‘ಬುದ್ಧಿಯ ಗುಡಿಯಲ್ಲಿ ಜ್ಞಾನದ ದೀಪ ಒಮ್ಮೆ ಬೆಳಗಿ ದರೆ ಸಾಕು;  ಮನುಷ್ಯನ ನಡತೆ ಆನಂದಮಯವಾಗುತ್ತದೆ. ಅವನು ಮಹಾ ಕಾರ್ಯಗಳನ್ನು ಕೈಗೊಳ್ಳುತ್ತಾನೆ. ಅಂಥ ಮಹಾತ್ಮನು ತಂದೆ-ತಾಯಿ, ಬಂಧು-ಬಳಗ ನೋಡು ವುದಿಲ್ಲ; ಬಡತನಕ್ಕೆ ಹೆದರುವುದಿಲ್ಲ ; ತನ್ನ ಜಾತಿಯವರ, ತನ್ನ ದೇಶದವರ ವಿರೋಧ ಲೆಕ್ಕಿಸುವುದಿಲ್ಲ…. ತನ್ನ ಆತ್ಮಬಲ ವೊಂದನ್ನು  ನಂಬಿ, ಹಿಡಿದ ಕೆಲಸ ಪೂರೈಸುತ್ತಾನೆ…’

– ಹೀಗೆ ಹೇಳಿದವರು ಗೋಪಾಲ ಗಣೇಶ ಆಗರಕರರು. ಹೇಳಿದಂತೆ ಮಾಡಿ ತೋರಿಸಿದ ಮಹಾತ್ಮರು. ಅವರು ಮಹಾರಾಷ್ಟ್ರದ ದೊಡ್ಡ ಸಮಾಜ ಸುಧಾರಕರು. ಹಿಂದು ಸಮಾಜದಲ್ಲಿ ತುಂಬಿದ್ದ ಕಂದಾಚಾರಗಳನ್ನು ಅವರು ಎತ್ತಿತೋರಿಸಿದರು. ಜಾತಿಪದ್ಧತಿಯನ್ನು ಬಿಡಬೇಕೆಂದರು. ಹೆಂಗಸರಿಗೆ ಸಮಾನ ಹಕ್ಕುಗಳನ್ನು ಕೊಡಬೇಕೆಂದು ಹೋರಾಡಿದರು. ಹಾಗೆಯೆ, ನಮ್ಮನ್ನಾಳುತ್ತಿದ್ದ ಬ್ರಿಟಿಷರು ಹೇಗೆ ನಮ್ಮನ್ನು ಸುಲಿಗೆ ಮಾಡುತ್ತಿದ್ದಾರೆಂದೂ ವಿವರಿಸಿದರು. ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದರು. ಹಣಕ್ಕೆ ಆಸೆ ಪಡದೆ ಬಡತನದಲ್ಲೇ ಬದುಕಿದರು. ಜನರ ಕಣ್ಣು ತೆರೆಸಲು ಪತ್ರಿಕೆಗಳನ್ನು ನಡೆಸಿ, ಜೀವಮಾನವೆಲ್ಲ ಕಷ್ಟಪಟ್ಟರು. ಅವರನ್ನು ಹಳೇ ಸಂಪ್ರದಾಯದ ಜನರು ಬೈದರು, ಬೆದರಿ ಸಿದರು, ಪಿಶಾಚಿ ಎಂದರು. ಅವರು ಒಂದನ್ನೂ ಲೆಕ್ಕಿಸಲಿಲ್ಲ.

ಮನೆತನ

ಗೋಪಾಲ ಗಣೇಶ ಆಗರಕರರು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಟೇಂಬೂ ಗ್ರಾಮದಲ್ಲಿ ೧೮೫೬ರ ಜುಲೈ ತಿಂಗಳಲ್ಲಿ ಹುಟ್ಟಿದರು. ಒಂದು ಕಾಲದಲ್ಲಿ ಅವರದು ದೇವಸ್ಥಾನ ಕಟ್ಟಿಸಿದ ಶ್ರೀಮಂತರ ವಂಶ. ಆದರೆ ತಂದೆ ಗಣೇಶ ಆಗರಕರರ ಕಾಲದಲ್ಲಿ ದಟ್ಟದಾರಿದ್ರ್ಯ ಬಂದುಬಿಟ್ಟಿತ್ತು. ತಂದೆ ಸಾತ್ವಿಕರಾದರೂ ತೀರ ಸೋಮಾರಿ. ಅವರ ಹೆಂಡತಿ ಸರಸ್ವತೀ ಬಾಯಿ ಕರ‍್ಹಾಡದ ಅನುಕೂಲವಂತ ಭಾಗವತ ಮನೆತನದವರು. ಅವರ ಸಹಾಯದಿಂದಲೇ ಆಗರಕರರ ಕುಟುಂಬ ಹೇಗೋ ಕಾಲ ಹಾಕುತ್ತಿತ್ತು. ಸರಸ್ವತೀ ಬಾಯಿ ದೈವಭಕ್ತೆಯೂ ಕವಯಿತ್ರಿಯೂ ಆಗಿದ್ದರಂತೆ. ಮಗನಿಗೆ ತಾಯಿಯ ದೈವಭಕ್ತಿ ಬರಲಿಲ್ಲ ; ಕಾವ್ಯ ಸಾಹಿತ್ಯಗಳ ಪ್ರೀತಿ ಮಾತ್ರ ಬಂತು.

ವಿದ್ಯಾಭ್ಯಾಸದ ಹಂಬಲ

ಚಿಕ್ಕಂದಿನಲ್ಲಿ ಆಗರಕರರು ಖಿಲಾಡಿ ವೃತ್ತಿಯವರಾಗಿ ದ್ದರು. ಹತ್ತಿರವೇ ಇದ್ದ ಕೃಷ್ಣಾನದಿಯಲ್ಲಿ ಗೆಳೆಯರೊಡನೆ ಈಜುವುದು, ಆಟವಾಡುವುದು ಅಂದರೆ ಅವರಿಗೆ ಪ್ರೀತಿ. ಸ್ವಲ್ಪ ಆತ್ಮಾಭಿಮಾನಿ ಎಂದೂ ಹೆಸರಾಗಿದ್ದರು. ತಮ್ಮದು ಸರಿಯಾಗಿದ್ದರೆ ಹಿರಿಯರಿಗೂ ಅವರು ಬಗ್ಗುವವರಲ್ಲ. ಆದರೆ ಸತ್ಯವಂತ, ದಾಕ್ಷಿಣ್ಯಶೀಲ, ಪರೋಪಕಾರಿ.

ಆಗರಕರರು ಕರ‍್ಹಾಡದಲ್ಲಿ ಇಂಗ್ಲಿಷ್ ಮೂರನೇ ತರಗತಿ ಯಲ್ಲಿ ತೇರ್ಗಡೆಯಾದರು. ಆಗ ಅವರಿಗೆ ೧೨ ವರ್ಷ. ಆಗಲೇ ಮರಾಠಿಯಲ್ಲಿ ಚೆನ್ನಾಗಿ ಭಾಷಣ ಮಾಡುತ್ತಿದ್ದರು; ನಿಬಂಧ ಬರೆಯುತ್ತಿದ್ದರು. ಮುಂದೆ ಕಲಿಯಬೇಕೆಂದು ತುಂಬಾ ಬಯಕೆ. ಆದರೆ ಕರ‍್ಹಾಡದಲ್ಲಿ ಪ್ರೌಢಶಾಲೆ ಇರಲಿಲ್ಲ. ಉಪಾಯವಿಲ್ಲದೆ ಮಾಮಲೇದಾರ ಕಚೇರಿಯಲ್ಲಿ ಗುಮಾಸ್ತ ರಾಗಿ ಸೇರಿದರು.

ಆದರೆ ಕಲಿಯುವ ತನಕ ಬಿಡಲಿಲ್ಲ. ಕೆಲಸ ಬಿಟ್ಟರು. ರತ್ನಗಿರಿಯಲ್ಲಿ ಅವರ ಸಂಬಂಧಿಕರೊಬ್ಬರು ಅಧಿಕಾರಿ ಯಾಗಿದ್ದರು. ಅಲ್ಲಿ ಪ್ರೌಢಶಾಲೆಯೂ ಇತ್ತು. ಆ ಸಂಬಂಧಿಕರು ಸಹಾಯ ಮಾಡಬಹುದೆಂಬ ಆಸೆಯಿಂದ ಅಲ್ಲಿಗೆ ಹೊರಟರು. ೧೫೦ ಮೈಲು ಬರಿಗಾಲಲ್ಲಿ ನಡೆದು ರತ್ನಗಿರಿ ತಲುಪಿದರು. ಆದರೆ ಸಂಬಂಧಿಕರು ಇವರನ್ನು ಹಚ್ಚಿಕೊಳ್ಳಲಿಲ್ಲ. ಆದರೂ ಶಾಲೆ ಸೇರಿದರು. ಅವರಿವರ ಬಟ್ಟೆ ಒಗೆದು, ವಾರಾನ್ನ-ಮಧುಕರಿ (ಭಿಕ್ಷಾನ್ನ) ಮಾಡಿ ಬದುಕಿದರು. ಆದರೆ ಸ್ವಾಭಿಮಾನಿಯಾದ ಅವರು ಕಡೆಗೆ ಈ ಹಂಗಿನ ಕೂಳಿಗೆ ರೋಸಿ ತಿರುಗಿ ಕರ‍್ಹಾಡಕ್ಕೇ ಬಂದರು.

ಕರ‍್ಹಾಡದ ಆಸ್ಪತ್ರೆಯಲ್ಲಿ ಕಾಂಪೌಂಡರ್ ಕೆಲಸ ಸಿಕ್ಕಿತು. ಒಂದು ದಿನ ಅವರು ಅಲ್ಲಿ ಪರೀಕ್ಷೆಗಾಗಿ ಬಂದ ಒಂದು ಹೆಣ ಕೊಯ್ಯಬೇಕಾಯಿತು, ಕೊಯ್ದರು. ಹೇಸಿಗೆ ಹುಟ್ಟಿ ಮೂರು ದಿನ ಅನ್ನ ಸೇರಲಿಲ್ಲ, ನಿದ್ದೆ ಬರಲಿಲ್ಲ. ಕೆಲಸ ಬಿಟ್ಟರು, ಅಂತೂ ಎರಡು ವರ್ಷ ಹಾಳಾಯಿತು.

ನೋಡುತ್ತಿರಿ ಮಾಸ್ತರ್

ವರ‍್ಹಾಡ ಪ್ರಾಂತದ ಅಕೋಲಾದಲ್ಲಿದ್ದ ಅವರ ಸೋದರ ಮಾವನ ಹೆಂಡತಿ ಒಮ್ಮೆ ಕರ‍್ಹಾಡಕ್ಕೆ ಬಂದಿದ್ದರು. ಅವರನ್ನು ಕಳಿಸಿಬರುವುದಕ್ಕೆ ಆಗರಕರ್ ಅಕೋಲಾಕ್ಕೆ ಹೋಗ ಬೇಕಾಯಿತು. ಅವರ ಮಾವ ಅವರನ್ನು ಅಲ್ಲೇ ನಿಲ್ಲಿಸಿಕೊಂಡು ಶಾಲೆಗೆ ಸೇರಿಸಿದರು. ಆಗರಕರರು ವಿದ್ಯಾರ್ಥಿವೇತನ ಪರೀಕ್ಷೆಗೆ ಕೂತು ವಿದ್ಯಾರ್ಥಿ ವೇತನ ಸಂಪಾದಿಸಿದರು. ೧೮೭೫ರಲ್ಲಿ ಮೆಟ್ರಿಕ್ ತೇರ್ಗಡೆಯಾದರು. ಆಗಲೇ ಮರಾಠಿಯಲ್ಲಿ ಚೆನ್ನಾಗಿ ಬರೆಯುತ್ತಿದ್ದರು ; ಸಂಸ್ಕೃತದಲ್ಲಿ ಪ್ರವೀಣರಾಗಿದ್ದರು.

ಬಡತನ, ಪರಾಶ್ರಯ, ಕಷ್ಟಾರ್ಜಿತ ವಿದ್ಯೆ. ಮತ್ತೆ ಯಾರಾದರೂ ಆಗಿದ್ದರೆ ಹಣ್ಣಾಗಿ ಬೆಕ್ಕಿನಂತಾಗುತ್ತಿದ್ದರು. ಆಗರಕರ್ ಹಾಗಾಗಲಿಲ್ಲ. ಅವರ ಧೈರ್ಯ, ಸ್ವಾಭಿಮಾನ ಪಳಗಿ ಗಟ್ಟಿಯೇ ಆಯಿತು.

