ಗೋಪಬಂಧು ದಾಸ್ಒರಿಸ್ಸಾದಲ್ಲಿ ಹುಟ್ಟಿದ ವೀರ ದೇಶಭಕ್ತರು. ವಿದ್ಯಾರ್ಥಿಯಾಗಿದ್ದಾಗ ನ್ಯಾಯಕ್ಕಾಗಿ ಹೋರಾಡಿದರು, ಜೀವನದುದ್ದಕ್ಕೂ ಸ್ವಾತಂತ್ರ ವೀರರಾಗಿ, ವಕೀಲರಾಗಿ, ಶಾಸಕರಾಗಿ, ಪತ್ರಿಕಾಕರ್ತರಾಗಿ ನ್ಯಾಯಕ್ಕಾಗಿ ಹೋರಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಅಮೋಘವಾದದ್ದು. ಪ್ರವಾಹ ಪೀಡಿತರಿಗೆ, ರೋಗಿಗಳಿಗೆ, ಬಡವರಿಗೆ ಅವರು ಮಾಡಿದ ಸೇವೆ ಉಜ್ವಲ.

ಗೋಪಬಂಧು ದಾಸ್

ಸಂಸಾರಿಯಾಗಿದ್ದೂ ಸಂನ್ಯಾಸಿಯ ಬಾಳು. ಜನಸಂದಣಿಯ ನಡುವೆ ಇದ್ದೂ ಏಕಾಂಗಿ. ಮುಂದುವರೆದ ಕೋಮಿನವರಾಗಿದ್ದೂ ಹಿಂದುಳಿದವರ ಹಿತಚಿಂತನೆ. ಸಾವಿರಗಟ್ಟಲೆ ದುಡಿಯುವ ಸಾಮರ್ಥ್ಯವಿದ್ದೂ ದಾರಿದ್ರ ದ ಅಪ್ಪುಗೆ. ಕೊನೆಗೆ ಇದ್ದುದೆಲ್ಲ ಪರಹಿತಕ್ಕೆ ಅರ್ಪಣೆ. ಪಂಡಿತರಾಗಿದ್ದೂ ಪಾಮರರ ಮುನ್ನಡೆಯ ಹಂಬಲ. ಜನಮನ್ನಣೆ-ಕೀರ್ತಿಗಳ ಶಿಖರ ತಲಪಿದ್ದರೂ ನಮ್ರ-ವಿನಮ್ರ.

ಆಧುನಿಕ ಒರಿಸ್ಸಾದ ನಿರ್ಮಾಪಕ, ಸ್ವರ್ಗೀಯ ಪಂಡಿತ ಗೋಪಬಂಧು ದಾಸ್‌ರನ್ನು ‘ಉತ್ಕಲ ಮಣಿ’ ಎಂದು ಈಗಲೂ ಗೌರವಿಸುವುದು ಮೇಲೆ ಹೇಳಿದ ಗುಣಗಳಿಗಾಗಿ.

ತನ್ನನ್ನು ಬೆಳೆಸಿದ ನೆಲಕ್ಕೆ, ಸುತ್ತಲಿನ ಸಮೂಹಕ್ಕೆ ಎಷ್ಟು ಸೇವೆ ಸಲ್ಲಿಸಲು ಮನುಷ್ಯನಿಗೆ ಸಾಧ್ಯ? ಜನತಾ ಶಿಕ್ಷಣ, ಸಾಹಿತ್ಯಸೇವೆ, ಪತ್ರಿಕಾವೃತ್ತಿ, ಜನತಾ ಪ್ರತಿನಿಧಿ, ಪ್ರವಾಹ-ಕ್ಷಾಮ-ಸಾಂಕ್ರಾಮಿಕ ಜಾಡ್ಯಗಳ ಸನ್ನಿವೇಶದಲ್ಲಿ ಪರಿಹಾರ ಕಾರ್ಯ, ನಾಡಿನ ಏಕೀಕರಣ,ರಾಜಕಾರಣ, ಕಾರ್ಮಿಕ ಸಂಘಟನೆ-ಹೀಗೆ ಸಾಧ್ಯವಿರುವ ಎಲ್ಲ ಸೇವಾವಕಾಶಗಳನ್ನೂ ಬಳಸಿಕೊಂಡ ಗೋಪಬಂಧುದಾಸ್ ನಿಜವಾದ ಅರ್ಥದಲ್ಲಿ ‘ಉತ್ಕಲ ಮಣಿ’ ಯೇ ಆಗಿ ಬಾಳಿದರು.

ಇಂದಿನ ಮಾನದಲ್ಲಿ ನೋಡಿದಾಗ ಗೋಪಬಂಧು ದಾಸರು ಅಲ್ಪಾಯು. ಕೇವಲ ೫೧ ವರ್ಷಕ್ಕೆ ಅವರ ಜೀವನದ ಮುಕ್ತಾಯ. ಸಂಕ್ಷಿಪ್ತ ಜೀವನದಲ್ಲಿ ಕಂಡ ಸಾವು ನೋವುಗಳು ಅತ್ಯಧಿಕ.ಇದನ್ನು ಕಡೆಗಣಿಸಿ ಕೈಗೊಂಡ ಸೇವೆಯನ್ನು ದೀಕ್ಷೆಯಂತೆ ನಡೆಸಿದರು. ಅತಿ ಸಾಧಾರಣರಾಗಿ ಹುಟ್ಟಿ, ಬೆಳೆದು ಅಸಾಧಾರಣರ ಪಂಕ್ತಿಗೆ ಸೇರಿದರು. ಮಹಾಪುರುಷ ರಂತೆ ಮರಣವನ್ನು ಕಂಡರು.

ಬಾಲ್ಯ-ಶಿಕ್ಷಣ

೧೮೭೭ ರ ಅಕ್ಬೋಬರ್ ೯ರ ಮುಂಜಾನೆ, ಅಂದು ಬುಧವಾರ. ಸೂರ್ಯೋದಯದ ವೇಳೆ. ಜಗನ್ನಾಥನ ಆವಾಸ ಪುರಿ ಜಿಲ್ಲೆಯ ಭಾರ್ಗವಿ ನದಿ ತೀರದ ಸುನಂದ ಗ್ರಾಮದ ದೈತ್ಯಾರಿ ದಾಸರ ಮನೆಯಲ್ಲಿ ಪುತ್ರೋತ್ಸವ.

ಹುಟ್ಟಿದ ಮಗುವಿಗೆ ಹಾಲೂಡಿಸುವ ಭಾಗ್ಯವೂ ತಾಯಿ ಸ್ವರ್ಣಮಯಿದೇವಿಗೆ ಲಭಿಸಲಿಲ್ಲ. ಎಳೆಗೂಸು ತಬ್ಬಲಿಯಾಯಿತು. ಅಲ್ಲಿಂದಲೇ ಆರಂಭ, ಗೋಪಬಂಧುದಾಸರಿಗೆ ಬಂಧು ವಿಯೋಗದ ಅನಿಷ್ಟ ಪರಂಪರೆ.

ಮಾತೃವಾತ್ಸಲ್ಯ ಲಭ್ಯವಿಲ್ಲದ ಮಗುವಿಗೆ ಅತ್ತೆಯ ಆಸರೆ. ತಂದೆಯ ಅಕ್ಕರೆ. ಮಧ್ಯಮ ವರ್ಗಕ್ಕೆ ಸೇರಿದ ಧರ್ಮ ಪರಾಯಣ ಪರಿವಾರ. ಹಳ್ಳಿಯ ಶಾಲೆಯಲ್ಲಿ ಪ್ರಾರಂಭದ ಶಿಕ್ಷಣ. ಉನ್ನತ ಪ್ರಾಥಮಿಕ ಶಿಕ್ಷಣಕ್ಕೆ ಐದು ಮೈಲಿ ದೂರದ ಇನ್ನೊಂದು ಗ್ರಾಮಕ್ಕೆ ನಿತ್ಯಯಾತ್ರೆ. ಪ್ರಾಥಮಿಕ ಶಿಕ್ಷಣ ಮುಗಿಸುವ ಮೊದಲೇ ೧೨ರ ಪ್ರಾಯದಲ್ಲಿ ಎಳೆಗುವರಿ ‘ಅಪ್ತಿ’ ಗೋಪಬಂಧು ದಾಸರ ಪತ್ನಿ.

ಹಳ್ಳಿಯಲ್ಲಿದ್ದಾಗ ಮನೆದೇವರು ‘ವಿನೋದ ಬಿಹಾರಿ’ ಯ ಆರಾಧನೆ. ದೇವಾಲಯದಲ್ಲಿ ಕುಳಿತು ಎಳೆಯ ಗೋಪಬಂಧುವಿನಿಂದ ಭಾಗವತ ಪಾರಾಯಣ. ಇದರಿಂದ ಆದ ಪ್ರಯೋಜನ ಎರಡು-ಗಾಢವಾದ ದೈವಭಕ್ತಿಯ ಜತೆಗೆ ಎಳೆ ಪ್ರಾಯದಲ್ಲೇ ಕುದುರಿದ ಕವಿತಾ ಶಕ್ತಿ.

ವಿದ್ಯಾಭ್ಯಾಸಕ್ಕಾಗಿ ಪುರಿಯ ಪ್ರೌಢ ಶಾಲೆಗೆ ಸೇರಿದ ಗೋಪಬಂಧುವಿಗೆ ಅಲ್ಲಿನ ಪ್ರಮುಖರೂ ಆದರ್ಶಜೀವಿಗಳೂ ಆಗಿದ್ದ ರಾಮಚಂದ್ರ ದಾಸರ ಸಂಪರ್ಕ. ಯುವ ಉತ್ಸಾಹಕ್ಕೆ ಆದರ್ಶದ ಕಂಪು ಬೆರೆತಂತೆ ಆಯಿತು.

ಹೋರಾಟದ ಬದುಕು ಪ್ರಾರಂಭ

ಪುರಿಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ಮೇಧಾವಿ ವಿದ್ಯಾರ್ಥಿ ಎನಿಸಿದ್ದ ಗೋಪಬಂಧುವಿಗೆ ಸಹಪಾಠಿಗಳ ಮುಂದಾಳಾಗಿ ನಿಲ್ಲುವ ಅವಕಾಶ ದೊರಕಿತು. ಪುರಿಯ ಜಗನ್ನಾಥನ ಜಾತ್ರೆಯ ಸಮಯದಲ್ಲೇ ಕಾಲರಾ ಪಿಡುಗು. ಪ್ರತಿದಿನ ನೂರಾರು ಜನರ ಸಾವು. ಯಾತ್ರಾರ್ಥಿಗಳೇ ಇದಕ್ಕೆ ಹೆಚ್ಚು ಬಲಿ. ಸತ್ತವರ ಶವವನ್ನು ಎತ್ತಿ ಸಂಸ್ಕಾರಕ್ಕೆ ಏರ್ಪಾಟು ಮಾಡಿಕೊಡಲು ಪುರ ಸಭೆಗೆ ಅಸಡ್ಡೆ. ಸರ್ಕಾರಕ್ಕೆ ಬೇಕಿಲ್ಲ. ಹಾದಿ ಬೀದಿಗಳಲ್ಲಿ ಶವಗಳು. ಈ ದೃಶ್ಯ, ಎಳೆಯ ಗೋಪಬಂಧುವಿನ ಹೃದಯವನ್ನು ಕರಗಿಸಿತು. ತಕ್ಷಣ ಕಾರ್ಯೋನ್ಮುಖರಾದ ಗೋಪಬಂಧುವಿನಿಂದ ‘ಪುರಿ ಸೇವಾ ಸಮಿತಿ’ ಯ ರಚನೆ. ಶವಸಂಸ್ಕಾರ ಮತ್ತು ರೋಗಿಗಳ ಉಪಚಾರ. ಇದು ಹಿರಿಯರ ಕಣ್ಣನ್ನೂ ತೆರೆಸಿದ್ದರಲ್ಲಿ ಆಶ್ಚರ್ಯವೇನು? ಹಳ್ಳಿಯಿಂದ ಬಂದ ಹುಡುಗನೊಬ್ಬ ಮುಂದುವರೆದ ಜನರಿರುವ ಊರಿನ ಜನರ ಆದರಕ್ಕೆ ಪಾತ್ರನಾದ.

ಹಿಂದಿನ ಶತಮಾನದ ಕೊನೆಯ ವರ್ಷಗಳು. ಒರಿಯಾ ಸಾಹಿತ್ಯದಲ್ಲಿ ಸಾಹಿತ್ಯದ ನವೋದಯದ ಅಂಕುರವಾಗುತ್ತಿದ್ದ ದಿನಗಳು. ಹೊಸತನ್ನು ಓಲೈಸುವವರಿಂದ ಹಳೆಯದರ ಹೇರಳ ಭತ್ಸನೆ, ಜಡ್ಡುಗಟ್ಟಿದ ಭಾವ-ಬರಹಗಳೆಂಬ ಮೂದಲಿಕೆ. ಇದಕ್ಕೆ ಪ್ರತಿಯಾಗಿ ಹೊಸ ಹುಟ್ಟಿನ ಬಗೆಗೆ ಸಂಪ್ರದಾಯ ನಿಷ್ಠರ ತಾತ್ಸಾರ. ವಾದಸಮರವೇ ಜರುಗುತ್ತಿತ್ತು.

