಈ ವಾದ್ಯದ ಉಲ್ಲೇಖವಿದೆ ಎಂಬುದು ಸಂಗೀತ ತಜ್ಞರ ಅಂಬೋಣ. ಇದು ಒಂದು ಮೆಟ್ಟಿಲುಗಳಿಲ್ಲದ ವೀಣೆಯಾಗಿದ್ದು, ಬಲಗೈಯಲ್ಲಿ ತಂತಿ ಮಿಡಿಯುತ್ತ ಎಡಗೈಯಲ್ಲಿ ಮರದ ಗೋಟಿನಿಂದ ದಂಡಿಯ ಮೇಲೆ ಸ್ವರೋತ್ಪತ್ತಿ ಮಾಡಲಾಗುತ್ತದೆ. ಇದರಲ್ಲಿ ಮೆಟ್ಟಿಲುಗಳಿಲ್ಲದಿರುವುದರಿಂದ ನಾದೋತ್ಪತ್ತಿ ಮಾಡಲು ಹೆಚ್ಚಿದ ಸಾಧನೆ ಬೇಕಾಗುತ್ತದೆ. ಮೈಸೂರು ಮಹಾರಾಜರ ಪ್ರೋತ್ಸಾಹದಿಂದ ಹದಿನೈದು ಇಂಚುಗಳ ವ್ಯಾಸವುಳ್ಳ ಬುರುಡೆ ಹೊಂದಿರುವ ಗೋಟುವಾದ್ಯಕ್ಕೆ ಮಾಮೂಲಿ ಏಳು ತಂತಿಗಳಲ್ಲದೆ ಹದಿಮೂರು ಅನುರಣನ ತಂತಿಗಳನ್ನು ಸೇರಿಸಿ ನಾರಾಯಣ ಅಯ್ಯಂಗಾರರು ಈ ವಾದ್ಯಕ್ಕೆ ವಿಶೇಷ ಶೋಭೆ ಬರುವಂತೆ ಮಾಡಿದ್ದರು. ಇಂತಹ ವಿಶೇಷ ವಾದ್ಯದಲ್ಲಿ ಅಪಾರ ಸಾಧನೆ ಮಾಡಿ ಅದರ ಮೇಲೆ ಪ್ರಭುತ್ವ ಗಳಿಸಿ ಆ ವಾದ್ಯಕ್ಕೆ ವಿಶ್ವದಲ್ಲೇ ಒಂದು ಸ್ಥಾನ ಕಲ್ಪಿಸಿಕೊಟ್ಟವರಲ್ಲಿ ನಾರಾಯಣ ಅಯ್ಯಂಗಾರರು ಪ್ರಮುಖರು.

ತಾವು ಗೋಟುವಾದ್ಯ ಸಾಮ್ರಾಟರಾಗಿ ಮೆರೆದುದೇ ಅಲ್ಲದೆ ತಮ್ಮ ಮುಂದಿನ ಪೀಳಿಗೆಯನ್ನು ಅವರು ಸೃಷ್ಟಿಸಿದರು. ಅವರ ಪುತ್ರ ವಿದ್ವಾನ್‌ ಎನ್‌.ನರಸಿಂಹನ್‌ ಅಪ್ರತಿಮ ಗೋಟುವಾದ್ಯ ಪ್ರವೀಣರು. ನಾರಾಯಣ ಅಯ್ಯಂಗಾರರ ಮೊಮ್ಮಗ ಅಂದರೆ ಎನ್‌. ನರಸಿಂಹನ್‌ ಅವರ ಪುತ್ರ ರವಿಕಿರಣ್‌ ತಮ್ಮ ತಂದೆ ಹಾಗೂ ತಾತನ ಹೆಸರನ್ನು ಅಜರಾಮರಗೊಳಿಸುತ್ತಿದ್ದಾರೆ.

ಗೋಟುವಾದ್ಯ ಪ್ರವೀಣ ಶ್ರೀ ನಾರಾಯಣ ಅಯ್ಯಂಗಾರ್ಯರಿಗೆ ಗೋಟುವಾದ್ಯ ಗಾನ ಶಿಖಾಮಣಿ, ಗೋಟುವಾದ್ಯ  ಸಾಮ್ರಾಟ, ನಾದಬ್ರಹ್ಮ ವಿದ್ಯಾವಾರಿಧಿ, ಗೋಟುವಾದ್ಯ ಕಲಾನಿಧಿ ಮುಂತಾದ ಬಿರುದುಗಳು ಲಭಿಸಿದ್ದವು. ಭಾರತದಾದ್ಯಂತ ಪ್ರವಾಸ ಮಾಡಿ ಸಂಗೀತ ಪ್ರಸಾರ ಮಾಡಿರುವ ಇವರು ಬರ್ಮಾ, ಮಲೇಷಿಯಾ, ಸಿಂಗಾಪುರ್, ಶ್ರೀಲಂಕಾ ಮೊದಲಾದ ದೇಶಗಳಲ್ಲೂ ಕಚೇರಿ ನಡೆಸಿ ರಸಿಕರ ಮನಸೆಳೆದಿದ್ದಾರೆ. ಇವರ ವಿಸ್ತಾರವಾದ ರಾಗಾಲಾಪನಾಕ್ರಮದಲ್ಲಿ ಭಾರೀ ಭಾವತೀವ್ರತೆ ಇರುತ್ತಿತ್ತೆಂದು ಹಿರಿಯ ವಿದ್ವಾಂಸರು ಹೇಳುತ್ತಿದ್ದರು. ಛಾಯಾಚಿತ್ರಗ್ರಹಣ, ತೈಲ ಚಿತ್ರರಚನೆ ಹಾಗೂ ಜ್ಯೋತಿಶ್ಶಾಸ್ತ್ರ ಇವರ ಇತರ ಹವ್ಯಾಸಗಳಾಗಿದ್ದವು.