ಒಮ್ಮೆ ಕರ‍್ಹಾಡದಲ್ಲಿ ಒಬ್ಬ ಮಾಮಲೇದಾರರು ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಆಗರಕರ್ ಬಹಳ ಚೆನ್ನಾಗಿ ಮಾತಾಡಿದರೆಂದು ಜನ ಕೊಂಡಾಡಿದರು. ಆಗದವರೊಬ್ಬರು “ಹನ್ನೆರಡು ವರ್ಷದ ಹುಡುಗ ಏನು ಭಾಷಣ ಮಾಡುತ್ತಾನೆ! ಯಾರೋ ಬಾಯಿಪಾಠ ಮಾಡಿಸಿರಬೇಕು” ಎಂದರು. ಅದನ್ನು ಕೇಳಿದೊಡನೆ ಆಗರಕರರು, “ಅವರು ಬೇಕಾದ ವಿಷಯ ಕೊಡಲಿ ! ನಿಂತ ಮೆಟ್ಟಿಗೆ ಅದರ ಬಗ್ಗೆ ಭಾಷಣ ಮಾಡುತ್ತೇನೋ ಇಲ್ಲವೋ ನೋಡಲಿ !” ಎಂದು ಹೇಳಿ ಕಳಿಸಿದರು. ತೆಗಳಿದವರು ತಣ್ಣಗಾದರು.

ಅಕೋಲಾದಲ್ಲಿ ಪ್ರೌಢಶಾಲೆಯಲ್ಲಿದ್ದಾಗೊಮ್ಮೆ ಯಾವುದೋ ಸಣ್ಣ ತಪ್ಪಿಗೆ ಮಾಸ್ತರರು, “ನಿನ್ನಿಂದ ಏನಾ

ದೀತು ! ನೀನು ಸೋಮಾರಿ. ಹೀಗೇ ಹಿಂದೆ ಬೀಳುತ್ತ ಹೋಗುತ್ತಿ!” ಎಂದು ಜರೆದರು. ಜರೆದವರು ಅವರ ಪ್ರೀತಿಯ ಮಾಸ್ತರರೇ. ಆದರೆ ಆಗರಕರರು ತತ್‌ಕ್ಷಣ, “ನೋಡುತ್ತಿರಿ ಮಾಸ್ತರ್ ! ನಿಮ್ಮ ಹಾಗೆ ನಾನೂ ಎಂ.ಎ. ಆಗದಿದ್ದರೆ ನನ್ನ ಹೆಸರು ಆಗರಕರ್ ಅಲ್ಲ !” ಎಂದು ಪಂಥ ಕಟ್ಟಿದರು.

ಎಂ.ಎ. ಆಯಿತು

ಮೆಟ್ರಿಕ್ ಆಯಿತು. ಎಂ.ಎ. ಆಗುವ ಪಂಥ ತೊಟ್ಟದ್ದೂ ಆಗಿತ್ತು. ಆದರೆ ಕಾಲೇಜು ಶಿಕ್ಷಣ ಬೇಕಾದರೆ ದೂರದ ಪುಣೆಗೆ ಹೋಗಬೇಕು. ಮಾವ ಭಾಗವತರ ಒಬ್ಬ ಮಗ ಆಗಲೇ ಪುಣೆಯಲ್ಲಿ ಕಲಿಯುತ್ತಿದ್ದ. ಇಬ್ಬರ ಖರ್ಚೂ ತೂಗಿಸಲಿಕ್ಕೆ ಭಾಗವತರಿಗೆ ಶಕ್ತಿಯಿಲ್ಲ. ಈಗ ಅವರ ಸಹಾಯಕ್ಕೆ ಬಂದವರು ತರುಣ ಮಾಸ್ತರರಾದ ವಿಷ್ಣು ಮೋರೇಶ್ವರ ಮಹಾಜನಿಯವರು. ಅವರ ಮುಂದೆಯೆ ಆಗರಕರರು ಪಂಥ ತೊಟ್ಟದ್ದು. ಅದನ್ನು ಮನಸ್ಸಿನಲ್ಲಿಡದೆ ಮಹಾಜನಿಯವರು ಎಲ್ಲ ಮಾಸ್ತರರಿಂದ ಚಂದಾ ಕೂಡಿಸಿ ೬೦ ರೂಪಾಯಿಯ ಗಂಟನ್ನು ಹುಡುಗನ ಕೈಲಿಟ್ಟು ಪುಣೆಗೆ ಕಳಿಸಿದರು. ಆಗರಕರರನ್ನು ಮರಾಠಿಯಲ್ಲಿ ಬರೆಯಲು ತರಬೇತು ಮಾಡಿದವರೂ ಮಹಾಜನಿಯವರೇ. ಅವರ ಉಪಕಾರವನ್ನು ಆಗರಕರ್ ಯಾವಾಗಲೂ ಸ್ಮರಿಸುತ್ತಿದ್ದರು.

ಆಗರಕರರು ಪುಣೆಗೆ ಬಂದು ಡೆಕ್ಕನ್ ಕಾಲೇಜು ಸೇರಿದರು. ತಂದ ೬೦ ರೂಪಾಯಿ ಕರಗಲು ತಡವಾಗಲಿಲ್ಲ. ವಿದ್ಯಾರ್ಥಿವೇತನ ಪರೀಕ್ಷೆಗೆ ಕುಳಿತಿದ್ದರೂ ಅದು ಬಂದದ್ದು ತಡವಾಗಿ. ಬಂದಮೇಲೂ ಅದು ಖರ್ಚಿಗೆ ಸಾಲುವಷ್ಟಿರಲಿಲ್ಲ. ಆಗರಕರರು ಒಂದು ಮರಾಠಿ ಪತ್ರಿಕೆಗೆ ಲೇಖನಗಳನ್ನು ಬರೆದುಕೊಟ್ಟು ತಿಂಗಳಿಗೆ ಐದು ರೂಪಾಯಿ ಗಳಿಸುತ್ತಿದ್ದರು. ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಸಂಪಾದಿಸುತ್ತಿದ್ದರು. ಕಾಲೇಜಿನ ಒಂದು ಲೇಖನ ಸ್ಪರ್ಧೆಯಲ್ಲಿ ೨೫ ರೂಪಾಯಿ ಸಿಕ್ಕಿತು. ಆದರೂ ಹೊಟ್ಟೆಗಿದ್ದರೆ ಬಟ್ಟೆಗೆ ಸಾಲದು. ಇರುವುದು ಒಂದೇ ಪೋಷಾಕು. ರಾತ್ರಿ ಅದನ್ನು ಒಗೆದುಹಾಕಿ ಬರಿಮೈಲಿದ್ದು ಹಗಲು ಅದನ್ನೆ ತೊಡಬೇಕು. ಪರೀಕ್ಷೆಗೆ ಕಟ್ಟಲಿಕ್ಕೆ ಹಣವಿಲ್ಲವೆಂದು ರಾತ್ರಿ ಕೂತು ಒಂದು ನಾಟಕ ಬರೆಯ ತೊಡಗಿದರು. ಪುಣ್ಯಕ್ಕೆ ಪ್ರಾಧ್ಯಾಪಕರೊಬ್ಬರು ಪರೀಕ್ಷೆಗೆ ಹಣಕೊಟ್ಟು ಕಾಪಾಡಿದರು. ನಿಶ್ಚಿಂತೆಯಿಂದ ಓದಲು ಸಾಧ್ಯವಾಯಿತು.

ಮೊದಲ ವರ್ಷ ಮೇಲ್ದರ್ಜೆಯಲ್ಲಿ ಉತ್ತೀರ್ಣ ರಾದ್ದರಿಂದ ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿತು ; ಸ್ವಲ್ಪ ನೆಮ್ಮದಿ ಬಂತು. ಬಿ.ಎ. ಆಯಿತು. ಉತ್ತಮ ವಿದ್ಯಾರ್ಥಿಯಾಗಿದ್ದುದರಿಂದ ಎಂ.ಎ. ಓದುವುದಕ್ಕೆ ‘ದಕ್ಷಿಣಾ ಫೆಲೋಷಿಪ್’ ಎಂದು ಹೆಸರಾದ ವಿದ್ಯಾರ್ಥಿವೇತನ ದೊರೆಯಿತು. ಇದ್ದದ್ದರಲ್ಲಿ ಸುಖವಾಗಿ ಅಭ್ಯಾಸ ಸಾಗಿತು. ೧೮೮೦ರಲ್ಲಿ ಅವರು ಎಂ.ಎ. ಆದರು. ಆಗ ಅವರಿಗೆ ೨೪ ವರ್ಷ ವಯಸ್ಸು.

ವಿದ್ಯಾಭ್ಯಾಸ ಮುಗಿದ ಮೇಲೆ ನಾನು

ಇಷ್ಟೆಲ್ಲ ಕಷ್ಟಪಟ್ಟು ವಿದ್ಯೆ ಗಳಿಸಿದವರು ಮುಂದೆ ಏನು ಮಾಡಿದರು? ಒಳ್ಳೇ ಸಂಬಳ ಬರುವ ನೌಕರಿ ಹಿಡಿದು ಸುಖವಾಗಿ ಬದುಕಿದರೆ ? ಹಾಗೆ ಮಾಡಿದ್ದರೆ ತಪ್ಪೇನೂ ಆಗುತ್ತಿರಲಿಲ್ಲ. ಇಂಗ್ಲಿಷ್ ವಿದ್ಯೆ ಕಲಿತವರಿಗೆ  ಆಗ ಒಳ್ಳೊಳ್ಳೇ ಸರ್ಕಾರಿ ನೌಕರಿಗಳು ಸುಲಭವಾಗಿ ಸಿಗುತ್ತಿದ್ದವು. ಧಾರಾಳ ಸಂಬಳ, ಸಮಾಜದಲ್ಲಿ ಗೌರವ, ನೌಕರ ಚಾಕರರು; ಅಥವಾ ಕಾನೂನು ಕಲಿತು ವಕೀಲನಾದರೆ ಕೈತುಂಬ ಸಂಪಾದನೆ.

ಆಗರಕರರ ಮನಸ್ಸು ಆ ಕಡೆ ಹರಿಯಲಿಲ್ಲ. ‘ಸುಖಂ ಚ ಮೇ ಶಯನಂ ಚ ಮೇ’ (ನನಗೆ ಸುಖ ಬೇಕು, ನನಗೆ ಹಾಸಿಗೆ ಬೇಕು) ಎಂಬುದು ತಮಗಲ್ಲ – ಎಂದು ಅವರು ಯಾವಾಗಲೂ ಅನ್ನುತ್ತಿದ್ದರು. ತಾನು ಹುಟ್ಟಿದ ನಾಡಿಗೆ, ತನ್ನ ಸುತ್ತಲ ಜನರಿಗೆ ಏನಾದರೂ ಹಿತ ಮಾಡಬೇಕು ಎಂದು ತವಕ. ಅವರು ಇನ್ನೂ ಬಿ.ಎ.ಯಲ್ಲಿ ಇದ್ದಾಗಲೇ ಒಮ್ಮೆ ಅವರ ಸೋದರ ಭಾವ ದತ್ತಾತ್ರೇಯ ವಿಷ್ಣು  ಭಾಗವತ ಮತ್ತು ಇತರ ಸ್ನೇಹಿತರೊಡನೆ ಹರಟೆ ಆಯಿತಂತೆ.

‘ಜನಹಿತಕ್ಕೆ ಕೆಲಸ ಮಾಡಲು ತರುಣರಿಗೆ ಪ್ರೇರಣೆ ಕೊಡುತ್ತೇನೆ.’

“ಕಾಲೇಜು ಮುಗಿದ ಮೇಲೆ ಮುಂದೇನು ಮಾಡುವಾ?”

ಒಬ್ಬೊಬ್ಬರು ಒಂದೊಂದು ಹೇಳಿದರು. ಯಾರಿಗೂ ಗೊತ್ತಾದ ಗುರಿ ಇರಲಿಲ್ಲ. ಆಗರಕರರೊಬ್ಬರು, “ನಾನು ಶಾಲಾ ಶಿಕ್ಷಕನಾಗುತ್ತೇನೆ. ನಾಲ್ಕು ಜನರಿಗೆ ವಿದ್ಯೆ ಹೇಳಿ ಅಜ್ಞಾನ ಕಳೆಯುತ್ತೇನೆ” ಎಂದರು.

ಘೊಳ್ಳೆಂದು ನಗು, “ಈ ದರಿದ್ರ ಮಾಸ್ತರಿಕೆಯಲ್ಲಿ ಏನಿದೆ? ಒಂದು ಹಣವೇ, ಒಂದು ಅಧಿಕಾರವೇ ! ಶುದ್ಧ ಕಚಡಾ ಖಾತೆ!”

ಆಗರಕರರಿಗೆ ಸಿಟ್ಟು ಬಂತು. “ಏನು? ಎಂಥೆಂಥ

ನ್ಯಾಯಾಧೀಶರು, ಅಧಿಕಾರಿಗಳು, ದೇಶಸೇವಕರು ತಯಾರಾಗುವುದು ಶಾಲೆಗಳಲ್ಲಿ. ಅದು ಕಚಡಾ ಖಾತೆಯೆ? ಇಲ್ಲ. ನಾನು ಮಾಸ್ತರನೇ ಆಗುತ್ತೇನೆ. ಜನಹಿತಕ್ಕೆ ಕೆಲಸ ಮಾಡಲು ತರುಣರಿಗೆ ಪ್ರೇರಣೆ ಕೊಡುತ್ತೇನೆ” ಎಂದರು.

