“ಗೋಖಲೇ, ನೀನು ಎಲ್ಲರಿಗಿಂತ ಜಾಣ ಹುಡುಗ. ಬಾ, ತರಗತಿಯ ಮೊದಲನೆಯ ಸ್ಥಾನದಲ್ಲಿ ಕುಳಿತುಕೋ.”

ಹುಡುಗ ನಿಂತಲ್ಲೇ ನಿಂತಿದ್ದ. ಅವನು ಹೆಜ್ಜೆಯನ್ನು ಮುಂದೆ ಇಡಲೇ ಇಲ್ಲ. ಅವನ ಕಣ್ಣುಗಳಲ್ಲಿ ನೀರೂರಿ, ಅವನ ತುಂಬು ಕೆನ್ನೆಗಳ ಮೇಲೆ ಜಾರಿ ಬೀಳುತ್ತಿದ್ದವು.

ಅಧ್ಯಾಪಕರು, ಮನೆಯಲ್ಲಿ ಮಾಡಿಕೊಂಡು ಬರಲು ಬಾಲಕರಿಗೆ ಗಣಿತದ ಲೆಕ್ಕವೊಂದನ್ನು ಕೊಟ್ಟಿದ್ದರು. ಅದನ್ನು ಸರಿಯಾಗಿ ಮಾಡಿಕೊಂಡು ಬಂದವನು ಗೋಖಲೆ ಒಬ್ಬನೆ. ಬೇರೆ ಯಾರೂ ಮಾಡಿಯೇ ಇರಲಿಲ್ಲ. ಆದುದರಿಂದಲೇ ಅಧ್ಯಾಪಕರು ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿ ಕುಳಿತುಕೋ ಎಂದು ಅವನಿಗೆ ಹೇಳಿದರು.

ಆದರೆ, ಗೋಖಲೆಯೂ ಅದನ್ನು ತಾನೇ ಮಾಡಿರಲಿಲ್ಲ. ಹಿರಿಯ ವಿದ್ಯಾರ್ಥಿಯೊಬ್ಬನ ನೆರವಿನಿಂದ ಮಾಡಿಕೊಂಡು ಬಂದಿದ್ದನು. ತಾನೇ ಮಾಡಿದವನೆಂದು ಹೇಳಿಕೊಳ್ಳಲು ಅವನ ಮನಸ್ಸು ಒಡಂಬಡಲಿಲ್ಲ. ಹಾಗೆ ಹೇಳಿಕೊಳ್ಳುವುದು ತಪ್ಪು; ಅಪ್ರಾಮಾಣಿಕತೆ ಎನಿಸಿತು ಅವನಿಗೆ. ಆದುದರಿಂದಲೇ ಅವನು ಅಳುತ್ತ, ನಿಂತಲ್ಲಿಯೇ ನಿಂತಿದ್ದನು. ಇದು ತಿಳಿದಾಗ ಅಧ್ಯಾಪಕರು, ಬಾಲಕ ಗೋಖಲೆಯ ಹಿರಿಯ ಸದ್ಗುಣವನ್ನು ಮೆಚ್ಚಿಕೊಂಡರು.

ಪುಣ್ಯ ಪುರುಷ

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾರತ ಇಂಗ್ಲಿಷರ ಆಳ್ವಿಕೆಯಲ್ಲಿ ಇದ್ದರೂ ಆ ಕಾಲದಲ್ಲಿ ಹಲವಾರು ಮಂದಿ ಅಗ್ರಗಣ್ಯ ಮಹನೀಯರೂ ಮತ್ತು ಮಹಿಳೆಯರೂ ಜನಿಸಿ, ರಾಷ್ಟ್ರದ ಖ್ಯಾತಿಗೆ ನಾನಾ ವಿಧಗಳಲ್ಲಿ ಕಾರಣರಾದರು. ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ (ರಾಜಕಾರಣ, ಕಲೆ, ವಿಜ್ಞಾನ, ಧರ್ಮ ಪುನರುಜ್ಜೀವನ ಇತ್ಯಾದಿ) ಪ್ರಸಿದ್ಧ ವ್ಯಕ್ತಿಗಳು ಆಗ ಕಂಡು ಬಂದುದು ರಾಷ್ಟ್ರದ ಹಿರಿಮೆ. ಗೋಪಾಲ ಕೃಷ್ಣ ಗೋಖಲೆ ಇಂಥವರಲ್ಲಿ ಒಬ್ಬರು. ಅವರು ಹೆಸರಾಂತ ಶಿಕ್ಷಕ, ನಿರ್ಮಲ ಜೀವನದ ದೇಶಾಭಿಮಾನಿ, ದೇಶಸೇವಕ ಆಗಿದ್ದರು. ಗೋಖಲೆ ಬದುಕಿದ್ದುದು ಕೇವಲ ನಲವತ್ತೊಂಬತ್ತು ವರ್ಷಗಳು. ಇದರಲ್ಲಿ ಹತ್ತೊಂಬತ್ತು ವರ್ಷಗಳು ಬಾಲ್ಯ ಮತ್ತು ವಿದ್ಯಾರ್ಜನೆಗೆ ಕಳೆದವು. ಉಳಿದ ಮೂವತ್ತು ವರ್ಷಗಳ ಕಾಲವೆಲ್ಲ ಸ್ವಾರ್ಥರಹಿತ ದೇಶಸೇವೆಗೆ ಸಮರ್ಪಿತವಾಯಿತು.

 

ಹುಡುಗ ಅಳುತ್ತ ನಿಂತಲ್ಲಿಯೇ ನಿಂತಿದ್ದನು.

ತಂದೆ-ತಾಯಿ

ಗೋಪಾಲಕೃಷ್ಣ ಗೋಖಲೆ 1866ರ ಮೇ 9 ರಂದು ಜನಿಸಿದರು. ಅವರು ಜನಿಸಿದುದು ಮಹಾರಾಷ್ಟ್ರ ರಾಜ್ಯದಲ್ಲಿರುವ ರತ್ನಗಿರಿ ಜಿಲ್ಲೆಗೆ ಸೇರಿದ ಚಿಪ್ಲೂನ್‌ತಾಲೂಕಿನ ಕೋತಳೂಕ ಎಂಬ ಗ್ರಾಮದಲ್ಲಿ. ಅದು ಅವರ ತಾಯಿಯ ತೌರುಮನೆ. ಆದರೆ ಗೋಖಲೆ ಮನೆತನದವರು ಅದೇ ತಾಲೂಕಿನ ತಮಹನಮಾಲಾ ಎಂಬ ಗ್ರಾಮದಲ್ಲಿ ನೆಲೆಸಿದ್ದರು.

ಗೋಖಲೆಯವರ ತಂದೆ ಹೆಸರು ಕೃಷ್ಣರಾವ್‌ಗೋಖಲೆ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ “ವಾಘೋಬಾ” (ಹುಲಿ) ಎಂದು ಪರಿಚಿತರಾಗಿದ್ದರು. ಅದು ಅವರ ಧೈರ್ಯಕ್ಕೆ ಅನ್ವರ್ಥನಾಮವಾಗಿತ್ತು. ಅವರು ಸ್ವಲ್ಪ ಕಾಲ ಕೊಲ್ಲಾಪುರದಲ್ಲಿ ಶಾಲಾ ಶಿಕ್ಷಣ ಪಡೆದುಕೊಂಡರು. ಅಮೇಲೆ ಕಾಗಲ್‌ಎಂಬ ಸ್ಥಳದಲ್ಲಿ ಸಾಮಾನ್ಯ ಕಾರಕೂನನಾಗಿ ನೆಲೆಸಿದರು.

ಗೋಖಲೆಯವರ ತಾಯಿಯ ಹೆಸರು ಸತ್ಯಭಾಮಾ. ಆಕೆ ಸಜ್ಜನ ವ್ಯಕ್ತಿಯಾಗಿದ್ದರು. ಗಂಡನಲ್ಲಿ ಅವರ ಪ್ರೀತಿ-ಗೌರವಗಳು ಅಪೂರ್ವ ರೀತಿಯಾಗಿದ್ದವು. ತಮ್ಮ ಪತಿ ಕಾಲವಾದಾಗ ಆತ ಧರಿಸಿದ್ದ ಒಂದು ವಸ್ತ್ರವನ್ನು ತೆಗೆದುಕೊಂಡು ಅವರ ನೆನಪಿಗಾಗಿ ಅದನ್ನು ಬಹಳ ದೊಡ್ಡ ನಿಧಿಯಂತೆ ಜೋಪಾನವಾಗಿ ಇಟ್ಟುಕೊಂಡಿದ್ದರು. ಯಾವ ಕಾರಣಕ್ಕೂ ಯಾರಿಗೂ ಅದನ್ನು ಕೊಡಲು ಒಪ್ಪಲಿಲ್ಲ.

ಕೃಷ್ಣರಾವ್‌ಮತ್ತು ಸತ್ಯಭಾಮ-ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳು ಜನಿಸಿದರು. ಹಿರಿಯ ಮಗನ ಹೆಸರು ಗೋವಿಂದ. ಕಿರಿಯವನು ಗೋಪಾಲ. ಅವನೇ ಗೋಪಾಲಕೃಷ್ಣ ಗೋಖಲೆ.

ಅಣ್ಣನ ಔದಾರ್ಯ

ಗೋಪಾಲನ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಕಾಗಲ್‌ನಲ್ಲಿಯೇ ಆಯಿತು. ಅವನಿಗೆ ಸುಮಾರು ಹತ್ತು ವರ್ಷ ವಯಸ್ಸಾಗಿದ್ದಾಗ, ಅವನನ್ನೂ ಅವರ ಅಣ್ಣನನ್ನೂ ವ್ಯಾಸಂಗ ಮುಂದುವರಿಸಲು ಕೊಲ್ಲಾಪುರಕ್ಕೆ ಕಳಿಸಲಾಯಿತು. ಸ್ವಲ್ಪಕಾಲದಲ್ಲಿಯೇ (1879) ತಂದೆ ಕೃಷ್ಣರಾವ್‌ಕಾಲವಾದರು. ಆಗ ಗೋವಿಂದನಿಗೆ ಹದಿನೆಂಟು ವರ್ಷ ವಯಸ್ಸು. ಗೋಪಾಲನಿಗೆ ಹದಿಮೂರು ಮಾತ್ರ. ಕುಟುಂಬಕ್ಕೆ ಬಹಳ ಕಷ್ಟಕಾಲ ಬಂದಿತು.

ಆ ಸಮಯದಲ್ಲಿ ಅನಂತರಾವ್‌ಎಂಬ ಅವರ ಚಿಕ್ಕಪ್ಪ ನೆರವನ್ನು ನೀಡಿದರು: ಅತ್ತಿಗೆ ಮತ್ತು ಆಕೆಯ ಮಕ್ಕಳನ್ನು ಸಲಹುವ ಭಾರ ಹೊತ್ತುಕೊಂಡರು. ಅವರೇನೂ ಶ್ರೀಮಂತರಾಗಿರಲಿಲ್ಲ. ತೀರ ಬಡವರೇ. ಅವರು ಗೋವಿಂದನಿಗೆ ತಮಹನಮಾಲದಲ್ಲಿ ತಿಂಗಳಿಗೆ ಹದಿನೈದು ರೂಪಾಯಿ ವೇತನ ದೊರಕುವ ಕೆಲಸವೊಂದನ್ನು ಕೊಡಿಸಿದರು. ಇದರಿಂದ ಅವರ ವಿದ್ಯಾಭ್ಯಾಸ ಅಷ್ಟಕ್ಕೇ ನಿಂತಿತು. ಅವನು ತನಗೆ ದೊರಕುತ್ತಿದ್ದ ಅಲ್ಪ ವೇತನದಲ್ಲಿಯೇ ಗೋಪಾಲನ ವ್ಯಾಸಂಗಕ್ಕಾಗಿ ತಿಂಗಳಿಗೆ ಎಂಟು ರೂಪಾಯಿಗಳನ್ನು ಕಳಿಸಲಾರಂಭಿಸಿದನು. ಇದರಿಂದ ಕುಟುಂಬಕ್ಕೆ ಎಷ್ಟೇ ಕಷ್ಟವಾದರೂ ಎಲ್ಲರೂ ಅದನ್ನು ಹರ್ಷದಿಂದಲೇ ಸಹಿಸಿದರು.