ದೇಶದ ಮುನ್ನಡೆಯಾಗಲೀ ಸಾಹಿತ್ಯದ ಮುನ್ನಡೆಯಾಗಲೀ ಅದು ಪರಂಪರೆಯಿಂದ ಪ್ರತ್ಯೇಕಗೊಂಡ ಅಂಶವಲ್ಲವೆನ್ನುವುದು ಗೋಪಬಂಧು ನಂಬಿದ್ದ ನೀತಿ. ಹಳೆಯದೆಲ್ಲ ದೂಷಿತವಲ್ಲ, ಖಂಡನೆಯೂ ಸರಿಯಲ್ಲವೆಂದು ನಂಬಿದ್ದವರು. ಪರಂಪರೆಯ ವಿರೋಧಿಗಳ ನಿಲುವನ್ನು ವಿರೋಧಿಸುವ ಪದ್ಯವೊಂದನ್ನು ಬರೆದು ‘ಇಂದ್ರ ಧನುಷ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಪದ್ಯದಲ್ಲಿದ್ದ ಕೆಣಕು ಮಾತುಗಳು ‘ನವ್ಯ’ ದ ಮುಂದಾಳು ರಾಧಾನಾಥರೇಯವರನ್ನು ಕೆರಳಿಸಿತು. ಆಗ ಅವರು ಶಿಕ್ಷಣ ಇಲಾಖಾ ಮುಖ್ಯಾಧಿಕಾರಿ. ‘ಅಪರಾಧಿ’ ಗೆ ಶಿಕ್ಷೆ ಕೊಟ್ಟರು. ವಿದ್ಯಾರ್ಥಿವೇತನದಲ್ಲಿ ಒಂದು ವಾರಕ್ಕೆ ಸಲ್ಲುವಷ್ಟು ಮೊತ್ತದ ದಂಡ. ಜೊತೆಗೆ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಆತನಿಗೆ ವರ್ಷದ ಪುರಸ್ಕಾರಕ್ಕೆ ಸಂಚಕಾರ. ಇದಕ್ಕೆ ಬದಲಾಗಿ ‘ಪದ್ಯ’ ವನ್ನು ವಾಪಸ್ ಪಡೆಯಬೇಕು ಮತ್ತು ಅದೇ ಪತ್ರಿಕೆಯ ಮೂಲಕ ಕ್ಷಮಾಯಾಚನೆ ಮಾಡಬೇಕು. ಹೀಗಾದರೆ ಶಿಕ್ಷೆ ರದ್ದು. ಗೋಪಬಂಧು ದಾಸ್ ಮಣಿಯಲಿಲ್ಲ, ‘ನಾನು ಶಿಕ್ಷೆ ಅನುಭವಿಸಲು ಸಿದ್ಧ’ ಎಂದರು.

ಶಾಲಾವಿದ್ಯಾರ್ಥಿಯಾಗಿದ್ದಾಗಲೇ ಗೋಪಬಂಧು ಗೃಹಸ್ಥರಾಗಿದ್ದರು. ೧೮೮೯ರಲ್ಲಿ ಮದುವೆ. ೧೮೯೯ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದಾಗ ೨೩ ವರ್ಷ. ಪುರಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಕಟಕ್‌ಗೆ ಪ್ರಯಾಣ. ರವೀನ್ ಷಾ ಕಾಲೇಜ್ ವಿದ್ಯಾರ್ಥಿ. ಕಾಲೇಜಿ ನಲ್ಲಿ ‘ಕರ್ತವ್ಯ ಬೋಧಿನೀ ಸಮಿತಿಯ ರಚನೆ. ರಾಜಕೀಯ, ಸಾಮಾಜಿಕ, ಆರ್ಥಿಕ ವಿಚಾರಗಳ ಮುಕ್ತ ಮನಸ್ಸಿನ ಚರ್ಚೆಗೆ ಮುಡಿಪಾದ ವೇದಿಕೆ.

ಒರಿಸ್ಸದವರ ಕಷ್ಟಸ್ಥಿತಿ

ಇಂದಿನ ಒರಿಸ್ಸಾ ಆಗಿನ್ನೂ ಆಕಾರಕ್ಕೆ ಬರುವುದಿರಲಿ, ಕಲ್ಪನೆಯಲ್ಲೂ ಇರಲಿಲ್ಲ. ಬಂಗಾಳ, ಮದರಾಸ್ ಆಧಿಪತ್ಯಗಳಲ್ಲಿ, ಅಂದಿನ ಸೆಂಟ್ರಲ್ ಪ್ರಾವಿನ್ಸ್ ಮತ್ತು ೨೪ ದೇಶೀಯ ರಾಜ್ಯಗಳಲ್ಲಿ ಹಂಚಿ ಹೋಗಿದ್ದವು.

ಒರಿಸ್ಸಾಕ್ಕೂ ಪ್ರವಾಹ, ಕ್ಷಾಮಗಳಿಗೂ ಬಲವಾದ ನೆಂಟು. ಪ್ರವಾಹದ ಹಾವಳಿ ಮತ್ತು ಕ್ಷಾಮದ ಬಾಧೆಯನ್ನು ಕಣ್ಣಾರೆ  ಕಂಡಿದ್ದ ಯುವಕ ಗೋಪಬಂಧು ಆಗಲೇ ಪರಿಹಾರದಳ ಸಂಘಟಿಸಿದ್ದರು. ವಿದ್ಯಾರ್ಥಿಯಾಗಿ ಕೈಗೊಂಡ ಈ ಕಾರ್ಯ, ಅವರ ಜೀವನ ಪರ್ಯಂತ ಮೈಗಂಟಿತ್ತು.

ಒರಿಯನ್ನರ ಹಿತಸಾಧನೆಗೆ ಮಾರ್ಗವೇ ಇರಲಿಲ್ಲ. ಹಿತ ಸಾಧಿಸಿರೆಂದು ಕೇಳುವುದು, ನಾಲ್ಕರ ಪೈಕಿ ಯಾವ ಸರ್ಕಾರವನ್ನು? ಒತ್ತಡ ತರುವಷ್ಟು ಬಲವೂ ಇಲ್ಲ. ಸಂಘಟನೆಯೂ ಶೂನ್ಯ. ಹೀಗಾಗಿ ಹೊರನಾಡಿನಲ್ಲಿ ನೆಲೆಸಿದ ಒರಿಯದ ಜನತೆಗೆ ದೊರಕುತ್ತಿದ್ದುದು ದುಡಿಮೆ ಮಾತ್ರ. ಬಂಗಾಳದಲ್ಲಂತೂ ಒರಿಯನ್ನರೆಂದರೆ ಕೂಲಿಗಳು ಇಲ್ಲವೇ ಅಡುಗೆ ಭಟ್ಟರು. ಈ ಜನರನ್ನು ಒಂದುಗೂಡಿಸಬೇಕು. ತಿಳಿವು ತುಂಬಬೇಕು; ಬಾಳನ್ನು ಬೆಳಗಬೇಕೆಂಬ ಆಸೆ ಮೂಡಿತು.

ವಿದ್ಯಾರ್ಥಿಗಳ ಸಮೂಹದಲ್ಲಿದ್ದೂ ಏಕಾಂತ ಚಿಂತನೆಯಲ್ಲಿ ತಲ್ಲೀನಗೊಳ್ಳುವ ಕವಿಮನದ ಮಿಡಿತ, ಕಾವ್ಯದ ರೂಪ ತಳೆಯುತ್ತಿತ್ತು. ಈ ಅವಧಿಯಲ್ಲಿ ಅವರು ರಚಿಸಿದ ಕವಿತೆಗಳೆಲ್ಲವುಗಳನ್ನೂ ‘ಅವಕಾಶ ಚಿಂತಾ’ ಎಂಬ ಹೆಸರಿನಿಂದ ಅನಂತರ ಪ್ರಕಟಿಸಲಾಗಿದೆ.

೧೯೦೩ ರಲ್ಲಿ ಬಿ.ಎ. ಪರೀಕ್ಷೆಗೆ ತಯಾರಿ ನಡೆಸಿದ್ದರು ಗೋಪಬಂಧು. ಆ ವೇಳೆಗಾಗಲೇ ಎರಡು ಗಂಡು ಮಕ್ಕಳು ಸಾವನ್ನು ಅಪ್ಪಿದ್ದರು. ಉಳಿದಿದ್ದ ಇನ್ನೊಬ್ಬ ಮಗನೂ ಕಣ್ಮುಚ್ಚಿದ. ಪರೀಕ್ಷೆಯಲ್ಲೂ ಸಫಲರಾಗಲಿಲ್ಲ. ಬಿ.ಎ. ತೇರ್ಗಡೆಗೆ ಇನ್ನೊಂದು ವರ್ಷ ಅಗತ್ಯವಾಯಿತು.

‘‘ಸ್ವತಂತ್ರ ಜೀವನ ಮತ್ತು ಸಮಾಜ ಸೇವೆಯ ವ್ರತ ತೊಟ್ಟಿದ್ದ ಗೋಪಬಂಧು ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ನಡೆಯಲು ವಕೀಲರಾಗಲೇ ಬೇಕಿತ್ತು. ವಕೀಲಿ ವಿದ್ಯೆ ಮತ್ತು ಎಂ.ಎ. ಕಲಿಕೆಗಾಗಿ ಕಲ್ಕತ್ತಾ ನಗರವನ್ನು ಸೇರಲೇಬೇಕಿತ್ತು. ಅವರಿಗೆ ವಿದ್ಯೆ ಒಂದು ಸಾಧನವಾಗಿತ್ತು, ಅದೇ ಗುರಿಯಾಗಿರಲಿಲ್ಲ. ಕಲ್ಕತ್ತೆಗೆ ಸೇರಿ ತಮ್ಮ ಓದಿಗೆ ಅಂಟಿ ಕೂರಲಿಲ್ಲ. ಅಲ್ಲಿ ನೆಲೆಸಿದ್ದ ಒರಿಯನ್ನರ ಸಂಪರ್ಕ ಸಾಧಿಸಿದರು. ಅವರನ್ನು ಸಂಘಟಿಸಿದರು. ಅಗತ್ಯ ತಿಳಿವು ತುಂಬಲು ರಾತ್ರಿ ಶಾಲೆಗಳನ್ನು ನಡೆಸಿದರು. ಅಲ್ಲಿದ್ದಾಗ ತಮ್ಮ ತಾಯ್ನಾಡಿನಲ್ಲಿ ಮತ್ತೆ ಪ್ರವಾಹದ ಸಂಕಟವುಂಟಾದಾಗ ಹಣ ಕೂಡಿಸಿ ಕಳುಹಿಸಿದರು. ಎಲ್ಲಕ್ಕಿಂತ ಅಧಿಕವಾಗಿ ಶಿಕ್ಷಣ ಪಡೆಯುತ್ತಿದ್ದ ಒರಿಸ್ಸದ ಅಂದಿನ ಯುವ ಜನರಲ್ಲಿ ಆದರ್ಶದ ಒಲವು ಮೂಡಿಸಿದರು.

ದುಃಖ ಪರಂಪರೆ

೧೯೦೬ ರಲ್ಲಿ ಬಿ.ಎಲ್. ಪರೀಕ್ಷೆಯಲ್ಲಿ ತೇರ್ಗಡೆಯಾದ ಸುದ್ದಿಯನ್ನು ಹಿಂಬಾಲಿಸಿ ಬಂದ ಸುದ್ದಿ ಪತ್ನಿಯ ಸಾವು. ಆಗಿನ್ನೂ ಗೋಪ ಬಂಧುರವರಿಗೆ ೨೮ರ ಪ್ರಾಯ. ಈಗಿನ ದಿನಗಳಲ್ಲಿ ಮದುವೆಯಾಗುವ ವಯಸ್ಸು. ಆಗಲೇ ಮದುವೆಯಾಗಿದ್ದು, ಮಕ್ಕಳೂ ಆಗಿ ಗಂಡುಮಕ್ಕಳೆಲ್ಲ ಸತ್ತು, ಪತ್ನಿಯೂ ಕಣ್ಮರೆಯಾದರು. ಪತ್ನಿಯ ಸಾವಿಗೆ ಮೊದಲೇ ಮೂರು ಗಂಡುಮಕ್ಕಳ ಸಾವು.

ಗೆಳೆಯರು ಮತ್ತು ಬಂಧುಗಳಿಂದ ಮರುಮದುವೆಗೆ ಒತ್ತಾಯ. ಗೋಪಬಂಧು ನೀಡಿದ ಉತ್ತರ ‘‘ಒಂದು ವೇಳೆ ನಾನು ಸತ್ತಿದ್ದು ಹೆಂಡತಿ ಬದುಕಿದ್ದರೆ, ಇನ್ನೂ ಕಿರಿಯಳೇ ಆಗಿರುತ್ತಿದ್ದ ಆಕೆಗೆ ಈ ಸಲಹೆ ಕೊಡುತ್ತಿದ್ದಿರೇನು?’’

ಅಂತೂ ಹುಟ್ಟುತ್ತಲೇ ತಾಯಿ, ಓದುವಾಗ ತಂದೆ, ಸ್ವಂತ ದುಡಿದು ಬದುಕಬೇಕೆನ್ನುವಾಗ ಮಡದಿ, ಮಕ್ಕಳು ಮತ್ತು ಪರಮ ಹಿತೈಷಿ (ಪುರಿಯ ರಾಮಚಂದ್ರ ದಾಸ್) ಗಳೆಲ್ಲರನ್ನೂ ಕಳೆದುಕೊಂಡು ಏಕಾಂಗಿಯಾದರು. ಉಳಿದವರು ಇಬ್ಬರು ಹೆಣ್ಣುಮಕ್ಕಳು ಮಾತ್ರ. ಅವರ ಪಾಲನೆ, ಪೋಷಣೆಯ ಹೊಣೆಯನ್ನು ಬಲ ಅಣ್ಣನಿಗೆ ವಹಿಸಿ ಕೌಟುಂಬಿಕ ಸಮಸ್ಯೆಗಳಿಂದ ದೂರವಾದರು. ಪರಿಪೂರ್ಣ ಸ್ವತಂತ್ರ ರಾದರು.

