ಗೋಣಿ ಸೊಪ್ಪು ಮೃದುವಾದ ಹಾಗೂ ರಸಭರಿತ ಎಲೆ ಮತ್ತು ಕಾಂಡಗಳಿಂದ ಕೂಡಿದ ವಾರ್ಷಿಕ ಮೂಲಿಕೆ. ಹಳ್ಳಿಗಳಲ್ಲಿ ಇದರ ಬಳಕೆ ಸಾಮಾನ್ಯ. ಮಳೆಗಾಲದಲ್ಲಿ ಹೊಲ, ಗದ್ದೆ ಮತ್ತು ತೋಟಗಳಲ್ಲಿ ಸಮೃದ್ಧವಾಗಿ ಕಂಡುಬರುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಕಳೆಯಾಗಿ ಪರಿಣಮಿಸಬಲ್ಲದು. ನೀರುಗಾಲುವೆ, ಬದುಗಳಲ್ಲಿ ತಂತಾನೇ ಬೆಳೆಯುತ್ತದೆ. ಸ್ವಲ್ಪಮಟ್ಟಿಗೆ ಇತರ ಸೊಪ್ಪುಗಳಂತೆ ಇದನ್ನೂ ಬೆಳೆಸುವುದುಂಟು.

ಪೌಷ್ಟಿಕ ಗುಣಗಳು : ಗೋಣಿ ಪೌಷ್ಟಿಕ ಸೊಪ್ಪು ತರಕಾರಿ. ಅಧಿಕ ಪ್ರಮಾಣದ ಪ್ರೊಟೀನ್, ಖನಿಜ ವಸ್ತುಗಳು ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಸೊಪ್ಪು ಮತ್ತು ಕುಡಿಗಳಲ್ಲಿನ ಪೋಷಕಾಂಶಗಳು

ತೇವಾಂಶ – ೯೦.೫ ಗ್ರಾಂ
ಶರ್ಕರಪಿಷ್ಟ – ೨.೯ ಗ್ರಾಂ
ಪ್ರೊಟೀನ್ – ೨.೪ ಗ್ರಾಂ
ಖನಿಜ ಪದಾರ್ಥ – ೨.೩ ಗ್ರಾ
ನಾರು – ೧.೪ ಗ್ರಾಂ
ಕ್ಯಾಲ್ಸಿಯಂ – ೧೧೧ ಮಿ.ಗ್ರಾಂ
ರಂಜಕ – ೪೫ ಮಿ.ಗ್ರಾಂ
ಪೊಟ್ಯಾಷಿಯಂ – ೭೧೬ ಮಿ.ಗ್ರಾಂ
ರೈಬೋಫ್ಲೇವಿನ್ – ೨೯  ಮಿ. ಗ್ರಾಂ
ಸೋಡಿಯಂ – ೬೭.೨ ಗ್ರಾಂ
ಗಂಧಕ – ೬೩ ಗ್ರಾಂ
ತಾಮ್ರ – ೦.೧೯ ಗ್ರಾಂ
ಕ್ಲೋರಿನ್ – ೭೩ ಗ್ರಾಂ
ಆಕ್ಸಾಲಿಕ್ ಆಮ್ಲ – ೧.೩ ಗ್ರಾಂ
’ಎ’ ಜೀವಸತ್ವ – ೩೮೨೦ ಐಯು
ಥಯಮಿನ್ – ೦.೧೦ ಮಿ.ಗ್ರಾಂ
ಮೆಗ್ನೀಷಿಯಂ – ೧೨೦ ಮಿ.ಗ್ರಾಂ
ನಿಕೋಟಿನಿಕ್ ಆಮ್ಲ – ೭ ಮಿ.ಗ್ರಾಂ.