ಬಡತನದ ಸವಿ

ಗೋಪಾಲ ಕೊಲ್ಲಾಪುರದಲ್ಲಿ ಒಬ್ಬನೇ ಇರಬೇಕಾಯಿತು. ತನ್ನ ಅಣ್ಣ ಎಷ್ಟೊಂದು ಕಷ್ಟ ಸಹಿಸಿಕೊಂಡು ತನ್ನ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡುತ್ತಿದ್ದನೆಂಬುದು ಸದಾ ಅವನ ಗಮನದಲ್ಲಿ ಇರುತ್ತಿತ್ತು. ಅವನ ವರ್ತನೆ ಗಂಭೀರವಾಗಿ ಇರುತ್ತಿತ್ತು; ಆತ್ಮ ಗೌರವದ ದೃಷ್ಟಿ ಎಚ್ಚರಿಸುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರಸಂಗ ನಡೆಯಿತು. ಗೋಪಾಲ ಊಟ ಮಾಡುತ್ತಿದ್ದ ಭೋಜನಶಾಲೆಯಲ್ಲಿ ತಿಂಗಳಿಗೆ ನಾಲ್ಕು ರೂಪಾಯಿ ಮತ್ತು ನಾಲ್ಕೂವರೆ ರೂಪಾಯಿ ಎಂಬ ಎರಡು ದರ್ಜೆಗಳಿದ್ದವು. ನಾಲ್ಕೂವರೆ ರೂಪಾಯಿ ದರ್ಜೆಗೆ ಮೊಸರನ್ನು ಬಡಿಸುವುದು ಮಾತ್ರ ವಿಶೇಷವಾಗಿತ್ತು. ಒಂದು ದಿನ ಕೆಳಗಿನ ದರ್ಜೆಗೆ ಸೇರಿದ್ದ ಗೋಖಲೆ, ಮರೆತು ಮೊಸರನ್ನ ಬಡಿಸಬೇಕೆಂದು ಕೇಳಿಬಿಟ್ಟ. ಬಡಿಸುವವನು ಅದಕ್ಕೆ ಎಂಟು ಆಣೆ ಹೆಚ್ಚಾಗಿ ಕೊಡಬೇಕೆಂದು ಹೇಳಿದ. ತಕ್ಷಣ, ಗೋಖಲೆ ತನ್ನನ್ನು ಮೇಲಿನ ದರ್ಜೆಗೆ ಸೇರಿಕೊಳ್ಳಬೇಕೆಂದು ನುಡಿದ. ಆದರೆ ಹೆಚ್ಚುವರಿ ಎಂಟು ಆಣೆಯನ್ನು ತರುವುದಾದರೂ ಎಲ್ಲಿಂದ? ಒಂದು ಉಪಾಯ ಹೊಳೆಯಿತು. ಪ್ರತಿ ಶನಿವಾರ ಸಂಜೆ ಭೋಜನವನ್ನೇ ಬಿಟ್ಟು ಆ ಹಣವನ್ನು ಭರ್ತಿ ಮಾಡಿದ. ಹೀಗಿತ್ತು ಅವರ ಆತ್ಮಗೌರವದ ಮೇಲಿನ ದೃಷ್ಟಿ.

ಇಷ್ಟೆ ಅಲ್ಲ. ಸೀಮೆಎಣ್ಣೆಯ ವೆಚ್ಚವನ್ನು ಉಳಿಸುವ ಸಲುವಾಗಿ, ಎಷ್ಟೋ ಸಲ ಬೀದಿ ಲಾಂದ್ರದ ಬೆಳಕಿನಲ್ಲಿ ಅವನು ಓದುತ್ತಿದ್ದ. ತನ್ನ ಅಣ್ಣ ಸಂಸಾರ ನಿರ್ವಹಿಸುವ ಸಲುವಾಗಿಯೂ ತನ್ನ ವಿದ್ಯಾಭ್ಯಾಸದ ಸಲುವಾಗಿಯೂ ಪಡುತ್ತಿದ್ದ ಕಷ್ಟವನ್ನು ಅರಿತುಕೊಂಡು, ತನ್ನ ಕಷ್ಟಗಳು ಏನೇ ಇದ್ದರೂ ಅದನ್ನು ಆತನಿಗೆ ಎಂದೂ ತಿಳಿಸುತ್ತಿರಲಿಲ್ಲ. ಕೆಲವು ದಿನ ತನ್ನ ಅಹಾರವನ್ನು ತಾನೇ ತಯಾರಿಸುತ್ತಿದ್ದ. ಹೀಗೆ ಗೋಖಲೆ ಬಡತನದ ಬವಣೆಯನ್ನು ಬಾಲ್ಯದಲ್ಲಿಯೇ ಕಂಡು, ಅದರ ರುಚಿ ಸವಿದಿದ್ದನು.

ಅತ್ತಿಗೆಯ ತ್ಯಾಗಭಾವ

1881ರ ಗೋಖಲೆ ಮೆಟ್ರಿಕ್ಯುಲೇಷನ್‌ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಆಗ ಅವನಿಗೆ ಹದಿನೈದು ವರ್ಷ ವಯಸ್ಸು. ಹಿಂದಿನ ವರ್ಷವೇ ಅವನಿಗೆ ವಿವಾಹವೂ ಆಗಿತ್ತು. ಮುಂದೇನು ಮಾಡಬೇಕು? ಕುಟುಂಬದ ಎಲ್ಲರೂ ಕುಳಿತು ವಿಚಾರ ಮಾಡಿದರು. ತಾಯಿ ಮತ್ತು ಮಗ ಇಬ್ಬರೂ ಒಂದೇ ಅಭಿಪ್ರಾಯ ವ್ಯಕ್ತಪಡಿಸಿದರು. ಅದರ ಪ್ರಕಾರ ಗೋಖಲೆ ಯಾವುದಾದರೂ ಕೆಲಸಕ್ಕೆ ಸೇರಿ, ಸಂಸಾರ ಸಾಗಿಸಲು ನೆರವಾಗಬೇಕಾಗಿತ್ತು. ಆದರೆ ವಾತ್ಸಲ್ಯದ ಅಣ್ಣ ಅದನ್ನು ಒಪ್ಪಲಿಲ್ಲ. ಗೋಖಲೆ ವಿಶ್ವವಿದ್ಯಾನಿಲಯ ಸೇರಿ, ಪದವೀಧರನಾಗಬೇಕೆಂಬುದು ಆತನ ಇಚ್ಛೆ. ವೆಚ್ಚಕ್ಕೆ ಹಣ? ಉದಾಯ ಹೃದಯದ ಅತ್ತಿಗೆ ಮುಂದೆ ಬಂದಳು. ತನ್ನ ಮೈದುನನ ವಿದ್ಯಾಭ್ಯಾಸಕ್ಕಾಗಿ ತನ್ನ ಒಡವೆಗಳನ್ನೆಲ್ಲ ಮಾರಾಟ ಮಾಡಿ, ಬಂದ ಹಣದಿಂದ ಓದು ಮುಂದುವರಿಸಬೇಕೆಂದು ಸಲಹೆ ಮಾಡಿದಳು; ಅಂತೆಯೇ ಎಲ್ಲವನ್ನೂ ಕೊಟ್ಟುಬಿಟ್ಟಳು. ಗೋಖಲೆ 1882ರ ಜನವರಿ ತಿಂಗಳಿನಲ್ಲಿ ಕೊಲ್ಲಾಪುರದ ರಾಜಾರಾಮ್‌ಕಾಲೇಜ್‌ಸೇರಿದನು. ವ್ಯಾಸಂಗ ಮುಂದುವರಿಯಿತು.

ಪ್ರೌಢ ಶಿಕ್ಷಣದ ವಿದ್ಯಾರ್ಥಿ

ಗೋಖಲೆ ಸದ್ದುಗದ್ದಲವಿಲ್ಲದ ವಿದ್ಯಾರ್ಥಿಯಾಗಿದ್ದನು. ಅವನು ಕ್ರಿಕೆಟ್‌, ಟೆನಿಸ್‌, ಚದುರಂಗ ಇತ್ಯಾದಿ ಎಲ್ಲ ಆಟಗಳಲ್ಲಿಯೂ ಎಲ್ಲರಿಗಿಂತ ಮೇಲ್ಮೆಗಳಿಸಬೇಕೆಂಬ ಇಚ್ಛೆಯುಳ್ಳವನಾಗಿದ್ದರೂ ಯಾವುದಾದರೊಂದು ವಿಷಯದಲ್ಲಿ ಪರಿಣತನಾಗಬೇಕೆಂಬ ದೃಷ್ಟಿಯಿಂದ ವ್ಯಾಸಂಗದ ಕಡೆ ಮಾತ್ರ ಎಲ್ಲ ಗಮನವಿತ್ತು. ಅವನ ಸ್ಮರಣಶಕ್ತಿ ಅಗಾಧವಾಗಿತ್ತು. ಅವನು ಇಂಗ್ಲಿಷ್‌ಪಠ್ಯಪುಸ್ತಕಗಳನ್ನು ಪೂರ್ಣವಾಗಿ ಬಾಯಿಪಾಠ ಮಾಡಿದ್ದನು. ಅದು ಕೇವಲ ಗಿಳಿಪಾಠ ಆಗಿರಲಿಲ್ಲ. ವಿದೇಶಿ ಭಾಷೆಯ ಮೇಲೆ ಹಿಡಿತ, ಅದರ ನುಡಿಕಟ್ಟು ಇವುಗಳನ್ನು ಸಾಧಿಸಿಕೊಳ್ಳಲು ಹೀಗೆ ಮಾಡಿದ್ದನು. ಅವನ ನೆನಪಿನ ಶಕ್ತಿಯನ್ನು ಕಂಡ ಗೆಳೆಯರು ಅಚ್ಚರಿ ಪಡುತ್ತಿದ್ದರು.

ಗೋಖಲೆ ಮುಂಬಯಿಯ ಎಲ್‌ಫಿನ್‌ಸ್ಟನ್‌ಕಾಲೇಜಿನಿಂದ 1884ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಗಣಿತಶಾಸ್ತ್ರ ಅವನ ಐಚ್ಛೆಕ ವ್ಯಾಸಂಗದ ವಿಷಯವಾಗಿದ್ದಿತು. ಆ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅವನಿಗೆ ಮಾಸಿಕ ಶಿಷ್ಯವೇತನವಾಗಿ ಇಪ್ಪತ್ತು ರೂಪಾಯಿ ದೊರಕುವಂತಾಯಿತು. ಗೋಖಲೆಗೆ ಆಗಿನ್ನೂ ಹದಿನೆಂಟು ವರ್ಷ ವಯಸ್ಸಾಗಿದ್ದಿತು. ಅದೇ ಕಾಲೇಜ್‌ಇಂಗ್ಲಿಷ್‌ಪ್ರಾಧ್ಯಾಪಕ ಡಾಕ್ಟರ್‌ವರ್ಡ್ಸ್‌ವರ್ತ್‌ಎಂಬವರು ಗೋಖಲೆಯ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದರು.

ಬಿ.ಎ. ಪದವೀಧರನಾದ ಗೋಖಲೆ ಇನ್ನೂ ಚಿಕ್ಕ ವಯಸ್ಸಿನವನಾಗಿದ್ದುದರಿಂದ, ಅವನು ಮುಂದೆ ಏನು ಮಾಡಬೇಕು ಎಂಬುದು ಒಂದು ಸಮಸ್ಯೆಯೇ ಆಗಿದ್ದಿತು. ಕೆಲವರು ಐ.ಸಿ.ಎಸ್‌. ಪರೀಕ್ಷೆಗೆ ಓದಬೇಕೆಂದು ಸಲಹೆ ಮಾಡಿದರು. ಆದರೆ, ಗಣಿತಶಾಸ್ತ್ರದಲ್ಲಿ ಅವನಿಗೆ ಇದ್ದ ಆಸಕ್ತಿಯಿಂದ ಎಂಜಿನಿಯರ್‌ಆಗಬೇಕೆಂದು ಅನಿಸಿತು. ಅವನು ಎಂಜಿನಿಯರ್‌ಕಾಲೇಜ್‌ಸೇರಿ, ಕೆಲವು ದಿನಗಳಾದ ಮೇಲೆ ಅದನ್ನು ಬಿಟ್ಟನು. ಕಡೆಗೆ ನ್ಯಾಯಶಾಸ್ತ್ರ ಓದಬೇಕೆಂದು ನಿರ್ಧಾರ ಮಾಡಿದನು. ಆ ನಿರ್ಧಾರ ಅವನ ಬದುಕಿನ ಪ್ರವಾಹಕ್ಕೆ ಸರಿಯಾದ ಗತಿಯನ್ನು ನೀಡಿತು ಎನ್ನಬಹುದು; ಇಲ್ಲದಿದ್ದರೆ, ಅವನೊಬ್ಬ ಉನ್ನತ ಅಧಿಕಾರಿಯೋ ಪ್ರಸಿದ್ಧ ಎಂಜಿನಿಯರೋ ಆಗಿ ಜೀವನ ಸಾಗುತ್ತಿತ್ತೇನೊ!

