ಮೂರು  ವರ್ಷಗಳ  ಹಿಂದೆ,  ಭೂಮಿ  ಸುಸ್ಥಿರ  ಅಭಿವೃದ್ಧಿ  ಸಂಸ್ಥೆ, ಸಾವಯವ ಗ್ರಾಮ ಯೋಜನೆಯಡಿ ಫಲ್ಗುಣಿ ಹಾಗೂ ಯೆಡೇಹಳ್ಳಿ ಗ್ರಾಮಸ್ಥರಿಗೆ ಅಜೋಲಾ ಬೆಳೆಸುವ ಮತ್ತು ಬಳಸುವ ಕುರಿತು ಮಾಹಿತಿ ನೀಡಿದು. ಇದಾದ ಮೇಲೆ ಫಲ್ಗುಣಿಯ ಯಶೋದಮ್ಮ ಮತ್ತು ಮಲ್ಲೇಶ ಗೌಡರು ಮನೆ ಅಂಗದಲ್ಲೇ ಮರದ ಕೆಳಗೆ ಗುಂಡಿ ತೆಗೆದು, ಪ್ಲಾಸ್ಟಿಕ್ ಹಾಳೆ ಹೊದಿಸಿ ಅಜೋಲಾ ಬೆಳೆಯುತ್ತಿದ್ದರು.

ಯಶೋದಮ್ಮ ಅವರಿಗೆ ಕೈತೋಟ ಮಾಡುವ ಹವ್ಯಾಸ. ಒಂದು ಸುಂದರ ಮುಂಜಾವಿನಲ್ಲಿ ಕೈತೋಟದಲ್ಲಿ ಔಷಧಿ ಸಸ್ಯಗಳನ್ನು ‘ಮಾತನಾಡಿಸಿಕೊಂಡು’ ತಮ್ಮ ಗೋಬರ್ ಘಟಕದ ಕಡೆಗೆ ಸ್ಲರಿ ಸರಿಪಡಿಸೋಣ ಅಂತ ಬಂದರು. ಕೋಲಿನಲ್ಲಿ ಸ್ಲರಿ ತಿರುವುತ್ತಾ, ಗೋಬರ್ ಡ್ರಮ್ಮಿನ ಕಡೆಗೆ ದೃಷ್ಟಿ ಹಾಯಿಸಿದರು. ಡ್ರಮ್ ಮೇಲ್ಭಾಗದಲ್ಲಿ ನಿಂತಿದ್ದ ನೀರಿನಲ್ಲಿ ನಾಲ್ಕೈದು ಅಜೋಲಾಗಳು ಹರಡಿರುವುದು ಕಂಡಿತು. ಕೈತೋಟದ ‘ಪ್ರೀತಿ’ ಸೂರ್ಯನ ಕಿರಣದ ಬೆಳಕಿನಲ್ಲಿ ಮಿನುಗುತ್ತಿದ್ದ ಅಜೋಲಾ ಎಲೆಗಳತ್ತ ಕರೆದೊಯ್ಯಿತು.

‘ಎಲ್ಲಿ ಬೇಕಾದರೂ ಬೆಳೆಯುವ ಅಜೋಲಾವನ್ನು, ನಾವು ಗುಂಡಿ ತೆಗೆದು, ಪ್ಲಾಸ್ಟಿಕ್ ಹಾಕಿ ಫಜೀತಿ ಪಟ್ಟುಕೊಂಡು ಏಕೆ ಬೆಳೆಯಬೇಕು?’ ಅಂತ ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡು, ಹಳೇ ಅಜೋಲಾ ಪದ್ಧತಿಗೆ ‘ಬೈ’ ಹೇಳಿದರು. ಗೋಬರ್ ಗ್ಯಾಸ್ ಘಟಕದ ಟ್ಯಾಂಕ್ ಸುತ್ತಾ ನಿಲ್ಲುವ ನೀರಲ್ಲೇ ಅಜೋಲಾ ಬೆಳೆಸೋದಕ್ಕೆ ಶುರು ಮಾಡಿದರು !

