ಗೋಪಾಲಕೃಷ್ಣ ಗೋಖಲೆ ಎಂಬ ಹೆಸರನ್ನು ನೀವು ಕೇಳಿದ್ದೀರಿ ಅಲ್ಲವೇ? ಗಾಂಧೀಜಿಯವರಿಗೇ ಗುರು ಅವರು. ಅವರಂತೆಯೇ, ಅವರ ಸಂಗಡವೇ ಇದ್ದು, ದೇಶಕ್ಕೋಸ್ಕರ ದುಡಿದ ಮಹನೀಯರು ಇನ್ನೊಬ್ಬರಿದ್ದಾರೆ. ಯಾರು, ಗೊತ್ತೇನು? ಗೋಪಾಲಕೃಷ್ಣ ದೇವಧರ್ ಅಂತ. ’ನಮ್ಮ ಭಾರತ ಬಡದೇಶ. ಹಳ್ಳಿಗಳ ನಾಡು. ಹಳ್ಳಿಗಳನ್ನು ಓದಲು ಬೆಳೆಸೋಣ. ಉದ್ಧಾರ ಮಾಡೋಣ. ಅದಕ್ಕೆ ನಿಮ್ಮ ತನು, ಮನ ಕೊಟ್ಟು ಕಂಕಣಬದ್ಧರಾಗಿ’ ಅಂತ ಹೇಳುತ್ತಿದ್ದರು ಅವರು. ನುಡಿದಂತೆಯೇ ನಡೆದರು. ’ಮೇಲು-ಕೀಳು’ ಅನ್ನುವ ಭಾವನೆ ಬಿಡಬೇಕು’ ಎಂದೇ ಅವರು ದುಡಿದರು. ಶರೀರ, ಮನಸ್ಸು ಎಲ್ಲವನ್ನೂ ದೇಶದ ಹಿತಕ್ಕೆ ಮೀಸಲು ಆಗಿರಿಸಿದರು. ಅವರ ದುಡಿಮೆ ಸದ್ದಿಲ್ಲದ್ದು, ಕೀರ್ತಿ, ಗೌರವ ಬೇಕು ಅಂತ ಆಸೆ ಪಡಲಿಲ್ಲ. ಸರಳ ಬದುಕು, ಕೊನೆಯ ತನಕ ಅವರಿಗಿದ್ದ ಆಸ್ತಿ ಬಡತನವೇ.

ಬಾಲ್ಯ

ರತ್ನಗಿರಿ ಜಿಲ್ಲೆಯಲ್ಲಿ ದೇವಘಡ ಎಂಬುದು ಒಂದು ತಾಲ್ಲೂಕು. ಅದರ ಹತ್ತಿರದ ಹಳ್ಳಿ ಖೋಲ್. ರಮ್ಯವಾದ ಪ್ರಕೃತಿ ಸೌಂದರ್ಯ. ಸುತ್ತಲೂ ಹರಡಿರುವ ಸಹ್ಯಾದ್ರಿ ಬೆಟ್ಟಸಾಲು. ಸದಾ ಹಸಿರು. ಕೊಂಕಣ ಪ್ರದೇಶದಿಂದ ಈ ಹಳ್ಳಿಗೆ ದೇವಧರ್ ಕುಟುಂಬದವರು ವಲಸೆ ಬಂದರು. ದೇವಧರ್ ಅವರ ತಂದೆಯ ಹೆಸರು ಕೃಣಾಜಿಪಂತ ನಾರಾಯಣ ದೇವಧರ್. ಸಂಸ್ಕೃತದಲ್ಲಿ ಘನ ವಿದ್ವಾಂಸರು. ಪ್ರವಚನಗಳನ್ನು ನಡೆಸುತ್ತಿದ್ದರು. ಸಜ್ಜನರು, ಜನರು ಇವರನ್ನು ಪ್ರೀತಿಯಿಂದ ’ಶಾಸ್ತ್ರಿಭಾವ’ ಅಂತ ಕರೆಯುತ್ತಿದ್ದರು. ಕೃಷ್ಣಾಜಿಪಂತರ ಐದನೆಯ ಮಗನೇ ಗೋಪಾಲಕೃಷ್ಣ ದೇವಧರ್. ದೇವಧರ‍್ ಜನಿಸಿದ್ದು ೧೮೭೧ರ ಆಗಸ್ಟ್ ೨೧ ರಂದು ಆಗ ಕಂಟ್ರಾಕ್ಟರ್ ಒಬ್ಬನ ಹತ್ತಿರ ತಂದೆಗೆ ಗುಮಾಸ್ತ ಕೆಲಸ. ದಣಿಗೆ ಲಾಭ ಬಂದರೆ ಸಂಬಳ ಹೆಚ್ಚು. ಇಲ್ಲವೋ ಕಡಿಮೆ. ತಿಂಗಳಿಗೆ ೮ ರೂಪಾಯಿಯಿಂದ ೩೦ ರೂಪಾಯಿಗಳವರೆಗೆ. ಬಂದಷ್ಟೇ ಸಂಬಳ. ಅಲ್ಲದೆ ಇದ್ದಲ್ಲಿ ಇರುವಂತಿಲ್ಲ. ಸುತ್ತುತ್ತಲೇ ಇರುವುದು. ಮನೆಯಲ್ಲಿ ಯಥಾ ಪ್ರಕಾರ ಬಡತನ. ಇದರಿಂದ ದೇವಧರ್ ಹತ್ತು ವರ್ಷ ಬರೀ ಸುತ್ತಿದರು. ಅಷ್ಟೆ ಆಗಿನ ಸಂಪ್ರದಾಯದ ಪ್ರಕಾರ. ತಂದೆ ಮಗನಿಗೆ ಕಾಳಿದಾಸ ಕವಿಯ ’ರಘುವಂಶ’ ಕಾವ್ಯದ ಕೆಲವು ಸರ್ಗಗಳನ್ನೂ ಭಗವದ್ಗೀತೆಯ  ಕೆಲವು ಅಧ್ಯಾಯಗಳನ್ನೂ ಕಂಠಪಾಟ ಮಾಡಿಸಿದ್ದರು.

ಪುಣೆಯಲ್ಲಿ ಲೋಕಮಾನ್ಯ ತಿಲಕ್ ಅವರು ಸ್ಥಾಪಿಸಿದ ಶಾಲೆ ’ನ್ಯೂ ಇಂಗ್ಲಿಷ್ ಸ್ಕೂಲ್ ’ ೧೮೮೬ರಲ್ಲಿ ದೇವಧರ್ ಆ ಶಾಲೆಗೆ ಸೇರಿದರು. ಆಗಲೇ ಆ ಊರಿನ ಸೊಹೊನಿ ಕುಟುಂಬದ ಹುಡುಗಿಯೊಂದಿಗೆ ಮದುವೆಯೂ ಆಯಿತು. ಹೆಂಡತಿಯ ಹೆಸರು ಅನ್ನಪೂರ್ಣಾಬಾಯಿ. ತಂದೆ ಕೃಷ್ಣಾಜಿಯವರಿಗೆ ಇಂಗ್ಲಿಷ್ ಶಿಕ್ಷಣ ಕಂಡರಾಗದು. ಇದು ಇತರ ಅಣ್ಣಂದಿರಿಗೂ ಅಸಮಾಧಾನ ತಂದಿತ್ತು. ಗೋವಿಂದರಾವ್ ದೇವಧರ‍್ ಗೋಪಾಲಕೃಷ್ಣನ ಅಣ್ಣ ತುಂಬು ಸಂಸಾರ, ಪಾಪ. ಆದರೂ ತಮ್ಮನಿಗೆ ಇಂಗ್ಲಿಷ್ ಶಿಕ್ಷಣ ದೊರೆಯಲಿ ಎಂದು ತಿಲಕರ ಶಾಲೆಗೆ ಸೇರಿಸಿದ. ಈ ನಡುವೆ ತಾಯಿ ೧೯೦೫ರಲ್ಲಿ ಸ್ವರ್ಗಸ್ಥರಾದರು. ತಂದೆ ಸಂನ್ಯಾಸ ದೀಕ್ಷೆ ಪಡೆದು ೧೯೧೦ರಲ್ಲಿ ಕಾಲವಾದರು. ಗೋಪಾಲಕೃಷ್ಣ ದೇವಧರ್ ಶಾಲೆಯಲ್ಲಿ ಅಂಥ ಬುದ್ಧಿವಂತರೇನಲ್ಲ. ಆದರೆ ಅವರ ವಿನಯ, ಒಳ್ಳೆಯ ಮಾತು, ನಡೆ-ನುಡಿ ಎಲ್ಲರಿಗೂ ಮೆಚ್ಚು ಸೊಗಸಾಗಿ ಹಾಡುತ್ತಿದ್ದರು. ಮುಂದೆಯೂ ಕಾಲೇಜಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದರು. ಸಂಸ್ಕೃತದಲ್ಲಿ ತುಂಬ ಒಲವು. ಅದರಲ್ಲೇ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದರು.

೧೮೯೧ರಲ್ಲಿ ದೇವಧರ್ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಕಷ್ಟದಿಂದ ವಿದ್ಯಾಭ್ಯಾಸ

ಮನೆಯ ಆರ್ಥಿಕ ಸ್ಥಿತಿ ಹೇಳುವಂತೆಯೇ ಇರಲಿಲ್ಲ. ಮುಂದೆ ಓದುವುದಾದರೂ ಹೇಗೆ? ಆದ್ದರಿಂದ, ದೇವಧರ್ ಅಲ್ಲಿ ಇಲ್ಲಿ ಚಾಕರಿ ಹಿಡಿಯಬೇಕಿತ್ತೇನೋ? ಅದೃಷ್ಟ ಕೂಡಿ ಬಂದಿತು. ಮಹಾರಾಷ್ಟ್ರದವರೇ ಪ್ರೊಫೆಸರ್ ಅಗರ್ ಕರೆ ಎನ್ನುವ ವಿದ್ವಾಂಸರು, ಸಮಾಜ ಸುಧಾರಕರು ದೇವಧರರಿಗೆ ತುಂಬಾ ಸಹಾಯ ಮಾಡಿದರು. ಇದರಿಂದ, ದೇವಧರ ಪುಣೆಯ ಫರ್ಗ್ಯುಸನ್ ಕಾಲೇಜಿಗೆ ಸೇರಲು ಅನುಕೂಲ ಆಯಿತು.

೧೮೯೨ರಲ್ಲಿ ಕಾಲೇಜಿನ ಮೊದಲ ತರಗತಿಗೆ ಸೇರಿದ್ದು. ಕಾಲೇಜಿನಲ್ಲಿ ಹೇಗೋ ಏನೋ ಕೆಲವರು ಸೋಮಾರಿಗಳ, ಫಟಿಂಗರ ಸ್ನೇಹ ಆಯಿತು. ಓದು ಮೂಲೆ ಹಿಡಿಯಿತು. ದೇವಧರ್ ಆ ವರ್ಷ ತೇರ್ಗಡೆ ಹೊಂದಲಿಲ್ಲ.

ಇದಾದ ಮೇಲೆ ಓದು ಮುಂದುವರಿಸಲು ಮತ್ತೆ ಹಣದ ಸಮಸ್ಯೆ ಬಂದಿತು. ತುಂಬು ಸಂಸಾರಿ ಅಣ್ಣನನ್ನು ಕೇಳೋದು ಹೇಗೆ?

ಜುನ್ನಾರ್ ಎನ್ನುವಲ್ಲಿಗೆ ದೇವಧರ್ ಹೋದರು. ಅಲ್ಲಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. ಆಗ ಗ್ವಾಲಿಯರ್ ಕಾಲೇಜಿನ ಮುಖ್ಯಸ್ಥರು, ಪಂಡಿತ ಪ್ರಾಣನಾರ್ಥ ಎಂಬುವರು. ಅಲ್ಲಿ ಹೋಗಿ ಓದು ಮುಂದುವರಿಸೋಣ ಎಂಬುದು ದೇವಧರರ ಇಚ್ಛೆ. ಅದಕ್ಕೆ ಜತೆ ಎನ್ನುವಂತೆ ಉತ್ತೀರ್ಣನಾಗದೆ ಹೋಗಿದ್ದ ಅವರ ಇನ್ನೊಬ್ಬ ಸ್ನೇಹಿತನೂ ಕೂಡಿಕೊಂಡ.

