ಭಾರತದ ಮಂಗಲವು ಭುವನವಲ್ಲಭನೊಲವು,
ಭಾರತ ಸಮುಚ್ಛಯವು ಶಾಂತಿಗಾಶ್ರಯವು,
ಭಾರತದ ಜನಕುಲವು ಭುವಿಯ ಒಳಗಡೆ ಬಲವು,
ಭಾರತಾಂಬೆಯ ಭಕ್ತಿ, ನನಗಾತ್ಮ ಶಕ್ತಿ

ಎಷ್ಟು ಸುಲಭವಾದ ಶಬ್ಧಗಳು! ಓದುತ್ತಲೇ ಪದ್ಯ ನೇರವಾಗಿ ಹೃದಯವನ್ನು ಮುಟ್ಟುತ್ತದೆ. ನಮ್ಮ ಮನಸ್ಸಿನಲ್ಲಿ ಇದ್ದುದನ್ನೇ ಕವಿ ಹೇಳಿದ್ದಾರೆ ಎನ್ನಿಸುತ್ತದೆ. ಅದನ್ನು ಎಷ್ಟು ಸೊಗಸಾದ, ಸರಳವಾದ ಭಾಷೆಯಲ್ಲಿ ಹೇಳಿದ್ದಾರೆ! ಓದುವುದಕ್ಕೆ ಕಿವಿಗೆ ಇಂಪಾಗಿದೆ. ಪ್ರತಿ ಪಂಕ್ತಿಯಲ್ಲಿ “ಮಂಗಲವು” – “ಒಲವು” “ಭಕ್ತಿ” – “ಶಕ್ತಿ”- ಹೀಗೆ ಒಳಪ್ರಾಸವೂ ಇರುವುದರಿಂದ ಕಿವಿಗೂ ಹಿತ, ನೆನಪಿಡುವುದೂ ಸುಲಭ.

ಈ ಪದ್ಯವನ್ನು ಬರೆದವರು ಹಿರಿಯ ಕವಿ ಮಂಜೇಶ್ವರ ಗೋವಿಂದ ಪೈ ಅವರು.

ಕನ್ನಡದ ಮೊದಲ ರಾಷ್ಟ್ರಕವಿ

ಭಾರತ ೧೯೮೭ ರಲ್ಲಿ ಸ್ವತಂತ್ರವಾಯಿತು. ಒಂದೊಂದು ಭಾಷೆಯನ್ನಾಡುವ ಜನರು ಸಾದ್ಯವಾದ ಮಟ್ಟಿಗೂ ಒಂದೊಂದು ರಾಜ್ಯದಲ್ಲಿರಬೇಕು ಎಂದು ಭಾಷಾವಾರು ಪ್ರಾಂತಗಳನ್ನು ರಚಿಸಿದ್ದು ೧೯೮೬ ರಲ್ಲಿ.

೧೯೮೭ ನೆಯ ಇಸವಿ ಮಾರ್ಚ್‌ ೨೨ ನೆಯ ದಿನಾಂಕ ಒಂದು ಸ್ವಾರಸ್ಯದ ಸಂಗತಿ ನಡೆಯಿತು.

ಆಗಿನ ಮದರಾಸು ರಾಜ್ಯದಲ್ಲಿ ಸಂಸ್ಕೃತ, ತಮಿಳು, ತೆಲುಗು, ಕನ್ನಡ, ಮಲೆಯಾಳ-ಹೀಗೆ ಐದು ಭಾಷೆಗಳನ್ನಾಡುವ ಜನರು ಇದ್ದು. ಆ ರಾಜ್ಯದ ಸರ್ಕಾರ ಪ್ರತಿ ಭಾಷೆಯ ಒಬ್ಬ ಹಿರಿಯ ಕವಿಗೆ “ರಾಷ್ಟ್ರಕವಿ” ಪ್ರಶಸ್ತಿಯನ್ನು ನೀಡಲು ನಿರ್ಧರಿಸಿತ್ತು.

ಕನ್ನಡದಲ್ಲಿ ಯಾರನ್ನು ಗೌರವಿಸಬೇಕು ಎಂದು ಯೋಚಿಸಿದಾಗ ಸಹಜವಾಗಿ ಪ್ರಸಿದ್ಧ ಕವಿ, ಸಂಶೋಧಕ ಮಂಜೇಶ್ವರ ಗೋವಿಂದ ಪೈ ಅವರಿಗೆ ಈ ಗೌರವ ಸಲ್ಲಬೇಕು ಎಂದು ಎಲ್ಲರಿಗೂ ಎನಿಸಿತು.

ಆದರೆ ಯಾವ ಹೊಗಳಿಕೆ- ಸನ್ಮಾನ- ಪ್ರಶಸ್ತಿ ಗೌರವಗಳನ್ನೂ ಬಯಸದ ಪೈಗಳು ಕೂಡಲೇ ಒಪ್ಪಿಗೆಯನ್ನು ಕೊಡಲಿಲ್ಲ.

ಆಗ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ ಅವರ ಗೆಳೆಯ ಮಂಜೇಶ್ವರ ಅನಂತರಾಯರು, “ಆ ಗೌರವಕ್ಕೆ ತಾವು ಯೋಗ್ಯರು. ರಾಷ್ಟ್ರಕವಿ ಪದವಿಯನ್ನು ತಾವು ಸ್ವೀಕರಿಸಲೇ ಬೇಕು” ಎಂದು ಒತ್ತಾಯ ಮಾಡಿದರು. ಇನ್ನೂ ಅನೇಕರ ಒತ್ತಾಯದ ಮಾತಿಗೆ ಮಣಿದು ಗೋವಿಂದ ಪೈ ಆ ಗೌರವವನ್ನು ಒಪ್ಪಿಕೊಂಡರು.

ಮದರಾಸಿನಲ್ಲಿ ಆಗ ರಾಜ್ಯಪಾಲರಾಗಿದ್ದ ಭಾವ ನಗರದ ಮಹಾರಾಜರು ಐದು ಭಾಷೆಗಳ ಕವಿಗಳಿಗೆ “ರಾಷ್ಟ್ರಕವಿ” ಪ್ರಶಸ್ತಿಯನ್ನು ಅರ್ಪಿಸಿದರು.

ಅವರು ಎಲ್ಲಾ ಕವಿಗಳನ್ನು ಅಭಿನಂದಿಸುವ ಭಾಷಣವನ್ನು ಇಂಗ್ಲಿಷಿನಲ್ಲಿ ಮಾಡಿದರು. ತಾನು ಇಂಗ್ಲಿಷಿನಲ್ಲಿ ಹೇಳಿದ ಅಭಿನಂದನೆಯ ವಾಕ್ಯಗಳನ್ನು ಕವಿಗಳಿಗೆ ಅವರವರ ಭಾಷೆಯಲ್ಲಿ ಪರಿವರ್ತಿಸಿ ಹೇಳಲು ಯಾರಾದರೂ ಇದ್ದಾರೆಯೇ ಎಂದು ಕೇಳಲು, ಗೋವಿಂದ ಪೈಗಳು ಎದ್ದು ನಿಂತು, “ನಾನು ಆ ಕೆಲಸವನ್ನು ಮಾಡಬಲ್ಲೆ” ಎಂದು ಹೇಳಿದರು. ಅದನ್ನು ಸಮರ್ಪಕವಾಗಿ ನಿರ್ವಹಿಸಿದರು.

ಗೋವಿಂದ ಪೈ ಅವರು ಬಹುಭಾಷಾ ವಿಶಾರದರು. ಬೆಟ್ಟದಂತಹ ವ್ಯಕ್ತಿತ್ವ, ಬೆಟ್ಟದಂತಹ ಪಾಂಡಿತ್ಯ ಅವರದು.

ಹಿರಿಯ ಮನೆತನ

ಪೈ ಅವರ ಪೂರ್ವಿಕರು ಗೋವಾದಲ್ಲಿ ಇದ್ದರು. ಹದಿನಾರನೆಯ ಶತಮಾನದಲ್ಲಿ ಗೋವಾದಲ್ಲಿ ಪೋರ್ಚುಗೋಸರ ದಬ್ಬಾಳಿಕೆಯು ಆರಂಭವಾಯಿತು. ಅಲ್ಲಿಯ ಹಿಂದೂಗಳು ಕ್ರೈಸ್ತರಾಗಬೇಕು ಇಲ್ಲವೇ ಗೋವಾ ಬಿಟ್ಟು ಹೋಗಬೇಕು ಎಂಬ ಬಲಾತ್ಕಾರದ ಡಂಗೂರ ಸಾರಲಾಯಿತು.

 

ಗೋವಿಂದ ಪೈ ಅವರಿಗೆ "ರಾಷ್ಟ್ರಕವಿ" ಪ್ರಶಸ್ತಿ

ಆಗ ಹಲವು ಸಾರಸ್ವತ ಕುಟುಂಬಗಳವರು ಅಲ್ಲಿಂದ ಹೊರಟುಬಿಟ್ಟರು. ಪೈ ಮನೆತನವು ಮಂಗಳೂರು ಪೇಟೆಯ ರಥ ಬೀದಿಯಲ್ಲಿ ನೆಲೆಸಿತು.

“ಫೈ” ಎಂದರೆ ಸಂಸ್ಕೃತ “ಪತಿ” ಶಬ್ದ. ಪ್ರಾಕೃತದಲ್ಲಿ “ಪಈ” ಎಂಬ ರೂಪ ತಾಳಿತು. ಈ ಶಬ್ದಕ್ಕೆ ಯಜಮಾನ, ಒಡೆಯ ಎಂಬ ಅರ್ಥ.

ಹುಟ್ಟುಬಾಲ್ಯ

ಗೋವಿಂದ ಪೈ ಅವರ ತಂದೆ ತಿಮ್ಮಪೈ ಅವರು ಜ್ಯೋತಿಷ್ಯವನ್ನು ತಿಳಿದಿದ್ದು, ವಿದ್ವಾಂಸರಾಗಿದ್ದರು. ಅವರ ಹೆಂಡತಿ ದೇವಕಿಯಮ್ಮ. ಅವರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಹುಟ್ಟಿದರು.

೧೮೮೩ ರ ಮಾರ್ಚ್‌ ಇಪ್ಪತ್ತಮೂರರಂದು ಗೋವಿಂದ ಪೈ ಯವರು ಜನ್ಮವೆತ್ತಿದರು.

ಮಂಜೇಶ್ವರದಲ್ಲಿ ತಾಯಿಗೆ ಬಳುವಳಿಯಾಗಿ ಬಂದ ಸ್ಥಳ ಗೋವಿಂದ ಪೈಗಳ ಒಂದು ದೊಡ್ಡ ಮಾಳಿಗೆ ಮನೆಯನ್ನು ಕಟ್ಟಿಸಿ, ಅಲ್ಲಿಯೇ ನೆಲೆಸಿದರು. ಅವರ ಸಾಹಿತ್ಯ ರಚನೆಯೆಲ್ಲಾ ಅಲ್ಲೇ ನಡೆಯಿತು. ಇಡೀ ಕನ್ನಡ ನಾಡಿನ ಸಾಹಿತ್ಯ ಭಕ್ತರಿಗೆ, ಕವಿಗಳಿಗೆ ಮಂಜೇಶ್ವರವು ಯಾತ್ರಾಸ್ಥಳವಾಯಿತು. “ಎಂ. ಗೋವಿಂದ ಪೈ” ಎಂಬ ಹೆಸರಿನ “ಎಂ” ಎಂಬ ಅಕ್ಷರವು ಮಂಗಳೂರನ್ನು ಸೂಚಿಸುತ್ತಿದ್ದರೂ ಜನ ಎಂ. ಎಂದರೆ ಮಂಜೇಶ್ವರ ಎಂದೇ ಭಾವಿಸುವಂತಾಯಿತು.

