ಗೋವಿಂದ ವಲ್ಲಭ ಪಂತ್ಭಾರತದ ಸ್ವಾತಂತ್ರ  ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರು. ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿ ಬಿಟ್ಟು ಸ್ವಾತಂತ್ರ  ಯೋಧರಾಗಿ ಸೆರೆಮನೆ ಸೇರಿದರು. ಮುಖ್ಯಮಂತ್ರಿಯಾಗಿ, ಭಾರತದ ಗೃಹಮಂತ್ರಿಯಾಗಿ ಸಮರ್ಥ ಆಡಳಿತಗಾರರೆಂದು ತೋರಿಸಿ ಕೊಟ್ಟರು. ಸರಳ ಜೀವನ, ಬಿಡು ವಿಲ್ಲದ ದುಡಿಮೆ.

ಗೋವಿಂದ ವಲ್ಲಭ ಪಂತ್

ನಮ್ಮ ಭಾರತದ ಭೂಪಟವನ್ನು ನೀವೆಲ್ಲ ನೋಡಿದ್ದೀರಿ ಅಲ್ಲವೇ? ನಮ್ಮ ದೇಶದ ಉತ್ತರದಲ್ಲಿ ಅಂದರೆ ಮೇಲುಗಡೆ ಉದ್ದಕ್ಕೂ ಕೋಟೆಯ ಹಾಗೆ ಹಬ್ಬಿರುವ ಪರ್ವತ ಹಿಮಾಲಯ ಅಲ್ಲವೇ? ಅದಕ್ಕೆ ಸೇರಿಕೊಂಡ ಹಾಗೆ ಇರುವುದೇ ಉತ್ತರ ಪ್ರದೇಶ. ಗಂಗೆ ಯಮುನೆ ನದಿಗಳು ಹರಿಯುವ ವಿಶಾಲವಾದ ಪ್ರದೇಶ. ಹಿಮಾಲಯದ ಇಳಿಜಾರಿನಲ್ಲಿ ಇರುವುದು ಕುಮಾವೂ ಪ್ರಾಂತ. ಪುರಾತನ ಕಾಲದ ಅದರ ಹೆಸರು ಕೂರ್ಮಾಂಚಲ ಎಂದು. ಭಗವಾನ್ ವಿಷ್ಣುವು ಕೂರ್ಮ, ಅಂದರೆ ಆಮೆಯ ಅವತಾರ ಎತ್ತಿದ ಕತೆಯನ್ನು ನೀವು ಕೇಳಿರಬಹುದು. ಅದು ನಡೆದುದು ಅಲ್ಲೆ ಅಂತೆ. ಅದಕ್ಕೆ ಕೂರ್ಮಾಂಚಲ ಎಂದು ಹೆಸರು. ಆಲ್‌ಮೋರಾ ಅಲ್ಲಿನ ಒಂದು ಜಿಲ್ಲೆ. ಅದೆಲ್ಲ ಬೆಟ್ಟಗುಡ್ಡಗಳ ನಾಡು. ಅಲ್ಲಿ ಚಳಿ ವಿಪರೀತ. ಮಹಾಭಾರತದ ಪಾಂಡವರು ಅಲ್ಲೆಲ್ಲ ಓಡಾಡಿದರಂತೆ. ನಮ್ಮ ದೇಶದ ಪ್ರಸಿದ್ಧ ಯಾತ್ರಾಸ್ಥಳಗಳಾದ ಬದರಿ, ಕೇದಾರ, ಇವೆಲ್ಲ ಇರುವುದು ಅಲ್ಲೆ. ವೇದವ್ಯಾಸರು ತಪಸ್ಸು ಮಾಡಿದ್ದು ಈ ಹಿಮಾಲಯ ಪ್ರಾಂತದಲ್ಲೆ, ವೇದಗಳನ್ನು ರಚಿಸಿದ್ದು ಅಲ್ಲೆ ಎಂದು ಹೇಳುತ್ತಾರೆ.

ಕುಮಾವೂ ಪ್ರಾಂತ ಹುಲಿಗಳಿಗೆ ಹೆಸರುವಾಸಿ. ಕುಮಾವೂನಿನ ನರಭಕ್ಷಕರು ಎಂದೇ ಆ ಹುಲಿಗಳಿಗೆ ಹೆಸರು.

ಈಗ್ಗೆ ಸುಮಾರು ೯೦ ವರ್ಷದ ಹಿಂದೆ ಹುಲಿಗಳ ನಾಡಾದ ಕುಮಾವೂ ಪ್ರಾಂತದಲ್ಲಿ ಒಬ್ಬ ಮನುಷ್ಯ, ಧೈರ್ಯದಲ್ಲಿ ಹುಲಿಯಂತಹವನು ಹುಟ್ಟಿದ. ಆತ ದೊಡ್ಡ ನಾಯಕ, ನೋಡಲೂ ಆಸಾಮಿ ಭಾರಿ. ಹಾಗೆಯೆ ಆತನ ಕೆಲಸವೂ ದೊಡ್ಡದು. ಆತ ದೇಶಕ್ಕೆ ಮಾಡಿದ ಸೇವೆಯೂ ದೊಡ್ಡದು.  ಅವರೇ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರಾದ ಪಂಡಿತ ಗೋವಿಂದ ವಲ್ಲಭ ಪಂತರು. ತಮ್ಮ ಕೊನೆಯ ಉಸಿರು ಎಳೆಯುವ ತನಕ ದೇಶಕ್ಕೋಸ್ಕರ ದುಡಿದವರು.

ಮನೆತನ

ಗೋವಿಂದ ವಲ್ಲಭರ ಹಿರಿಯರು ಮಹಾರಾಷ್ಟ್ರದವರು. ಬಹುಕಾಲದ ಹಿಂದೆ ಗೋವಿಂದ ವಲ್ಲಭರ ಮುತ್ತಾತ ಬದರೀಯಾತ್ರೆ ಮಾಡುವುದಕ್ಕೆ ಉತ್ತರಕ್ಕೆ ಹೋದರು. ಆತ ಒಳ್ಳೆ ಪಂಡಿತ, ಒಳ್ಳೆ ಮಾತುಗಾರ, ಕೆಲಸದಲ್ಲಿ ಗಟ್ಟಿಗ. ಆಗ ಕುಮಾವೂ ಪ್ರಾಂತದ ಆಲ್‌ಮೋರಾದಲ್ಲಿ ಒಬ್ಬ ರಾಜ ಇದ್ದ. ಅವನು ಈ ಮಹಾರಾಷ್ಟ್ರದ ಪಂತರ ಪಾಂಡಿತ್ಯವನ್ನೂ, ದಕ್ಷತೆಯನ್ನೂ ನೋಡಿದ, ತುಂಬ ಮೆಚ್ಚಿಕೊಂಡ. ‘‘ನೀವು ಇಲ್ಲೆ ಇದ್ದುಬಿಡಿ, ನನ್ನ ರಾಜ್ಯದಲ್ಲಿ ವಿದ್ವಾಂಸರಾಗಿ ಇರಿ’’ ಎಂದು ಕೇಳಿಕೊಂಡ. ಪಂತರು ಹಾಗೆಯೆ ಅಲ್ಲಿ ನಿಂತರು. ಆ ಬೆಟ್ಟಗಳ ನಾಡಿನಲ್ಲಿ ಅವರು ‘‘ಕಸಾನಿ’’ ಎನ್ನುವ ಸಣ್ಣ ಹಳ್ಳಿಯಲ್ಲಿ ನೆಲೆಸಿದರು. ಪಂತರು ತುಂಬ ಕಟ್ಟುನಿಟ್ಟಿನ ವ್ಯಕ್ತಿ. ಅವರ ಬದುಕು ತುಂಬ ಪರಿಶುದ್ಧ, ಕೆಲಸದಲ್ಲಿ ಅವರು ತುಂಬ ಕುಶಲರು. ಹೀಗಾಗಿ ಅವರು ಆ ಪ್ರಾಂತದಲ್ಲೆಲ್ಲ ತುಂಬ ಹೆಸರುವಾಸಿ ಆದರು. ಎಲ್ಲರಿಗೂ ಬೇಕಾದವರು ಆದರು.

ಅವರ ಮೊಮ್ಮಗ ಮನೋರಥ ಪಂತ್, ಅಲ್ಲಿನ ಸರ್ಕಾರದ ನೌಕರ ಆಗಿದ್ದರು. ಅವರಿಗೆ ೧೮೮೭ ನೆಯ ಇಸವಿ ಸೆಪ್ಟೆಂಬರ್ ತಿಂಗಳ ಹತ್ತನೆಯ ತಾರೀಖಿನ ದಿನ ಒಬ್ಬ ಮಗ ಹುಟ್ಟಿದ. ಅವನಿಗೆ ಗೋವಿಂದ ವಲ್ಲಭ ಎಂದು ಹೆಸರು ಇಟ್ಟರು.

ನೆಂಟರ ಮನೆಯಲ್ಲಿ

ಮನೋರಥ ಪಂತರಿಗೆ ಕಂದಾಯ ಇಲಾಖೆಯಲ್ಲಿ ಕೆಲಸ. ಊರೂರು ತಿರುಗುವ ಕೆಲಸ. ಒಂದೇ ಕಡೆ ನೆಲೆಯಾಗಿ ನಿಲ್ಲುವ ಹಾಗಿರಲಿಲ್ಲ. ಹಾಗಾಗಿ ಅವರು ಮಗನ ವಿದ್ಯಾಭ್ಯಾಸಕ್ಕಾಗಿ ಬೇರೆ ಏರ್ಪಾಡು ಮಾಡಬೇಕಾಯಿತು. ಅವರ ಚಿಕ್ಕಪ್ಪ ಬದರೀದಾಸ ಜೋಷಿ ಹತ್ತಿರದ ನೈನಿತಾಲ್ ಎಂಬ ಊರಿನಲ್ಲಿ ಇದ್ದರು. ಗೋವಿಂದ ವಲ್ಲಭನನ್ನು ಅವರ ಮನೆಯಲ್ಲಿ ಬಿಟ್ಟರು.

ಬದರೀದಾಸರು ಆಗಿನ ಆಂಗ್ಲ ಸರ್ಕಾರದಲ್ಲಿ ದೊಡ್ಡ ಅಧಿಕಾರಿ. ಅವರಿಗೆ ರಾಯ್ ಬಹಾದೂರ್ ಎಂಬ ಬಿರುದು ಇತ್ತು. ಸರ್ಕಾರದ ದರ್ಬಾರಿನಲ್ಲಿ ಅವರಿಗೆ ವಿಶೇಷ ಸ್ಥಾನ. ಜೊತೆಗೆ ಹಿರಿಯರ ಕಾಲದಿಂದಲೂ ಅವರು ನೇಪಾಳದ ರಾಜಪ್ರತಿನಿಧಿ ಆಗಿದ್ದರು. ಆಗ ಕುಮಾವೂ ನೇಪಾಳ ರಾಜನಿಗೆ ಸೇರಿತ್ತು. ಆ ರಾಜ ಬದರೀದಾಸರನ್ನು ಕುಮಾವೂ ಪ್ರಾಂತಕ್ಕೆ ಪ್ರತಿನಿಧಿ ಆಗಿ ನೇಮಿಸಿದ್ದ. ಇಂಗ್ಲಿಷಿನವರು ಭಾರತವನ್ನೆಲ್ಲ ಆಕ್ರಮಿಸಿಕೊಂಡರಲ್ಲ, ಹಾಗೆಯೆ ನೇಪಾಳದಿಂದ ಈ ಕುಮಾವೂ ಪ್ರದೇಶವನ್ನೂ ಪಡೆದುಕೊಂಡಿದ್ದರು.

ಗೋವಿಂದ ವಲ್ಲಭ ಬೆಳೆದುದು ಈ ಹಿನ್ನೆಲೆಯಲ್ಲಿ. ಮನೆಯಲ್ಲಿ ಹಿರಿಯರು ನಡೆಸುತ್ತಿದ್ದ ರಾಜಕೀಯ ಮಾತುಕತೆ ಚರ್ಚೆಗಳು ಈ ಹುಡುಗನ ಕಿವಿಗೂ ಬೀಳುತ್ತಿದ್ದವು. ಹೀಗೆ ರಾಜಕೀಯದ ಪರಿಚಯ ಆಗುತ್ತ ಬಂತು. ವ್ಯವಹಾರದಲ್ಲಿ ಕುಶಲತೆ ಮೈಗೂಡುತ್ತ ಬಂತು.