ಆದರೆ, ಅಲ್ಲಿಗೆ ಹೋದ ನಂತರ ಪರಿ‌ಸ್ಥಿತಿಯೇನೆಂಬುದರ ಅರಿವು ಆಯಿತು. ದೇವಧರ್ ಅವರ ನಯವಾದ ಮಾತು, ಕೆಲವರು ಶ್ರೀಮಂತ ವಿದ್ಯಾರ್ಥಿಗಳ ಸ್ನೇಹ ಉಂಟು ಮಾಡಿಸಿತು. ಬಡ ವಿದ್ಯಾರ್ಥಿಗಳಿಗೆಂದೇ ಇದ್ದ ’ಉಚಿತ ಭೋಜನಗೃಹ’ ದಲ್ಲಿ ಊಟ ಮಾಡುವ ಅವಕಾಶವೂ ಸಿಕ್ಕಿತು. ಇದಕ್ಕೂ ಕೇಳಲೇಬೇಕಾಯಿತು – ಸ್ವತಂತ್ರ ಪ್ರವೃತ್ತಿಯವರಾದರೂ ಸಹ.

ಮರಳಿ ಪುಣೆಗೆ

ಗ್ವಾಲಿಯರ್ ಸರ್ಕಾರದ ಸೇನಾ ಸಚಿವ ದಿನಕರರಾವ್ ರಾಜವಾಡೆ ಎಂಬುವರು ದೇವಧರ್ ಗೆ ತಮ್ಮ ಮನೆಯಲ್ಲೇ ಇರಲು ಒಂದು ಕೋಣೆಯನ್ನು ಬಿಟ್ಟುಕೊಟ್ಟರು. ಅಬ್ಬ! ಇನ್ನು ಹೇಗಾದರೂ ಓದು ಮುಂದುವರಿಸೋಣ ಅಂತ ದೇವಧರ್ ಮನಸ್ಸಿನಲ್ಲಿ ಅಂದುಕೊಂಡರಷ್ಟೆ. ಗ್ರಹಚಾರ! ಹಠಾತ್ತಾಗಿ ಬಂದ ಜ್ವರ, ವಿಷಮಶೀತ ಜ್ವರದತ್ತ ತಿರುಗಿತು. ಅವರು ಬದುಕಿದ್ದೆ ಹೆಚ್ಚು, ಮನಸ್ಸು ನೊಂದಿತು. ಪುಣೆಗೇ ಮರಳಿದರು.

ಕೆಲವು ತಿಂಗಳುಗಳು ಕಳೆದವು. ಆಗ ಪುಣೆಯಲ್ಲಿ ಕ್ರೈಸ್ತಪಾದ್ರಿಗಳು ಒಂದು ಶಾಲೆ ನಡೆಸುತ್ತಿದ್ದರು. ’ಆಂಗ್ಲೋ ವರ್ನ್ಯಾಕ್ಯುಲರ್ ಸ್ಕೂಲ್’ ಅಂತ. ಅಲ್ಲಿಯ ಮುಖ್ಯೋಪಾಧ್ಯಾಯರ ಹುದ್ದೆ ದೇವಧರ್ ಗೆ ದೊರೆಯಿತು. ತಿಂಗಳಿಗೆ ೨೫ ರೂ. ಸಂಬಳ. ಮನೆಪಾಠ ಹೇಳುತ್ತಿದ್ದುದರಿಂದ ೨೫ ರೂ.ವರೆಗೂ ಬರುತ್ತಿತ್ತು. ಇದಲ್ಲದೆ, ರಾತ್ರಿ ತರಗತಿಗಳನ್ನೂ ನಡೆಸುತ್ತಿದ್ದರು. ಹೀಗೆ  ದುಡ್ಡಿನ ಸಮಸ್ಯೆ ಇವುಗಳಿಂದ ನಿವಾರಣೆ ಆಯಿತು. ಆದರೆ ಪದವೀಧರ ತಾನಾಗಲಿಲ್ಲ ಎಂಬ ಕೊರತೆ ಉಳಿದೇ ಇತ್ತು. ಬಿಡುವಿದ್ದರಲ್ಲವೆ ಅಭ್ಯಾಸ? ಪದವಿ ಪಡೆಯಬೇಕೆಂಬ ಹಠ. ಅದಕ್ಕೆ ಸಂಬಳ ಕಡಿಮೆ ಆದರು ಸರಿಯೇ , ಬೇರೆ ಕಡೆ ಕೆಲ ಹುಡುಕೋಣ ಎಂದುಕೊಂಡರು ದೇವಧರರು.

ಇದಕ್ಕೂ ಕಾಲ ಕೂಡಿ ಬಂತು. ಕ್ರೈಸ್ತಧರ್ಮ ಪ್ರಚಾರಕ ಆರ್.ಬಿ. ಡಗ್ಲಾಶ್ ಎಂಬುವರು ಜಾಲ್ನ ಎಂಬಲ್ಲಿ ಇದ್ದುದು. ಅವರಿಗೆ ಮರಾಠಿ ಪಾಠ ಹೇಳಿಸಿಕೊಳ್ಳಲು ಒಬ್ಬ ದಕ್ಷ ಪಂಡಿತರು ಬೇಕಿತ್ತು. ದೇವಧರರ ನಯವಾದ ಮಾತು, ಸಹನೆ, ಶ್ರದ್ಧೆ ತಿಳಿದಿದ್ದ ಪಾದ್ರಿ ಅವರಿಗೆ ಮನಸೋತು ಪುಣೆಗೇ ಬಂದು, ಅವರು ತಮ್ಮ ಆಸೆ ಈಡೇರಿಸಿ ಕೊಡಬೇಕೆಂದು ಬೇಡಿದರು. ತಿಂಗಳಿಗೆ ೩೦ ರೂ. ಸಂಬಳ. ಮರಾಠಿ ಪಾಠ ಮಾತ್ರ ಹೇಳುವುದು. ಓದಲು ಸಾಕಷ್ಟು ವೇಳೆ ದೊರೆಯುತ್ತಿತ್ತು! ದೇವಧರ್ ಸಂತೋಷದಿಂದಲೇ ಒಪ್ಪಿದರು. ಅಲ್ಲದೆ ಜಾಲ್ನದಲ್ಲಿ ಬೇರೆ ಯಾವ ಕೆಟ್ಟ ಹವ್ಯಾಸವೂ ಸೆಳೆಯಲಿಲ್ಲ. ಹತ್ತು ತಿಂಗಳು ಅಲ್ಲಿ ಇದ್ದುದು, ಅಷ್ಟ ಪಾದ್ರಿಗೆ ಮರಾಠಿ ಬೋಧಿಸಿದರು. ಅವರಿಗೆ ಆಪ್ತರಾದರು. ಸಂಗಡವೇ ಮೊದಲ ಬಿ.ಎ. ಪರೀಕ್ಷೆಗೂ ಅಭ್ಯಾಸ ಮಾಡಿ, ತೇರ್ಗಡೆಯಾದರು.

ಇದು ಸರಿಯೇ?

ಹೀಗೆ ಸುಮಾರು ಎರಡು ವರ್ಷ ಕ್ರೈಸ್ತಧರ್ಮ ಪ್ರಚಾರಕರ ಒಡನಾಡ ದೊರಕಿತು. ಅವರ ಸೇವಾ ಮನೋಭಾವ, ಸಹನೆ, ಜನರಲ್ಲಿ ತೋರುತ್ತಿದ್ದ ಪ್ರೀತಿ, ವಿಶ್ವಾಸ, ಜಾತಿ ಭೇದ ಇಲ್ಲದೆ ತೋರುತ್ತಿದ್ದ ಅಕ್ಕರೆ. ಎಲ್ಲ ಗುಣಗಳೂ ದೇವಧರರ ಮನಸ್ಸಿಗೆ ಹಿಡಿಸಿದವು. ಒಳ್ಳೆಯ ಪರಿಣಾಮವನ್ನುಂಟು ಮಾಡಿದವು. ಅಲ್ಲೆ ಅವರು ಮೊದಲ ಬಾರಿಗೆ ಸಭೆಯಲ್ಲಿ ಮಾತಾಡಿದ್ದು. ಭಾರತದಲ್ಲಿ ಇರುವ ಅನೇಕ ಬಡ ಹೆಂಗಸರ, ವಿಧವೆಯರ ಪರಿಸ್ಥಿತಿ, ಅವರ ನಿಸ್ಸಹಾಯಕತೆ, ಸಮಾಜದ ಕಟ್ಟುಕಟ್ಟಳೆ, ಇವೆಲ್ಲ ಅವರಿಗೆ ಸಂಕಟವುಂಟು ಮಾಡುತ್ತಿದ್ದವು. ಔರಂಗಾಬಾದ್, ಜಾಲ್ನ ಇಲ್ಲೆಲ್ಲ ಛತ್ರಪತಿ ಶಿವಾಜಿ ಮಹೋತ್ಸವ! ದೇವಧರ್ ಆಗ ಸಭೆಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಿದರು. ಮಾತನಾಡಿದರು. ಸಭೆಯಲ್ಲಿ ಅನೇಕ ಹಿರಿಯರು ಸಂಪ್ರದಾಯನಿಷ್ಠರು! ದೇವಧರ‍್ ಲೆಕ್ಕಿಸಲೇ ಇಲ್ಲ. ತನ್ನ ಮುಂದಿರುವ ಕೆಲಸ ಸರಿ ಆದುದು. ಇದು ಅವರ ವಿಶ್ವಾಸ. ಕೆಲವರು ನಿಂದಿಸುತ್ತಾರೆ. ಆದರೇನು? ಎಂದುಕೊಂಡು ನಿರ್ಭೀತರಾಗಿ ತಮ್ಮ ಮನೋಭಿಪ್ರಾಯವನ್ನು ಬಿಚ್ಚಿ ತಿಳಿಸಿದರು. ’ಹೆಂಗಸು ಅಂದರೆ ಅಬಲೆ ಅಲ್ಲ, ಗಂಡಸಿನ ಸೊತ್ತು ಅಲ್ಲ, ಹೊಸ್ತಿಲೊಳಗೇ ಇದ್ದು ನಾಲ್ಕು ಗೋಡೆ ನಡುವೆಯೇ ಕೊರಗಬೇಕಿಲ್ಲ. ಎಷ್ಟೊಂದು  ಜನ ಹೆಂಗಸರು ನಮ್ಮಲ್ಲಿ ನೋವು ಅನುಭವಿಸುತ್ತಾ ಇದ್ದಾರೆ ಗೊತ್ತೆ? ಚಿಕ್ಕವಳಿರುವಾಗಲೇ ಗಂಡನನ್ನು ಕಳೆದುಕೊಂಡ ಹೆಣ್ಣು ಯಾವುದೇ ಸಂದರ್ಭದಲ್ಲಿ ದಾರಿ ತಪ್ಪಿರೋರು, ಬಡವರು, ರೋಗಿಗಳು ಇವರನ್ನ ನಾವು ಹೇಗೆ ಕಾಣುತ್ತಾ ಇದ್ದೇವೆ? ಇದು ಸರಿಯೇ? ಆಚಾರ, ಗೊಡ್ಡ ಪದ್ಧತಿ ಮಾತ್ರ ಬೇಕೋ, ಮನುಷ್ಯ ಜೀವನ ನೋಯೋದು ನಿಲ್ಲಬೇಕೋ? ಮಾನವೀಯತೇ ಬೇಡವೆ?’ ಎಂದು ಭಾರೀ ಭಾಷಣವನ್ನೇ ಮಾಡಿಬಿಟ್ಟರು. ಇದಕ್ಕೆ ಪರಿಹಾರ ನಾವೇ ಭಾರತೀಯರೇ ಕಂಡುಕೊಳ್ಳಬೇಕೆಂದರು.

ಎಷ್ಟೊಂದು ಜನ ಹೆಂಗಸರು ನಮ್ಮಲ್ಲಿ ನೋವು ಅನುಭವಿಸುತ್ತಾ ಇದ್ದಾರೆ! ಇದು ಸರಿಯೇ?