ಔಷಧೀಯ ಗುಣಗಳು ಗೋಣಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಸೊಪ್ಪು ಮತ್ತು ಕುಡಿಗಳಲ್ಲಿ ನಾರು ಹಾಗೂ ಲೋಳೆ ಪದಾರ್ಥಗಳಿರುವುದರಿಂದ ಮಲಬದ್ಧತೆಗೆ ಒಳ್ಳೆಯದು. ಅವುಗಳಲ್ಲಿ ಮೂತ್ರವರ್ಧಕ ಗುಣಗಳಿವೆ. ಈ ಸೊಪ್ಪನ್ನು ತಿನ್ನುತ್ತಿದ್ದಲ್ಲಿ ಕಣ್ಣುಗಳ ದೃಷ್ಟಿ ಉತ್ತಮಗೊಳ್ಳುತ್ತದೆ. ಈ ಸೊಪ್ಪನ್ನು ನುಣ್ಣಗೆ ಅರೆದು ಗಾಯ, ವ್ರಣ, ಬೊಬ್ಬೆ ಮುಂತಾದುವುಗಳ ಮೇಲೆ ಹರಡಿ ಕಟ್ಟಿದಲ್ಲಿ ಉಪಶಮನ ಸಿಗುತ್ತದೆ. ಇದರ ಸೇವನೆ ಕೆಮ್ಮು ಮತ್ತು ಮೂಲವ್ಯಾಧಿಗಳಿಗೆ ಒಳ್ಳೆಯದು. ಬೇಸಿಗೆಯಲ್ಲಿ ಧಗೆಯಿಂದ ಉಂಟಾಗುವ ಬೆವರು ಗುಳ್ಳೆಗಳಿಗೆ ಇವುಗಳ ರಸ ಹಚ್ಚಿದಲ್ಲಿ ಅವು ನಿವಾರಣೆಯಾಗುತ್ತವೆ. ಇದರ ಸೊಪ್ಪನ್ನು ಅರೆದು ಕೈಕಾಲುಗಳಿಗೆ ಹೆಚ್ಚಿದರ ಉರಿ ಶಮನಗೊಳ್ಳುತ್ತದೆ. ಚೇಳು ಕುಟುಕಿದಾಗ ಉರಿಯನ್ನು ಕಡಿಮೆ ಮಾಡಲು ಈ ಸೊಪ್ಪನ್ನು ಅರೆದು ಹಚ್ಚುವುದುಂಟು.

ಉಗಮ ಮತ್ತು ಹಂಚಿಕೆ : ಗೋಣಿ ಸೊಪ್ಪು ಯೂರೋಪ್ ಮತ್ತು ಏಷ್ಯಾಗಳ ನಿವಾಸಿ. ಹಿಮಾಲಯದ ಪಶ್ಚಿಮ ಭಾಗದಿಂದ ಹಿಡಿದು ರಷ್ಯಾ ಹಾಗೂ ಗ್ರೀಸ್‌ವರೆಗಿನ ಪ್ರದೇಶ ಇದರ ತವರೂರು, ಭಾರತದ ಎಲ್ಲಾ ಕಡೆ ಇದರ ಬಳಕೆ ಇದೆ.

ಸಸ್ಯ ವರ್ಣನೆ : ಇದು ಪೋರ್ಚುಲಕೇಸಿ ಕುಟುಂಬಕ್ಕೆ ಸೇರಿದ ಮೂಲಿಕೆ. ಇದು ನೆಲದಲ್ಲಿಯೇ ಹರಡಿ ಬೆಳೆಯುವ ಸಸ್ಯ. ಕಾಂಡಭಾಗ ದುಂಡಗಿದ್ದು  ಹಸುರು ಇಲ್ಲವೇ ಕೆನ್ನೀಲಿ ಬಣ್ಣದ್ದಿರುತ್ತದೆ. ಕವಲುಗಳು ಅನೇಕ. ಅವು ಸುಮಾರು ೫೦ ಸೆಂ.ಮೀ. ಉದ್ದ ಇರುತ್ತವೆ. ಎಲೆಗಳು ಮಂದ, ನೋಡಲು ಬೇಳೆಯಂತಿದ್ದು ಲೋಳೆಯಿಂದ ಕೂಡಿರುತ್ತವೆ. ತೊಟ್ಟು ಇರುವುದಿಲ್ಲ. ಹೂಗಳ ಬಣ್ಣ ಹೊಳಪು ಹಳದಿ. ಎಲೆಗಳ ಕಂಕುಳಲ್ಲಿ ಹಾಗೂ ತುದಿ ಭಾಗಗಳಲ್ಲಿ ಬಿಡುತ್ತವೆ. ಬೀಜದ ಬಣ್ಣ ಕಪ್ಪು.

