ಹುಟ್ಟಿದ್ದು ೧೯೧೮ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿಯಲ್ಲಿ. ಇಂಗ್ಲಿಷ್‌ನಲ್ಲಿ ಎಂ.ಎ ಪಡೆದ ಇವರು ಹಲವು ಕಾಲೇಜುಗಳಲ್ಲಿ ಅಧ್ಯಾಪಕರು, ಪ್ರಾಧ್ಯಾಪಕರು, ಪ್ರಾಂಶುಪಾಲರು, ನ್ಯಾಷನಲ್ ಬುಕ್‌ಟ್ರಸ್ಟ್ ಆಫ್ ಇಂಡಿಯಾದ ಉಪನಿರ್ದೇಶಕರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್, ಸಿಮ್ಲಾದಲ್ಲಿವಿಸಿಟಿಂಗ್ ಫೆಲೋ, ೧೯೯೨ ರಲ್ಲಿ ಮರಣ.

ಅಡಿಗರು ಸ್ವಾತಂತ್ರೋತ್ತರ ಕನ್ನಡ ಕಾವ್ಯಕ್ಕೆ ಪ್ರವಾಹದ ತಿರುವು, ವೇಗ, ಶಕ್ತಿಗಳನ್ನು ಕೊಟ್ಟ ಕವಿ. ಅದು ಸಾಹಿತ್ಯ ತೀರ ಜಾಳುಜಾಳಾಗುತ್ತಿದ್ದ ಸಂದರ್ಭ. ಸ್ವಾತಂತ್ರ್ಯಪೂರ್ವದಲ್ಲಿ ಕಟ್ಟಿಕೊಂಡ ಕನಸುಗಳು ಭಗ್ನಗೊಂಡ ಸಂದರ್ಭ. ಆಗ ಅಡಿಗರು ಹೊಸಪೀಳಿಗೆಯ ಭ್ರಮನಿರಸನ ಮತ್ತು ಆಕ್ರೋಶ ತುಂಬಿದ ಕವನಗಳನ್ನು ಬರೆದರು. ಬದುಕಿನ ಸಂಕೀರ್ಣತೆಗಳನ್ನು ಅಬಿವ್ಯಕ್ತಿಸಲು ಪ್ರತಿಮೆಗಳನ್ನು ಬಳಸಿದರು.

ಹೊಗೆ, ಬೆಂಕಿ

-ಅಯ್ಯೋ ಹಾಳಾಗ-

ಉರಿ, ಶಕೆ, ತಾಪ;

ಹೊರಗೆ ರಣರಣ ಬಿಸಿಲು,

ಒಳಗೆ ಮಾರಣಬೆಂಕಿ. ಮಲಗಿತ್ತು ಮನ ಚಿತೆಯ ಮೇಲೆ ಅಪೀಸಿನಲಿ.

ಭೂತಗನ್ನಡಿ ಬಿಸಿಲುಮಚ್ಚು ಚುಚ್ಚಿತು ತಲೆಯ;

ಮಿದುಳು-ಬಚ್ಚಲ ದಂಡೆಯಲ್ಲಿ ಬೇಯುವ ಆಮೆ-

ಎದ್ದೆದ್ದು ಬಿದ್ದು ಒದ್ದಾಡಿತ್ತಿತ್ತು. (ಹಿಮಗಿರಿಯ ಕಂದರ)

ಇಂಥ ಸಾಲುಗಳಿಂದ ತನ್ನನ್ನು ತಾನೇ ಅನುಕರಿಸುತ್ತಿದ್ದ ಅಂದಿನ ನವೋದಯ ಸಾಹಿತ್ಯಕ್ಕೆ ಶಾಕ್ ಆದಂತಾಯಿತು. ಇದು ಕಾವ್ಯವೇ ಎಂಬ ವಾದ ವಿವಾದವೆದ್ದಿತು. ಆದರೆ ಹೊಸ ಕಾವ್ಯ ಮಾರ್ಗವೇ ಸೃಷ್ಟಿಯಾಗಿತ್ತು. ಅದು ನವ್ಯಕಾವ್ಯ, ಅಡಿಗರು ಅದರ ನಿರ್ಮಾಪಕರು. ಇವರ ಮೊದಲ ಕವನ ಸಂಕಲನ ಭಾವತರಂಗ ಪ್ರಕಟವಾದದ್ದು ೧೯೪೬ ರಲ್ಲಿ, ಎರಡನೆಯ ಕವನಸಂಕಲನ ಕಟ್ಟುವೆವು ನಾವು ಪ್ರಕಟವಾದದ್ದು ೧೯೪೮ ರಲ್ಲಿ ಹೆಸರೇ ಸೂಚಿಸುವಂತೆ ಭಾವತರಂಗವು ನವೋದಯ ಕಾವ್ಯದ ಭಾವಪ್ರಧಾನತೆಯನ್ನು ಮತ್ತು ಕಟ್ಟುವೆವು ನಾವು ಪ್ರಗತಿಶೀಲ ಸಾಹಿತ್ಯದ ಆಶಯಗಳನ್ನು ಜೀರ್ಣಿಸಿಕೊಂಡದ್ದಾಗಿವೆ.