ಈಗ ಅಜೋಲಾ ಎಂಬುದು ಯಶೋದಮ್ಮಾ ಅವರ ಮನೆಯ ಆಕಳುಗಳ ಆಹಾರ ಮಾತ್ರವಾಗಿಲ್ಲ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರಕ್ಕೆ ಹೆಚ್ಚುವರಿ ಪೋಷಕಾಂಶ ನೀಡುವ ಇನ್‌ಗ್ರೇಂಡಿಯಂಟ್ ಆಗಿದೆ. ತೋಟಗಾರಿಕಾ ಬೆಳೆಗಳಿಗೆ ಗೊಬ್ಬರವೂ ಆಗಿದೆ.

ಗೋಬರ್ ಘಟಕದಲ್ಲಿ ಹರಡಿಕೊಂಡಿರುವ ಅಜೋಲಾ ಮನೆಯ ಅಂದವನ್ನೂ ಹೆಚ್ಚಿಸಿದೆ. ನೋಡುಗರ ಕಣ್ಣಿಗೆ ಸುಂದರವಾಗಿ ಕಾಣುತ್ತಿದೆ. ಇವರ ಮನೆಗೆ ಬಂದ ನೆಂಟರಿಷ್ಟರು ‘ಆಪ್ತೇಷ್ಟರೆಲ್ಲಾ’ ‘ಇದ್ಯಾವ ಶೋ ಪ್ಲಾಂಟ್’ ಅಂತ ಕೇಳುತ್ತಾರಂತೆ. ‘ಹಾಗೆ ಕೇಳಿದಾಗ ಸ್ವಲ್ಪ ಅಜೋಲಾದ ಬಗ್ಗೆ ವಿವರಣೆ ಕೊಡ್ತೀನಿ. ತಕ್ಷಣ ‘ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಾಲು ಕೆಜಿ ಹಾಕಿಕೊಡಿ’ ಎಂದು ಹೇಳುತ್ತಾರೆ. ಹೀಗೆ ನಮ್ಮ ಮನೆಯಿಂದ ಸಾಕಷ್ಟು ಅಜೋಲಾ ನೆರೆ-ಹೊರೆಯ ಗ್ರಾಮಗಳಲ್ಲಿರುವ ನೆಂಟರು, ಗೆಳೆಯರ ಮನೆಯಲ್ಲೆಲ್ಲಾ ಬೆಳೆಯುತ್ತಿದೆ’ ಎನ್ನುತ್ತಾರೆ ಪತಿ ಮಲ್ಲೇಶಗೌಡರು.

‘ಅಜೋಲಾ ಬೆಳೆಯೋದಕ್ಕೆ ಗೋಬರ್ ಘಟಕವನ್ನೇಕೆ ಆರಿಸಿಕೊಂಡಿರಿ’ ಎಂಬ ಪ್ರಶ್ನೆಗೆ ಯಶೋದಮ್ಮ ಹೀಗೆ ಪ್ರತಿಕ್ರಿಯಿಸುತ್ತಾರೆ. ‘ಕೈತೋಟದ ಎದುರೇ ಈ ಘಟಕವಿದೆ. ಜೊತೆಗೆ ಪಕ್ಕದಲ್ಲೇ ಸಗಣಿ ಸ್ಲರಿ ಸಿಗುತ್ತದೆ. ಹಾಗಾಗಿ ನಿರ್ವಹಣೆ ಸುಲಭ’ ಎನ್ನುತ್ತಾರೆ.

ಈ ಘಟಕದಿಂದ ದಿನಕ್ಕೆ ಕನಿಷ್ಠ ಕಾಲು ಕೆಜಿ ಅಜೋಲಾ ತೆಗೆಯುತ್ತಾರೆ. ಮೊದಲು ಅಜೋಲಾ ಬೆಳೆಸುವುದು ಕಷ್ಟ ಎನ್ನುತ್ತಿದ್ದ ಯಶೋಧಮ್ಮ.  ಗೋಬರ್ ಘಟಕದ ಮೇಲೆ ಅಜೋಲಾ ಬೆಳೆಸಲು ಆರಂಭಿಸಿದಾಗಿನಿಂದ ಬಹಳ ಸುಲಭವಾಗಿದೆ ಎನ್ನುತ್ತಿದ್ದಾರೆ.