ಹೆಂಡತಿ ಸಾವಿಗೂ ಮೊದಲು ಅವರ ಒಬ್ಬ ಮಗ ಸಾವಿನ ಸಂಕಟದಲ್ಲಿದ್ದ. ಬದಿಯಲ್ಲಿ ಗೋಪಬಂಧು ಕುಳಿತಿದ್ದರು. ಆಗ ಪ್ರವಾಹದ ಹಾವಳಿಯ ಸುದ್ದಿ ಬಂತು. ತಕ್ಷಣ ಕರ್ತವ್ಯದ ಕರೆಗೆ ಓಗೊಡಲು ಅಣಿಯಾದರು. ಬಂಧುಗಳು ಆಕ್ಷೇಪಿಸಿದಾಗ ಅವರು ನೀಡಿದ ಉತ್ತರ- ‘‘ನನ್ನ ಮಗನೊಬ್ಬನ ಉಳಿವಿಗೆ ಗಮನ ನೀಡುತ್ತಾ ಕುಳಿತರೆ, ಮಕ್ಕಳನ್ನು ಕಳೆದುಕೊಂಡಿರುವ ನೂರಾರು ತಂದೆಯರನ್ನು ಸಂತೈಸುವವರು ಯಾರು?’’

ಏಕೀಕರಣ ಸಾಧಕ

ಒರಿಸ್ಸದ ಮತ್ತು ಒರಿಯನ್ನರ ಹಿತಚಿಂತನೆ ಗೋಪಬಂಧು ದಾಸರ ನೆತ್ತರಿನ ನೆತ್ತರೆನಿಸಿತ್ತು. ಮೂರು ಆಧಿಪತ್ಯಗಳಲ್ಲಿ ಮತ್ತು ೨೪ ದೇಶೀಯ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಜನರ ಏಳ್ಗೆಯ ಕಂಕಣ ಕಟ್ಟಿಕೊಂಡಿದ್ದರು. ಆದ್ದರಿಂದಲೇ ವಿದ್ಯಾರ್ಥಿ ದೆಸೆಯಿಂದಲೇ ‘ಉತ್ಕಲ ಸಮ್ಮೇಳನದ’ ಕಾರ್ಯದಲ್ಲಿ ಅವರಿಗೆ ಅತೀವ ಆಸಕ್ತಿ. ಇದಕ್ಕೆ ಪ್ರೇರಕರು ಸಮ್ಮೇಳನದ ಸಂಘಟಕರೂ, ಆ ರಾಜ್ಯದ ಪಿತಾಮಹರೂ ಎನಿಸಿದ್ದ ಮಧುಸೂದನ ದಾಸ್. ಗೋಪಬಂಧು ದಾಸರಿಗೆ ಮಧುಸೂದನ ದಾಸರಲ್ಲಿ ಅಪಾರ ಗೌರವ. ಆದರೆ ಅವರೆಂದೂ ಅಂಧ ಅನುಯಾಯಿಗಳೆನಿಸಲಿಲ್ಲ.

ಸರಳತೆ, ಅನುಕಂಪ

ಗೋಪಬಂಧು ಎಷ್ಟು ನಿರ್ಭೀತರೋ ಅಷ್ಟೇ ಸರಳ ವ್ಯಕ್ತಿ. ಬೆಲೆಬಾಳುವ ಉಡುಪನ್ನೆಂದೂ ಧರಿಸದ ನಿರಾಡಂಬರ ಜೀವನ. ಎಂ.ಎ. ಮತ್ತು ಬಿ.ಎಲ್. ಓದುವಾಗಲೂ ಅಷ್ಟೇ. ಮನೆಯಿಂದ ಹಣತರಿಸಿ ಸ್ವೇಚ್ಛೆಯಾಗಿ ವೆಚ್ಚಮಾಡಲು ಒಪ್ಪಲಿಲ್ಲ. ಮನೆಪಾಠದಿಂದ ದುಡಿಮೆ. ಕೈಮಗ್ಗದ ಒಂದು ಜತೆ ಉಡುಪು. ಒಂದೂವರೆ ವರ್ಷ ರವೀನ್ಸ್ ಷಾ ಕಾಲೇಜಿನಲ್ಲಿ ಕಲಿತ ನಂತರ, ಅಧ್ಯಯನ ಪೂರ್ಣಗೊಳಿಸಲು ಕಲ್ಕತ್ತೆಗೆ ತೆರಳಿದರು.

ಕಲ್ಕತ್ತೆಯ ಖಾನಾವಳಿಯಲ್ಲಿ ವಾಸ. ಮುಂಜಾನೆ ಗಂಗಾ ನದಿಯಲ್ಲಿ ಸ್ನಾನ. ಹಿಂದಿರುಗುವಾಗ ಭಗವದ್ಗೀತೆಯ ಶ್ಲೋಕಗಳ ಉಚ್ಚಾರ. ಇದು ಕೆಲವರ ಅಪಹಾಸ್ಯಕ್ಕೆ ಕಾರಣವಾದರೂ, ಸಾಮಾನ್ಯವಾಗಿ ಈ ನಡತೆ ತುಂಬ ಪ್ರಭಾವವುಂಟು ಮಾಡಿತ್ತು.

ಕಾನೂನು ಪರೀಕ್ಷೆ ಮುಗಿಸಿದ ದಿನಗಳಲ್ಲಿ ಗೋಪಬಂಧು ದೇಶೀಯ ಸಂಸ್ಥಾನವಾಗಿದ್ದ ನೀಲಗಿರಿಯಲ್ಲಿ ಪ್ರೌಢಶಾಲೆಯ ಪ್ರಾಧ್ಯಾಪಕರಾಗಿದ್ದರು. ಒಂದು ಸಂಜೆ ಗೋಪಬಂಧು ಗೆಳೆಯ ಹರಿಹರದಾಸರೊಡನೆ ವಾಯು ಸಂಚಾರ ಹೊರಟಿದ್ದರು. ಆಗ ಒಂದು ದೃಶ್ಯ ಅವರ ಗಮನ ಸೆಳೆಯಿತು. ಪುರಿಯಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿ ಮಹಿಳೆ, ಮಗನ ಶವದ ಮುಂದೆ ರೋದಿಸುತ್ತಿದ್ದಳು. ಕಾಲರಾ ವ್ಯಾಧಿಗೆ ಆ ಹುಡುಗ ಬಲಿಯಾಗಿದ್ದ. ಅವಳ ಜಾತಿ-ಕುಲಗಳ ವಿವರ ಕೇಳದೆ ಗೆಳೆಯರು ಶವ ಸಂಸ್ಕಾರಕ್ಕೆ ಏರ್ಪಾಟು ಮಾಡಿದರು. ಮೇಲ್ಜಾತಿಯವರು ತನ್ನ ಮಗನ ಶವ ಮುಟ್ಟುವುದರಿಂದ ಆಗುವ ಹಾನಿ ಅವಳಿಗೆ ತಿಳಿದಿತ್ತು. ಕೊನೆಗೆ ಚಿತೆ ಹೊತ್ತಿಸಿ ಶವವನ್ನು ಆಕೆಯೇ ಅದರ ಮೇಲಿಡುವಂತೆ ಒಲಿಸಿದ್ದೂ ಆಯಿತು. ದಾರಿ ಖರ್ಚಿಗೆ ಆಕೆಗಷ್ಟು ಹಣ ಕೊಟ್ಟು ಕಳುಹಿಸಿ ಹಿಂದಿರುಗಿದರು.

ಅಪರಿಚಿತನ ಶವಸಂಸ್ಕಾರ, ಅದೂ ಬ್ರಾಹ್ಮಣರಿಂದ ಆಗಿದ್ದು ಅಕ್ಷಮ್ಯವೆನಿಸಿತು ಅಲ್ಲಿನ ಸಂಪ್ರದಾಯ ನಿಷ್ಠರಿಗೆ. ಬಹಿಷ್ಕಾರ ವಿಧಿಸಿದರೂ ಗೋಪಬಂಧು ವಿಚಲಿತರಾಗಲಿಲ್ಲ. ತಮ್ಮ ಸಮಾಜ ಸೇವಾ ದೀಕ್ಷೆಯ ಕಟ್ಟನ್ನು ಸಡಿಲಿಸಲೂ ಇಲ್ಲ.

ವೃತ್ತಿ ಮರೆತು ಸೇವೆ

ಕಟಕ್‌ನಲ್ಲಿ ವಕೀಲಿ (೧೯೦೬) ಆರಂಭಿಸಿದರೂ ಅದರಲ್ಲಿ ಮಗ್ನರಾಗಲು ಮನಸ್ಸು ಒಡಂಬಡಲಿಲ್ಲ. ವಕೀಲಿ ಹಣ ಕೊಡಲಾರಂಭಿಸಿತು. ಸಮಾಜ ಸೇವೆಯಿಂದ ದೂರವಾಗಬೇಕಾಯಿತು. ಮಳೆಗಾಲ ಆರಂಭವಾದೊಡನೆ  ಬ್ರಾಹ್ಮಣಿ, ವೈತರಣಿ, ಖರಸುಮ ನದಿಗಳು ಉಕ್ಕಿಹರಿಯತೊಡಗಿದವು. ಕಟಕ್ ಜಿಲ್ಲೆಯ ಒಂದು ಭಾಗ ಪ್ರವಾಹದ ಸಂಕಟಕ್ಕೆ ತುತ್ತಾಯಿತು. ತಕ್ಷಣ ಗೋಪಬಂಧು  ಕಾರ್ಯಪ್ರವೃತ್ತರಾದರು. ರವೀನ್‌ಷಾ ಕಾಲೇಜಿನ ಕಿರಿಯ ಒಡನಾಡಿಗಳು ಕಣಕ್ಕಿಳಿದರು. ಇದಕ್ಕೊಂದು ಸಂಘಟನೆಯ ರೂಪ ನೀಡಲು ಪ್ರಿನ್ಸಿಪಾಲರ ನೇತೃತ್ವದಲ್ಲಿ ‘‘ಕೇಂದ್ರ ಉತ್ಕಲ ಯುವಜನ ಪರಿಷತ್ತ’’ ನ್ನು ಸಂಘಟಿಸಿದರು. ಇದರ ಶಾಖೆಗಳು ಹುಟ್ಟಿಕೊಂಡವು. ಈ ಸಂಘದ ಮೂಲಕ ಹಲವು ವರ್ಷ ಸಮಾಜ ಸೇವಾ ಕಾರ‍್ಯಗಳನ್ನು ನಡೆಸುವುದು ಸಾಧ್ಯವಾಯಿತು.

ಗೋಪಬಂಧುವಿಗೆ ನ್ಯಾಯಾಲಯದಲ್ಲಿ ಗೆಲವು ಸಾಧಿಸುವುದು ಪ್ರಮುಖವೆನಿಸಲಿಲ್ಲ. ಸತ್ಯನಿಷ್ಠೆಗೆ ಮೊದಲ ಸ್ಥಾನ. ಕ್ರಿಮಿನಲ್ ದೂರೊಂದರಲ್ಲಿ ಭಾಗಿಯಾಗಿದ್ದ ಗೋಪಬಂಧು ದಾಸರ ಕಕ್ಷಿದಾರರೊಬ್ಬರು, ವಕೀಲರಿಗೆ ತಿಳಿಯದಂತೆಯೇ ಪಬ್ಲಿಕ್ ಪ್ರಾಸಿಕ್ಯೂಟರನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಇದು ಹೇಗೋ ಗೋಪಬಂಧು ದಾಸರಿಗೆ ತಿಳಿದಾಗ ಅವರು ಮಾಡಿದ ಮೊದಲ ಕೆಲಸ-ಕಕ್ಷಿದಾರನ ಕಟ್ಟನ್ನು ಹಿಂದಿರುಗಿಸಿದ್ದು; ಅನಂತರ ಜಿಲ್ಲಾ ನ್ಯಾಯಾಧೀಶರಿಗೆ ಗುಪ್ತ ಪತ್ರ ಬರೆದು ಪಬ್ಲಿಕ್ ಪ್ರಾಸಿಕ್ಯೂಟರನ ನಡತೆಯನ್ನು ಅವರ ಗಮನಕ್ಕೆ ತಂದಿದ್ದು. ಇದರ ಪರಿಣಾಮ ಆ ವ್ಯಕ್ತಿ ಶಾಶ್ವತ ಅನರ್ಹತೆಯ ಕಳಂಕ ಹೊರಬೇಕಾಯಿತು.