ಪದವೀಧರ

ಮೊದಲ ಬಿ.ಎ.  ಪರೀಕ್ಷೆ ಪಾಸಾದ ಮೇಲೆ ದೇವಧರ್ ಮುಂಬಯಿಯ ಎಲೆಫಿನ್ ಸ್ಟನ್ ಕಾಲೇಜನ್ನು ಸೇರಿದರು. ಆದರೆ ಒಂದೇ ಸಮಸ್ಯೆ. ಅದು ಹೊಟ್ಟೆಪಾಡಿನದು! ದೇವಧರ್ ಜಗ್ಗಲಿಲ್ಲ. ಖಾದಿ ಬಟ್ಟೆ ಮಾರಿದರು, ಶಾಲೆ ಹುಡುಗರಿಗೆ ಮಧ್ಯಾಹ್ನದ ವೇಳೆ ತಿಂಡಿ ಮಾಡಿದರು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ತಮ್ಮ ಸಂಗಡ ಕೆಲವು ಮಿತ್ರರನ್ನು ಕೂಡಿಕೊಂಡು ಒಂದು ಊಟದ ಮನೆಯನ್ನೂ ಪ್ರಾರಂಭ ಮಾಡಿದರು. ಉಚಿತ ವಾಚನಾಲಯ – ಅದರ ನಿರ್ವಹಣೆ, ಗಣಪತಿ ಉತ್ಸವದಲ್ಲಿ ಉಪನ್ಯಾಸ, ಹರಿಜನರ ಕಾಲೋನಿಯನ್ನು ಚೊಕ್ಕಟ ಮಾಡುವಿಕೆ. ರಜೆಗಳಲ್ಲೂ ಸಾಮಾಜಿಕ ಚಟುವಟಿಕೆ! ಅಂತೂ ೧೮೯೭ರಲ್ಲಿ ಬಿ.ಎ. ಮುಗಿಸುವಿಕೆ ವೇಳೆಗೆ ಅವರಿಗೆ ೨೬ ವರ್ಷ ಕಳೆದಿತ್ತು.

ಉಪಾಧ್ಯಾಯ

ಮುಂಬಯಿಯಲ್ಲಿ ಇದ್ದ ಇನ್ನೊಂದು ಸಂಸ್ಥೆ – ’ರಾಯಲ್ ಏಷ್ಯಾಟಿಕ್ ಸೊಸೈಟಿ’ ಅಲ್ಲಿನ ಪುಸ್ತಕ ಭಂಡಾರವನ್ನು ದೇವಧರ್ ನೋಡಿಕೊಳ್ಳಲಿ ಎಂಬುದು ಅದರ ಅಧ್ಯಾಪಕರ ಆಸೆ. ಕೈತುಂಬ ಸಂಬಳ. ನಿವೃತ್ತಿ ಆದ ಮೇಲೆ ಕೊಡೋ ಮಾಸಿಕವೇತನ; ಅನುಕೂಲವಾದ ಕೆಲಸ.  ಆದರೆ  ದೇವಧರ್ ದೇಶದ ಕೆಲಸಕ್ಕೆ  ಮುಡುಪಾದರು. ಆ ಸ್ಥಾನವನ್ನು ಒಪ್ಪಲಿಲ್ಲ.

ಆಗ್ಗೆ ಮುಂಬಯಿಯಲ್ಲಿ ರೈಟ್ ಆನರಬಲ್ ಜಯಕರ್, ದಿವಾನ್ ರಾವ್ ಬಹದ್ದೂರ್ ಶಿಂಗ್ನೆ ಅವರುಗಳು ಗಣ್ಯವ್ಯಕ್ತಿಗಳು. ’ಆರ್ಯನ್ ಎಜುಕೇಷನಲ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯನ್ನು ಅವರು ಆರಂಭಿಸಿದರು. ತನ್ನನ್ನೇ ತಾನು ಅರ್ಪಿಸಿಕೊಳ್ಳಬೇಕು. ಮಕ್ಕಳಿಗೆ ಮನಸ್ಸು ಪೂರ್ತಿ ಪಾಠ ಹೇಳಬೇಕು – ನಿಷ್ಠೆಯಿಂದ ! ಅಂಥ ವ್ಯಕ್ತಿ ಉಪಾಧ್ಯಯನಾಗಿ ಅವರಿಗೆ ಬೇಕಾಗಿತ್ತು. ದೇವಧರ್ ಅವರ ಹೆಸರು ಆಗಲೇ ತುಂಬ ಪರಿಚಿತ ಆಗಿತ್ತು. ಅವರನ್ನು ಕಂಡು, ಬನ್ನಿ ಎಂದು ಕೋರಿದರು. ಸಂಬಳ ತಿಂಗಳಿಗೆ ೨೫ ರೂಪಾಯಿ ಮಾತ್ರ. ಸಂಸಾರ ನಿರ್ವಹಣೆಗೆ ಮತ್ತೆ ದುಡಿಯಲೇಬೇಕು. ದೇವಧರ್ ಧೈರ್ಯಸ್ಥ ’ಕಷ್ಟ ಬರುತ್ತೆ ಅಂದರೆ ಅವರು ಇನ್ನೂ ವಜ್ರವೇ ಆಗಿಬಿಡುತ್ತಿದ್ದರು’ ಅಂತ ಅವರ ಆಪ್ತ ಗೆಳೆಯರು ಹೇಳುತ್ತಿದ್ದುದುಂಟು. ಸಂತೋಷದಿಂದ ಉಪಾಧ್ಯಾಯರಾದರು. ತನ್ನಲ್ಲಿನ ಒಳ್ಳೆಯ ಗುಣ, ಸ್ವಭಾವಗಳಿಂದ ೧೯೦೦ರಲ್ಲಿ ಅವರೇ ಸ್ಕೂಲಿನ ಮುಖ್ಯಸ್ಥರೂ ಆದರು. ಇದರೊಂದಿಗೆ ಓದನ್ನೂ ಕೈಬಿಡಲಿಲ್ಲ. ೧೯೦೩ರಲ್ಲಿ ಮರಾಠಿ ಭಾಷೆಯನ್ನೇ ಐಚ್ಛಿಕ ವಿಷಯವಾಗಿ ತೆಗೆದುಕೊಂಡು, ಅಧ್ಯಯನ ನಡೆಸಿ, ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಆದವರಲ್ಲಿ ಅವರೇ ಮೊದಲಿಗರು! ಜೊತೆಗೆ ವಿದ್ಯಾರ್ಥಿ ಯುವಕರನ್ನು ಕೂಡಿಸುವುದು, ದೇಶಪ್ರೇಮ ಊಡಿಸುವ ವಿಚಾರ ತಿಳಿಸುವುದು, ಅವರ ಮನಸ್ಸನ್ನು ಒಳಿಸುವುದು! ಹುಡುಗರಲ್ಲಿ ಆದರ-ಪ್ರೇಮ, ಹಿರಿಯರಲ್ಲಿ ಗೌರವ, ಆರದ ಉತ್ಸಾಹ, ಶ್ರದ್ಧೆ, ಇವರು ಅವರಿಗೆ ರಕ್ತದಲ್ಲೇ ಬಂದ ಗುಣಗಳು.

ಭಾರತ ಸೇವಾ ಸಮಾಜ

ಮನಸ್ಸು ಕಾಲ ಕಳೆದಂತೆ ಪ್ರೌಢ ಆಯಿತು. ’ಸಮಾಜ ಸೇವೆಯೇ ತನ್ನ ಧರ್ಮ, ತಾನು ಹುಟ್ಟಿ ಬಂದ ಒಂದು ಸಣ್ಣ ಜಾತಿ ಎಂಬುದು ಧರ್ಮವಲ್ಲ, ಅಜ್ಞಾನದ ಕತ್ತಲನ್ನು ತೊಲಗಿಸುವುದೇ ಧರ್ಮ’ ಈ ಎಲ್ಲ ಭಾವನೆಗಳೂ ದೇವಧರ್ ಅವರಿಗೆ ಬಂದವು. ’ಅಂದರೆ ಭಕ್ತಿ ಇರಲಿಲ್ಲ. ಎಂದಲ್ಲ, ಗೀತೆ ಎಂದರೆ ಅವರಿಗೆ ಪ್ರಾಣ. ’ಗೀತೆ ಧರ್ಮವನ್ನು ಹೇಳುತ್ತದೆ. ಎಲ್ಲ ಆದರ್ಶವೂ ಅದರಲ್ಲೇ ಇವೆ. ಕರ್ಮಯೋಗಿ ಆಗಬೇಕು ಅಂತ ತಿಳಿಸುತ್ತದೆ. ಭಾರತೀಯ ಸಂಸ್ಕೃತಿಯ ಹಿರಿದಾದ ಚೇತನಕ್ಕೆ ಅದು ಕಿರೀಟ ಇದ್ದ ಹಾಗೆ. ತನ್ನ ಬಾಳಲ್ಲಿ ಈ ಮಾತುಗಳನ್ನು ರೂಢಿಸಿಕೊಂಡರೆ, ಈಗ ಇರುವ ಸಣ್ಣ ಭಾವನೆ ಇರಲಿಕ್ಕೆ ಆಗ ಅವಕಾಶವೆಲ್ಲಿರುತ್ತದೆ? ಎಂದು ಅವರು ಹೇಳುತ್ತಿದ್ದರು.

ಇನ್ನು ಆಗಿನ ದೇಶದ ಸ್ಥಿತಿಯೋ? ಹೊರಗಿನಿಂದ ಬಂದ ಬ್ರಿಟಿಷರು ನಮ್ಮನ್ನು ದಾಸ್ಯದಲ್ಲಿರಿಸಿ ಆಳುತ್ತಿದ್ದರು. ದೇಶವನ್ನು ಶೋಷಿಸಿ, ಸಂಪತ್ತನ್ನು ಇಂಗ್ಲೆಂಡಿಗೆ ಸಾಗಿಸುತ್ತಿದ್ದರು. ಭಾರತವೂ ಸ್ವಾತಂತ್ರ‍್ಯ ಪಡೆಯಲು ತನ್ನದೇ ಆದ ಹೋರಾಟವನ್ನು ನಡೆಸುತ್ತಿತ್ತು. ಬಾಲ ಗಂಗಾಧರ ತಿಲಕ್, ಗೋಖಲೆ ಮೊದಲಾದವರು ಈ ಹೋರಾಟದ ನಾಯಕರು. ದೇವಧರರಿಗೆ ಗೋಖಲೆ ಅವರ ವ್ಯಕ್ತಿತ್ವ ಮೆಚ್ಚಿಗೆಯಾಯಿತು. ಅವರ ಹತ್ತಿರ ಇದ್ದು ಸಮಾಜ ಸುಧಾರಣಾ ಕಾರ್ಯ ನಡೆಸೋಣ ಅಂತ ಅನ್ನಿಸಿತು.

೧೯೦೪ರಲ್ಲಿ ಆರಂಭವಾಯಿತು. ’ಭಾರತ ಸೇವಾ ಸಮಾಜ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ) ’ಎಂಬ ಸಂಸ್ಥೆ. ಇದೊಂದು ನಿಷ್ಠಾವಂತ ದೇಶ ಸೇವಕರ ಸಂಘ. ’ತಾಯ್ನಾಡಿಗೋಸ್ಕರ ತನ್ನ ಎಲ್ಲವನ್ನೂ ಮುಡಿಪಾಗಿರಿಸಿ ದುಡಿಯುವವರಿಗೆ ಮಾತ್ರ ಅಲ್ಲಿ ಅವಕಾಶ. ಸ್ವಂತ ಆಸ್ತಿ ಮಾಡಿಕೊಳ್ಳಕೂಡದು. ಸ್ವಾರ್ಥ ಇರಬಾರದು. ದೇಶವೇ ತನ್ನ ಮನೆ, ಅದೇ ತನ್ನ ನೆಂಟ, ಎಲ್ಲವೂ ಅದೇ. ಹೀಗೆ ಭಾವಿಸಬೇಕು ನಡೆಯಬೇಕು. ಭಾರತಮಾತೆಯನ್ನು ಬಿಳಿಯರ ಕೈಯಿಂದ ಬಿಡಿಸಿ, ಸ್ವತಂತ್ರಗೊಳಿಸಬೇಕು. ಅದೇ ಬಾಳಿನ ಧ್ಯೇಯ!’ ಇವು ಸಂಸ್ಥೆಯ ಕೆಲವು ನಿಯಮಗಳು. ಇದನ್ನು ಆರಂಭಿಸಿದವರು ಗೋಪಾಲಕೃಷ್ಣ ಗೋಖಲೆ. ದೇವಧರ್ ಇದನ್ನು ಮನಸಾರ  ಸ್ವಾಗತಿಸಿದರು. ದೇವಧರ್, ದ್ರಾವಿಡ್, ಪಟವರ್ಧನ್, ಗೋಖಲೆ ಇವರೇ ಸಂಸ್ಥೆಯ ಮೊದಲ ಸದಸ್ಯರು.