ಸೇವಾ ದೀಕ್ಷೆ

ನ್ಯಾಯಶಾಸ್ತ್ರ ವ್ಯಾಸಂಗ ಮಾಡುವುದರ ಜೊತೆಗೆ ಅಣ್ಣನ ಸಾಂಸಾರಿಕ ವೆಚ್ಚದ ಹೊಣೆಗಾರಿಕೆಯನ್ನು ಇಳಿಸಬೇಕೆಂಬ ಉದ್ದೇಶದಿಂದ ಚಿಪಳೂಣಕರ್, ತಿಲಕ್‌, ಅಗರಕರ್ ಮತ್ತು ನಾಮ ಜೋಷಿ, ಇವರುಗಳು ಪುಣೆಯಲ್ಲಿ 1880ರಲ್ಲಿ ಸ್ಥಾಪಿಸಿದ್ದ “ದಿ ನ್ಯೂ ಇಂಗ್ಲಿಷ್‌ಸ್ಕೂಲ್‌” ಎಂಬ ಸಂಸ್ಥೆಯಲ್ಲಿ ಮೂವತ್ತೈದು ರೂಪಾಯಿಗಳ ಮಾಸಿಕ ವೇತನದ ಮೇಲೆ ಅಧ್ಯಾಪಕನ ಕೆಲಸಕ್ಕೆ ಸೇರಿದರು ಗೋಖಲೆ. ಇದರ ಪರಿಣಾಮವಾಗಿ ಆ ಎಲ್ಲ ಮಹನೀಯರ ದಿನನಿತ್ಯದ ಪರಿಚಯ ಲಾಭ ದೊರಕಿತು. ಅವರು ಆದರ್ಶ ಧ್ಯೇಯಗಳು ಗೋಖಲೆಯವರ ಮೇಲೆ ಪ್ರಭಾವ ಬೀರಿದವು.

ನ್ಯೂ ಇಂಗ್ಲಿಷ್‌ಸ್ಕೂಲ್‌ಸ್ಥಾಪಿಸುವುದರ ಜೊತೆಗೆ ತಿಲಕ್‌ಮತ್ತು ಅಗರಕರ್ ಮಿತ್ರರು “ಕೇಸರಿ” (ಮರಾಠಿ) ಮತ್ತು “ಮರಾಠಾ” (ಇಂಗ್ಲಿಷ್‌) ಎಂಬ ಪತ್ರಿಕೆಗಳನ್ನು ಆರಂಭಿಸಿ, ಅವುಗಲ ಮೂಲಕ ಮಹಾರಾಷ್ಟ್ರದಲ್ಲಿ ನವಜಾಗೃತಿಯನ್ನೂ, ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನೂ ಉಂಟು ಮಾಡುತ್ತಿದ್ದರು. ಇದನ್ನು ಮಹಾದೇವ ಗೋವಿಂದ ರಾನಡೆ, ತೆಲಾಂಗ್‌ಮತ್ತು ಭಂಡಾರಕರ್ ಮೊದಲಾದ ಹಿರಿಯರು ಮೆಚ್ಚಿಕೊಂಡಿದ್ದರು. ಗೋಖಲೆಯವರು “ಮರಾಠಾ” ಪತ್ರಿಕೆಗೆ ಇಂಗ್ಲಿಷ್‌ಲೇಖನಗಳನ್ನು ಬರೆದು ತಮ್ಮ ವಿಚಾರ ಸಾಮರ್ಥ್ಯವನ್ನು ತೋರಿಸಿದರು. ಇದನ್ನು ಮೆಚ್ಚಿದ ಅಗರಕರ್‌ತಾವು, ಮಿತ್ರು ಸೇರಿ, 1894ರಲ್ಲಿ ಸ್ಥಾಪಿಸಿದ್ದ “ಡೆಕ್ಕನ್‌ ಎಜ್ಯುಕೇಷನ್‌ಸೊಸೈಟಿ”ಯ ಖಾಯಂ ಕಾರ್ಯಕರ್ತರಾಗಬೇಕೆಂದು ಗೋಖಲೆಯವರನ್ನು ಪ್ರೋತ್ಸಾಹಿಸಿದರು.

ಸೊಸೈಟಿಯ ಉದ್ದೇಶ ಮತ್ತು ಕೆಲಸಗಳು ಗೋಖಲೆಯವರಿಗೆ ತುಂಬಾ ಹಿಡಿಸಿದವು. ನಾನು-ನನ್ನದು ಎಂಬುದನ್ನೆಲ್ಲ ದೂರವಿಟ್ಟು ದೇಶಕ್ಕಾಗಿ ಮತ್ತು ದೇಶದ ಮಕ್ಕಳ ಶಿಕ್ಷಣಕ್ಕಾಗಿ ಬಾಳನ್ನೆ ಮುಡಿಪು ಮಾಡುವುದು ಎಂತಹ ಸಾರ್ಥಕ ಬಾಳು!

ಆದರೆ ಗೋಖಲೆಯವರ ಅಣ್ಣ-ಅತ್ತಿಗೆ ಅವರಿಗಾಗಿ ಎಷ್ಟೊಂದು ತ್ಯಾಗ ಮಾಡಿದ್ದರು! ವಕೀಲರಾಗಿ ಹಣ ಸಂಪಾದಿಸಿ, ಅವರ ಸಾಲಸೋಲಗಳನ್ನು ಬಗೆಹರಿಸಿ, ಅವರಿಗೆ ನೆರವಾಗಬೇಕು ಎಂದು ಗೋಖಲೆಯವರ ಹೃದಯ ಮಿಡಿಯುತ್ತಿತ್ತು.

ಗೋಖಲೆ ಆಗ ಮಾನಸಿಕ ಗೊಂದಲದಲ್ಲಿ ಬಿದ್ದರು. ಒಂದು ಕಡೆ ದೇಶದ ಸೇವೆಯ ಕರೆ-ಮತ್ತೊಂದು ಕಡೆ ತಮಗಾಗಿ ಅಷ್ಟೊಂದು ಕಷ್ಟಪಟ್ಟು, ತ್ಯಾಗ ಮಾಡಿದ ಅಣ್ಣ-ಅತ್ತಿಗೆಯರಲ್ಲಿ ಪ್ರೀತೊ.

ಅಗರಕರ್ ಅವರು ಗೋಖಲೆಯವರ ಅಣ್ಣನ ಜೊತೆಗೇ ಈ ವಿಷಯ ಪ್ರಸ್ತಾಪ ಮಾಡಿದರು. ಗೋಖಲೆಯವರ ಅಣ್ಣ, “ಗೋಪಾಲ ದೇಶಸೇವೆ ಮಾಡುವುದು ಮುಖ್ಯ. ಅಗತ್ಯವಾಗಿ ಅವನು ನಿಮ್ಮ ಸಂಸ್ಥೆ ಸೇರಲಿ” ಎಂದರು.

ಅವರು 1886ರಲ್ಲಿ ಮಹಾಸಂಸ್ಥೆಯ ಖಾಯಂ ಸದಸ್ಯರಾಗಿ ದೀಕ್ಷೆ ಪಡೆದರು. ಆ ಸಂಸ್ಥೆಯ ನಿಯಮಗಳಿವು: ತಿಂಗಳಿಗೆ ಎಪ್ಪತ್ತೈದು ರೂಪಾಯಿಗಳಿಗಿಂತ ಹೆಚ್ಚು ವೇತನ ಸ್ವೀಕರಿಸಬಾರದು; ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಬೇಕು; ಮೂವತ್ತು ರೂಪಾಯಿಗಳಿಂತ ಹೆಚ್ಚಾಗಿ ವಿಶ್ರಾಂತಿ ವೇತನ ಅಪೇಕ್ಷಿಸಬಾರದು; ಬೇರೆ ಯಾವ ಮೂಲದಿಂದ ವರಮಾನ ಬಂದರೂ ಅದನ್ನು ಸಂಸ್ಥೆಗೇ ಕೊಡಬೇಕು; ತನಗಾಗಿ ಉಪಯೋಗಿಸಿಕೊಳ್ಳಬಾರದು.

ಆ ವೇಳೆಗೆ ನ್ಯೂ ಇಂಗ್ಲಿಷ್‌ಸ್ಕೂಲ್‌, ಫರ್ಗ್ಯುಸನ್ ಕಾಲೇಜ್‌ಎಂಬ ಪ್ರೌಢಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆ ಹೊಂದಿ ಒಂದು ವರ್ಷ ಕಳೆದಿತ್ತು. ಗೋಖಲೆ ಆ ಕಾಲೇಜ್‌ನಲ್ಲಿ ಬೋಧಕರಾಗಿ ಮುಂದುವರಿದರು. ಹೀಗೆ ದ್ರವ್ಯ ಸಂಪಾದನೆಯ ಉದ್ದೇಶವನ್ನು ತ್ಯಜಿಸಿ, ಸ್ವ ಇಚ್ಛೆಯಿಂದಲೇ ದೇಶಸೇವೆಯ ದೀಕ್ಷೆಯನ್ನು ಕೈಗೊಂಡರೂ ಅವರು ಕಡೆಯವರೆಗೂ ಅಣ್ಣನ ಸಂಸಾರದ ನಿರ್ವಹಣೆಯ ಕಾರ್ಯಭಾರವನ್ನು ಮರೆಯಲಿಲ್ಲ. ತಮ್ಮ ಗೆಳೆಯನೊಬ್ಬನೊಂದಿಗೆ ಮಾತನಾಡುತ್ತ ಒಮ್ಮೆ ಹೀಗೆ ಹೇಳಿದರು: “ನೀನು ಸಾಹುಕಾರನಾಗಿ ವಾಹನಗಳಲ್ಲಿ ಸಂಚರಿಸುವೆ. ನಾನು ಸಾಮಾನ್ಯ ಪಾದಚಾರಿಯ ಬಡಜೀವನ ನಡೆಸಲು ನಿರ್ಧಾರ ಮಾಡಿದ್ದೇನೆ.”

ಬೋಧಕ ಗೋಖಲೆ

ನಿಷ್ಠಾಭರಿತ ವಿದ್ಯಾರ್ಥಿಯಾಗಿದ್ದ ಗೋಖಲೆಯವರು ನಿಷ್ಠಾವಂತ ಬೋಧಕರೂ ಆದರು; ಅಧ್ಯಾಪಕರಾದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿದರು. ಬೋಧಿಸುಬೇಕಾದುದನ್ನು ಬೋಧಿಸುತ್ತಿದ್ದರು. ಅವರು ವಿದ್ಯಾರ್ಥಿ ದೆಸೆಯಲ್ಲಿ ಬೆಳೆಸಿಕೊಂಡಿದ್ದ ನೆನಪಿನ ಶಕ್ತಿ ಅವರ ಜೀವನದಲ್ಲಿ ತುಂಬ ನೆರವಾಯಿತು. ಹುಡುಗರಿಗೆ ಉಕ್ತಲೇಖನ ಹೇಳುವಾಗ ತಾವು ಪತ್ರಿಕೆಗಳಲ್ಲಿ ಓದಿದುದನ್ನು ನೆನಪಿನಿಂದಲೇ ಹೇಳಿ ಬರೆಸುತ್ತಿದ್ದರು.

ಗೋಖಲೆ ಇಂಗ್ಲಿಷ್‌, ಗಣಿತಶಾಸ್ತ್ರ ಮತ್ತು ಇತಿಹಾಸ ಇವುಗಳನ್ನು ಬೋಧಿಸುತ್ತಿದ್ದರು. ನ್ಯೂ ಇಂಗ್ಲಿಷ್‌ಸ್ಕೂಲ್‌ನಲ್ಲಿ ಇದ್ದಾಗ ಗಣಿತವನ್ನು ಬೋಧಿಸಿದುದಲ್ಲದೆ, ಅಂಕಗಣಿತ ಕುರಿತು ಒಂದು ಪುಸ್ತಕವನ್ನೂ ಬರೆದರು. ಅದು ಬಹಳ ಪ್ರಿಯವಾದ ಪಠ್ಯಪುಸ್ತಕವೆಂದು ಪ್ರಸಿದ್ಧಿ ಪಡೆಯಿತು.