ಗೋಪಬಂಧು ದಾಸರ ಈ ಸತ್ಯನಿಷ್ಠೆ ಜಿಲ್ಲಾ ನಾಯಾಧೀಶರಿಗೆ (ಅವರೇ ಜಿಲ್ಲಾಧಿಕಾರಿಗಳೂ ಆಗಿದ್ದರು) ಅಪಾರ ಹರ್ಷ ಕೊಟ್ಟಿತು. ಸಮಾಜ ಸೇವೆಯ ಗೀಳಿನ ಈ ವಕೀಲನಿಗೆ ಕುಷ್ಠರೋಗಿಗಳ ಆಶ್ರಮಧಾಮದ ಹೊಣೆಯನ್ನು ವಹಿಸಿ ಕೊಟ್ಟರು. ಆಗಿನಿಂದ ಕುಷ್ಠ ರೋಗಿ ಸೇವೆ ಅವರ ಸೇವಾ ಮಾರ್ಗದ ಇನ್ನೊಂದು ಕವಲಾಯಿತು. ಸಮಾಜಸೇವಾ ಕಾರ್ಯದ ತಕ್ಷಣದ ಫಲ- ಗೋಪಬಂಧು ದಾಸರನ್ನು ಪುರಸಭೆಯ ಸದಸ್ಯರನ್ನಾಗಿ ಸರ್ಕಾರ ನೇಮಿಸಿತು. ಸಖೀ ಗೋಪಾಲ ದೇವಾಲಯದ ಧರ್ಮದರ್ಶಿ ಪಟ್ಟವೂ ಜತೆ ಸೇರಿತು.

ತೋಪು ಶಾಲೆ ಪ್ರಯೋಗ

ಸಮಾಜ ಸೇವೆ, ರಾಜಕಾರಣ, ಸಾಹಿತ್ಯ, ಪತ್ರಿಕಾ ವೃತ್ತಿ ಮತ್ತು ವಕೀಲಿ ಹೀಗೆ ನಾನಾ ಮುಖಗಳಿದ್ದವು ಗೋಪಬಂಧು ದಾಸರಿಗೆ.

ಶಿಕ್ಷಣ ರಂಗದಲ್ಲಿ ಅಪರಿಮಿತ ಆಸಕ್ತಿ. ಉಳಿದೆಲ್ಲ ಸೇವಾ ಮಾರ್ಗಗಳಿಗೂ ಶಿಕ್ಷಣ ಆಧಾರ. ಇದೊಂದು ಸರಿಯಾದರೆ ಉಳಿದೆಲ್ಲ ರಂಗಗಳಲ್ಲಿ ನಿರೀಕ್ಷಿತ ಸಫಲತೆ ಪಡೆಯಬಹುದು. ಅದರಲ್ಲೂ ಶೈಕ್ಷಣಿಕವಾಗಿ ಹಿಂದುಳಿದ ಒರಿಯನ್ನರಿಗೆ ಮೊದಲು ನೀಡಬೇಕಾದ್ದು ಶಿಕ್ಷಣ. ಅದರ ಮೂಲಕ ಸಾಮಾಜಿಕ ಜಾಗೃತಿ, ಸ್ವಾಭಿಮಾನ-ಸ್ವಾವಲಂಬನೆಗಳ ಪಾಠ ಮುಖ್ಯವೆಂದು ಗೋಪಬಂಧು ದಾಸ್ ನಂಬಿದ್ದರು. ಇದಕ್ಕಾಗಿ ತನು, ಮನ, ಧನಗಳನ್ನು ಅರ್ಪಿಸಿದರು. ಮುಂದೆ ‘ಮೂಲಶಿಕ್ಷಣ’ದ ಸಿದ್ಧಾಂತವನ್ನು ರೂಪಿಸಿದ ಮಹಾತ್ಮ ಗಾಂಧಿಯವರಿಗೂ ಗೋಪಬಂಧು ದಾಸರ ಈ ಸಾಧನೆ ಮಾರ್ಗದರ್ಶಕವೆನಿಸಿತು.

ಆಗ ಜಾರಿಯಲ್ಲಿದ್ದ ಶಿಕ್ಷಣ ಒರಿಸ್ಸದಂತಹ ಬಡಜನರ ನಾಡಿಗೆ ಉಪಯುಕ್ತವಲ್ಲ. ಪಾಶ್ಚಾತ್ಯ ಶಿಕ್ಷಣ ಪದ್ಧತಿಯಲ್ಲಿ ಒಳ್ಳೆಯ ಅಂಶಗಳು ಇವೆ. ಆದರೆ ಅದರ ಖರ್ಚು ಬಹು ಹೆಚ್ಚು. ಶಾಲೆಗೆ ಅಗತ್ಯವಾದ್ದು ಭಾರಿ ಕಟ್ಟಡ ಉಪಕರಣಗಳಲ್ಲ, ಮುಖ್ಯವಾದ್ದು ಶೈಕ್ಷಣಿಕ ವಾತಾವರಣ. ಇಂಥ ವಾತಾವರಣ ಪ್ರಾಚೀನ ಗುರುಕುಲ ಪದ್ಧತಿಯಲ್ಲಿತ್ತು. ಅದೇ ಸರಿಯಾದ ಮಾರ್ಗವೆಂದು ನಂಬಿದ್ದರು ಗೋಪಬಂಧು ದಾಸ್.

ಗ್ರಾಮೀಣ ಪರಿಸರದಲ್ಲಿ ವಸತಿ ಶಾಲೆ. ಗುರುಶಿಷ್ಯರಿಗೆಲ್ಲ ಅಲ್ಲೇ ವಾಸ. ಶಿಕ್ಷಕರಿಗೆ ಅಗತ್ಯ ಅರ್ಹತೆ-ಅವರ ಪದವಿ, ಪ್ರಶಸ್ತಿಗಳೇ ಅಲ್ಲ; ಧ್ಯೇಯ ನಿಷ್ಠೆ. ನಾಡ ಜನರನ್ನು ಸಾಕ್ಷರರನ್ನಾಗಿ, ಬುದ್ದಿವಂತರನ್ನಾಗಿ ಮಾಡಿ ಮುನ್ನಡೆಸಬೇಕೆಂಬ ವೃತ್ತಿ ಪ್ರೇಮ. ಅವರ ಜೊತೆಗೆ ದುಡಿಯಲು ಶ್ರದ್ಧಾವಂತರಾದ ಶಿಕ್ಷಕರ ಗುಂಪೂ ನಿಂತಿತು.

ಪುರಿ ಜಿಲ್ಲೆಯ ‘ಸತ್ಯವಾಡಿ’ ವಿಭಾಗದ ‘ಸಖೀ ಗೋಪಾಲ’ ದೊಡ್ಡ ಊರು ಆಗಿರಲಿಲ್ಲ; ಸಣ್ಣ ಹಳ್ಳಿಯೂ ಆಗಿರಲಿಲ್ಲ. ಸಖೀ ಗೋಪಾಲ ರೈಲುನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಸಖೀ-ಗೋಪಾಲರ ಗುಡಿ. ಪುಟ್ಟದಾದರೂ ಪ್ರಸಿದ್ಧ ಯಾತ್ರಾಸ್ಥಳ. ಒರಿಸ್ಸದಲ್ಲೆಲ್ಲ ಸುತ್ತಾಡಿದ ನಂತರ ಆರಿಸಿದ ಈ ತಾಣದ ಪಕ್ಕದಲ್ಲಿ ಒಂದು ಬಕುಳ ವೃಕ್ಷಗಳ ತೋಪು. ಈ ತೋಪಿನಲ್ಲಿ ಶಾಲೆಯನ್ನು ಬೆಳೆಸುವ ನಿರ್ಧಾರ. ಆರಂಭದಲ್ಲಿ ೧೯ ಮಕ್ಕಳು ಶಾಲೆಗೆ ಸೇರಿದರು. ೧೯೦೯ ರ ಆಗಸ್ಟ್ ೧೨ ರಂದು ಇಂಗ್ಲಿಷ್ ಮಾಧ್ಯಮಿಕ ಶಾಲೆ ಆರಂಭವಾಯಿತು. ಆಧುನಿಕ ಉತ್ಕಲದ ಇತಿಹಾಸದಲ್ಲಿ ಸ್ಥಾನ ಪಡೆದ ‘ಸತ್ಯವಾಡಿ ತೋಪಿನ ಶಾಲೆ’ ಗೆ ದೇವಾಲಯದ ಆಸರೆ ಸಿಕ್ಕಿತು. ಇನ್ನೆರಡು ವರ್ಷಗಳಲ್ಲಿ ಪ್ರೌಢಶಾಲೆ ಕಾರ್ಯಾರಂಭ ಮಾಡಿತು.

ಜಾತಿ ಭೇದಗಳಿಂದ ಮುಕ್ತವಾದ ಸಮುದಾಯ ಜೀವನ, ೭೦ ವರ್ಷಗಳ ಹಿಂದೆ ಆದರ್ಶವೆನಿಸಿರಲಿಲ್ಲ; ಅಪರಾಧವೆಂಬ ಭಾವನೆಯಾಗಿತ್ತು. ಈ ರೀತಿಯ ಸಹವಾಸ-ಸಹಭೋಜನಗಳಿಂದ ಹಿಂದೂಧರ್ಮಕ್ಕೇ ಹಾನಿಯೆಂಬ ಭ್ರಾಂತಿ ಕಾಡಿತ್ತು.

ಶಾಲೆ ಆರಂಭವಾದ ಒಂದೇ ವರ್ಷದಲ್ಲಿ ಪರ್ಣಕುಟೀರದಂತಿದ್ದ ಶಾಲೆ, ಗ್ರಂಥಾಲಯಗಳು ಬೆಂಕಿಯ ಆಕಸ್ಮಿಕಕ್ಕೆ ಗುರಿಯಾಗಿ ಸುಟ್ಟು ಬೂದಿಯಾದವು.

ಈ ಅಗ್ನಿ ಅನಾಹುತ ಗೋಪಬಂಧುಗಳನ್ನೇನೂ ಕಂಗೆಡಿಸಲಿಲ್ಲ. ‘‘ನಾವು ಗುಡಿಸಿಲುಗಳಲ್ಲಿ ಶಾಲೆ ನಡೆಸಿದ್ದು ದೇವರಿಗೆ ಇಷ್ಟವಾಗಲಿಲ್ಲ. ಸರಿಯಾದ ಕಟ್ಟಡವಿರಲಿ ಎಂಬ ಉದ್ದೇಶವಿರಬೇಕು’’ ಎಂದು ಗೆಳೆಯರನ್ನು ಸಮಾಧಾನ ಪಡಿಸಿದರು. ತರಾತುರಿಯಿಂದ ಪುನಃ ಗುಡಿಸಿಲುಗಳ ನಿರ್ಮಾಣವಾದವು. ಶಾಲೆ ತಡೆಯಿಲ್ಲದೆ ಮುಂದುವರೆಯಿತು. ಶಾಲೆಯ ಮೊರೆಗೆ ಮನ್ನಣೆ ನೀಡಿದ ದಾನಿಗಳ ನೆರವಿನಿಂದ ಕ್ರಮೇಣ ಕಟ್ಟಡಗಳು ಮೇಲೇಳತೊಡಗಿದವು. ಕಟ್ಟಡಗಳ ಬಳಕೆಯೇನಿದ್ದರೂ ಮಳೆಗಾಲಕ್ಕೆ ಮೀಸಲು. ಉಳಿದ ದಿನಗಳಲ್ಲಿ ಮರದ ನೆರಳಲ್ಲೇ ಶಾಲೆ ನಡೆಯುತ್ತಿತ್ತು.

ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ಬಂದು ಸೇರಿದರು. ಅವರು ಪರೀಕ್ಷೆಗೆ ಕೂಡುವ ಮೊದಲು ವಿಶ್ವವಿದ್ಯಾನಿಲಯ ಒಂದರೊಡನೆ ಶಾಲೆ ಸಂಬಂಧ ಪಡೆಯಬೇಕಾಗಿತ್ತು. ಇದಕ್ಕಾಗಿ ಕಲ್ಕತ್ತ ವಿಶ್ವವಿದ್ಯಾನಿಲಯವನ್ನು  ಬೇಡಿದಾಗ ಅದು ‘ಸರ್ಕಾರದಿಂದ ಮಾನ್ಯತೆ, ಹಣಸಹಾಯ ಪಡೆಯಿರಿ’ ಎಂದಿತು. ಹಣದ ಸಹಾಯ ಪಡೆದರೆ ಸರ್ಕಾರದ ಯಜಮಾನ್ಯವನ್ನು ಒಪ್ಪಿದ ಹಾಗೇ. ಇದು ಗೋಪಬಂಧು ರವರಿಗೆ ಸಮ್ಮತವಿರಲಿಲ್ಲ. ಹೀಗೆ ಶಾಲೆ ಅನೇಕ ಅಡ್ಡಿಗಳನ್ನು ಎದುರಿಸಬೇಕಾಯಿತು.

ಮನುಷ್ಯರನ್ನು ರೂಪಿಸುವ ಶಿಕ್ಷಣ

ಶಿಕ್ಷಿತ ಮಾನವವರ್ಗವನ್ನು ಸಿದ್ಧಪಡಿಸುವುದು ಮಾತ್ರ ಸ್ಥಾಪಕರ ಗುರಿಯಾಗಿರಲಿಲ್ಲ. ವಿದ್ಯಾರ್ಥಿಗಳ ಮನಸ್ಸು ಮತ್ತು ಶರೀರವನ್ನು ಸಂಸ್ಕರಿಸಿ ಉತ್ತಮ ವ್ಯಕ್ತಿತ್ವ ರೂಪಿಸುವುದು; ಈ ರೀತಿ ‘ಸತ್ಯವಾಡಿ’ ಯ ಮುದ್ರೆಯೊತ್ತಿದ ಯಾವ ಜನರು ಯಾವುದೇ ರಂಗವನ್ನು ಪ್ರವೇಶಿಸಲಿ, ಅಲ್ಲಿ ಆದರದ ಸ್ವಾಗತ ಪಡೆಯುವಂತಾಗಬೇಕು. ಸೇವಾಕಾಂಕ್ಷೆಯ ಪ್ರತೀಕಗಳಂತಿರ ಬೇಕು. ಮಂಕಾಗಿರುವ ಒರಿಸ್ಸಾದ ಬಾಳನ್ನು ಬೆಳಗಬೇಕೆಂಬ ಆಸೆ ಹೊತ್ತಿದ್ದರು.