ವಿದ್ಯಾಭ್ಯಾಸ

ಬದರೀದಾಸರು ಗೋವಿಂದ ವಲ್ಲಭನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದರು. ಪ್ರೋತ್ಸಾಹ ಕೊಡುತ್ತಿದ್ದರು. ನೈನಿಯಲ್ಲಿ ಸ್ವಲ್ಪಕಾಲ, ಆಮೇಲೆ ಆಲ್‌ಮೋರಾದ ಸ್ಯಾಮಲ್‌ಸೇ ಕಾಲೇಜಿನಲ್ಲಿ ಸ್ವಲ್ಪಕಾಲ ಓದಿದ್ದಾಯಿತು. ಮುಂದೆ ಕಾಲೇಜಿಗೆ ಹೋಗಬೇಕಾಯಿತು. ಆಗ ಅಲಹಾಬಾದಿನಲ್ಲಿ ಇದ್ದ ಮ್ಯೂರ್ ಸೆಂಟ್ರಲ್ ಕಾಲೇಜ್ ಬಹಳ ಪ್ರಸಿದ್ಧವಾಗಿತ್ತು. ಮುಂದೆ ತುಂಬ ಖ್ಯಾತಿಯನ್ನು ಪಡೆದು ದೊಡ್ಡಸ್ಥಾನವನ್ನು ಗಳಿಸಿದ ಅನೇಕರು ಆ ಕಾಲೇಜಿನಲ್ಲಿ ಓದಿದವರೇ. ಕೈಲಾಸನಾಥ ಕಟ್ಟು, ನರೇಂದ್ರದೇವ್, ಪುರುಷೋತ್ತಮದಾಸ ಟಂಡನ್, ಹೃದಯನಾಥ ಕುಂಜ್ರು ಮೊದಲಾದ ಮಹಾಪುರುಷರೆಲ್ಲ ಆ ಕಾಲೇಜಿನ ವಿದ್ಯಾರ್ಥಿಗಳೇ. ಬದರೀದಾಸರು ಗೋವಿಂದ ವಲ್ಲಭರನ್ನು ಅದೇ ಕಾಲೇಜಿಗೆ ಸೇರಿಸಿದರು.

ನೈನಿತಾಲಿನಲ್ಲಿ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಗೋವಿಂದ ವಲ್ಲಭರಿಗೆ ದೇಶದ ಬಗ್ಗೆ ಅಭಿಮಾನ ಹುಟ್ಟುತ್ತಾ ಇತ್ತು. ಆಂಗ್ಲರು ನಮ್ಮ ದೇಶವನ್ನು ಆಕ್ರಮಿಸಿದ್ದಾರಲ್ಲ, ಇದು ನ್ಯಾಯವಲ್ಲ, ಇವರನ್ನು ಇಲ್ಲಿಂದ ಓಡಿಸಬೇಕು, ನಾವು ಸ್ವತಂತ್ರರಾಗಬೇಕು ಎನ್ನುವ ವಿಚಾರ ಹುಡುಗ ಪಂತನಿಗೆ ಆಗಾಗ ಬರುತ್ತಿತ್ತು. ಅಲಹಾಬಾದಿನ ಕಾಲೇಜಿಗೆ ಬಂದಮೇಲೆ ಈ ವಿಚಾರ ಚೆನ್ನಾಗಿ ಬೆಳೆಯಲೂ ಅವಕಾಶ ಆಯಿತು.

ಅಲಹಾಬಾದು ದೊಡ್ಡ ಪಟ್ಟಣ. ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿಗಳ ಜೊತೆ, ಆಗಾಗ ಅಲ್ಲಿಗೆ ಬರುತ್ತಿದ್ದ ನಾಯಕರುಗಳ ಮಾತು ಇವೆಲ್ಲ ಹುಡುಗರ ಮನಸ್ಸಿನಲ್ಲಿ ದೇಶಪ್ರೇಮವನ್ನು ಬೆಳೆಸಲು ಸಹಾಯಕವಾಗಿದ್ದವು. ತರುಣ ಗೋವಿಂದ ವಲ್ಲಭ ಪಂತ್ ವಿದ್ಯಾರ್ಥಿಗಳ ಮುಖಂಡ ಆಗುವುದಕ್ಕೆ ತಡವಾಗಲಿಲ್ಲ. ಕಾಲೇಜಿಗೆ ಸೇರಿದ ಸ್ವಲ್ಪ ದಿನದಲ್ಲೆ ಎಲ್ಲರಿಗೂ ಅಚ್ಚುಮೆಚ್ಚಾದ, ಮುಂದಾಳು ಆದ.

ಮೊದಲ ಭಾಷಣ-ಪರಿಣಾಮ

ಅಲಹಾಬಾದಿಗೆ ಪ್ರಯಾಗ ಎಂತಲೂ ಹೆಸರು. ಅದು ಒಂದು ಪುರಾತನ ತೀರ್ಥಕ್ಷೇತ್ರ. ಗಂಗೆ ಯಮುನೆ ಸರಸ್ವತಿ ನದಿಗಳ ತ್ರಿವೇಣೀ ಸಂಗಮ ಅಲ್ಲೆ. ಅಲ್ಲಿ ಆಗಾಗ ದೊಡ್ಡ ಜಾತ್ರೆ ಮೇಳ ನಡೆಯುತ್ತವೆ. ಕುಂಭಮೇಳ ಮಾಘಮೇಳ ಮೊದಲಾದ ಮೇಳಗಳಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ೧೯೦೬ನೆಯ ಇಸವಿಯಲ್ಲಿ ಮಾಘಮೇಳ ನಡೆಯಿತು. ಭಾರಿ ಜನಸಂದಣಿ. ಅಲ್ಲಿ ಒಂದು ಸಭೆ ಏರ್ಪಾಟಾಯಿತು. ಹತ್ತೊಂಬತ್ತು ವರ್ಷದ ಗೋವಿಂದ ವಲ್ಲಭನೇ ಭಾಷಣಕಾರ. ಅದೇ ಆತನ ಮೊದಲನೆಯ ಭಾಷಣ. ಒಳ್ಳೆ ಉತ್ಸಾಹದಿಂದ ಮಾತಾಡಿದ. ತರ್ಕಬದ್ಧವಾಗಿ ಮಾತಾಡಿದ. ಬ್ರಿಟಿಷರು ಹೇಗೆ ನಮ್ಮನ್ನು ಗುಲಾಮರಾಗಿ ಮಾಡಿದ್ದಾರೆ, ನಮ್ಮ ಮೇಲೆ ಕೂತು ಆಳುತ್ತಿದ್ದಾರೆ, ನಾವು ಅವರಿಗೆ ಅಡಿಯಾಳಾಗಿ ಇರುವುದು ಅವಮಾನಕರ, ಅವರನ್ನು ನಮ್ಮ ಹೆಗಲಮೇಲಿಂದ ಇಳಿಸಬೇಕು, ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು, ಇತರ ಜನರ ಹಾಗೆಯೆ ನಾವೂ ಸ್ವತಂತ್ರರಾಗಿ ತಲೆಯೆತ್ತಿಕೊಂಡು ನಿಲ್ಲಬೇಕು. ಸ್ವಾತಂತ್ರ ವಿಲ್ಲದೆ ಇದ್ದರೆ ಸತ್ತ ಹಾಗೆಯೆ ಸರಿ. ಈ ಬ್ರಿಟಿಷರು ನಮ್ಮ ದೇಶವನ್ನು ಲೂಟಿಮಾಡಿದ್ದಾರೆ, ನಮ್ಮ ಶಕ್ತಿಯನ್ನು ನಾಶಮಾಡಿದ್ದಾರೆ, ನಾವೀಗ ಅವರನ್ನು ಓಡಿಸಬೇಕು, ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆಲ್ಲ ಜೋರಾಗಿ ಭಾಷಣ ಮಾಡಿದ. ಇನ್ನೂ ತರುಣ, ಯಾರಿಗೂ ಹೆದರದೆ ಹಿಂದೆ ಮುಂದೆ ನೋಡದೆ ಮಾತಾಡಿದ.

ಈ ವಿಷಯ, ಅಂದರೆ ಪಂತ್ ಬ್ರಿಟಿಷ್ ಸರ್ಕಾರದ ವಿರುದ್ಧವಾಗಿ ಮಾತಾಡಿದ ಎನ್ನುವುದು ಕಾಲೇಜಿನ ಮುಖ್ಯಾಧಿಕಾರಿಯ ಕಿವಿಗೆ ಬಿತ್ತು. ಆತನಿಗೆ ರೋಷ ತಲೆಗೆ ಏರಿತು. ‘‘ಈ ಹುಡುಗ ಜನರನ್ನು ಸರ್ಕಾರದ ವಿರುದ್ಧವಾಗಿ ಎತ್ತಿಕಟ್ಟುತ್ತಿದ್ದಾನೆ. ಇದು ವಿದ್ರೋಹದ ಕೆಲಸ. ಇದನ್ನು ಈಗಲೇ ಚಿವುಟಿಹಾಕಬೇಕು’’ ಎಂದುಕೊಂಡ. ಗೋವಿಂದ ವಲ್ಲಭ ಪಂತನನ್ನು ಕಾಲೇಜಿನಿಂದ ತೆಗೆದುಹಾಕಲು ಆಜ್ಞೆ ಮಾಡಿದ.

ಗೋವಿಂದ ವಲ್ಲಭ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕ. ತಮ್ಮ ನಾಯಕನಿಗೆ ಈ ಅವಮಾನ ಆದರೆ ಸುಮ್ಮನಿರುತ್ತಾರೆಯೆ? ಹುಡುಗರೆಲ್ಲ ಎದುರುನಿಂತರು. ಪಂತನನ್ನು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳಿ ಎಂದು ಒತ್ತಾಯಪಡಿಸಿ ದೊಡ್ಡ ಚಳವಳಿಯನ್ನೇ ಹೂಡಿದರು. ಕಾಲೇಜಿನ ಅಧಿಕಾರಿಗಳ ಬೆದರಿಕೆ ಏನೂ ಸಾಗಲಿಲ್ಲ. ಹುಡುಗರ ಒಗ್ಗಟ್ಟಿನ ಮುಂದೆ, ಕಾಲೇಜು ನಡೆಯುವುದೇ ಕಷ್ಟವಾಗಿ ಹೋಯಿತು.

ಆಗ ಪಂಡಿತ ಮದನ ಮೋಹನ ಮಾಳವೀಯರು ನಮ್ಮ ದೇಶದ ದೊಡ್ಡ ನಾಯಕರು. ಪಂತರಿಗೆ ಅವರೇ ಗುರುಗಳು. ಕಾಲೇಜಿನ ಗೊಂದಲದ ವಿಷಯ ಅವರಿಗೆ ತಿಳಿಯಿತು. ಕೂಡಲೇ ಬಂದು ಸಂಧಾನ ಮಾಡಿದರು. ಅಧಿಕಾರಿಗಳಿಗೆ ತಕ್ಕ ಬುದ್ಧಿ ಹೇಳಿದರು. ಕೊನೆಗೆ ಅಧಿಕಾರಿಗಳು ಪಂತರನ್ನು ಯಾವುದೇ ಷರತ್ತು ಇಲ್ಲದೆ ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳುವುದಾಗಿ ಒಪ್ಪಿದರು. ಪಂತ್ ಮತ್ತೆ ಕಾಲೇಜಿಗೆ ಬಂದಾಗ ಎಲ್ಲ ಹುಡುಗರೂ ಸಂಭ್ರಮದ ಸ್ವಾಗತ ನೀಡಿದರು.

ಈ ಪ್ರಸಂಗದಿಂದ ಗೋವಿಂದ ವಲ್ಲಭ ಪಂತರಿಗೆ ಜನನಾಯಕನ ಪಟ್ಟ ದೊರೆತಿತ್ತು.