ನಡೆದು ಬಂದ ದಾರಿ, ಯ ಪುಷ್ಪಕವಿಯ ಪರಾಕು, ನನ್ನ ಅವತಾರ, ಇಂದುನವು ನಾಡು-೩, ಕವಿತೆವಳಲ್ಲಿ ಈ ಹಿಂದಿನ ಮತ್ತು ಇಂದಿನ ಹೀನಸ್ಥಿತಿಯ ಬಗೆಗೆ ವಿಡಂಬನೆಯಿದೆ. ವಿಷಾದವಿದೆ. ಇದು ಮತ್ತೂ ತೀವ್ರವಾಗುವುದು ಚಂಡೆಮದ್ದಳೆ (೧೯೫೪) ಯಲ್ಲಿ. ಅಲ್ಲಿಯ ಹಿಮಗಿರಿಯ ಕಂದರ ಮತ್ತು ಗೊಂದಲಪುರ ಕವನಗಳು ಸಮಾಜದ ಅತ್ಯಂತ ಬೀಭತ್ಸ ಚಿತ್ರಣಗಳು. ಈ ಎರಡೂ ಕವನಗಳಲ್ಲಿ ಸಮಾಜದ ಬಗೆಗಿನ ಅಡಿಗರ ಗಾಡ ಆಕ್ರೋಶ ವ್ಯಕ್ತವಾಗಿದೆ.

ಅಡಿಗರಿಗೆ ಕಾವ್ಯವೆನ್ನುವುದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು; ಇವರು ಮುಂದೆ ಭೂಮಿಗೀತ, ಭೂತ, ಕೂಪಮಂಡೂಕ, ಶ್ರೀರಾಮನವಮಿಯ ದಿವಸ, ವರ್ಧಮಾನ, ಚಿಂತಾಮಣಿಯಲ್ಲಿಕಂಡಮುಖ, ದಂಥ ಶ್ರೇಷ್ಟ ಕವಗಳನ್ನು ಬರೆದರು. ಭೂಮಿಗೀತವು ಭೂಮಿ ಮತ್ತು ಮನುಷ್ಯ, ಮನುಷ್ಯ ಮತ್ತು ಕಾಲದ ಸಂಬಂಧವನ್ನು ಶೋದಿಸುತ್ತದೆ. ಇಲ್ಲಿನ ಕಾವ್ಯನಾಯಕ ಭೂಮಿ ಮತ್ತು ಆಕಾಶಗಳ ಸೆಳೆತಕ್ಕೆ ಸಿಕ್ಕಿ ತನ್ನ ಅಸ್ತಿತ್ವದ ಹುಡುಕಾಟದಲ್ಲಿರುವ ತ್ರಿಶಂಕು. ಅನಾಥಪ್ರಜ್ಞೆಯಲ್ಲಿ ನರಳುವ ಈತನಿಗೆ ಜನ್ಮನೀಡಿದ ಭೂತಾಯಿಯನ್ನೇ ಭೋಗಸಾಧನವಾಗಿ ದುಡಿಸಿಕೊಂಡ ಈಡಿಪಸ್ಸಿನ ಗೂಡ ಪಾಪ, ಪ್ರಜ್ಞೆಯೂ ಇದೆ. ಅಂದಿನ ಸಂಯಮಗಳಿಗೆ ಎದುರಾದ ಮನುಷ್ಯನ ಪರಕೀಯಪ್ರಜ್ಞೆಯನ್ನು ಅಡಿಗರು ಚಿತ್ರಿಸುತ್ತಾರೆ. ಚಿಂತಾಮಣಿಯಲ್ಲಿಕಂಡ ಮುಖ ಎಂಬ ಕವನವು ವ್ಯಕ್ತಿತ್ವದ ಇನ್ನೊಂದು ಮುಖದ ಹುಡುಕಾಟ ನಡೆಸುತ್ತದೆ. ಅಡಿಗರ ಇಂಥ ಹುಡುಕಾಟ-ಶೋಧನೆಗಳು ಕೇವಲ ಕವನಕ್ಕೆ ಸೀಮಿತವಾಗಿಲ್ಲ, ಅವರ ಒಟ್ಟು ಕಾವ್ಯದಲ್ಲಿ ಬೆಳೆಯುತ್ತಾ ಹೋಗಿರುವುದನ್ನು ಕಾಣಬಹುದು.