ಶಾಲೆಯಲ್ಲಿ ಕೇವಲ ಪಾಠ ಕಲಿಸುವ ಕಾಟಾಚಾರದ ಛಾಯೆಯೂ ಸುಳಿಯಲಿಲ್ಲ. ಕಲಿಯುವವರ ಮತ್ತು ಕಲಿಸುವವರ ನಡುವೆ ಅತಿ ನಿಕಟವಾದ ಸಂಬಂಧವಿತ್ತು. ಶಾಲೆಯ ಅಧ್ಯಾಪಕರಲ್ಲಿ ಮೇಲು ಕೀಳು ಭಾವವಿರಲಿಲ್ಲ. ವಿದ್ಯಾರ್ಥಿಗಳ ಬರಹದ ಶಕ್ತಿಯನ್ನು ಕುದುರಿಸಲು ಶಾಲೆಯ ನಿಯತಕಾಲಿಕ ಪ್ರಕಟವಾಗುತ್ತಿತ್ತು. ರಾಜ್ಯ ಮತ್ತು ರಾಷ್ಟ್ರದ ವಿಷಯಗಳನ್ನು ಕುರಿತ ಚರ್ಚಾಗೋಷ್ಠಿ ಕಾಲಕಾಲಕ್ಕೆ ನಡೆಯುತ್ತಿತ್ತು. ಕಾಲಾವಕಾಶ ದೊರೆತಾಗಲೆಲ್ಲ ಸ್ವಯಂ ಗೋಪಬಂಧು ದಾಸರೇ ಭಾಗವಹಿಸುತ್ತಿದ್ದರು. ಸುತ್ತ ಮುತ್ತಲಿನ ಐತಿಹಾಸಿಕ ಚಾರಿತ್ರಿಕ ಮಹತ್ವದ ಸ್ಥಳಗಳಿಗೆ ಪಾದಯಾತ್ರೆ ಪ್ರವಾಸದ ಏರ್ಪಾಟು ಇರುತ್ತಿತ್ತು. ವಿದ್ಯಾರ್ಥಿ ನಿಲಯದಲ್ಲಿ ಸ್ವೇಚ್ಛೆಯಿಂದ ಹಣ ವೆಚ್ಚ ಮಾಡಲು ಅವಕಾಶವಿರಲಿಲ್ಲ. ಪಾಲಕರು ಹಣವನ್ನು ಪ್ರಧಾನಾಧ್ಯಾಪಕರಿಗೆ ಕಳುಹಿಸಬೇಕಾಗಿತ್ತು. ಬಂದ ಹಣ ವಿದ್ಯಾರ್ಥಿ ತಂಡದ ನಾಯಕನ ಕೈ ಸೇರುತ್ತಿತ್ತು. ವಿದ್ಯಾರ್ಥಿ ಪಡೆದ ಹಣಕ್ಕೆ ಲೆಕ್ಕ ಕೊಡಲೇಬೇಕಾಗಿತ್ತು. ವಾದಗಳೇನಿದ್ದರೂ ಶಾಲಾ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುತ್ತಿದ್ದವು. ಕಲಿಕೆಯಲ್ಲಿ ದುರ್ಬಲರೆನಿಸುವ ವಿದ್ಯಾರ್ಥಿಗಳನ್ನು ಉಳಿದವರ ಸಮಕ್ಕೆ ತರುವ ಕಾರ್ಯದ ಹೊಣೆಯನ್ನು ಶಿಕ್ಷಕರಿಗೆ ವಹಿಸಲಾಗುತ್ತಿತ್ತು.

ಸತ್ಯವಾಡಿ ಶಾಲೆಯ ಸಾಧನೆಗಳಲ್ಲಿ ಬಹು ಮುಖ್ಯವಾದದ್ದು ಈ ಶತಮಾನದ ಆರಂಭದಲ್ಲೇ ಜಾತಿ ಮತಗಳ ತರತಮಭಾವವನ್ನು ಅಳಿಸಿ ಹಾಕಲು ನಡೆಸಿದ ಅಳಿಲ ಪ್ರಯತ್ನ.

ಬ್ರಹ್ಮಚರ್ಯ ಪಾಲನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವು ನೀಡುವುದರ ಜೊತೆಗೇ ‘ಅಖಾಡಾ’ ಗಳಲ್ಲಿ ಮಲ್ಲ ವಿದ್ಯೆ, ಅಂಗ ಸಾಧನೆಗಳನ್ನೂ ಕಲಿಸುವ ಜವಾಬ್ದಾರಿ ಒಬ್ಬ ಶಿಕ್ಷಕರ ಹೊಣೆಯಾಗಿತ್ತು.

ಹೀಗೆ ‘ಸತ್ಯವಾಡಿ’ ಯ ಶಾಲೆ ಉತ್ಕಲದ ಆದರ್ಶ ಆಶಯಗಳ ಸಾಂಸ್ಥಿಕ ರೂಪವಾಗಿದ್ದರೆ, ಇದರ ಶಿಲ್ಪಿ ಗೋಪಬಂಧು ದಾಸ್ ವ್ಯಕ್ತಿ ರೂಪವಾಗಿದ್ದರು.

ಶಾಸಕ-ಸಾಧಕ

ಬಿಹಾರ ಮತ್ತು ಒರಿಸ್ಸಾಗಳೆರಡೂ ಸೇರಿದಂತೆ ಒಂದು ಪ್ರಾಂತ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೊಂದು ವಿಧಾನ ಪರಿಷತ್ತು. ಗೋಪಬಂಧು ವಿಧಾನ ಪರಿಷತ್ತಿಗೆ (೧೯೧೭) ಆಯ್ಕೆಯಾದರು.

ಕೈಗೊಂಡ ಕಾರ್ಯ ಯಾವುದೇ ಆಗಿರಲಿ, ಅದಕ್ಕಾಗಿ ಹಗಲಿರುಳೆನ್ನದೆ ದುಡಿಯುವುದು ಗೋಪಬಂಧುದಾಸರ ಜಾಯಮಾನ. ಆದ್ದರಿಂದಲೇ ವಕೀಲಿಗೆ ಕೈಮುಗಿದರು. ಶಾಸಕನ ಸ್ಥಾನಬಲದಿಂದ ಸಣ್ಣ ಪುಟ್ಟ ಸ್ವಂತ ಲಾಭ ಪಡೆಯುವ ಮಾರ್ಗವನ್ನೆಂದೂ ಅವರು ಅವಲಂಬಿಸಲಿಲ್ಲ. ಒಲವಿಗಾಗಲೀ, ಒತ್ತಾಯಕ್ಕಾಗಲೀ ತಮ್ಮ ನಿಲುವನ್ನು ಎಂದೂ ಬಿಟ್ಟುಕೊಡಲಿಲ್ಲ. ವ್ಯಾಪಕವಾಗಿ ಒರಿಸ್ಸಾದ ಭೂಭಾಗಗಳನ್ನೆಲ್ಲ ಸಂಚರಿಸಿ, ಜನರ ಕಷ್ಟ ನಷ್ಟಗಳ ಪರಿಚಯ ಪಡೆದರು. ಆಳವಾದ ಅಧ್ಯಯನ, ಪ್ರತ್ಯಕ್ಷ ಪರಿಶೀಲನೆಗಳಿಂದ ದೃಢಪಟ್ಟ ವಿಚಾರಗಳನ್ನು ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರೆ ಸರ್ಕಾರ ಗಮನವಿಟ್ಟು ಕೇಳುವಂತಾಯಿತು.

ಶಾಸಕರಾಗಿ ತಾವು ಸಾಧಿಸಬೇಕಾದ ನಾಲ್ಕು ಹೆಗ್ಗುರಿಗಳನ್ನು ಗೋಪಬಂಧು ದಾಸ್ ಹೊಂದಿದ್ದರು. ಅದರಲ್ಲಿ ಮೊದಲಿನದು-ಹಲವು ಪ್ರಾಂತಗಳು ಮತ್ತು ದೇಶೀಯ ರಾಜ್ಯಗಳಲ್ಲಿ ಹಂಚಿಹೋದ ಒರಿಯ ಭಾಷಾ ಭೂಭಾಗದ ಏಕೀಕರಣದ ಸಾಧನೆ. ತಮ್ಮತನ ಕಳೆದುಕೊಂಡಿದ್ದ ಒರಿಯನ್ನರಲ್ಲಿ ಭಾಷಾಭಿಮಾನ ಮತ್ತು ಭ್ರಾತೃಭಾವ ಕುದುರಿಸಲು ವ್ಯಾಪಕ ಸಂಚಾರ ನಡೆಸಿದರು. ಜನರಲ್ಲಿ ಸ್ಥೆರ್ಯ ತುಂಬಿದರು.

ತಮ್ಮ ನಿಷ್ಠ ಅನುಯಾಯಿಗಳನ್ನು ಒರಿಸ್ಸದ ನಾನಾ ಭಾಗಗಳಿಗೆ ಕಳುಹಿಸಿ ಶಾಲೆಗಳನ್ನು ಪ್ರಾರಂಭಿಸಿದರು. ಜೀರ್ಣಗೊಂಡಿದ್ದ ಶಾಲೆಗಳಿಗೆ ಜೀವ ತುಂಬಿ ಉತ್ಸಾಹಿ ಶಿಕ್ಷಕರನ್ನು ನೇಮಿಸಿದರು. ಈ ಶಿಕ್ಷಕರ ಪಡೆ ಒರಿಯ ಜನರಲ್ಲಿ ಭಾಷಾಭಿಮಾನ ಮತ್ತು ಸ್ವಬಂಧು ಪ್ರೇಮ ಕುದುರಿಸುವುದರಲ್ಲಿ ತಲ್ಲೀನವಾಯಿತು. ಒರಿಸ್ಸಾ ಏಕೀಕರಣದ ಚಳವಳಿ ಆರಂಭವಾಯಿತು.

ಗೋಪಬಂಧು ದಾಸರ ಹೃದಯದಲ್ಲಿ ಶಿಕ್ಷಣದ ನಂತರದ ಎರಡನೇ ಸ್ಥಾನ ಪಡೆದಿದ್ದ ಅಂಶ ಜನತೆಯ ಕಷ್ಟನಿವಾರಣೆ, ಅದರಲ್ಲೂ ಕ್ಷಾಮ, ಪ್ರವಾಹ ಮತ್ತು ಸಾಂಕ್ರಾಮಿಕ ಜಾಡ್ಯಗಳಿಂದ ಬಳಲುವವರಿಗೆ ಸೂಕ್ತ ಪರಿಹಾರ ಕಲ್ಪನೆ.

ಒರಿಸ್ಸ ಹತ್ತಾರು ನದಿಗಳ ರಾಜ್ಯ. ಪ್ರತಿ ವರ್ಷ ಪ್ರವಾಹದ ಪೀಡೆಯಿಂದ ಜನ ಹಾನಿಗೊಳಗಾಗುತ್ತಿದ್ದರು. ಶಾಶ್ವತ ಪರಿಹಾರದ ದಿಕ್ಕಿನಲ್ಲಿ ಸರ್ಕಾರ ನಿಶ್ಚೇಷ್ಟವಾಗಿತ್ತು. ೧೯೧೯ ರಲ್ಲಿ ಪುರಿ ಜಿಲ್ಲೆಯಲ್ಲಿ ಪ್ರವಾಹದ ಪ್ರಕೋಪ ಮಿತಿ ಮೀರಿತ್ತು.

‘‘ಜನರ ಕಷ್ಟನಷ್ಟಗಳನ್ನು ಹೇಳುವಾಗ ಗೋಪಬಂಧು ದಾಸ್ ಬಣ್ಣ ಕಟ್ಟಿ ಹೇಳುತ್ತಾರೆ. ಪರಿಸ್ಥಿತಿ ಅಷ್ಟು ಕೆಟ್ಟಿಲ್ಲ’’ ವೆಂಬುದು ಸರ್ಕಾರ ನೀಡಿದ ಸಮಾಧಾನ. ಕೆರಳಿದ ಗೋಪಬಂಧು-‘‘ಬ್ರಿಟಿಷ್ ಚಕ್ರಾಧಿಪತಿಗಳ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಈ ಭೂಭಾಗದ ಯಾವುದೇ ಮೂಲೆಯಲ್ಲಾದರೂ ಹಸಿವಿನಿಂದ ಒಂದು ಶವ ಉರುಳಿದ್ದರೆ, ಆ ಜೀವ ಹಾನಿಯ ಕಳಂಕವನ್ನು ನಾನು ತಪ್ಪಿಸಿಕೊಳ್ಳಲಾರೆ’’ ಎಂದು ಘೋಷಿಸಿದರು.

ಇದು ಗೌರ‍್ನರ್ ಎಡ್ವರ‍್ಡ್ ಗೈಟ್‌ರವರ ಮನಸ್ಸನ್ನು ಕರಗಿಸಿತು. ಯಾರಿಗೂ ಪತ್ತೆಯಾಗದಂತೆ ಗೌರ‍್ನರ್ ಗೈಟ್ ಪ್ರವಾಹ ಪೀಡಿತ ಪ್ರದೇಶದ ಭೇಟಿಗೆ ಬಂದರು. ಸರ್ಕಾರ ಮಾಡಬೇಕಾದಷ್ಟು ಕೆಲಸ ಮಾಡಿಲ್ಲವೆಂಬ ಅವರ ಸ್ಪಷ್ಟೋಕ್ತಿ ಜಿಲ್ಲಾಧಿಕಾರಿಗಳಿಗೆ ಕಿರಿಕಿರಿಯುಂಟು ಮಾಡಿದ್ದು ಸಹಜವೇ ಆಗಿತ್ತು.