ದೇಶದ ಕಾರ್ಯ ಇದು

ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಸಣ್ಣ ಘಟನೆಯೊಂದು ನಡೆಯಿತು. ಇದು ದೇವಧರರ ಮನಸ್ಸಿನ ದೃಢತೆ, ಅವರ ದುಡಿಮೆ ಎಂಥದು ಎಂದು ಮನದಟ್ಟು ಮಾಡಿಕೊಡುವಂಥದು.

ಆಗ, ದೇವಧರ್ ಬಿಹಾರ ಪ್ರಾಂತದಲ್ಲಿ ಸಂಚರಿಸುತ್ತಿದ್ದರು. ಅಲ್ಲೊಂದು ಊರಿನಲ್ಲಿ, ಒಬ್ಬರ ಮನೆಗೆ ಹೋದರು. ಮೃದುವಾಗಿ ಬಾಗಿಲು ತಟ್ಟಿದರು. ಮನೆಯಾತ ಬಾಗಿಲು ತೆರೆದು ನೋಡಿದ. ಇವರ ಕೈಯಲ್ಲಿದ್ದ ಕಾಗದಗಳು, ವಿಜ್ಞಾಪನಾ ಪತ್ರ ಎಲ್ಲ ಅವನಿಗೆ ಅರ್ಥಮಾಡಿಕೊಟ್ಟುವೇನೋ? ದಢಾರನೆ ಬಾಗಿಲು ಮುಚ್ಚಿಕೊಂಡ. ದೇವಧರ್ ತಾಳ್ಮೆ ಕಳೆದುಕೊಳ್ಳಲಿಲ್ಲ. ಮೆಲು ನಗು ನಕ್ಕು, ಮೃದುವಾಗಿ ನುಡಿದರು: ’ನೋಡಿ ಮಹನೀಯರೇ, ಬಾಗಿಲೇಕೆ ಹಾಗೆ ಮುಚ್ಚಿಕೊಳ್ಳುವಿರಿ? ನಾನು ಬಂದ ಉದ್ದೇಶವಿಷ್ಟೆ ನಿಮ್ಮ ಹತ್ತಿರ ಕೆಲವು ವಿಚಾರ ಮಾತಾಡಿ ಹೋಗೋಣವೆಂದು. ಇಂಥ ಒಳ್ಳೆ ಅವಕಾಶವನ್ನು ನೀವು ನನಗೆ ಮಾಡಿಕೊಡುವುದಿಲ್ಲವೇ? ಮೊದಲ ಸಹಕಾರಿ ಸಂಸ್ಥೆ. ಮುಂದೆ ಅದು ಇತರ ಸಹಕಾರಿ ಸಂಘಗಳಿಗೆ ಮಾರ್ಗದರ್ಶಿ ಆಯಿತು.’

ತಾನು ತಂದಿದ್ದ ಹೂಗಳನ್ನು ಅವರ ಪಾದಗಳ ಮೇಲೆ ಸುರಿದು, ಪಾದಗಳ ಮೇಲೆ ತಲೆ ಇರಿಸಿ ನಮಿಸಿದಳು.

ಕಾರ್ಯಕ್ಷೇತ್ರ ಬೆಳೆಯಿತು

೧೯೦೭ರಲ್ಲಿ ಮಿರ್ಜಾಪುರ ಜಿಲ್ಲೆಯಲ್ಲಿ ಭಯಂಕರ ಕ್ಷಾಮ ಬಂದಿತು. ಆಗ ಬಿಡುವಿಲ್ಲದೆ ಸುತ್ತಿ ಪರಿಹಾರ ಕಾರ್ಯ ನಡೆಸಲೋಸುಗ ನಿಧಿ ಸಂಗ್ರಹಿಸಿದರು ದೇವಧರ್. ಹಳ್ಳಿಯ ಬದುಕಿನ ಪರಿಚಯ ಅವರಿಗೆ ಆಯಿತು. ೧೯೧೫ರಲ್ಲೇ ಹರಿಜನ ಮತ್ತು ಇತರ ಹಿಂದುಳಿದ ವರ್ಗದವರಿಗೆಂದೇ ಅವರು ಒಂದು ಸಹಕಾರ ಸಂಘ ಆರಂಭಿಸಿ, ದಕ್ಷತೆಯಿಂದ ಅದು ತನ್ನ ಕಾರ್ಯ ಜರುಗಿಸುವಂತೆ ಮಾಡಿದರು. ಈ ದಿಸೆಯಲ್ಲಿ ’ಸಹಕಾರಿ ಮಿತ್ರ’ ಎಂಬ ಒಂದು ಮರಾಠಿ ಪತ್ರಿಕೆಯನ್ನು ಅವರು ಆರಂಭಿಸಿದರು. ’ಧ್ಯಾನ್ ಪ್ರಕಾಶ್’ ಶೇಟಿ ಮತ್ತು ಶೇಟಿಕಾರಿ’ ಎಂಬ ಪತ್ರಿಕೆಗಳಿಗೂ ಕೆಲವು ಕಾಲ ಅವರು ಸಂಪಾದಕರಾಗಿದ್ದರು.

೧೯೧೮ರಲ್ಲಿ ಮುಂಬಯಿಯ ಕೇಂದ್ರ ಸಹಕಾರ ಸಂಸ್ಥೆ ಆರಂಭ ಆದುದೂ  ಇವರ ದುಡಿಮೆ, ಪ್ರಯತ್ನಗಳಿಂದಲೇ. ೧೯೨೧ ರಿಂದ ೨೮ರವರೆಗೂ ಅವರು ಆ ಸಮಿತಿಗೆ ಅವಿರೋಧವಾಗಿ ಆಯ್ಕೆ ಆದರು. ಅವರು  ಪ್ರಾಮಾಣಿಕ ಸೇವೆಯನ್ನು ಸಂಸ್ಥೆಯು ಪ್ರಶಂಶಿಸಿ ಡಿಸೆಂಬರ್ ೧೯೨೮ರಲ್ಲಿ ’ಫೆಲೋ’ ಮಾಡಿ ಗೌರವಿಸಿತು.

೧೯೨೬-೩೫ರಲ್ಲಿ ಔರಂಗಾಬಾದ್, ಲಕ್ನೋ, ಮದರಾಸ್ ಮುಂತಾದ ಸ್ಥಳಗಳಲ್ಲಿ ’ಭಾರತೀಯ ಸಂಯುಕ್ತ ಸಹಕಾರಿ ಸಮ್ಮೇಳನ’ ನಡೆಯಿತು. ಆಗ ದೇವಧರ್ ಅವರೇ ಅಧ್ಯಕ್ಷರಾಗಿದ್ದರು. ಸಹಕಾರ ತತ್ತ್ವಗಳ ಅಧ್ಯಯನ ನಡೆಸಲೋಸುಗ ಹೊರದೇಶಗಳಲ್ಲೂ ಪ್ರವಾಸ ಮಾಡಿ ಬಂದರು. ಆನಂತರ  ಅವರು ಕಟ್ಟಿದ ಸಂಸ್ಥೆ ’ಭಾರತೀಯ ಕೇಂದ್ರ ಸಹಕಾರಿ ಬೋರ್ಡ್’ ಅಕ್ಟೋಬರ್ ೧೯೩೫ರವರೆಗೂ ಅವರು ತೀರ ನಿಶ್ಯಕ್ತರಾಗುವವರೆಗೂ  – ಸಂಸ್ಥೆಯ ಉನ್ನತಿಗೆಂದೇ ದುಡಿದರು. ಪುಣೆಯ ಕೇಂದ್ರ ಸಹಕಾರಿ ಬ್ಯಾಂಕ್, ಚತುಶೃಂಗಿಯ ಸಾಲ ನೀಡುವ ಸಹಕಾರ ಸಂಸ್ಥೆ, ಪರೇಲ್ ನಲ್ಲಿನ ಸಹಕಾರಿ ಮುದ್ರಣಾಲಯ, ಗಿರಿಗಾಂವ್ ನಲ್ಲಿ ಸಹಕಾರಿ ದಾಸ್ತಾನು ಮಳಿಗೆ ಇವೆಲ್ಲ ದೇವಧರ್ ಪಟ್ಟ ಸತತ ಶ್ರಮದ ಫಲ. ಆಗ್ಗೆ ಈ ಚಟುವಟಿಕೆ ಭಾರತಕ್ಕೆ ಹೊಸತು. ಇಂದು ಇದೇ ಉಪಯುಕ್ತ ಆಗಿದೆ ಎಂಬುದು ಮರೆಯುವಂಥದಲ್ಲ.

ಸೇವಾ ಸದನ

ಸೇವಾ ಸದನ ಎಂಬುದು ದೇವಧರ್ ಕಟ್ಟಿದ ಇನ್ನೊಂದು ಸಂಸ್ಥೆ. ಇದನ್ನು ಕಟ್ಟಲು ಒಂದು ಘಟನೆಯು ಕಾರಣ ಆಯಿತು. ೧೯೦೬ರಲ್ಲಿ ಪುಣೆಯಲ್ಲಿ ಹರಡಿದ ಪ್ಲೇಗ್ ಜಾಡ್ಯವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತು. ಆಗ ’ಇನಾಕ್ಯುಲೇಶನ್’ (ಚುಚ್ಚುಮದ್ದು) ಹಾಕಿಸಿಕೊಳ್ಳಬೇಕೆಂದು ಜನತೆಯನ್ನು ದೇವಧರ್ ಪರಿಪರಿಯಾಗಿ ಬೇಡಿಕೊಂಡರು. ತಾವೇ ಮೊದಲು ಹಾಕಿಸಿಕೊಂಡು, ಏನೂ ಆಗುವುದಿಲ್ಲವೆಂದು ಮನವರಿಕೆ ಮಾಡಿಕೊಟ್ಟರು. ಅನೇಕ ಕಡೆ ಶಿಬಿರಗಳನ್ನು ನಡೆಸಿ, ರೋಗ ನಿರೋಧಕ ಕಾರ್ಯಕ್ರಮಗಳನ್ನು ನಡೆಸಿದರು. ಆಗ ಅವರಿಗೆ ತರಬೇತಿ ಪಡೆದ ದಾಯಿಯರು ಇದ್ದರೆ ಈ ಸಂದರ್ಭಗಳಲ್ಲಿ ಎಷ್ಟು ಉತ್ತಮ ಎಂದು ಅನಿಸಿತು.

ಈ ಅಲೋಚನೆಗಳ ಫಲವಾಗಿ ಮೂಡಿ ಬಂತು ಸೇವಾ ಸದನ. ೧೯೧೮-೨೦ರ ಕಾಲದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಗಮನವಿರಲಿಲ್ಲ.  ವಿದ್ಯಾವಂತರು ಕೂಡ ತಮ್ಮ ಮನೆ ಹೆಂಗಸರನ್ನು ಓದಿಸುವುದಾದರೂ ಏಕೆ, ಅದರಲ್ಲಿ ಏನು ಅರ್ಥವಿದೆ ಎನ್ನುತ್ತಿದ್ದರು. ’ಹೆಂಗಸರಿಗೆ ಓದು ಕಲಿಸಿದರೆ ಆಯಿತು. ಮನೆಯೇ ಕೆಡುತ್ತದೆ. ಸ್ತ್ರೀಯರ ನೈತಿಕ ಮಟ್ಟವೂ ಇಳಿಯುತ್ತದೆ ’ಎಂದು ಮೂಗು ಮುರಿಯುತ್ತಿದ್ದವರೂ ಬಹಳ ಮಂದಿ.