ಕಾಲೇಜ್‌ತರಗತಿಗಳಲ್ಲಿ ಇಂಗ್ಲಿಷ್‌ಪಾಠ ಬೋಧಿಸುತ್ತಿದ್ದುದರಿಂದ, ಆ ಭಾಷೆಯಲ್ಲಿ ಒಳ್ಳೆಯ ಪಾಂಡಿತ್ಯ ಪಡೆದುಕೊಳ್ಳಲು ಗೋಖಲೆಯವರಿಗೆ ಅವಕಾಶ ದೊರಕಿತು. ಅವರ ಶಬ್ದಸಂಪತ್ತು, ಮಾತನ ಶೈಲಿ, ಬರವಣಿಗೆ ಶೈಲಿ ಇವು ವೃದ್ಧಿಯಾದವು. ಅವರೇನೂ ಮಹಾವಾಗ್ಮಿಎನಿಸಿಕೊಳ್ಳದಿದ್ದರೂ ಅವರ ವಿಷಯ ಪ್ರತಿಪಾದನೆಯ ರೀತಿ, ಖಚಿತವಾದ ಅಭಿಪ್ರಾಯ ಇವು ವಿದ್ಯಾರ್ಥಿಗಳ ಮತ್ತು ಸಭಿಕರ ಮನವನ್ನು ನೇರವಾಗಿ ಮುಟ್ಟುತ್ತಿದ್ದವು.

ಡೆಕ್ಕನ್‌ಎಜ್ಯುಕೇಷನ್‌ಸೊಸೈಟಿ”ಯ ಸೇವೆ

ಗೋಖಲೆ 1885 ರಿಂದ 1902ರವರೆಗೂ “ಡೆಕ್ಕನ್‌ಎಜ್ಯುಕೇಷನ್‌ಸೊಸೈಟಿ”ಯ ಸೇವೆಯಲ್ಲಿ ನಿರತರಾಗಿದ್ದರು. ಅನಂತರ ವಿಶ್ರಾಂತಿ ಪಡೆದರು. ಅವರು 1891ರಿಂದ ಕೆಲವು ಕಾಲ ಆ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದರು. ಆ ಸಮಯದಲ್ಲಿ ಫರ್ಗ್ಯುಸನ್‌ಕಾಲೇಜ್‌ಬೆಳವಣಿಗೆಗಾಗಿ ಅವರು ಬಹಳ ಶ್ರಮಿಸಿದರು; ಅದರ ಭವ್ಯ ಕಟ್ಟಡ, ವಿದ್ಯಾರ್ಥಿನಿಲಯ ಇವುಗಳ ನಿರ್ಮಾಣಕ್ಕಾಗಿ ಹೇರಳ ಧನ ಸಂಗ್ರಹಿಸಿದರು. ಮುಂಬಯಿ ಮತ್ತು ಇತರ ಕಡೆಗಳಲ್ಲಿ ಸಂಚರಿಸಿ, ಅನೇಕ ಮಹನೀಯರ ಪರಿಚಯವನ್ನು ಪಡೆದುಕೊಂಡರು.

“ಡೆಕ್ಕನ್‌ಎಜ್ಯುಕೇಷನ್ ಸೊಸೈಟಿ”ಯನ್ನು ಸ್ಥಾಪಿಸಿ, ನಡೆಸುತ್ತಿದ್ದವರೆಲ್ಲ ಘಟಾನುಘಟಿಗಳೇ. ಇದರ ಪರಿಣಾಮವಾಗಿ ತಿಲಕರಿಗೂ ಮತ್ತು ಅಗರಕರ‍್ರಿಗೂ ಸಮಾಜ ಸುಧಾರಣೆ ಮತ್ತು ರಾಜಕಾರಣ ಇವುಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ತಲೆದೋರಿದವು. ಅಲ್ಲದೆ, ಸಂಸ್ಥೆ ನಡೆಸುತ್ತಿದ್ದ ಪತ್ರಿಕೆಗಳು ಅದಕ್ಕೊಂದು ದೊಡ್ಡ ಸಾಲದ ಹೊರೆಯನ್ನೇ ಹೊರಿಸಿದ್ದವು. 1890 ರಲ್ಲಿ ತಿಲಕರೂ ಮತ್ತು ಅವರ ಗುಂಪಿನವರೂ ಸಂಸ್ಥೆಯಿಂದ ಹೊರಗೆ ಬರಲು ನಿರ್ಧಾರ ಮಾಡಿದರು. ಅವರು ಪತ್ರಿಕೆಗಳ ಹೊಣೆಗಾರಿಕೆ ಹೊತ್ತುಕೊಂಡರು. 1895ರ ವೇಳೆಗೆ ಸಂಸ್ಥೆಯ ಹಿರಿಯರಲ್ಲಿ ಬಹುಮಂದಿ – ಅಗರಕರ್, ಕೇಳ್ಕರ್ ಇತ್ಯಾದಿ ತೀರಿಕೊಂಡಿದ್ದರು. ಹೀಗಾಗಿ ಗೋಖಲೆಯವರೇ ಸಂಸ್ಥೆಯ ಎಲ್ಲ ಭಾರವನ್ನೂ ಹೊರಬೇಕಾಯಿತು.

ಗೋಖಲೆಯವರು ಅಧ್ಯಾಪಕರಾಗಿದ್ದರೂ ಅವರು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ ಸಾರ್ವಜನಿಕ ಸಂಸ್ಥೆ ಅಗಿದ್ದುದರಿಂದ ವಿದ್ಯಾಸೇವೆಯ ಜೊತೆಗೆ ಸಾರ್ವಜನಿಕ ರಂಗದಲ್ಲಿಯೂ ಬಹುಮುಖ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಲಭಿಸಿತ್ತು. ಈ ಬಗೆಯ ಸಾರ್ವಜನಿಕ ಸೇವೆ ಸಲ್ಲಿಸಲು ಪ್ರೇರಣೆ ಇತ್ತವರು, ಪ್ರೋತ್ಸಾಹಿಸಿದವರು ಮಹಾದೇವ ಗೋವಿಂದ ರಾನಡೆ. ಗೋಖಲೆಯವರ ತಂದೆಯ ಸಹಪಾಠಿಯೂ ಆಗಿದ್ದರು.

"ಮಾತೃಭೂಮಿಯ ಸೇವೆಗಿಂತಲೂ ಉತ್ತಮವಾದ ಅಥವಾ ಶ್ರೇಷ್ಠವಾದ ಅಥವಾ ಶ್ರೇಯಸ್ಕರವಾದ ಅಥವಾ ಪವಿತ್ರವಾದ ಧರ್ಮ ಬೇರೆ ಯಾವುದಿದೆ?"

ರಾನಡೆ ಮತ್ತು ಗೋಖಲೆ

ಗುರು-ಶಿಷ್ಯ ಸಂಬಂಧ ಬೆಳೆದ ರಾನಡೆ ಮತ್ತು ಗೋಖಲೆ ಇವರಿಬ್ಬರ ಮೊದಲನೆಯ ಭೇಟಿ ಮತ್ತು ಪರಿಚಯ ಆದುದು ವಿಚಿತ್ರ ಸನ್ನಿವೇಶದಲ್ಲಿ. ಗೋಖಲೆ ಆಗತಾನೆ “ನ್ಯೂ ಇಂಗ್ಲಿಷ್‌ಸ್ಕೂಲ್‌” ಅಧ್ಯಾಪಕರಾಗಿ ಸೇರಿದ್ದರು. ಅವರ ಪಾಠಶಾಲೆ ಯಾವುದೋ ಒಂದು ಸಮಾರಂಭವನ್ನು ಏರ್ಪಡಿಸಿತ್ತು. ನಗರದ ಪ್ರಮುಖರಿಗೆಲ್ಲ ಆಹ್ವಾನ ಹೋಗಿತ್ತು; ರಾನಡೆಯವರಿಗೂ ಆಹ್ವಾನ ಹೋಗಿತ್ತು. ಗೋಖಲೆಯವರೇ ಸ್ವತಃ ಸ್ವಯಂಸೇವಕರಾಗಿ ಬಾಗಿಲ ಬಳಿ ನಿಂತಿದ್ದರು. ಅವರು ಆವರೆಗೂ ರಾನಡೆಯವರನ್ನು ನೋಡಿರಲಿಲ್ಲ. ರಾನಡೆಯವರೂ ಗೋಖಲೆಯವರನ್ನು ಕಂಡಿರಲಿಲ್ಲ.

ಆಹ್ವಾನ ಪತ್ರವನ್ನೇ ಸಭೆಗೆ ಪ್ರವೇಶಪತ್ರವಾಗಿ ತರಬೇಕೆಂದು ಸೂಚನೆ ನೀಡಲಾಗಿತ್ತು. ರಾನಡೆ ಸಭಾಂಗಣದ ಬಾಗಿಲ ಬಳಿ ಬಂದರು. ನಿಷ್ಠುರ ನೀತಿಯ ಸ್ವಯಂಸೇವಕ, “ನಿಮ್ಮ ಪ್ರವೇಶ ಪತ್ರ….” ಎಂದ.

ರಾನಡೆ ಜೇಬುಗಳನ್ನೆಲ್ಲ ತಡಕಾಡಿದರು; ಅದನ್ನು ತರಲು ಮರೆತಿದ್ದರು. ಅವರು ಪ್ರತಿಷ್ಠಿತರು; ಮೇಲಾಗಿ ನೀತಿ ನಿಷ್ಠುರರು. ಸ್ವಯಂಸೇವಕನಿಗೂ ಅವರಿಗೂ ಸೂಕ್ಷ್ಮ ಇಕ್ಕಟ್ಟಿನ ಸಮಯ. ಆ ವೇಳೆಗೆ ಸರಿಯಾಗಿ ಹರಿರಾಯ್‌ಸಾಠೆ ಎಂಬ ಮಿತ್ರರು ಅಲ್ಲಿಗೆ ಬಂದರು. ಅವರು ಸನ್ನಿವೇಶವನ್ನು ಅರಿತುಕೊಂಡರು, “ಗೋಖಲೆಯವರೇ< ಇವರು ಮಹಾದೇವ ಗೋವಿಂದ ರಾನಡೆಯವರು” ಎಂದು ಪರಿಚಯ ಮಾಡಿಕೊಟ್ಟರು. ಅಪ್ರಿಯ ಪ್ರಸಂಗವೊಂದು ತಪ್ಪಿತು.

ಇದರ ತರುವಾಯ ಗೋಖಲೆಯವರ ವಿಷಯದಲ್ಲಿ ಅಪಾರ ಆದರ ಹೊಂದಿದ್ದು, ಅವರನ್ನು “ಡೆಕ್ಕನ್‌ಎಜ್ಯುಕೇಷನ್‌ಸೊಸೈಟಿ”ಗೆ ಸೇರಿಸಲು ಯತ್ನಿಸಿದ್ದ ಅಗರಕರ, ಒಮ್ಮೆ ರಾನಡೆಯವರನ್ನು ಭೇಟಿ ಮಾಡಿದಾಗ ಗೋಖಲೆಯವರನ್ನು ಪ್ರಶಂಸಿಸಿ ಮಾತನಾಡಿದ್ದರು.

ಶಿಷ್ಯನಷ್ಟೇ ಅಲ್ಲ ಮಗನೂ ಹೌದು!

ಇಪ್ಪತ್ತೊಂದು ವರ್ಷದ ಯುವಕನಿಗೂ ಅವರಿಗಿಂತ ಇಪ್ಪತ್ತನಾಲ್ಕು ವರ್ಷ ಹಿರಿಯರಾದ ರಾನಡೆಯವರಿಗೂ ಆದ ಪ್ರಥಮ ಭೇಟಿಯಲ್ಲಿಯೇ ಇಬ್ಬರ ಮನಸ್ಸೂ ಪರಸ್ಪರ ಆಕರ್ಷಿತವಾದವು. ಯುವಕನ ಚುರುಕು ಬುದ್ದಿ, ವಿವೇಕಯುತ ಉತ್ಸಾಹ, ನಮ್ರತೆ, ಕರ್ತವ್ಯಪರತೆ, ಹೊಣೆಗಾರಿಕೆ, ಸೇವಾನಿಷ್ಠೆ ಇವುಗಳನ್ನು ರಾನಡೆ ಮೆಚ್ಚಿಕೊಂಡರು. ಇಬ್ಬರಿಗೂ ಸಂಪರ್ಕ ಹೆಚ್ಚಿದಂತೆ, ಗೋಖಲೆ ಶಿಷ್ಯನಷ್ಟೇ ಅಲ್ಲ ಮಗನೋ ಎಂಬಂತೆಯೂ ಆದರು.