ಮನುಷ್ಯ ಅಪೂರ್ಣತೆಯ ಪ್ರಜ್ಞೆಯಲ್ಲಿ ನರಳುವವ .ಆತ ತನ್ನ ವ್ಯಕ್ತಿತ್ವದ ವಿಕಾಸದಿಂದ ಪೂರ್ಣತೆಯ ಕಡೆಗೆ ಚಲಿಸಬೇಕೆನ್ನುವುದೇ ಅಡಿಗರ ಕಾವ್ಯದ ಆಶಯ. ಇವರು ಏಕಕಾಲಕ್ಕೆ ಕಮ್ಯೂನಿಸಂ ಮತ್ತು ಬಂಡವಾಳಶಾಹಿಯನ್ನು ವಿರೋದಿಸುತ್ತಾರೆ. ಅವರ ಪ್ರಕಾರ ಯಾವ ಬಂಡಾಯವಾಗುವುದಿದ್ದರೂ ಅದು ವ್ಯಕ್ತಿಯಲ್ಲಿ! ನವ್ಯ ಸಾಹಿತ್ಯ ಸಮಾಜವನ್ನು ನೋಡುವುದೇ ವ್ಯಕ್ತಿಯ ಬೆಳಕಿನಲ್ಲಿ.

ಅಡಿಗರು ಅನುವಾದ, ವಿಮರ್ಶೆ, ಚಿಂತನಶೀಲ ಲೇಖನಗಳನ್ನು ಬರೆದಿದ್ದಾರೆ, ಕಥೆ, ಕಾದಂಬರಿಗಳನ್ನು ಬರೆದಿರುವರಾದರೂ ಅವು ಅವರ ಕಾವ್ಯದಷ್ಟು ಉತ್ತಮದರ್ಜೆಯವಲ್ಲ. ಅಡಿಗರನ್ನು ಮುಖ್ಯರೆಂದು ಗುರ್ತಿಸುವುದು ಅವರ ಕಾವ್ಯಕ್ಕಾಗಿ. ಕಾವ್ಯದ ಸಾಧನೆಗಳನ್ನು ತಮ್ಮ ನಿರಂತರ ಪ್ರಯೋಗಗಳಿಂದ ಹಿಗ್ಗಿಸಿದ ಕವಿ ಇವರು.

ಇವರಿಗೆ ಸಂದ ಗೌರವ ಪ್ರಶಸ್ತಿಗಳು: ರಾಜ್ಯಸಾಹಿತ್ಯ ಅಕಾಡಮಿಪ್ರಶಸ್ತಿ(೧೯೭೪), ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ(೧೯೭೫), ವರ್ಧಮಾನ ಪ್ರಶಸ್ತಿ(೧೯೮೦), ಕುಮಾರ್ ಆಸಾನ್ ಪ್ರಶಸ್ತಿ(೧೯೮೬), ಕಬೀರ್ ಸಮ್ಮಾನ್ ಪ್ರಶಸ್ತಿ(೧೯೮೬), ಪಂಪಪ್ರಶಸ್ತಿ (ಮರಣೋತ್ತರ೧೯೯೩), ೧೯೭೩ ರಲ್ಲಿ ಧರ್ಮಸ್ಥಳದ ಐವತ್ತೈದನೆ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ. ನೆನಪಿನ ಗಣಿಯಿಂದ, ಇವರ ಆತ್ಮ ಚರಿತ್ರೆ.