ಸರಿಯಾದ ಗೆಳೆಯರು

ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದು ಅವರ ಹಂಬಲ. ಆಗರಕರರು ಎಂ.ಎ.ಯಲ್ಲಿದ್ದಾಗ ಅವರಿಗೆ ಬಾಲ ಗಂಗಾಧರ ತಿಲಕ್ ಎಂಬ ತರುಣನ ಸ್ನೇಹವಾಯಿತು. ಮುಂದೆ ‘ಲೋಕಮಾನ್ಯ ತಿಲಕ್’ ಎಂದು ಜಗತ್ಪ್ರಸಿದ್ಧರಾದವರು ಇವರೇ. ತಿಲಕರು ಆಗ ಕಾನೂನುಶಾಸ್ತ್ರ (ಎಲ್‌ಎಲ್.ಬಿ.) ಓದುತ್ತಿದ್ದರು- ಡೆಕ್ಕನ್ ಕಾಲೇಜಿನಲ್ಲಿಯೆ ಆಗರಕರರಂತೆ ತಿಲಕರು ಬಡವರಲ್ಲ.ಆದರೆ ಅವರಂತೆ ದೇಶದ ಬಗ್ಗೆ ಚಿಂತಿಸುವವರಾಗಿದ್ದರು. ಇವರಿಬ್ಬರು ರಾತ್ರಿ ಕಾಲೇಜಿನ ಬಳಿ ಏಕಾಂತ  ಸ್ಥಳದಲ್ಲಿ ಸೇರಿ. ಗಂಟೆಗಟ್ಟಳೆ ಮಾತಾಡುತ್ತಿದ್ದರು.

ಏನು ಮಾತು ? ಭಾರತಮಾತೆಯ ಅಧೋಗತಿ, ದೇಶ ಬ್ರಿಟಿಷರ ಅಡಿಯಾಳಾಗಿದೆ. ಭಾರತದ ಹಳೇ ವೈಭವ ಮಣ್ಣುಪಾಲಾಗಿದೆ. ಬ್ರಿಟಿಷರು ನಮ್ಮನ್ನು  ಮೆಟ್ಟಿ ನಮ್ಮ ಸಂಪತ್ತು ದೋಚಿದ್ದಾರೆ. ಚಿನ್ನದ ನಾಡು ಅನ್ನಕ್ಕಿಲ್ಲದೆ ಒದ್ದಾಡುತ್ತಿದೆ. ಆದರೆ ನಮ್ಮ ಜನರಿಗೆ ಇದೊಂದರ ಪರಿವೆ ಇಲ್ಲ. ಅಜ್ಞಾನದಲ್ಲಿ ಮುಳುಗಿದ್ದಾರೆ. ತಮ್ಮೊಳಗೇ ಜಗಳವಾಡಿ ದೇಶದ ಸ್ವಾತಂತ್ರ್ಯ ಕಳೆದುಕೊಂಡರು. ಈಗ ವಿದ್ಯೆ ಕಲಿತವರು ಕೂಡ ಬ್ರಿಟಿಷರ ಬಾಲಬಡುಕರಾಗಿದ್ದಾರೆ. ದೇಶದ ಬಗ್ಗೆ ಅಭಿಮಾನ ಇಲ್ಲ.  ತಮ್ಮ ಗತವೈಭವದ ಜ್ಞಾನವಿಲ್ಲ. ನಮ್ಮ ಜನರು ಸ್ವಾಭಿಮಾನಿಗಳಾಗಬೇಕು, ದೇಶಾಭಿಮಾನಿಗಳಾಗಬೇಕು, ಒಕ್ಕಟ್ಟಾಗಬೇಕು. ಹೊರಗಿನವರನ್ನು ಹೊಡೆದೋಡಿಸಿ ಬಲಾಢ್ಯ ದೇಶ ಕಟ್ಟಬೇಕು. ಇದಕ್ಕೆ ಮೊದಲು ನಮ್ಮ ಜನರ ಅಜ್ಞಾನ ಹೋಗಬೇಕು. ಆಲಸ್ಯ ಹೋಗಬೇಕು. ನಮ್ಮ ಸಮಾಜದ ಕಂದಾಚಾರಗಳು ಹೋಗಿ ನಾವು ಪ್ರಗತಿಪರರಾಗಬೇಕು.

ವಿಷ್ಣುಶಾಸ್ತ್ರಿ ಚಿಪಳೂಣಕರ್ ಎಂಬವರು ಆಗ ಮಹಾರಾಷ್ಟ್ರದಲ್ಲಿ ಹೆಸರುವಾಸಿಯಾಗಿದ್ದರು. ಅವರು ದೇಶಾಭಿಮಾನವನ್ನು ಉಕ್ಕಿಸುವ ಪ್ರಬಂಧಗಳನ್ನು ಬರೆದು ಪ್ರಕಟಿಸುತ್ತಿದ್ದರು. ತರುಣರನ್ನು ಹುರಿದುಂಬಿಸುತ್ತಿದ್ದರು. ಅವರ ಪ್ರಬಂಧಗಳಿಂದ ಆಗರಕರ್, ತಿಲಕ್ ಇಬ್ಬರೂ ಸ್ಫೂರ್ತಿ ಗೊಂಡಿದ್ದರು. ಶಾಸ್ತ್ರಿಗಳೂ ಮಾಸ್ತರರಾಗಿದ್ದವರೇ. ಆದರೆ ಬಿಳಿಯ ಶಿಕ್ಷಣಾಧಿಕಾರಿಗಳೊಡನೆ ಜಗಳಾಡಿ ರಾಜೀನಾಮೆ ಕೊಟ್ಟು ಹಳ್ಳಿಯಲ್ಲಿದ್ದರು. ಆಗರಕರರೂ ತಿಲಕರೂ ಆಗಾಗ್ಗೆ ಶಾಸ್ತ್ರಿಗಳ ಮನೆಗೆ ಹೋಗುತ್ತಿದ್ದರು. ಮಾತುಕತೆ ನಡೆಸುತ್ತಿದ್ದರು. ಮುಂದಿನ ದಾರಿಯ ಹೊಳಹು ಹಾಕುತ್ತಿದ್ದರು.

ಇದೇ ನನ್ನ ನಿಶ್ಚಯ

ತಿಲಕರು ಎಲ್‌ಎಲ್.ಬಿ. ಆದ ಮೇಲೆ ವಕಾಲತ್ತು ಮಾಡಬೇಕು ಅಥವಾ ಮುನಸೀಫರಾಗಬೇಕೆಂದು ಯೋಚಿಸುತ್ತಿದ್ದರು. ಮುನಸೀಫ್ ಕೆಲಸಕ್ಕೆ ಅರ್ಜಿ ಕೂಡ ಹಾಕಿದ್ದರಂತೆ, ಆದರೆ ಆಗರಕರ್ – ಶಾಸ್ತ್ರಿಗಳ ಪ್ರಭಾವದಿಂದ ಆ ಯೋಚನೆ ಬಿಟ್ಟರು. ಆಗರಕರರಂತೂ ಮೊದಲೇ ಬಡ ತನದ ದೀಕ್ಷೆ ತೊಟ್ಟವರು. ಎಂ.ಎ.ಯಲ್ಲಿದ್ದಾಗ ಅವರು ಕರ‍್ಹಾಡದಲ್ಲಿದ್ದ ತಾಯಿಗೆ ಬರೆದ ಪತ್ರದಲ್ಲಿ ಹೀಗಿತ್ತು:

‘ಅಮ್ಮಾ, “ನಮ್ಮ ಹುಡುಗ ದೊಡ್ಡ ಪರೀಕ್ಷೆಗೆ ಕಟ್ಟುತ್ತಾನೆ. ದೊಡ್ಡ ಸಂಬಳದ ಉದ್ಯೋಗ ಹಿಡಿದು ನಮಗೆ ಸುಖ ಕೊಡುತ್ತಾನೆ” – ಎಂದು ನೀನು ಆಸೆ ಕಟ್ಟಿಕೊಂಡಿದ್ದೀಯೋ ಏನೊ. ಆದರೆ ನಾನು ನಿನಗೆ ಈಗಲೇ ಹೇಳಿಬಿಡುತ್ತೇನೆ – ನಾನು ಹೆಚ್ಚು ಹಣ ಅಥವಾ ಸುಖದ ಹಂಬಲ ಇಟ್ಟುಕೊಳ್ಳುವುದಿಲ್ಲ. ಹೊಟ್ಟೆಗೆ ಬೇಕಾದಷ್ಟು ಮಾತ್ರ ಗಳಿಸಿ ನನ್ನ ಎಲ್ಲ ವೇಳೆಯನ್ನು ಜನಹಿತಕ್ಕಾಗಿ ಕಳೆಯುತ್ತೇನೆ. ಇದೇ ನನ್ನ ನಿಶ್ಚಯ.’

ಆಗರಕರಿಗೆ ಬಿ.ಎ.ಯಲ್ಲಿರುವಾಗಲೇ ಮದುವೆ ಯಾಗಿತ್ತು. ಸಂಸಾರದ ಜವಾಬ್ದಾರಿ ಇತ್ತು. ಆದರೂ ಅವರು ತ್ಯಾಗಕ್ಕೆ ಅಣಿಯಾದರು.

ಶಾಲೆ ಪ್ರಾರಂಭ

ದೇಶ ಉದ್ಧಾರವಾಗ ಬೇಕಾದರೆ ನಮ್ಮ ತರುಣರು ಸಿದ್ಧರಾಗಬೇಕು. ಅವರಿಗೆ ವಿದ್ಯೆ ಕೊಡಬೇಕು. ಬರೇ ವಿದ್ಯೆ ಸಾಲದು. ಅವರಲ್ಲಿ  ದೇಶಾಭಿಮಾನ, ಧೈರ್ಯ, ಉತ್ಸಾಹ, ಸ್ವಾರ್ಥತ್ಯಾಗ ಮೂಡಬೇಕು. ವಿದ್ಯೆಯೊಡನೆ ಈ ಗುಣ ಗಳನ್ನೂ ಕಲಿಸುವ ಶಾಲೆ ತೆರೆದು ಕೆಲಸ ಪ್ರಾರಂಭಿಸಬೇಕು. ಅದರಲ್ಲಿ ಶಿಕ್ಷಕರಾಗಿ ಶಾಸ್ತ್ರಿ, ಆಗರಕರ್, ತಿಲಕರು ದುಡಿಯ ಬೇಕು. ತಮ್ಮಂಥ ಬೇರೆಯವರನ್ನೂ ಸೇರಿಸಿಕೊಳ್ಳ ಬೇಕು. ಎಲ್ಲರೂ ಕಡಿಮೆ ಸಂಬಳ ತೆಗೆದುಕೊಂಡು ಸ್ವಾರ್ಥ ತ್ಯಾಗ ಮಾಡಬೇಕು.

“ಶಾಲೆ ನಡೆಸುವುದೆಂದರೆ ಆಟವಲ್ಲ. ಅದರ ಗೋಜಿಗೆ ಹೋಗಬೇಡಿ. ಮತ್ತೇನಾದರೂ ನೋಡಿ” ಎಂದು ಕೆಲ ಹಿತಚಿಂತಕರು ಹೆದರಿಸಿದರು. ಆದರೂ ಧೈರ್ಯಮಾಡಿ ೧೮೭೯ರ ಅಕ್ಟೋಬರ್ ೧ ರಂದು ಪುಣೆಯಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್’ ಎಂಬ ಹೆಸರಿನಿಂದ ಹೊಸ ಮಾದರಿಯ ಶಿಕ್ಷಣ ಕೊಡುವ ಪ್ರೌಢಶಾಲೆ ಪ್ರಾರಂಭವಾಗಿಯೇ ಬಿಟ್ಟಿತು. ವಾಮನರಾವ್ ಆಪಟೆ ಎಂಬ ಸಂಸ್ಕೃತ ವಿದ್ವಾಂಸರು ಸುಪರಿಂಟೆಂಡೆಂಟ್ ಆಗಿ ಸೇರಿದರು. ಮರುವರ್ಷ ಆಗರಕರರು ಎಂ.ಎ. ಆದೊಡನೆ ಬಂದು ಕೂಡಿಕೊಂಡರು. ಎಲ್ಲರಿಗೂ ಸಮಾನ ಸಂಬಳ, ಅದೂ ಅತಿ ಸ್ವಲ್ಪ. ಆಡಳಿತ ನೋಡಲು ಒಂದು ಸಮಿತಿ.