ಗೋವಿಂದ ಪೈಯವರಿಗೆ ಒಬ್ಬ ದೊಡ್ಡಮ್ಮ. ಅವರ ಹೆಸರು ಸುಬ್ಬಮ್ಮ. ಅವರಿಗೆ ಮಕ್ಕಳಿರಲಿಲ್ಲ. ಅವರು ಚಿಕ್ಕಂದಿನಿಂದ ಗೋವಿಂದ ಪೈಗಳನ್ನು ಬಹು ಪ್ರೀತಿಯಿಂದ ಲಾಲನೆ ಪಾಲನೆ ಮಾಡಿದ್ದರು.

ಗೋವಿಂದ ಪೈ “ಹೆಬ್ಬೆರಳು” ಎಂಬ ಒಳ್ಳೆಯ ನಾಟಕವನ್ನು ಬರೆದಿದ್ದಾರೆ. ಅದನ್ನು ತಮ್ಮ ದೊಡ್ಡಮ್ಮನಿಗೆ ಈ ರೀತಿ ಸಮರ್ಪಿಸಿರುವರು.

“ಯಾರ ಹಿತವಚನಗಳನ್ನು ಅಲ್ಲಗೆಳೆದು, ಯಾರಿಗೆ ಪದೇ ಪದೇ ಅಡ್ಡ ನುಡಿದು, ಮನ ನೋಯಿಸಿದೆನೋ ಆ ನನ್ನ ಸಾಕುತಾಯಿ ವೈ.ವಾ. ಸುಬ್ಬಮ್ಮನವರ (೧೮೫೨-೧೯೦೮) ಅಕಕರೆಯ ನೆನಪಿಗ ಪಶ್ವಾತ್ತಾಪದ ಕಾಣಿಕೆ”

(ವೈ.ವಾ. ಎಂದರೆ ವೈಕುಂಠವಾಸಿಯಾದವರು, ಮರಣ ಹೊಂದಿದವರು ಎಂದು ಅರ್ಥ.)

ವಿದ್ಯಾಭ್ಯಾಸ

ಗೋವಿಂದ ಪೈಗಳ ಪ್ರಾಥಮಿಕ ವಿದ್ಯಾಭ್ಯಾಸವು ಮಂಗಳೂರಿನ ಮಿಷನ್ ಶಾಲೆಯಲ್ಲಿಯೂ ಪ್ರೌಢ ಶಿಕ್ಷಣವು ಕೆನರಾ ಹೈಸ್ಕೂಲಿನಲ್ಲಿಯೂ ನಡೆಯಿತು.

೧೮೯೯-೧೯೦೦ ರಲ್ಲಿ ಪೈಗಳು ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಫ್.ಎ. (ಇಂಟರ್‌ ಮೀಡಿಯೆಟ್‌) ಓದುತ್ತಿದ್ದಾಗ, ಕನ್ನಡದಲ್ಲಿ ಸಣ್ಣ ಕಥೆ ಮತ್ತು ಬಾಲ ಸಾಹಿತ್ಯದ ಜನಕರಾದ ಪಂಜೆ ಮಂಗೇಶರಾಯರು ಅವರಿಗೆ ಕನ್ನಡದ ವಿದ್ಯಾಗುರುಗಳಾಗಿದ್ದರು.

ಎಫ್.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗೋವಿಂದ ಪೈಯವರು ವಿದ್ಯಾಭ್ಯಾಸ ಮುಂದುವರಿಸಲು ಮದರಾಸು ನಗರಕ್ಕೆ ಹೋದರು. ಅಲ್ಲಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇವರು ಬಿ.ಎ. ತರಗತಿಯಲ್ಲಿ ಕಲಿಯುತ್ತಿದ್ದಾಗ, ಮುಂದೆ ಭಾರತದ ರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಪೈಗಳ ಸಹಪಾಠಿಯಾಗಿದ್ದರು.

ಆಗಿನ ಕಾಲದಲ್ಲಿ ಬಿ.ಎ. ಪರೀಕ್ಷೆಯಲ್ಲಿ ಮೂರು ವಿಭಾಗ ಇರುತ್ತಿತ್ತು. ಇವರು ಇಂಗ್ಲಿಷ್, ಗಣಿತ, ಸಂಸ್ಕೃತಗಳನ್ನು ಅಭ್ಯಾಸ ಮಾಡಿದ್ದರು.

ವರ್ಷದ ಕೊನೆಯಲ್ಲಿ ಇವರು ಇಂಗ್ಲಿಷ್ ಪರೀಕ್ಷೆ ಮುಗಿಸಿದಾಗ, ಉಳಿದ ಪರೀಕ್ಷೆಗಳನ್ನು ಅರ್ಧದಲ್ಲೇ ಬಿಟ್ಟು, ಕೂಡಲೇ ಊರಿಗೆ ಬರುವ ಅನಿವಾರ್ಯ ಪ್ರಸಂಗ ಒದಗಿತು. ಅವರ ತೀರ್ಥರೂಪ ತಿಮ್ಮಪೈ ಯವರು ಕಠಿಣ ಕಾಯಿಲೆಯಲ್ಲಿ ಮಲಗಿದ್ದರು. ತಂದೆಯ ಅಂತಿಮ ದರ್ಶನಕ್ಕೆ, ಪಿತೃಸೇವೆ-ಶುಶ್ರೂಷೆಗಳಿಗೆ ಗೋವಿಂದ ಪೈ ಧಾವಿಸಿ ಬಂದರು. ತಂದೆಯು ೧೯೦೨ ರಲ್ಲಿ ತೀರಿಕೊಂಡರು.

ಪರೀಕ್ಷೆಯ ಫಲಿತಾಂಶ ತಿಳಿದಾಗ ಗೋವಿಂದ ಪೈಗಳು ಇಂಗ್ಲಿಷ್‌ ವಿಭಾಗದಲ್ಲಿ ಸರ್ವ ಪ್ರಥಮಸ್ಥಾನ ಪಡೆದು ಉತ್ತೀರ್ಣರಾಗಿದ್ದರು. ಇದರಿಂದಾಗ ವಿಶ್ವವಿದ್ಯಾನಿಲಯದ ಚಿನ್ನದ ಪದಕ ಬಹುಮಾನವಾಗಿ ದೊರೆಯಿತು.

ಆದರೆ ಮತ್ತೆ ಇವರು ಬಿ.ಎ. ಪರೀಕ್ಷೆಯನ್ನು ಪೂರ್ಣಗೊಳಿಸಲಿಲ್ಲ.

ಸಂಸಾರ ಜೀವನ

ತಂದೆ ತೀರಿಕೊಂಡಾಗ ಗೋವಿಂದ ಪೈಯವರಿಗೆ ಹತ್ತೊಂಬತ್ತು ವರ್ಷ.

ತಂದೆಯವರ ಮರಣಾನಂತರ ಇವರೇ ಕುಟುಂಬದ ಹಿರಿಯಣ್ಣನಾಗಿ ಸಂಸಾರದ ಹೊಣೆ ಹೊತ್ತರು. ಮೂವರು ತಮ್ಮಂದಿರೊಡನೆ ಒಂದೇ ಸಂಸಾರದಲ್ಲಿ ಬಾಳಿದರು.

ಇವರು ಜಮೀನುದಾರರು. ಉಣ್ಣಲು ತಿನ್ನಲು ಏನೂ ಕೊರತೆಯಿಲ್ಲದಷ್ಟು ಗೇಣಿ ಅಕ್ಕಿ ವಸೂಲು ಆಗುತ್ತಿತ್ತು. ಸರಸ್ವತೀಪುತ್ರರಾದರೂ ಧನಲಕ್ಷ್ಮಿಯ ಅವಕೃಪೆಗೆ ಪಾತ್ರರಾದವರಲ್ಲ.

ಗೋವಿಂದ ಪೈಗಳು ಹುಂಡಿ ವಾಮನ ಕಾಮತರ ಮಗಳು ಲಕ್ಷ್ಮೀ ಯಾನೆ ಕೃಷ್ಣಾಬಾಯಿಯನ್ನು ಮದುವೆಯಾದರು. ಇವರ ನಲವತ್ತನಾಲ್ಕನೆಯ ವಯಸ್ಸಿನಲ್ಲಿ ಹೆಂಡತಿಯು ತೀರಿಕೊಂಡರು. ಮತ್ತೆ ಇವರು ಮದುವೆಯಾಗಲಿಲ್ಲ. ತಮ್ಮಂದಿರು ಮತ್ತು ಅವರ ಸಂಸಾರಗಳ ಜೊತೆಗೆ ಅವರಿಗೆ ಹಿರಿಯರಾಗಿ, ಮಾರ್ಗದರ್ಶಕರಾಗಿ ಇದ್ದುಬಿಟ್ಟರು.

ಮಂಜೇಶ್ವರ ಯಾತ್ರಾಸ್ಥಳವಾಯಿತು

ಗೋವಿಂದ ಪೈಗಳು ಮಂಜೇಶ್ವರದಲ್ಲಿ ನೆಲೆಸಿದರು. ಪುಸ್ತಕಗಳನ್ನು ಓದುವುದು, ಶಾಸನಗಳನ್ನು ಅಭ್ಯಾಸ ಮಾಡುವುದು, ಹಿಂದಿನ ಕಾಲದ ಗ್ರಂಥಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಅಧ್ಯಯ ಮಾಡುವುದು- ಇವಕ್ಕೆ ಅವರ ಜೀವನ ಮುಡಿಪಾಯಿತು. ಅವರ ಕವನಗಳು, ನಾಟಕಗಳು, ಅವರ ಅಪಾರ ವಿದ್ವತ್ತು, ಅವರ ನಿಷ್ಕಪಟ ಶಕ್ತಿಯುತ ವ್ಯಕ್ತಿತ್ವ- ಇವುಗಳಿಂದ ಅವರ ಹೆಸರು ಕನ್ನಡ ನಾಡಿನಲ್ಲೆಲ್ಲ ಹರಡಿತು. ಅವರ ಭೇಟಿಗಾಗಿಯೇ ಓದುಗರು, ವಿದ್ವಾಂಸರು, ಸಾಹಿತಿಗಳು ಮಂಜೇಶ್ವರಕ್ಕೆ ಹೋದರೆ ಸಮುದ್ರವನ್ನು ನೋಡಬೇಕು. ಗೋವಿಂದ ಪೈಗಳನ್ನು ನೋಡಬೇಕು” ಎಂಬ ಮಾತು ಚಿರಪರಿಚಿತವಾಯಿತು.

೧೯೪೯ರಲ್ಲಿ ಆಗಿನ ಮದರಾಸು ರಾಜ್ಯದ ಸರ್ಕಾರ “ರಾಷ್ಟ್ರಕವಿ” ಎಂಬ ಪ್ರಶಸ್ತಿಯನ್ನು ನೀಡಿತು. ಗೋವಿಂದ ಪೈಗಳನ್ನು ಕನ್ನಡಿಗರು ೧೯೫೦ ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ತಮ್ಮ ಕೃತಜ್ಞತೆಯನ್ನು ತೋರಿಸಿದರು.

೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ಯ್ರ ಬಂದಾಗ ಅದು ಎರಡು ಹೋಳಾದದ್ದು ಗೋವಿಂದ ಪೈಯವರಿಗೆ ತುಂಬಾ ನೋವಾಯಿತು. ೧೯೪೮ ರಲ್ಲಿ ಗಾಂಧೀಜಿಯ ಕೊಲೆಯಾದದ್ದು ಅವರಿಗೆ ಒಂದು ಮನಸ್ಸಿನ ಆಘಾತ. ೧೯೫೬ ರಲ್ಲಿ ಕನ್ನಡ ನಾಡೆಲ್ಲ ಒಂದಾದಾಗ ಮಂಜೇಶ್ವರ ಆ ರಾಜ್ಯದ ಹೊರಗೆ ಉಳಿಯಿತು. ಇದು ಅವರಿಗೆ ತೀವ್ರ ದುಃಖದ ಸಂಗತಿ.

೧೯೬೩ರ ಸೆಪ್ಟೆಂಬರ್ ೬ ರಂದು ಗೋವಿಂದ ಪೈಗಳು ನಿಧನರಾದರು. ಆಗ ಅವರಿಗೆ  ೮೦ ವರ್ಷ ತುಂಬಿತ್ತು.

ಕ್ರಾಂತಿಕಾರದೇಶಭಕ್ತ

ಇಪ್ಪತ್ತನೆಯ ಶತಮಾನದ ಆದಿಭಾಗ. ಭಾರತ ದೇಶವು ಇಂಗ್ಲಿಷರ ಬಿಗಿ ಮುಷ್ಟಿಯಲ್ಲಿ ನವೆಯುತ್ತಿದ್ದುದು ಪೈಗಳ ಮನಸ್ಸನ್ನು ಮರುಗಿಸಿತ್ತು.

ಅವರು ಬರೋಡದ ನವಸಾರಿ ಎಂಬಲ್ಲಿಗೆ ಹೋಗಿ ಕ್ರಾಂತಿಕಾರರ ಗುಂಪಿಗೆ ಸೇರಿದರು. ಗುಟ್ಟಿನಲ್ಲಿ ನಡೆಯುತ್ತಿದ್ದ ಭೂಗತ ಚಳವಳಿಯಲ್ಲಿ ಭಾಗವಹಿಸಿದರು.

ಅವರಿಗೆ ಕಾಕಾ ಕಾಲೇಲ್‌ಕರ್ ಮೊದಲಾದ ಮುಂದಾಳುಗಳ ಪರಿಚಯವಾಯಿತು. ಆದರೆ ಅಲ್ಲಿ ಅವರು ಇದ್ದುದು ಒಂದೇ ಒಂದು ತಿಂಗಳು ಮಾತ್ರ.

ತೀಕ್ಷ್ಣ ಬುದ್ಧಿಯ ಗೋವಿಂದ ಪೈಗಳಿಗೆ ಕೆಲವೇ ದಿನಗಳಲ್ಲಿ ಕೈಬಾಂಬು ಮೊದಲಾದ ಮಾರಕಾಸ್ತ್ರಗಳನ್ನು ತಯಾರಿಸುವ ಗುಟ್ಟು ಗೊತ್ತಾಯಿತು.

ಆದರೆ ಬಿಚ್ಚುಮನಸ್ಸಿನ ಪೈಗಳಿಗೆ ಆ ರಹಸ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಒಂದೆರಡು ಕಡೆ  ಗೆಳೆಯರ ಮುಂದೆ ಕೈಬಾಂಬು ತಯಾರಿಸುವ ವಿಧಾನ, ಅದನ್ನು ಉಪಯೋಗಿಸುವ ಕ್ರಮ ಮೊದಲಾದುದನ್ನು ಹೇಳತೊಡಗಿದರು.

ಗೋವಿಂದ ಪೈಯವರು ಈ ವಿಷಯಗಳನ್ನು ತಮಗೆ ನಂಬಿಕೆ ಇದ್ದ ಸ್ನೇಹಿತರ ಮುಂದೆ ಮಾತ್ರ ಹೇಳಿದ್ದರು. ಅದರೂ ಆ ಸ್ನೇಹಿತರಲ್ಲಿ ಯಾರಾದರೂ ಬೇರೆ ಕಡೆ ತಿಳಿಸಿದರೆ ಎಲ್ಲರಿಗೂ ತೊಂದರೆ ಅಲ್ಲವೆ? ಹೀಗೆ ಯೋಚಿಸಿ ಕಾಕಾ ಕಾಲೇಲ್‌ಕರು ಅವರನ್ನು ಕರೆದು ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಿ ಮನೆಗೆ ಕಳಿಸಿದರು.

ಆಮೇಲೆ ಅವರು ಸ್ವಾತಂತ್ಯ್ರ ಚಳವಳಿಯಲ್ಲಿ ಪ್ರತ್ಯಕ್ಷ ಭಾಗವಹಿಸುವುದನ್ನು ಬಿಟ್ಟು, ಲೇಖನಿಯನ್ನೇ ಕತ್ತಿಯಾಗಿ ಮಾಡಿಕೊಂಡು ಕವನಗಳನ್ನು ರಚಿಸತೊಡಗಿದರು. ಕೇಳುತ್ತಲೇ ರಕ್ತ ಬಿಸಿಯಾಗುವ, ಉತ್ಸಾಹ ವುಟ ನೆಗೆಯುವ ದೇಶಭಕ್ತಿ ಗೀತೆಗಳನ್ನು ಅವರು ಬರೆದರು.

ಭಾರತದ ಸ್ವಾತಂತ್ಯ್ರದ ಚಳವಳಿಯನ್ನು ಕುರಿತು, ಭಾರತಮಾತೆ ಹಾಗೂ ಮಹಾತ್ಮಾ ಗಾಂಧಿಯವರನ್ನು ಕುರಿತು, ಅವರು ಬರೆದ ದೇಶಭಕ್ತಿ ಗೀತೆಗಳೆಷ್ಟೊ ತುಂಬಾ ಜನಪ್ರಿಯವಾದವು.

ಗೋವಿಂದ ಪೈಗಳು ಮಹಾತ್ಮಾ ಗಾಂಧಿಯವರ ಪರಮ ಭಕ್ತರು. ಗಾಂಧೀಜಿಯವರು ತೀರಿಕೊಂಡ ದುಃಖದಲ್ಲಿ, “ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು” ಎಂಬ ದುಃಖದ ನುಡಿ ಹೊತ್ತ ಇವರ ಕವಿತೆಯ ಬಹು ಪ್ರತಿದ್ಧವಾದದ್ದು.

ಮಹಾತ್ಮಾ ಗಾಂಧಿಯವರು ಸತ್ತ ಹತ್ತನೆಯ ದಿನ ಗೋವಿಂದ ಪೈಗಳು ತಮ್ಮ ಮನೆಯ ಮುಂದಿನ ಪಡುಗಡಲಿಗೆ ಹೋಗಿ ಸ್ನಾನಮಾಡಿ ತಿಲತರ್ಪವನ್ನು ಬಿಟ್ಟು ಬಂದರು.

ಕನ್ನಡ ನುಡಿಯ ಭಕ್ತ

“ತಾಯೆ ಬಾರ, ಮೊಗವ ತೋರ,
ಕನ್ನಡಿಗರ ಮಾತೆಯೇ!
ಹರಸು ತಾಯೆ, ಸುತರ ಕಾಯೆ,
ನಮ್ಮ ಜನ್ಮದಾತೆಯೇ!”

ಎಂದು ಮೊದಲಾಗುವ ಕನ್ನಡಿಗರ ತಾಯಿ ಎಂಬ ಪದ್ಯಗಳಲ್ಲಿ ಗೋವಿಂದ ಪೈಗಳು,

“ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು” ಎಂದು ಮನೋಹರವಾಗಿ ತಮ್ಮ ಕನ್ನಡ ಭಕ್ತಿಯನ್ನು ವ್ಯಕ್ತಪಡಿಸಿರುವರು.

ನಮ್ಮ ಶರೀರ, ಮನಸ್ಸು, ಮಾತು-ಇವು ಮೂರು ಸಂಪೂರ್ಣವಾಗಿ ಕನ್ನಡ ದೀಕ್ಷೆಯನ್ನು ಹೊಂದಿ ನಾವು ತ್ರಿಕರಣ ಪರಿಶುದ್ಧರಾದಾಗಲೇ ನಮ್ಮ ಜನ್ಮ ಸಾರ್ಥಕವಾಗುವುದು. ಈ ರೀತಿಯಾಗಲು ನಮಗೆ ಜನ್ಮ ಕೊಟ್ಟಿರುವ ಕನ್ನಡ ಮಾತೆಯು ತನ್ನ ಮಕ್ಕಳನ್ನು ಹರಸಲೆಂದು ಕವಿಗಳು ಪ್ರಾರ್ಥಿಸಿಕೊಂಡಿರುವರು.

ಆ ಕವನದಲ್ಲಿ ಕನ್ನಡ ನಾಡಿನ ವೈಭವವು ಕೆನೆಗಟ್ಟಿದೆ. ಜೇನು ಸುರಿವ, ಹಾಲು ಹರಿವ ಸ್ವರ್ಗವೇ ಭೂಮಿಗೆ ಇಳಿದಂತೆ ಕನ್ನಡ ನಾಡು ಸಮೃದ್ಧಿಯಾಗಿದೆ ಎನ್ನುತ್ತಾರೆ. “ಶಬರಿಯು ತನ್ನ ಭಕ್ತಿಯ ಬುಗರಿ ಹಣ್ಣನ್ನು ಶ್ರೀ ರಾಮನಿಗೆ ಕೊಟ್ಟದು ಕನ್ನಡ ನಾಡಿನಲ್ಲಿ. ಅವನು ಕನ್ನಡ ವೀರರ ಪಡೆಯನ್ನು ಕಟ್ಟಿ ರಾವಣನನ್ನು ಕೊಂಡ.

“ಪಾಂಡವರು ಅಜ್ಞಾತವಾಸವಿದ್ದುದು ವಿರಾಟ ರಾಜನ ರಾಜಧಾನಿಯಾದ ಹಾನಗಲ್ಲು ಎಂಬ ನೆಲದಲ್ಲಿ. ಗೋಗ್ರಹಣದ ಮೊದಲ ಯುದ್ಧ ನಡೆದುದೂ ಶ್ರೀ ಕೃಷ್ಣನೂ ಸಂಧಾನಕ್ಕಾಗಿ ಹಸ್ತಿನಾವತಿಗೆ ತೆರಳಿದುದೂ ಇಲ್ಲಿಂದಲೇ.”

ಹೀಗೆ ರಾಮಾಯಣ-ಮಹಾಭಾರತಗಳ ಪುರಾಣ ಕಾಲದಲ್ಲೇ ಕನ್ನಡ ನಾಡು ಪ್ರಸಿದ್ಧವಾಗಿತ್ತು.

ಶಾಲಿವಾಹನ ಶಕ ಪ್ರಾರಂಭವಾದುದು ಕನ್ನಡ ನಾಡಿನಲ್ಲಿ. ಚಾಲುಕ್ಯ, ರಾಷ್ಟ್ರಕೂಟ, ಗಂಗ, ಕದಂಬ, ಹೊಯ್ಸಳ, ಕಳಚೂರ್ಯ, ಅಲೂಪ ಮೊದಲಾದ ರಾಜ ವಂಶದ ರಾಜರೂ ವಿಜಯನಗರದ ಅರಸರೂ ಇಲ್ಲಿ ರಾಜ್ಯ ಕಟ್ಟಿ ನೆಲೆಸಿದರು.