ಶ್ರೇಷ್ಠ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ, ಅವರ ಪತ್ನಿ ರಮಾಬಾಯಿ ರಾನಡೆ, ಜ್ಯೋತಿ ಬಾಪಟ್, ಸತ್ಯಶೋಧಕ ಸಮಾಜ ಎಂಬ ಸಂಸ್ಥೆಯ ಸ್ಥಾಪಕ ಶಂಕರ ಪಾಂಡುರಂಗ ಪಂಡಿತ್ ಹಾಗೂ ದೇವಧರ್ ಇವರೆಲ್ಲ ಕೂಡಿಕೊಂಡರು. ’ಸ್ತ್ರೀಯರಿಗೂ ಶಿಕ್ಷಣವು ದೊರೆಯಬೇಕು. ಇಂಗ್ಲಿಷ್ ಕಲಿತರೆ ತಪ್ಪು ಏನಾಯಿತು? ಅದು ನಮ್ಮ ಸಂಸ್ಕೃತಿಗೆ ಹಾನಿಯೇನೂ ತರದು’ ಎಂದು ಸಮಾಜದ ಆಗಿನ ಪರಿಸ್ಥಿತಿಯ ವಿರುದ್ಧ ಹೋರಾಡಿ, ಮಹಿಳೆಯರನ್ನು ತಮ್ಮ ಗುರಿಯ ಕಡೆ ಆಕರ್ಷಿಸಿದರು. ದೇವಧರ‍್ ಮಹಿಳೆಯರ ಉನ್ನತಿಗೆಂದೇ ಸೇವಾ ಸದನ ಎಂಬ ಸಂಸ್ಥೆಯನ್ನು ಕಟ್ಟಿದರು.

ಆಗ ಇದ್ದ ನಿಯಮಗಳೋ ಕಟ್ಟುಕಟ್ಟಳೆಗಳೋ, ಮೂಢ ನಂಬಿಕೆಗಳೋ? ಬೇಕಾದಷ್ಟು ! ಜಾತಿ-ಮತಗಳ ವಿಚಾರದಲ್ಲಿ ಇದ ಕುರುಡು ಆಚಾರಗಳಂತೂ ಹೇಳುವ ಹಾಗೆಯೇ ಇಲ್ಲ. ಮಹಿಳೆಯರಿಗೆ ಮನೆಯಲ್ಲೇ ಬಂಧನಗಳು ತುಂಬ! ಇನ್ನೂ ಶಿಕ್ಷಣವೆಂದರೆ? ಹೆಂಗಸರು ತಮ್ಮ ಮನೆಯಲ್ಲೇ ಬಾಳೆಲ್ಲ ಸವೆಸಬೇಕು’ . ಇದು ಆಗ ಬಹು ಜನರ ಅಭಿಪ್ರಾಯ. ದೇವಧರ್ ಇದನ್ನು ಅರಿಯದಿದ್ದವರೇನಲ್ಲ, ?ಆದರೆ, ಅಡ್ಡಿಯೇನಾದರೂ ಲೆಕ್ಕಿಸುತ್ತಲೂ ಇರಲಿಲ್ಲ.

ರಮಾಬಾಯಿ ರಾನಡೆ ’ಸೇವಾಸದನ’ ದ ಮೊದಲ ಅಧ್ಯಕ್ಷೆ. ಸಂಸ್ಥೆ ಆರಂಭ ಆದುದೇ ಅವರ ಮನೆಯಲ್ಲಿ. ’ನಮ್ಮಲ್ಲಿ ಆಗ ಹಣ ಇರಲಿಲ್ಲ. ದೇವರಲ್ಲಿ ನಂಬಿಕೆ, ಕೆಲಸದಲ್ಲಿ ವಿಶ್ವಾಸ, ಸುಶಿಕ್ಷಿತ ಮಹಿಳೆಯರ ಅಗತ್ಯ ಇಂದು ಭಾರತಕ್ಕೆ ಇದೆ ಎಂಬ ನಂಬಿಕೆ, ಈ ದಿಸೆಯಲ್ಲಿ ಏನೇ ಮಾತು ಬಂದರೂ ಎದುರಿಸುವ ಧೈರ್ಯ, ಇಷ್ಟೇ ಇದ್ದದ್ದು’ ಎಂದಿದ್ದಾರೆ ದೇವಧರ್ ಒಂದೆಡೆ. ಇಂದು ’ಸೇವಾಸದನ’ ಭಾರತ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಾವಿರಾರು ನೊಂದ ಹೆಂಗಸರಿಗೆ, ವಿಧವೆಯರಿಗೆ, ಅನಾಥ ವಿದ್ಯಾರ್ಥಿನಿಯರಿಗೆ, ಮಕ್ಕಳಿಗೆ ಆಸರೆ ಆಗಿದೆ.

’ಸೇವಾ ಸದನ’ದ ಕೀರ್ತಿ ಬೇರೆ ದೇಶಗಳಿಗೂ ಹಬ್ಬಿತು. ಇಬ್ಬರು ಅಮೆರಿಕನ್ನರು ೧೦೦೦ ಡಾಲರುಗಳನ್ನು ಸಂಸ್ಥೆಗೆ ದಾನ ಮಾಡಿದರು. ಇಂಗ್ಲಿಷ್ ಮಹಿಳೆಯೊಬ್ಬಾಕೆ, ಭಾರತೀಯರನ್ನು ತುಂಬ ಪ್ರೀತಿಸುತ್ತಾ ಇದ್ದವಳು, ತನ್ನ ಸಾವಿನ ಸಮಯದಲ್ಲಿ ತಂದೆಯನ್ನು ಹತ್ತಿರ ಕರೆದು, ’ನನ್ನ ಹತ್ತಿರ ಮೂರು ಸಾವಿರ ರೂಪಾಯಿ ಇದೆ. ಅದನ್ನು ಸೇವಾ ಸದನಕ್ಕೆ ಕೊಟ್ಟುಬಿಡಿ’ ಅಂತ ಕೊಟ್ಟಳಂತೆ. ತಂದೆಗೆ ಆ ದುಃಖದಲ್ಲೂ ಮಗಳ ದಾನ ಕಂಡು ಸಂತೋಷ ಆಯಿತು. ಅದನ್ನು ದೇವಧರ್ ಗೆ ಒಪ್ಪಿಸಿದರು.

ಇಷ್ಟೆಲ್ಲ ಸಾಧನೆಗಳಿದ್ದರೂ ದೇವಧರ್ ಮಾತ್ರ ಒಂದೇ ರೀತಿ. ಅಪವಾದ ಬೇಕಾದಷ್ಟು ಬಂದಿತು. ’ಇವನು ಹೆಂಗಸರನ್ನು ಹಾಳು ಮಾಡುತ್ತಿದ್ದಾನೆ’ ಎಂದು ಕೆಲವು ಜನ ಬೈದರು. ಆದರೆ ದೇವಧರ‍್ ಗೆ ಮಾತ್ರ ತಮ್ಮ ಕೆಲಸದಲ್ಲಿ ತುಂಬ ನಿಷ್ಠೆ ಯಾವುದಕ್ಕೂ ಜಗ್ಗಲಿಲ್ಲ.

ದೇವಧರ್ ಸಾಮಾನ್ಯರಲ್ಲಿ ಅದೆಷ್ಟು ಪ್ರೀತಿಪಾತ್ರರು ಎನ್ನಲು ಅವರ ಗೆಳೆಯ ಘಡಕೆಯವರು ಹೇಳುವಂತೆ, ’ಮುಂಬಯಿಗೆ ಹೋದರೆ, ಹರಿಜನರೆಲ್ಲ ಬಂದು ಆತ್ಮೀಯತೆಯಿಂದ ಅವರನ್ನು ಮಾತಾಡಿಸುತ್ತಿದ್ದರು, ನಮಸ್ಕರಿಸುತ್ತಿದ್ದರು. ’ಭಾಭಾ ಸಾಹೇಬ್’ ಅಂತ ಪ್ರೀತಿಯಿಂದ ಕರೆಯುತ್ತಿದ್ದರು.

ದೇವಧರ್ ತೋರುತ್ತಿದ್ದ ವಾತ್ಸಲ್ಯ, ಪ್ರೇಮಗಳನ್ನು ತೋರುವಂಥ ಒಂದು ಘಟನೆ ೧೯೩೪ರಲ್ಲಿ ನಡೆಯಿತು. ಅದನ್ನು ಇಲ್ಲಿ ಸ್ಮರಿಸಬಹುದು.

ಆಕೆಯ ಕಥೆ

ಅವರ ಆರೋಗ್ಯ ಆಗ ತುಂಬ ಹದಗೆಟ್ಟಿತ್ತು. ನಿತ್ರಾಣ, ರಾತ್ರಿಯೆಲ್ಲ ಬಿಸಿ ಚಹ ಸೇವೆ, ಸಂಸ್ಥೆಯ ಕಾಗದ ಪತ್ರ, ಮುಂದಿನ ಕಾರ್ಯ ಯೋಜನೆ, ಸಹಕಾರ ಸಂಘಗಳ ಪ್ರಗತಿ, ಇವುಗಳನ್ನು ಪರಿಶೀಲಿಸುವುದು, ಊರೂರು ಸುತ್ತುವಿಕೆ – ಹೀಗಾಗಿ ಆರೋಗ್ಯ ಇಳಿಮುಖ ಆಗಿತ್ತು. ಹಾಗೇ ಕುರ್ಚಿಯಲ್ಲಿ ಒರಗಿ ಕುಳಿತಿದ್ದರು. ಆಗ ಬೆಳಗ್ಗೆ ೧೦ ಗಂಟೆ. ತರುಣಿಯೊಬ್ಬರು ಅವರ ಮನೆಯ ಹೊರಬಾಗಿಲಲ್ಲಿ ಬಂದು ನಿಂತು, ಕಾರ್ಯದರ್ಶಿಯ ಹತ್ತಿರ, ’ನಾನು ಭಾಭಾ ಸಾಹೇಬರನ್ನು ಕಾಣಬೇಕು’ ಎಂದಳು. ಕಿಟಕಿಯಿಂದ ಹೊರಗಡೆ ನೋಡಿದ ದೇವಧರ್ ತಮ್ಮ ಕಾರ್ಯದರ್ಶಿಯನ್ನು ಕರೆದು, ಮೆಲುದನಿಯಲ್ಲಿ ಹೇಳಿದರು”  ’ ನೋಡು ನಿನಗೆ ಆಕೆ ಯಾರು ಎಂಬುದು ಗೊತ್ತೇ? ನನ್ನ ಗೆಳೆಯನ ಮನೆಯಲ್ಲಿ ಅವಳು ಕೆಲಸಕ್ಕಿದ್ದಳು. ಒಂದು ದಿನ, ಆಕೆ ನೆಲ ಒರೆಸುತ್ತ ಇರುವಾಗ ೧೦೦ ರೂಪಾಯಿ ನೋಟು ಸಿಕ್ಕಿತು ಅವಳಿಗೆ. ಅದನ್ನೇನು ಮಾಡಿದಳೂಂತೀಯ? ಸತ್ಯವಾಗಿ ತನ್ನ ಧಣಿಗೇ ಹಿಂದಿರುಗಿಸಿದಳು. ಅವನಿಗೂ ಆಕೆಯ ಪ್ರಾಮಾಣಿಕತೆ ಕಂಡು ಸಂತೋಷ ಆಯಿತು. ನನ್ನ ಹತ್ತಿರ ಇದನ್ನು ಹೇಳಿದ. ಕೆಲವು ದಿನ ಕಳೆಯಿತು. ನಾನು ಒಂದು ದಿನ ಮೃದುವಾಗಿ ಅವಳನ್ನು,’ನೀನು ಯಾಕೆ ನಮ್ಮ ಸ್ಕೂಲಿಗೆ ಬರಬಾರದು? ಎಂದು ಕೇಳಿದೆ. ನಾಚಿ ನೀರಾದಳವಳು. ಒಪ್ಪಲಿಲ್ಲ! ಮತ್ತೆ ಎರಡು ದಿನ ಕಳೆದವು. ಪುನಃ ನಾನು ಕೇಳಿದೆ  ’ಉಹೂಂ!, ಅನ್ನಬೇಕೆ? ನನಗೂ ರೇಗಿತು. ಮನೆಯಲ್ಲಿ ಯಾರಿದ್ದರು ಎಂದು ಗಮನಿಸಲಿಲ್ಲ. ಅವಳ ತಲೆಗೂದಲಿಗೆ ಕೈಹಾಕಿ ಹಿಡಿದುಕೊಂಡು ದರದರನೆ ಬೀದಿಯಲ್ಲಿ ಎಳೆದುಕೊಂಡು ಹೋದೆ. ಸೇವಾಸದನದ ಶಾಲೆಯಲ್ಲಿ ಕುಕ್ಕರ ಬಡಿಸಿದೆ. ಅವಳು ’ಹೋ! ಅಂತ ಗಟ್ಟಿಯಾಗಿ ಅಳುತ್ತಿದ್ದಳು. ನಾನು ಅದಕ್ಕೆಲ್ಲ ಮನಸ್ಸು ಕೊಡಲಿಲ್ಲ. ಬೀದಿಯವರೆಲ್ಲ ಬಾಯಿಗೆ ಬಂದಂತೆ ಆಡಿದರು. ಅದನ್ನು ನಾನು ಕಿವಿಗೇ ಹಾಕಿಕೊಳ್ಳಲಿಲ್ಲ. ಹಾಗೆಯೇ ದಿನ ಕಳೆದವು. ಅವಳೂ ಶಾಲೆಗೆ ಹೊಂದಿಕೊಂಡಳು. ಎಷ್ಟು ಜಾಣೆ ಅಂತೀಯ ಅವಳು? ಬಹು ಬೇಗ ಓದು ಬರಹ ಕಲಿತಳು. ಅಷ್ಟೇ ಅಲ್ಲ. ಶಿಕ್ಷಣ ಪರೀಕ್ಷೆಯಲ್ಲಿ ತೇರ್ಗಡೆಯಾದಳು. ಈಗ ಮುಂಬಯಿಯಲ್ಲಿ ಸ್ಕೂಲೊಂದರಲ್ಲಿ ಮೇಡಂ ಆಗಿದ್ದಾಳೆ!’.