ಬಿ.ಎ.ಯಲ್ಲಿದ್ದಾಗ ಮಿತ್ರರ ಮುಂದೆ ಹೇಳಿಕೊಂಡದ್ದನ್ನು ಆಗರಕರರು ನಡೆಸಿಕೊಟ್ಟಂತಾಯಿತು. ಅಂದಿನಿಂದ ಮರಣಪರ್ಯಂತ ಅವರು ಶಿಕ್ಷಕರಾಗಿಯೇ ಉಳಿದರು. ನ್ಯೂ ಇಂಗ್ಲಿಷ್ ಸ್ಕೂಲು ಮೊದಲು ಸ್ವಲ್ಪ ಕುಂಟಿತು. ಆಮೇಲೆ ದಿನದಿನಕ್ಕೆ ಜನರ ಮೆಚ್ಚಿಕೆ ಪಡೆಯಿತು. ಅನೇಕ ತ್ಯಾಗಶೀಲ ತರುಣರು ಶಿಕ್ಷಕರಾಗಿ ಸೇರಿದರು. ಆ ಶಾಲೆಯ ಹುಡುಗರಲ್ಲಿ ಶಿಸ್ತು, ದೇಶಪ್ರೇಮ, ಸಚ್ಚಾರಿತ್ರ್ಯ ಎದ್ದು ಕಾಣಿಸುವಂತಿತ್ತು. ದೊಡ್ಡದೊಡ್ಡವರೂ ಮಕ್ಕಳನ್ನೂ ನ್ಯೂ ಇಂಗ್ಲಿಷ್ ಸ್ಕೂಲಿಗೆ ಸೇರಿಸಿದರು. ನ್ಯೂ ಇಂಗ್ಲಿಷ್ ಸ್ಕೂಲ್ ಒಂದು ಮಾದರಿ ಶಾಲೆ ಎನ್ನಿಸಿತು. ಈ ಕೀರ್ತಿಯಲ್ಲಿ ದೊಡ್ಡ ಪಾಲು ಆಗರಕರರಿಗೆ ಸಲ್ಲಬೇಕು.

ಕೇಸರಿ – ಮರಾಠಾ

ಕಿರಿಯರನ್ನು ತರಬೇತು ಮಾಡುವುದಕ್ಕೆ ಶಾಲೆ ಆಯಿತು. ದೊಡ್ಡವರಲ್ಲಿ ದೇಶದ ಬಗ್ಗೆ ಕಾಳಜಿ ಹುಟ್ಟಿಸಬೇಕಲ್ಲ ! ಅದಕ್ಕೆ ಈ ತರುಣರು ಪತ್ರಿಕೆಗಳನ್ನು ಪ್ರಾರಂಭಿಸಿದರು. ೧೮೮೧ರ ಜನವರಿಯಲ್ಲಿ ಪುಣೆಯಲ್ಲಿ ಎರಡು ವಾರಪತ್ರಿಕೆಗಳು ಹೊರಡತೊಡಗಿದವು. ‘ಕೇಸರಿ’ ಮರಾಠಿಯಲ್ಲಿ ; ‘ಮರಾಠಾ’ ಇಂಗ್ಲಿಷ್‌ನಲ್ಲಿ. ‘ಕೇಸರಿ’ಗೆ ಆಗರಕರರು ಸಂಪಾದಕರಾದರು. ‘ಮರಾಠಾ’ಕ್ಕೆ ತಿಲಕರು.

‘ಕೇಸರಿ’ಯ ಹೆಸರು ಕೇಳದವರು ಯಾರು? ನಮ್ಮ ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ಅದರ ಹೆಸರು ಹಾಸು-ಹೊಕ್ಕಾಗಿ ಸೇರಿದೆ. ಲೋಕಮಾನ್ಯ ತಿಲಕರೇ ಅದನ್ನು ಕಟ್ಟಿದರು ಎಂದು ಜನರು ತಿಳಿದಿದ್ದಾರೆ. ಆದರೆ ಅದರ ಮೊದಲಿನ ಏಳು ವರ್ಷಗಳಲ್ಲಿ ಆಗರಕರರೇ ಸಂಪಾದಕರಾಗಿದ್ದರು. ಅವರ ಕಾಲದಲ್ಲಿಯೇ ಅದು ಪ್ರಸಿದ್ಧಿಯಾಗಿತ್ತು.

‘ಕೇಸರಿ’ ಎಂದರೆ ಸಿಂಹ. ಅದರ ಬರಹಗಳು ಸಿಂಹದ ಗರ್ಜನೆಯಂತೆಯೇ ಇದ್ದವು. ಅದು ಸರ್ಕಾರವನ್ನು ನಿರ್ಭಯವಾಗಿ ಟೀಕಿಸುತ್ತಿತ್ತು. ಹಾಗೆಯೇ ಸಮಾಜದ ದೋಷಗಳನ್ನೂ ಸಂಕೋಚವಿಲ್ಲದೆ ಬೆಳಕಿಗೆ ಒಡ್ಡುತ್ತಿತ್ತು. ಆಗರಕರರ ಶೈಲಿ ಮರಾಠಿಯಲ್ಲಿ ಹೊಸ ತರಹದ್ದು. ಆವರೆಗೆ ಇದ್ದದ್ದು ಪಂಡಿತರ ಶೈಲಿ. ಆಗರಕರರೂ ಪಂಡಿತರೇ. ಆದರೆ ಅವರು ಜನಸಾಮಾನ್ಯರಿಗೆ ತಿಳಿಯುವಂತೆ ಬರೆದರು. ಮಾತುಗಳಲ್ಲಿ ಹಾಸ್ಯವಿರುತ್ತಿತ್ತು, ಸ್ವಾರಸ್ಯವಿರುತ್ತಿತ್ತು. ತಿಲಕ್, ಶಾಸ್ತ್ರಿ ಮತ್ತು ಇತರರೂ ‘ಕೇಸರಿ’ಯಲ್ಲಿ ಬರೆಯುತ್ತಿದ್ದರೂ ಆಗರಕರರದೇ ಹಿರಿಯ ಪಾಲು. ಅವರು ‘ಕೇಸರಿ’ಯಲ್ಲಿ ಬರೆ ಯದ ವಿಷಯಗಳೇ ಇಲ್ಲ. ರಾಜಕೀಯ, ಸಮಾಜ ಸುಧಾ ರಣೆ, ಇತಿಹಾಸ, ಕಲೆ, ಸಾಹಿತ್ಯ, ಹಣಕಾಸು, ಕೈಗಾರಿಕೆ – ಎಲ್ಲ ವಿಷಯಗಳ ಬಗೆಗೂ ‘ಕೇಸರಿ’ಯಲ್ಲಿ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ಅದರಲ್ಲಿ ಬಂದ ವಿಷಯಗಳನ್ನು ವಾರವೆಲ್ಲ ಜನರು ಚರ್ಚಿಸುತ್ತಿದ್ದರು. bಮಂಗಳವಾರ ಹೊರಡುವ ‘ಕೇಸರಿ’ಗಾಗಿ ರವಿವಾರದಿಂದಲೇ ಜನರು ಕಾಯುತ್ತಿದ್ದರು.

‘ವರ್ತಮಾನ ಪತ್ರಿಕೆಗಳೆಂದರೆ ರಸ್ತೆಯಲ್ಲಿ ಹಗಲಿರುಳು ಗಸ್ತು ತಿರುಗುವ ಪೊಲೀಸರ ಹಾಗೆ. ಇಂಗ್ಲೆಂಡಿನಲ್ಲಿರುವ ಮಹಾರಾಣಿಯಿಂದ ಹಿಡಿದು ನಮ್ಮೂರಿನ ಚಿಕ್ಕ ಸರ್ಕಾರೀ ನೌಕರನ ವರೆಗೆ ಇಡೀ ಸರ್ಕಾರದ ಕಾರಭಾರವೆಲ್ಲ ಪತ್ರಿಕೆಗಳಿಂದ ಜನರಿಗೆ ತಿಳಿಯುತ್ತದೆ. ಯಾವ ಅನ್ಯಾಯವನ್ನೂ ಸುಲಭವಾಗಿ ಮುಚ್ಚಿಕೊಳ್ಳಲು ಆಗುವುದಿಲ್ಲ’ ಎಂದು ಆಗರಕರರು ‘ಕೇಸರಿ’ಯಲ್ಲಿ ಬರೆದಿದ್ದರು.

ನಿಜವಾದ ಅಪಾಯ

 

ಈ ‘ಗಸ್ತು ಪೊಲೀಸು’ ಕೆಲಸ ಬಹಳ ಅಪಾಯಕರ ವಾದದ್ದು. ಅನ್ಯಾಯವನ್ನು ಬೆಳಕಿಗೆ ತರುವ ಕೆಲಸದಿಂದ ಆಗರಕರರೂ ಜೈಲಿಗೆ ಹೋಗಬೇಕಾಯಿತು. ಅದರ ಕಥೆ ಹೀಗೆ:

ಕೊಲ್ಹಾಪುರ ಆಗ ಮಹಾರಾಷ್ಟ್ರದಲ್ಲಿ ಒಂದು ದೇಶೀ ಸಂಸ್ಥಾನ. (ಸ್ವಾತಂತ್ರ್ಯ ಬಂದನಂತರ ಅದು ಮಹಾರಾಷ್ಟ್ರ ರಾಜ್ಯದಲ್ಲಿ ಸೇರಿಹೋಗಿದೆ.) ಸಂಸ್ಥಾನ ಸಣ್ಣದು. ಆದರೆ ಮರಾಠಿಗರಿಗೆ ಅದರ ಮಹಾರಾಜರ ಮೇಲೆ ಬಹಳ ಅಭಿಮಾನ. ಏಕೆಂದರೆ ಅವರು ಮರಾಠಾ ರಾಜ್ಯ ಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ವಂಶದವರು.

‘ಕೇಸರಿ’ ಪ್ರಾರಂಭವಾದ ಹೊತ್ತಿನಲ್ಲಿ ರಾವ್ ಬಹಾದೂರ್ ಮಹಾದೇವ ವಾಸುದೇವ ಬರ್ವೆ ಎಂಬವರು ಕೊಲ್ಹಾಪುರದ ಆಡಳಿತ ಕಾರಭಾರಿಯಾಗಿದ್ದರು. ಮಹಾರಾಜರು ಎಳೆ ವಯಸ್ಸಿನವರು. ಬರ್ವೆಯವರು ಮಹಾರಾಜರನ್ನು ಗುಲಾಮರಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆಂದೂ ಮಹಾರಾಷ್ಟ್ರದಲ್ಲೆಲ್ಲ ಸುದ್ದಿಗಳು ಹಬ್ಬಿದ್ದವು. ಸ್ವಂತ ಹೆಂಡತಿಯನ್ನು ಕಾಣಲಿಕ್ಕೂ ಮಹಾರಾಜರಿಗೆ ಬರ್ವೆಯವರ ನಿರ್ಬಂಧ ಇತ್ತಂತೆ. ಇದನ್ನು ಕೇಳಿ ಮರಾಠಿಗರಿಗೆಲ್ಲ ಮೈ ಉರಿಯುತ್ತಿತ್ತು. ಬರ್ವೆಯವರ ಮೇಲೆ ಬಗೆಬಗೆಯ ಆರೋಪಗಳನ್ನು ಮಾಡಿ ಕೊಲ್ಹಾಪುರದಿಂದ ‘ಕೇಸರಿ’ ಕಚೇರಿಗೆ ಪತ್ರಗಳು ಬಂದವು. ಸಂಪಾದಕರು ಕೊಲ್ಹಾಪುರವನ್ನು ಬಲ್ಲವರಲ್ಲ. ಬಲ್ಲವರನ್ನು ವಿಚಾರಿಸಿದರು. ಸತ್ಯ ವಿರಬೇಕೆಂದು ಅವರಿಗೆ ತೋರಿತು. ‘ಕೇಸರಿ’ಯಲ್ಲಿ  ಅವುಗಳನ್ನು ಪ್ರಕಟಿಸಿದರು. ಸಂಪಾದಕ ಸ್ವಂತ ಟೀಕೆಗಳನ್ನೂ ಬರೆದರು.

ಬರ್ವೆಯವರು ಮುಂಬಯಿ ಹೈಕೋರ್ಟಿಗೆ ದೂರು ಕೊಟ್ಟರು. ಮಾನಹಾನಿಯ ಕ್ರಿಮಿನಲ್ ಮೊಕದ್ದಮೆ ಆರಂಭವಾಯಿತು. ಸಂಪಾದಕರಾದ ಆಗರಕರರೂ ಪ್ರಕಾಶಕರಾದ ತಿಲಕರೂ ನ್ಯಾಯಾಲಯದ ಮುಂದೆ ಹಾಜರಾಗಬೇಕಾಯಿತು. ಬರ್ವೆಯವರು ಮಹಾರಾಜರನ್ನು ಪೀಡಿಸುತ್ತಿದ್ದದ್ದು ಸತ್ಯವೇ ಆಗಿರಬಹುದು. ಆದರೆ ನ್ಯಾಯಾಲಯದ ಮುಂದೆ ಅದನ್ನು ಸಾಬೀತು ಮಾಡಲು ಸಂಪಾದಕರಿಗೆ ಸಾಧ್ಯವಾಗಲಿಲ್ಲ. ಅಲ್ಲದೆ ಸಂಪಾದಕರು ನಂಬಿದ್ದ ಕೆಲವರು ಸುಳ್ಳು ಆರೋಪಗಳನ್ನು ಮಾಡಿದ್ದರೆಂದೂ ಗೊತ್ತಾಯಿತು. ಅದಕ್ಕಾಗಿ ಇಬ್ಬರೂ ಕ್ಷಮೆ ಕೇಳಿದರು. ಆದರೆ ಸಂಪಾದಕರು ಜಾಗ್ರತೆ ವಹಿಸಬೇಕಾಗಿತ್ತು ಎಂದು ನ್ಯಾಯಾಧೀಶರು ಅವರಿಗೆ ೧೦೧ದಿನಗಳ ಶಿಕ್ಷೆ ವಿಧಿಸಿ ಜೈಲಿಗೆ ಕಳಿಸಿದರು.