ಜೈನ ಸನ್ಯಾಸಿಗಳಾದ ಪೂಜ್ಯವಾದ-ಕೊಂಡಕುಂದಾ ಚಾರ್ಯರೂ ಮಧ್ವಾಚಾರ್ಯ-ಬಸವಣ್ಣರೆಂಬ ಮತಸ್ಥಾಪಕರೂ ನೃಪತುಂಬ- ಪಂಪ-ರನ್ನ-ಲಕ್ಷ್ಮೀಶ-ಜನ್ನ-ಷಡಕ್ಷರ-ಮುದ್ದಣ್ಣ-ಪುರಂದರದಾ-ವಿದ್ಯಾರಣ್ಯರೆಂಬ ಕವಿ ರೇಣ್ಯರೂ ಕನ್ನಡ ಮಾತೆಯ ಹೊನ್ನ ಗಣಿಯಂತಹ ಪುಣ್ಯ ಗರ್ಭದಿಂದ ಉದಿಸಿ ಬಂದಿರುವರು.

“ಎಲೈ ಕನ್ನಡ ಮಾತೆಯ! ನಾನು ನಿನ್ನಲ್ಲಿ ಇದನ್ನು ಒಂದನ್ನೇ ಕೋರುತ್ತೇನೆ. ನಿನ್ನ ಮೂರ್ತಿಯು ಜಗತ್ತಿನಲ್ಲಿ ಕೀರ್ತಿಶಾಲಿಯಾಗಿ ನಮಗೆ ಎಂದಿಗೆ ತೋರಿಸಿ ಕೊಡುವೆ?” ಇದು ಕವನದ ವಚನ ರೂಪ.

ಹೀಗೆ ಕನ್ನಡ ನಾಡು-ನುಡಿಗಳ ಅಭ್ಯುದಯವನ್ನು ಹಾರೈಸಿದ ಆ ಕವನವು ಕನ್ನಡಿಗರಿಗೆ ಹೊಸ ಹುರುಪಿನ ಚಿಲುಮೆಯಾಯಿತು. ಗತವೈಭವವನ್ನು ನೆನಪುಗೊಳಿಸಿದ ಸ್ಫೂರ್ತಿಯ ಕೇಂದ್ರವಾಯಿತು.

ಮಮತೆಯ ಗಣಿ

ಗೋವಿಂದ ಪೈಯವರು ಪ್ರೀತಿಯ ಗಣಿ, ಆತ್ಮೀಯತೆಯ ಕಾರಂಜಿ. ಅವರನ್ನು ಕಂಡವರಿಗೆಲ್ಲ ವಿಶ್ವಾಸ ಉಕ್ಕುತ್ತಿದ್ದ ಅವರ ಸ್ವಭಾವದ ಪರಿಚಯ ಬಹುಬೇಗ ಆಗುತ್ತಿತ್ತು. ಅವರು ತಮ್ಮ ನಂಟರು, ಸ್ನೇಹಿತರ ಪ್ರೀತಿಯನ್ನು ಗೆದ್ದುಕೊಂಡಿದ್ದರು.

ಗೋವಿಂದ ಪೈಯವರ ಹೆಂಡಿಯವರ ಆರೋಗ್ಯ ಬಹುಕಾಲ ತುಂಬ ಕೆಟ್ಟಿತ್ತು. ವರ್ಷದಲ್ಲಿ ಬಹುಕಾಲ ಉಬ್ಬಸದಿಂದ ಹಾಸಿಗೆ ಹಿಡಿದಿರುತ್ತಿದ್ದರು. ಗೋವಿಂದ ಪೈ ಆ ಕಾಲದಲ್ಲಿ ಅವರನ್ನು ತುಂಬ ಆದರದಿಂದ ನೋಡಿಕೊಂಡರು; ದಾದಿಯಂತೆ ಅವರನ್ನು ಉಪಚರಿಸಿದರು.

ಮರಣಹೊಂದಿದಾಗ ಕೃಷ್ಣಾಬಾಯಿಯ ಪ್ರಾಯ ೩೫ ವರ್ಷ. ಗೋವಿಂದ ಪೈಯವರು ಹೆಂಡತಿಯ ಕಾಲದ ನೆನಪಿಗಾಗಿ “ಗೊಮ್ಮಟ ಜಿನಸ್ತುತಿ” ಎಂದು ೩೫ ವೃತ್ತಗಳ ಪದಯವೊಂದನ್ನು ರಚಿಸಿ, ವೇಣೂರಿನ ಗೊಮ್ಮಟೇಶ್ವರನ ಮಸ್ತಕಾಭಿಷೇಕದ ಕಾಲದಲ್ಲಿ ಪ್ರಕಟಿಸಿದರು. “ನಂದಾದೀಪ”ವೆಂಬ ಕವ ಮಾಲಿಕೆಯನ್ನೂ ಬರೆದರು.

ಅವರಿಗೆ ಮಕ್ಕಳಿರಲಿಲ್ಲ. ಹುಟ್ಟಿದ ಒಂದು ಹೆಣ್ಣು ಶಿಶು ಎಳೆಯ ವಯಸ್ಸಿನಲ್ಲೇ ತೀರಿಕೊಂಡಿತು. ಆದರೆ ಕುಟುಂಬದಲ್ಲಿ ಬೆಳೆಯುತ್ತಿದ್ದ ತಮ್ಮನ ಮಕ್ಕಳನ್ನು ಅವರು ತಮ್ಮ ಮಕ್ಕಳಂತೆಯೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.

“ಗೊಲ್ಗೊಥಾ” ಎಂಬುದು ಅವರ ಒಂದು ಪ್ರಸಿದ್ಧ ಕಾವ್ಯ. ಅದನ್ನು “ನನ್ನ ತಮ್ಮಂದಿರ ಮುದ್ದು ಮಕ್ಕಳಿಗೆ” ಎಂದು ಸಮರ್ಪಣೆ ಮಾಡಿರುವರು.

ಇವರು ತಮ್ಮ ನಾರಾಯಣ ಪೈಯವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ೨೨ರ ಪ್ರಾಯದಲ್ಲೂ ಇನ್ನೊಬ್ಬಳು ೨೪ ರ ಪ್ರಾಯದಲ್ಲೂ ತೀರಕೊಂಡುದು ಇವರ ಹೃದಯಕ್ಕೆ ತುಂಬಾ ದುಃಖವನ್ನು ಉಂಟು ಮಾಡಿತು.

ಅವರಿಬ್ಬರ ನೆನಪಿಗಾಗಿ “ವೈಶಾಖಿ” ಎಂಬ ಇನ್ನೊಂದು ಖಂಡಕಾವ್ಯವನ್ನು ಬರೆದು, ಅದನ್ನು ಆ ಹೆಣ್ಣು ಮಕ್ಕಳ ಅಕ್ಕರೆಯ ನೆನಪಿಗೆ ಕಣ್ಣೀರಿನ ಕಾಣಿಕೆ ಎಂದು ಅರ್ಪಿಸಿದರು.

ಅವರ ತಮ್ಮಂದಿರೂ ಅಣ್ಣನನ್ನು ಒಬ್ಬ ದೇವರು ಎಂಬಂತೆ ಕಾಣುತ್ತಿದ್ದರು.

ತಮ್ಮ ಮನೆಯ ಉಪ್ಪರಿಗೆಯೇ ಗೋವಿಂದ ಪೈಗಳ ಬರವಣಿಗೆಯ ವ್ಯವಸಾಯವನ್ನು ಕೈಗೊಳ್ಳುವ ಸಾಹಿತ್ಯ ಕ್ಷೇತ್ರವಾಗಿತ್ತು. ಅಲ್ಲಿಯ ಗೋಡೆಯ ಮೇಲೆ ಅವರ ಪತ್ರಿಯವರ ಭಾವಚಿತ್ರವನ್ನು ತೂಗುಹಾಕಿದ್ದರು. ಪ್ರತಿ ದಿನ ಬೆಳಿಗ್ಗೆ ಮುಖ ತೊಳೆದ ಮೇಲೆ ಒಂದೆರಡು ಹೂ ಗಳನ್ನು ಆಯ್ದು ತಂದು ತಮ್ಮ ಹೆಂಡತಿಯ ಚಿತ್ರಕ್ಕೆ ಮುಡಿಸುತ್ತಿದ್ದರು.

 

ರಾಷ್ಟ್ರಕವಿ ಗೋವಿಂದ ಪೈ

ಅತಿಥಿ ಸತ್ಕಾರ

 

ಅತಿಥಿ ಸತ್ಕಾರಕ್ಕೆ ಪೈಗಳು ಎತ್ತಿದಕೈ. ಮೈಸೂರು, ಬೆಂಗಳೂರು, ಧಾರವಾಡಗಳ ಪ್ರಸಿದ್ಧ ಸಾಹಿತಿಗಳೂ ಕವಿಗಳೂ ದಕ್ಷಿಣ ಕನ್ನಡಕ್ಕೆ ಬಂದಾಗ ಮಂಜೇಶ್ವರಕ್ಕೆ ಬಾರದೆ ಹೋಗುತ್ತಿರಲಿಲ್ಲ. ಮನೆಗೆ ಬಂದವರನ್ನು ಬಹು ಆತ್ಮೀಯತೆಯಿಂದ ಕಾಣುತ್ತಿದ್ದರು. ಬಂದವರು ಎಷ್ಟೇ ಸಂಕೋಚದ ಸ್ವಭಾವದವರಾದರೂ ತಮ್ಮ ಸಹವಾಸದಲ್ಲಿ ಸ್ವಲ್ಪ ಹೊತ್ತಿನಲ್ಲಿಯೇ ಸಂಕೋಚವನ್ನೆಲ್ಲ ಮರೆತುಬಿಡುವಂತೆ ಮಾತನಾಡಿಸುತ್ತಿದ್ದರು, ನಡೆದುಕೊಳ್ಳುತ್ತಿದ್ದರು ಗೋವಿಂದ ಪೈಗಳು. ಬೇಸಿಗೆ ಕಾಲದಲ್ಲಿ ಅತಿಥಿಗಳನ್ನು ತಮ್ಮ ಮನೆಯ ಸಮೀಪದ ಪಶ್ಚಿಮ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರೊಡನೆ ಆರಾಮವಾಗಿ ಮಾತನಾಡುತ್ತಿದ್ದರು.

ಬಹುಭಾಷಾ ವಿಶಾರದ

ಗೋವಿಂದ ಪೈಗಳು ಯಾವ ಉದ್ಯೋಗವನ್ನೂ ವಹಿಸಿಕೊಳ್ಳಲಿಲ್ಲ. ತಮ್ಮ ಜೀವಮಾನವನ್ನೆಲ್ಲಾ ಓದು, ಬರಹ, ಸಾಹಿತ್ಯ ರಚನೆಯಲ್ಲೇ ಕಳೆದರು.