೧೯೦೭ ರಲ್ಲಿ ಪಂತರು ಬಿ.ಎ. ಪರೀಕ್ಷೆ ಮುಗಿಸಿದರು. ೧೯೦೯ ರಲ್ಲಿ ವಕೀಲಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾದರು. ಅದಕ್ಕಾಗಿ ಅವರಿಗೆ ಲುಮ್ಸ್‌ಡೆನ್ ಬಂಗಾರದ ಪದಕ ಲಭಿಸಿತು.

ಹಿರಿಯರ ಸಂಪರ್ಕ

ಮ್ಯೂರ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪಂತರಿಗೆ ರಾಜಕೀಯ ಆಸಕ್ತಿ ಬೆಳೆಯುತ್ತಿತ್ತು. ಮದನ ಮೋಹನ ಮಾಳವೀಯ, ತೇಜ ಬಹಾದೂರ್ ಸಪ್ರು, ಗೋಪಾಲ ಕೃಷ್ಣ ಗೋಖಲೆ, ಬದರೀದಾಸ್ ಮುಂತಾದ ಹಿರಿಯರ ಸಂಪರ್ಕದಿಂದ, ಅವರ ಮಾತುಗಳಿಂದ ಪಂತರಿಗೆ ದೇಶಪ್ರೇಮದ ದೀಕ್ಷೆ ದೊರೆಯಿತು. ಮೊದಲೇ ಅವರಲ್ಲಿ ಇದ್ದ ದೇಶಪ್ರೇಮ ಇದರಿಂದ ಮತ್ತಷ್ಟು ಉಜ್ವಲವಾಯಿತು.

ಆಗಲೇ ಗೋಖಲೆಯವರು, ಅಲಹಾಬಾದಿಗೆ ಬಂದಿದ್ದರು. ಗೋಖಲೆಯವರು ಉನ್ನತ ನಾಯಕರು, ನಿಷ್ಠೆಯ ನಾಯಕರು. ಧ್ಯೇಯವಾದಿಗಳು. ಮಹಾತ್ಮಗಾಂಧಿಯವರೇ ಅವರನ್ನು ತಮ್ಮ ರಾಜಕೀಯ ಗುರು ಎಂದು ಭಾವಿಸಿದ್ದರು. ಅಂಥ ಹಿರಿಯರು ಪ್ರಯಾಗದಲ್ಲಿ ಭಾಷಣ ಮಾಡಿದ್ದನ್ನು ಪಂತರು ಕೇಳಿದರು. ಪಂತರಿಗೆ ತುಂಬ ಸ್ಫೂರ್ತಿ ಬಂತು. ಏನೇ ಆಗಲಿ ಬ್ರಿಟಿಷರ ಕೈಕೆಳಗೆ ಕೆಲಸಕ್ಕೆ ಸೇರಿಕೊಳ್ಳಬಾರದು, ಸರ್ಕಾರದ ಗುಲಾಮ ಆಗಬಾರದು ಎಂದು ತೀರ್ಮಾನ ಮಾಡಿಕೊಂಡರು.

ಮದನಮೋಹನ ಮಾಳವೀಯರೂ ಇನ್ನೊಬ್ಬ ಹಿರಿಯ ನಿಷ್ಠೆಯ ವ್ಯಕ್ತಿ. ಕಾಶಿಯ ವಿದ್ಯಾಪೀಠವನ್ನು ಅವರೇ ಸ್ಥಾಪಿಸಿದ್ದು. ಅವರ ಶಿಷ್ಯರಲ್ಲಿ ಮುಖ್ಯರಾದವರು ಇಬ್ಬರು. ಒಬ್ಬರು ಗೋವಿಂದ ವಲ್ಲಭ ಪಂತ್, ಇನ್ನೊಬ್ಬರು ಪುರುಷೋತ್ತಮದಾಸ ಟಂಡನ್. ಆಗಿನ ಜನ ಹೇಳುತ್ತಿದ್ದರು ‘‘ಮಾಳವೀಯರಿಗೆ ಇಬ್ಬರು ವಾರಸುದಾರರು. ಅವರ ಹೃದಯ ಟಂಡನ್ನರಿಗೆ, ಬುದ್ಧಿಶಕ್ತಿ ಹಾಗೂ ಮಾತುಗಾರಿಕೆ ಪಂತರಿಗೆ’’ ಎಂದು.

ಕಾಶೀಪುರ ಆಲ್‌ಮೋರಾ ಜಿಲ್ಲೆಯ ಒಂದು ಊರು. ವಕೀಲಿ ಪರೀಕ್ಷೆ ಮುಗಿಸಿದ ಮೇಲೆ ಪಂತರು ಆ ಊರಿನಲ್ಲಿ ವಕೀಲಿ ಕೆಲಸ ಆರಂಭಿಸಿದರು. ಅವರ ಹರಿತವಾದ ಬುದ್ಧಿ, ಸಾಕ್ಷ  ಆಧಾರಗಳನ್ನು ಸರಿಯಾಗಿ ಬಳಸಿಕೊಂಡು ವಾದ ಮಾಡುತ್ತಿದ್ದ ವೈಖರಿ ಇವುಗಳಿಂದಾಗಿ ಸ್ವಲ್ಪ ಕಾಲದಲ್ಲೇ ಅವರು ಆ ಸುತ್ತಿಗೆಲ್ಲ ತುಂಬ ಹೆಸರುವಾಸಿಯಾದ ವಕೀಲರಾದರು. ಗೋವಿಂದ ವಲ್ಲಭ ಪಂತರು ವಾದಕ್ಕೆ ನಿಂತರು ಎಂದರೆ ಕೇಸು ಗೆದ್ದ ಹಾಗೆಯೇ. ಅವರು ಚಿಲ್ಲರೆಪಲ್ಲರೆ ಕೇಸುಗಳನ್ನಾಗಲಿ ಸುಳ್ಳು ಕೇಸುಗಳನ್ನಾಗಲಿ ತೆಗೆದುಕೊಳ್ಳುತ್ತಲೇ ಇರಲಿಲ್ಲ. ರಾಜಕೀಯಕ್ಕೆ ಹೋಗದೆ ಇದ್ದಿದ್ದರೆ ಅವರು ಒಳ್ಳೆಯ ನ್ಯಾಯತಜ್ಞ ಆಗುತ್ತಿದ್ದರು.

ಕಷ್ಟದಲ್ಲಿರುವವರಿಗಾಗಿ ಹೋರಾಟ

ವಕೀಲಿ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಸಂಪಾದನೆಯೂ ಜೋರಾಗಿತ್ತು. ಆದರೆ ಪಂತರ ಮನಸ್ಸು ದೇಶಸೇವೆಯ ಕಡೆಗೇ ವಾಲುತ್ತಿತ್ತು. ಆಗ ಕುಮಾವೂ ಪ್ರಾಂತದಲ್ಲಿ ‘ಕೂಲಿಬೇಗಾರ್’ ಎನ್ನುವ ಒಂದು ಕೆಟ್ಟ ಪದ್ಧತಿ ಇತ್ತು. ಅದರ ಪ್ರಕಾರ ಬಡ ಕೂಲಿ ಆಳುಗಳು ಕಡ್ಡಾಯವಾಗಿ ಬಿಟ್ಟಿ ಚಾಕರಿ ಮಾಡಬೇಕಾಗಿತ್ತು. ಆ ಕೂಲಿಗಳಿಗೆ ಇದನ್ನು ವಿರೋಧಿಸಲು ಶಕ್ತಿಯೇ ಇರಲಿಲ್ಲ. ಅವರ ಈ ದೀನಸ್ಥಿತಿಯನ್ನು ಕಂಡು ಪಂತರಿಗೆ ನೋವಾಯಿತು. ಅವರ ಪರವಾಗಿ ಹೋರಾಟ ಪ್ರಾರಂಭಿಸಿದರು. ಆ ಕೆಟ್ಟ ಪದ್ಧತಿ ಹೋಗಬೇಕು ಎಂದು ಸರ್ಕಾರಕ್ಕೆ ಒತ್ತಾಯಮಾಡಿದರು. ಅಧಿಕಾರಿಗಳ ಆಕ್ಷೇಪಣೆ ಎಷ್ಟೇ ಬಂದರೂ ಲೆಕ್ಕಿಸಲಿಲ್ಲ. ಒಂದೇ ಸಮನೆ ಶ್ರಮಿಸಿದರು.

ಕಾಶೀಪುರದಲ್ಲಿ ಪಂಡಿತ ಬದರೀದತ್ತ ಪಾಂಡೆ ಎನ್ನುವವರು ಪಂತರ ಗೆಳೆಯರು. ಇಬ್ಬರೂ ಸೇರಿ ‘‘ಶಕ್ತಿ’’ ಎನ್ನುವ ಒಂದು ಪತ್ರಿಕೆಯನ್ನು ಆರಂಭಿಸಿದರು. ಜನರ ಕಷ್ಟ ಸಮಸ್ಯೆಗಳನ್ನೂ ಪತ್ರಿಕೆಯಲ್ಲಿ ಎತ್ತಿ ತೋರಿಸುತ್ತಿದ್ದರು. ಸರ್ಕಾರದ ಗಮನಕ್ಕೆ ತರುತ್ತಿದ್ದರು. ಜೊತೆಗೆ ಜನರಲ್ಲಿ ಎಚ್ಚರವನ್ನು ಮೂಡಿಸುತ್ತಿದ್ದರು. ಕೂಲಿ ಬೇಗಾರ್ ಪದ್ಧತಿಯನ್ನು ತೊಲಗಿಸುವುದರಲ್ಲೂ ‘ಶಕ್ತಿ’ ಪತ್ರಿಕೆ ತುಂಬ ಕೆಲಸ ಮಾಡಿತು. ಕೊನೆಗೂ ಆ ಪದ್ಥತಿ ಹೋಗಲೇಬೇಕಾಯಿತು.

ಹಿಂದುಳಿದ ಪ್ರದೇಶ ಏಕೆ?

ಜೊತೆಗೇ ಪಂತರು ೧೯೧೮ ರಲ್ಲಿ ಕಾಶೀಪುರದ ಪುರ ಸಭೆಯ ಸದಸ್ಯರಾದರು. ಆ ಕಾಲದಲ್ಲಿ ಕುಮಾವೂ ತುಂಬ ಹಿಂದುಳಿದ ಪ್ರಾಂತವಾಗಿತ್ತು. ಗುಡ್ಡಗಾಡಿನ ನಾಡು, ಏನೂ ಅರಿಯದ ಜನ, ವಿಪರೀತ ಚಳಿ. ಹೀಗಾಗಿ ಬಡತನ  ಬಹಳ ಹೆಚ್ಚಾಗಿತ್ತು. ಅದನ್ನು ‘ಹಿಂದುಳಿದ ಪ್ರದೇಶ’ ಎಂದೇ ಕರೆಯುತ್ತಿದ್ದರು. ಪಂತರು ಈ ಸಮಸ್ಯೆಯನ್ನು ಎತ್ತಿಕೊಂಡರು. ಒಂದೇ ಸಮನೆ ಹೋರಾಡಿದರು. ತಮ್ಮ ಭಾಷಣಗಳ ಮೂಲಕ, ಪತ್ರಿಕೆಯ ಮೂಲಕ, ಕುಮಾವೂ ಜಿಲ್ಲೆಯ ಕಷ್ಟ ಪರಿಹಾರಕ್ಕೆ ಒತ್ತಾಯ ಮಾಡಿದರು. ಜನರು ಮತ ನೀಡುವ ವಿಷಯವನ್ನು ಪರಿಶೀಲಿಸಲು ಸರ್ಕಾರ ಲಾರ್ಡ್ ಸೌತ್‌ಬರೋ ಎಂಬುವರ ಮುಂದಾಳುತನದಲ್ಲಿ ಒಂದು ಸಮಿತಿ ಏರ್ಪಡಿಸಿತ್ತು. ಪಂತರು ಆ ಸಮಿತಿಯ ಮುಂದೆ ಕುಮಾವೂ ಜಿಲ್ಲೆಯ ಪರವಾಗಿ ಬಲವಾಗಿ ವಾದಿಸಿದರು. ಹಿಂದುಳಿದ ಪ್ರಾಂತ ಎಂಬ ಕೆಟ್ಟ ಹೆಸರನ್ನು ತೊಲಗಿಸಬೇಕು ಎಂದು ಒತ್ತಾಯ ಮಾಡಿದರು. ಜಯಗಳಿಸುವವರೆಗೂ ಬಿಡಲಿಲ್ಲ.ಕುಮಾವೂ ಜಿಲ್ಲೆಯ ಸಮಸ್ಯೆಯನ್ನು ಪರಿಶೀಲಿಸುವುದಕ್ಕೆಂದೇ ಕುಮಾವೂ ಜಿಲ್ಲಾ ಪರಿಷತ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಎಲ್ಲ ಶ್ರಮದ ಪರಿಣಾಮವಾಗಿ ಆ ಜಿಲ್ಲೆಯ ಸ್ಥಿತಿಗತಿ ಎಷ್ಟೋ ಉತ್ತಮವಾಯಿತು.