೧೦೧ ದಿನಗಳ ಈ ಜೈಲುವಾಸವನ್ನು ಆಗರಕರರು ‘ಅತ್ತೇ ಮನೆ ವಾಸ’ ಎಂದು ‘ಕೇಸರಿ’ಯಲ್ಲಿ ತಮಾಷೆಯಾಗಿ ವರ್ಣಿಸಿದ್ದಾರೆ. ಈ ‘ಅತ್ತೇ ಮನೆ ವಾಸ’ ಮುಗಿಸಿ ಜೈಲಿನಿಂದ ಹೊರಬಂದದ್ದು ೧೮೮೨ರ ಅಕ್ಟೋಬರ್‌ನಲ್ಲಿ. ಅಷ್ಟರಲ್ಲಿ ಆಗರಕರ್-ತಿಲಕರು ಮಹಾರಾಷ್ಟ್ರದಲ್ಲೆಲ್ಲ ವೀರರೆನಿಸಿ ಬಿಟ್ಟಿದ್ದರು. ಜೈಲಿನ ಬಾಗಿಲಲ್ಲಿ ನೂರಾರು ಜನರು ಹಾರಗಳನ್ನು ಹಿಡಿದುಕೊಂಡು ಕಾಯುತ್ತಿದ್ದರು. ಅವರಲ್ಲಿ ಎಲ್ಲ ಜಾತಿಯವರೂ ಇದ್ದರು. ಕಂಡಕಂಡಲ್ಲಿ ಅವರಿಗೆ ಸನ್ಮಾನಗಳಾದವು. ಕೊಲ್ಹಾಪುರದ ರಾಜಾರಾಮ ಕಾಲೇಜಿನ ವಿದ್ಯಾರ್ಥಿಗಳು ಒಂದು ನಾಟಕ ಆಡಿ ಹಣ ಕೂಡಿಸಿ ಮುಂಬಯಿಗೆ ಬಂದು ಹಮ್ಮಿಣಿ ಅರ್ಪಿಸಿದರು. ‘ಕೇಸರಿ’ಯ ಗೌರವ ಹೆಚ್ಚಿತು. ಬರ್ವೆಯವರನ್ನು ಜನರು ಶಪಿಸಿದರು.

ಕಾಲೇಜ್

ಸೆರೆಮನೆಯಲ್ಲಿರುವಾಗಲೂ ಇವರಿಗೆ ದೇಶದ್ದೇ ಚಿಂತೆ. ಆಗರಕರರು ತಮ್ಮ ಸೆರೆಮನೆಯ ಅನುಭವಗಳನ್ನು ಒಂದು ಚಿಕ್ಕ ಪುಸ್ತಕದಲ್ಲಿ ವಿವರಿಸಿದ್ದಾರೆ. ಏನಾದರಾಗಲಿ, ದೇಶಕ್ಕಾಗಿ ಹೋರಾಡಲೇಬೇಕು. ಅದಕ್ಕಾಗಿ ಇನ್ನಷ್ಟು ಸಲ ಜೈಲಿಗೆ ಹೋದರೂ ಸರಿಯೇ ಎಂದು ಪ್ರತಿಜ್ಞೆ ಮಾಡಿದರು.

ಜೈಲಿನಿಂದ ಹೊರಗೆ ಬಂದ ಆಗರಕರರಿಗೆ ಮತ್ತಷ್ಟು ಕೆಲಸದ ಭಾರ. ಆ ವರ್ಷದ ಪ್ರಾರಂಭದಲ್ಲಿಯೇ ಹಿರಿಯ ಸಹಕಾರಿಗಳಾದ ಶಾಸ್ತ್ರಿಗಳು ತೀರಿಹೋಗಿದ್ದರು. ಅದರಿಂದ ಶಾಲೆಯಲ್ಲಿ ಮತ್ತು ‘ಕೇಸರಿ’ಯಲ್ಲಿ ಇವರಿಗೆ ಇನ್ನಷ್ಟು ಹೊಣೆ. ಆದರೆ ಜೊತೆಗಾರರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಅದರಿಂದ ಆಗರಕರ್- ತಿಲಕರಿಗೂ ಹುಮ್ಮಸ್ಸು. ‘ಶಾಲೆಯಂತೆ ಒಂದು ಕಾಲೇಜನ್ನೂ ತೆರೆಯಿರಿ’ ಎಂದು ಜನರ ಒತ್ತಾಯ ಬಂತು. ಅದಕ್ಕೊಂದು ಯೋಜನೆ ಹಾಕಿದರು. ೧೮೮೪ರಲ್ಲಿ ಕಾಲೇಜು ನಡೆಸುವುದಕ್ಕೆ ‘ಡೆಕ್ಕನ್ ಎಜ್ಯುಕೇಷನ್ ಸೊಸೈಟಿ’ ಎಂಬ ಸಂಸ್ಥೆ ಸ್ಥಾಪಿಸಿದರು. ಮರುವರ್ಷ ‘ಫರ್ಗ್ಯುಸನ್ ಕಾಲೇಜ್’ ಎಂಬ ಹೆಸರಿಂದ ಕಾಲೇಜು ಆರಂಭವಾಯಿತು. ವಾಮನರಾವ್ ಆಪಟೆ ಪ್ರಿನ್ಸಿಪಾಲರು. ಗೋಪಾಲ ಗಣೇಶ ಆಗರಕರರು ವೈಸ್ ಪ್ರಿನ್ಸಿಪಾಲರು. ೧೮೯೨ರಲ್ಲಿ ಆಪಟೆಯವರ ನಿಧನಾನಂತರ ಆಗರಕರರೇ ಪ್ರಿನ್ಸಿಪಾಲರಾದರು. ಅವರು ಅಲ್ಲಿ ತಮಗೆ ಪ್ರಿಯವಾದ ಇತಿಹಾಸ ಮತ್ತು ತರ್ಕಶಾಸ್ತ್ರದ ಪಾಠ ಹೇಳುತ್ತಿದ್ದರು.

ಶಾಲೆಯಂತೆ ಕಾಲೇಜೂ ಬೆಳಗಿತು. ಅದರ ವಿದ್ಯಾರ್ಥಿಗಳಿಗೆ ಪ್ರತಿವರ್ಷವೆಂಬಂತೆ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಬಹುಮಾನಗಳೂ ಸ್ಕಾಲರ್‌ಷಿಪ್‌ಗಳೂ ಸಿಗುತ್ತಿದ್ದವು. ಫರ್ಗ್ಯುಸನ್ ಕಾಲೇಜಿನಲ್ಲಿ ಕಲಿತು ಬಂದವರು ಮುಂದೆ ಜೀವನದಲ್ಲಿ ಮಹತ್ಕಾರ್ಯಗಳನ್ನು ಸಾಧಿಸಿದರು, ದೇಶಸೇವೆ ಮಾಡಿದರು. ಇದಕ್ಕಾಗಿ ಆಗರಕರರಿಗೆ ತುಂಬಾ ಕೀರ್ತಿ ಸಲ್ಲಬೇಕು. ತಮ್ಮ ಸಹಕಾರಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಪ್ರೀತಿ, ವಿಶ್ವಾಸ, ಹುರುಪು ತುಂಬುವ ಶಕ್ತಿ ಆಗರಕರರಲ್ಲಿತ್ತು.

ಫರ್ಗ್ಯುಸನ್ ಕಾಲೇಜು ಸುಲಭವಾಗಿ ಅಭಿವೃದ್ಧಿಗೆ ಬರಲಿಲ್ಲ. ಅಲ್ಲಿ ದೇಶಾಭಿಮಾನ ಕಲಿಸುತ್ತಾರೆಂದು ಸರ್ಕಾರದ ಬಿಳಿಯ ಅಧಿಕಾರಿಗಳಿಗೆ ಕೋಪ. ಅವರು ಬಗೆಬಗೆಯ ಕೀಟಲೆ ಕೊಟ್ಟರು. ಧನಸಹಾಯ ತಡೆಹಿಡಿದರು. ಇದೊಂದಕ್ಕೂ ಆಪಟೆ-ಆಗರಕರರು ಮಣಿಯಲಿಲ್ಲ. ‘ನಮ್ಮ ವಿದ್ಯಾ ಸಂಸ್ಥೆಗಳು ಅಗತ್ಯ ಬಿದ್ದರೆ ಸರ್ಕಾರದ ಸಹಾಯವಿಲ್ಲದೆ ಸ್ವಂತ ಬಲದಿಂದ ಬದುಕಬೇಕು. ಹಾಗಿದ್ದರೇನೇ ಅವುಗಳ ಸ್ವಾತಂತ್ರ್ಯ ಉಳಿದೀತು’ ಎಂದು ತಮ್ಮ ಪತ್ರಿಕೆ ‘ಸುಧಾರಕ’ದಲ್ಲಿ  ಆಗರಕರರು ಬರೆದರು. ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಕಾಲೇಜು ಅಧ್ಯಾಪಕರನ್ನು ಹುರಿದುಂಬಿಸಿದರು. ಸರ್ಕಾರ ಕಡೆಗೆ ಸರಿದಾರಿಗೆ ಬಂತು. ೧೮೯೫ರಲ್ಲಿ ಗವರ್ನರರು ಕಾಲೇಜಿನ ಸಮಾರಂಭಕ್ಕೆ ಬಂದರು; ಭಾರತೀಯರ ಕರ್ತೃತ್ವ ಶಕ್ತಿಯನ್ನು ಹೊಗಳಿದರು.

ಗುರು

ಆಗರಕರರು ಶ್ರೇಷ್ಠ ಶಿಕ್ಷಕರೂ ಪ್ರಾಧ್ಯಾಪಕರೂ ಆಗಿದ್ದರು. ಅವರು ಪಾಠ ಹೇಳುವುದರಲ್ಲಿ ನಿಸ್ಸೀಮರು. ಯಾವ ವಿಷಯವನ್ನೂ ಸುಲಭ ಮಾತುಗಳಲ್ಲಿ ವಿವರಿಸುತ್ತಿದ್ದರು. ವಿದ್ಯಾರ್ಥಿಗಳು ಅಧಿಕಪ್ರಸಂಗದ ಪ್ರಶ್ನೆ ಕೇಳಿದರೂ ಸಿಟ್ಟಾಗುತ್ತಿರಲಿಲ್ಲ. ಒಮ್ಮೆ ಅವರು ಹಿಂದುಗಳ ಕುರುಡು ನಂಬಿಕೆಗಳನ್ನು ತರಗತಿಯಲ್ಲಿ ಟೀಕಿಸುತ್ತಿದ್ದರು. ಒಬ್ಬ ವಿದ್ಯಾರ್ಥಿ ಎದ್ದುನಿಂತು ಕೇಳಿದ :

“ಸರ್, ನೀವು ನಮಗೆ ಹೀಗೆಲ್ಲ ಬೋಧಿಸುತ್ತೀರಿ. ಆದರೆ ನಿನ್ನೆ ನಿಮ್ಮ ಹೆಂಡತಿ ತುಳಸೀಪೂಜೆ ಮಾಡುವುದನ್ನು ನಾನು ನೋಡಿದೆ. ಅದು ಕಂದಾಚಾರವಲ್ಲವೆ?”

ಪ್ರೊಫೆಸರ್ ಆಗರಕರ್ ನಕ್ಕರು “ನೀನು ಹೇಳೋದು ನಿಜ. ಅವಳು ಹಳೇ ಸಂಪ್ರದಾಯದವಳು. ನಾನು ನಿಮ್ಮ ಹಾಗೆ ಅವಳಿಗೂ ಹೇಳುತ್ತೇನೆ. ಅವಳು ರೂಢಿ ಬಿಡುವುದಿಲ್ಲ. ಏನು oಮಾಡಲಿ ? ಅಷ್ಟೂ ಮೀರಿ ನನಗೆ ಅವಳನ್ನು ಬಲಾತ್ಕಾರ ಮಾಡಲು ಅಧಿಕಾರವುಂಟೆ ?” ಎಂದರು. ವಿದ್ಯಾರ್ಥಿ ತೆಪ್ಪಗಾದ.

ಹೌದು, ಅವರ ಹೆಂಡತಿ ಯಶೋದಾಬಾಯಿ ಹಳೇ ನಂಬಿಕೆಯ ಸಾಧ್ವಿ. ಮದುವೆಯಾಗಿ ಬಂದಾಗ ಅವರಿಗೆ ಓದು ಬರಹವೂ ಬರುತ್ತಿರಲಿಲ್ಲ. ಆಗರಕರರು ಅವರಿಗೆ ಪ್ರಯತ್ನಪೂರ್ವಕ ಕಲಿಸಿದರು.  ಹೊಸ ವಿಚಾರಗಳನ್ನು ತಿಳಿಹೇಳಿದರು. ಯಶೋದಾಬಾಯಿಯೊಡನೆ ಆಗರಕರರ ದಾಂಪತ್ಯ ತುಂಬಾ ಸುಖವಾಗಿತ್ತು. ಆದರೆ ಅವರ ನಂಬಿಕೆಗಳು ಸಡಿಲಾಗಲಿಲ್ಲ.