ಗೋಖಲೆ, ರಾನಡೆಯವರ ಸಂಬಂಧದಿಂದ ಕಲಿತುದು ಅಪಾರ. ಅವರು “ಸಾರ್ವಜನಿಕ ಸಭಾ” ಕಾರ್ಯದರ್ಶಿಯಾಗಿ ಚುನಾಯಿತರಾದರು. ಅದರ ತ್ರೈಮಾಸಿಕ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಹಾಗೆಯೇ “ಸುಧಾರಕ” ಪತ್ರಿಕೆಯ ಇಂಗ್ಲಿಷ್‌ವಿಭಾಗದ ಸಂಪಾದಕರೂ ಆದರು. ಹದಿನಾಲ್ಕು ವರ್ಷಗಳ ಕಾಲ ರಾಷ್ಟ್ರದ ವಿವಿಧ ಸಮಸ್ಯೆಗಳ, ಸಾರ್ವಜನಿಕ ಕ್ಷೇಮಾಭಿವೃದ್ದಿ, ಪ್ರಭುತ್ವದೊಡನೆ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪತ್ರ ವ್ಯವಹಾರ, ಅರ್ಥವಿಚಾರ, ರಾಜಕಾರಣ ಹೀಗೆ ರಾನಡೆಯವರು ಯಾವ ಯಾವ ಕಾರ್ಯಗಳಲ್ಲಿ ನಿರತರಾಗಿದ್ದರೋ ಅವುಗಳಲ್ಲೆಲ್ಲ ಗೋಖಲೆ ಒಳ್ಳೆಯ ತರಬೇತಿ ಪಡೆದುಕೊಂಡರು.

ರಾನಡೆಯವರು ಕಾಲವಾದಾಗ ಗೋಖಲೆ ಅನಾಥನಾದಂತೆ ಭಾವಿಸಿದರು. 1901ರಲ್ಲಿ ಅವರು ತಮ್ಮ ಒಬ್ಬ ಮಿತ್ರನಿಗೆ ಪತ್ರ ಬರೆಯುತ್ತಾ ತಮ್ಮ ಸಂಕಟವನ್ನು ಹೀಗೆ ತೋಡಿಕೊಂಡರು: “ನನ್ನಮಹಾಗುರು ಕಾಲವಾದರು. ಅವರ ನಿಧನದಿಂದ ನನಗೆ ಆಗಿರುವ ದುಃಖವನ್ನು ವ್ಯಕ್ತಪಡಿಸಲಾರೆ. ನನ್ನ ಬಾಳಿನ ಮೇಲೆ ಹಠಾತ್ತಾಗಿ ಕತ್ತಲು ಎರಗಿದೆಯೆಂದು ನನಗೆ ಎನಿಸುತ್ತಿದೆ. ಇನ್ನು ಸಾರ್ವಜನಿಕ ಸೇವೆಯನ್ನು ತೃಪ್ತಿಕರವಾಗಿ, ಶ್ರೇಷ್ಠವಾಗಿ ಮಾಡಬಲ್ಲೆನೆಂಬ ನಂಬಿಕೆ ಸದ್ಯಕ್ಕೆ ನನ್ನಿಂದ ದೂರವಾದಂತಿದೆ”.

ಶಿಸ್ತು-ಸೇವೆ

ರಾನಡೆಯವರ ಸಹವಾಸದಲ್ಲಿ ಕೆಲಸ ಮಾಡುವುದು ಒಂದು ಕಠಿಣ ಶಿಸ್ತಿನಂತಿತ್ತು. ಸಾಧಾರಣವಾಗಿ ಇಬ್ಬರೂ ಪ್ರತಿ ಬುಧವಾರ ಕಲೆತು, ವಿಚಾರ ವಿನಿಯಮ ಮಾಡಿ ಸಾರ್ವಜನಿಕ ಕಾರ್ಯ ತೂಗಿಸುತ್ತಿದ್ದರು. ಒಂದು ಬುಧವಾರ ಗೋಖಲೆಗೆ ಜ್ವರ ಬಂದಿತು. ಅವರು ಆ ದಿನ ಹೋಗಲಿಲ್ಲ. ಮುಂದಿನ ಬುಧವಾರ ಪರಸ್ಪರ ಭೇಟಿಯಾದಾಗ, ಔಷಧ ಸೇವಿಸಿದರೆ ಜ್ವರ ಮಾಯವಾಗುತ್ತದೆ. ಆದರೆ ಕಳೆದುಹೋದ ಬುಧವಾರ ಮತ್ತೆ ಬರಲು ಸಾಧ್ಯವೇ?” ಎಂದು ನುಡಿದ ರಾನಡೆ, ಶಿಷ್ಯನಿಗೆ ಮರೆಯಲಾಗದ ಪಾಠ ಕಲಿಸಿದರು.

ಇಂಥ ತರಬೇತು ಪಡೆದುಕೊಂಡ ಗೋಖಲೆ, ಅದು ಪ್ರಸಿದ್ಧರಾಗಿದ್ದ ತಿಲಕ್‌, ರಾನಡೆ, ಫಿರೋಜ್‌ಷಾ ಮೆಹತಾ ಮೊದಲಾದ ನಾಯಕರ ಪಂಕ್ತಿಯಲ್ಲಿ ಒಬ್ಬರೆಂದು ಪ್ರಸಿದ್ಧರಾದರು. ಕಾರ್ಯುಕ್ಷೇತ್ರ ವಿಶಾಲವಾಗಿ ಅವರ ವ್ಯಕ್ತಿಗಾಂಭೀರ್ಯ, ಸೇವಾತತ್ಪರತೆ ಬ್ರಿಟಿಷ್‌ಸರ್ಕಾರಕ್ಕೂ ಮತ್ತು ರಾಷ್ಟ್ರಕ್ಕೂ ಮಾನ್ಯವೆನಿಸಿದವು. ಅವರು ಮುಂಬಯಿ ವಿಶ್ವವಿದ್ಯಾನಿಲಯದ ಗೌರವ ಸದಸ್ಯರಾಗಿ ನೇಮಿಸಲ್ಪಟ್ಟರು. ಆಗ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಮಾರ್ಪಾಟುಗಳನ್ನು ಮಾಡಲು ನೆರವಾದರು. ಅವರು ಪುಣೆ ಪುರಸಭೆಯ ಸದಸ್ಯರಾಗಿ ಚುನಾಯಿತರಾದರು. ಆ ಸಭೆಯ ಅಧ್ಯಕ್ಷರೂ ಆದರ; ಕಾರ್ಯದಕ್ಷತೆಗೆ ಹೆಸರು ಪಡೆದರು. ಜನರ ಆರೋಗ್ಯ, ನೈರ್ಮಲ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಿಸ್ಪ್ರಹತೆಯಿಂದ ಸೇವೆ ಸಲ್ಲಿಸಿದರು.

ಕ್ಷಮಾ ಯಾಚನೆ

ಭಾರತದ ರಾಜ್ಯಾದಾಯ ಸರಿಯಾಗಿ ವ್ಯಯವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಮಾಡಲು ವೆಲ್ಬೀ ಎಂಬಾತನ ಅಧ್ಯಕ್ಷತೆಯಲ್ಲಿ 1897ರಲ್ಲಿ ಬ್ರಿಟಿಷ್‌ಸರ್ಕಾರ ಒಂದು ಸಮಿತಿಯನ್ನು ನೇಮಿಸಿತು ಆ ಸಮಿತಿಯ ಮುಂದೆ ಸಾಕ್ಷ್ಯ ನುಡಿಯಲು, ಇಂಗ್ಲೆಂಡಿಗೆ ಹೋಗಲು ಗೋಖಲೆಯವರಿಗೆ ಆಹ್ವಾನ ಬಂದಿತು. ಇದು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಸಂದ ಗೌರವ ಎನ್ನಬಹುದು. ಅವರು ಇಂಗ್ಲೆಂಡಿನಲ್ಲಿ ಕಾರ್ಯ ನಿರತರಾಗಿದ್ದಾಗ, ಪುಣೆ ಪಟ್ಟಣದಲ್ಲಿ ಪ್ಲೇಗ್‌ವ್ಯಾಧಿ ಕಾಣಿಸಿಕೊಂಡಿತು. ಆ ಸಮಯದಲ್ಲಿ ಸರ್ಕಾರದ ಅಧಿಕಾರಿಗಳು ವ್ಯಾಧಿ ಹರಡದಂತೆ ನಿಯಂತ್ರಣ ಮಾಡಲು ಜಾರಿಗೆ ತಂದ ಕೆಲವು ನಿಬಂಧನೆಗಳು ಜನರನ್ನು ಕೆರಳಿಸಿದವು. ಯಾರೋ ಇಬ್ಬರು ಐರೋಪ್ಯ ಅಧಿಕಾರಿಗಳ ಕೊಲೆ ನಡೆದು ಹೋಯಿತು. ಈ ಕೃತ್ಯದಲ್ಲಿ ಜನರ ತಪ್ಪಿಲ್ಲವೆಂದೂ ಇದು ಅಧಿಕಾರಿಗಳ ಅನ್ಯಾಯದ ಪರಿಣಾಮವೆಂದೂ ಪುಣೆಯ ಕೆಲವರು ಮಿತ್ರರು ಒದಗಿಸಿದ ಮಾಹಿತಿಯನ್ನು ನಂಬಿ, ಗೋಖಲೆಯವರು ಇಂಗ್ಲೆಂಡಿನ ಪ್ರಮುಖ ಪತ್ರಿಕೆಗಳಿಗೆ ಲೇಖನ ಬರೆದರು; ಬ್ರಿಟಿಷ್‌ಅಧಿಕಾರಿಗಳನ್ನು ದೂಷಿಸಿದರು. ಇದು ವಿಚಾರಣೆಗೆ ಬಂದಿತು. ಸಾಕ್ಷಿ ಒದಗಿಸಬೇಕಾದ ಪರಿಸ್ಥಿತಿ ಬಂದ ಕೂಡಲೇ ಮಿತ್ರರೆಲ್ಲ ಹಿಂದೆ ಸರಿದರು. ಗೋಖಲೆಯವರು ಪೇಚಿನಲ್ಲಿ ಸಿಕ್ಕಿಕೊಂಡರು. ಅನ್ಯಾಯವಾಗಿ ಅಧಿಕಾರಿಗಳನ್ನು ದೂಷಿದನೆಂದು ಅವರು ವ್ಯಥೆ ಪಟ್ಟುಕೊಂಡರು. ಸರ್ಕಾರದ ಕ್ಷಮೆ ಕೇಳಿಕೊಂಡರು. ಇದರಿಂದ ಅವರ ಅನೇಕ ಮಿತ್ರರಿಗೆ ಕೋಪ ಬಂದಿತು. ಆದರೂ ಅವರು ತಮ್ಮ ಪ್ರಾಮಾಣಿಕ ಮಾರ್ಗದಿಂದ ಹಿಂದೆಗೆಯಲಿಲ್ಲ. ಭಾರತಕ್ಕೆ ಹಿಂದುರುಗಿ ಬಂದ ಮೇಲೆ ಪ್ಲೇಗ್‌ವ್ಯಾಧಿಯ ನಿರ್ಮೂಲನಕ್ಕೋಸ್ಕರ ಪರಿಹಾರ ಕಾರ್ಯದಲ್ಲಿ ತೊಡಗಿದರು. ತನ್ಮಯರಾಗಿ ಸೇವೆ ಸಲ್ಲಿಸಿದರು.

ಶಾಸನ ಸಭೆಗಳಲ್ಲಿ

ಗೋಖಲೆಯವರು 1899ರಲ್ಲಿ ಮುಂಬಯಿ ಶಾಸನ ಸಭೆಯ ಸದಸ್ಯರಾಗಿ ಚುನಾಯಿತರಾದರು. ಆ ಕಾಲದಲ್ಲಿ ಕ್ಷಾಮ ಬಂದಿತು. ಅದರ ನಿವಾರಣೆಯ ಕಾರ್ಯದಲ್ಲಿ ಸರ್ಕಾರದ ಉದಾಸೀನ ಭಾವವನ್ನು ಟೀಕಿಸಿದರು. ಭೂಮಿ ಪರಭಾರೆಗೆ ಸಂಬಂಧಿಸಿದಂತೆ ಸರ್ಕಾರ ಒಂದು ಮಸೂದೆಯನ್ನು ತಂದಿದ್ದಿತು. ಗೋಖಲೆ ಅದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಮಿತಪಾನ ಆಂದೋಲನಕ್ಕೆ ತಮ್ಮ ಬೆಂಬಲ ನೀಡಿದರು.