ಕಾಶೀಪುರದಲ್ಲಿ ಇರುವಾಗಲೇ ೧೯೧೨ ರಲ್ಲೆ ಪಂತರು ಉತ್ತರ ಪ್ರದೇಶದ (ಆಗಿನ ಸಂಯುಕ್ತ ಪ್ರಾಂತ) ವಿಧಾನ ಪರಿಷತ್ತಿಗೆ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಮುಂದೆ ಅವರು ತೀರಿಕೊಳ್ಳುವವರೆಗೂ ಶಾಸಕರಾಗಿಯೆ ಇದ್ದರು. ಪ್ರತಿಯೊಂದು ಚುನಾವಣೆಯಲ್ಲೂ ಅವರಿಗೆ ಗೆಲವು ಕಟ್ಟಿಟ್ಟಿತ್ತು.

ಹಣ ತರುವ ವೃತ್ತಿ ಬಿಟ್ಟರು

೧೯೨೦ ರಲ್ಲಿ ನಮ್ಮ ದೇಶದ ರಾಜಕಾರಣದಲ್ಲಿ ಹೊಸ ಗಾಳಿ ಬೀಸಿತು. ಮಹಾತ್ಮ ಗಾಂಧಿಯವರು ನಾಯಕರಾಗಿ ಬಂದರು. ಸ್ವಾತಂತ್ರ  ಪಡೆಯಬೇಕಾದರೆ ಸುಮ್ಮನೆ ಬೇಡಿಕೊಂಡರೆ ಸಾಲದು, ಅಹಿಂಸೆಯಿಂದ ಹೋರಾಡಬೇಕು, ತ್ಯಾಗ ಮಾಡಬೇಕು ಎಂದು ಅವರು ಹೇಳಿದರು. ಸರ್ಕಾರದ ನ್ಯಾಯಾಲಯಗಳಿಗೆ, ಶಾಲೆಗಳಿಗೆ ಹೋಗಬಾರದು, ಸರ್ಕಾರ ಕೊಟ್ಟ ಬಿರುದು ಬಾವಲಿಗಳನ್ನು ತಿರಸ್ಕರಿಸಬೇಕು, ಪರದೇಶಿ ಬಟ್ಟೆಯನ್ನು ದೂರ ಮಾಡಬೇಕು, ಸ್ವದೇಶಿ ಬಟ್ಟೆಯನ್ನೆ ಬಳಸಬೇಕು-ಹೀಗೆಲ್ಲ ಗಾಂಧೀಜಿ ತಿಳಿಸಿದರು. ಜನರಲ್ಲಿ ಹೊಸ ಶಕ್ತಿ, ಹೊಸ ಉತ್ಸಾಹ ತುಂಬಿ ಬಂತು. ಲಕ್ಷಾಂತರ ಜನ ಗಾಂಧೀಜಿಯ ಮಾತು ಕೇಳಿ ಅವರ ಹಿಂದೆ ನಡೆಯಲು ಸಿದ್ಧರಾಗಿ ಬಂದರು. ಅಪಾರ ತ್ಯಾಗ ಮಾಡಿದರು. ಸಾವಿರಾರು ವಕೀಲರು ಕೋರ್ಟುಗಳನ್ನು ಬಹಿಷ್ಕರಿಸಿದರು. ತಮ್ಮ ಸಂಪಾದನೆಯನ್ನು ಬಿಟ್ಟುಬಿಟ್ಟರು. ಸ್ವಾತಂತ್ರ  ಹೋರಾಟದ ಸಿಪಾಯಿಗಳಾಗಿ ಬಂದರು.

ದೇಶ ಸೇವೆಯಲ್ಲಿ ಮುಳುಗಿದ್ದ ಗೋವಿಂದ ವಲ್ಲಭ ಪಂತರು ಹಿಂದೆ ನಿಲ್ಲುತ್ತಾರೆಯೆ? ತಮ್ಮ ಹೇರಳ ಸಂಪಾದನೆಯ ವಕೀಲಿ ಕೆಲಸವನ್ನು ತ್ಯಾಗ ಮಾಡಿದರು. ಕಾಂಗ್ರೆಸ್ಸಿನ ಕೆಲಸದಲ್ಲಿ ಮುಳುಗಿದರು. ೧೯೧೬ರಲ್ಲೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ಮುಂದೆ ರಾಜಕೀಯವೇ ಅವರ ಜೀವನವಾಯಿತು.

ಶಾಸನ ಸಭೆಗಳಲ್ಲಿ

೧೯೨೦ರ ಚಳವಳಿ ಆದಮೇಲೆ ಕೆಲವು ಹಿರಿಯ ನಾಯಕರು, ಸರ್ಕಾರವನ್ನು ಶಾಸನ ಸಭೆಗಳಲ್ಲೂ ಎದುರಿಸಬೇಕು ಎಂದು ವಿಚಾರ ಮಾಡಿದರು. ಅದಕ್ಕೆ ಅವರು ‘‘ಸ್ವರಾಜ್ಯಪಕ್ಷ’’ ಎನ್ನುವ ತಂಡವನ್ನು ಕೂಡಿಸಿದರು. ಪಂತರು ಆ ಪಕ್ಷದ ಪರವಾಗಿ ಸಂಯುಕ್ತ ಪ್ರಾಂತದ ಶಾಸನಸಭೆಗೆ ಆರಿಸಿಬಂದರು. ಏಳು ವರ್ಷ ಅಲ್ಲಿ ಅವರು ಸ್ವರಾಜ್ಯ ಪಕ್ಷದ ನಾಯಕರಾಗಿದ್ದರು. ಪಂತರ ಮಾತುಗಾರಿಕೆ ಸರ್ಕಾರದ ಎದೆ ನಡುಗಿಸುತ್ತಿತ್ತು. ಅವರು ಬ್ರಿಟಿಷ್ ಸರ್ಕಾರದ ಕೆಟ್ಟ ಕಾನೂನುಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ವಿರೋಧಿಸುತ್ತಿದ್ದರು. ಅಷ್ಟೇ ಅಲ್ಲ ಎದುರಾಳಿಗಳೂ ಒಪ್ಪುವ ಹಾಗೆ ಸಮರ್ಥವಾಗಿ ಪ್ರಭಾವಪೂರ್ಣವಾಗಿ ವಾದಿಸುತ್ತಿದ್ದರು. ಪಂತರ ಮಾತಿಗೆ ಎದುರು ನಿಲ್ಲುವವರೇ ಇರಲಿಲ್ಲ. ವೈಸರಾಯರ ಪ್ರತಿನಿಧಿ ಜೇಮ್ಸ್ ಗ್ರೇಗ್ ಎಂಬವನಿದ್ದ. ಆತನಿಗೆ ಪಂತರ ಮಾತು ಎಂದರೆ ಗಾಬರಿ. ಅಷ್ಟು ಬಲವಾಗಿತ್ತು ಪಂತರ ಮಾತುಗಾರಿಕೆ. ಪಂತರ ಬುದ್ಧಿ ಹರಿತ, ಯೋಚನೆ ಆಳ, ಜ್ಞಾನ ಅಪಾರ, ತರ್ಕ ಎದುರಿಸಲು ಸಾಧ್ಯವಾಗದ್ದು, ಮಾತೋ ಸೊಗಸು. ಹೀಗಾಗಿ ಅವರ ವಿರುದ್ಧ ನಿಲ್ಲುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ.

ಮುಂದೆ ಪಂತರು ದೆಹಲಿಯ ಕೇಂದ್ರ ಶಾಸನ ಸಭೆಯ ಸದಸ್ಯರಾದರು. ಅಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರೂ ಆದರು, ಶಾಸನ ಸಭೆಯ ಒಳಗೆ ಹಾಗೂ ಹೊರಗೆ ಬಿಡುಗಡೆಯ ಹೋರಾಟವನ್ನು ಎಡೆಬಿಡದೆ ನಡೆಸಿದರು.

ಸರ್ಕಾರದ ಲಾಠಿಗಳ ರುಚಿ

೧೯೨೮ ರ ಕಾಲ. ಭಾರತದ ಪರಿಸ್ಥಿತಿಯನ್ನು ಪರಿಶೀಲಿಸಲು ಬ್ರಿಟಿಷ್ ಸರ್ಕಾರ ಒಂದು ಸಮಿತಿಯನ್ನು ಕಳಿಸಿತು. ಅದಕ್ಕೆ ಸೈಮನ್ ಎಂಬುವರು ನಾಯಕರು. ಆ ಸಮಿತಿಯಲ್ಲಿ ಇದ್ದವರು ಎಲ್ಲರೂ ಆಂಗ್ಲರೇ, ನಮ್ಮ ದೇಶದ ಒಬ್ಬರೂ ಇರಲಿಲ್ಲ. ಸಮಿತಿಯನ್ನು ಬಹಿಷ್ಕರಿಸಬೇಕು, ವಿರೋಧಿಸಬೇಕು ಎಂದು ಕಾಂಗ್ರೆಸ್ ತೀರ್ಮಾನಿಸಿತು. ಅದರಂತೆ ದೇಶದಲ್ಲೆಲ್ಲ ಭಾರಿ ಚಳವಳಿ ನಡೆಯಿತು. ಲಾಹೋರಿನ ಚಳವಳಿಯಲ್ಲಿ ಪಂಜಾಬಿನ ಸಿಂಹ ಲಾಲಾ ಲಜಪತರಾಯರಿಗೆ ಪೊಲೀಸರಿಂದ ಬಲವಾಗಿ ಏಟುಬಿತ್ತು. ಕೆಲವು ದಿನದಲ್ಲೆ ಅವರು ಪ್ರಾಣಬಿಟ್ಟರು. ಇದು ಎಲ್ಲರನ್ನೂ ಬಹಳವಾಗಿ ಕೆರಳಿಸಿತು. ಇಡೀ ದೇಶದಲ್ಲೆಲ್ಲ ಉಗ್ರವಾದ ಚಳವಳಿ ನಡೆಯಿತು.