ಆಗರಕರರು ತಪ್ಪು ಮಾಡಿದವರನ್ನು ದಂಡಿಸದೆ ಅವರನ್ನು ಸನ್ಮಾರ್ಗಕ್ಕೆ ತರುವ ಗುರುಗಳಾಗಿದ್ದರು. ಒಂದು ಸಲ ಕೆಲ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗಾಂಜಾ ಸೇದುತ್ತಾರೆಂದು ಅವರಿಗೆ ತಿಳಿಯಿತು. ಹೊಂಚುಹಾಕಿ ಹಿಡಿದೂಬಿಟ್ಟರು. ತಪ್ಪುಗಾರರು ನಾಚಿ ತಲೆಬಾಗಿದರು. ಗಾಂಜಾದಂಥ ಮಾದಕ ಪದಾರ್ಥದಿಂದ ಆಗೋಗ್ಯದ ಮೇಲೆ ಏನೇನು ಕೆಟ್ಟ ಪರಿಣಾಮವಾಗುತ್ತದೆಂದು ಈ ಗುರುಗಳು ವಿವರಿಸಿದರು. ಅವರನ್ನು ದಂಡಿಸಲಿಲ್ಲ. ತಪ್ಪುಗಾರರು ಮತ್ತೆ ತಪ್ಪು ಮಾಡಲಿಲ್ಲ.

ದುರದೃಷ್ಟದ ಮನಸ್ತಾಪ

ಫರ್ಗ್ಯುಸನ್ ಕಾಲೇಜು ಪ್ರಗತಿ ಹೊಂದುತ್ತಿತ್ತು. ಆದರೆ ಅಷ್ಟರಲ್ಲಿ ಆಗರಕರರಿಗೂ ತಿಲಕರಿಗೂ ಮನಸ್ತಾಪ ಬಂತು. ಸಮಾಜ ಸುಧಾರಣೆಯ ಪ್ರಶ್ನೆಯೇ ಇದಕ್ಕೆ ಕಾರಣವಾಗಿತ್ತು. ಹಿಂದು ಸಮಾಜದಲ್ಲಿ ಪೂರಾ ಸುಧಾರಣೆಯಾಗಬೇಕು, ಜಾತಿಪದ್ಧತಿ ಹೋಗಬೇಕು, ಇದನ್ನು ಕಾನೂನು ಮಾಡಿಯಾದರೂ ಸಾಧಿಸಬೇಕು ಎನ್ನುವುದು ಆಗರಕರರ ದೃಷ್ಟಿ.

ತಿಲಕರೂ ಹಿಂದುಸಮಾಜದ ಸುಧಾರಣೆ ಆಗಬೇಕೆನ್ನುವವರೇ. ಆದರೆ ನಾವು ಮೊದಲು ಬ್ರಿಟಿಷ್ ಆಳರಸರನ್ನು ಇಲ್ಲಿಂದ ತೊಲಗಿಸಬೇಕು. ಇದಕ್ಕೆ ನಮ್ಮಲ್ಲಿ ಒಗ್ಗಟ್ಟು ಬೇಕು. ಈಗಲೇ ಸಮಾಜ ಸುಧಾರಣೆಯಾಗಬೇಕು ಎಂದು ನಾವು ಗಲಾಟೆ ಮಾಡಿದರೆ ಒಗ್ಗಟ್ಟು ಮುರಿಯುತ್ತದೆ. ಬ್ರಿಟಿಷರೊಡನೆ ಹೋರಾಡುವುದು ಕಷ್ಟವಾಗುತ್ತದೆ. ಸ್ವರಾಜ್ಯ ಬಂದ ಮೇಲೆ ಸುಧಾರಣೆ ಮಾಡಿಕೊಳ್ಳುವಾ – ಇದು ತಿಲಕರ ಅಭಿಪ್ರಾಯ.

ತಿಲಕರಿಗೆ ಸ್ವರಾಜ್ಯ ಮುಖ್ಯ. ಆಗರಕರರಿಗೆ ಸ್ವರಾಜ್ಯ ಬೇಕು, ಆದರೆ ನಮ್ಮ ಸಮಾಜದಲ್ಲಿ ಹೆಂಗಸರಿಗೆ, ಕೆಳಜಾತಿಯವರಿಗೆ ಆಗುವ ಅನ್ಯಾಯ ನಿವಾರಣೆಯಾಗು ವುದು ಮುಖ್ಯ.

೧೮೮೪ರಲ್ಲಿ ಆರಂಭವಾದ ಈ ಮತಭೇದ ಹೆಚ್ಚುತ್ತ ಹೋಯಿತು. ಕಡೆಗೆ ಆಗರಕರರು ‘ಕೇಸರಿ’ಯನ್ನು ೧೮೮೭ ರಲ್ಲಿ ಬಿಟ್ಟು ಹೊರಬಂದರು. ತಿಲಕರು ಸಂಪಾದಕರಾದರು. ಕಾಲೇಜಿನಲ್ಲಿ ಆಗರಕರರಿಗೆ ಬೆಂಬಲ ಇತ್ತು. ಅದನ್ನು ಸಹಿಸದೆ ತಿಲಕರು ಕಾಲೇಜಿನಿಂದ ಹೊರಬಿದ್ದರು.

ಸುಧಾರಕ

ತಿಲಕರಂಥ ಜನಪ್ರಿಯ ಧುರೀಣರು ಹೊರಬಿದ್ದದ್ದ ರಿಂದ ಕಾಲೇಜಿಗೆ ಪೆಟ್ಟು ಬೀಳಬಹುದೆಂಬ ಭಯವಿತ್ತು. ಹಾಗಾಗಲಿಲ್ಲ, ಆಗರಕರರ ಜವಾಬ್ದಾರಿ ಹೆಚ್ಚಾಯಿತು ಮಾತ್ರ. ಇತ್ತ ಆಗರಕರರು ತಮ್ಮ ವಿಚಾರಗಳ ಪ್ರಚಾರಕ್ಕಾಗಿ ‘ಸುಧಾರಕ’ ಎಂಬ ಹೊಸವಾರ ಪತ್ರಿಕೆಯನ್ನು ೧೮೮೮ರಲ್ಲಿ ಪ್ರಾರಂಭಿಸಿದರು.

ಆಗರಕರರ ಕ್ರಾಂತಿಕಾರಕ ವಿಚಾರಗಳು ಜನರಿಗೆ ಹಿಡಿಸುವುದಿಲ್ಲ, ಅವರ ಪತ್ರಿಕೆಯ ಹತ್ತು ಪ್ರತಿಗಳೂ ಮಾರಾಟವಾಗಲಿಕ್ಕಿಲ್ಲ ಎಂದು ಕೆಲವರು ಆಡಿಕೊಂಡರು. ಸನಾತನಿಗಳು ‘ಸುಧಾರಕ’ವನ್ನು ಓದಬೇಡಿ ಎಂದು ಪ್ರಚಾರ ಮಾಡಿದರು. ‘ನಿಮಗೆ ಬಿಸಿ ತಗಲಿಸುತ್ತೇವೆ, ನೋಡಿಕೊಳ್ಳಿ’ ಎಂದು ಹೇಳಿ ಕಳಿಸಿದರು. ಆಗರಕರರಿಗೆ ತಿಲಕರ ಹಾಗೆ ಧನಬಲ ಇರಲಿಲ್ಲ ; ಜನಜಂಗುಳಿಯ ಬಲವೂ ಇರಲಿಲ್ಲ. ವಿಚಾರವಂತರು ಮಾತ್ರ ಅವರನ್ನು ಅನುಸರಿಸುತ್ತಿದ್ದರು. ಆದರೂ ಆಗರಕರರು ಹಿಂಜರಿಯದೆ ‘ಯಾರಿಗೆ ಯಾರು ಬಿಸಿ ತಗಲಿಸುತ್ತಾರೆ ನೋಡುವಾ’ ಎಂದು ಮರುಮಾತು ಕಳಿಸಿದರು. ಮೊದಲ ವರ್ಷ ‘ಸುಧಾರಕ’ಕ್ಕೆ ಬರೇ ೬೫೦ ಚಂದಾದಾರರಿದ್ದರು. ಎರಡನೆಯ ವರ್ಷದಿಂದ ಚಂದಾದಾರರ ಸಂಖ್ಯೆ ಬೆಳೆಯಿತು. ಕೆಲಕಾಲದಲ್ಲೇ ಅದು ‘ಕೇಸರಿ’ಗೆ ಸರಿ ಮಿಗಿಲೆನಿಸಿತು. ‘ಅದನ್ನು ಓದಬೇಡಿ’ ಎಂದು ಹೇಳುತ್ತಿದ್ದ ಸನಾತನಿಗಳು ಕದ್ದುಮುಚ್ಚಿ ಓದತೊಡಗಿದರು.

ತಿಲಕರನ್ನು ಬಿಡದ ಹೃದಯ

‘ಸುಧಾರಕ’ ಆರಂಭವಾದ ಮೇಲೆ ಆಗರಕರ್-ತಿಲಕರ ಸ್ನೇಹ ಕೊನೆಗೊಂಡಿತು. ಇದು ಮಹಾರಾಷ್ಟ್ರದ ಈಚೆಗಿನ ಇತಿಹಾಸದ ಒಂದು ದಾರುಣ ಪ್ರಸಂಗ. ಇಬ್ಬರೂ ಮಹಾಪುರುಷರು, ಇಬ್ಬರೂ ದೇಶಪ್ರೇಮಿಗಳು, ಇಬ್ಬರೂ ಒಂದು ಕಾಲದಲ್ಲಿ  ಆಪ್ತ ಮಿತ್ರರು. ನಿಜವಾಗಿ ನೋಡಿದರೆ ಹಿಂದುಸಮಾಜದಲ್ಲಿ ಸುಧಾರಣೆ ಬೇಕೆಂಬ ಬಗ್ಗೆ ಅವರಲ್ಲಿ ಮತಭೇದವಿರಲಿಲ್ಲ. ಆದರೂ ‘ಕೇಸರಿ’ಗೂ ‘ಸುಧಾರಕ’ಕ್ಕೂ ವರ್ಷಾನುಗಟ್ಟಳೆ ವಾಗ್ಯುದ್ಧವಾಯಿತು. ಮಾತಿನ ಪೆಟ್ಟು ಒಮ್ಮೊಮ್ಮೆ ಬಹಳ ಉಗ್ರವಾಗಿರುತ್ತಿತ್ತು.

ಎಷ್ಟೇ ತತ್ತ್ವನಿಷ್ಠುರರಾದರೂ ಆಗರಕರರ ಮನಸ್ಸು ಮೃದು. ತಿಲಕರು ತಮ್ಮ ಹಳೇ ಗೆಳೆಯ, ಸಹಕಾರಿ, ಸಹ ದುಃಖಿ. ಅವರೊಡನೆ ಆದ ಮನಸ್ತಾಪ ಅವರಿಗೆ ಜೀವಮಾನವೆಲ್ಲ ಚುಚ್ಚುತ್ತಿತ್ತು. ಮೃತ್ಯುಶಯ್ಯೆಯಲ್ಲಿ ಮಲಗಿದ್ದಾಗ ಅವರು ‘ತಿಲಕರೊಡನೆ ಕೊಂಕು ಉಳಿಸಿಕೊಂಡು ನಾನು ಶಾಂತವಾಗಿ ಸಾಯಲಾರೆ’ ಎಂದು ಹೇಳುತ್ತಿದ್ದರಂತೆ. ಕಡೆಗೆ ತಿಲಕರು ಬಂದರು, ಮಾತಾಡಿ ಹೋದರು. ‘ತಿಲಕರು ಅತ್ತ ಹೋದರು, ಇವರ ಜೀವ ಇತ್ತ ಹೊರಟುಹೋಯಿತು’ ಎಂದು ಆಗರಕರರ ಪತ್ನಿ ಕಣ್ಣೀರಿಟ್ಟು ಹೇಳುತ್ತಿದ್ದರು.

ಇದೇ ನನ್ನ ಧರ್ಮ

ಆಗರಕಕರ ಜೀವನ ಒಂದು ಜ್ಞಾನಯಜ್ಞವಾಗಿತ್ತು. ಒಂದು ಕಡೆ ಶಿಕ್ಷಕರಾಗಿ ಅವರು ಎಳೆಯರಿಗೆ ಜ್ಞಾನದಾನ ಮಾಡಿದರು. ಇನ್ನೊಂದು ಕಡೆ ತಮ್ಮ ಅಪಾರ ಬರವಣಿಗೆಗಳಿಂದ ಹಿರಿಯರ ಕಣ್ಣುಗಳಿಗೆ ಅಂಜನ ಹಚ್ಚಿದರು.