ಶಿಕ್ಷಣ ಸೇವಾ ದೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಗೋಖಲೆಯವರ ಸೇವಾ ಕಾರ್ಯಕ್ಷೇತ್ರ ಇನ್ನೂ ವಿಸ್ತಾರವಾಯಿತು. ಅವರು 1902ರಲ್ಲಿ ಕೇಂದ್ರ ಶಾಸನ ಸಭೆಯ ಸದಸ್ಯರಾಗಿ ಚುನಾಯಿತರಾದರು. ಆ ಸಭೆಯಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗೆಗೆ ವಾದಿಸಿದರು; ಉಪ್ಪಿನ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದೂ ಸೈನ್ಯದ ವೆಚ್ಚವನ್ನು ಇಳಿಸಬೇಕೆಂದೂ ಪ್ರಬಲವಾಗಿ ವಾದಿಸಿದರು. 1911ರಲ್ಲಿ ಸಮಗ್ರ ಪ್ರಾಥಮಿಕ ಮಸೂದೆಯನ್ನು ಆ ಸಭೆಯಲ್ಲಿ ಮಂಡಿಸಿದುದು ಅವರ ಮಹತ್ತರ ಸೇವೆ. ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ, ಶಿಕ್ಷಣ ದೀಕ್ಷೆ ವಹಿಸಿದ್ದ ಅವರಿಗೆ ಇದು ಸಹಜವೇ ಆಗಿದ್ದಿತು. ಅಂದು ಅದು ಅಂಗೀಕಾರವಾಗದಿದ್ದರೂ ಅವರು ವ್ಯಕ್ತಪಡಿಸಿದ ವಿಚಾರಗಳು ಇಂದಿಗೂ ಮಾನ್ಯವಾಗಿವೆ.

ಸಜ್ಜನಿಕೆಯ ಮಿತಿಯಲ್ಲಿ ತೂಕ ತಪ್ಪದೆ ಸರ್ಕಾರವನ್ನು ಟೀಕಿಸುತ್ತಿದ್ದರು ಗೋಖಲೆ. ಅವರ ಮಾತಿಗೆ ಮಾನ್ಯತೆ ಇರುತ್ತಿತ್ತು. ಅವರ ವಾದ ವೈಖರಿ ಸರಳವಾಗಿ, ತರ್ಕಬದ್ದವಾಗಿ, ರಾಗದ್ವೇಷಗಳಿಗೆ ಗುರಿಯಾಗದೆ, ಮನ ಸೆಳೆಯುವಂತೆ ಅವರ ಭಾಷಣ ಮಾದರಿಯಾಗಿರುತ್ತಿತ್ತು.

ಸಾಮ್ರಾಜ್ಯ ಸರ್ಕಾರದೊಡನೆ ಸಂಬಂಧ

ಗೋಖಲೆಯವರ ಪ್ರಾಮಾಣಿಕತೆಯಲ್ಲಿ ಬ್ರಿಟಿಷ್‌ಸಾಮ್ರಾಜ್ಯ ಸರ್ಕಾರಕ್ಕೆ ಅಪಾರ ನಂಬಿಕೆಯಿತ್ತು. ಭಾರತದ ಜನಸ್ತೋಮಕ್ಕೂ ಹಾಗೆಯೇ ಇದ್ದಿತು. ಅವರು ತಮ್ಮ ಪ್ರಾಮಾಣಿಕ, ಸ್ನೇಹಯುತ ಮತ್ತು ಸೌಮ್ಯ ವ್ಯಕ್ತಿತ್ವದಿಂದ ಎರಡೂ ಕಡೆಯವರ ಪ್ರೇಮಾದರಗಳಿಗೆ ಪಾತ್ರರಾಗಿದ್ದರು. ಯಾವುದೇ ಸಮಸ್ಯೆಯನ್ನು ಸೌಜನ್ಯದಿಂದ, ರಾಜೀ ಮನೋಭಾವದಿಂದ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬುದು ಅವರ ನೀತಿಯಾಗಿತ್ತು. ಬ್ರಿಟನ್ನಿನ ರಾಜಕೀಯ ನಾಯಕರೂ ಅವರಲ್ಲಿ ವಿಶ್ವಾಸವನ್ನು ಇಟ್ಟಿದ್ದರು. ಬ್ರಿಟನ್ನಿನ ಸಾಮ್ರಾಜ್ಯ ಸರ್ಕಾರಕ್ಕೂ ಭಾರತದ ಆಡಳಿತಕ್ಕೂ ಸಂಬಂಧಿಸಿದಂತೆ ನಾನಾ ಸಮಸ್ಯೆಗಳನ್ನು ಕುರಿತು ವಿಚಾರ ವಿನಿಮಯ ಮಾಡುವುದಕ್ಕೂ ಮತ್ತು ಭಾರತೀಯ ಜನಕೋಟಿಯ ಆಶೋತ್ತರಗಳನ್ನು ಪ್ರಚಾರ ಮತ್ತು ಉಪನ್ಯಾಸಗಳ ಮೂಲಕ ಬ್ರಿಟನ್ನಿನ ಜನತೆಗೆ ಮನದಟ್ಟು ಮಾಡಿಕೊಡುವುದಕ್ಕೂ ಅವರು ಏಳು ಸಲ ಇಂಗ್ಲೆಂಡಿಗೆ ಭೇಟಿ ಕೊಟ್ಟಿದ್ದರು.

ಅಧ್ಯಕ್ಷ

ಅಂದಿನ ಕಾಲದಲ್ಲಿ ಸಾರ್ವಜನಿಕ ಜೀವನದಲ್ಲಿ ಪ್ರತಿಷ್ಠಿತ ಸ್ಥಾನ ಹೊಂದಿದ್ದವರೆಲ್ಲ ಒಂದಲ್ಲ ಒಂದು ರೀತಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನೊಡನೆ ಸಂಬಂಧ ಹೊಂದಿದ್ದರು. ರಾನಡೆಯವರು ಆ ಸಂಸ್ಥೆಯನ್ನು ಸ್ಥಾಪಿಸಿ, ಅದಕ್ಕಾಗಿ ಶ್ರಮಿಸಿದವರಲ್ಲಿ ಒಬ್ಬರು. ಅವರ ಪ್ರಮುಖ ಶಿಷ್ಯ ಸಹಜವಾಗಿಯೇ ಕಾಂಗ್ರೆಸ್ಸಿನಲ್ಲಿ ಆಸಕ್ತಿ ವಹಿಸಿದರು.

1889ರಲ್ಲಿ ಕಾಂಗ್ರೆಸಿನ ನಾಲ್ಕನೆಯ ವಾರ್ಷಿಕ ಅಧಿವೇಶನ ಮುಂಬಯಿಯಲ್ಲಿ ನಡೆಯಿತು. ಗೋಖಲೆ ಅದರಲ್ಲಿ ಮೊದಲ ಸಲ ಭಾಗವಹಿಸಿದರು. ಅಲ್ಲಿಂದ ಮುಂದೆ ಪ್ರತಿ ಅಧಿವೇಶನದಲ್ಲಿಯೂ ಅವರು ಭಾಗವಹಿಸಿದರು. ಅನಂತರ ಆರು ವರ್ಷಗಳೊಳಗೆ, 1895ರಲ್ಲಿ ಅವರ ಆ ಮಹಾಸಭೆಯ ಸಹಕಾರ್ಯದರ್ಶಿ ಆಗುವ ಅವಕಾಶವನ್ನು ಹೊಂದಿದರು. 1905ರಲ್ಲಿ ಕಾಶೀನಗರದಲ್ಲಿ ನಡೆದ ವಾರ್ಷಿಕ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನವನ್ನೇ ಅಲಂಕರಿಸಿದರು. ಅಂದು ಅವರು ಭಾರತದ ಜನಕೋಟಿಯ ರಾಜಕೀಯ ಆಶೋತ್ತರಗಳ ಮೂರ್ತಸ್ವರೂಪರಾದರು. ಸ್ವರಾಜ್ಯ ಭಾವನೆ ಪ್ರಬಲವಾಗುತ್ತಿದ್ದ ಆ ಕಾಲದಲ್ಲಿ ನಿಸ್ವಾರ್ಥ ಜನಸೇವಕನಿಗೆ ಸಂದ ಮಹಾ ಗೌರವ ಅದು.

ಗೋಖಲೆಯವರು ಮಿತವಾದಿಗಳು ಎನಿಸಿಕೊಂಡಿದ್ದರು; ಎಂದರೆ ಬ್ರಿಟಿಷ್‌ಸರ್ಕಾರದ ವಿರುದ್ಧ ಕ್ರಾಂತಿ ಅಥವಾ ಹೋರಾಟವನ್ನು ಒಪ್ಪುವವರಲ್ಲ, ಭಾರತದ ಜನತೆಯ ಬೇಡಿಕೆಯು ನ್ಯಾಯ ಎಂದು ಬ್ರಿಟಿಷರಿಗೆ ಮನವರಿಕೆ ಮಾಡಿಕೊಡಬೇಕು, ಮಾತುಕತೆಗಳಿಂದ ಸ್ನೇಹವಾಗಿ ತೀರ್ಮಾನ ಮಾಡಿಕೊಳ್ಳಬೇಕು ಎಂದು ಅವರ ಅಭಿಪ್ರಾಯ. ಆದರೆ ಬ್ರಿಟಿಷ್‌ಸರ್ಕಾರ ಜನರ ಇಷ್ಟಕ್ಕೆ ವಿರುದ್ದವಾಗಿ ಬಂಗಾಳವನ್ನು ಎರಡು ಭಾಗಗಳಾಗಿ ಒಡೆಯಿತು. ಗೋಖಲೆಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಆಗಿನ ವೈಸರಾಯ್‌ಕರ್ಜನರು ಭಾರತೀಯರನ್ನು ಮೂಕ ಪ್ರಾಣಿಗಳಂತೆ ಕಾಣುತ್ತಾರೆ. ಜನರಿಗೆ ಅಪಮಾನ ಮಾಡುತ್ತಾರೆ ಎಂದು ಖಂಡಿತವಾದ ಮಾತುಗಳಲ್ಲಿ ಹೇಳಿದರು. ಹೀಗಾದರೆ ಅಧಿಕಾರಿಗಳೊಂದಿಗೆ ಸಹಕರಿಸುವುದು, ಜನತೆಯ ಹಿತದ ದೃಷ್ಟಿಯಿಂದ ಸಾಧ್ಯವೇ ಇಲ್ಲ ಎಂದು ಸಾರಿದರು.