ಅಲಹಾಬಾದು, ಲಕ್ನೋ, ಕಾನ್‌ಪುರ ಮುಂತಾದ ಊರುಗಳಲ್ಲೆಲ್ಲ ಚಳವಳಿ ಬಲವಾಗಿತ್ತು. ಲಕ್ನೋದಲ್ಲಿ ಎರಡು ಕಡೆಯಿಂದ ದೊಡ್ಡ ಮೆರವಣಿಗೆ ಹೊರಟವು. ಒಂದರ ನಾಯಕ ಪಂಡಿತ ಜವಾಹರಲಾಲ ನೆಹರು. ಇನ್ನೊಂದರ ಮುಖಂಡ ಗೋವಿಂದವಲ್ಲಭ ಪಂತರು. ಎರಡೂ ಮೆರವಣಿಗೆ ರಸ್ತೆಯಲ್ಲಿ ಸೇರುವ ವೇಳೆಗೆ ಹಿಂದಿನಿಂದ ಹಾಗೂ ಮುಂದಿನಿಂದ ಪೊಲೀಸರ ದಂಡು ಬಂತು. ಕುದುರೆ ಸವಾರರ ದಂಡು, ಜನರನ್ನೆಲ್ಲ ಹೊಡೆದು ಓಡಿಸುತ್ತ ಬಂತು. ನೂರಾರು ಜನ ಏಟು ತಿಂದು ಆಕಡೆ ಈಕಡೆ ಓಡಿದರು. ಕೆಲವರು ರಸ್ತೆಯಲ್ಲಿ ಕುಳಿತುಬಿಟ್ಟರು. ರಸ್ತೆ ಮಧ್ಯೆ ನೆಹರು, ಪಂತ್ ಹಾಗೂ ಕೆಲವರು ಉಳಿದುಕೊಂಡರು. ಪೊಲೀಸರ ದಂಡು ಇವರ ಮೇಲೂ ನುಗ್ಗಿ ಬಂತು. ರಪರಪನೆ ಲಾಠಿಗಳಿಂದ ಎಲ್ಲರನ್ನೂ ಬಡಿಯಿತು. ಪಂತರು ನೆಹರೂ ಅವರನ್ನು ಕಾಪಾಡಲೆಂದು ಅವರ ಮುಂದೆ ಬಂದು ನಿಂತರು. ಅವರು ಭಾರಿ ಆಳು. ಸರಿಯಾಗಿ ಏಟಿಗೆ ಸಿಕ್ಕರು, ಬಹುಪಾಲು ಏಟು ಅವರಿಗೇ ಬಿದ್ದವು. ನೆಹರೂಗೂ ಏಟು ತಪ್ಪಲಿಲ್ಲ. ಆದರೆ ಪಂತರಿಗೆ ಜೋರಾಗಿ ಬಿತ್ತು. ಅವನ ಬೆನ್ನಿನ ನರಕ್ಕೆ ಬಲವಾದ ಪೆಟ್ಟು ಬಿತ್ತು. ನರವೇ ಊನವಾಯಿತು. ಅದರಿಂದ ಕೈಕಾಲುಗಳಲ್ಲಿ ನಡುಕ ಉಂಟಾಯಿತು. ಸರಾಗವಾಗಿ ಓಡಾಡುವುದಕ್ಕೆ ಕಷ್ಟ ಆಯಿತು. ಮುಂದೆ ಅವರು ಬದುಕಿದ್ದಷ್ಟು ಕಾಲವೂ ಈ ತೊಂದರೆಯನ್ನು ಅನುಭವಿಸಬೇಕಾಯಿತು. ‘ನನಗೋಸ್ಕರ ಪಂತರಿಗೆ ಈ ಗತಿ ಬಂತಲ್ಲ!’ ಎಂದು ಪಂಡಿತ ನೆಹರೂ ಕೊನೆಯವರೆಗೂ ಪೇಚಾಡುತ್ತಿದ್ದರು.

ಮುಖ್ಯಮಂತ್ರಿ

ಆಗ ನಡೆದ ಸತ್ಯಾಗ್ರಹದಲ್ಲಿ ಗೋವಿಂದ ವಲ್ಲಭ ಪಂತರು ಎರಡುಸಲ ಸೆರೆಗೆ ಹೋಗಿರಬೇಕಾಯಿತು. ೧೯೩೫ ರಲ್ಲಿ ಬ್ರಿಟಿಷರು ಭಾರತದಲ್ಲಿ ಹೊಸ ಕಾನೂನು ಮಾಡಿದರು. ಅದರ ಪ್ರಕಾರ ಜನರು ಸರ್ಕಾರವನ್ನು ಆರಿಸುವ ವ್ಯವಸ್ಥೆ ಆಯಿತು. ಚುನಾವಣೆ ನಡೆಯಿತು. ಪಂತರು ಸಂಯುಕ್ತ ಪ್ರಾಂತದ ಶಾಸನ ಸಭೆಗೆ ಆರಿಸಿ ಬಂದರು. ಮುಖ್ಯಮಂತ್ರಿಯಾಗಿ ಚುನಾಯಿತರಾದರು.

ಅಧಿಕಾರದಲ್ಲಿ ಭಾರತೀಯರು ಹಲವರು ಇದ್ದರೂ ನಿಜವಾದ ಅಧಿಕಾರ ಇದ್ದುದು ಬ್ರಿಟಿಷರ ಕೈಯಲ್ಲೆ. ಭಾರತೀಯರಿಗೆ ಇದ್ದುದು ಸಣ್ಣ ಪುಟ್ಟ ಅಧಿಕಾರ ಅಷ್ಟೆ. ಅಷ್ಟು ಅವಕಾಶದಲ್ಲೆ ಪಂತರು ಬೇಕಾದಷ್ಟು ಸುಧಾರಣೆಗಳನ್ನು ತಂದರು. ‘ಮಾಲ್‌ಗುಜಾರಿ’  ಎಂಬ ಹೆಸರಿನ ಭೂ ಕಂದಾಯವನ್ನು ತೆಗೆದುಹಾಕಿದರು. ಉಳುವ ರೈತನಿಗೇ ಜಮೀನು ಸಿಗಬೇಕು ಎಂದು ಕಾನೂನು ಮಾಡಿದರು. ಜನರ ಭಾಷೆಯಲ್ಲೇ ಆಡಳಿತ ನಡೆಯಬೇಕು ಎಂದು ಹಿಂದಿಯನ್ನು ಜಾರಿಗೆ ತಂದರು.

ರೈತರ ಸಮಸ್ಯೆಗಳನ್ನು ತಿಳಿದುಕೊಂಡು ಅವಕ್ಕೆ ಪರಿಹಾರ ಸೂಚಿಸಲು ೧೯೩೧ ರಲ್ಲಿ ಒಂದು ಸಮಿತಿ ಏರ್ಪಾಡಾಗಿತ್ತು. ಅದಕ್ಕೆ ಪಂತರೇ ಅಧ್ಯಕ್ಷರು. ಎಲ್ಲ ವಿಷಯಗಳನ್ನೂ ಚೆನ್ನಾಗಿ ಪರಿಶೀಲಿಸಿ ಒಂದು ವರದಿ ತಯಾರಿಸಿದರು. ಅದಕ್ಕೆ ‘ಪಂತ್ ಸಮಿತಿ ವರದಿ’ ಎಂದೇ ಹೆಸರಾಯಿತು.

ಪಂಡಿತ ಪಂತರ ಬಿಗಿಯಾದ ಆಡಳಿತ ಬ್ರಿಟಿಷ್ ದೊರೆಗಳಿಗೆ ಸರಿಬೀಳಲಿಲ್ಲ. ಇಬ್ಬರಲ್ಲೂ ವಾದವಿವಾದ ನಡೆದೇ ಇತ್ತು. ಬಿಳಿಯ ಅಧಿಕಾರಿಗಳು ಭಾರತೀಯ ಮಂತ್ರಿಗಳಿಗೆ ಗೌರವ ತೋರುತ್ತಿರಲಿಲ್ಲ.

ದುರಹಂಕಾರದ ಅಧಿಕಾರಿಗೆ ಲಗಾಮು

ಒಂದು ಸಲ ಅಜಿತ ಪ್ರಸಾದ ಜೈನ್ ಎಂಬ ಒಬ್ಬ ಮಂತ್ರಿ ಗೋರಖಪುರಕ್ಕೆ ಹೋಗಿದ್ದರು. ಮಂತ್ರಿಗಳು ಬಂದರೆ, ಹಾಜರಿದ್ದು ಗೌರವಿಸಬೇಕಾದ್ದು ಅಧಿಕಾರಿಗಳ ಕರ್ತವ್ಯ. ಗೋರಖಪುರದ ಜಿಲ್ಲಾಧಿಕಾರಿ ಒಬ್ಬ ಬಿಳಿಯವ.ಅವನಿಗೆ ಭಾರತೀಯರು ಎಂದರೆ ತುಂಬಾ ಅಸಡ್ಡೆ, ಅವನು ಕಚೇರಿಗೆ ಬರಲೇ ಇಲ್ಲ. ಮೈ ಸರಿಯಿಲ್ಲ ಎಂದು ಕುಂಟುನೆಪ ಹೇಳಿ ಮನೆಯಲ್ಲೆ ಇದ್ದು ಬಿಟ್ಟ. ಮಾತ್ರವಲ್ಲ, ತನ್ನ ಕೈ ಕೆಳಗಿನ ಭಾರತೀಯ ಅಧಿಕಾರಿಯನ್ನೂ ಕಳಿಸಲಿಲ್ಲ. ತಮ್ಮ ಮಂತ್ರಿಗಳಿಗೆ ಆದ ಈ ಅವಮಾನದ ಸುದ್ದಿ ಪಂತರಿಗೆ ಮುಟ್ಟಿತು. ಕೂಡಲೇ ಅವರು ಆ ಇಬ್ಬರು ಅಧಿಕಾರಿಗಳನ್ನು ಬೇರೆ ಊರಿಗೆ ವರ್ಗಮಾಡಿದರು. ಆ ಬಿಳಿಯ ಅಧಿಕಾರಿ ನೇರವಾಗಿ ಪ್ರಾಂತದ ಗವರ್ನರ್ ಸಾಹೇಬನಲ್ಲಿಗೆ ಹೋಗಿ ದೂರು ಕೊಟ್ಟ. ಗವರ್ನರ್ ಹ್ಯಾರಿ ಹೇಗ್ ಎಂಬಾತ ಪಂತರನ್ನು ಕರೆಸಿದ. ‘ಈ ಐ.ಸಿ.ಎಸ್. ಅಧಿಕಾರಿಗಳನ್ನು ಏಕೆ ಹೀಗೆ ನಡೆಸಿಕೊಂಡಿರಿ’  ಎಂದು ಪ್ರಶ್ನೆ ಮಾಡಿದ.

ಪಂತರು ಹೇಳಿದರು, ‘‘ಕಾನೂನಿನಂತೆ ಈ ಬಿಳಿಯ ಅಧಿಕಾರಿಗಳನ್ನು ಶಿಕ್ಷಿಸುವಂತಿಲ್ಲ. ಆದರೆ ಅವರಿಂದ ಸರಿಯಾಗಿ ಕೆಲಸ ಮಾಡಿಸಬೇಕಲ್ಲ? ಎಲ್ಲಿ ಈ ಅಧಿಕಾರಿಗಳ ಆವಶ್ಯಕತೆ ಇತ್ತೊ ಅಲ್ಲಿಗೆ ಕಳಿಸಿದೆ, ಇದರಲ್ಲಿ ತಪ್ಪೇನು?’’ ಗವರ್ನರನಿಗೆ ಎದುರು ಮಾತು ಹೊಳೆಯಲಿಲ್ಲ.

ಪಂತರು ಅಲ್ಲಿಗೇ ಬಿಡಲಿಲ್ಲ. ಆಚೆ ಬಂದು ಅಲ್ಲಿ ಕಾದಿದ್ದ ಆ ಬಿಳಿಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘‘ಯಾರ ಅಪ್ಪಣೆ ಕೇಳಿ ನೀನು ನಿನ್ನ ಕೆಲಸ ಬಿಟ್ಟು ಇಲ್ಲಿಗೆ ಬಂದೆ’’? ಎಂದು ಗದರಿಸಿದರು, ಅಧಿಕಾರಿ ಕಕ್ಕಾಬಿಕ್ಕಿ ಆದ. ಕೊನೆಗೂ ಅವನು ಮಂತ್ರಿಗಳ ಕ್ಷಮೆ ಕೇಳುವವರೆಗೂ ಪಂತರು ಬಿಡಲಿಲ್ಲ. ಈ ಘಟನೆಯಿಂದ ಎಲ್ಲ ಬಿಳಿಯ ಅಧಿಕಾರಿಗಳಿಗೂ ಪಂತರನ್ನು ಕಂಡರೆ ಭಯ ಹುಟ್ಟಿತು. ಅವರು ಭಾರತೀಯರನ್ನು ತಿರಸ್ಕಾರದಿಂದ ನೋಡುತ್ತಿದ್ದುದು ಕಡಿಮೆ ಆಯಿತು.