ಭಾರತ ಹಾಳಾದದ್ದು ಹೇಗೆ? ಸಾವಿರ ವರ್ಷಗಳಿಂದ ನಾವು ಯಾಕೆ ಪರಕೀಯರ ಕೈಲಿ ಸೋತು ದಾಸರಾಗಿ

ದ್ದೇವೆ ? ಇದಕ್ಕೆ ಆಗರಕರರ ಉತ್ತರ : ‘ನಾವು ಸ್ವಂತ ವಿಚಾರ ಮಾಡುವುದನ್ನು ಬಿಟ್ಟೆವು. ಹಳೆಯದೆಲ್ಲ ಒಳ್ಳೆಯದೆಂದು ನಂಬಿದೆವು. ಸ್ವಂತ ವಿಚಾರ ಮಾಡಿದವರು  ನಮಗಿಂತ ಮುಂದೆ ಹೋದರು ; ನಾವು ಕೆಳಗೆ ಬಿದ್ದೆವು.’

ಆಗರಕರರಿಗೆ ದೇವರ ನಂಬಿಕೆ ಮುಖ್ಯವಾಗಿರಲಿಲ್ಲ. ‘ಮನುಷ್ಯನು ಈ ಲೋಕದಲ್ಲಿ ಸುಖಪಡುವಂತಾಗಬೇಕು. ಇದೇ ನನ್ನ ಧರ್ಮ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಮನುಷ್ಯನ ಸುಖಕ್ಕೆ ಹಿತಕರವಾದದ್ದು ನೀತಿ, ಅಹಿತಕರವಾದದ್ದು ಅನೀತಿ. ಇನ್ನೊಬ್ಬರಿಗೆ ಅಹಿತ ಮಾಡದೆ ತಾನು ಸುಖಪಡುವವನು ಧಾರ್ಮಿಕ.

ಅನ್ಯಾಯವನ್ನು ಆಗರಕರರು ದ್ವೇಷಿಸುತ್ತಿದ್ದರು. ಶಾಸ್ತ್ರದ ಹೆಸರಲ್ಲಿ ಆಗ ಸ್ತ್ರೀಯರಿಗೆ ಬಹಳ ಅನ್ಯಾಯವಾಗುತ್ತಿತ್ತು. ಹುಡುಗಿಯರಿಗೆ ವಿದ್ಯೆ ಇಲ್ಲ. ಎಂಟು-ಒಂಬತ್ತು ವರ್ಷಕ್ಕೆ ಮದುವೆ. ಆಮೇಲೆ ಅತ್ತೆಮನೆಯ ಗುಲಾಮಗಿರಿ. ಲೆಕ್ಕವಿಲ್ಲದಷ್ಟು ಬಾಲವಿಧವೆಯರು. ಅವರು ಇದ್ದೂ ಸತ್ತಂತೆ. ಗಂಡ ಸತ್ತರೆ ಹೆಂಡತಿಯ ಕೂದಲು ತೆಗೆಸುತ್ತಿದ್ದರು. ಅದು ಹೋಗಲಿ, ಪುಣೆಯಂಥ ವಿದ್ಯಾವಂತರ ಊರಿನಲ್ಲಿ ನಗರಸಭೆಯ ಶಾಲೆಯ ಉಪಾಧ್ಯಾಯಿನಿಯರು ಮಳೆಗೆ ಬಟ್ಟೆಯ ಕೊಡೆ ಹಿಡಿಯಬಾರದು, ಬಿಸಿಲಿಗೆ ಚಪ್ಪಲಿ ತೊಡಬಾರದು  ಎನ್ನುವ ರೂಢಿ ಇತ್ತು ಅಂದರೆ ನೀವು ನಂಬಲಾರಿರಿ.

ಅನ್ಯಾಯದ ವಿರುದ್ಧ ಹೋರಾಟ

ಈ ಘೋರ ಅನ್ಯಾಯಗಳ ಮೇಲೆ ಆಗರಕರರು ಗದೆ ಎತ್ತಿದರು. ಸ್ತ್ರೀಯರಿಗೆ ಸಮಾಜ ಹಕ್ಕು ಬೇಕು, ಹುಡುಗರಂತೆ ಶಿಕ್ಷಣ ಬೇಕು ಎಂದರು. ಪ್ರಾಯ ಬಾರದೆ ಅವರಿಗೆ ಮದುವೆ ಮಾಡದಂತೆ ಸರ್ಕಾರ ಕಾನೂನು ಮಾಡಬೇಕು ಎಂದರು. ವಿಧವೆಯರಿಗೆ ಪುನರ್ವಿವಾಹದ ಹಕ್ಕು ಕೊಡುವ ಕಾನೂನು ಬರಲಿ ಎಂದರು.

ಜಾತಿಭೇದ ಇರುವಷ್ಟು ಕಾಲ ದೇಶಕ್ಕೆ ಏಳಿಗೆ ಇಲ್ಲವೆಂದು ನೂರು ವರ್ಷ ಹಿಂದೆಯೇ ಹೇಳಿದವರು ಆಗರಕರರು.

ನಮ್ಮ ಶಾಸ್ತ್ರ, ನಮ್ಮ ಧರ್ಮ, ನಮ್ಮ ತತ್ತ್ವಜ್ಞಾನ, ನಮ್ಮ ಪೂರ್ವಜರ ವಿದ್ಯೆ ಇವೆಲ್ಲ ಜಗತ್ತಿನಲ್ಲೇ ಶ್ರೇಷ್ಠ ಎನ್ನುವವರನ್ನು ಲೇವಡಿ ಮಾಡಿದರು. ‘ಹಿಂದಿನದಾಯಿತು, ಇಂದು ನಿಮ್ಮ ಸ್ಥಿತಿ ಏನು?’ ಎಂದು ಕೇಳಿದರು. ‘ಮುತ್ತಜ್ಜ ಕೋಟ್ಯಾಧೀಶ, ಮೊಮ್ಮಗ ಭಿಕ್ಷುಕ !’ ಎಂದರು.

ಶಾಸ್ತ್ರಗಳ ಮೇಲೆ, ಕಂದಾಚಾರಗಳ ಮೇಲೆ ಆಗರಕರರ ದಾಳಿ ಸನಾತನಿಗಳಿಗೆ ತಡೆಯಲಿಲ್ಲ. ಅವರು ಆಗರಕರರ ಜೀವ ತೆಗೆಯುವುದಾಗಿ ಬೆದರಿಕೆ ಪತ್ರ ಬರೆದರು. ಆಗರಕರರು ನಿಶ್ಚಿಂತೆಯಿಂದ ಎಂದಿನಂತೆ ರಾತ್ರಿ ವಾಯುಸಂಚಾರ ಹೋಗುತ್ತಲೇ ಇದ್ದರು. ಅವರಿಗೆ ಜನರು ಬಹಿಷ್ಕಾರ ಹಾಕಿದಂತೆ ಮಾಡಿದರು. ಆಗರಕರರು ಜಪ್ಪೆನ್ನಲಿಲ್ಲ. ೧೮೯೧ರಲ್ಲಿ ಒಂದು ದಿನ ಈ ಜನರು ಆಗರಕರರ ‘ಜೀವಂತ ಸ್ಮಶಾನಯಾತ್ರೆ’ ಹೊರಡಿಸಿದರು. ಅವರ ಪ್ರತಿಮೆ ಮಾಡಿ ಚಟ್ಟಕಟ್ಟಿ ಮೆರವಣಿಗೆ ತೆಗೆದರು. ಅವರ ಕಣ್ಮುಂದೆಯೇ ಅದರ ದಹನಮಾಡಿ ಸಂತೋಷಪಟ್ಟರು !

ಜನರನ್ನು ತಿದ್ದಬೇಕೆಂದು ಹೊರಟವರಿಗೆ ಸಿಗುವ ಪ್ರತಿಫಲ ಇದೇ !

ವ್ಯಕ್ತಿತ್ವದ ಇನ್ನೊಂದು ಮುಖ

ಆದರೆ ಆಗರಕರರು ಹಿಂದುತ್ವವನ್ನು ನಾಶಮಾಡ ಬಯಸಲಿಲ್ಲ. ‘ಆರ್ಯ ಸಂಸ್ಕೃತಿಯಲ್ಲಿ ಉಜ್ವಲ ಅಂಶಗಳಿವೆ. ಅವು ಶಾಶ್ವತವಾಗಿ ಉಳಿಯುತ್ತವೆ’ ಎಂದು ಬರೆದಿದ್ದರು. ಹಿಂದು ವಿಧವೆಯರನ್ನು ಸೇವಾಶ್ರಮಕ್ಕೆ ಆಕರ್ಷಿಸಿ ಕ್ರೈಸ್ತಧರ್ಮಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಆಯಿತು. ಅದನ್ನು ಆಗರಕರ್ ವಿರೋಧಿಸಿದ್ದರು.

ಸಂಸ್ಕೃತ, ಮರಾಠಿ ಕಾವ್ಯ-ನಾಟಕಗಳ ಭಕ್ತರು ಅವರು. ಭವಭೂತಿ ಕವಿ ಅವರಿಗೆ ಬಹಳ ಪ್ರಿಯ. ನಾಸ್ತಿಕ ಎಂದು ಅವರಿಗೆ ಹೆಸರಿತ್ತು. ಆದರೆ ಊರಿಗೊಬ್ಬ ಹರಿದಾಸ ಬಂದರೆ ಸೈ. ಅವನ ಕೀರ್ತನೆ ಯಾವ ದೇವಾಲಯದಲ್ಲಿರಲಿ, ಅಲ್ಲಿ ಆಗರಕರ್ ಹಾಜರ್. ಹಿಂದು ಸಂಸ್ಕೃತಿಯಲ್ಲಿ ಬಹಳ ಕಸ ಕೂಡಿದೆ, ಅದನ್ನು ಗುಡಿಸಿದರೆ ಅದು ತೇಜಸ್ವಿಯಾಗುತ್ತದೆ ಎಂದಷ್ಟೇ ಅವರ ಅಂತರ್ಯವಾಗಿತ್ತು.

ಪಾಶ್ಚಾತ್ಯರಿಂದ ನಾವು ಕಲಿಯಬೇಕಾದ್ದು ಬಹಳ ಇದೆ ಎಂದು ಅವರು ಹೇಳುತ್ತಿದ್ದರು. ಆದರೆ ಕುರುಡು ಅನುಕರಣೆಯನ್ನು ಹಾಸ್ಯ ಮಾಡುತ್ತಿದ್ದರು. ಅವರ ಪೋಷಾಕು ಮೊದಲಿಂದ ಕಡೆತನಕ ಪೂರ್ತಿ ಮಹಾ ರಾಷ್ಟ್ರೀಯ. ಪೂರ್ತಿ ಸರಳ. ಪೇಟಾ, ಕೋಟು, ಧೋತರ. ಒಂದು ಸಲ ಅವರು ಮುಂಬಯಿಗೆ ಹೋದರು. ಆಗರಕರ್ ಎನ್ನುವ ಈ ಸುಧಾರಕೋತ್ತಮ ಹೇಗಿರಬಹುದೆಂದು ಕುತೂಹಲದಿಂದ ಎಷ್ಟೋ ಜನ ನೋಡಲು ಬಂದರು. ಸುಧಾರಕ ಅಂದ ಮೇಲೆ ಹ್ಯಾಟು, ಸೂಟು, ಬೂಟು ಇರಬೇಕೆಂದು ಅವರ ಎಣಿಕೆ. ನೋಡಿದ ಮೇಲೆ, “ಅಯ್ಯೋ, ಈ ಪೇಟಾಧಾರಿಯೇ ಆ ಸುಧಾರಕನೇ !” ಎಂದು ನಿರಾಶರಾಗಿ ಹೊರಟು ಹೋದರಂತೆ!

ಇನ್ನೊಂದು ಸಲ ಪರ ಊರಿನಿಂದ ಒಬ್ಬ ಗೃಹಸ್ಥ ಪುಣೆಗೆ ಬಂದಿದ್ದ. ಅವನು ‘ಸುಧಾರಕ’ದ ಭಕ್ತ. ಹಿಂದಿನ ಸಂಚಿಕೆಯಲ್ಲಿ ಆಗರಕರರು ‘ಹೆಂಗಸರು ಜಾಕೀಟು ಧರಿಸಬೇಕು’ ಎಂದು ಒಂದು ಲೇಖನ ಬರೆದಿದ್ದರು. ಕುತೂಹಲದಿಂದ ಫರ್ಗ್ಯುಸನ್ ಕಾಲೇಜಿನ ಆವರಣದಲ್ಲಿದ್ದ ಅವರ ಬಿಡಾರ ಹುಡುಕಿಕೊಂಡು ಬಂದ. ಮನೆಯ ಹೊರಗೆ ಒಂದು ಕೋಣೆ ತೆರೆದಿತ್ತು. ಗೃಹಸ್ಥ ಅದನ್ನು ಹೊಕ್ಕ. ಧಾಬಳಿ ಉಟ್ಟು ಪೈರಣ (ಅಂಗಿ) ತೊಟ್ಟವನೊಬ್ಬ ಅಲ್ಲಿ ಚಿಲುಮೆ ಸೇದುತ್ತಿದ್ದಾನೆ. ಇವನಾರೋ ಹಳ್ಳಿಮುಕ್ಕ ಇರಬೇಕೆಂದುಕೊಂಡು, “ಆಗರಕರರು ಎಲ್ಲಿ?” ಎಂದು ವಿಚಾರಿಸಿದ ಆ ಗೃಹಸ್ಥ.