ಆಕೆ ಒಳಕ್ಕೆ ಬಂದಳು. ದೇವಧರರನ್ನು ನೋಡಿದಳು. ಸೊಪ್ಪಾಗಿ ಕುಳಿತ ತನ್ನ ತಂದೆಯ ರೂಪಾದ ಅವರನ್ನು ಕಂಡು, ಗಳಗಳಕೆ ಅತ್ತುಬಿಟ್ಟಳು. ’ಅಯ್ಯೋ, ನನ್ನಯ್ಯ! ನನ್ನಂತರ ಎಷ್ಟು ಜನ ಬಡ ಹೆಣ್ಣುಮಕ್ಕಳ ಕಣ್ಣೀರನ್ನು ಒರೆಸಬೇಕಲ್ಲವೇ ನೀವು? ಏಕೆ ಇಷ್ಟು ಸೊರಗಿಬಿಟ್ಟಿದ್ದೀರಿ? ಆರೋಗ್ಯದ ಕಡೆಗೆ ಗಮನ ಕೊಡಬಾರದೆ?’ ಎಂದು ನೊಂದುಕೊಂಡು ನುಡಿದಳು. ತಾನು ತಂದಿದ ಹೂಗಳನ್ನು ಅವರ ಪಾದಗಳ ಮೇಲೆ ಸುರಿದಳು. ಪ್ರೀತಿಯಿಂದ, ಆ ಪಾದಗಳ ಮೇಲೆ ತಲೆಯಿರಿಸಿ, ನಮಿಸಿದಳು. ಇಂಥ ಪ್ರಸಂಗ ಎಷ್ಟೋ!

ನಮ್ಮಿಂದ ಆಗುವುದಿಲ್ಲವೇ?

ಹೀಗೆ, ದೇವಧರ್ ಸ್ತ್ರೀಯರಿಗೂ, ವೈದ್ಯಕೀಯ, ದಾದಿಯರ ಶಿಕ್ಷಣ ಕೊಡಿಸಿದ್ದು ಒಂದು ದೊಡ್ಡ ಪ್ರಯತ್ನ. ’ದಾದಿ ಆಗುವುದೇ ? ಅದೂ ನಮ್ಮ ಮನೆ ಹೆಂಗಸರು! ಛೆಛೆ! ಎಂಥದು ಇದು?’ ಎಂಬುದು ಆಗ  ಕೇಳಿಬಂದ ಮಾತುಗಳು. ಆಗ ಆ ವ್ಯಕ್ತಿಯ ಬಗ್ಗೆ ಇದದ್ದು ಆ ಭಾವನೆ.

’ಒಳ್ಳೆಯ ತಾಯಿ, ದಕ್ಷ ದಾದಿಯೂ ಆಗಬಲ್ಲಳು. ತನ್ನ ಮಕ್ಕಳು, ಕುಟುಂಬದವರನ್ನು ಪ್ರೀತಿಯಿಂದ ಕಾಣುವಂತೆಯೇ ವಿಶ್ವ ಕುಟುಂಬವೆ ತನ್ನದು ಎಂಬ ವಿಶಾಲ ಭಾವನೆ ಆಕೆಗೆ ಬರಬೇಕು, ಅಷ್ಟೆ’ ಎಂದು ದೇವಧರ್ ಬಯಸಿದರು. ನಮ್ಮ ಹೆಣ್ಣುಮಕ್ಕಳು ಶ್ರೇಷ್ಠ ದರ್ಜೆಯ ದಾದಿಯರಾಗಬಲ್ಲರು ಎಂಬುದು ಅವರ ಮತ. ೧೯೧೦ರಲ್ಲಿ ಸಸೂನ್ ಆಸ್ಪತ್ರೆಯ ಅಧಿಕಾರಿಗಳನ್ನು ಈ ಕಾರ್ಯಕ್ರಮದಲ್ಲಿ ನಮಗೆ ಸಹಕಾರ ನೀಡಿರೆಂದು ದೇವಧರ್ ಪ್ರಾರ್ಥಿಸಿದರು.’ ಬಿ.ಜೆ.  ಮೆಡಿಕಲ್ ಸ್ಕೂಲ್’ ನಲ್ಲಿ ದಾದಿಯರ ತರಬೇತಿ ಶಿಕ್ಷಣ ಆರಂಭ ಆಯಿತು. ದೊಡ್ಡ ಮನೆತನದ ಹೆಣ್ಣುಮಕ್ಕಳು ಮೊದಮೊದಲು ಆ ಕಡೆ ಸುಳಿಯಲಿಲ್ಲ. ಆಗ ಯೂರೋಪಿಯನ್ ಹಾಗೂ ಕ್ರೈಸ್ತ ದಾದಿಯರೆ ಹೆಚ್ಚು. ಅವರಿಗೆ ಸರ್ಕಾರದ ಬೆಂಬಲ ಬೇರೆ! ಅವರದೆ ಸರ್ಕಾರ ತಾನೆ ಇದ್ದುದು? ದೇವಧರ್ ಇದನ್ನು ವಿರೋಧಿಸಿದರು.’ನಮ್ಮ ದೇಶದ ಮಹಿಳೆಯರು ಉತ್ತಮ ಮಾತೆಯರು. ಅವರು ಉತ್ತಮ ದಾದಿಯರೂ ಆಗಬಲ್ಲರು. ಅವರನ್ನು ಬಿಟ್ಟು ಸಾವಿರಾರು ಮೈಲಿಯಿಂದ ಪರಕೀಯರನ್ನು ಏಕೆ ಇಲ್ಲಿಗೆ ಕರೆಸಬೇಕು? ನಮ್ಮವರ ಶುಶ್ರುಷೆ ನಾವು ಮಾಡುವುದಕ್ಕೆ ಆಗುವುದಿಲ್ಲವೇನು? ಅದರಿಂದ ಆ ಮಟ್ಟಿಗೆ, ಆಕೆಗೆ ತನ್ನ ಬಾಳನ್ನು ಸಾಗಿಸುವುದಕ್ಕೂ ಒಂದು ದಾರಿ ತೋರಿದಂತಾದೀತು’. ಇವು ಅವರ ದೃಢವಾದ ಮಾತುಗಳು. ಅದನ್ನು ಅವರು ಸರ್ಕಾರಕ್ಕೂ ಕಲಿಸಿಕೊಟ್ಟರು. ದಾದಿಯರ ತರಬೇತಿ ಸಂಸ್ಥೆ ದೊಡ್ಡದಾಗಿ ಬೆಳೆಯಿತು. ಸಾವಿರಾರು ಮಂದಿ ಭಾರತೀಯ ದಾದಿಯರನ್ನು ತಯಾರು ಮಾಡಿದ ಪುಣ್ಯ ದೇವಧರ್ ರವರದಾಯಿತು.

ಖಂಡಿತ ನಡೆಸೋಣ

ದೇವಧರ್ ಅವರ ಮನಸ್ಸು ಎಷ್ಟು ನಿಶ್ಚಲ, ದೃಢ ಆಗಿರುತ್ತಿತ್ತು ಎನ್ನಲು ಒಂದು ಸಣ್ಣ ಉದಾಹರಣೆ. ಇದನ್ನು ಅವರ ಆಪ್ತ ಕಾರ್ಯದರ್ಶಿ ಆಗಿದ್ದ ಕೋದಂಡರಾಯರು ತಿಳಿಸಿದ್ದು. ಒಮ್ಮೆ ಸ್ವಲ್ಪ ವಿರಾಮವಾಗಿ ಗೆಳೆಯರ ಗುಂಪು ಕೂಡಿತ್ತು. ಆಗ ದೇವಧರ್ ಗೆ ಬಿಸಿ ಚಹಾ ಕುಡಿಯುವುದರ ಜತೆಗೆ, ಸಿಗರೇಟು ಸೇದುವ ಚಟವೂ ಹೆಚ್ಚು ಅದು, ಅವರ ಅನೇಕ ಸ್ನೇಹಿತರಿಗೆ ಆಗದು. ಮನುಷ್ಯ ಎಷ್ಟು ದುಡಿದರೂ ಸಣ್ಣ ವಿಚಾರದಲ್ಲಿ ತನ್ನ ಮನಸ್ಸನ್ನು ಇಳಿಬಿಟ್ಟಿದಾನಲ್ಲ ಎಂದು ಅನಿಸಿತ್ತು. ಆದರೆ, ಎದುರಿಗೆ ಹೇಳಲು ಅಳುಕು.

ಹಾಗೂ ಹೀಗೂ ಗುಂಪಿನ ಗೆಳೆಯನೊಬ್ಬ ಧೈರ್ಯ ಮಾಡಿ, ಸಿಗರೇಟಿನ ಧಂ ಎಳೆಯುತ್ತ, ತಲ್ಲೀನರಾಗಿ ಬಿಟ್ಟಿದ್ದ ದೇವಧರ್ ರನ್ನು ಕೇಳಿಯೇಬಿಟ್ಟ : ’ಭಾಭಾ ಸಾಹೇಬ್, ಎಲ್ಲ ಸರಿಯೇ, ಈಗ ನೀವು ನಮ್ಮದೊಂದು ಮಾತು ನಡೆಸಿಕೊಡಬೇಕಲ್ಲ?’

’ಅದೇನಯ್ಯ ಅಂಥ ಮಹತ್ವದ್ದು? ಖಂಡಿತ ನಡೆಸೋಣ. ಹೇಳು’.

’ಹಾಗಾದರೆ, ನೀವು ಸಿಗರೇಟು ಸೇದೋದನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು.’

ದೇವಧರ್ ಒಮ್ಮೆ ಆತನನ್ನು ನೋಡಿದರು. ಮರು ಕ್ಷಣವೆ ಮೀಸೆಯಂಚಿನಲ್ಲಿ ಮಗುವಿನಂಥ ನಗೆ! ಒಂದು ಸಲ ದೀರ್ಘವಾಗಿ ಧಂ ಎಳೆದು, ಸಿಗರೇಟನ್ನು ಆರಿಸಿ, ಬಿಸಾಡಿಬಿಟ್ಟರು. ಮುಂದೆ ಅವರೆಂದೂ ಸಿಗರೇಟನ್ನು ಸೇದಲಿಲ್ಲ. ಹೀಗೆ ಅವರ ದೃಢತೆ ಅತಿ ಸಣ್ಣ ವಿಚಾರದಿಂದ ಹಿಡಿದು, ದೇಶದ ಅಭಿವೃದ್ಧಿ ಕಾರ್ಯದವರೆಗೆ.