ಆಗಲೇ ಕಾಕೋರಿ ಎಂಬ ಕಡೆ ಒಂದು ಲೂಟಿಯ ಪ್ರಸಂಗ ನಡೆಯಿತು. ಕೆಲವು ದೇಶಭಕ್ತ ವೀರ ತರುಣರು ರೈಲನ್ನು ನಿಲ್ಲಿಸಿ, ಅದರಲ್ಲಿ ಸಾಗಿಸುತ್ತಿದ್ದ ಸರ್ಕಾರಿ ಖಜಾನೆಯ ಹಣವನ್ನು ಎತ್ತಿಕೊಂಡು ಹೋದರು. ಅವರಲ್ಲಿ ಕೆಲವರು ಸೆರೆಸಿಕ್ಕಿದರು. ಅವರೆಲ್ಲ ರಾಜಕೀಯ ಕಾರಣಕ್ಕಾಗಿ ಹಾಗೆ ಮಾಡಿದ್ದರು. ಆದ್ದರಿಂದ ಅವರನ್ನು ಬಿಟ್ಟು ಬಿಡಬೇಕು ಎನ್ನುವುದು ಪಂತರ ವಿಚಾರ. ಆಂಗ್ಲ ಅಧಿಕಾರಿಗಳು ಒಪ್ಪಲಿಲ್ಲ. ಪಂತರು ಬಿಡಲಿಲ್ಲ. ತಮ್ಮ ಮಾತು ನಡೆಯದಿದ್ದರೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದರು. ಆಂಗ್ಲ ಗವರ್ನರ್ ಒಪ್ಪಲೇಬೇಕಾಯಿತು.

ಸೆರೆಮನೆಗೆ

ಆ ವೇಳೆಗೆ ಎರಡನೆಯ ಮಹಾಯುದ್ಧ ಆರಂಭವಾಗಿತ್ತು. ಯಾರನ್ನೂ ಕೇಳದೆಯೆ ಬ್ರಿಟಿಷ್ ಸರ್ಕಾರ ಭಾರತವನ್ನೂ ಯುದ್ಧದಲ್ಲಿ ಸೇರಿಸಿತು. ಅದಕ್ಕೆ ಪ್ರತಿಭಟಿಸಲು ಹಲವು ಪ್ರಾಂತಗಳಲ್ಲಿದ್ದ ಕಾಂಗ್ರೆಸ್ ಸರ್ಕಾರಗಳು ರಾಜೀನಾಮೆ ಕೊಟ್ಟವು. ಅದರಂತೆ ಪಂತರೂ ೧೯೩೯ ರಲ್ಲಿ ಮುಖ್ಯಮಂತ್ರಿ ಪದವಿಯನ್ನು ಬಿಟ್ಟು ಬಂದರು. ಮುಂದಿನ ವರ್ಷ ಮತ್ತೆ ಸತ್ಯಾಗ್ರಹ ಆರಂಭವಾಯಿತು. ಪಂತರೂ ಭಾಗವಹಿಸಿ ಸೆರೆಮನೆಗೆ ಹೋದರು. ಒಂದು ವರ್ಷ ಇದ್ದಮೇಲೆ ಹೊರಗೆ ಬಂದರು.

ಯುದ್ಧ ಬಿರುಸಾಗುತ್ತ ಬಂತು. ಭಾರತದ ರಾಜಕೀಯ ಸ್ಥಿತಿ ತುಂಬ ಕಷ್ಟವಾದುದಾಗಿತ್ತು. ೧೯೪೨ ರಲ್ಲಿ ಗಾಂಧೀಜಿ ‘‘ಬ್ರಿಟಿಷರೇ ಭಾರತದಿಂದ ಹೊರಡಿ’’ ಎಂಬ ಕರೆಯನ್ನು ಕೊಟ್ಟರು. ಅದೇ ಕೊನೆಯ ಸ್ವಾತಂತ್ರ  ಹೋರಾಟ. ಎಲ್ಲಕ್ಕಿಂತ ದೊಡ್ಡ ಹೋರಾಟ. ಚಳವಳಿ ಶುರು ಆಗುವ ಮೊದಲೇ ದೇಶದ ನಾಯಕರನ್ನೆಲ್ಲ ಸರ್ಕಾರ ಸೆರೆ ಹಿಡಿಯಿತು. ಗೋವಿಂದವಲ್ಲಭ ಪಂತರನ್ನು ಸೆರೆ ಹಿಡಿಯಲು ಪೊಲೀಸರು ಬಂದಾಗ ಬೆಳಗಿನ ಜಾವ ೫ ಗಂಟೆ, ಆದರೆ ಪಂತರು ಅವರನ್ನು ಲೆಕ್ಕಿಸಲೇ ಇಲ್ಲ. ‘‘ನಾನು ಇಷ್ಟು ಬೇಗ ಏಳುವುದಿಲ್ಲ’’ ಎಂದುಬಿಟ್ಟರು. ಪೊಲೀಸರೇ ಕಾಯಬೇಕಾಯಿತು ಅವರು ಏಳುವವರೆಗೆ. ಆಮೇಲೆ ಅವರನ್ನು ದಸ್ತಗಿರಿ ಮಾಡಲಾಯಿತು. ಪಟೇಲ್, ನೆಹರು, ಆಜಾದ್, ನರೇಂದ್ರದೇವ್, ಪಟ್ಟಾಭಿ ಸೀತಾರಾಮಯ್ಯ, ಶಂಕರರಾವ್ ದೇವ್, ಹರೇಕೃಷ್ಣ ಮೆಹತಾಬ್, ಪಿ.ಸಿ.ಘೋಷ್, ಅಸಫ್‌ಆಲಿ, ಸೈಯದ್ ಮಹಮೂದ್ ಮೊದಲಾದವರ ಜೊತೆಯಲ್ಲಿ ಪಂತರನ್ನೂ ಅಹಮದ್ ನಗರದ ಕೋಟೆಯ ಜೈಲಿನಲ್ಲಿ ಇಡಲಾಯಿತು.

ಅವರೆಲ್ಲ ದೇಶದ ಹಿರಿಯ ನಾಯಕರು; ತುಂಬ ತಿಳಿದವರು, ಅನುಭವಶಾಲಿಗಳು, ಅದರಲ್ಲೂ ಪಂತರ ಮಾತು ಎಂದರೆ ಎಲ್ಲರಿಗೂ ಇಷ್ಟ. ಸೆರೆಮನೆಯಲ್ಲಿ ಓದು ಬರಹ, ಆಟ, ತೋಟಗಾರಿಕೆ, ಚರ್ಚೆಗಳಲ್ಲಿ ಕಾಲ ಕಳೆಯುತ್ತಿತ್ತು. ಆರೂಕಾಲು ಅಡಿ ಎತ್ತರ, ೨೦೮ ಪೌಂಡು ತೂಕ ಇದ್ದರೂ ಪಂಡಿತ ಪಂತರು ಚುರುಕಾಗಿ ಆಟ ಆಡುತ್ತಿದ್ದುದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಜೈಲಿನಲ್ಲಿ ಪಂತರಿಗೆ ಆಗಾಗ ಏನಾದರೂ ಕಾಯಿಲೆ ಬರುತ್ತಿತ್ತು. ಆದರೆ ಅವರಿಗೆ ಅದರ ಲೆಕ್ಕವೇ ಇಲ್ಲ. ದಿನಕ್ಕೆ ೮-೧೦ ಗಂಟೆ ಕಾಲ ಓದು ಬರಹ ಪಂತರ ಕೆಲಸ.

೧೯೪೫ ರ ಮಾರ್ಚಿ ವೇಳೆಗೆ ಪಂತರ ಕಾಯಿಲೆ ಹೆಚ್ಚಿತು. ಆ ವೇಳೆಗೆ ಯುದ್ಧವು ನಿಲ್ಲುವ ಹಾಗಿತ್ತು. ಪಂತರಿಗೆ ಶಸ್ತ್ರಚಿಕಿತ್ಸೆ ಆಗಬೇಕಾಗಿದೆ, ಅವರ ಪ್ರಾಂತಕ್ಕೆ ಕಳಿಸಲಾಗುತ್ತದೆ ಎಂದು ಸುದ್ದಿ ಬಂತು. ಅದೇ ತಿಂಗಳು ೨೮ ರಂದು ಅವರನ್ನು ಅಹಮದ ನಗರದಿಂದ ನೈನಿತಾಲ್ ಜೈಲಿಗೆ ಸಾಗಿಸಲಾಯಿತು. ಮುಂದೆ ಇಜ್ಜತ್ ನಗರಕ್ಕೆ ಒಯ್ದು ಅಲ್ಲಿ ಬಿಡುಗಡೆ ಮಾಡಲಾಯಿತು.

ಭಾರತದ ಸಮಸ್ಯೆಯನ್ನು ಹೇಗಾದರೂ ಬಿಡಿಸಬೇಕಾಗಿತ್ತು. ನಾಯಕರನ್ನೆಲ್ಲ ಬಿಡುಗಡೆ ಮಾಡಲಾಯಿತು. ಸಂಧಾನ ಆರಂಭವಾಯಿತು. ಮುಸ್ಲಿಂ ಲೀಗಿನ ಮುಖಂಡ ಜಿನ್ನಾರ ಆಕ್ಷೇಪಣೆಗಳನ್ನು ಪರಿಹರಿಸುವುದೇ ದೊಡ್ಡ ಸಮಸ್ಯೆ ಆಗಿತ್ತು. ಅವರ ಜೊತೆಗೆ ಸಂಧಾನ ಮಾಡಲು ಕಾಂಗ್ರೆಸ್ಸು ಪಂತರನ್ನು ನೇಮಿಸಿತು. ಅವರು ಎಷ್ಟೇ ಪ್ರಯತ್ನಿಸಿದರೂ ಜಿನ್ನಾ ತನ್ನ ಮೊಂಡುತನ ಬಿಡಲಿಲ್ಲ.

ಮತ್ತೆ ಮುಖ್ಯಮಂತ್ರಿ

ಈ ನಡುವೆ ೧೯೪೬ರಲ್ಲಿ ಮತ್ತೆ ಚುನಾವಣೆಗಳು ನಡೆದವು. ಆಗಲೂ ಕಾಂಗ್ರೆಸ್ಸು ಗೆದ್ದುಬಂತು. ಸಂಯುಕ್ತ ಪ್ರಾಂತದಲ್ಲಿ ಪಂತರೇ ನಾಯಕರಾಗಿ ಆರಿಸಿ ಬಂದರು. ಮುಖ್ಯಮಂತ್ರಿ ಆದರು. ಎಂಟು ವರ್ಷ ಆ ಸ್ಥಾನದಲ್ಲಿದ್ದರು. ಆಗ ಜಮೀನುದಾರಿ ಪದ್ಧತಿಯನ್ನು ತೆಗೆದು ಹಾಕುವುದೇ ಮೊದಲಾದ ಸುಧಾರಣೆಗಳನ್ನು ಜಾರಿಗೆ ತಂದರು.

ಈ ನಡುವೆ ಸ್ವಾತಂತ್ರ ದ ಸಂಧಾನ ಮುಂದುವರಿಯಿತು. ಭಾರತವನ್ನು ಒಡೆದು ಭಾರತ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳನ್ನು ರಚಿಸೋಣ ಎಂದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಸೂಚಿಸಿದರು. ಇದನ್ನು ಮೊದಲು ಯಾರೂ ಒಪ್ಪಲಿಲ್ಲ. ಆದರೆ ಆಗ ಇದ್ದ ಪರಿಸ್ಥಿತಿಯಿಂದಾಗಿ ಒಪ್ಪಲೇಬೇಕಾಯಿತು.

೧೯೪೭ ರ ಜೂನ್‌ನಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಈ ವಿಷಯ ಚರ್ಚೆಗೆ ಬಂತು. ಯೋಜನೆಯ ಬಗ್ಗೆ ನಿರ್ಣಯವನ್ನು ಗೋವಿಂದ ವಲ್ಲಭ ಪಂತರೇ ಮಂಡಿಸಿದರು. ಕೆಲವರು ಅದನ್ನು ವಿರೋಧಿಸಿದರು, ಆದರೆ ಗಾಂಧೀಜಿ, ಸರ್ದಾರ ಪಟೇಲರು ಸಮಾಧಾನ ಹೇಳಿ ಒಪ್ಪಿಸಿದರು.