ಸದ್ಯದ ಸಮಸ್ಯೆ ಬಗೆಹರಿದರೆ ಸಾಲದು. ಪ್ರತಿವರ್ಷ ಸಂಭವಿಸುವ ಪ್ರವಾಹ ಮತ್ತು ಅದರ ಹಾನಿಯಿಂದ ಜನತೆಗೆ ಶಾಶ್ವತ ರಕ್ಷಣೆ ಅಗತ್ಯವೆಂದು ಅದಕ್ಕಾಗಿ ವಿಧಾನ ಪರಿಷತ್ತಿನಲ್ಲಿ ಹೋರಾಡಿದರು. ೧೯೨೭ ರ ಪ್ರವಾಹ ಸರ್ಕಾರದ ಕಣ್ಣು ತೆರೆಸಿತು. ಆಗ ತಜ್ಞರ ಸಮಿತಿಯನ್ನು ರಚಿಸಿ ಶಾಶ್ವತ ಪರಿಹಾರ ಕ್ರಮ ರೂಪಿಸಲು ಆದೇಶ ನೀಡಿತು. ಆ ತಜ್ಞರ ಸಮಿತಿಯ ವರದಿಯ ಫಲವೇ ಸ್ವತಂತ್ರ ಭಾರತದಲ್ಲಿ ಹಿರಾಕುಡ್ ಜಲಾಶಯ ನಿರ್ಮಾಣಕ್ಕೆ ಆಸ್ಪದ ನೀಡಿತು.

ಒರಿಸ್ಸದ ಕರಾವಳಿಯ ಪ್ರದೇಶದಲ್ಲಿ ಉಪ್ಪು ತಯಾರಿಕೆ ಶತಮಾನಗಳಿಂದ ನಡೆಯುತ್ತಿತ್ತು. ಆದರೆ ಸರ್ಕಾರ ಹೇಳಿತು: ಅಪ್ಪಣೆಯಿಲ್ಲದೆ ಉಪ್ಪು ತಯಾರಿಕೆ ಕೂಡದು; ತಯಾರಿಸಿದ ಉಪ್ಪಿಗೆ ಸುಂಕ ತೆರಬೇಕು. ಇದರ ವಿರುದ್ಧ ವಿಧಾನಪರಿಷತ್ತಿನಲ್ಲಿ ಗೋಪಬಂಧು ಹೋರಾಟ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತ

ವಿದ್ಯಾರ್ಥಿಯಾಗಿದ್ದಾಗಲೇ ಉತ್ಕಲ ಪಿತಾಮಹ ಮಧುಸೂದನ ದಾಸರ ಪ್ರಭಾವಕ್ಕೆ ಸಿಕ್ಕಿದ ಗೋಪಬಂಧು ೧೯೦೩ರಿಂದಲೇ ‘ಉತ್ಕಲ ಸಮ್ಮೇಳನ’ ದ ಸಂಪರ್ಕ ಪಡೆದಿದ್ದರು.

‘ಉತ್ಕಲ ಸಮ್ಮೇಳನ’ ದ ಕೆಲವು ಪ್ರಮುಖರು ರಾಜ ಕಾರಣದ ಸಂಪರ್ಕ ಬೇಡವೆಂಬ ನಿಲುವು ತಳೆದಿದ್ದರು. ಇದಕ್ಕೆ  ಗೋಪಬಂಧು ದಾಸ್ ಹೂಡಿದ ಪ್ರತಿವಾದವಿದು-ಸ್ವದೇಶಿ ಪ್ರಚಾರ ರಾಜಕೀಯವಾಗುತ್ತದೆ. ಆದರೆ ಕಿರುಕುಳದ ಮಾರ್ಗ ಅನುಸರಿಸಿ, ವಿದ್ಯಾರ್ಥಿಗಳನ್ನು ಬಿಡದೆ ಯುದ್ಧನಿಧಿ ಸಂಗ್ರಹ ರಾಜಕೀಯವಾಗುವು ದಿಲ್ಲವೇನು? ‘ಫ್ರಾನ್ಸ್‌ನ ಮಹಾಕ್ರಾಂತಿ’ ಕುರಿತ ಗ್ರಂಥವನ್ನು ಓದುವುದು ರಾಜಕೀಯವೆಂದು ಪರಿಗಣಿಸಲಾಗುತ್ತದೆ: ಅದೇ ‘‘ಭಾರತಕ್ಕೆ ಬ್ರಿಟಿಷರ ಆಳ್ವಿಕೆಯ ಲಾಭಗಳು’’ ಗ್ರಂಥದ ಪಠನ ರಾಜಕೀಯವಾಗುವುದಿಲ್ಲವೇನು?

ಹಿಂದಿನ ಸಮ್ಮೇಳನಗಳಲ್ಲೇ ರಾಷ್ಟ್ರೀಯ ಕಾಂಗ್ರೆಸ್‌ನ ಜತೆಗೂಡಬೇಕೆಂದು ಗೋಪಬಂಧು ಪ್ರಭಾವಪೂರ್ಣವಾಗಿ ವಾದಿಸುತ್ತ ಬಂದಿದ್ದರು. ಯುವ ಜನರ ಸಹಕಾರ ಅವರಿಗೆ ಸಂಪೂರ್ಣವಾಗಿತ್ತು. ಸಮ್ಮೇಳನದ ಅಂಗವಾಗಿ ಒರಿಸ್ಸ ವಿದ್ಯಾರ್ಥಿ ಸಮ್ಮೇಳನವನ್ನು ಅವರು ಜರುಗಿಸಿದ್ದರು.

ಗೋಪಬಂಧು ಅವರು ೧೯೨೦ ರ ಕಲ್ಕತ್ತ ಕಾಂಗ್ರೆಸ್ ಅಧಿವೇಶನ, ಅನಂತರ ನಾಗಪುರ ಅಧಿವೇಶನ ಎರಡ ರಲ್ಲಿಯೂ ಪಾಲ್ಗೊಂಡರು. ಕಡೆಗೂ ಉತ್ಕಲ ಸಮ್ಮೇಳನ ರಾಜಕೀಯದಿಂದ ದೂರ ಇರಲು ನಿರ್ಧರಿಸಿತು. ಒರಿಸ್ಸದ ಪ್ರೇಮ ಮತ್ತು ಅದರ ಮುನ್ನಡೆಯ ಪ್ರಯತ್ನ ಭಾರತದ ರಾಷ್ಟ್ರೀಯತೆಯ ಒಂದು ಅಂಗವೆಂದು ಭಾವಿಸಿದ್ದ ಗೋಪಬಂಧು, ಬೇಸರದಿಂದ ‘ಸಮ್ಮೇಳನ’ ದ ಸಂಪರ್ಕವನ್ನು ತೊರೆದರು. ಅಲ್ಲಿಂದ ಮುಂದೆ ಅವರು ಕಾಂಗ್ರೆಸಿಗರಾಗಿ ಉಳಿದರು.

ಅಸಹಕಾರ ತತ್ವ ಅಂಗೀಕರಿಸಿದ ಗೋಪಬಂಧು ವಿಧಾನ ಪರಿಷತ್ತಿನ ಸದಸ್ಯತ್ವ ಬಿಡಲು ನಿರ್ಧರಿಸಿದರು.

ಕನಸಿನ ಕೊನೆ

ಸರ್ಕಾರದ ಹಂಗಿಲ್ಲದ ಶಾಲೆಗಳನ್ನು ನಡೆಸಲು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ನೆರವಾಗಲು ‘ಉತ್ಕಲ ಸ್ವರಾಜ್ಯ ಶಿಕ್ಷಾ ಪರಿಷತ್ತ’ ನ್ನು ಗೋಪಬಂಧು ಆರಂಭಿಸಿದ್ದರು. ಈ ಸಂಸ್ಥೆಯ ಅಡಿಯಲ್ಲಿ ಒರಿಸ್ಸದ ಎಲ್ಲ ಭಾಗಗಳಲ್ಲಿ ದೇಶೀಯ ವಿದ್ಯಾಶಾಲೆಗಳನ್ನು ಆರಂಭಿಸುವ ನಿರ್ಧಾರ ಮಾಡಿದ್ದರು. ಇದಕ್ಕೆ ಅನುಗುಣವಾಗಿ ಮಾಡಿದ ಮೊದಲ ಕೆಲಸವೆಂದರೆ, ತಾವೇ ಅಕ್ಕರೆಯಿಂದ ಬೆಳೆಸಿದ್ದ ಸತ್ಯವಾಡಿಯ ತೋಪಿನ ಶಾಲೆಯನ್ನೂ ದೇಶೀಯ ವಿದ್ಯಾಲಯವನ್ನಾಗಿ ಮಾರ್ಪಡಿಸಿದ್ದು. ಅಲ್ಲಿ ತರಬೇತಿ ಪಡೆದಿದ್ದ ಹಿರಿಯ ಶಿಕ್ಷಕರನ್ನೆಲ್ಲ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಅಲ್ಲಿ ದೇಶೀಯ ಶಾಲೆಗಳನ್ನು ಕಟ್ಟಿದರು.

ಸತ್ಯವಾಡಿಯ ವಸತಿ ಶಾಲೆಯನ್ನು ಮುಚ್ಚುವ ಮತ್ತು ಅದನ್ನು ದೇಶೀಯ ವಿದ್ಯಾಶಾಲೆಯನ್ನಾಗಿ ಮಾರ್ಪಡಿಸುವ ನಿರ್ಧಾರ ಕೇಳಿದ ಸರ್ಕಾರ, ಸ್ವಪ್ರೇರಿತವಾಗಿ ಇಪ್ಪತ್ತು ಸಾವಿರ ರೂಪಾಯಿಗಳ ಅನುದಾನದ ಆಮಿಷ ಒಡ್ಡಿತು. ಆದರೂ ಗೋಪಬಂಧು ವಿಚಲಿತರಾಗಲಿಲ್ಲ. ಸರ್ಕಾರದ ಅನುದಾನ ಪಡೆಯುವುದು ಅಸಹಕಾರ ಆಂದೋಳನದ ನೀತಿಗೆ ತಕ್ಕದಾಗಿರಲಿಲ್ಲ.

ಹೀಗೆ ಸುಮಾರು ೧೨ ವರ್ಷ ಕಾಲ ಉಜ್ವಲ ನಕ್ಷತ್ರದಂತೆ ಬೆಳೆಸಿದ ಸತ್ಯವಾಡಿಯ ತೋಪು ಶಾಲೆ ಒರಿಸ್ಸದ ಸಂಸ್ಕೃತಿಯ ಪ್ರತೀಕವಾಗಿದ್ದ ಶಿಕ್ಷಣ ಸಂಸ್ಥೆ ತನ್ನ ಸ್ವರೂಪ ಮಾರ್ಪಡಿಸಿಕೊಂಡು ಸಾಮಾನ್ಯ ಶಾಲೆಗಳ ಗುಂಪಿಗೆ ಸೇರಿತು. ತಮ್ಮ ಸಮಯವನ್ನೆಲ್ಲ ಶಾಲೆಯ ಕಾರ್ಯಕ್ಕೇ ವಿನಿಯೋಗಿಸುತ್ತಿದ್ದ ಕಾರ್ಯಕರ್ತರ ಸೇವೆ ಹತ್ತಾರು ಕೇಂದ್ರಗಳಿಗೆ ಒದಗುವಂತಾಯಿತು. ಉದಾತ್ತ ಧ್ಯೇಯದ ಸಾಧನೆಗಾಗಿ ಸತ್ ಸಂಕಲ್ಪ ಒಂದನ್ನು ಕೈ ಬಿಟ್ಟಂತೆಯೇ ಆಯಿತು.

ಹುಟ್ಟಿ ೧೨ ವರ್ಷಗಳು ತುಂಬುವುದರೊಳಗಾಗಿ ಸತ್ಯವಾಡಿ ಶಾಲೆ (ಜನವರಿ ೧೯೨೧) ದೇಶೀಯ ವಿದ್ಯಾಶಾಲೆಯಾಗಿ ಮಾರ್ಪಟ್ಟಿತು. ಮೊದಲು ಶಾಲೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುತ್ತಿತ್ತು. ಮಹಾತ್ಮಗಾಂಧಿ ಉಚಿತ ದೇಶೀಯ ಶಿಕ್ಷಣದ ಕರೆ ನೀಡಿದ್ದರು. ಅದಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆಯಲ್ಲಿ ಶಿಕ್ಷಣ ಶುಲ್ಕ ರದ್ದಾಯಿತು. ಆದರೆ ಇದರ ಪರಿಣಾಮವಾಗಿ ಶಾಲೆಯನ್ನು ಮುಚ್ಚಬೇಕಾದ ಸಂದರ್ಭ ಒದಗಿತು. ಕಡೆಗೆ ೧೯೨೬ರಲ್ಲಿ ಅವಸಾನ ಕಂಡಿತು. ಇದರಿಂದ ಗೋಪಬಂಧುಗಳಿಗೆ ಸಹಜವಾಗಿ ತುಂಬ ವ್ಯಥೆಯಾಯಿತು. ಆದರೆ ಶಾಲೆಗೆ ಸರ್ಕಾರದ ನೆರವನ್ನು ಪಡೆಯಲು ಅವರು ಒಪ್ಪಲೇ ಇಲ್ಲ.