ಹವಾಗುಣ : ಇದಕ್ಕೆ ಎತ್ತರದ ಪ್ರದೇಶಗಳು ಸೂಕ್ತವಲ್ಲ. ಬಿಸಿ ಹವೆ ಇದ್ದರೆ ಉತ್ತಮ. ಹೆಚ್ಚು ತೇವ ಬೇಕು. ಸಮುದ್ರ ಮಟ್ಟದಿಂದ ೧೫೦೦ ಮೀಟರ್ ಎತ್ತರದವರೆಗೆ ಚೆನ್ನಾಗಿ ಫಲಿಸುತ್ತದೆ.

ಭೂಗುಣ : ಈ ಬೆಳೆ ಎಂತಹ ಮಣ್ಣಲ್ಲಾದರೂ ಫಲಿಸಬಲ್ಲದು. ತೇವ ಹಿಡಿದಿಡುವ ಸಾರವತ್ತಾದ ಮಣ್ಣಾದಲ್ಲಿ ಉತ್ತಮ. ಗೋಡು ಮಣ್ಣಿನ ಭೂಮಿ ಹೆಚ್ಚು ಸೂಕ್ತ.

ತಳಿಗಳು : ನಮ್ಮಲ್ಲಿ ಸುಧಾರಿತ ತಳಿಗಳಾವುವೂ ಇಲ್ಲ.

ಸಸ್ಯಾಭಿವೃದ್ಧಿ : ಬೀಜ ಬಿತ್ತಿ ಹಾಗೂ ಕಾಂಡದ ತುಂಡುಗಳನ್ನು ನೆಟ್ಟು ವೃದ್ಧಿಪಡಿಸಬಹುದು. ಬೀಜ ಸಣ್ಣ ಗಾತ್ರವಿರುತ್ತವೆ. ಮಳೆಗಾಲದಲ್ಲಿ ಬಿತ್ತಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮೊಳೆಯಬಲ್ಲವು. ಕಾಂಡದ ತುಂಡುಗಳನ್ನು ಯಾವ ಉದ್ದಕ್ಕಾದರೂ ಸರಿಯೇ ಮುರಿದು ನೆಟ್ಟಲ್ಲಿ ಅವು ಬೇರು ಬಿಟ್ಟು ಚಿಗುರಬಲ್ಲವು.