ಇನ್ನು, ಧರ್ಮದ ವಿಚಾರದಲ್ಲೋ? ಸೇವಾಸದನದ ವಿದ್ಯಾರ್ಥಿಗಳಿಗೆ ಎಲ್ಲ ಧರ್ಮದ ಪರಿಚಯವೂ ಆಗುತ್ತಿತ್ತು.ಗೀತಾಪಠಣ, ಸಂತ ತುಕಾರಾಮನ ಅಭಂಗ ಛಂದಸ್ಸಿನಲ್ಲಿ ಬರೆದ ಭಜನೆಗಳು, ಸಂತ ಜ್ಞಾನೇಶ್ವರನ ನೀತಿಮಾತುಗಳು, ಎಲ್ಲವೂ! ಇದೂ ದೇವಧರ್ ರ ಏರ್ಪಾಡು! ಅಸ್ಪೃಶ್ಯತೆ

ತೊಡಯಬೇಕು. ಇದು ಅವರ ಸಂಕಲ್ಪ ಅದಕ್ಕೆ ಸೇವಾ ಸದನ ಪ್ರತ್ಯಕ್ಷ ಸಾಕ್ಷಿ. ಅಲ್ಲಿ ಎಲ್ಲ ವರ್ಗದವರಿಗೂ ಪ್ರವೇಶ. ಸಂಸ್ಥೆಯದೇ ದೊಡ್ಡ ಪುಸ್ತಕ ಭಂಡಾರವಿದೆ. ವಾರಕ್ಕೊಮ್ಮೆ ಚರ್ಚಾಕೂಟ, ತಿಳಿದವರಿಂದ ಉಪನ್ಯಾಸ, ಹೆಣ್ಣುಮಕ್ಕಳಿಗೆ ಸರಳ ವ್ಯಾಯಾಮ, ಲೆಜೀಮ್, ಹಾಡು, ಹೊಲಿಗೆ, ಕಸೂರಿ, ಕೈತೋಟಗಾರಿಕೆ – ಎಲ್ಲ ರೀತಿಯ ಶಿಕ್ಷಣವೂ ಪಾಠರೂಪದಲ್ಲಿ ಹಾಗೂ ಪ್ರಾಯೋಗಿಕವಾಗಿ. ಹೆರಿಗೆ ಆಸ್ಪತ್ರೆ, ಮಕ್ಕಳ ಕಲ್ಯಾಣ ಕೇಂದ್ರ, ಇವರೆಡೂ ಸಂಸ್ಥೆಯ ಮುಖ್ಯ ಅಂಗಗಳು.

ಸೇವಾ ಸದನದ್ದೇ ಪ್ರಕಾಶನವೂ ಉಂಟು.  ೧೯೩೯ರಲ್ಲಿ ೩೯ ಮರಾಠಿ ಪುಸ್ತಕಗಳನ್ನು ಅದು ಪ್ರಕಟಿಸಿತ್ತು.

೧೯೩೧ರಲ್ಲಿ ಸೇವಾಸದನ ತನ್ನ ಬೆಳ್ಳಿಹಬ್ಬ ಆಚರಿಸಿತು. ದೇವಧರ್ ಗೆ ಆಗ ಅರವತ್ತು ವರ್ಷಗಳು ಸಂದಿದ್ದವು. ಆ ಹಬ್ಬದ ಪ್ರಯುಕ್ತ ಶಾಂತಿ, ಮತ್ತು ಅವರ ಸೇವೆಯನ್ನು ನೆನೆಸಿಕೊಳ್ಳುವ ಒಂದು ಸನ್ಮಾನ ಸಮಾರಂಭ ನಡೆದವು. ಆಗ ಮಹಾರಾಷ್ಟ್ರದ ಜನತೆ, ಹತ್ತು ಸಾವಿರ ರೂಪಾಯಿ ನಿಧಿಯನ್ನು ಸಂಗ್ರಹಿಸಿ, ಅರ್ಪಿಸಿತು. ಅದನ್ನು ದೇವಧರ್ ತಮ್ಮ ’ ತಾಯಿ ಸಂಸ್ಥೆ’ ಆದ ’ಭಾರತ ಸೇವಾ ಸಮಾಜ’ ಕ್ಕೆ ಕೊಟ್ಟರು. ಆ ಸಂಸ್ಥೆಯು ಪುನಃ ಆ ಮೊತ್ತವನ್ನು ಸೇವಾಸದನದ ಕಾರ್ಯಗಳಿಗೆಂದೇ ದಾನವಾಗಿ ನೀಡಿತು. ಆ ಸಮಯದಲ್ಲಿ ದೇವಧರರ ಕೆಲಸವನ್ನು ಮೆಚ್ಚಿ ಗಾಂಧೀಜಿ ಕಾಗದ ಬರೆದರು. ರಾಷ್ಟ್ರಕ್ಕೆ ನಿಮ್ಮಂತಹವರ ಅಗತ್ಯ ಇಂದು ಬಹಳ ಇದೆ’ ಎಂದರು.

ವಿವೇಕ ಸೇವೆಗಳ ಮೂರ್ತಿ

೧೯೧೧ನೇ ಇಸವಿ ಎಂದಿನಂತೆ ಹೋಳಿಹಬ್ಬ ಬಂತು. ಮುಂಬಯಿಯಲ್ಲಿರುವ ಇದು ಭಾರಿ ಹಬ್ಬ ಎಷ್ಟು ಜನ ಕುಡಿದು, ಅಮಲೇರಿ, ಹೊಡೆದಾಟ, ಅತ್ಯಾಚಾರಗಳನ್ನು ನಡೆಸುತ್ತಿದ್ದರೋ ಏನೋ! ದೇವಧರ್ ಇದನ್ನು ಸಹಿಸದಾದರು. ’ಈ ಸಲ  ಇದೆಲ್ಲ ನಡೆಯಗೊಡುವುದಿಲ್ಲ’. ಎಂದು ನಿರ್ಧರಿಸಿದರು. ತಮ್ಮೊಂದಿಗೆ ಒಂದು ಸಣ್ಣ ಗೆಳೆಯರ ಗುಂಪನ್ನು ಸೇರಿಸಿದರು. ಮನೆ – ಮನೆಗೂ ಹೋಗಿ ಕೋರಿದರು  ’ಹಬ್ಬವನ್ನು ಸಂತೋಷದಿಂದ ಆಚರಿಸಿ, ಕುಡಿಯಬೇಡಿ, ಹಬ್ಬದೂಟ ಮಾಡಿರಿ,  ಕೀರ್ತನೆ ಭಜನೆಗಳನ್ನು ನಡೆಸಿ, ಕುಡಿದು, ದೇಹ – ಹಣ ಎರಡನ್ನೂ ಹಾಳು ಮಾಡಬೇಡಿ’ ಹಬ್ಬ ಈ ಸಲ ಶಾಂತ ರೀತಿಯಲ್ಲಿ ಸಂತೋಷದಿಂದ ಜರುಗಿತು.

೧೯೧೬ರಲ್ಲಿ ಒಂದು ದಾರುಣ ಘಟನೆ ನಡೆಯಿತು. ರಾಮನವಮಿಯ ಹಬ್ಬದ ಸಂಭ್ರಮ. ಪುಣೆಯ ಹತ್ತಿರವೆ ಸಾಲುಂಬರ ಅಂತ ಒಂದು ಸಣ್ಣ ಗ್ರಾಮ. ಅಲ್ಲಿ, ಗಂಗಾಧರ ಪಂತ ಕುಲಕರ್ಣಿ ಎಂಬವರ ಮನೆಯಲ್ಲಿ ’ಹರಿಶ್ಚಂದ್ರ’ ನಾಟಕ ಆಡಲು ಏರ್ಪಾಡಾಗಿತ್ತು. ಜನವೋ ಜನ! ಮನೆಗೊಂದೇ ಹೊರಬಾಗಿಲು. ಹುಲ್ಲಿನ ಚಪ್ಪರ ಹಾಕಿದ್ದರು. ಚಪ್ಪರಕ್ಕೆ ಬೆಂಕಿ ಹತ್ತಿಕೊಂಡಿತು.

ಜನರು ಗಾಬರಿಯಿಂದ ದಿಕ್ಕಾಪಾಲಾಗಿ, ’ಹೋ! ಅಂತ ಕಿರುಚುತ್ತ ನುಗ್ಗುತ್ತಾರೆ, ಒಂದೇ ಬಾಗಿಲು! ಬಹಳ ಜನ ಬೆಂಕಿಗೆ ತುತ್ತಾದರು.

ಸುದ್ದಿ ತಿಳಿದ ದೇವಧರ್ ಧಾವಿಸಿ ಬಂದರು. ತಮ್ಮೊಂದಿಗೆ ಸದನದ ದಾದಿಯರು, ಕೆಲವು ವೈದ್ಯರು, ಸ್ವಯಂಸೇವಕ ಬಂಧುಗಳನ್ನು ಕರೆತಂದರು. ಪರಿಹಾರ ಕಾರ್ಯವನ್ನೆಲ್ಲ ತಾವೇ ನಿಂತು ನಡೆಸಿದರು.

೧೯೦೮ರಿಂದ ೧೯೧೪ರ ವರೆಗೂ ಉತ್ತರ ಪ್ರದೇಶ, ಕಾಥೇವಾಡ, ಗುಜರಾತ್, ಮದರಾಸು, ಅಹಮದ್ ನಗರ, ಬುಂದೇಲ್ ಖಂಡ್ ಇವೆಲ್ಲ ಕಡೆಯೂ ಕೆಟ್ಟ ಬರಗಾಲ! ತಿನ್ನಲು ಕೂಳಿಲ್ಲ, ಕುಡಿಯಲು ನೀರಿಲ್ಲ. ಎಲ್ಲ ಕಡೆ ಒಣಕಲು. ಬಿರುಕು ಬಿಟ್ಟ ಕೆರೆ, ಹೊಲ, ಗದ್ದೆ; ಬಡಕಲಾಗಿ, ಮೋಳೆ ಬಿಟ್ಟುಕೊಂಡಿರುವ ಹಸು, ಹಯೋರಿಗಳು, ಎಷ್ಟೋ ದನಕರು, ಕಟುಕರಿಗೆ ಮಾರಾಟ ಆದುವು! ಜನತೆ ಬದುಕಲು ಬವಣೆ ಪಟ್ಟಿತು.

ಈ ಸಮಯದಲ್ಲಿ ದೇವಧರ್ ನಡೆಸಿದ ಪರಿಹಾರ ಕ್ರಮ ಒಂದೇ ಎರಡೇ? ನಾನಾ ರೀತಿ. ಇಡೀ ಭಾರತವನ್ನೇ ಆಗ ಸಂಚರಿಸಿದರು. ನಿಧಿ ಸಂಗ್ರಹಿಸಿದರು. ಆಹಾರ, ಬಟ್ಟೆ ಎಲ್ಲ ಕೂಡಿಹಾಕಿಕೊಂಡು ಬರಗಾಲ ಪೀಡಿತ ಪ್ರಾಂತವೆಲ್ಲ ಸುತ್ತು ಹಂಚಿದರು. ಗಂಜಿ ಕೇಂದ್ರ ತೆರಿಸಿದರು. ಬಾವಿಗಳನ್ನು ತೋಡಿಸುವಿಕೆ. ನೀರು ಸರಬರಾಜು, ಸಾಂಕ್ರಾಮಿಕ ರೋಗ ಹರಡದಂತೆ ಚುಚ್ಚು ಮದ್ದು ಹಾಕಿಸುವುದು, ಎಲ್ಲ ಅವರದೇ ಏರ್ಪಾಡು, ಸರ್ಕಾರದ ನೆರವನ್ನು ಅವರು ಕೋರಲಿಲ್ಲ. ಮೊದಲು ತಮ್ಮ ಕೆಲಸ. ಕೈಲಿ ಸಾಧ್ಯ ಆದಷ್ಟು ದುಡಿದುಬಿಡೋಣ. ಇದೇ ಅವರ ಮುಖ್ಯ ಧ್ಯೇಯ.

೧೯೨೧ರಲ್ಲಿ ಇದ್ದಕ್ಕಿದ್ದಂತೆ ಮಲಬಾರ್ ನಲ್ಲಿ ಒಂದು ಮತದ  ಜನ ರಕ್ತಪಾತಕ್ಕಿಳಿದರು. ಬೀದಿ ಬೀದಿಯಲ್ಲೂ ಬೇರೆ ಮತದವರ ಹೆಣ ಉರುಳಿದವು. ದಂಗೆ, ಕೊಲೆ, ಲೂಟಿ, ಸಿಕ್ಕಿದವರ ಕತ್ತು ಕತ್ತರಿಸುವುದೇ!

