ಒಂದೊಂದು ಸಲ ನನಗೂ ನಿನಗೂ ನಡುವೆ
ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ.
ಎಲ್ಲಿಂದಲೋ ಏನೊ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು
ಕೂತು, ಕೂತಲ್ಲಿಯೇ ನಮ್ಮನ್ನು ಹೂತು
ಸುತ್ತಲೂ ಗೋಡೆ ಕಟ್ಟುತ್ತವೆ.
ಎದ್ದ ಗೋಡೆಯ ತುಂಬ ಕೆಂಗಣ್ಣು ಕೆಮ್ಮೀಸೆ ;
ಮೀಸೆಯ ಕೆಳಗೆ ಸೊಟ್ಟ ಮೂತಿಯ ಕೆಟ್ಟ ಬಾಯಿ
ಉಗಿಯುತ್ತದೆ ಬೆಂಕಿ.

ಆಗ,
ನಾನೂ ನೀನೂ ಬಹುಕಾಲದಿಂದ ನೀರೆರೆದು ಬೆಳೆಸಿದ
ಹೂವಿನ ತೋಟ ಸೀದು ಹೊಗೆಯಾಡುತ್ತದೆ.
ಹೊಗೆಯಲ್ಲಿ ಉಸಿರು ಕಟ್ಟಿಕೊಂಡು
ನಾನು ಮತ್ತು ನೀನು
ಗೋಡೆಯೆರಡೂ ಬದಿಗೆ
ನರಳಿ ಹೊರಳುತ್ತೇವೆ.
ಭೋರೆಂಬ ಗಾಳಿ ಮನೆಸುತ್ತ ಊಳಿಡುತ್ತದೆ.
ಕಾರಿರುಳು ಗಪ್ಪನೆ ಕೂತು
ನಕ್ಷತ್ರಗಳ ಹಲ್ ತೆರೆದು ಗುರುಗುಟ್ಟುತ್ತದೆ.
ಕೋಳಿ ಕೂಗುವುದನ್ನು ಕೇಳುತ್ತಾ
ಗೋಡೆಯ ಆಚೆಗೆ ನೀನು
ಈಚೆಗೆ ನಾನು
ಗೋಡೆ ಕರಗುವುದನ್ನೇ ಕಾಯುತ್ತಾ
ಕೂರುತ್ತೇವೆ.