ಗಾಣವಾಡುವುದು ಗಡಿಯಾರ
ನಿಮಿಷದಿಂದ ನಿಮಿಷಕ್ಕೆ
ದಿನದಿಂದ ದಿನಕ್ಕೆ
ಮಾಸದಿಂದ ಮಾಸಕ್ಕೆ
ಯುಗಾದಿಯಿಂದ ಯುಗಾದಿಗೆ
ನಮ್ಮನ್ನರೆದು ರುಬ್ಬುತ್ತ, ಎಣ್ಣೆ ತೆಗೆಯುತ್ತ
ಯಾವುದೋ ದೀಪ ಉರಿಸಲಿಕ್ಕೆ.

ಇದು ತಿರುಗಿದಂತೆ, ಸುತ್ತಲೂ ಎಲೆಯುದುರಿ
ಮರ ಚಿಗುರುವುದು ; ಎಂಥಾ ಅನೀಮಿಯಾ
ಕೊಂಬೆಯಲ್ಲೂ ಕೂಡ ರಕ್ತ ಸಂಚಾರ !
ನರನರದ ನಕ್ಷೆಯಾಗಿದ್ದ
ಕನಿಕರದ ಬಲೆಯಾಗಿದ್ದ
ಬೋಳು ಬಾಳಿನ ಮೇಲೆ ಜೀವೋದಯ ಮಹಾಪೂರ.

ಬಾಜಾ ಬಜಂತ್ರಿಯಲಿ ಬಂತು ಮದುವೆಯ ಸುಗ್ಗಿ,
ಹುಡುಗಿ ಬೆಳೆದಳು ಹಿಗ್ಗಿ, ಹುಡುಗ ಬಂದನು ನುಗ್ಗಿ
ಇವಳ ಬಳಿಗೆ.
ಕೈ ಕೈ ಹಿಡಿದು ಕರೆದುಕೊಂಡೇ ಹೊರಟ
ಬಂದ ಚೈತ್ರದ ಚಿಗುರ ಹೊಗರ ಕೆಳಗೆ !

ಸುತ್ತ ರಣರಣ ಬಿಸಿಲು ; ತರಗೆಲೆಯ ಚಿತೆ
ಇನ್ನೂ ಉರಿಯುವುದು ನಗುವ ಚಿಗುರಿನ ಕೆಳಗೆ.
ಸೌದೆಯಂಗಡಿಯಲ್ಲಿ ಕೊಡಲಿಗೆ ಕಾದು ಬಿದ್ದಿರುವ
ಕೊರಡುಗಳ ಮೇಲೆ ತೀಡುವುದು ಕನಿಕರದ ಗಾಳಿ.
ಬಾನಲ್ಲಿ ಕಟ್ಟುವುದು ಮೋಡ, ಮಿಂಚಾಡುವುದು ಒಳಗೆ
ಇಳಿಯುವುದು ಮುಂಗಾರ ಮೊದಲ ಮಳೆ
ಕಾದು ಕಾತರಿಸಿರುವ ನೆಲದ ಬೆದೆಗೆ.
ಬಣ್ಣ ಬಣ್ಣದ ಮೋಡಿ ಬಿಚ್ಚಿರುವ ಮರಗಳ ಕೆಳಗೆ
ಕ್ಯೂ ನಿಲ್ಲುವುದು ಮಂದಿ, ಬರುವ ಬಸ್ಸಿನ
ಹಾದಿ ಕಾದುಕೊಂಡು,
‘Happy New Year’ ಹೇಳಿಕೊಂಡು
ಉರುಳಿ ಹೊರಳುವ ಗಾಲಿಯೆಣಿಸಿಕೊಂಡು
ಕಪ್ಪು ಛತ್ರಿಯ ಕೆಳಗೆ ತಲೆ ಮರೆಸಿಕೊಂಡು
ಬೇವು-ಬೆಲ್ಲದ ಸವಿಗೆ ಹೊಂದಿಕೊಂಡು
ನಿಂತೇ ಇದೆ. ಯುಗಾದಿಗಳ ಹಾದಿಯಲಿ
ನಿಂತೇ ಇದೆ. ತಲೆ ಬಾಲವಿರದ ಕ್ಯೂನಲ್ಲಿ
ಕಾಯುತ್ತಿದೆ.