ಪತ್ರಿಕಾ ವೃತ್ತಿ

ಉತ್ಕಲದ ಏಕೀಕರಣ ಸಾಧನೆ, ಪ್ರವಾಹ ಕ್ಷಾಮದ ಪಿಡುಗುಗಳ ವಿರುದ್ಧ ಹೋರಾಟ ಮತ್ತು ಶಿಕ್ಷಣ ಪ್ರಚಾರಗಳಿಗಾಗಿ ಪ್ರತಿಕೆಯೊಂದು ಅಗತ್ಯವಾಗಿತ್ತು. ೧೯೧೩ ರಲ್ಲೇ ‘ಆಶಾ’ ನಿಯತಕಾಲಿಕೆಯನ್ನು ಗೆಳೆಯರೊಬ್ಬರ ಮೂಲಕ ಪ್ರಾರಂಭಿಸಿ ಗೋಪಬಂಧು ಅದರ ಸಂಪಾದಕರಾಗಿ ಆರು ವರ್ಷ ಶ್ರಮಿಸಿದರು. ಸ್ವಂತದ ಮುದ್ರಣಾಲಯಕ್ಕೆಂದು ಸಂಗ್ರಹಿಸಿದ್ದ ೧೬೦೦೦ ರೂಪಾಯಿ ಕಳುವಾದರೂ ಧೈರ್ಯಗೆಡಲಿಲ್ಲ, ಪುನಃ ಅಷ್ಟೇ ಹಣ ಕೂಡಿಸಿ ‘ಸಮಾಜ’ದ ಪ್ರಕಟನೆ ಆರಂಭಿಸಿಬಿಟ್ಟರು (ವಿಜಯದಶಮಿ, ಅಕ್ಟೋಬರ್ ೧೯೧೯). ಸಖೀ ಗೋಪಾಲದ ಸತ್ಯವಾಡಿ ಮುದ್ರಣಾಲಯದಲ್ಲಿ ಅಚ್ಚಾಗಿ ಹೊರಬರುತ್ತಿದ್ದ ಪತ್ರಿಕೆ ಗ್ರಾಮೀಣ ಒರಿಸ್ಸದ ಜನಮನ ಬಿಂಬವಾಯಿತು. ಒರಿಸ್ಸಾ ಬಂಗಾಳದ ಭಾಗವಾಗಿದ್ದರೆ ರಾಜಧಾನಿ ಕಲ್ಕತ್ತ ೨೫೦ ಮೈಲಿದೂರ, ಪಾಟ್ನಾ ಆಗಿದ್ದರಿಂದ ೫೦೦ ಮೈಲಿ. ನೂರಾರು ಸಮಸ್ಯೆಗಳುಳ್ಳ ಬಡ ಜನರ ಗೋಳು ಮೊದಲು ದೂರಕ್ಕೆ ಕೇಳಿಸುತ್ತಲೇ ಇರಲಿಲ್ಲ.

ಪತ್ರಿಕಾ ವ್ಯವಸಾಯದಲ್ಲಿ ನಿರ್ಭೀತಿಯಿಂದ ವ್ಯವಹರಿಸು ವುದು ಅಗತ್ಯವೆಂದು ಎಲ್ಲರೂ ಹೇಳುತ್ತಾರೆ. ಆದರೆ ಇದು ಹರಿತವಾದ ಕತ್ತಿಯ ಅಲುಗಿನ ಮೇಲೆ ನಡೆಯುವಷ್ಟು ಕಠಿಣಕಾರ್ಯ.

ಪುರಿ ಜಿಲ್ಲೆ, ಬೇಗುನಿಯಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದ್ದ ಇಬ್ಬರು ಪೊಲೀಸ್ ಪೇದೆಗಳ ಅವ್ಯವಹಾರದ ಸುದ್ದಿಯನ್ನು ‘‘ನಿಜವಿದ್ದರೆ ಗಂಭೀರ ವಿಚಾರ’’ ವೆಂಬ ತಲೆಬರಹದ ಅಡಿಯಲ್ಲಿ (ಆಗಸ್ಟ್ ೧೯೨೧) ಪ್ರಕಟಿಸಿದರು. ಪ್ರಕಟನೆಯಾದ ೫-೬ ವಾರಗಳ ನಂತರ, ತಮಗೆ ತಲಪಿದ್ದ ಸುದ್ದಿ ಪೂರ್ಣ ನಿಜವಾದ್ದಲ್ಲವೆಂದು ತಿಳಿದುಬಂತು. ತಕ್ಷಣ ತಿದ್ದುಪಡಿಯನ್ನು ಅಚ್ಚು ಮಾಡಿದರು. ಆದರೂ ಅವರ ಮೇಲೆ ನಂಜು ಕಾರುತ್ತಿದ್ದ ಸರ್ಕಾರಕ್ಕೆ ಹಲ್ಲು ಬಂದಂತೆ ಆಯಿತು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಯಿತು.

ಗೋಪಬಂಧು ತಾವು ಬ್ರಿಟಿಷ್ ಸರ್ಕಾರದ ನ್ಯಾಯಾಲಯ ವನ್ನು ಒಪ್ಪುವುದಿಲ್ಲ ಎಂದು ಹೇಳಿದರು. ವಿಚಾರಣೆ ಆರಂಭವಾಗಿ ಮುಕ್ತಾಯಗೊಳ್ಳಲು ಒಂದು ತಿಂಗಳ ಕಾಲ ಹಿಡಿಯಿತು. ವಿಚಾರಣೆ ಆರಂಭವಾದ ಮೇಲೆ ನ್ಯಾಯಾಲಯ ‘ಆಪಾದಿತ’ರನ್ನು ಜಾಮೀನಿನ ಮೇಲೆ ಬಿಡಬಹುದು. ಆದರೆ ಜಾಮೀನು ಕೋರಿಕೆ ಅರ್ಜಿ ಸಲ್ಲಿಸಬೇಕು. ಜಾಮೀನಿನ ಮೇಲೆ ಬಿಡುಗಡೆಗೆ ಅರ್ಜಿ ಸಲ್ಲಿಸಲು ಗೋಪಬಂಧು ಒಪ್ಪಲಿಲ್ಲ. ಆದ್ದರಿಂದ ಈ ಅವಧಿಯಲ್ಲಿ ಅವರು ‘ವಿಚಾರಣಾಧೀನ ಕೈದಿ’ ಯಾಗಿ ಸೆರೆಮನೆಯನ್ನು ಸೇರಿದರು. ಸೆರೆಮನೆ ಶಿಕ್ಷೆಗೊಳಪಟ್ಟ ಬ್ರಾಹ್ಮಣರನ್ನು ಸಮಾಜ ಹೀನಾಯವಾಗಿ ಕಂಡು ಬಹಿಷ್ಕರಿಸುತ್ತಿದ್ದ ಕಾಲ ಅದು.

ತೀರ್ಪು ಪ್ರಕಟಣೆಯ ದಿನ ನ್ಯಾಯಾಲಯದ ಮುಂದೆ ಭಾರಿ ಜನಸಮೂಹ. ಗಲಭೆ ನಿರೀಕ್ಷಿಸಿ ಪೊಲೀಸರು ಭಾರಿ ಸಜ್ಜು ನಡೆಸಿದ್ದರು. ಜನರ ಉತ್ಸಾಹಕ್ಕೆ ಮಣಿದು ನ್ಯಾಯಾಲಯದ ಕಲಾಪವನ್ನು ಕಟ್ಟಡದ ಹೊರಗೆ ನಡೆಸಬೇಕಾಯಿತು. ಅಲ್ಲಿಗೆ ಆಗಮಿಸಿದ ಗೋಪಬಂಧು ದಾಸರನ್ನು ನ್ಯಾಯಾಧೀಶ ಬೋಸ್ ಕೇಳಿದರು-‘‘ತೀರ್ಪನ್ನು ಸಂಪೂರ್ಣವಾಗಿ ಓದಲೇ?’’

‘‘ಬೇಕಿಲ್ಲ ಮಹಾಸ್ವಾಮಿ, ನಾನೆಷ್ಟು ಕಾಲ ಬಂಧನದಲ್ಲಿರಬೇಕು ಅಷ್ಟು ತಿಳಿಸಿ. ಸಾಕು’’ ಎಂದರು ಗೋಪಬಂಧು.

ನ್ಯಾಯಾಧೀಶರು ಗೋಪಬಂಧು ಅವರು ಅಪರಾಧಿಗಳಲ್ಲ ಎಂದರು. ಬಿಡುಗಡೆಯ ಘೋಷಣೆಯೊಡನೆ ಕಿವಿಗಡಚಿಕ್ಕುವ ಜಯಕಾರ ನಡೆಯಿತು. ಉತ್ಸಾಹೀ ಸಮೂಹ ಮೆರವಣಿಗೆ ನಡೆಸಿತು.

ಸೋತು ಸುಮ್ಮನಾಗಲಿಲ್ಲ ಸರ್ಕಾರ. ‘ಸಮಾಜ’ದ  ಸಂಪಾದಕರಿಂದ ೨೦೦೦ ರೂಪಾಯಿಗಳ ಠೇವಣಿಯನ್ನು ಅಪೇಕ್ಷಿಸಿತು. ಇದಕ್ಕಾಗಿ ಅವರನ್ನು ಬಂಧಿಸಿತು. ಇನ್ನೊಂದು ನ್ಯಾಯಾಲಯದ ಮೂಲಕ ಅವರಿಗೆ ಎರಡು ವರ್ಷಗಳ ಬಂಧನದ ಶಿಕ್ಷೆ ವಿಧಿಸಿತು. ೧೯೨೪ ರ ನವೆಂಬರ್ ವರೆಗೆ ಗೋಪಬಂಧು ಸೆರೆಮನೆಯಲ್ಲಿದ್ದರು.

೧೯೨೮ರ ಮೇ ತಿಂಗಳ ಒಂದು ಸಂಚಿಕೆಯಲ್ಲಿ ವಾರಿಕುಡ್ ನಲ್ಲಿ ನಡೆದಿದ್ದ ಪೊಲೀಸ್ ದೌರ್ಜನ್ಯದ ವಿವರಗಳನ್ನು ‘ಸಮಾಜ’ ಪ್ರಕಟಿಸಿತು. ಆ ಸುದ್ದಿಯ ವಿವರ ನೀಡಿದ ಸುದ್ದಿಗಾರನ ಹೆಸರು, ವಿಳಾಸವನ್ನು ಸರ್ಕಾರ ಅಪೇಕ್ಷಿಸಿತು. ಸುದ್ದಿಮೂಲವನ್ನು ಪ್ರಕಟಿಸದಿರುವುದು ಪತ್ರಿಕೆಗಳ ಹಕ್ಕು ಹಾಗೂ ಅದು ವೃತ್ತಿಧರ್ಮ. ಸುದ್ದಿಗಾರನ ವಿಳಾಸ ಕೊಡುವುದೆಂದರೆ ವಿಶ್ವಾಸ ದ್ರೋಹವಾಗುತ್ತದೆಂದು ಗೋಪಬಂಧು ನಿರಾಕರಿಸಿದರು. ಕೆರಳಿದ ಸರ್ಕಾರ ‘ಸಮಾಜ’ ದ ಕಛೇರಿಯ ಮೇಲೆ ದಾಳಿ ಮಾಡಿ ಶೋಧನೆ ನಡೆಸಿತು. ತೃಪ್ತಿ ಸಿಗದಿದ್ದಾಗ ಸಂಪಾದಕರ ಮೇಲೆ ಮೊಕದ್ದಮೆ ಹೂಡಿತು. ಈ ದೂರಿನ ವಿಚಾರಣೆ ನಡೆದು ೧೦೦ ರೂಪಾಯಿಗಳ ದಂಡದ ತೀರ್ಪು ಪ್ರಕಟವಾಗುವ ವೇಳೆಗೆ ಸಂಪಾದಕ ಗೋಪಬಂಧು ದಾಸ್ ಇಹಲೋಕದಲ್ಲಿರಲಿಲ್ಲ.

ದುಡಿಮೆಯ ಹಣದಲ್ಲಿ ಕಠೋರ ಮಿತವ್ಯಯಮಾಡಿ ‘ಸಮಾಜ’ಕ್ಕೆ ಬಂಡವಾಳ ಹೂಡಿ ಬೆಳೆಸಿದ್ದರು ಗೋಪ ಬಂಧುದಾಸ್. ಅವರ ನಿಧನದ ವೇಳೆಗೆ ಪತ್ರಿಕೆ ಒರಿಸ್ಸದ ಜನತೆಯ ಅಭಿವ್ಯಕ್ತಿಯ ಶಕ್ತಿಶಾಲಿ ಮಾಧ್ಯಮವಾಗಿತ್ತು. ಗಳಿಸಿದ ಲಾಭವನ್ನೆಲ್ಲ ಅದಕ್ಕೇ ಹೂಡಿದ್ದರಿಂದ ಅವರ ಆಸ್ತಿಯೂ ಬೆಳೆದಿತ್ತು. ಅಪ್ಪನ ಆಸ್ತಿಯನ್ನು ಅನುಭವಿಸಲು ವಾರಸುದಾರರೂ (ಇಬ್ಬರು ಹೆಣ್ಣು ಮಕ್ಕಳು) ಇದ್ದರು. ಆದರೆ ಮರಣಕ್ಕೆ ಮೊದಲೇ ಗೋಪಬಂಧು ‘ಸಮಾಜ’ ದ ಆಸ್ತಿ – ಹೊಣೆಗಳನ್ನೆಲ್ಲ ‘ಲಾಹೋರಿನ ಲೋಕ ಸೇವಕ ಮಂಡಲ’ ಕ್ಕೆ ವಹಿಸಿದ್ದರು.