ಸ್ವತಂತ್ರ ಭಾರತದ ಗೃಹಮಂತ್ರಿ

ಅಂತೂ ೧೯೪೭ ರ ಆಗಸ್ಟ್ ಹದಿನೈದರಂದು ಭಾರತ ಸ್ವತಂತ್ರವಾಯಿತು. ನೆಹರು, ಪಟೇಲ್, ಆಜಾದ್, ರಾಜೇಂದ್ರಪ್ರಸಾದ್,ರಾಜಾಜಿ ಮೊದಲಾದ ನಾಯಕರೆಲ್ಲ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡರು. ಸರ್ದಾರ ಪಟೇಲರು ಗೃಹಮಂತ್ರಿ, ಅಂದರೆ ದೇಶದ ಒಳ ಆಡಳಿತ ಎಲ್ಲ ಅವರದು. ಪಟೇಲರು ತುಂಬ ಗಟ್ಟಿ ಮನುಷ್ಯ. ಉಕ್ಕಿನ ಮನುಷ್ಯ ಎಂದೇ ಹೆಸರುವಾಸಿ. ಆಗ ಭಾರತದಲ್ಲಿ ಅನೇಕ ಸಮಸ್ಯೆ ಉಂಟಾಗಿದ್ದವು. ಜನರಲ್ಲಿ ಜಗಳ, ದೊಂಬಿ, ಕಾಶ್ಮೀರದಲ್ಲಿ ಯುದ್ಧ, ನೂರಾರು ರಾಜ ಮಹಾರಾಜರುಗಳ ಸಮಸ್ಯೆ ಹೀಗೆ ಬೇಕಾದಷ್ಟು. ಎಲ್ಲವನ್ನೂ ಪಟೇಲರು ಚಾಕಚಕ್ಯತೆಯಿಂದ ಬಿಡಿಸಿದರು. ಸಣ್ಣಪುಟ್ಟ ರಾಜ್ಯಗಳನ್ನೆಲ್ಲ ಸೇರಿಸಿ ಭಾರತದಲ್ಲಿ ಒಂದುಗೂಡಿಸಿದರು. ಎಲ್ಲೆಲ್ಲೂ ಒಗ್ಗಟ್ಟನ್ನು ಬಲಪಡಿಸಿದರು. ೧೯೫೦ ರಲ್ಲಿ ಸರ್ದಾರರು ಮರಣ ಹೊಂದಿದರು. ಅವರ ಸ್ಥಾನಕ್ಕೆ ತಕ್ಕ ನಾಯಕ ಬೇಕಾಯಿತು. ಕೆಲವು ಕಾಲ ಬೇರೆ ಬೇರೆಯವರು ಸೇವೆ ಸಲ್ಲಿಸಿದರು. ಯಾರೂ ಸರ್ದಾರರಷ್ಟು ಬಲವಾದವರಲ್ಲ. ಕೊನೆಗೆ ನೆಹರೂಜಿ ಗೋವಿಂದವಲ್ಲಭ ಪಂತರನ್ನೇ ಬರಮಾಡಿಕೊಂಡರು. ೧೯೫೫ ರಲ್ಲಿ ಪಂತರು ಗೃಹಮಂತ್ರಿಗಳಾಗಿ ಕೇಂದ್ರ ಸರ್ಕಾರಕ್ಕೆ ಸೇರಿದರು.

ಮೊದಲೇ ಬಹು ಬುದ್ಧಿಶಾಲಿ, ಧೈರ್ಯಶಾಲಿ, ಜೊತೆಗೆ ತುಂಬ ಕಾಲದ ಅನುಭವ. ಇನ್ನು ಕೇಳಬೇಕೆ? ಪಂತರು ತಮ್ಮ ಮಂತ್ರಿಖಾತೆಯನ್ನು ದಕ್ಷವಾಗಿ ನಡೆಸಿದರು. ಭಾರತದ ಪ್ರಾಂತಗಳನ್ನು ಭಾಷೆಗಳಿಗೆ ಹೊಂದಿಕೊಳ್ಳುವಂತೆ ಪುನರ್ರಚಿಸಬೇಕು ಎನ್ನುವ ತೀರ್ಮಾನ ಆದದ್ದು ಅವರ ಕಾಲದಲ್ಲೆ. ಅದರಂತೆ ನಮ್ಮ ಕರ್ನಾಟಕ ಆಂಧ್ರ ತಮಿಳುನಾಡು ಕೇರಳ ರಾಜ್ಯಗಳು ರಚಿತವಾದವು. ಪಂತರು ಸಂಸತ್ತಿನಲ್ಲಿ ತುಂಬ ದಕ್ಷರಾದವರಾಗಿದ್ದರು. ಯಾವುದೇ ಸಮಸ್ಯೆ ಬಂದರೂ ಧೈರ್ಯದಿಂದ ಬುದ್ಧಿವಂತಿಕೆಯಿಂದ ಬಿಡಿಸುತ್ತಿದ್ದರು.

ವಿಶ್ರಾಂತಿ ಏಕೆ?

ಪಂತರಿಗೆ ಸದಾ ಕೆಲಸವೇ. ವಿಶ್ರಾಂತಿ ಎನ್ನುವುದೇ ಇಲ್ಲ. ದಿನಕ್ಕೆ ೧೮-೨೦ ಗಂಟೆ ದುಡಿಯುವರು. ಆದರೂ ಮುಖದಲ್ಲಿ ಆಯಾಸ ಇರುತ್ತಿರಲಿಲ್ಲ. ಆದರೆ ದೇಹ ಕೇಳಬೇಕಲ್ಲ. ಎಷ್ಟು ಆಯಾಸ ತಡೆದೀತು? ೧೯೫೯ ರ ಏಪ್ರಿಲ್‌ನಲ್ಲಿ ಸ್ವಲ್ಪ ಕಾಯಿಲೆ ಕಾಣಿಸಿಕೊಂಡಿತು, (ಆಗ ಅವರಿಗೆ ಎಪ್ಪತ್ತೊಂದನೆಯ ವರ್ಷ.) ‘‘ಸ್ವಲ್ಪ ಕಾಲ ವಿಶ್ರಾಂತಿ ಪಡೆಯಿರಿ’’ ಎಂದು ಎಲ್ಲರೂ ಸಲಹೆ ಮಾಡಿದರು. ಪಂತರು ಒಪ್ಪಲೇ ಇಲ್ಲ. ‘‘ವಿಶ್ರಾಂತಿ ಏಕೆ? ಕೆಲಸವೇ ನಿಜವಾದ ವಿಶ್ರಾಂತಿ. ಕೆಲಸ ಮಾಡದೆ ಇದ್ದರೆ ಮನುಷ್ಯ ಭೂಮಿಗೆ ಭಾರ. ಅವನಿಂದ ಏನು ಪ್ರಯೋಜನ? ಸಾಯುವವರೆಗೂ ಕೆಲಸ ಮಾಡಬೇಕು. ಲೋಕಸಭೆಯಲ್ಲಿ ಮಾತನಾಡುತ್ತ ಇರುವಾಗಲೇ ಸಾಯಬೇಕು ಅಂತ ನನ್ನ ಆಸೆ’’ ಎಂದು ಹೇಳಿದರು.

ಎರಡು ವರ್ಷದ ನಂತರ ಅಂದರೆ ೧೯೬೧ ರಲ್ಲಿ ಒಂದು ದಿನ ಲೋಕಸಭೆಯಲ್ಲಿ ಕೆಲಸವನ್ನು ಮುಗಿಸಿ ಮನೆಗೆ ಬಂದರು. ಮನೆಯಲ್ಲಿ ರಾಶಿ ಕೆಲಸ ಕಾದಿತ್ತು. ಅದನ್ನೂ ಮುಗಿಸಿದರು. ಆಗ ಇದ್ದಕ್ಕಿದ್ದ ಹಾಗೆಯೇ ಎಚ್ಚರ ತಪ್ಪಿಹೋಯಿತು. ಹದಿನೈದು ದಿನ ಅದೇ ಸ್ಥಿತಿ. ಮಾರ್ಚ್ ಏಳನೆಯ ತಾರೀಕು ಆ ಮಹಾನಾಯಕ ರಾಜಕಾರಣಿ ಆಡಳಿತಗಾರ ಗೋವಿಂದವಲ್ಲಭ ಪಂತರು ಕೊನೆಯ ಉಸಿರು ಎಳೆದರು. ಆಗ ಅವರಿಗೆ ೭೩ ವಯಸ್ಸು.

ವ್ಯಕ್ತಿತ್ವ

ಪಂತರು ಭಾರಿ ಆಳು ಎನ್ನುವುದನ್ನು ಆಗಲೇ ನೋಡಿದ್ದೇವೆ. ಎತ್ತರದ ಆಳು. ದೊಡ್ಡ ಮೀಸೆ, ನೋಡಿದರೆ ಭಯ ಆಗುವ ಹಾಗೆ. ಅವರ ಮನಸ್ಸೂ ಗಟ್ಟಿ, ಏನೇ ಬರಲಿ, ಅವರಿಗೆ ಗಾಬರಿ ಎನ್ನುವುದೇ ಇರಲಿಲ್ಲ.

ಪಂತರ ಜ್ಞಾನ ಅಪಾರ, ಜ್ಞಾಪಕ ಶಕ್ತಿಯೂ ಅಷ್ಟೆ. ವಿಜ್ಞಾನ, ರಾಜಕೀಯ, ತತ್ವಜ್ಞಾನ ಯಾವುದೇ ವಿಷಯ ಆಗಲಿ ಒಂದು ಸಲ ಓದಿದರೆ ಸಾಕು, ಅವರಿಗೆ ಅಂಗೈ ಮೇಲಿನ ನೆಲ್ಲಿಕಾಯಿಯ ಹಾಗೆ ಚೆನ್ನಾಗಿ ತಿಳಿದು ಬಿಡುತ್ತಿತ್ತು. ಸದಾ ನೆನಪಿನಲ್ಲಿ ಇರುತ್ತಿತ್ತು.

ಎಷ್ಟೇ ನೋವು ಆಗಲಿ, ಸಹಿಸಿಕೊಳ್ಳುವುದು ಪಂತರ ಇನ್ನೊಂದು ಗುಣ. ಇದಕ್ಕೆ ಒಂದು ಉದಾಹರಣೆ:

ಒಂದು ಸಲ ಅವರಿಗೆ ಒಂದು ನಂಜಿನ ಕುರು ಎದ್ದಿತು. ನೋವು ಅಪಾರ. ಹುಣ್ಣನ್ನು ಕತ್ತರಿಸಿ ತೆಗೆದು ಹಾಕಬೇಕು ಎಂದರು ವೈದ್ಯರು. ಅದಕ್ಕೆ ಜ್ಞಾನ ತಪ್ಪಿಸಬೇಕಾಗಿತ್ತು. ಆಗ ಪಂತರು ಹೇಳಿದರು, ‘‘ಜ್ಞಾನ ತಪ್ಪಿಸುವ ಔಷಧಿ ಏನೂ ಬೇಡ. ಹಾಗೆಯೆ ನಿಮ್ಮ ಕೆಲಸ ಮಾಡಿ, ತಡೆದುಕೊಳ್ಳುತ್ತೇನೆ.’’ ವೈದ್ಯರು ಹುಣ್ಣನ್ನು ಕತ್ತರಿಸಿ ತೆಗೆದು ಹಾಕುತ್ತಿದ್ದರೆ ಪಂತರು ಕಿಮಕ್‌ಕಮಕ್ ಎನ್ನದೆ ಶಾಂತರಾಗಿ ಇದ್ದರು. ಎಲ್ಲರಿಗೂ ಆಶ್ಚರ‍್ಯ ಆಯಿತು. ‘‘ಹೇಗೆ ಈ ನೋವನ್ನು ತಾಳಿಕೊಂಡಿರಿ?’’ ಎಂದು ಕೇಳಿದರು. ಅದಕ್ಕೆ ಪಂತರು ಉತ್ತರ ಕೊಟ್ಟರು. ‘‘ಗಾಯದ ಬಗ್ಗೆ ಯೋಚಿಸಿದರೆ ತಾನೆ ನೋವು? ನಾನು ಯೋಚಿಸಲೇ ಇಲ್ಲ. ಇನ್ನು ನೋವೆಲ್ಲಿ ಬಂತು?’’

