ಅಯ್ಯಾ ಕನಕ ನಿಜವಾಗಿಯೂ ನೀ-
ನೊಂದು ಅಪ್ಪಟ ಚಿನ್ನ, ಈ ಹಿತ್ತಾಳೆಗಳ
ನಡುವೆ – ಎಂದು ನನ್ನನ್ನು ಹೊಗಳಿದಿರಿ
ನನ್ನ ಕೈಗೊ ಒಂದು ತಂಬೂರಿ ನೀಡಿದಿರಿ
ನಾನೊರೆದ ಕೀರ್ತನೆಗಳನ್ನು ಮೆಚ್ಚಿ
ನಿಮ್ಮ ಶಿಷ್ಯರ ಎದುರು ಬೆನ್ನು ತಟ್ಟಿದಿರಿ.


ನನ್ನ ಗ್ರಾಮೀಣ ಪರಿಸರದ ನೆಲ ನೀರು ಗಾಳಿ-
ಬೆಳಕುಗಳಲ್ಲಿ, ಹಟ್ಟಿಯೊಳಗಿದ್ದ ದನ
ಕರು ಕುರಿ ಹಿಂಡುಗಳ ಸಹವಾಸದಲ್ಲಿ
ಬೆಳೆದ ವಾಸನೆಗಳನ್ನು ದಿನವೂ ತುಂಗ-
ಭದ್ರೆಯ ಸೆಳವಿನಲ್ಲಿ ತೊಳೆದು, ನಾಮ
ಮುದ್ರೆ ಗಂಧ ಧೂಪ ದೀಪಗಳಲ್ಲಿ
ನಿಮ್ಮಂತೆಯೇ ನನ್ನನ್ನು ಎರಕ ಹೊಯ್ಯುತ್ತ
ಕಾಗಿನೆಲೆಯಾದಿಕೇಶವನ ನೆನಹಲ್ಲಿ
ನಿಲ್ಲಿಸಿದಿರಿ ; ಹರಿದಾಸರ ಜತೆಗೆ ಸಲ್ಲಿಸಿದಿರಿ.


ನಿಜಕ್ಕೂ ದೊಡ್ಡವರು ನೀವು. ಈಗ ನೋಡಿದರೆ
ಈ ನಿಮ್ಮವರೆ ಯಾಕೆ ನನ್ನನ್ನು ಹೀಗೆ ತಡೆದು
ನಿಲಿಸಿದ್ದಾರೆ, ಈ ಉಡುಪಿ ಕೃಷ್ಣನ ಗುಡಿಯ
ತಲೆಬಾಗಿಲಲ್ಲಿ? ಹೇಳಿ ಗುರುಗಳೆ ಹೇಳಿ
ನಿಮ್ಮ ಶಿಷ್ಯನಲ್ಲವೆ ನಾನೂ? ನಾನೊರೆದ ಹಾಡು-
ಗಳ ಕೇಳಿ ಮೆಚ್ಚಿದ ಜನವೆ, ನನ್ನ ಕೀರ್ತನೆಯ
ಮೂಲವಿಗ್ರಹದ ಸನ್ನಿಧಿಗೆ ನಾನು ಬಾರದ ಹಾಗೆ
ತಡೆವ ಗೋಡೆಗಳಾಗಿ ನಿಂತಿದ್ದಾರೆ ಯಾತಕ್ಕೆ?


ನಾನು ಬೇಕಾಗಿದ್ದೆ ಇಷ್ಟು ದಿನ ಗೆಜ್ಜೆಯ ಕಟ್ಟಿ
ಕುಣಿಯುವುದಕ್ಕೆ, ನಿಮ್ಮನ್ನು ಹಾಡಿ ಹೊಗಳು-
ವುದಕ್ಕೆ, ಗಂಧ ತೇಯುವುದಕ್ಕೆ, ತೇರು
ಎಳೆಯುವುದಕ್ಕೆ, ನೀವು ಕಟ್ಟುವ ಗುಡಿಗೆ
ಇಟ್ಟಿಗೆಯಾಗಿ ಸವೆಯುವುದಕ್ಕೆ. ಆದರೆ ಈಗ
ನಾನು ಒಳಗೆ ಬಾರದ ಹಾಗೆ ಬಾಗಿಲಿಗೆ ಬೀಗ !


ಆಧಾರವೆಲ್ಲಿದೆ ನಿಮಗೆ, ನನ್ನ ಈ ತಲೆಬಾಗಿ-
ಲಲ್ಲಿ ಹೀಗೆ ತಡೆಯುವುದಕ್ಕೆ? ವೇದದ-
ಲ್ಲಿದೆಯೆ? ಉಪನಿಷತ್ತಿನಲ್ಲಿದೆಯೆ? ಅಥವಾ
ಭಗವದ್ಗೀತೆಯಲ್ಲಿದೆಯೆ? ‘ಸರ್ವಂ ಖಲ್ವಿದಂ
ಬ್ರಹ್ಮಾ’ ಎಂದರೇನರ್ಥ ಹೇಳಿರೊ? ‘ಸರ್ವೇ
ಜನಾಃ ಸುಖಿನೋ ಭವಂತು’ ಅನ್ನುವುದೆ ನಿಜ-
ವಾದರೆ, ಆ ‘ಜನ’ ಯಾರು? ನಾವೂ ಅದರಲ್ಲಿ
ಸೇರುತ್ತೇವೆಯೋ, ಅಥವಾ ಬರಿ ನೀವು ನೀವೇ?


ಎಲ್ಲ ಕಾಲಕ್ಕೂ ಬರಿಯ ಗೋಡೆಗಳು ನೀವು.
ಎಲ್ಲೆಲ್ಲಿ ಬೆಳಕು ಪುಟಿಯುವುದಕಸ್ಮಾತ್
ಅಲ್ಲೆಲ್ಲ ಗೋಡೆಗಳಾಗಿ ಕತ್ತಲೆಯ ಹುತ್ತ
ಕಟ್ಟುತ್ತೀರಿ. ಬೇಡ ನನಗೆ ಇಲ್ಲಿ ಪ್ರವೇಶ.
ನೀವೇ ಇರಿ, ಈ ಕತ್ತಲೆಗೆ ಮಂಗಳಾರತಿ
ಎತ್ತಿ ಬರುವ ಭಕ್ತರಿಗೆ ಪಾಚಿಗಟ್ಟುತ್ತಿ-
ರುವ ತೀರ್ಥ ಹಂಚುತ್ತ. ಇಗೊ ಹೊರಟೆ
ಗೋಡೆಗಳಿರದ ಬಟ್ಟ ಬಯಲೊಳಗೆ
ತಂಬೂರಿ ಬೆಳಕಲ್ಲಿ ದಾರಿ ಹುಡುಕುತ್ತ.