ಆಧುನಿಕ ಒರಿಸ್ಸಾ ಇತಿಹಾಸದೊಂದಿಗೆ ಹಾಸು ಹೊಕ್ಕಾಗಿ ಬೆಳೆದ ‘ಸಮಾಜ’ದ ಮೂಲಕ ಗೋಪಬಂಧು ಒರಿಯಾ ಪತ್ರಿಕಾ ವೃತ್ತಿಯ ಆಚಾರ್ಯ ಪುರುಷರೆನಿಸಿದರು. ಜನಮನಕ್ಕೆ ನಾಟುವಂತೆ ತಿಳಿಯಾದ ಗದ್ಯದಲ್ಲಿ ಬರೆಯುವ ಹದವನ್ನು ಸಾಧಿಸಿ ಒರಿಯಾ ಭಾಷೆಯ ಗದ್ಯ ನಿರ್ಮಾಪಕರಲ್ಲಿ ಒಬ್ಬರೆನಿಸಿದರು.

ಕಾಳಗದ ಕಲಿ

ಒರಿಸ್ಸ ಕಾಂಗ್ರೆಸ್‌ನ ಜನಕರೇ ಗೋಪಬಂಧು ದಾಸ್. ಕಾಂಗ್ರೆಸ್‌ನ ಅಸಹಕಾರ ಆಂದೋಳನವನ್ನು ನಾಡಿನ ಮೂಲೆಮೂಲೆಗೆಲ್ಲ ಹಬ್ಬಿಸಿ ಎಲ್ಲ ಕಡೆಗಳಲ್ಲೂ ಸಂಘಟನೆ ಮಾಡುತ್ತಿದ್ದ ಅವರ ಚಟುವಟಿಕೆ ಆಂಗ್ಲ ಸರ್ಕಾರದ ಕಣ್ಣಿಗೆ ಕಿಸುರಾದದ್ದು ಸಹಜವೇ. ನಿರಂತರ ಜನಸಂಪರ್ಕ, ಅವರ ಕಷ್ಟ ನಷ್ಟಗಳ ಪರಿಹಾರಕ್ಕಾಗಿ ಪ್ರಯತ್ನ ಆಂದೋಳನ, ಪತ್ರಿಕಾ ಬರಹದ ಮೂಲಕ ಜನಜಾಗೃತಿ ಕಾರ್ಯಕ್ರಮಗಳ ಜತೆಗೆ ಕಾಂಗ್ರೆಸ್‌ನ ಕಾರ್ಯಕ್ರಮಗಳ ಸಫಲತೆಗಾಗಿ ದುಡಿಮೆ- ಇವು ಅವರ ಜೀವನ ವಿಧಾನವಾಯಿತು. ಸರ್ಕಾರದ ಗುಪ್ತಚರರು ಸದಾ ಹಿಂಬಾಲಿಸುತ್ತಿದ್ದರು. ಅವರು ಹೋದಲ್ಲೆಲ್ಲ ವಿಶೇಷಾಜ್ಞೆ, ಪ್ರತಿಬಂಧಕಾಜ್ಞೆ, ಗಡಿ ಪ್ರವೇಶಿಸದಂತೆ ಬಹಿಷ್ಕಾರದ ಆದೇಶಗಳು ಜಾರಿಯಾಗತೊಡಗಿದವು. ಬಗೆ ಬಗೆಯಾಗಿ ಹಿಂಸೆ ಕೊಡತೊಡಗಿತು ಸರ್ಕಾರ. ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿ ಹೆದರಿಸಲು ಪ್ರಯತ್ನ ನಡೆಯುತ್ತಲೇ ಇತ್ತು. ನಿಷೇಧಾಜ್ಞೆಯ ಉಲ್ಲಂಘನೆ ಮಾಡಿದಾಗ ಜೈಲಿನ ಉಪಚಾರ- ಕಟಕ್ ಮತ್ತು ಹಜಾರಿಬಾಗ್ ಸೆರೆಮನೆಗಳಲ್ಲಿ.

ಜೈಲಿನವಾಸವನ್ನೂ ಉಪಯುಕ್ತವಾಗಿ ಬಳಸಿಕೊಂಡರು ಗೋಪಬಂಧು ದಾಸ್. ಸಂಸ್ಕೃತ ಅಭ್ಯಾಸ ನಡೆಸಿದರು. ಕಾವ್ಯರಚನೆ ಮಾಡಿದರು.

‘‘ಸ್ವರಾಜ್ಯ ಸ್ವಯಂ ಸೇವಾದಳ’’ ಕಟ್ಟಿ ರಾಜ ದ್ರೋಹವೆಸ ಗಿದ್ದಕ್ಕಾಗಿ ಆಗ ಜಾರಿಯಲ್ಲಿದ್ದ ಕರಾಳ ಶಾಸನದ ರೀತ್ಯಾ ಎರಡು ವರ್ಷ ಸರ್ಕಾರ ಮತ್ತೆ ಅವರನ್ನು ಜೈಲಿಗೆ ದೂಡಿತ್ತು.

ಮತ್ತೆ ಶಾಸಕ

೧೯೨೬ ರಲ್ಲಿ ಗೋಪಬಂಧುಗಳು ಮತ್ತೆ ಶಾಸಕರಾದರು. ‘ಲಾಹೋರಿನ ಸಿಂಹ’  ಲಾಲಾಲಜಪತ್‌ರಾಯರ ಜತೆ ೧೯೨೦ ರಿಂದಲೇ ಗೋಪಬಂಧುಗಳಿಗೆ ಸಂಬಂಧ ಬೆಳೆದಿತ್ತು. ಗೋಪಬಂಧು ದಾಸರ ಸರಳತೆ, ಸೇವಾಪರತೆ ಮತ್ತು ಸಜ್ಜನಿಕೆಗಳಿಗೆ ಲಾಲಾಜಿ ಮತ್ತು ಲಾಲಾಜಿಯವರ ನಿರ್ಭೀತ ವ್ಯವಹಾರ, ಪ್ರಾಮಾಣಿಕತೆಗಳಿಗೆ ಗೋಪಬಂಧು, ದಾಸ್ ಮಾರುಹೋದರು. ಪರಸ್ಪರರಲ್ಲಿ ಸ್ನೇಹ ಬೆಳೆಯಿತು. ಒಮ್ಮೆ ಲಾಲಾಜಿ ತಮ್ಮ ಒಂದು ಗ್ರಂಥದಲ್ಲಿ ಅಳವಡಿಸಲು ಗೋಪಬಂಧು ದಾಸರ ಛಾಯಾ ಚಿತ್ರವೊಂದನ್ನು ಕೇಳಿದರು. ತಮ್ಮ ಚಿತ್ರವೇ ಇಲ್ಲವೆಂದು ಸಾಧಿಸಿಬಿಟ್ಟರು ಗೋಪಬಂಧು. ಸೇವೆಗೆ ತಾವೇ ಮುಂದು; ಪ್ರಚಾರಕ್ಕೆ ಮಾತ್ರ ಸಿದ್ಧರಿರಲಿಲ್ಲ. ಇದು ಗೋಪಬಂಧು ದಾಸ್ ಪಾಲಿಸಿಕೊಂಡು ಬಂದ ವ್ರತ.

ಲಾಲಾಜಿ ಆಗ ‘ಹಿಂದೂ ಮಹಾಸಭಾ’ ಸಂಘಟನೆಯ ಕಾರ್ಯಕೈಗೊಂಡಿದ್ದರು. ಹಿಂದುಗಳು ಸಂಘಟಿತರಾಗಬೇಕು. ಮತಾಂತರಕ್ಕೆ ಒಲಿಯದೆ ತಮ್ಮ ಧರ್ಮವನ್ನು ಅರ್ಥಮಾಡಿಕೊಂಡು ಬೆಳೆಯಬೇಕು ಎಂದು ಅವರ ನಿಲುವು.

ಈ ನಿಲುವು, ಗೋಪಬಂಧು ದಾಸರಿಗೆ ಒಪ್ಪಿಗೆಯಾಯಿತು. ಒರಿಸ್ಸದಲ್ಲಿ ಹಿಂದೂ ಮಹಾಸಭೆಯ ಸಂಘಟನೆಯನ್ನು ಅವರು ಕೈಗೊಂಡರು.

ಲಾಲಾಜಿ ಕಟ್ಟಿ ಬೆಳೆಸಿದ ‘ಲೋಕಸೇವಕ ಮಂಡಲ’ದ ಕಾರ್ಯವೂ ಗೋಪಬಂಧು ದಾಸರನ್ನು ಆಕರ್ಷಿಸಿತು. (ಈ ಮಂಡಲದ ಅಧ್ಯಕ್ಷರಾಗಿ ದಿವಂಗತ ಲಾಲಬಹದ್ದೂರ್ ‘ಶಾಸ್ತ್ರಿ’ಗಳೂ ಸೇವೆ ಸಲ್ಲಿಸಿದ್ದಾರೆ.) ಇದಕ್ಕೂ ಮೊದಲು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸಂಪರ್ಕ ಪಡೆಯಲು ಮನಸ್ಸು ಮಾಡಿದ್ದರು. ಲಾಲಾಜಿ ನೀಡಿದ ಕರೆ ಒಳ್ಳೆಯ ಅವಕಾಶ ಕಲ್ಪಿಸಿತು. ಬರ ಮತ್ತು ಪ್ರವಾಹ ಪರಿಹಾರ, ಅಸ್ಪ ಶ್ಯತಾ ನಿವಾರಣೆ, ಗ್ರಾಮಉದ್ಧಾರ ಕಾರ್ಯ ಮತ್ತು ಕಾರ್ಮಿಕ ಸಂಘಟನೆಗಳ ಹೊಣೆಯನ್ನು ಜೋಡಿಸಿಕೊಂಡರು. ಲೋಕ ಸೇವಕ ಮಂಡಲದ ಸದಸ್ಯ ರಾಗುವುದಕ್ಕೂ ಮೊದಲೇ ಅವರು ಕಲ್ಕತ್ತ ನಗರದಲ್ಲಿದ್ದ ಒರಿಸ್ಸದ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿದ್ದರು. ಕೆಲವೇ ವರ್ಷಗಳಲ್ಲಿ ಲೋಕ ಸೇವಕ ಸಂಘದ ಉಪಾಧ್ಯಕ್ಷರೂ ಆದರು. ಈ ಅವಧಿಯಲ್ಲಿ ಅವರು ಕೈಗೊಂಡ ಕೆಲಸಗಳು – ಒರಿಸ್ಸಾ ಪರಿಹಾರ ನಿಧಿಯ ಆರಂಭ, ಇದರ ನೆರವಿನಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬತ್ತದ ಗಿರಣಿಗಳು, ಅಸಹಾಯಕ ವಿಧವೆಯರಿಗೆ ನೆಲೆ ಕಲ್ಪಿಸಲು ‘ಜಗನ್ನಾಥ ವಿಧವಾ ಸೇವಾಶ್ರಮ’.

ಮುಗಿದ ಅಧ್ಯಾಯ

ದುಡಿಮೆಯೇ ಅವರ ದೀಕ್ಷೆಯಾಗಿತ್ತು. ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೊಣೆಗಾರಿಕೆ ಮತ್ತು ಕುಟುಂಬದ ಭೂಮಿಕಾಣಿಗಳ ಹೊಣೆಯನ್ನೆಲ್ಲ ನಿರ್ವಹಿಸುತ್ತಿದ್ದ ಬಲ ಅಣ್ಣ ನಾರಾಯಣದಾಸ್ ನಿಧನರಾದರು.

೧೯೨೮ರ ಜೂನ್ ೧೭ರಂದು ಗೋಪಬಂಧು ದಾಸರು ನಿಧನರಾದರು. ಸಾಯುವುದಕ್ಕೆ ಮೊದಲು ತಮ್ಮ ಭಾಗದ ಆಸ್ತಿಯನ್ನು ‘ಟ್ರಸ್ಟ್’ ಆಗಿ ಮಾಡಿದ್ದ ಗೋಪಬಂಧು ಅದರ ಆದಾಯದಲ್ಲಿ ದೇವರ ಆರಾಧನೆ, ಅಸಹಾಯಕರಿಗೆ ಆಸರೆ ಒದಗಿಸಲು ಮತ್ತು ಉಳಿದ ಹಣವನ್ನು ಶಿಕ್ಷಣ ಕಾರ್ಯಕ್ಕೆ ವಿನಿಯೋಗಿಸಲು ಉಯಿಲು ಮಾಡಿದ್ದರು.

ಜೀವಿಸಿದ ಐವತ್ತೊಂದು ವರ್ಷಗಳ ಅಲ್ಪ ಅವಧಿಯಲ್ಲಿ ಒರಿಸ್ಸದ ಜನತೆಗೆ ಹಲವು ರೀತಿಗಳಿಂದ ಸೇವೆ ಮಾಡಿ, ದೇಶಪ್ರೇಮ ಮತ್ತು ಸ್ವಾರ್ಥ ತ್ಯಾಗಗಳ ಆದರ್ಶ ಸ್ಥಾಪಿಸಿದ ಗೋಪಬಂಧು ದಾಸರನ್ನು ಆಧುನಿಕ ಒರಿಸ್ಸದ ಜನಕರೆಂದು ಜನತೆ ಗೌರವಿಸುತ್ತಿದೆ.