ಇವರು ಸುಮಾರು ೨೨ ಭಾಷೆಗಳನ್ನು ಬಲ್ಲವರಾಗಿದ್ದರು. ಗ್ರೀಕ್, ಅರೇಬಿಕ್, ಲ್ಯಾಟಿನ್, ಹೀಬ್ರೂ, ಜರ್ಮನ್, ಫ್ರೆಂಚ್, ಪರ್ಷಿಯನ್, ಇಂಗ್ಲೀಷ್, ಜಪಾನೀ ಭಾಷೆಗಳು ಇವರಿಗೆ ಬರುತ್ತಿದ್ದವು. ಭಾರತೀಯ ಭಾಷೆಗಳಲ್ಲಿ ಪಾಲಿ, ಅರ್ಧಮಾಗಧಿ, ಸಂಸ್ಕೃತ, ಪ್ರಾಕೃತ ಮೊದಲಾದ ಪ್ರಾಚೀನ ಭಾಷೆಗಳನ್ನು ತಿಳಿದಿದ್ದರು. ಬಂಗಾಳಿ, ಹಿಂದಿ, ಉರ್ದು, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಿ ಮೊದಲಾದ ಭಾಷೆಗಳ ಪುಸ್ತಕಗಳನ್ನು ಇವರು ತಮ್ಮ ಅಭ್ಯಾಸದ ಕೋಣೆಯಲ್ಲಿ ಬೇರೆ ಬೇರೆ ಕಪಾಟುಗಳಲ್ಲಿ ಸಂಗ್ರಹಿಸಿ ಇಟ್ಟಿದ್ದರು.

ಗೋವಿಂದ ಪೈಗಳಿಗೆ ಪುಸ್ತಕಗಳೆಂದರೆ ಬಹಳ ಮಮತೆ. ಎಲ್ಲಿಯೂ ದೊರೆಯವ ಅಪೂರ್ವವಾದ ಪುಸ್ತಕಗಳನ್ನು ಅವರು ಸಂಗ್ರಹಿಸಿ ಇಟ್ಟಿದ್ದರು. ಹಳೆಯ ಕವಿಗಳ ಕಾವ್ಯಗಳೂ ಚಾರಿತ್ರಿಕ ವಿಚಾರದಲ್ಲಿ ಸಂಶೋಧನೆಗೆ ಬೇಕಾದ ಗ್ರಂಥಗಳೂ ತಮ್ಮ ಸಂಗ್ರಹದಲ್ಲಿಯೇ ದೊರೆಯುವಂತೆ ಪೈಗಳು ಪುಸ್ತಕಗಳನ್ನು ಹುಡುಕಿ ಹುಡುಕಿ ತಂದಿದ್ದರು.

ಇವರು ಪಾಲಿ ಭಾಷೆಯನ್ನು ಅಭ್ಯಾಸ ಮಾಡಿ, ಗೌತಮ ಬುದ್ಧನ ಉಪದೇಶವನ್ನು ಒಳಗೊಂಡ “ವೈಶಾಖಿ” ಎಂಬ ಕಾವ್ಯವನ್ನೂ ಹೀಬ್ರೂ ಮತ್ತು ಲ್ಯಾಟಿನ್ ಭಾಷೆಯ ಬೈಬಲನ್ನು ಅಭ್ಯಾಸ ಮಾಡಿ, “ಗೊಲ್ಗೊಥಾ” ಎಂಬ ಯೇಸುವಿನ ಕಡೆಯ ದಿನದ ಕಾವ್ಯವನ್ನೂ ಬರೆದರು.

ಬಂಗಾಳಿಯಲ್ಲಿ ನವೀನಚಂದ್ರ ಸೇನರು ಬರೆದ ರೈವ ತಕ, ಕುರುಕ್ಷೇತ್ರ, ಪ್ರಭಾಸ ಎಂಬ ಮೂರು ಕಾವ್ಯಗಳ ಹಲವು ಸರ್ಗಗಳನ್ನು ಕನ್ನಡಿಸಿ, “ಶ್ರೀ ಕೃಷ್ಣ ಚರಿತೆ” ಎಂಬ ಗದ್ಯಕಥೆಯನ್ನು ಬರೆದರು. ಸಂಸ್ಕೃತ ಮಹಾ ಭಾರತದ ಆಧಾರದಿಂದ ಏಕಲವ್ಯನ ಕಥೆಯನ್ನು “ಹೆಬ್ಬೆರಳು” ಎಂಬ ನಾಟಕವಾಗಿ ರೂಪಿಸಿದರು.

ಜಪಾನೀ ಭಾಷೆಯಿಂದ ಕೆಲವು “ನೋ ನಾಟಕ” ಗಳನ್ನು ಕನ್ನಡಿಸಿದರು.

ಹೀಗೆ ತಮ್ಮ ಹಲವು ಭಾಷೆಗಳ ಜ್ಞಾನದ ಉಪಯೋಗವನ್ನು ಕನ್ನಡಿಗರಿಗೆ ಮಾಡಿಕೊಟ್ಟರು.

ಗೋವಿಂದ ಪೈ ಅವರ ಗ್ರಂಥ ಭಂಡಾರ ಈಗ ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನಲ್ಲಿದೆ.

ಸಾಹಿತ್ಯ ರಚನೆಯ ಪ್ರಾರಂಭ

ಗೋವಿಂದ ಪೈಗಳು ತಮಗೆ ಕಾವ್ಯ ರಚನೆಗೆ ಪ್ರೇರಣೆ ಉಂಟಾದ ಸಂದರ್ಭವನ್ನು “ಸಾಹಿತ್ಯಜ್ಞರ ಆತ್ಮಕಥನ”ವೆಂಬ ಲೇಖನದಲ್ಲಿ ಹೀಗೆ ಬರೆದಿರುವರು:

೧೮೯೫ ನೆಯ ಇಸವಿ. ಮಂಗಳೂರಿನ ಅವರ ಮನೆಯಲ್ಲಿ ತಮ್ಮನ ಉಪನಯನದ ಸಂದರ್ಭ.

ಒಂದು ಕಡೆ ಲಾಡುಗಳನ್ನು ಕಟ್ಟುತ್ತಿದ್ದಾರೆ; ಇನ್ನೊಂದು ಕಡೆ ಮಂಡಿಗೆ ಮಡಿಸುತ್ತಿದ್ದಾರೆ. ಜೋಳದ ಗದ್ದೆಯಲ್ಲಿ ಗಿಳಿಗಳ ಕೋಲಾಹಲದಂತೆ ಚಪ್ಪರವೆಲ್ಲಾ ಗದ್ದಲ.

ಆ ನಡುವೆ ಕುಗ್ಗಿದ ದನಿಯಲ್ಲಿ ಒಂದು ಹಾಡು ಕೇಳಿಸಿತು.

ಅಡವಿಗೆ ಪೋಪರೇನೇ | ಕಂದಯ್ಯ ||ಪಲ್ಲವಿ||
ಅಡವಿಯೊಳಗೆ ಬಲು| ಕಡು ಕೂಳ ಮೃಗಗಳು
ಬಿಡದೆ ಬಾಧಿಪವೊ ನಿನ್ನ ||ಅನುಪಲ್ಲವಿ||

ಆಗ ಅವರಿಗೆ ಏನಾಯಿತೋ ಏನು ತೋಚಿತೋ, ನೆಟ್ಟಗೆ ಹೋಗಿ ಅಭ್ಯಾಸದ ಪುಸ್ತಕವನ್ನು ಹಿಡಿದು, ಒಂದು ಏಕಾಂಕ ನಟಕವನ್ನು ಬರೆಯತೊಡಗಿದರಂತೆ. ಅದು ಒಂದೇ ದಿನದಲ್ಲಿ ಇಳಿಹೊತ್ತಿನೊಳಗೆ ಮುಗಿಯಿತು.

ಮುಗಿಸಿದ ಮೊದಲಿನ ನಾಟಕದಲ್ಲಿ ತಾಯಿ-ತಂದೆಯರ ಒಬ್ಬನೇ ಮಗನು ಕಾಡಿಗೆ ಹೋಗುತ್ತಾನೆ. ಹೋಗಬಾರದೆಂದು ಅವರು ಅಂಗಲಾಚಿ ಬೇಡುತ್ತಾರೆ. ಉಳಿದ ಕಥೆಯಲ್ಲಾ ಮರೆತು ಹೋಗಿದೆಯಂತೆ.

ಇದು ಅವರ ಸಾಹಿತ್ಯ ಮಂದಿರದ ಪ್ರವೇಶ. ಆಗ ಅವರ ಪ್ರಾಯ ೧೨ ವರ್ಷ.

೧೮೯೯ರಲ್ಲಿ ಷೇಕ್ಸ್‌ಪಿಯರಿನ “ಹನ್ನೆರಡನೆಯ ರಾತ್ರಿ” ಎಂಬ ನಾಟಕದ ಮೊದಲನೆಯ ಅಂಕದಿಂದ ಕೆಲವು ದೃಶ್ಯಗಳನ್ನು ವೃತ್ತ ಕಂದಗಳಲ್ಲಿ ಕನ್ನಡಿಸಿ, ಅದನ್ನು ಶ್ರೀ ನಂದಳಿಕೆ ಲಕ್ಷ್ಮೀನಾರಣಪ್ಪ (ಮುದ್ದಣ) ನವರಿಗೆ ಉಡುಪಿಗೆ ಕಳಿಸಿಕೊಟ್ಟರು. “”ಮುಂದುವರಿಸು” ಎಂದು ಅವರು ಹೇಳಿಕಳಿಸಿದರು. ಆದರೆ ಗೋವಿಂದ ಪೈಯವರು ಮುಂದುವರಿಸಲಿಲ್ಲ.

ಪ್ರಾಸವಿಲ್ಲದ ಪದ್ಯ

ಹತ್ತೊಂಬತ್ತನೆಯ ಶತಮಾನದವರೆಗೆ ಹಳೆಗನ್ನಡದಲ್ಲೂ ನಡುಗನ್ನಡದಲ್ಲೂ ಪ್ರತಿಯೊಂದು ಕಾವ್ಯದಲ್ಲಿಯೂ ಆದಿಪ್ರಾಸವಿದೆ. ಪದ್ಯದ ಪ್ರತಿಯೊಂದು ಪಾದದಲ್ಲಿಯೂ ಎರಡನೆಯ ಅಕ್ಷರವು ಒಂದೇ ರೀತಿಯಾಗಿರುವುದಕ್ಕೆ ಆದಿ ಪ್ರಾಸವೆಂದು ಹೆಸರು. ಉದಾಹರಣೆಗೆ, ಈ ಮೂರು ಪಂಕ್ತಿಗಳನ್ನು ನೋಡಿ:

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ |

ನವೋದಯ ಕಾವ್ಯದಲ್ಲಿ ಹೀಗೆ ಆದಿಪ್ರಾಸವಿರಲೇ ಬೇಕು ಎಂಬ ನಿಯಮವನ್ನೇನೂ ಕವಿಗಳು ಅನುಸರಿಸಿಲ್ಲ. (ಸುಮಾರು ಅರವತ್ತು ವರ್ಷಗಳ ಹಿಂದೆ ಅನೇಕ ಕವಿಗಳು, ಕಥೆಗಾರರು, ಕಾದಂಬರಿಕಾರರು, ನಾಟಕಕಾರರು ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಸುಮಾರು ಮೂವತ್ತೈದು ವರ್ಷಗಳ ಸಾಹಿತ್ಯಕ್ಕೆ ನವೋದಯ ಸಾಹಿತ್ಯ ಎನ್ನುವುದು ರೂಢಿ.)