“ಏನು ಬೇಕಾಗಿತ್ತು ?”

“ಆಗರಕರರನ್ನು ಕಾಣಬೇಕಾಗಿತ್ತು.”

“ನಾನೇ ಆಗರಕರ್.”

ಹೆಂಗಸರಿಗೆ ಜಾಕೀಟು ಹಾಕಲು ಹೇಳಿದವರು ಪ್ಯಾಂಟ್ ಬಿಟ್ಟು ಧಾಬಳಿ ಉಡುತ್ತಾರೆಯೆ ? ಚಿರೂಟು ಹೊರತು ಚಿಲುಮೆ ಸೇದುತ್ತಾರೆಯೆ ? “ತಮಾಷೆ ಬೇಡ ! ಆಗರಕರ್ ಎಲ್ಲಿ

ಹೇಳಿ !”

“ತಮಾಷೆ ಯಾಕೆ ? ‘ಸುಧಾರಕ’ ಸಂಪಾದಕ ನಾನೇ !”

“ಮತ್ತೆ ಹೆಂಗಸರು ಜಾಕೀಟು ಹಾಕಬೇಕೆಂದು

ಬರೆದಿದ್ದೀರಲ್ಲ !” ಎಂದು ಅವನು ವಿಸ್ಮಯ ತೋರಿಸಿದ.

ಕಷ್ಟ -ಕಾಯಿಲೆ

ಆಗರಕರರ ಸ್ವಂತ ನಡತೆ ಪರಿಶುದ್ಧವಾಗಿತ್ತು. ಶತ್ರುಗಳು ಕೂಡ ಅವರ ಮೇಲೆ ಅಪವಾದ ಹೊರಿಸುತ್ತಿರಲಿಲ್ಲ. ಸ್ವಾರ್ಥ ಅವರನ್ನು ಸೋಂಕಲಿಲ್ಲ. ಅವರು ತೆಗೆದುಕೊಳ್ಳುತ್ತಿದ್ದುದು ೭೫ ರೂ. ಸಂಬಳ. ಇಂದೂರಿನ ಹೋಳ್ಕರ ಮಹಾರಾಜರು ೫೦೦ ರೂಪಾಯಿಯ ಹುದ್ದೆ ಕೊಡುತ್ತೇನೆಂದರು. ಇವರು ಬೇಡ ಎಂದರು. ಬಡತನದಲ್ಲೇ ಹೆಂಡತಿ ಮತ್ತು ಮೂರು ಮಕ್ಕಳ ಸಂಸಾರ ಸಾಗಿಸಿದರು. ಹೆಂಡತಿ ಮಕ್ಕಳು ಶ್ರೀಮಂತಿಕೆಯ ಸುಖ ಕಾಣಲಿಲ್ಲ. ಪ್ರೀತಿಯ ಸಂಪತ್ತಿನ ಕೊರತೆ ಮಾತ್ರ ಇರಲಿಲ್ಲ. ಆಗರಕರರು ಆದರ್ಶ ಪತಿ, ಆದರ್ಶ ತಂದೆ ಆಗಿದ್ದರು.

ಚಿಕ್ಕಂದಿನಲ್ಲೇ ಆಗರಕರರಿಗೆ ಉಬ್ಬಸದ ರೋಗ ಇತ್ತಂತೆ. ಅವರು ಪಟ್ಟ ಕಷ್ಟಗಳಿಂದ ಅದರ ಉಪದ್ರವ ಹೆಚ್ಚಾಯಿತು. ‘ನನ್ನ ಆಸ್ತಮಾಕ್ಕೆ ನಾನು ನುಂಗದ ಮದ್ದಿಲ್ಲ. ನಾನು ಸತ್ತ ಮೇಲೆ ನನ್ನ ಹೊಟ್ಟೆಯನ್ನು ಯಾವನಾದರೂ ವೈದ್ಯನಿಗೆ ಕೊಡಿ. ಒಂದು ದವಾಖಾನೆಯನ್ನೇ ಅವನಿಗೆ ದಾನ ಮಾಡಿದ ಪುಣ್ಯ ಬಂದೀತು’ ಎಂದು ಅವರು ವಿನೋದ ಮಾಡುತ್ತಿದ್ದರಂತೆ. ವಿನೋದ ಸರಿ. ರೋಗ ವಾಸಿಯಾಗಲಿಲ್ಲ.

ರೋಗವನ್ನು ಹಿಡಿದುಕೊಂಡೇ ಅವರು ದುಡಿದರು. ಫರ್ಗ್ಯುಸನ್ ಕಾಲೇಜಿಗೆ ಜನರ ಸಹಾಯದಿಂದ ಹೊಸ ಭವ್ಯ ಕಟ್ಟಡ ಆಗುತ್ತಿತ್ತು. ೧೮೯೫ರ ಪ್ರಾರಂಭದಲ್ಲಿ ಅದು ಮುಗಿಯಿತು. ಆಗರಕರರು ಸಮಾಧಾನದ ಉಸಿರು ಬಿಟ್ಟರು. ಸಮಾಜ ಸುಧಾರಣೆಯ ಹೋರಾಟವೂ ಫಲ ಕೊಡತೊಡಗಿತ್ತು. ಜಾತಿ ಕಟ್ಟು ಸಡಿಲಾಗತೊಡಗಿತ್ತು. ಪ್ರೊಫೆಸರ್ ಕರ್ವೆ ಎಂಬವರು ವಿಧವೆಯನ್ನು ಲಗ್ನವಾದರು.

ಸಾರ್ಥಕ ಜೀವ

ಆಗರಕರರಿಗೆ ತಾವಿನ್ನು ಬಹಳ ಕಾಲ ಬದುಕುವುದಿಲ್ಲ ಎಂದು ತೋರಿತು. “ನಾನು ಜನರಿಗೆ ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದೇನೆ. ಸಾಯಲಿಕ್ಕೆ ನಾನು ಸಿದ್ಧ” ಎನ್ನುತ್ತಿದ್ದರು. ಅವರಿಗಿದ್ದದ್ದು ಒಂದೇ ಕೊರಗು. ಹೆಂಡತಿಯ ಉಪಜೀವನಕ್ಕೆ ಏನೂ ಮಾಡಿಡಲಿಲ್ಲ ; ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆ ಆಗಲಿಲ್ಲ.ಅವರ ಸೋದರ ಭಾವ ಭಾಗವತರು ಅವರನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟರು. “ಹಾಗಾದರೆ ನಿಶ್ಚಿಂತೆ ಆಯಿತು” ಎಂದರು.

ಕಾಲೇಜು ಕಟ್ಟಡದ ಪ್ರವೇಶೋತ್ಸವ. ಮುಂಬಯಿ ಗವರ್ನರ್ ಬಂದಿದ್ದಾನೆ. ಇಂದೂರಿನ ಹೋಳ್ಕರ ಮಹಾರಾಜರೂ ಹಾಜರಿದ್ದಾರೆ. ಹೋಳ್ಕರರು ಹೀಗೆ ಭಾಷಣ ಮಾಡಿದರು : “ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಬಹುಮಾನ, ವಿದ್ಯಾರ್ಥಿವೇತನ ಪಡೆಯುತ್ತಾ ಬಂದಿದ್ದಾರೆ. ಅದು ದೊಡ್ಡದಲ್ಲ. ಅವರು ಇಲ್ಲಿ ತ್ಯಾಗಬುದ್ಧಿಯನ್ನು , ಕರ್ತೃತ್ವವನ್ನು ಕಲಿತಿದ್ದಾರೆ. ಅದು ನಿಜಕ್ಕೂ ದೊಡ್ಡದು”.

ಆಗರಕರರು ಪಟ್ಟ ಕಷ್ಟ ಸಾರ್ಥಕವಾಗಿತ್ತು.

ಆದರೆ ಇದಾಗಿ ಅವರು ಹೆಚ್ಚು ದಿನ ಬದುಕಲಿಲ್ಲ. ರೋಗ ಅಸಾಧ್ಯವಾಗಿತ್ತು. ಎದ್ದು ನಿಲ್ಲುವ ತ್ರಾಣವೂ ಇರಲಿಲ್ಲ. ೧೮೯೫ರ ಜೂನ್ ೧೭ರ ಬೆಳಗಿನ ಜಾವ ರೋಗ ಉಲ್ಬಣಿಸಿತು-ಕೆಲವೇ ನಿಮಿಷಗಳಲ್ಲಿ ಆಗರಕರರು ಇಹಲೋಕ ಯಾತ್ರೆ ಮುಗಿಸಿದರು. ಆಗವರಿಗೆ ೩೯ ವರ್ಷ.

ಮಿತ್ರರು ಬಂದರು, ಜನ ಕೂಡಿದರು. ತಿಲಕರಂಥಾ ವಿರೋಧಿಗಳೂ ನೆರೆದರು. ಕಾಲೇಜ್ ಆವಾರದಿಂದ ಶವಯಾತ್ರೆ ಹೊರಟಿತು. ಮುಳಾಮಠಾ ನದಿಯ ದಂಡೆಯಲ್ಲಿ ಅಗ್ನಿದೇವ ಅವರ ಕೃಶ ಕಳೇಬರವನ್ನು ಸ್ವಾಹಾ ಮಾಡಿದ.

ಎಲ್ಲಾ ಮುಗಿದ ಮೇಲೆ ಮಿತ್ರರೂ ಸಹಕಾರಿಗಳೂ ಆದ ಗೋಪಾಲ ಕೃಷ್ಣ ಗೋಖಲೆಯವರು ಆಗರಕರರ ಕೋಣೆಯಲ್ಲಿ ಅವರ ಕಾಗದಪತ್ರಗಳನ್ನು ಪರಿಶೀಲಿಸಿದರು. ಅದರಲ್ಲಿ ಒಂದು ಸಣ್ಣ ಪುಡಿಕೆ ಸಿಕ್ಕಿತು. ಒಳಗೆ ಒಂದಿಷ್ಟು ಹಣ ಮತ್ತು ಒಂದು ಚೀಟಿ. ಚೀಟಿಯಲ್ಲಿ ಎರಡೇ ಶಬ್ದ : ‘ನನ್ನ ಪ್ರೇತದಹನಕ್ಕಾಗಿ.’

ಕವಿಹೃದಯದ ಋಷಿ

ಆಗರಕರರು ಬರೇ ಶಿಕ್ಷಕರಾಗಿರಲಿಲ್ಲ, ಬರೇ ಸಂಪಾದಕರು ಅಥವಾ ಸುಧಾರಕರಾಗಿರಲಿಲ್ಲ. ಅವರು ಕವಿಹೃದಯದ ಋಷಿಗಳಾಗಿದ್ದರು. ಅಹಂಕಾರ ಅರಿಯದ ಮಹಾಪುರುಷರಾಗಿದ್ದರು.

ಅವರು ಮರಾಠಿ ಭಾಷೆಗೆ ಹೊಸ ಜೀವಕಳೆ ತುಂಬಿದರು. ಲೇಖನಗಳನ್ನಲ್ಲದೆ ವ್ಯಾಕರಣ, ನಾಟಕಗಳನ್ನೂ ಬರೆದಿದ್ದರು. ಮರಾಠಿ ಸಾಹಿತ್ಯಕ್ಕೆ ಅವರ ಉಪಕಾರ ಬಹಳ.

ಬದುಕಿದ್ದಾಗ ಜನರು ಅವರನ್ನು ನಿಂದಿಸಿದರು. ಆದರೆ ಅವರು ಪಸರಿಸಿದ ಬೆಳಕು ಬೇಡವೆಂದರೂ ಜನರ ತಲೆಯಲ್ಲಿ ಹೊಕ್ಕಿತ್ತು. ಅವರು ಬಿತ್ತಿದ ಬೀಜ ಸಾವಕಾಶವಾಗಿ ಮೊಳೆತು ಗಿಡವಾಗಿ ಫಲಿಸುತ್ತಿದೆ. ಇಂದು ಸ್ತ್ರೀಯರ ಗುಲಾಮಗಿರಿ ನೀಗುತ್ತಿದೆ. ಬಾಲ್ಯವಿವಾಹ ವಿರಳವಾಗಿದೆ. ಕಂದಾಚಾರಗಳು ದೂರವಾಗುತ್ತಿವೆ. ವಿದ್ಯೆ ಎಲ್ಲರಿಗೂ ದೊರೆಯುತ್ತಿದೆ. ದೇಶ ಸ್ವತಂತ್ರವಾಗಿ ತನ್ನ ದಾರಿ ತಾನು ಕಾಣುತ್ತಿದೆ.

ಆದರೆ ಆಗರಕರರಂಥ ತ್ಯಾಗಿಗಳು ಇನ್ನೂ ನಮಗೆ ಬೇಕು. ಇನ್ನೂ ಆಗಬೇಕಾದ್ದು ಇದೆ, ಬಹಳ ಇದೆ.