ಇವನ್ನೆಲ್ಲ ಕೇಳಿದ ದೇವಧರ್ ತುಂಬ ಸಂಕಟಪಟ್ಟರು. ಇದೇನೇ ತಮ್ಮ ದೇಶ ಎಂದು ಅವರಿಗೆ, ಕರುಳೇ ಕಿತ್ತು ಬಂದಷ್ಟು ವ್ಯಥೆ ಆಯಿತು. ಸರ್ಕಾರ ಇವೆಲ್ಲ ನೋಡಿಯೂ ಮೂಕವಾಗಿತ್ತು!

ಆಗಿನ ಅವರ ಶ್ರಮ, ಆ ದುಡಿಮೆ, ಅವರ ಜೀವವನ್ನೇ ಕೊಂದಿತು. ಅವರ ಪ್ರಾಣಕ್ಕೂ ಅನೇಕ ವೇಳೆ ಗಂಡಾಂತರ ಬಂದದ್ದೂ ಉಂಟು! ಒಮ್ಮೆಯಂತೂ ಅವರು ಪ್ರವಾಸಕ್ಕೆಂದು ಒಂದು ಗ್ರಾಮಕ್ಕೆ ಹೋಗುವುದಕ್ಕೂ ಹೋಗುವ ಕೆಲವೇ ನಿಮಿಷಗಳ ಮುನ್ನ ದೊಡ್ಡ ಗಲಾಟೆ ನಡೆದು, ದಂಗೆಕೋರರು ತಲೆ ತಪ್ಪಿಸಿಕೊಂಡದ್ದಕ್ಕೂ ಸರಿಹೋಯ್ತು! ಹೆಣಗಳು ಸಾಲುಸಾಲಾಗಿ ಉರುಳಿದ್ದವು! ನೆತ್ತರು  ಹರಿಯುತ್ತಿತ್ತು! ಮರಗಳನ್ನು ಕಡಿದು ರಸ್ತೆಗೆ ಅಡ್ಡ ಮಲಗಿಸಿದ್ದರು. ಸೇತುವೆಗಳನ್ನು ಸಿಡಿಮದ್ದಿಟ್ಟು ಧ್ವಂಸ ಮಾಡಿದ್ದರು!

ದೇವಧರ್ ಇವೆಲ್ಲವನ್ನೂ ಲೆಕ್ಕಸಲೇ ಇಲ್ಲ. ತಾವೇ ಹೋದರು. ಮೈಲುಗಟ್ಟಲೆ ನಡೆದರು. ಜನತೆಯ ಸ್ಥಿತಿ, ಆ ದಾರುಣತೆ ಅರಿವಾಯಿತು. ಮರಳಿ ತಮ್ಮೂರಿಗೆ ಬಂದರು. ಪುನಃ ಸುತ್ತಾಟ.

ಒಮ್ಮೆ ಒಂದು ಹಳ್ಳಿಗೆ ಹೋಗಬೇಕಿತ್ತು. ಜನರು ಕೂಡ ಕೇಳಿಕೊಂಡರು : ’ ಭಾಭಾ ಸಾಹೇಬ್, ನೀವು ಅಲ್ಲಿ ಹೋದರೆ, ಜೀವ ಸಹಿತ ವಾಪಸ್ಸು ಬರುವುದಿಲ್ಲ! ದಯವಿಟ್ಟು ಹೋಗಬೇಡಿರಿ’ ದೇವಧರ್ ಜಗ್ಗಿಯಾರೆ? ’ಸಾವಿರ ಜನ ಸಾಯುತ್ತಾ ಇದ್ದಾರೆ. ನನ್ನದೇನು ಲೆಕ್ಕ ನೋಡಿ. ನನಗಂತೂ ಕಾರು ನಡೆಸೋಕೆ ಬಾರದು. ಯಾರಾದರೂ ಬನ್ನಿ, ನೆರವು ಕೊಡಿ. ಜಾಗ್ರತೆ ಹೋಗಿ ಬರೋಣ’ ಅಂತ ಪ್ರಾರ್ಥಿಸಿದರು. ಒಬ್ಬ ಆಂಗ್ಲೋ ಇಂಡಿಯನ್ ಯುವಕ ಮುಂದೆ ಬಂದ. ದೇವಧರ್ ಹಳ್ಳೀಗೆ ಹೋಗಿಯೇ ಬಂದರು.

ಆಗಿನ ಅವರ ದುಡಿಮೆ, ಅದೇ ಊರವರನ್ನೇ ದಂಗು ಬಡಿಸಿತು. ಮಲಬಾರ್ ಹಿತಸಂರಕ್ಷಣಾ ಟ್ರಸ್ಟ್’ ಎಂಬ ಒಂದು ಸಂಸ್ಥೆಯನ್ನು ರಚಿಸಿ, ಅದಕ್ಕಾಗಿ ದುಡಿದರು. ಹಳ್ಳಿ ಹಳ್ಳಿಗಳಲ್ಲೂ ದಂಗೆಯಿಂದ ನೊಂದ ಗ್ರಾಮಸ್ಥರಿಗೆ ನೆರವು ನೀಡಿದರು. ಗಂಜಿ ಕೇಂದ್ರ, ಉಚಿತ ಹಾಲು, ಆಹಾರ ಬಟ್ಟೆ ಬೇಸಾಯದ ಉಪಕರಣ, ಎಲ್ಲವನ್ನೂ ಹಳ್ಳಿಯವರಿಗೆ ಒದಗಿಸಿಕೊಟ್ಟ ಪುಣ್ಯ ಅವರದಾಯಿತು. ಇದನ್ನೇ ತಾನೆ ಕರ್ಮ ಯೋಗ ಅಂತ ಅನ್ನುವುದು? ಫಲ ಬಯಸದೆ ದುಡಿಯುವುದು.

ಸಾವಿರ ಜನ ಸಾಯ್ತಾ ಇದ್ದಾರೆ. ನನ್ನದೇನು ಲೆಕ್ಕ’

ಸಂತೋಷದಿಂದ ಒಪ್ಪಿದ ಬಡತನ

ಇಷ್ಟೆಲ್ಲ ದುಡಿದರೂ ದೇವಧರ್ ಗೆ ಬಡತನವೇ ದೊಡ್ಡ ಆಸ್ತಿ ಮೊದಲಿಂದ ಕೊನೆಯ ತನಕ. ೧೯೨೯ರಲ್ಲಿ ಅವರ ಪತ್ನಿ ತೀರಿಕೊಂಡರು. ಮನೆ ಕಡೆ ತೊಂದರೆ ಹೆಚ್ಚಾಯಿತು. ಅವರು ಅದನ್ನು ನುಂಗಿ, ತಮ್ಮ ಕಾರ್ಯ ಮುಂದುವರಿಸಬೇಕು. ಇದ್ದದ್ದು ಒಂದೇ ಅಂಗಿ, ಒಂದೇ ಷರಾಯಿ, ಕೋಟು, ಪಂಚೆ ಎಂದರೆ ನಂಬಲು ಆಗುವುದೇ ಇಲ್ಲ! ಹಾಗಿದ್ದರೂ ಭಾರತ ಸೇವಾ ಸಮಾಜದ ಅಧ್ಯಕ್ಷ.

ಈ ದಿನದಲ್ಲಿ ನಡೆದ ಒಂದು ಘಟನೆ ಮನಸ್ಸನ್ನು ಮಿಡಿಯುವಂಥದ್ದು. ಸಂಸ್ಥೆಯ ಹೊಸ ಸದಸ್ಯರನ್ನು ದೇವಧರ್ ತಮ್ಮ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ಪಿ. ಕೋದಂಡರಾಯರು ಆಗ ಹೊಸ ಸದಸ್ಯರು. ಮುಂದೆ ಅವರೇ ಕಾರ್ಯದರ್ಶಿಯೂ ಆದರು. ದೇವಧರ್ ಅವರನ್ನು ಊಟಕ್ಕೆ ಆಹ್ವಾನಿಸಿದರು. ಕೋದಂಡರಾಯರು ಮನೆಗೆ ಹೋದರು. ’ತಗೊಳ್ಳಿ, ಉಟ್ಟುಕೊಳ್ಳಿ’ ಅಂತ ತಮ್ಮಲ್ಲಿ ಇದ್ದ ಪಂಚೆಯನ್ನು ಅವರು ಕೊಟ್ಟರು ದೇವಧರ್. ಆದರೆ ತುಂಬ ತೂತು ತೇಪೆ.  ಇವರು ಹೊರಗಡೆ ಎಷ್ಟು ದುಡಿಯುತ್ತಾರೆ! ಸಂಸ್ಥೆಯನ್ನೇ ಕಟ್ಟಿ ಬೆಳೆಸುತ್ತ ಇದ್ದಾರೆ! ನಾಡಿನ ಬರಗಾಲದ ಪರಿಹಾರಕ್ಕೆ ದುಡಿಯುತ್ತಾರೆ! ಮನೆಯಲ್ಲಿ ಮಾತ್ರ ಉಟ್ಟುಕೊಳ್ಳುವುದಕ್ಕೆ ಒಂದು ಒಳ್ಳೆಯ ಪಂಚೆ ಕೂಡ ಇಲ್ಲವೇ ಇವರಿಗೆ!’ ಅಂತ ನಿಟ್ಟುಸಿರು ಬಿಟ್ಟರಂತೆ ಕೋದಂಡರಾಯರು. ಅಂತಹ ಬಡತನವನ್ನು ದೇವಧರರು ಅನುಭವಿಸುತ್ತಾ ಇದ್ದುದು!

ದುಡಿಯುವುದಕ್ಕೂ ಒಂದು ಮಿತಿ ಇರಬೇಡವೆ? ತನ್ನ ಶರೀರ ಎಷ್ಟೇ ಬಳಲಿದರೂ, ದೇವಧರ್ ಲೆಕ್ಕಿಸಲಿಲ್ಲ. ರಾತ್ರಿ ಹೊತ್ತಾಗಿ ಬಿಸಿ ಚಹಾಪಾನ, ನಿದ್ರೆಗೆಟ್ಟ ದುಡಿತ, ನಿರಂತರ ಸುತ್ತಾಟ! ಕಾರ್ಯಗಳಾದರೋ ಒಂದು ಎರಡೇ ! ’ಸೇವಾ ಸದನ’ ದ ಕೆಲಸ, ಪ್ರಾಂತ್ಯ ಸಹಕಾರ ಸಂಘಗಳ ಕೆಲಸ. ಕ್ಷಾಮ ಪರಿಹಾರಗಳ ಕಾರ್ಯ, ರಾತ್ರಿ ಶಾಲೆಯಲ್ಲಿ ಪಾಠ ಹೇಳುವುದು – ಹೀಗೆ ನಾನಾ ರೀತಿ! ಒಂದೇ ಸಮೇತ ಆತ  ತನ್ನ ಶರೀರವನ್ನು ಗಂಧದ ಹಾಗೆ ತೇದುಬಿಟ್ಟರು. ಮೈ ಸೊರಗಿತು. ನಿತ್ರಾಣ, ರಕ್ತಹೀನತೆ ಹೆಚ್ಚಾಯಿತು. ಬಡತನವೂ ಹೆಚ್ಚಾಯಿತು. ಕಾಯಿಲೆ ತಾವಗಿಯೇ ತಲೆ ಎತ್ತಿದವು. ೧೯೩೫ರ ನವೆಂಬರ್ ೧೬ ರಂದು ದೇವಧರ್ ತೀರಿಕೊಂಡರು.

ಅವರು ಕೀರ್ತಿ, ಆಸ್ತಿ, ಪ್ರತಿಷ್ಠೆ ಯಾವುದಕ್ಕೂ ಆಸೆ ಪಡದೆ ದುಡಿದರು. ಕಸ್ತೂರಿಯೇನೋ ಕರಗಿ ಹೋಗುತ್ತದೆ. ಅದರ ಪರಿಮಳ ಉಳಿಯುವುದಿಲ್ಲವೇ? ದೇವಧರ್ ಹಾಗೆಯೇ. ಅವರ ಶರೀರ ಮರೆಯಾದರು ನಡೆಸಿದ ಕಾರ್ಯ, ಅವರ ನೆನಪನ್ನು ಉಳಿಸಿದೆ, ಉಳಿಯಬೇಕು. ಉಳಿಸುವುದೇ ನಮ್ಮ ಕರ್ತವ್ಯ, ಅಲ್ಲವೇ?