ಛಂದಸ್ಸಿನ ಈ ನಿಯಮವನ್ನು ಮುರಿದು, ಕನ್ನಡದಲ್ಲಿ ಪ್ರಾಸವಿಲ್ಲದೆ ಪದ್ಯ ರಚನೆ ಪ್ರಾರಂಭ ಮಾಡಿದವರು ಗೋವಿಂದ ಪೈಗಳು. ಈಗ ನಮಗೆ ಇದೇನು ದೊಡ್ಡ ಸಂಗತಿಯಲ್ಲ ಎನಿಸಬಹುದು. ಆದರೆ, ಸಂಪ್ರದಾಯಕ್ಕೆ ಬಹಳ ಮರ್ಯಾದೆ ಇದ್ದ ಆ ಕಾಲದಲ್ಲಿ ಇದು ಕಾವ್ಯದಲ್ಲಿ ಒಂದು ಕ್ರಾಂತಿಯೇ ಎನ್ನಬೇಕು. ಇದು ಅವರ ದಿಟ್ಟತನದ ಎದೆಗಾರಿಕೆ. ಇದರಿಂದಾಗಿ ಗೋವಿಂದ ಪೈಯವರು ತುಂಬಾ ಅಕ್ಷೇಪಣೆಯನ್ನು ಕೇಳಬೇಕಾಯಿತು.

೧೯೧೧ ನೆಯ ಏಪ್ರಿಲ್ ತಿಂಗಳಲ್ಲಿ ಬರೋಡದಲ್ಲಿ ಒಂದು ಮುಂಜಾನೆ ಮಾಳಿಗೆಯಲ್ಲಿ ಶತಪಥ ಸುತ್ತುತ್ತಿದ್ದರು ಗೋವಿಂದ ಪೈ. ಇದ್ದಕ್ಕಿದ್ದಹಾಗೆ “ಆಗೋದು ಹೋಗೋದು ದೇವರ ಇಚ್ಛೆ. ಹೂಡೋದು ಬಿತ್ತೋದು ನನ್ನ ಇಚ್ಛೆ. ಇನ್ನು ಮೀನ ಮೇಷ ನೋಡದೆ (ಆಲೋಚನೆ ಮಾಡದೆ) ಪ್ರಾಸವನೀಗಲೇ ತೊರೆದು ಬಿಡುವುದೇ ನಿಶ್ಚಯಂ” ಎಂದುಕೊಂಡರು. ರವೀಂದ್ರನಾಥ ಠಾಕೂರರ “ಭಾರತ ಲಕ್ಷ್ಮಿ” ಮತ್ತು “ವಿದಾಯ” ಎಂಬ ಕವನಗಳನ್ನು ಕನ್ನಡಿಸಿದರು.

ಮಾರನೆಯ ತಿಂಗಳಲ್ಲಿ ಊರಿಗೆ ಮರಳಿದವರೇ ಅವುಗಳನ್ನು ಮಂಗಳೂರಿನ “ಸ್ವದೇಶಾಭಿಮಾನಿ” ವಾರಪತ್ರಿಕೆಯಲ್ಲಿ ಪ್ರಕಟಿಸಿದರು. ಆಮೇಲೆ “ಹೊಲೆಯನು ಯಾರು?” ಎಂಬ ಪ್ರಾಸವಿಲ್ಲದ ಸ್ವತಂತ್ರ ಪದ್ಯವನ್ನು ಬರೆದರು. ಅದೂ ಕೂಡ ಪ್ರಕಟವಾಯಿತು.

ಆಗ ಕನ್ನಡ ಕಾವ್ಯಮಾರ್ಗದಲ್ಲಿ ಪ್ರಾಸಬಿಟ್ಟುದನ್ನು ಬಿರುಸಾಗಿ ಖಂಡಿಸಿ, ಪಂಡಿತ ವರ್ಗದವರು ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದರು.

ಪೈಗಳು ಇವುಗಳಿಗೇನೂ ಜಗ್ಗಲಿಲ್ಲ. “ಛಂದಸ್ಸನ್ನೂ ವ್ಯಾಕರಣವನ್ನೂ ಕೂಡ ತಮಗೆ ಬೇಕಾದಂತೆ ಮಾರ್ಪಡಿಸಿಯೂ, ನೇರ್ಪಡಿಸಿಯೂ ಸರಿಪಡಿಸಲು ಕವಿಗೆ ಅಧಿಕಾರವಿದೆ. ಬೇಕಾದವರು ಈ ಹೊಸ ಹಾದಿಯನ್ನು ಹಿಡಿಯಲಿ; ಬೇಡದವರು ಹಳೆಯ ಹಾದಿಯಲ್ಲೇ ನಡೆಯಲಿ” ಎಂದು ಪ್ರತ್ಯುತ್ತರ ಕೊಟ್ಟರು. ಇಂಗ್ಲೀಷ್ ಕಾವ್ಯ ಹೇಗೆ ಮುನ್ನಡೆಯಿತು ಎಂದು ವಿವರಿಸಿದರು. “ಇಂದು ಒಬ್ಬನೇ ನಡೆವ ಮೇಕೆ ದಾರಿಯೇ ಮುಂದೆ ತೇರು ಎಳೆವ ಹೆದ್ದಾರಿ” ಎಂದು ಸಾರಿದರು.

ಹೀಗೆ ಇಪ್ಪತ್ತನೆಯ ಶತಮಾನದ ಆದಿಕಾಲದಲ್ಲಿ ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಮೊಟ್ಟಮೊದಲಾಗಿ ಪ್ರಾಸವಿಲ್ಲದ ಹೊಸ ಕವಿತೆಯನ್ನು ಬರೆಯಲು ಪ್ರಾರಂಭ ಮಾಡಿದವರು ಗೋವಿಂದ ಪೈಗಳು. ಆಮೇಲೆ ಹೊಸಕಾಲದ ಕವಿಗಳೆಲ್ಲಾ ಪ್ರಾಸವಿಲ್ಲದೆ ಪದ್ಯರಚನೆ ಮಾಡಲು ತೊಡಗಿದರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು

ಕನ್ನಡ ಸಾಹಿತ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಕನ್ನಡ ಜನತೆ ಸಲ್ಲಿಸುವ ಅತ್ಯುನ್ನತ ಗೌರವದ ಪದವಿಯೆಂದರೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ.

ಗೋವಿಂದ ಪೈಗಳಿಗೆ ಯಾವ ಪ್ರಶಸ್ತಿ, ಪದವಿ, ಗೌರವಗಳೂ ಬೇಕಿರಲಿಲ್ಲ. ಅನೇಕ ಬಾರಿ ಕನ್ನಡ ಸಾಹಿತ್ಯ ಸಮ್ಮೇನದ ಅಧ್ಯಕ್ಷತೆಗೆ ಅವರ ಹೆಸರು ಸೂಚಿತವಾದರೂ ಅವರು, “ಉಹುಂ ನನಗೆ ಬೇಡ” ಎಂದು ಬಿಡುತ್ತಿದ್ದರು. ಕಡೆಗೆ ಹಲವರು ಹಿರಿಯರು ಸ್ನೇಹದಿಂದ ಒತ್ತಾಯ ಮಾಡಿದರು. ಅವರ ಸ್ನೇಹ ವಿಶ್ವಾಸಗಳಿಗೆ ಕಟ್ಟುಬಿದ್ದು ಗೋವಿಂದ ಪೈಗಳು ಒಪ್ಪಿದರು.

೧೯೫೦ ರಲ್ಲಿ ಮುಂಬಯಿಯಲ್ಲಿ ನೆರೆದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಗೋವಿಂದ ಪೈಗಳು ಒಪ್ಪಿಕೊಂಡರು.

ಅಲ್ಲಿ ಅವರು ತಮ್ಮ ಅಧ್ಯಕ್ಷ ಭಾಷಣದ ಕೊನೆಗೆ ಹೇಳಿದ ಹೃದಯ ಸ್ಪರ್ಶಿಯಾದ ಮಾತೆಂದರೆ-

“ನಾನು ಎರಡು ತಾಯಂದಿರ ಕೂಸು. ಕೊಂಕಣಿ ಹೆತ್ತತಾಯಿ. ಕನ್ನಡ ಸಾಕುತಾಯಿ. ಆದರೆ ಹೆತ್ತ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ (ನಂಟುತನದಲ್ಲಿ) ಹಾಕಿದಳು. ಈ ತಾಯಿಯಾದರೆ ಪಯಸ್ವಿನಿ (ತುಂಬಾ ಹಾಲಿರುವವಳು). ಎಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿಯೂ ಮತ್ತೂ ಬತ್ತದ, ದೇವರ ದಯೆಯಿಂದ ಸರ್ವದಾ ಬತ್ತಬಾರದ ಸದಾಸ್ನುಹಿ (ಯಾವಾಗಲೂ ಹಾಲು ಸುರಿಸುವವಳು).

“ಶ್ರೀ ದೇವರು ತಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ.”

ಬಹುಮುಖ ಸಾಹಿತ್ಯ ರಚನೆ

ಗೋವಿಂದ ಪೈಗಳು ಕವಿಗಳು ಹಾಗೂ ಸಂಶೋಧಕರು. ಸುಮಾರು ೧೪೪ ಪದ್ಯಗಳನ್ನು, ಸುಮಾರು ೧೮೦ ಸಂಶೋಧನ ಲೇಖನಗಳನ್ನು ಬರೆದಿರುವರು.

ಪುಸ್ತಕವಾಗಿ ಪ್ರಕಟವಾದ ಇವರ ಮುಖ್ಯ ಕೃತಿಗಳು ಇವು.

೧. ಗಿಳಿವಿಂಡು (ಕವನಗಳು)

೨. ಗೊಲ್ಗೊಥಾ ಅಥವಾ ಯೇಸುವಿನ ಕಡೆಯ ದಿನ (ಖಂಡಕಾವ್ಯ)

೩. ವೈಶಾಖಿ ಅಥವಾ ಬುದ್ಧನ ಕಡೆಯ ದಿನ (ಖಂಡಕಾವ್ಯ)

೪. ಹೆಬ್ಬೆರಳು (ಗೀತನಾಟಕ)

೫. ಚಿತ್ರಭಾನು ಅಥವಾ ೧೯೪೭ (ಗದ್ಯನಾಟಕ)

೬. ಶ್ರೀ ಕೃಷ್ಣಚರಿತೆ (ಗದ್ಯಕಥೆ)

೭. ಹೃದಯರಂಗ (ಕವನಗಳು)

೮. ನಂದಾದೀಪ (“)

ಗಿಳಿವಿಂಡು

೧೯೦೦ ರಿಂದ ೧೯೩೦ರ ವರೆಗೆ ಮೂವತ್ತು ವರ್ಷಗಳಲ್ಲಿ ಬರೆದ ಕವನಗಳು “ಗಿಳಿವಿಂಡು”ವಿನಲ್ಲಿ ಆಯ್ಕೆ ಹೊಂದಿವೆ. ಇದರಲ್ಲಿ ೪೫ ಕವನಗಳೂ “ಉಮರ್‌ ಖಯ್ಯಾಂ” ಎಂಬ ಖಂಡಕಾವ್ಯವೂ ಪ್ರಕಟವಾಗಿದೆ.