ಬಿತ್ತನೆಗೆ ಮೈದಾನ ಪ್ರದೇಶಗಳಲ್ಲಿ ಮಾರ್ಚ್-ಮೇ ಮತ್ತು ಬೆಟ್ಟ ಪ್ರದೇಶಗಳಲ್ಲಿ ಏಪ್ರಿಲ್-ಸೆಪ್ಟೆಂಬರ್ ಸೂಕ್ತ ಕಾಲ. ಯಾವಾಗಲೂ ಸೊಪ್ಪು ಬೇಕಿದ್ದಲ್ಲಿ ಹದಿನೈದು ದಿನಗಳಿಗೊಮ್ಮೆ ಕಂತುಗಳಲ್ಲಿ ಬೀಜ ಬಿತ್ತಬೇಕಾಗುತ್ತದೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಸೂಕ್ತ ಪ್ರಮಾಣದ ತಿಪ್ಪೆಗೊಬ್ಬರ ಹರಡಿ, ಮಡಿಗಳನ್ನು ತಯಾರಿಸಿ, ಬೀಜ ಬಿತ್ತಬೇಕು. ಮರಳಿನೊಂದಿಗೆ ಮಿಶ್ರ ಮಾಡಿ ಬಿತ್ತಿದಲ್ಲಿ, ಬೀಜ ಒಂದೇ ತೆರನಾಗಿ ಬೀಳುತ್ತವೆ. ಬೀಜವನ್ನು ತೆಳ್ಳನೆಯ ಗೀರು ಸಾಲುಗಳಲ್ಲಿ ಬಿತ್ತುವುದು ಉತ್ತಮ. ನೀರು ಹನಿಸುವ ಡಬ್ಬಿಯಿಂದ ನೀರು ಕೊಟ್ಟರೆ ಬೀಜ ತೇಲುವುದಿಲ್ಲ. ಬೀಜ ನಾಲ್ಕೈದಿನಗಳಲ್ಲಿ ಮೊಳೆಯುತ್ತವೆ. ಹೆಕ್ಟೇರಿಗೆ ೨-೩ ಕಿ.ಗ್ರಾಂ. ಬೀಜ ಸಾಕು.

ಕಾಂಡದ ತುಂಡುಗಳನ್ನು ನೆಡುವುದಿದ್ದರೆ ೩೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೧೫ ಸೆಂ.ಮೀ. ಗೊಂದರಂತೆ ನೆಟ್ಟು ನೀರು ಹಾಯಿಸಬೇಕು.

ಗೊಬ್ಬರ : ಹೆಕ್ಟೇರಿಗೆ ೨೫ ರಿಂದ ೪೦ ಟನ್ನುಗಳನ್ನು ತಿಪ್ಪೆಗೊಬ್ಬರ ಹಾಕಬೇಕು. ಇದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಕೊಡುವ ರೂಢಿ ಇಲ್ಲ.

ನೀರಾವರಿ : ಮಳೆಗಾಲದಲ್ಲಿ ನೀರು ಹಾಯಿಸಬೇಕಾಗಿಲ್ಲ. ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಒಂದೆರಡು ತಿಂಗಳ ನಂತರ ಸಾಲುಗಳ ನಡುವೆ ಕಳೆಗಳನ್ನು ಕಿತ್ತು ಹಾಕಬೇಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆಯಾದ ೩೦-೦ ದಿನಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು. ಹದಿನೈದು ದಿನಗಳಿಗೊಮ್ಮೆ ಕೊಯ್ಲು ಮಾಡಬಹುದು. ೧೫ ರಿಂದ ೧೮ ಸೆಂ.ಮೀ. ಉದ್ದ ಇರುವಂತೆ ರೆಂಬೆಗಳನ್ನು ಕತ್ತರಿಸಿ, ತೆಗೆಯುವುದು ಸಾಮಾನ್ಯ, ಹೆಕ್ಟೇರಿಗೆ ೭-೮ ಟನ್ ಸೊಪ್ಪು ಸಿಗುತ್ತದೆ.

ಕೀಟ ಮತ್ತು ರೋಗಗಳು : ಇದಕ್ಕೆ ಹಾನಿಯನ್ನುಂಟು ಮಾಡುವ ಕೀಟ ಮತ್ತು ರೋಗಗಳು ಬಲು ಅಪರೂಪ.

ಬೀಜೋತ್ಪಾದನೆ : ಇದರಲ್ಲಿ ಸಾಕಷ್ಟು ಬೀಜ ಉತ್ಪತ್ತಿಯಾಗುತ್ತವೆ. ಇತರ ಪ್ರಭೇದಗಳ ಸಸಿಗಳು ಬೆರೆಯದಂತೆ ನೋಡಿಕೊಳ್ಳಬೇಕು.

* * *