ಗೋಖಲೆ ಮತ್ತು ತಿಲಕ್‌

ಗೋಖಲೆ ವಿದ್ಯಾರ್ಥಿ ಜೀವನವನ್ನು ಮುಗಿಸಿ, ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿ ಕಾಲಿಡುತ್ತಿದ್ದ ಸಮಯದಲ್ಲಿ ಅವರಿಗಿಂತ ಹತ್ತು ವರ್ಷ ದೊಡ್ಡವರಾಗಿದ್ದ ಬಾಲಗಂಗಾಧರ ತಿಲಕ್‌ಮಹಾರಾಷ್ಟ್ರದಲ್ಲಿ ಜನಪ್ರಿಯ ನಾಯಕರಾಗಿದ್ದರು. ಗೋಖಲೆ ರಾನಡೆಯವರ ಶಿಷ್ಯರಾಗಿ ಅವರ ಪರಂಪರೆಯ ರಾಜಕಾರಣವನ್ನು, ವಿಚಾರ ಧಾರೆಯನ್ನು ಎತ್ತಿಹಿಡಿದರು. ತಿಲಕರು ತೀವ್ರಗಾಮಿಗಳೆಂದೂ ಗೋಖಲೆ ಮಂದಗಾಮಿಗಳೆಂದೂ ಪ್ರತೀತಿಯಾಯಿತು. ಒಬ್ಬೊಬ್ಬರೂ ಒಂದೊಂದು ಪಕ್ಷದ ನಾಯಕರೆಂದೂ ಪ್ರಸಿದ್ಧವಾಯಿತು. ಕಾಂಗ್ರೆಸ್‌ಸಂಸ್ಥೆ ಎರಡು ಹೋಳಾಗುವ ಸ್ಥಿತಿ ಬಂದಿತು. 1907ರಲ್ಲಿ ಸೂರತ್‌ನಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದಲ್ಲಿ ಈ ಒಡಕು ದೊಡ್ಡದಾಗಿ, ತಿಲಕ್‌”ಕಾಂಗ್ರೆಸ್‌ರಾಷ್ಟ್ರೀಯ ಪಕ್ಷ” ಎಂಬುದನ್ನು ಸ್ಥಾಪಿಸಿದರು. ಆದರೆ ತಿಲಕರು ಮತ್ತು ಗೋಖಲೆಯವರು ಪರಸ್ಪರ ಗೌರವದಿಂದಿದ್ದರು. ಒಬ್ಬರ ದೊಡ್ಡತನವನ್ನು ಇನ್ನೊಬ್ಬರು ಗುರುತಿಸುತ್ತಿದ್ದರು. ಒಮ್ಮೆ ಗೋಖಲೆಯವರು ಶ್ರೀನಿವಾಸ ಶಾಸ್ತ್ರಿಗಳಿಗೆ ಹೇಳಿದರಂತೆ. “ದೇಶಕ್ಕಾಗಿ ತಿಲಕರಂತೆ ಹಣ ವೆಚ್ಚ ಮಾಡಿದವರು, ಸರ್ಕಾರದ ಬಲವನ್ನು ಎದುರಿಸಿದವರು ಬೇರೊಬ್ಬರಿಲ್ಲ. ಈ ಹೋರಾಟದಲ್ಲಿ ತಮ್ಮ ಹಣವನ್ನೆಲ್ಲ ಕಳೆದುಕೊಂಡರೂ ಧೈರ್ಯ, ತಾಳ್ಮೆಗಳಿಂದ ಮತ್ತೆ ಸಂಪಾದಿಸಿದವರಿಲ್ಲ”. 1908ರಲ್ಲಿ ತಿಲಕ್‌ರಾಜದ್ರೋಹದ ಆಪಾದನೆಗೆ ಗುರಿಯಾಗಿ, ಆರು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು. ಸರ್ಕಾರದ ಈ ಧೋರಣೆಯ ಬಗೆಗೆ ಗೋಖಲೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. 1915ರಲ್ಲಿ ಗೋಖಲೆ ಕಾಲವಾದಾಗ ತಿಲಕ್‌ತಮ್ಮ ದುಃಖವನ್ನು ಹೀಗೆ ವ್ಯಕ್ತಪಡಿಸಿದರು: “ಭರತವರ್ಷದ ಕೊಹಿನೂರು, ಮಹಾರಾಷ್ಟ್ರದ ರತ್ನ ಹಾಗೂ ದೇಶಭಕ್ತಿಯ ಮುಕುಟ ಮಣಿ ನಮ್ಮಿಂದ ಕಳಚಿಹೋಯಿತು”.

ಭರತ ಸೇವಕರ ಸಂಘ”

ಗೋಖಲೆಯವರು ತಮ್ಮ ವಿಚಾರಗಳನ್ನೆಲ್ಲ ಕಾರ್ಯರೂಪಕ್ಕೆ ತರುವ ಸಲುವಾಗಿ ಪುಣೆಯಲ್ಲಿ 1905ರ ಜೂನ್‌12ರಂದು “ಭಾರತ ಸೇವಕರ ಸಂಘ” (“ಸರ್ವಂಟ್ಸ್‌ಆಫ್‌ಇಂಡಿಯಾ ಸೊಸೈಟಿ”) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರ ಬದುಕಿನ ಮಹಾಕಾರ್ಯಗಳಲ್ಲಿ ಒಂದು. ಮಾತೃಭೂಮಿಯ ಪ್ರೇಮ, ಸೇವೆ, ತ್ಯಾಗ, ಶಿಕ್ಷಣ ಪ್ರಸಾರ, ಲೋಕ ಜಾಗೃತಿ, ಎಲ್ಲ ಜಾತಿಗಳಲ್ಲಿ ಮೈತ್ರಿ, ಅಸ್ಪೃಶ್ಯರ ಉದ್ಧಾರ ಇವುಗಳೆಲ್ಲ ಸಂಸ್ಥೆಯ ಗುರಿ ಎಂದು ಅವರು ಘೋಷಿಸಿದರು. ತ್ಯಾಗ ಮತ್ತು ತಪಸ್ಸಿನ ಜೀವನವಿಲ್ಲದೆ, ರಾಷ್ಟ್ರಸೇವೆ ಅಸಾಧ್ಯವೆಂಬುದು ಅವರ ನಂಬಿಕೆಯಾಗಿತ್ತು. ಕೇವಲ ಜೀವನ ನಡೆಸಲು ಸಹಾಯಕವಾಗುಷ್ಟು ಮಾತ್ರ ಸಂಭಾವನೆ ಪಡೆದು ತಾಯ್ನಾಡಿನ ಸೇವೆ ಮಾಡುವ ನಿಷ್ಠಾವಂತ ಕಾರ್ಯಕರ್ತರು ಮುಂದೆ ಬರದ ಹೊರತು ರಾಷ್ಟ್ರದ ಪ್ರಗತಿ ಸಾಧ್ಯವಿಲ್ಲವೆಂದು ಅವರು ನಂಬಿದ್ದರು. ರಾಜಕೀಯ ಜೀವನ, ಸಾರ್ವಜನಿಕ ಜೀವನ ಕುಟಿಲಮಯವಾಗದೆ ಶುದ್ಧವಾಗಿರಬೇಕೆಂದೂ ಅದು ಆಧ್ಯಾತ್ಮ ನೀತಿಯ ಆಧಾರದ ಮೇಲೆ ನಿಲ್ಲಬೇಕೆಂದೂ ಅವರ ದೃಢ ಭಾವನೆಯಾಗಿತ್ತು. ಗೋಖಲೆಯವರ ತರುವಾಯ, ಈ ಸಂಸ್ಥೆ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿ, ಹೃದಯನಾಥ ಕುಂಜ್ರು, ಪಿ.ಕೋದಂಡರಾವ್‌ಮುಂತಾದ ಪ್ರಸಿದ್ದ ತ್ಯಾಗಮಯ ಜೀವನದ ದೇಶಸೇವಕರನ್ನು ಸೃಷ್ಟಿಸಿಕೊಟ್ಟಿದೆ.

ಗೋಖಲೆ-ಗಾಂಧೀಜಿ

ರಾನಡೆಯವರಿಗೆ ಮತ್ತು ಗೋಖಲೆಯವರಿಗೆ ಎಂಥ ಗುರು-ಶಿಷ್ಯ ಸಂಬಂಧವಿದ್ದಿತೋ ಅಂಥದೇ ಸಂಬಂಧ ಗೋಖಲೆ ಮತ್ತು ಗಾಂಧೀಜಿಯವರದು. ಗೋಖಲೆ ಗಾಂಧೀಜಿಗಿಂತ ಮೂರು ವರ್ಷ ದೊಡ್ಡವರು.

ಅಂದು ಮಹಾರಾಷ್ಟ್ರದಲ್ಲಿ ಪ್ರಸಿದ್ಧರಾಗಿದ್ದ ತಿಲಕ್‌, ಗೋಖಲೆ ಮತ್ತು ಫಿರೋಜ್‌ಷಾ ಮೆಹತಾ ಇವರ ಬಗೆಗೆ ಗಾಂಧೀಜಿ ಕೇಳಿ ತಿಳಿದುಕೊಂಡಿದ್ದರು. ಅವರು ಗೋಖಲೆಯನ್ನು ಮೊದಲ ಸಲ ಭೇಟಿಯಾದುದು 1896ರಲ್ಲಿ ಆಗ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಭಾರತೀಯರಿಗೆ ತೀರ ಅನ್ಯಾಯ, ಅಪಮಾನಗಳಾಗುತ್ತಿದ್ದವು. ಅದರ ವಿರುದ್ಧದ ಹೋರಾಟದ ನಾಯಕತ್ವವನ್ನು ಗಾಂಧೀಜಿ ವಹಿಸಿಕೊಂಡಿದ್ದರು. ಆ ಹೋರಾಟಕ್ಕೆ ಭಾರತದಲ್ಲಿ ಸಹಾನುಭೂತಿಯನ್ನು ಕೋರುವುದೇ ಅವರ ಉದ್ದೇಶ ಆಗಿದ್ದಿತು. ಆ ಸಂದರ್ಭದಲ್ಲಿ ಅವರು ಕಂಡ ಗೋಖಲೆಯವರನ್ನು ಪಾವನಮಯ, ಮಂಜುಳ ಗಂಗಾನದಿಗೆ ಹೋಲಿಸಿದರು.

1903ರಲ್ಲಿ ಮತ್ತೆ ಭಾರತಕ್ಕೆ ಬಂದಾಗ, ಗಾಂಧೀಜಿ ಗೋಖಲೆಯವರೊಂದಿಗೆ ಕಲ್ಕತ್ತಾದಲ್ಲಿ ಒಂದು ತಿಂಗಳು ತಂಗಿದರು. ಗೋಖಲೆಯವರ ಸರಳ ಜೀವನ, ಅವಿರತ ಕಾರ್ಯತತ್ಪರತೆ, ವಾತ್ಸಲ್ಯಭಾವ ಇವುಗಳಿಂದ ಗಾಂಧೀಜಿ ಆಕರ್ಷಿತರಾದರು.

1913ರಲ್ಲಿ ಗಾಂಧೀಜಿಯ ಕೋರಿಕೆಯಂತೆ ಗೋಖಲೆ ದಕ್ಷಿಣ ಆಫ್ರಿಕಾಕ್ಕೆ ಹೋದರು. ಅಲ್ಲಿ ಗಾಂಧೀಜಿ ನಡೆಸುತ್ತಿದ್ದ ಹೋರಾಟವನ್ನೂ ಭಾರತೀಯರ ಪರಿಸ್ಥಿತಿಯನ್ನೂ ಪ್ರತ್ಯಕ್ಷ ನೋಡಬೇಕೆಂಬುದು ಅವರ ಉದ್ದೇಶವಾಗಿದ್ದಿತು. ಆಗ ನಡೆದ ಒಂದು ಪ್ರಸಂಗ ಸ್ವಾರಸ್ಯವಾದುದು.

ರಾನಡೆ ಗೋಖಲೆಯವರಿಗೆ ಪ್ರೀತಿಪೂರ್ವಕವಾಗಿ ನೀಡಿದ್ದ ಒಂದು ಕಂಠವಸ್ತ್ರ ಅವರಲ್ಲಿ ಇದ್ದಿತು. ಅವರು ಅದನ್ನು ಬಹಳ ಎಚ್ಚರಿಕೆಯಿಂದ ವಿಶೇಷ ಸಂದರ್ಭಗಳಲ್ಲಿ ಮಾತ್ ಉಪಯೋಗಿಸುತ್ತಿದ್ದರು. ಅದು ಅವರಿಗೆ ಒಂದು ಅಮೂಲ್ಯ ವಸ್ತುವಾಗಿತ್ತು. ಜೋಹನ್ಸ್‌ಬರ್ಗ್‌‌ನ ಭಾರತೀಯ ನಾಗರಿಕರು ಗೋಖಲೆಯವರ ಗೌರವಾರ್ಥವಾಗಿ ಒಂದು ಸತ್ಕಾರಕೂಟವನ್ನು ಏರ್ಪಡಿಸಿದ್ದರು. ಅಂದು ಕಂಠವಸ್ತ್ರವನ್ನು ಉಪಯೋಗಿಸಲು ತೆಗೆದು ನೋಡಿದಾಗ ಅದು ಮುದುರುಮುದುರಾಗಿ ಹೋಗಿದ್ದಿತು. ಅದನ್ನು ಇಸ್ತ್ರಿ ಮಾಡಬೇಕಾಗಿತ್ತು. ಅಗಸನಿಗೆ ಕಳಿಸಲು ಸಾಕಷ್ಟು ಕಾಲಾವಕಾಶ ಇರಲಿಲ್ಲ. ಗಾಂಧೀಜಿ ತಾವೇ ಇಸ್ತ್ರಿ ಮಾಡಿಕೊಡಲು ಮುಂದಾದರು. ಆ ಕೆಲಸ ಅವರಿಗೆ ಸ್ವಲ್ಪ ತಿಳಿದಿತ್ತು. ಗೋಖಲೆ ನುಡಿದರು: “ನಾನು ನಿಮ್ಮ ವಕೀಲಿ ಸಾಮರ್ಥ್ಯವನ್ನು ನಂಬಬಲ್ಲೆ: ಆದರೆ ನಿಮ್ಮ ಅಗಸಿಗನ ಸಾಮರ್ಥ್ಯವನ್ನಲ್ಲ! ಇದನ್ನು ನೀವು ಹಾಳು ಮಾಡಿದರೆ? ಇದು ನನಗೆ ಎಷ್ಟು ಬೆಲೆ ಉಳ್ಳದ್ದೆಂದು ನಿಮಗೆ ಗೊತ್ತೆ?”