ಈ “ಗಿಳಿವಿಂಡು”ವನ್ನು ಪೈಗಳು ತಮ್ಮ ಇಷ್ಟದೇವರಾದ ಕೃಷ್ಣನಿಗೂ ಆ ಕಾಲದಲ್ಲಿ ಮಡಿದ ತಮ್ಮ ಪ್ರೀಯ ಮಡದಿ ಕೃಷ್ಣೆಗೂ ಒಂದೇ ಪದ್ಯದಲ್ಲಿ, ಒಂದೇ ಶಬ್ದದಲ್ಲಿ “ಕೃಷ್ಣಾರ್ಪಣೆ” ಮಾಡಿರುವವರು. (ಕೃಷ್ಣನಿಗೆ ಅರ್ಪಣ, ಕೃಷ್ಣೆಗೆ ಅರ್ಪಣ ಎಂದು ಒಂದೇ ರೀತಿಯಾಗಿ ಹೊಂದಿಕೊಳ್ಳುವುದು).

“ಕಡಲ ಕೆರೆಯಲ್ಲಿ ಹೊತ್ತುಗಳೆಯಲೆಂದೇ ಆಡುತ್ತಿರುವ ಯಾವೊಂದು ಮಗುವಾದರೂ ಅಲ್ಲಲ್ಲಿ ಮೇಲಕ್ಕೆ ಉರುಳಿದ ಚಿಪ್ಪುಗಳನ್ನು ತಾನು ಹೆಕ್ಕಿದಂತೆ ಮರಳಿ ತೆರೆಗಳ ಆಳಕ್ಕೆ ಒಗೆದು ಬಿಡದೆ, ಅದನ್ನ ತನ್ನ ಕಣ್ಣ ಮುಂದೆ ಒಟ್ಟು ಹಾಕುವಂತೆ, ಅಲ್ಲಲ್ಲಿ ಚದುರಿದ್ದ ನನ್ನೀ ಕೆಲವು ಕವಿತೆಗಳನ್ನು ಅಂದಂದಿನ ಮರೆಯಿಂದ ಎತ್ತಿಕೊಂಡು ಹೀಗೆ ಸಂಗ್ರಹವಾಗಿ ಕೂಡುಹಾಕಿರುವೆನಷ್ಟೆ” ಎಂದಿದ್ದಾರೆ ಗೋವಿಂದ ಪೈಗಳು ಮುನ್ನುಡಿಯಲ್ಲಿ.

ಗೊಲ್ಗೊಥಾ

ಇದರಲ್ಲಿ ಯೇಸುಕ್ರಿಸ್ತನ ಕಡೆಯ ದಿನದ ಕಥೆಯನ್ನು ಸರಳ ರಗಳೆಯಲ್ಲಿ ಬರೆದಿದ್ದಾರೆ.

ಯೆಹೂದ್ಯರು ಯೇಸುವನ್ನು ಪಿಲಾತ ಎಂಬ ಅಧಿಕಾರಿಯ ಬಳಿ ಎಳೆತಂದರು. ಅವನ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದನು.

ಅವನಿಗೆ ಶಿಕ್ಷೆಯೆಂದರೆ ತಾನೇ ತನ್ನ ಶಿಲುಬೆಯನ್ನು ಹೊತ್ತುಕೊಂಡು, ಊರ ಹೊರಗಿನ ಗೊಲ್ಗೊಥಾ ಗುಡ್ಡವನ್ನೇರಬೇಕು; ಅಲ್ಲಿ ಇಬ್ಬರು ಕಳ್ಳರ ಮಧ್ಯದಲ್ಲಿ ಅವನ ಕೈಕಾಲುಗಳಿಗೆ ಕಬ್ಬಿಣದ ಮೊಳೆ ಹೊಡೆದು ವಧೆ ಮಾಡಬೇಕು.

ವೈಶಾಖಿ

ಇಲ್ಲಿರುವುದು ಬುದ್ಧನ ಕಡೆಯ ದಿನದ ಕಥೆ.

ಬುದ್ಧನು ವೈಶಾಖ ಶುಕ್ಲ ಪೂರ್ಣಿಮೆಯ ರಾತ್ರಿ ತನ್ನ ಎಂಬತ್ತನೆಯ ಪ್ರಾಯದಲ್ಲಿ ಪಾವಾನಗರದಿಂದ ಹೊರಟು ಕುಶಿಗರಕ್ಕೆ ಬರುವನು.

ಅವನಿಗೆ ಸೂಕರ ಮದ್ದವವೆಂಬ ಅಣಬೆಯನ್ನು ತಿಂದುದರಿಂದಾಗಿ ಆಮಶಂಕೆ ರೋಗ ಬಂದಿತ್ತು.

ದಾರಿಯಲ್ಲಿ ತನ್ನ ಪ್ರೀತಿಯ ಶಿಷ್ಯ ಆನಂದನಿಂದ ನೀರು ತರಿಸಿ ಕುಡಿದು, ಪುಕ್ಕಸನೆಂಬ ಮಲ್ಲನಿಗೆ ಧರ್ಮೋಪದೇಶ ಮಾಡುವನು.

ಬಳಿಕ ಕಕುತ್ಥಾ ನದಿಯಲ್ಲಿ ಮಿಂದು, ಕುಶಿನಾರದ ಸಾಲವನದಲ್ಲಿ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದಾಗ, ಆನಂದನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವನು.

ಕೊನೆಗೆ ಸುಭದ್ರನೆಂಬ ಸನ್ಯಾಸಿಗೆ ಕೊನೆಯ ಉಪದೇಶವನ್ನು ಹೇಳಿ, ಧ್ಯಾನಮಗ್ನನಾಗಿ ಮಹಾಸಮಾಧಿ ಹೊಂದುವನು.

ಹೆಬ್ಬೆರಳು

ಇದೊಂದು ಪದ್ಯ ನಾಟಕ, ಪ್ರಾಚೀನ ಗ್ರೀಕ್ ನಾಟಕದಲ್ಲಿ ಕಥೆಯನ್ನು ಬೆಳೆಸಲು ಮೇಳದವರು ಇರುವಂತೆ ಇದರಲ್ಲಿ “ಗೊಂದಲದವರು” ಇದ್ದಾರೆ.

ಏಕಲವ್ಯನ ಚಿಕ್ಕಪ್ಪ ಹಿರಣ್ಯಧನು ಬೇಡಬೆಂದರೂ ಭಿಲ್ಲಬಾಲಕನು ಶಸ್ತ್ರವಿಧ್ಯೆಯನ್ನು ಕಲಿಯಲು ದ್ರೋಣನ ಬಳಿಗೆ ಹೋಗುವನು. ಅನಾರ್ಯನಾದ ಬಿಲ್ಲಕುಮಾರನಿಗೆ ವಿದ್ಯೆ ಕಲಿಸುವುದು ಸಂಪ್ರದಾಯಕ್ಕೆ ವಿರೋಧವೆಂದು ದ್ರೋಣನು ನಿರಾಕರಿಸುವನು. ಏಕಲವ್ಯನು ನಮಸ್ಕರಿಸಿ ಹಿಂತೆರಳುವಾಗ ದ್ರೋಣನು ಒಳ್ಳೆಯ ಮನಸ್ಸಿನಿಂದ ಹರಸಿದ ಕಾರಣ ಅವನು ಬಿಲ್ಲುವಿದ್ಯೆಯಲ್ಲಿ ಜಾಣನಾಗುವನು. ಏಕಲವ್ಯನಿಗೆ ದ್ರೋಣನೇ ಗುರುವೆಂದು ಅವನಿಂದ ಕೇಳಿ ತಿಳಿದ ಅರ್ಜುನನು ಹೊಟ್ಟೆಕಿಚ್ಚು ಪಟ್ಟು, ಗುರುವನ್ನು ಅವನಲ್ಲಿಗೆ ಕರೆದುಕೊಂಡು ಹೋಗುವನು. ಅಲ್ಲಿ ಏಕಲವ್ಯನು ಗುರುವಿಗೆ ತನ್ನ ಹೆಬ್ಬೆರಳನ್ನು ಕಾಣಿಕೆಯಾಗಿ ಸಮರ್ಪಿಸುವನು.

ಚಿತ್ರಭಾನು ಅಥವಾ ೧೯೪೨

೧೯೪೨ ಆಗಸ್ಟ್‌ ತಿಂಗಳಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಅಂತಿಮ ಹೋರಾಟ ಪ್ರಾರಂಭವಾಯಿತು. “ಬ್ರಿಟೀಷರೇ, ಭಾರತ ಬಿಟ್ಟು ಹೊರಡಿ” ಎಂಬ ಘರ್ಜನೆ ಭಾರತದ ಮೂಲೆ ಮೂಲೆಯಲ್ಲಿಯೂ ಪ್ರತಿಧ್ವನಿತವಾಯಿತು. ಸಾವಿರಾರು ಮಂದಿ ಈ ಹೋರಾಟದಲ್ಲಿ ಭಾಗವಹಿಸಿದರು. “ಚಿತ್ರಭಾನು” ನಾಟಕದ ಕಥೆ ಈ ಹಿನ್ನೆಲೆಯಲ್ಲಿ ನಡೆಯುತ್ತದೆ.

ವೇಣುಗೋಪಾಲನೆಂಬ ತರುಣನು “ಭಾರತದಿಂದ ತೊಲಗಿರಿ” ಎಂಬ ಭಾರತ ಸ್ವಾತಂತ್ಯ್ರ ಚಳವಳಿಯಲ್ಲಿ ಭಾಗವಹಿಸಲು ಮನೆಬಿಟ್ಟು ಹೋಗಿದ್ದನು. ಅವನ ತಾಯಿ ಯಶೋದೆಯೂ, ಅವಳು ಸಾಕುವ ಹುಡುಗಿ ಜಾಹ್ನವಿಯೂ ಹಳ್ಳಿಯ ಮನೆಯಲ್ಲಿ ವಾಸಿಸುತ್ತಿದ್ದರು. ವೇಣುಗೋಪಾನೂ ಜಾಹ್ನವಿಯೂ ಮುಂದೆ ಮದುವೆಯಾಗುವುದೆಂದು ನಿಶ್ಚಯವಾಗಿತ್ತು. ಒಂದು ರಾತ್ರಿ ವೇಣುಗೋಪಾಲನು ಮನೆಗೆ ಬಂದಿದ್ದನು. ಅವನನ್ನು ಹುಡುಕುತ್ತಾ ಪೊಲೀಸ್ ಮೇಲಧಿಕಾರಿಯು ಬಂದು, ಅವನನ್ನು ಹುಡುಕಿ, ಅಟ್ಟದಲ್ಲಿ ಅಡಗಿದ್ದ ವೇಣಿವನ್ನು ಕೊಂದು ಹಾಕುವನು. ಜಾಹ್ನವಿಯು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಳು.

ಇದೊಂದು ಕರುಣಾಜನಕವಾದ ನಾಟಕ.

ಹೊಲೆಯ ಯಾರು?

ಕವಿಯಾಗಿ, ವ್ಯಕ್ತಿಯಾಗಿ ಗೋವಿಂದ ಪೈ ಸಾರ್ಥಕ ಜೀವನದ ದಾರಿ ತೋರಿಸಿದರು.

ಸಮಾಜದಲ್ಲಿ ಕೆಲವರು ಹುಟ್ಟಿನಿಂದ ಕೀಳು, ಅವರನ್ನು ಮುಟ್ಟಬಾರದು, ಅವರು ಮೈಲಿಗೆ ಎಂಬ ತಪ್ಪು ಭಾವನೆ ನಮ್ಮ ಸಮಾಜದಲ್ಲಿ ಹೇಗೋ ಬೆಳೆದು ಬಂತು. ಹೊಲೆಯರು, ಎಂದರೆ ಕೊಳಕರು, ಇದ್ದಾರೆಯೇ? ಎಂದರೆ ಇದ್ದಾರೆ ಎಂದರು. ನಮ್ಮ “ಹೊಲೆಯನು ಯಾರು?” ಎಂಬ ಕವನದಲ್ಲಿ ಗೋವಿಂದ ಪೈ ಯಾರು ಹೊಲೆಯ?