ಇವರ ಗೋಟುವಾದ್ಯ ನುಡಿಸಾಣಿಕೆಯ ಕ್ರಮದಲ್ಲಿ ಬಹುರೂಪಿ ಕೌಶಲ್ಯಗಳು ಅಡಕಗೊಂಡಿರುತ್ತಿದ್ದವು. ಶಾಸ್ತ್ರೀಯತೆಯ ಜತೆಗೆ ನಾದದೊಂದಿಗೆ ಒಂದು ರೀತಿಯ ವಿದ್ಯುತ್‌ ಸಂಚಾರವಾದಂತೆ ಕೇಳುಗರಿಗೆ ಭಾಸವಾಗುತ್ತಿತ್ತು. ಆದರೆ ವಿನಿಕೆ ಅಷ್ಟೇ ಗಾಂಭೀರ್ಯದಿಂದಲೂ ಕೂಡಿರುತ್ತಿತ್ತು. ಕೇಳುಗರನ್ನು ದೇಶ, ಭಾಷೆ, ಗಡಿಗಳ ಬೇಲಿಗಳಿಲ್ಲದಂತೆ ಹೊಸಲೋಕಕ್ಕೆ ಕರೆದೊಯ್ಯುವ ಶಕ್ತಿ ಇವರ ಗೋಟುವಾದ್ಯದ ನಾದ ಪ್ರವಾಹಕ್ಕಿತ್ತು. ನಾರಾಯಣ ಅಯ್ಯಂಗಾರ್ಯರ ನುಡಿಸಾಣಿಕಾ ತಂತ್ರ ಹಾಗೂ ಶೈಲಿಯಿಂದ ಪ್ರೇರಿತರಾದ ಗೋಟುವಾದ್ಯ ಕಲಾವಿದರ ಪೈಕಿ ಮನ್ನಾರ ಗುಡಿ ಸಾವಿತ್ರಿ ಅಮ್ಮಾಳ್‌ ಮತ್ತು ಮೈಸೂರಿನ ಎಂ.ವಿ. ವರಾಹ ಸ್ವಾಮಿ ಪ್ರಮುಖರು.

ನಾರಾಯಣ ಅಯ್ಯಂಗಾರ್ಯರು ಓರ್ವ ನಾದ ಯೋಗಿ. ಕಲೆಯ ಮೇಲೆ ಮತ್ತು ವಾದ್ಯದ ಮೇಲೆ ಪ್ರಭುತ್ವ ಪಡೆಯಲು ಉತ್ತಮ ಗುರುವಿನ ಮಾರ್ಗದರ್ಶನದ ಜತೆಗೆ ಅಪಾರ ಪ್ರತಿಭೆ, ಪರಿಶ್ರಮ ಎರಡೂ ಅವಶ್ಯಕ ಎಂದು ಅವರು ನಂಬಿದ್ದರು. ಅಷ್ಟೇ ಅಲ್ಲ ಅಪಾರ ಸಹನೆ, ಅಭ್ಯಾಸ ಮತ್ತು ಗುರು ಹಾಗೂ ಕಲೆಯ ಮೇಲೆ ಭಕ್ತಿ ಇರಬೇಕಾದದ್ದು ಮುಖ್ಯ ಎಂಬುದೂ ಅವರ ಅಭಿಪ್ರಾಯವಾಗಿತ್ತು. ಆದ್ದರಿಂದಲೇ ಅವರು ಅವರ ಕ್ಷೇತ್ರದಲ್ಲಿ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು.

ಶ್ರೀ ನಾರಾಯಣ ಅಯ್ಯಂಗಾರ್ಯರು ಆಕಾಶವಾಣಿಯಲ್ಲಿ ಒಂದು ವಾದನ ಕಚೇರಿಯನ್ನು ಮುಗಿಸಿದ ಸ್ವಲ್ಪ ಹೊತ್ತಿನಲ್ಲಿಯೇ ದಿನಾಂಕ ೧೧.೧.೧೯೫೯ರಂದು ವಿಧಿವಶರಾದರು. ಆದರೆ ಅವರ ವಿನಿಕೆಯ ನಾದ ಅದನ್ನು ಕೇಳಿದವರ ಕಿವಿಯಲ್ಲಿ ಇಂದೂ ಜುಯ್‌ಗುಟ್ಟುತ್ತಲೇ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.