ರಾನಡೆಯವರು ಆ ಕಂಠವಸ್ತ್ರವನ್ನು ತಮಗೆ ಎಷ್ಟೊಂದು ಪ್ರೀತಿಯಿಂದ ಕೊಟ್ಟಿದ್ದರೆಂಬುದನ್ನು ಆನಂದದಿಂದ ವರ್ಣಿಸಿದರು. ಗಾಂಧೀಜಿ ಎಚ್ಚರಿಕೆಯಿಂದ ಮಾಡಿಕೊಡುವುದಾಗಿ ಭರವಸೆ ಕೊಟ್ಟಮೇಲೆ ಅವರು ಇಸ್ತ್ರಿ ಮಾಡಲು ಒಪ್ಪಿಗೆ ಕೊಟ್ಟರು. ಹಾಗೆಯೇ ಗಾಂಧೀಜಿ ತೃಪ್ತಿಕರವಾಗಿ ಇಸ್ತ್ರಿ ಮಾಡಿಕೊಟ್ಟು ಅವರಿಂದ “ಶಭಾಸ್‌” ಎನಿಸಿಕೊಂಡರು.

ಗೋಖಲೆ ಭಾರತಕ್ಕೆ ಹಿಂದುರುಗಿದ ಮೇಲೆ ಸತ್ಯಾಗ್ರಹಕ್ಕೆ ನಿಧಿ ಸಂಗ್ರಹಿಸಿ ಕಳುಹಿಸಿದರು.

1914ರ ಕೊನೆಯ ಭಾಗದಲ್ಲಿ ಗೋಖಲೆ ಮತ್ತು ಗಾಂಧೀಜಿ ಲಂಡನ್ನಿನಲ್ಲಿ ಸಂಧಿಸಿದರು. ಗಾಂಧೀಜಿ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಯಿಂದ ಪೀಡಿತರಾಗಿದ್ದರು. ಅವರು ಆಲಿಸನ್‌ಎಂಬ ನಿಸರ್ಗ ಚಿಕಿತ್ಸೆಯ ವೈದ್ಯರಿಂದ ಸಲಹೆ ಪಡೆದು, ಕೇವಲ ಹಣ್ಣಿನ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದು. ಹಾಲು, ದ್ವಿದಳಧಾನ್ಯ ಇತ್ಯಾದಿಗಳನ್ನು ಪೂರ್ಣವಾಗಿ ತ್ಯಜಿಸಿದ್ದರು. ಲಂಡನ್ನಿಗೆ ಬಂದ ಮೇಲೆ ಡಾಕ್ಟರ್‌ಜೀವರಾಜ ಮೆಹತಾ ಚಿಕಿತ್ಸೆ ಆರಂಭಿಸಿದರು. ಅವರು ಹಾಲು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಲೇಬೇಕೆಂದು ಒತ್ತಾಯ ಮಾಡಿದರು. ಆರೋಗ್ಯದ ದೃಷ್ಟಿಯಿಂದ ಇದು ಮುಖ್ಯವೆಂದು ಸೂಚಿಸಿದರು. ಗೋಖಲೆಯವರು ಒತ್ತಾಯ ಮಾಡಿದರು. ಗಾಂಧೀಜಿ ಗೋಖಲೆಯವರ ಮಾತಿಗೆ ಸುಲಭವಾಗಿ “ಇಲ್ಲ” ಎನ್ನಲು ಸಂಕೋಚಪಟ್ಟುಕೊಂಡರು. ತಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಒಂದು ದಿನದ ಕಾಲಾವಕಾಶ ಬೇಕೆಂದು ಕೇಳಿದರು.

"ನಾನು ನಿಮ್ಮ ವಕೀಲಿ ಸಾಮರ್ಥ್ಯವನ್ನು ನಂಬಬಲ್ಲೆ; ಆದರೆ ಅಗಸಿಗನ ಸಾಮರ್ಥ್ಯವನ್ನಲ್ಲ."

ಗಾಂಧೀಜಿ ರಾತ್ರಿಯೆಲ್ಲ ಯೋಚನೆ ಮಾಡಿದರು. ತಾವು ಆಹಾರದ ವಿಷಯದಲ್ಲಿ ಮಾಡುತ್ತಿದ್ದ ಪ್ರಯೋಗವನ್ನು ಬಿಡಲು ಇಷ್ಟವಿರಲಿಲ್ಲ. ಗೋಖಲೆಯವರ ಅಭಿಮಾನದ ಮಾತನ್ನೂ ನಿರಾಕರಿಸಲೂ ಮನಸ್ಸಿರಲಿಲ್ಲ.

ಮರುದಿನ ಸಂಜೆ ಗೋಖಲೆಯವರು, “ವೈದ್ಯರ ಸಲಹೆಯನ್ನು ಅಂಗೀಕರಿಸಲು ನೀವು ನಿರ್ಧರಿಸಿದಿರಾ?” ಎಂದು ಗಾಂಧೀಜಿಯವರನ್ನು ಪ್ರಶ್ನಿಸಿದರು.

ಗಾಂಧೀಜಿ ನಯವಾಗಿ ಆದರೆ ದೃಢವಾಗಿ ನುಡಿದರು: “ಒಂದು ವಿಷಯ ಬಿಟ್ಟು ಉಳಿದುದನ್ನೆಲ್ಲ ನಾನು ಒಪ್ಪಲು ಸಿದ್ಧವಿದ್ದೇನೆ. ದಯಮಾಡಿ ಅದನ್ನು ಒತ್ತಾಯ ಮಾಡಬೇಡಿ. ನಾನು ಹಾಲು, ಹಾಲಿನ ಪದಾರ್ಥಗಳು ಮತ್ತು ಮಾಂಸವನ್ನು ಸೇವಿಸಲಾರೆ. ಇವುಗಳನ್ನು ಸೇವಿಸದಿರುವುದರಿಂದ ನನಗೆ ಸಾವು ಬಂದರೂ ಅದನ್ನು ಎದುರಿಸಲು ಸಿದ್ಧನಿದ್ದೇನೆ.”

“ಇದು ನಿಮ್ಮ ಕಡೆಯ ತೀರ್ಮಾನವೇ?”

“ಹೌದು, ನಾನು ನನ್ನ ನಿಯಮಕ್ಕೆ ವಿರುದ್ಧವಾಗಿ ಹೋಗಲಾರೆ. ಇದು ನಿಮಗೆ ವ್ಯಥೆಯನ್ನು ಉಂಟು ಮಾಡೀತು ಎಂಬುದನ್ನೂ ಬಲ್ಲೆ. ಆದರೆ ಕ್ಷಮಿಸಿ ಎಂದು ಬೇಡುತ್ತೇನೆ.”

ಇದರಿಂದ ಗೋಖಲೆಯವರಿಗೆ ವ್ಯಥೆಯಂತೂ ಆಯಿತು. ಅವರು, “ನಿಮ್ಮ ತೀರ್ಮಾನ ನನಗೆ ಒಪ್ಪಿಗೆ ಇಲ್ಲ. ನಿಮ್ಮನ್ನು ಇನ್ನು ಒತ್ತಾಯ ಮಾಡಲಾರೆ” ಎಂದರು. ವೈದ್ಯರ ಕಡೆ ತಿರುಗಿ, “ದಯಮಾಡಿ ಇನ್ನು ಇವರಿಗೆ ತೊಂದರೆ ಕೊಡಬೇಡಿ. ಅವರು ಇಟ್ಟುಕೊಂಡಿರುವ ಕಟ್ಟಲೆಗೆ ಅನುಗುಣವಾಗಿ, ನಿಮಗೆ ಸರಿ ಎನ್ನಿಸುವ ಯಾವುದಾದನ್ನದರೂ ಸಲಹೆ ಮಾಡಿ” ಎಂದರು. ಅವರ ಉದಾರ ಭಾವವನ್ನು ಗಾಂಧೀಜಿ ಮೆಚ್ಚಿಕೊಂಡರು.

ಅವಸಾನ

1915ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾ ಸತ್ಯಾಗ್ರಹ ಸಮರದಲ್ಲಿ ವಿಜಯ ಡೆದು ಭಾರತಕ್ಕೆ ಹಿಂದುರುಗಿದರು. ಫೆಬ್ರವರಿ 12 ರಂದು “ಭಾರತ ಸೇವಕರ ಸಂಘ”ದಲ್ಲಿ ಅವರ ಗೌರವಾರ್ಥ ಒಂದು ಸಭೆ ಏರ್ಪಾಡಾಗಿತ್ತು. ಗೋಖಲೆಯವರೇ ಅದನ್ನು ಏರ್ಪಡಿಸಿದರು. ಗಾಂಧೀಜಿ ತಮ್ಮ ಸಂಘವನ್ನು ಸೇರಬೇಕೆಂಬುದು ಗೋಖಲೆಯವರ ಇಂಗಿತವಾಗಿತ್ತು.

ದುರದೃಷ್ಟವಶಾತ್‌ಅದೇ ದಿನ ಸಾಯಂಕಾಲ ಗೋಖಲೆಯವರಿಗೆ ಮೂರ್ಛೆ ಬಂದಿತು. ಅವರ ಆರೋಗ್ಯ ದಿನದಿನಕ್ಕೆ ಕ್ಷೀಣಿಸುತ್ತಾ ಹೋಯಿತು. ಒಂದು ವಾರದ ತರುವಾಯ 1915ರ ಫೆಬ್ರವರಿ 19ರಂದು ರಾತ್ರಿ 11 ಗಂಟೆಗೆ ಅವರ ಇಹದ ವ್ಯಾಪಾರ ಮುಗಿಯಿತು. ದಿವ್ಯ ವ್ಯಕ್ತಿಯೊಬ್ಬರು ಕಣ್ಮರೆಯಾದರು. ಭಾರತೀಯರ ಶೋಕದ ಬಟ್ಟಲು ತುಂಬಿ ಹರಿಯಿತು.

ಮರಣದ ವಾರ್ತೆ ಕೇಳಿ ದುಃಖಿತರಾದ ಗಾಂಧೀಜಿ ಪುಣೆಗೆ ಧಾವಿಸಿ ಬಂದರು. ಆ ಹಿರಿಜೀವದ ಗೌರವಾರ್ಥ ಒಂದು ವರ್ಷ ಕಾಲ ಪಾದರಕ್ಷೆ ಮೆಟ್ಟದೆ, ಬರಿಗಾಲಲ್ಲಿ ನಡೆವ ವ್ರತ ಕೈಗೊಂಡರು. ಅವರು ಗೋಖಲೆಯವರನ್ನು ತಮ್ಮ “ರಾಜಕಾರಣದ ಗುರು” ಎಂದು ಭಾವಿಸಿದ್ದರು.

ಕೊನೆ ಮಾತು

ಗೋಖಲೆಯವರ ಮಾತಿನಿಂದಲೇ ಈ ಪುಸ್ತಕವನ್ನು ಮುಗಿಸುವುದು ಯೋಗ್ಯ. 1904ರಲ್ಲಿ ಮದರಾಸಿನಲ್ಲಿ ಅವರು ಆಡಿದ ನುಡಿಮುತ್ತು ಇದು: “ಮಾತೃಭೂಮಿಯ ಸೇವೆಯನ್ನು ಶ್ರದ್ಧೆಯಿಂದಲೂ ಸ್ವಾರ್ಥತ್ಯಾಗಪೂರ್ವಕವಾಗಿಯೂ ಕೈಗೊಳ್ಳುವುದು ಈಗ ಅವಶ್ಯಕ. ಈ ಸೇವೆಗಿಂತಲೂ ಉತ್ತಮವಾದ ಅಥವಾ ಶ್ರೇಷ್ಠವಾದ ಅಥವಾ ಶ್ರೇಯಸ್ಕರವಾದ ಅಥವಾ ಪವಿತ್ರವಾದ ಧರ್ಮ ಬೇರೆ ಯಾವುದಿದೆ? ಭಾರತದ ಹಿತಕ್ಕಾಗಿ ಶ್ರಮಿಸುವುದೆಂದರೆ, ನಮ್ಮ ಜನ್ಮಭೂಮಿಗಾಗಿ, ನಮ್ಮ ತಾತ ಮುತ್ತಾತಂದಿರ ಭೂಮಿಗಾಗಿ, ನಮ್ಮ ಮಕ್ಕಳು ಮೊಮ್ಮಕ್ಕಳ ಭೂಮಿಗಾಗಿ ಶ್ರಮಪಡುವುದೇ ಅಲ್ಲವೆ?”