ರಾಷ್ಟದುನ್ನತಿಯ ಸಾಧಿಸೆ ಶ್ರಮಿಸದವ ಹೊಲೆಯ
ತನ್ನ ರಾಷ್ಟ್ರಕ್ಕೆ ದ್ರೋಹ ಚಿಂತಿಪನೆ ಹೊಲೆಯ
ಸ್ವಾರ್ಥದಿಂದ ರಾಷ್ಟ್ರಹಿತವನು ಮರೆವವನು ಹೊಲೆಯ
ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ.

ಯಾವಾತನಿಗೆ ದೇಶಪ್ರೇಮ ಇಲ್ಲವೋ, ತನ್ನ ಲಾಭಕ್ಕಾಗಿ ದೇಶದ ಹಿತವನ್ನು ಮರೆಯುತ್ತಾನೆಯೋ, ದೇಶದ ಹಿತಕ್ಕಾಗಿ ಶ್ರಮಪಡುವುದಿಲ್ಲವೋ, ದೇಶಕ್ಕೆ ದ್ರೋಹ ಬಗೆಯುವ ಯೋಚನೆ ಮಾಡುತ್ತಾನೋ ಅವನೇ ಹೊಲೆಯ. ಹುಟ್ಟಿನಿಂದ ಯಾರೂ ಹೊಲೆಯರಲ್ಲ, ಯೋಚನೆಯಿಂದ, ಬಾಳುವ ರೀತಿಯಿಂದ ತಾವೇ ಹೊಲೆಯರಾಗುತ್ತಾರೆ.

ಸಂಶೋಧಕ

ಗೋವಿಂದ ಪೈ ಬಹು ದೊಡ್ಡ ವ್ಯಕ್ತಿ. ಅವರು ಕವನಗಳನ್ನೂ, ನಾಟಕಗಳನ್ನೂ ಬರೆದರು. ಜೊತೆಗೆ ಬಹುಕಾಲವನ್ನು ಸಂಶೋಧನೆಗೆ ಮುಡಿಪು ಮಾಡಿದರು. ನಾಲ್ಕು ನೂರು ವರ್ಷಗಳ ಹಿಂದೆ ನಡೆದ ಒಂದು ಘಟನೆ- ಯಾವ ದಿನ ನಡೆಯಿತು, ಇಂತಹ ಕಾವ್ಯವನ್ನು ಬರೆದವರು ಯಾರು, ಈ ಶಾಸನದಲ್ಲಿ ಒಂದು ಹೆಸರು ಬರುತ್ತದೆಯಲ್ಲವೆ ಆ ವ್ಯಕ್ತಿ ಯಾರು, ಆ ಕಾವ್ಯದಲ್ಲಿ ಈ ಶಬ್ದ ಬರುತ್ತದೆಯಲ್ಲವೆ, ಬರೆದ ಕಾಲದಲ್ಲಿ ಅದರ ಅರ್ಥ ಏನಿತ್ತು- ಹೀಗೆ ಸಮಸ್ಯೆಗಳನ್ನು ಕಟ್ಟಿಕೊಂಡು ವರ್ಷಗಟ್ಟಲೆ ಶ್ರಮಿಸುವುದು ಸಂಶೋಧಕನ ರೀತಿ. ಬಹು ತಾಳ್ಮೆಯಿಂದ ಹತ್ತಾರು ಕಡೆಯಿಂದ ಸಾಕ್ಷ್ಯ ಆಧಾರಗಳನ್ನು ಸಂಗ್ರಹಿಸಬೇಕು. ಶಾಸನಗಳನ್ನೂ ಧರ್ಮಗ್ರಂಥಗಳನ್ನೂ ಶಾಸ್ತ್ರ ಗ್ರಂಥಗಳನ್ನೂ ಸಾಹಿತ್ಯ ಕೃತಿಗಳನ್ನೂ ಓದಬೇಕು, ಯೋಚಿಸಬೇಕು. ವರ್ಷಗಟ್ಟಲೆ ಶ್ರಮಿಸಿದರೂ ಒಬ್ಬ ವ್ಯಕ್ತಿಯ ವಿಷಯ, ಒಂದು ಪದದ ಅರ್ಥ ತಿಳಿಯದೆ ಹೋಗಬಹುದು. ಸುಲಭ ಜಯ, ಸುಲಭ ಕೀರ್ತಿ ತರುವ ಹಾದಿಯಲ್ಲ ಸಂಶೋಧನೆ. ಆದರೆ ಈ ತೆರನಾದ ಸಂಶೋಧನೆ ಇಲ್ಲದೆ ನಮಗೆ ಹಿಂದಿನ ಕಾಲ, ಹಿಂದಿನ ಕಾವ್ಯ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.

ಈ ಕಷ್ಟದ ದಾರಿಯನ್ನು ಆರಿಸಿಕೊಂಡರು ಗೋವಿಂದ ಪೈ. ಪ್ರಾಚೀನ ಗ್ರೀಕ್ ನಾಟಕ ಒಂದರಲ್ಲಿ ಬರುವ ಕೆಲವು ಪದಗಳು ಕನ್ನಡ ಪದಗಳೇ? “ಖಂಡಿತ” ಸರಿಯಾದ ರೂಪವೆ, ‘ಕಂಡಿತ’ ಸರಿಯಾದ ರೂಪವೆ? ಬುದ್ಧ ಹುಟ್ಟಿದ ದಿನ ಯಾವುದು? ಪರಿನಿರ್ವಾಣಕ್ಕೆ ಸಂದ ದಿನ ಯಾವುದು? ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರು. ನಾಡಿನ ಅತ್ಯಂತ ಹಿರಿಯ ವಿದ್ವಾಂಸರಲ್ಲಿ ಒಬ್ಬರಾದರು.

ಗೋವಿಂದ ಪೈಯವರು ಎಂದೂ ಕೀರ್ತಿಯನ್ನು ಬಯಸಲಿಲ್ಲ. ಕೀರ್ತಿ ಬಂದಾಗ ತಾವು ದೂರ ಸರಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ, ರಾಷ್ಟ್ರಕವಿಯ ಪ್ರಶಸ್ತಿ ಇವನ್ನು “ಒಲ್ಲೆ” ಎಂದರು. ಅವರ ಸ್ನೇಹಿತರು ಒತ್ತಾಯ ಮಾಡಿ ಅವರನ್ನು ಒಪ್ಪಿಸಬೇಕಾಯಿತು ಎಂಬ ಸಂಗತಿಯನ್ನು ಆಗಲೇ ಕಂಡಿದ್ದೇವೆ. ೧೯೬೩ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಅವರಿಗೆ “ಡಾಕ್ಟರ್ ಆಫ್ ಲಿಟರೇಚರ್” ಪ್ರಶಸ್ತಿ ಕೊಡಬೇಕೆಂದು ನಿರ್ಧರಿಸಿತು. “ನನಗೆ ಬೇಡ” ಎಂದರು ಗೋವಿಂದ ಪೈ.

ಮಕ್ಕಳ ನಡುವೆ ಮಗು

ಗೋವಿಂದ ಪೈಯವರದು ಬಹು ಖಂಡಿತವಾದ ಮಾತು. ದೃಢ ಮನಸ್ಸು, ಅಸಾಧಾರಣ ವಿದ್ವತ್ತು. ಆದರೆ ಮಕ್ಕಳ ಸ್ನೇಹಪರ ಸ್ವಭಾವ, ನಿಷ್ಕಾಪಟ್ಯ. ಮೃದು ಸ್ವಭಾವ ಅವರದು. ಮಕ್ಕಳ ನಡುವೆ ತಾವೂ ಮಗುವಾಗಿ ಸಂತೋಷವಾಗಿರುತ್ತಿದ್ದರು. ಅವರನ್ನು ಸಂತೋಷಪಡಿಸುತ್ತಿದ್ದರು. ಅವರ ತಮ್ಮಂದಿರ ಮಕ್ಕಳಿಗೆ, ಅವರ ಹತ್ತರ ಬಂದ ಮಕ್ಕಳಿಗೆ ಅವರು ಕಥೆಗಳ ಗಣಿ, ಹುಡುಗರು ಮುತ್ತಿಗೆ ಹಾಕಿ ಕೇಳುವರು:

“ದೊಡ್ಡಪ್ಪಾ, ಕಥೆ ಹೇಳು.”

“ಸರಿ, ಪ್ರಾರಂಭವಾಯಿತೋ? ಎಲ್ಲಿಂದ ತರಲಿ ನಿಮಗೆ ಕಥೆಗಳನ್ನು?”

“ಒಂದೇ ಕಥೆ, ಒಂದು ಕಥೆ ಹೇಳಿಬಿಡಿ, ದೊಡ್ಡಪ್ಪ.”

“ಈಗ ಒಂದು, ಅದು ಮುಗಿದರೆ ಇನ್ನೊಂದು, ಆ ಮೇಲೆ ಮತ್ತೊಂದು” ಎನ್ನುತ್ತ ಕಥೆ ಪ್ರಾರಂಭಿಸುವರು ದೊಡ್ಡಪ್ಪ. ಅವರು ಕಥೆಗಳ ಅಕ್ಷಯ ಪಾತ್ರೆ. ಮಕ್ಕಳು ಕಣ್ಣುಗಳನ್ನು ಅಗಲ ಮಾಡಿಕೊಂಡು ಆಸಕ್ತಿಯಿಂದ ಕೇಳುತ್ತ ಕೂಡುವರು.

ಬರಬಗ್ಗರೆಂದರೆ ಅವರಿಗೆ ನೈಜವಾದ ಮರುಕ. ಮನೆಯಿಂದ ಹೊರಡುವಾಗ ಜೇಬಿನ ತುಂಬಾ ಚಿಲ್ಲರೆ. ದಾರಿಯುದ್ದಕ್ಕೂ ಬಡಬಗ್ಗರಿಗೆ ದಾನ. ಹಿಂದಿರುಗುವ ಹೊತ್ತಿಗೆ ಜೇಬು ಖಾಲಿ.

ವಿದ್ವಾಂಸರೂ ಜ್ಞಾನಿಗಳೂ ಆಗಿದ್ದ ಗೋವಿಂದ ಪೈ ನಾವು ನೆನಪಿಡಬೇಕಾದ ಹಲವು ಮಾತುಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಎರಡು ಇವು: 

ಕಥೆ ಹೇಳುವ ದೊಡ್ಡಪ್ಪ

“ಕಲಿಕೆಗೆ ಆ ಪ್ರಾಯ ಈ ಪ್ರಾಯ ಎಂದಿಲ್ಲ, ಸಾಯುವತನಕವೂ ಕಲಿಯುತ್ತಿರಬೇಕು. ತನ್ನನ್ನು ತಿದ್ದಿಕೊಳ್ಳುತ್ತಿರಬೇಕು”.

“ನಿನಗಿಟ್ಟು ನೀನು ಕೊಟ್ಟಲ್ಲಿ ನೀನು ದೇವರ ದಾಸನಾದೆ; ನಿನಗಿಡದೆ ನೀನು ಕೊಟ್ಟಲ್ಲಿ ದೇವರು ನಿನ್ನ ದಾಸನಾದನು.”