ಅಷ್ಟು ಧೈರ‍್ಯದ ವ್ಯಕ್ತಿ ಆದರೂ, ಬಲವಾದ ವ್ಯಕ್ತಿ ಆದರೂ ಪಂತರ ಹೃದಯ ತುಂಬ ಮೃದು. ಹೂವಿನ ಹಾಗೆ. ಬಡಜನರು ಹಳ್ಳಿಯ ರೈತರುಗಳ ಕಷ್ಟವನ್ನು ಕಂಡರೆ ಕರಗಿ ಹೋಗುತ್ತಿದ್ದರು. ಅವರ ಏಳಿಗೆಗಾಗಿ ಬೇಕಾದಷ್ಟು ದುಡಿದರು. ಯಾರು ಬಂದು ಏನೇ ದೂರು ಹೇಳಲಿ ಎಲ್ಲವನ್ನೂ ಶಾಂತವಾಗಿ ಕೇಳುತ್ತಿದ್ದರು. ಸ್ವಲ್ಪವೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ.

ಪಂತರ ಮನೆತನ ಹಿಂದಿನ ಸಂಪ್ರದಾಯಗಳಿಗೆ ಅಂಟಿಕೊಂಡ ಮನೆತನ. ಹಿಂದಿನ ಆಚಾರಗಳನ್ನು ಆಚರಿಸುತ್ತಿದ್ದ ಮನೆತನ. ಹಾಗಿದ್ದರೂ ನಮ್ಮ ಸಮಾಜ ಸುಧಾರಿಸಬೇಕು ಜಾತಿಯ ಭೇದ ಇರಬಾರದು, ಹಿಂದುಳಿದಿರುವ ಬಡವರೂ ಸೇರಿ ಎಲ್ಲರೂ ಮುಂದೆ ಬರಬೇಕು ಎನ್ನುವುದು ಪಂತರ ವಿಚಾರ. ಭಾರತದಲ್ಲಿ ಮತೀಯ ಜಗಳ ಇದೆ, ಅವರಿಗೆ ಅಧಿಕಾರ ಕೊಟ್ಟರೆ ಒಬ್ಬರಿಗೊಬ್ಬರು ಹೊಡೆದಾಡುತ್ತಾರೆ, ಆದ್ದರಿಂದ ಅವರಿಗೆ ಅಧಿಕಾರ ಕೊಡಬಾರದು ಎಂದು ಬ್ರಿಟಿಷರು ನೆವ ಹೇಳುತ್ತಿದ್ದರು. ಪಂತರು ಅದನ್ನೆಲ್ಲ ಖಡಾಖಂಡಿತವಾಗಿ ವಿರೋಧಿಸುತ್ತಿದ್ದರು. ಮತಗಳ ಭೇದದ ನೆವ ಹೇಳಿ ನಮಗೆ ಸ್ವಾತಂತ್ರ  ಕೊಡದೆ ಇರುವುದು ತಪ್ಪು. ನಮ್ಮ ದೇಶದಲ್ಲಿ ಬೇರೆ ಬೇರೆ ಮತ ಇದ್ದರೂ ನಾವೆಲ್ಲ ಒಂದೇ. ಭಾರತೀಯರು ನಾವು ಒಂದಾಗಿರಬೇಕು. ಒಗ್ಗಟ್ಟಾಗಿರಬೇಕು. ಎಲ್ಲರೂ ಒಟ್ಟಾಗಿ ಕೇಳಿದರೆ ಸ್ವಾತಂತ್ರ  ಸಿಕ್ಕೇ ಸಿಗುತ್ತದೆ, ಸಿಗಲೇ ಬೇಕು ಎನ್ನುತ್ತಿದ್ದರು.

ರೈತರ ಸಮಸ್ಯೆಗಳಲ್ಲಿ ಪಂತರಿಗೆ ತುಂಬ ಆಸಕ್ತಿ. ನಮ್ಮ ವ್ಯವಸಾಯ ಚೆನ್ನಾಗಬೇಕು, ಹಳ್ಳಿಗಳು ಚೆನ್ನಾಗಬೇಕು ಎಂದು ಅವರ ಆಸೆ. ಈಗ ಉತ್ತರ ಪ್ರದೇಶದಲ್ಲಿ ಪಂತನಗರ ಎಂಬ ಊರು ಕಟ್ಟಿ ಅಲ್ಲಿ ಅವರ ಹೆಸರಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಆಗಿರುವುದು ಪಂತರಿಗೆ ಸರಿಯಾದ ಗೌರವ ತೋರಿಸಿದಂತಾಗಿದೆ.

ಪಂತರು ಕೆಲಸದಲ್ಲಿ ತುಂಬ ನಿಪುಣರು. ಅಚ್ಚುಕಟ್ಟು, ಶಿಸ್ತು ಅವರ ಸ್ವಭಾವ. ಹಾಗೆಯೆ ಮಾತಿನಲ್ಲೂ ಜಾಣರು. ಪಂತರು ಮಾತನಾಡಲು ನಿಂತರೆ ಜನ ಮಂತ್ರಕ್ಕೆ ಒಳಗಾದ ಹಾಗೆ ಗಮನದಿಂದ ಕೇಳುತ್ತಿದ್ದರು. ತಮ್ಮ ನಯವಾದ ಮಾತಿನಿಂದ ಪಂತರು ಎದುರಾಳಿಗಳನ್ನೆಲ್ಲ ಸೋಲಿಸಿಬಿಡುತ್ತಿದ್ದರು. ಕಾಂಗ್ರೆಸ್ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಮಂಡಿಸಲು ಪಂತರು ನಿಂತರೆ ಸಾಕು, ಎಲ್ಲರೂ ಒಪ್ಪುವ ಹಾಗೆ ಮಾಡುತ್ತಿದ್ದರು. ಶಾಸನ ಸಭೆ ಲೋಕಸಭೆಗಳಲ್ಲೂ ಹಾಗೆಯೇ, ಎಲ್ಲರ ವಾದಕ್ಕೂ ಸರಿಯಾದ ಉತ್ತರ ಕೊಡುತ್ತಿದ್ದರು. ಪ್ರಮಾಣ, ದಾಖಲೆ ಎಲ್ಲವನ್ನು ಆಧಾರವಾಗಿ ಇಟ್ಟುಕೊಂಡು ವಾದಿಸುತ್ತಿದ್ದರು.

ಅಧಿಕಾರಿಗಳೊಡನೆ

ಎಂಥದೇ ಸಮಸ್ಯೆ ಬರಲಿ, ಬಿಸಿ ಮಾತು ಬರಲಿ, ಯಾರು ಏನೇ ನಿಂದಿಸಲಿ ಪಂತರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಶಾಂತರಾಗಿ ಎಲ್ಲವನ್ನೂ ಪರಿಶೀಲಿಸಿ ಕೊನೆಗೆ ತಮ್ಮ ದೃಢವಾದ ನಿರ್ಧಾರವನ್ನು ಹೇಳುತ್ತಿದ್ದರು. ಅವಸರದಲ್ಲಿ ಏನೂ ಮಾಡುತ್ತಿರಲಿಲ್ಲ. ದುಡುಕುತ್ತಿರಲಿಲ್ಲ. ಆದರೆ ಒಂದು ಸಲ ನಿರ್ಧಾರ ತೆಗೆದುಕೊಂಡರೆ ಸಾಕು ಅದು ಬೆಟ್ಟದ ಹಾಗೆ ದೃಢ, ನಿಶ್ಚಲ. ಎಂಥದೇ ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅವರು ಅಳುಕುತ್ತಿರಲಿಲ್ಲ.

ತಮ್ಮ ಕೆಳಗಿನ ಅಧಿಕಾರಿಗಳ ಕೆಲಸದಲ್ಲಿ ಸುಮ್ಮ ಸುಮ್ಮನೆ ತಲೆ ಹಾಕದೆ ಇರುವುದು ಪಂತರ ಇನ್ನೊಂದು ಗುಣ. ಅಧಿಕಾರಿಗಳು ಸ್ವತಂತ್ರವಾಗಿ ಅವರ ಕೆಲಸ ಮಾಡಬೇಕು. ಏನಾದರೂ ತಪ್ಪು ಆದರೆ ತಾವು ವಿಚಾರಿಸಬೇಕು, ಎನ್ನುವುದು ಅವರ ವಿಚಾರ. ಇದರಿಂದ ಸರ್ಕಾರದ ಕೆಲಸ ಸರಾಗವಾಗಿ ನಡೆಯುತ್ತಿತ್ತು.

ಅದೇ ನಿಜವಾದ ಪುರಸ್ಕಾರ

ಒಂದು ಸಲ ಆಗ್ರಾದಲ್ಲಿ ದೊಂಬಿ ಆಯಿತು. ಆಗ ಉಪಮಂತ್ರಿ ಜಗನ ಪ್ರಸಾದ ಜೈನ್ ರಾವತ್ ಎಂಬವರು ಅಲ್ಲೆ ಇದ್ದರು. ಮದ್ಯಾಹ್ನದೊಳಗೆ ದೊಂಬಿ ಅಡಗಿಸಬೇಕು ಎಂದು ಅವರು ಪೊಲೀಸರಿಗೆ ಆಜ್ಞೆ ಮಾಡಿದರು. ದೊಂಬಿ ಅಡಗಿತು. ಆಮೇಲೆ ಪಂತರು ರಾವತರನ್ನು ಕರೆದು ‘‘ಒಳ್ಳೆ ಕೆಲಸ ಮಾಡಿದರಿ. ಆದರೆ ಒಂದು ಮಾತು ನೆನಪಿರಲಿ, ಮಾಡುವುದು ಮಾಡಿ, ಕೊನೆಯಲ್ಲಿ ಸಿಹಿ ಮಾತು ಆಡಿ’’ ಎಂದರು. ಕಠಿಣವಾದ ಕೆಲಸ ಮಾಡಬೇಕಾಗಿ ಬಂದರೂ ಆದಷ್ಟು ಪ್ರಿಯವಾಗಿ ನಯವಾಗಿ ಮಾಡಬೇಕು ಎನ್ನುವುದು ಪಂತರ ವಿಚಾರ.

ಪಂತರು ತುಂಬ ಸರಳ ವ್ಯಕ್ತಿ, ಅವರ ಆಹಾರ ತುಂಬ ಮಿತ, ತುಂಬ ಸರಳ. ಆದರೆ ಅವರು ಮಾಡುತ್ತಿದ್ದ ಕೆಲಸ ಮಾತ್ರ ಎಳೆಯರನ್ನೂ ನಾಚಿಸುವ ಹಾಗೆ ಇತ್ತು.

ಗೋವಿಂದ ವಲ್ಲಭ ಪಂತರಿಗೆ ದೇಶಸೇವೆಯೆ ಉಸಿರು. ತಮಗೆ ಏನೇ ಸ್ಥಾನ ಸಿಗಲಿ, ಗೌರವ ಸಿಗಲಿ ಅವರಿಗೆ ಏನೂ ಮುಖ್ಯವಲ್ಲ. ೧೯೫೭ರಲ್ಲಿ ‘ಭಾರತ ರತ್ನ’  ಪ್ರಶಸ್ತಿಯನ್ನು ಅವರಿಗೆ ಕೊಟ್ಟು ಗೌರವಿಸಲಾಯಿತು. ಆಗ ಪಂತರು ಹೇಳಿದರು ‘‘ನಾನು ಸ್ವಾಂತ್ರ ಕ್ಕಾಗಿ ನಾಲ್ಕು ಸಲ ಜೈಲಿಗೆ ಹೋಗಿದ್ದೆ. ಅದೇ ನನಗೆ ಸಿಕ್ಕ ನಿಜವಾದ ಪುರಸ್ಕಾರ. ಅದಕ್ಕಿಂತ ಇನ್ನೇನು ಬೇಕು?’’

ಹೀಗೆ ಪಂಡಿತ ಗೋವಿಂದ ವಲ್ಲಭ ಪಂತರು ನಮ್ಮ ದೇಶದ ಬಿಡುಗಡೆಗಾಗಿ ಹೋರಾಡಿದವರು. ಬಿಡುಗಡೆ ಬಂದ ಮೇಲೆ ದೇಶವನ್ನು ಕಟ್ಟುವುದಕ್ಕೆ ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟು ಸೇವೆ ಮಾಡಿದವರು.